ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Sunday, 30 November, 2008

ಅನಾವರಣ

ಅದೆಷ್ಟು ಜನ! ಎಲ್ಲಿದ್ದರವರು? ಅದ್ಹೇಗೆ ಒಗ್ಗೂಡಿದರು! ಯಾಕಾಗಿ? ಒಂದೂ ತಿಳಿಯದು. ಎಷ್ಟೋ ಹಿಂದಿನಿಂದಲೂ ಪ್ರತಿ ವರ್ಷವೂ ಹೀಗೇ ಬರುತ್ತಿದ್ದಾರೆ. ಈ ವರ್ಷವೂ ಕೂಡಾ! ಬಂದರು, ಬಂದರು; ಬರುತ್ತಲೇ ಇದ್ದರು. ಸುಮಾರು ಒಂದು ತಿಂಗಳ ಕಾಲ ಬಂದು ಬಂದು ಅಲ್ಲಿ, ಆ ವಿಶಾಲ ಪ್ರದೇಶದಲ್ಲಿ ಸೇರುತ್ತಿದ್ದರು. ಅಲ್ಲಿ ಮೊದಲೇ ಸುಂದರ ಮನೆಗಳಲ್ಲಿದ್ದ ಬಿಳಿ ಬಿಳೀ ಜನರನ್ನೆಲ್ಲ ಮೂಲೆಗುಂಪಾಗಿಸಿ, ಅಲ್ಲೆಲ್ಲ ತಮ್ಮ ಅಧಿಕಾರ ಸ್ಥಾಪಿಸಿಕೊಂಡ ಕರಿ ಕರೀ ಜನ. ಯಾರಿವರು? ಅದ್ಹೇಗೆ ತಿಳಿಯಬೇಕು ನಮಗೆ? ಮಾತಾಡಿಸಿದರೂ ಮಾತಾಡಲೊಲ್ಲರು; ನಮ್ಮ ಕಡೆಗೆ ನೋಡಲೂ ನೋಡರು. ತಮ್ಮ ಪಾಡಿಗೆ ತಾವು; ತಂತಮ್ಮೊಳಗೆ ಗುಂಗುಂ! ಹಾಗೆಂದು ಅವರಲ್ಲಿ ಅಂಥ ಸಂಭ್ರಮವೇನೂ ಕಾಣುವುದಿಲ್ಲ. ಬರೀ ಒಗ್ಗಟ್ಟು, ಬಲವಾದ ಒಗ್ಗಟ್ಟು. ಗಂಡುಗಳು, ಹೆಣ್ಣುಗಳು ವ್ಯತ್ಯಾಸವೇ ತಿಳಿಯದಂಥ ಮೈಕಟ್ಟು, ವೇಷ-ಭೂಷಣ. ಅನೇಕ ಮಕ್ಕಳು-ಮರಿಗಳೂ ಇದ್ದಾರೆ. ಯಾರೀ ಜನ, ಯಾಕೆ ಬಂದರು, ಒಂದೂ ಗೊತ್ತಿಲ್ಲ.

