ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday 26 May, 2011

ಪರಾಧೀನ-೦೨

ಯಾವತ್ತಿನ ರೊಟೀನ್ ಮತ್ತೆ ಮುಂದುವರಿಯಿತು. ಬೆಳಗ್ಗೆ ಒಂದು ಸುತ್ತು ಜಾಗಿಂಗ್. ಮನೆಗೆ ಬಂದು ಸ್ನಾನ, ಪ್ರಾರ್ಥನೆ. ತಿಂಡಿ ಮುಗಿಸಿ ಏಳು ಗಂಟೆಯ ಮೊದಲೇ ಹೊಟೇಲಲ್ಲಿ ಹಾಜರ್. ಎಲ್ಲವೂ ಸುಗಮ. ಒಂದಾರು ತಿಂಗಳು ಹೀಗೇ ಕಳೆಯಿತು. ಮಡದಿ ನಾಲ್ಕೂವರೆ ತಿಂಗಳ ಬಸುರಿ. ಖುಷಿ ತನ್ನ ನೆಲೆಯನ್ನು ಇವರಲ್ಲಿಗೇ ಬದಲಾಯಿಸಿಕೊಂಡಿತ್ತು. ಸೊಸೆಯನ್ನು ಮುದ್ದಾಗಿ ನೋಡಿಕೊಳ್ಳಲು ಅಮ್ಮನೇ ಬಂದಿದ್ದರು ಮುಂಬಯಿಗೆ. ಜೊತೆಗೇ ಮಗನಿಗೂ ಉಪಚಾರ ಸಾಂಗವಾಗಿ ಸಾಗುತ್ತಿತ್ತು. ಗಂಡ-ಹೆಂಡತಿ ಇಬ್ಬರೂ ಒಂದಿಷ್ಟು ಉರುಟಾಗುತ್ತಿದ್ದರು. ಜಾಗಿಂಗ್ ಜಾಸ್ತಿ ಮಾಡಬೇಕು, ತೂಕ ಹೆಚ್ಚಾಗುತ್ತಿದೆ ಅಂತ ಅಣ್ಣನ ಜೊತೆ ಮಾತಾಡಿ ರಾತ್ರಿ ಮಲಗುವ ಮುನ್ನ ವಾರ್ತೆಗಳಿಗಾಗಿ ಟಿ.ವಿ. ಹಾಕಿದರು ಜಗನ್. ಅದ್ಯಾರೋ ಕೊಲೆಯಾದ ಸುದ್ದಿ ಬಿತ್ತರವಾಗುತ್ತಿತ್ತು, ಎಲ್ಲ ವಿವರಗಳೊಂದಿಗೆ. ಅದ್ಯಾಕೋ ನೋಡಲಾಗದೆ ಟೆಲೆವಿಷನ್ ಆಫ಼್ ಮಾಡಿ ಮಲಗುವ ಕೋಣೆಗೆ ನಡೆದರು.

ಕೋಣೆಯ ಬಾಗಿಲಲ್ಲಿ ನಿಂತಂತೆಯೇ ಕೋಣೆಯಲ್ಲಿ ಯಾರೋ ಇದ್ದಾರೆನ್ನುವ ಯೋಚನೆ ತಲೆಗೆ ಹೊಕ್ಕಿತು. ಇದ್ದಕ್ಕಿದ್ದಂತೆ ಭಯ ಆವರಿಸಿಕೊಳ್ಳತೊಡಗಿತು. ಆತಂಕ ನೆತ್ತಿ ಮೇಲೆ ಕತ್ತಿ ತೂಗಿತು. ಹೆಜ್ಜೆ ಎತ್ತಿಡಲೂ ಆಗದಂಥ ಗಾಬರಿ ಮುತ್ತಿಕೊಂಡಿತು. ಬಾಗಿಲಲ್ಲೇ ಕುಸಿದುಬಿದ್ದರು. ಎದೆ ಒಂದೇ ಸವನೆ ಬಡಿದುಕೊಳ್ಳತೊಡಗಿತು. ಹಾರ್ಟ್ ಅಟ್ಯಾಕ್ ಆಗುತ್ತಿದೆ ಎಂದೆಣಿಸಿ ವೈದ್ಯರಿಗೆ ಕರೆ ಮಾಡಿದರು ಮಡದಿ. ತುರ್ತು ವಾಹನ ಬಂದು ಅವರನ್ನು ಆಸ್ಪತ್ರೆಗೆ ಕರೆದೊಯ್ದಿತು. ಎಲ್ಲ ತಪಾಸಣೆಗಳು ನೆರವೇರಿದವು. "ನಿಮ್ಮ ಹೃದಯ ಗಟ್ಟಿಯಾಗಿದೆ. ಅದಕ್ಕೇನೂ ಆಗ್ಲಿಲ್ಲ. ನಿಮ್ಮ ಮನಸ್ಸಿಗೇ ಏನೋ ಆಗಿದೆ. ಸುಮ್ಮನೇ ಗಾಬರಿಯಾಗಿದ್ದೀರಿ" ಎಂದ ವೈದ್ಯರು ಸಣ್ಣ ಪ್ರಮಾಣದ ಆತಂಕ ನಿವಾರಣಾ ಔಷಧಿ ಬರೆದುಕೊಟ್ಟರು. ಅದರ ಜೊತೆಗೆ ಮನೆಗೆ ಬಂದ ಜಗನ್‌ಗೆ ಸಣ್ಣ ಹುಳ ತಲೆಕೊರೆಯಲು ಶುರು ಮಾಡಿತು- ತನಗ್ಯಾಕೆ ಇಂಥ ಆತಂಕ/ ಗಾಬರಿ? ಏನಾಗ್ತಿದೆ?

ಇದೇ ಗುಂಗಿನ ಗುಂಗಿಹುಳ ತಲೆಯೊಳಗೆ ಕೊರೆಕೊರೆದು ನೂರಾರು ಹೊಸ ಟ್ರ್ಯಾಕ್ ಮಾಡಿದ್ದರ ಪರಿಣಾಮ- ಸಲೀಸಾಗಿ ಸಾಗುತ್ತಿದ್ದ ಜೀವನದಿ ಯದ್ವಾತದ್ವಾ ಹರಿಯತೊಡಗಿತು. ಮತ್ತೆ ಜ್ಯೋತಿಷಿಗಳ ಮನೆ-ಕಛೇರಿಗಳಿಗೆ ಭೇಟಿಕೊಟ್ಟರು ಮನೆಯ ಹಿರಿಯರು. ಅವರು ತಿಳಿಸಿದ ಶಾಂತಿಹೋಮಗಳನ್ನು, ಹೇಳಿದಂತೆಯೇ ಹೇಳಿದಲ್ಲಿಯೇ ಮಾಡಿಸಿದರು. ಸದಾ ಮುಂಬಯಿ ಹೊಟೇಲಿಗೇ ರಜೆ ಹಾಕಿ ಬರುವಂತಿರಲಿಲ್ಲ. ಪದೇ ಪದೇ ಊರಿಗೆ ಬರುವಾಗ ಹೊಟೇಲ್ ನೋಡಿಕೊಳ್ಳಲು ಅನಾನುಕೂಲವಾಗುತ್ತಿತ್ತು. ಆಗೆಲ್ಲ ಸಣ್ಣಣ್ಣ ಊರಿಂದ ಮುಂಬಯಿಗೆ, ಜಗನ್ ಮುಂಬಯಿಯಿಂದ ಊರಿಗೆ. ದೊಡ್ಡಣ್ಣನ ಮೇಲುಸ್ತುವಾರಿಯಲ್ಲಿ ಎಲ್ಲ ಪೂಜೆ-ಪುನಸ್ಕಾರಗಳನ್ನು ನಡೆಸಲಾಗುತ್ತಿತ್ತು. ಅವೆಲ್ಲ ನಡೆಯುವಾಗಲೂ ಏನೋ ಒಂಥರಾ ಗಲಿಬಿಲಿ, ಗೊಂದಲದ ಮನಃಸ್ಥಿತಿಯಲ್ಲಿರುತ್ತಿದ್ದರು ಜಗನ್. ಹೀಗೇ ಊರು-ಮುಂಬಯಿ ಊರು-ಮುಂಬಯಿ ತಿರುಗಾಟಗಳ ನಡುವೆ ಹುಟ್ಟಿದ ಮಗಳಿಗೆ ಎರಡು ವರ್ಷವೂ ದಾಟಿತು. ಜಗನ್ ಜೀವನದಲ್ಲಿ ಅಂಥ ವ್ಯತ್ಯಾಸ ಗೋಚರಿಸಲಿಲ್ಲ. ಕೆಲವೊಮ್ಮೆ ಮನೆಯಿಂದ ಹೊರಗೆ ಹೋಗಲೂ ಭಯವಾಗುವಷ್ಟು ಹಿಂಜರಿಕೆ ಅಳುಕಿನ ಗೋಜಲಿನಲ್ಲಿ ಸಿಲುಕಿರುತ್ತಿದ್ದರು. ಅಂಥದೊಂದು ದುಮ್ಮಾನದ ಸಂಜೆ ಅವರ ಹಳೇ ಗೆಳೆಯ, ಹಿಪ್ನೋಥೆರಪಿಯ ಬಗ್ಗೆ ತಿಳಿಸಿ ಅಲ್ಲಿಂದಲೇ ನನಗೆ ಕರೆ ಮಾಡಿದ್ದರು. ಅಲ್ಲಿಂದ ಹೊಸದೇ ಲೋಕವೊಂದು ತೆರೆದುಕೊಂಡಿತು.

