ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday, 27 December, 2010

ಸುಮ್ಮನೆ ನೋಡಿದಾಗ...೦೯

ಎಷ್ಟೋ ಹೊತ್ತಿನ ನಂತ್ರ ಸುಮುಖ್ ಮಿಂಚಿನ ಹಾಗೆ ನಕ್ಕರು. ಹುಬ್ಬು ಹಾರಿಸಿ ಸಿಳ್ಳೆ ಹಾಕಿದರು.
‘ಏನು? ಇಷ್ಟು ಖುಷಿಯಾಗುವಂಥಾದ್ದು ಏನಾಯ್ತೀಗ?’
‘ಅಮ್ಮ ಹೇಗೂ ಇನ್ನು ಒಂದು ವರ್ಷ ಇಲ್ಲಿಗೆ ಬರೋದಿಲ್ಲ...’
‘ಅದ್ಕೇ...?!’
‘ಅದ್ಕೇ, ಹರಿಣಿ ಇಲ್ಲೇ ಇರ್ಲಿ...’ ಈಗ ಮಿಂಚು ನನ್ನ ಕಣ್ಣಲ್ಲಿ, ಮನದಲ್ಲಿ. ‘ನಾನೂ ಇದನ್ನೇ ನಿರ್ಧರಿಸಿದ್ದೆ’ ಎಂದೆ.
‘ಅಷ್ಟೇ ಅಲ್ಲ ಮಾರಾಯ್ತಿ. ಅವಳಿಲ್ಲೇ ಇದ್ದುಕೊಂಡು ಮಗು ಹೆರಲಿ. ಆಮೇಲೆ... ಅವಳಿಗೆ ಮಗು ಬೇಡವಾಗಿದ್ರೆ...’
‘...ನಮಗಿರಲಿ...’
‘ಹೇಗೂ ಅವ್ಳು ನಿನ್ನ ಪ್ರಾಣಸ್ನೇಹಿತೆ. ಸಮಯ ನೋಡಿ ಹೇಳಿದನ್ನು ಅವಳಿಗೆ. ನಮಗೇನು? ಅಮ್ಮ ಮತ್ತೆ ಇಲ್ಲಿ ಬರುವ ಹೊತ್ತಿಗೆ ಒಂದು ಮಗು ಇದ್ರೆ ಖುಷಿಯಾಗ್ತಾಳೆ. ನಿನ್ನ ಮೇಲೆ ರೇಗಾಡುದೂ ನಿಲ್ತದೆ. ಆಗ್ದಾ?’
‘ಹಾಗಲ್ಲ ಸುಮುಖ್, ಇದೆಲ್ಲ ನಾವು ಅಂದುಕೊಳ್ಳುವಷ್ಟು ಸರಳ ಅಲ್ಲ. ಯಾವುದಕ್ಕೂ ನಾನು ಹರಿಣಿ ಹತ್ರ ಮಾತಾಡ್ತೇನೆ. ನೋಡುವಾ. ನೀವು ಹೇಳಿದ ವಿಚಾರ ಆಗ್ಲೇ ನನ್ನ ತಲೆಯಲ್ಲಿ ಬಂದಿತ್ತು. ನಿಮಗೆ ಹೇಳ್ಲಿಲ್ಲ, ನೀವೇನು ಅಂದ್ಕೊಳ್ತೀರೋಂತ....’
‘ನೋಡಿದ್ಯಾ? ನಮ್ಮಿಬ್ರ ಯೋಚನೆಯೂ ಒಂದೇ ಅಂತಾಯ್ತು. ಚಿಂತಿಸ್ಬೇಡ, ಆಯ್ತಾ? ಎಲ್ಲ ಸರಿಯಾಗ್ತದೆ. ಎಲ್ಲ ಸುಸೂತ್ರ ಆಗ್ತದೆ. ಹಾಗಂತ ನನ್ ಮನಸ್ಸು ಹೇಳ್ತಾ ಉಂಟು. ಈಗ ನಾನು ಒಂದು ಸಣ್ಣ ನಿದ್ದೆ ಮಾಡ್ಬಹುದಾ...’
‘ಮಾಡಿ ಮಾರಾಯ್ರೆ. ಸಣ್ಣದ್ಯಾಕೆ, ದೊಡ್ಡ ನಿದ್ದೆಯೇ ಮಾಡಿ. ಸಂಜೆ ಟೀ ಮಾಡಿ ಎಬ್ಬಿಸ್ತೇನೆ. ಮಲಗಿ.’

ಹರಿಣಿ ಹೇಳಿದ ಪ್ರಕಾರ ಅವಳಿಗೀಗ ಎರಡು ತಿಂಗಳಷ್ಟೇ. ಆಗಲೇ ಎಲ್ಲ ನಿರ್ಧಾರ ಮಾಡಿ ಬಂದಿದ್ದಾಳೆ. ಇನ್ನು ಆರೇಳು ತಿಂಗಳು ಹೆರಿಗೆಗೆ, ಮತ್ತೆ ಮೂರ್ನಾಲ್ಕು ತಿಂಗಳು ಬಾಣಂತನ. ಅಂತೂ ಅತ್ತೆ ಎಲ್ಲ ಮಕ್ಕಳ ಮನೆ ಟೂರ್ ಮುಗಿಸಿ ಬರುವ ಹೊತ್ತಿಗೆ ಮನೆಗೊಂದು ಪುಟ್ಟ ಕಂದಮ್ಮ ಬಂದಿರ್ತದೆ. ಆದ್ರೆ... ಹರಿಣಿಗೆ ಇದನ್ನು ಹೇಳುದು ಹೇಗೆ? ಹೆತ್ತ ತಾಯಿಯ ಹತ್ರ ನಿನ್ನ ಮಗುವನ್ನು ನನಗೆ ಕೊಡು ಅಂತ ಕೇಳುದು ಹೇಗೆ? ಇನ್ನೂ ಸಮಯ ಉಂಟಲ್ಲ. ನೋಡಿದ್ರಾಯ್ತು... ಲೆಕ್ಕಾಚಾರ ಹಾಕ್ತಿದ್ದೆ. ಅದೇ ಹೊತ್ತಿಗೆ ತನ್ನ ನಿದ್ದೆ ಮುಗಿಸಿ ಹರಿಣಿ ನಡುಮನೆಗೆ, ಊಟದ ಟೇಬಲ್ ಹತ್ರ ಬಂದು ನಿಂತಳು, ಏನೋ ಹೇಳುವವಳ ಹಾಗೆ.

