ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Tuesday 14 January, 2014

ಕಿಚ್ಚು-ಸಾಗರ

ಹುಟ್ಟಿದ್ದೇ ಹೆಣ್ಣಾಗಿ, ಸೇಡಿನ ಕಣ್ಣಾಗಿ
ಮೈಯೆಲ್ಲ ಬೆಂಕಿಯುರಿ, ಅಗ್ನಿಕನ್ಯೆ;
ತಂದೆ ಪಾಲನೆಗಿಂತ ತಾಯ್ಗರುಳು ಏರದಿರೆ
ಬೆಳೆದದ್ದು ಧೀರತ್ವ ಧೀಮಂತಿಕೆ
 
ಅರಳಿದೆ ಹೆಣ್ಣಾಗಿ, ರೂಪಕ್ಕೆ ಕಣ್ಣಾಗಿ
ಸ್ವಯಂವರ ಸೊಬಗಲ್ಲಿ ಪಾರಿತೋಷ;
ಮನದೊಳಗೆ ಒಂದಾಸೆ, ತಂದೆ-ಮಗಳಿಬ್ಬರಿಗೆ
ಗೆಲಬೇಕು ಜಗದೇಕವೀರ ಪಾರ್ಥ
 
ಬಯಕೆಯೇ ಗೆದ್ದರೂ ವರಿಸಿದ್ದು ಐವರನು
ತಾನೇ ದಾಳವೋ? ಲಾಳಿ ತಾನಾದೆಯ?
ಒಬ್ಬೊಬ್ಬ ಪತಿರಾಯ ಒಂದೊಂದು ಮರ್ಮದವ
ವರುಷವೊಂದರ ಚಕ್ರನಿಯಮ ನಿನಗೆ
 
ಇಂದು ಇನಿಯನು ಒಬ್ಬ ನಾಳೆಗವ ಪರಕೀಯ
ಕಣ್ಮನವ ಹೊರಳಿಸದೆ ನಡೆಯಬೇಕು;
ಭಾವನೋ ಮೈದುನನೋ, ನಾಲ್ಕುವರ್ಷದ ದೀಕ್ಷೆ
ಸಲುಗೆಯಾಚೆಗೆ ಮಾತು ಸವೆಯಬೇಕು
 
ಸತ್ಯ-ಧರ್ಮಕ್ಕೆ ಮನಸ ಕಟ್ಟಿಕೊಟ್ಟವನೊಬ್ಬ
ಮಗದೊಬ್ಬ ಶೌರ್ಯವೇ ಮೈವೆತ್ತವ;
ಇನ್ನೊಬ್ಬ ರಸಿಕತೆಗೆ ರಾಜಮಾರ್ಗದಿ ನಡೆದ
ಯಮಳರೋ ಸೌಂದರ್ಯಮೂರ್ತರೂಪಿಗಳು
 
ಒಂದೊಂದು ವ್ಯಕ್ತಿತ್ವ ಒಂದೊಂದು ವರುಷಕ್ಕೆ
ಹೊಂದಿಕೊಳ್ಳುವ ಹೊತ್ತು ಎತ್ತಂಗಡಿ;
ಐದು ಭಾವಗಳಲ್ಲಿ ಹಂಚಿಹರಿದುದು ಪ್ರೀತಿ
ಹೊತ್ತುಹೆತ್ತಿಹ ಸಮಯ ಏಕಾಂತವೆ?
 
ಐದು ಅಂತಃಪುರದ ಅರಸಿಯಾಗಿದ್ದವಳೆ
ನಿನ್ನ ಸ್ವಂತಕ್ಕೇನು ಒದಗಿ ಬಂದಿತ್ತು?
ರಾಜಸೂಯದ ಸ್ನಾನವೇಕೆ ಮುಳುವಾಯಿತು?
ಸಾಮ್ರಾಜ್ಞಿ ಶ್ರೀಮುಡಿಗೂ ಕೈ-ನೆಟ್ಟಿತು
 
ಅಂತಿಂಥ ಪಾಡಲ್ಲ ಪಾಂಚಾಲಿ ನಿನ್ನದು
ಅದಕೇ ಜಗದಗಲ ನಿನ್ನ ಕೀರ್ತಿ;
ಅಂಥ ಬಾವುಟದಡಿಯ ನೆರಳಿನಾಸರೆ ಬೇಕು
ನಿನ್ನೈದು ಪತಿಗಳ ಒಗ್ಗಟ್ಟಿಗೆ;
 
ಹೆತ್ತ ಮಕ್ಕಳ ರಕ್ತ-ಸಿಕ್ತ ಸಿಂಹಾಸನದಿ
ಮತ್ತೆ ರಾಜ್ಯವನಾಳ್ದ ಧೀರರವರು;
ಒಮ್ಮೆಯಾದರೂ ನಿನ್ನ ಕಣ್ಣ ಸಾಗರಕಿಳಿದ
ಸಾಹಸಿಗರವರೇನು, ಹೇಳು ನೀನೆ?
 
ಹೆಣ್ಣಲ್ಲವೇ ನೀನು, ಭಾರತಿಯ ಹಣೆಗಣ್ಣು
ಕುರುಸಭೆಗೆ ಕರೆಸಿದ್ದೆ ಕೃಷ್ಣಾನುಕಂಪ;
ಇಂದು ಒಬ್ಬೊಬ್ಬಳಿಗೂ ಆತ್ಮಬಲ ಛಾತಿಕೊಡು
ದಮನಿಸಲು ಕೀಚಕ-ದುಶ್ಶಾಸನ ಪಡೆ
************
(೦೮-ಜನವರಿ-೨೦೧೪ (೨))

ಓದುಗರೆಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳು- ಹೊಸ ಕವನದೊಸಗೆಯೊಂದಿಗೆ.

ಇದನ್ನು ಬರೆಯುವ ಮೊದಲು ಇದೇ ವಿಷಯಾಧಾರಿತ ಕವನವೊಂದನ್ನು ಬರೆದೆ. ಅದು ಈ ಕೊಂಡಿಯಲ್ಲಿದೆ. ಅದನ್ನೂ ಓದಿ, ಅಭಿಪ್ರಾಯ ತಿಳಿಸಿ.