ಸಮ್ಮೋಹನ ಚಿಕಿತ್ಸೆಯ ಒಂದು ಆಯಾಮ ಸುಪ್ತಮನಸ್ಸಿನ ಗಾಯಗಳನ್ನು ಗುಣಪಡಿಸಿ ಒಳಮನಸ್ಸನ್ನು ದೃಢಪಡಿಸುವುದು. ಅದರದೇ ವಿಸ್ತೃತ ರೂಪ ಹಿಂಚಲನೆ ಸಾಧಿಸಿ ಹಳೆಯ ನೆನಪುಗಳನ್ನು ನೋವುಗಳ ಕೊಂಡಿ ಕಳಚಿ ಬರಿಯ ನೆನಪಾಗಿಸಿ ನೋವಿನಿಂದ ಬಿಡುಗಡೆಗೊಳಿಸುವುದು. ಈ ಹಳೆಯ ನೆನಪು ಅನ್ನುವುದು ಇದೇ ಜನ್ಮದ ಅತ್ಯಂತ ಹಿಂದಿನ ನೆನಪಾಗಿರಬಹುದು. ಹಲವು ಸಾಧ್ಯತೆಗಳಲ್ಲಿ ಕಳೆದ ಯಾವುದೋ ಜನ್ಮದ ಗಾಯದ/ನೋವಿನ ನೆನಪೂ ಆಗಿರಬಹುದು. ಗುಣವಾಗುವ ಪ್ರಕ್ರಿಯೆ ಮುಖ್ಯವೇ ಹೊರತು ನೆನಪಿನ ಸ್ಪಷ್ಟೀಕರಣವಲ್ಲ, ಆದ್ದರಿಂದ ತಪಾಸಣೆ ಅಗತ್ಯವಾಗಿರುವುದಿಲ್ಲ. ಇದೊಂದು ಪ್ರಮುಖ ಚೌಕಟ್ಟನ್ನು ಇಟ್ಟುಕೊಂಡು ಜಗನ್ ಅವರನ್ನು ಸಮ್ಮೋಹನ ಚಿಕಿತ್ಸೆಗೆ ಒಳಪಡಿಸಲು ಪರಸ್ಪರ ಒಪ್ಪಂದ ಮಾಡಿಕೊಂಡೆವು.

Monday 23 May, 2011

ಪರಾಧೀನ-೦೧

ನವೆಂಬರ್ ತಿಂಗಳ ಮೊದಲ ವಾರ. ಸಮ್ಮೋಹನ ಚಿಕಿತ್ಸೆಗಾಗಿ ಬರುತ್ತಿದ್ದ ಕ್ಲಯಂಟ್ ಒಬ್ಬರ ಕರೆ ಬಂತು. ತಮ್ಮ ಸ್ನೇಹಿತರೊಬ್ಬರನ್ನು ಕರೆತರುತ್ತೇನೆ, ಭೇಟಿಗೆ ಸಮಯಾವಕಾಶ ಬೇಕೆಂದರು. ಅಂಥ ಬ್ಯುಸಿ ಏನೂ ಇರಲಿಲ್ಲ, ಸಮಯ ತಿಳಿಸಿದೆ. ನಿಗದಿಯಾದ ಸಮಯಕ್ಕೆ ಸರಿಯಾಗಿಯೇ ಇಬ್ಬರೂ ಬಂದರು. ಹೊಸಬರನ್ನು ಸಮಾಲೋಚನೆಯ ಕೊಠಡಿಗೆ ಬರಹೇಳಿದೆ. ಜೊತೆಗಾರ ವಾರಪತ್ರಿಕೆಯೊಂದನ್ನು ಎತ್ತಿಕೊಂಡು ಕೂತರು.

ಜಗನ್, ಸುಮಾರು ನಲ್ವತ್ತರ ವಯಸ್ಸಿನ ಹೊಟೇಲಿಯರ್. ಮುಂಬೈಯಲ್ಲಿ ವಾಸ. ಮೂರು ಜನ ಅಣ್ಣ-ತಮ್ಮಂದಿರಲ್ಲಿ ಕೊನೆಯವ. ಪದವೀಧರ. ಡ್ಯಾಷಿಂಗ್ ಡೇರ್ ಡೆವಿಲ್ ವ್ಯಕ್ತಿತ್ವ ತನ್ನದು ಎಂದರು. ಕಾಲೇಜಿನಲ್ಲಿ ಸ್ನೇಹಿತರೊಡನೆ ಪಂದ್ಯಕಟ್ಟಿ ಸಮುದ್ರದಲ್ಲಿ ಈಜುತ್ತಿದ್ದರಂತೆ. "ಈಗೆಲ್ಲವೂ ಬಂದಾಗಿದೆ" ಎಂದು ಮುಸಿಮುಸಿ ನಗುತ್ತಾರೆ. ಮದುವೆಯಾಗಿ ಐದು ವರ್ಷವಾಗಿದೆ. ತೃಪ್ತಿಯ ಸುಂದರ ಸಂಸಾರ. ಹೊರಗಿನಿಂದ ನೋಡುವವರಿಗೆ ಯಾವ ಕೊರತೆಯೂ ಇಲ್ಲದ ಜೀವನ.

ಸುಮಾರು ಮೂರು ವರ್ಷದ ಕೆಳಗೆ, ಜಗನ್ ಮಾಮೂಲಿನಂತೆ ಎರಡು ವಾರಗಳ ರಜೆಮಾಡಿ ಊರಿಗೆ ಬಂದಿದ್ದಾಗ ಬೆಳಗಿನ ಹೊತ್ತು ಬೀಚ್ ಬದಿಯಲ್ಲಿ ಜಾಗಿಂಗ್ ಹೋಗಿದ್ದವರು ಏನೋ ಕೆಂಪು-ಕೆಂಪು ಹರಡಿಕೊಂಡಿದ್ದ ಗೋಜಲನ್ನು ದಾಟಿ ಹೋಗಿದ್ದರು. ಅದೇ ಕ್ಷಣ ಯಾಕೋ ಎದೆ ಒಮ್ಮೆ ಸಣ್ಣಗೆ ನಡುಗಿತ್ತು. ತಿರುಗಿ ನೋಡಿ, ಕುಂಕುಮ-ಹೂಗಳ ರಾಶಿ ಅದೆಂದು ಗೊತ್ತಾಗಿ ಸಣ್ಣಗೆ ನಕ್ಕು, ಜಾಗಿಂಗ್ ಮುಗಿಸಿ ಮನೆಗೆ ಹಿಂದಿರುಗಿದ್ದರು. ಸ್ನಾನ ಮಾಡುತ್ತಿದ್ದಾಗ ಮತ್ತೊಮ್ಮೆ ಎದೆ ನಡುಕ. ಏನೋ ಅಳುಕು. ಅದ್ಯಾವ ಭಾವನೆಯೆಂದು ಅರಿವೇ ಇಲ್ಲದಿದ್ದ ಬಿಂದಾಸ್ ವ್ಯಕ್ತಿಗೆ ಇದೇನಾಗಿದೆ ಇವತ್ತು ಅಂದುಕೊಂಡೇ ನಿತ್ಯದ ಸ್ನಾನ, ಪ್ರಾರ್ಥನೆ, ಉಪಾಹಾರಗಳನ್ನು ಪೂರೈಸಿದರು. ಅಣ್ಣಂದಿರ ಹೊಟೆಲಿಗೆ ಭೇಟಿಕೊಡುತ್ತೇನೆಂದು ಇಬ್ಬರು ಅತ್ತಿಗೆಯರಿಗೂ ಹೇಳಿ ಮನೆಯಿಂದ ಹೊರಬಿದ್ದವರು ದಾರಿಯಲ್ಲಿ ಗೆಳೆಯನೊಬ್ಬನಿಗೆ ಕರೆ ಮಾಡಿ ಅವನನ್ನೂ ಕೂಡಿಕೊಂಡು ಹೊಟೇಲಿಗೆ ಹೋಗಿ, ಗೆಳೆಯನೊಂದಿಗೆ ತಿರುಗಾಡಿ, ರಾತ್ರೆಗೆ ಅಣ್ಣಂದಿರು ಮನೆ ಸೇರುವ ಹೊತ್ತಿಗೆ ತಾನೂ ಮನೆಗೆ ಬಂದಿಳಿದರು. ಬೆಳಗಿನ ಎದೆ ನಡುಕ ಪತ್ತೆಯಿಲ್ಲದೆ ಮರೆತೇಹೋಗಿತ್ತು.

