ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Tuesday 15 June, 2010

ಲಗೋರಿ

ಬೇಸ್ ಬಾಲ್, ಫುಟ್ ಬಾಲ್,
ಸಾಕರ್, ಸ್ಕೇಟಿಂಗ್,... ಇಂಥವೇ
ಇತ್ಯಾದಿ ಆಟಗಳನ್ನು ಕಂಡು
ಬೆಳೆದ ಹತ್ತರ ವಯಸಿನ ಮಗ
ಊರಿಗೆ ಬಂದು ಕೆಲವಾರು ತಿಂಗಳುಗಳಲ್ಲೇ
ಕ್ರಿಕೆಟ್ಟಿನ ಒಳಹೊರಗನ್ನು ಅರಿತಿದ್ದಾನೆ
ಗೆಳೆಯರೊಡನೆ ಖ್ಖೋ-ಖ್ಖೋ ಆಡುತ್ತಾನೆ
ಕಬಡ್ದಿಯ ಪರಿಚಯವೂ ಆಗುತ್ತಿದೆ

ಮೊನ್ನೆ ನಮ್ಮ ಬಾಲ್ಯದ
ಕಥೆಗಳನ್ನು ಹೇಳುತ್ತಿದ್ದಾಗ...
"ಅಮ್ಮ, ಲಗೋರಿ ಅಂದ್ರೇನು?"
ಉತ್ತರ ವಿವರಿಸಿ ಹೇಳಿದರೆ
ಸ್ವಾರಸ್ಯವಿಲ್ಲೆನಿಸಿತು;
"ಈ ಸಲ ಹಳ್ಳಿಗೆ ಹೋದಾಗ
ಎಲ್ಲರೂ ಸೇರಿ ಆಡೋಣ,
ನಿಮಗೆ ಸರಿಯಾಗಿ ಅರ್ಥವಾಗಲಿ..."

ರಜೆಯೂ ಬಂದು ಹಳ್ಳಿಗೆ ಹೋಗಿ
ಅಲ್ಲೊಂದು ಸಮಾರಂಭಕ್ಕೆಂದು
ಮನೆಮಂದಿಯೆಲ್ಲ ಸೇರಿದ ಸಂದರ್ಭ;
ಊಟ ಮುಗಿಸಿ ಪಟ್ಟಾಗಿ ತೇಗಿ
ವೀಳ್ಯ ತಿಂದವರೂ
ಮಿತ ವೇಗದಲ್ಲಿ ಸಾಗುತ್ತಿದ್ದಾಗ-
ಎಲ್ಲರ ಗಮನ ಸೆಳೆದೆ-
"ಲಗೋರಿ ಆಡುವನಾ?"

ಎಲ್ಲ ನಿಶ್ಶಬ್ದ.
೧-೨- - - -೬-೭
ಪ್ರತೀ ಮುಖದಲ್ಲೂ ಗೆಲುವು
ಮೆಲುವಾಗಿ ಗುಸು ಗುಸು
ಪಿಸು ಪಿಸು ಶುರುವಾಗಿ
ಗಾಢವಾಗಿ ಹರಡಿ "ಯೇ...ಏ..ಏ..ಸ್ಸ್"ನಲ್ಲಿ
ತಾರಕಕ್ಕೇರಿದಾಗ ಮಗನಿಗೂ ನನಗೂ
ಅತ್ಯಾನಂದ; ಅನಿರೀಕ್ಷಿತ ಘಟಿಸಿತ್ತು.
ಸುಲಭವಾಗಿ ಗುಂಪು ವಿಭಜನೆ-
"ಗಂಡಸರೆಲ್ಲ ಒಂದು ಕಡೆ, ಹೆಂಗಸರೊಂದು"
ಚೆಂಡು, ಏಳು ಪಲ್ಲೆ-ಕಲ್ಲುಗಳು
ಆಗಲೇ ತಯಾರಿದ್ದವು;
ಗದ್ದೆಯಂಗಳವೂ ತೆರೆದಿತ್ತು.

ಅರುವತ್ತೈದು, ಎಪ್ಪತ್ತರ ಅಜ್ಜ-ಅಜ್ಜಿಯರು,
ನಲ್ವತ್ತು ನಲ್ವತ್ತೈದರ ಅಪ್ಪ-ಅಮ್ಮ,
ಮೂವತ್ತರ ಹುರುಪಿನ ಹುರುಯಾಳುಗಳು,
ಹದಿನೈದು ಇಪ್ಪತ್ತರ ಅಕ್ಕ-ತಮ್ಮ,
ಕೊನೆಗೆ ಹನ್ನೆರಡು ಹತ್ತು ಎಂಟುಗಳು;
ಎಲ್ಲರಲ್ಲೂ ಹೊಸ ಹುರುಪು
‘ಸರಿಯಾಗಿ ತಯಾರಾಗಲು’
ವಿಭಜಿಸಿ ನಿಂತಿದ್ದ ಗುಂಪುಗಳೊಳಗೆ
ಪಿಸುಮಾತು, ಕಿವಿಮಾತು,
ಎದುರಾಳಿಯ ಸೋಲಿಸಲು ಯೋಜನೆಗಳು.
ಪಲ್ಲೆಗಳೇಳು ಗದ್ದೆಯ ನಡುವೆ
ಗೋಪುರ, ಕಾದಿತ್ತು ಚೆಂಡು.
"ಅವರೆಲ್ಲ ಶೂ-ಚಪ್ಲಿ ಹಾಕ್ತಿದ್ದಾರೆ..."
ಪತ್ತೇದಾರಿ ಮಾಡಿದಳು ಏಳರ ಮಗಳು.