‘ಕಾಫಿ ಮಾಡ್ಲಾ ಟೀ ಆದೀತಾ?’ ಕೇಳಿದೆ.
‘ಯಾವುದಾದ್ರೂ ಸರಿ. ನಿನ್ನ ಸ್ವರ ಯಾಕೆ ಹಾಗುಂಟು? ಸುಮುಖ್ ಹತ್ರ ಜಗಳಾಡಿದ್ಯಾ ನನ್ನ ವಿಷ್ಯ? ನಿಮಗೆ ಕಷ್ಟ ಆಗ್ಬಹುದಲ್ವಾ? ನಾನು ನಾಳೆಯೇ ಇಲ್ಲಿಂದ ಹೋಗ್ತೇನೆ. ಯೋಚಿಸ್ಬೇಡ...’ ಬಡಬಡಾಯಿಸಿದಳು.
ಅವಳನ್ನು ಕೈ ಹಿಡಿದು ಎಳೆದು ನನ್ನ ಬದಿಯ ಕುರ್ಚಿಯಲ್ಲಿ ಕುಳ್ಳಿರಿಸಿದೆ. ‘ಹಾಗೇನೂ ಇಲ್ಲ ಮಾರಾಯ್ತೀ. ಜಗಳವೂ ಇಲ್ಲ ಏನೂ ಇಲ್ಲ. ನೀನು ಇಲ್ಲೇ ಇರೂಂತ ಅವರೂ ಹೇಳಿದ್ರು.’
‘ನಿನ್ನತ್ತೆ...?!’
‘ಅತ್ತೆ ಎಲ್ಲ ಮಕ್ಕಳ ಮನೆಗಳಿಗೆ ಟೂರ್ ಹೊರಟಿದ್ದಾರೆ. ಎಲ್ಲಾ ಕಡೆ ಸುತ್ತಾಡಿ ಇಲ್ಲಿ ಬರುವಾಗ ಒಂದು ವರ್ಷವೇ ಆಗ್ತದೆ. ಅಷ್ಟೊತ್ತಿಗೆ ನಿನ್ನ ಹೆರಿಗೆ ಆಗಿ ಮೂರ್ನಾಲ್ಕು ತಿಂಗಳೂ ಆಗಿರ್ತದೆ, ಅಲ್ವಾ? ನೀನೇನೂ ಚಿಂತೆ ಮಾಡುದೇ ಬೇಡ. ಎಲ್ಲ ಇಲ್ಲಿಯೇ ಆಗ್ಲಿ. ಇಲ್ಲೇ ಇರು ನೀನು.’
ದೀರ್ಘವಾದ ನಿಟ್ಟುಸಿರು ಬಿಟ್ಟು ಕುರ್ಚಿಯಲ್ಲಿ ಆರಾಮವಾಗಿ ಕೂತಳು ಹರಿಣಿ.

ನಾನು ಟೀ ಮಾಡಿ ತಂದು ಇವರನ್ನು ಎಬ್ಬಿಸಿದೆ. ಮೂವರೂ ಜೊತೆಯಾಗಿ ಟೀ ಹೀರುತ್ತಿರುವಾಗ ಸುಮುಖ್ ನೇರವಾಗಿ ಅವಳನ್ನೇ ನೋಡಿ, ‘ಹರಿಣಿ, ನಿಮ್ಮನ್ನು ನನ್ನ ಸ್ನೇಹಿತೆ ಅಂತಲೂ ತಿಳಿದಿದ್ದೇನೆ. ನಮ್ಮಿಬ್ಬರ ಸ್ನೇಹ ನಿಮಗೆ ಕಹಿ ಆಗಲಾರದು. ಹೊರೆ ಆಗಲಾರದು ಅಂದುಕೊಳ್ತೇನೆ. ನೀವಿಲ್ಲೇ ಇರಿ ಅಂತ ನಮ್ಮಾಸೆ. ಇಲ್ಲ ಅಂತ ಹಠಕ್ಕೆ ಬೀಳ್ಬೇಡಿ. ಮೂರು ಜೀವಗಳಿಗೆ ನೋವಾಗ್ತದೆ. ಇದಕ್ಕಿಂತ ಹೆಚ್ಚಾಗಿ, ನಿಮ್ಮ ಅಮ್ಮನ ಮನೆಗೇ ಹೋಗುವ ಹಾಗಿದ್ರೆ ನನ್ನ ಅಭ್ಯಂತರ ಇಲ್ಲ. ಯೋಚನೆ ಮಾಡಿ.’ ಅಂದರು.

ಟೀ ಲೋಟದ ಹೊಗೆ ಸುರುಳಿಯೊಳಗೆ ಏನನ್ನೋ ಹುಡುಕುತ್ತಿದ್ದಳು ಹರಿಣಿ.

Monday, 20 December, 2010

ಸುಮ್ಮನೆ ನೋಡಿದಾಗ...೦೮

ಮಧ್ಯಾಹ್ನದ ಊಟ ಮುಗಿಸಿ ಹರಿಣಿ ನಿದ್ದೆಗೆ ಜಾರಿದಳು. ತಂಗಿ ಶಂಕರಿಯ ಮನೆಯಲ್ಲಿ ಅಮ್ಮನನ್ನು ಬಿಟ್ಟು ಬಂದಿದ್ದ ಸುಮುಖ್ ಹರಿಣಿಯನ್ನು ಇಲ್ಲಿ ನೋಡಿ ಹುಬ್ಬೇರಿಸಿದ್ದರು, ಅಷ್ಟೇ. ಕುರ್ಚಿಯಲ್ಲೇ ನಡುಹಗಲಿನ ಸಿಹಿನಿದ್ದೆಗೆ ಜಾರಬೇಕೂಂತ ಅಂದಾಜು ಮಾಡ್ತಾ ಪೇಪರ್ ಹಿಡಿದವರನ್ನು ರೂಮಿಗೆ ಕರೆದೆ. ಮತ್ತೊಮ್ಮೆ ಹುಬ್ಬು ಹಾರಿಸುತ್ತಾ ಕಳ್ಳ ನಗುವಿನ ಒಟ್ಟಿಗೆ ಸಣ್ಣಗೆ ಸಿಳ್ಳೆ ಹಾಕುತ್ತಾ ಒಳಗೆ ಬಂದವರ ಬೆನ್ನಿಗೊಂದು ಗುದ್ದಿ ಹೇಳಿದೆ, ‘ಸರಸಕ್ಕೆ ಕರ್ದದ್ದೇ ಅಲ್ಲ ನಾನು. ವಿಷಯ ಗಂಭೀರವಾಗಿದೆ. ಸ್ವಲ್ಪ ಗಮನ ಇಟ್ಟು ಕೇಳಿ, ಆಯ್ತಾ?’