ಅದೇಕೆ ಹೀಗೆ ಬಂದರು? ಅಷ್ಟು ವಿಶಾಲ ಪ್ರದೇಶವನ್ನೆಲ್ಲ, ಕಣ್ಣು ಹರಿಯುವಷ್ಟು ದೂರದವರೆಗೂ - ತುಂಬಿಕೊಂಡಿದ್ದಾರೆ. ಆ ಪ್ರದೇಶದ ಮುಖ್ಯಸ್ಥ, ಅವನ ಅಧಿಕಾರಿಗಳು ಯಾರೂ ಏನೂ ಮಾಡಲಾಗುತ್ತಿಲ್ಲ. ಯಾರ ಮುಖವೂ ಹೊರಗೆ ಕಾಣುತ್ತಿಲ್ಲ. ಹೆಸರುಗಳು ಮಾತ್ರ ಪ್ರಚಲಿತದಲ್ಲಿವೆ, ಅವರೆಲ್ಲ ಎಲ್ಲಿ ಎಂಬ ಪ್ರಶ್ನೆ ಬಂದಾಗ! ಹಗಲೂ ರಾತ್ರಿ ಈ ಆಗಂತುಕರದೇ ಕಾರುಭಾರು, ಓಡಾಟ. ಅಷ್ಟು ಜನ ತುಂಬಿಕೊಂಡದ್ದರಿಂದ ವಾತಾವರಣದಲ್ಲೆಲ್ಲ ಒಂದು ರೀತಿಯ ಬಿಗುವು. ಸರಿಯಾಗಿ ಗಾಳಿ ಸಂಚಾರ ಇರದೆ ಸೆಖೆ, ಎಲ್ಲೆಲ್ಲೂ ಬೆವರು ವಾಸನೆ. ಇರುವ ಗಾಳಿಯೇ ಒಣಗಿ ಆವಿಯಾಗುವುದೇನೋ ಅನ್ನುವಂಥ ಧಗೆ. ನಮಗೇ ಒಬ್ಬರಿಗೊಬ್ಬರ ಅತಿ ಸಾಮೀಪ್ಯ ಹಿಂಸೆಯಾಗುವಂತಹ ಅಂಟಿನ ವಾತಾವರಣ. ಹೀಗಿದ್ದರೂ ಆ ಜನರು ಮಾತ್ರ ಒಬ್ಬರಿಗೊಬ್ಬರು ಬೆಸೆದುಕೊಳ್ಳುವಂತಹ ನಿಕಟತೆಯಲ್ಲಿರಲು ಹೇಗೆ ಸಾಧ್ಯ? ಅವರೊಳಗೆ ಮಾತುಕತೆ ನಡೆಯುವುದಿಲ್ಲವೇನೋ! ಬಹಳವಾಗಿ ಮೌನಿಗಳವರು. ಪುಟ್ಟ ಮಕ್ಕಳೂ ಕೂಡ.

ಅವರ ಈ ಮೌನ, ವಿಚಿತ್ರ ಒಗ್ಗೂಡುವಿಕೆ, ಕರಿಯ ಬಣ್ಣ, ಎಲ್ಲಕ್ಕಿಂತ ಹೆಚ್ಚಾಗಿ ಯಾವುದೋ ರೋಚಕವಾದ ರಹಸ್ಯವನ್ನು ಭೇದಿಸ ಹೊರಟವರಂತಿರುವ ಜಂಭ - ಇವೆಲ್ಲ ನಮಗೆ ನಿಗೂಢ. ಇದು ಯಾಕಾಗಿ? ಯಾರಿಂದ ಪ್ರೇರಿತ? ಯಾವ ಉದ್ದೇಶ ಪೂರಿತ? ನಮ್ಮೊಳಗೆ ಯಾರಿಗೂ ಉತ್ತರ ತಿಳಿಯದು. ಅವರನ್ನೇ ಕೇಳೋಣವೆಂದರೆ, ಯಾರೂ ಆ ಕಡೆ ಸುಳಿಯುವಂತಿಲ್ಲ. ಹೋದರೂ ನಮ್ಮ ಕಡೆ ಯಾವುದೇ ಗಮನ ಹರಿಸದವರು ನಮ್ಮ ಪ್ರಶ್ನೆಗಳಿಗೆ ಉತ್ತರಿಸಿಯಾರೆ? ಇದೀಗ ಒಂದು ತಿಂಗಳು ಆಗುತ್ತಾ ಬಂದಿದೆ, ಅವರುಗಳೆಲ್ಲ ಬರಲಾರಂಭಿಸಿ. ಸೆಖೆಯ ಬಿಸಿ ಮತ್ತಷ್ಟು ಏರಿದೆ, ಹಾಗೇ ಅವರೊಳಗಿನ ಗಾಢತೆಯೂ. ತಡೆಯಲಾರದ ಉಷ್ಣ, ಶಾಖ; ನಡುವೆ ಶುದ್ಧ ವಾಯುಸಂಚಾರವೂ ಕಡಿಮೆ. ಇದರಿಂದಾಗಿ ಮೈಯಲ್ಲೆಲ್ಲ ಉರಿ. ಕೆರೆದುಕೊಳ್ಳುವ ನವೆ, ಬೆವರು, ಅಂಟು, ವಾಸನೆ. ಇದರಿಂದ ಮುಕ್ತಿ ಹೇಗೆ? ಬೇಸರ ನಿರಾಸೆಗಳಿಂದ ಅತ್ತ ಮುಖ ಮಾಡಿದಾಗ... ...

