ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Friday 30 October, 2009

ಟ್ರಿಕ್.... OR.... ಟ್ರೀಟ್....

ಪ್ರತೀ ವರ್ಷದ ಹಾಗೆ ಈ ವರ್ಷವೂ ಹ್ಯಾಲೋವೀನ್ ಬಂದಿದೆ. ಅದ್ರಲ್ಲೇನು ವಿಶೇಷ ಅಂದಿರಾ? ನಂಗೊತ್ತಿಲ್ಲಪ್ಪ. ಈ ವರ್ಷ ಯಾರ್ಯಾರು ಯಾವ್ಯಾವ ವೇಷ ಭೂಷಣ ತೊಟ್ಟು ಎಲ್ಲೆಲ್ಲಿ ಸುತ್ತಾಡಿ ಏನೇನು ಕ್ಯಾಂಡಿ ಒಟ್ಟುಮಾಡ್ತಾರೋ, ನನಗ್ಗೊತ್ತಿಲ್ಲ. ನಾನಂತೂ ಹೋಗಲ್ಲ, ಯಾವತ್ತೂ ಹೋಗಿಲ್ಲ. ಆದರೆ, ನನ್ನ ಮೊತ್ತ ಮೊದಲ ಹ್ಯಾಲೋವೀನ್ ಅನುಭವ ನಿಮ್ಮೊಂದಿಗೆ ಹಂಚಿಕೊಳ್ಳಬೇಕೂಂತಲೇ ಈ ಬರಹ....

ನಾನು ಅಮೆರಿಕಾ ಅನ್ನುವ ಈ ಆಧುನಿಕ ದೇಶಕ್ಕೆ ಕಾಲಿರಿಸಿದ್ದು ೧೯೯೨ ಸೆಪ್ಟೆಂಬರ್ ಉತ್ತರಾರ್ಧದಲ್ಲಿ. ಬೆಂಗಳೂರಲ್ಲಿದ್ದಾಗ ಏನೇನೋ ಓದು, ನೆಂಟರು, ಇನ್ನೂ ಎರಡು ವರ್ಷ ಆಗಿಲ್ಲದ ಮಗು, ಕೆಳಗೆ ಓನರ್ ಆಂಟಿ, ಅವರ ಮಕ್ಕಳು, ಪಕ್ಕದ ಮನೆಯ ಶ್ರೀದೇವಿಯಂಥಾ ರೂಪಿನ ಚಟಪಟ ಮಾತಿನ ಗೆಳತಿ- ಎಲ್ಲವನ್ನೂ ಬಿಟ್ಟು ನಡುರಾತ್ರೆಗೆ ಆಗಿನ ಮದ್ರಾಸಿನಿಂದ ಸಿಂಗಪೂರ್ ಮಾರ್ಗವಾಗಿ ಸ್ಯಾನ್ ಫ್ರಾನ್ಸಿಸ್ಕೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕತ್ತಲಲ್ಲೇ ಇಳಿದ ನೆನಪು. ಸಾಂತಾಕ್ಲಾರಾದಲ್ಲಿ ಅಪಾರ್ಟ್ಮೆಂಟ್ ಒಂದನ್ನು ಬಾಡಿಗೆಗೆ ಹಿಡಿದಿದ್ದರು ಇಪ್ಪತ್ತು ದಿನ ಮೊದಲೇ ಬಂದಿದ್ದ ರಾಯರು.

