ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Sunday 27 December 2009

ನೀನಿಲ್ಲದಿರುವಾಗ...

ದಿಂಬಿನ ಹತ್ತಿಯ ಎಳೆಯೆಳೆಗಳಿಗೆ
ನಿನ್ನಯ ಕತ್ತಿನ ಕಂಪು
ಹೊದಿಕೆಯ ಮಡಿಕೆಯ ಪದರಗಳೊಳಗೆ
ನಿನ್ನಯ ತೋಳಿನ ತಂಪು
ಹಾಸಿನ ಮೆತ್ತೆಯ ಸುರುಳಿಗಳೊಳಗೆ
ನಿನ್ನಯ ದೇಹದ ಬಿಸುಪು
ಮಂಚದ ಅಂಚಿನ ಚಿತ್ತರಗಳಿಗೆ
ನಿನ್ನಯ ಕೆನ್ನೆಯ ನುಣುಪು

ಹೊರಳುವ ಉರುಳುವ ಉಸಿರಿನ ಸುತ್ತ
ನಿನ್ನಯ ನೆನಪಿನ ಕುಸುರು
ಅರಳುವ ಬೆಳಗಿನ ಕಿರಣದ ಸುತ್ತ
ನಿನ್ನಯ ನೇಹದ ಹೆಸರು
ನಾಳೆಯ ನೆವನದ ಕನಸಿನ ಸುತ್ತ
ನಮ್ಮಯ ಪ್ರೇಮದ ಬಸಿರು
(೨೯-ಮೇ-೨೦೦೮)

Sunday 20 December 2009

ಉಡಲ್’ದ ನಲಿಕೆ

("ಉಯ್ಯಾಲೆ" ಚಿತ್ರದ ಹಾಡು- "ದೋಣಿಯೊಳಗೆ ನೀನು, ಕರೆಯ ಮೇಲೆ ನಾನು,
ಈ ಮನದ ಕರೆಯು ನಿನಗೆ ಕೇಳದೇನು..." ಧಾಟಿಯಲ್ಲಿ)

ಮೂಡು ಮಲೆತ ಬರಿಟ್, ಧರ್ಮ ನಿಲೆತ ಬೆರಿಟ್
ಉಡಲ್’ಗೊಂಜಿ ಶಾಂತಿ ಕೊರ್ಪಿ ಉಜಿರೆ ಪುಣ್ಯ ನೆಲಟ್

ನಾಡ್’ಡೊಂಜಿ ನುಡಿತ ಪರ್ಬ ಮಲ್ಪುನ ಸೊಗಸ್
ಬೋಡಾಯಿನ ಪೊರ್ಲು ಉಂಡು, ಬಾಯಿಗ್ ತೆನಸ್
ಪಡ್ಡೆಯಿದ ಮೂಡಾಯಿದ ತಮ್ಮನದೊಣಸ್

ಅರಸರೆನ್ ಮೀರುನ ಈ ವೈಭವ ತೂಲೆ
ಬೆರಕೆ ದಾಂತಿ ಬಾಸೆಡೊಂಜಿ ಪಾತೆರ ಕೇನ್ಲೆ
ಸುರಗೆದಲಾ ರೆಂಜೆದಲಾ ಕಮ್ಮೆನ ತೆರಿಲೆ

ಅಪ್ಪಾಜಿ ಮೋಕೆಡೊಂಜಿ ಬೆರಿಕ್ ಬೊಟ್ಟ್’ನಗ
ಅಪ್ಪಳದ ಕಮ್ಮೆನನೆ ಮೂಂಕು ಪೊಗಿನಗ
ಅಪ್ಪೆ ನಮನ ತುಳುಬಾಸೆನ್ ನಮ ಮೆರೆಪಾಗ

(೨೦೦೯ರ ದಶಂಬರ- ೧೦, ೧೧, ೧೨, ೧೩ರಂದು ಉಜಿರೆಯಲ್ಲಿ ನಡೆಯುವ ವಿಶ್ವ ತುಳು ಸಮ್ಮೇಳನದ ಮುನ್ನೆಲೆಯಲ್ಲಿ)
(೧೫-ಅಕ್ಟೋಬರ್-೨೦೦೯)

Sunday 13 December 2009

ನಮ್ಮ-ನಿಮ್ಮಲ್ಲಿ...

ಇಂದು ನಮ್ಮೂರಲ್ಲಿ ಸುಡು ಸುಡು ಬಿಸಿಲು
ನಿಮ್ಮಲ್ಲಿ ಹೇಗಿದೆಯೋ ಗೊತ್ತಿಲ್ಲ.
ಇಂದು ನಮ್ಮೂರಲ್ಲಿ ನವೆಯುವ ಸೆಖೆ
ನಿಮ್ಮಲ್ಲಿ ಹೇಗಿದೆಯೋ ಗೊತ್ತಿಲ್ಲ.
ಇಂದು ನಮ್ಮೂರಲ್ಲಿ ಬವಳಿಸುವ ಬೆವರು
ನಿಮ್ಮಲ್ಲಿ ಹೇಗಿದೆಯೋ ಗೊತ್ತಿಲ್ಲ.

ಇಂದು ನಮ್ಮೂರಲ್ಲಿ ಮೋಡ ಮುಸುಕು
ನಿಮ್ಮಲ್ಲಿ ಹೇಗಿದೆಯೋ ಗೊತ್ತಿಲ್ಲ.
ಇಂದು ನಮ್ಮೂರಲ್ಲಿ ಬೆದರಿಸುವ ಮಿಂಚು-ಸಿಡಿಲು
ನಿಮ್ಮಲ್ಲಿ ಹೇಗಿದೆಯೋ ಗೊತ್ತಿಲ್ಲ.
ಇಂದು ನಮ್ಮೂರಲ್ಲಿ ಕರಗಿಸುವ ಮಳೆ
ನಿಮ್ಮಲ್ಲಿ ಹೇಗಿದೆಯೋ ಗೊತ್ತಿಲ್ಲ.

ಇಂದು ನಮ್ಮೂರಲ್ಲಿ ಕೊರೆಯುವ ಕುಳಿರ್ಗಾಳಿ
ನಿಮ್ಮಲ್ಲಿ ಹೇಗಿದೆಯೋ ಗೊತ್ತಿಲ್ಲ.
ಇಂದು ನಮ್ಮೂರಲ್ಲಿ ದಿಕ್ಕೆಡಿಸುವ ಚಂಡಮಾರುತ
ನಿಮ್ಮಲ್ಲಿ ಹೇಗಿದೆಯೋ ಗೊತ್ತಿಲ್ಲ.

ಇಂದು ನಮ್ಮೂರಲ್ಲಿ ನಡುಗಿಸುವ ಛಳಿ
ನಿಮ್ಮಲ್ಲಿ ಹೇಗಿದೆಯೋ ಗೊತ್ತಿಲ್ಲ.
ಇಂದು ನಮ್ಮೂರಲ್ಲಿ ಸುರಿವ ಬಿಳಿ ಹಿಮ
ನಿಮ್ಮಲ್ಲಿ ಹೇಗಿದೆಯೋ ಗೊತ್ತಿಲ್ಲ.

ಇಷ್ಟಾದರೂ ನನ್ನೊಳಗೆ ಬದುಕುವ ಬಯಕೆ
ನಿಮ್ಮಲ್ಲಿ ಹೇಗಿದೆಯೋ ಗೊತ್ತಿಲ್ಲ.
ಬಾಳುವ ಕನಸು, ಕಲಿಕೆಯ ದಾಹ
ನಿಮ್ಮಲ್ಲಿ ಹೇಗಿದೆಯೋ ಗೊತ್ತಿಲ್ಲ.

ಇಷ್ಟಾದರೂ ನನ್ನೊಳಗೆ ಸೋಜಿಗದ ಅಚ್ಚರಿ
ನಿಮ್ಮಲ್ಲಿ ಹೇಗಿದೆಯೋ ಗೊತ್ತಿಲ್ಲ.
ಬಾಚಿಕೊಳ್ಳುವ ಬೆರಗು, ತೆರೆದುಕೊಳ್ಳುವ ನಗು
ನಿಮ್ಮಲ್ಲಿ ಹೇಗಿದೆಯೋ ಗೊತ್ತಿಲ್ಲ.
(೦೨/೦೮-ಎಪ್ರಿಲ್-೨೦೦೮)

Sunday 6 December 2009

ಕಥೆ-ಕವಿತೆ

ಕಥೆ ಹುಟ್ಟಿದ ಹೊತ್ತು, ಅಂದು
ಸಡಗರದ ಜೊತೆಗೆ ಪ್ರಶ್ನೆಯೊಂದು
ಕವಿತೆಯಾಗಿಯೇ ಏಕೆ
ನೀನು ಬರಲಿಲ್ಲವೆಂದು
ಕಥೆ ಉತ್ತರಿಸಲಿಲ್ಲ, ನಕ್ಕಿತ್ತು
ಹೊರಗೆ ನಡೆದೇಬಿಟ್ಟಿತ್ತು
ಅದಕ್ಕಿಲ್ಲ ಹೆತ್ತವರ ಜತೆ
ಕೋರಿಕೆ, ಮಾತುಕತೆ
ತೆರೆದಿತ್ತು ಜಗತ್ತು
ಜನರತ್ತ ಹೊರಟಿತ್ತು

ತಪಸ್ಸು ಫಲಿಸಿತ್ತು
ಮತ್ತೆ ಬಂದಿತ್ತು
ಲಾಸ್ಯ, ಲಾವಣ್ಯಗಳ ಹೊತ್ತು
ಒನಪು, ವೈಯಾರಗಳ ಕವಿತೆ
ಬಳುಕಿ ಆಡುವ ಲತೆ
ನಿಗೂಢಗಳ ಒರತೆ

ನನ್ನೊಳಗನೆಲ್ಲ ಕದಡಿ
ಕಿಲಕಿಲನೆ ನಕ್ಕು, ಆಡಿ
ರೇಗಿಸಿ, ಟೀಕಿಸಿ, ಕಾದಾಡಿ
ತನ್ನತನ ಮೆರೆದಿತ್ತು
ನನ್ನನ್ನೇ ಮರೆಮಾಡಿ

ಕಾಲವುರುಳಿ, ಅರಳಿ
ಮರಳಿ ಬಂದಿತ್ತು ಕಥೆ
ಮನೆಯ ಕಡೆಗೆ
ಮುಖದಲ್ಲಿ ನಗು
ಎಳಸು ಮೀಸೆಯ ಮರೆಗೆ

ನಿಗೂಢಗಳ ಕವಿತೆ
ಒರಗಿದೆ ನನ್ನೆದೆಯಲ್ಲಿ
ನೆನಪುಗಳ ಮೆರವಣಿಗೆ
ಹೊಸೆಯುತ್ತಾ ಬೆಸುಗೆ
(೧೩-ಮಾರ್ಚ್-೨೦೦೮)

Saturday 28 November 2009

ಪುಟ್ಟ ಹಕ್ಕಿ, ಬಾ...

ಪುಟ್ಟ ಹಕ್ಕಿ, ಪುಟ್ಟ ಹಕ್ಕಿ, ಎತ್ತ ಹಾರುತಿರುವೆ?
ಅತ್ತ ಇತ್ತ ನೋಡಿಕೊಂಡು, ಮತ್ತೆ ಓಡುತಿರುವೆ?

ಗಾಳಿ ಬೀಸಿ, ಧೂಳು ಹಾಸಿ, ಕೆಮ್ಮುತಿರುವೆ, ಬಾ
ಸಿಹಿಯ ನೀರ ಬೊಗಸೆಯಲ್ಲಿ ಹಿಡಿವೆ ನಿನಗೆ, ಬಾ

ಮಳೆಯು ಬಂತು, ಛಳಿಯು ಉಂಟು, ನನ್ನ ಜೊತೆಗೆ ಬಾ
ಅಮ್ಮ ಹೊಲಿದ ಗಾದಿಯೊಳಗೆ ಬೆಚ್ಚಗಿಡುವೆ, ಬಾ

ಕಾಳು ಸಿಗದೆ, ಶಕ್ತಿ ಇರದೆ, ಬಿಕ್ಕುತಿರುವೆ, ಬಾ
ಅಪ್ಪ ತಂದ ತಿಂಡಿಯನ್ನು ಹಂಚಿ ಕೊಡುವೆ, ಬಾ

ಕತ್ತಲಾಯ್ತು, ದೀಪ ಹೋಯ್ತು, ಇಲ್ಲೆ ನಿಲ್ಲು, ಬಾ
ಅಣ್ಣ ಕೊಟ್ಟ ಗರಿಯ ಮರಿಯ ನಿನಗೆ ಮುಡಿವೆ, ಬಾ

ಬೆಳಗು ಬರಲಿ, ರವಿಯು ನಗಲಿ, ಹೊರಗೆ ಲೋಕದಲ್ಲಿ
ಅಲ್ಲಿತನಕ ಜೊತೆಯಲಿರುವ, ನನ್ನ ಕೋಣೆಯಲ್ಲಿ.
(೨೭-ನವೆಂಬರ್-೨೦೦೭)

Saturday 21 November 2009

ಬಳ್ಳಿ ಗೆಜ್ಜೆ

ಮುಂದಲಿಗೆಯ ಅಂಚಿನಲ್ಲಿ
ಒಂದು ಚಿಲುಮೆ ಹೊರಳು
ನೆಳಲು ಬೆಳಕಿನಾಟದಲ್ಲಿ
ನಿನ್ನ ಘಲಿಲು ಘಲಿಲು

ಇಟ್ಟ ಹೆಜ್ಜೆ ಜಾಡಿನಲ್ಲಿ
ಬಳ್ಳಿ ನಡೆಯ ಕುರುಹು
ಸುತ್ತ ಸರಿವ ನಾಡಿಯಲ್ಲಿ
ಜೀವಸೆಲೆಯ ಹೊಳಹು

ಎತ್ತಲಿರುವ ಭಾರದರಿವು
ಇರದ ಪುಟ್ಟ ಮುಕುಟ
ಎದ್ದುನಿಂತ ಧೀರನಂತೆ
ಬೆಣ್ಣೆ ಮುದ್ದೆ ಬೆಟ್ಟ

ಘಲ್ಲು ಗುಲ್ಲು ಮನೆಯಲೆಲ್ಲ
ತುಂಬಿಸಿರುವ ನಡಿಗೆ
ಈಗ ಮೌನದಾಟವಲ್ಲ
ನೋಟ ಬೇಕು ಅಡಿಗೆ

ಕಾಣದೊಂದು ಕೋಣೆಯಲ್ಲಿ
ಎಳೆಯ ಬಿಸಿಲ ಕೋಲು
ಬೆಳಗುತಿರಲಿ ಬಾಳಿನಲ್ಲಿ
ಎಡವದಿರಲು ಕಾಲು

(ಚಿತ್ರ-ಕವನ ಬ್ಲಾಗಿನಲ್ಲಿ ಚಿತ್ರವೊಂದಕ್ಕೆ ಬರೆದದ್ದು)
(೨೬-ಫೆಬ್ರವರಿ-೨೦೦೮)

Saturday 14 November 2009

ಬರಲೇ ನಾ...

ನಿನ್ನ ಸೋಗೆಯನೆತ್ತಲು
ಹಿಂದೆ ಮುಂದೆ ಸುತ್ತಲು
ಬರಲೇ ನಾ ನವಿಲೆ?

ನಿನ್ನ ರಾಗವ ಕಲಿಯಲು
ಮೆಚ್ಚಿ ತಾಳವ ತಟ್ಟಲು
ಬರಲೇ ನಾ ಕೋಗಿಲೆ?

ನಿನ್ನ ಜೊತೆಯಲಿ ನಲಿಯಲು
ಮರವ ಏರುತ ಆಡಲು
ಬರಲೇ ನಾ ಅಳಿಲೆ?

ನಿನ್ನ ದಳಗಳ ಅಪ್ಪಲು,
ಮೆಲ್ಲ ಕಣ್ಣಿಗೆ ಒತ್ತಲು
ಬರಲೇ ನಾ ಕಮಲೆ?

ನಿನ್ನ ಮಡಿಲಲಿ ಅರಳಲು
ಸುತ್ತ ನೋಟವ ಹರಡಲು
ಬರಲೇ ನಾ ಬಯಲೆ?

ನಿನ್ನ ಬಣ್ಣವ ಬೆರೆಸಲು
ನನ್ನ ಅಂಗಳಕಿಳಿಸಲು
ಬರಲೇ ನಾ ಮುಗಿಲೆ?
(೧೭-ಡಿಸೆಂಬರ್-೨೦೦೭)

Saturday 7 November 2009

ಕವಳ

ಬುದ್ಧಿ ಮಲಗಿದ್ದ ಹೊತ್ತು
ಮನಸಿಗೆಚ್ಚರ
ರಸಪೂರಿ ತೋಟದಲಿ
ಪೂರ್ವಜನ ಅವತಾರ
ಅಲ್ಲಿಂದಿಲ್ಲಿ ಹಾರಿ
ಜಾರಿ, ತೂರಿ
ಎಲ್ಲ ಎಲ್ಲೆಗಳನ್ನು
ಎಗ್ಗಿಲ್ಲದೆ ಮೀರಿ
ಮುನ್ನುಗ್ಗಿ ಜಗ್ಗಿ
ಏರಿಬಂದಿತ್ತು

ಪೂರ್ಣ ತೃಪ್ತಿಯಿಲ್ಲ
ದಣಿವಾದರೂ ತಣಿವಿಲ್ಲ
ತಂಬುಲಕೆ ರಂಗಿಲ್ಲ
ಅದೇ ಮರ ಅದೇ ಹಣ್ಣು

(೦೭-ನವೆಂಬರ್-೨೦೦೮)

Friday 30 October 2009

ಟ್ರಿಕ್.... OR.... ಟ್ರೀಟ್....

ಪ್ರತೀ ವರ್ಷದ ಹಾಗೆ ಈ ವರ್ಷವೂ ಹ್ಯಾಲೋವೀನ್ ಬಂದಿದೆ. ಅದ್ರಲ್ಲೇನು ವಿಶೇಷ ಅಂದಿರಾ? ನಂಗೊತ್ತಿಲ್ಲಪ್ಪ. ಈ ವರ್ಷ ಯಾರ್ಯಾರು ಯಾವ್ಯಾವ ವೇಷ ಭೂಷಣ ತೊಟ್ಟು ಎಲ್ಲೆಲ್ಲಿ ಸುತ್ತಾಡಿ ಏನೇನು ಕ್ಯಾಂಡಿ ಒಟ್ಟುಮಾಡ್ತಾರೋ, ನನಗ್ಗೊತ್ತಿಲ್ಲ. ನಾನಂತೂ ಹೋಗಲ್ಲ, ಯಾವತ್ತೂ ಹೋಗಿಲ್ಲ. ಆದರೆ, ನನ್ನ ಮೊತ್ತ ಮೊದಲ ಹ್ಯಾಲೋವೀನ್ ಅನುಭವ ನಿಮ್ಮೊಂದಿಗೆ ಹಂಚಿಕೊಳ್ಳಬೇಕೂಂತಲೇ ಈ ಬರಹ....

ನಾನು ಅಮೆರಿಕಾ ಅನ್ನುವ ಈ ಆಧುನಿಕ ದೇಶಕ್ಕೆ ಕಾಲಿರಿಸಿದ್ದು ೧೯೯೨ ಸೆಪ್ಟೆಂಬರ್ ಉತ್ತರಾರ್ಧದಲ್ಲಿ. ಬೆಂಗಳೂರಲ್ಲಿದ್ದಾಗ ಏನೇನೋ ಓದು, ನೆಂಟರು, ಇನ್ನೂ ಎರಡು ವರ್ಷ ಆಗಿಲ್ಲದ ಮಗು, ಕೆಳಗೆ ಓನರ್ ಆಂಟಿ, ಅವರ ಮಕ್ಕಳು, ಪಕ್ಕದ ಮನೆಯ ಶ್ರೀದೇವಿಯಂಥಾ ರೂಪಿನ ಚಟಪಟ ಮಾತಿನ ಗೆಳತಿ- ಎಲ್ಲವನ್ನೂ ಬಿಟ್ಟು ನಡುರಾತ್ರೆಗೆ ಆಗಿನ ಮದ್ರಾಸಿನಿಂದ ಸಿಂಗಪೂರ್ ಮಾರ್ಗವಾಗಿ ಸ್ಯಾನ್ ಫ್ರಾನ್ಸಿಸ್ಕೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕತ್ತಲಲ್ಲೇ ಇಳಿದ ನೆನಪು. ಸಾಂತಾಕ್ಲಾರಾದಲ್ಲಿ ಅಪಾರ್ಟ್ಮೆಂಟ್ ಒಂದನ್ನು ಬಾಡಿಗೆಗೆ ಹಿಡಿದಿದ್ದರು ಇಪ್ಪತ್ತು ದಿನ ಮೊದಲೇ ಬಂದಿದ್ದ ರಾಯರು.

ನಿಧಾನವಾಗಿ ಸುತ್ತಮುತ್ತಲ ಪರಿಚಯವಾಗುತ್ತಾ, ಇಲ್ಲಿನವರ ವೇಷಭೂಷಣ, ಭಾಷೆಭಾವಗಳ ಹದ ಅರಿಯುವ ಪ್ರಯತ್ನದಲ್ಲಿ ತಿಂಗಳೇ ಉರುಳಿತು. ಹ್ಯಾಲೋವೀನ್ ಹೆಸರು ಕೇಳಿಬಂದಿತು. ನಮ್ಮ ಅಪಾರ್ಟ್ಮೆಂಟಿನ ಮ್ಯಾನೇಜರ್ ಒಳ್ಳೆಯ ಮಹಿಳೆ, ಪ್ಯಾಟ್, ನನ್ನ ಪ್ರಶ್ನೆಗೆ ಅವಳದೇ ಶೈಲಿಯಲ್ಲಿ ಉತ್ತರಿಸಿದರೂ ನನರ್ಥವಾಗಿದ್ದು ಸ್ವಲ್ಪ. ‘ಮಗನಿಗೆ ಏನಾದರೂ ಕಾಸ್ಟ್ಯೂಮ್ ತಗೋ. ನಮ್ಮನೇಗೆ ಟ್ರಿಕ್ ಆರ್ ಟ್ರೀಟಿಗೆ ಕರ್ಕೊಂಡು ಬಾ, ಅವನಿಗೆ ಕ್ಯಾಂಡಿ ಕೊಡ್ತೇನೆ’ ಅಂದಳು ಅವನ ಕೆನ್ನೆ ಸವರುತ್ತಾ. ಅವನಿಗವಳು ಇಷ್ಟದ ‘ಪ್ಯಾಟ್ ಅಜ್ಜಿ’.

ಇವಳಲ್ಲದೆ ನಾವು ಅಲ್ಲಿ ಮಾತಾಡ್ತಿದ್ದದ್ದು ಅಥವಾ ನಮ್ಮನ್ನು ಮಾತಾಡಿಸ್ತಿದ್ದದ್ದು ಪಕ್ಕದ ಕಟ್ಟಡದಲ್ಲಿ ಕೆಳ ಅಂತಸ್ತಿನಲ್ಲಿದ್ದ ಒಬ್ಬಳು ಎಂಭತ್ತು ವರ್ಷದ ಒಂಟಿ ಮಹಿಳೆ ಷೆರೀನ್ ಮತ್ತವಳ ಗಿಳಿ ಸ್ಯಾಮ್ (ಅವಳ ಪ್ಯಾಟಿಯೋ ಮತ್ತು ರೂಮಿನ ಕಿಟಕಿ ನಮ್ಮ ಅಡುಗೆ ಮನೆಯ ಕಿಟಕಿ ಮತ್ತು ರೂಮಿನ ಕಿಟಕಿಗೆ ಕಾಣಿಸುತ್ತಿತ್ತು, ಮಗ ಒಮ್ಮೊಮ್ಮೆ ಅವಳ ಜೊತೆ ಅಲ್ಲಿಂದಲೇ ‘ಕಿಚಪಿಚ’ ಹರಟುತ್ತಿದ್ದ), ಹಾಗೂ ಅಪಾರ್ಟ್ಮೆಂಟಿನ ಮೈನ್‌ಟೇನೆನ್ಸ್ ಮಾಡುತ್ತಿದ್ದ ಸ್ಕಾಟ್ ಮತ್ತವನ ಮಡದಿ ಡೆಬಿ. ಬೇರೆ ಯಾರ ಪರಿಚಯವೂ ಆಗಿದ್ದಿಲ್ಲ ನಮಗೆ. ಒಂದು ಕಟ್ಟಡದ ಮಹಡಿಯ ಒಂದು ಪಾರ್ಶ್ವದಲ್ಲಿ ಎದುರುಬದುರಾಗಿದ್ದ ನಾಲ್ಕು ಮನೆಗಳಲ್ಲಿ ನಮ್ಮದು ಒಳಬದಿಯ ಮನೆ (ಬೀದಿ ಬದಿಯದ್ದಲ್ಲ).

ಅಂದು ಶುಕ್ರವಾರ, ಅಕ್ಟೋಬರ್ ಮೂವತ್ತು. ಹ್ಯಾಲೋವೀನಿನ ಮುನ್ನಾದಿನ. ಯಾಕೋ ನನ್ನ ಮೂಡ್ ಕೆಟ್ಟಿತ್ತು (ಯಾಕೇಂತ ನೆನಪಿಲ್ಲ). ಚೆನ್ನಾಗಿ ಜಗಳವಾಡಿ ಕೋಪ ಮಾಡಿಕೊಂಡು ಹಾಲಿನಲ್ಲಿ ಸೋಫಾದಲ್ಲೇ ಕೂತಿದ್ದೆ. ಅಪ್ಪ-ಮಗ ಒಳಗೆ ಮಲಗಿದ್ದರು. ಗಂಟೆ ಇನ್ನೂ ಹತ್ತರ ಆಸುಪಾಸು. ನನ್ನೊಳಗೆ ದುಸುಮುಸು. ಸುಮ್ಮನೇ ಕೂತಿದ್ದೆ. ಮಂಪರು ಹತ್ತಿರಬೇಕು, ಗೊತ್ತಿಲ್ಲ.

ಬಾಗಿಲು ಟಕಟಕಿಸಿದ ಸದ್ದಾಯ್ತು. ಹೋಗಿ ಇಣುಕಿಂಡಿಯಲ್ಲಿ ನೋಡಿದೆ, ಯಾರೂ ಕಾಣಲಿಲ್ಲ. ಮತ್ತೆ ಸೋಫಾದ ಹತ್ರ ಬರುವುದರಲ್ಲಿ ಇನ್ನೊಮ್ಮೆ ಟಕಟಕ. ಮತ್ತೆ ಇಣುಕಿಂಡಿಯಲ್ಲಿ ಯಾರೂ ಕಾಣಲಿಲ್ಲ. ಬಾಗಿಲಿಗಿದ್ದ ಸುರಕ್ಷೆಯ ಸರಪಳಿ ಸಿಕ್ಕಿಸಿತ್ತು. ಹಾಗೆಯೇ ಎರಡಿಂಚು ತೆರೆದೆ. ನನ್ನ ಮುಂದೆ, ಹೊರಗಿನ ಪ್ಯಾಸೇಜಿನಲ್ಲಿ ಮೂರಡಿ ಎತ್ತರದ, ಬಿಳಿ ಬಟ್ಟೆ ಪೂರ್ತಿ ಮುಚ್ಚಿಕೊಂಡ, ಓಲಾಡುವ ಒಂದು ಆಕೃತಿ. ಮೇಲೆ-ಕೆಳಗೆ-ಎಡ-ಬಲಕ್ಕೆ ಅನಾಯಾಸವಾಗಿ ಓಲಾಡುತ್ತಿದ್ದ ಅದನ್ನು ಕಂಡದ್ದೇ ಬಾಗಿಲನ್ನು ಠಪ್ಪೆಂದು ರಾಚಿ, ಕಿಟಾರನೆ ಚೀರಿ ಅಲ್ಲೇ ಬಾಗಿಲ ಬುಡದಲ್ಲೇ ಬಿದ್ದದ್ದು ಮಾತ್ರ ಚೆನ್ನಾಗಿ ನೆನಪಿದೆ, ಇನ್ನೂ.

‘ಜ್ಯೋತಿ, ಏಳು, ಏನಾಯ್ತು? ಇಲ್ಯಾಕೆ ಮಲಗಿದ್ದೀ? ಕಿರುಚಿದ್ದು ಯಾಕೆ? ಕನಸು ಬಿತ್ತಾ?...? ಪ್ರಶ್ನೆಗಳ ಹಿಂದೆ ಕಂಡ ಇವರ ಮುಖ ಇನ್ನಿಲ್ಲದ ನೆಮ್ಮದಿ ಕೊಟ್ಟದ್ದೂ ಸುಳ್ಳಲ್ಲ. ಏನೊಂದು ಮಾತೂ ಬಾಯಿಗೆ ಬರುತ್ತಿರಲ್ಲಿಲ್ಲ. ಸ್ವರವೇ ಹೊರಡುತ್ತಿರಲ್ಲಿಲ್ಲ. ಎಬ್ಬಿಸಿ ಸೋಫಾಕ್ಕೆ ಕರ್ಕೊಂಡು ಹೋಗಿ ಕೂರಿಸಿದರು. ನೀರು ತಂದುಕೊಟ್ಟರು. ‘ಕನಸು ಬಿತ್ತಾ?’ ಪ್ರಶ್ನೆಗೆ ಇಲ್ಲವೆಂದೆ. ಕಂಡದ್ದನ್ನು ನಿಧಾನವಾಗಿ ಬಿಡಿಬಿಡಿಯಾಗಿ ವಿವರಿಸಿದೆ. ಹೊರಗೆ ಹೋಗಿ ನೋಡಿ ಬಂದರು. ಯಾರೂ ಇಲ್ಲವೆಂದರು. ‘ಅದು ಕನಸೇ ಆಗಿರಬೇಕು, ಇಲ್ಲೆಲ್ಲ ಹಾಗೆ ಸುಮ್ಮಸುಮ್ಮನೆ ಹೆದರಿಸುವವರು ಯಾರೂ ಇಲ್ಲ’ವೆಂದು ಇವರ ವಾದ. ನಾನು ಕಂಡದ್ದು ಕನಸಲ್ಲ, ಯಾರದೋ ಪ್ರ್ಯಾಂಕ್ ಅಂತಲೇ ನನ್ನ ನಂಬಿಕೆ. ಅಲ್ಲೆಲ್ಲ ಸುಮಾರು ಹದಿಹರೆಯದ ಮಕ್ಕಳು ಇದ್ದರು. ಎಲ್ಲರೂ ಕೆಲವೊಂದು ಸಂಜೆ ಹೊತ್ತು ಗದ್ದಲವೆಬ್ಬಿಸುತ್ತಿದ್ದದ್ದು ಸಾಮಾನ್ಯ. ಆದ್ದರಿಂದ, ಈ ಅಪಾರ್ಟ್ಮೆಂಟಿಗೆ ಹೊಸಬರಾದ ನಮ್ಮನ್ನು ಹೆದರಿಸಲು ಈ ಆಟ ಹೂಡಿರಬಹುದೆಂದು ನನ್ನೆಣಿಕೆ. ಮಕ್ಕಳಾಟಕ್ಕೆ ಗೊತ್ತುಗುರಿಯಿದೆಯೆ?

ಇದೆಲ್ಲ ನಡೆದು ಹದಿನೇಳು ವರ್ಷ ಸಂದಿದೆ. ಕಾಲ ಬೇರೆಬೇರೆ ಪರೀಕ್ಷೆಗಳನ್ನು ನೀಡಿದೆ. ಎಲ್ಲವನ್ನೂ ದಾಟಿ ಬಂದಿದ್ದೇವೆ. ಆದರೂ ಇದನ್ನು ಮರೆಯಲಾರೆ. ಅಂದು ನಿಜವಾಗಿಯೂ ಏನಾಯಿತು, ಯಾರು ಅಂಥ ಆಟವಾಡಿದ್ದು, ಯಾಕೆ ಎನ್ನುವುದಕ್ಕೆ ಮಾತ್ರ ನನ್ನ ಬಳಿ ಇನ್ನೂ ಉತ್ತರವೇ ಇಲ್ಲ.

Monday 26 October 2009

ಜೀವನ್ಮುಕ್ತ

ಬೆಳಕಿದೆ ಹೊರಗೆ, ಕತ್ತಲು ಒಳಗೆ,
ಹಿಡಿಯುವ ಕಿರಣಕೆ ಕನ್ನಡಿ;
ಬೀರಲಿ ಹೊನಲು, ಜಾರಲಿ ಅಮಲು,
ಪಡೆಯುವ ಜಾಗೃತಿ ಮುನ್ನುಡಿ.

ದೀಪದ ಒಳಗೆ, ಬತ್ತಿಯ ಹೊರಗೆ,
ನಡುವಿನ ಗಾಳಿಯ ತೆರದಿ;
ಬೇಯುವ ಜೀವ, ತೇಯುವ ಭಾವ,
ನಡುಗುತ ಉಳಿಯದು ಜಗದಿ.

ನಾನು ಎನ್ನುವ, ನನ್ನದು ಎನ್ನುವ,
ಹಂಬಲ ಮೀರಿದ ಮನುಜ;
ಎಣ್ಣೆಯ, ಬತ್ತಿಯ, ಗಾಳಿಯ ರೀತಿ,
ತುಂಬಿದ ಜ್ಞಾನದ ಕಣಜ.
(೩-ನವೆಂಬರ್-೨೦೦೬)

Wednesday 21 October 2009

ಕಾರ್ಯ-ಕಾರಣ

ನಮ್ಮ ಬೆವರು, ನಿಮ್ಮ ನೆತ್ತರು,
ಮತ್ತಿನ್ನಾರದೋ ಕಾಲ,
ಯಾರ ಸುತ್ತಲೋ ಬೇಲಿ ಕಟ್ಟಲು
ಸಾವಿರ ಮಕ್ಕಳ ತೋಳ್ಬಲ;
ಯಾರ ಸಂಚಿಗೆ ಯಾರ ಮೆಚ್ಚುಗೆ?
ಯಾರ ಕತ್ತು ಯಾರ ಮಚ್ಚಿಗೆ?
ಯಾರಿಗೆ ಗೋರಿ, ಯಾರಿಗೆ ಗದ್ದುಗೆ?
ಯಾರ‍್ಯಾರಿಗೋ ಯಾಕೀ ಛಲ?

ಇವನು ಹೆತ್ತದ್ದಲ್ಲ, ಅವನು ಸಾಕಿದ್ದಲ್ಲ,
ಅಮಾಯಕರ ಹೆಣರಾಶಿ ಅಲ್ಲಿ,
ಇವನು ದೇವರಲ್ಲ, ಅವನು ದೆವ್ವವಲ್ಲ,
ಅಮೂರ್ತಗಳ ಭೂತ ಇಲ್ಲಿ;
ನೆಲವೆಲ್ಲ ಇವನ ಗುತ್ತಿಗೆಯೇನು?
ಜಗಕೆಲ್ಲ ಅವನೇ ಒಡೆಯನೇನು?
ಗೆದ್ದವರೇನು, ಬಿದ್ದವರೇನು?
ಕರುಳ ಕಣ್ಣೀರಿಗೆ ಯಾವ ಫಲ?

(‘ಇರಾಕ್ ಮೇಲೆ ಅಮೆರಿಕಾ ಯುದ್ಧ’ ಯಾವುದೇ ನೆಲೆಗಾಣದೇ ಅಯೋಮಯವಾಗಿ ಸಾಗುತ್ತಿರುವ ಸಮಯದಲ್ಲಿ....)
(೧೯-ಅಕ್ಟೋಬರ್-೨೦೦೬)

Saturday 17 October 2009

ಬೆಳಗಿ ಬರಲಿ

ಎಲ್ಲರಿಗೂ ಬೆಳಕಿನ ಹಬ್ಬದ ಶುಭಾಶಯಗಳು.
ಹರಕೆ-ಹಾರೈಕೆಗಳು ನಮ್ಮೆಲ್ಲರೊಡನೆ ಎಂದೂ ಸಾಗಿ ಬರಲಿ
ಸುಖ, ಸಂತಸ, ನೆಮ್ಮದಿ, ಶಾಂತಿಗಳ ಎಂದೂ ಜೊತೆಗೆ ತರಲಿ.


ಸುತ್ತೆಲ್ಲ ಹಣಕಿಹರು ಆ ಪುಟ್ಟ ಹಣತೆಗಳು -
ಮತ್ತೊಮ್ಮೆ ದೀವಳಿಗೆ ನೆಪವ ಮಾಡಿ;
ಅತ್ತಿತ್ತ ಆಡಿಹರು ಬೆಳಕಿನಾ ಮೂರ್ತಿಗಳು -
‘ಕತ್ತಲೆಗೆ ಬೆದರದಿರಿ’, ಎಂದು ಸಾರಿ.

ತೈಲ ಸಾರವ ಹೀರಿ, ಬತ್ತಿ ಭಾವವ ಮೀರಿ -
ಮೃತ್ತಿಕೆಯ ಮರ್ತ್ಯತನ ದಾಟಿ ಏರಿ,
ನೆಲ-ಜಲದ ಒಲವಿಂದ ಬಲಗೊಂಡ ರೂವಾರಿ -
ಕತ್ತಲೆಯ ನುಂಗಿ, ತೋರುವರು ದಾರಿ.

ಮಣ್ಣಿನಲಿ ಕಂಡವರು, ಮಣ್ಣನ್ನೆ ಉಣುವವರು -
ಸಣ್ಣ ಕುಡಿಯಿಂದಲೇ ಬೆಳೆಯುವವರು,
ಬಣ್ಣಕ್ಕೆ ಬೇಕವರು, ಕಣ್ಣಿಗೆ ಕಾರಣರು -
ತಣ್ಣಗಿನ ಕತ್ತಲಲು ಕರಗದವರು.

ಮರುಕಳಿಸಿ ಬರುವ ನಗೆ ಮರುಅಲೆಯ ತರುವಂತೆ -
ತರಲಿವರು ನಮಗೆಲ್ಲ ಮರಳಿ ಹರುಷ,
ಗುರುತರದ ಹೊಣೆಯನ್ನೆ ಹೊತ್ತಿರುವ ತಮಸಾರಿ -
ಇರಲವರು ನಮ್ಮೊಳಗೆ ಬೆಳಗಿ ಮನಸ.
(೧೨-ನವೆಂಬರ್-೨೦೦೧)

Thursday 15 October 2009

ದೀಪಗಳ ನೆನಪುಗಳು

ಜಗಲಿಯುದ್ದ ಸಾಲಿನಲ್ಲಿ ಹಣತೆಯಿರಿಸಿ
ತೈಲವೆರೆದು, ದೀಪವುರಿಸಿ
ಸಿಡಿಮದ್ದು ಸಿಡಿಸಿದ್ದು, ಕಿಲಕಿಲನೆ ನಕ್ಕಿದ್ದು
ತಮ್ಮ-ತಂಗಿಯರ ಕೂಡಿ
ಗೂಡುದೀಪ ಏರಿಸಿದ್ದು
ಹೂಗಳಾಯ್ದು ಮಾಲೆ ನೇಯ್ದು
ಅಪ್ಪನ ಗಡ್ಡದ ಜಡೆಯೊಳಿರಿಸಿ
ಅಮ್ಮನ ಉದ್ದದ ಮುಡಿಯೊಳಿರಿಸಿ
ತಂಗಿಯ ಮೋಟು ಜುಟ್ಟಿಗಿಳಿಸಿ ನಲಿದದ್ದು-
ಇಂದು ಬರೇ ನೆನಪು;
ಬಾಳಿನಲ್ಲಿ ಸವಿಯ ತರಲು
ಕಚಗುಳಿಯಿಡಲು ಸಿಹಿ ನೆನಪು.

