ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday 22 November, 2010

ಸುಮ್ಮನೆ ನೋಡಿದಾಗ...೦೪

ಈ ಬೆಳಗು ನನಗೆ ಎಂದಿನಂತಿಲ್ಲ. ನನ್ನ ಉತ್ಸಾಹಕ್ಕೆ ಕಾರಣ ಹುಡುಕಬೇಕಿರಲಿಲ್ಲ. ಅಮ್ಮನ ವಕ್ರನೋಟ ನನ್ನನ್ನು ತಾಗಲೇ ಇಲ್ಲ. ಕಾಲೇಜಿನ ಕಡೆಗೆ ಕುಣಿಹೆಜ್ಜೆ ಹಾಕಿದೆ. ಪಾದದ ಸುತ್ತ ಇಲ್ಲದ ಗೆಜ್ಜೆಸದ್ದು ಎದೆಯಲ್ಲಿ. ಕಥೆಯ ಹಸ್ತಪ್ರತಿ ಕೈಯಲ್ಲಿ- ಸಸ್ಯಶಾಸ್ತ್ರದ ರೆಕಾರ್ಡ್ ಪುಸ್ತಕದೊಳಗೆ ಅಡಗಿದ್ದ ಹಾಳೆಗಳನ್ನು ಬೇರಾರಿಗೂ ತಿಳಿಯದಂತೆ ನೇಹಾಳ ಕೈಗೆ ಹೇಗೆ ರವಾನಿಸುವುದೆನ್ನುವ ಯೋಜನೆ ಹಾಕುವಷ್ಟರಲ್ಲಿ ಕಾಲೇಜಿನ ಮೆಟ್ಟಲೇರಿದೆ.

ಬೆಳಗಿನ ತರಗತಿಗಳಲ್ಲಿ ನನ್ನ ಗಮನವಿಲ್ಲ. ಜೀವಶಾಸ್ತ್ರದ ಅಧ್ಯಾಪಕರು ಸಮಯ ಮೀರಿ ಪಾಠ ಮಾಡುತ್ತಿದ್ದುದು ವಾಚಿನ ಮೇಲೆ ಸುಮ್ಮನೇ ಬೆರಳಾಡಿಸುತ್ತಿದ್ದ ನನ್ನ ಅರಿವಿಗೆ ಬರಲೇ ಇಲ್ಲ. ನಮ್ಮನ್ನೆಲ್ಲ ತೀಕ್ಷ್ಣವಾಗಿ ನೋಡುತ್ತಾ ಪಾಠ ಮಾಡುವ ಅವರಿಗೆ ಮಾತ್ರ ನನ್ನ ಬೆರಳುಗಳಾಟ ಕಿರಿಕಿರಿಯಾಗಿ, ‘ಹ್ಮ್, ಐ ನೋ! ಐ ನೋ ಮೈ ಟೈಮ್. ಲೆಟ್ ಮಿ ಫ಼ಿನಿಷ್ ದಿಸ್ ಕಾನ್ಸೆಪ್ಟ್ ಮೇಡಮ್!’ ಅಂದರು ಗಂಭೀರವಾಗಿಯೇ. ನನ್ನ ಅದೃಷ್ಟಕ್ಕೆ ಅವರು ಯಾರಿಗಾಗಿ ಈ ಮಾತು ಹೇಳಿದರೆನ್ನುವುದು ಯಾರಿಗೂ ಗೊತ್ತಾಗಲೇ ಇಲ್ಲ. ನನ್ನೊಳಗು ಎಚ್ಚತ್ತುಕೊಂಡಿತು, ಅಷ್ಟೇ.

ಊಟದ ಸಮಯ ಕಥೆ ಬರೆದ ವಿಷಯವನ್ನು ನೇಹಾಳಿಗೆ ಸೂಕ್ಷ್ಮವಾಗಿ ತಿಳಿಸಿದೆ. ಸ್ಫೂರ್ತಿಯಾದ ಸಂದರ್ಭ ಮಾತ್ರ ಸದ್ಯಕ್ಕೆ ನನ್ನಲ್ಲೇ ಇರಲಿ ಅಂದುಕೊಂಡೆ. ಅಪರಾಹ್ನದ ಮೊದಲ ತರಗತಿ ಇರಲಿಲ್ಲವಾದ್ದರಿಂದ ಮೈದಾನದ ಮೂಲೆಯ ಮರದ ನೆರಳಿಗೆ ಸಾಗಿದೆವು. ಕಥೆಯೊಳಗೆ ಇಳಿದುಹೋದವು ಎರಡು ಜೊತೆ ಕಣ್ಣುಗಳು. ಓದಿ ಮುಗಿಸಿದ ನೇಹಾ ಕೆಲವೊಂದು ಸಲಹೆಗಳನ್ನೂ ನೀಡಿದಳು. ಮುಖ್ಯವಾಗಿ ಇದನ್ನು ರಮ್ಯಗಾನದತ್ತ ವಾಲಿಸಬೇಕೆನ್ನುವ ಕೋರಿಕೆಯನ್ನಿತ್ತಳು. ಈಗಿರುವಂತೆ ಸರಳ ನೇರ ಅಣ್ಣ-ತಂಗಿಯ ಸುತ್ತ ಸಾಗುವ ನಿರೂಪಣೆ ನಮ್ಮ ಕಾಲೇಜ್ ವಾರ್ಷಿಕ ಸಂಚಿಕೆಯ ಓದುಗರಿಗೆ ಬೇಕಾಗಿಲ್ಲವೆಂದೂ ರೊಮ್ಯಾಂಟಿಕ್ ಕಥೆಯೇ ಈ ವಯೋಮಾನದ ಉದ್ಯಾನವೆಂದೂ ಬುದ್ಧಿ ಹೇಳಿದಳು. ನಾಜೂಕಾಗಿಯೇ ನಾನೊಬ್ಬ ಮೊದ್ದು ಎಂದಳು. ಇಬ್ಬರೂ ನಕ್ಕೂ ನಕ್ಕೂ ಕಣ್ಣಲ್ಲಿ ನೀರಿಳಿಸಿಕೊಂಡೆವು. ಸಂಜೆಯ ಕ್ಲಾಸುಗಳನ್ನು ಮುಗಿಸಿಕೊಂಡು ಮನೆಗೆ ಬರುತ್ತಾ ಮತ್ತೊಂದಷ್ಟು ಚರ್ಚೆಗಳಾದವು. ಕೊನೆಗೂ ಅವಳಿಗಾಗಿ ಈ ಕಥೆಯನ್ನು ತಿದ್ದಿ ಬರೆಯುವುದಕ್ಕೆ ಒಪ್ಪಿಕೊಂಡು ಮನೆ ಸೇರಿಕೊಂಡೆ.

ಅಮ್ಮನ ಮೂಡ್ ಮತ್ತೆ ಕೆಟ್ಟಿತ್ತು. ನನಗದರ ಬಿಸಿ ತಟ್ಟದಷ್ಟು ನನ್ನ ಹೃದಯ-ಮನಸ್ಸು ಕಥೆಯ ಹೊಸ ಹಂದರದೊಳಗೆ ಹುದುಗಿಹೋಗಿದ್ದವು.