ನಿಧಾನವಾಗಿ ಸುತ್ತಮುತ್ತಲ ಪರಿಚಯವಾಗುತ್ತಾ, ಇಲ್ಲಿನವರ ವೇಷಭೂಷಣ, ಭಾಷೆಭಾವಗಳ ಹದ ಅರಿಯುವ ಪ್ರಯತ್ನದಲ್ಲಿ ತಿಂಗಳೇ ಉರುಳಿತು. ಹ್ಯಾಲೋವೀನ್ ಹೆಸರು ಕೇಳಿಬಂದಿತು. ನಮ್ಮ ಅಪಾರ್ಟ್ಮೆಂಟಿನ ಮ್ಯಾನೇಜರ್ ಒಳ್ಳೆಯ ಮಹಿಳೆ, ಪ್ಯಾಟ್, ನನ್ನ ಪ್ರಶ್ನೆಗೆ ಅವಳದೇ ಶೈಲಿಯಲ್ಲಿ ಉತ್ತರಿಸಿದರೂ ನನರ್ಥವಾಗಿದ್ದು ಸ್ವಲ್ಪ. ‘ಮಗನಿಗೆ ಏನಾದರೂ ಕಾಸ್ಟ್ಯೂಮ್ ತಗೋ. ನಮ್ಮನೇಗೆ ಟ್ರಿಕ್ ಆರ್ ಟ್ರೀಟಿಗೆ ಕರ್ಕೊಂಡು ಬಾ, ಅವನಿಗೆ ಕ್ಯಾಂಡಿ ಕೊಡ್ತೇನೆ’ ಅಂದಳು ಅವನ ಕೆನ್ನೆ ಸವರುತ್ತಾ. ಅವನಿಗವಳು ಇಷ್ಟದ ‘ಪ್ಯಾಟ್ ಅಜ್ಜಿ’.

ಇವಳಲ್ಲದೆ ನಾವು ಅಲ್ಲಿ ಮಾತಾಡ್ತಿದ್ದದ್ದು ಅಥವಾ ನಮ್ಮನ್ನು ಮಾತಾಡಿಸ್ತಿದ್ದದ್ದು ಪಕ್ಕದ ಕಟ್ಟಡದಲ್ಲಿ ಕೆಳ ಅಂತಸ್ತಿನಲ್ಲಿದ್ದ ಒಬ್ಬಳು ಎಂಭತ್ತು ವರ್ಷದ ಒಂಟಿ ಮಹಿಳೆ ಷೆರೀನ್ ಮತ್ತವಳ ಗಿಳಿ ಸ್ಯಾಮ್ (ಅವಳ ಪ್ಯಾಟಿಯೋ ಮತ್ತು ರೂಮಿನ ಕಿಟಕಿ ನಮ್ಮ ಅಡುಗೆ ಮನೆಯ ಕಿಟಕಿ ಮತ್ತು ರೂಮಿನ ಕಿಟಕಿಗೆ ಕಾಣಿಸುತ್ತಿತ್ತು, ಮಗ ಒಮ್ಮೊಮ್ಮೆ ಅವಳ ಜೊತೆ ಅಲ್ಲಿಂದಲೇ ‘ಕಿಚಪಿಚ’ ಹರಟುತ್ತಿದ್ದ), ಹಾಗೂ ಅಪಾರ್ಟ್ಮೆಂಟಿನ ಮೈನ್‌ಟೇನೆನ್ಸ್ ಮಾಡುತ್ತಿದ್ದ ಸ್ಕಾಟ್ ಮತ್ತವನ ಮಡದಿ ಡೆಬಿ. ಬೇರೆ ಯಾರ ಪರಿಚಯವೂ ಆಗಿದ್ದಿಲ್ಲ ನಮಗೆ. ಒಂದು ಕಟ್ಟಡದ ಮಹಡಿಯ ಒಂದು ಪಾರ್ಶ್ವದಲ್ಲಿ ಎದುರುಬದುರಾಗಿದ್ದ ನಾಲ್ಕು ಮನೆಗಳಲ್ಲಿ ನಮ್ಮದು ಒಳಬದಿಯ ಮನೆ (ಬೀದಿ ಬದಿಯದ್ದಲ್ಲ).