ಮರುದಿನವೂ ಮತ್ತದೇ ಜಾಡಿನಲ್ಲಿ ಜಾಗಿಂಗ್. ಯಾವುದೇ ಏರುಪೇರಿಲ್ಲದೆ ಒಂದು ಸುತ್ತು ಹಾಕಿ ಬಂದವರೇ ಸ್ನಾನದ ಮನೆಯಲ್ಲಿ ಇದ್ದಕ್ಕಿದ್ದ ಹಾಗೆ ಗಾಬರಿಗೊಂಡರು. ಕಾರಣವೇ ಇಲ್ಲ. ಮನೆಯೆಲ್ಲ ಮಾಮೂಲಾಗೇ ಇದೆ. ಎಲ್ಲೂ ಏನೂ ಏರುಪೇರಾಗಿಲ್ಲ. ಜಗನ್ ಮಾತ್ರ ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಹೋಗಲೂ ಗಾಬರಿಯಾಗುತ್ತಿದ್ದರು, ಭಯಪಡುತ್ತಿದ್ದರು. ಅದೇ ರಾತ್ರೆ ನಿದ್ರೆಯೂ ಬರಲಿಲ್ಲ. ಮರುದಿನದಿಂದ ಜಾಗಿಂಗ್ ಇಲ್ಲ. ಗೆಳೆಯರ ಸಹವಾಸ ಬೇಕಾಗಲಿಲ್ಲ. ನಿದ್ರೆ, ಹಸಿವಿನ ಪರಿವೆಯಿಲ್ಲ. ಮನಸ್ಸಿನ ನೆಮ್ಮದಿ ಕಳೆದುಕೊಂಡರು. ತೌರಿಂದ ಮಡದಿಯನ್ನು ಕರೆಸಲಾಯಿತು. ಮೊತ್ತಮೊದಲಾಗಿ ಎಲ್ಲರ ತಲೆಗೆ ಹೊಳೆದದ್ದು "ಸೋಂಕು ಆಗಿರಬೇಕು" ಎನ್ನುವ ವಿಚಾರ. ಅದಕ್ಕೆ ಸರಿಯಾಗಿ ದೇವಸ್ಥಾನಗಳಿಗೆ ಹರಕೆ ಹೇಳಿಕೊಂಡಾಯ್ತು. ಪ್ರತಿಷ್ಠಿತ ಜೋಯಿಸರಲ್ಲಿ ವಿಚಾರಿಸಲು ಹೋಗುವ ಬಗ್ಗೆ ಸಂಸಾರದಲ್ಲಿ ತೀರ್ಮಾನವಾಯ್ತು.

ಜೋಯಿಸರು, ಯಥಾಪ್ರಕಾರ ಅವರ ಶಂಖವನ್ನೇ ಊದಿದರು. ಅದವರ ವೃತ್ತಿ ಧರ್ಮ. ಅವರು ತಿಳಿಸಿದಂಥ ಎಲ್ಲ ಪರಿಹಾರ ಕಾರ್ಯಗಳನ್ನು ಮಾಡಿದ್ದಾಯ್ತು. ಹರಕೆ ಹೇಳಿಕೊಂಡಿದ್ದ ಎಲ್ಲ ದೇವಸ್ಥಾನಗಳಿಗೂ ಹೋಗಿ ಬಂದಾಯ್ತು. ಇಷ್ಟಾಗುವಾಗ ರಜೆ ಮುಗಿದೇ ಹೋಯ್ತು. ದಂಪತಿಗಳು ಮುಂಬೈಗೆ ಹೊರಟುನಿಂತರು, ಬಟ್ಟೆಬರೆಗಳ ಜೊತೆಗೆ ಒಂದು ದೊಡ್ಡ ಪ್ರಸಾದಗಳ ಕಟ್ಟಿನೊಂದಿಗೆ. ಎಲ್ಲ ಸರಿಯಾಯ್ತು ಎನ್ನುವ ನೆಮ್ಮದಿಯೊಂದಿಗೆ ತನ್ನ ಗೂಡು ಸೇರಿತು ಜೋಡಿ.

Friday 20 May, 2011

ಸಂಜ್ಞಾ - ೦೪

ಛಿದ್ರ ಚಿತ್ರಗಳ ನೆನಪು ತುಣುಕುಗಳ ನಡುವೆಯೇ ಎದೆಯ ಮೇಲೆ ಕೈಯಿಟ್ಟುಕೊಂಡು ನೋವು ಅನುಭವಿಸಿದ. ನೋವಿನ ಮೂಲವನ್ನು ಹುಡುಕು ಎಂದೆ. ಮತ್ತೊಂದು ಜನ್ಮದ ಹಂದರಕ್ಕೆ ಹಾರಿದ....

"ಕಾಡು... ಅದರ ನಡುವೆ ಒಂದು ದೊಡ್ಡ ವಿಶಾಲವಾದ ಮನೆ. ನನ್ನದೇ ಮನೆ. ಮನೆಯಲ್ಲಿ ನಾನೇ ಹಿರಿ ಮಗ. ಇನ್ನುಳಿದ ತಮ್ಮಂದಿರು ಮೂವರು ಎಲ್ಲರಿಗೂ ಮದುವೆಯಾಗಿದೆ. ನನಗಾಗ್ಲಿಲ್ಲ. ತಮ್ಮಂದಿರಿಗೆ ಅಪ್ಪನಾಗಿದ್ದೆ. ದೊಡ್ಡ ಆಸ್ತಿ. ಗದ್ದೆ, ತೋಟ, ಕಾಡು... ಅರ್ಧ ಊರು ನಮ್ಮದೇ. ಒಳಗಿನ ಕೋಣೆಯ ಖಜಾನೆಯ ತುಂಬಾ ಚಿನ್ನ, ಅಮ್ಮ-ಅಜ್ಜಿಯರದ್ದು. ತಮ್ಮಂದಿರಿಗೆ, ಅವರ ಹೆಂಡತಿಯರಿಗೆ ಅದರ ಮೇಲೆ ಕಣ್ಣು. ಈಗಲೇ ಪಾಲು ಮಾಡ್ಲಿಕ್ಕೆ ನಾನು ತಯಾರಿಲ್ಲ. ಅಪ್ಪ ಇದ್ದಿದ್ರೆ ಮಾಡ್ತಿರಲಿಲ್ಲ ಅಂತ ನನ್ನ ಅಭಿಪ್ರಾಯ. ಅಪ್ಪನನ್ನು ಅವರ ದಾಯಾದಿಗಳು ಆಸ್ತಿ ವ್ಯಾಜ್ಯದಲ್ಲಿ ಕೊಂದಿದ್ರು... ನನಗೀಗ ಐವತ್ತಾರು ವರ್ಷ. ಮಳೆಗಾಲದ ಒಂದು ರಾತ್ರೆ... ಕತ್ತಲೆ. ನನ್ನ ಕೋಣೆಯ ದೀಪ ಆರಿದೆ. ಎಣ್ಣೆ ತರಲಿಕ್ಕೆ ಆಳಿಗೆ ಹೇಳಿ ಕಳಿಸಿ ಒಬ್ಬನೇ ಕತ್ತಲೆಯಲ್ಲಿ ಕೂತಿದ್ದೇನೆ. ಯಾರೋ ಒಳಗೆ ಬಂದಹಾಗಾಯ್ತು. ಯಾರದು? ಉತ್ತರ ಇಲ್ಲ. ಮತ್ಯಾರೋ ಆಚೆ ಓಡಿದ ಹಾಗಾಯ್ತು... ಆಳುಗಳಿರಬಹುದು... ಅಥವಾ ನನ್ನ ನಾಯಿ...