ನನ್ನ ಸೀರಿಯಸ್ ಸ್ವರ ಅವರ ರೋಮಿಯೋನನ್ನು ಓಡಿಸಿತ್ತು. ಮಕ್ಕಳೇ, ನಿಮ್ಮ ಮುಂದೆ ಇದೆಲ್ಲ ಹೇಳ್ಲಿಕ್ಕೆ ನಂಗೇನೂ ತೊಂದ್ರೆ ಇಲ್ಲ. ಯಾಕಂದ್ರೆ, ನಾಳೆ ನಾಳೆ ಅನ್ನುವಾಗ ನೀವೂ ಇದೇ ದಾರಿಯಲ್ಲಿ ಬರುವವರು. ಆದ್ರಿಂದ ನಂಗೇನೂ ನಾಚಿಕೆ ಇಲ್ಲ, ಇದನ್ನೆಲ್ಲ ಬಿಚ್ಚಿಡ್ಲಿಕ್ಕೆ. ಕೇಳಿ. ನನ್ನ ಸೀರಿಯಸ್ ಸ್ವರ ಕೇಳಿ, ಅವರೂ ಗಂಭೀರವಾದರು. ಹರಿಣಿ ಹಿಂದಿನ ರಾತ್ರೆಯೆಲ್ಲ ನಿರೂಪಿಸಿದ ಅವಳ ಐದು ವರ್ಷದ ಜೀವನವನ್ನು ಸುಮುಖ್ ಮುಂದೆ ಬಿಚ್ಚಿಟ್ಟೆ.

“ಚಿನ್ಮಯ್ ಕನ್ಸಲ್ಟೆನ್ಸಿಯ ಮ್ಯಾನೇಜರ್, ಹರಿಣಿಯ ಮಾವನ ಪರಿಚಯಸ್ಥ ಚಿದಾನಂದ. ಇವಳನ್ನು ಪಿ.ಎ. ಆಗಿ ನೇಮಿಸಿಕೊಂಡಿದ್ದ. ಮೊದಮೊದಲು ಎಲ್ಲವೂ ಸುಸೂತ್ರವಾಗಿಯೇ ಇತ್ತು. ಏಳೆಂಟು ತಿಂಗಳು ಕಳೆಯುವಾಗ ಆಫೀಸಿನ ಎಲ್ಲರ ಸ್ನೇಹ ಗಳಿಸಿಕೊಂಡಿದ್ದಳು. ಅಲ್ಲೇ ಇನ್ನೊಬ್ಬ ಮ್ಯಾನೇಜರ್ ವಿನ್ಯಾಸ್. ಇವಳ ಬಗ್ಗೆ ವಿಶೇಷ ಅಕ್ಕರೆ ತೋರಿಸ್ತಿದ್ದ. ಸುಮಾರು ಒಂದು ವರ್ಷದ ವರೆಗೂ ಇವಳಿಗದು ಗಮನಕ್ಕೇ ಬಂದಿರಲಿಲ್ಲ. ಒಂದು ದಿನ ಚಿದಾನಂದ್ ನೇರವಾಗಿ ಹರಿಣಿಯನ್ನು ಕರೆದು ವಿನ್ಯಾಸ್ ಅವಳನ್ನು ಇಷ್ಟ ಪಟ್ಟಿರುವುದಾಗಿ ತಿಳಿಸಿದ. ಬಾಸ್ ಬಾಯಿಂದ ಇಂಥ ಅನಿರೀಕ್ಷಿತ ಸುದ್ದಿ, ಇವಳ ದೃಢ ಮನಸ್ಸನ್ನು ಕದಡಿತು. ಸಮಯಾವಕಾಶ ಕೇಳಿ ರಜೆ ಹಾಕಿ ಊರಿಗೆ ಹೋದಳು. ಅಮ್ಮ, ಅಜ್ಜಿ, ಮಾವ, ಅತ್ತೆ- ಎಲ್ಲರ ಅಭಿಪ್ರಾಯವೂ ಒಂದೇ. ಒಂದು ವಾರ ಊರಲ್ಲಿದ್ದು, ತಲೆ ಕೆಡಿಸಿಕೊಂಡು ಮತ್ತೆ ಬೆಂಗಳೂರಿಗೆ ಬಂದಾಗ ಅಚ್ಚರಿ ಕಾದಿತ್ತು. ಅವಳು ಊರಿಗೆ ಹೋಗುವ ಮೊದಲೇ ವಿನ್ಯಾಸ್ ತನ್ನ ಮುಖಾಂತರ ಊರಿಗೆ ಪತ್ರ ಬರೆಸಿದ ವಿಷಯ ಚಿದಾನಂದ್ ತಿಳಿಸಿದರು. ಅದಕ್ಕೇ ಅವರೆಲ್ಲರೂ ಒಮ್ಮತದಲ್ಲಿದ್ದರು ಎನ್ನುವುದು ಅವಳಿಗೆ ಹೊಳೆಯಿತು. ಅರೆಮನಸ್ಸಿನಿಂದಲೇ ವಿನ್ಯಾಸ್ ಜೊತೆ ಮದುವೆಗೆ ಒಪ್ಪಿಕೊಂಡಳು.

ಒಪ್ಪಿಗೆ ಕೊಟ್ಟದ್ದೇ ಸಾಕೆನ್ನುವ ಹಾಗೆ ವಿನ್ಯಾಸ್ ಆಕೆಯನ್ನು ಓಲೈಸತೊಡಗಿದ. ಅವನ ಮೃದು ಮಾತು, ನಾಜೂಕು ನಡವಳಿಕೆ, ಪ್ರೀತಿ ಪ್ರವಾಹ, ಔಟಿಂಗ್ ಔತಣ, ರೊಮ್ಯಾಂಟಿಕ್ ರೋಮಾಂಚನ... ಎಲ್ಲದರ ಹೊನಲಲ್ಲಿ ತೇಲಿ ಮುಳುಗಿ ಕಳೆದೇ ಹೋದಳು ಸಿಡಿಗುಂಡು ಹರಿಣಿ. ಅವಳ ಕೋಪಾಟೋಪ ಎಲ್ಲವೂ ಶಾಂತಸಾಗರದಲ್ಲಿ ಲೀನ. ತನ್ನ ಹಿರಿಯರನ್ನು ಒಪ್ಪಿಸಿಯೇ ತಾನು ಮದುವೆಯಾಗುವುದು ಅಂತಲೇ ಮದುವೆಯ ಮಾತನ್ನು ಮುಂದೂಡುತ್ತಾ ಬಂದವನ ಕಣ್ಣಲ್ಲಿ ಕಣ್ಣಿಟ್ಟು ತನ್ನ ನೋಟದ ಗುರಿ ತಪ್ಪಿಸಿಕೊಂಡಳು. ಹೀಗೇ ಎರಡು ವರ್ಷಗಳೇ ಕಳೆದವು. ಇಷ್ಟಾದರೂ ಇವಳ ಅಮ್ಮ, ಅಜ್ಜಿ, ಮಾವನಾಗಲೀ ವಿನ್ಯಾಸನ ಮನೆಯವರಾಗಲೀ ಮದುವೆಯ ಬಗ್ಗೆ ಯಾವುದೇ ಮಾತೆತ್ತಲಿಲ್ಲ. ಪ್ರೇಮದಲ್ಲಿ ಈಜುತ್ತಿದ್ದವಳಿಗೆ ತಾನೆಲ್ಲಿದ್ದೇನೆನ್ನುವ ಅರಿವು ಇರಲಿಲ್ಲ. ಎತ್ತ ಸಾಗುತ್ತಿದ್ದೇನೆನ್ನುವುದು ಗಮನಕ್ಕೇ ಬರಲಿಲ್ಲ. ತನ್ನ ರೂಮ್ ಖಾಲಿಮಾಡಿ ಆತನ ಜೊತೆಯಾಗಿ ಬಾಡಿಗೆ ಮನೆಯನ್ನೂ ಮಾಡಿದ್ದಾಯ್ತು.