ಅದೇನು ಬೆಳಕು? ಛಳಕ್ಕೆಂದು ಹೊಳೆದು ಮಾಯವಾಯಿತಲ್ಲ! ಜೊತೆಗೇ ದೊಡ್ಡ ಸದ್ದು. ಹಿಂದೆಯೇ ಪ್ರತಿಧ್ವನಿಗಳ ಸರಮಾಲೆ. ಹೌದು! ಅಲ್ಲಿ ಯುದ್ಧ ಶುರುವಾಗುತ್ತಿದೆ. ಆ ಸ್ಥಳನಿವಾಸಿಗಳಾದ ಬಿಳಿಯರಿಗೂ ಆಗಂತುಕ ಕರಿಯರಿಗೂ ಯುದ್ಧವೇ ಶುರುವಾಗುತ್ತಿದೆ. ಅದೇ ಬೆಂಕಿ-ಬಾಣಗಳ ಹೊಳೆತ, ನಗಾರಿಗಳ ಹೊಡೆತ; ಭಾರೀ ಯುದ್ಧವೇ ಇರಬೇಕು. ಆಗಲಿ, ಕಾಳಗವೇ ಆಗಲಿ. ಆಗಂತುಕರನ್ನು ಸ್ಥಳೀಯರು ಸೋಲಿಸಿ, ಮಣಿಸಿ ಹೊಡೆದುರುಳಿಸಿ, ಅಳಿಸಲಿ. ಇದರಿಂದ ನಮಗೂ ಲಾಭ, ಅಲ್ಲೊಂದಿಷ್ಟು ವಾತಾವರಣ ತಿಳಿಯಾದರೆ ಗಾಳಿ ಸರಾಗವಾಗಿ ತಿರುಗಾಡಬಹುದು. ನಮ್ಮ ಜಿಗುಟು ಸೆಖೆಯೂ ಜಾಲಾಡಿ ಹೋಗಬಹುದು. ಯುದ್ಧವಾಗಲಿ. ಹಾಗೆಂದು ಹಿಂಸೆ ಬಯಸುವ ಮನೋಭಾವವೇನೂ ನಮ್ಮದಲ್ಲ. ಆದರೆ, ಈ ಯುದ್ಧದಿಂದ ಎಲ್ಲರಿಗೂ ಒಳ್ಳೆಯದೇ ಆಗುವುದಾದರೆ ಆಗಲಿ.

ಮತ್ತೆ ... ಶುರುವಾಗೇ ಬಿಟ್ಟಿತು. ರಣಕಹಳೆಗಳ ಕೂಗು, ರಣಭೇರಿಗಳ ಮೊಳಗು, ಬೆಂಕಿ-ಬಾಣಗಳ ಬಿರುಸಿನ ಹಾರಾಟ ಹಗಲಿರುಳೆನ್ನದೆ ನಡೆಯಿತು. ಅವುಗಳನ್ನು ನೋಡುವುದು ನಮಗೂ ಒಂದು ರೀತಿಯ ಮೋಜು; ಭಯ ತುಂಬಿದ ಮೋಜು. ಇಷ್ಟು ಸನಿಹದಲ್ಲೇ ಯುದ್ಧವಾಗುತ್ತಿರುವಾಗ ಅದರ ಪರಿಣಾಮಗಳ ಭಯವಂತೂ ಇದ್ದೇ ಇದೆಯಲ್ಲ. ಒಮ್ಮೊಮ್ಮೆ ಅವರ ಬೆಂಕಿ-ಬಾಣಗಳ ಹಾದಿ ತಪ್ಪಿ ಈ ಕಡೆ ಬಂದು ಮರ-ಗಿಡಗಳೋ, ದನ-ಕರುಗಳೋ, ಇಲ್ಲ ನಮ್ಮ ಜನರೇ ಯಾರಾದರೂ ಸುಟ್ಟುಹೋಗಿರುವುದೂ ಇದೆ. ಪ್ರತಿ ವರ್ಷವೂ ಸುಮಾರಾಗಿ ಇದೇ ಸಮಯಕ್ಕೆ ಬರುತ್ತಾರಲ್ಲ. ಇದೇ ರೀತಿ ಯುದ್ಧವಾಗುತ್ತದಲ್ಲ. ಅದರಿಂದಾಗಿಯೇ ನಮಗೆ ಭಯ. ಈ ಭಯದಿಂದ ಒಂದು ಸಣ್ಣ ರಕ್ಷಣೆಯೂ ಇದೆ. "ಕಾಳಗದ ತೀವ್ರತೆ ಜೋರಾಗಿ ಬಾಣಗಳು ಹಾರಾಡುವಾಗ ಮನೆಯೊಳಗೆ ಒಣಮರದ ಕುರ್ಚಿ, ಬೆಂಚು, ಮಂಚಗಳಲ್ಲೇ ಕುಳಿತಿದ್ದು, ಅರ್ಜುನನ ದಶನಾಮ ಜಪಿಸಿದರೆ ಆ ಬಾಣಗಳೆಲ್ಲ ನಮ್ಮನ್ನು ತಲುಪುವದೇ ಇಲ್ಲ, ನಮಗೇನೂ ಹಾನಿಯಿಲ್ಲ!" ಅನ್ನುವ ಗಾಢವಾದ ನಂಬಿಕೆಯೇ ಧೈರ್ಯ, ಅದರ ಪಾಲನೆಯೇ ರಕ್ಷಾಕವಚ. ಹಾಗೆಂದೇ ದೊಡ್ಡ ದೊಡ್ಡ ಬೆಳಕಿನೆಳೆಗಳನ್ನು ಕಂಡಾಗ, ದಶನಾಮ ತಿಳಿಯದ ಮಕ್ಕಳೆಲ್ಲ "ಅರ್ಜುನಾ... ಅರ್ಜುನಾ... ಅರ್ಜುನಾ..." ಎಂದೇ ಹತ್ತು ಬಾರಿ ಜಪಿಸಿದರೆ, ಹಿರಿಯರು ನಿಯತ್ತಿನಿಂದ ತೂಗುಮಂಚದ ಮೇಲೆ ಕೂತು, "ಅರ್ಜುನಃ... ಫಲುಗುಣಃ... ಪಾರ್ಥ... ಕಿರೀಟೀ... ಶ್ವೇತವಾಹನ ಭೀಭತ್ಸುಃ... ವಿಜಯೋ... ಜಿಷ್ಣುಃ... ಸವ್ಯಸಾಚೀ.. ಧನಂಜಯ" ಎಂದು ಜಪಿಸುತ್ತಾರೆ. ಸುತ್ತಮುತ್ತಲ ಹಳ್ಳಿಗರಂತೂ ಮನೆಯಂಗಳಕ್ಕೆ ಒಂದು ಕತ್ತಿಯನ್ನೆಸೆದು ಮನೆಯೊಳಗೆ ಮುಸುಕೆಳೆದು ಕುಳಿತುಬಿಡುತ್ತಾರೆ. ಗುರಿತಪ್ಪಿದ ಬಾಣಗಳಿಗೆ ಮತ್ತೆ ಹಾದಿ ತಪ್ಪಿಸಿ ಆ ಕತ್ತಿಗಳು ತಮ್ಮೆಡೆಗೆ ಸೆಳೆದುಕೊಳ್ಳುತ್ತವೆ, ಆಗ ತಾವು, ತಮ್ಮ ಮನೆಗಳು ಸುರಕ್ಷಿತ ಎಂಬುದು ಅವರ ನಂಬಿಕೆ. ಇಷ್ಟೆಲ್ಲ ಭಯಗಳಿದ್ದರೂ ಯಾರಿಗೂ ಈ ಯುದ್ಧ ಬೇಡವೆಂದೆನಿಸಿಲ್ಲ. ಪ್ರತಿ ವರ್ಷವೂ ನಡೆಯುವ ಈ ಕಾಳಗವನ್ನು ಎದುರು ನೋಡುವವರೆಷ್ಟು ಮಂದಿಯೋ? ಅದಕ್ಕೇ ಇದೊಂದು ವಿಶೇಷವುಳ್ಳದ್ದು, ಗುರುತರ ಕಾರ್ಯಕಾರಣ ನಿಮಿತ್ತದಿಂದ ನಡೆಯುವಂಥಾದ್ದೆಂದು ಇದನ್ನು ವಿವರಿಸ ಹೊರಟಿದ್ದು, ಬಣ್ಣಿಸತೊಡಗಿದ್ದು. ಇರಲಿ. ಇದೀಗ ಆ ಕದನದ ಆರಂಭವಷ್ಟೆ! ಮುಂದೆ ಇನ್ನೂ ಇದೆ, ಕೇಳಿ.