ಅಂದು ಶುಕ್ರವಾರ, ಅಕ್ಟೋಬರ್ ಮೂವತ್ತು. ಹ್ಯಾಲೋವೀನಿನ ಮುನ್ನಾದಿನ. ಯಾಕೋ ನನ್ನ ಮೂಡ್ ಕೆಟ್ಟಿತ್ತು (ಯಾಕೇಂತ ನೆನಪಿಲ್ಲ). ಚೆನ್ನಾಗಿ ಜಗಳವಾಡಿ ಕೋಪ ಮಾಡಿಕೊಂಡು ಹಾಲಿನಲ್ಲಿ ಸೋಫಾದಲ್ಲೇ ಕೂತಿದ್ದೆ. ಅಪ್ಪ-ಮಗ ಒಳಗೆ ಮಲಗಿದ್ದರು. ಗಂಟೆ ಇನ್ನೂ ಹತ್ತರ ಆಸುಪಾಸು. ನನ್ನೊಳಗೆ ದುಸುಮುಸು. ಸುಮ್ಮನೇ ಕೂತಿದ್ದೆ. ಮಂಪರು ಹತ್ತಿರಬೇಕು, ಗೊತ್ತಿಲ್ಲ.

ಬಾಗಿಲು ಟಕಟಕಿಸಿದ ಸದ್ದಾಯ್ತು. ಹೋಗಿ ಇಣುಕಿಂಡಿಯಲ್ಲಿ ನೋಡಿದೆ, ಯಾರೂ ಕಾಣಲಿಲ್ಲ. ಮತ್ತೆ ಸೋಫಾದ ಹತ್ರ ಬರುವುದರಲ್ಲಿ ಇನ್ನೊಮ್ಮೆ ಟಕಟಕ. ಮತ್ತೆ ಇಣುಕಿಂಡಿಯಲ್ಲಿ ಯಾರೂ ಕಾಣಲಿಲ್ಲ. ಬಾಗಿಲಿಗಿದ್ದ ಸುರಕ್ಷೆಯ ಸರಪಳಿ ಸಿಕ್ಕಿಸಿತ್ತು. ಹಾಗೆಯೇ ಎರಡಿಂಚು ತೆರೆದೆ. ನನ್ನ ಮುಂದೆ, ಹೊರಗಿನ ಪ್ಯಾಸೇಜಿನಲ್ಲಿ ಮೂರಡಿ ಎತ್ತರದ, ಬಿಳಿ ಬಟ್ಟೆ ಪೂರ್ತಿ ಮುಚ್ಚಿಕೊಂಡ, ಓಲಾಡುವ ಒಂದು ಆಕೃತಿ. ಮೇಲೆ-ಕೆಳಗೆ-ಎಡ-ಬಲಕ್ಕೆ ಅನಾಯಾಸವಾಗಿ ಓಲಾಡುತ್ತಿದ್ದ ಅದನ್ನು ಕಂಡದ್ದೇ ಬಾಗಿಲನ್ನು ಠಪ್ಪೆಂದು ರಾಚಿ, ಕಿಟಾರನೆ ಚೀರಿ ಅಲ್ಲೇ ಬಾಗಿಲ ಬುಡದಲ್ಲೇ ಬಿದ್ದದ್ದು ಮಾತ್ರ ಚೆನ್ನಾಗಿ ನೆನಪಿದೆ, ಇನ್ನೂ.