ಒಂದೇ ಮನೆಯಿಂದ ಒಂದೇ ಆಫೀಸಿಗೆ ಅವನ ಬೈಕಿನಲ್ಲಿ ಹೋಗಿಬರುವ ಯಾವುದೋ ಘಳಿಗೆಯಲ್ಲಿ ವಿನ್ಯಾಸ್ ತನ್ನವನು ಅನ್ನಿಸಿತ್ತು ಹರಿಣಿಗೆ. ತಾನೂ ಅವನವಳಾಗುವ ಹಂಬಲ ಚಿಮ್ಮಿತು. ಬಯಕೆಯ ಕೋಡಿ ಒಡೆಯಲು ಅಷ್ಟೇ ಸಾಕಾಗಿತ್ತು. ಇಬ್ಬರಿಗೂ ಅದೇ ಬೇಕಾಗಿತ್ತು; ಬೆರೆತರು. ಬಂಧವಿಲ್ಲದ ಬಂಧನದಲ್ಲಿ ಸೆರೆಯಾದರು. ಸಮಯ ಯಾರನ್ನೂ ಕೇಳಲಿಲ್ಲ, ಕಾಯಲಿಲ್ಲ. ಪ್ರಕೃತಿ ತನ್ನ ಕೆಲಸ ಮುರಿಯಲಿಲ್ಲ. ಮುಂಜಾಗರೂಕತೆ ಮಾಡಿಯೂ ಹರಿಣಿಯ ಲೆಕ್ಕ ನೆಲೆ ತಪ್ಪಿತ್ತು. ಅಮ್ಮನಿಗೆ ಫೋನ್ ಮಾಡಿದಳು. ‘ಹಾದಿ ತಪ್ಪಿದ ನೀನು ನನ್ನ ಮಗಳೇ ಅಲ್ಲ. ನೀನಿಲ್ಲಿಗೆ ಬಂದು ನನ್ನ ತೌರಲ್ಲಿ ನನ್ನ ಮರ್ಯಾದೆ ತೆಗೀಬೇಡ’ ಅಂದುಬಿಟ್ಟರು ಆ ಮಹಾತಾಯಿ. ಅಮ್ಮನೇ ಹಾಗಂದಮೇಲೆ ಇನ್ನು ಯಾರನ್ನೂ ನೆಚ್ಚಿಕೊಂಡು ಫಲವಿಲ್ಲ ಅನ್ನಿಸಿ ವಿನ್ಯಾಸ್ ಜೊತೆಗೇ ಮಾತೆತ್ತಿದಳು. ನಿನ್ನ ಹಿರಿಯರು ಒಪ್ಪುವ ಹೊತ್ತಿಗೆ ನಾವಿಬ್ರೂ ಅಜ್ಜ-ಅಜ್ಜಿ ಆಗಿರ್ತೀವೇನೋ. ಈಗ್ಲಾದ್ರೂ ದೇವಸ್ಥಾನದಲ್ಲಿ ಮದುವೆ ಆಗೋಣ ಅಂದಳು. ಸಾಧ್ಯವೇ ಇಲ್ಲ. ಹೀಗೇ ಮುಂದುವರಿಯೋದಕ್ಕೂ ಸಾಧ್ಯವಿಲ್ಲ. ತೆಗೆಸಿಕೋ ಅಂದುಬಿಟ್ಟ. ಚಿದಾನಂದ್ ಕೈಚೆಲ್ಲಿದ. ನಿಮ್ಮ ಸಮಸ್ಯೆಯಲ್ಲಿ ನನ್ನದೇನು ಸಾರಥ್ಯ ಅಂತ ಚಾಟಿಯೆತ್ತಿದ. ವಿನ್ಯಾಸ್ ಜೊತೆಯಾಗಿ ಇನ್ನು ಬದುಕುವುದರಲ್ಲಿ ಅರ್ಥವಿಲ್ಲ ಅಂತನ್ನಿಸಿ ಸೀದಾ ನಮ್ಮನೆಗೇ ಬಂದಿದ್ದಾಳೆ. ಈಗೇನ್ ಮಾಡೋದು ಹೇಳಿ...’’ ದೀರ್ಘ ಮೌನ ನಮ್ಮಿಬ್ಬರ ನಡುವೆ ಹಬ್ಬಿಕೊಂಡಿತು.

Monday, 13 December, 2010

ಸುಮ್ಮನೆ ನೋಡಿದಾಗ...೦೭

ಇಷ್ಟಾಗುವಾಗ ಗಂಟೆ ಮೂರೂವರೆಯ ಆಸುಪಾಸು. ಆಂಟಿ ಸುಮ್ಮನೇ ಕಣ್ಣುಮುಚ್ಚಿ ಧ್ಯಾನಿಸುತ್ತಿದ್ದರು. ಬೇಗ ಹೇಳಬಾರದಾ ಕಥೆಯನ್ನು? ಅವರು ಹೇಳುದನ್ನು ಕೇಳಿ, ನನ್ನ ಕೋಪವನ್ನು (ಅವರು ಹೇಳಿದ ಹಾಗೆ ಕೋಪ ಬಂದ್ರೆ!) ಸರಿಯಾದ ದಾರಿಯಲ್ಲಿ ಹರಿಬಿಟ್ಟು ಸಮಾಧಾನವಾಗಿ ಮನೆಗೆ ಹೋಗಬೇಕಲ್ಲ! ಅದಕ್ಕೆ ಸಮಯ ಬೇಕಲ್ಲ! ನನ್ನ ಚಿಂತೆಯಲ್ಲಿ ನಾನಿದ್ದೆ. ನೇಹಾಳ ಕಂಗಳಲ್ಲಿ ಗೊಂದಲ, ಕುತೂಹಲ ಎರಡರ ಬೆರಕೆ.
***