ಹಾರಿ ಬಂದ ಯಂತ್ರ ಹಕ್ಕಿ
ಸಾವಿರಾರು ಜೀವ ಕುಕ್ಕಿ
ಭಸ್ಮವಾದ ಕನಸ ನೆಕ್ಕಿ
ನಗೆಯ ಬುಗ್ಗೆ ಆವಿ ಮಾಡಿ ತೂರಿಸಿದ್ದು
ರಣಭೇರಿ ಬಾರಿಸಿದ್ದು
ಜಗದ ಮನವ ಕೆರಳಿಸಿದ್ದು
ತಣ್ಣಗೆ ಮರಳಲ್ಲಿ ಹುದುಗಿಸಿದ್ದು-
ಇತ್ತೀಚಿನ ನೆನಪು;
ಬಾಳಿನಲ್ಲಿ ವಾಸ್ತವತೆಯ
ಬಿಂಬವಿರಲು ಕಹಿ ನೆನಪು.
(೦೫-ನವೆಂಬರ್-೨೦೦೨)

Thursday 8 October 2009

ಸ್ಫೂರ್ತಿ ಸೆಲೆ

ಬೆಳಕಾಗಿ ಬಾರಾ..... ಚೆನ್ನೊಲವೆ-
ಹಸುರಾಗಿ ಬಾರಾ!
ಎಳೆ ಎಳೆಯ ಹೀರುತ್ತ,
ಹೊಳೆದರಳಿ ತೂಗುತ್ತ,
ಇಳೆಗೊಂದು ನೆರಳಾಗಿ ತಳಿರಾಗುವೆ;
ಕಳೆದೆಲ್ಲ ನಿನ್ನೆಗಳ,
ಬೆಳೆದ ಹೊಂಗನಸುಗಳ,
ಮಳೆಬಿಲ್ಲ ಮಾಲೆಯನು ನಾ ತೊಡಿಸುವೆ.


ಎಲರಾಗಿ ಬಾರಾ..... ಚೇತನವೆ-
ಉಸಿರಾಗಿ ಬಾರಾ!
ಎಲೆ ಎಲೆಯ ತೀಡುತ್ತ,
ಮಲರಮದ ತೂರುತ್ತ,
ಕಲರವದ ನೆಲೆಯಾಗಿ ಹಾರಾಡುವೆ;
ಹೊಲದ ತೆನೆ ಹೊನಲುಗಳ,
ಮಲೆಯಿಳಿವ ಮೋಡಗಳ,
ಅಲೆಯಲೆಯ ಚೆಲುವನ್ನು ನಾ ತೋರುವೆ.


ಹನಿಯಾಗಿ ಬಾರಾ..... ಸಂತಸವೆ-
ಕಸುವಾಗಿ ಬಾರಾ!
ಬನ ತಣಿಸಿ ಬಾಗುತ್ತ,
ಮನ ಕುಣಿಸಿ ಹಾರುತ್ತ,
ನಿನದಿಸುವ ನಲಿವಾಗಿ ತುಳುಕಾಡುವೆ;
ಅನುಗಾಲ ಒಲುಮೆಗಳ,
ಜಿನುಗುವತಿ ಚಿಲುಮೆಗಳ,
ಇನಿದೊರೆಗೆ ಸೆಲೆಯಾಗಿ ನಾ ಸೇರುವೆ.
(೧೨-ಆಗಸ್ಟ್-೨೦೦೪ ; ೧೩-ಅಕ್ಟೋಬರ್-೨೦೦೪)

Thursday 1 October 2009

ವಾಯುವಿಹಾರ

ಬರಹೇಳಿದ್ದ ದುಷ್ಯಂತ.
ಮರದ ಕೆಳಗೆ ಕಾದಳು,
ಕಾದೇ ಕಾದಳು ಇವಳು.
ಬೆರಳಲ್ಲಿ ಉಂಗುರ,
ಬಾನಲ್ಲಿ ಚಂದಿರ.

ರಥವಿಲ್ಲದ ಕುದುರೆಯಲ್ಲಿ
ಟಕಟಕಿಸುತ್ತ ಬಂದ ನಲ್ಲ
ಹತ್ತು- ಎಂದ.
ಹಿಂದೆ-ಮುಂದೆ ನೋಡದೆ,
ಕಣ್ವ-ಗೌತಮಿಯರ ನೆನೆಯದೆ,
ಬೆನ್ನಿಗಂಟಿದಳು,
ಕಣ್ಣು ಮುಚ್ಚಿದಳು.

ಗಾಳಿಯ ಸುಗಂಧ ಇವನದೇ.
ಕುದುರೆಯ ವೇಗ ಮನಸಿನದೇ.

ಎಚ್ಚರಾದಾಗ-
ಉಂಗುರ ಮೀನಿನೊಳಗಿತ್ತು.
ಮುದಿಕುದುರೆ ಕುಂಟುತ್ತಿತ್ತು.
ಮರದ ಒಂಟಿ ನೆರಳು
ಕಾದು ಕಾದು... ಕರಟಿತ್ತು.
ಭರತ ನಗುತ್ತಿದ್ದ.
(೧೬-ಸೆಪ್ಟೆಂಬರ್-೨೦೦೬)

Saturday 26 September 2009

ಕಾಯೇ ಸರಸ್ವತಿ

ಕಾಯೇ ನಮ್ಮನು ಸರಸ್ವತಿ
ಕತ್ತಲ ಹರಿಸಿ ಕೊಡು ನೀ ಸನ್ಮತಿ ||ಪ||

ಹಂಸ ವಾಹಿನಿ, ಸರಸಿಜ ಮೋಹಿನಿ
ಮನಸಿಜನಗ್ರಜನರಸೀ |
ಅಕ್ಷರ ಜನನಿ, ಜ್ಞಾನಪ್ರದಾಯಿನಿ
ಮಂದಹಾಸಿ ಮೃದುಭಾಷೀ ||ಚರಣ-೧||

ಶ್ವೇತವಸನೇ ಶುಕ್ಲಾಭರಣೇ
ಚಂದ್ರ ಕಾಂತಿ ಪ್ರಭಾಸೇ |
ವೀಣಾ ಸ್ಫಟಿಕಮಣಿ ಪುಸ್ತಕ ಪಾಣೀ
ಕಾವ್ಯಗಾಯನ ಪ್ರೀತೇ ||ಚರಣ-೨||

ಹರಸೇ ತಾಯೇ, ಅಂಬುಜಾಸನೇ
ಅಂಬುಜದಳ ನೇತ್ರೇ |
ಸಲಹೇ ತಾಯೇ, ಮಂಗಳದಾಯಿನೀ
ಅಜಪ್ರಿಯೇ ಶುಭ ಗಾತ್ರೇ ||ಚರಣ-೩||
(೫-ಸೆಪ್ಟೆಂಬರ್-೨೦೦೫ - ೪-ಜೂನ್-೨೦೦೮)

Friday 18 September 2009

ಕೂಸು ಮನ

ಅರುಣ ರವಿ ರಾಗಕ್ಕೆ ಹೊಳೆದು ನರ್ತಿಸುತಿದ್ದ
ಹುಲ್ಲಂಚ ಮಿಂಚನ್ನು ತೊರೆದೆವೇಕೆ?
ಪುಟಿ-ಪುಟಿದು ಏಳುತ್ತ ಆಗಸಕೆ ಹಾರುತ್ತ
ಅರಳಿ ಬೆಳೆಯುವ ಚಿಗುರ ಮರೆತೆವೇಕೆ?

ಹಾಲುಗಲ್ಲದ ಮೇಲೆ ಇಟ್ಟ ಬೆಟ್ಟನು ಸರಿಸಿ
ದಿಟ್ಟಿ ಸೋಕದ ಬೊಟ್ಟನಿಟ್ಟೆವೇಕೆ?
ಕೌತುಕವ ಸೋಜಿಗವ ಕಣ್ಣಂಚಿನಲೆ ಸವರಿ
ತುರಗ ಪಟ್ಟಿಯನಡ್ಡ ಕೊಟ್ಟೆವೇಕೆ?

ಬಿಂಬವಿಲ್ಲದ ಗುಡಿಗೆ ಮೂರ್ತತೆಯ ಸ್ವಾಗತಿಸಿ
ಅಷ್ಟಬಂಧಗಳಿಂದ ಬಿಗಿದೆವೇಕೆ?
ಸ್ತಂಭಗಳ ಅರಮನೆಯ ತುಂಬ ತುಂಬಿದೆ ಸರಕು
ಬಹಿರಂತರಂಗದಲಿ ಕೋಟೆಯೇಕೆ?

ಅನುದಿನವು ಸುಪ್ರಭೆಯ ಹೀರುವೆಲೆ ಹಸುರಂತೆ
ಕೂಸು-ಮನವಿರಲೆಮಗೆ ಮುಪ್ಪದೇಕೆ?
(೨೪-ಆಗಸ್ಟ್-೨೦೦೪)

Saturday 12 September 2009

ವಿಲಾಪ

ರಾಧೆ ರಾಧೇ ಎನದೆ ಅರೆಘಳಿಗೆಯೂ ಇರದೆ
ರಮಿಸಿ ಕಾಡಿದ ನನಗೆ ಏನಾಯಿತೋ
ರಾಧೆಯಾ ನೆರಳಿರದೆ ಗೆಜ್ಜೆಯಾ ದನಿಯಿರದೆ
ರಂಗಿನಾಟದ ಹುರುಪು ಹಾಳಾಯಿತೋ

ಕಿರಿಯನೆಂದೆಲ್ಲರೂ ಹಿರಿತನವನಾಡುತ್ತ
ಕೀಟಲೆಯನಾಡ್ಯಾಡಿ ಕೆಣಕುತಿರಲು
ಕಿನ್ನರಿಯ ಲೀಲೆಯಲಿ ಪ್ರೀತಿಯಲಿ ಕಾಯುತ್ತ
ಕಿಂಕಿಣಿಯನಾಡಿ ನೀ ಮನವ ಗೆಲಲು

ಹಾಲುಮೊಸರನು ಮೆಚ್ಚಿ ಬೆಣ್ಣೆಬೆಟ್ಟವನೆತ್ತಿ
ಹಸುಮಂದೆಯಲಿ ಕರುಗಳೊಡನಾಡುತ
ಹಾಲಾಹಲವ ಸುರಿವ ಹಾವ ಹೆಡೆಯನು ಮೆಟ್ಟಿ
ಹಾಡಿ ಆಡಿದ ನನ್ನ ಜೀವ ಗೆಣತಿ

ಮಾವ ಕರೆದನು ಎಂದು ಮನೆಯ ತೊರೆದೆನು ಅಂದು
ಮರೆಯುವೆನು ಹೇಗೆ ನಾ ಮನದಂಗಳ
ಮಾಳಿಗೆಯಲೇ ನಿಂದು ಪರದೆ ಹಿಂದೆಯೆ ನೊಂದು
ಮಾತು ಮರೆಸಿದೆ, ತುಳುಕಿಸದೆ ಕಂಗೊಳ

ಒಮ್ಮೆಯಾದರು ಬಂದು ನಿನ್ನ ಕಾಂಬೆನು ಎಂದು
ಒಂದಾಸೆ ಹೊತ್ತಿದ್ದೆ ಅರಮನೆಯಲಿ
ಒರಗುದಿಂಬಿನ ಪೀಠ ನನಗೆ ಅಂಟಿದೆಯೆಂದು
ಒಣನೆಪವು ಎಳೆಯಿತದು ಬಿಡು ಭರದಲಿ

ಪಂಚಬಾಣನ ಮಿತ್ರ ಯುದ್ಧಸಾರುವ ಹೊತ್ತು
ಪೂರ್ಣ ಚಂದಿರನೊಳಗೆ ಕೋಲಾಹಲ
ಪಚ್ಚೆಪಸರಿದ ಬಯಲು ಎದೆಗೆ ಬಾಣವನಿತ್ತು
ಪ್ರಾಣ ಬೇಡಲು ನೆನಪು ದಾವಾನಲ

ರಾಜಕಾರಣ ಬೇಡ ರಾಜ್ಯಭಾರವು ಬೇಡ
ರಾಧೆ, ನಿನ್ನಯ ಪ್ರೇಮವೊಂದು ಸಿಗಲಿ
ರಾಶಿ ಹೊನ್ನೂ ಬೇಡ ರಾಯತನವೂ ಬೇಡ
ರಾಧೆ, ಯಮುನೆಯ ತಟವು ನಮಗೆ ಇರಲಿ
(೧೬-ಎಪ್ರಿಲ್-೨೦೦೯)

Friday 4 September 2009

ನನ್ನ ಮನೆಯಲ್ಲಿ...

ನನ್ನ ಮನೆಯಲ್ಲೇ ನಾನು ಪರಕೀಯ;
ಅಪ್ಪನ ಮಾತಿಗೆ ಎದುರಾಡದೆ-
ಅಣ್ಣ-ತಮ್ಮರ ದನಿಗೆ ದನಿಗೊಡದೆ-
ಹೊಸಿಲ ಹೊರಗುರುಳಿ, ಮರಳಿ-
ಬಂದು ಹೋಗುತಿಹ ನೆಂಟ.

ನನ್ನ ಮನೆಯಲ್ಲೇ ನಾನು ಬಲುಸ್ವಾರ್ಥಿ;
ಬೆಳಕಿರದ ಸೂರಿಗೆ ದೀಪ ತೂಗಿಸಿ-
ಬೆಡಗಿರದ ಗೋಡೆಗೆ ಬಣ್ಣ ಅಂಟಿಸಿ-
ಅಂಗಳ ಬೆಳೆಯಿಸಿ, ಅರಳಿಸಿ-
ಅಂದ ತೋರಿಸಿದ ಬಂಟ.

ನನ್ನ ಮನೆಯಲ್ಲೇ ನಾನು ಕಡುದೋಷಿ;
ಸರಿದಾರಿ ತೋರಿ ಒಂದಿಷ್ಟು ಗದರಿ-
ಸಂಯಮದ ಪಾಠ ಮತ್ತಷ್ಟು ಒದರಿ-
ಕಿರಿಯರ ಕೈ ಹಿಡಿದು ನಡೆದು-
ಮುಂದೆ ಸಾಗಿಸಿದ ಕುಂಟ.

ನನ್ನ ಮನೆಯಲ್ಲೇ ನಾನು ಹುಚ್ಚಾತ್ಮ;
ಉಂಡೆಯಾ, ಉಟ್ಟೆಯಾ, ಅನ್ನದವರೊಳಗೆ-
ಉಸಿರಿನ ಕೋಟೆಯ ಪಿಸುದನಿಗಳೊಳಗೆ-
ಕಟಕಿಯನು ಕಂಡೂ ಕಾಣದ-
ನಗೆ-ಕಾಯಕದ ಒಂಟಿ.

(ಹುಟ್ಟಿ-ಬೆಳೆದ ಮನೆಗಾಗಿ ಸ್ವಂತ ಸಂಸಾರವನ್ನೂ ಕಡೆಗಣಿಸಿ, ತನ್ನದೆಲ್ಲವನ್ನೂ ಧಾರೆಯೆರೆದು, ಬಾಳು ಸಾಗಿಸುವ ‘ಪರಕೀಯ ಆತ್ಮ’ರಿಗಾಗಿ....)
(೨೫-ಫ಼ೆಬ್ರವರಿ-೨೦೦೪)

Saturday 29 August 2009

ಮರೆಯ ಮನ

ಕಣ್ಣಲ್ಲೊಂದು ಹನಿ, ಎದೆಯಲ್ಲೊಂದು ಮೊನೆ,
ಮೊಗದಲ್ಲಿ ಬಿರಿದರಳು ದುಂಡು ಮಲ್ಲಿಗೆ,
ಮನಸೇಕೊ ಕಡು-ಕಡು ಕೆಂಡ ಸಂಪಿಗೆ.

ಕಣ್ವರಾನಂದಕ್ಕೆ ನೀರಿನುಂಗುರದುರುಳು,
ಸಾವಿತ್ರಿಗಿತ್ತಲ್ಲಿ ಸಾವಿನರಮನೆ,
ಊರ್ಮಿಳೆಯ ತಾಪಕ್ಕೆ ಮೂರು ಸೆರೆಮನೆ.

ಜಾನಕಿಯ ವನವಾಸ ಕರ್ತವ್ಯದನಾಯಾಸ,
ಮತ್ತಶೋಕ ವನದಲ್ಲಿ ಶೋಕಮನ,
ಪಾಂಚಾಲಿಯಜ್ಞಾತ ರಕ್ತ-ಸಿಂಚನ.

ಅಕ್ಕನುಸಿರಿಗೆ ಉಸಿರು ಕೊಟ್ಟ ದೇವಗೆ ಹೆಸರು,
ಚೆನ್ನಮ್ಮನಲಿ ತುಂಬು ಸ್ಥೈರ್ಯದಾ ಸೆಲೆ,
ಬೇಗೆಯೊಳಗೊಲುಮೆಯೇ ನೆಮ್ಮದಿಯ ನೆಲೆ.

ಮರೆಯಲಾರದ ಮನಕೆ ಮರೆಯಬಾರದ ಕನಸು-
ಸುಪ್ತ-ಜಾಗೃತಿಯೊಳಗೆ ಮನಸು ಕೂಸು.
(೧೧-ಫ಼ೆಬ್ರವರಿ-೨೦೦೪)

Monday 24 August 2009

ಲಂಕೇಶ್ವರ

ಮರಿಕಪಿಯ ತೊಟ್ಟಿಲಿಗೆ ಕಟ್ಟಿಸಿಕೊಂಡು
ಕೈ-ಕಾಲಾಡಿಸಿ ಕೂಸನಾಡಿಸಿದ;
ಮಹಾಬಲಿಯ ಬಲವರಿಯಲು ಹೋಗಿ
ಸೆರೆಯಲಿ ಕನ್ನೆಯರ ಜೊತೆಗಾಡಿದ;
ದೇವೇಂದ್ರನ ಕೆಣಕಿ, ಗೋಣು ಕೆಳಹಾಕಿ
ಮಗನಿಂದ ಮನೆಗೆ ಹಿಂದಿರುಗಿದ;
ದ್ವಿದಶ ಭುಜಶಾಲಿ ಸಹಸ್ರ ಭುಜನನು ಹುಡುಕಿ
ಕೆಣಕಿ, ಕಾದಿ, ಮಣ್ಣು ಮೆತ್ತಿಸಿಕೊಂಡ;
ಅಸಮಬಲ ಸಾಹಸಿ ದಶಕಂಠ
ಅಜ್ಜನ ಕರುಣೆಯಿಂದ ಸ್ನೇಹವುಂಡ.

ಅಷ್ಟಾದರೂ ಒಂದೇ ಒಂದು ತಲೆಯೊಳಗೂ
ಬುದ್ಧಿ ಬಲಿಯದೆ, ಅರಿವು ಮೂಡದೆ,
ಕೆಂಡವ ಕೆದಕಿ ಸೆರಗಿನಲಿಟ್ಟುಕೊಂಡ,
ತನ್ನ ವಂಶವ ತಾನೇ ಸುಟ್ಟುಕೊಂಡ.
(೦೭-ಅಕ್ಟೋಬರ್-೨೦೦೬)

Tuesday 18 August 2009

ಶೂನ್ಯದೊಳಗೆ...

"ನಕ್ಷತ್ರಗಳೋ... ಕನಸುಗಳೋ..."
ಅಚ್ಚರಿಪಟ್ಟ ಒಬ್ಬ ಗೆಳೆಯ
ಕಾಕತಾಳೀಯವಾಗಿ ಅದೇ ಸಂಜೆ
ಉರಿವ ಬೆಂಕಿಯುಂಡೆಗಳ ಬಗ್ಗೆ-
ಸೋಜಿಗಗೊಂಡ ನನ್ನಿನಿಯ
ನಾನೂ ತಲೆ ಕೆರೆದೆ!
"ಹೀಲಿಯಂ" ಎಂದ ಮಗ
"ಏನೂ... ಇಲಿಯಾ...?" ಉಲಿದಳು ಪುಟ್ಟವಳು

ಎಲ್ಲರ ತಲೆಯಲ್ಲೂ ಒಂದಿಲ್ಲೊಂದು ಯೋಚನೆ!
ಗೆಳೆಯ ಕವನ ಬರೆದ
ಇನಿಯ ವೆಬ್-ಸೈಟ್ ತೆರೆದ
ಮಗ-ಮಗಳು ಮಿನುಗುಗಳಿಗೆ
‘ಗುಡ್-ನೈಟ್’ ಗುನುಗಿ
ಬೆಚ್ಚನೆ ಉಸಿರೆಳೆದರು.

ನನ್ನೊಳಗೆ ದೊಡ್ಡದೊಂದು ಉಸಿರಿನ ಸುಯ್ಲೆದ್ದಿತು,
ತಲೆಯಲ್ಲಿ ಬ್ರಹ್ಮಾಂಡ-
-ದ ಆಸ್ಫೋಟ!
ಕಣ್ಣು ಮುಚ್ಚಿ ಕುರ್ಚಿಯ ಬೆನ್ನಿಗೊರಗಿದೆ...

ಬೆಚ್ಚಿಸುವ ಸದ್ದು,
ಹುಚ್ಚಾಗಿಸುವ ಬೆಳಕಿನುಂಡೆ-
-ಗಳ ಹಾರಾಟ...
ನನ್ನ ಚೀರಾಟ ಸತ್ತಿತ್ತು!
ಉಸಿರಾಟ ಮಾತ್ರ ನಡೆದಿತ್ತು!
ತುದಿ ಮೊದಲಿಲ್ಲದ ನೀಹಾರಿಕೆಗಳ ನಡುವೆ
ದೃಷ್ಟಿಗೆ ಕಂಡೂ ಕಾಣದ ಕತ್ತಲೆಯೊಳಗೆ
ಕೇಳುತ್ತಿದ್ದ ಆಸ್ಫೋಟಗಳೆಡೆಯಲ್ಲಿ
ಮಿತಿ ಮೀರಿದ ಉಸಿರಾಟ.
ಬೆಕಿನುಂಡೆಗಳ ಸಮೂಹದಲ್ಲಿ
ಆಚ್ಛಾದಿತ ಅವಕಾಶದಲ್ಲಿ
‘ಆಕಾಶ’ವೆಲ್ಲಿ?
ಸೂರ್ಯ-ಚಂದ್ರ-ತಾರಾನಿವಹಗಳೆಲ್ಲಿ?
ಭೂಮಿಯೆಲ್ಲಿ, ಬಾನೇ ಇಲ್ಲದಲ್ಲಿ?
ಆ ತಾಯಿ ಕಳ್ಳ-ಕಂದನ ಬಾಯಲ್ಲಿ
ಕಂಡ ಶೂನ್ಯ ಇದೇ ಏನು?
ಕುರುಡು ಚಕ್ರವರ್ತಿ ಕಂಡ
‘ವಿಶ್ವರೂಪ’ ಇದೇ ಆಗಿತ್ತೆ?
ಎಲ್ಲೆಲ್ಲೂ ತುಂಬಿದ ಕತ್ತಲು
ಮತ್ತೆತ್ತೆತ್ತಲೂ ತುಂಬಿದ
ಮಿಣುಕು ತಿಣುಕುವ ‘ಹೀಲಿಯಮ್’ ಗೋಳಗಳು!
ಪ್ರತ್ಯಕ್ಷ ಕಂಡರೂ ಪರಾಂಬರಿಸಬೇಕು...
ಕಂಡವರೇ ಇಲ್ಲವಾದಾಗ?

"ಖಗೋಳ ವಿಜ್ಞಾನ ಬಹುತೇಕವಾಗಿ
ಕರಾರುವಾಕ್ ಲೆಕ್ಕಾಚಾರ..."
ಅಪ್ಪ ಮಗನಿಗೆ ಪಾಠ ಹೇಳಿದ್ದರು
ನಿಗೂಢ ಸೆಳೆತಗಳೊಳಗೆ ಸಿಲುಕಿ
ಸುತ್ತುವ ಅವುಗಳ ಕುರಿತ ಜಿಜ್ಞಾಸೆ;
ಯಾರ ಲೆಕ್ಕಾಚಾರವೂ ತಪ್ಪಬಹುದಲ್ಲ!

ಶೂನ್ಯದ ಅವಕಾಶದೊಳಗೆ
ಎಲ್ಲೋ ಕಳೆದು ಹೋಗದಂತೆ
ನಮ್ಮದೆಂದುಕೊಳ್ಳುವ ನೆಲಕ್ಕೆ
ಅಂಟಿಕೊಳ್ಳ ಬಯಸುವ ನಾವು...
ಮನುಜರು...
"ಪೂರ್ಣಮದಃ ಪೂರ್ಣಮಿದಂ..."
ಅಂದವರು...
ವ್ಯೋಮಯಾನಗೈದೆವೆಂದು
ನಂನಮ್ಮ ಬೆನ್ನನ್ನೇ ತಟ್ಟಿಕೊಂಡವರು...
ನಾವೆಷ್ಟು ಅಪೂರ್ಣರೆಂಬ
ಕಲ್ಪನೆಯೇ ಇರದವರು...
ಅತ್ತಿತ್ತ ನೋಡಿ ಪಕ್ಕದವರಿಗೆ
ಮೊಣಕೈಯಲ್ಲಿ ತಿವಿದು
ಶೂನ್ಯ ನೋಟ ಬೀರುವವರು...
ಆ ಅವರು... ಈ ಇವರು...

ಮತ್ತೆ ಆಸ್ಫೋಟ...

ಆಚೆ ಮನೆಯಲ್ಲಿ ಗುಂಡು ಹಾರಿಸಿದ ಸದ್ದು
ಕುರ್ಚಿಯಿಂದೆದ್ದು ಕಿಟಕಿಯ ಪರದೆ ಸರಿಸಿ
ದೂರಕ್ಕೆ ದಿಟ್ಟಿ ನೆಟ್ಟಾಗ...
ಮಿನುಗುಗಳೆಲ್ಲ ಸುಖವಾಗಿ
ತಣ್ಣನೆ ಮೋಡದ ಹೊದಿಕೆ ಹೊದ್ದು
ಕಣ್ಣು ಮುಚ್ಚಿ ಕನಸುವುದ ಕಂಡು
ನನ್ನುಸಿರು ನಿಧಾನವಾಗಿ ಸಮಸ್ಥಿತಿಗಿಳಿಯಿತು

ನನಗಾಗಿ ಒಂದಿಷ್ಟು ತಂಪು ಕನಸುಗಳನ್ನು
ಕೈಬೀಸಿ ಕರೆದು ದಿಂಬಿಗೊರಗಿದೆ.
(೨೦-ಅಕ್ಟೋಬರ್-೨೦೦೧)
{ಕವಿ ಮಿತ್ರ ಎಂ. ಆರ್. ದತ್ತಾತ್ರಿಯ ಕವನದ ಸ್ಫೂರ್ತಿಯಿಂದ}

Wednesday 12 August 2009

ಉತ್ಸವ

ವ್ಯಕ್ತಿರೂಪ ಹಂಗಿಲ್ಲದ
ಶಕ್ತಿರೂಪ ಚೇತನ-
ನಿನಗೇಕೆ ಹೆಸರು
ಕಲ್ಲಿನ ಕುಸುರು
ವೈಭವದ ಕೆಸರು!

ಯಾಕೆ ಬೇಕು ನಿನಗೆ-
ಪತಾಕೆಗಳ ಹಾವಳಿ
ಗೋಪುರದ ಬಾವಲಿ
ಗುಣುಗುಡುವ ಗಂಟೆ
ಅಂಟುಸ್ನಾನದ ತಂಟೆ!

ನಿನ್ನ ಸಾವಿರಾರು ಸಾವಿರ
ಹೆಸರುಗಳಲ್ಲಿ ನನಗೂ ಒಂದು-
ನಿನ್ನ ತೃಣ ನಾನೆಂಬ ನೆಪಕಾಗಿ
ನಿನ್ನ ಋಣ ನನಗೆಂಬ ನೆನಪಿಗಾಗಿ
ನಿನ್ನ ಘನತೆಯ ಸಣ್ಣ ಕುರುಹಾಗಿ!

(೧೨-ಆಗಸ್ಟ್-೨೦೦೮)

Sunday 2 August 2009

ಶಿವೋಹಂ

ಜ್ಞಾನ ಮುದ್ರಾಂಕಿತ ಧ್ಯಾನಯೋಗಿಯ
ಅರ್ಧನಿಮೀಲಿತ ರೆಪ್ಪೆಗಳ ಕೆಳಗೆ
ಸಿಡುಕು ಮೂಗಿನ ನೇರದೊಳಗೆ
ಅರೆ-ಬರೆಯಾಗಿ ಕಂಡದ್ದು-
ಅಂತಃಪುರದ ಹಂಸತಲ್ಪದಡಿಯಲ್ಲಿ
ಕುರುಡುಗತ್ತಲ ಮೂಲೆಯಲ್ಲಿ
ಮೂಷಿಕ ಸವಾರಿ ಹೊರಟ
ಮುದ್ದಿನ ಕುವರ.

ಲೋಕ ಸುಟ್ಟರೂ ತೊಂದರೆಯಿಲ್ಲ
ಕೆಂಡಗಣ್ಣನ ಕೋಪ
ಆರದೆ ವಿಧಿಯಿಲ್ಲ
ಬಲಿಯಾಗಲೇಬೇಕು;
ತಲೆಕೊಡಲು ಯಾರಿದ್ದೀರಿ
ಕಂದನ ಮುಂಡಕ್ಕೆ?
(೦೮-ಸೆಪ್ಟೆಂಬರ್-೨೦೦೬)

Saturday 25 July 2009

ಮನೋಹಯಕೆ ಮೂಗುದಾರ

ಮನಸ್ಸು ಪತಂಗ
ಮನಸ್ಸು ಮರ್ಕಟ
ಮನಸ್ಸು ಕುದುರೆ
.... .... .... ....
ಇನ್ನೂ ಏನೇನೋ ಆಗಿರುವ
ಆಗುತ್ತಿರುವ ಈ ಮನವನ್ನು
ಹಿಡಿದೆಳೆದು
ಕಾಲುಕಟ್ಟಿ, ಅಡ್ಡಹಾಕಿ
ಮೂಗು ಚುಚ್ಚಿ, ದಾರ ಪೋಣಿಸಿ
ಗೊರಸಿಗೆ ಲಾಳ ಹೊಡೆದು
ಬೆನ್ನಿಗೆ ಜೀನು ಬಿಗಿದು
ಕಣ್ಣ ಬದಿಗೆ ಪಟ್ಟಿ ಏರಿಸಿ
ಕಡಿವಾಣ ಹಾಕಿ, ಚಾಟಿ ಹಿಡಿದು
ಸವಾರಿ ಹೊರಟರೆ
ಚೇತನ ಸರದಾರ;
ಇಲ್ಲದಿರೆ ನಿಸ್ಸಾರ.
(೩೧-ಆಗಸ್ಟ್-೨೦೦೬)

Saturday 18 July 2009

ಅಂಗಳದಿಂದ....

ಅಲ್ಲಿಂದ ಬಂದಾಗ
ಇಲ್ಲುಳಿವ ಹಂಬಲವೆ
ಬಲವಾಗಿ ಬೇರೂರಿ ಹಸಿರಾಡಿತು;
ಹಸಿನೆರಳಿನಡಿಯಲ್ಲಿ
ಉಸಿರಾಡುತಿರುವಾಗ
ಪಿಸುದನಿಯ ತೆರದಲ್ಲಿ ನೆನಪಾಡಿತು.

ಗೆಳತಿ-ಗೆಳೆಯರ ನೆನಕೆ
ಬೆಳೆದು ಹಬ್ಬಿತು ಮನಕೆ
ಕಳೆದ ಒಡನಾಟವನು ಕಣಜ ಮಾಡಿ;
ಮರೆಯ ಒಳಗೊಂದು ಹುಳು
ಕೊರೆ-ಕೊರೆದು ದಾರಿಯನು
ಸರಾಗ ಸಾಗಿತು ಯೋಚನೆಯ ಗಾಡಿ.

ಚಲನ ಶೀಲವೆ ಜೀವ-
-ಬಲವಾದ ನೆಲದಲ್ಲಿ
ಕೆಲವಾರು ಬೇರುಗಳು ಊರಲಿಲ್ಲ;
ಕವನ-ಲೇಖನ ಬರೆವ,
ಜವನ ರಂಗಕೆ ತರುವ,
ನವರಸಭರಿತರಿಗೆ ಕೊರತೆಯಿಲ್ಲ.

ಹಂಚಿಕೊಂಡಿಹ ನೆನಹು
ಅಂಚು ರಂಗಿನ ಪಟಲ,
ಚರ್ಚಿಸಿದ ಕ್ಷಣಗಳಿಗೆ ಲೆಕ್ಕವೆಲ್ಲಿ?
ಭಾಷೆ-ಬಂಧನ ನೆವನ,
ದೇಶವೊಂದರ ಸ್ಮರಣ,
ಭೂಷಣವು ಸ್ನೇಹ, ಸಹೃದಯರಲ್ಲಿ.
(೦೪-ಜುಲೈ-೨೦೦೩)
[ಹನ್ನೊಂದು ವರ್ಷಗಳ ಬಳಿಕ ಅಮೆರಿಕಾ ಬಿಟ್ಟು ಮಣಿಪಾಲಕ್ಕೆ ಹೋಗಿ ನೆಲೆಸಿದ್ದ ಸಂದರ್ಭದಲ್ಲಿ... ಎರಡು ವರ್ಷಗಳೊಳಗೇ ಮತ್ತೊಮ್ಮೆ ಅಮೆರಿಕದ ವಿಮಾನ ಹತ್ತಿದ್ದು ವಿಧಿ ಆಡಿಸಿದ ಆಟದಲ್ಲಿ]

Saturday 11 July 2009

ಬೇಸಿಗೆಯ ಸಂಜೆ

ಬೇಸಿಗೆ ರಜೆಯಲಿ ಬಾಡಿಗೆ ಸೈಕಲು
ಜೊತೆಯಲಿ ನಡೆದರು ಬೀದಿಯ ಮಕ್ಕಳು
ಊರಿನ ತೋಪಲಿ ಹೊಸದೇ ಆಟ
ಅರಿಯದ ಕಿರಿಯಗೆ ಹಿರಿಯನ ಪಾಠ

ಕತ್ತರಿ ಕಾಲು ಹಾಕುತ ಏರು
ಪೆಡಲ್ ತುಳಿದು ಹಿಡಿ ಹ್ಯಾಂಡಲ್ ಬಾರು
ಹಾದಿಯ ಮೇಲೆ ಇರಬೇಕು ಗಮನ
ಕಲಿಕೆಯೇನಲ್ಲ ರಾಕೆಟ್ ವಿಜ್ಞಾನ

ನೀನೂ ಬಾರೇ, ಮುಂದಿನ ಸುತ್ತಿಗೆ
ನಾವಿದ್ದೇವೆ ಭಯಬೇಡ, ಹತ್ತು ಮೆಲ್ಲಗೆ
ಎಲ್ಲರಿಗೂ ಇದೆ ಸಮಯಾವಕಾಶ
ಕಲಿಕೆಗೆ ಕೊಡುವನು ಸೈಕಲಂಗಡಿ ಪಾಷ
(ಚಿತ್ರಕವನ- ಚಿತ್ರ-೧೦೯ - ಮರದ ಕೆಳಗೆ ಮೂವರು ಹುಡುಗರು, ಒಬ್ಬಳು ಹುಡುಗಿ, ದೊಡ್ಡ ಹುಡುಗನ ಕೈಯಲ್ಲಿ ಸೈಕಲ್)
(೦೫-ಜುಲೈ-೨೦೦೯)

Wednesday 1 July 2009

ಅಂತೂ.... ಬಂತು!!

೧೯೯೨ರ ಸೆಪ್ಟೆಂಬರಿನಲ್ಲಿ, ಸೇರಿಕೊಂಡಿದ್ದ ಬಿ.ಎಡ್ ಅರ್ಧದಲ್ಲಿ ಬಿಟ್ಟು, ಬೆಂಗಳೂರನ್ನೂ ಬಿಟ್ಟು ಮೊದಲ ಬಾರಿಗೆ ಈ ಹೊರನಾಡಿಗೆ ಕಾಲಿರಿಸಿದ್ದು. ಕನಸಿನ ಕಿನ್ನರ ಲೋಕದಲ್ಲಿ ಹೆಜ್ಜೆಯಿಟ್ಟ ನಮಗೆ ಕಾರು ಇರಲಿಲ್ಲ. ಹೇಗೋ ಅವರಿವರ ಸಹಾಯದಿಂದ ಅಪಾರ್ಟ್‍ಮೆಂಟಿನಲ್ಲಿ ಬಿಡಾರ ಹೂಡಿದ್ದಾಯ್ತು. ಹಾಲು-ಹಣ್ಣು-ತರಕಾರಿಗಳಿಗೆ ನಡಿಗೆಯ ದೂರದಲ್ಲೇ `ಲಕ್ಕಿ' (ಆಲ್ಬರ್ಟ್‍ಸನ್ಸ್) ಇತ್ತು. ದಿನಸಿ ಸಾಂಬಾರ ಪದಾರ್ಥಗಳಿಗೆ `ದಿ ಗ್ರೇಟ್' ಭಾರತ್ ಬಝಾರ್, ಅದೂ ನಡಿಗೆಯಳತೆಯಲ್ಲಿ. ಅಲ್ಲಿ ಇಲ್ಲಿ ಹುಡುಕಿ, ಸ್ನೇಹಿತರ ಸಹನೆಯ ಪರೀಕ್ಷೆ ಮಾಡಿ, ಒಂದು ಕಾರು ಕೊಂಡಿದ್ದಾಯ್ತು. ಎರಡು ವರ್ಷ ತುಂಬಿದ ಮಗನನ್ನು ಕಷ್ಟಪಟ್ಟು ಕಾರ್-ಸೀಟಿನಲ್ಲಿ ಹಾಕಿ ಬೆಲ್ಟು ಬಿಗಿದಿದ್ದಾಯ್ತು.

ಅಲ್ಲಿಂದ ಮುಂದೆ ಮೂರು ಕಾರು ಬದಲಾಯಿಸಿ, ಮೂರು ಅಪಾರ್ಟ್‍ಮೆಂಟ್ ಅಳೆದುನೋಡಿ, ಮೂರು ಕಂಪೆನಿ ಲೆಕ್ಕ ಹಾಕಿದರೂ ಈ ನೆಲೆಯಿರದ ನೆಲದಲ್ಲಿ ಯಾವುದೇ ಬೇರು ಇಳಿಸುವ ಮನಸ್ಸಾಗಲಿಲ್ಲ. `ಇನ್ನೂ ಒಂದು ನಾಲ್ಕು ವರ್ಷ ಇದ್ದು ಹಿಂತಿರುಗೋಣ', ಅಂದುಕೊಂಡಿದ್ದ ನಮಗೆ ಅಷ್ಟು ಸಮಯ ಇರಲು ಹಸಿರು-ನಿಶಾನೆ (ಗ್ರೀನ್‍ಕಾರ್ಡ್) ಸಿಗಲಿಲ್ಲ. ಕಾನೂನಿನ ಪ್ರಕಾರ ದೇಶಭ್ರಷ್ಟರಾಗಿ, ಸಾಮಾನೆಲ್ಲ ಪೆಟ್ಟಿಗೆಗಳಿಗೆ ತುಂಬಿಸಿ ಗಾಡಿ ಕಟ್ಟಿದೆವು, ಒಂದು ವರ್ಷದ ಅಜ್ಞಾತವಾಸಕ್ಕೆ. ಅದೂ ಮುಗಿದು ಹೊಸ ಕೆಲಸದ ಆಜ್ಞಾಪತ್ರ ಕೈಸೇರಿದಾಗ ಅನಿವಾರ್ಯವಾಗಿ ಹಸುವಿನ ಹಿಂದೆ ಕರುವಿನಂತೆ ೨೦೦೦-ದ ಜೂನ್‍ನಲ್ಲಿ ಸ್ಯಾನ್‍ಡಿಯಾಗೋಗೆ ಬಂದಿದ್ದಾಯ್ತು. ಕಾರಣಾಂತರಗಳಿಂದ ಕೆಲಸದ ಬದಲಾವಣೆ. ತವರಿಗೆ ಬರುವಂತೆ ಕೊಲ್ಲಿ ಪ್ರದೇಶಕ್ಕೆ ಬಂದೆವು, ೨೦೦೦-ದ ಡಿಸೆಂಬರಿನಲ್ಲಿ.