ನನ್ನ ಹಿಂದೆಯೇ ಹೆಜ್ಜೆ ಶಬ್ದ. ನನ್ನ ಸೊಂಟದ ಕಿರುಗತ್ತಿ ಹಿರಿಯುವ ಹೊತ್ತಿಗೇ ನನ್ನ ಹಿಂದಿನಿಂದ ಹೃದಯಕ್ಕೇ ಚೂರಿ ಹಾಕಿದ್ದಾನೆ... ಎರಡನೇ ತಮ್ಮ. ಅವನ ಬದಿಯಲ್ಲೇ ಅವನ ಹೆಂಡತಿ- ಅವಳು ಈಗಿನ ಸುಜೇತಾ. ಅವಳೇ ನನ್ನ ಕೊಲೆಗೆ ಕಾರಣ. ಅದಕ್ಕೇ ಅವಳನ್ನು ಎದುರಿಸಲಿಕ್ಕೆ ಆಗದಷ್ಟು ಹಿಂಜರಿಕೆ ನನಗೆ. ಅವಳು ಕೊಲೆಪಾತಕಿ. ಆಗ ಚೂರಿ ಹಾಕಿಸಿ ಕೊಂದಳು; ಈಗ ಬೆಂಕಿ ಹಚ್ಚಿಸಿ ಕೊಲ್ತಿದ್ದಾಳೆ. ಕೊಲೆಪಾತಕಿ..."

ಕಿರುಚುತ್ತಿದ್ದವನನ್ನು ಸಮಾಧಾನಪಡಿಸಿ, ಸೂಕ್ತ ಸಲಹೆಗಳನ್ನು ನೀಡಿ ಎದೆ ನೋವಿನ ನಿವಾರಣೆಗೆ ಮಾರ್ಗದರ್ಶನ ಮಾಡಿ ಅಲ್ಲಿಂದ ವಾಸ್ತವಕ್ಕೆ ಕರೆತಂದೆ. ತುಂಬಾ ಬಳಲಿ ದಣಿದು ಎದ್ದು ಬಂದ. ಆದರೂ "ಇನ್ನು ಸುಜೇತಾಳನ್ನು ಎದುರಿಸಬಲ್ಲೆ" ಅಂದ. ನಮಗಷ್ಟೇ ಬೇಕಾಗಿತ್ತು. ಶುಭ ಹಾರೈಸಿ ಬೀಳ್ಕೊಟ್ಟೆ.

ಅದಾಗಿ ನಾಲ್ಕು ತಿಂಗಳು ಸಂದಿದೆ. ಒಂದೆರಡು ಬಾರಿ ಫೋನ್ ಮಾಡಲೇ ಅನ್ನಿಸಿದರೂ ಮಾಡಿಲ್ಲ. ತೊಂದರೆಯಿದ್ದಿದ್ದರೆ ಅವನೇ ಫೋನ್ ಮಾಡಿರುತ್ತಿದ್ದ. ಇನ್ನೊಂದು ಸೆಷನ್ ಬೇಕೆನ್ನುತ್ತಿದ್ದ. ನೋ ನ್ಯೂಸ್ ಈಸ್ ಗುಡ್ ನ್ಯೂಸ್ ಅಂತ ಸುಮ್ಮನಿದ್ದೇನೆ.

(ಹೆಸರು, ಸ್ಥಳ, ಉದ್ಯೋಗ, ವಯಸ್ಸು, ವಿದ್ಯೆ, ಸಂಬಂಧಗಳು- ಎಲ್ಲವನ್ನೂ ಕಾಲ್ಪನಿಕ ನೆಲೆಯಲ್ಲಿಟ್ಟ ವಾಸ್ತವದ ಕಥೆಯಿದು.)

Wednesday 18 May, 2011

ಸಂಜ್ಞಾ - ೦೩

ಅದೇ ಬೆಂಕಿ ಸುಂದರನನ್ನು ಎಲ್ಲದರಿಂದಲೂ ವಿಮುಖವಾಗಿಸತೊಡಗಿತು. ಓದಿನಲ್ಲೂ ಗಮನವಿಲ್ಲ. ಸ್ನೇಹಿತರ ಜೊತೆಗೂ ಒಡನಾಟ ಬೇಕಿಲ್ಲ. ಮೈಯೊಳಗಿನ ಬೆಂಕಿಯನ್ನು ಆರಿಸುವುದು ಹೇಗೆಂದೇ ಅವನ ಯೋಚನೆ. ಮನೆಯಲ್ಲೇ ಇದ್ದರೆ ಅವಳತ್ತಲೇ ಗಮನ ಹರಿಯುವುದೆಂಬ ಕಾರಣಕ್ಕೆ ಕೆಲವು ದಿನ ಊರಿನ ಅಜ್ಜನ ಮನೆಗೂ ಹೊರಟ. ಅಲ್ಲಿ ತೋಟದ ಕೆರೆಯಲ್ಲಿ ಒಂದು ಇಡೀ ಬೆಳಗಿನ ಹೊತ್ತು ಕುತ್ತಿಗೆ ವರೆಗಿನ ನೀರಿನಲ್ಲಿ ಕೂತಿದ್ದು ಏನೋ ಒಂದಿಷ್ಟು ಸಮಾಧಾನ ಅನುಭವಿಸಿದ. ಹೀಗೇ ಕೆಲವು ದಿನ ಮಾಡಿದರೆ ಈ ಬೆಂಕಿ ನೀರಿನೊಳಗೆ ತಣ್ಣಗಾಗಬಹುದೆಂಬ ಭರವಸೆಯಿಂದ ಮರುದಿನವೂ ಪುನರಾವರ್ತಿಸಿದ.

ಕೆಳಗಿನ ಮೆಟ್ಟಲಲ್ಲಿ ಕೂತು ಕುತ್ತಿಗೆ ಮಟ್ಟದ ನೀರಿನ ಆಹ್ಲಾದವನ್ನು ಅನುಭವಿಸುತ್ತಿದ್ದವನ ಇಂದ್ರಿಯಗಳು ಒಮ್ಮೆಲೇ ಧಿಗ್ಗನೆದ್ದ ರೀತಿಗೆ ಬೆಚ್ಚಿ ಕಣ್ತೆರೆದಾಗ ಕಂಡದ್ದು ಎದುರಿನ ದಂಡೆಯಲ್ಲಿ ನೀರಿಗೆ ಧುಮುಕಲು ತಯಾರಾಗಿ ನಿಂತವಳು. ಇವನ ನೋಟ ತನ್ನತ್ತ ಬಿದ್ದದ್ದೇ ನೆಪವೆಂಬ ರೀತಿಯಲ್ಲಿ ಕೆರೆಗೆ ಹಾರಿ ನಾಲ್ಕೈದು ಉದ್ದುದ್ದ ಬೀಸುಹೊಡೆತಗಳಲ್ಲಿ ಈ ಬದಿಗೆ ತಲುಪಿ, ನೀರೊಳಗೆ ಮುಳುಗು ಹಾಕಿ ಸುಂದರನ ಪಾದದಿಂದ ಮುತ್ತಿಡುತ್ತಾ ಸೊಂಟದತ್ತ ಏರಿದವಳನ್ನು ಮತ್ತೆ ನೀರಿಗೇ ನೂಕುವ ಯೋಚನೆ ಬಂದರೂ ಬುದ್ಧಿ ಬರಲಿಲ್ಲ. ಕೆರೆದಂಡೆ ಮತ್ತೊಂದು ಬೆಂಕಿಯಂಗಳವಾಯ್ತು.