ಆಂಟಿ ಶುರು ಮಾಡಿದರು -
ಮೂವತ್ತು ವರ್ಷ ಹಿಂದಿನ ಮಾತು ಅಂತ ಹೇಳಿದ್ನಲ್ಲ. ಅದೂ ನಿಖರ ಅಲ್ಲ. ಅದಕ್ಕೂ ಹಿಂದೆಯೇ ನನ್ನ ಮತ್ತು ಹರಿಣಿಯ ಸ್ನೇಹ ಆಗಿತ್ತು. ನಿಮ್ಮಿಬ್ಬರ ಹಾಗೆಯೇ ನಾವಿಬ್ರೂ ಒಟ್ಟಿಗೇ ಶಾಲೆಗೆ, ಕಾಲೇಜಿಗೆ ಹೋದವರು. ಆಚೀಚೆ ಮನೆಗಳಲ್ಲಿದ್ದು ಅವಳಿಗಳ ಹಾಗೆ ಬೆಳೆದವರು. ಆದ್ರೂ ನಮ್ಮಿಬ್ಬರ ಸ್ವಭಾವ ಮಾತ್ರ ತದ್ವಿರುದ್ಧ. ಅವಳನ್ನು ನಾನ್ಯಾವಾಗಲೂ ‘ಸಿಂಹಿಣಿ’ ‘ವ್ಯಾಘ್ರಿಣಿ’ ಅಂತೆಲ್ಲ ಛೇಡಿಸ್ತಿದ್ದೆ. ಅಷ್ಟೂ ಕೋಪ ಅವಳಿಗೆ. ನಮ್ಮ ಸ್ನೇಹಿತೆಯರೆಲ್ಲ ‘ನಳಿನಿ ತಂಪು - ಹರಿಣಿ ಕೆಂಪು’ ಅಂತ ಮಾತಾಡಿಕೊಳ್ತಿದ್ರು. ನಮ್ಮ ಮುಂದೆಯೂ ಹೇಳಿ ಹರಿಣಿಯಿಂದ ಬೈಸಿಕೊಂಡು ಪೆಟ್ಟು ತಿಂದು ಬೇಜಾರು ಮಾಡಿಕೊಂಡವರೂ ಕಡಿಮೆಯಿಲ್ಲ. ಆದ್ರೂ ನಮ್ಮ ಸ್ನೇಹ ಮಾತ್ರ ಅದು ಹೇಗೋ ಮುಂದುವರೀತು. ಎಲ್ಲರಿಗೂ ಆಶ್ಚರ್ಯ, ನನಗೂ. ಅವಳಿಗೆ ಮಾತ್ರ ನನ್ನ ಶಾಂತ ಸ್ವಭಾವದಿಂದ ತುಂಬಾ ಅನುಕೂಲ ಆಗ್ತಿತ್ತು. ಅವಳ ತಾಂಡವವನ್ನು ಕಂಟ್ರೋಲ್ ಮಾಡ್ಲಿಕ್ಕೆ ನನ್ನಿಂದ ಮಾತ್ರ ಸಾದ್ಯ ಅಂತ ಶಾಲೆಯಲ್ಲೆಲ್ಲ ಮಾತಿತ್ತು.

ಕಾಲೇಜಿನ ಎರಡನೇ ವರ್ಷದಲ್ಲಿರುವಾಗ ಅವಳಪ್ಪ ಆಸ್ತಿ ವ್ಯಾಜ್ಯದಲ್ಲಿ ಕೊಲೆಯಾದರು. ಅವಳಮ್ಮ ತೌರಿಗೆ ಹೊರಟು ನಿಂತ್ರು. ಕಾಡಿಬೇಡಿ ಹರಿಣಿ ಉಪವಾಸ ಕೂತು ಅಮ್ಮನನ್ನು ಒಪ್ಪಿಸಿ ಅದೊಂದು ವರ್ಷ ನಮ್ಮ ಮನೆಯಿಂದಲೇ ಕಾಲೇಜಿಗೆ ಹೋದಳು. ಕೊನೆಯ ವರ್ಷವನ್ನು ಬೇರೊಂದು ಕಾಲೇಜಿಗೆ ಟ್ರಾನ್ಸ್ಫ಼ರ್ ಮಾಡಿಸಿಕೊಂಡರು ಅವಳಜ್ಜಿ ಮನೆಯವರು. ನಮ್ಮಿಬ್ಬರ ನಡುವೆ ಪತ್ರ ವ್ಯವಹಾರ ಮಾತ್ರ ಉಳೀತು, ಅದೂ ಸ್ವಲ್ಪ ಸಮಯ ಮಾತ್ರ. ಅವಳ ಸೋದರ ಮಾವ ಹದ್ದಿನ ಕಣ್ಣಿನ ಗೂರ್ಖಾ ಅಂತ ನಾವಿಬ್ರೂ ತಮಾಷೆ ಮಾಡಿಕೊಂಡಿದ್ದೆವು ಕಾಗದದಲ್ಲಿ. ಅವಳ ಕೋಪಾಟೋಪ ಎಲ್ಲಿಂದ ಬಂತೂಂತ ಗೊತ್ತಾಯ್ತು ಅಂದಿದ್ದೆ ನಾನು. ಕಾಲಕ್ರಮೇಣ ಮಾವನ ಅಂಕೆಯೊಳಗೆ ಕಾಗದ ಬರೆಯುವುದೂ ನಿಂತಿತು. ಒಂದೂವರೆ ವರ್ಷ ಕಾಲ ಅವಳ ಸುದ್ದಿಯೇ ಇರಲಿಲ್ಲ.