ಮತ್ತೆ ಯಥಾಪ್ರಕಾರ `ಹಸಿರು-ಚೀಟಿ'ಗೆ ಅರ್ಜಿ ಹೋಯ್ತು, ಹೇಗೂ ಕಂಪನಿಯ ತಲೆನೋವು, ನಮಗೇನು! ಅಷ್ಟರಲ್ಲೇ ಶುರುವಾಯ್ತು ನೋಡಿ, ಎತ್ತರಕ್ಕೇರಿದ್ದ ರೋಲರ್ ಕೋಸ್ಟರಿನ ಪೂರ್ಣ ಪ್ರಮಾಣದ ಪ್ರಯಾಣ. ಎಷ್ಟೊಂದು ಅಮಾಯಕರನ್ನು ತನ್ನೊಂದಿಗೆ ಎಳೆದಾಡುತ್ತಾ ಇಳಿಯತೊಡಗಿತು. ಅಲ್ಲ, ಬಿತ್ತು.. ಬಿತ್ತು... ಬಿತ್ತು....! ಅರ್ಥಜಗತ್ತಿನ ನೆತ್ತಿಗೇರಿದೆವೆಂದು ಬೀಗುತ್ತಿದ್ದವರೆಲ್ಲ ನೆಲಕಚ್ಚಿದರು. ಕನ್ನಡಿಯೊಳಗೆ ಗಂಟಿದೆಯೆಂದು ಅರಮನೆ ಕೊಂಡವರೆಲ್ಲ ಕೈ ಕೊಯಿದುಕೊಂಡರು. ಕಂಪೆನಿಗಳು ನಿಮಗಾಗಿ ಮುಡುಪಿಟ್ಟ, ನಿಮ್ಮದಾಗಬಹುದಾಗಿದ್ದ ಪಾಲುಗಾರಿಕೆ-ಬಂಡವಾಳಕ್ಕೆ (ಶೇರಿಗೆ) ಕಾಗದದ ಬೆಲೆಯೂ ಇಲ್ಲದೇ ಹೋಯ್ತು. ನಿನ್ನೆ ಇದ್ದ ಕೆಲಸ ಇಂದಿಲ್ಲ. ಇಂದು ಬೆಳಗ್ಗೆ ತನ್ನದಾಗಿದ್ದ ಮನೆ-ಕಾರು ಸಂಜೆಗೆ ಪರರ ಸ್ವತ್ತು. ಬೇಕಾಬಿಟ್ಟಿ ತಿಂದುಂಡುಕೊಂಡಿದ್ದ ಸುಖಜೀವಿ ಪರದಾಡಿತು. ಎಷ್ಟೊಂದು ಜನ ಕೊಂಡಿದ್ದ ಕಾರನ್ನು ಮಾರಲೂ ಆಗದೆ, ಮನೆಯ ಬಾಡಿಗೆಯನ್ನೂ ಕೊಡಲಾಗದೆ, ಹೇಳದೆ-ಕೇಳದೆ, ತಮ್ಮ ಕಾರುಗಳನ್ನು ವಿಮಾನ ನಿಲ್ದಾಣದ ತಂಗುದಾಣಗಳಲ್ಲಿ ನಿಲ್ಲಿಸಿ ಸ್ವದೇಶಕ್ಕೆ ಪರಾರಿಯಾದರು.

ಆಗಲೇ ಬಂತು ಇನ್ನೊಂದು ಆಘಾತ. `ಅವನ' ಸೇಡು-ಹೊಟ್ಟೆಕಿಚ್ಚಿನ ಜ್ವಾಲೆಗೆ ಹೊತ್ತಿಕೊಂಡು ಉರಿಯಿತು ಜಗತ್ತಿನ ವಿತ್ತಕೇಂದ್ರ. "ಅಯ್ಯೊ ಬಿತ್ತು.... ಕುಸಿದು ಬಿತ್ತು.... ವಿತ್ತಚೇತನ! ಏನು-ಎತ್ತ ಅರಿಯಲಾರೆ, ಧೂಮ್ರಲೋಚನ!!" ಎಂದು ಉದ್ಗರಿಸಿತು ಕವಿಮನ. ತಡವರಿಸಿಕೊಂಡು, ಗೋಡೆಗೆ ಆನಿಸಿಕೊಂಡು, ಕುರ್ಚಿಯಿಂದ ಎದ್ದು ನಿಲ್ಲುವಷ್ಟರಲ್ಲಿ ಅವಳಿಗಳು ಅವಶೇಷಗಳಾಗಿದ್ದವು. ಸಾವಿರಾರು ಜೀವಿಗಳ ಸಮಾಧಿಗಳೂ ಆದವು. ಫಕ್ಕನೆ ಚೇತರಿಸಿಕೊಳ್ಳಲಾಗದ ಆಘಾತ, ತುಂಬಲಾರದ ನಷ್ಟ. ಅತ್ಯಂತ ಬಲಿಷ್ಠವೆಂದುಕೊಳ್ಳುವ ರಾಷ್ಟ್ರವೊಂದಕ್ಕೆ, ತನ್ಮೂಲಕ ಪ್ರಪಂಚಕ್ಕೇ ಸಡ್ಡು ಹೊಡೆಯುವಂಥ ಛಾತಿಯ `ಅವ'ನನ್ನು ಹಿಡಿಯಲಾಗದೆ ಎಲ್ಲರೂ ಸುಮ್ಮನಾದರು; ಬೆಂಕಿ ನಂದಿಹೋಗಿ ಹೊಗೆಯಾಡಿತು, ಕೊನೆಗೆ ತಣ್ಣಗಾಯಿತು.

ಇವೆಲ್ಲದರ ನಡುವೆ, ಎರಡು ವರ್ಷಗಳಲ್ಲಿ ಎರಡು ಬಾರಿ ಭಾರತಕ್ಕೆ ಹೋಗಿ-ಬಂದು, `ಮುಂದಿನ ವರ್ಷ ಊರಿಗೇ ಹೋಗಿ ಇದ್ದು ಬಿಡೋಣ' ಅಂದುಕೊಂಡಾಗ, ೨೦೦೨ರ ಜುಲೈ ತಿಂಗಳಲ್ಲಿ, ಬಂತು! ಬಂದೇ ಬಂತು!! ಹಸಿರು ಚೀಟಿಯ ಅನುಮೋದನಾಪತ್ರ ಕೈಗೆ ಬಂತು. ಬಲಗಿವಿಗೆ ಆಭರಣವೇನೂ ಹಾಕದೆ, ಕೂದಲನ್ನೆಲ್ಲ ಹಿಂದಕ್ಕೆ ಎಳೆದು ಕಟ್ಟಿ, ಎರಡೂ ಕಣ್ಣು ಕಾಣಿಸುವಂತೆ ತೆಗೆಸಿಕೊಂಡ ಅರ್ಧಮುಖದ ಭಾವಚಿತ್ರದ ಜೊತೆಗೆ ಬೇಕಾದ ಇತರ ಕಾಗದ ಪತ್ರಗಳನ್ನೂ ಜೋಡಿಸಿಟ್ಟುಕೊಂಡೆವು. ಸ್ಯಾನ್‍ಹೋಸೆಯ ಐ.ಎನ್.ಎಸ್. ಕಛೇರಿಯಲ್ಲಿ ಜನಜಾತ್ರೆ ಸೇರುವ ಕಥೆಗಳನ್ನು ಕೇಳಿದ್ದೆವಾದ್ದರಿಂದ ಆದಷ್ಟು ಬೇಗನೇ ಅಲ್ಲಿಗೆ ಹೋಗಲು ಬೇಕಾದ ತಯಾರಿ ಎಲ್ಲ ಮಾಡಿಕೊಂಡೆವು.

ಸೋಮವಾರ ಬೆಳಗ್ಗೆ ಏಳೂವರೆಗೆ ಕಛೇರಿ ತೆರೆಯುವಾಗ ಅಲ್ಲಿರಬೇಕೆಂದು, ಭಾನುವಾರ ರಾತ್ರಿ ಎರಡು ಘಂಟೆಗೇ ಎದ್ದು, ಸ್ನಾನಾದಿಗಳನ್ನು ಮುಗಿಸಿ, ಫ್ಲಾಸ್ಕ್ ತುಂಬ ಕಾಫಿ ತುಂಬಿಸಿಕೊಂಡು... ಬ್ರೆಡ್, ಬೆಣ್ಣೆ, ಜ್ಯಾಂ, ಹಣ್ಣು, ನೀರು- ಚೀಲಕ್ಕೆ ಸೇರಿಸಿಕೊಂಡು... ಛಳಿಯಿಂದ ರಕ್ಷಣೆಗೆ ಗಾದಿಗಳನ್ನು ಹೊತ್ತುಕೊಂಡು... ಮಕ್ಕಳಿಬ್ಬರಿಗೂ ಬದಲಾಯಿಸಲು ಬಟ್ಟೆ ಜೋಡಿಸಿಕೊಂಡು... ಅವರಿಬ್ಬರನ್ನೂ ನಿದ್ದೆಯಲ್ಲೇ ಪಾರ್ಕಿಂಗ್ ಲಾಟಿಗೆ ನಡೆಸಿಕೊಂಡು ಬಂದು... ನಮ್ಮ ಖಾಸಗಿ ರಥದಲ್ಲಿ ಸೋಮವಾರದ ಚುಮು-ಚುಮು ರಾತ್ರೆ ಮೂರೂಕಾಲಕ್ಕೆ ಸ್ಯಾನ್‍ಹೋಸೆಯ ಐ.ಎನ್.ಎಸ್. ಮುಂದೆ ನಿಂತೆವು, ದಂಗಾಗಿ.

ಆಗಲೇ ಅಲ್ಲಿ ಸುಮಾರು ಇಪ್ಪತ್ತು-ಇಪ್ಪತ್ತೈದು ಜನ `ಮನೆ'ಮಾಡಿದ್ದರು. ಸ್ಲೀಪಿಂಗ್ ಬ್ಯಾಗಿನೊಳಗೆ ಸುತ್ತಿಕೊಂಡು ಗೊರಕೆ ಹೊಡೆಯುತ್ತಿದ್ದವರು ಕೆಲವರು. ಚಾಪೆ ಹಾಸಿ ಗಾದಿ ಹರಡಿ `ಹಸಿರು'ಗನಸಿನ ಲೋಕದಲ್ಲಿದ್ದವರು ಕೆಲವರು. ಮನೆಯಿಂದ ಕುರ್ಚಿ ತಂದು ದಪ್ಪ ಜ್ಯಾಕೆಟ್ ಹಾಕ್ಕೊಂಡು ಕುಳಿತಲ್ಲೇ ತಲೆಯ ಭಾರ ಅಂದಾಜು ಹಾಕುತ್ತಿದ್ದವರು ಇನ್ನು ಕೆಲವರು. ಮೈಗೆ ಮೈ ಅಂಟುವಂತೆ ನಿಂತು ಛಳಿರಾಯನನ್ನು ಸೋಲಿಸಲು ಪ್ರಯತ್ನ ಪಡುತ್ತಿದ್ದವರು ಒಂದೆರಡು ಜೋಡಿ. ಸಿಗರೇಟು, ಬೀರ್‌ಗಳ ಘಾಟು ಒಂದು ತೆರನಾದರೆ ಪಕ್ಕದಲ್ಲೇ ಇದ್ದ `ಪೋರ್ಟಬಲ್ ಟಾಯ್ಲೆಟ್'ನ ಘಮ ಒಂದು ಥರ. ಹಲವಾರು ತರಂಗ-ವಾದ್ಯಗಳ ಶೃತಿಯಿಲ್ಲದ, ತಾಳ ತಪ್ಪಿದ ಬಡಿತಗಳಂತೆ ವಿವಿಧ ಲಯದ ಗೊರಕೆಗಳು. ಆಹ್! ಆ ವಾತಾವರಣ! ಎಲ್ಲೂ ಸಿಗಲಾರದೇನೋ? ಚೆನ್ನೈನ ಅಮೆರಿಕನ್ ಎಂಬೆಸ್ಸಿ ಮುಂದೆಯೂ! ಸರಿ. ಇಂಥ `ಪವಿತ್ರ' ವಾತಾವರಣದಲ್ಲಿ ನನ್ನವರು ಒಂದು ತೆಳು ಜಾಕೆಟ್ ಹಾಕ್ಕೊಂಡು, ಕಿವಿ ಮುಚ್ಚುವಂತೆ ಶಾಲು ಹೊದ್ದುಕೊಂಡು, ಕಾಂಕ್ರೀಟಿನ ನೆಲಕ್ಕೆ ಕುಂಡೆ ಊರಿ, ಕಾಂಪೌಂಡಿನ ಸಿಮೆಂಟ್ ಗೋಡೆಗೆ ಬೆನ್ನು ಕೊಟ್ಟು ನಾವು ನಾಲ್ವರಿಗಾಗಿ ಒಂದು ಸ್ಥಾನ ಭದ್ರಮಾಡಿದರು.

ನಮ್ಮ ರಥದೊಳಗೆ ಮಕ್ಕಳಿಬ್ಬರೂ ಹಿಂದಿನ ಪೈಲೆಟ್ ಸೀಟ್‍ಗಳನ್ನು ಹಿಂದಕ್ಕೆ ವಾಲಿಸಿಕೊಂಡು ಗಾದಿ ಹೊದ್ದುಕೊಂಡು ಮಲಗಿದರು. ನನಗೋ ನಿದ್ದೆ ಬಾರದು. "ಜೊತೆಯಲಿ ಅವನಿಲ್ಲ.... ಅವನ ನಗುವಿನ ದನಿಯಿಲ್ಲ...." ಅಂತ ಹಾಡಿಕೊಳ್ಳುವ ಪ್ರಸಂಗವಲ್ಲದಿದ್ದರೂ, ನಮಗಾಗಿ ಛಳಿಯಲ್ಲಿ ವಿವಿಧ ವಾದ್ಯತರಂಗಗಳ ನಡುವೆ ಕುಕ್ಕರಬಡಿದು ಕೂತಿದ್ದ ಅವರ ಬಗ್ಗೆ ಅಯ್ಯೋ ಅನ್ನಿಸುತ್ತಿತ್ತು. ಹಾಗೂ ಹೀಗೂ ಹೊತ್ತು ಕಳೆದು, ಸಮಯ ಆರೂಕಾಲಾದಾಗ ರಥದಿಂದ ಇಳಿದು ಅವರಿದ್ದಲ್ಲಿಗೆ ನಡೆದೆ. "ಮುಖ ತೊಳಿಲಿಕ್ಕೆ ಪ್ಲಾಸ್ಟಿಕ್ ಡಬ್ಬದಲ್ಲಿ ನೀರುಂಟು. ಕಾಫಿ ಕುಡಿದು, ಬ್ರೆಡ್ ತಿಂದು ಬನ್ನಿ, ಮತ್ತೆ ನಾನು ಮಕ್ಕಳನ್ನು ಎಬ್ಬಿಸಿ ತಿಂಡಿ ತಿನ್ನಿಸಿ ತಯಾರು ಮಾಡುತ್ತೇನೆ" ಅಂದು, ಅವರನ್ನೆಬ್ಬಿಸಿ, ಆ ಸ್ಥಾನದಲ್ಲಿ ನನ್ನ ಪೃಷ್ಠ ಪ್ರತಿಷ್ಠಾಪಿಸಿಕೊಂಡೆ.

ಅಷ್ಟರಲ್ಲೇ ಒಂದು `ಚಲಿಸುವ ಹೋಟೇಲ್' ಅಲ್ಲಿಗೆ ಬಂದು ನಿಂತಿತ್ತು. ಮಲಗಿದ್ದ ಕೆಲವರೆಲ್ಲ ಎದ್ದು ಬಂದು ಅವರವರ ಪ್ರೀತ್ಯರ್ಥಗಳನ್ನು ಪಡೆದರೆ, ಮತ್ತೆ ಕೆಲವರ ಮನೆಯಿಂದ ಅರ್ಧಾಂಗಿ, ಅಮ್ಮ, ಅಪ್ಪ, ತಮ್ಮ, ತಂಗಿ, ಅಣ್ಣ, ಅಕ್ಕ, ಸ್ನೇಹಿತ, ಗೆಳತಿ,.... ಹೀಗೇ ಯಾರ್‍ಯಾರೋ ಕಾಫಿ-ತಿಂಡಿ ಹೊತ್ತು ತಂದರು. `ಬಿಗ್-ಮ್ಯಾಕ್' ಚೀಲಗಳೂ ಕಂಡು ಬಂದವು. ಸುಮಾರು ಆರೂವರೆಯ ಹೊತ್ತಿಗೆ ಇಬ್ಬರು ಪೊಲೀಸ್ ಆಫೀಸರ್ಸ್ ಬಂದು ಜೋರಾಗಿ, "ಆಲ್ ರೈಸ್... ಆಲ್ ರೈಸ್...." ಎಂದರಚಿ, ಅಮೆರಿಕ ಸಂಯುಕ್ತ ಸಂಸ್ಥಾನದ ಬಾವುಟವನ್ನು ಏರಿಸಿ ಹಾರಿಸಿ ಸೆಲ್ಯೂಟ್ ಹೊಡೆದು ಒಳನಡೆದರು. ಮಲಗಿದ್ದವರೆಲ್ಲ ಎದ್ದರಾದ್ದರಿಂದ ಸರದಿಯ ಸಾಲು ನೇರವಾಯಿತು. ಹೊಸ ಜನರು ಬಂದು ಸೇರಿ, ಹನುಮಂತನ ಬಾಲ ಬೆಳೆಯಿತು. `ಚಲಿಸುವ ಹೋಟೇಲ್' ಮತ್ತೊಮ್ಮೆ ಆಹಾರ ತುಂಬಿಕೊಂಡು ಬಂದು, ಗಲ್ಲಾಪೆಟ್ಟಿಗೆ ತುಂಬಿಕೊಂಡು ಹೊರಟುಹೋಯಿತು.

ಕಾಫಿ ಮುಗಿಸಿ ಬಂದ ನನ್ನವರನ್ನು ಕಟ್ಟಡದ ಗೋಡೆ ಬದಿಯ ಹೊಸ ಸ್ಥಾನಕ್ಕೆ ನಿಲ್ಲಿಸಿ, ಮಕ್ಕಳನ್ನು ಎಬ್ಬಿಸಿ, ಮುಖ ತೊಳೆದ ಶಾಸ್ತ್ರ ಮುಗಿಸಿ, ಬ್ರೆಡ್ ಸ್ಯಾಂಡ್‍ವಿಚ್ ಮಾಡಿಕೊಟ್ಟೆ. ನಾನು ಕಾಫಿಯನ್ನಷ್ಟೇ ಕುಡಿದೆ. ತಿಂಡಿ ಮುಗಿಸಿ ಮಕ್ಕಳು ಬಟ್ಟೆ ಬದಲಾಯಿಸಿದಾಗ ಸುಮಾರು ಏಳು ಘಂಟೆ. ಎಲ್ಲರೂ ಸಾಲಿನಲ್ಲಿ ಸೇರಿಕೊಂಡೆವು. ಹನುಮಂತನ ಬಾಲ ಸಾಕಷ್ಟು ಬೆಳೆದಿತ್ತು. ಕಛೇರಿಯ ಬಾಗಿಲಿಂದ ಒಂದು ದಿಕ್ಕಿನಲ್ಲಿ ಈ ಉದ್ದದ ಬಾಲವಿದ್ದರೆ, ಇದಕ್ಕೆ ವಿರುದ್ಧ ದಿಕ್ಕಿನಲ್ಲಿ ಇನ್ನೊಂದು ಪುಟ್ಟ ಬಾಲ; "ಅಪಾಯಿಂಟ್‍ಮೆಂಟ್ಸ್ ಲೈನ್" ಬೋರ್ಡ್‍ಗೆ ಮುಖಮಾಡಿ. ಅದರ ಫೈನ್-ಪ್ರಿಂಟ್ "ಐ.ಎನ್.ಎಸ್. ಇಶ್ಯೂಡ್ ಲೆಟರ್ಸ್ ಓನ್ಲೀ" ಎಂದಿತ್ತು. ಹಿಂದಿನ ಸಂಜೆ ಸ್ಥಳ ನೋಡಿಕೊಂಡು ಬರಲು ಬಂದಿದ್ದಾಗ ಅದನ್ನು ನೋಡಿದ್ದರೂ ತಲೆ-ಬುಡ ಗೊತ್ತಾಗಿರಲಿಲ್ಲ. "ಯಾವ ಲೆಟರ್? ಏನು ಅಪಾಯಿಂಟ್‍ಮೆಂಟ್? ಯಾರು ಕೊಡಬೇಕು? ಹೇಗೆ ಪಡೀಬೇಕು? ಬಿಡು.. ಈಗ ಅದಕ್ಕೆಲ್ಲ ಸಮಯವಿಲ್ಲ...." ಅಂದುಕೊಂಡು ಸಾರ್ವಜನಿಕ ಸಾಲಿನಲ್ಲೇ ನಿಲ್ಲುವ ತೀರ್ಮಾನ ಮಾಡಿದ್ದಾಗಿತ್ತು.

ಕಟ್ಟಡದೊಳಗೆ ಜನಸಂಚಾರ ಆರಂಭವಾದುದು ಕಿಟಿಕಿಯಲ್ಲಿ ಕಂಡುಬರತೊಡಗಿತು. ಆ ಪುಟ್ಟ ಸಾಲಿನವರಿಗೆ ಆದ್ಯತೆ. ಅವರನ್ನು ಏಳು ಘಂಟೆಗೇ ಒಳಬಿಟ್ಟಿದ್ದರು. ಈ ಸಾಲಿನವರಿಗೆ ಏಳೂವರೆಗೆ. ಈಗ ನನ್ನ ದೃಷ್ಟಿ ಒಬ್ಬ ಆಫೀಸರನ ಮೇಲೆ ಬಿತ್ತು. ಹನುಮಂತನ ಬಾಲದ ಕೊನೆಯಲ್ಲಿದ್ದ ಅವನು ಎಲ್ಲರ ಕಾಗದ ಪತ್ರಗಳನ್ನು ನೋಡುತ್ತಾ ಬರುತ್ತಿದ್ದ. ಕೆಲವರನ್ನು, ಅದೂ ಸಾಲಿನ ಆ ಕೊನೆಯಲ್ಲಿದ್ದವರನ್ನು, ಈಗಷ್ಟೇ ಬಂದವರನ್ನು, ನೇರವಾಗಿ ಒಳಗೆ ಕಳಿಸುತ್ತಿದ್ದ. ನನ್ನೊಳಗೆ ಸಿಡುಕು, ತಳಮಳ. ನಾವೆಲ್ಲ ನಿದ್ದೆ ಬಿಟ್ಟು ಛಳಿಯಲ್ಲಿ ಜಾಗರಣೆ ಮಾಡಿದ್ರೂ ಇನ್ನೂ `ಹೊರಗೆ', ಅವರೆಲ್ಲ ಆರಾಮಾಗಿ ಈಗ ಬಂದ್ರೂ ನೇರ 'ಒಳಗೆ'! ಅನ್ಯಾಯ, ತೀರಾ ಅನ್ಯಾಯ; ನನ್ನವರ ಕೆನ್ನೆಯ ಬಳಿ ಪಿಸುಗುಟ್ಟುತ್ತಿದ್ದೆ. ಹಾಗೆ ಹೋಗುತ್ತಿದ್ದವರು ಬಹುತೇಕ ಭಾರತೀಯರು ಮತ್ತು ಚೀನೀಯರು. ಕೊನೆಗೂ ದ್ವಾರದಿಂದ ಒಂದಿಪ್ಪತ್ತು ಅಡಿ ಹಿಂದಿದ್ದೇವೆ ಅನ್ನುವಾಗ ಆಫೀಸರ್ ನಮ್ಮ ಬಳಿ ಬಂದ, ಕಡತಗಳನ್ನೊಮ್ಮೆ ನೋಡಿ, "ಯು ಕೇನ್ ಜೊಯಿನ್ ದಾಟ್ ಲೈನ್, ಗೋ ಅಹೆಡ್ ಸರ್" ಅಂದ. ನನಗೆ ಖುಷಿಗಿಂತ ಹೆಚ್ಚಾಗಿ ರೇಗಿತ್ತು. ಸಾಲಿನ ಈ ತುದಿಯಿಂದಲೇ ಪರಿವೀಕ್ಷಣೆ ನಡೆಸಿದ್ದರೆ ಅವನಪ್ಪನ ಗಂಟೇನು ಹೋಗುತ್ತಿತ್ತು? ಅರ್ಧ ಘಂಟೆ ಮೊದಲೇ ಹೋಗಿರಬಹುದಿತ್ತಲ್ಲ!

`ಜೋಯಿನ್ ದಟ್ ಲೈನ್' ಅಂತ, ಆ ಕಿರು ಬಾಲದ ತುದಿಗೆ ಹೋಗಿ ಸೇರಿಕೊಂಡೆವು. ಇನ್ನೇನು ನಾವು ಒಳ ಹೋಗಬೇಕು, ಅಷ್ಟರಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು (ಅದೇ, ಬೆಳ-ಬೆಳಗ್ಗೆ ಬಾವುಟ ಹಾರಿಸಿದ್ದರಲ್ಲ, ಅವರೇ!) ಒಬ್ಬ ಆಫ್ರಿಕನ್ ತರುಣನನ್ನು ತಳ್ಳುತ್ತಾ ಹೊರಗೆ ಕರೆತಂದರು. ಆತನೋ, ಒಳಹೋಗಲು ಎಳೆದಾಡುತ್ತಿದ್ದ. "ಆ ಅಧಿಕಾರಿ ನಿನ್ನನ್ನೊಮ್ಮೆ ಹೊರ ಹೋಗಲು ಹೇಳಿದ ಮೇಲೆ ನೀನಿಲ್ಲಿರಕೂಡದು. ನಡೆಯಾಚೆ, ಹೊರಗೆ ನಡೆ...." ಪರಿಸ್ಥಿತಿ ಗಂಭೀರವಾದಂತಿತ್ತು. "ನಾನ್ಯಾಕೆ ಹೊರ ಹೋಗಬೇಕು? ನನಗೆ ತಿಳಿದುಕೊಳ್ಳಲೇ ಬೇಕು, ಆಮೇಲೆ ಹೋಗುತ್ತೇನೆ...." ಆತ ಒರಲುತ್ತಿದ್ದ. ಇವರಿಬ್ಬರೂ ಕಷ್ಟಪಟ್ಟು ಅವನನ್ನು ಪಾರ್ಕಿಂಗ್ ಲಾಟಿನ ಮೂಲೆಗೆ ಎಳೆದೊಯ್ದ ಮೇಲೆಯೇ ನಮ್ಮನ್ನು ಒಳಬಿಟ್ಟರು. ಎದೆಯೊಳಗೆ ಏನೋ ಕಂಪನ ಶುರುವಾಗಿತ್ತು, ಆ ಎಳೆದಾಟ ನೋಡಿ. ಬಾಗಿಲೊಳಗೆ ಬರುತ್ತಿದ್ದಂತೆ, "ಮೆಟಲ್ ಡಿಟೆಕ್ಟರ್" ಮೂಲಕ ಬರುವಾಗ ನನ್ನ ಕೈಬಳೆಗಳಿಗೆ ಅದು ಚೀರಿಟ್ಟಿತು, ವಿಶೇಷ ತಪಾಸಣೆ. ಒಳಗೆ ಕುಳಿತಿದ್ದವರ ದೃಷ್ಟಿ ನನ್ನ ಮೇಲೆ. ನನಗೆ ಮುಜುಗರ. ಮತ್ತೆ ನಮ್ಮ ಮಗ ಬರುವಾಗ ಆತನ ಬೆಳ್ಳಿಯ ಉಡಿದಾರ ಅದರ ಒಳಗಣ್ಣಿಗೆ ಬೆಂಕಿಯಾಯ್ತು. ಅವನಿಗೂ ವಿಶೇಷ `ಉಪಚಾರ'. ಕೊನೆಗೂ ನಾವು ನಾಲ್ವರೂ ನಿಟ್ಟುಸಿರಿಟ್ಟು ಕಛೇರಿಯ ಒಳಗಂತೂ ಸೇರಾಯ್ತು.

ಟೋಕನ್‍ಗಳನ್ನು ಪಡೆದು ಆಸನಗಳಲ್ಲಿ ಆಸೀನರಾದೆವು. ನಮ್ಮ ಮುಂದಿನ ಸಾಲಿನ ಆಸನಗಳಲ್ಲಿ ಕನ್ನಡದ ಒಂದು ಪುಟ್ಟ ಸಂಸಾರ. ಹುಡುಗ ಚುರುಕಾಗಿದ್ದ. ತಮ್ಮ ಸರದಿ ಯಾವಾಗ ಬರುತ್ತೇಂತ ಅಪ್ಪ ಅಮ್ಮನ ಬಳಿ ಕೇಳುತ್ತಿದ್ದ. ಇಷ್ಟೆಲ್ಲ ನಡೆದಾಗ ಸಮಯ ಎಂಟೂವರೆ ಘಂಟೆ ಮೀರಿತ್ತು. ಆ ತುಂಟನ ಅಮ್ಮನನ್ನು ಮಾತಿಗೆಳೆದೆ. ಅವರು ಏಳು ಘಂಟೆಗಷ್ಟೇ ಕಛೇರಿಯ ಬಾಗಿಲಿಗೆ ಬಂದಿದ್ದರೆಂದೂ ಈ ಕಡೆಯ ಪುಟ್ಟ ಸಾಲಿನ ಮೂಲಕ ಒಳಬಂದು ನಮಗಿಂತ ಇಪ್ಪತ್ತು ಟೋಕನ್-ಸಂಖ್ಯೆ ಮುಂದಿದ್ದಾರೆಂದೂ ತಿಳಿಯಿತು. ಐ.ಎನ್.ಎಸ್.ನಿಂದ "ಗ್ರೀನ್ ಕಾರ್ಡ್ ಅಪ್ರೂವಲ್ ಲೆಟರ್" ಬಂದಿದ್ದರೆ ನೇರವಾಗಿ ಅಪಾಯಿಂಟ್‍ಮೆಂಟ್ ಸಾಲಿಗೇ ಬರಬಹುದೆಂದೂ ತಿಳಿಸಿದರು.

ನನ್ನ ತಾಳ್ಮೆಗೆ ಮತ್ತೊಂದು ಏಟು ಬಿತ್ತು. ನಾವು ಕಛೇರಿಯ ಬಾಗಿಲಿಗೆ ಹೋಗಿದ್ದ ಮೂರೂಕಾಲರ ಅಪರಾತ್ರೆಯಲ್ಲಿ ಆ ಸಾಲಿನಲ್ಲಿ ಒಂದು ನರಹುಳವೂ ಇರಲಿಲ್ಲ. ಈ ವಿಷಯ ಗೊತ್ತಿದ್ದು ಆಗಲೇ `ಅಲ್ಲಿ' ನಿಂತಿರುತ್ತಿದ್ದರೆ ಇಷ್ಟು ಹೊತ್ತಿಗೆ ಮನೆಗೇ ಹೋಗಬಹುದಿತ್ತು. ಅದೂ ಬೇಡ, ಆ ಆಫೀಸರ್, ಉದ್ದ ಸಾಲಿನ ಈ ತುದಿಯಿಂದಲೇ ನೋಡಿಕೊಂಡು ಹೋಗಿದ್ದರೂ ನಮ್ಮ ಸರದಿ ಬೇಗನೇ ಬರುತ್ತಿತ್ತು. ಆದಷ್ಟು ಬೇಗ ಈ ಕೆಲಸ ಮುಗಿಸಿಕೊಂಡು ಮನೆಗೆ ಹೋಗಿ, ಊಟ ಮಾಡಿ, ಒಂದು ನಿದ್ದೆ ಮಾಡಬಹುದಿತ್ತು. ಇಲ್ಲಿ ಏನೂ ಇಲ್ಲ. ತಿಂಡಿ-ತೀರ್ಥ ಇರಲಿ, ನೀರನ್ನೂ ಒಳಗೆ ಬಿಡೋದಿಲ್ಲ, ಇಲ್ಲಿರುವ ಆ ನಳ್ಳಿಯಿಂದಲೇ ಕುಡೀಬೇಕು...... ನನ್ನೊಳಗೆ ಪಿರಿಪಿರಿ.

ಕಾಯುವಾಗ ಕಣ್ಣು ಸುತ್ತಲೂ ನಿರುಕಿಸುತ್ತಿತ್ತು. ಏನೇನೋ ಕಥೆಗಳು ಕಾಣುತ್ತಿದ್ದವು. ಒಂದು ಭಾರತೀಯ ಸಂಸಾರ- ಗಂಡ, ಹೆಂಡತಿ, ಮಗು; ತಮ್ಮ ಸರದಿಯಲ್ಲಿ ಇಬ್ಬರು ಅಧಿಕಾರಿಗಳ ಬಳಿ ನಿಂತಿದ್ದಾರೆ. ಅಡ್ವಾನ್ಸ್ ಪರೋಲ್, ಇ.ಎ.ಡಿ.ಕಾರ್ಡ್, ಪಾಸ್‍ಪೋರ್ಟ್ ಹಾಗೂ ಇತರ ಅಗತ್ಯ ಕಾಗದ ಪತ್ರಗಳನ್ನು ಆ ಅಧಿಕಾರಿ ಕೇಳುತ್ತಿದ್ದರೆ ಈತನ ಬಳಿ ಇ.ಎ.ಡಿ.ಕಾರ್ಡ್ ಇರಲಿಲ್ಲ. ಎಲ್ಲ ಹಿಂತಿರುಗಿಸದೆ ಆಕೆ ಮುಂದುವರೆಸುವಂತಿರಲಿಲ್ಲ. ಮತ್ತೆ ಮನೆಗೆ ಹೋಗಿ ಇಂದೇ ತಂದಿತ್ತರೆ? ಅದಾಗದು, ಹೊಸದಾಗಿ ಸಾಲಿನಲ್ಲಿ ನಿಂತು, ಕಾದು.... ಬರಬೇಕು. ಇನ್ನೊಂದು ದಿನಕ್ಕೇ ಸರಿ, ಇಂದೇ ಆಗದ ಕೆಲಸ. ಪಾಪ, ಅವರಿಬ್ಬರ ಮಂಕು ಮುಖ ನೋಡಿ ಮಗುವೂ ಪಿಟ್ಟೆನ್ನದೆ ನಿಂತಿತ್ತು. ಮಡದಿ ಮತ್ತು ಪಾಪು ಇನ್ನೊಂದು ಅಧಿಕಾರಿಯ ಬಳಿ ತಮ್ಮ ಕಾಗದ ಪತ್ರಗಳನ್ನು ಒಪ್ಪಿಸಿ ಬಂದು ನಿಂತಿದ್ದರು. ಈತನ ಪರಿಸ್ಥಿತಿ ಮೂಢನಂತಾಗಿತ್ತು. "ಛೇ, ಅದೊಂದು ಕಾರ್ಡ್ ತಾರದೆ ಇಂದು ಇಡೀ ದಿನದ ಶ್ರಮ ಹಾಳಾಯ್ತು!!" ಶಪಿಸಿಕೊಳ್ಳುತ್ತಿರಬೇಕು ಆತ. ನಮ್ಮೊಂದಿಗೇ ಸಾಲಿನಲ್ಲಿ ಅವರನ್ನೂ ಕಂಡ ನೆನಪು ನನಗೆ, ಮೂರೂಮುಕ್ಕಾಲರ ಸುಮಾರಿಗೆ ಬಂದಿದ್ದರೆಂದು ಕಾಣುತ್ತದೆ. `ಅಯ್ಯೋ' ಅಂದುಕೊಂಡೆ.

ಆ ಅಧಿಕಾರಿಗೆ ಏನನಿಸಿತೋ, ಮತ್ತೆ ಆತನನ್ನು ಕರೆದಳು. "ನಿಮ್ಮ ಇ.ಎ.ಡಿ.ಕಾರ್ಡ್ ಕೆಲಸಕ್ಕೆ ಬಾರದಂತೆ ಕೆಡಿಸಿಬಿಡಿ, ಮುಂದೆಂದೂ ಯಾವುದೇ ಕಾರಣಕ್ಕೂ ಅದನ್ನು ಉಪಯೋಗಿಸಬೇಡಿ, ಕತ್ತರಿಸಿ ಹಾಕಿ. ಹಾಗೆ ಪ್ರಮಾಣಿಸುವಿರಾದರೆ ನಿಮ್ಮ ಕೇಸ್ ಕೆಲಸ ಮುಂದುವರೆಸುತ್ತೇನೆ" ಅಂದಳು. ಈ ಆಸಾಮಿ ಅವರ ಕಾಲಿಗೇ ಬೀಳುತ್ತಿದ್ದರೇನೊ! ಅಷ್ಟೂ ನಮ್ರತೆಯಿಂದ `ಹಾಗೇ ಆಗಲಿ' ಎಂದು ತಲೆಯಲ್ಲಾಡಿಸಿ, ಕುರ್ಚಿಗೆ ಬಂದು ಕುಕ್ಕರಿಸಿದರು. ದೊಡ್ಡ ಹೊರೆಭಾರ ಕಳೆದಂತಾಗಿರಬೇಕು. ಮತ್ತೆ ಕೆಲವಾರು ನಿಮಿಷ ಕಾದು ತಂತಮ್ಮ ಪಾಸ್‍ಪೋರ್ಟ್‍ಗಳನ್ನು ಪಡೆದು ಅವರು ಹೊರ ನಡೆದರು.

ನಮ್ಮ ಟೋಕನ್‍ಗಳ ಸರದಿ ಬಂದಾಗ (ನಾಲ್ವರಿಗೆ ಎರಡು ಟೋಕನ್ಸ್) ಅಪ್ಪ-ಮಗ ಒಂದು ಆಫೀಸರ್ ಬಳಿ, ಮಗಳನ್ನು ಜತೆಗೂಡಿ ನಾನೊಂದು ಆಫೀಸರ್ ಬಳಿ ನಡೆದು, ಪಾಸ್‍ಪೋರ್ಟ್ ಸಹಿತ ಇತರ ಕಡತಗಳನ್ನು ಒದಗಿಸಿ, ಬಲ ತೋರುಬೆರಳ ಅಚ್ಚು ಹಾಕಿ, ಸಹಿ ಮಾಡಿ ಮತ್ತೆ ಆಸನಸ್ಥರಾದೆವು. ಒಂದರ್ಧ ಘಂಟೆಯ ಬಳಿಕ ನಮ್ಮ ಹೆಸರನ್ನು ಕೂಗಿ ಕರೆದಾಗ ನಮ್ಮ ಪಾಸ್‍ಪೋರ್ಟ್ ಹಿಂದೆ ಪಡೆದೆವು. ಈ ಪರದೇಶಕ್ಕೆ ಪರದೇಶಿಗಳಾಗಿ ಕಾಲಿರಿಸಿ ಒಂದು ದಶಕವಾಗುತ್ತಿರುವಾಗ, ಕೊನೆಗೂ "ಗ್ರೀನ್ ಕಾರ್ಡ್" ಬಂತಲ್ಲಪ್ಪ ಎಂದು ಪಾಸ್‍ಪೋರ್ಟ್ ತೆರೆದು ನೋಡಿದರೆ....

ಒಂದು ಪುಟದಲ್ಲಿ ಕೆಂಪು ಶಾಯಿಯ ಸೀಲು. "ಟೆಂಪೊರರಿ ಎವಿಡೆನ್ಸ್ ಆಫ್ ಲಾಫುಲ್ ಅಡ್ಮಿಶನ್ ಫಾರ್ ಪರ್‍ಮನೆಂಟ್ ರೆಸಿಡೆನ್ಸ್. ಎಂಪ್ಲೋಯ್‍ಮೆಂಟ್ ಆಥೊರೈಸ್ಡ್. ವ್ಯಾಲಿಡ್ ಅಂಟಿಲ್.........."!
ಹಸಿರಲ್ಲದ `ಹಸಿರು ಚೀಟಿ'- "`ಗ್ರೀನ್ ಕಾರ್ಡ್' ಇನ್ನು ಆರರಿಂದ ಹನ್ನೆರಡು ತಿಂಗಳಲ್ಲಿ ನಿಮ್ಮ ಕೈ ಸೇರಲಿದೆ. ಅಲ್ಲಿಯವರೆಗೆ ಇದನ್ನೇ ಉಪಯೋಗಿಸಿ" ಅಂದಳು ಆಫೀಸರ್. ಮನೆಗೆ ಬಂದು ತಲುಪಿದಾಗ ಘಂಟೆ ಹನ್ನೆರಡು.
************ ************
(ಆಗಸ್ಟ್-೨೦೦೨)
(ಕೆ.ಕೆ.ಎನ್.ಸಿ.ಯ ಸ್ವರ್ಣಸೇತುವಿನಲ್ಲಿ ಪ್ರಕಟವಾಗಿದೆ)

Sunday 21 June 2009

ಶುಭ ಆಶಯಗಳು, ಶುಭ ಹಾರೈಕೆಗಳು, ಶುಭ ವಂದನೆಗಳು.
ಮೇ ತಿಂಗಳ ಎರಡನೇ ಭಾನುವಾರ ಅಮ್ಮಂದಿರ ದಿನ
ಜೂನ್ ತಿಂಗಳ ಮೂರನೇ ಭಾನುವಾರ ಅಪ್ಪಂದಿರ ದಿನ


ಎಲ್ಲ ಅಪ್ಪಂದಿರಿಗೂ ಈ ನೆವನದಲ್ಲಿ ಒಂದೊಂದು ಕಾರಣಗಳಿಗಾಗಿ ಒಂದೊಂದು ನಮನಗಳು.