ಇನ್ನೇನು ಆಟ ಶುರುವಾಗಬೇಕು,
ಇಪ್ಪತ್ತರ ಒಬ್ಬ ತಕರಾರೆತ್ತಿದ-
"ನೀವು ಹೆಂಗಸರ ಗುಂಪಲ್ಲಿ
ಜಾಸ್ತಿ ಜನ ಇದ್ದೀರಿ, ಸರಿಯಲ್ಲ"
ತಲೆಲೆಕ್ಕವಾಗಿ, ಕೊನೆಗೆ
ನಾವೈದು ಜನ ಹೆಚ್ಚು.
ಇಬ್ಬರು ನಿರ್ಣಾಯಕರಾದರು,
ಇಬ್ಬರು ಕಾಫಿ ಮಾಡಲು ಹೋದರು,
ಒಬ್ಬಳು ತಿಂಗಳ ಬಾಣಂತಿ-
ಆಗಷ್ಟೇ ಗಮನಕ್ಕೆ ಬಂದಳು.
ಗುಂಪುಗಳ ಲೆಕ್ಕ ಸರಿತೂಗಿತು;
ಆಟದ ನಿಯಮ ಸಾರಲಾಯಿತು.

ಆಗಲೇ ನಮ್ಮೊಳಗಿನೊಂದು ದನಿ-
"ನಿನ್ನವನೆಲ್ಲಿ? ಕಾಣ್ತಾ ಇಲ್ಲ?"
ದಿಗಿಲಾಗಿ ಕಣ್ಣುಗಳು ಹುಡುಕಿದವು.
ಹುರುಪು ಸೋರಿತು, ಅಳುಕು
ಮನೆ ಮಾಡಿ ಆಳಲಾರಂಭಿಸಿತು.
ನನ್ನವನಿಗಾಗಿ ಸುತ್ತಲೂ ನೋಡಿದೆ,
ಮನೆಯೊಳಗೆಲ್ಲ ಓಡಿದೆ,
ಈಚೆ ಬಂದಾಗ ಚಾವಡಿಯಲ್ಲಿ
ಗಂಟೆ ಬಾರಿಸಿತು. ಲೆಕ್ಕ ಆರು.
ತಲೆಯೊಳಗೆ ಚಿಕ್ಕ ಹಕ್ಕಿ
ಚಿಲಿಪಿಲಿ, ಸುತ್ತ ನೋಡಿದರೆ-
ಮಬ್ಬುಗತ್ತಲು, ಒಂಟಿತನದರಿವು...
ನೆಲದ ಚಾಪೆಯ ಮೇಲಿಂದ
ವಾಸ್ತವದ ಮುಂಜಾನೆಗೆ ಮುಖ ಮಾಡಿದ್ದೆ.

ನೆನಪುಗಳ ಹಂದರ ಸ್ಪಷ್ಟವಾಯಿತು.
ಕೆಲಸದ ನಿಮಿತ್ತ ದೂರ ಹೋದ
ನಲ್ಲನ ಮುಖ ನಗೆ ಬೀರಿತು.
ಜೊತೆಗೇ ಕಂಡವು ಜವಾಬ್ದಾರಿಗಳ
ಒಂದೊಂದೇ ನೆಲೆಗಳು-
ಆ ಬಿಲ್ಲು, ಈ ಬಿಲ್ಲುಗಳು,
ಬ್ಯಾಂಕು, ಪೋಸ್ಟಾಫೀಸುಗಳು,
ಹಣ್ಣು-ತರಕಾರಿ-ಬ್ರೆಡ್-ಜ್ಯಾಮುಗಳು,
ಮಗ-ಮಗಳ ಶಾಲೆ, ಪರೀಕ್ಷೆಗಳು,
ಮುಗಿಯದ ಮನೆಗೆಲಸಗಳು,
ಬಂದು ಹೋಗುವ ನೆಂಟರಿಷ್ಟರು,
ಇವೆಲ್ಲದರ ಜೊತೆಗೆ ನನ್ನ ಓದು...

ಗದ್ದೆಯಂಗಳದ ನಡುವಿಂದ ಯಾರೋ
"ಏಳು ಕಲ್ಲುಗಳ ಲ...ಗೋ...ರೀ..." ಅಂದರು.
(೧೦-ಮಾರ್ಚ್-೨೦೦೦)