ಹೀಗೆ ರಣ ಭೇರಿಗಳಿಂದ ಬೆಂಕಿ-ಬಾಣಗಳಿಂದ ಶುರುವಾಗುವ ಇದರ ಮುಂದಿನ ಹಂತ, ಸಹಜವಾಗಿಯೇ ರಕ್ತಪಾತ! ಹೌದು, ಧೋ ಧೋ ಸುರಿಯುವ ರುಧಿರಧಾರೆ. ಇಲ್ಲೂ ವಿಚಿತ್ರವೆಂದರೆ ಈ ರಕ್ತ ನಮ್ಮದರಂತೆ ಕೆಂಪಿಲ್ಲ, ಅದಕ್ಕಾವುದೇ ಕಂಪಿಲ್ಲ, ರಾಗಭಾವಗಳ ಬಿಸುಪಿಲ್ಲ. ವರ್ಣವಿಹೀನ, ವಾಸನಾರಹಿತ ಜೀವಧಾರೆ, ಇದೆಂತಹುದು? ಆ ಜನಗಳೂ ನಮ್ಮಂತಿಲ್ಲವಲ್ಲ! ಅದಕ್ಕೇ ಅವರ ರಕ್ತವೂ ಹೀಗೆ, ನಮ್ಮದರಂತಿಲ್ಲ. ಆದರೆ ಒಂದು ವಿಚಿತ್ರವೆಂದರೆ, ಪ್ರತೀ ವರ್ಷವೂ ಈ ಕದನದ ರಕ್ತಪಾತ ನಡೆಯದಿದ್ದರೆ, ನಮ್ಮ ತಾಯಿ, ಈ ಭೂಮಿ ಅದರಿಂದ ತೋಯದಿದ್ದರೆ ನಾವೂ ಬದುಕಲಾರೆವು. ಆ ಜನ ಬರುವುದು ತಡವಾದಲ್ಲಿ, ಈ ಸ್ಥಳೀಯರ ರಾಜ್ಯಭಾರ ಮುನ್ನಡೆದಲ್ಲಿ, ಭೂಮಿಯೂ ಬಿಳಿಚಿಕೊಳ್ಳುತ್ತಾಳೆ, ನಿತ್ರಾಣಳಾಗುತ್ತಾಳೆ. ಬಾಯಾರಿ, ಬಳಲಿ, ಮುದುರುತ್ತಾಳೆ. ಹಸಿದು ಬಂದ ಕಂದನನ್ನು ಸಂತೈಸಲಾರದೆ ನೋಯುತ್ತಾಳೆ. ಬಾಯಾರಿದ ಪಶು-ಪಕ್ಷಿಗಳಿಗೆ ಆಸರೀಯದೆ ಅಳುತ್ತಾಳೆ. ಮತ್ತೂ ಅವರು ಬಾರದಿದ್ದಲ್ಲಿ ಅವಳ ಮೈಯೆಲ್ಲ ಒಡೆದು ನಿಸ್ತೇಜಳಾಗುತ್ತಾಳೆ. ಮತ್ತೆ ತಡವಾಗಿಯಾದರೂ ಬಂದ ಅವರ ಗುಂಪನ್ನು ನೋಡಿ ಸೆಖೆಯ ಬೇಗೆಯನ್ನು ನಿಟ್ಟುಸಿರಾಗಿ ಹೊರಹೊಮ್ಮಿಸುತ್ತಾಳೆ. `ನಿಮ್ಮ ರಕ್ತ ನೀಡಿ, ನಾನು ಸೋತು ಬಳಲಿದ್ದೇನೆ' ಎಂದು ಮೊರೆಯಿಡುವಂತೆ ಅವರೆಡೆ ದೀನಳಾಗಿ ನೋಡುತ್ತಾಳೆ. ಅವಳ ಮಕ್ಕಳಾದ ನಾವುಗಳೆಲ್ಲರೂ ಅವಳನ್ನನುಸರಿಸುತ್ತೇವೆ.