ನಿಮ್ಮ ಕಿರುಬೆರಳನ್ನು ಪುಟ್ಟ ಹಿಡಿಯೊಳಗೆ ಇರಿಸುವುಕ್ಕಾಗಿ;
ಹೆಗಲ ಮೇಲೇರಿಸಿಕೊಂಡು ಜಾತ್ರೆಯಲ್ಲಿ ಪಲ್ಲಕ್ಕಿಯ ದೇವರನ್ನು ಕಾಣಿಸುವುದಕ್ಕಾಗಿ;
ತೋಟದ ಕೆರೆಯಲ್ಲಿ ಈಜು ಹೊಡೆವಾಗ ಎಳೆ ಹೊಟ್ಟೆಯ ಕೆಳಗೆ ಕೈಯಿಟ್ಟು ಧೈರ್ಯ ಕೊಡುವುದಕ್ಕಾಗಿ;
ತೊರೆಯ ದಾಟುವಾಗ ಮರದ ಸೇತುವೆಯಲ್ಲಿ ಬೆನ್ನ ಹಿಂದೆಯೇ ಮೆಲ್ಲನೆ ಬರುವುದಕ್ಕಾಗಿ;
ಯಕ್ಷಗಾನದ ರಕ್ಕಸವೇಷ ನೋಡಿ ಬೆದರಿದಾಗ ಸಾಂತ್ವನ ಹೇಳುವುದಕ್ಕಾಗಿ;
ಗೇರು, ಮಾವು, ಹಲಸುಗಳನ್ನು ನಾಜೂಕಾಗಿ ಬಿಡಿಸಿ ತಿನಿಸುವುದಕ್ಕಾಗಿ;
............ .......... .......... ...........

ಮಾತು ಮೌನಗಳಲ್ಲಿ ಹುದುಗಿರುವ ನೂರಾರು ಭಾವಗಳಿಗಾಗಿ....
ನಮನಗಳು ವಂದನೆಗಳು ಪ್ರಣಾಮಗಳು.

Tuesday 9 June 2009

ನೆನಪುಗಳ ಚಿತ್ರಲೋಕ

ಸಹೃದಯ ಓದುಗರಿಗೆ ನಮಸ್ಕಾರಗಳು.

ಮೇ ತಿಂಗಳ ಕೊನೆಯ ಶನಿವಾರ ಭಾನುವಾರ ಅಮೆರಿಕನ್ನಡ ಸಾಹಿತ್ಯಾಸಕ್ತರಿಗೆ ಸಾಹಿತ್ಯ ರಸದೂಟ. ವಾಷಿಂಗ್ಟನ್ ಡಿ.ಸಿ. ಅಮೆರಿಕದ ರಾಜಧಾನಿ. ಅದರ ಪಕ್ಕದ ಮೇರಿಲ್ಯಾಂಡ್ ರಾಜ್ಯದ ರಾಕ್’ವಿಲ್’ನಲ್ಲಿ ಯೂನಿವರ್ಸಿಟಿಯ ಶೇಡೀ ಗ್ರೋವ್ ಸಭಾಂಗಣದಲ್ಲಿ ಎರಡು ದಿನಗಳ ವಸಂತ ಸಾಹಿತ್ಯೋತ್ಸವ. ಅದರ ಬಗ್ಗೆ ವಿವರ, ವರದಿಗಳೆಲ್ಲ ಈಗಾಗಲೇ ಕೆಲವಾರು ಬಂದಿವೆ, ಬರುತ್ತಿವೆ. ಅದನ್ನೇ ಮತ್ತೆ ಪುನರಾವರ್ತಿಸುವುದಿಲ್ಲ ನಾನು.

ಆದರೆ ಅಲ್ಲಿ ಕೇಳಿಬಂದ ಒಂದು ದೊಡ್ಡ ಘೋಷಣೆಯನ್ನು ಹೇಳದಿದ್ದರೆ ತಪ್ಪಾದೀತು. ಮುಂದಿನ ಸಾಹಿತ್ಯೋತ್ಸವ ಮಾಡುವವರೇ, ಗಮನಿಸಿ: ಭಾಗವಹಿಸುವ ಎಲ್ಲ ಉತ್ಸಾಹಿ ಬಳಗದ ಕೋರಿಕೆ -
"ಎರಡು ದಿನವೂ ಊಟ ತಿಂಡಿ ಕೊಡಿ. ನಮಗೆಲ್ಲ ಮನಸಾರೆ ಹರಟೆ ಹೊಡೆಯಲು ಬಿಡಿ"

ಇಲ್ಲಿ, ನನ್ನ ಕ್ಯಾಮೆರಾ ಕಣ್ಣಿಗೆ ಸಿಕ್ಕಿದ ಕ್ಷಣಗಳನ್ನು ಸೇರಿಸಿಟ್ಟಿದ್ದೇನೆ. ಆ ಚಿತ್ರಲೋಕಕ್ಕೆ ಇಣುಕಿಂಡಿ

ಕೆಲವಾರು ವರದಿಗಳು, ಇನ್ನಷ್ಟು ಚಿತ್ರಗಳು ಸಾಹಿತ್ಯ ರಂಗದ ಜಾಲತಾಣದಲ್ಲಿಯೂ ಇವೆ, ಅಲ್ಲಿಗೊಮ್ಮೆ ಭೇಟಿ ಕೊಡಿ.
http://www.kannadasahityaranga.org/


ಗೆಳತಿ ತ್ರಿವೇಣಿಯೂ ಅವಳ ಅಕ್ಷರಲೋಕದಲ್ಲಿ ಈ ಬಗ್ಗೆ ಬರೆದು, ಚಿತ್ರಗಳ ರಂಗೋಲಿ ಹಾಕಿಟ್ಟಿದ್ದಾಳೆ.

ತಂಗಿ ಶಾಂತಲೆ ಹೇಳಿಕೊಂಡಂತೆ, ನಮ್ಮ ಮನಸ್ಸುಗಳಿನ್ನೂ ಆ ಸಡಗರದಿಂದ ಹೊರಬಂದಿಲ್ಲ.

ಮುಂದಿನ ಮಾತುಗಳೆಲ್ಲ ಆಮೇಲೆಯೇ.

Monday 1 June 2009

ಮುಗ್ಧ

ಸಿಹಿನಿದ್ದೆಯಿಂದ ಸಟಕ್ಕನೆ ಎಚ್ಚರಾದಾಗ ಎದ್ದು ಕುಳಿತೆ. ಆಂಟಿ, ಅಂಕಲ್ ಇನ್ನೂ ಎದ್ದಿರಲಿಲ್ಲ. ಹಾಗೇ ಮತ್ತೆ ಹಾಸಿಗೆಯ ಮೇಲೆ ಮುದುಡಿಕೊಂಡೆ. ಇವತ್ತು ನಮಗೆ ಕ್ಲಾಸಸ್ ಇಲ್ಲ, ಯೂನಿಫ್ಹಾರ್ಮ್ ಇಲ್ಲ; ಆದ್ರೆ ಸ್ಕೂಲ್ ಇದೆ. `ಏನು ಸ್ಪೆಷಲ್?' ಅಂದ್ರಾ? ಇವತ್ತು, ನಮಗೆಲ್ಲಾ ಸ್ಕೂಲಿಂದ ಬುಕ್ಸ್ ಕೊಡ್ತಾರೆ, ಅದಕ್ಕಾಗಿ ಫ್ಹಂಕ್ಷನ್ ಇದೆ. ಬಣ್ಣ-ಬಣ್ಣದ ಬಟ್ಟೆ ಹಾಕಿ ನಾವೆಲ್ಲರೂ ಚಿಟ್ಟೆಗಳ ಹಾಗೆ ಕಾಣ್ತೀವೀಂತ ನಿನ್ನೆ ಆಂಟಿ ಹೇಳ್ತಿದ್ರು. ತುಂಬಾ ಮಜ. ಈಗ ಕೊಡೋ ಬುಕ್ಸ್‍ಗೇಂತ ನಮ್ಮ ಮಿಸ್ ನಮ್ಹತ್ರ ಎಲ್ಲಾ ಹಂಡ್ರೆಡ್ ರುಪೀಸ್ ತಗೊಂಡಿದಾರೆ. ಖಾಲಿ ಸ್ಕೂಲ್‍ಬ್ಯಾಗ್ ತಗೊಂಡ್ಹೋಗೋದು ಇವತ್ತೊಂದೇ ದಿನಾನಾಂತ! ಹೋಗೋವಾಗ ಅಂಕಲ್ ನನ್ನನ್ನ ಸ್ಕೂಲ್ ಹತ್ರ ಡ್ರಾಪ್ ಮಾಡ್ತಾರೆ. ಬರ್ತಾ ಫ್ಹ್ರೆಂಡ್ಸ್ ಜೊತೆ ವ್ಯಾನ್‍ನಲ್ಲಿ ಬರೋದು, ಚೆನ್ನಾಗಿರತ್ತೆ....

ಹ್ಙಾ! ಆಂಟಿ ಎದ್ರೂಂತ ಕಾಣತ್ತೆ. ನಾನೂ ಏಳ್ತೀನಿ! "ಅನಿಲ್..." "ಓ..." ಆಂಟಿ ಕರೀತಿದ್ದಾರೆ ನನ್ನ. ಎಲ್ಲಾ ಕೆಲಸಗಳನ್ನೂ ಬೇಗ ಮುಗಿಸಿ ಹೊರಡ್ಬೇಕು. ಸ್ಕೂಲಿಗೆ ಬೇಗ ಹೋಗ್ಬೇಕು.... "ನಾನು ರೆಡಿ." ಅಂಕಲ್ ಡ್ರೆಸ್ ಮಾಡ್ಕೊಂಡು ಬರೋದ್ರೊಳ್ಗೆ ನಾನು ಸ್ಕೂಟರ್ ಪಕ್ಕ ನಿಂತೆ. ಆಂಟಿಗೆ `ಟಾಟಾ' ಹೇಳಿ ಹೊರಟ್ವಿ. ಇವತ್ತು ಅಂಕಲ್ ಸ್ಪೀಡಾಗಿ ಬಂದ್ರಾ? ಎಷ್ಟು ಬೇಗ ಬಂದ್ಬಿಟ್ವಿ! ಯಾರೂ ಕಾಣಿಸ್ತಾನೇ ಇಲ್ವಲ್ಲಪ್ಪಾ? ಹೋ, ಅಲ್ಲಿ ರಜನಿ ಬಂದ್ಳು. ಆಕಡೆಯಿಂದ ಸಚಿನ್ ಮತ್ತು ಸಿಮಿ ಬರ್ತಿದ್ದಾರೆ. `ಟಾಟಾ, ಅಂಕಲ್. ವ್ಯಾನ್‍ನಲ್ಲೇ ಮನೇಗ್ಹೋಗ್ತೀನಿ. ಟಾಟಾ.' ಎಲ್ಲ ಬಂದೇ ಬಿಟ್ರು. ಎಲ್ಲರೂ ಕಲರ್‌ಫುಲ್ ಡ್ರೆಸಸ್ ಹಾಕಿ ಎಷ್ಟು ಚೆನ್ನಾಗಿ ಕಾಣಿಸ್ತೀವಿ.
ಗುಡ್! ಫಂಕ್ಷನ್ ಶುರುವಾಗೇ ಬಿಡ್ತು. ಇದೇನಪ್ಪಾ ಸ್ಪೀಚ್ ಮಾಡ್ತಿದಾರೆ. ಈ ಹೆಡ್‍ಮಿಸ್ ಮಾತಾಡಕ್ಕೆ ಶುರುಮಾಡಿದ್ರೆ ಕೊನೇನೇ ಇರೋಲ್ಲ. ಬೇಗ ಬುಕ್ಸ್ ಕೊಡ್ಬಾರ್ದಾ?.... ಅಬ್ಬಾ, ಮುಗೀತು. ಕ್ಲಾಸ್‍ವೈಸ್ ಹೆಸ್ರು ಕರೀತಿದ್ದಾರೆ! ಎಲ್‍ಕೇಜೀನಲ್ಲಿ.... ವನ್... ಟೂ... ಥ್ರೀ... ಫೋರ್... ....ಫೊರ್ಟಿನೈನ್ ಕಿಡ್ಸ್! ಇನ್ನು ಯೂಕೇಜೀನಲ್ಲಿ.... ವನ್... ಟೂ... ಥ್ರೀ... ಫೋರ್... ....ಫಿಫ್ಟಿಸೆವೆನ್ ಕಿಡ್ಸ್! ಮತ್ತೀಗ ಫಸ್ಟ್ ಸ್ಟಾಂಡರ್ಡ್! ವನ್... ಟೂ... ಥ್ರೀ... ಫೋರ್... ....ಫಿಫ್ಟಿವನ್. ನಮ್ಮ ಕ್ಲಾಸ್ ಈಗ. ನನ್ನದೇ ಮೊದಲ ಹೆಸರು. "ಅನಿಲ್" ಓಡಿದೆ ಸ್ಟೇಜ್ ಮೇಲೆ. ಬಣ್ಣದ ಪೇಪರಲ್ಲಿ ರ್‍ಯಾಪ್ ಮಾಡಿದ ಪ್ಯಾಕೆಟ್, ಚೆನ್ನಾಗಿದೆ, ಭಾರವೂ ಇದೆ. ಹೆಡ್‍ಮಿಸ್‍ಗೆ ವಿಶ್ ಮಾಡಿ, ಕೆಳಗಿಳಿದು ಬಂದೆ. ಫ್ಹ್ರೆಂಡ್ಸ್ ಜೊತೆ ಮಾತಾಡ್ತಿದ್ದಂತೆ ಎಲ್ಲಾ ಮುಗಿದು, ನ್ಯಾಷನಲ್ ಆಂಥಮ್ ಹೇಳಿದ್ರು. ಅದಾದ ಕೂಡ್ಲೇ ನಾವೆಲ್ಲಾ ಗೇಟ್ ಹತ್ರ ನಿಂತಿದ್ದ ನಮ್ಮ ರೆಗ್ಯುಲರ್ ವ್ಯಾನ್ ಹತ್ತಿದೆವು, ನಾನೇ ಫಸ್ಟ್. ಮದನ್, ಮಿಟ್ಟೂ, ವಿಜಯ್, ವಿನುತ ಎಲ್ರೂ ಬಂದ್ಮೇಲೆ ಅಂತ್ಯಾಕ್ಷರಿ ಹಾಡ್ತಾ ಮನೆಗೆ ಬಂದ್ವಿ.

ಒಳಗೆ ಹೋದ ಕೂಡ್ಲೇ ಆಂಟಿ ಪ್ಯಾಕೆಟ್ ತಗೊಂಡು ಬಿಡಿಸಿ ನೋಡಿದ್ರು. ಒಂದೊಂದೇ ಬುಕ್ ನೋಡಿ, ಪಕ್ಕಕ್ಕಿಡ್ತಾ ಬಂದ್ರು. ಅವರ ಮುಖ ಒಂಥರಾ ಆಯ್ತು. "ಏನಾಯ್ತು ಆಂಟೀ, ಬುಕ್ಸ್ ಎಲ್ಲಾ ಇಲ್ವಾ? ಸರೀ ಇಲ್ವಾ?...." ಕೇಳಿದೆ. "ನೋಡೋಣ ಮರೀ, ನಿನ್ನ ಸಿಲಬಸ್ ಬುಕ್ ತಗೊಂಬಾ" ಅಂದ್ರು. ಓಡಿ ಹೋಗಿ ತಂದಿತ್ತೆ. ಅದನ್ನು ನೋಡ್ತಾ, ಒಂದೊಂದೇ ಬುಕ್ ಎತ್ತಿಟ್ರು, ಮೂರು ಬುಕ್ಸ್ ಬಂದಿರ್ಲಿಲ್ಲ. ಆಂಟಿಗೆ ಹೇಳಿ ವಿಜೂ ಮನೆಗೆ ಓಡಿದೆ. ಅವನಿಗೂ ಬೇರೆ ಮೂರು ಬುಕ್ಸ್ ಬಾಕಿ, ವಿನುತಗೆ ಎಲ್ಲ ಬುಕ್ಸ್ ಸಿಕ್ಕಿತ್ತು. ಅಲ್ಲಿಂದ ವಿಜೂ ಜೊತೆಗೆ ಮದನ್ ಮನೆಗ್ಹೋದೆ. ಅವನಿಗೆ ನಾಲ್ಕು ಬುಕ್ಸ್ ಸಿಕ್ಕಿರ್ಲಿಲ್ಲ. ಮನೆಗೆ ಬಂದು ಆಂಟಿಗೆ ಹಾಗೇ ಹೇಳಿದೆ. ಅವ್ರಿಗೆ ತುಂಬಾ ಸಿಟ್ಟು ಬಂತೂಂತ ಕಾಣತ್ತೆ, ಸ್ವಲ್ಪ ಹೊತ್ತು ಸುಮ್ಮಗಿದ್ದು ನಂತರ ಹೇಳಿದ್ರು, "ಅನಿಲ್, ನಾಳೆ ಸ್ಕೂಲಿಗೆ ನಾನೂ ಬರ್ತೀನಿ. ಯಾಕೆ ಹೀಗ್ ಮಾಡ್ತಾರೇಂತ ಕೇಳ್ಬೇಕು. `ಬುಕ್ಸ್ ಎಲ್ಲ ನಾವೇ ತರಿಸ್ತೀವಿ, ನೀವು ಅಂಗಡಿ ಸುತ್ತೋದು ಬೇಡ' ಅಂದ್ರು; ಈಗ ಹೀಗೆ. ಇವೆಲ್ಲ ಹೊರಗಡೆ ಅಂಗಡಿಗಳಲ್ಲಿ ಸಿಗೋಲ್ಲ, ಏನ್ಮಾಡೋದು? ಹೆಡ್‍ಮಿಸ್‍ನೇ ಕೇಳ್ತೀನಿ ನಾಳೆ...." ಎಂದರು. ಸಂಜೆಯೆಲ್ಲ ಅದೇ ಗುಂಗಿನಲ್ಲಿ ಕಳೆದೆ. ಇನ್ನು ನಾಳೆಯಿಂದ ಮತ್ತೆ ಸ್ಕೂಲು.... ಬ್ಯಾಗ್ ಹೊತ್ತುಕೊಂಡು ಹೋಗ್ಬೇಕು.
************************ ************************
ಇವತ್ತೂ ಬೇಗನೇ ಎಚ್ಚರವಾಯ್ತು. ಆಂಟೀನೂ ಸ್ಕೂಲಿಗೆ ಬರ್ತಾರಲ್ಲ; ಸೋ, ಸ್ಕೂಟರಲ್ಲೇ ಹೋಗೋದು, ಮಜಾ.... ಆಂಟಿ ಹೇಳಿದ್ಹಾಗೆ, ನಾನು ಕ್ಲಾಸಿಗೆ ಹೋದೆ. ಅವ್ರು ಹೆಡ್‍ಮಿಸ್ ಜೊತೆ ಮಾತಾಡೋಕೆ ಹೋದ್ರು. ನಮ್ಮ ಕ್ಲಾಸ್‍ಮಿಸ್ ಬಂದ ಕೂಡ್ಲೇ ಆಂಟೀನೂ ಬಂದ್ರು. ಕೇಳೇ ಬಿಟ್ರು ಮಿಸ್‍ನ, "ಗುಡ್‍ಮಾರ್ನಿಂಗ್ ಮಿಸ್. ಒಂದ್ವಿಷಯ ಮಾತಾಡ್ಬೇಕಿತ್ತು. ನೀವು ಸ್ಟೂಡೆಂಟ್ಸ್ ಹತ್ರ ಹಂಡ್ರೆಡ್ ರುಪೀಸ್ ಕಲೆಕ್ಟ್ ಮಾಡಿ, ಈಗ ಕೆಲವೇ ಬುಕ್ಸ್ ಕೊಟ್ಟಿದ್ದೀರ. ಉಳಿದಿದ್ದು ಅಂಗಡೀಲೂ ಸಿಗೋಲ್ಲ. ನಾವೀಗ ಏನ್ ಮಾಡೋದು? ನೀವೇ ತರ್‍ಸಿ ಕೊಡ್ತೀರೋ, ಹೇಗೆ?" ಅಂದರು. ನಮ್ಮ ಮಿಸ್ ನನ್ನನ್ನ ಒಂಥರಾ ನೋಡಿ, ಆಂಟಿ ಜೊತೆ, "ಸಾರಿ ಮೇಡಮ್. ಒಂದು ಸೆಟ್ ಬುಕ್ಸ್ ಮಾತ್ರ ಬಂದಿರೋದು, ಉಳಿದವು ಈ ವೀಕ್ ಅಥ್ವಾ ನೆಕ್ಸ್ಟ್ ವೀಕ್ ಬರತ್ವೆ. ಆವಾಗ, ಕ್ಲಾಸಲ್ಲೇ ಕೊಡ್ತೀವಿ. ನೀವೇನೂ ವರಿ ಮಾಡ್ಕೋಬೇಡಿ. ಮತ್ತೆ... ನಾವು ಕಲೆಕ್ಟ್ ಮಾಡಿರೋ ಅಮೌಂಟ್ ಬಗ್ಗೆ... ನಾವು ಈ ಕ್ಲಾಸ್‍ಗೆ, ಅಂದ್ರೆ ಎಲ್ಲ ಸೆಕೆಂಡ್ ಸ್ಟಾಂಡರ್ಡ್ ಮಕ್ಕಳಿಗೆ ಸೆವೆಂಟಿ-ಫೈವ್ ರುಪೀಸ್ ಮಾತ್ರಾ ಹೇಳಿದ್ದು, ನೀವು ಹಂಡ್ರೆಡ್ ಅಂತಿದ್ದೀರ, ಇದರಲ್ಲಿ ನಿಮ್ಮ ಹುಡುಗನೇ ಏನೋ..." ಮಿಸ್‍ನ ಮಾತಿನ್ನೂ ಮುಗಿದಿರಲಿಲ್ಲ, ಆಂಟಿ ಎಲ್ಲರೆದುರಿಗೆ ನನ್ನನ್ನು ಎಳೆದು, ಕಿವಿಹಿಂಡಿ ಕೆನ್ನೆಗೊಂದು ಬಾರಿಸಿದರು. ನೋವು, ಅವಮಾನಗಳಿಂದ ಅತ್ತುಬಿಟ್ಟೆ. ಆಂಟಿಗೆ ಸಿಟ್ಟು ಏರಿತ್ತು, "ಡರ್ಟಿ ಬಾಯ್, ನಮ್ಗೇ ಮೋಸ ಮಾಡ್ತೀಯಾ? ಯಾವಾಗಿಂದ ಕಲ್ತೆ ಈ ರೀತಿ ಸುಳ್ಳು ಹೇಳೋದಿಕ್ಕೆ? ಆ ಟ್ವೆಂಟಿ-ಫೈವ್ ಏನ್ ಮಾಡ್ದೆ ಹೇಳು! ಇರು ನಿಂಗೆ, ಅಂಕಲ್ ಕೈಲೂ ಶಾಸ್ತಿ ಮಾಡಿಸ್ತೀನಿ!" ಸಿಟ್ಟಿನಲ್ಲೇ ಎದ್ದು ಹೊರಟೇ ಹೋದ್ರು. ನಾನು ಅಳುತ್ತಲೇ ಇದ್ದೆ. ಅವರು ಬೇರೆ ಯಾರನ್ನಾದ್ರೂ ಕೇಳಿದ್ದರೆ ನಿಜ ಗೊತ್ತಾಗ್ತಿತ್ತು, ವಿಜೂ ಮತ್ತು ಮದನ್ ನನ್ನೇ ನೋಡ್ತಾ ಇದ್ದರು. ಮಿಸ್ ಎದುರು ಮಾತಾಡಲು ಯಾರಿಗೂ ಧೈರ್ಯ ಇಲ್ಲ, ನಂಗೊತ್ತು.

`ಆಂಟಿ ಬೇರೆ ಯಾರನ್ನಾದರೂ ಕೇಳ್ಬೇಕಿತ್ತು, ಇನ್ನೀಗ ಅಂಕಲ್ ಕೈಯಿಂದಲೂ ಹೊಡೆಸಿಕೊಳ್ಬೇಕಲ್ಲ' ಅಂತ ಅಂದ್ಕೊಳ್ತಿರುವಾಗ್ಲೇ ಸ್ಕೇಲಿನೇಟು ತಲೆಗೆ ಬಿತ್ತು; ತತ್ತರಿಸಿದೆ. ಮಿಸ್ ಕಣ್ಣು ಕೆಂಪು ಮಾಡ್ಕೊಂಡು ನಿಂತಿದ್ರು. ನನ್ನನ್ನು ಕ್ಲಾಸಿನೆದುರಿಗೆ ಎಳೆದು ಹೇಳಿದ್ರು, "ಇದು ವಾರ್ನಿಂಗ್, ಇನ್ನು ಯಾರಾದ್ರೂ ಮನೇಗ್ ಹೋಗಿ ನಾನು ಹಂಡ್ರೆಡ್ ಕಲೆಕ್ಟ್ ಮಾಡಿರೋದು ಸರಿಯಲ್ಲ, ನಿಜವಾಗಿ ಸೆವೆಂಟಿ-ಫೈವ್ ಮಾತ್ರಾ ಅಂತ ಹೇಳಿದ್ರೆ, ನೀವ್ಯಾರೂ ಮುಂದಿನ್ ಕ್ಲಾಸಿಗೆ ಹೋಗೋಲ್ಲ, ನೋಡ್ತಿರಿ. ಅನಿಲ್, ಯೂ ಬಿ ಕೇರ್‌ಫುಲ್. ಮತ್ತೆ ನಿನ್ನ ಆಂಟಿ ಹತ್ರ ನಾನೇ ಹಂಡ್ರೆಡ್ಡೂ ತಗೊಂಡೆ ಅಂತೇನಾದ್ರೂ ಹೇಳಿದ್ರೆ, ನಿನ್ನ ಈ ವರ್ಷ ಖಂಡಿತಾ ಪಾಸ್ ಮಾಡಲ್ಲ, ಈ ಕ್ಲಾಸಲ್ಲೇ ಇರಬೇಕಾಗತ್ತೆ, ನೋಡ್ತಿರು!" ಅಂದರು.
************************ ************************
ಇಡೀ ದಿನ ಹೇಗೋ ಕಳೀತು. ನಾನು ಅಳುತ್ತಲೇ ಇದ್ದೆ, ಉಳಿದವರು ಸುಮ್ಮನಿದ್ದರು. ಲಂಚ್ ಟೈಮ್‍ನಲ್ಲಿ ವಿಜು ಮತ್ತು ಮದನ್ ನನ್ನ ಜೊತೆಗೇ ಇದ್ದು, ಏನೇನೋ ಸಮಾಧಾನ ಹೇಳ್ತಿದ್ರು. ಸಂಜೆ ಸ್ಕೂಲ್ ವ್ಯಾನ್‍ನಲ್ಲಿ ಮನೆಗೆ ಹೊರಟಾಗಲೂ ಅವರೆಲ್ಲ ಸೇರಿ, "ಅನಿಲ್, ನಿನ್ನ ಆಂಟಿ ಇನ್ನೂ ನಿಂಗೆ ಬೈದ್ರೆ ನಾವೆಲ್ಲ ಬಂದು ಆ ಮಿಸ್ ಮಾಡಿದ್ ಮೋಸಾನ ಹೇಳ್ತೀವಿ..." ಅಂದ್ರು. ನನಗೂ ಸ್ವಲ್ಪ ಧೈರ್ಯ ಬಂತು ಅಂತ ಅನ್ನಿಸಿದರೂ ಮನೆಯ ಮೆಟ್ಟಲು ಹತ್ತಿದಾಗ ಎದೆಯೊಳಗೆ ಏನೇನೋ ಆಗ್ತಿತ್ತು. ಅವರೆಲ್ಲರೂ ನನ್ನ ಜೊತೆಗೇ ಬಂದಿದ್ದರೆ ಚೆನ್ನಾಗಿತ್ತು ಎಂದೂ ಅನ್ನಿಸ್ತು.

ಬೆಲ್ ಮಾಡಿದಾಗ ಬಾಗಿಲು ತೆರೆದ ಆಂಟಿಯ ಕಣ್ಣುಗಳು ಕೆಂಪಾಗಿದ್ದವು, ತುಂಬಾ ಅತ್ತಿರಬೇಕು. ನಾನು ಒಳಗೆ ಬಂದ ಕೂಡಲೇ ಬಾಗಿಲು ಹಾಕಿಕೊಂಡ ಆಂಟಿ, ನನ್ನ ರಟ್ಟೆ ಹಿಡಿದು, ಕೆನ್ನೆಗೆ ಬಾರಿಸಿ, "ಕೆಟ್ಟ ಹುಡುಗ, ನಮ್ಮ ಪ್ರೀತಿಗೆ ದ್ರೋಹ ಮಾಡ್ತಿದೀಯ. ಈಗಿನ್ನೂ ಏಳು ವರ್ಷ. ಈ ಥರ ಕಳ್ಳಬುದ್ಧಿ ಎಲ್ಲಿ ಕಲ್ತೆ? ದೇವರು ನಂಗಂತೂ ಕೊಟ್ಟಿಲ್ಲ. ಅಕ್ಕ-ಭಾವ ಎದ್ಕೊಂಡು ಹೋದ್ಹಾಗೆ ಹೋದ್ಮೇಲೆ ನಿನ್ನನ್ನ ನಮ್ಮಗೂಂತ ಸಾಕಿದ್ದಕ್ಕೆ ಒಳ್ಳೇ ಪ್ರತಿಫಲ ಕೊಟ್ಟೆ, ಕತ್ತೆ. ನಿಂಗೇನ್ ಕಡ್ಮೆ ಮಾಡಿದ್ವಿ ಹೇಳು. ನಮ್ಮ ಪ್ರೀತೀಲಿ ನಿಂಗೇನ್ ಕೊರತೆ ಅನ್ಸಿತ್ತು, ಬೊಗಳೋ ನಾಯಿ...." ಏನೇನೋ ಹೇಳುತ್ತಾ ಮೈ-ಮುಖ ನೋಡ್ದೆ ಬಾರಿಸ್ತಿದ್ರು. ಎಲ್ಲೋ ಒಮ್ಮೆ ಅವರು ಸುಮ್ಮನಾದಾಗ, ನಾನು ಬಿಕ್ಕಳಿಸುತ್ತಾ ಅಂದೆ, "ಆಂಟೀ, ಪ್ಲೀ...ಸ್, ನಾ..ನ್ ಹೇಳೋ..ದನ್ನ ಕೇ..ಳಿ. ನಾ..ನ್ ಸು..ಳ್ಳು ಹೇಳ್..ತಿಲ್ಲ, ಮೋಸ ಮಾ..ಡಿಲ್ಲ. ಆ ಮಿಸ್...ಸ್ ಎಲ್ಲಾ...ರ್ ಹತ್ರಾ...ನೂ ಹ..ಹಂಡ್ರೆಡ್ ರುಪೀ...ಸೇ ತಗೊಂ..ಡಿದಾ..ರೆ. ನಿಂ..ಹತ್ರ ಹೇ...ಹೇಳಿದ್ರೆ ಈ ವರ್ಷ ನನ್ನ ಫೈಲ್ ಮಾಡ್...ತಾ..ರಂತೆ. ಆ..ಆದ್ರೂ ಪ..ಪರ್ವಾಗಿಲ್ಲ, ಆಂಟಿ, ನಾ..ನ್ ಸುಳ್ಳು ಹೇ..ಳಿಲ್ಲ.... ಸು..ಳ್ಳು ಹೇಳಲ್ಲ..." ದುಃಖ ತಡೆಯಲಾರದೆ ಸೋಫಾಕ್ಕೆ ಮುಖವೊತ್ತಿ ಅಳತೊಡಗಿದೆ. ಸ್ವಲ್ಪ ಹೊತ್ತಿನ ಮೇಲೆ, ಆಂಟಿ ನನ್ನ ತಲೆ ಸವರಿ, "ಹೋಗು, ಕೈಕಾಲು-ಮುಖ ತೊಳ್ಕೋ, ನಾನು ವಿಜೂ ಮನೆಗೆ ಹೋಗ್‍ಬರ್ತೀನಿ" ಅಂತ ಎದ್ದರು. ಏಳುವ ಮನಸ್ಸಿಲ್ಲದೆ ಹಾಗೇ ಅಳುತ್ತಾ, ಬಿಕ್ಕಳಿಸುತ್ತಾ ಎಷ್ಟು ಹೊತ್ತು ಕುಳಿತಿದ್ದೆನೋ ತಿಳಿಯಲಿಲ್ಲ.

ಆಂಟಿ ಬಂದವರೇ ನನ್ನನ್ನು ತಬ್ಬಿ ಹಿಡಿದರು. ನಾನಿನ್ನೂ ಬಿಕ್ಕಳಿಸುತ್ತಿದ್ದೆ. "ಅನಿಲ್, ನನ್ನ ಕಂದಾ, ಸಾರಿ ಕಣೋ. ನನ್ನ ಕ್ಷಮಿಸ್ತೀಯಾ? ನಿಂಗೆ ಸುಮ್‍ಸುಮ್ನೆ ಹೊಡ್ದದ್ದಾಯ್ತು ಮರೀ; ಎಲ್ ನೋಯ್ತಿದೆಯಪ್ಪ? ವಿನುತಾನೂ ಮಮತಾನೂ ನನ್ನೇ ಬೈಯ್ದ್ರು. ಅವ್ರನ್ನ ಒಂದ್ ಮಾತೂ ಕೇಳ್ದೆ ದುಡುಕ್ಬಿಟ್ಟೆ. ಕ್ಷಮಿಸು ಚಿನ್ನೂ. ನೀನು ತಪ್ಪು ಮಾಡಿಲ್ಲ, ಸುಳ್ಳು ಹೇಳಿಲ್ಲ, ನಾನೇ ಎಡವಿದೆ. ನಾಳೆ ನಾವು ಮೂವರು ಅಮ್ಮಂದಿರೂ ಸ್ಕೂಲಿಗೆ ಬಂದು ನಿಮ್ಮ ಮಿಸ್ ಮೇಲೆ ಕಂಪ್ಲೇಂಟ್ ಕೊಡ್ತೀವಿ. ಅವರು ಮಾಡಿರೋ ತಪ್ಪಿಗೆ ಅವ್ರನ್ನು ಪೊಲೀಸ್‍ಗೆ ಹ್ಯಾಂಡ್‍ಓವರ್ ಮಾಡ್ಸೋಣ." ಅಂದರು.

"ಬೇಡ ಆಂಟಿ, ಪೊಲೀಸ್ ಬೇಡ. ಹೆಡ್‍ಮಿಸ್ ಹತ್ರ ಹೇಳಿದ್ರೆ ಸಾಕು. ನಮ್ಮ ಮಿಸ್‍ನ ಜೈಲಿಗೆ ಹಾಕೋದು ಬೇಡ ಆಂಟಿ..." ಅಂದಾಗ ಅವ್ರು ಮತ್ತೆ ನನ್ನ ತಬ್ಬಿಕೊಂಡು, "ಇಂಥಾ ಮುದ್ದು ಮರೀ ಮನಸ್ಸನ್ನ ನೋಯ್ಸಿದ್ನಲ್ಲ, ಎಂಥಾ ತಾಯಿ ನಾನು. ಏಳಪ್ಪ, ನಿನ್ನ ಅಂಕಲ್ ಬರೋ ಹೊತ್ತಾಯ್ತು. ಒಂದ್ಲೋಟ ಹಾಲು ಕುಡ್ದು ರೆಡಿಯಾಗು, ಹೊರಗೆ ಹೋಗೋಣ. ನಿಂಗೆ ಇಷ್ಟವಾದ ತಿಂಡಿ ಕೊಡಿಸ್ತೀನಿ, ನಡೀ." ಅಂದರು. "ಆಂಟಿ ಎಷ್ಟು ಒಳ್ಳೆಯವ್ರು. ನಮ್ಮ ಮಿಸ್‍ಗೆ ಸರಿಯಾದ ಶಾಸ್ತಿನೇ ಆಗತ್ತೆ. ಆದ್ರೆ, ಆಮೇಲೆ ನಮ್ಮ ಕ್ಲಾಸಿಗೆ ಯಾವ ಮಿಸ್ ಬರ್ತಾರೆ?.... ಅವ್ರೇ ಮತ್ತೆ ಬಂದ್ರೆ?...." ಮುಂದಿನ ಯೋಚನೆಗಳ ದಾರಿಗೆ ಅಂಕಲ್‍ನ ಸ್ಕೂಟರ್ ಶಬ್ದ ಅಡ್ಡ ಬಂತು. ಮುಖ ತೊಳೆಯಲು ಬಾತ್‍ರೂಮಿಗೆ ಓಡಿದೆ.
************ ************ ************ ************
೧೯೮೫ರ ಜೂನ್‍ನಲ್ಲಿ ಕರ್ನಾಟಕದ ಶಾಲೆಯೊಂದರಲ್ಲಿ ನಡೆದ ಘಟನೆಯ ಆಧಾರದ ಮೇಲೆ
ಹತ್ತೊಂಭತ್ತರ ಹದಿಹೃದಯ ಹೆಣೆದದ್ದು
ದಟ್ಸ್'ಕನ್ನಡ.ಕಾಂನಲ್ಲಿ ೨೦೦೨ರ ನವೆಂಬರ್'ನಲ್ಲಿ ಪ್ರಕಟವಾಗಿದೆ.
************************ *************************
(ಡಿಸೆಂಬರ್-೧೯೮೫)

Thursday 21 May 2009

ಬೇರುಗಳು

ಮನೆಯಿಂದಿಳಿದು ಮೂರು ಬ್ಲಾಕ್ ಆಚೆಗಿರುವ ಬ್ಯೂಟಿ ಪಾರ್ಲರ್‍ಗೆ ಹೋಗಲು ಕಾರ್ ತೆಗೆಯಲೋ ನಡೆಯಲೋ ಎಂದು ಯೋಚಿಸಿದ ಅನಿತಾ, ಗರಾಜಿನಿಂದ ಕಾರ್ ತೆಗೆದಳು. ಪುಟ್ಟ ನೇತನ್ ಓಡಿ ಬಂದಾಗ ಬೇಬಿ ಸಿಟ್ಟರ್ ಶೆರ್ಲಿ ಹಿಂದೆಯೇ ಬಂದು ಅವನನ್ನು ಎತ್ತಿಕೊಂಡು, ಅಮ್ಮನಿಗೆ ಬಾಯ್ ಹೇಳಿಸಿ ಅವನನ್ನು ಒಳಗೊಯ್ದಳು. ಫೇಷಿಯಲ್ ಮಾಡಿಸಿಕೊಂಡು ಸುಡುವ ಬಿಸಿಲಲ್ಲಿ ನಡೆಯುವುದು ಸರಿಯಲ್ಲ ಎಂಬ ತರ್ಕದ ಮೇಲೆ ಕಾರ್ ಚಲಾಯಿಸಿದಳು ಅನಿತಾ. ಸಂಜೆಯ ಕೋಲು ಬಿಸಿಲು ನೇರವಾಗಿ ಅವಳ ಎಡಕೆನ್ನೆಗೆ ಬೀಳುತ್ತಿದ್ದು, ಹಿಂದಿರುಗುವಾಗ ಅದು ತನ್ನನ್ನು ಕಾಡುವುದಿಲ್ಲವೆಂದು ಸಮಾಧಾನಿಸಿಕೊಂಡಳು. ತಿಂಗಳಿಗೊಂದರಂತೆ ಫೇಷಿಯಲ್ ಹಾಗೂ ಕೈಕಾಲುಗಳ ಪೂರ್ಣ ವ್ಯಾಕ್ಸಿಂಗ್ ಮಾಡಿಸಿಕೊಳ್ಳುವ ಹವ್ಯಾಸ ಹತ್ತಿಸಿದ ಕೆನೆತ್ ಅವಳ ಜೀವನದಿಂದ ಜಾರಿದ ಮೇಲೂ ಈ ಹವ್ಯಾಸ ಅವಳನ್ನು ಬಿಟ್ಟಿರಲಿಲ್ಲ. ಸುಮ್ಮನೆ ಮಲಗಿದ್ದು ಮುಖಕ್ಕೆ ಮಸಾಜ್ ಮಾಡಿಸಿಕೊಳ್ಳುವಾಗಿನ ಸುಖ, `ಪ್ಯಾಂಪರ್‍ಡ್ ಫೀಲಿಂಗ್' ಮುದ ನೀಡುತ್ತದೆ ಅನ್ನುವ ಸತ್ಯವನ್ನು ಕಂಡುಕೊಂಡಿದ್ದಳು. ಕೆನೆತ್‍ನ ಸಾಂಗತ್ಯದ ದಿನಗಳಲ್ಲಿ ಅವನ ಹೊಗಳಿಕೆಗಾಗಿ ಪಾರ್ಲರಿಗೆ ಹೋಗುತ್ತಿದ್ದೇನೆ ಅನ್ನುವ ಭಾವನೆಯಿತ್ತು, ಈಗ ತನಗಾಗಿಯೇ ಹೋಗುತ್ತಿದ್ದಳು.