ನನ್ನ ಮದುವೆಯ ಸುದ್ದಿ ಕೇಳಿ ಹಿಂದಿನ ದಿನವೇ ಬಂದವಳು ನನ್ನ ಒಟ್ಟಿಗೇ ಇದ್ದಳು. ಮದುವಣಗಿತ್ತಿಯ ಜೊತೆಗಾತಿಯಾಗಿ ನನ್ನತ್ತೆ ಮನೆಗೂ ಬಂದಳು. ನನ್ನ ಸುಮುಖ್ ಕೂಡಾ ಇವಳನ್ನು ಸ್ನೇಹಿತೆಯಾಗಿ ಆದರಿಸಿ ಮೆಚ್ಚಿಕೊಂಡರು. ಎರಡು ದಿನ ಅಲ್ಲಿದ್ದು ನಂತರ, ‘ಬೆಂಗಳೂರಲ್ಲಿ ಕೆಲ್ಸ ಸಿಕ್ಕಿದೆ, ಚಿನ್ಮಯ್ ಕನ್ಸಲ್ಟೆನ್ಸಿಯಲ್ಲಿ ಮ್ಯಾನೇಜರ್ ನಮ್ಮಾವನ ಪರಿಚಯ. ಪಿ.ಎ. ಆಗಿ ತಗೊಂಡಿದಾರೆ. ಅವ್ರ ಹಂಗು ಬೇಡಾಂತ ಅನ್ನಿಸಿದ್ರೂ ಒಮ್ಮೆ ಅಜ್ಜಿ ಮನೆಯಿಂದ ಹೊರಗೆ ಬರ್ಬೇಕು ಅಂತ ಒಪ್ಪಿಕೊಂಡೆ. ಇನ್ನು ಕಾಗದ ಬರೀತಿರ್ತೇನೆ, ಆಯ್ತಾ?’ ಅಂದಳು. ಮರುದಿನವೇ ಬೆಂಗಳೂರಿಗೆ ಹೋಗಿದ್ದಳು.

ನಾನು ಈ ಊರಲ್ಲೇ ನೆಲೆಸಿದೆ. ಬೆಂಗಳೂರಿಂದ ವಾರಕ್ಕೊಮ್ಮೆ ಬರುವ ಅವಳ ಕಾಗದಗಳಲ್ಲಿ ಅಲ್ಲಿನ ವೈಶಿಷ್ಟ್ಯಗಳೇ ತುಂಬಿರುತ್ತಿದ್ದವು. ಅವಳ ವೈಯಕ್ತಿಕ ವಿಷಯ ಅಷ್ಟೇನೂ ಬರೀತಿರಲಿಲ್ಲ. ನಾನಾಗಿ ಕೇಳಿದ್ರೆ, ‘ಹೇಳಿಕೊಳ್ಳುವಂಥಾದ್ದೇನೂ ಇಲ್ಲ. ಎಲ್ಲ ಮಾಮೂಲು. ಬೆಳಗ್ಗಿಂದ ಸಂಜೆ ತನ್ಕ ಬಾಸ್ ಹೇಳಿದ ಕೆಲ್ಸ ಮಾಡಿಕೊಂಡಿರುದು. ಸಂಜೆ ರೂಮಿಗೆ ಬಂದು ರೇಡಿಯೋ ಕೇಳುದು. ಅಡುಗೆ, ಪಾತ್ರೆ, ಬಟ್ಟೆ, ಎಲ್ಲ ಕೆಲ್ಸಗಳನ್ನು ಮಾಡ್ಕೊಳ್ಳುದು. ಅದೇ ಜೀವನ. ಅದನ್ನೇನು ಬರಿಯುದು’ ಅಂತಿದ್ಳು.

ಸುಮಾರು ಐದು ವರ್ಷದ ನಂತ್ರ ಒಂದು ಬೆಳಿಗ್ಗೆ ನಮ್ಮನೆ ಬಾಗಿಲಲ್ಲಿ ಕೆಂಪುಕಣ್ಣಿನಲ್ಲಿ ನೀರು ಹರಿಸುತ್ತಾ ಪ್ರತ್ಯಕ್ಷ ಆದ್ಳು. ಬೆಂಗಳೂರಿಂದ ಸೀದಾ ಇಲ್ಲಿಗೇ ಬಂದಿದ್ಳು. ಒಳಗೆ ಕರೆದು ಸಮಾಧಾನ ಮಾಡುವ ಹೊತ್ತಿಗೆ ನಂಗೆ ಸಾಕೋಸಾಕಾಗಿತ್ತು. ಆದ್ರೂ ಅಳು ಯಾಕೆ ಅನ್ನುದನ್ನು ಮಾತ್ರ ಬಾಯಿ ಬಿಡಲೇ ಇಲ್ಲ, ಸಂಜೇತನ್ಕ. ಆವತ್ತು ಸುಮುಖ್ ಅವ್ರ ತಂಗಿಯ ಮನೆಗೆ ಹೋಗಿದ್ರು. ರಾತ್ರೆಯೆಲ್ಲ ಅವಳ ಕಥೆ ಕೇಳಿ ಬೆಳಗಾದಾಗ ನಮ್ಮಿಬ್ಬರ ಕಂಗಳೂ ಕೆಂಪು ಕೆಂಪು. ಮಧ್ಯಾಹ್ನ ಸುಮುಖ್ ಬರುವ ಹೊತ್ತಿಗೆ ನಾನೊಂದು ನಿರ್ಧಾರಕ್ಕೆ ಬಂದಿದ್ದೆ. ಅದನ್ನು ಅವರಿಗೆ ಹೇಳಲಿಕ್ಕೆ ಸಮಯ ಕಾಯುತ್ತಿದ್ದೆ. ಮನೆಯಲ್ಲಿ ಬಿರುಗಾಳಿ ಏಳಬಹುದೆನ್ನುವ ಊಹೆಯಿಂದ ಏನೇನೋ ಕಾಲ್ಪನಿಕ ತಡೆಗೋಡೆಗಳನ್ನು ಸಿದ್ಧಮಾಡಿಕೊಂಡೆ. ಶಾಂತವಾಗಿರುತ್ತಿದ್ದ ನಳಿನಿ ಅಂದು ಅಶಾಂತಿಯ ನೆಲೆಯಾಗಿದ್ದೆ.

Sunday, 5 December, 2010

ಸುಮ್ಮನೆ ನೋಡಿದಾಗ...೦೬

ಊಟ ಮುಗಿಸಿ ಕೂತ ಗೆಳತಿಯರ ನಡುವೆ ಅಗಾಧ ಮೌನ. ನನ್ನ ಕೆನ್ನೆಯ ರಂಗಿನಿಂದಲೇ ಇಂದು ಜಾಜಿಮೊಗ್ಗುಗಳು ಇನ್ನಷ್ಟು ಕೆಂಪಾಗಿದ್ದವು. ನೇಹಾ ನನ್ನತ್ತ ಆಗಾಗ ನೋಟ ಹರಿಸಿ ಮತ್ತೆ ಬಳ್ಳಿಯ ನಡುವೆ ಕಾಣುವ ಆಕಾಶ ದಿಟ್ಟಿಸುತ್ತಿದ್ದಳು. ಎಷ್ಟನೆಯ ಬಾರಿಗೋ ಅವಳು ಆಕಾಶ ನೋಡಿದಾಗ ನನಗೆ ನಗುವೇ ಬಂತು, ‘ಏನುಂಟಾ ಅಲ್ಲಿ? ಯಾಕೆ ನೋಡ್ತಿದ್ದೀ?’