ಇಷ್ಟೆಲ್ಲಾ ಆದರೂ ಆ ಜನರ ಬರವಾಗಲಿ, ನಂತರ ನಡೆವ ಕಾಳಗವಾಗಲಿ ನಮ್ಮ ಯಾವುದೇ ಸ್ಥಿತಿ-ಗತಿಗಳನ್ನು, ಕೆಲಸ-ಕಾರ್ಯಗಳನ್ನು ಆಧರಿಸಿಲ್ಲ. ಅವರಿಗೆ ಮನಸ್ಸಾದಾಗ, ವರ್ಷಕ್ಕೊಂದು ಬಾರಿಯಂತೆ, ಸುಮಾರು ವೈಶಾಖದ ಸಮಯಕ್ಕೆ ಬರುವರು. ಜ್ಯೇಷ್ಠ-ಆಷಾಢದ ಭಾರೀ ಯುದ್ಧದ ಬಳಿಕವೂ ಅಲ್ಲೊಂದು ಇಲ್ಲೊಂದು ಸಣ್ಣ ಸಣ್ಣ ಗುಂಪುಗಳಲ್ಲಿ ಶ್ರಾವಣ-ಭಾದ್ರಪದ ಮಾಸಗಳವರೆಗೂ ಉಳಿಯುವರು. ಆಗೊಮ್ಮೆ ಈಗೊಮ್ಮೆ ಚಿಕ್ಕ ಪುಟ್ಟ ಜಗಳಗಳನ್ನು ಮಾಡುತ್ತಾ ಕೊನೆಗೆ ಚದುರಿ ಹೋಗುವರು. ಇದು ಹೀಗೇ ನಡೆಯುತ್ತಾ ಬಂದಿದೆ, ಎಷ್ಟು ವರ್ಷಗಳಿಂದಲೊ! ಅದರಲ್ಲೂ ಕೆಲವೊಮ್ಮೆ ಇವರ ಸಂಖ್ಯೆ ಕಡಿಮೆಯಿರುತ್ತದೆ. ಮತ್ತೆ ಕೆಲವೊಮ್ಮೆ ಹಾದಿ ತಪ್ಪಿ ಬಂದವರಂತೆ ಬಹುಬೇಗ ಸ್ವಲ್ಪ ಜನ ಬಂದು, ಜಗಳದಲ್ಲಿ ಅಳಿದು ಬಿಡುತ್ತಾರೆ. `ಹೀಗೇ ಆಗುತ್ತದೆ' ಎಂದು ಖಡಾಖಂಡಿತವಾಗಿ ಹೇಳುವಂತಿಲ್ಲವಾದರೂ ಸರಿಸುಮಾರಾಗಿ ಹೇಳಬಹುದು. ಈ ವರ್ಷ ಮಾತ್ರ ಇವರ ಆಗಮನ ಬಹಳ ತಡವಾಗಿದೆಯಾದ್ದರಿಂದ ವಿಶೇಷವಾಗಿ ಎಲ್ಲರೂ ಎದುರು ನೋಡುತ್ತಿದ್ದರು. ಅದರಲ್ಲೂ ಅವರೆಲ್ಲ ಬಂದು ಸೇರಲಾರಂಭಿಸಿ ಇನ್ನೂ ಯುದ್ಧ ಶುರುವಾಗದಿರುವಾಗ ಇನ್ನಷ್ಟು ಆತಂಕ. ಇದ್ದ ಬದ್ದ ನೀರು, ಆಹಾರ ಎಲ್ಲ ಅವರುಗಳಿಗೆ ಮೀಸಲಾಗಿ ಬಿಡುತ್ತದೆ. ಆ ಕಾರಣಕ್ಕಾಗಿಯೇ ನಮ್ಮ ಉದ್ವೇಗ ಇನ್ನಷ್ಟು ಹೆಚ್ಚುತ್ತದೆ. ಇದೀಗ ಯುದ್ಧ ಶುರುವಾಗಿ ಒಂದು ರೀತಿಯ ವಿಚಿತ್ರ ನೆಮ್ಮದಿ ಸಿಕ್ಕಿದರೂ, ಆ ಬಾಣಗಳ ಭಯ ಇದ್ದೇ ಇದೆಯಲ್ಲ.....