ಅವನೇಕೆ ತನ್ನನ್ನು ತೊರೆದ ಅನ್ನುವುದಕ್ಕೆ ಸಮಾಧಾನ ಇರಲಿಲ್ಲವಾದರೂ, ಅವನೆಲ್ಲಾದರೂ ಸುಖವಾಗಿರಲಿ, ತನ್ನ ಸುಖ ತನಗಿರಲಿ ಅನ್ನುವ ತಾತ್ವಿಕ ನಿಲುವನ್ನು ತಳೆದಿದ್ದಳು. ಭಾರತೀಯಳಾದ ತಾನು ಕೆನೆತ್‍ನಲ್ಲಿ ಕಂಡಿದ್ದಾದರೂ ಏನು ಎಂದು ಅನೇಕ ಬಾರಿ ಪ್ರಶ್ನಿಸಿಕೊಂಡು ಉತ್ತರ ಸಿಗದೇ ನಿರಾಶಳಾಗಿದ್ದೂ ಇದೆ. ಪ್ರತಿ ಬಾರಿ ಪಾರ್ಲರಿಗೆ ಹೋಗುವಾಗಲೂ ಅವನ ನೆನಪು ಕಾಡುವುದಾಗಿತ್ತು. ಯಾವ ವೇಗದಲ್ಲಿ ಎಷ್ಟು ಗಾಢವಾಗಿ ಪ್ರೀತಿಸಿದ್ದನೋ ಅದೇ ವೇಗದಲ್ಲಿ ಅಷ್ಟೇ ಗೂಢವಾಗಿ ಬಿಟ್ಟು ನಡೆದಿದ್ದ. ಅವನ ಸೆಕ್ರೆಟರಿಯಿಂದ ಅವನ ಹೊಸ ಪ್ರಣಯದ ವಿಷಯ ತಿಳಿದಾಗ ಅನಿತಾಳಿಗೆ ಆಘಾತವಾಗಿತ್ತು. ಅವನೊಂದಿಗೆ ನೇರವಾಗಿ ವಿಚಾರಿಸಿದಾಗ `ವಿಚ್ಛೇದನಕ್ಕೆ ಒಪ್ಪಿಗೆಯಿದೆ' ಎಂದು ನಿರಾಳವಾಗಿ ಹೇಳಿ ಹೊರಟಿದ್ದ. ಈ ಜನರ ನೈತಿಕತೆಯೇ ಅರ್ಥವಾಗದು ಎಂದು ಅಮ್ಮನೊಂದಿಗೆ ಹೇಳಿಕೊಂಡು ಅಳಲಾರದ ಇಬ್ಬಂದಿಯಲ್ಲಿದ್ದಳು ಅನಿತಾ. ಅವಳ ಈ ಮದುವೆಗೆ ಅವಳಮ್ಮ ಬಹುವಾಗಿ ವಿರೋಧಿಸಿ ಬುದ್ಧಿ ಹೇಳಿದ್ದರು. ಆಗ ಅನಿತಾ ಅದಾವುದನ್ನೂ ಕಿವಿಗೆ ಹಾಕಿಕೊಂಡಿರಲಿಲ್ಲ. ಕೆನೆತ್ ಬಿಟ್ಟು ಹೊರಟಾಗ ಅಳುತ್ತಾ ಅಮ್ಮನ ಮಡಿಲಿಗೆ ಹೋಗುವ ಮನಸ್ಸಾಗಿದ್ದರೂ ಅಭಿಮಾನ ಬಿಡಲಿಲ್ಲ. ಬಹುರಾಷ್ಟ್ರೀಯ ಕಂಪೆನಿಯೊಂದರ ವಿತ್ತ ಶಾಖೆಯಲ್ಲಿ ಉನ್ನತ ಕೆಲಸದಲ್ಲಿದ್ದ ಅವಳು ಮಗನಿಗಾಗಿ ಮನೆಯಲ್ಲೇ ಬಂದಿರುವಂತೆ ಬೇಬಿ ಸಿಟ್ಟರ್ ಒಬ್ಬಳನ್ನು ಗೊತ್ತುಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಇದೀಗ ಕೆನೆತ್‍ನಿಂದ ಬಿಡುಗಡೆಯೂ ದೊರೆತಿದ್ದು, ಸಂಪೂರ್ಣ ಸ್ವತಂತ್ರ ನಾರಿಯಾಗಿದ್ದಳು. ಆದರೂ ಬೇರು ಬಿಟ್ಟಿದ್ದ ಭಾರತೀಯತೆ ಒಂದು ರೀತಿಯ ಬೇಲಿಯಾಗಿತ್ತು. ಒಳಗೊಳಗೇ ನೊಂದುಕೊಂಡು ಬೇಯುತ್ತಿದ್ದಳು.

ಮಾಮೂಲಿನಂತೆ ಬ್ಯೂಟಿ ಪಾರ್ಲರಿನಲ್ಲಿ ತನ್ನ ನಿಯಮಿತ ಸಖಿಯೊಂದಿಗೆ ಒಳಕೋಣೆ ಹೊಕ್ಕು, ತನ್ನ ಮೇಲುಡುಪುಗಳನ್ನು ತೆಗೆದಿರಿಸಿ, ಅವಳು ಕೊಟ್ಟ ಪೇಪರ್ ಬಟ್ಟೆ ತೊಟ್ಟು, ಎತ್ತರದ ಆರಾಮಾಸನದಲ್ಲಿ ಮಲಗಿದಳು. ಛಾವಣಿ ನೋಡುತ್ತಿದ್ದಂತೆ, ಮತ್ತೆ ಕೆನೆತ್ ನೆನಪು ಓಡಿ ಬಂತು. `ಇಂದೇಕೆ ಹೀಗೆ ಕಾಡುತ್ತಿದ್ದಾನೆ, ಅವನ ಆರೋಗ್ಯ ಚೆನ್ನಾಗಿದೆ ತಾನೆ? ಅವನಿಗೇನೂ ಹಾನಿಯಾಗಿಲ್ಲದಿರಲಿ' ಅಂದುಕೊಂಡಳು. ಮತ್ತೆ `ಹುಚ್ಚು ಮನಸ್ಸು, ಅವನಿಗೇನಾದರೆ ನನಗೇನು?' ಎಂದೂ ಕಂಡಿತು. ಯೋಚನೆಯನ್ನು ನೇತನ್ ಕಡೆ ಹರಿಸಿದಳು. ಅವನಿಗೆ ಇನ್ನೇನು ಮೂರು ತುಂಬುವುದರಲ್ಲಿದೆ. ಅವನ ಹುಟ್ಟು ಹಬ್ಬ ನಡೆಸುವ ಉತ್ಸಾಹ ಅವಳಲ್ಲಿಲ್ಲ. ಆದರೆ ಪ್ರಿ-ಸ್ಕೂಲಿಗಂತೂ ಹಾಕಬಹುದಲ್ಲ. ಅದಕ್ಕಾಗಿ ತಯಾರಿ ನಡೆಸಬೇಕು. `ಶೆರ್ಲಿಯನ್ನೇ ಒಂದು ಮಾತು ಕೇಳಬೇಕು. ಅವಳಾದರೋ ಇದೇ ಪ್ರದೇಶದಲ್ಲಿ ಇಪ್ಪತ್ಮೂರು ವರ್ಷಗಳಿಂದ ಇದ್ದವಳು, ಅವಳಿಗೆ ಎಲ್ಲ ಗೊತ್ತಿರುತ್ತದೆ', ಅಂದುಕೊಂಡಳು. ಯೋಚನೆಗಳ ನಡುವೆ ಯಾಂತ್ರಿಕವಾಗಿ ಫೇಷಿಯಲ್ ಮುಗಿಸಿ ಹೊರಬಂದಾಗ ಕೌಂಟರ್ ಪಕ್ಕದಲ್ಲಿ ಹೊಸ ಮುಖಗಳೆರಡು ಕಂಡವು. ಇಬ್ಬರೂ ಹೆಂಗಸರಂತೆ ಬಟ್ಟೆಬರೆ ಧರಿಸಿದ್ದ ಗಂಡಸರೆಂದು ಅವಳಿಗನ್ನಿಸಿತು. `ಕ್ರಾಸ್ ಡ್ರೆಸ್ಸರ್‍ಸ್. ಹೇಗಾದರೂ ಇರಲಿ, ತನಗೇನು' ಅಂದುಕೊಳ್ಳುತ್ತಲೇ ಹೊರ ಬಂದು ಮನೆ ಸೇರಿದಳು. ಶೆರ್ಲಿ ತನ್ನ ಮನೆಗೆ ಹೊರಡುವ ಮುನ್ನ ಸುತ್ತ ಮುತ್ತಲಿನ ಪ್ರಿ-ಸ್ಕೂಲುಗಳ ವಿವರಗಳನ್ನು ತಿಳಿಸಿ, ಯಾವ ಶಾಲೆಗೆ ನೇತನ್ ಸೇರಿದರೂ ಅವನ ಶಾಲಾ ಅವಧಿ ಮುಗಿದ ಮೇಲೆ ತಾನು ಅವನನ್ನು ಮನೆಗೆ ಕರೆತಂದು ಅನಿತಾ ಬರುವವರೆಗೆ ಮನೆಯಲ್ಲಿರುವುದಾಗಿಯೂ ಹೇಳಿದಳು. ಶೆರ್ಲಿ ಅನಿತಾಳ ಸ್ನೇಹಿತೆಯೇ ಆಗಿಬಿಟ್ಟಿದ್ದಳು. ಅದೆಷ್ಟೋ ಬಾರಿ ಅವರಿಬ್ಬರೂ ಜೊತೆಯಾಗಿ ವಾರಾಂತ್ಯಗಳನ್ನೂ ಕಳೆಯುತ್ತಿದ್ದರು. ಮಗನನ್ನು ಮಲಗಿಸಿ ಹಾಸಿಗೆ ಸೇರಿದಾಗ ಅನಿತಾ ಉದ್ವಿಗ್ನಳಾಗಿದ್ದು ಯಾಕೆಂದು ಆಕೆಗೇ ತಿಳಿಯಲಿಲ್ಲ.

ಮರುದಿನ ಶನಿವಾರ. ತನಗೊಂದು ಡೇಟ್ ಇದೆ ಎಂದು ಸುಮಾರು ನಲ್ವತ್ತರ ಶೆರ್ಲಿ ಹೇಳಿದ್ದೇ ತನ್ನ ದುಗುಡಕ್ಕೆ ಕಾರಣವೇ ಎಂದು ಚಡಪಡಿಸಿದಳು ಅನಿತಾ. ಅವಳಿಗಿನ್ನೂ ಇಪ್ಪತ್ತಾರು. ಇನ್ನೂ ಮದುವೆಯೂ ಆಗಿರದ ಈ ವಯಸ್ಸಿನ ಹೆಣ್ಣುಗಳೆಷ್ಟೋ ಈ ಪ್ರಪಂಚದಲ್ಲಿದ್ದರೂ ಸುಂದರಿಯಾದ ತಾನು, ಒಬ್ಬ ಮಗುವಿನ ತಾಯಿಯಾದುದೇ ಕಾರಣವಾಗಿ, ಹೀಗೆ ಒಂಟಿಯಾಗಿರಬೇಕೆ ಅನ್ನಿಸಿತ್ತು ಅವಳಿಗೆ. ಆದರೆ ಅಮೆರಿಕನ್ನರಂತೆ ಡೇಟಿಂಗ್ ಮಾಡಲು ಮನಸ್ಸಿಲ್ಲ. ತನಗಾಗಿ ಇನ್ನೊಬ್ಬ ಗೆಳೆಯನನ್ನು ತಾನೇ ಹುಡುಕಿಕೊಳ್ಳುವ ಕಡೆ ಅವಳ ಮನಸ್ಸಿನ್ನೂ ವಾಲಿರಲಿಲ್ಲ. ಅಂಥ ಸ್ಥಿತ-ಮನಸ್ಸು, ಇಂದೀಗ ಯಾಕೆ ವಿಲಿ-ವಿಲಿ ಒದ್ದಾಡುತ್ತಿದೆ ಎಂದು ತಿಳಿಯದೆ ಎದ್ದು ಹೋಗಿ ಟಿ.ವಿ. ಹಾಕಿಕೊಂಡಳು. ವಾರ್ತೆಗಳ ಬಳಿಕ ಜೇ-ಲಿನೋ ಷೋ ನೋಡುತ್ತಾ ನಡು ನಡುವೆ ಜಾಹೀರಾತುಗಳ ಸಮಯದಲ್ಲಿ ಅನ್ಯ ಮನಸ್ಕಳಾಗಿ ಚಾನೆಲ್ ಬದಲಿಸುತ್ತಾ ಕುಳಿತಿದ್ದಾಕೆಯ ಗಮನ ಯಾವುದೋ ಚಾನೆಲ್‍ನಲ್ಲಿದ್ದ ಒಂದು ವಾರ್ತೆಯತ್ತ ಹರಿಯಿತು. `ಪರ್ಸನಲೈಸ್ಡ್ ಡೇಟಿಂಗ್ ಸರ್ವಿಸಸ್' ಎಂಬ ಸಂಸ್ಥೆಯೊಂದು ಒಂಟಿಯಾಗಿರುವ ಗಂಡು-ಹೆಣ್ಣುಗಳ ವೈಯಕ್ತಿಕ ಆಸಕ್ತಿ-ಅಭಿರುಚಿ ಮುಂತಾದ ವಿಷಯಗಳನ್ನು ಸಂಗ್ರಹಿಸಿ ತಮಗೆ ಸೂಕ್ತ ಕಂಡಂತೆ ಜೊತೆ ಮಾಡಿ ಕೊಡುತ್ತಾರೆಂದೂ, ಹಾಗೆ ಅವರ ಮೂಲಕ ಜೊತೆಯಾದ ಜೋಡಿಗಳು ಈ ಒಂದೆರಡು ವರ್ಷಗಳಿಂದ ಸಂತೋಷದಿಂದ ಇದ್ದಾರೆಂದೂ ತಿಳಿಸಲಾಗಿತ್ತು. ಆದರೆ, ಸಂಸ್ಥೆಯು ತನ್ನ ವಿಷಯ ಸಂಗ್ರಹ ಹೇಗೆ ನಡೆಸುತ್ತದೆ ಎಂಬುದನ್ನು ತಿಳಿಸಲಿಲ್ಲ; ಎಲ್ಲೆಲ್ಲಿ, ಯಾವ ರೂಪದಲ್ಲಿ ತಮ್ಮ ಬೇಹುಗಾರರು ಇದ್ದಾರೆ ಎಂಬುದನ್ನು ಬಹಿರಂಗ ಪಡಿಸಲಿಲ್ಲ- ಎಂದು ವಾರ್ತೆಯಲ್ಲಿ ಬಿತ್ತರವಾದಾಗ ಅನಿತಾಳಿಗೆ ತಟ್ಟನೆ ಪಾರ್ಲರಿನಲ್ಲಿ ಕಂಡ ಆ ಇಬ್ಬರ ನೆನಪಾಯಿತು. `ಛೇ, ಇರಲಾರದು. ಎಲ್ಲಿಂದೆಲ್ಲಿಯ ಸಂಬಂಧ!' ಅಂದುಕೊಂಡು ಟಿ.ವಿ. ಆರಿಸಿ ಹೋಗಿ ಮಲಗಿದಳು.

ವಾರಾಂತ್ಯ ಹೇಗೋ ಕಳೆದು, ಸೋಮವಾರ ಆಫೀಸಿಗೆ ಬಂದವಳ ಮನಸ್ಸು ಇನ್ನೂ ಸ್ಥಿಮಿತದಲ್ಲಿರಲಿಲ್ಲ. ಏನೋ ದುಗುಡ, ಕಳವಳ, ಆತಂಕ. ಎಚ್.ಆರ್. ವಿಭಾಗದಿಂದ ಕ್ಯಾಥರೀನ್ ಕರೆ ನೀಡಿದಾಗ ಅವಳ ಮನಸ್ಸು ಕೆಲಸದತ್ತ ತುಸು ಗಮನ ಹರಿಸಿತು. ಹೊಸದಾಗಿ ಸೇರಿದ ವ್ಯಕ್ತಿಯೊಬ್ಬನ ಖಾತೆಗೆ ಸಂಬಂಧಿಸಿದಂತೆ ಕೆಲವು ವಿವರಗಳನ್ನು ಕ್ಯಾಥರೀನ್‍ಗೆ ಒದಗಿಸಿ ಕಾಫಿ ಮೆಷೀನ್ ಕಡೆ ನಡೆದಳು. ಅದೂ ಬೇಡವೆನ್ನಿಸಿ ತನ್ನ ಸ್ಥಾನಕ್ಕೆ ಬಂದು ಮನೆಗೆ ಫೋನ್ ಮಾಡಿದಳು. ಉತ್ತರಿಸಿದ ಶೆರ್ಲಿ, ಕೆನೆತ್ ಕರೆ ನೀಡಿದ್ದನೆಂದೂ, ಮಗನ ಹುಟ್ಟು ಹಬ್ಬಕ್ಕೆ ತಾನು ತನ್ನ ಹೊಸ ಪತ್ನಿ ಮತ್ತು ಪುತ್ರಿಯೊಂದಿಗೆ ಬರುವುದಾಗಿ ತಿಳಿಸಲು ಹೇಳಿದ್ದಾನೆಂದೂ ಅರಿತಾಗ ಮಗನನ್ನು ಕಳೆದುಕೊಂಡೇ ಬಿಟ್ಟೆನೆಂಬ ಭ್ರಾಂತಿ ಹುಟ್ಟಿತು. ಮನೆಗೆ ಸ್ವಲ್ಪ ಬೇಗ ಬರುವುದಾಗಿ ಶೆರ್ಲಿಗೆ ಹೇಳಿ ಫೋನ್ ಇಟ್ಟಳು. ಅವಳ ಜೀವನದಿಂದ ಆತ ಹೊರನಡೆದು ಎರಡೂವರೆ ವರ್ಷಗಳಾಗಿದ್ದವು. ನೇತನ್‍ನ ಮೊದಲ ಹುಟ್ಟುಹಬ್ಬಕ್ಕೆ ಉಡುಗೊರೆ ತಂದಿತ್ತಿದ್ದ. ಆಗಷ್ಟೇ ಹೊಸ ಮದುವೆಯಾಗಿದ್ದ. ಎರಡನೆಯ ವರ್ಷ ಇತ್ತ ಸುಳಿದಿರಲಿಲ್ಲ. ಶುಭಾಶಯವೂ ಇಲ್ಲ. ಅಷ್ಟರಲ್ಲಿ ಮಗಳು ಹುಟ್ಟಿದ್ದಳು. ಇದೀಗ ಇದ್ದಕ್ಕಿದ್ದಂತೆ ಮಗನ ಮೇಲೆ ಪ್ರೀತಿ ಹೇಗೆ ಬಂತು? ಯಾಕೆ? ಆಫೀಸಿನಲ್ಲಿ ಉಳಿದ ಸಮಯವನ್ನು ಇನ್ನಷ್ಟು ಗೊಂದಲದೊಳಗೇ ಕಳೆದಳು ಅನಿತಾ.

ಸಂಜೆ ಮನೆ ಸೇರಿದವಳೇ, ಕೆನೆತ್ ಹೇಳಿದುದನ್ನೆಲ್ಲ ಶೆರ್ಲಿಯಿಂದ ಮತ್ತೆ ಹೇಳಿಸಿಕೊಂಡು, ಅವಳ ಉತ್ತರವನ್ನೂ ಕೇಳಿ ತಿಳಿದುಕೊಂಡಳು. ನಿರಾಳವಾಗೊಂದು ಉಸಿರು ಬಿಟ್ಟು, "ಆದರೆ ಶೆರ್ಲಿ, ಆ ವೀಕೆಂಡ್ ನಾನು ನೇತನ್ ಜೊತೆ ಲಾಸ್ ಏಂಜಲಿಸ್ ಕಡೆ ಹೋಗೋಣವೆಂದು ಅಲ್ಲಿ ಡಿಸ್ನಿ ರೆಸಾರ್ಟಿನಲ್ಲಿ ಬುಕ್ ಮಾಡಿದ್ದೇನೆ. ಕೆನೆತ್‍ನನ್ನು ಭೇಟಿ ಮಾಡಲಾಗುವುದಿಲ್ಲ. ನಾನೇ ಅವನಿಗೆ ಫೋನ್ ಮಾಡಿ ತಿಳಿಸೋಣವೆಂದಿದ್ದೆ...." ಅಂದಳು. "ನಿನ್ನ ಪ್ಲಾನ್ ನಿನ್ನದು, ಅವನಿಗೆ ಹಾಗೇ ಹೇಳು. ತೊಂದರೆಯೇನಿಲ್ಲ." ಅಂದ ಶೆರ್ಲಿ, ಇದ್ದಕ್ಕಿದ್ದಂತೆ, ಇಷ್ಟು ದೊಡ್ಡ ನಗು ಹೊಮ್ಮಿಸುತ್ತಾ, ತಾನೂ ತನ್ನ ಹೊಸ ಗೆಳೆಯನೊಂದಿಗೆ ಅದೇ ವಾರಾಂತ್ಯ ಲಾಸ್ ಏಂಜಲಿಸ್‍ಗೆ ಹೋಗುವ ನಿರ್ಧಾರ ಮಾಡಿರುವುದಾಗಿ ತಿಳಿಸಿದಳು. ಅನಿತಾಳ ಆಶ್ಚರ್ಯ "ಇಷ್ಟು ಬೇಗ...?" ಪದಗಳಲ್ಲಿ ವ್ಯಕ್ತವಾಯಿತು. "ಹೌದು, ರಾಬರ್ಟ್‍ನ ತಂದೆ ತಾಯಿ ಅಲ್ಲಿದ್ದಾರೆ. ಅವನಿಗೆ ನಾನು ಬಹಳ ಇಷ್ಟವಾಗಿದ್ದೇನೆ, ನನಗೂ ಅವನು ಹಿಡಿಸಿದ್ದಾನೆ. ನಮ್ಮಿಬ್ಬರ ಬಹುತೇಕ ಆಸಕ್ತಿಗಳು ಹೊಂದುತ್ತವೆ. `ಪರ್ಸನಲೈಸ್ಡ್ ಡೇಟಿಂಗ್ ಸರ್ವಿಸಸ್' ಮೂಲಕ ನಮ್ಮಿಬ್ಬರ ಭೇಟಿಯಾಯಿತು. ವಾರಾಂತ್ಯವಿಡೀ ಜೊತೆಗಿದ್ದು, ನಮ್ಮ ಬಾಳಿನ ಹಾದಿ ಒಂದೇ ಎಂದು ನಿರ್ಧರಿಸಿಕೊಂಡೆವು. ನೀನೂ ಯಾಕೆ ಆ ಸಂಸ್ಥೆಯಲ್ಲಿ ನೋಂದಾಯಿಸಿಕೊಳ್ಳಬಾರದು? ನಿನಗೂ ಮನಸ್ಸಿಗೆ ಹಿಡಿಸುವಂಥ ಯಾರಾದರೂ ಸಿಗಬಹುದು, ನೋಡು" ಎಂದಳು. ಅದೇ ಸಂಸ್ಥೆಯ ಬಗ್ಗೆ ತಾನು ಶುಕ್ರವಾರದ ರಾತ್ರಿ ಯಾವುದೋ ಚಾನೆಲ್‍ನಲ್ಲಿ ಕಂಡಿದ್ದಾಗಿ ಅನಿತಾ ಹೇಳಿದಾಗ ಶೆರ್ಲಿ ಅತಿ ಸಂತಸ ತೋರಿದಳು. `ಯೋಚಿಸುತ್ತೇನೆ' ಎಂದಂದು ಶೆರ್ಲಿಯನ್ನು ಬೀಳ್ಕೊಟ್ಟು, ನೇತನ್ ಜೊತೆ ಅಡುಗೆ ಮನೆಗೆ ಬಂದಳು ಅನಿತಾ.

ಮಗನ ತೊದಲುಗಳ ನಡುವೆ ಅವನ ದಿನಚರಿಯ ವಿವರಣೆ ಕೇಳಿ, ಅವನಿಗೆ ಬೇಯಿಸಿ ಜಜ್ಜಿದ ಅರ್ಧ ಆಲೂಗಡ್ಡೆ, ನಾಲ್ಕು ಅರೆಬೆಂದ ಬೀನ್ಸ್, ಒಂದು ರೋಟಿ, ಸ್ವಲ್ಪ ಪಲ್ಯ, ಜೊತೆಗೆ ತುಸು ಮೊಸರನ್ನ ಕಲಸಿಟ್ಟು, ತಾನೂ ತಟ್ಟೆಯಲ್ಲಿ ರೋಟಿ-ಪಲ್ಯಗಳನ್ನೂ, ಅರೆಬೆಂದ ಬೀನ್ಸ್ ಮತ್ತು ಮೊಸರನ್ನವನ್ನೂ ಬಡಿಸಿಕೊಂಡು ಊಟದ ಟೇಬಲ್‍ಗೆ ಬಂದಳು. ನೇತನ್ ಆಗಲೇ ಊಟ ಶುರುಮಾಡಿದ್ದ. ಸಾಮಾನ್ಯ ಟೆರಿಬಲ್ ಟಾಡ್ಲರ್ ಆಗಿಲ್ಲದ ತನ್ನ ಕಂದನ ಸೌಮ್ಯ ನಡವಳಿಕೆ ತನ್ನ ಹಾಗೂ ಶೆರ್ಲಿಯ ಮಮತೆಯ ಫಲ ಎಂಬ ಅರಿವಾಗಿ ಶೆರ್ಲಿಯ ಬಗ್ಗೆ ಇನ್ನಷ್ಟು ಗೌರವ ಮೂಡಿತು. ಪರದೇಶೀಯಳಾದರೂ ತನ್ನ ಬಗ್ಗೆ ಆಕೆ ತೋರುತ್ತಿರುವ ಪ್ರೀತಿಗೆ ಹೃದಯ ಋಣಿಯಾಯಿತು. ಅವಳು ಹೇಳಿದಂತೆ, ಆ ಡೇಟಿಂಗ್ ಸಂಸ್ಥೆಯಲ್ಲಿ ತನ್ನ ಹೆಸರು ನೋಂದಾಯಿಸಿಕೊಳ್ಳುವ ಬಗ್ಗೆ ಯೋಚನೆ ಗಾಢವಾಯಿತು. ಏನೇನೋ ಹರಟುತ್ತಾ ಊಟ ಮುಗಿಸಿದ ಮಗ, `ಡೆಸರ್ಟ್' ಎಂದು ಒಂದು ಸೇಬನ್ನು ತಂದಾಗ ಅದನ್ನೂ ಹೆಚ್ಚಿ ಕೊಟ್ಟಳು. ಶೆರ್ಲಿ ತಂದಿದ್ದೆಂದು ಖುಷಿಪಟ್ಟು ತಿಂದ. ನೇತನ್‍ಗಾಗಿ ಆಕೆ ಒಮ್ಮೊಮ್ಮೆ ಹಣ್ಣನ್ನೂ, ಆಟಿಕೆಗಳನ್ನೂ ತರುವುದಿದೆ. ಇವಳು ಆಕ್ಷೇಪಿಸಿದಾಗ, "ನನಗಂತೂ ಸ್ವಂತ ಮಕ್ಕಳಿಲ್ಲ. ಇನ್ನು ಆಗುತ್ತೋ ಇಲ್ಲವೋ ಗೊತ್ತಿಲ್ಲ. ನಿನ್ನ ಮಗ ನನ್ನ ಮಗನಂತೆ. ಅದಕ್ಕಾಗಿ ನೀನು ಏನೂ ಹೇಳಕೂಡದು. `ಮಕ್ಕಳು ದೇವರಂತೆ' ಅನ್ನುತ್ತೀರಲ್ಲ ನೀವು; ದೇವರಿಗೇ ಕೊಟ್ಟೆ ಅಂದುಕೋ" ಎಂದುತ್ತರಿಸಿ ಇವಳ ಬಾಯ್ಮುಚ್ಚಿಸಿದ್ದಳು. ಇಂಥ ಚತುರೆ ಸ್ನೇಹಿತೆಯಾದದ್ದು ತನ್ನ ಭಾಗ್ಯ ಎಂದುಕೊಂಡು ನೇತನ್‍ನನ್ನು ಮಲಗಿಸಿದಳು ಅನಿತಾ.

ಕೆನೆತ್‍ಗೆ ಫೋನ್ ಮಾಡಿ ಮಗನೊಂದಿಗೆ ತನ್ನ ಪ್ರವಾಸದ ವಿಷಯ ತಿಳಿಸಿದಾಗ, ಅದನ್ನು ನಿರಾಳವಾಗಿಯೇ ಸ್ವೀಕರಿಸಿದ ಕೆನೆತ್, "ನೀನು ಇನ್ನೂ ಯಾರನ್ನೂ ನೋಡುತ್ತಿಲ್ಲವೆ?" ಎಂದ. ಅದರ ಅರ್ಥ ಹೊಳೆಯಲು ಒಂದು ಕ್ಷಣ ಬೇಕಾಯಿತು ಅನಿತಾಳಿಗೆ. ಮತ್ತೆ, ನೇರವಾಗಿ ಇಲ್ಲ ಅಂದಳು. "ಯಾಕೆ?" ಪ್ರಶ್ನೆಗೆ, "ಬೇಕೆನಿಸಿಲ್ಲ" ಅಂದಳು. "ಮುಂದಿನ ವೀಕೆಂಡ್ ನನ್ನೊಂದಿಗೆ ಕಳೆಯುತ್ತೀಯಾ? ನೀನೊಬ್ಬಳೇ, ನೇತನ್ ಬೇಡ" ಅಂದ. ಬೆಣ್ಣೆ ಸವರಿದ ಕತ್ತಿ ಅಂದುಕೊಂಡಳು, "ಆಗೋಲ್ಲ, ಬೇರೆ ಕಮಿಟ್‍ಮೆಂಟ್ ಇದೆ" ಅಂದಳು. ಮಾತು ಮುಂದುವರಿಸಲಾರದೆ ಬೈ ಹೇಳಿದಳು. ಮೈಯೆಲ್ಲ ಉರಿಯುತ್ತಿತ್ತು. `ಅವನ ತೊತ್ತು ಅಂದುಕೊಂಡಿದ್ದಾನೇನು ನನ್ನ, ಅವನು ಕರೆದಾಗಲೆಲ್ಲ ಜೊತೆಗೆ ಹೋಗಲು. ಅವನ ಹೊಸ ರಾಣಿಗೇನಾಗಿದೆ? ಅವಳೊಂದಿಗೂ ಹೊಂದಿಕೆಯಾಗಿಲ್ಲವೇನೊ! ಅವಸರದಲ್ಲಿ ಅವಳನ್ನು ಕಟ್ಟಿಕೊಂಡ, ಈಗ ತಿಣುಕುತ್ತಿದ್ದಾನೆ. ನಾನೇಕೆ ಅದಕ್ಕೆ ತಲೆ ಕೊಡಲಿ?...." ಯೋಚನೆಗಳ ನಡುವೆ ನಿದ್ದೆ ನುಸುಳಿ ಅವಳನ್ನು ತಬ್ಬಿತ್ತು. ಮುಂಜಾನೆ ಎದ್ದಾಗ ಯಾವುದೋ ನಿರ್ಧಾರಕ್ಕೆ ಬಂದವಳಂತೆ ಶೆರ್ಲಿಯ ಬರವನ್ನೇ ಕಾಯುತ್ತಿದ್ದವಳು, ಅವಳಿಂದ ಡೇಟಿಂಗ್ ಸಂಸ್ಥೆಯ ಬಗ್ಗೆ ತಿಳಿದುಕೊಂಡಳು. ಗುಡ್ ಲಕ್ ಎಂದು ಕಣ್ಣು ಮಿಟುಕಿಸಿ ಬೀಳ್ಕೊಟ್ಟಳು ಶೆರ್ಲಿ.

ಮುಂದಿನ ದಿನಗಳಲ್ಲಿ ಆಫೀಸಿನಲ್ಲಿ ಗಡಿಬಿಡಿಯ ವಾತಾವರಣ ಹುಟ್ಟಿಕೊಂಡು, ತನ್ನ ಅಸ್ಥಿರತೆಯ ಬಗ್ಗೆ ಯೋಚಿಸಲೂ ಬಿಡುವಿರದಷ್ಟು ಕೆಲಸ ಅನಿತಾಳ ಮೇಲೆ ಬಿತ್ತು. ಅದೇ ಗುಂಗಿನಲ್ಲಿ ತಾಯಿ-ಮಗ ಲಾಸ್ ಏಂಜಲಿಸ್‍ನ ಡಿಸ್ನಿ ರೆಸಾರ್ಟ್‍ಗೆ ಹೋಗಿ ನೇತನ್‍ನ ಹುಟ್ಟುಹಬ್ಬ ಖುಷಿಯಲ್ಲಿ ಕಳೆದರು. ಅಲ್ಲಿಂದ ಹಿಂತಿರುಗಿದಾಗ ಅವಳ ಫೋನಿನ ಆನ್ಸರಿಂಗ್ ಮೆಷೀನ್‍ನಲ್ಲಿ ಇದ್ದ ನಾಲ್ಕು ಸಂದೇಶಗಳಲ್ಲಿ ಒಂದು ಕೆನೆತ್ ನೇತನ್‍ಗೆ ಶುಭಾಶಯ ಕೋರಿದ್ದಾಗಿತ್ತು. ಇನ್ನೊಂದು ಶೆರ್ಲಿಯ ಶುಭಾಶಯ. ಮೂರನೆಯದು ಡೇಟಿಂಗ್ ಸಂಸ್ಥೆಯದಾಗಿತ್ತು. ಸ್ಯಾಮ್ ಎಂಬವನೊಬ್ಬ ಅವಳನ್ನು ಭೇಟಿಯಾಗಲು ಇಚ್ಛಿಸಿರುವುದಾಗಿಯೂ, ಆತ ಫೋನ್ ಮಾಡಬಹುದೆಂದೂ ತಿಳಿಸಿದ್ದರು. ನಾಲ್ಕನೆಯದು ಸ್ಯಾಮ್‍ನದಾಗಿತ್ತು. ಅನಿತಾಳಲ್ಲಿ ಮತ್ತೊಮ್ಮೆ ಅಸ್ಥಿರತೆ ಮನೆ ಮಾಡಿತು. ಈತ ಹೇಗೋ ಏನೋ? ಟಿಪಿಕಲ್ ಅಮೆರಿಕನ್ ಆಗಿದ್ದರೆ? ತನ್ನನ್ನು ಮಗನ ಹೊರತಾಗಿ ಬಯಸುವವನಾಗಿದ್ದರೆ? ಒಳ್ಳೆಯ ಮನಸ್ಸಿನ, ತನ್ನನ್ನೂ ನೇತನ್‍ನನ್ನೂ ಮುಕ್ತವಾಗಿ ಸ್ವೀಕರಿಸುವ ಭಾರತೀಯನೊಬ್ಬ ಸಿಗಲಾರನೆ? ಅಮ್ಮನ ನೆನಪು ಕಾಡಿತು. ಗೊಂದಲದ ಗೋರಿಯೊಳಗೆ ಹುದುಗಿ ಹೋದಳು.

ಮರುದಿನ ಶೆರ್ಲಿ ಬರುವುದನ್ನೇ ಕಾದಳು. ಗೆಳತಿಯೊಂದಿಗೆ ಎಲ್ಲವನ್ನೂ ಹೇಳಿಕೊಂಡು ಒಂದು ನಿಟ್ಟುಸಿರು ಬಿಟ್ಟಾಗ ಶೆರ್ಲಿ ಮುಗುಳ್ನಕ್ಕಳು. "ನೀನು ಸುಮ್ಮನೇ ಹೆದರುತ್ತಿದ್ದೀ. ನೋಂದಾಯಿಸಿಕೊಳ್ಳುವಾಗ ನಿನ್ನ ವಿವರಗಳನ್ನೆಲ್ಲ ಸರಿಯಾಗಿಯೇ ತುಂಬಿದ್ದೀಯಲ್ಲ. ಮಗ ಇರುವುದನ್ನೂ ಅವನೇ ನಿನ್ನ ಜೀವ ಅನ್ನುವುದನ್ನೂ ಬರೆದಿದ್ದೀಯೆಂದು ನೀನೇ ನನಗೆ ಹೇಳಿದ್ದು ಮರೆತಿಯಾ? ಈ ಸಂಸ್ಥೆಯವರು ಅದನ್ನೆಲ್ಲ ಗಮನದಲ್ಲಿ ಇರಿಸಿಕೊಂಡಿರುತ್ತಾರೆ. ಹಾಗೆಲ್ಲ ಸಣ್ಣತನದ ವ್ಯಕ್ತಿಗಳೊಂದಿಗೆ ವ್ಯವಹರಿಸುವುದಿಲ್ಲ. ಸ್ಯಾಮ್ ನಿನ್ನನ್ನು ಭೇಟಿ ಮಾಡಲು ಬಯಸಿದ್ದಾನಾದರೆ, ನೀನು ಅವನನ್ನು ನೋಡುವುದೇ ಒಳಿತು. ಆದರೆ ಮುಕ್ತ ಮನಸ್ಸಿನಿಂದ ಹೋಗು. ಸಂಶಯದ ಮನಸ್ಸಿಗೆ ಎಲ್ಲವೂ ಮಸುಕಾಗಿಯೇ ಕಾಣುತ್ತದೆ. `ಪರ್ಸೆಪ್ಷನ್ ಈಸ್ ಎವೆರಿಥಿಂಗ್' ಗೊತ್ತಿದೆಯಲ್ಲ. ಹಾಗೇನೇ, `ಫಸ್ಟ್ ಇಂಪ್ರೆಶನ್ ಈಸ್ ದಿ ಬೆಸ್ಟ್ ಇಂಪ್ರೆಶನ್' ಎಲ್ಲ ಸರಿ ಹೋಗುತ್ತದೆ, ಧೈರ್ಯವಾಗಿ ಹೋಗು. ಒಂದು ವೀಕೆಂಡ್ ಫಿಕ್ಸ್ ಮಾಡು, ನೇತನ್ ಜೊತೆ ನಾನಿರುತ್ತೇನೆ" ಅಂದಳು.

ಸ್ಯಾಮ್ ಮುಂದಿನ ವಾರಾಂತ್ಯವೇ ಭೇಟಿಯಾಗಲು ಸಾಧ್ಯವೇ ಎಂದು ಕೇಳಿದ್ದನಾದ್ದರಿಂದ ಆತನಿಗೆ ಬೇಗ ಉತ್ತರಿಸಬೇಕಾಗಿತ್ತು. ಅಳೆದೂ ಸುರಿದೂ ಯೋಚಿಸಿ, ಕೊನೆಗೆ ಬುಧವಾರದಂದು ಆತನಿಗೆ ಕರೆಕೊಟ್ಟಳು. ಆತ ಫೋನಿಗೆ ಸಿಗದೆ, ತನ್ನ ಮನೆಗೇ ಆತ ಬರುವಂತೆ ಆಹ್ವಾನಿಸಿ, ತನ್ನ ವಿಳಾಸ ತಿಳಿಸಿ ಸಂದೇಶವಿಟ್ಟಳು. ಮನೆಯಲ್ಲಿ ಶೆರ್ಲಿ ಮತ್ತು ನೇತನ್ ಇರುತ್ತಾರೆ, ಆತನಿಗೆ ನೈಜತೆಯ ಅರಿವಾಗಲಿ ಎಂಬ ಉದ್ದೇಶ ಅವಳದು. ಅಮೆರಿಕನ್ನರ ದೃಷ್ಟಿಯಲ್ಲಿ ಮೊದಲ ಭೇಟಿಯನ್ನು ಮನೆಯಲ್ಲಿ ಏರ್ಪಡಿಸುವುದು ಒಳ್ಳೆಯ ಅಭ್ಯಾಸವಲ್ಲದಿದ್ದರೂ ನೇರ ವ್ಯವಹಾರ ಅವಳ ಕ್ರಮ. ಭಾನುವಾರ ಅವನನ್ನು ಬರಹೇಳಿದ್ದಳು. ಹಿಂದಿನ ಶನಿವಾರ ಬ್ಯೂಟಿ ಪಾರ್ಲರಿಗೆ ಹೋಗಿ ಬಂದಳು. ಇಂದೂ ಕೂಡ ಕೌಂಟರಿನ ಪಕ್ಕದಲ್ಲಿ `ಕ್ರಾಸ್ ಡ್ರೆಸ್ಸರ್'ಗಳಂತೆ ಕಾಣುವ ಅದೇ ಇಬ್ಬರು ಹೆಂಗಸರಿದ್ದು, ಅವರಿಬ್ಬರ ಕಡೆಗೂ ಒಂದೊಂದು ಮುಗುಳ್ನಗು ಬೀರಿ, ಹಲ್ಲೋ ಅಂದಳು. ಶೆರ್ಲಿಯನ್ನು ಆ ರಾತ್ರಿ ತನ್ನ ಮನೆಯಲ್ಲಿ ಇರಲು ಕೇಳಿಕೊಂಡರೂ ಆಕೆ ರಾಬರ್ಟ್ ಜೊತೆಗೆ ಸಿನೆಮಾ ನೋಡಲು ಒಪ್ಪಿಕೊಂಡಿದ್ದಾಗಿ, ಹೊರಟು ಹೋದಳು. ಅಂದಿನ ರಾತ್ರಿ ಎಂದಿಗಿಂತ ದೀರ್ಘವೆನ್ನಿಸಿತು ಅವಳಿಗೆ.

ಮುಂಜಾನೆ ಎದ್ದು ನೇತನ್‍ಗೆ ಸ್ನಾನ ಮಾಡಿಸಿ ಮನೆಗೆ ಗೆಸ್ಟ್ ಬರುತ್ತಾರೆಂದೂ, ಸಭ್ಯ ನಡತೆಯಿಂದ ಇರಬೇಕೆಂದೂ ಮಗುವಿಗೆ ತಿಳಿಹೇಳಿ, ಅವನಿಗೆ ಇಡ್ಲಿ ಮಾಡಿಕೊಟ್ಟಳು. ಶೆರ್ಲಿ ಮತ್ತು ತನಗಾಗಿ ಸಾಂಬಾರ್ ತಯಾರಿಸಿ, ಮಧ್ಯಾಹ್ನದ ಊಟಕ್ಕೂ ತರಕಾರಿ ಹೆಚ್ಚಲು ತೊಡಗಿದಳು. ಒಳಗಿನ ಗೊಂದಲ, ಗಡಿಬಿಡಿ ನಡತೆಯಲ್ಲೂ ಕಾಣುತ್ತಿತ್ತು. ಪಾತ್ರೆಗಳ ಮೇಲೆ ಸಿಡುಕಿದಳು. ಬಾಗಿಲನ್ನು ಅಪ್ಪಳಿಸಿದಳು, ತರಕಾರಿಯನ್ನು ಕೌಂಟರ್ ಮೇಲೆ ಕುಕ್ಕಿದಳು. ನೇತನ್ ಭಯಪಟ್ಟು, "ಯಾಕೆ ಮಮ್ಮೀ, ನಾನು ಮಿಸ್-ಬಿಹೇವ್ ಮಾಡಿದೆನಾ? ನಿನಗೆ ಮೈ ಹುಶಾರಿಲ್ಲವಾ? ಮತ್ಯಾಕೆ ಗೆಸ್ಟ್ ಕರೆದೆ? ಇರಲಿ ಬಿಡು, ಶೆರ್ಲಿ ಬಂದ ಮೇಲೆ ನಾನು ಮತ್ತು ಅವಳು ಲಂಚ್ ರೆಡಿ ಮಾಡ್ತೇವೆ, ನೀನು ಹೋಗು ಮಲಗು, ಆಯ್ತಾ?" ಎಂದೆಲ್ಲ ಮುದ್ದುಗರೆದಾಗ ಅವನನ್ನು ತಬ್ಬಿಕೊಂಡು ಸೋಫಾದಲ್ಲಿ ಕುಳಿತು ಅತ್ತಳು. ನೇತನ್ ಪೆಚ್ಚಾಗಿ ತೆಪ್ಪಗೆ ಕುಳಿತು ಬಿಟ್ಟ. ಅಮ್ಮನ ನೋವು, ತುಮುಲ ಅವನ ಅರ್ಥಕ್ಕೆ ಸಿಗಲಿಲ್ಲ. ಕಟ್ಟಿಕೊಂಡ ದುಗುಡದ ಕಟ್ಟೆ ಹರಿದಾಗ ಅನಿತಾಳಿಗೆ ಹಗುರವೆನಿಸಿ, ಮತ್ತೆ ಅಡುಗೆ ಮನೆಗೆ ನಡೆದು, ಊಟದ ತಯಾರಿ ಮುಗಿಸಿದಳು. ಹೊರಗೆ ಕರೆಗಂಟೆ ಸದ್ದಾಯಿತು.

ಮುಖದಲ್ಲಿ ರಂಗು ಚಿಮ್ಮಿಸುತ್ತಾ ಬಂದ ಶೆರ್ಲಿ, ರಾಬರ್ಟ್ ತನಗೆ ಪ್ರಪೋಸ್ ಮಾಡಿರುವುದಾಗಿ ಹೇಳಿ, "ಅನಿತಾ, ನನಗೆಷ್ಟು ಸಂತೋಷವಾಗಿದೆ ಗೊತ್ತೇ? ಈ ದಿನಕ್ಕಾಗಿಯೇ ಕಾಯುತ್ತಿದ್ದೆ. ಇನ್ನಾರು ತಿಂಗಳಲ್ಲಿ ಮದುವೆ ಆಗುತ್ತೇವೆ. ನೀನೂ ಬೇಗ ಸೆಟ್ ಮಾಡಿಕೋ. ಇಬ್ಬರೂ ಜೊತೆಗೇ ಮದುವೆಯಾಗೋಣ, ರಾಬರ್ಟ್ ಖಂಡಿತಾ ಬೇಡವೆನ್ನಲಾರ, ಅವನು ತುಂಬಾ ಒಳ್ಳೆಯವನು. ನೀನು ಅವನನ್ನು ಮೀಟ್ ಮಾಡಲೇ ಬೇಕು, ಒಮ್ಮೆ ಕರೆತರುತ್ತೇನೆ. ಈಗ ನೀನು ರೆಡಿಯಾಗು, ನಿನ್ನ ಮೇಕಪ್ ಸರಿಯಿಲ್ಲ. ಬಾ ಇಲ್ಲಿ, ನಾನು ಸರಿ ಮಾಡುತ್ತೇನೆ" ಎಂದಳು. ಅವಳ ನಡಿಗೆಯಲ್ಲಿ ಹರ್ಷದ ತಾಳವಿತ್ತು. ಆತಂಕದ ಭಾರದಲ್ಲಿ ನಲುಗುತ್ತಿದ್ದ ಅನಿತಳಿಗೆ ಈ ಸಂತಸ ತುಸು ಚೈತನ್ಯ ನೀಡಿತು. ಅಮ್ಮನ ವಿಚಿತ್ರ ನಡವಳಿಕೆಯಿಂದ ಬೆಚ್ಚಿದ್ದ ನೇತನ್ ಶೆರ್ಲಿಗೆ ಅಂಟಿಕೊಂಡ. ಅವಳನ್ನು ಒಂದು ಅಮೂಲ್ಯ ವಸ್ತುವೆಂಬಂತೆ ಕೈಯಳತೆಯಲ್ಲಿ ಇರುವಂತೆ ನೋಡಿಕೊಂಡ. ಅವನ ಪ್ರೀತಿಗೆ ಕರಗಿದ ಶೆರ್ಲಿ, ಅವನನ್ನು ತಬ್ಬಿಕೊಂಡು, ತಾನು ಮದುವೆಯಾಗಿ ಇದೇ ಊರಲ್ಲಿ ಇರಲಾರದೇ ಹೋದರೆ ಈ ಕಂದನನ್ನು ಬಹಳ ಮಿಸ್ ಮಾಡಿಕೊಳ್ಳುವುದಾಗಿ ಸಂಕಟ ಪಟ್ಟಳು. ರಾಬರ್ಟ್ ಒಂದು ಕೆಲಸದ ಮೇಲಷ್ಟೇ ಈ ಊರಲ್ಲಿ ಇದ್ದಾನೆಂದೂ, ಇಲ್ಲಿನ ಪ್ರಾಜೆಕ್ಟ್ ಮುಗಿದಾಗ ಬೇರೆಡೆಗೆ ಹೋಗಬೇಕಾಗಿದೆಯೆಂದೂ ಅನಿತಳಿಗೆ ತಿಳಿಸಿದಳು. ಗೆಳತಿಯರು ಹರಟುತ್ತಾ ತಿಂಡಿ ಮುಗಿಸಿದರು.

ಒಂಭತ್ತು ಗಂಟೆಗೆ ಸರಿಯಾಗಿ ಬಾಗಿಲು ಟಕಟಕಿಸಿದಾಗ ನಡುಗುವ ಕೈಗಳಿಂದಲೇ ಬಾಗಿಲು ತೆರೆದಳು, ದಂಗಾದಳು. ಪಾರ್ಲರಿನಲ್ಲಿ ಕಂಡಿದ್ದ ಕ್ರಾಸ್ ಡ್ರೆಸ್ಸರ್‌ನಂತಿರುವ ಒಬ್ಬಳ ಜೊತೆಗೆ ಒಬ್ಬ ಭಾರತೀಯ ಯುವಕ. "ಹಲ್ಲೋ, ನನ್ನ ಹೆಸರು ಎಲಿಝಬೆತ್. ನಾವು ಭೇಟಿಯಾಗಿದ್ದೇವಲ್ಲ. ನಮ್ಮ ಅಪಾಯಿಂಟ್‍ಮೆಂಟ್ ಟೈಂ ತಾಳೆಯಾಗಿ ಎರಡು ಬಾರಿ ನಿಮ್ಮನ್ನು ಪಾರ್ಲರಿನಲ್ಲಿ ಕಂಡಿದ್ದೆ, ಅಲ್ಲವೆ? ನನ್ನಕ್ಕ ಮತ್ತು ನಾನು ಕಳೆದ ನಾಲ್ಕು ತಿಂಗಳಿಂದ ಈ ಊರಲ್ಲಿದ್ದೇವೆ. ಅದೇ ಪಾರ್ಲರಿಗೆ ಬರುತ್ತೇವೆ. ಬೈ ದಿ ವೇ, ಇವರು ಸ್ಯಾಮ್, ಸಂಪತ್ ರಾಮ್‌ನಾಥ್. ನಿಮಗಿವರನ್ನು ಪರಿಚಯಿಸುವುದು ನಮ್ಮ `ಪರ್ಸನಲೈಸ್ಡ್ ಡೇಟಿಂಗ್ ಸರ್ವಿಸಸ್' ಸಂಸ್ಥೆಯ ಕರ್ತವ್ಯ, ಅದಕ್ಕಾಗಿ ಬಂದೆ. ನಿಮ್ಮ ಬಗ್ಗೆ ನೀವು ಒದಗಿಸಿದ ಮಾಹಿತಿಯನ್ನು ಇವರಿಗೆ ತಿಳಿಸಿದ್ದೇವೆ. ಇನ್ನು ನಿಮ್ಮಿಬ್ಬರಿಗೆ ಬಿಟ್ಟಿದ್ದು. ಒಂದೇ ಕೋರಿಕೆ ಏನೆಂದರೆ, ನಿಮ್ಮ ನಿರ್ಧಾರವನ್ನು ನಮ್ಮ ಸಂಸ್ಥೆಗೆ ತಿಳಿಸಿ, ಅದರಿಂದ ನಮಗೆ ತುಂಬಾ ಅನುಕೂಲವಿದೆ. ನಾನಿನ್ನು ಬರುತ್ತೇನೆ, ಬೈ" ಎಂದಂದು ಹೊರಟೇ ಬಿಟ್ಟಳು. ಔಪಚಾರಿಕವಾಗಿಯೂ ಮನೆಯೊಳಗೆ ಬಾ ಎಂದು ಕರೆಯಲಾಗದಷ್ಟು ದಂಗಾಗಿದ್ದ ಅನಿತಾ, ಅವಳು ಹೋದತ್ತಲೇ ನೋಡುತ್ತಿದ್ದಳು. "ನಾನು ಒಳಗೆ ಬರಬಹುದೇ?" ಎಂಬ ಮೃದು ಮಾತಿಗೆ ಎಚ್ಚತ್ತು, ಮುಗುಳ್ನಕ್ಕು, ಸರಿದು ನಿಂತು, ಸಂಪತ್ ರಾಮನಾಥನನ್ನು ಮನೆಯೊಳಗೆ ಬರಮಾಡಿಕೊಂಡಳು.
(ಫೆಬ್ರವರಿ-೨೦೦೩)
(ಈ ಕಥೆ ವಿಜಯಕರ್ನಾಟಕ ಸಾಪ್ತಾಹಿಕದಲ್ಲೂ ದಟ್ಸ್ ಕನ್ನಡ ಅಂತರ್ಜಾಲ ದೈನಿಕದಲ್ಲೂ ೨೦೦೩ ಆಗಸ್ಟ್ ತಿಂಗಳಲ್ಲಿ ಪ್ರಕಟವಾಗಿದೆ.)

Sunday 10 May 2009

ಕಂದ ಮನೆಯಲಿಲ್ಲ...

ಕಂದನಿದ್ದನಿವ ಪುಟ್ಟ ಕೂಸು, ಒಂದು ದಶಕ ಹಿಂದೆ
ಬೆಳೆದು ನಿಂತಿದೆ ಮಾಡಿನೆತ್ತರ, ತೆಂಗು ಮನೆಯ ಮುಂದೆ

ಅಪ್ಪನೂಟದಲಿ ತುತ್ತು ಕದ್ದು ಅಮ್ಮನೆಂದು ದೂರಿ
ತಂಗಿ ಜಡೆಯೆಳೆದು ಕಾಡಿ ಅಳಿಸಿ, ಅಡಗಿಕೊಳ್ಳುವ ಮರಿ

ಕಳೆದು ಬೆಳೆದು ಹನ್ನೊಂದು ವರುಷ, ನಿಂತ ಭುಜದ ಮಟ್ಟ
ಗೆಳೆಯ ಬಳಗದಲಿ ಚೆಲುವ, ಜಾಣ, ನಮಗೆ ಅವನು ಪುಟ್ಟ

ನಾಲ್ಕು ದಿನಗಳ ಕಲಿಕೆಯಾಟಕೆ ಹೊರಟು ನಿಂತನಾತ
ಬಟ್ಟೆ ಜೋಡಿಸಿ, ಚೀಲವೇರಿಸಿ, ಆಚೆಗೊಂದೆ ಜಿಗಿತ

ಆರು ಸಾವಿರಕು ಮೀರಿ ನಿಮಿಷಗಳ ಕಾಲವಗಲಿ ಇದ್ದ
ಎಲ್ಲೋ ಕಾಡಿನೊಳು ಸಣ್ಣ ಶಿಬಿರ, ಸಹಜ ಕಲಿಕೆ ಸಿದ್ಧ

ತಂಗಿ ತಲೆಯಲ್ಲಿ ದುಂಬಿ ಮೊರೆತ, ಭಾವದ ಜಂಜಾಟ
ಸಣ್ಣ ಕಾರಣಕು ಸಿಡುಕು-ದುಡುಕು, ಅಣ್ಣನಿರದ ಕೊರೆತ

ಊಟ-ತಿಂಡಿಗಳ ಗಮನವಿಲ್ಲ, ಆಟ ರುಚಿಸಲಿಲ್ಲ
ಬೆಳಗು-ಬೈಗಿನಲಿ ಏನೋ ಶೂನ್ಯ, ಜೊತೆಗೆ ಅಣ್ಣನಿಲ್ಲ

ಹೇಗೋ ಕಳೆದೆವು ನಾಲ್ಕು ಹಗಲು ಮತ್ತೆ ನಾಲ್ಕು ರಾತ್ರೆ
ಐದನೇ ದಿನ ಅವನ ಕಾಣುವೆವು ಎಂದೇ ಜೀವ ಜಾತ್ರೆ

ಶಾಲೆಯಂಗಳದಿ ಅವನನಂದು ಬಸ್ಸು ಹತ್ತಿಸಿದ್ದೆ
ಇಂದು ಬಸ್ಸಿಳಿದು ಕಾರನೇರಿ ನುಡಿದ- "ನಂಗೆ ನಿದ್ದೆ!"

ಜಗಳವಾಡದೆ ಸೊರಗಿದ ತಂಗಿಗೆ ಸೊಟ್ಟ ಮುಖದ ಅಣಕ
ಹೆತ್ತ ಹೃದಯಗಳ ಕಾತರಕ್ಕೆ ಚೇತವಿತ್ತು ನಕ್ಕ.
(೦೬-ಎಪ್ರಿಲ್-೨೦೦೨)
(ಪ್ರಾಥಮಿಕ ಶಾಲೆಗಳಿಂದ ಐದನೇ ತರಗತಿಯ ವಿದ್ಯಾರ್ಥಿಗಳಿಗಾಗಿಯೇ ಆಯೋಜಿಸಲ್ಪಟ್ಟ ಶಿಬಿರವೊಂದಕ್ಕೆ ಮಗ ಹೋಗಿಬಂದ ಸಂದರ್ಭದಲ್ಲಿ)

Tuesday 28 April 2009

ಶಿವಾನಿ

ರಸ್ತೆಯ ಕೆಂಪುದೀಪಕ್ಕೆ ಶರಣಾಗಿ ನಿಂತಿದ್ದ ಶಿವಾನಿಗೆ ತನ್ನ ಕಣ್ಣುಗಳಿಂದ ಚಿಮ್ಮುವ ಹನಿಗಳನ್ನು ತಡೆಯುವ ಮನಸ್ಸು ಇರಲಿಲ್ಲ. ಎಲ್ಲೋ ಕಳೆದು ಹೋದಂತಿದ್ದ ಆಕೆಯನ್ನು ಹಿಂದಿನ ಕಾರಿನ ಹಾರ್ನ್ ಎಚ್ಚರಿಸಿ ವಾಸ್ತವಕ್ಕೆ ಎಳೆತಂದಿತು. ಕೆಂಪು ಕಳೆದು ಹಸಿರಾಗಿದ್ದು ಕಂಡ ಶಿವಾನಿ, ತಾನೇ ಒಂದು ರಸ್ತೆ ತಡೆಯಾಗಿರುವುದರ ಬಗ್ಗೆ ಸಂಕೋಚಗೊಂಡಳು. ತನ್ನ ಮೆಚ್ಚಿನ `ಟೊಯೋಟಾ ಕ್ಯಾಮ್ರಿ'ಯನ್ನು ಚಾಲನಾತಡೆಯಿಂದ ಬಿಡುಗಡೆಗೊಳಿಸಿ ಗ್ಯಾಸ್ ಪೆಡಲ್ ಮೇಲೆ ಕಾಲಿರಿಸಿದ ಆಕೆ ರಸ್ತೆಯ ಕಡೆ ಗಮನ ಹರಿಸಿದಳು. ಕಣ್ಣೀರು ಅದರ ಪಾಡಿಗೆ ಹರಿದು ಸಾಕಾಗಿ ಒಣಗುತ್ತಿತ್ತು, ಕೆನ್ನೆಯ ಮೇಲೆ ತನ್ನ ದಾರಿಯ ಗುರುತು ಉಳಿಸಿ. ಯಾವಾಗಲೂ ತಡೆರಹಿತ ಫ್ರೀ-ವೇಯಲ್ಲೇ ಸಾಗುವ ಆಕೆ ಇಂದು ಮಾತ್ರ ಸನ್ನಿವೇಲ್‍ನಲ್ಲಿರುವ ತನ್ನ ಮನೆಯಿಂದ ಸ್ಯಾನ್‍ಹೋಸೆಯ `ವ್ಯಾಲಿ ಫೇರ್ ಮಾಲ್'ಗೆ ಹೋಗಲು ಒಳದಾರಿಗಳನ್ನು ಹಿಡಿದಿದ್ದಳು. ಅಂತೂ ಮಾಲ್ ತಲುಪಿದಾಗ ಟ್ರ್ಯಾಫಿಕ್‍ನಿಂದ ಹೊರಬಂದುದಕ್ಕೆ ಒಂದು ರೀತಿಯ ನಿರಾಳ ಭಾವ ಅವಳನ್ನು ತುಂಬಿಕೊಂಡಿತು. ಕಾರನ್ನು ಸರಿಯಾದ ಸ್ಥಳದಲ್ಲಿ ನಿಲ್ಲಿಸಿ, ಮುಖವನ್ನೊಮ್ಮೆ ಒರಸಿಕೊಂಡು, `ಮೇಸೀಸ್' ಒಳಗೆ ನಡೆದ ಶಿವಾನಿಗೆ ತನ್ನ ತಲೆಯೊಂದು ಜೇನುಗೂಡಾಗಿರುವಂತೆ ಭಾಸವಾಯಿತು. ತನಗೆ ಬೇಕೇ ಬೇಕಾದ ಕೆಲವು ಬಟ್ಟೆಗಳನ್ನು ಆರಿಸಿ, ಎಲ್ಲವನ್ನೂ ಮುಂಗೈಯಲ್ಲಿರಿಸಿಕೊಂಡು ಕೌಂಟರಿನತ್ತ ನಡೆದವಳ ಗಮನ ಪಕ್ಕದ ಮಕ್ಕಳ ವಿಭಾಗದಲ್ಲಿದ್ದ ಒಂದು ಸುಂದರವಾದ ಫ್ರಾಕಿನೆಡೆ ಹರಿದಾಗ ಮತ್ತೆ ತನ್ನೆಲ್ಲ ನೋವುಗಳೂ ಸೇರಿ ಮುತ್ತಿಗೆ ಹಾಕಿದ ಅನುಭವ. ಉಕ್ಕುವ ಕಣ್ಣೀರನ್ನು ಪ್ರಯಾಸದಿಂದ ತಡೆದು, ಕೌಂಟರಿನಲ್ಲಿ ತನ್ನ ಖರೀದಿಗಳನ್ನು ವೀಸಾ ಕಾರ್ಡಿಗೆ ಚಾರ್ಜ್ ಮಾಡಿ, ಬ್ಯಾಗ್, ರಿಸಿಟ್ ಪಡೆದಳು. ಹೊರಬಂದು ಕಾರಿನತ್ತ ನಡೆಯುವಾಗಲೇ ಬಿಕ್ಕಳಿಸತೊಡಗಿದ ಶಿವಾನಿ, ಕಾರೊಳಗೆ ಕುಳಿತು ಜೋರಾಗಿ ಅಳಲಾರಂಭಿಸಿದಳು. ತಾನು ಪಾರ್ಕಿಂಗ್ ಲಾಟಿನಲ್ಲಿರುವುದನ್ನೂ ಮರೆತು ಮುಖ ಮುಚ್ಚಿಕೊಂಡು ತನ್ನೊಳಗಿನ ನೋವನ್ನು ಕೋಡಿಯಾಗಿ ಹರಿಸುತ್ತಿದ್ದ ಆಕೆಗೆ ಸಮಯದ ಪರಿವೆಯಿರಲಿಲ್ಲ.

ಕಾರ್ ಬಾಗಿಲಿನ ಗಾಜಿನ ಮೇಲೆ ಟಕಟಕಿಸಿದ ಸದ್ದಿಗೆ ಬೆಚ್ಚಿಬಿದ್ದು ತಿರುಗಿ ನೋಡಿದವಳಿಗೆ ಅತ್ಯಾಶ್ಚರ್ಯವಾಗಿತ್ತು. ಇತ್ತೀಚೆಗಷ್ಟೇ ಈ ಊರಲ್ಲಿ ಮತ್ತೆ ಭೇಟಿಯಾದ ತನ್ನ ಬಾಲ್ಯ, ಹದಿಹರೆಯದ ಆತ್ಮೀಯ ಗೆಳತಿ ಸವಿತ! ಉಕ್ಕಿ ಬಂದ ಸಂತೋಷದಲ್ಲಿ ಕಾರಿನಿಂದ ಹೊರಬಂದು ಸವಿತಳನ್ನು ಬಿಗಿದಪ್ಪಿದ ಶಿವಾನಿಗೆ `ಈ ಕ್ಷಣದಲ್ಲೇ ತಾವಿಬ್ಬರೂ ಮತ್ತೆ ಹೈಸ್ಕೂಲ್ ಹುಡುಗಿಯರಾಗಬಾರದೇ' ಅನ್ನಿಸಿತು. ಒಂದು ಕ್ಷಣ ಗೆಳತಿಯ ಮುಖ ಗಮನಿಸಿದ ಸವಿತ, ಅದೇ ಹಳೇ ಸಲುಗೆಯಿಂದ- "ಯಾವ ಕಡೆ ಸವಾರಿ? ತುಂಬಾ ಬಿಝೀನಾ? ನಮ್ಮನ್ನು ನಿನ್ನ ಮನೆಗೆ ಕರೀಲೇ ಇಲ್ಲ ನೀನು..." ಎಂದೆಲ್ಲ ಹರಟಿದಳು. ಗೆಳತಿಯನ್ನು ದಿಟ್ಟಿಸಿದ ಶಿವಾನಿ ಏನೋ ಹೇಳಬೇಕೆಂದು ಬಾಯಿ ತೆರೆದು ಅಲ್ಲಿಗೇ ಸುಮ್ಮನಾಗಿ, ಬಳಿಕ- "ಹಾಗೇನಿಲ್ಲ. ಇಲ್ಲಿಯ ಜೀವನ ನಿನಗ್ಗೊತ್ತಲ್ಲ. ವಾರ ಪೂರ್ತಿ ಕತ್ತೆದುಡಿತ, ವೀಕೆಂಡ್ ಮಾಡಬೇಕಾದ ಕೆಲಸಗಳಿಗೆ ದೊಡ್ಡ ಲಿಸ್ಟೇ ಕಾದಿರುತ್ತದೆ. ಹೀಗೇ ದಿನಗಳು ಓಡುತ್ತವೆ; ಅಷ್ಟೇ. ನೀನು, ಮನೆಯವರು ಹೇಗಿದ್ದೀರಿ? ಮಗ ಮುದ್ದಾಗಿದ್ದಾನೆ. ಏನಂತಾಳೆ ಒಳಗಿನ ರಾಜಕುಮಾರಿ?" ಎಂದು ಅವಳ ೯ ತಿಂಗಳ ಹೊಟ್ಟೆ ಸವರಿದಳು. ಪ್ರತಿ ಸವಾಲೆಂಬಂತೆ "ನಾವೆಲ್ಲ ಆರಾಮ್. ನಿನ್ನ ವಿಷಯ ಹೇಳು. ಏನು ಒಬ್ಬಳೇ! ಎಲ್ಲಿ ನಿನ್ನ ಅರ್ಧಾಂಗ ಮತ್ತು ಪ್ರೀತಿಯ ಮುತ್ತು ಸ್ವಾತಿ? `ವ್ಯಾಲೆಂಟೈನ್ಸ್ ಡೇ'ಗೆ ಸ್ಫೆಶಲ್ ಶಾಪಿಂಗ್ ಅಂತ ಒಬ್ಬಳೇ ಬಂದೆಯಾ?" ಅಂದಳು. ಪ್ರಯತ್ನಿಸಿದರೂ ತಡೆಯಲಾಗದ ಕಣ್ಣ ಹನಿಯನ್ನು ಮರೆಮಾಡುವ ಸಲುವಾಗಿ ಮುಖ ತಿರುಗಿಸಿದ ಶಿವಾನಿ, ಸ್ವಲ್ಪ ತಡೆದು ನಿಧಾನವಾಗಿ, "ಸವಿತ, ಇಲ್ಲೀಗ ಮಾತು ಬೇಡ. ನೀವು ಶಾಪಿಂಗ್ ಮುಗಿಸಿ. ನಾನು ನಾಳೆಯೇನಾದರೂ ನಿನಗೆ ಫೋನ್ ಮಾಡುತ್ತೇನೆ, ಫ್ರೀ ಇರ್ತೀಯಾ?" ಅಂದಳು. ಥಟ್ಟನೆ "ನೀನೀಗ ಫ್ರೀ ಇದ್ದೀಯಾ? ಆಪ್ತ ಗೆಳತಿ ಜೊತೆ ಸಮಯ ಕಳೆಯದೆ ಎಷ್ಟೋ ಕಾಲವಾಗಿದೆ. ಬಾ, ಕಾಫಿಗೆ ಹೋಗೋಣ" ಅಂದವಳ ಸರಳ ನೇರ ನಡವಳಿಕೆ ಶಿವಾನಿಯನ್ನು ತಟ್ಟಿತು. "ನಾನೇನೋ ಫ್ರೀ ಈಗ. ಆದರೆ ನೀವೆಲ್ಲ ಶಾಪಿಂಗ್...." ಮಾತು ಮುಗಿಯುವ ಮುನ್ನ ತಡೆದ ಸವಿತ- "ನಮ್ಮ ಶಾಪಿಂಗ್ ಏನೂ ಇಲ್ಲ, ಸುಮ್ಮನೆ ಸುತ್ತಾಡಲಿಕ್ಕೆ ಬಂದಿದ್ದೆವು. ನಡಿ ಮತ್ತೆ. ಈ ಸಂಜೆ ನೀನು ನನ್ನ ಗೆಸ್ಟ್. ಬಾ, ಮನೆಗೆ ಹೋಗೋಣ. ಹತ್ತು ನಿನ್ನ ಗಾಡಿ...." ಅಂದವಳು ಗಂಡನ ಕಡೆ ನೋಡಿ, "ಮನೆಗೇ ಹೋಗೋಣರೀ, ಶಿವಾನಿಯೂ ಬರ್ತಾಳೆ." ಅಂತಂದು ಶಿವಾನಿಯನ್ನು ಆಕೆಯ ಕ್ಯಾಮ್ರಿಯೊಳಗೆ ಕೂರಿಸಿ, ತಾನೂ ಅದರ ಪ್ಯಾಸೆಂಜರ್ ಸೀಟನ್ನೇರಿದಳು. ಶಿವಾನಿಯ ಮುಖ ಆಶ್ಚರ್ಯ, ಸಂತೋಷಗಳ ಮಿಶ್ರಣವಾಗಿತ್ತು.

ದೀರ್ಘವಾಗಿ ಗೆಳತಿಯ ಮುಖ ನೋಡಿದ ಸವಿತ, "ಶಿವಿ, ನಮ್ಮ ಮನೆ ಹೋಮ್‍ಸ್ಟೆಡ್ ರೋಡ್ ಮತ್ತು ಬ್ಲೇನಿ ಅವೆನ್ಯೂ ಹತ್ರ. ಫ್ರೀವೇನಲ್ಲಿ ಹೋಗೋದಾ, ಈ ಕಡೆಯಿಂದ ಹೋಗೋದಾ?" ಅಂದಾಗ ಶಿವಾನಿ ಮೊದಲನೆ ದಾರಿಯನ್ನೇ ಆರಿಸಿಕೊಂಡಳು. ಪಾರ್ಕಿಂಗ್ ಲಾಟ್‍ನಿಂದ ಹೊರಬಂದು, ಫ್ರೀವೇ-೨೮೦ನ್ನು ಪ್ರವೇಶಿಸಿ, ನಿಮಿಷಗಳಲ್ಲಿ ವೂಲ್ಫ್ ರೋಡ್ ಎಗ್ಸಿಟ್ ಕೂಡ ಬಂದೇಬಿಟ್ಟಿತು. ಗೆಳತಿಯರ ನಡುವೆ ಅಸಹನೀಯ ಮೌನ. ಮುಂದೆ ಸವಿತಳ ಮಾರ್ಗದರ್ಶನದಲ್ಲಿ ಅವಳ ಮನೆ ತಲುಪಿತು ಸ್ನೇಹ ಜೋಡಿ. ಕಾರ್ ಪಾರ್ಕ್ ಮಾಡಿ ಮನೆಯೊಳಗೆ ಹೋಗುವಷ್ಟರಲ್ಲಿ ಸವಿತಳ ಪತಿ ಅಶ್ವಿನ್ ಮತ್ತು ಮಗ ಅಮರ್ ಜತೆಗೂಡಿದರು. ಸ್ನೇಹಿತೆಯ ಅಂದವಾದ ಮನೆ ಮತ್ತು ಸುಂದರವಾದ ಸಂಸಾರ ಕಂಡು ಶಿವಾನಿಯ ಮನಸ್ಸಿಗೆ ಏನೋ ನೆಮ್ಮದಿ ಅನ್ನಿಸಿತು. ಅಡುಗೆ ಮನೆಗೆ ನುಗ್ಗಿದ ಗೆಳತಿಯನ್ನು ಹಿಂಬಾಲಿಸಿ ಬಂದು, "ಈಗೇನೂ ಮಾಡೋದಕ್ಕೆ ಹೋಗ್ಬೇಡ ಸವಿ, ಈಗ ತಿಂಡಿ ತಿಂದರೆ ಆಮೇಲೆ ಊಟ ಸೇರೋಲ್ಲ. ಏನೂ ಬೇಡ, ಬರೇ ಕಾಫೀನೋ ಟೀನೋ ಮಾಡು, ಅಷ್ಟೇ ಸಾಕು; ಪ್ಲೀಸ್" ಅಂದ ಗೆಳತಿಯನ್ನು ನೋಡಿದ ಸವಿತ, "ನೀನಿನ್ನೂ ಅದೇ ಹಳೇ ಶಿವಿ, ಸಂಕೋಚದ ಮುದ್ದೆ. ಯಾವಾಗ ಬದಲಾಗ್ತೀ? ನಿನ್ನವರು ಏನೂ ಹೇಳೋದಿಲ್ವಾ?" ಅಂತ ಪ್ರಶ್ನಿಸಿದಳು. ಉತ್ತರಕ್ಕಾಗಿ ಅವಳ ಮುಖ ನೋಡಿದಾಗ ಗಾಬರಿಗೊಂಡಳು ಸವಿತ. ಲಿವಿಂಗ್ ರೂಂ ಕಡೆ ತಿರುಗಿ, "ರೀ, ಅಶ್ವಿನ್, ಇಲ್ಲಿ ಟೀಗಿಟ್ಟಿದ್ದೇನೆ, ಸ್ವಲ್ಪ ನೋಡ್ಕೊಳ್ಳಿ. ನಾನೀಗ ಬಂದೆ." ಅಂತ ಕೂಗಿ ಹೇಳಿ, ಶಿವಾನಿಯನ್ನು ತಬ್ಬಿ ಹಿಡಿದು ತನ್ನ ರೂಮಿಗೆ ಕರೆದೊಯ್ದಳು. ಸ್ನೇಹಿತೆಯನ್ನು ಮಂಚದ ಮೇಲೆ ಕೂರಿಸಿ, ತಾನೂ ಪಕ್ಕದಲ್ಲೇ ಕೂತ ಸವಿತ, ತನ್ನ ಅಪ್ಪುಗೆಯನ್ನು ಬಿಡಲಿಲ್ಲ; ಶಿವಾನಿ ಬಿಡಿಸಿಕೊಳ್ಳಲೂ ಇಲ್ಲ. ಬಿಕ್ಕಿ ಬಿಕ್ಕಿ ಅಳುತ್ತಿದ್ದಾಕೆ, ಬಾಗಿಲಿನ ಶಬ್ದಕ್ಕೆ ತುಸು ಸರಿದು ಕುಳಿತಳಾದರೂ ಕಣ್ಣೀರು ನಿಂತಿರಲಿಲ್ಲ. ಟೀ ಕಪ್ಪುಗಳನ್ನು ತಂದಿರಿಸಿದ ಅಶ್ವಿನ್ ಪತ್ನಿಯ ಕಡೆ ಪ್ರಶ್ನಾರ್ಥಕವಾಗಿ ನೋಡಿ, ಆಕೆಯ ನೋಟದಲ್ಲಿ ಉತ್ತರವನ್ನೂ ಗ್ರಹಿಸಿ ಮತ್ತೆ ಬಾಗಿಲು ಹಾಕಿಕೊಂಡು ಹೊರಗೆ ನಡೆದ. ಟೀಯನ್ನು ಶಿವಾನಿಯ ಕೈಯಲ್ಲಿರಿಸುತ್ತಾ ಮುಗುಳ್ನಗೆ ಬೀರಿದ ಸವಿತಳ ಸ್ನೇಹಪೂರ್ಣ ಕಣ್ಣುಗಳು ತನ್ನೆಲ್ಲ ನೋವನ್ನು ಹೀರಿ ನೆಮ್ಮದಿಯನ್ನು ನೀಡುವ ಭರವಸೆಯಿತ್ತಂತೆ ತೋರಿದವು. ಬಿಸಿ ಟೀ ಒಳ ಸೇರಿದಂತೆ, ಒಳಗಿನ ಹಸಿ ನೋವು ಹೊರಗೆ ಬರತೊಡಗಿತು.

"ಸವಿ, ಈಗೊಂದು ವಾರದಿಂದ ನಾನೊಬ್ಳೇ ಒಂದು ಅಪಾರ್ಟ್‍ಮೆಂಟಿನಲ್ಲಿದ್ದೇನೆ. ವಸಂತ್ ಮತ್ತು ಸ್ವಾತಿ ಮನೆಯಲ್ಲಿದ್ದಾರೆ; ಅತ್ತೆ, ಮಾವ ಕೂಡ ಇಲ್ಲೇ ಇದ್ದಾರೆ. ತಿಂಗಳ ಹಿಂದೆ ಊರಿಂದ ಇಲ್ಲಿಗೆ ಬಂದರು. ಎರಡು ವಾರದ ಹಿಂದೆ ನಾನು ಆ ಮನೆಯಿಂದ ಹೊರಗ್ಬಂದೆ. ಇನ್ನು ಅಲ್ಲಿರೋದು ಸಾಧ್ಯವಿಲ್ಲ. ಆ ಬಗ್ಗೆ ನನಗೆ ನೋವಿದೆ, ಪಶ್ಚಾತ್ತಾಪ ಇಲ್ಲ. ಆದ್ರೆ ಸ್ವಾತೀನ ಬಿಟ್ಟಿರಕ್ಕೆ ಆಗ್ತಾ ಇಲ್ಲ. ಈ ವಾರ ಪೂರ್ತಾ ನಾನು ಆಫೀಸಿಗೂ ಹೋಗ್ಲಿಲ್ಲ. ನಾಳೆ ಭಾನುವಾರ; ಅಲ್ಲಿ ಹೋಗಿ ಮಗ್ಳನ್ನ ನೋಡ್ಕೊಂಡು ಬರ್ತೇನೆ, ಅಷ್ಟೆ; ನನಗೀಗ ಅದಷ್ಟೇ ಉಳಿದದ್ದು. ಜೀವನವೇ ಬೇಡವಾಗಿದೆ. ಸಾಯುವ ಧೈರ್ಯವೂ ಇಲ್ಲ. ಊರಿಗೆ ಹೋಗಲೂ ಸಾಧ್ಯವಿಲ್ಲ, ಅಪ್ಪ-ಅಮ್ಮನಿಗೆ ಉತ್ತರ ಹೇಳೋದಕ್ಕೆ ನನಗೆ ಆಗೋದಿಲ್ಲ. ನನ್ನ ಲೈಫ್ ಇಲ್ಲಿಗೇ ನಿಂತರೇ ಚೆನ್ನಾಗಿತ್ತು, ಇನ್ನೂ ಹೆಚ್ಚಿನ ನೋವು ತಡೆಯೋ ಶಕ್ತಿ ನನಗಿಲ್ಲ ಸವೀ, ನನಗಿಲ್ಲ..." ಮತ್ತೆ ಬಿಕ್ಕಳಿಸಲು ಶುರುಮಾಡಿದ ಶಿವಾನಿಗೆ ಏನು ಹೇಳಬೇಕೆಂದೇ ತೋಚಲಿಲ್ಲ ಸವಿತಳಿಗೆ. ಕಳೆದ ಬಾರಿ ತಾವು ಪೀಟ್ಝಾ ಹಟ್‍ನಲ್ಲಿ ಭೇಟಿಯಾದಾಗ ತನ್ನ ಅತ್ತೆ-ಮಾವ ಬರುತ್ತಿರುವ ಬಗ್ಗೆಯೂ ಹೇಳಿದ್ದ ಶಿವಾನಿಯ ಮುಖದಲ್ಲಿ ಖುಷಿ ಕುಣಿಯುತ್ತಿತ್ತು. ಆದರೆ ಈಗ? ತಾನು ಮೇಸೀಸ್ ಪಾರ್ಕಿಂಗ್ ಲಾಟ್‍ನಲ್ಲೇ ಕಂಡುಕೊಂಡ ಸಂಶಯದ ಸುಳಿವು, ಕೇಳಬಾರದೆಂದು ಅಂದುಕೊಂಡದ್ದು, ಈಗ ಬಲವಾಯಿತು. ಎಲ್ಲಿ, ಏನು, ಹೇಗೆ, ತಾಳ ತಪ್ಪಿತು? ಈ ಪ್ರಶ್ನೆಗಳನ್ನು ಕೇಳಿಸಿಕೊಂಡಳೋ ಅನ್ನುವಂತೆ ಶಿವಾನಿ ಮತ್ತೆ ಹೇಳಿದಳು, "ನಾನು ಹೊರಗ್ಬಂದದ್ದಕ್ಕೆ ಅತ್ತೆ-ಮಾವನಿಗೂ ನೋವಿದೆ. ಆದ್ರೆ ಇದ್ರಲ್ಲಿ ಅವರ ಪಾತ್ರ ಏನೂ ಇಲ್ಲ. ಎಲ್ಲಾ ವಸಂತ್‍ದೇ. ಮಗೂಗೆ ಕೂಡಾ ನಾನು ಏನೂ ಕೊಡಬಾರದೂಂತ ಆಜ್ಞೆ ಮಾಡಿದಾರೆ. ಅತ್ತೆಯಂತೂ ನನ್ನ ತಬ್ಬಿಕೊಂಡು ಅತ್ತೇಬಿಟ್ಟರು. ವಸಂತ್ ಅವ್ರ ಮೇಲೂ ರೇಗಾಡಿದ್ರು, `...ಅವಳು ಹೋಗೋದಾದ್ರೆ ಹೋಗ್ಲಿ. ಬಿಡಿ ಅವ್ಳನ್ನ. ಸ್ವಾತಿಯನ್ನು ನೋಡ್ಕೊಳ್ಳಿಕ್ಕೆ ನೀವಿದ್ದೀರಿ. ಹೆಣ್ಣಿಗೆ ಸೊಕ್ಕಿರಬಾರ್ದು, ಹೊಂದಾಣಿಕೆ ಇರ್ಬೇಕು...' ಅಂತ ಏನೇನೋ ಹೇಳಿದ್ರು. ನನಗೆ ದೊಡ್ಡ ಆಘಾತವೇ ಆಗಿತ್ತು. ಎದ್ದು ಆಚೆ ನಡೆದೇ ಬಿಟ್ಟೆ..." ನಿಟ್ಟುಸಿರ ನಡುವೆ ಪಿಸುಮಾತಿನಲ್ಲಿ "ಶಿವಿ, ನಾನೊಂದು ಪ್ರಶ್ನೆ ಕೇಳ್ತೇನೆ, ನೀನೇನೂ ತಪ್ಪು ತಿಳೀಬೇಡ." ಅಂದ ಸವಿತ, ಆಕೆಯ ಅನುಮೋದನಾ ಸೂಚನೆಯನ್ನು ಕಂಡು ಮುಂದುವರಿಸಿ ಹೇಳಿದಳು, "ನಿನ್ನಂಥ ಹುಡುಗಿಗೇ ಈ ಪರಿಸ್ಥಿತಿ ಅಂದ್ರೆ ನಂಬಕ್ಕೇ ಆಗ್ತಾ ಇಲ್ಲ. ವಸಂತ್‍ಗೆ ನಿನ್ನಲ್ಲಿ ಅಸಮಾಧಾನವಾಗಲು ಕಾರಣವಾದರೂ ಏನು? ಯಾಕಂತೆ ಈ ಶಿಕ್ಷೆ? ಹೇಳಿದ್ದಾರಾ?" ಕೆಲವು ನಿಮಿಷಗಳ ಮೌನದ ಬಳಿಕ ತಲೆ ಎತ್ತಿದ ಶಿವಾನಿ ತನ್ನ ಕಥೆಯನ್ನು ತೆರೆದಿಟ್ಟಳು.

"ವಸಂತ್ ಡೆಲ್ಲಿಯಲ್ಲೇ ಹುಟ್ಟಿ ಬೆಳೆದವರು. ಊರಿನ ಕಡೆ ಬರುತ್ತಿದ್ದರೂ ಬರೇ ರಜೆಯಲ್ಲಷ್ಟೇ. ಹಾಗಾಗಿ ತೀರಾ ಪಟ್ಟಣಿಗನಾಗಿಯೇ ಬೆಳೆದವರು. ತುಂಬಾ ಸೋಶಿಯಲ್, ಜೋವಿಯಲ್ ಮನುಷ್ಯ. ಅತ್ತೆ-ಮಾವ ನನ್ನನ್ನು ಇಷ್ಟ ಪಟ್ಟು ಮಗನಿಗೆ ಮದುವೆ ನಿಶ್ಚಯಿಸಿದಾಗ ಖುಷಿಯಲ್ಲೇ ಒಪ್ಪಿಕೊಂಡಿದ್ದರು ಕೂಡ. ಡೆಲ್ಲಿಯಲ್ಲಿದ್ದಷ್ಟು ಕಾಲವೂ ಜೀವನ ಚೆನ್ನಾಗೇ ಇತ್ತು; ಯಾರಾದರೂ ಅಸೂಯೆ ಪಡುವಂತಿತ್ತು. ಅತ್ತೆ ಮತ್ತು ಮಾವನವರೂ ನಮ್ಮ ಜೊತೆಗೇ ಇದ್ರು. ಆದರೆ ಈ ದೇಶಕ್ಕೆ ಬಂದ ಮೇಲೆ ವಸಂತ್ ನಡತೆಯ ರೀತಿಯಲ್ಲಿ ವ್ಯತ್ಯಾಸ ಕಂಡೆ. ಮದುವೆ ಆದಾಗಿನಿಂದಲೂ ಡೆಲ್ಲಿಯಲ್ಲೂ ನಾನು ಕೆಲಸಕ್ಕೆ ಹೋಗುತ್ತಿದ್ದೆನಲ್ಲ. ಇಲ್ಲಿ ಸನ್ನಿವೇಲ್‍ಗೆ ಬಂದಾಗ ಕೆಲಸ ಸಿಗುವವರೆಗೆ ನನಗೆ ಬೋರ್ ಅನಿಸುತ್ತಿತ್ತು. ನಂತರ ಕೆಲಸವೂ ಸಿಕ್ಕಿತು; ಆಮೇಲೆ ಸ್ವಾತಿ ಹುಟ್ಟಿದಳು. ಮೊದಲು ಆರು ತಿಂಗಳು ಅಪ್ಪ, ಅಮ್ಮ ಇಲ್ಲಿದ್ರು; ಆಮೇಲೆ ಅತ್ತೆ, ಮಾವ ಬಂದು ಹೋದ್ರು. ಕಳೆದೊಂದು ವರ್ಷದಿಂದ ಸ್ವಾತಿಗಾಗಿ ನಾನು ಬರೇ ಪಾರ್ಟ್‍ಟೈಂ ಕೆಲಸ ಮಾಡ್ತಿದ್ದೆ. ಈಗ ಮತ್ತೆ ಅತ್ತೆಯವರು ಬಂದ ಮೇಲೆ ಫುಲ್‍ಟೈಂ ಹೋಗುತ್ತಿದ್ದೇನೆ. ಈ ನಡುವೆ ವಸಂತ್ ಬೇರೆ ಬೇರೆ ಕೆಲಸಗಳಲ್ಲಿ ಅಲೆದಾಡಿ, ಕೊನೆಗೆ ಗೆಳೆಯರಿಬ್ಬರ ಜೊತೆಗೆ ಸ್ವಂತ ಕಂಪೆನಿಯನ್ನು ಹುಟ್ಟುಹಾಕಿದರು. ಅದೀಗ ಚೆನ್ನಾಗಿ ಬೆಳೆದಿದೆ. ಇದೆಲ್ಲವೂ ಸುಂದರವಾಗಿಯೇ ಇದೆ. ಆದ್ರೆ ಕಷ್ಟ ಇರೋದು ವಸಂತ್‍ನ ಸಾಮಾಜಿಕ ನಡವಳಿಕೆಯಲ್ಲಿ. ತೀರಾ ಪಾರ್ಟಿ-ಜೀವಿ. ಸಮಾಜದಲ್ಲಿ ಆತನಿಗೆ ಗೌರವವೂ ಇದೆ, `ಇನ್ನೋವಿಷನ್ಸ್ ಸಾಫ್ಟ್‍ಟೆಕ್' ಕಂಪನಿಯ ಸಿ.ಇ.ಓ.ಗಳಲ್ಲಿ ಒಬ್ಬರು ತಾನೇ! ಎಲ್ಲಿ ಯಾವ ಪಾರ್ಟಿ ಇದ್ದರೂ ಹೋಗಲೇ ಬೇಕು. ಜೊತೆಗೆ ಸ್ವಲ್ಪ ಡ್ರಿಂಕ್ಸ್, ಡ್ಯಾನ್ಸ್. ಬರು-ಬರುತ್ತಾ ಸಂಗಾತಿ ಬದಲಿಸುವ ಆಟಕ್ಕೂ ಇಳಿದರು. ನನಗೂ ಒತ್ತಾಯ ಮಾಡುತ್ತಿದ್ದರು, ಆದ್ರೆ ನಾನು ಒಪ್ಪಲೇ ಇಲ್ಲ. ಅವರು ಯಾರ ಜೊತೆ ಡ್ಯಾನ್ಸ್ ಮಾಡೋದಕ್ಕೂ ನನ್ನ ಅಭ್ಯಂತರವೇನೂ ಇಲ್ಲ. ಆದರೂ, `ಸೋಶಿಯಲೀ ಯೂ ಆರ್ ಅನ್‍ಫಿಟ್. ಐ ಕಾಂಟ್ ಲಿವ್ ವಿದ್ ಯು ಲೈಕ್ ದಿಸ್' ಎಂದು ಯಾವಾಗಲೂ ಗೊಣಗುತ್ತಿದ್ದರು. ಹೀಗೇ ಸಾಗಿತ್ತು ಜೀವನ."

"ಇತ್ತೀಚೆಗೆ ಪಾರ್ಟಿಗಳಿಗೆ ನನ್ನನ್ನು ಕರೆಯುತ್ತಲೇ ಇರಲಿಲ್ಲ. ಬಹುಶಃ ಗೆಳೆಯರಿಗೆಲ್ಲ ಸಬೂಬು ಹೇಳಿ ಸಾಕಾಗಿರಬೇಕು. ನನ್ನನ್ನು ತೆಗಳಲು, ಕೀಳಾಗಿ ನೋಡಲು ಸುರುಮಾಡಿದ್ದರು. ಆದರೂ ನಾನು ಸುಮ್ಮನಿದ್ದೆ; ಮಗಳ ಸಲುವಾಗಿ. ಈಗ ಅವರ ಅಪ್ಪ-ಅಮ್ಮ ಬಂದ ಮೇಲೆ ತುಂಬಾ ಹಾರಾಡುತ್ತಿದ್ದರು. ನನ್ನ ಅವಶ್ಯಕತೆಯಿಲ್ಲ ಎಂಬಂತೆ ಆಡುತ್ತಿದ್ದರು. ನನ್ನದೇ ತಪ್ಪೆನ್ನುವಂತೆ ನಡೆದುಕೊಳ್ಳುತ್ತಿದ್ದರು. ಅತ್ತೆಗಾಗಲೀ ಮಾವನಿಗಾಗಲೀ ವಿಷಯ ಏನೂಂತ ಗೊತ್ತೇ ಇಲ್ಲ, ನಾನೂ ಹೇಳಿಲ್ಲ. ಹೀಗೇ ಮೊನ್ನೆ ಜಗಳ ಜೋರಾಗಿ, ನನ್ನನ್ನು `ನಡೆಯಾಚೆ, ಹೊಂದಿಕೊಳ್ಳಲು ಆಗೋದಿಲ್ಲವಾದ್ರೆ ಹೋಗಾಚೆ. ಇಲ್ಲಿ ನಿನಗೆ ಜಾಗ ಇಲ್ಲ' ಅಂದುಬಿಟ್ಟರು. ನನಗೂ ಸಾಕಾಗಿತ್ತು. ಒಂದೆರಡು ಜೊತೆ ಬಟ್ಟೆ ಜೋಡಿಸಿಕೊಂಡು ಹೊರಟೇಬಿಟ್ಟೆ. ಕಾರ್ ನನ್ನದೇ ಆದ್ದರಿಂದ ಅವರಿಗೆ ಏನೂ ಮಾಡಲಾಗಲಿಲ್ಲ. ಒಂದು ವಾರ ಮೋಟೆಲ್‍ನಲ್ಲಿದ್ದೆ. ಮತ್ತೆ ಅಪಾರ್ಟ್‍ಮೆಂಟಿಗೆ ಬಂದೆ. `ಡೈವೋರ್ಸಿಗೆ ಫೈಲ್ ಮಾಡ್ತೇನೆ' ಅಂತ ಹೇಳಿದ್ದರು. ಫೈನಾನ್ಷಲೀ ಅವರ ಸ್ಥಿತಿ ಉತ್ತಮವಾಗಿರೋದರಿಂದ, ನೋಡ್ಕೊಳ್ಳೋಕೆ ಅತ್ತೆ-ಮಾವ ಇರೋದರಿಂದ ಸ್ವಾತಿಯ ಕಸ್ಟಡಿಯೂ ಅವರಿಗೇ ಸೇರುತ್ತದೇಂತ ಹೇಳ್ತಿದ್ದರು. ಬೇರೇನನ್ನಾದರೂ ತಡೆದೇನು, ಆದರೆ ಮಗಳಿಂದ ಬೇರೆಯಾಗಿರೋದು ಮಾತ್ರ ಸಾಧ್ಯವಿಲ್ಲ. ನಾಡಿದ್ದು ಇಬ್ಬರಿಗೂ ಲಾಯರ್ ಜೊತೆ ಅಪಾಯಿಂಟ್‍ಮೆಂಟ್ ಇದೆ. ಅದೇನು ಹೇಳ್ತಾರೋ, ಮಾಡ್ತಾರೋ ಗೊತ್ತಿಲ್ಲ. ಹೇಳು ಸವಿ, ಇಂಥಾ ಗಂಡನ ಜೊತೆ ಹೇಗೆ ಬಾಳೋದು? ನನಗಿನ್ನು ಸಾಧ್ಯವಿಲ್ಲ." ಶಿವಾನಿಯ ಕಥೆ ಕೇಳಿ ಸವಿತಳ ಕಣ್ಣಲ್ಲೂ ಹನಿಯಾಡುತ್ತಿತ್ತು.

ಬಾಗಿಲು ಟಕಟಕಿಸಿ ಒಳ ಬಂದ ಅಶ್ವಿನ್ ಇಬ್ಬರನ್ನೂ ಊಟಕ್ಕೆ ಎಬ್ಬಿಸಿದ. ಮತ್ತೆ ಸಂಕೋಚಕ್ಕೆ ಒಳಗಾದ ಶಿವಾನಿಯನ್ನು ಒತ್ತಾಯ ಮಾಡಿ ಟೇಬಲ್ಲಿಗೆ ಎಳೆದಳು ಸವಿತ. ಗೆಳತಿಯರ ಮಾತಿಗೆ ಅಡ್ಡಿಯಾಗದಂತೆ, ಅಶ್ವಿನ್ ತಾನೇ ಅನ್ನ, ಸಾರು, ಪಲ್ಯ ಮಾಡಿದ್ದ. ತಲೆ ತಗ್ಗಿಸಿ ಅನ್ನದ ಅಗುಳುಗಳನ್ನು ಹೆಕ್ಕುತ್ತಿದ್ದ ಶಿವಾನಿಯನ್ನು ಕಂಡು ಸವಿತಳಿಗೆ `ಅಯ್ಯೋ' ಅನಿಸಿತು. ಊಟ ಮುಗಿದ ಮೇಲೆ ಹೊರಟು ನಿಂತ ಗೆಳತಿಯನ್ನು ಮತ್ತೆ ಮಾತಿನಲ್ಲಿ ಕಟ್ಟಿಹಾಕಿ ಆ ದಿನ ಅಲ್ಲೇ ನಿಲ್ಲುವಂತೆ ಒಪ್ಪಿಸಿದಳು ಸಹೃದಯಿ ಸವಿತ. ಬಾಲ್ಯದಿಂದಲೂ ಅಕ್ಕಪಕ್ಕದ ಮನೆಗಳಲ್ಲಿದ್ದು ಬೆಳೆದ ಗೆಳತಿಯರು ಇಂದು ಮತ್ತೆ ಜೊತೆಯಾಗಿ ನಟ್ಟಿರುಳವರೆಗೆ ಹರಟಿದರು. ಮಾತಿನ ನಡುವೆ ಸವಿತ ಗೆಳತಿಯನ್ನು ಕೇಳಿದಳು, "ಶಿವಿ, ನೀನು ಅಪಾರ್ಟ್‍ಮೆಂಟಿನಲ್ಲಿ ಯಾಕಿರ್ಬೇಕು? ಇಲ್ಲಿಗೇ ಬಂದು ಬಿಡು. ಇದು ಹೇಗೂ ೪ ರೂಮಿನ ಮನೆ. ಇಲ್ಲೇ ಇರು, ಆಯ್ತಾ?" ಈ ಮಾತಿಗೆ ಶಿವಾನಿ ಮೆಚ್ಚಿದರೂ ಒಪ್ಪಲಿಲ್ಲ. ಆಕೆಯ ಆತ್ಮಾಭಿಮಾನ ಕಂಡ ಗೆಳತಿ ಹೆಮ್ಮೆಪಟ್ಟುಕೊಂಡಳು. ಮಾರನೇ ದಿನ ಶಿವಾನಿ ಹೊರಟಾಗ ಪತಿ-ಪತ್ನಿ ಜೊತೆಯಾಗಿ ಆಕೆಗೆ ಧೈರ್ಯ, ಸಮಾಧಾನ ಹೇಳಿ, ಯಾವುದೇ ಕಾರಣಕ್ಕೂ ಸಂಕೋಚವಿಲ್ಲದೆ ತಮ್ಮ ಸಹಾಯ ಕೋರಬಹುದೆಂದು ತಿಳಿಸಿದರು. ಸತ್ಯವನ್ನು ಮನೆಯಲ್ಲಿ ಹೇಳಬೇಕೆಂದೂ ಒತ್ತಾಯಿಸಿದರು.

ಸ್ವಾತಿಯನ್ನು ಕಾಣಲು ಹೋದ ಒಂದು ಭಾನುವಾರ, ವಸಂತ್ ಇಲ್ಲದ ಸಮಯ, ಅತ್ತೆ ಮತ್ತು ಮಾವ ಕೇಳಿದ ಪ್ರಶ್ನಾವಳಿಗಳಲ್ಲಿ ಸಿಲುಕಿ, ಆಕೆ ಒಳಗಿನ ಗುಟ್ಟನ್ನು, ತನ್ನೆದೆಯ ನೋವನ್ನು ಹೊರಚೆಲ್ಲಿದಳು. ನೊಂದುಕೊಂಡ ಆ ಹಿರಿಜೀವಗಳು, ಆಕೆಯು ವಿಚ್ಛೇದನ ಪಡೆಯಲಿಚ್ಛಿಸಿದರೆ ತಮ್ಮ ಒಪ್ಪಿಗೆಯೂ ಇದೆಯೆಂದರು. ಬೆಳೆದ ವಯಸ್ಸಿನ ಮಗನನ್ನು ತಿದ್ದುವುದು ಅಸಾಧ್ಯವೆಂದು ಅರಿತಿದ್ದು, ತಮ್ಮ ಮಗನ ಸಣ್ಣತನಕ್ಕೆ, ಕೀಳು ಅಭಿರುಚಿಗೆ ಆಕೆ ಬಲಿಯಾಗಬೇಕಿಲ್ಲವೆಂದು ಅವರ ನಂಬಿಕೆ. ಆಕೆಯ ಪರವಾಗಿಯೇ ತಾವು ನಿಲ್ಲುವುದಾಗಿಯೂ ಭರವಸೆ ನೀಡಿದ ಅವರು `ಹಾಗೇನಾದರೂ ಆದರೆ, ನಾವೂ ನಿನ್ನ ಜೊತೆ ಬರುತ್ತೇವೆ. ಆಗ ಮಗುವೂ ನಿನಗೇ ಸಿಗುತ್ತಾಳೆ' ಅಂದುಬಿಟ್ಟರು. ಆ ದಿನ ಶಿವಾನಿ ಮತ್ತೆ ಕಣ್ಣೀರಿಡುತ್ತಾ ಮನೆ ಬಿಟ್ಟಿದ್ದಳು, ಹಿರಿಯರ ಪ್ರೀತಿಗೆ ಮಾರುಹೋಗಿ.
ಕೋರ್ಟಿನಲ್ಲಿ ವಾದ-ವಿವಾದಗಳು ನಡೆಯುವ ದಿನ ಶಿವಾನಿಯ ಅತ್ತೆ, ಮಾವ, ಸವಿತ, ಅಶ್ವಿನ್ ಆಕೆಯ ಜೊತೆಗಾರರಾಗಿ ನಿಂತಿದ್ದರೆ ವಸಂತ್ ಜೊತೆ ಒಬ್ಬ `ಬಿಳಿ-ಹುಡುಗಿ' ನಿಂತಿದ್ದಳು. ಈ ವಿಚ್ಛೇದನ ದೊರೆತೊಡನೆ ಅವರಿಬ್ಬರು ಮದುವೆಯಾಗುವುದಾಗಿ ವಸಂತ್‍ನ ಸಹೋದ್ಯೋಗಿ ಹೇಳಿದ. ಇದೇ ಮಾತನ್ನು ಆಧಾರವಾಗಿಸಿಕೊಂಡ ಶಿವಾನಿಯ ವಕೀಲರು ಸಮರ್ಪಕವಾಗಿ ವಾದಮಾಡಿ, ತನ್ನ ಕಕ್ಷೀದಾರಳನ್ನು ಸಮರ್ಥಿಸಿಕೊಂಡರು. ವಸಂತ್ ಆಕೆಗೆ ಮಾಸಾಶನ ನೀಡುವಂತೆಯೂ, ಮನೆಯನ್ನೂ, ದೊಡ್ಡ ಬ್ಯಾಂಕ್ ಮೊತ್ತವನ್ನೂ ಆಕೆಗೆ ಒಪ್ಪಿಸುವಂತೆಯೂ ವಾದಿಸಿ, `ಮಗು ತಾಯಿಯ ಬಳಿಯೇ ಇರತಕ್ಕದ್ದೆಂದೂ, ಮನೆಯೆಂಬುದರ, ಸಂಸಾರವೆಂಬುದರ ಅರ್ಥವೇ ಗೊತ್ತಿಲ್ಲದ ಈತನಿಗೆ ಮಗುವಿನ ಸುಪರ್ದಿ ಬೇಡವೆಂದೂ' ಕೋರಿದರು; ಅಂತೆಯೇ ತೀರ್ಪು ನೀಡುವಂತೆ ನ್ಯಾಯಾಧೀಶರನ್ನು ಕೇಳಿಕೊಂಡರು. ಹಣಬಲದ ವಾದ ಮಾಡಿದ ವಸಂತ್‍ನ ವಕೀಲರ ಮಾತುಗಳು ತಂತಾನೇ ಉಡುಗಿದವು. ಮಧ್ಯಾಹ್ನದ ವಿರಾಮದ ಬಳಿಕ ಮತ್ತೆ ಸೇರಿದ ನ್ಯಾಯಾಲಯದಲ್ಲಿ ಮೌನ ತುಂಬಿತ್ತು. ನ್ಯಾಯಾಧೀಶರ ತೀರ್ಪು ಶಿವಾನಿಯ ಹೃದಯ ಹಗುರಾಗುವಂತೆ ಮಾಡಿತು. ಅಜ್ಜ-ಅಜ್ಜಿಯ ನಡುವೆ ಕುಳಿತಿದ್ದ ಮುದ್ದು ಸ್ವಾತಿಯನ್ನು ಮತ್ತೆ ಮತ್ತೆ ಮುತ್ತಿಟ್ಟಳು ಶಿವಾನಿ. ಫ್ರೀವೇಯಲ್ಲಿ ತನ್ನ ಅತ್ತೆ, ಮಾವ ಮತ್ತು ಸ್ವಾತಿಯನ್ನು ಹೊತ್ತ `ಕ್ಯಾಮ್ರಿ'ಯನ್ನು ಮನೆಯ ಕಡೆ ಓಡಿಸುತ್ತಿದ್ದ ಆಕೆಗೆ ತನ್ನ ಕಣ್ಣುಗಳಿಂದ ಇಳಿಯುತ್ತಿದ್ದ ಹನಿಗಳನ್ನು ತಡೆಯುವ ಮನಸ್ಸು ಬರಲಿಲ್ಲ.
(ಫೆಬ್ರವರಿ-೨೦೦೧)
(೨೦೦೧-ರಲ್ಲಿ ಮಂಗಳೂರಿನ ಹೃದಯವಾಹಿನಿ ನಿಯತಕಾಲಿಕ ನಡೆಸಿದ್ದ ಜಾಗತಿಕ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿತ್ತು. ದಟ್ಸ್'ಕನ್ನಡ.ಕಾಂನಲ್ಲಿ ೨೦೦೬ರ ಜೂನ್'ನಲ್ಲಿ ಪ್ರಕಟವಾಗಿತ್ತು.)

Tuesday 21 April 2009

ರಂಗಸ್ಥಳ

ಬಣ್ಣ ಬಣ್ಣದ ಲೋಕ, ರಂಗು ದೀಪದ ನಾಕ-
ಅದರಾಚೆ ಜೀವನದಿ ಲಾಸ್ಯವಿಲ್ಲ
ಪಾತ್ರದೊಳಗಿನ ಪಾಕ, ಅಭಿನಯದ ರಸತೂಕ-
ಅವಗಣನೆಗೆದುರಾಗಿ ಮೋದವಿಲ್ಲ

ಅಜ್ಜ-ಅಪ್ಪನ ವೃತ್ತಿ, ಉಸಿರೆಳೆವ ಉತ್ಪತ್ತಿ-
ಅಲೆಮಾರಿ ಬದುಕಿನಲಿ ಬೇರು ಇಲ್ಲ
ಸಂಸ್ಕೃತಿಯ ಮುಖವೆತ್ತಿ, ಜೀವ ಭಾವವ ಬಿತ್ತಿ-
ಅವತಾರ ಮುಗಿದೊಡನೆ ಹೆಸರು ಇಲ್ಲ

ಕಿರುಗೆಜ್ಜೆ ಝೇಂಕಾರ, ಚಕ್ರತಾಳದ ಭಾರ-
ಭಾಗವತಿಕೆಯ ಮೋಡಿ, ರಾಗ ಕೋಡಿ
ದೇವಳದ ಅಂಗಳದಿ, ಬಯಲಿನಲಿ ಮಂಟಪದಿ-
ಭಾಷೆ ಮೀರಿದ ಭಾವ, ಅನುಭಾವ ನಾಡಿ

ಹುಬ್ಬು-ಕಣ್ಣಿನ ಕುಣಿತ ಮೋಜಿನುಡುಗೆಯ ಸೆಳೆತ-
ತಾಳ-ಲಯ-ಗತಿಯಲ್ಲಿ ವಾಲಿ ಕುಂತಿ
ಚೆಂಡೆಯೇಟಿಗೆ ಭರತ, ಸೂರ್ಯನುದಯಕೆ ಇಳಿತ-
ಬಣ್ಣ-ಬೆಳಕಿನ ಆಟ, ಹರಿಸಿ ಭ್ರಾಂತಿ
(೦೧-ಜುಲೈ-೨೦೦೩)

Tuesday 14 April 2009

ಆಶಯ
ಪುಟ್ಟ ಹಣತೆ ಹೊಸಿಲಿನಲ್ಲಿ ಜಗಲಿಗಿಷ್ಟು ಬೆಳಕು,

ನಡುಮನೆಯಲಿ ಅಂಗಳದಲಿ ಮಸುಕು ಮಸುಕು ಮುಸುಕು.


ಗಾಳಿಯೆರಗಿ, ಸಿಡಿಲು ಗುಡುಗಿ, ಗಗನ ಗಮನ ನಯನ,

ಸೋನೆಯೊಳಗೆ ಮಂಜು ಇಂಗಿ ಸಾಧಿಸಿ ನವ ಅಯನ.

ಕರಗಲಿಲ್ಲ ಕೊರಗಲಿಲ್ಲ ಇಳೆಯು ಮಳೆಯ ಕೊಳೆಗೆ,

ತೂರಲಿಲ್ಲ ಹೊರಗ ಕೆಸರು ಮನದಂಗಳದೊಳಗೆ.


ಸಾರಲಿಹುದು, ಬೀರಲಹುದು, ತೋರಬಹುದು ಕಿರಣ,

ತೆರೆಯ ಸರಿಸಿ, ಹೊರೆಯ ಇಳಿಸಿ, ಮರೆಗೆ ಸರಿಯೆ ವರುಣ.

ಅರ್ಚನೆಯಲಿ ಆರತಿಯಲಿ ನೀಡಿ-ಪಡೆದು ತಿಲಕ,

ಹಣತೆಗಿಷ್ಟು ತೈಲವಿತ್ತು ಮಣಿದ ಎದೆಗೆ ಪುಳಕ.

(೨೦-ಸೆಪ್ಟೆಂಬರ್-; ೧೫-ಅಕ್ಟೋಬರ್-೨೦೦೫)

Thursday 9 April 2009

ನನ್ನೊಲವೆ....

ನನ್ನೊಲವ ಸಾಕಾರ, ನಿನಗೇಕೆ ಅಲಂಕಾರ,
ಬಂಡುಂಬ ಬಯಕೆಯಲಿ ಕಂಪಿಸಿದೆ ಅಧರ;
ರಾಗದಾಲಾಪಕ್ಕೆ ಮುಂಗುರುಳ ವೈಯಾರ,
ಕಾತರದ ಎದೆಯೊಳಗೆ ಗುಂಯ್ಗುಡುವ ಭ್ರಮರ.

ನನ್ನ ಕೈಯೊಳು ನಿನ್ನ ಕೈಯಿರಿಸಿ ಕರೆತಂದೆ,
ಈ ಮನೆಯ ಹೊಸಿಲಲ್ಲಿ ನಿಲ್ಲಿಸಿದೆ ಅಂದು;
ಅಕ್ಕಿ-ಬೆಲ್ಲವ ಚೆಲ್ಲಿ ಅಳುಕುತ್ತ ಒಳಬಂದೆ,
ಮಂಗಳದ ಸರಮಾಲೆ ನಿನ್ನೊಡನೆ ತಂದು.

ನನ್ನಮ್ಮ-ಅಪ್ಪನಿಗೆ ಪ್ರೀತಿ ತೋರಿದೆ ನೀನು,
ತಮ್ಮ-ತಂಗಿಯ ಜೊತೆಗೆ ನಿಜ ಮಮತೆಯನ್ನು;
ಬಣ್ಣಗೆಡದಿರುವಂತೆ ಬೆರೆಸಿರುವೆ ಹಾಲ್ಜೇನು,
ಮನದಂಗಳದ ತುಂಬ ಬೆಳ್ನೊರೆಯ ಜೊನ್ನು.

ನನ್ನವರು ಎಂದವಳೆ, ನೀನೆಂದು ನನ್ನವಳು,
ಪ್ರೇಮದೀವಿಗೆ ಹೊತ್ತು ಮುನ್ನಡೆಯುವವಳು;
ಕಾರ್ಗಾಲ ಮಿಂಚಲ್ಲಿ ಕಂದನನು ಕಂಡವಳು,
ಕಣ್ರೆಪ್ಪೆಯೊಳು ಬೆಳಕ ಕಾಯುತಿರುವವಳು.

ನನ್ನೊಲವೆ, ಪ್ರಿಯವಧುವೆ, ದೀಪದೊಲು ನೀ ಬೆಳಗು,
ತೈಲವಾಗುವೆ ನಾನು ಆಂತರ್ಯದೊಳಗೆ;
ಸಂದಕಾಲದ ಬಲವು ಹರಡಿರಲಿ ಕುಸುಮ ನಗು,
ನಿನ್ನ ಜೊತೆಯಿರಲೆಂದು ಮಧುಚಂದ್ರವೆಮಗೆ.
(೦೬-೦೮-೨೦೦೩)

Saturday 4 April 2009

ಬಂದನೇನೇ...

ಓದುಗರೆಲ್ಲರಿಗೂ ಶ್ರೀರಾಮನವಮಿಯ ಶುಭಾಶಯಗಳು.


ಬಂದನೇನೇ, ರಾಮ, ಬಂದನೇನೇ
ಮುಂದೆ ನೋಡಲಾರದ ಒಂದು
ಮರುಳು ಮುದುಕಿ ಬಳಿಗೆ ಇಂದು
ಬಂದನೇನೇ, ರಾಮ, ಬಂದನೇನೇ

ನಾಡಿನ ದೊರೆ ಕಾಡೊಳು ಬಂದು
ನನ್ನ ಗುಡಿಯ ಬಾಗಿಲ ಮುಂದು
ನೂರುಕಾಲ ಜಪಿಸಿದೆನೆಂದು
ನಲ್ನುಡಿಯನಾಡಲು ಇಂದು ---ಬಂದನೇನೇ...

ಹಾದಿ ಹಲವು ನಡೆವನೆಂದು
ಹಸಿದು ದಣಿದು ಬರುವನೆಂದು
ಹುಡುಕಿ ತಡಕಿ ತನಿಹಣ್ಣೆಂದು
ಹೊಸದೆ ಕೊಯಿದು ಕಾದಿಹೆನಿಂದು ---ಬಂದನೇನೇ...

ಜನತೆಯ ಜತೆ ಆದರದಿಂದ
ಜಗದೊಡೆಯನ ಠೀವಿಯಿಂದ
ಜಗವ ಗೆಲುವ ನಸುನಗೆಯಿಂದ
ಜನರ ಮನಕೆ ಸಂತಸತಂದ ---ಬಂದನೇನೇ...

ಕೋಸಲದ ಮುದ್ದಿನ ಕಂದ
ಕೌಸಲ್ಯೆಯ ಮನದಾನಂದ
ಕೋಟಿಸೂರ್ಯ ತೇಜದಿಂದ
ಕೌಸ್ತುಭಧರ ಕರುಣೆಯಿಂದ ---ಬಂದನೇನೇ...

ಋತುರಾಜನ ಸೊಬಗಿನಿಂದ
ಋಷಿಮುನಿಗಳ ರೂಪದಿಂದ
ಋತ್ವಿಜರನು ಸೇವಿಸಿ ಬಂದ
ಋಣಮುಕ್ತಿಯ ನೀಡುವೆನೆಂದ ---ಬಂದನೇನೇ...
(೨೧-ಮೇ-೨೦೦೮)

Monday 30 March 2009

ಆ-ಕೃತಿ

ನಿನ್ನೆಯ ನಿನ್ನ ಬೆವರು
ಇಂದು ಹಸಿರಾದದ್ದು
ಒಬ್ಬರಿಗೇ ಗೊತ್ತು
ಹಸಿರು ಮತ್ತೆರಡು ಚಿಗುರಿ
ಮೊಗ್ಗು ಹೂವಾಗಿ ಕಾಯಾಗಿ
ಫಲಮಾಗಿ ಹಣ್ಣಾಗಿ
ಉಂಡವರ ಉಸಿರು ಹರಸಿದ್ದು
ನಿನ್ನನ್ನೇ, ನನ್ನನ್ನೇ, ಹಣ್ಣನ್ನೇ?

(೧೮-ಮಾರ್ಚ್-೨೦೦೯)

Thursday 26 March 2009

ಯುಗಾದಿ

ಓದುಗರೆಲ್ಲರಿಗೂ ಚಾಂದ್ರ ಯುಗಾದಿಯ ಶುಭ ಹಾರೈಕೆಗಳು.
ಹೊಸ ವರುಷ ಹೊಸತನದ ಹುರುಪಿನೊಡನೆ ಹೊಸ ಚೇತನವನ್ನೂ ತರಲಿ.


ಮತ್ತೊಮ್ಮೆ ಹೊಸ ವರುಷ ಮದನ ಸಖ ಜೊತೆಯಾಗಿ

ಮತ್ತೆ ಹೊಸ ಹೊಸ ಹರುಷ ಬುವಿಯೊಲುಮೆಗೊಲವಾಗಿ

ಚೈತ್ರ ನಡೆ ಚಿತ್ತಾರ ಕಂಡ ಕಂಡೆಡೆಯೆಲ್ಲ

ವಸಂತ ನುಡಿ ಬಿತ್ತರ ಕೇಳಿದಿಂಚರವೆಲ್ಲ

ಮುಗುಳು ಅರಳುಗಳೊಳಗೆ ಮುಗ್ಧ ಮಗುವಿನ ಕೇಕೆ

ಮುಗಿಯದಾರಂಭಕ್ಕೆ ಮುನ್ನುಡಿಯ ಹರಕೆ

ಅರುಣ-ನಿಶೆಯರ ಸರಸ ವರ್ಣ ಮೇಳದ ರಾಗ

ಕಿರಣ-ಕತ್ತಲಿನಾಟ ಜೀವಲೋಕದ ಭಾಗ

ನಗುವು ಅಳುವಿನ ನಂಟ ಬೆಳಕು ಭೀತಿಯ ಬಂಟ

ನಗುವಿನಳುವಿನ ಬಾಳು ತುಂಬು ಸಂಭ್ರಮದೂಟ

ಹರಕೆ ಹಾರೈಕೆಗಳು ನಿಮ್ಮ-ನಮ್ಮೆಲ್ಲರಿಗೆ

ಹಸುರು ಹಸನಾಗಿರಲಿ ಈ ಧರಣಿಯೊಳಗೆ

(೨೬- ಮಾರ್ಚ್-೨೦೦೧)

Saturday 21 March 2009

ಕತ್ತಿನ ಕುತ್ತು

ಕತ್ತು ಉಳುಕಿದ ಹೊತ್ತು
ಕೊಂಕಿಸಿ ನೋಡಿತ್ತು
ಸುಂದರ ಗೊಂಬೆ
`ಆಹ್, ರಂಭೆ'
ಮನ ತೊದಲಿತ್ತು.
ಮನೆ ಮರೆತಿತ್ತು.