ಇದರ ನಂತರ ಇಂತಹ ಇನ್ನೂ ಒಂದೆರಡು ಮುಖಾಮುಖಿ. ಸುಂದರನ ಪರಿಸ್ಥಿತಿ ಗಂಭೀರವಾಯ್ತು. ಊಟ ತಿಂಡಿಯ ಪರಿವೆಯಿಲ್ಲ. ಓದಿನ ಕಡೆ ಮೊದಲೇ ಗಮನವಿಲ್ಲ. ಚಾರ್ಟರ್ಡ್ ಅಕೌಂಟೆಂಟ್ ಆಫೀಸಿಗೆ ಹೋದರೂ ಅಲ್ಲಿ ಯಾವ ಹೆಣ್ಣಿನ ಮುಖ ನೋಡಿದರೂ ಅವರಲ್ಲೆಲ್ಲ ಸುಜೇತಾಳೇ ಕಾಣತೊಡಗಿದಳು. ಯಾವ ಹೆಣ್ಣಿನ ದನಿ ಕೇಳಿದರೂ ಅವನೊಳಗೆ ಉದ್ವೇಗದ ಉರಿ ಹತ್ತಿಕೊಳ್ಳುತ್ತಿತ್ತು. ಮೊದಲ ಸಂಯೋಗದ ನಂತರ ಆರು ತಿಂಗಳು ಕಳೆದಿತ್ತು. ಯಾರೊಂದಿಗೂ ಮುಖ ನೋಡಿ ಮಾತನಾಡಲಾರದ ದುಃಸ್ಥಿತಿಗೆ ತಲುಪಿದ್ದ. ಆಗಲೇ ಹಿಪ್ನೋಥೆರಪಿಯ ಬಗ್ಗೆ ಅವನ ಸ್ನೇಹಿತನಿಂದ ತಿಳಿದುಬಂತು. ಅತ್ಯಂತ ಸಂಕೋಚದಿಂದ ಮುಜುಗರ ಪಡುತ್ತಾ ನನ್ನನ್ನು ಭೇಟಿಯಾಗಲು ಕೇಳಿಕೊಂಡ. ಕಾರಣವೇನೆಂದು ಕೇಳಿದಾಗ, "ತುಂಬಾ ಟೆನ್ಶನ್ ಆಗ್ತದೆ. ಓದ್ಲಿಕ್ಕೆ ಆಗುದಿಲ್ಲ. ಯಾವುದ್ರಲ್ಲೂ ಗಮನ ಇಲ್ಲ" ಅಂದ. ಅಪಾಯಿಂಟ್‍ಮೆಂಟ್ ಕೊಟ್ಟೆ, ಸಮಯಕ್ಕೆ ಸರಿಯಾಗಿ ಬರಲು ಸೂಚಿಸಿದೆ.

ಮೊದಲ ಭೇಟಿಯಲ್ಲಿ ಒಂದೊಂದಾಗಿ ವಿವರಗಳನ್ನು ಕೇಳುತ್ತಾ ಹೋದಂತೆ ಕಂಗಾಲಾದ ಕಳೆಗುಂದಿದ ಕಣ್ಣುಗಳ ಹಿಂದಿನ ಅತಂತ್ರ ಸ್ಥಿತಿ ಗೋಚರವಾಯ್ತು. ಒಳಉರಿಯನ್ನು ತೃಪ್ತಿಪಡಿಸಲೂ ಆಗದೆ, ಆರಿಸಲೂ ಆಗದೆ ಒದ್ದಾಡುತ್ತಿದ್ದ. ಸಮ್ಮೋಹನಕ್ಕೆ ಒಳಪಟ್ಟಾಗಲೂ ಉದ್ವೇಗ, ಆತಂಕ. ನಿರಾಳವಾಗುವ ಪರಿಯೇ ಆತನಿಗೆ ಅಸಾಧ್ಯ. ಉಸಿರಾಟದಲ್ಲಿ ತಲ್ಲೀನತೆಯಿಲ್ಲ, ಏಕಾಗ್ರತೆಯಿಲ್ಲ. ಎಲ್ಲವೂ ಏರುಪೇರು. ಏಕತಾನದ ಉಸಿರಾಟವನ್ನು ಅಭ್ಯಸಿಸಲು ತಿಳಿಸಿ ಕಳುಹಿಸಿಕೊಟ್ಟೆ.

ಎರಡನೇ ಮತ್ತು ಮೂರನೇ ಭೇಟಿಗಳಲ್ಲಿ ಆತನಿಗೆ ಪುನಃಪುನಹ ಉಸಿರಾಟದ ಏಕತಾನತೆಯನ್ನೂ ಏಕಾಗ್ರತೆಯನ್ನೂ ಅಭ್ಯಾಸ ಮಾಡಿಸಿ, ನಿರಾಳವಾಗುವುದನ್ನೇ ಹೇಳಿಕೊಡಬೇಕಾಯಿತು. ಆತನ ಮನಸ್ಸು ಸದಾ ಗೊಂದಲಭರಿತ. ತನ್ನ ಹೊರತಾಗಿ ಬೇರೆ ಯಾರಿಗೂ ಗೊತ್ತಿಲ್ಲದ ವಿಷಯ ವಿವರಗಳನ್ನೆಲ್ಲ ಹಂಚಿಕೊಳ್ಳುವಾಗಿನ ಆತಂಕ. ಚಿಕಿತ್ಸಕಿಯಾಗಿ ನನ್ನನ್ನು ಒಪ್ಪಿಕೊಳ್ಳುವಲ್ಲಿ ಸಣ್ಣ ಸಂದೇಹ. ಇವೆಲ್ಲ ಅಡೆತಡೆಗಳನ್ನು ದಾಟಿ ಮುಂದಿನ ಭೇಟಿಗೆ ಬಂದಾಗ ನಿರಾಳವಾಗಿ ಸಮ್ಮೋಹನಕ್ಕೆ ಒಳಗಾಗಿ ಯಾವುದೋ ಜನ್ಮದ ತುಣುಕನ್ನು ಎಳೆದೆಳೆದು ತಂದ.

Monday 16 May, 2011

ಸಂಜ್ಞಾ - ೦೨

ರಾತ್ರೆ ಹತ್ತೂವರೆ ಕಳೆದಿತ್ತು. ಸುಂದರ್ ಅಮ್ಮನೇ ಬಂದಿರಬೇಕೆಂದು ಓದುತ್ತಿದ್ದ ಕಾದಂಬರಿಯನ್ನು ಬದಿಗಿರಿಸಿ ಬಾಗಿಲು ತೆರೆದ.

"ಒಳಗೆ ಬರಬಹುದಾ?" ಕೇಳಿದವಳು ಸುಜೇತಾ.
ಸುಮ್ಮನೇ ಬದಿಗೆ ಸರಿದು ನಿಂತವನನ್ನು ದಾಟಿ ಹೋಗಿ ಕುರ್ಚಿಯಲ್ಲಿ ಕೂತಳು. ಉಪಾಯವಿಲ್ಲದೆ ಮಂಚದ ಮೇಲೆ ಕೂತ ಸುಂದರ್. "ಏನತ್ತಿಗೆ ಈ ಹೊತ್ತಿಗೆ ಬಂದ್ರಿ?"
"ಬರಬಾರ್ದಾ?... ಏನ್ ಓದ್ತಿದ್ದೆ?..."
"ಸಿಡ್ನಿ ಷೆಲ್ಡನ್ ನಾವೆಲ್"
"ಹ್ಮ್. ಅವ್ನ ನಾವೆಲ್ಲಲ್ಲಿ ರೊಮ್ಯಾನ್ಸ್ ಎಷ್ಟು ಚಂದ, ಅಲ್ವಾ?"
"..."
"ಯಾಕೆ ಮಾರಾಯ ನಾಚಿಕೆ? ನಾನೇನು ಹೊರಗಿನವಳಾ? ಹೇಳು, ಚಂದ ಇರ್ತದಲ್ವಾ?"
"ಹ್ಮ್..."

ಅಷ್ಟರಲ್ಲೇ ಕೆಳಗಿನಿಂದ ಅಮ್ಮ ಸುಂದರನನ್ನು ಕರೆದರೆಂದು ಸಿಕ್ಕಿದ ಅವಕಾಶ ಉಪಯೋಗಿಸಿ ಎದ್ದು ಹೋದ. ಮತ್ತೆ ಬಂದಾಗ ಸುಜೇತಾ ಅಲ್ಲಿರಲಿಲ್ಲ. ಓದುತ್ತಿದ್ದ ಕಾದಂಬರಿಯೂ ಇರಲಿಲ್ಲ.

ಮತ್ತೊಂದೆರಡು ದಿನಗಳ ನಂತರ ಇಂಥದೇ ಇನ್ನೊಂದು ಮುಖಾಮುಖಿ. ಅಂದು ಸುಮ್ಮನೇ ಏನೋ ಕಾರಣ ಹುಡುಕಿ ಕೆಳಗೆ ಬಂದಿದ್ದ ಸುಂದರ್. ಹಿಂದಿರುಗಿದಾಗ ಕೋಣೆ ಖಾಲಿ. ಈ ಹೊಸ ಅತ್ತಿಗೆಯ ಈ ವರಸೆ ಆತನಿಗೆ ಒಗಟಾಗಿತ್ತು. ಯಾರಲ್ಲೂ ಹೇಳುವಂತಿರಲಿಲ್ಲ. ಹೀಗೇ ಒಂದೆರಡು ತಿಂಗಳೇ ಕಳೆಯಿತು. ಊಟದ ಮೇಜಿನ ಮುಂದೆಯೂ ಸುಜೇತಾ ಸಿಕ್ಕರೆ ಅವಳ ನೋಟ ತಪ್ಪಿಸುವಂತಾಗುತ್ತಿತ್ತು. ಅದ್ಯಾವುದೋ ಅರಿಯದ ಸೆಳೆತ ಅವಳ ಕಣ್ಣಲ್ಲಿ. ಆತ್ಮೀಯ ಗೆಳೆಯನಲ್ಲಿ ಹೇಳಿಕೊಂಡ. ಅವನೋ, ಸಾರಾಸಗಟಾಗಿ ತೀರ್ಪು ಕೊಟ್ಟ- ಅವಳು ನಿನ್ನನ್ನು ಮೋಹಿಸುತ್ತಿದ್ದಾಳೆ. ಬೇಕಾದರೆ ಉಪಯೋಗಿಸ್ಕೋ. ಇಲ್ಲವಾದ್ರೆ ದೂರಾಗು.

ಏನೇನೋ ಸಬೂಬು ಹೇಳಿ, ಸಿ.ಎ. ಸೇರಲೆಂದು ಬೆಂಗಳೂರಿಗೆ ಹೊರಟವನನ್ನು ಅಪ್ಪ ತಡೆದು ತನ್ನೂರಲ್ಲೇ ಪ್ರತಿಷ್ಠಿತ ಚಾರ್ಟರ್ಡ್ ಅಕೌಂಟೆಂಟ್ ಬಳಿ ಆರ್ಟಿಕಲ್‍ಷಿಪ್ಪಿಗೆ ಸೇರಿಸಿದಾಗ ಪೆಚ್ಚಾದವನು ಸುಂದರ್ ಮಾತ್ರ. ಸುಜೇತಾ ಎನ್ನುವ ಮೋಹಿನಿಯಿಂದ ದೂರ ಹೋಗುವ ಪ್ರಯತ್ನ ವಿಫಲವಾಯ್ತು. ಇನ್ನು ಗೆಳೆಯ ಹೇಳಿದಂತೆ ಅದರ ಪ್ರಯೋಜನ ಪಡೆಯಲೆ? ಮನಸ್ಸು ಒಪ್ಪಲೇ ಇಲ್ಲ. ನಿದ್ದೆ ದೂರಾಗಹತ್ತಿತು. ಇಷ್ಟೆಲ್ಲ ಆಗುವಷ್ಟರಲ್ಲಿ ಭಾಸ್ಕರ್ ಸುಜೇತಾ ಈ ಮನೆ ಸೇರಿ ಆರೇಳು ತಿಂಗಳು ಕಳಯಿತು. ಮನೆಯವರೆಲ್ಲ ಚೆನ್ನಾಗಿಯೇ ಹೊಂದಿಕೊಂಡಿದ್ದರು. ಶಂಕರ್ ವ್ಯವಹಾರ ವಿಸ್ತಾರಗೊಳ್ಳುತ್ತಿತ್ತು. ಹೆಸರೂ ಹರಡುತ್ತಿತ್ತು. ಒಂಟಿಯಾಗಿ ಒಳಗೊಳಗೇ ಕೊರಗುತ್ತಿದ್ದವ ಸುಂದರ್ ಮಾತ್ರ.

ಅದೊಂದು ದಿನ ಮಧ್ಯರಾತ್ರೆ, ಮನೆಯೆಲ್ಲ ಮೌನದಲ್ಲಿ ಅದ್ದಿದ್ದ ಒಂದೂವರೆ-ಒಂದೂ ಮುಕ್ಕಾಲರ ಹೊತ್ತು. ಅಕೌಂಟಿಂಗ್ ಪುಸ್ತಕದಲ್ಲಿ ಮುಳುಗಿದ್ದ ಸುಂದರ್ ಬೆನ್ನಮೇಲೆ ಮೃದುವಾಗಿ ಬೆಚ್ಚಗಿನದೇನೋ ಸೋಕಿದಾಗ ಬೆನ್ನಹುರಿಯಲ್ಲೇ ಝುಮ್ಮೆಂದು ನೇರವಾದ. ತಕ್ಷಣವೇ ಆತನ ಕಣ್ಣಮೇಲೆ ಬೆರಳುಗಳು ಆವರಿಸಿಕೊಂಡವು.
"ಸುಜೇತಾ..." ಮನಸ್ಸು ಇಂದ್ರಿಯಗಳೆಲ್ಲ ಕೂಗಿಕೊಂಡವು, ನಾಲಿಗೆಯ ಹೊರತಾಗಿ.
ಮುಂದೆ ನಡೆದುದಕ್ಕೆ ಆತನಲ್ಲಿ ಯಾವುದೇ ಕಾರಣವಿಲ್ಲ, ತರ್ಕವಿಲ್ಲ, ಜಿಗುಪ್ಸೆಯಿಲ್ಲ, ಬೇಸರವೂ ಇಲ್ಲ.
ಇನ್ನಷ್ಟು ಬೇಕೆಂಬ ಆಸೆಯ ಬೆಂಕಿ ಮಾತ್ರ.

Monday 9 May, 2011

ಸಂಜ್ಞಾ - ೦೧

"ಮೇಡಮ್, ನಿಮ್ಮತ್ರ ಅರ್ಜೆಂಟ್ ಮಾತಾಡ್ಬೇಕು. ಪುರುಸೊತ್ತು ಉಂಟಾ? ಕಾಲ್ ಮಾಡ್ಲಾ?"
ಅವನ ಮೆಸೇಜ್ ಬಂದಾಗ ಮಧ್ಯಾಹ್ನದ ಊಟ, ನಂತರದ ಕೆಲಸಗಳನ್ನು ಮುಗಿಸಿ ಮಲಗಲೋ ಓದಲೋ ಅನ್ನುವ ಗೊಂದಲದಲ್ಲಿದ್ದೆ. ಎರಡನ್ನೂ ಬದಿಗಿಟ್ಟು "ಕಾಲ್ ಮಾಡು" ಉತ್ತರ ಕಳಿಸಿದೆ.

ಅವನು ನನ್ನ ಕ್ಲಯಂಟ್. ಇದಕ್ಕೆ ಮೊದಲು ಎರಡು ಬಾರಿ ಸಮ್ಮೋಹನ ಚಿಕಿತ್ಸೆಗಾಗಿ ಬಂದಿದ್ದ. ಎರಡೂ ಸಲವೂ ಹದವಾದ ಟ್ರಾನ್ಸ್ ಸ್ಟೇಜ್ ತಲುಪಿದ್ದ. ರಿಲ್ಯಾಕ್ಸ್ ಆಗುವುದಕ್ಕೇ ಹಿಂಜರಿಕೆ ಆತನಿಗೆ. ಏನೋ ಬಿಗು, ಎಂಥದೋ ಆತಂಕ. ಮೂರನೇ ವಾರಕ್ಕೆ ಭೇಟಿ ನಿಗದಿಪಡಿಸಿಯೇ ಹೋಗಿದ್ದ. ಇನ್ನೆರಡು ದಿನಕ್ಕೆ ನಮ್ಮ ನಿಗದಿತ ಭೇಟಿ. ಇಂದೇನು ಅರ್ಜೆಂಟ್? ನನ್ನ ಯೋಚನಾ ಸರಣಿ ಅವನ ಕರೆಯಿಂದ ಕತ್ತರಿಸಲ್ಪಟ್ಟಿತು.

"ಹಲೋ, ನಮಸ್ತೆ ಸುಂದರ್. ಹೇಳಿ. ಹೇಗಿದ್ದೀರಿ?"
"ನಾನು... ನಾನು... ತುಂಬಾ ಟೆನ್ಶನ್ ಆಗ್ತದೆ ಮೇಡಮ್. ನಿದ್ದೆಯೇ ಬರುದಿಲ್ಲ. ರಾತ್ರೆ ಎರಡು ಮೂರು ಗಂಟೆಗೆಲ್ಲ ಕಾರ್ ತಗೊಂಡು ಡ್ರೈವ್ ಹೋಗ್ತೇನೆ, ಟೆನ್ಶನ್ ತಡಿಲಿಕ್ಕೆ. ಆದ್ರೂ ಸರಿಯಾಗುದಿಲ್ಲ. ನಿದ್ದೆಯೇ ಬರುದಿಲ್ಲ. ಟೆನ್ಶನ್... ನಾನು ಸರಿಯಾಗ್ತೆನಾ ಮೇಡಮ್?"
"ಸುಂದರ್, ನೀವು ಖಂಡಿತಾ ಸರಿಯಾಗ್ತೀರಿ. ನಾನು ಹೇಳಿದ ಹಾಗೆ ಕೇಳ್ಬೇಕು, ಅಷ್ಟೇ. ಕೇಳ್ತೀರಾ?"
"ಹ್ಮ್..."
"ನಾನು ಹೇಳಿದ ಹಾಗೆ ಪ್ರತಿದಿನ ರಿಲ್ಯಾಕ್ಸೇಷನ್ ಅಭ್ಯಾಸ ಮಾಡ್ತಿದ್ದೀರಾ? ಬೆಳಗ್ಗೆ ಮೆಡಿಟೇಶನ್ ಮಾಡ್ತಿದ್ದೀರ? ಯೋಗಾಬ್ಯಾಸ ಪುನಃ ಶುರು ಮಾಡಿದ್ದೀರಾ?"
"ಇಲ್ಲ ಮೇಡಮ್, ಯಾವುದೂ ಆಗುದಿಲ್ಲ. ಸುಮ್ಮನೇ ಕೂತ್ಕೊಳ್ಳಿಕ್ಕೇ ಆಗುದಿಲ್ಲ. ಟೆನ್ಶನ್..."
"ನಿಮ್ಮ ಇಷ್ಟದ ಮ್ಯೂಸಿಕ್... ಅದನ್ನು ಕೇಳ್ತಿದ್ದೀರ?"
"ಹೌದು, ಅದು ಯಾವಾಗ್ಲೂ ಕೇಳ್ತೇನೆ."
"ಗುಡ್. ಅದನ್ನೇ ಕೇಳಿಕೊಂಡು ಹಾಗೇ ಕಣ್ಣುಮುಚ್ಚಿ ರಿಲ್ಯಾಕ್ಸ್ ಆಗಿ. ಇನ್ನೆರಡು ದಿನ ಅದನ್ನು ಮಾಡ್ತೀರಾ?"
"ಹ್ಮ್, ಮಾಡ್ತೇನೆ ಮೇಡಮ್..."
"ಸರಿ ಹಾಗಾದ್ರೆ. ಎರಡು ದಿನದ ಮೇಲೆ ನೋಡುವಾ. ನಿಮ್ಮ ಸಮಯಕ್ಕೆ ಸರಿಯಾಗಿ ಬನ್ನಿ, ಆಯ್ತಾ?"
"ಬರ್ತೇನೆ ಮೇಡಮ್. ನಾನು ಸರಿಯಾಗ್ತೇನಾ?"
"ಹೌದು, ಸುಂದರ್. ಖಂಡಿತಾ ಸರಿಯಾಗ್ತೀರಿ. ಗುರುವಾರ ನೋಡುವಾ. ಬೈ ಬೈ. ಟೇಕ್ ಕೇರ್."
"ಹ್ಮ್..."
***

ಸುಂದರ್ ಹೆಸರು ಅನ್ವರ್ಥ. ಸ್ಫುರದ್ರೂಪಿ ತರುಣ. ಇಪ್ಪತ್ತಾರರ ಹರೆಯ. ಎತ್ತರದ ದೃಢಕಾಯ. ಗುಂಗುರುಂಗುರು ತಲೆಗೂದಲು. ಅಗಲ ಮುಖದಲ್ಲಿ ಕಳೆಗುಂದಿದ ಕಂಗಾಲಾದ ಅಗಲಗಲ ಕಣ್ಣುಗಳು. ಬೇಕಾದಷ್ಟು ಆಸ್ತಿ ಮಾಡಿಟ್ಟಿರುವ ಸಿವಿಲ್ ಕಾಂಟ್ರ್ಯಾಕ್ಟರ್ ಅಪ್ಪನ ಏಕಮಾತ್ರಪುತ್ರ. ಬಿ.ಕಾಂ. ಪದವೀಧರ. ಸಿ.ಎ. ಮಾಡುವ ಕನಸು ಹೊತ್ತಾಗಲೇ ಕಣ್ಣಿಗೆ ಬಿದ್ದವಳು ದೊಡ್ಡಪ್ಪನ ಮಗನ ಹೆಂಡತಿ- ಸುಜೇತಾ. ಚಿಕ್ಕಪ್ಪನ ಜೊತೆಗೇ ಕಟ್ಟಡ ಕಾಮಗಾರಿ ಕೆಲಸಗಳ ಉಸ್ತುವಾರಿ ನೋಡಿಕೊಂಡು ತನ್ನ ನೆಲೆ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದ ಭಾಸ್ಕರ್ ಇವರ ಮನೆಗೇ ಬಂದು ನೆಲೆಸಿದ ಪತ್ನೀಸಹಿತ.

ಸುಂದರನ ಅಪ್ಪ ಶಂಕರ್ ನಗರದಲ್ಲೆಲ್ಲ ಸುಪ್ರಸಿದ್ಧರು. ಕೈತುಂಬಾ ಕೆಲಸವಿದ್ದು ಎಲ್ಲವನ್ನೂ ಸರಿದೂಗಿಸಿಕೊಳ್ಳಲು ಹೆಣಗುತ್ತಿದ್ದ ಹೊತ್ತಿನಲ್ಲೇ ಭಾಸ್ಕರ್ ಜೊತೆಗೂಡಿದಾಗ ರೆಕ್ಕೆ ಬಂದಂತಾಗಿತ್ತು. ಅಣ್ಣನ ಮಗನನ್ನೂ ಮನೆಯಲ್ಲೇ ಇರಿಸಿಕೊಂಡು ಕೆಲಸ ಕಾರ್ಯಗಳ ರಾಜ್ಯಭಾರವನ್ನು ಅವನಿಗೂ ಕಲಿಸುತ್ತಾ ತಾವು ಬೆಳೆಯುವ ಲೆಕ್ಕ ಹಾಕಿದರು. ಮನೆಯಾಕೆಗೂ ಮಗಳಂತಹ ಸೊಸೆ ಸುಜೇತಾಳಲ್ಲಿ ಮಮತೆಯೇ. ಎಲ್ಲವೂ ಚಂದವಾಗಿಯೇ ಇತ್ತು- ಅದೊಂದು ದಿನ ರಾತ್ರೆ ಆ ಕೋಣೆಯ ಬಾಗಿಲು ಟಕಟಕಿಸುವ ತನಕ.

Monday 2 May, 2011

ಸುಮ್ಮನೆ ನೋಡಿದಾಗ...೨೪

‘ನೀವು ನನ್ನನ್ನು ಇಷ್ಟ ಪಟ್ಟಿದ್ದೀರಿ ಅಂತ ನೇಹಾ ಹೇಳಿದ್ದಾಳೆ ಅಂತಂದ ಹರ್ಷ. ನಿಜವಾ?’
‘...’
‘ನಿಮ್ಮನ್ನು ನೋಡಿದ ಮೊದಲ ಸಲವೇ ನಾನು ಮೆಚ್ಚಿಕೊಂಡಿದ್ದೆ ನಿಮ್ಮನ್ನು. ನನ್ನ ಕಸಿನ್ ಶರತ್ ನಿಮ್ಮ ಕ್ಲಾಸ್‍ಮೇಟ್ ಅಲ್ವಾ? ಶರತ್ ಹೇಳ್ತಿದ್ದ ನೀವು ಎಂ.ಎಸ್ಸಿ. ಮಾಡುವ ಯೋಚನೆಯಲ್ಲಿದ್ದೀರಿ ಅಂತ. ಹೌದಾ?’
‘ಹ್ಮ್! ಜುಲೈ ಹದ್ನೆಂಟು ಕ್ಯಾಂಪಸ್ಸಿಗೆ ಹೋಗ್ತಿದ್ದೇನೆ.’ ಅಂತೂ ಒಂದು ಅರ್ಥಪೂರ್ಣ ವಾಕ್ಯ ಮಾತಾಡಿದೆ!
‘ಯಾವ ವಿಷಯದಲ್ಲಿ ಎಂ.ಎಸ್ಸಿ?’
‘ಪ್ರಾಣಿಶಾಸ್ತ್ರ ವಿಭಾಗದಲ್ಲಿ. ಕೆಮಿಸ್ಟ್ರಿ ನಂಗಿಷ್ಟ ಇಲ್ಲ...’ ಬೇಕಂತಲೇ ಎರಡನೆಯ ಮಾತು ಸೇರಿಸಿದ್ದೆ.
‘ನಿಮ್ ಇಷ್ಟ ನಿಮ್ಮದೇ. ಅದ್ರಲ್ಲೇನು ತೊಂದರೆ?’
‘...’

ಸಣ್ಣದೊಂದು ಮಿಂಚು ಸುಳಿದು ಗುಡುಗು ಮೊಳಗಿ ಮಳೆಹನಿ ಇಳಿಯತೊಡಗಿದ್ದೇ ನೆಪವಾಗಿ ಆಕಾಶ ನೋಡಿದೆ.
‘ಮನೆಒಳಗೆ ಹೋಗುವ, ಬನ್ನಿ...’ ತಾನೇ ಮುಂದಾಗಿ ಹೊರಟವನ ಹಿಂದೆ ಎದ್ದು ನಿಂತಾಗ ಅಂಗಳದಲ್ಲಿ ನಿಂತಿದ್ದ ನೀರಿನಲ್ಲಿ ಮತ್ತೊಂದು ಸುಳಿಮಿಂಚು ಪ್ರತಿಫಲಿಸಿತು. ಗುಡುಗಿನ ಸ್ವರದೊಡನೆಯೇ ಗುಡುಗುಡು ಓಡಿ ನೇಹಾಳ ಕೋಣೆಯನ್ನು ಸೇರಿಕೊಂಡು ಬಾಗಿಲು ಮುಂದೆ ಮಾಡಿ ಅವಳೆರಡೂ ಕೆನ್ನೆಗಳನ್ನು ಹಿಂಡುತ್ತಾ ಕೇಳಿದೆ, ‘ಯಾಕೆ ಇದೆಲ್ಲಾ ಕಿತಾಪತಿ ಮಾಡಿದ್ದು? ಯಾಕೆ ಹರ್ಷಣ್ಣನಿಗೆ ಹೇಳಿದ್ದು? ಮತ್ತಿನ್ಯಾರಿಗೆಲ್ಲ ಗೊತ್ತುಂಟು ಈ ವಿಷ್ಯ? ಯಾಕೆ?’
‘ಹೇಳದೇ ಇದ್ದಿದ್ರೆ ನಿನ್ನ ಪ್ರೀತಿ ನಿನ್ನ ಹೃದಯದಲ್ಲೇ ಹುದುಗಿ ಒಣಗಿ ಹೋಗ್ತಿತ್ತೇನೋ... ಅದಕ್ಕೇ ಹರ್ಷನಿಗೆ ಹೇಳಿದ್ದು. ಅವ್ರಿಗಂತೂ ಖಷಿಯೋ ಖುಷಿ. ‘ತುಂಬಾ ಒಳ್ಳೇ ಹುಡುಗ ವಸಂತ್. ಅವ್ನನ್ನು ಮೆಚ್ಚಿದ್ದಾಳಾ ಶಿಶಿರಾ? ನನ್ ತಂಗಿ ಆಯ್ಕೆ ಪರ್ಫ಼ೆಕ್ಟ್, ನನ್ನ ಆಯ್ಕೆ ಹಾಗೇ...’ ಅಂತೆಲ್ಲಾ ಹಾರಾಡಿದ್ದೇ ಹಾರಾಡಿದ್ದು. ನಿನ್ನೆ ಸಂಜೆ ಅವ್ರು ಬಂದಾಗ ಹೇಳಿದೆ. ಇವತ್ತು ಈ ಕತೆ. ಇದೆಲ್ಲ ನಂಗೇನೂ ಗೊತ್ತಿರ್ಲಿಲ್ಲ ಮಾರಾಯ್ತಿ. ಎಲ್ಲ ಅವ್ರದ್ದೇ ಕಿತಾಪತಿ. ಅವ್ರನ್ನೆಲ್ಲ ಇಲ್ಲಿಗೆ ನಮ್ಮನೆಗೆ ಅಂತ ಕರ್ಕೊಂಬಂದು, ಮೆಲ್ಲ ಪಪ್ಪನತ್ರ ಹೇಳಿ, ನನ್ನ ಮೂಲಕ ನಿಂಗೆ ಫ಼ೋನ್ ಮಾಡ್ಸಿದ್ದಾರೆ. ಆಮೇಲಿದ್ದು ನಿಂಗೇ ಗೊತ್ತುಂಟಲ್ಲಾ. ನನ್ನನ್ನು ಆಟ ಆಡ್ಸಿದ್ರು ಪಪ್ಪ, ಹರ್ಷ ಸೇರಿ. ಪ್ಲೀಸ್ ಮಾರಾಯ್ತಿ, ನಂಬು ನನ್ನನ್ನು...’ ನನ್ನ ಪ್ರಶ್ನಾರ್ಥಕ ನೋಟಕ್ಕೆ ಉತ್ತರ ಕೊಡುತ್ತಾ ನಿಂತವಳ ಕೆನ್ನೆಗಳೂ ಕೆಂಪಾಗಿದ್ದವು.

ನಮ್ಮಿಬ್ಬರ ಮೌನಹರಟೆಯ ನಡುವೆ ನಡುಮನೆಯಿಂದ ಅಂಕಲ್ ಅಮ್ಮನಿಗೆ ಫೋನ್ ಮಾಡುತ್ತಿದ್ದದ್ದು ಕೇಳುತ್ತಿತ್ತು. ಮಧ್ಯಾಹ್ನದೂಟಕ್ಕೆ ಇಲ್ಲೇ ಬರುವಂತೆ ಹೇಳುತ್ತಿದ್ದರು ಅಂಕಲ್. ‘ಏನೋ ವಿಶೇಷ ಉಂಟು. ಬನ್ನಿ, ಗೊತ್ತಾಗ್ತದೆ’ ಅನ್ನುತ್ತಿದ್ದರು. ಅಲ್ಲಿಂದೇನು ಉತ್ತರ ಬಂತೋ ಗೊತ್ತಿಲ್ಲ.

ಕೋಣೆಯ ಬಾಗಿಲ ಮೇಲೆ ಎಂದಿನ ಹಾಗೆ ಬೆರಳುಗಳ ನರ್ತನ ಶುರುವಾದಾಗ ಬಾಗಿಲು ತೆರೆದೆವು. ಒಳಗೆ ಬಂದ ಅಂಕಲ್ ನಮ್ಮಿಬ್ಬರನ್ನೂ ತಬ್ಬಿಕೊಂಡು ಸುಮ್ಮನೇ ನಿಂತರು. ಅವರ ಎರಡೂ ಭುಜಗಳಲ್ಲಿ ಒಂದೊಂದು ಹೂಗಳು; ಆಗಷ್ಟೇ ಸುರಿದ ಮಳೆಯಲ್ಲಿ ಮಿಂದಂತೆ ಪುಳಕಿತ ಹೂಗಳು. ಮತ್ತೊಂದು ಮಿಂಚು ಬೆಳಗಿತೆಂದು ತಲೆಯೆತ್ತಿದಾಗ ಕಂಡದ್ದು ಕ್ಯಾಮೆರಾ ಹಿಂದೆ ನಗುತ್ತಿದ್ದ ಹರ್ಷಣ್ಣ. ಅವನ ಹಿಂದೆ ಕಾತರದ ಕಣ್ಣುಗಳ ವಸಂತ್. ಅವನಿಗಿನ್ನೂ ನನ್ನ ಉತ್ತರ ಕೊಟ್ಟಿರಲಿಲ್ಲ. ಕೊಡಬೇಕೇ? ಯಾಕೆ? ನಾಲಿಗೆ ಚಾಚಿ ಹರ್ಷಣ್ಣನನ್ನು ಅಣಕಿಸಿ ಅಂಕಲ್ ತೋಳಿಗೆ ಕೆನ್ನೆಯೊತ್ತಿದೆ. ಅಡುಗೆಮನೆಯಿಂದ ನಳಿನಿ ಆಂಟಿ ತುಪ್ಪದಲ್ಲಿ ದ್ರಾಕ್ಷಿ ಗೇರುಬೀಜ ಹುರಿಯುತ್ತಿದ್ದ ಘಮ ಮನೆಯೆಲ್ಲ ತುಂಬಿಕೊಂಡಿತು, ಮನವನ್ನೂ.

***

{ಸಹೃದಯ ಓದುಗರೇ, ನಿಮ್ಮೆಲ್ಲರ ಆಶೀರ್ವಾದ ಕೋರುತ್ತಾ, ನೇಹಾ-ಹರ್ಷ, ಶಿಶಿರಾ-ವಸಂತ್ ನಿಮ್ಮನ್ನು ಬೀಳ್ಕೊಡುತ್ತಾರೆ. ಹರಸಿರಿ.}