‘ಮಳೆ ಬರ್ತದಾ ಅಂತ ಲೆಕ್ಕ ಹಾಕ್ತಿದ್ದೇನೆ’
‘ಯಾಕೆ?’
‘ನಿನ್ನೆದೆಯಲ್ಲಿ ಮೋಡ ಕಟ್ಟಿಕೊಳ್ತಾ ಉಂಟಲ್ಲ. ಅಲ್ಲಿಂದ ಅಥವಾ ಇಲ್ಲಿಂದ ಸುರಿದೀತು. ಎಲ್ಲಿಂದ ಮೊದಲು ಬಂದೀತೂಂತ ನೋಡ್ತಿದ್ದೆ. ಸರಿಯಾಗಿ ಒಂದು ಜಡಿಮಳೆ ಹೊಡೆದ್ರೆ ಒಮ್ಮೆ ತಂಪಾದೀತಲ್ಲ ಅಂತ ಕಾಯ್ತಿದ್ದೇನೆ. ನೀ ಸುರಿಸ್ತೀಯಾ? ಆಕಾಶರಾಯನನ್ನು ಕೇಳ್ಬೇಕಾ?’
‘ಈಗಲೇ ನಿಂಗೆ ತಾಂಪಾಗುವ ಯೋಚನೆಯಾ? ಈಗಿನ್ನೂ ಜನವರಿ’
‘ಜನವರಿಯಲ್ಲೇ ಇಷ್ಟು ಉರೀಲಿಕ್ಕೆ ಶುರುವಾದ್ರೆ ಮೇ ತಿಂಗಳ ಗತಿಯೇನು ಅಂತ!’
‘ಈಗೆಲ್ಲಿಯಾ ಉರಿ? ಎಂತ ಮಾತಾಡ್ತಿ ನೀನು?’
‘ನೀನಂತೂ ಏನೂ ಮಾತಾಡ್ತಾ ಇಲ್ಲ. ನಾನಾದ್ರೂ ಏನಾದ್ರೂ ಹೇಳ್ತೇನೆ; ಕೇಳು ಬೇಕಾದ್ರೆ. ಇಲ್ಲಾಂದ್ರೆ ನಿನ್ನೊಳಗೆ ಮುಳುಗು, ನಂಗೇನು?’
‘ಮುಳುಗಿದ್ದಲ್ಲ ಮಾರಾಯ್ತಿ...’
‘ಮತ್ತೆಂತ? ಕಳೆದುಹೋಗಿದ್ಯಾ?’
‘ಹ್ಮ್!’
‘ನನ್ನ ಗೆಳತಿಯನ್ನು ಈ ರೀತಿ ಹಾರಿಸಿಕೊಂಡು ಹೋದವರು ಯಾರೋ? ಹರ್ಷಣ್ಣ ಅಂತೂ ಅಲ್ಲ. ಮತ್ತೆ?...’
‘ಮತ್ತೆ ಎಂತದೂ ಇಲ್ಲ! ಯಾರೂ ಇಲ್ಲ. ನಾನು ಅದೇ ಕಥೆಯ ಗುಂಗಿನಲ್ಲೇ ಇದ್ದೇನೆ, ಅಷ್ಟೇ...’
‘ಹ್ಮ್, ಅದು ಗೊತ್ತಾಗ್ತದೆ. ಕಥೆಯ ಗುಂಗು ತಲೆಯಿಂದ ಹೃದಯಕ್ಕೆ ಇಳಿದಿದೆ ಅಂತ...’
‘ಎಲ್ಲಿಗೂ ಇಳೀಲಿಲ್ಲಪ್ಪ. ಸುಮ್ನೇ ಏನೇನೋ ಹೇಳ್ಬೇಡ...’
‘ನೀನು ಏನೇನೋ ಕತೆ ನನ್ನ ಹತ್ರ ಹೆಣೀಬೇಡ. ನಿನ್ನನ್ನು ಇವತ್ತಲ್ಲ ನೋಡುದು ನಾನು. ಒಂದನೇ ಕ್ಲಾಸಿಂದಲೂ ಒಟ್ಟಿಗೇ ಓದಿದವ್ರು ನಾವಿಬ್ರೇ ಅನ್ನುದನ್ನು ಮರ್ತಿದ್ಯಾ ಹೇಗೆ?’
‘ಅಮ್ಮಾ, ಮಹಾತಾಯಿ! ನಾನ್ಯಾವುದನ್ನೂ ಮರೀಲಿಲ್ಲಮ್ಮ...’
ಅಷ್ಟರಲ್ಲೇ ನಳಿನಿ ಅಂಟಿ ನಮ್ಮ ಕಡೆಗೇ ಬಂದ್ರು. ನಮ್ಮ ಮಾತಿನ ಮಂಟಪದಲ್ಲಿ ಮುಗುಳುಗಳು ಅರಳಿದವು.

