ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Saturday 21 November, 2009

ಬಳ್ಳಿ ಗೆಜ್ಜೆ

ಮುಂದಲಿಗೆಯ ಅಂಚಿನಲ್ಲಿ
ಒಂದು ಚಿಲುಮೆ ಹೊರಳು
ನೆಳಲು ಬೆಳಕಿನಾಟದಲ್ಲಿ
ನಿನ್ನ ಘಲಿಲು ಘಲಿಲು

ಇಟ್ಟ ಹೆಜ್ಜೆ ಜಾಡಿನಲ್ಲಿ
ಬಳ್ಳಿ ನಡೆಯ ಕುರುಹು
ಸುತ್ತ ಸರಿವ ನಾಡಿಯಲ್ಲಿ
ಜೀವಸೆಲೆಯ ಹೊಳಹು

ಎತ್ತಲಿರುವ ಭಾರದರಿವು
ಇರದ ಪುಟ್ಟ ಮುಕುಟ
ಎದ್ದುನಿಂತ ಧೀರನಂತೆ
ಬೆಣ್ಣೆ ಮುದ್ದೆ ಬೆಟ್ಟ

ಘಲ್ಲು ಗುಲ್ಲು ಮನೆಯಲೆಲ್ಲ
ತುಂಬಿಸಿರುವ ನಡಿಗೆ
ಈಗ ಮೌನದಾಟವಲ್ಲ
ನೋಟ ಬೇಕು ಅಡಿಗೆ

ಕಾಣದೊಂದು ಕೋಣೆಯಲ್ಲಿ
ಎಳೆಯ ಬಿಸಿಲ ಕೋಲು
ಬೆಳಗುತಿರಲಿ ಬಾಳಿನಲ್ಲಿ
ಎಡವದಿರಲು ಕಾಲು

(ಚಿತ್ರ-ಕವನ ಬ್ಲಾಗಿನಲ್ಲಿ ಚಿತ್ರವೊಂದಕ್ಕೆ ಬರೆದದ್ದು)
(೨೬-ಫೆಬ್ರವರಿ-೨೦೦೮)

3 comments:

sunaath said...

ಮತ್ತೊಂದು ಭಾವನಾಮಯ ಕವನ. ಈ ಕವನಕ್ಕೆ ಕಾರಣವಾದ ಆ ಚಿತ್ರಕ್ಕೆ ನನ್ನ ಧನ್ಯವಾದಗಳು!

ಸೀತಾರಾಮ. ಕೆ. / SITARAM.K said...

ಅಕ್ಷರಗೊಳಡನೆಯ ತಮ್ಮ ಹೊಸಕಾಟ ವಿನೂತನ. -ಬೆಣ್ಣೆ ಮುದ್ದೆ ಬೆಟ್ಟ, ಹೊರಳು, ಮು೦ದಲಿಗೆ, ಭಾರದರಿವು.-ಹೀಗೆ ಸಾಮಾನ್ಯ ಶಬ್ದಗಳನ್ನು ಪ್ರಾಸಕ್ಕೆ ನುರಿಸುವ ತಮ್ಮ ಪರಿ ಅಸಾಮಾನ್ಯ.

ಸುಪ್ತದೀಪ್ತಿ suptadeepti said...

ಸುನಾಥ್ ಕಾಕಾ,
ವಂದನೆಗಳು. ಚಿತ್ರಕವನ ಬ್ಲಾಗಿನಲ್ಲಿನ ಕೆಲವೇ ಕೆಲವು ಚಿತ್ರಗಳಿಗೆ ಕವನ ಬರೆದಿದ್ದೇನೆ, ಅಷ್ಟೇ. ಇತ್ತೀಚೆಗೆ ಅತ್ತ ಸುಳಿದಿಲ್ಲ.

ಸೀತಾರಾಮ್ ಸರ್,
ನಿಮಗೂ ಧನ್ಯವಾದಗಳು. ