ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday 19 May, 2008

ಬೆಳಗಾಯಿತು

Tuesday, May 29, 2007

(ಗಂಭೀರ ಚಿಂತನೆಯತ್ತ ಮತ್ತೆ ಹೊರಳುವ ಮುನ್ನ... ಒಂದಿಷ್ಟು ತುಂಟತನ!)
ನಲ್ಲ ನಿನ್ನ ಲಲ್ಲೆಯಲ್ಲಿ ಮರೆತೆ ನಾನು ನನ್ನ ಲಾಲಿ
ಕೂಸು ಅಳಲು ತೊಟ್ಟಿಲಲ್ಲಿ, ನಿನಗೆ ಮುನಿಸು ಬಂದಿತೆ?

ಅಳಲಿ ಬಿಡು ಬಾರೆ ಇಲ್ಲಿ, ಎಂದೆ ನೀನು ಸಿಡುಕಿನಲ್ಲಿ
ಬಿಡಲಿ ಹೇಗೆ ಕುಡಿಯನಲ್ಲಿ, ಅತ್ತೆ ಮುನಿಯದಿರುವರೆ?

ಹಸಿದ ಮರಿಗೆ ಹಾಲನೂಡಿ, ತೂಗಿ, ಹಾಡಿ, ಮುತ್ತ ನೀಡಿ
ಮಲಗು ಎನಲು, ರಂಪ ಮಾಡಿ ಮತ್ತೆ ರಾಗ ತೆಗೆದನು

ಎತ್ತಿಕೊಂಡು ರಮಿಸುತಿರಲು ತೋಯಿಸಿದನು ನನ್ನ ಮಡಿಲು
ಹಾಗೇ ನಿದ್ದೆ ತೂಗಿ ಬರಲು, ಬಿಸಿಯ ಬಟ್ಟೆ ಹೊದೆಸಿದೆ

ಒದ್ದೆ ಸೀರೆ ಬಿಚ್ಚಿ ಬದಿಗೆ, ಹೊಸದೆ ವಸನ ಸುತ್ತಿ ಕೊನೆಗೆ
ದೀಪವಾರಿಸುತ್ತ ಒಳಗೆ, ಕತ್ತಲಲ್ಲಿ ನಿಂದೆನು

ಅತ್ತೆ, ಮಾವ ಆಚೆಗಿಹರು, ಚಾವಡಿಯಲಿ ಅಪ್ಪನುಸಿರು
ನನ್ನ ಎದೆಯಲೇನೋ ಡಮರು, ದಿಗಿಲು ನಿನ್ನ ನೋಡಲು

ತೊಟ್ಟಿಲಲ್ಲಿ ಪುಟ್ಟ ಕಂದ, ಹೊತ್ತು ತಂದೆ ತವರಿನಿಂದ
ಇಷ್ಟು ದಿನದ ವಿರಹದಿಂದ, ನೀನು ಬೇಯದಿರುವೆಯೊ?

ಆದರಿಲ್ಲಿ ಕೇಳು ನಲ್ಲ, ಸಾವಧಾನ; ಸಿಡುಕು ಸಲ್ಲ
ಎನುತ ಸವರೆ ಕೆನ್ನೆ-ಗಲ್ಲ, ಬೆಳ್ಳಂಬೆಳಗಾಯಿತು.
(೦೪-ಮೇ-೨೦೦೭)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 7:30 PM
Labels: , , ,

13 ಪತ್ರೋತ್ತರ:

ಮನಸ್ವಿನಿ said...
ಮುಂದಿನ ಆತ್ಮ ಚಿಂತನೆಗೆ ಮುಂಚೆ ಇಷ್ಟೆಲ್ಲಾ ತುಂಟತನನಾ? ಚೆನ್ನಾಗಿದೆ ಹಾಡು. :)
May 29, 2007 10:29 PM

Shiv said...
ಸುಪ್ತದೀಪ್ತಿ,
ಆಹಾ ! ಎಂತಹ ಸುಂದರ ಕವನ..
ಪತ್ನಿಯಿಂದ ದೂರವಾಗಿದ್ದ ಪತಿಯ ಆತುರ..
ಪುಟ್ಟ ಕಂದನ ಲಾಲನೆಯಲ್ಲಿ ಪತ್ನಿಯ ಸಡಗರ..
ಅದರ ನಂತರ ಪತಿ-ಪತ್ನಿಯ ಎಕಾಂತ.
May 29, 2007 10:30 PM

suptadeepti said...
ಶಿವ್: "ಅದರ ನಂತರ ಪತಿ-ಪತ್ನಿಯ ಎಕಾಂತ"-- ಆದರೇನು ಮಾಡೋಣ? ಅಷ್ಟರಲ್ಲೇ ಬಂದನಲ್ಲ ಭೂ-ನಲ್ಲ ದಿನಕರ! ಇನ್ನೆಲ್ಲಿಯ ಏಕಾಂತ?? ನಿಮಗೆ ಹಾಗಾಗದಿರಲಿ!!
ಮನಸ್ವಿನಿ: ನಕ್ಕು ಮನಸ್ಸು ಹಗುರಾಗಿರುವಾಗ ಹೇಳಿದ ಮಾತು ಹಿತವಾಗಿ ಕೇಳತ್ತೆ, ಅದಕ್ಕೆ....!
May 29, 2007 11:44 PM

ಸುಶ್ರುತ ದೊಡ್ಡೇರಿ said...
ವ್ಹಾವ್ ವ್ಹಾವ್ ವ್ಹಾವ್! ಅದ್ಭುತ. ಹಾಡು ಅಂದ್ರೆ ಹಾಡು.
May 30, 2007 2:57 AM

December Stud said...
Certainly ಹೊಚ್ಚ ಹೊಸತು. The whole "story" is wonderful to read. A little unlike your most poems, but close enough.
And, of course, an excellent poem...in case I forgot to mention that :)
May 30, 2007 5:58 PM

ಶ್ರೀನಿಧಿ.ಡಿ.ಎಸ್ said...
ಆಹಾ!ಚೆನ್ನಾಗಿದೆ ಹಾಡು. ನರಸಿಂಹ ಸ್ವಾಮಿ ನೆನಪಾದರು!!
May 31, 2007 1:30 AM

ಚಿರವಿರಹಿ said...
ತುಂಬ ತುಂಬಾ ಇಷ್ಟ ಆಯ್ತು ನೊಡ್ರಿ. ಹುಡುಕಾಡಿ ಹುಡುಕಾಡಿ ಪದಗಳನ್ನು ನೇಯುವ ಕಲೆ ನಂಗೆ ಒಲಿಲೆ ಇಲ್ಲಾ ನೊಡ್ರಿ. ಅದಕ್ಕೆ ಇಂತಹ ಕವನಗಳನ್ನೆಲ್ಲಾ ನೊಡಿದ್ರ ಖುಶಿನು ಅಕ್ಕೈತ್ರಿ ಮತ್ತಾ ಒಂಚೂರು ಹೊಟ್ಟೆಕಿಚ್ಚು ಅಕ್ಕೈತ್ರಿ.. ಹಿಂಗ ನಡಿಲಿ ನಿಮ್ ಕವನಾರಾಧನೆ. ನಿಮ್ಮ ಕಲ್ಪನೆ ಮಸ್ತ್ ಐತಿ ಬಿಡ್ರಿ..
June 1, 2007 12:12 AM

suptadeepti said...
ಸುಶ್, DS, ಶ್ರೀನಿಧಿ, ಚಿರವಿರಹಿ: ಪ್ರತಿಕ್ರಿಯೆಗಳಿಗೆ ಧನ್ಯವಾದಗಳು. ವಂದನೆಗಳು.
ಎಚ್.ಎಸ್.ವಿ.ಯವರನ್ನು ಅನುಕರಿಸಲು ಹೋಗಿದ್ದು ಹೌದು. ತುಳಸೀವನದಲ್ಲಿ ಅವರ "ತೂಗುಮಂಚದಲ್ಲಿ ಕೂತು..." ಕವನ ಓದಿ/ ಕೇಳಿ ನನಗೊಂದು ಸವಾಲು ಬಂತು. ಉತ್ತರವಾಗಿ ಇದನ್ನು ಬರೆದೆ. ಅದೇ ಲಯದಲ್ಲಿ, ಅದೇ ರೀತಿಯ ಪ್ರಾಸ ಪ್ರಸ್ತಾರ ಉಪಯೋಗಿಸಿ ಸರಳ ವಿಷಯ, ಸಣ್ಣ ಘಟನೆಯ ನಿರೂಪಣೆಯನ್ನು ಕವನವಾಗಿಸಿದೆ. ಅಷ್ಟೇ ಇದರ ಹಿಂದಿನ ಕಥೆ. ನಿಮಗೆಲ್ಲ ಇಷ್ಟವಾಗಿದ್ದು ಸಂತೋಷ.
ಚಿರವಿರಹಿ, ಸ್ವಾಗತ. ಮತ್ತೆ ಮತ್ತೆ ಬರುತ್ತಿರಿ.
June 1, 2007 12:32 AM

yaatrika said...
ಕವನದ ಆಶಯ, ಪ್ರಸ್ತುತಿ, ಸರಳತೆ ಎಲ್ಲವೂ ಚೇತೋಹಾರಿಯಾಗಿದೆ. ಆದರೆ ಮುದ್ದಿನ ಕಂದನಿರುವಾಗಲೂ ಪತಿ-ಪತ್ನಿಯರಿಗೆ ಏಕಾಂತದ ಬಯಕೆಯಾಗುತ್ತದೆಯೇ ಅನ್ನುವ ಚಿಕ್ಕ ಸಂಶಯವೂ ಬಂತು. ಇನ್ನೊಂದು ವಿಷಯ - ಶ್ರೀನಿಧಿ ಹೇಳಿದಂತೆ ಕೆ.ಎಸ್.ನ ಅವರು ನೆನಪಾದದ್ದು ಮಾತ್ರವಲ್ಲ, ಅಪ್ರಯತ್ನವಾಗಿ ಇಡೀ ಕವನವನ್ನು ’ಬರುವಳೆನ್ನ ಶಾರದೆ’ ರಾಗದಲ್ಲೇ ಓದಿದೆ. ಸರಿ ಇನ್ನು ಗಂಭೀರಚಿಂತನೆಯನ್ನು ಎದುರುನೋಡುತ್ತಾ...
June 1, 2007 2:31 AM

Jagali Bhagavata said...
ಭೂ-ನಲ್ಲ ದಿನಕರ!?? ಅದು ಹೇಗೆ ಸಾಧ್ಯ?
ದಿನಕರ - office husband-u
ಶಶಾಂಕ - house husband-u:-))
June 1, 2007 8:51 PM

Raghavendra said...
ತೊಟ್ಟಿಲಲ್ಲಿ ಒಂದು ಮಗು, ಅಂತಃಪುರದಲ್ಲಿನ್ನೊಂದು,
ಯಾವ ಕರೆಗೆ ಓಗೊಡುವುದು- ಅಮ್ಮನಾಗುವುದೋ ಮೊದಲು, ಮಡದಿಯಾಗುವುದೋ....
ಚಿತ್ರವಾಗಿಯೇ ಮೂಡಿದಂತಿದೆ ಕವನ.
June 8, 2007 11:16 AM

suptadeepti said...
ಯಾತ್ರಿಕ, ಭಾಗವತ, ರಾಘವೇಂದ್ರ, ಅನಿಸಿಕೆಗಳಿಗೆ ಧನ್ಯವಾದಗಳು.

@ಯಾತ್ರಿಕ: ಪುಟ್ಟ ಕಂದನಿರುವಾಗಲೂ ಏಕಾಂತದ ಬಯಕೆ ಆಗುತ್ತದೆಯೇ-- ಕಾಲವೇ ನಿಮಗೆ ಉತ್ತರ ಹೇಳಬಹುದು.

@ಭಾಗವತ: ಭೂದೇವಿಗೆ ಪಂಚ-ಪತಿಯರು ಅನ್ನುವ ಕಲ್ಪನೆಯಲ್ಲಿ ಒಂದು ಕವನ ಹೆಣೆದಿದ್ದೆ, ಅದನ್ನು ನೆನಪಿಸಿದ್ದೀರಿ, ಮುಂದೆ ಇಲ್ಲಿ ಅದೂ ಬರುತ್ತೆ, ಓದಿ.

@ರಾಘವೇಂದ್ರ: ಹೆಣ್ಣಿನ ಆ ಒಂದು ಕ್ಷಣದ ಹೊಯ್ದಾಟವನ್ನು ಅರ್ಥ ಮಾಡಿಕೊಂಡಿದ್ದೀರಿ. ನಿಮಗೆ ಅಭಿನಂದನೆ ಹೇಳಲೇ ಅಥವಾ ಕವನಕ್ಕೋ (ಅರ್ಥ ಮಾಡಿಸಿದ್ದಕ್ಕೆ!)?
June 9, 2007 4:16 PM

Keshav Kulkarni said...
ಸುಪ್ತದೀಪ್ತಿಯವರೇ,
ಈ ಹಾಡು ತುಂಬ ಇಷ್ಟವಾಯಿತು, ನನ್ನ ಬ್ಲಾಗಿನಲ್ಲೊಂದು ಕೊಂಡಿ ಕೊಟ್ಟಿದ್ದೇನೆ (ನಾನು ಮತ್ತೆ ಮತ್ತೆ ಓದಲೆಂದು), ತಮ್ಮ ಅಭ್ಯಂತರವಿಲ್ಲವೆಂದುಕೊಂಡಿದ್ದೇನೆ.
ಕೇಶವ
June 17, 2007 6:45 PM

ದುರ್ಗದಲ್ಲೊಬ್ಬ ಮರಿನಾಯಕ....


Saturday, May 26, 2007

"ಚಿತ್ರದುರ್ಗ"ದಲ್ಲಿ ಮೊಗ್ಗರಳಿ ಹೂವಾಗಿದೆ
ಹೊಸತೊಂದು ಚೇತನ ಉಸಿರಾಡಿದೆ
ನವಿರುಗರಿಗಳ ಕೋಮಲತೆ
ಬಿರಿದರಳುಗಳ ಮುಗುದತೆ
ಸೇರುವಂತೆ ಮನದ ತುಂಬ ಹಾಡಾಗಿದೆ.
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 9:44 AM
Labels:

5 ಪತ್ರೋತ್ತರ:
sritri said...
ಮರಿ ನಾಯಕನಿಗೆ ಹಾರ್ದಿಕ ಸ್ವಾಗತ!!
May 26, 2007 1:25 PM

ಮನಸ್ವಿನಿ said...
ಮರಿ ನಾಯಕನಿಗೆ ಸ್ವಾಗತ... ಚಿತ್ರ ದುರ್ಗದಲ್ಲೀಗ ಸಂಭ್ರಮ :) ಒಳ್ಳೆಯದಾಗಲಿ
May 26, 2007 7:53 PM

srinivas said...
ಓಹೋ! ಇಷ್ಟು ದಿನಗಳು ಚಿತ್ರ-ದುರ್ಗದಲ್ಲಿ ಸಕ್ರಿಯತೆ ಕಾಣದಿದ್ದುದರ ಕಾರಣ ಇದೇನಾ?
ಅಲ್ಲೊಬ್ಬ ಪೋರನಿಹ ನಿಶು-ಮನೆ
ಇಲ್ಲೊಬ್ಬ ಕಲ್ಪಿಸುವ ಮನೆಯ ಅರಮನೆ
ಮರಿನಾಯಕನಿಗೆ ನನ್ನ ಬಹುಪರಾಕು
ಇವನ ಕಡೆಗಣಿಸಿದರೆ ನಿನಗೆ ತಪರಾಕು
ಚಿತ್ರ-ದುರ್ಗದ ದುರ್ಭೇದ್ಯ ಕೋಟೆಯ ಒಳಿತಿಗಾಗಿ ಆ ಸರ್ವಶಕ್ತನಲ್ಲಿ ನನ್ನ ಇಂದಿನ ಪ್ರಾರ್ಥನೆ
ಗುರುದೇವ ದಯಾ ಕರೊ ದೀನ ಜನೆ
May 26, 2007 8:00 PM

Shiv said...
ಓಹ್ !ಎಂತಹ ಸಂತಸದ ವಿಷಯ ! ಅಭಿನಂದನೆಗಳು ಚಿತ್ರ-ದುರ್ಗದವರಿಗೆ
May 29, 2007 10:26 PM

suptadeepti said...
ಎಲ್ಲರ ಅಭಿನಂದನೆಗಳು ದುರ್ಗ ತಲುಪಿವೆ. ಅಲ್ಲಿಂದ ಪ್ರತಿವಂದನೆಗಳೂ ರವಾನೆಯಾಗಿವೆ. ಎಲ್ಲರಿಗೂ ಧನ್ಯವಾದಗಳು. ದೊರೆ ಮತ್ತು ದೊರೆಸಾನಿ ರಾಜಕುಮಾರನ ಜೊತೆ ಆರಾಮಾಗಿದ್ದಾರೆ.
June 1, 2007 12:34 AM

ಶಿಕಾಗೋದಲ್ಲಿ ನಡೆದ ಹಾಸ್ಯ ಸಾಹಿತ್ಯ ಸಮ್ಮೇಳನದ ಗಾಳಿ.....

Tuesday, May 22, 2007

ಒಂದಿಷ್ಟು ನಗೆಹನಿಗಳು

ಹನಿ-೦೧:
ಹಿರಿಯ ಕಥೆಗಾರ ಮಿತ್ರರೊಬ್ಬರು ಬೆಂಗಳೂರಿಂದ ಪತ್ರ ಬರೆದಿದ್ದರು, ಮಾಮೂಲಾಗಿ ಒಂದು ಪ್ರಶ್ನೆ "ಹೇಗಿದ್ದೀರಿ?"ನಾನು ಉತ್ತರಿಸಿದ್ದೆ: "ಈಗೀಗ ಅಂತರ್ಜಾಲದಲ್ಲಿ ಎಷ್ಟೊಂದು ಕನ್ನಡ ಸಾಹಿತ್ಯ ಸಾಮಾಗ್ರಿ ಓದಲು ಲಭ್ಯವಿದೆ ಅಂದ್ರೆ, ಇಡೀ ದಿನ ಕಂಪ್ಯೂಟರ್ ಮುಂದೆ ಕೂತು ಓದುತ್ತಿದ್ದೇನೆ. ಪರಿಣಾಮವಾಗಿ: ದೇಹ ಬೆಳೆದಿದೆ, ದೃಷ್ಟಿ ಇಳಿದಿದೆ, ಬುದ್ಧಿ ಮಾತ್ರ.... ಅಂತರ್ಜಾಲದಲ್ಲಿ ಕಳೆದುಹೋಗಿದೆ..!"

ಹನಿ-೦೨:
ಹೆಸರಿನ ಮೇಲೆ-- ಹಿಂದೊಮ್ಮೆ ಮಕ್ಕಳ ಶಾಲೆಯಲ್ಲಿ ನನ್ನನ್ನು ಕೇಳಿದ ಪ್ರಶ್ನೆ-- "ನಿಮ್ಮ ಮಕ್ಕಳ ಮತ್ತು ಅವರ ತಂದೆಯ `ಲಾಸ್ಟ್ ನೇಮ್' ಒಂದೇ ಇದೆ, ನಿಮ್ಮದು ಮಾತ್ರ ಬೇರೆ ಇದೆ, ನೀವು ಅವರ ಮಲತಾಯಿಯೇ?" ಅದಕ್ಕೆ ಉತ್ತರಿಸಿದ್ದೆ: "ಅಲ್ಲವೇ ಅಲ್ಲ ಅಂತ ನಾನು ಹೇಳುತ್ತೇನೆ, ಮಕ್ಕಳು `ಹೌದು' ಅಂತ ಹೇಳ್ತಾರೇನೋ, ಗೊತ್ತಿಲ್ಲ."

ಹನಿ-೦೩:
ಹೆಸರಿನ ಮೇಲೆ, ಇನ್ನೊಂದು-- ನಮ್ಮ ಮನೆಯ ಸದಸ್ಯರ ಪೈಕಿ ಉಳಿದವರ ಹೆಸರುಗಳ ಏಕಾಕ್ಷರಗಳು (ಇನಿಷಿಯಲ್ಸ್) "ಎಮ್.ಎಮ್." ನನ್ನದು "ಜೆ.ಎಮ್." ಅದಕ್ಕೆ ನನ್ನ ವಿವರಣೆ: "ಅವರೆಲ್ಲ ಒಳ್ಳೆಯ ಸಿಹಿಯಾದ, ಬಣ್ಣ ಬಣ್ಣದ `ಎಮ್-ಆಂಡ್-ಎಮ್ ಕ್ಯಾಂಡಿ'ಗಳು. ನಾನು ಖಾರದ ಹ್ಯಾಲಪೀನ್ಯೋ ಮೆಣಸು."

ಹನಿ-೦೪:
ನನ್ನ ಕೆಲವಾರು ಸ್ನೇಹಿತರು ತಮ್ಮ ಲೇಖನಗಳನ್ನು ಪ್ರಕಟಣೆಗೆ ಕಳಿಸುವ ಮೊದಲು, "ಜ್ಯೋತಿ ಒಮ್ಮೆ ನೋಡಿ, ತಪ್ಪಿದ್ದರೆ ತಿಳಿಸಿ" ಅಂತಾರೆ. ಇತ್ತೀಚೆಗೆ ಗೆಳೆಯರಿಬ್ಬರ ಪುಸ್ತಕಗಳ ಕರಡು ತಿದ್ದುಪಡಿಯನ್ನೂ ಮಾಡಿದೆ. ಅದಕ್ಕೆ ಮಹಾದೇವ್ ತಮಾಷೆ ಮಾಡಿದ್ರು, "ಎಮ್.ಎ. ಓದಿ, ಊರಿನ ಕಾಲೇಜಲ್ಲಿ ಉಪನ್ಯಾಸಕಿಯಾಗಿ ಸೇರಿದ್ದರೆ ರೀಡರ್ ಆಗ್ತಿದ್ದೆಯೇನೋ, ಆದ್ರೆ ಈಗ ಪ್ರೂಫ್-ರೀಡರ್ ಆಗಿದ್ದೀ"!?

ಹನಿ-೦೫:
ಇತ್ತೀಚೆಗೆ ನನ್ನ ಕಿರಿಯ ಸ್ನೇಹಿತನೊಬ್ಬ ಆನ್-ಲೈನ್ ಬಂದ. "ಹಲ್ಲೋ" ಅಂದ. "ಹೇಗಿದ್ದೀ?" ಅಂದ್ರೆ "ಬದುಕಿದ್ದೀನಿ" ಅಂದ. ಯಾಕೋ ಏನೋ ಬೇಸರದಲ್ಲಿದ್ದ ಅಂತ ಗೊತ್ತಾಯ್ತು. "ಓಹ್, ಒಳ್ಳೇದು, ತುಂಬಾ ಒಳ್ಳೇದು. ಸತ್ತವರ ಜೊತೆ ಮಾತಾಡಿ ಅಭ್ಯಾಸ ಇಲ್ಲ ನಂಗೆ" ಅಂದೆ. ಕೂಡಲೇ ಒಂದು ಸ್ಮೈಲೀ ಕಳಿಸಿ, "ಥ್ಯಾಂಕ್ಸ್" ಅಂದ.

ಹನಿ-೦೬:
ಗೃಹಿಣಿಯಾಗಿ ಮನೆಯಲ್ಲೇ ಇರುವವರ ಬಗ್ಗೆ ಒಂದು ಹನಿ; ನಮ್ಮ ಸ್ಥಳೀಯ ದೇವಸ್ಥಾನದಲ್ಲಿ ಕೇಳಿದ ಒಂದು ಸಂಭಾಷಣೆ: ಪೂಜೆ ಮಾಡಿಸಲು ಬಂದ ಒಬ್ಬ ಮಹಿಳೆಯನ್ನು ಅರ್ಚಕರು ಕೇಳಿದರು, "ನೀವೆಲ್ಲಿ ಕೆಲಸ ಮಾಡುತ್ತೀರಿ?" ಮಹಿಳೆ ಉತ್ತರಿಸಿದರು, "ಇಲ್ಲ ಗುರುಗಳೇ, ನಾನು ಹೌಸ್-ವೈಫ್". ತಕ್ಷಣ ಬಂತು ಛೂಬಾಣ: "ಓಹೋ, ಹಾಗಾದ್ರೆ, ನಿಮ್ಮ ಯಜಮಾನ್ರಿಗೆ ಆಫೀಸ್-ವೈಫ್ ಕೂಡಾ ಇದ್ದಾರ?" ಪಾಪ, ಆ ಮಹಿಳೆ ಪೆಚ್ಚಾದರು. ಅವರ ಮುಖ ನೋಡಿ ನನ್ನ ತಲೆ ಓಡಿತು. ನಾನಾಗಿದ್ರೆ, "ಹಾಗಲ್ಲ ಗುರುಗಳೇ, ನನ್ನ ಗಂಡನಿಗೆ ಆಫೀಸೇ ಫಸ್ಟ್ ವೈಫ್" ಅಂದುಬಿಡುತ್ತಿದ್ದೆ.

ಹನಿ-೦೭:
ಗೃಹಿಣಿಯಾಗಿ ಮನೆಯಲ್ಲೇ ಇರುವವರ ಬಗ್ಗೆ ಒಂದು ರೀತಿಯ ಕೀಳು ಭಾವನೆ ಇಟ್ಟುಕೊಂಡು "ಎಲ್ಲಿ ಕೆಲಸ ಮಾಡುತ್ತೀರಿ?" ಎಂದು ಒಂಥರಾ ವಾರೆಗಣ್ಣಲ್ಲಿ ಕೇಳುವವರಿಗಾಗಿ ನನ್ನ ಗೃಹಿಣಿತನದ ಉತ್ತರ: "ನಾನಾ? ಮನೆಯಲ್ಲೇ!" ಒಮ್ಮೆ ತಬ್ಬಿಬ್ಬಾಗಿ "ಹ್ಞಾಂ" ಅನ್ನುತ್ತಾರೆ, ಆಗ ಮತ್ತೊಮ್ಮೆ, "ಮನೆಯಿಂದ ಅಲ್ಲ, ಮನೆಯಲ್ಲೇ" ಅನ್ನುತ್ತೇನೆ. ಕೇಳಿದವರ ಮುಖ ಬಣ್ಣಗೆಡುತ್ತದೆ.
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 11:27 PM
Labels: , ,

12 ಪತ್ರೋತ್ತರ:
Satish said...
ಹಾಸ್ಯ ಸಮ್ಮೇಳನ ಚೆನ್ನಾಗಿತ್ತು ಅಂತ ತಿಳೀತು!
ಹನಿಗಳು ಸೊಗಸಾಗಿದ್ದವು, ಕೆಲವೊಂದು ಓದಿ ನಕ್ಕು ಕೆಮ್ಮು ಬರುವಂತಾಯ್ತು...
ಸದ್ಯ ಹನಿಹನಿ ಸೇರಿ ಹಳ್ಳವಾಗಲಿಲ್ಲವಲ್ಲ :-)
May 23, 2007 2:05 AM

ಸುಶ್ರುತ ದೊಡ್ಡೇರಿ said...
ಹಹ್ಹ! ಚೆನ್ನಾಗಿದೆ. ಕೆಲವೊಂದು ನನ್ನ ಮುಖದಲ್ಲೂ ಸ್ಮೈಲೀ ತರಿಸಿತು :-)
May 23, 2007 2:56 AM

ಶೆಟ್ಟರು (Shettaru) said...
:) ಚೆನ್ನಾಗಿವೆ, ಪರಿಣಾಮವಾಗಿ: ದೇಹ ಬೆಳೆದಿದೆ, ದೃಷ್ಟಿ ಇಳಿದಿದೆ, ಬುದ್ಧಿ ಮಾತ್ರ.... ಅಂತರ್ಜಾಲದಲ್ಲಿ ಕಳೆದುಹೋಗಿದೆ..!"
May 23, 2007 3:07 AM

Prashanth M said...
ಹನಿಗಳು ಬಹಳ ಚೆನಾಗಿವೆ... ಬೆಳಿಗ್ಗೆಯಿಂದ office ನಲ್ಲಿ ಕೂತು ಕೆಲಸ ಮಾಡಿ ತಲೆ ಚಿಟ್ಟು ಹಿಡಿದಿತ್ತು, ಒಳ್ಳೆ relief ಸಿಕ್ತು... ಆ chat conversation - ಇನ್ನು ಬದುಕಿದ್ದಿಇನಿ - ಸೂಪರ್ ಆಗಿದೆ :)
May 23, 2007 7:14 AM

suptadeepti said...
ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು. ಈ ಎಲ್ಲ ಹನಿಗಳೂ ನೈಜ ಘಟನೆಗಳೇ, ಕಾಲ್ಪನಿಕವಲ್ಲ.
ಪ್ರಶಾಂತ್, ಲಹರಿಗೆ ಸ್ವಾಗತ. ಹೀಗೇ ಬರುತ್ತಿರಿ.
May 23, 2007 9:15 AM

ಶ್ಯಾಮಾ said...
ಎಲ್ಲ ಹನಿಗಳು ತುಂಬಾ ಚೆನ್ನಾಗಿವೆ :)
May 23, 2007 9:07 PM

Shrilatha Puthi said...
'maneyinda alla, maneyalle' tumba ishTa aaytu :) good ones.
May 23, 2007 11:25 PM

ಮನಸ್ವಿನಿ said...
ಚೆನ್ನಾಗಿವೆ...chat session ಮಸ್ತ್ ಇದೆ
May 24, 2007 6:24 PM

Jagali Bhagavata said...
ಪುನರ್ಜನ್ಮದಿಂದ ಹಿಡಿದು ಹನಿಗಳ ತನಕ..... ನಿಮ್ಮ ಬ್ಲಾಗಿನ ಹರಹು ದೊಡ್ಡದು. ವೈವಿಧ್ಯಮಯವಾಗಿದೆ:-)
May 25, 2007 7:37 PM

suptadeepti said...
ಮತ್ತೊಮ್ಮೆ ಅನಿಸಿಕೆ ಮಂಡಿಸಿದವರಿಗೆಲ್ಲ ವಂದನೆಗಳು.
ಹರಹು ಅಗಲವಾದಾಗ ಆಳ ಕಡಿಮೆಯಾಗುವ ಸಾಧ್ಯತೆಯೂ ಇದೆ, ಆ ಅರಿವಿನೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ ಎನ್ನುವ ಪ್ರಜ್ಞೆಯೂ ಇದೆ. ಧನ್ಯವಾದಗಳು.
May 26, 2007 9:55 AM

ಅರ್ಚನಾ said...
wawh..chandada hanigaLu :-)
June 13, 2007 3:05 AM

suptadeepti said...
ಪ್ರತಿಕ್ರಿಯೆಗೆ ವಂದನೆಗಳು ಅರ್ಚನಾ. ಇತ್ತೀಚೆಗೆ ಅಪರೂಪ. ಆಗಾಗ ಬರುತ್ತಿರಿ.
June 15, 2007 7:30 PM

ಅಮ್ಮನ ದಿನದ ಕವನಗಳಿಗೆ ಒಂದು ವಿವರಣೆ:

Tuesday, May 15, 2007

ಈ ಎರಡೂ ಕವನಗಳನ್ನು ನಾನು ನನ್ನನ್ನು ಹೆತ್ತ ಅಮ್ಮನಿಗಾಗಿಯೇ ಬರೆಯಲಿಲ್ಲ ಅಂದರೆ ಅಚ್ಚರಿಯಾಗಬಹುದು, ಅಲ್ಲವೆ?

"ಜನನಿ" ಕವನ ನಮ್ಮೆಲ್ಲರ, ಈ ಜಗದ, ಜೀವಕೋಟಿಯ, ಅಮ್ಮನಾಗಿರುವ "ಸಾಗರ"ದ ಬಗೆಗಾದರೆ, "ಸ್ಮರಣೆ" ಕವನ ಬರೆದದ್ದು ಅಮ್ಮ ಭಾರತಾಂಬೆಯ ಸ್ಮರಣೆ ಕಾಡಿದಾಗ. ಇಬ್ಬರು ಓದುಗರು ನನಗೆ ಇವನ್ನು ಹೆತ್ತಮ್ಮನ ಬಗೆಗೆಂದು ತಿಳಿದು ಪ್ರತಿಕ್ರಿಯಿಸಿದಾಗ ನನಗೂ ಹೊಳೆದದ್ದು, "ಹೌದಲ್ಲಾ!" ಎಂದು.

ಈಗ, ಈ ಹಿನ್ನೆಲೆಯನ್ನಿರಿಸಿಕೊಂಡು ಮತ್ತೊಮ್ಮೆ ಕವನಗಳನ್ನು ಓದಿ ಏನನಿಸುತ್ತೋ ಹೇಳಿ.
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 9:40 PM
Labels:

8 ಪತ್ರೋತ್ತರ:
parijata said...
ಸುಪ್ತದೀಪ್ತಿಯವರೇ,
ವಿವರಣೆಗಾಗಿ ಧನ್ಯವಾದಗಳು. ಹೆತ್ತಮ್ಮನ ಬಗ್ಗೆ ಎಂದು ಓದಿದರೂ ಪದ್ಯಗಳು ಬಹಳ ಸುಂದರವಾಗಿವೆ. "ಶತಶತಕಗಳ ಇರುವಿಕೆಯ ಆಧಾರ್" ಎಂದಾಗ ಪ್ರಕೃತಿಯ ಬಗ್ಗೆಯೇನೋ ಅನ್ನಿಸಿತು. ಆಮೇಲೆ ಗೊತ್ತಾಯಿತು. ಎರಡನೆಯ ಪದ್ಯದ "ಮತ್ತೆ ಮರುಕಳಿಸುವುದು ಹೊತ್ತವಳ ನೆನಹು ..." ಬಹಳ ಇಷ್ಟವಾಯಿತು. ಅಲ್ಲಿದ್ದಾಗ ಈ ಪದ್ಯದಲ್ಲಿನ ಭಾವನೆಗಳೇ ನನ್ನಲ್ಲೂ ಬರುತ್ತಿದ್ದವು. 'ಅಮ್ಮ'ನ ಬಗ್ಗೆ ಇನ್ನೂ ಬಹಳ ಪ್ರೀತಿ ಇರುವುದಾದರೂ, ವಾಪಸ್ಸು ಬಂದ ಮೇಲೆ ಆ ಭಾವುಕತೆ ಕಡಿಮೆಯಾಗಿಹೋಗಿದೆ ಎನ್ನಿಸುತ್ತದೆ. ಇಲ್ಲಿಯ ವಿವೇಚನೆಯಿಲ್ಲದ "ಅಭಿವೃದ್ಧಿ", ಟ್ರಾಫಿಕ್ ಎಲ್ಲವನ್ನೂ ನೋಡಿ ನೋಡಿ ಬಹಳ ಬೇಸರವಾಗಿಹೋಗಿದೆ.
May 15, 2007 10:13 PM

ಸುಶ್ರುತ ದೊಡ್ಡೇರಿ said...
ಬಹುಶಃ ಕವನಗಳ ವೈಶಿಷ್ಟ್ಯವೇ ಇದು. ಕವಿ ಅದನ್ನು ಬರೆದದ್ದು ಯಾವುದರ ಬಗ್ಗೆಯಾದರೂ ಆಗಿರಬಹುದು. ಆದರೆ ಓದುಗ ಅದನ್ನು ಬೇರೆಯದೇ ರೀತಿಯಲ್ಲಿ ಅರ್ಥ ಮಾಡಿಕೊಂಡು ಖುಷಿಪಡಬಲ್ಲ..
ಎರಡೂ ಚೆಂದದ ಕವಿತೆಗಳು.
May 16, 2007 4:31 AM

December Stud said...
ನಿನ್ನೆ ನಿಮ್ಮೊಡನೆ ಮಾತನಾಡಿದಾಗ ಹೇಳಿದಂತೆ, ಕವಿ ಮತ್ತು ಓದುಗರ ದೃಷ್ಟಿಕೋನದಲ್ಲಿ ಬಹಳ ವ್ಯತ್ಯಾಸವಿರುತ್ತದೆ. ಸದಾ....
ಆದರೆ, ಈ ಕವನಗಳ ವೈಶಿಷ್ಟ್ಯವೇನೆಂದರೆ, ಇವು ಎರಡೂ ಅರ್ಥಕ್ಕೂ ತಕ್ಕದಾಗಿವೆ. ಆದಕ್ಕೆ ನಿಮ್ಮ ಬರವಣಿಗೆಯ ಪರಿಯನ್ನು ಮೆಚ್ಚಬೇಕು.
"ಮತ್ತೆ ಮರುಕಳಿಸುವುದು ಹೊತ್ತವಳ ನೆನಹು,
ಅತ್ತು ಅತ್ತರು ಸಿಗದು, ಮತ್ತವಳ ಮಡಿಲು."
Oh man, we all yearn for that, don't we ? Still, we stay here..... beautiful lines!!!
May 16, 2007 1:03 PM

December Stud said...
ಪಾರಿಜಾತ, ಮನೆಗೆ ಹಿಂದಿರುಗಿದಾಗ ನಾವು ಕಾಣ ಬಯಸುವುದು "ನಮ್ಮ" ಮನೆಯನ್ನು. ಅಂದರೆ, ನಾವು ಬಿಟ್ಟು ಹೋಗಿದ್ದೆ, ಅಡೆ ಹರಕಲು ಮುರುಕಲು ಮನೆಯನ್ನು. ಅದಕ್ಕೆ ಬಣ್ಣ ಮೆತ್ತಿ, ಚಂದಗೊಳಿಸಿ, "ಅಭಿವೃದ್ಧಿ"ಯ ಉಡುಗೆ ತೊಡಿಸಿದರೆ, ನಮಗಾಗುವ ಕಸಿವಿಸಿ ಅಪಾರ. ಆದರೆ, "ಅಭಿವೃದ್ಧಿ"ಯ ಹೊಳೆಯನ್ನು ತಡೆಯಲು ಸಾಧ್ಯವಿಲ್ಲ. ಇದು ಅಗತ್ಯ ಕೂಡ.
At one point in history nostalgia was a major medical condition. It is something very close to heart now and we all go through it. Change is inevitable. But, I completely understand your point and agree with you. And partly, that's what scares me to return. I know, I am just like other people, coming up with cock and bull stories for not retrning :)
May 16, 2007 1:09 PM

parijata said...
DS, It is not "cock and bull stories". The problems in India are very real. (But most of the time, I do not regret our decision to move back). There is mindless destruction of trees and lakes. People flout rules like they never exist. I am concerned about the attitudes of people w.r.t the environment and other civic issues. There is no carpooling, and the traffic is horrendous. Commuting to work daily is a huge problem. That said, I think it is great for a retired or semi-retired life :) You have concerts and lectures, young people who are willing to listen, old people who are willing to teach... Life in India is very satisfying.
suptadeepti avare,Sorry for digressing. Hope you don't mind :)
May 17, 2007 11:23 PM

suptadeepti said...
ಪ್ರತಿಕ್ರಿಯಿಸಿದ ಎಲ್ಲರಿಗೆ ಮತ್ತೆ ಧನ್ಯವಾದಗಳು.
ಕವನ "ಅವರವರ ಭಾವಕ್ಕೆ" ಮತ್ತು ಅವರವರ ಅನುಭವಕ್ಕೆ ಸರಿಯಾಗಿ ಅರ್ಥ ಕೊಡುವಂಥದ್ದು, ನಿಜ. ಈ ಬ್ಲಾಗ್ ಎಂಬೋ ಅಕ್ಷರ ಲೋಕ ಇರೋದೇ ಚರ್ಚೆಗೆ. ಪ್ರಪಂಚದ ಯಾವ ಕೋಣೆಯಲ್ಲಿದ್ದರೂ ಈ ಒಂದು ಪಡಸಾಲೆಗೆ ಬಂದು ಎಲ್ಲರೊಳಗೊಂದಾಗಿ ಚರ್ಚೆ ನಡೆಸಬಹುದಾದ ವೇದಿಕೆ ಇದು. ಆದ್ದರಿಂದ ಇಲ್ಲಿ ಮುಕ್ತ ಅವಕಾಶ, ಪ್ರವೇಶ. ಚರ್ಚೆ ನಡೆಸಿದ ಎಲ್ಲರಿಗೆ ಧನ್ಯವಾದಗಳು.
May 21, 2007 11:14 PM

ಶೆಟ್ಟರು (Shettaru) said...
ನೀವೇ ಹೇಳಿದಂತೆ ಅರ್ಥೈಸಿಕೊಳ್ಳುವುದು ಅವರವರ ಭಾವಕ್ಕೆ, ಅವರವರ ಭಕುತಿಗೆ ತಕ್ಕಂತೆ. ಉತ್ತಮ ಕವನಗಳು.
May 22, 2007 4:58 AM

suptadeepti said...
ಭೇಟಿಯಿತ್ತಿದ್ದಕ್ಕೆ ಮತ್ತು ಪ್ರತಿಕ್ರಿಯಿಸಿದ್ದಕ್ಕೆ ಶೆಟ್ಟರಿಗೆ ಧನ್ಯವಾದಗಳು. ಹೀಗೇ ಬರುತ್ತಿರಿ.
May 22, 2007 11:34 PM

ಅಮ್ಮನಿಗೆ 'ಬ್ಲಾಗಿ'ದ ನಮನ

Sunday, May 13, 2007

`ಅಮ್ಮನ ದಿನ'ದಂದು ಓದುಗರಿಗೆಲ್ಲ ಶುಭಾಶಯಗಳು.
`ಅಮ್ಮ' ಪದಕ್ಕೆ ಬಹಳ ಆಳ-ಅಗಲದ ಅರ್ಥವಿದೆ.
ಈ ಎರಡು ಕವನಗಳಿಂದ ಅಮ್ಮನ ಬಿಂಬ ನಿಮ್ಮ ಕಂಗಳಲ್ಲಿ ಮೂಡೀತೇ ನೋಡಿಕೊಳ್ಳಿ:

(೧) ಜನನಿ

ಕಣ್ಬೆಳಕ ತೋಟದೊಳು ಮುಂಗುರುಳ ನೆರಳು,
ಸಣ್ಣನೆಯ ಉಸಿರಿಗೂ ಕುಲುಕಾಡೊ ಹೆರಳು,
ಬಣ್ಣ ಬರೆಯುವ ಕುಂಚ ನಿಡಿದಾದ ಬೆರಳು,
ತಣ್ಣನೆಯ ಶಾಂತಿಯಲು ಭೋರ್ಗರೆವ ಮರಳು.

ಅಡಿ ಮೇಲೆ ಅಡಿಯಿರಿಸಿ ನಡೆದಾಡುವಾಕೆ,
ಅಡಿಯಿಂದ ಮುಡಿವರೆಗು ಶೃಂಗಾರದಾಕೆ,
ಮಡಿಯ ಮೈಲಿಗೆಯೆಲ್ಲ ಕಳೆದ್ಹಾಕುವಾಕೆ,
ಉಡಿಯಲ್ಲಿ ತೆಕ್ಕೈಸಿ ಮೈಮರೆಸುವಾಕೆ.

ಅಲೆದಲೆದು ಹೆಡೆಯೆತ್ತಿ ಆಡುವೆ ಆಳೆತ್ತರ,
ತಲೆಮಣಿದು ಭುಸುಗುಟ್ಟಿ ನೀಡುವೆ ದಡಕುತ್ತರ,
ಅಳೆವ ಯಾವಳತೆಗೂ ನಿಲುಕದ ಜೀವಾಗಾರ,
ಕಳೆದ ಶತಶತಕಗಳ ಇರುವಿಕೆಯ ಆಧಾರ.

ನಿನ್ನಡಿಯ ಬಿರುಕುಗಳ ಕಂಡು ಬೆರಗಾಗಿಹೆವು,
ನಿನ್ನುಡಿಯ ಬಿಸುಪಿನಲಿ ಮಿಂದು ಮರುಳಾಗಿಹೆವು,
ನಿನ್ನುದರ ವೈಶಾಲ್ಯದೊಳಗೆ ತೃಣವಾಗಿಹೆವು,
ನಿನ್ನೆರಡು ಕಂಗಳಲೆ ರವಿ ಶಶಿಯ ಕಾಣುವೆವು.
(ಆಗಸ್ಟ್, ೧೯೯೬)

(೨) ಸ್ಮರಣೆ

ಹೊನಲು ಹೊನಲಾಗಿ ಹರಿವ ಕೇಶ ಗಂಗೆ,
ತೆನೆಯ ತೂಗುವ ಬಯಲಂಥ ನಗೆ ತುಂಗೆ;
ಮುಗಿಲು-ಸಾಗರ ಪರಿಧಿ ಹೃದಯ ವೈಶಾಲ್ಯ,
ಅಗಲಿದಾಗಲೆ ಅರಿವು; ಮನದ ಹೂ ನೈರ್ಮಾಲ್ಯ.

ನೆರೆಹೊರೆಯ ಸುಂದರಿಯ ಸೌಂದರ್ಯ ಸೆಳೆದು,
ಅರೆಬಿರಿದ ಕಂಗಳಲೆ ಅವಳತ್ತ ನಡೆದು;
ಮತ್ತು-ಮೆತ್ತೆಗಳ ರಾಜ್ಯದಲಿ ಮೈ ಮರೆಯೆ,
ಸುತ್ತುವುದು ನುಣ್ಣನೆಯ ರೇಶ್ಮೆ ಎಳೆಯೆಳೆಯು.

ಹೊಳೆವ ತಿಳಿನೀರ ಕೊಳ ಎಷ್ಟಿದ್ದರೇನೀಗ,
ನಲಿವ ಹೊಂದಾವರೆಗಳಿಲ್ಲವಾದಾಗ;
ಸವೆದ ಹಾದಿಯ ಕೊನೆಯ ತಿರುವಿನಲಿ ನಿಂತು,
ಅವಲೋಕಿಸಲೊಂಟಿತನ ಜಿಗಿದೆದ್ದು ಬಂತು.

ಮತ್ತೆ ಮರುಕಳಿಸುವುದು ಹೊತ್ತವಳ ನೆನಹು,
ಅತ್ತು ಅತ್ತರು ಸಿಗದು, ಮತ್ತವಳ ಮಡಿಲು.
(೦೭-ಡಿಸೆಂಬರ್-೨೦೦೦)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 12:27 AM
Labels: , ,

9 ಪತ್ರೋತ್ತರ:
Shiv said...
ಸುಪ್ತದೀಪ್ತಿ,
ಅಮ್ಮನ ದಿನದಂದು ಅಮ್ಮನಿಗೆ ಈ ಕವನಗಳ ಮೂಲಕ ಮನದ ನಮನಗಳನ್ನು ಸಲ್ಲಿಸಿದ್ದೀರಾ.
"ನಿನ್ನುದರ ವೈಶಾಲ್ಯದೊಳಗೆ ತೃಣವಾಗಿಹೆವು,
ನಿನ್ನೆರಡು ಕಂಗಳಲೆ ರವಿ ಶಶಿಯ ಕಾಣುವೆವು."

ಎಂತಹ ಸುಂದರ ಸಾಲುಗಳು
"ನೆರೆಹೊರೆಯ ಸುಂದರಿಯ ಸೌಂದರ್ಯ ಸೆಳೆದು,"
ನೆರೆಹೊರೆಯ ಸುಂದರಿಯ ?? ಅರ್ಥವಾಗಲಿಲ್ಲ
May 13, 2007 12:50 AM

VENU VINOD said...
ವರ್ಷವಿಡೀ ಭ್ರಮೆಗಳ ಹಿಂದೆ ಓಡುತ್ತಾ ಅಮ್ಮನನ್ನು ಮರೆಯುವ ನನ್ನಂಥವರಿಗೆ ಅಮ್ಮನ ಪ್ರೀತಿ ನೆನಪಿಸಿದ್ದೀರಿ, ಅಮ್ಮನ ದಿನಕ್ಕೆ ನಾನೂ ನಾಲ್ಕು ಸಾಲು ಗೀಚುವಂತೆ ಮಾಡಿದ್ದೀರಿ!
May 13, 2007 3:46 AM

Jagali Bhagavata said...
ಚೆನ್ನಾಗಿವೆ. ಅಬ್ಬ, ಅಂತೂ ಪುನರ್ಜನ್ಮದಿಂದ ಹೊರಗೆ ಬಂದ್ರಲ್ಲ, ತಾತ್ಕಾಲಿಕವಾಗಿಯಾದ್ರೂ:-)
May 13, 2007 2:48 PM

Mahantesh said...
ಮತ್ತೆ ಮರುಕಳಿಸುವುದು ಹೊತ್ತವಳ ನೆನಹು,
ಅತ್ತು ಅತ್ತರು ಸಿಗದು, ಮತ್ತವಳ ಮಡಿಲು!!!!!s
aalugaLu tumba hiDisidavu...
May 14, 2007 5:05 AM

ಶ್ಯಾಮಾ said...
"ಮತ್ತೆ ಮರುಕಳಿಸುವುದು ಹೊತ್ತವಳ ನೆನಹು,
ಅತ್ತು ಅತ್ತರು ಸಿಗದು, ಮತ್ತವಳ ಮಡಿಲು"
ಎಷ್ಟು ಅರ್ಥಗರ್ಭಿತ ಸಾಲುಗಳು ತುಂಬಾ ಚೆನ್ನಾಗಿದೆ
May 14, 2007 11:01 PM

December Stud said...
"ಮತ್ತೆ ಮರುಕಳಿಸುವುದು ಹೊತ್ತವಳ ನೆನಹು,
ಅತ್ತು ಅತ್ತರು ಸಿಗದು, ಮತ್ತವಳ ಮಡಿಲು"
Awesome!!!
May 15, 2007 11:53 AM

ಮನಸ್ವಿನಿ said...
"ಹೊಳೆವ ತಿಳಿನೀರ ಕೊಳ ಎಷ್ಟಿದ್ದರೇನೀಗ,
ನಲಿವ ಹೊಂದಾವರೆಗಳಿಲ್ಲವಾದಾಗ "
ಈ ಸಾಲುಗಳು ತುಂಬಾ ಇಷ್ಟವಾದವು.ಹಾಡುಗಳು ಚೆನ್ನಾಗಿವೆ
May 15, 2007 7:32 PM

pradyumna said...
"ammana" lekhanakke anantha dhanyavaadagalu.....
May 15, 2007 9:15 PM

suptadeepti said...
ಪ್ರತಿಕ್ರಿಯೆಗಳಿಗೆಲ್ಲ ಧನ್ಯವಾದಗಳು.

@ಶಿವ್: ಈ ಕವನ ನಾನು ಬರೆದದ್ದು ಅಮ್ಮ ಭಾರತಾಂಬೆಯನ್ನು ಕುರಿತು. ಅವಳ ನೆರೆಹೊರೆಯ ಸುಂದರಿ-- ಹೊರದೇಶಗಳು. ಅಥವಾ ಬೆಳೆದ ಮಗನಿಗೆ ಮತ್ತು-ಮೆತ್ತೆಗಳ ರಾಜ್ಯದಲ್ಲಿ ದಕ್ಕುವ ಮಡದಿಯೆಂಬ ಸುಂದರಿಯೂ ಆಗಬಹುದು...!

@ವಿನೋದ್: ನಿಜ ಹೇಳಬೇಕೆಂದರೆ ಅಮ್ಮನನ್ನು ನಾವ್ಯಾರೂ ಮರೆಯೋಕೆ ಸಾಧ್ಯವಿಲ್ಲ, ಆಕೆ ನಮ್ಮೆಲ್ಲರ ಇರವಿನ ಕಾರಣ. ನಮ್ಮನ್ನು ಮರೆತ ಹೊರತು ಆಕೆಯನ್ನು ಮರೆಯಲಾರೆವು.

@ಭಾಗತರೇ, ಪುನರ್ಜನ್ಮದಿಂದ ಹೊರಗೆ ಬಂದದ್ದು ನಿಮಗೆ ಇಷ್ಟು ಸಮಾಧಾನ ಕೊಡುತ್ತೆ ಅನ್ನುವುದರ ಅರಿವಿರಲಿಲ್ಲ. ಆದರೆ, ಇದು ತಾತ್ಕಾಲಿಕ ಅನ್ನುವ ಸತ್ಯ ನಿಮಗೂ ಗೊತ್ತು. ಒಳ್ಳೆಯದು.

@ಮಹಾಂತೇಶ್, ಶ್ಯಾಮಾ, ಡಿಸೆಂಬರ್ ಸ್ಟಡ್, ಮನಸ್ವಿನಿ: ಧನ್ಯವಾದಗಳು.

@ಪ್ರದ್ಯುಮ್ನ: ನನ್ನ ಅಕ್ಷರಲೋಕಕ್ಕೆ ಸ್ವಾಗತ. ಪ್ರತಿಕ್ರಿಯೆಗೆ ಧನ್ಯವಾದಗಳು.
May 15, 2007 9:39 PM

ಆವರಣ ಓದಿದೆ....

Thursday, April 19, 2007

ಹೌದು. ಆದ್ದರಿಂದ ಈಗ ಕೆಲವು ವಿಷಯಗಳ ಬಗ್ಗೆ ನನ್ನ ಅಭಿಪ್ರಾಯಗಳು ಟೊಳ್ಳೆನಿಸುತ್ತಿವೆ. ಆವರಣ ಒಳಗೊಳ್ಳುವ ವಸ್ತುವಿನ ಬಗ್ಗೆ ನನ್ನದೇ ಆದ ನಿಲುವುಗಳಿದ್ದವು. ಈಗ ಅಡಿಪಾಯವೇ ಅಲುಗಾಡುತ್ತಿದೆ. ಇತಿಹಾಸ, ರಾಜಕೀಯ, ಸಮಾಜ, ವಿದ್ಯಾಸಂಸ್ಥೆಗಳು, ಕಲಾವಿದರು, ಬುದ್ಧಿಜೀವಿಗಳು, ಸಾಮಾನ್ಯ ವ್ಯಕ್ತಿಗಳು.... ಎಲ್ಲಕ್ಕಿಂತ ಮಿಗಿಲಾಗಿ ನಮ್ಮೊಳಗಿನ ಭಾರತೀಯತೆ- ಇವೆಲ್ಲ ಒಂದರೊಳಗೊಂದು ಬೆಸೆದುಕೊಂಡ ಪಾತ್ರಗಳು ಪೊರೆಕಳಚಿದಂತೆ ತೆರೆದುಕೊಳ್ಳುವಾಗ ಓದುಗ ಪ್ರಜ್ಞೆ ಈ ಭೌತಿಕ ಪ್ರಪಂಚ ಬಿಟ್ಟು ಪುಟಗಳೊಳಗಿನ ಅಲೌಕಿಕದಲ್ಲಿ ಲೀನವಾಗಿರುತ್ತದೆ. ಭೈರಪ್ಪನವರ ಕಥನದ ಹೆಚ್ಚುಗಾರಿಕೆ ಇದಾದರೂ ಇಲ್ಲಿಯ ವಿಷಯವೂ ಇದಕ್ಕೆ ಪೂರಕವಾಗಿದೆ ಅನಿಸಿತು.

ಇದಕ್ಕಿಂತ ಹೆಚ್ಚು ಹೇಳಲಾರೆ. ನೀವೇ ಓದಿ.... ಆವರಣದಲ್ಲಿ ಅನಾವರಣಗೊಳ್ಳುವ ಪಾತ್ರಗಳು ನಿಮ್ಮನ್ನು ಆವರಿಸಿಕೊಳ್ಳದಿದ್ದರೆ, ಮತ್ತೆ ಕೇಳಿ!!

"ನನಗೀಗ ಓದಲು ಸಮಯವಿಲ್ಲ, ನೀವು ಓದಿ. ನಾನು ಮತ್ತೆ ಓದುತ್ತೇನೆ" ಅಂತ ಪುಸ್ತಕವನ್ನು ನನಗೆ ತಂದುಕೊಟ್ಟ ಒಬ್ಬ ಸ್ನೇಹಿತರಿಗೆ ಹೃತ್ಪೂರ್ವಕ ವಂದನೆಗಳು. ಇಂಥವರು ಎಷ್ಟು ಜನ ಇರುತ್ತಾರೆ?

ಅಮೆರಿಕದಲ್ಲಿ "ಆವರಣ"ದ ಪ್ರತಿಗಳಿಗಾಗಿ ಸಂಪರ್ಕ:ಶುಭಾ ಯಂಗ್, ಉತ್ತರ ಅಮೆರಿಕ ಸಾಹಿತ್ಯ ಭಂಡಾರ,
E-mail: sahityabna@hotmail.com
http://sahityabna.homestead.com
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 11:30 PM
Labels:

8 ಪತ್ರೋತ್ತರ:
Mahesh Chevar said...
ಎರಡು ದಿನ ಮೊದಲು ಆವರಣ ಖರೀದಿಸಿದ್ದೇನೆ. ಓದು ಇನ್ನೂ ಆರಂಭವಾಗಿಲ್ಲ. ಓದಿದ ನಂತರ ಬರೆಯುತ್ತೇನೆ...
April 22, 2007 11:55 AM

parijata said...
ಭೈರಪ್ಪನವರ ಮಿಕ್ಕ ಕಾದಂಬರಿಗಳಂತೆ ಆವರಣ ಕೂಡ ಬಹಳ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ. ವಿಷಯ ಮುಂಚೆಯೇ ತಿಳಿದದ್ದಾದರೂ ಕಾದಂಬರಿಯ ರೂಪದಲ್ಲಿ ಇತಿಹಾಸವನ್ನು ಓದಿದ್ದು ಹೊಸದಾದ ಅನುಭವ.
April 24, 2007 10:42 PM

suptadeepti said...
ಮಹೇಶ್, ಪಾರಿಜಾತ, ಧನ್ಯವಾದಗಳು.ಆವರಣದ ಹಿಡಿಸಿತೇ? ವಸ್ತು, ಪಾತ್ರ, ವಿನ್ಯಾಸ... ಎಲ್ಲದ್ರಲ್ಲೂ ಇದು ವಿಭಿನ್ನ ಅಂತ ನನ್ನ ಅಂಬೋಣ, ಒಪ್ಪುವಿರಾ?
April 26, 2007 12:05 AM

parijata said...
ಆವರಣ ವಿನ್ಯಾಸದಲ್ಲಿ ವಿಭಿನ್ನ. ಇಬ್ಬರು ವ್ಯಕ್ತಿಗಳ, ಕಾಲದಲ್ಲಿ ಶತಮಾನಗಳ ವ್ಯತ್ಯಾಸವಿರುವ ಎರಡು ಕಥೆಗಳನ್ನು ಜೋಡಿಸಿ ಒಂದು ಕಥೆಯನ್ನು ಹೆಣೆದಿದ್ದನ್ನು ನಾನು ನೋಡಿದ್ದು ಇದೇ ಮೊದಲು. ಕಥಾವಸ್ತು 'ಸಾರ್ಥ'ದ ಕಥೆಯ ಒಂದು ಬಗೆಗಿನ ಎಳೆಗಳನ್ನು ಮುಂದುವರೆಸಿಕೊಂಡು ಹೋಗುತ್ತದೆಯೆಂದು ನನ್ನ ಭಾವನೆ. ಸಾರ್ಥದಲ್ಲಿ ಬರುವ ದೇವಸ್ಥಾನ-ನಾಶದ ಪ್ರಸಂಗವನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಮಾತು ಹೇಳುತ್ತಿದ್ದೇನೆ. ನೀವೇನಂತೀರಿ?
May 4, 2007 4:46 AM

ಪವ್ವಿ said...
ನನ್ನ ಅನಿಸಿಕೆ ಸ್ವಲ್ಪ ಬಿನ್ನ, ಮೊದಲಿನಿಂದಲೂ ಬೈರಪ್ಪನವರ ಕಾದಂಬರಿಗಳನ್ನು ಓದುತ್ತಿದ್ದ ನನಗೆ ಈ ಪುಸ್ತಕವನ್ನು ಓದು ಅಂತ ಶಿಫಾರಸು ಮಾಡಿದವರು ನನ್ನ ಚಡ್ದಿ ಗೆಳೆಯರು. ಎಂದೂ ಕನ್ನಡ ಪುಸ್ತಕಗಳನ್ನು ಇಷ್ಟು ಅಕ್ಕರೆಯಿಂದ ಓದದವರ ಕೈನಲ್ಲೂ ಈ ಪುಸ್ತಕ ಬಂದ ಕೂಡಲೇ ನನಗೆ ಆಶ್ಚರ್ಯವಾಯಿತು. ಓದಲು ಶುರು ಮಾಡಿದಾಗ ಮೊದಲ ೧೫೦ ಪೇಜ್ ಬೇಗ ಓದಿಸಿಕೊಂಡು ಹೋದರು, ಮುಂದೆ ಅದರ ಸಾರ ಕಮ್ಮಿ ಆಯಿತೆಂದು ನನ್ನ ಭಾವನೆ.ಮುಖ್ಯವಾಗಿ ಆವರಣದಲ್ಲಿ ಬರುವ ಪಾತ್ರಗಳು ಕೆಲವರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಬರೆದ ಹಾಗೆ ಇದೆ ಎಂದು ಪ್ರತಿಯೊಬ್ಬರಿಗೂ ಅನಿಸುತ್ತದೆ,ಇದೂ ಎಲ್ಲೊ ಅವರ ವೈಯಕ್ತಿಕ ಜೀವನವನ್ನು ತೆರೆದಿಡುವ ಪ್ರಯತ್ನ ಮಾಡುತ್ತಿದೆಯೇ ಎಂಬ್ ಸಂದೇಹ ನನಗೆ ಕಾಡಿದ್ದು ಸಹಜ. ಓಟ್ಟಿನಲ್ಲಿ ಅವರ ಹಿಂದಿನ ಕಾದಂಬರಿಗಳ ಚಾರ್ಮ್ ಇಲ್ಲಾ, ಸರಿಸುಮಾರು ಇದು ಧರ್ಮರ್ಶಿಯ ಮುಂದಿನ ಭಾಗದ ಹಾಗೆ ಇದೆ ಅಷ್ಟೆ. ಅದರಲ್ಲಿನ ಸತ್ಯ ಇದರಲ್ಲಿ ಲಕ್ಸ್ಮಿ ಅಗಿದ್ದಾಳೆ ಆದರೆ ಒಂದು ವ್ಯತ್ಯಾಸವೆಂದರೆ ಇದರಲ್ಲಿ ತಮ್ಮ ಅನಿಸಿಕೆಗಳನ್ನು ಇತಿಹಾಸದ ಪುರಾವೆ ಜೊತೆ ಬೆಂಬಲಿಸಿರುವುದು ಹೆಚ್ಚು ಪ್ರಚಾರ ಪಡೆಯಲು ಕಾರಣ.
May 6, 2007 5:28 AM

suptadeepti said...
ಪಾರಿಜಾತ, ಪವ್ವಿ, ವಂದನೆಗಳು.

ಪವ್ವಿ-- ಲಹರಿಯೊಳಗೆ ಸ್ವಾಗತ. ನಾನು ಭೈರಪ್ಪನವರ ಎಲ್ಲ ಕಾದಂಬರಿಗಳನ್ನು ಓದಿದವಳಲ್ಲ. ಕೆಲವೇ ಕೆಲವನ್ನು ಓದಿದ್ದೇನೆ. ಧರ್ಮಶ್ರೀ, ದೂರಸರಿದವರು, ನಾಯಿನೆರಳು, ತಬ್ಬಲಿಯು..., ಇವನ್ನೆಲ್ಲ ನಾನು ಓದೇ ಇಲ್ಲ, ಆದ್ದರಿಂದ ಇಲ್ಲಿ ಚರ್ಚಿಸಲಾರೆ. ಪರ್ವ, ತಂತು, ಅಂಚು, ಸಾಕ್ಷಿ, ಅನ್ವೇಷಣೆ, ಮಂದ್ರ-- ಅವೆಲ್ಲಕ್ಕಿಂತ ಇದು ಭಿನ್ನ ಅಂತ ನನ್ನ ಅಭಿಪ್ರಾಯ- ವಸ್ತು, ವಿನ್ಯಾಸ, ಗಾತ್ರಗಳಲ್ಲಿ- ಅಷ್ಟೇ.ಭೈರಪ್ಪನವರ ಕಾದಂಬರಿಗಳು ಜೀವನದ ತುಣುಕುಗಳು. ಹಾಗಾಗಿ ಅಲ್ಲಿ, ನಮ್ಮ ಸುತ್ತ-ಮುತ್ತ ಇರುವ ಅವರಿವರು ಕಂಡುಬಂದರೆ ಆಶ್ಚರ್ಯವಿಲ್ಲ. ಹಾಗೆಂದು 'ಅವರನ್ನೇ ಉದ್ದೇಶದಲ್ಲಿಟ್ಟುಕೊಂಡು ಬರೆದದ್ದು' ಎನ್ನುವುದು ಸರಿಯಾದೀತೆ?.
May 6, 2007 4:37 PM

ಪವ್ವಿ said...
ಆವರಣ ಓದಿದಾಗ ನಿಮಗೆ ಶಾಸ್ತ್ರಿ ಪಾತ್ರ ಯಾರನ್ನು ಜ್ಞಾಪಿಸಿತು ಎಂದು ಸ್ವಲ್ಪ ಹೇಳುತ್ತಿರಾ ?. ಕಾದಂಬರಿಯನ್ನು ಬರೆಯುವಾಗ ನಮ್ಮ ಸುತ್ತ-ಮುತ್ತಲಿನ ವ್ಯಕ್ತಿಗಳೇ ಪಾತ್ರಗಳಾಗುವುದು ಸಾಮನ್ಯ. ಆದರೆ ಒಂದು ಕಥೆಯ ಹಂದರಕ್ಕೆ ಒಂದು ಪಾತ್ರವನ್ನು ಸೃಷ್ಟಿಸಿ ಅದಕ್ಕೆ ಒಂದು ವ್ಯಕ್ತಿಯ ಕಥೆಯನ್ನು ತುಂಬುವುದು ಸರಿ ಅಲ್ಲ. ಇದು ಯಾರ ಆವರಣವೋ ಅಥವಾ ತಮ್ಮ ಮನಸ್ಸಿನಲ್ಲಿ ಇಟ್ಟುಕೊಂಡು ಬರೆದ ಜನರ ವೈಯಕ್ತಿಕ ಜೀವನಗಳ ಅನಾವರಣವೋ ಕಾಣೆ. ಇಂಥಾ ಕಥೆಗಳು ಕೆಲ ವರ್ಗಗಳಿಗೆ ಥ್ರಿಲ್ ಕೊಡಬಹುದು, ಆದರೆ ಆ ಜನಗಳು ಇವರು ಜಾತಿ ಪದ್ಧತಿ ಬಗ್ಗೆ ಬರೆದವನ್ನು ಎಷ್ಟರ ಮಟ್ಟಿಗೆ ಓದಿದ್ದರೆ ಅಂತ ಸಂದೇಹ ಆಗುತ್ತದೆ. ನಿಜಕ್ಕೂ ಮನಸ್ಸಿನಲ್ಲಿ ಅಚ್ಚು ಆಗಿ ಉಳಿಯುವ ಪಾತ್ರಗಳು ಅಂದರೆ ದಾಟುವಿನ ಸತ್ಯ, ಶ್ರೀನಿವಾಸ, ಮೋಹನದಾಸ್ ..
May 7, 2007 6:38 AM

suptadeepti said...
ಆವರಣದ ಶಾಸ್ತ್ರಿಯ ಪಾತ್ರ, ನನಗೆ ಕೆಲವಾರು ವ್ಯಕ್ತಿಗಳನ್ನು ನೆನಪಿಸಿತು, ಒಬ್ಬರನ್ನಷ್ಟೇ ಅಲ್ಲ. ಹಾಗೆಯೇ ಲಕ್ಷ್ಮಿಯ ಪಾತ್ರವೂ ನಮ್ಮೂರಿನ ಒಬ್ಬರನ್ನು ಹೋಲುತ್ತಿದೆ ಅನಿಸಿತು. ಇಂಥದ್ದು ಸಾಮಾನ್ಯ, ಆದ್ದರಿಂದ ಈ ಬಗ್ಗೆ ಚರ್ಚೆ ನನ್ನ ಉದ್ದೇಶವಲ್ಲ.ದಾಟು ನಾನು ಓದಿಲ್ಲ, ಹಾಗಾಗಿ ಅಲ್ಲಿಯೂ ನನಗೇನೂ ಹೇಳಲು ಇಲ್ಲ. ನೀವು ಏನು ಹೇಳಬಯಸಿದ್ದೀರೋ ತಿಳಿಯಲಿಲ್ಲ. ಇರಲಿ ಬಿಡಿ, ಇದು ಯಾವುದೇ ಚರ್ಚಾ ವೇದಿಕೆ ಅಲ್ಲ. ನಿಮ್ಮ ಅಭಿಪ್ರಾಯವನ್ನು ಗೌರವಿಸುತ್ತೇನೆ.
May 8, 2007 7:48 PM

ವಿಷು- ಸೌರ ಯುಗಾದಿಯ ಸಂಭ್ರಮ


ವಿಷು= ಸೌರ ಯುಗಾದಿಯ ದಿನ. ಸಾಮಾನ್ಯವಾಗಿ ತಮಿಳು, ಮಲೆಯಾಳ, ಮತ್ತು ದಕ್ಷಿಣ-ಕನ್ನಡ ಜಿಲ್ಲೆಯ ಕೆಲವರಿಗೆ ಸೌರ ಸಂಕ್ರಾಂತಿಯ ಮರುದಿನವೇ (೧೪/೧೫-ಎಪ್ರಿಲ್) ಯುಗಾದಿ ಹಬ್ಬ.

ನಮ್ಮ ಕಡೆ (ಮಂಗಳೂರು, ಉಡುಪಿ, ಸುತ್ತಮುತ್ತ) ಅಂದಿನ ವಿಶೇಷ: ವಿಷು-ಕಣಿ (ಕಣಿ= ಭವಿಷ್ಯ ಫಲ).

ಹಿಂದಿನ ದಿನ ಸಂಜೆಯೇ ದೇವರ ಪೂಜೆ ಆದ ಮೇಲೆ, ಮತ್ತೆ ದೇವರ ಮನೆ ಸಾರಿಸಿ, ಒರಸಿ ಶುದ್ಧ ಮಾಡಿ, ದೊಡ್ಡ ಹರಿವಾಣದಲ್ಲಿ ಸುಮಾರು ಒಂದು ಸೇರು ಅಕ್ಕಿ ಹಾಕಿ, ಅಕ್ಕಿಯ ನಡುವೆ ಸುಲಿಯದ ತೆಂಗಿನಕಾಯಿ (ಲಭ್ಯವಿಲ್ಲದಲ್ಲಿ, ಸುಲಿದ ಇಡೀ ಕಾಯಿಯೂ ಆಗುತ್ತದೆ) ಇಟ್ಟು, ಅದರ ಸುತ್ತೆಲ್ಲ ಹೊಸಫಲಗಳಾದ ಹಣ್ಣು-ತರಕಾರಿಗಳನ್ನು ಇಟ್ಟು, ನಡುವಲ್ಲೊಂದು ಕನ್ನಡಿ ಇಟ್ಟು... ಅದೇ ಒಂದು ಸಂಭ್ರಮ. ಹೊಸ ಫಲಗಳೆಂದರೆ, ಆ ವರ್ಷದ ಗೇರು, ಮಾವು, "ಪುಟ್ಟ-ಹಲಸು", "ಮುಳ್ಳುಸೌತೆ", "ಬಣ್ಣದ ಸೌತೆ", ಬೆಂಡೆ, ತೊಂಡೆ, ಅಲಸಂಡೆ-- ಇತ್ಯಾದಿ ಇತ್ಯಾದಿ ವಾರ್ಷಿಕ ಬೆಳೆಗಳಲ್ಲಿ ಅಂದು ಕೊಯ್ಯಬಹುದಾದ ಮಾಗಿದ ಹಣ್ಣು-ತರಕಾರಿಗಳು. ಇವೆಲ್ಲ ಹಿಂದಿನ ದಿನದ ತಯಾರಿ. ಮರುದಿನಕ್ಕೆ ಹೊಸ ಬಟ್ಟೆಯನ್ನೂ ತಯಾರಿಸಿಟ್ಟುಕೊಂಡು ಕನಸುಗಣ್ಣಲ್ಲಿ ನಿದ್ದೆಹೋದರೆ ಮರುದಿನ ಯುಗಾದಿ.

ಅಂದು ಬೆಳಗ್ಗೆ ಏಳುತ್ತಿದ್ದಂತೆಯೇ (ಬೇರೇನನ್ನೂ ಬೇರೆ ಯಾರನ್ನೂ ನೋಡದೇ) ಸೀದಾ ದೇವರ ಮನೆಗೆ ಹೋಗಿ ಅಲ್ಲಿ ಅಮ್ಮ ಹೂವು, ಚಿನ್ನದ ಆಭರಣಗಳಿಂದ ಅಲಂಕರಿಸಿದ್ದ "ಕಣಿ"ಯನ್ನು ನೋಡಿ, ಅದರ ನಡುವಿನ ಕನ್ನಡಿಯಲ್ಲಿ ಮುಖ ನೋಡಿ ಕಣಿಗೂ ದೇವರಿಗೂ ನಮಸ್ಕರಿಸಬೇಕು. ಇದು ಕೆಲವು ಮನೆಗಳ ಕ್ರಮವಾದರೆ ಇನ್ನು ಕೆಲವೆಡೆ- ಮನೆ ಮಂದಿ ಎಲ್ಲರೂ ಮುಖ ತೊಳೆದು, ದೇವರ ಮನೆಗೆ ಬಂದು, ಅಪ್ಪ "ಕಣಿ ದೇವರಿಗೆ" (ಲಕ್ಷ್ಮಿಯೆಂದು) ಪೂಜೆ ಮಾಡಿ, ಎಲ್ಲರೂ ಕನ್ನಡಿಯಲ್ಲಿ ತಮ್ಮ ಮುಖ ನೋಡಿ, ಕಣಿಗೂ ಮನೆದೇವರಿಗೂ ನಮಸ್ಕರಿಸುವುದು ಪದ್ಧತಿ. ಸ್ನಾನ ಮಾಡಿ, ಹೊಸ ಬಟ್ಟೆ ತೊಟ್ಟು, ಮನೆದೇವರ ಪೂಜೆ ಆದ ಮೇಲೆ, ಎಲ್ಲ ಹಿರಿಯರಿಗೂ ಕಿರಿಯರೆಲ್ಲರೂ ನಮಸ್ಕರಿಸಿದರೆ ಹಬ್ಬದ ಮೊದಲ ಭಾಗ ಮುಗಿದಂತೆ. ಕಣಿದೇವರಿಗೆ ಹಾಕಿದ್ದ ಚಿನ್ನದಲ್ಲಿ ಕೆಲವನ್ನಾದರೂ ಮನೆಯವರು ಅಂದು ಧರಿಸಬೇಕು. ಅಮ್ಮ, ಕಣಿಯ ತರಕಾರಿಗಳನ್ನೂ ತೆಂಗಿನಕಾಯಿಯನ್ನೂ ಉಪಯೋಗಿಸಿ, ಮತ್ತೊಂದಿಷ್ಟು ಮುತುವರ್ಜಿ ವಹಿಸಿ ಅದೇ ಅಕ್ಕಿಯ ಅನ್ನ, ತರಕಾರಿಗಳ ಪಲ್ಯ, ಅವಿಯಲ್, ಹುಳಿ, ಕೋಸಂಬ್ರಿ, ಎಳೆ ಗೇರುಬೀಜ ಹಾಕಿದ ಕಡ್ಲೆಬೇಳೆ ಪಾಯಸ, ಎಲ್ಲ ಮಾಡಿದ್ರೆ, ಮಧ್ಯಾಹ್ನದ ಊಟ ಹಬ್ಬದ ಎರಡನೇ ಭಾಗ.

ಇನ್ನುಳಿದದ್ದು ಮಕ್ಕಳ ಪಾಲಿಗೆ ಕಷ್ಟದ ಸಮಯ. ರಾತ್ರೆ ಮಲಗುವವರೆಗೂ ಒಳ್ಳೆಯ ಮಕ್ಕಳಾಗಿ, ಹಿರಿಯರಿಂದ ಬೈಯಿಸಿಕೊಳ್ಳದೆ ಇರುವುದು ಹೇಗೆ? ಹೊಸ ಬಟ್ಟೆ ತೆಗೆಯಲು ಇಷ್ಟವಿಲ್ಲ (ವರ್ಷ ಪೂರ್ತಿ ದಿನ-ದಿನ ಹೊಸ ಬಟ್ಟೆ, ಯಾರಿಗೆ ಬೇಡ!?). ಅದನ್ನು ಬದಲಿಸದೆ ಆಟಕ್ಕೆ ಹೊರಗೆ ಹೋಗುವಂತಿಲ್ಲ. ಬಟ್ಟೆ ಬದಲಿಸಿ ಹೋದರೂ, ಅಲ್ಲಿಯೂ "ಒಳ್ಳೆಯವರಾಗಿ"ಯೇ ಇರಬೇಕಾದ ಧರ್ಮಸಂಕಟ. ಅಂತೂ ಇಂತೂ ಸಂಜೆಯಾಗಿ, ರಾತ್ರೆಯಾಗಿ ಮತ್ತೆ ಊಟ ಮಾಡಿ ಮಲಗಿದರೆ ಹಬ್ಬ ಮುಗಿದೇ ಹೋದ ಖಿನ್ನತೆಯ ಜೊತೆಗೇ ಇಡೀ ದಿನದ ನಮ್ಮ ವರ್ತನೆಯ ಬಗ್ಗೆ ಖುಷಿ ಅಥವಾ ಸಂಕಟವೂ ಸೇರಿಕೊಂಡಿರುತ್ತಿತ್ತು. ಹಾಗೆ ಸಾಗುತ್ತಿತ್ತು ನಮ್ಮ ಬಾಲ್ಯದ ವಿಷು-ಯುಗಾದಿ.

ವಿಷು-ಕಣಿಯ ಜೊತೆಗೆ ಹೊಂದಿಹೋಗಿರುವ ಎರಡು ಕಥೆಗಳು ನಮ್ಮ ಅಮ್ಮನ ಮನೆಯಲ್ಲಿ ಚಾಲ್ತಿಯಲ್ಲಿವೆ, ಅವರ ಬಾಲ್ಯಕ್ಕೆ ಸಂಬಂಧಿಸಿದ್ದು:

(೧) ನಮ್ಮಮ್ಮ ತುಂಬಾ ಸಣ್ಣವಳಿದ್ದಾಗ, ಒಂದು ಯುಗಾದಿಗೆ ಹಿಂದಿನ ದಿನ ತನಗಿಂತ ಹಿರಿಯರೆಲ್ಲ "ನಾಳೆ ಬೇಗ ಎದ್ದು ಕಣಿ ನೋಡಿ, ಆಮೇಲೆ ಮುಖ ತೊಳೆದು ಕಾಫಿ ಕುಡಿಯಬೇಕು" ಅಂತ ಮಾತಾಡಿಕೊಂಡಿದ್ದು ಕೇಳಿದ್ದಾಳೆ. ಮರುದಿನ ತಾನೂ ಬೇಗ ಎದ್ದು, ಕಣಿ ನೋಡಿ ಬಂದು, ಮುಖ ತೊಳೆದು ಒಳಗೆ ಬಂದಾಗ ಅವಳಿಗಿಂತ ಅಣ್ಣ ದೂರಿತ್ತ- "ಇವಳು ಕಣಿ ನೋಡ್ಲಿಲ್ಲ"! ಹುಡುಗಿಗೆ ತಬ್ಬಿಬ್ಬಾಗಿ, ತನ್ನಮ್ಮನ ಜೊತೆ- "ಅಮ್ಮ, ನಾನು ಹೋಗಿ ನೋಡಿದೆ, ಕಣಿಯಲ್ಲಿ ಏನೂ ಇರಲಿಲ್ಲ, ಯಾಕೆ ನೋಡಬೇಕು?" ಅಂತ ಕೇಳಿದಾಗಲೇ ಗೊತ್ತಾಗಿದ್ದು, ಅವಳು ಮನೆ ಮುಂದಿದ್ದ, ಮಳೆಗಾಲದಲ್ಲಿ ನೀರು ಹರಿಯುವ, ಈಗ ಬರಿದಾಗಿರುವ, ಕಣಿ ನೋಡಿ ಬಂದಿದ್ದಾಳೆಂದು. ಎಲ್ಲರಿಗೂ ನಗು, ಈಕೆಗೆ ವಿಸ್ಮಯ.

(೨) ಮತ್ತೊಮ್ಮೆ, ನಮ್ಮಮ್ಮನ ಕೊನೇ ತಮ್ಮ ಒಂದು ಯುಗಾದಿ ದಿನ, ತಾನು ಎಲ್ಲರಿಗಿಂತ ಕಿರಿಯ, ಉಳಿದೆಲ್ಲರಿಗೂ ನಮಸ್ಕರಿಸಿದ ಮೇಲೆ, ತನಗಿಂತ ಹಿರಿಯಣ್ಣನನ್ನು ತನಗೆ ನಮಸ್ಕರಿಸಲು ಹಠ ಹಿಡಿದ. ಉಳಿದವರು ಬುದ್ಧಿ ಹೇಳಿದರು, ಕಿರಿಯರು ಹಿರಿಯರಿಗೆ ನಮಸ್ಕಾರ ಮಾಡುವುದು ಕ್ರಮವೆಂದು. ಖಿನ್ನನಾದ ಹುಡುಗ ಅಂಗಳಕ್ಕೆ ಹೋಗಿದ್ದಾನೆ. ಮನೆಯ ಬೆಕ್ಕು ಬಾಲ ಬೀಸಿಕೊಂಡು ಬಿಸಿಲಾಡಿಸುತ್ತಾ ಕೂತಿತ್ತು. ಅದರ ಮುಂದೆ ನಿಂತು- "ಹ್ಙೂಂ!! ಮಾಡು ನನಗೆ ನಮಸ್ಕಾರ, ನೋಡು ನಾನು ನಿನಗಿಂತ ದೊಡ್ಡವ, ನೀನು ನನಗೆ ನಮಸ್ಕಾರ ಮಾಡು...!" ಅಂತಿದ್ದ ಕಿರಿಯನನ್ನು ನೋಡಿ ಹಿರಿಯರೆಲ್ಲ ಘೊಳ್ಳೆಂದು ನಕ್ಕಿದ್ದರು. ಆತನಿಗೆ ಅವಮಾನವಾಗಿ ಆ ಇಡೀ ಮುಂಜಾನೆ ಪಡಸಾಲೆಯ ಬೆಂಚು ಬಿಟ್ಟು ಎದ್ದಿರಲಿಲ್ಲ.

ಈ ಎರಡು ನಗೆಹೂಗಳೊಂದಿಗೆ ಸರ್ವರಿಗೂ ಸೌರಯುಗಾದಿಯ ಶುಭಾಶಯಗಳು.
ಈಗ ಹೇಳಿ, ನಿಮ್ಮ ವಿಷು-ಕಣಿ ಹೇಗಾಯ್ತು?
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 12:40 PM
Labels: ,

14 ಪತ್ರೋತ್ತರ:
sritri said...
ವಿಷು-ಕಣಿ ಎಲ್ಲದರ ಬಗ್ಗೆ ನನಗೆ ಏನೂ ಗೊತ್ತಿರಲಿಲ್ಲ. ತಿಳಿಸಿದ್ದಕ್ಕೆ Thanks.
ಎಲ್ಲರಿಗೂ ಸೌರ ಯುಗಾದಿಯ ಶುಭಾಶಯಗಳು. ಒಂದೇ ಬಾಲ್ಯ, ಒಂದೇ ಹರಯಗಳು ನಮಗಿದ್ದರೂ ಯುಗಾದಿ ಹಬ್ಬ ಎರಡಿವೆ. ಸಂತೋಷವಲ್ಲವೇ!
April 14, 2007 2:35 PM

Shiv said...
ಸುಪ್ತದೀಪ್ತೀಯವರೇ,
ವಿಷು ಹಬ್ಬದ ಬಗ್ಗೆ ಸವಿಸ್ತಾರವಾಗಿ ಹೇಳಿದ್ದಕ್ಕೆ ವಂದನೆಗಳು..
ಸೌರ್ಯಾಮಾನ ಯುಗಾದಿಯ ಬಗ್ಗೆ ಕೇಳಿದ್ದೆ, ಆದರೆ ವಿಷು ಇಷ್ಟು ವಿಶಿಷ್ಟವಾಗಿ ಇರುತ್ತೆ ಬ್ಲಾಗ್‍ಗಳಲ್ಲಿ ನೋಡಿದಾಗಲೇ ಗೊತ್ತಾಗಿದ್ದು. ಎರಡು ನಗೆಹೂಗಳು ಚೆನ್ನಾಗಿದ್ದವು :)ನಿಮಗೆ ನಿಮ್ಮ ಕುಟುಂಬದವರಿಗೆಲ್ಲಾ ವಿಷುವಿನ ಶುಭಾಶಯಗಳು !!
April 14, 2007 4:03 PM

ಅಸತ್ಯ ಅನ್ವೇಷಿ said...
ಸುಪ್ತದೀಪ್ತಿಯವರೆ, ಕಣಿಯಲ್ಲಿ ಪೇರಿಸಿಟ್ಟಿದ್ದ ಹಣ್ಣುಗಳೆಲ್ಲಾ ಹಿಂದಿನ ದಿನವೇ ಹೊಟ್ಟೆಯೊಳಗೆ ಮಾಯವಾಗಿಬಿಟ್ಟಿತ್ತು. ಬೇಗನೇ ಎದ್ದು ಕಣಿ ನೋಡಬೇಕೆಂಬ ಮನಸ್ಸಿದ್ದರೂ ಏಳುವುದಕ್ಕೇ ಕಣಿ ಕೇಳಿದ ಕಾರಣದಿಂದಾಗಿ ತಡವಾಗಿತ್ತು. ಒಟ್ಟಾರೆ ಕಣಿ ನೋಡಲಾಗಲಿಲ್ಲ. ಶುಭಾಶಯಗಳು
April 14, 2007 8:45 PM

ರಾಜೇಶ್ ನಾಯ್ಕ said...
ಸುಪ್ತದೀಪ್ತಿ,
ವಿಷು ಬಗ್ಗೆ ಮತಷ್ಟು ತಿಳಿದುಕೊಂಡೆ ನಿಮ್ಮ ಬರಹದಿಂದ. ನಾವು ಚಂದ್ರಮಾನ ಯುಗಾದಿಯಂದೇ ಹಬ್ಬ ಆಚರಿಸಿದ್ದೆವು. ಆದರೂ ವರ್ಷಗಳಿಂದ ವಿಷು ಆಚರಿಸುವುದನ್ನು ನೋಡುತ್ತ ಬಂದಿದ್ದೇನೆ. ಮೊನ್ನೆ ಶ್ರೀಯವರ ಬ್ಲಾಗ್ ನಲ್ಲಿ ವಿಷು ಬಗ್ಗೆ ಓದಿದೆ. ಈಗ ನಿಮ್ಮ ಬ್ಲಾಗ್ ನಲ್ಲಿ.
ಎರಡು ನಗೆಹೂಗಳು ಐಸಿಂಗ್ ಆನ್ ದ ಕೇಕ್ ಇದ್ದಂಗೆ. ವಿಷು ಶುಭಾಶಯಗಳು ನಿಮಗೆ.
April 14, 2007 11:12 PM

ವಿಚಿತ್ರಾನ್ನಭಟ್ಟ said...
Wish U ಸಂಭ್ರಮದ ವಿಷು
April 15, 2007 2:36 AM

mala rao said...
jyOthi,
lEkana cennaagide
nimma kone maavana kathe Odi nakkU nakkU saakaaytu........
shubhaashayagaLu
April 15, 2007 10:47 AM

ಸಿಂಧು Sindhu said...
ವಿಷು ಶುಭಾಶಯಗಳು.. ನೋವ ಕ್ಷಣಗಳನ್ನಣಕಿಸುವಷ್ಟು ನಗುವಿರಲಿ ನಿಮ್ಮ ಬಾಳಲ್ಲಿ.
April 15, 2007 9:13 PM

Sanath said...
ವಿಷು ಶುಭಾಶಯಗಳು..
April 15, 2007 10:34 PM

suptadeepti said...
ಬ್ಲಾಗಿಗೆ ಭೇಟಿಕೊಟ್ಟು, ಹರಸಿ-ಹಾರೈಸಿದವರಿಗೆಲ್ಲ ವಂದನೆಗಳು, ಧನ್ಯವಾದಗಳು.

@ಶ್ರೀತ್ರೀ: ನಿಜ, ಎರಡು ಯುಗಾದಿಗಳಿಂದ ಆರಂಭಿಸಿ, ವರ್ಷ ಪೂರ್ತಿ ಹಬ್ಬಗಳ ಸಾಲುಗಳೇ ನಮಗಿವೆ. ಒಂದೆ ಬಾಲ್ಯ, ಒಂದೆ ಹರೆಯ, ಒಂದೆ ಜನ್ಮ ಅನ್ನುವದನ್ನು ನೆನೆವುದಕ್ಕಿಂತ ಆ ಒಂದು ಜನ್ಮದಲ್ಲಿ ಎಷ್ಟು (ಒಟ್ಟೂ ಎಷ್ಟು) ಹಬ್ಬಗಳನ್ನು "ಸವಿ"ದೆವೆಂದು ಲೆಕ್ಕ ಹಾಕೋಣವೆ?

@ಶಿವ್: ವಿಷು ನಮ್ಮಮ್ಮನ ಮನೆಕಡೆ ಈ ರೀತಿ ಆಚರಣೆ. ಇವೆಲ್ಲ ಮನೆಯಿಂದ ಮನೆಗೆ ವ್ಯತ್ಯಾಸವಾಗುವ ಪದ್ಧತಿಗಳು.

@ಅನ್ವೇಷಿ: ಹಣ್ಣು ಹಿಂದಿನ ರಾತ್ರೆಯೇ ಹೊಟ್ಟೆ ಸೇರಿದ್ದು ವಿಶೇಷ ಅಲ್ಲ! ಬಾಳೆಯ ತೋಟದಲ್ಲಿ ಮಾಡಿದ ಉಪವಾಸ ಯಾರಿಗೆ ನೆನಪಿಲ್ಲ!? ಕಣಿ ಕೇಳಿದರೂ ಕಣಿ ನೋಡಿಲ್ಲ ಅಂದ್ರೆ, ನಿಮ್ಮ ಹೆಸರಿಗೆ ಅನ್ಯಾಯ ಮಾಡಿಲ್ಲ, ಬಿಡಿ. ಎಲ್ಲ ಸಾಂಗ.

@ರಾಜೇಶ್: ನೀವು ಬೆಂಗಳೂರಿಗ ಅನ್ನೋದನ್ನು ಸಾಬೀತು ಮಾಡಿದ್ರಾ, ಹೇಗೆ? "ಐಸಿಂಗ್ ಆನ್ ದ ಕೇಕ್" ಅನ್ನೋದ್ರ ಬದಲು "ಹೋಳಿಗೆ ಮೇಲೆ ತುಪ್ಪ" ಅನ್ನಬಾರದಿತ್ತಾ? "ಪಾಯಸದಲ್ಲಿ ಗೇರುಬೀಜ, ದ್ರಾಕ್ಷೆ" ಅನ್ನಬಹುದಿತ್ತಾ? ಹೋಗ್ಲಿ ಬಿಡಿ... ನಿಮಗೇ ಕೇಕೇ (ಕೇಕ್+ಏ) ಇರಲಿ.

@ವಿ.ಭಟ್ಟ: ನಿಮ್ಮ Wish-U ಸೇರಿದೆ.

@ಮಾಲಾ: ನಗು ಸಹಜ. ಇನ್ನೊಂದೆರಡು ಮೊಗಗಳಿಗೆ ಹಂಚಿಬಿಡು.

@ಸಿಂಧು: ನೋವ ಕ್ಷಣಗಳನ್ನಣಕಿಸಿ ಅವುಗಳಿಗೇ ಅಣಕಿಸಿಕೊಂಡ ನೋವು ಕೊಡುವ ನಿಮ್ಮ ಮಾತು ಚೆನ್ನಾಗಿದೆ.

@ಸನತ್: ನನ್ನ ಅಕ್ಷರ ಲೋಕಕ್ಕೆ ಸ್ವಾಗತ. ಬರುತ್ತಿರಿ.
April 15, 2007 11:14 PM

Shrilatha Puthi said...
ಜ್ಯೋತಿ,
ಚಂದದ ಬರಹ. ದಕ್ಷಿಣಕನ್ನಡಿಗರ ಈ ಯುಗಾದಿ ಆಚರಣೆ ಬಗ್ಗೆ ಯಾರಿಗೂ ಹೆಚ್ಚಾಗಿ ಗೊತ್ತಿಲ್ಲ. ಯುಗಾದಿ ದಿನ ವರ್ಷದಲ್ಲಿ ಮೊದಲ ಸಲ ಭೂಮಿಗೆ ಪೂಜೆ ಮಾಡಿ ಉಳುವುದು ನಮ್ಮ ಕಡೆ ಇರುವ ಇನ್ನೊಂದು ಸಂಪ್ರದಾಯ.

ನೀವು ಪ್ರಸ್ತಾಪಿಸಿದ ’ಎಳೆ ಗೇರುಬೀಜ ಹಾಕಿದ ಕಡ್ಲೇಬೇಳೆ ಪಾಯಸ’ ಒಂದು ತಮಾಷೆ ನೆನಪಿಸಿತು. ನಮ್ಮಲ್ಲಿ ಯಗಾದಿ ದಿನ ಪಾಯಸಕ್ಕೆ ಹಾಕುವ ಎಳೇ ಗೇರುಬೀಜ ಬೇರೆಯವರ ಮರಗಳಿಂದ ಕದ್ದು ತಂದದ್ದಾಗಿರಬೇಕು ಅಂತ ಕ್ರಮ. ನಾವು ಚಿಕ್ಕವರಾಗಿದ್ದಾಗ ಯುಗಾದಿ ಮುಂಚಿನ ದಿನ ಗೇರಿಬೀಜ ಕದಿಯುವ ಗಮ್ಮತ್ತು! ಪಾರ್ಸಿಗಳ ಹೊಸ ವರ್ಷ ಮಾರ್ಚ್ ತಿಂಗಳಲ್ಲಿ ಬರುತ್ತದೆ (nouroz). ನಾನು ಕಳೆದ ವರ್ಷ ಇರಾನ್ ನಲ್ಲಿ ಇದ್ದಾಗ ಅವರ ಹೊಸ ವರ್ಷದ ಆಚರಣೆಯಲ್ಲಿ ನಮ್ಮ ಕಣಿಯ ಹಾಗೆಯೇ ಒಂದು ಕ್ರಮ ಇರುವುದನ್ನು ನೋಡಿದ್ದೆ. ಈ post ನೋಡಿ: http://sillylittlethings.blogspot.com/2006/04/experience-tehran.html
April 16, 2007 1:58 AM

Mahesh Chevar said...
ಬಿಸು ಪರ್ಬೊದ ಸೊಲ್ಮೆಲು. ಬಿಸು ಗಮ್ಮತ್ತಾ?
April 16, 2007 1:37 PM

suptadeepti said...
@ಶ್ರೀಲತಾ: ಧನ್ಯವಾದಗಳು. ಯುಗಾದಿ ದಿನ ಭೂಮಿ ಪೂಜೆ ಮಾಡಿ ಗದ್ದೆ ಉಳುವ ಕ್ರಮ ಗೊತ್ತಿರಲಿಲ್ಲ. ಬೇಸಾಯ ಇರುವ ಮನೆಗಳ ಕ್ರಮವಿರಬೇಕು. ಹಾಗೇ ಗೇರುಬೀಜ ಕದ್ದು ತರುವ ಪದ್ಧತಿಯೂ ಗೇರು ತೋಟ ಇಲ್ಲದವರಿಂದ ಶುರುವಾಗಿರಬೇಕು. ಪಾರ್ಸಿಗಳ ವರ್ಷಾಚರಣೆಯ ಬಗ್ಗೆ ತಿಳಿಸಿದ್ದಕ್ಕೆ ಮತ್ತೆ ಧನ್ಯವಾದಗಳು.

@ಮಹೇಶ್: ಈರೆಗ್ಲಾ ಸೊಲ್ಮೆಲು. ಈ ಪರದೇಶೊಡ್ ಬಿಸುಲಾ ಇಜ್ಜಿ, ಬಿಸಲೆಲಾ ಇಜ್ಜಿ. ಐತಾರ ಕಾಂಡೆ ಲಕ್ಕೊಂದು ಒಂಜಿ ಕ್ಲಾಸ್'ಗ್ ಬಲ್ತೆ... ಬನ್ನಗ ಅರೆಜೀವ ಆದಿತ್ತೆ, ಅವ್ವೇ ನಮ್ಮೊ ಬಿಸು ಆಂಡ್. ಈರ್ ದಾದ ಮಲ್ತರ್?
April 16, 2007 2:38 PM

parijata said...
ಸುಪ್ತದೀಪ್ತಿಯವರೆ, ನಿಮಗೂ ಹೊಸ ವರ್ಷದ ಶುಭಾಶಯಗಳು. ನಮ್ಮ ನವವರ್ಷಾರಂಭ ಯುಗಾದಿಯಂದೇ ಆಯಿತು. ನನ್ನ ತಾಯಿಯ ಮನೆಯಲ್ಲಿ ಬೇವು ಬೆಲ್ಲಗಳ ಜೊತೆಗೆ ಹುಣಿಸೆಹಣ್ಣು, ಹುರಿಗಡಲೆಪುಡಿ ಗೇರುಬೀಜ, ದ್ರಾಕ್ಷಿ ಮುಂತಾದ ವಸ್ತುಗಳನ್ನು ಸೇರಿಸಿ ತಿನ್ನುವುದು ವಾಡಿಕೆ. ಬೆಂಗಳೂರಿನ ಕಡೆ ಬರಿಯ ಬೇವು-ಬೆಲ್ಲಗಳನ್ನು ಸೇರಿಸಿ ತಿನ್ನುತ್ತಾರೆ. ನಮ್ಮ ಆಚರಣೆಗಳಲ್ಲಿ ಅದೆಷ್ಟು ವೈವಿಧ್ಯ!
April 17, 2007 9:38 PM

suptadeepti said...
@ಪಾರಿಜಾತ: ನಿಜ, ನಮ್ಮ ಹಿಂದೂ ಆಚರಣೆಗಳು ಕೆಲವೊಮ್ಮೆ ಒಂದೇ ಊರೊಳಗೇ ಮನೆಯಿಂದ ಮನೆಗೇ ವ್ಯತ್ಯಾಸ ಆಗುವುದಿದೆ. ಅದರಲ್ಲಿ ವೈವಿಧ್ಯ ನಮಗೆ ಕಂಡರೆ ಹೊರಗಿನವರಿಗೆ "ಬೊಗಳೆ, ಡಂಭಾಚಾರ, ಅನುಕೂಲ ಸಿಂಧು ಆಚರಣೆ" ಅನ್ನಿಸುವುದು ಇರಬೇಕು. ನಮ್ಮ ನೆರಳೇ ನಮ್ಮನ್ನು ಹೆದರಿಸುವಂತೆ.... ಅದಕ್ಕೇನನ್ನೋಣ?
April 17, 2007 10:48 PM

ಕನಸು-ಕನಸು-ಕನಸು

Thursday, April 12, 2007

ಕನಸುಗಳು ಯಾರಿಗೆ ಬೇಡ? ಕನಸುಗಳ ಬಗ್ಗೆಯೇ ಬೇಕಷ್ಟು ಬರಹಗಳು ಸಧ್ಯ ಬ್ಲಾಗ್'ಗಳಲ್ಲಿ ಹರಿದಾಡುತ್ತಿವೆ, ಸುಳಿದಾಡುತ್ತಿವೆ. ಅದೇ ಲಹರಿಯಲ್ಲಿ ನನ್ನೆರಡು ಹರಿವುಗಳು: ಮೊದಲನೆಯದು ಒಂದು ಚುಟುಕ, ಎರಡನೆಯದು ಕನಸಲ್ಲಿಯೇ ಹರಿದು ಬಂದ ಮೊದಲ ಸಾಲಿನ ಜಾಡು ಹಿಡಿದು ನಡೆದಾಗ ಒಲಿದದ್ದು.

(೧) ಕನವರಿಕೆ

ಕನಸುಗಳ ಸುಪ್ರಭಾತ, ಕನಸುಗಳ ಶುಭರಾತ್ರಿ
ನಡುಹಗಲ ಜೊಂಪಿನಲೂ ಮತ್ತಷ್ಟು ಕನಸು
ಕಂಡೂ ಕಾಣದಿಹ, ಕಾಣದೆಯೂ ಕಂಡಿರುವ
ಕನಸಿನೊಳಗಿನ ಮನಸ ಕಂಡ ಕನಸಿಗರಾರು?
(ಜನವರಿ, ೧೯೯೭)

(೨) ಕನಸಿನಾನನ.....
"ತಂತಾನನ ತುಂತನನ, ತುಂತನಾನ ತಂತನನ"
ಗುಂಯ್-ಗುಟ್ಟಿದ ಭ್ರಮರ-ಸ್ವರಕಾಧೀನ ಹೃನ್ಮನ
ಧ್ವನಿಗುಂಗಿನ ಪದಪುಂಜದ ಗುಂಜಾರವ ನಂದನ
ಪ್ರತ್ಯುತ್ತರ ತೇಲಿ ಬಂತು, ಮಾರುತ್ತರ ಸ್ಪಂದನ

ಆಡಲೆಯುವ ಭಂಡತನದ ಪುಂಡುಮನದ ಪಟಲದೆ
ಕಾಡ್ಯಾಡುವ ಚಿನಕುರುಳಿಯ ಚಿತ್ತಾರವು ಹರಡಿದೆ
ಸ್ಮೃತಿ-ವಿಸ್ಮೃತಿ - ಭ್ರಮ-ವಿಭ್ರಮ ಸಮಾಧಿಸ್ಥ ಚೇತನ
ಅರಿವು-ಮರೆವು ಅರಿಯದಂತೆ ನಡೆಯುವೊಂದು ಚಿಂತನ

ಪೂರ್ವೋತ್ತರ ನೆನಪೇ ನೆಪ, ರಂಗವಲ್ಲಿ ಮಂಟಪ
ಸುಪ್ತತೆ ಜೊತೆ ಜಾಗೃತಿಯ ಕನವರಿಕೆಯ ಸಲ್ಲಾಪ
ತಿಳಿದೇಳುವ ಸಡಗರದಲಿ ವಾಸ್ತವತೆಯ ಹೊನಲಲಿ
ಹೊಂಗಿರಣದ ಹೊಳೆಸುಳಿಯಲಿ ಕರಗುವುದು ರಂಗೋಲಿ

"ತುಂತನನ"ದ ಗುಂಗಿಳಿಯಲು "ತಂತನನ"ದ ಹೊಸತನ
ತುಂಬಿ ಬಂದು ಖಾಲಿಯಾದ ನವ-ಪಲುಕಲಿ ಹೂಬನ
(೨೭-ಅಕ್ಟೋಬರ್-೨೦೦೧)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 3:10 PM
Labels: ,

10 ಪತ್ರೋತ್ತರ:
ಸುಶ್ರುತ ದೊಡ್ಡೇರಿ said...
ಆನನ ಅಂದ್ರೆ ಮುಖ. ಕನಸಿನಾನನ ಅಂದ್ರೆ ಕನಸಿನ ಮುಖ! ತನನಾನ.. ಅಂದ್ರೆ? ಥೋ! ಹೋಗ್ಲಿ ಬಿಡಿ! ಕವನ ಚೆನ್ನಾಗಿದೆ. ಚುಟುಕವೂ. :)
April 13, 2007 1:51 AM

ರಾಜೇಶ್ ನಾಯ್ಕ said...
ಸುಪ್ತ ದೀಪ್ತಿ,
ಚುಟುಕ ಬಹಳ ಹಿಡಿಸಿತು. ಗಟ್ಟಿ (ಬಾಯಿಪಾಠ) ಮಾಡ್ಬಿಟ್ಟೆ.
April 13, 2007 8:22 AM

suptadeepti said...
ಇಬ್ಬರಿಗೂ ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು.
@ಸುಶ್: ಕವನದ ಮೊದಲ ಸಾಲು ಕನಸಲ್ಲೇ ಮೂಡಿ ಬಂದು, ಮನಸ್ಸಲ್ಲಿ ಕಾಡಿ, ಪಕ್ವವಾಗಿ ಕವನವಾಗಿ ಹೊಮ್ಮಿದ್ದು. ಆದ್ದರಿಂದ ಆ ಮೊದಲ ಸಾಲಿನ ಅರ್ಥ ನಾನು ಹೇಳಲಾರೆ. ಅದಕ್ಕೇ ಅದನ್ನು ಉದ್ಧರಣ ಚಿಹ್ನೆಯಲ್ಲಿ ಕೊಟ್ಟದ್ದು.
April 13, 2007 11:28 AM

suptadeepti said...
@ರಾಜೇಶ್, ನನ್ನ ಅಕ್ಷರಲೋಕಕ್ಕೆ ಸ್ವಾಗತ.
April 13, 2007 12:13 PM

Mahantesh said...
kanasina lokada kanasugaarare,nimma kanassu manassu nannu nenesitu
ನಡುಹಗಲ ಜೊಂಪಿನಲೂ ಮತ್ತಷ್ಟು ಕನಸು ...anno sAlu tuMba hidisitu...
April 14, 2007 2:18 AM

suptadeepti said...
@ಮಹಾಂತೇಶ್: ಮೆಚ್ಚುಗೆಗೆ ಧನ್ಯವಾದಗಳು.
April 14, 2007 11:37 AM

Shiv said...
ಸುಪ್ತದೀಪ್ತಿ,>>ಸ್ಮೃತಿ-ವಿಸ್ಮೃತಿ - ಭ್ರಮ-ವಿಭ್ರಮ ಸಮಾಧಿಸ್ಥ ಚೇತನ
ವಾಹ್..
ಕನಸಿನೊಳಗಿನ ಮನಸ ಕಂಡ ಕನಸಿಗರಾರು ಅಂತಾ ಗೊತ್ತಾಯಿತೇ :)
April 14, 2007 11:58 AM

suptadeepti said...
@ಶಿವ್: ಇಲ್ಲಪ್ಪಾ, ಗೊತ್ತಿಲ್ಲ. ನಿಮಗೇನಾದರೂ ತಿಳಿದರೆ, ನನಗೂ ತಿಳಿಸುವಿರಾ?
April 14, 2007 12:38 PM

December Stud said...
ಕನಸು - ಕನ್ನಡದಲ್ಲಿ ನನಗೆ ಅತಿ ಹತ್ತಿರವಾದ ಪದ.
ಕವನ ಹಾಗೂ ಚುಟುಕ ಸುಂದರವಾಗಿದೆ. ಕಬ್ಬಿಣದ ಕಡಲೆಯೇನಲ್ಲ ಬಿಡಿ :)
May 9, 2007 4:43 PM

suptadeepti said...
@D.S.: ಕನಸು ಬಹುಜನಪ್ರಿಯ ಪದ. ನಿಮ್ಮ ಗುತ್ತಿಗೆಯೇನಲ್ಲವಲ್ಲ!!
ಕನಸು ಕಾಣುವ ಕಣ್ಣುಗಳಲ್ಲಿ ಬೆಳಕು ಆರದು. ವೈರುಧ್ಯವೆನಿಸುವ ಮಾತು, ಆದರೆ ಸತ್ಯ. ಅದಕ್ಕೇ ನನಗೂ ಕನಸು ಇಷ್ಟ.
May 9, 2007 4:57 PM

ಮಳೆ

Wednesday, April 4, 2007

ಹನಿ ಹನಿಯು ಹನಿ ಹನಿದು ಸ್ಫಟಿಕ ಮಣಿ ಮಾಲೆ
ಇಣುಕಿ ನೋಡಿದರಲ್ಲಿ ಮುತ್ತು ಮರ ಸಾಲೆ!
ಚಿಲಿಪಿಲಿಯ ದನಿಯಡಗಿ ಚಿಟಿಪಿಟಿಯ ಸದ್ದು
ಉಷ್ಣವಡರಿದ ಭುವಿಗೆ ನಭ ಕೊಡುವ ಮದ್ದು

ಮತ್ತು ಬರಿಸುವ ಹೊತ್ತು ಬಿತ್ತು ಮಳೆ ಮುತ್ತು
ಚಿಣಮಿಣನೆ ಹೊಳೆದಿತ್ತು ಭೂದೇವಿ ನತ್ತು
ಅಬ್ಬರದ ಸಿಡಿಲ ದನಿ, ಬೊಬ್ಬಿಡುವ ಬಾನು
ಹೊಂಚುಹಾಕಿತು ಒಮ್ಮೆ ಬಣ್ಣದ ಕಮಾನು

ಲೋಕವಿದೆ ನೋಡೆಂದು ಹಣಕಿತ್ತು ಬೆಳಕು
ದಿಟ್ಟನೆದೆ ನಡುಗಿಸಲು ಮಿಂಚಿತ್ತು ಛಳಕು
ನಕ್ಕಿತ್ತು ಧರೆ ತಾನು ಮಿಂದೆನಿಂದೆಂದು
ಉಕ್ಕಿತ್ತು ಸಾಗರದ ಎದೆಯುಬ್ಬಿ ಬಂದು

ಹನಿಹನಿಯು ಅಮೃತವು, ಹನಿ-ಸೋನೆ-ಧಾರೆ
ಜೀವ ಉಸಿರಾಡಿಹುದು, ರವಿ-ನೀರೆ ಸೇರೆ
(ಜನವರಿ-೧೯೯೮)

ಅಕ್ಷರ: ಸುಪ್ತದೀಪ್ತಿ suptadeepti ಕಾಲ: 9:00 PM
Labels:

12 ಪತ್ರೋತ್ತರ:
Shiv said...
ಸುಪ್ತದೀಪ್ತಿಯವರೇ,
ನಿಮ್ಮ ಬ್ಲಾಗ್‍ನಲ್ಲೂ ಮಳೆ ಬರ್ತಾ ಇದೆ :)>ಹೊಂಚಿ ಹಾಕಿತು ಕಮಾನು ಚೆನ್ನಾಗಿ ಅನಿಸ್ತು..
ರವಿ-ನೀರೆ ಸೇರೆ? ತಿಳಿಲಿಲ್ಲ?
April 4, 2007 11:35 PM

suptadeepti said...
@ಶಿವು: ಎಲ್ಲ ಕಡೆ ಮಳೆ ಬರುವಾಗ ನಾನೊಬ್ಳೇ ಹೇಗೆ ನೆನೆಯದೆ ಇರಲಿ? ಅದೂ ಮಳೆ ಇಷ್ಟವಾಗಿರುವಾಗ!! ಅದರಲ್ಲೂ ಇದು ಅಂತಿಂಥಾ ಮಳೆಯಲ್ಲ; ಕರಾವಳಿಯ ಮುಂಗಾರು ಮಳೆ, ಬಿರು ಮಳೆ. ಸಿಡಿಲು, ಗುಡುಗುಗಳ ಅಬ್ಬರದ ಧೋ ಧೋ ಮಳೆ. ಬೆಚ್ಚಗೆ ರಗ್ ಹೊದ್ದು ಕೂತು, ಕಿಟಿಕಿಯಿಂದ ಆಚೆ ನೋಡಿ ಆನಂದಿಸಿ.
"ರವಿ-ನೇರೆ ಸೇರೆ" = ರವಿ (ಸೂರ್ಯ, ಬೆಳಕು, ಗಂಡು) ನೀರೆ (ನೀರು, ಹೆಣ್ಣು) ಸೇರಿದಾಗಲೇ ಜೀವ (ಜಗತ್ತು) ಉಸಿರಾಡುವುದು.
April 5, 2007 12:11 AM

poornima said...
ಮಳೆಯಷ್ಟೇ ಮೋಹಕ ನಿಮ್ಮ ಕವನ.
April 5, 2007 9:12 AM

poornima said...
ಜ್ಯೋತಿಯವರೇ, ಅಂದ ಹಾಗೆ ಯಾಕೋ ಇಂದು ತುಳಸೀವನಕ್ಕೆ ಹೋಗಲು ಆಗುತ್ತಿಲ್ಲವಲ್ಲ !
April 5, 2007 9:17 AM

suptadeepti said...
ಹೌದು ಪೂರ್ಣಿಮಾ, ನಿನ್ನೆ ಸಂಜೆಯಿಂದಲೇ ವನದಲ್ಲಿ ತೊಂದರೆಯಿದೆ. ಏನೋ ಗೊತ್ತಿಲ್ಲ. ಇವತ್ತು ತ್ರಿವೇಣಿಗೆ ಫೋನ್ ಮಾಡಿ ನೋಡ್ತೇನೆ.
April 5, 2007 10:17 AM

Vijendra ( ವಿಜೇಂದ್ರ ರಾವ್ ) said...
ಪುಣೆ ಕುದಿತ ಇದೆ. ಆ ಭಗವಂತ ಯಾವಾಗ ಅಮೃತಧಾರೆ ಹರಿಸ್ತಾನೊ ಗೊತ್ತಿಲ್ಲ ....."ಅಬ್ಬರದ ಸಿಡಿಲ ದನಿ, ಬೊಬ್ಬಿಡುವ ಬಾನು"ನಿಮ್ಮ ವರ್ಣನೆ ಸರಿಯಾಗಿ ಕಾರ್ಕಳದ ಮಳೆಗೆ ಹೋಲಿಕೆಯಾಗ್ತಾ ಉಂಟು !!ಕವನ Superb!!
April 5, 2007 10:35 PM

suptadeepti said...
ಧನ್ಯವಾದ ವಿಜ್. ಪುಣೆ ಏನು, ಊರಲ್ಲೂ ವಿಪರೀತ ಸೆಖೆಯಂತೆ. ಅಲ್ಲಿಗೂ ಈ ವರುಣದೇವನನ್ನು ಕಳಿಸುವನಾ, ಹೇಗೆ?
ಈ ಕವನ ನಾನು ಬರೆದದ್ದು, '೯೮ರ ಜನವರಿಯಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಎಲ್-ನೀನ್ಯೋ ಗಲಾಟೆ ಎಬ್ಬಿಸಿದಾಗ. ಆದರೆ ನಮ್ಮೂರಿನ ಮಳೆಗಾಲಕ್ಕೆ ಇದು ಪ್ರತೀ ವರ್ಷವೂ ಪ್ರಸ್ತುತ.
April 5, 2007 10:45 PM

srinivas said...
ನಿಮ್ಮ ’ಹೀಗೊಂದು ಯೋಚನೆ’ಗೆ ನನ್ನ ಕೆಲವು ಪದಗಳು
ನಾನು ಯಾರು? ಎಲ್ಲಿಂದ ಬಂದೆ? ಎಲ್ಲಿಗೆ ಹೋಗುತ್ತಿರುವೆ? ನನ್ನನ್ನು ನಾನು ಹೇಗೆ ಗುರುತಿಸಿದೆ? ಇದೇನು ಕನಸೇ? ಕನಸಿನಿಂದ ಆಚೆ ಬರುವವರೆವಿಗೆ ಇದು ಕನಸೆಂದು ತಿಳಿಯದು - ಒಮ್ಮೆ ಆಚೆ ಬಂದ ಮೇಲೆ ಮರಳಿ ಅದೇ ಕನಸಿಗೆ ಹೋಗಲಾಗದು - ಎನ್ನುವರಲ್ಲ - ಇದೇನು ಸತ್ಯವೇ? ಸತ್ಯವೆಂದು ಸಾಬೀತು ಪಡಿಸಲು, ಸುಳ್ಳು ಯಾವುದು? ನಾ ಕಾಣುತಿರುವುದೆಲ್ಲಾ ಕೈಗೆ ಎಟಕುವುದೇ? ಅಥವಾ ಅವಿರುವುದು ಕನ್ನಡಿಯೊಳಗೆಯಾ?
April 9, 2007 8:47 PM

parijata said...
ಸುಪ್ತದೀಪ್ತಿಯವರೆ, ಮಳೆಯ ವರ್ಣನೆ ಬಹಳ ಚೆನ್ನಾಗಿ ಮಾಡಿದ್ದೀರಿ. ಸಿಡಿಲ ದನಿಯ ಅಬ್ಬರ, ಬಾನಿನ ಬೊಬ್ಬೆ ಎಂದು ಕೇಳುವುದೋ ಎಂದು ಹಾತೊರೆಯುತ್ತಿದ್ದೇವೆ. ನಿಮ್ಮ ಪದ್ಯ ಓದಿ, ಮಳೆಯಲ್ಲಿ ನೆನೆದಷ್ಟೇ ಸಂತೋಷವಾಯಿತು.
April 9, 2007 9:16 PM
suptadeepti said...
@ಶ್ರೀನಿವಾಸ್: ನಿಮ್ಮ "ಅಂತರ್ಧ್ಯಾನ"ದ ಪದಗಳಿಗೆ ವಂದನೆಗಳು. ಇಂತಹ introspection ಮಾಡಿಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದೆಂದು ನನ್ನ ನಂಬಿಕೆ, ನೀವೇನಂತೀರಿ?
@ಪಾರಿಜಾತ: ಮೆಚ್ಚುಗೆಗೆ ವಂದನೆಗಳು. ನಾವು ಕರೆದಾಗಲೆಲ್ಲ ಬರಲು ವರುಣ ನಮ್ಮವನಲ್ಲವಲ್ಲ!! ಅವನ ಮನಕ್ಕೆ ತೋಚಿದಾಗ ಬರುವವನು; ಅವನೇ ಕೃಪೆಮಾಡಬೇಕು, ನಾವು ನೆನೆಯಬೇಕು. ಸೇರಿ ಕರೆಯೋಣ, ಬಂದಾನು.
April 9, 2007 10:29 PM

ಮನಸ್ವಿನಿ said...
ಮಳೆ!!!! ಮಳೆ ಅಂದ್ರೆ ನನಗೆ ತುಂಬಾ ಇಷ್ಟ :)
ಹಾಡು ತುಂಬಾ ಚೆನ್ನಾಗಿದೆ
ಹನಿ ಹನಿಯು ಹನಿ ಹನಿದು ಸ್ಫಟಿಕ ಮಣಿ ಮಾಲೆ
ಇಣುಕಿ ನೋಡಿದರಲ್ಲಿ ಮುತ್ತು ಮರ ಸಾಲೆ!
ಶಿರಸಿ ನೆನಪಾಗ್ತ ಇದೆ
April 11, 2007 7:50 PM

suptadeepti said...
@ಮನಸ್ವಿನಿ: ಧನ್ಯವಾದ.
ಮಳೆ ಯಾರಿಗಿಷ್ಟವಿಲ್ಲ ಅಂತ ಮತ ಕೇಳಿದರೆ ಎಷ್ಟು ಸಿಗಬಹುದು ಅನ್ನುವ ಯೋಚನೆ ಹತ್ತಿದೆ!
April 11, 2007 9:25 PM

ನಮನದ ಹನಿಗಳು

Tuesday, April 3, 2007

ಹಿರಿಯ ಚೇತನವೊಂದು ನಮ್ಮನ್ನಗಲಿದೆ. ನನಗೆ ಕೆಲವು ಕ್ಷಣಗಳ ಪರಿಚಯವೂ ಇಲ್ಲದಿದ್ದರೂ ಅತಿ ಹತ್ತಿರದ ಪರಿಚಿತ ಭಾವ, ಗೌರವ ಅವರಲ್ಲಿ. ನಿರ್ಗಮನದ ಸುದ್ದಿ ಕೇಳಿ ಎರಡು ದಿನಗಳಾದರೂ ಮನಸ್ಸು ಸ್ಥಿಮಿತಕ್ಕೆ ಬಂದಿಲ್ಲ. ಜೀವನವೇ ಹಾಗೆ.
ಸಂದ ಆತ್ಮಕ್ಕೆ ಶಾಂತಿ ಕೋರುತ್ತಾ....

(೧)ಬಾಳು ಬಣ್ಣದ ನೋಟ, ತಂಗಾಳಿ ಹೂದೋಟ,
ಕನವರಿಕೆ, ಸಲ್ಲಾಪ, ಬೇಟದಾಟ;
ಮುಂಜಾನೆ ಮಮತೆಯಲಿ, ನಡುಹಗಲು ಮತ್ತಿನಲಿ,
ಮತ್ತೆ ಮುಸ್ಸಂಜೆಯಲಿ ನೆನಪಿನೂಟ.

(೨)ಅಳುವೊಂದು ನೋವಿಗೆ, ನಗುವೊಂದು ಭಾವಕ್ಕೆ,
ಏರಿಳಿತದಲೆಗಳಲಿ ಉಯ್ಯಾಲೆ ಜೀವ;
ಮನದಲ್ಲಿ ಬೆಳಕಿಲ್ಲವಾದಲ್ಲಿ ಬದುಕಿಲ್ಲ,
ಮಂದಿರದ ಬಂಧಿಯಿದು ಆಂತರ್ಯ ಭಾವ.

(೩)ಸಂದವರು ಎದ್ದಂತೆ ನಡೆದು ಹೋದರೆ ಒಳಿತು,
ಇದ್ದವರ ಪಾಡನ್ನು ಕೇಳು, ಓ ಪ್ರಭುವೆ;
ಕಳೆದುದೆಲ್ಲವು ಸುದಿನ, ಬರುವುದನು ಕಾಣೆವು,
ಇರುಳು ಕಳೆದಹನಿಯನು ನಿಶೆ ಅಟ್ಟಿ ಬರದೆ?

(೪)ಸಾವು ಕಾಣದ ಮನೆಯ ಸಾಸಿವೆಯ ಬೇಕೆಂದ
ಗೌತಮಿಗೆ ನೀನಿತ್ತೆ ದಾರಿದೀಪವನು;
ನಿನ್ನನರಸುವ ಮನಕೆ ಹರಸಿ ಹರಿಸೈ ಶಾಂತಿ,
ನೋವಿರದ ಸಾವಿನಲಿ ಮುಗಿಸು ಬಾಳ್ವೆಯನು.
(೨೪-ಫೆಬ್ರವರಿ-೨೦೦೩)

ಅಕ್ಷರ: ಸುಪ್ತದೀಪ್ತಿ suptadeepti ಕಾಲ: 5:34 PM
Labels: ,

7 ಪತ್ರೋತ್ತರ:
mala rao said...
"ಸಂದವರು ಎದ್ದಂತೆ ನಡೆದು ಹೋದರೆ ಒಳಿತು,
ಇದ್ದವರ ಪಾಡನ್ನು ಕೇಳು, ಓ ಪ್ರಭುವೆ"
ಕವನ ಓದಿ ಕಣ್ತುಂಬಿ ಬಂತು... ಇದ್ದವರ ಪಾಡನ್ನು ಕೇಳುವವನು ಸಮಾಧಾನ ಕೊಡಲೀ ಎಂಬುದಷ್ಟೇ ನಮಗೆ ಹೇಳಲುಳಿದಿರುವ ಮಾತು...ಇಲ್ಲಾ... ಮಾತುಗಳೂ ಮೂಕ ಮೂಕ... ಎದ್ದಂತೆ ನಡೆದು ಹೋದವರೇ ಪುಣ್ಯವಂತರು....
April 4, 2007 2:11 AM

sritri said...
" ನೋವಿರದ ಸಾವಿನಲಿ ಮುಗಿಸು ಬಾಳ್ವೆಯನು" ಎಂಬ ಸಾಲು - " Anaayaasena Maranam, Vinaa Dainyena Jeevanam" ಎಂಬ ಸಂಸ್ಕೃತ ಶ್ಲೋಕದ ಸಂಕ್ಷಿಪ್ತ ಭಾವಾನುವಾದಂತೆ, ಸುಂದರವಾಗಿ ಮೂಡಿ ಬಂದಿದೆ!!
ಅಗಲಿದ ವ್ಯಕ್ತಿ ಯಾರೆಂದು ತಿಳಿಸಿ, (ತಿಳಿದು) ನಂತರ ಅವರ ಆತ್ಮಕ್ಕೆ ಶಾಂತಿ ಕೋರುವುದು ಹೆಚ್ಚು ಗೌರವಪೂರ್ಣವೆನ್ನಿಸುತ್ತದೆ.
April 4, 2007 8:44 AM

suptadeepti said...
ಮಾಲಾ, ಶ್ರೀತ್ರೀ, ವಂದನೆಗಳು.
@ಮಾಲಾ: ಹೌದು, ನಡೆದು ಹೋದವರು ಪುಣ್ಯವಂತರು. ಆ ಪುಣ್ಯ ಎಲ್ಲರಿಗೂ ಸಿಗದು.
@ಶ್ರೀತ್ರೀ: ಸಂದವರು ನಡೆದರು. ಯಾರೆಂಬ ಗುರುತು ಈ ಭೌತಿಕದಲ್ಲಿ. ಆ ಆತ್ಮಕ್ಕೆ ಅದ್ಯಾವುದರ ಪರಿವೆ ಇಲ್ಲದಿರುವ ಒಂದು ತಾರ್ಕಿಕ ನೆಲೆಯಲ್ಲಿ ವ್ಯಕ್ತಿಯ ಹೆಸರು, ಗುರುತು ಬರೆದಿಲ್ಲ. ಗೌರವ ಮನದ ಭಾವ, ಪದಗಳಲ್ಲಿ ಮಾತ್ರ ಕಟ್ಟಿಟ್ಟದ್ದಲ್ಲ. ಕ್ಷಮಿಸು.
April 4, 2007 11:23 AM

Satish said...
ನೀವು ಇದನ್ನು ೨೦೦೩ ರಲ್ಲಿ ಬರೆದಿದ್ದು, ಯಾರಪ್ಪಾ ಆ ದೊಡ್ಡ ಮನುಷ್ಯರು ಎಂದು ತಲೆ ಕೆರೆದುಕೊಂಡು ಯಾರ ಹೆಸರೂ ನೆನಪಿಗೆ ಬರಲಿಲ್ಲ! ನನಗೆ "ಮನದಲ್ಲಿ ಬೆಳಕಿಲ್ಲವಾದಲ್ಲಿ ಬದುಕಿಲ್ಲ" ಎಂಬ ಸಾಲು ಇಷ್ಟವಾಯ್ತು, ಆದರೂ ನೀವು "ಬದುಕು" ಅನ್ನೋ ಪದ ಬಳಸಿದ್ದಕ್ಕೆ 'ಅಂತರಂಗ'ಕ್ಕೆ ಕಾಪಿರೈಟ್ ಕೊಡಬೇಕಾಗಿತ್ತು, ಯಾಕಂದ್ರೆ ಅದು ನನ್ನ ಫೇವರೈಟ್ ಪದ. I kind of miss kaaloo, ಅವನಿದ್ದಿದ್ರೆ ಕಾಮೆಂಟು ಬಿಡೋದಕ್ಕೆ ಒಂದು ಹೊಸ ಹುರುಪು ಬಂದಿರೋದು!
April 4, 2007 4:01 PM

suptadeepti said...
@ಸತೀಶ್: "ನೀವು ಇದನ್ನು ೨೦೦೩ ರಲ್ಲಿ ಬರೆದಿದ್ದು, ಯಾರಪ್ಪಾ ಆ ದೊಡ್ಡ ಮನುಷ್ಯರು ಎಂದು ತಲೆ ಕೆರೆದುಕೊಂಡು ಯಾರ ಹೆಸರೂ ನೆನಪಿಗೆ ಬರಲಿಲ್ಲ!"-- ಅಂದು, ೨೦೦೩ರಲ್ಲಿ ಬರೆದಾಗ ಯಾವುದೇ ದೊಡ್ಡ ಮನುಷ್ಯರು ಈ ಹನಿಗಳಿಗೆ ಪಾತ್ರರಾಗಿರಲಿಲ್ಲ. ಮನದೊಳಗಿನಿಂದ ಒದ್ದುಕೊಂಡು ಬಂದ ಭಾವಗಳನ್ನು ಬರೆದದ್ದು ಅಂದು, ಅವುಗಳಿಗೆ ಬ್ಲಾಗ್'ನಲ್ಲಿ ಜಾಗ ನೀಡಿದ್ದು ಈಗ, ಸಕಾರಣವಾಗಿ.
"ಬದುಕು" ಎಲ್ಲರ ಪದ. ಅದಕ್ಕೂ ನೀವು ಕಾಪಿರೈಟ್ ಕೇಳುವ ಹಾಗಿದ್ದರೆ ನೀವು ಆ ಹಣದಲ್ಲಿ ಭೂಗೋಳವನ್ನೇ ಕೊಳ್ಳಬಹುದಿತ್ತು! ಹಾಗೇನಾದ್ರೂ ಆದ್ರೆ, ನಮಗೂ ಒಂದಿಷ್ಟು ಭೂಮಿ ಬೆಂಗಳೂರಲ್ಲಿ ದಾನ ಮಾಡೋ ದಯೆಯಿರಲಿ ಅನ್ನಲೆ?
April 4, 2007 4:27 PM

Shiv said...
ಮುಸ್ಸಂಜೆಯಲಿ ನೆನಪಿನೂಟ.. ಎಂತಹ ಕಟುಸತ್ಯ.. ಲೌಕಿಕ ಜಗತ್ತಿನಲ್ಲಿ ಇಷ್ಟೆಲ್ಲಾ ಮಿಂದ ಮೇಲೆ ಕೊನೆಗೂ ಸಾವೆಂಬ ಸತ್ಯ ಗೊತ್ತಿದ್ದು ಗೊತ್ತಿದ್ದು ಯಾಕೇ ದುಃಖ ತರುತ್ತೆ.. ನೋವಿರದ ಸಾವಿನಲಿ ಮುಗಿಸು ಬಾಳ್ವೆಯನು..ಇದರ ಬಗ್ಗೆ ಎರಡು ಮಾತಿಲ್ಲ
April 4, 2007 11:32 PM

Satish said...
ಇಲ್ಲಿ ಬೇಕಾದರೆ ಒಂದು ೬೦-೪೦ ಸೈಟ್ ಕೊಡುವ ಧೈರ್ಯ ಮಾಡಬಹುದು, ಬೆಂಗಳೂರಿನ ಲೆಕ್ಕಾಚಾರದಲ್ಲಿ ದುರ್ಯೋಧನ ಹೇಳಿದ ಹಾಗೆ ಒಂದು ಸೂಜಿ ಮೊನೆಯಷ್ಟು ಜಾಗೆಯನ್ನೂ ದಾನ ಮಾಡುವುದು ಹಾಗಿರಲಿ, ಕೊಂಡು ಉಳಿಸಿಕೊಳ್ಳಲು ಹೆಣಗಾಡಬೇಕಾದ ಪರಿಸ್ಥಿತಿ ಬಂದಿದೆಯಂತೆ! :-)
April 5, 2007 1:47 AM