‘ಜ್ಯೋತಿ, ಏಳು, ಏನಾಯ್ತು? ಇಲ್ಯಾಕೆ ಮಲಗಿದ್ದೀ? ಕಿರುಚಿದ್ದು ಯಾಕೆ? ಕನಸು ಬಿತ್ತಾ?...? ಪ್ರಶ್ನೆಗಳ ಹಿಂದೆ ಕಂಡ ಇವರ ಮುಖ ಇನ್ನಿಲ್ಲದ ನೆಮ್ಮದಿ ಕೊಟ್ಟದ್ದೂ ಸುಳ್ಳಲ್ಲ. ಏನೊಂದು ಮಾತೂ ಬಾಯಿಗೆ ಬರುತ್ತಿರಲ್ಲಿಲ್ಲ. ಸ್ವರವೇ ಹೊರಡುತ್ತಿರಲ್ಲಿಲ್ಲ. ಎಬ್ಬಿಸಿ ಸೋಫಾಕ್ಕೆ ಕರ್ಕೊಂಡು ಹೋಗಿ ಕೂರಿಸಿದರು. ನೀರು ತಂದುಕೊಟ್ಟರು. ‘ಕನಸು ಬಿತ್ತಾ?’ ಪ್ರಶ್ನೆಗೆ ಇಲ್ಲವೆಂದೆ. ಕಂಡದ್ದನ್ನು ನಿಧಾನವಾಗಿ ಬಿಡಿಬಿಡಿಯಾಗಿ ವಿವರಿಸಿದೆ. ಹೊರಗೆ ಹೋಗಿ ನೋಡಿ ಬಂದರು. ಯಾರೂ ಇಲ್ಲವೆಂದರು. ‘ಅದು ಕನಸೇ ಆಗಿರಬೇಕು, ಇಲ್ಲೆಲ್ಲ ಹಾಗೆ ಸುಮ್ಮಸುಮ್ಮನೆ ಹೆದರಿಸುವವರು ಯಾರೂ ಇಲ್ಲ’ವೆಂದು ಇವರ ವಾದ. ನಾನು ಕಂಡದ್ದು ಕನಸಲ್ಲ, ಯಾರದೋ ಪ್ರ್ಯಾಂಕ್ ಅಂತಲೇ ನನ್ನ ನಂಬಿಕೆ. ಅಲ್ಲೆಲ್ಲ ಸುಮಾರು ಹದಿಹರೆಯದ ಮಕ್ಕಳು ಇದ್ದರು. ಎಲ್ಲರೂ ಕೆಲವೊಂದು ಸಂಜೆ ಹೊತ್ತು ಗದ್ದಲವೆಬ್ಬಿಸುತ್ತಿದ್ದದ್ದು ಸಾಮಾನ್ಯ. ಆದ್ದರಿಂದ, ಈ ಅಪಾರ್ಟ್ಮೆಂಟಿಗೆ ಹೊಸಬರಾದ ನಮ್ಮನ್ನು ಹೆದರಿಸಲು ಈ ಆಟ ಹೂಡಿರಬಹುದೆಂದು ನನ್ನೆಣಿಕೆ. ಮಕ್ಕಳಾಟಕ್ಕೆ ಗೊತ್ತುಗುರಿಯಿದೆಯೆ?

ಇದೆಲ್ಲ ನಡೆದು ಹದಿನೇಳು ವರ್ಷ ಸಂದಿದೆ. ಕಾಲ ಬೇರೆಬೇರೆ ಪರೀಕ್ಷೆಗಳನ್ನು ನೀಡಿದೆ. ಎಲ್ಲವನ್ನೂ ದಾಟಿ ಬಂದಿದ್ದೇವೆ. ಆದರೂ ಇದನ್ನು ಮರೆಯಲಾರೆ. ಅಂದು ನಿಜವಾಗಿಯೂ ಏನಾಯಿತು, ಯಾರು ಅಂಥ ಆಟವಾಡಿದ್ದು, ಯಾಕೆ ಎನ್ನುವುದಕ್ಕೆ ಮಾತ್ರ ನನ್ನ ಬಳಿ ಇನ್ನೂ ಉತ್ತರವೇ ಇಲ್ಲ.

Monday 26 October, 2009

ಜೀವನ್ಮುಕ್ತ

ಬೆಳಕಿದೆ ಹೊರಗೆ, ಕತ್ತಲು ಒಳಗೆ,
ಹಿಡಿಯುವ ಕಿರಣಕೆ ಕನ್ನಡಿ;
ಬೀರಲಿ ಹೊನಲು, ಜಾರಲಿ ಅಮಲು,
ಪಡೆಯುವ ಜಾಗೃತಿ ಮುನ್ನುಡಿ.

ದೀಪದ ಒಳಗೆ, ಬತ್ತಿಯ ಹೊರಗೆ,
ನಡುವಿನ ಗಾಳಿಯ ತೆರದಿ;
ಬೇಯುವ ಜೀವ, ತೇಯುವ ಭಾವ,
ನಡುಗುತ ಉಳಿಯದು ಜಗದಿ.

