ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Saturday 28 November, 2009

ಪುಟ್ಟ ಹಕ್ಕಿ, ಬಾ...

ಪುಟ್ಟ ಹಕ್ಕಿ, ಪುಟ್ಟ ಹಕ್ಕಿ, ಎತ್ತ ಹಾರುತಿರುವೆ?
ಅತ್ತ ಇತ್ತ ನೋಡಿಕೊಂಡು, ಮತ್ತೆ ಓಡುತಿರುವೆ?

ಗಾಳಿ ಬೀಸಿ, ಧೂಳು ಹಾಸಿ, ಕೆಮ್ಮುತಿರುವೆ, ಬಾ
ಸಿಹಿಯ ನೀರ ಬೊಗಸೆಯಲ್ಲಿ ಹಿಡಿವೆ ನಿನಗೆ, ಬಾ

ಮಳೆಯು ಬಂತು, ಛಳಿಯು ಉಂಟು, ನನ್ನ ಜೊತೆಗೆ ಬಾ
ಅಮ್ಮ ಹೊಲಿದ ಗಾದಿಯೊಳಗೆ ಬೆಚ್ಚಗಿಡುವೆ, ಬಾ

ಕಾಳು ಸಿಗದೆ, ಶಕ್ತಿ ಇರದೆ, ಬಿಕ್ಕುತಿರುವೆ, ಬಾ
ಅಪ್ಪ ತಂದ ತಿಂಡಿಯನ್ನು ಹಂಚಿ ಕೊಡುವೆ, ಬಾ

ಕತ್ತಲಾಯ್ತು, ದೀಪ ಹೋಯ್ತು, ಇಲ್ಲೆ ನಿಲ್ಲು, ಬಾ
ಅಣ್ಣ ಕೊಟ್ಟ ಗರಿಯ ಮರಿಯ ನಿನಗೆ ಮುಡಿವೆ, ಬಾ

ಬೆಳಗು ಬರಲಿ, ರವಿಯು ನಗಲಿ, ಹೊರಗೆ ಲೋಕದಲ್ಲಿ
ಅಲ್ಲಿತನಕ ಜೊತೆಯಲಿರುವ, ನನ್ನ ಕೋಣೆಯಲ್ಲಿ.
(೨೭-ನವೆಂಬರ್-೨೦೦೭)

Saturday 21 November, 2009

ಬಳ್ಳಿ ಗೆಜ್ಜೆ

ಮುಂದಲಿಗೆಯ ಅಂಚಿನಲ್ಲಿ
ಒಂದು ಚಿಲುಮೆ ಹೊರಳು
ನೆಳಲು ಬೆಳಕಿನಾಟದಲ್ಲಿ
ನಿನ್ನ ಘಲಿಲು ಘಲಿಲು

ಇಟ್ಟ ಹೆಜ್ಜೆ ಜಾಡಿನಲ್ಲಿ
ಬಳ್ಳಿ ನಡೆಯ ಕುರುಹು
ಸುತ್ತ ಸರಿವ ನಾಡಿಯಲ್ಲಿ
ಜೀವಸೆಲೆಯ ಹೊಳಹು

ಎತ್ತಲಿರುವ ಭಾರದರಿವು
ಇರದ ಪುಟ್ಟ ಮುಕುಟ
ಎದ್ದುನಿಂತ ಧೀರನಂತೆ
ಬೆಣ್ಣೆ ಮುದ್ದೆ ಬೆಟ್ಟ

ಘಲ್ಲು ಗುಲ್ಲು ಮನೆಯಲೆಲ್ಲ
ತುಂಬಿಸಿರುವ ನಡಿಗೆ
ಈಗ ಮೌನದಾಟವಲ್ಲ
ನೋಟ ಬೇಕು ಅಡಿಗೆ

ಕಾಣದೊಂದು ಕೋಣೆಯಲ್ಲಿ
ಎಳೆಯ ಬಿಸಿಲ ಕೋಲು
ಬೆಳಗುತಿರಲಿ ಬಾಳಿನಲ್ಲಿ
ಎಡವದಿರಲು ಕಾಲು

(ಚಿತ್ರ-ಕವನ ಬ್ಲಾಗಿನಲ್ಲಿ ಚಿತ್ರವೊಂದಕ್ಕೆ ಬರೆದದ್ದು)
(೨೬-ಫೆಬ್ರವರಿ-೨೦೦೮)

Saturday 14 November, 2009

ಬರಲೇ ನಾ...

ನಿನ್ನ ಸೋಗೆಯನೆತ್ತಲು
ಹಿಂದೆ ಮುಂದೆ ಸುತ್ತಲು
ಬರಲೇ ನಾ ನವಿಲೆ?

ನಿನ್ನ ರಾಗವ ಕಲಿಯಲು
ಮೆಚ್ಚಿ ತಾಳವ ತಟ್ಟಲು
ಬರಲೇ ನಾ ಕೋಗಿಲೆ?

ನಿನ್ನ ಜೊತೆಯಲಿ ನಲಿಯಲು
ಮರವ ಏರುತ ಆಡಲು
ಬರಲೇ ನಾ ಅಳಿಲೆ?

ನಿನ್ನ ದಳಗಳ ಅಪ್ಪಲು,
ಮೆಲ್ಲ ಕಣ್ಣಿಗೆ ಒತ್ತಲು
ಬರಲೇ ನಾ ಕಮಲೆ?

ನಿನ್ನ ಮಡಿಲಲಿ ಅರಳಲು
ಸುತ್ತ ನೋಟವ ಹರಡಲು
ಬರಲೇ ನಾ ಬಯಲೆ?

ನಿನ್ನ ಬಣ್ಣವ ಬೆರೆಸಲು
ನನ್ನ ಅಂಗಳಕಿಳಿಸಲು
ಬರಲೇ ನಾ ಮುಗಿಲೆ?
(೧೭-ಡಿಸೆಂಬರ್-೨೦೦೭)

Saturday 7 November, 2009

ಕವಳ

ಬುದ್ಧಿ ಮಲಗಿದ್ದ ಹೊತ್ತು
ಮನಸಿಗೆಚ್ಚರ
ರಸಪೂರಿ ತೋಟದಲಿ
ಪೂರ್ವಜನ ಅವತಾರ
ಅಲ್ಲಿಂದಿಲ್ಲಿ ಹಾರಿ
ಜಾರಿ, ತೂರಿ
ಎಲ್ಲ ಎಲ್ಲೆಗಳನ್ನು
ಎಗ್ಗಿಲ್ಲದೆ ಮೀರಿ
ಮುನ್ನುಗ್ಗಿ ಜಗ್ಗಿ
ಏರಿಬಂದಿತ್ತು

ಪೂರ್ಣ ತೃಪ್ತಿಯಿಲ್ಲ
ದಣಿವಾದರೂ ತಣಿವಿಲ್ಲ
ತಂಬುಲಕೆ ರಂಗಿಲ್ಲ
ಅದೇ ಮರ ಅದೇ ಹಣ್ಣು

(೦೭-ನವೆಂಬರ್-೨೦೦೮)