ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Sunday, 29 June, 2008

ನಲ್ನುಡಿ

ಎರಡು ಮಾತು ಹೇಳುವೆನು
ಕೇಳು ಜಾಣ ಮಗು ನೀನು
ಒಳ್ಳೆ ನಡೆ ನುಡಿಯ ಕಲಿ
ಧೀರನಾಗು ಬಾಳಲಿ

ಗುರುಗಳು ಹಿರಿಯರು ನಿನಗೆ
ಕೆಡುಕನು ಬಯಸುವುದಿಲ್ಲ
ಅರಿವಿನ ಮಾರ್ಗವ ತೋರಿ
ವಿಜಯವ ಹರಸುವರೆಲ್ಲ
ಹೇಳಿದ ಮಾತನು ಕೇಳಿ
ನೂರಾರು ಕಾಲ ಬಾಳಿ
ಯಶವೆಂಬ ಏಣಿಯನೇರು

ವಂಚನೆ ಜಗಳ ಕದನ
ಒಳ್ಳೆಯ ಸಂಸ್ಕೃತಿಯಲ್ಲ
ಸಂಚು ಸುಲಿಗೆಯ ಮಾಡೋ
ಮನುಜ ಸುಸಂಸ್ಕೃತನಲ್ಲ
ಸತ್ಯವ ಬಿಡದೆ ಎಲ್ಲೆಲ್ಲೂ
ಹಿಂಸೆಯ ಎದುರಿಸಿ ನಿಲ್ಲು
ಆದರ್ಶ ಮಾನವನಾಗು

"ದೂರದ ಬೆಟ್ಟವು ಹಸಿರು"
ಗಾದೆಯ ಮಾತಿದು ಕೇಳು
ಸರಿದು ಸನಿಹದೆ ನೋಡು
ತಿಳಿವುದು ಒಳಗಿನ ಪೊಳ್ಳು
ಬಣ್ಣದ ಮೆರುಗಿಗೆ ಸೋತು
ನಿನ್ನತನವನೇ ಮರೆತು
ಸುಳಿಯಲ್ಲಿ ಸಿಲುಕದೆ ಬಾಳು
(ಎಪ್ರಿಲ್-೧೯೯೫)

Sunday, 22 June, 2008

ಅಮರಗಂಧ

(ಗುರುರಾಜ ಮಾರ್ಪಳ್ಳಿಯವರ ಸಂಗೀತ ನಿರ್ದೇಶನದ "ಹೇಳು ಮನಸೇ" ಧ್ವನಿಮುದ್ರಿಕೆಯಲ್ಲಿದೆ.
ಹಾಡಿದವರು: ಶ್ರೀಮತಿ ಸಂಗೀತಾ ಬಾಲಚಂದ್ರ, ಉಡುಪಿ.)


ಹವಳದ ತುದಿಯಲಿ ಅರಳುವ ಮುತ್ತು
ಹರಡುವ ಕಂಪು ಮುಸ್ಸಂಜೆಗೆ ಗೊತ್ತು
ಹಸುರಿನ ತೆರೆಯಲಿ ಮಿಂಚುವ ಮಾಯೆ
ಹೊತ್ತಾರೆ ನೋಡಲು ಬೆಳ್ಳನೆ ಛಾಯೆ

ಕಡಲಿನಾಳದ ಚಿಪ್ಪು ಒಡೆದಿಲ್ಲಿ ಬಂತೆ?
ಬರುವಾಗ ಹವಳವನು ಸೆಳೆತಂದಿತಂತೆ!
ದೇವಲೋಕದ ಗಂಧ ಚಂದನವ ಪೂಸಿ
ನಮಗಾಗಿ ಅರಳುತಿವೆ ಸೌಂದರ್ಯ ಸೂಸಿ

ಒಂದೊಂದು ತಾರೆಯೂ ಅಲ್ಲಿಂದ ಕಳಚಿ
ಇಳಿವಾಗ ಹದವಾದ ಹಾಲಂತೆ ಬಿಳಿಚಿ
ತುದಿಯಲ್ಲಿ ನೆಪಮಾತ್ರಕೊಂದು ಕಿಡಿ ಕೆಂಡ
ಮುಡಿದುಕೊಂಡರೆ ಮಾತ್ರ ಕ್ಷಣದಲ್ಲಿ ದಂಡ

ಇಂಥ ನಾಜೂಕು ಚೆಲುವ ಅಮರಾವತಿ ಹೂವು,
ಇಲ್ಲೆಲ್ಲಿ ಹುಡುಕಲಿ, ಪರದೇಶಿಗಳು ನಾವು
ಆ ಕಂಪು, ಆ ಅಂದ, ಗಂಟೆಗಳ ಆಯುಸ್ಸು
ಕಳೆದುಹೋಗಿದೆ ಈಗ; ಅಂತೆ ಬಾಲ್ಯ ವಯಸ್ಸು

ನಿನ್ನ ಮುತ್ತುಗಳನ್ನು ಆಯುತ್ತಿದ್ದ ಕೈಗಳು
ಪೋಣಿಸಿ ಮಾಲೆಮಾಡಿ ಏರಿಸಿಕೊಂಡ ಹೆರಳು
ದೇವ ಪೂಜೆಗೆ ನಿನ್ನ ತುಂಬಿಟ್ಟ ಹರಿವಾಣ
ಪಾರಿಜಾತ, ನೀನಿಲ್ಲದೂರಲ್ಲಿ ಇವೆಲ್ಲ ಭಣಭಣ
(೧೦-ಜುಲೈ-೧೯೯೮)

Sunday, 15 June, 2008

ಖಾಲಿ ಗೂಡಿನ ಹಕ್ಕಿಗಳು

ಜೊತೆಗೊಂದು ಸಂಗಾತಿ ಬೇಕೆಂದು
ಸ್ವರಕ್ಕೆ ಸ್ವರ ಕೂಡಿಸಿ,
ಹಾಡಿ ನಲಿದು ನರ್ತಿಸಿ,
ಗೂಡು ಕಟ್ಟಿ, ಒಲಿಸಿ,
ಮನದೊಳಗೆ ಬಂದ ಮನದನ್ನೆ-
ಇಟ್ಟೆರಡು ಮೊಟ್ಟೆಗಳಿಗೆ ಕಾವಿರಿಸಿ,
ಮಮತೆಯ ಪಾನ ಊಡಿ, ನೋಡಿ,
ಸರದಿಯಲ್ಲಿ ಪುಟ್ಟ ಚುಂಚಗಳಿಗೆ
ಗುಟುಕಿರಿಸಿ, ನೀರುಣಿಸಿ,
ಕಾದಿಟ್ಟ ಚಿಲಿಪಿಲಿಗಳು...
ಕಣ್ಣ ಮುಂದೆ ಬೆಳೆದು, ಬಲಿತು,
ಬಣ್ಣ ರೆಕ್ಕೆ ತುಂಬಿ, ನಲಿದು,
ಬಿದ್ದು-ಎದ್ದು ಹಾರಲು ಕಲಿತು;
ಒಂದು ಮುಂಜಾನೆ...
ಚುಂಚಗಳಿಗೆ ತುತ್ತು ತಂದ ಘಳಿಗೆ
ಮರಳಿದ್ದೆವು ಖಾಲಿ ಗೂಡಿಗೆ.

ಕೂಗಿ ಕರೆದು, ಅಲೆದು ಸಾಕಾಗಿ, ಹುಡುಕಿ ಸುಸ್ತಾಗಿ,
ಎಲ್ಲೋ ಮರದೆಡೆಯಲ್ಲಿ ಮೈಮರೆತಾಗ
ಕಂಡೆವು ಮಗ ರಮಿಸಲೆತ್ನಿಸುತ್ತಿದ್ದ
ಆ ಸುಂದರಿಯನ್ನು.
ಹಾಗೇ ಮಗಳೂ ಅಲ್ಲೆಲ್ಲೋ ಬಿಂಕವಾಡಿ
ಮತ್ತಾರದೋ ಮನ ಸೆಳೆಯುವುದನ್ನು.

ಒಂದು ಗೂಡಿನ ದೀಪಗಳೆರಡು
ಮತ್ತೆರಡು ಹಣತೆಗಳ ಹಚ್ಚುವುದ ಕಂಡು
ಅದಮ್ಯ ತೃಪ್ತಿಯುಂಡು
ಜೊತೆಜೊತೆಯಾಗಿ ಹಾರಿ ಬಂದು
ಗೂಡು ಸೇರಿದೆವು.