ನಾನು ಎನ್ನುವ, ನನ್ನದು ಎನ್ನುವ,
ಹಂಬಲ ಮೀರಿದ ಮನುಜ;
ಎಣ್ಣೆಯ, ಬತ್ತಿಯ, ಗಾಳಿಯ ರೀತಿ,
ತುಂಬಿದ ಜ್ಞಾನದ ಕಣಜ.
(೩-ನವೆಂಬರ್-೨೦೦೬)

Wednesday 21 October, 2009

ಕಾರ್ಯ-ಕಾರಣ

ನಮ್ಮ ಬೆವರು, ನಿಮ್ಮ ನೆತ್ತರು,
ಮತ್ತಿನ್ನಾರದೋ ಕಾಲ,
ಯಾರ ಸುತ್ತಲೋ ಬೇಲಿ ಕಟ್ಟಲು
ಸಾವಿರ ಮಕ್ಕಳ ತೋಳ್ಬಲ;
ಯಾರ ಸಂಚಿಗೆ ಯಾರ ಮೆಚ್ಚುಗೆ?
ಯಾರ ಕತ್ತು ಯಾರ ಮಚ್ಚಿಗೆ?
ಯಾರಿಗೆ ಗೋರಿ, ಯಾರಿಗೆ ಗದ್ದುಗೆ?
ಯಾರ‍್ಯಾರಿಗೋ ಯಾಕೀ ಛಲ?

ಇವನು ಹೆತ್ತದ್ದಲ್ಲ, ಅವನು ಸಾಕಿದ್ದಲ್ಲ,
ಅಮಾಯಕರ ಹೆಣರಾಶಿ ಅಲ್ಲಿ,
ಇವನು ದೇವರಲ್ಲ, ಅವನು ದೆವ್ವವಲ್ಲ,
ಅಮೂರ್ತಗಳ ಭೂತ ಇಲ್ಲಿ;
ನೆಲವೆಲ್ಲ ಇವನ ಗುತ್ತಿಗೆಯೇನು?
ಜಗಕೆಲ್ಲ ಅವನೇ ಒಡೆಯನೇನು?
ಗೆದ್ದವರೇನು, ಬಿದ್ದವರೇನು?
ಕರುಳ ಕಣ್ಣೀರಿಗೆ ಯಾವ ಫಲ?

(‘ಇರಾಕ್ ಮೇಲೆ ಅಮೆರಿಕಾ ಯುದ್ಧ’ ಯಾವುದೇ ನೆಲೆಗಾಣದೇ ಅಯೋಮಯವಾಗಿ ಸಾಗುತ್ತಿರುವ ಸಮಯದಲ್ಲಿ....)
(೧೯-ಅಕ್ಟೋಬರ್-೨೦೦೬)

Saturday 17 October, 2009

ಬೆಳಗಿ ಬರಲಿ

ಎಲ್ಲರಿಗೂ ಬೆಳಕಿನ ಹಬ್ಬದ ಶುಭಾಶಯಗಳು.
ಹರಕೆ-ಹಾರೈಕೆಗಳು ನಮ್ಮೆಲ್ಲರೊಡನೆ ಎಂದೂ ಸಾಗಿ ಬರಲಿ
ಸುಖ, ಸಂತಸ, ನೆಮ್ಮದಿ, ಶಾಂತಿಗಳ ಎಂದೂ ಜೊತೆಗೆ ತರಲಿ.


ಸುತ್ತೆಲ್ಲ ಹಣಕಿಹರು ಆ ಪುಟ್ಟ ಹಣತೆಗಳು -
ಮತ್ತೊಮ್ಮೆ ದೀವಳಿಗೆ ನೆಪವ ಮಾಡಿ;
ಅತ್ತಿತ್ತ ಆಡಿಹರು ಬೆಳಕಿನಾ ಮೂರ್ತಿಗಳು -
‘ಕತ್ತಲೆಗೆ ಬೆದರದಿರಿ’, ಎಂದು ಸಾರಿ.