ಈ ವರ್ಷದ ಮಟ್ಟಿಗೆ ಆತಂಕ ಕಡಿಮೆಯಾಯಿತೆಂದೇ ಹೇಳಬಹುದು. ಭೂತಾಯಿ ತಣಿಯುವಷ್ಟು ತಂಪಾದಳು. ಅವಳ ಒಡಲಲ್ಲಿ ಒಸರಾಡಿತು, ಮಡಿಲು ಮತ್ತೆ ಹಸುರಾಯಿತು. ಕುಣಿದು ಕರೆವ ಮಣಕನನ್ನು ಹಸು ತೃಪ್ತಿಯಿಂದ ನೆಕ್ಕಿತು. ಅಲ್ಲಿ, ಆ ಆಗಂತುಕರೆಲ್ಲ ಸೇರಿದ್ದ ಪ್ರದೇಶ ಈಗ ತೆರವಾಗಿ ತಿಳಿಗಾಳಿ ಸುಳಿದಾಡಿತು. ಬಿತ್ತಿದ್ದೆಲ್ಲ ಬೆಳೆಯುವಾಗ ದುಡಿದ ಮೈ ದಣಿವಾರಿಸಿಕೊಂಡಿತು. ಆಗಲೇ ಬಂದ ಸಂತಸದ ದಿನಗಳಲ್ಲಿ ಎಲ್ಲರೂ ಒಂದೊಂದು ಹೆಸರಿನ ನೆಪಮಾಡಿ ಹೊಸದುಟ್ಟು ನಲಿದರು. ಶಿಶಿರನನ್ನು ಬೆನ್ನ ಹಿಂದೆ ಕಟ್ಟಿಕೊಂಡು ಹೇಮಂತ ಬಂದ. ನೆಮ್ಮದಿಯು ಹಣಕಿ ಹಾಕಿತು.

ಆದರೆ..., ಅದೇನು ಆ ಬಯಲಲ್ಲಿ...? ಅದೋ ಮತ್ತೆ ಅವರೆಲ್ಲ ಬಂದರಲ್ಲ! ಯಾಕೀಗ? ಇಷ್ಟು ಬೇಗ? ಅಯ್ಯೋ, ಮತ್ತೆ ಬೆಂಕಿಬಾಣ! ಓಡಿ, ಓಡಿ; "ಅರ್ಜುನಃ... ಫಲುಗುಣಃ... ಪಾರ್ಥ... ಕಿರೀಟೀ... ಶ್ವೇತವಾಹನ....."
************ ************
(ಸೆಪ್ಟೆಂಬರ್, ೧೯೯೯ - ಆಗಸ್ಟ್, ೨೦೦೧)
[1999ರ ಎಪ್ರಿಲ್-ಮೇ ತಿಂಗಳಲ್ಲಿ ಅಸಾಧ್ಯ ಸೆಖೆಯಿಂದ ಕೂಡಿದ ಮೋಡ ಕವಿದ ವಾತಾವರಣವಿದ್ದು ಮೇ ಕೊನೆಗೆ ಧಾರಾಕಾರ ಮುಂಗಾರು ಮಳೆ ಸುರಿದು ದಕ್ಷಿಣ ಕನ್ನಡ ಜಿಲ್ಲೆಯ ನೆಲ ಒಮ್ಮೆ ತಂಪಾಗಿತ್ತು. ಮಳೆ ಸುರಿಯುವ ಪ್ರಕ್ರಿಯೆಯನ್ನು ಹೊಸ ರೀತಿಯ ಕಥನವಾಗಿ ಹೆಣೆಯುವ ಯೋಚನೆ ಮಾಡಿ, ಸೆಪ್ಟೆಂಬರಲ್ಲಿ ಬರೆಯಲು ಶುರು ಮಾಡಿದ್ದೆ. ಅದೇ ನವೆಂಬರ್ ತಿಂಗಳಲ್ಲಿ ಮತ್ತೆ ಮುಂಗಾರೇನೋ ಎಂಬಂತೆ ಮೋಡ ಕವಿದು ಧೋ ಧೋ ಮಳೆ ಸುರಿದಾಗ ಕಥೆಯ ಎಳೆ ಇನ್ನಷ್ಟು ಗಟ್ಟಿಯಾಗಿತ್ತು. ಆದರೆ, ಬರೆದು ಮುಗಿಸಿದ್ದು ಮಾತ್ರ ಸುಮಾರು ಎರಡು ವರ್ಷಗಳ ಬಳಿಕವೇ!]