ಖಾಲಿಯೆಂದೆನಿಸಿದ್ದ ಈ ಗುಡಿ
ತುಂಬಿ ಬಂದಂತಾಗಿ, ಉಕ್ಕಿದ ಧನ್ಯತೆಯಲಿ
ಮನಸು ಮೇಲೇರಿತ್ತು.
ಕಾಯವಳಿದ ಮಾಯೆ ದೇಹವುಳಿದು
ಛಾಯೆಯಾಗಿ ಆವಿಯಾಯಿತು.
(೧೫-ನವೆಂಬರ್-೨೦೦೧)

(ಆರೂವರೆ ವರ್ಷಗಳ ಹಿಂದೆ ಸ್ನೇಹಿತರೊಬ್ಬರ ಇಬ್ಬರು ಮಕ್ಕಳೂ ಕಾಲೇಜ್ ಅಧ್ಯಯನಕ್ಕೆಂದು ಮನೆಯಿಂದ ಹೊರಬಿದ್ದಾಗ, ಈ ದೇಶದಲ್ಲಿ ಚಾಲ್ತಿಯಲ್ಲಿರುವ ಪದಪುಂಜ- Empty Nest Symdrome- ನನ್ನ ಅರಿವಿಗೆ ಬಂತು. ಅದರ ಚಿಂತನೆಯಲ್ಲಿ ಹೊಮ್ಮಿದ ಲಹರಿ. ಈಗ, ಈ ವರ್ಷ ತಮ್ಮ ಮಕ್ಕಳ ಗ್ರಾಜುಯೇಷನ್ ಗದ್ದಲದಲ್ಲಿರುವ ನನ್ನ ಗೆಳೆಯ-ಗೆಳತಿಯರಿಗಾಗಿ...)

Sunday, 8 June, 2008

ಸಂವಾದ

("ಭಾವಮಾಲಿಕಾ" ಧ್ವನಿಸುರುಳಿಗಾಗಿ, ಮನೋಮೂರ್ತಿಯವರ ಸಂಗೀತಕ್ಕೆ ಹೊಂದಿಸಿ ಬರೆದದ್ದು)

ಮಗು: ಹೊರಗೆ ಆಡ ಹೋಗುವೆನು,
ತಂದೆ: ಪಾಠ ಓದಿ ಆಯ್ತೇನು?
ಮಗು: ನಾಳೆ ನಮಗೆ ರಜೆಯಂತೆ,
ತಂದೆ: ಓದು ಬರಹ ಮೊದಲಂತೆ.

ಮಗು: ಗೆಳತಿಯರೆಲ್ಲರ ಜೊತೆಗೆ ನಾನೂ ಆಡಲೇ ಬೇಕು,
ತಂದೆ: ಇಳಿದಿದೆ ಮಾರ್ಕಿನ ಸಂಖ್ಯೆ, ಆಡಿದ್ದೆಲ್ಲವೂ ಸಾಕು;
ಪಾಠದ ಪುಸ್ತಕ ತೆರೆದು ಪ್ರಶ್ನೆಗೆ ಉತ್ತರ ಬರೆದು
ಕಲಿಯಮ್ಮ ನೀ ಸರಿಯಾಗಿ.... ....ಹೊರಗೆ ಆಡ ಹೋಗುವೆನು....

ಮಗು: ಸುಮ್ಮನೆ ಓದಿದ ವಿಷಯ ನೆನಪೇ ಉಳಿಯುವುದಿಲ್ಲ
ತಂದೆ: ಒಮ್ಮೆಲೇ ಬಾನಿಗೆ ಏಣಿ ಇಡುವುದು ತರವಲ್ಲ;
ಶ್ರವಣ-ಪಠಣ-ಮನನ ಕಲಿಕೆಯ ಹಂತಗಳಮ್ಮ
ನಿಜವಾದ ಸಾಧನೆ ಹಾದಿ.... ....ಹೊರಗೆ ಆಡ ಹೋಗುವೆನು....