ಆದರೆ, ಅವರ ಮುಖ ಗಂಭೀರವಾಗಿತ್ತು. ಬಂದವರೇ, ‘ನೇಹಾ, ನಮ್ಮೆಲ್ರಿಗೂ ಕಾಫಿ ಮಾಡಿ ತಾ, ಹೋಗು.’ ಎಂದು ನೇಹಾಳನ್ನು ಕಳಿಸಿ ಅವಳ ಸ್ಥಾನದಲ್ಲಿ ನನ್ನ ಬದಿಗೆ ತಾನು ಕೂತರು.
‘ಶಿಶಿರಾ, ನಿನಗೊಂದು ಮುಖ್ಯ ವಿಚಾರ ತಿಳಿಸಬೇಕಿತ್ತು. ತಪ್ಪು ತಿಳೀಬೇಡ ನನ್ನನ್ನು. ಈಗ, ನೀನು ಬರೆದ ಕಥೆ ನೇಹಾನ ಪುಸ್ತಕಗಳ ಒಟ್ಟಿಗೆ ಇದ್ದದ್ದು ನನ್ನ ಕಣ್ಣಿಗೆ ಬಿತ್ತು. ಓದಿದೆ. ತುಂಬಾ ಚೆಂದ ಬರ್ದಿದ್ದೀ. ವಯಸ್ಸಿಗೆ ಸಹಜವಾದ ಭಾವನೆ, ಬರವಣಿಗೆಯ ಹಿಡಿತ, ಎರಡೂ ಚೆನ್ನಾಗುಂಟು. ಆದರೆ, ಇದನ್ನು ನಿನ್ನಮ್ಮ ನೋಡದ ಹಾಗೆ ಜಾಗ್ರತೆ ಮಾಡಮ್ಮ. ನಿನಗಾಗಿ ಈ ಮಾತನ್ನು ಹೇಳ್ತಿದ್ದೇನೆ.’
‘ಥ್ಯಾಂಕ್ಸ್ ಅಂಟಿ, ಕಥೆಯನ್ನು ಮೆಚ್ಚಿಕೊಂಡದ್ದಕ್ಕೆ. ಆದ್ರೆ ಅದು ನನ್ನ ಕಥೆ ಅಂತ ಹೇಗೆ ಗೊತ್ತಾಯ್ತು? ನೇಹಾದ್ದು ಅಂತ ಅನ್ನಿಸ್ಲಿಲ್ವಾ?’
‘ನೇಹಾ ಕಥೆ ಎಲ್ಲಿ ಬರೀತಾಳೆ? ಅದೆಲ್ಲ ಏನಿದ್ರೂ ನಿಂದೇ. ನಿನ್ನನ್ನು ನಾನು ಇವತ್ತು ನೋಡುದಾ?’ (ಇದೇ ಮಾತನ್ನು ಅವಳೂ ಹೇಳಿದ್ದಲ್ವಾ? ಏನಾಗಿದೆ? ಅಂದುಕೊಂಡೆ.)
ಆಂಟಿಯ ಮುಖ ನೋಡಿ ಗಂಭೀರವಾಗಿ ಕೇಳಿದೆ, ‘ಯಾಕೆ ಆಂಟಿ ಅಮ್ಮನಿಗೆ ಗೊತ್ತಾಗಬಾರ್ದು?’
ದೊಡ್ಡದಾಗಿ ಉಸಿರು ಬಿಟ್ಟು ಒಮ್ಮೆ ಆಕಾಶ ನೋಡಿ, ಮತ್ತೆ ಮೆಲ್ಲಗೆ ಆಂಟಿ ಹೇಳಿದ್ರು, ‘ಅದೊಂದು ದೊಡ್ಡ ಕಥೆ. ನಮ್ಮ ಬಾಲ್ಯದ್ದು. ಇನ್ನೊಮ್ಮೆ ಯಾವತ್ತಾದ್ರೂ ಹೇಳ್ತೇನೆ, ಬಿಡು...’
‘ಇಲ್ಲ ಅಂಟಿ, ಇವತ್ತೇ ಹೇಳಿ, ಪ್ಲೀಸ್. ಇವತ್ತು ನಂಗೇನೂ ಕಾಲೇಜ್ ಕೆಲ್ಸ ಇಲ್ಲ. ಅಮ್ಮ ಸಂಜೇವರೆಗೆ ಮನೇಗೆ ಬರುದಿಲ್ಲ ಅಂತ ಬೆಳಗ್ಗೇನೇ ಹೇಳಿ ಹೋಗಿದ್ದಾರೆ. ಮಹಿಳಾ ಸಮಾಜದ ಪಿಕ್‌ನಿಕ್ ಅಂತೆ. ಅಂದ್ರೆ ಇನ್ನು ಬರುದು ಆರು ಆರೂವರೆಯ ಮೇಲೆಯೇ. ನಂಗೆ ಪುರ್ಸೊತ್ತು ಉಂಟು. ಹೇಳಿ ಇವತ್ತೇ..’
ಆಗಲೇ ನೇಹಾ ಮೂರು ಲೋಟ ಕಾಫಿ ತಗೆದುಕೊಂಡು ಬಂದಳು. ಅವಳು ಇರಬೇಕೋ ಬೇಡವೋ ಅನ್ನುವ ಹಾಗೆ ಅವಳನ್ನೇ ಎರಡು ಕ್ಷಣ ದಿಟ್ಟಿಸಿದ ಆಂಟಿ ಪುನಃ ನಮ್ಮಿಬ್ಬರನ್ನೂ ನೋಡಿ ನೇಹಾಳನ್ನು ಅವರ ಇನ್ನೊಂದು ಬದಿಗೆ ಕುಳಿತುಕೊಳ್ಳಲು ಹೇಳಿದರು. ಕಾಫಿ ಹೀರುತ್ತಾ ಯೋಚನೆಯೊಳಗೆ ಮುಳುಗಿಹೋದರು. ಲೋಟದಿಂದೇಳುತ್ತಿದ್ದ ಹೊಗೆ ಮರೆಯಾದಾಗ ಅವರ ಒಳಗಿಂದಲೇ ಹೊಗೆ ಬರುತ್ತಿರುವ ರೀತಿಯಲ್ಲಿ ನಿಟ್ಟುಸಿರು ಹೊರಬಿತ್ತು.
‘ಶಿಶಿರಾ. ಈ ಕಥೆ ನಿಮಗಿಬ್ಬರಿಗೂ ನೋವು ಕೊಡಬಹುದು. ಮೂವತ್ತು ವರ್ಷ ಹಳೇ ಕಥೆ ಇದು. ಆದರೂ ಇದನ್ನು ತಿಳಿಯುವ ಅರ್ಹತೆ ನಿಮಗಿಬ್ಬರಿಗೂ ಉಂಟೂಂತ ನಾನಿದನ್ನು ಹೇಳ್ತೇನೆ. ನಿಮ್ಮನ್ನು ನೀವು ಸಂಭಾಳಿಸಿಕೊಳ್ಳುವ ಶಕ್ತಿ ನಿಮಗುಂಟು. ನಿಮ್ಮೊಟ್ಟಿಗೆ ನಾನಿದ್ದೇನೆ. ಕಥೆ ಕೇಳಿ ನಿನ್ನ ಅಮ್ಮನ ಮೇಲೆ, ನನ್ನ ಮೇಲೆ ಕೋಪಿಸಿಕೊಳ್ಳುವ ಹಕ್ಕೂ ನಿಮಗುಂಟು. ಕೋಪ ಬಂದ್ರೆ ಅದನ್ನು ಅದುಮಿಟ್ಟುಕೊಳ್ಳದೆ, ಹೇಗೆ ಹೊರಗೆ ಹಾಕ್ತೀರಿ ಅನ್ನುದು ಮಾತ್ರ ಬುದ್ಧಿವಂತಿಕೆಯ ವಿಷಯ, ನೆನಪಿರ್ಲಿ. ಆಯ್ತಾ...?’

ಆಂಟಿಯನ್ನು ದಾಟಿ ನಮ್ಮಿಬ್ಬರ ಗೊಂದಲಮಯ ಕಣ್ಣುಗಳು ಸಂಧಿಸಿದವು.