ತೈಲ ಸಾರವ ಹೀರಿ, ಬತ್ತಿ ಭಾವವ ಮೀರಿ -
ಮೃತ್ತಿಕೆಯ ಮರ್ತ್ಯತನ ದಾಟಿ ಏರಿ,
ನೆಲ-ಜಲದ ಒಲವಿಂದ ಬಲಗೊಂಡ ರೂವಾರಿ -
ಕತ್ತಲೆಯ ನುಂಗಿ, ತೋರುವರು ದಾರಿ.

ಮಣ್ಣಿನಲಿ ಕಂಡವರು, ಮಣ್ಣನ್ನೆ ಉಣುವವರು -
ಸಣ್ಣ ಕುಡಿಯಿಂದಲೇ ಬೆಳೆಯುವವರು,
ಬಣ್ಣಕ್ಕೆ ಬೇಕವರು, ಕಣ್ಣಿಗೆ ಕಾರಣರು -
ತಣ್ಣಗಿನ ಕತ್ತಲಲು ಕರಗದವರು.

ಮರುಕಳಿಸಿ ಬರುವ ನಗೆ ಮರುಅಲೆಯ ತರುವಂತೆ -
ತರಲಿವರು ನಮಗೆಲ್ಲ ಮರಳಿ ಹರುಷ,
ಗುರುತರದ ಹೊಣೆಯನ್ನೆ ಹೊತ್ತಿರುವ ತಮಸಾರಿ -
ಇರಲವರು ನಮ್ಮೊಳಗೆ ಬೆಳಗಿ ಮನಸ.
(೧೨-ನವೆಂಬರ್-೨೦೦೧)

Thursday 15 October, 2009

ದೀಪಗಳ ನೆನಪುಗಳು

ಜಗಲಿಯುದ್ದ ಸಾಲಿನಲ್ಲಿ ಹಣತೆಯಿರಿಸಿ
ತೈಲವೆರೆದು, ದೀಪವುರಿಸಿ
ಸಿಡಿಮದ್ದು ಸಿಡಿಸಿದ್ದು, ಕಿಲಕಿಲನೆ ನಕ್ಕಿದ್ದು
ತಮ್ಮ-ತಂಗಿಯರ ಕೂಡಿ
ಗೂಡುದೀಪ ಏರಿಸಿದ್ದು
ಹೂಗಳಾಯ್ದು ಮಾಲೆ ನೇಯ್ದು
ಅಪ್ಪನ ಗಡ್ಡದ ಜಡೆಯೊಳಿರಿಸಿ
ಅಮ್ಮನ ಉದ್ದದ ಮುಡಿಯೊಳಿರಿಸಿ
ತಂಗಿಯ ಮೋಟು ಜುಟ್ಟಿಗಿಳಿಸಿ ನಲಿದದ್ದು-
ಇಂದು ಬರೇ ನೆನಪು;
ಬಾಳಿನಲ್ಲಿ ಸವಿಯ ತರಲು
ಕಚಗುಳಿಯಿಡಲು ಸಿಹಿ ನೆನಪು.

ಹಾರಿ ಬಂದ ಯಂತ್ರ ಹಕ್ಕಿ
ಸಾವಿರಾರು ಜೀವ ಕುಕ್ಕಿ
ಭಸ್ಮವಾದ ಕನಸ ನೆಕ್ಕಿ
ನಗೆಯ ಬುಗ್ಗೆ ಆವಿ ಮಾಡಿ ತೂರಿಸಿದ್ದು
ರಣಭೇರಿ ಬಾರಿಸಿದ್ದು
ಜಗದ ಮನವ ಕೆರಳಿಸಿದ್ದು
ತಣ್ಣಗೆ ಮರಳಲ್ಲಿ ಹುದುಗಿಸಿದ್ದು-
ಇತ್ತೀಚಿನ ನೆನಪು;
ಬಾಳಿನಲ್ಲಿ ವಾಸ್ತವತೆಯ
ಬಿಂಬವಿರಲು ಕಹಿ ನೆನಪು.
(೦೫-ನವೆಂಬರ್-೨೦೦೨)