ಮಗು: ಪಾಠದ ಹಾಗೇ ಆಟ ಬೆಳವಣಿಗೆಯ ಒಂದಂಶ
ತಂದೆ: ಆಟ ಪಾಠದ ಸಮರಸ ವಿಜಯದ ಸಾರಾಂಶ.
ಇಬ್ಬರೂ: ಒಂದರ ಜೊತೆಗಿನ್ನೊಂದು ಚೆನ್ನಾಗಿ ಹೊಂದಿಸಿಕೊಂಡು
ಗೆಲ್ಲೋದೇ ಬಾಳಿನ ಆಟ....

ಇಬ್ಬರೂ: ತಾಯಿ ತಂದೆ ಪ್ರಥಮ ಗುರು, ಜೀವನವೇ ಪರಮ ಗುರು
ನೋಡಿ ತಿಳಿ ಮಾಡಿ ಕಲಿ, ಅನುಭವ ಸ್ಥಿರ ಬಾಳಲಿ.

Sunday, 1 June, 2008

ಹುಡುಗೀ... ನಗು

(ಗುರುರಾಜ ಮಾರ್ಪಳ್ಳಿಯವರ ಸಂಗೀತ ನಿರ್ದೇಶನದ "ಹೇಳು ಮನಸೇ" ಧ್ವನಿಮುದ್ರಿಕೆಯಲ್ಲಿದೆ.
ಹಾಡಿದವರು: ಶ್ರೀ ಚಂದ್ರಶೇಖರ ಕೆದಿಲಾಯ)


ಒಮ್ಮೆ ನಗು ನನ್ನ ಹುಡುಗಿ, ಮೆಲ್ಲ ನಗು
ಬಡಿವಾರವ ಬದಿಗಿಟ್ಟು ಬಣ್ಣವೊಸರುವಂದದೊಮ್ಮೆ
ಮೋಡದಂಚ ಮಿಂಚಿನಂತೆ ಛಕ್ಕನೆಂದು ಚಿಕ್ಕ ನಗು.

ಕಣ್ಣಿನಂಚ ಮಣಿಯು ಕರಗಿ ಬಿಂದುವಲ್ಲಿ ಭಾವದುಂಬಿ
ನಿಶೆಯ ನಶೆ ಜಾರದಂತೆ ಉಷೆಯ ನಶೆ ತಿಳಿಯದಂತೆ
ಕೆನ್ನೆಗಲ್ಲ ಒಂದು ಮಾಡಿ, ಅಲ್ಲೆನಗೆ ಜಾಗ ನೀಡಿ, ಮುಗುಳು ನಗು.

ಕಣ್ಣ ಕೊನೆಯ ಸಂಚಿನಂತೆ, ರಾತ್ರೆ ಹೊಳೆವ ಚುಕ್ಕಿಯಂತೆ
ಚಿಕ್ಕದಾಗಿ ಚೊಕ್ಕವಾಗಿ ಮಲ್ಲೆಮಾಲೆ ಅರಳುವಂತೆ
ಕಹಿಯ ತೊಳೆದು ಹೊಳೆಯುವಂತೆ, ಸಿಹಿಯಾಗಿ ನಲ್ಲೆ ನಗು

ಅರಗಿಳಿಯ ಮಾತಿನಂತೆ, ಕಂದಮ್ಮನ ಕೇಕೆಯಂತೆ
ಕಿಲಕಿಲನೆ ಕಲರವಿಸಿ ಗಲಗಲನೆ ಪ್ರತಿಧ್ವನಿಸುವಂತೆ
ಬೇಸರೆಲ್ಲ ಹಾರುವಂತೆ, ನಾವಿಬ್ಬರು ಸೇರುವಂತೆ, ಚೆನ್ನಾಗಿ ಚಿನ್ನ ನಗು.

ಬಾಗಿಲಂಚಿನಿಂದ ಬೆಳೆದು ಮಲ್ಲಿಗೆಯು ಹಬ್ಬುವಂತೆ
ನಕ್ಕುಬಿಡೇ ಬಡನಡುವಿನ ನನ್ನ ಬೆಡಗೀ ಕಿರುನಗು
ಬಾಡಿಗೆಯ ನೀಡುವೆನಿದೋ, ಬಿನ್ನಾಣದ ಕನ್ನೇ, ನಗು... ನಗು.
(ಮಾರ್ಚ್-೧೯೮೬)