ಬಂದವನ ಹಿಂದೆ
ತೂಗಿ ನಿಂತಳು
ಹಾಗೇ ಸಾಗಿ ಮುಂದೆ
ಹೆಜ್ಜೆ ಇಟ್ಟಳು
ಏಳು, ಏಳೇ ಏಳು
ಮುಂದೆಲ್ಲಾ ಮರುಳು

ಕತ್ತ ನೋವು ಸರಿದಿತ್ತು
ಮೆತ್ತೆಯಲ್ಲಿ ಒರಗಿತ್ತು.
(೩೧-ಜನವರಿ-೨೦೦೮)

Sunday 15 March 2009

ಸಮಾಗಮ

ನತ್ತಿನಾಚೆ ಕೆನ್ನೆಲಿತ್ತು
ಹೊಳೆಹೊಳೆಯುವ ಮುತ್ತು
ಕೊಳ ತುಳುಕಿದ ತಿಳಿ ಕಲಕಿದ
ಅಯೋಮಯದ ಹೊತ್ತು

ನಳನಳಿಸುವ ಎಲೆ-ಕಲರವ
ಹನಿ-ಕಂಪನವಡಗಿ
ದಳವರಳಿದ ಕೆಂದಾವರೆ
ತಲೆ ಬಾಗಿಸಿ ಮಲಗಿ

ಮತ್ತೆಚ್ಚರ, ಮುತ್ತೆದ್ದಿತು
ನತ್ತಂಚಿನ ಹೊರಳು
ಬಿಕ್ಕಾಯಿತು, ಸಿಕ್ಕಾಯಿತು
ಸುಕ್ಕಾಯಿತು ಇರುಳು

ದಿನಗೆದರಿದ ಹಸಿಗೂದಲ
ಸಿಂಚನವತಿ ರಮ್ಯ
ಅಮೃತಫಲ ಕಲಶ ಸುಜಲ
ಪಾನ ಮತ್ತ ಸ್ವಾಮ್ಯ

(೧೫-ಜುಲೈ-೨೦೦೪)

Thursday 12 March 2009

ರಂಗಿನಾಟ
ರಂಗ ನಿನ್ನ ಹೋಳಿಯ ರಂಗು
ಭಂಗಿ ನಶೆಯನಿತ್ತಿದೆ
ಅಂಗನೆಯನು ಕಾಡಲು ಬೇಡ
ಗುಂಗು ಬಿಡದೆ ಸುತ್ತಿದೆ


ಬಣ್ಣ ಬಣ್ಣ ಚೆಲ್ಲುತ ನಲಿದೆ
ಕಣ್ಣ ತುಂಬಿಕೊಂಡೆನು
ಚೆನ್ನ ನಿನ್ನ ಸರಸಗಳಲ್ಲಿ
ಕೆನ್ನೆ ಕೆಂಪು ಕಂಡೆನು


ನಿನ್ನ ಮೋಹ ಮೋಡಿಯ ಸೆಳೆಗೆ
ನನ್ನೇ ಮರೆತು ಬಂದೆನು
ಮುನ್ನ ಕೇಳು ಮೋಹನ ಚೆಲುವ
ಕನ್ನೆಯೆದೆಯ ಮಾತನು

ಮನೆಯ ಬಾಗಿಲಲ್ಲಿಯೆ ಅಮ್ಮ
ಕೊನೆಯ ಕಿರಣ ಕಾಂಬಳು
ಮೊನೆಯ ಮೇಲೆ ನಿಂತಂತವಳು
ಇನಿಯ, ಹಾದಿ ಕಾಯ್ವಳು

ಸೆರಗ ಬಿಡೋ, ತುಂಟರ ಒಡೆಯ
ಬೆರಗುಗೊಂಡೆ ಆಟಕೆ
ಮರೆಯದೆಯೇ ನಾಳೆಯು ಬರುವೆ
ದೊರೆಯೆ, ಸಾಕು ಛೇಡಿಕೆ
(೧೧-ಮಾರ್ಚ್-೨೦೦೯/ ಹೋಳಿ ಹುಣ್ಣಿಮೆ)

Thursday 5 March 2009

ಅಡಕತ್ತರಿ

ಹೌದು! ಇದೊಂದು ಅಡಕತ್ತರಿ-
ಇಕ್ಕಳದಂತೆ ಅಡಕೆಯನ್ನು ಇಬ್ಬದಿಯಿಂದ
ನುರಿಯುತ್ತದೆ ಬಲವಾಗಿ ಪುಡಿಯಾಗುವವರೆಗೂ...
ನಡುವಿರುವ ಅಡಕೆಗೋ ಇಬ್ಬಂದಿ-
ಅಲ್ಲಿರಲಾಗದೆ ಹೊರಬರಲೂ ಆಗದೆ
ನುಸುಳಾಡುತ್ತದೆ, ಬಲಹೀನವಾಗಿ ಪುಡಿಯಾಗುವವರೆಗೂ...

ತನ್ನತನದ ಛಾಪು ಉಳಿಸಿಕೊಂಡು
ಹೊಸದೊಂದು ಅಡಕೆ ಮರವಾಗುವ
ಕನಸುಗಳನ್ನು ಕಣ್ತುಂಬಿ ಬೆಳೆದ ನೆನಪುಗಳೊಂದಿಗೆ
ಹೊಸತನದ ಒತ್ತಡಗಳಿಗೆ ಸಿಲುಕಿ
ಹೊಸ ರೂಪ, ಬಣ್ಣ, ಭಾವಗಳಲ್ಲಿ
ಒಂದಾಗಿ ಬೆರೆತು ಲೀನವಾಗುವ ನನಸುಗಳೊಂದಿಗೆ

ಬೆಳೆದ ಆ ನೆಲ, ಬಲಿತ ಮೇಲೆ
ನೆಲೆಸಿದ ಈ ನೆಲೆಗಳ ನಡುವೆ
ಸಿಲುಕಿದ ಅಡಕೆಯಾಗುತ್ತಿದೆ ಈ ಮನಸ್ಸೂ ಪ್ರತಿದಿನ
ಮಕ್ಕಳೂ ತಮ್ಮಂತಾಗಬೇಕೆಂಬ
ಹಂಬಲ ತುಂಬಿದ ಕನಸುಗಣ್ಣುಗಳು
ಛಲ ಕಳೆದುಕೊಳ್ಳುತ್ತಾ ಕಾಂತಿಹೀನವಾಗುತ್ತವೆ ದಿನಾ ದಿನಾ

ಎಲ್ಲವನ್ನೂ ತನ್ನಲ್ಲಿ ಕರಗಿಸಿಕೊಳ್ಳುವ
'ಮೆಲ್ಟಿಂಗ್ ಪಾಟ್ ಕಲ್ಚರ್'ನಲ್ಲಿ
ವೇಗವಾಗಿ ಕರಗಿ ಒಂದಾಗುತ್ತಿವೆ ಎಳಸು ಕುಡಿಗಳು
ಗುರು-ಹಿರಿಯರಿಗೆ ಗೌರವ
ದೇವ-ದೇವತೆಗೆ ಭಕ್ತಿ ಭಾವ
ಯಾವುದನ್ನೂ ಅರಿಯದಾಗಿವೆ ಎಳೆ ಮನಗಳು

ಆ ಮನಗಳನ್ನೆಲ್ಲಿಗೆಳೆದಾಡಲಿ?
ಒಂದೊಂದು ಚೈತ್ರಕ್ಕೂ ಒಂದಾಳು ಬೇರು
ಬಲಿತ ಸಸಿ ಕಸಿಕಟ್ಟಲಾದೀತೆ ಬೇರೆ ನೆಲದೊಳಗೆ?
ಬೇರು ಬಲಿಯುವ ಮುನ್ನ ಇನ್ನೂ-
ಸಮಯವಿದೆ ಎಂದುಕೊಂಡು
ಏಕಾಗ್ರಚಿತ್ತವಿತ್ತು ಆ ಲಕ್ಷ್ಮೀಕಟಾಕ್ಷದೆಡೆಗೆ

ರೆಕ್ಕೆ ಬೆಳೆದ ಮರಿಗಳೀಗ
ಗೂಡು ಬಿಟ್ಟು ಹಾರಿದಾಗ
ಖಾಲಿಗೂಡಿಗೆ ಸಂಜೆ ಮರಳುವೆದೆಯೂ ಖಾಲಿ
ಆ ಲಕ್ಷ್ಮಿಯು ಇದ್ದರೇನಂತೀಗ
ಈ ಹಳೆಯ ಬೇರುಗಳಲ್ಲಿಲ್ಲ ಶಕ್ತಿ
ಹಿಂದುರುಗಲಾಗದ ದಾರಿಯಲ್ಲಿ ನಡಿಗೆ ಹೊಡೆದಿದೆ ಜೋಲಿ

ಮರಳಿ ಮಣ್ಣಿಗೆ ಮರಳುವಾಸೆ
ಕೆರಳಿ ಮರಳುತ್ತಿದೆ ತೆರೆಗಳಂತೆ
ತೋಟವೇ ಇಲ್ಲದ ನೆಲದಲ್ಲಿ ನೆಲೆಯೆಂಬುದೆಲ್ಲಿ?
ಬೆಳೆದ ಮಣ್ಣಿನ ಸೆಳೆತವೊಂದು-
ಕರುಳ ಬಳ್ಳಿಯ ನಂಟು ಒಂದು-
ಒತ್ತಡಗಳೆಡೆಯ ಮನಸು ಅಡಕೆಯಿಲ್ಲಿ!

(೦೫-ಮಾರ್ಚ್-೨೦೦೦)

Wednesday 25 February 2009

ಜಂಟಿ ಪಯಣ

ಅಂದು ನೀ ಬಂದಾಗ ಮಂದಿರದ ಹೊಸಿಲಲ್ಲಿ
ಮಂದಿ ನಿನ್ನನು ತಡೆದು ನಿಂದದ್ದು ನೆನಪಿದೆಯ?

'ಕಂದ'ನೆಂದೆನ್ನಮ್ಮ ಬಳಿಬಂದು ಕುಳಿತಾಗ
ನೀನು ಮೊಗ ತಿರುವಿದ್ದು ನಕ್ಕಿದ್ದು ನೆನಪಿದೆಯ?

ಚಂದ್ರ ಹಾಸಿದ ರಾತ್ರಿ ಮತ್ತಿನಲಿ ಈ ಧಾತ್ರಿ
ನನ್ನೊಳಗ ಕವಿಯೆದ್ದು ಹಾಡಿದ್ದು ನೆನಪಿದೆಯ?

ಹಿಂಜಿದರಳೆಯ ಕಾಳರಾತ್ರೆಯೊಳಗದ್ದಿಟ್ಟ
ಮಾಟ ಮುಂಗುರಳಲ್ಲಿ ಹೊಸೆದುಸಿರ ನೆನಪಿದೆಯ?

ಅರುಣ ಕಿರಣವ ಕದ್ದ ಹೊಂಗೆನ್ನೆ ಹಸೆಯಲ್ಲಿ
ನಿನ್ನ ದಾಸ್ಯಕೆ ಬಿದ್ದ ಕನಸುಗಳ ನೆನಪಿದೆಯ?

ಹನಿಹನಿದು ಸುಧೆಯಾಗಿ ಹರಿವ ಹೊಳೆ ಪ್ರೀತಿಯಲಿ
ಬಂಡೆ-ಸುಳಿಗಳ ಸೆಳೆತ ಕಾಡಿದ್ದು ನೆನಪಿದೆಯ?

ಪಲ್ಲವಿಸಿದೆಲ್ಲ ನಗು ಅಲೆಯಲೆಯ ಸೆಲೆಯಾಗಿ
ಮನದೊಳಗೆ ಮರುಕಳಿಸಿ ಸೇರಿದ್ದು ನೆನಪಿದೆಯ?

ಸವೆದ ಹಾದಿಯ ನಡುವೆ ಕಲ್ಲುಗಳು, ಮುಳ್ಳುಗಳು,
ಕೈಹಿಡಿದು ಜತೆಯಾಗಿ ನಡೆದದ್ದು ನೆನಪಿದೆಯ?

ಒಲುಮೆಯಂಗಳದಲ್ಲಿ ವಾತ್ಸಲ್ಯ ಮಮತೆಗಳ
ಬಳ್ಳಿ-ಗಿಡ-ಮರಗಳನು ಬೆಳೆಸಿದ್ದು ನೆನಪಿದೆಯ?

ಕಾಲನಾಲಗೆಯಲ್ಲಿ ರಸಗ್ರಂಥಿ ನಾವಾಗಿ
ಜೀವದ್ರವದೆಲ್ಲ ಸವಿ ಹೀರಿದ್ದು ನೆನಪಿದೆಯ?ಬಟ್ಟೆ ಬದಲಿಸುವಂತೆ ಬಂಧನವ ಕಿತ್ತೊಗೆದು,
ಭಾವಗಳ ಬಿಟ್ಟೆದ್ದೆ; ಬದುಕಿದನು ನೆನೆಸಿದೆಯ?

ಇಂದು ನೀ ನಿಂದಿರುವೆ ಮಂದಿರದ ಹೊಸಿಲಲ್ಲಿ
'ಹೋಗಿ ಬರುವೆನು' ಎಂದೆ; ಚೇತನವ ಬಯಸಿದೆಯ?
(೦೩-ಡಿಸೆಂಬರ್-೨೦೦೨)

Friday 20 February 2009

ಮಳೆಯಲ್ಲಿ ನೆನೆಯುತ್ತಾ...

(ಈ ಕವನಕ್ಕೆ ಸ್ಫೂರ್ತಿಯಾದ ಬ್ಲಾಗೆಳತಿಗೆ ಮೊದಲ ಧನ್ಯವಾದಗಳು)

ನಿನ್ನೆ ಕಟ್ಟಿದ ಮೋಡ ಇಂದು ಹನಿಹನಿದಾಗ
ತಂಪು ಅಂಗಳದೊಳಗೆ ಮನ ಹಚ್ಚಗೆ
ಇಂದಿನ ನೆನಪುಗಳು ನಾಳೆಯನು ತೆರೆವಾಗ
ಬಣ್ಣ ಬಾನಿನ ಅಂಚು, ದಿನ ಬೆಚ್ಚಗೆ

ಹೊಳೆದು ಕರಗಿದ ಹಗಲು ಮತ್ತೆ ಮರಳುವ ಹೊತ್ತು
ಸೆರಗಿನಂಚಲಿ ಗಂಟು ನಿನ್ನ ನೆನಪು
ಬರುವೆಯೋ ಬಾರೆಯೋ, ಕಾತರದ ಕೈಲಿತ್ತು
ಒಂದೊಂದು ಹನಿಯಿಳಿದ ಕೆಂಪು ಕದಪು

ಮಾಡಿನಂಚಿನ ಕೊನೆಗೆ ಸೆರೆಯಾದ ಸೋನೆಯಲಿ
ಹರಿಹರಿದು ಸುರಿವಂಥ ಒಲವ ಧಾರೆ
ಅದರ ನಲಿವಿನ ತಾಳ ನನ್ನೆದೆಯ ಮಿಡಿತದಲಿ
ಇಳಿದುಹೋಗಿದೆ ಕಾಲ ಕಡಲ ಸೇರೆ

ಮತ್ತೆ ಕಟ್ಟಿದೆ ಮೋಡ, ಹೊಳಪು ಸುರಿಯುವ ಕೆನ್ನೆ
ಸೆರಗಿನಂಚಿನ ಗಂಟು ನನ್ನದಲ್ಲ
ಬಯಲು ಆಲಯ ಮೀರಿ ಎದುರು ನಿಂತವನನ್ನೆ
ಕಣ್ಣತುಂಬಿಕೊ ಎನಲು ಶರಧಿಯೆಲ್ಲ
(೧೨-ಫೆಬ್ರವರಿ-೨೦೦೯)

Sunday 15 February 2009

ಜೋಡಿ ಗೀತೆಗಳಲ್ಲಿನ್ನೊಂದು- ಉಕ್ಕಿದ ಒಲವಿಗೆ...


ಅಕ್ಕರೆ ಹರಿದಾಗ ಉಕ್ಕಿದ ಒಲವೀಗೆ
ಸಕ್ಕರೆ ಹಾಲು ಸುರಿದ್ಹಾಂಗೆ- ನನರಾಣಿ-
ಕಕ್ಕುಲತೆಯಿಂದ ನನ ಬಳಸೆ

ಬಾರೆಲೆ ಸಿಂಗಾರಿ ಸಿಟ್ಟು ಸೆಡವನು ಬಿಟ್ಟು
ಕೂರಿಲ್ಲಿ ನೀನೆನ್ನ ಬಗಲಲ್ಲಿ- ನನರಾಣಿ-
ತೋರೆಲೆ ಪ್ರೀತಿ ಮೊಗದಲ್ಲಿ

ಒಮ್ಮೊಮ್ಮೆ ಬಡವಾಗಿ ಚಿಂತೇಲಿ ಕರಗೋಳೆ
ಬಿಮ್ಮನೆ ಮುನಿಸ ಬೀರೋಳೆ- ನನರಾಣಿ-
ಹೂಮನಸಲೊಮ್ಮೆ ನಗಬಾರೆ

ಮುಂಗಾರು ಮಳೆಯಾಗೆ ತೊಪ್ಪನೆ ತೋಯ್ದೋಳೆ
ಹಿಂಗಾssಡಿ ಹಂಗಾssಡಿ ಬಳುಕೋಳೆ- ನನರಾಣಿ-
ಜಂಗಮಳ್ಹಾಂಗೆ ತಿರುಗೋಳೆ

ತಬ್ಬುವೆನೆಂದರೆ ಮಿಸುಕಾಡಿ ಕೊಸರಾಡಿ
ಅಬ್ಬಿಗೆ ಹಾರಿ ಜಾರೋಳೆ- ನನರಾಣಿ-
ಮಬ್ಬಿನ ಸೆರಗ ಬೀಸೋಳೆ

ಕಿಲಕಿಲ ನಗುತಲಿ ಮನಸನ್ನ ಸೆಳೆಯೋಳೆ
ಗಲಗಲ ಗೆಜ್ಜೆ ದನಿಯೋಳೆ- ನನರಾಣಿ-
ಬಲವಂದು ಬಳಿಯೆ ನಿಲಬಾರೆ

ಥಟ್ಟಂತ ನಲಿನಲಿದು ಹರುಷವ ಹರಿಸೋಳೆ
ಪಟ್ಟಂತ ತಿರುತಿರುಗಿ ಮರೆಯಾಗಿ- ನನರಾಣಿ
ಕಟ್ಟ್ಯಾssಗ ಮೈದುಂಬಿ ಮೆರೆಯೋಳೆ

ಹಿಂದಿಲ್ಲ ಮುಂದಿಲ್ಲ ಒಬ್ಬಂಟಿ ನಾನಿಂದು
ಬಂದಿಲ್ಲಿ ಜೋಡಿ ನೀನಾಗೆ- ನನರಾಣಿ-
ನಿಂದೆನ್ನ ಬಾಳ ಉಸಿರಾಗೆ

ಹಗಲೇನs ಇರುಳೇನs ಪ್ರೇಮಕ್ಕೆ ಹಂಗೇನs
ಸೊಗಲಾಡಿ ಸರಿದು ಬಾರಿಲ್ಲೆ- ನನರಾಣಿ-
ಜಗದಾಗೆ ನಿನ್ಹಾಂಗೆ ಯಾರಿಲ್ಲೆ

ಜೀವಕ್ಕೆ ಜೀವಾಗಿ ಹಸಿರಿಗೆ ಹಸೆಯಾಗಿ
ಶಿವನೆತ್ತಿಯಿಂದ ಹರಿದೋಳೆ- ನನ'ಗಂಗಿ'-
'ಪರ್ವತ'ನ ಪ್ರೀತಿ ಒಪ್ಪಿಸಿಕೋ

(೧೩-ಸೆಪ್ಟೆಂಬರ್-೨೦೦೧)

Friday 13 February 2009

ಜೋಡಿ ಗೀತೆಗಳಲ್ಲೊಂದು- ಅಕ್ಕರೆ ಹರಿದಾಗ...ಸಂಜೀಗಿ ಮಲ್ಲೀಗಿ ಅರಳ್ಯಾವ ಬೆಳ್ಳಾಗೆ
ಈಗೆಲ್ಲಿಗ್ಹೊಂಟ್ಯೋ ನನರಾಯ- ನೋಡಲ್ಲಿ-
ಮಿಣುಕಾಡೊ ಕಣ್ಣು ನಗತಾವ

ಹೀಂಗ್ಹೀಂಗೆ ಬಂದಿದ್ದೆ, ಹಾಂಗ್ಹಾಂಗೇ ಹೊಂಟೆದ್ದೆ
ಬ್ಯಾಸರಿಕೆ ಯಾಕೋ ನನರಾಯ- ಒಂದಾರೆ-
ತೋಳ್ದಿಂಬಿಗೊರಗಿ ನೋಡೆಂದೆ

ದಿನವೆಲ್ಲ ಓಡ್ಯಾಡಿ ದಣಿವಾಗಿ ಬಂದೀಯೆ
ಒಂದೀಟು ಅಡ್ಡಾಗು ನನರಾಯ- ನಿಂಗಿಂಥ-
ಆತುರದ ಕಾರ್ಯ ಬ್ಯಾಡೇಳು

ಕಾಲಿಗೆ ನೀರ್ಕೊಡುವೆ, ಕೈಯೊಳಗೆ ಕೈಯಿಡುವೆ
ಅಕ್ಕರೆ ಮಳೆಗರೆವೆ ನನರಾಯ- ಕಣ್ಣಲ್ಲಿ-
ಕಣ್ಣಿರಿಸಿ ನಗಬಾರೊ ಪ್ರೀತೀಲೆ

ಆಸರಿಗೆ ಎಳನೀರ ಆರಿಸಿ ಅತ್ತಿಡುವೆ
ಇನಿಮಾವು ಉಣಲಿಡುವೆ ನನರಾಯ- ನೀನಿಂದು-
ತಾಂಬೂಲ ರಾಗದ ಸವಿನೋಡೊ

ಗೋಧೂಳಿ ಕೆಂಬಣ್ಣ ಕೆನ್ನೀರ ಮಾಡಿಟ್ಟು
ದಿಟ್ಟಿಯ ತೆಗೆಯುವೆ ನನರಾಯ- ಬಾ ಇಲ್ಲಿ-
ಅತ್ತಿತ್ತ ನೋಡೋ ಹಂಗ್ಯಾಕೋ

ಹಚ್ಚಾನೆ ಹಾಸಿರುವೆ ಹಚ್ಚಾಡ ನಿಂಗಾಗಿ
ಅಚ್ಚು-ಮೆಚ್ಚಿನಲೇ ನನರಾಯ- ನೀನೀಗ-
ಮೆಚ್ಚುಗೆ ಬೀರಿ ಒರಗೊಮ್ಮೆ

ಅರುಣನ ಹೊಂಬಣ್ಣ ರಂಗನ್ನೆ ಹೊದೆಸುವೆ
ತಂಗಾಳಿ ತೊಟ್ಟಿಲಲಿ ನನರಾಯ- ನಿನ್ನನ್ನು-
ಜೋಗುಳ ಹಾಡಿ ಮಲಗಿಸುವೆ

ಮೊಗ್ಗೀಗೆ ಜೀವಾದೆ ಕಣ್ಣೀನ ಹೂವಾದೆ
ಹಸಿರಿಗೆ ನೀ ಉಸಿರು ನನರಾಯ- ಬೆಳಕಾಗಿ-
ಬೇಕಾದೆ ನೀನು ಜಗಕೆಲ್ಲ

ಆ ಶಿವನ ಹಣೆಗಣ್ಣು, ಆ ಹರಿಯ ತಿರುಚಕ್ರ
ನೀನಲ್ಲವೇನೋ ನನರಾಯ- 'ದಿನಪತಿ'ಯೆ
'ಭೂಸತಿ'ಯ ಪ್ರೀತಿ ಒಪ್ಪಿಸಿಕೋ

(೦೬-ಸೆಪ್ಟೆಂಬರ್-೨೦೦೧)

Sunday 8 February 2009

ಯಾತ್ರೆ


ನೆಲವ ಕೊರೆದು, ಮರವ ಕಡಿದು,
ಸೋಗೆ, ಬಿದಿರು ಒಟ್ಟಣೆ,
ಪರಮಯಾತ್ರೆಗಟ್ಟಣೆ.

ಮಂತ್ರ-ತಂತ್ರ, ಎಣ್ಣೆ-ನೀರು,
ಹೂವು, ಹಳದಿ, ಕುಂಕುಮ,
ದರ್ಭೆ, ಎಳ್ಳು ತತ್ಸಮ.

ಬರಿಯಕ್ಷತೆ, ಬುರುಡೆದೀಪ,
ಬಿರಿದ ಎದೆಯ ಕಂಗಳು,
ತಡವರಿಸುವ ಕೈಗಳು.

ಕಾಲವ್ಯಾಲ ದಿಗ್ವಿಜಯದಿ-
ತರ್ಕ, ಜ್ಞಾನ ನಗಣಿತ,
ಬಾಳಬಿಂಬ ಪರಿಮಿತ.

ಅಚ್ಚಳಿಯದು, ಮುಚ್ಚುಳಿಯದು,
ಬಂಧು ನಿನ್ನ ಬಂಧನ,
ಪಂಚ ಭೂತ ಚೇತನ.

(೧೩-ಜುಲೈ-೨೦೦೬)

Tuesday 3 February 2009

ಮಾಯೆ

ಜಗದಚ್ಚರಿಯ ಪರಿಗೆ ಬೆರಗಾಗುವಂದದಿಯೆ
ಅಗಲಿಕೆಗೆ ಮರುಗುವಂತೆ,
ಹಗೆ ಮೋಹ ಭವದಾಹದಂಟುನಂಟನ್ನಿತ್ತೆ
ಹೊಗುವಂತೆ ಹಾತೆ ಉರಿಯ;
ಧಗೆಯೊಳಗೆ ಮನವಿಹುದು, ಸುತ್ತ ಮುತ್ತಿದೆ ಹೊಗೆಯು,
ಮುಗಿಸಲಾರೆನು ಪಯಣವ;
ಅಗಣಿತದ ಗಣಿತದಲಿ ನನ್ನ ಲೆಕ್ಕವದೇನು
ನಗುವಿನಿಂದಳೆಯೊ ಬದುಕ.

ಅರಿವಿನಳವಿಗೆ ಸಿಗದ ಮರೆಯ ಶಕ್ತಿಯೆ, ಕೊಂಚ
ಅರಿವಳಿಕೆಯನ್ನು ಸರಿಸು;
ಬರಿದುಗಣ್ಣಿಗೆ ಬರುವ ಮಣ್ಣ ಬಣ್ಣಗಳನ್ನು
ಕುರುಡು ಬುದ್ಧಿಯಿಂದಳಿಸು;
ಹರಿಸು ನೀ ಸ್ನೇಹಜಲ, ಪ್ರೇಮಗಂಗಾಸಲಿಲ
ಹರಸು, ಹರಿ ಮಾಯೆಯನ್ನು.
(೧೫-ಜನವರಿ-೨೦೦೭)

Wednesday 28 January 2009

ಅವಳಿಲ್ಲ.....!?

ಗೆಳತಿಯರೊಡನೆ ಹರಟೆಯ ಹೊಡೆದು ಹಾಡಿ ಕುಣಿಯಲು ಅವಳಿಲ್ಲ
ಬಣ್ಣದ ಚಿಟ್ಟೆಯ ಬೆನ್ನಟ್ಟಿ ಹೋಗಿ ಬೆರಗನು ಬೀರಲು ಅವಳಿಲ್ಲ

ಅಪ್ಪನ ಲುಂಗಿಯು ಅಡಿಮೇಲೆಂದು ಕಿಲಕಿಲ ನಗಲು ಅವಳಿಲ್ಲ
ಅಮ್ಮನ ಸೀರೆಯ ಬಣ್ಣದ ಬಗ್ಗೆ ಪಿಸಿಪಿಸಿ ಕಿಸಿಯಲು ಅವಳಿಲ್ಲ

ಆಟಕೆ ಬರಲು ಅಮ್ಮನ ಮಣಿಸೆ ಮಜ್ಜಿಗೆ ಕಡೆಯಲು ಅವಳಿಲ್ಲ
`ಜೊತೆಗಿರಿ' ಎಂದು ಅಪ್ಪನ ಕತ್ತಿಗೆ ಜೋತು ಬೀಳಲು ಅವಳಿಲ್ಲ

ಅಣ್ಣನ ಜೊತೆಗೆ ಕೀಟಲೆಯಾಡಿ ದೂರನು ಕೊಡಲು ಅವಳಿಲ್ಲ
ಕ್ರಿಕೆಟ್ ನೋಡುತ ಅಣ್ಣನ ವಿವರಣೆ ಕೇಳಿ ಟೀಕಿಸಲು ಅವಳಿಲ್ಲ

ಅಜ್ಜನ ಬೇಡಿ ದ್ರಾಕ್ಷಿಯ ಪಡೆದು ಅಡಗಿಸಿ ತಿನ್ನಲು ಅವಳಿಲ್ಲ
ಅಜ್ಜಿಯ ಕಾಡಿ ಬೆಲ್ಲವ ಕೇಳಿ ಮೆಲ್ಲುತ ಬರಲು ಅವಳಿಲ್ಲ

ಛೇಡಿಸಿ ಪೀಡಿಸಿ ಚಿಕ್ಕನ ಹೆಗಲಲಿ ಸವಾರಿ ಹೊರಡಲು ಅವಳಿಲ್ಲ
ಅತ್ತೆಯ ಮಕ್ಕಳ ಜೊತೆಯಲಿ ನಲಿದು ಕುಲುಕುಲು ನಗಿಸಲು ಅವಳಿಲ್ಲ

ಅಜ್ಜಿಯ ತೋಟದ ಹೂಗಳನಾರಿಸಿ ಜಗಲಿಯಲಿರಿಸಲು ಅವಳಿಲ್ಲ
ಅಜ್ಜನ ಹೊಟ್ಟೆಯು `ಚಪಾತಿ ಹಿಟ್ಟೆಂದು' ಮರ್ದನ ಮಾಡಲು ಅವಳಿಲ್ಲ

ಮಾಮನ ಕತೆಗಳ ಕೇಳುತ ನಕ್ಕು ಬೆನ್ನಿಗೆ ಗುದ್ದಲು ಅವಳಿಲ್ಲ
ಅತ್ತೆಯು ಮಾಡುವ ಒತ್ತು ಶ್ಯಾವಿಗೆಯ ಎಳೆ ಎಳೆ ಬಿಡಿಸಲು ಅವಳಿಲ್ಲ

`ತಂಗಿ' `ತಮ್ಮ' ಎಂದು ಒಲಿಸಿ ಕಿರಿಯರ ರಮಿಸಲು ಅವಳಿಲ್ಲ
ಅಕ್ಕನ ಸ್ಥಾನದಿ ಹೆಮ್ಮೆಯ ಬೀರುತ ಮುಂದಾಳಾಗಲು ಅವಳಿಲ್ಲ

ನಾಟ್ಯವನಾಡುವ ಕನಸನು ಹೊತ್ತ ಸೂಜಿಗಣ್ಣಿನ ಅವಳಿಲ್ಲ
ಪ್ರಾಣಿಗಳನ್ನು ರಕ್ಷಿಸ ಹೊರಟ ಚಿಗರೆ ನಡಿಗೆಯ ಅವಳಿಲ್ಲ

ಹೋದಲ್ಲೆಲ್ಲೆಡೆ ನಗೆಯನು ಬೀರುವ ಜೀವದ ಚಿಲುಮೆ ಅವಳಿಲ್ಲ
ಮುದ್ದು ಮಾಡುತ ಮುತ್ತಿಗೆ ಕಾಡುತ ಗಮನವ ಸೆಳೆಯುವ ಅವಳಿಲ್ಲ

ವೇದಿಕೆಯಿಂದ ಭಿತ್ತಿಗೆ ಏರಿದ ಮಂಜಿನ ಮಣಿಸರ ಅವಳಿಲ್ಲ
`ಬಂಗಾರ' ಬದುಕನು ಬಾಳಲು ಬಂದ `ಸುಂದರಿ' `ಚೆಲುವೆ' ಇನ್ನಿಲ್ಲ
(೧೦-ಮಾರ್ಚ್-೨೦೦೬)

Tuesday 20 January 2009

ಜೀವನ್ಮುಖಿ

ಮನದಿ ನೋವ ಹುದುಗಿ ಮೇಲೆ
ತಂದ ಒಂದು ನಗುವಿಗೆ-

ಬರಗಾಲದ ಬಿರುಕಿನಲ್ಲು
ಹೊರಟ ಹಸುರ ಕುಸುರಿಗೆ-

ಒಂದೆ ಗುಕ್ಕ ಎರಡು ಕೊಕ್ಕಿ-
-ಗಿತ್ತು ನಲಿವ ಕರುಳಿಗೆ-

ಚಿಂದಿಯಲ್ಲೆ ಮುದುರಿಕೊಂಡು
ಕಾವಲಿಡುವ ಮಮತೆಗೆ-

ಅಗ್ನಿಹೋತ್ರಿಯಾಗಿ ನಿಂತು
ತಂಪನೆರೆವ ತರುವಿಗೆ-

ಕತ್ತಲಲ್ಲಿ ಬಿಕ್ಕು ಬೆರೆಸಿ
ದಿನದಿ ಬಿರಿವ ಕಂಪಿಗೆ-

ಯಾವ ಬಿರುದು ಹೆಸರು ಇರದೆ
ತುಡಿಯುವೆದೆಗೆ ಅರ್ಪಣ
(೦೪-ಜುಲೈ-೨೦೦೩)

(ಯಾವ್ಯಾವುದೋ ಕಾರಣ-ಒತ್ತಡಗಳಿಗೆ ಸಿಲುಕಿ ಮಕ್ಕಳನ್ನು ಸಾಕಿ ಬೆಳೆಸುವ ಜವಾಬ್ದಾರಿ ಹೊರುವ 'ಒಂಟಿ ಎತ್ತಿನ ಗಾಡಿ'ಗಳಾದ "ಸಿಂಗಲ್ ಪೇರೆಂಟ್ಸ್" ಬಗ್ಗೆ)

Wednesday 14 January 2009

ರಾಗ ರಂಗು

ಚದುರಿ ಉಷೆಯ ಕುಂಕುಮ
ನೊಸಲ ತುಂಬ ಸಂಭ್ರಮ
ಹನಿದು ಮುತ್ತು ಹನಿಗಳು
ಬಯಲ ತುಂಬ ಮಣಿಗಳು

ಅರುಣ ಕದವ ತೆರೆಯಲು
ದಿವ್ಯಗಾನ ಹರಿಯಲಿ
ಕಿರಣ ಧಾರೆ ಹೊಳೆಯಲು
ಹೊನ್ನ ಗಾನ ಹೊಳೆಯಲಿ

ತುಂಬಿ ಬೆಳಕ ಬಿಂದಿಗೆ
ಬರಲಿ ಬಳುಕಿ ಮೆಲ್ಲಗೆ
ನೇಸರೇರಿ ನಲಿಯಲಿ
ಕಮಲ ಬಳುಕಿ ಅರಳಲಿ

ಚಿಗುರ ಹಸುರು ಉಸಿರಿಗೆ
ಜಗವು ರವಿಯ ಹೆಸರಿಗೆ
ಉದಯ ಕಾಲ ರಂಗಿಗೆ
ಕಾವ್ಯ ರವಿಯ ಭಂಗಿಗೆ

(೨೦-ಸೆಪ್ಟೆಂಬರ್-೧೯೯೭)

Tuesday 6 January 2009

ಹಿಮಾವೃತ ಪಯಣಎಲ್ಲ ಬೆಳಗುವ ಸೂರ್ಯನ ಸುತ್ತ

ಕಟ್ಟಿದ ಮೋಡದಿಂದ ಬಿದ್ದದ್ದು

ಕೊರೆಯುವ ಛಳಿ ಹಿಡಿಸಿ ನಡುಗಿಸುವ ಹಿಮ

ಕರಗಿ ಹರಿದರೆ ನೀರಾದರೂ ಆದೀತು

ಬೆಟ್ಟದ ತಣ್ಣನೆ ಗಾಳಿಯಲ್ಲಿ ಅದೂ ಸಾಧ್ಯವಿಲ್ಲ


ನೋಟ ಹರಿದಷ್ಟೂ ಬಿಳಿಯ ರಾಶಿ

ದೂರದ ಬೆಟ್ಟ ನುಣ್ಣಗೆ, ಬೆಣ್ಣೆನುಣ್ಣಗೆ

ಎಲ್ಲ ತಗ್ಗು ದಿಣ್ಣೆಗಳನ್ನೂ ಸೇರಿಸಿ

ಆವರಿಸಿ ಹೊದೆಸಿ ಬಿಮ್ಮಗೆ ಕೂತ ಹಿಮ

ರವಿ ಇಣುಕಿದರೆ ಕಣ್ಣಿಗೇ ರಾಚುವ ಬೆಳಕು


ಮಸುಕು ಮಸುಕು, ಮುಸುಕಿದ ಮಂಜು

ಮೈಲರ್ಧದ ಆಚೆಗೇನೂ ಕಾಣದ ಪರದೆ

ತೆಳುವಾಗಿ ಹರಡಿದ ಮಾಯಾ ಜಾಲ

ಪ್ರತಿಫಲನದ ಪ್ರತೀಕ್ಷೆಯಲ್ಲಿಯೇ

ಎಗರಾಡದೆ ನಯವಾಗಿಯೇ ಹರಿಯುವ ಬಂಡಿ


ಎತ್ತರ ಗುಡ್ಡದ ನೆತ್ತಿಯ ಬದಿಯಲ್ಲಿ

ಕಿರುತಿರುವಿನ ರಸ್ತೆಯಂಚಿನ ಬೇಲಿ

ತಡೆಯೇ ತಿಳಿಯದಂತೆ ತೇಲಿಹೋದದ್ದು

ಕನಸೊ? ಕಲ್ಪನೆಯೊ? ಬದುಕೊ?

ಕೊರೆವ ಗಾಳಿಯೊಳಗೆ ಗುರುತುಗಳಿಲ್ಲ

(೦೫-ಜನವರಿ-೨೦೦೯)

Thursday 1 January 2009

ಶುಭಾಶಯ.... ಶುಭಾಶಯ....


ಓದುಗರಿಗೆಲ್ಲ ಕ್ರಿಸ್ತ ಶಕ ೨೦೦೯ರ ಶುಭಾಶಯಗಳು

ಹೊಸ ವರ್ಷ ನಮ್ಮೆಲ್ಲರಿಗೂ ಸಂತಸ, ಸುಖ, ನೆಮ್ಮದಿ ತರಲಿ
ಶಾಂತ, ಆರೋಗ್ಯದಾಯಕ ಜೀವನ ಎಲ್ಲರ ಮುಂದಿರಲಿ
ಲೋಕದಲ್ಲಿ ನಗು ನಲಿಯಲಿ
ವಿಶ್ವದಲ್ಲಿ ಹರುಷ ಹರಿಯಲಿ

ಶರದ ಹೇಮಂತ

ಹಾಡು ಕೇಳಿ...

ಸ್ವಾತಿಯ ಮಳೆಯು ಇಳಿದಿದೆ ನೋಡು
ಹಳೆಯೊಲವಿಗೆ ಹೊಸ ಹೆಪ್ಪಿಡಲು,
ಎದೆಗಡಲಲಿ ಹನಿ ಹೊಳೆದಿದೆ ಇಂದು
ಚಿಪ್ಪಲಿ ಮುತ್ತನು ಕಾಪಿಡಲು.

ಅನುರಣನದ ದನಿ ಮೊಳಗಲು ಮನದಲಿ
ನಾದದ ಮೋದವು ರಂಜಿಸಿತು,
ಚಿಮ್ಮಿದ ತುಂತುರು ಭಿತ್ತಿಯ ಸುತ್ತಲು
ರಾಗದ ಪಲುಕೇ ರಾಜಿಸಿತು.

ನಿನ್ನಯ ಒಲವನು ಸಾರಿದ ಶರದ
ಹೇಮಂತನಲಿದೆ ಗೆಲುವೆಂದ,
ಹೊನ್ನಿನ ರಥದಲಿ ಸಾರಥಿಯಾಗುವ
ಅರಮನೆಗೊಯ್ಯುವ ನಲವಿಂದ.

ಮುತ್ತಿನ ಮತ್ತಿಗೆ ಕಡಲಿನ ಹೊತ್ತಗೆ
ಪುಟ ಪುಟ ತೆರೆವುದು ನಳನಳಿಸಿ,
ಸನ್ನಿಧಿ ಸಾರ್ಥವ ಪಡೆಯಲು ಕಾದಿದೆ
ಕಾಲವೆ ಕಂಪಿಸಿ, ಸಂಭ್ರಮಿಸಿ.