Thursday 8 October, 2009

ಸ್ಫೂರ್ತಿ ಸೆಲೆ

ಬೆಳಕಾಗಿ ಬಾರಾ..... ಚೆನ್ನೊಲವೆ-
ಹಸುರಾಗಿ ಬಾರಾ!
ಎಳೆ ಎಳೆಯ ಹೀರುತ್ತ,
ಹೊಳೆದರಳಿ ತೂಗುತ್ತ,
ಇಳೆಗೊಂದು ನೆರಳಾಗಿ ತಳಿರಾಗುವೆ;
ಕಳೆದೆಲ್ಲ ನಿನ್ನೆಗಳ,
ಬೆಳೆದ ಹೊಂಗನಸುಗಳ,
ಮಳೆಬಿಲ್ಲ ಮಾಲೆಯನು ನಾ ತೊಡಿಸುವೆ.


ಎಲರಾಗಿ ಬಾರಾ..... ಚೇತನವೆ-
ಉಸಿರಾಗಿ ಬಾರಾ!
ಎಲೆ ಎಲೆಯ ತೀಡುತ್ತ,
ಮಲರಮದ ತೂರುತ್ತ,
ಕಲರವದ ನೆಲೆಯಾಗಿ ಹಾರಾಡುವೆ;
ಹೊಲದ ತೆನೆ ಹೊನಲುಗಳ,
ಮಲೆಯಿಳಿವ ಮೋಡಗಳ,
ಅಲೆಯಲೆಯ ಚೆಲುವನ್ನು ನಾ ತೋರುವೆ.


ಹನಿಯಾಗಿ ಬಾರಾ..... ಸಂತಸವೆ-
ಕಸುವಾಗಿ ಬಾರಾ!
ಬನ ತಣಿಸಿ ಬಾಗುತ್ತ,
ಮನ ಕುಣಿಸಿ ಹಾರುತ್ತ,
ನಿನದಿಸುವ ನಲಿವಾಗಿ ತುಳುಕಾಡುವೆ;
ಅನುಗಾಲ ಒಲುಮೆಗಳ,
ಜಿನುಗುವತಿ ಚಿಲುಮೆಗಳ,
ಇನಿದೊರೆಗೆ ಸೆಲೆಯಾಗಿ ನಾ ಸೇರುವೆ.
(೧೨-ಆಗಸ್ಟ್-೨೦೦೪ ; ೧೩-ಅಕ್ಟೋಬರ್-೨೦೦೪)

Thursday 1 October, 2009

ವಾಯುವಿಹಾರ

ಬರಹೇಳಿದ್ದ ದುಷ್ಯಂತ.
ಮರದ ಕೆಳಗೆ ಕಾದಳು,
ಕಾದೇ ಕಾದಳು ಇವಳು.
ಬೆರಳಲ್ಲಿ ಉಂಗುರ,
ಬಾನಲ್ಲಿ ಚಂದಿರ.

ರಥವಿಲ್ಲದ ಕುದುರೆಯಲ್ಲಿ
ಟಕಟಕಿಸುತ್ತ ಬಂದ ನಲ್ಲ
ಹತ್ತು- ಎಂದ.
ಹಿಂದೆ-ಮುಂದೆ ನೋಡದೆ,
ಕಣ್ವ-ಗೌತಮಿಯರ ನೆನೆಯದೆ,
ಬೆನ್ನಿಗಂಟಿದಳು,
ಕಣ್ಣು ಮುಚ್ಚಿದಳು.

ಗಾಳಿಯ ಸುಗಂಧ ಇವನದೇ.
ಕುದುರೆಯ ವೇಗ ಮನಸಿನದೇ.

ಎಚ್ಚರಾದಾಗ-
ಉಂಗುರ ಮೀನಿನೊಳಗಿತ್ತು.
ಮುದಿಕುದುರೆ ಕುಂಟುತ್ತಿತ್ತು.
ಮರದ ಒಂಟಿ ನೆರಳು
ಕಾದು ಕಾದು... ಕರಟಿತ್ತು.
ಭರತ ನಗುತ್ತಿದ್ದ.
(೧೬-ಸೆಪ್ಟೆಂಬರ್-೨೦೦೬)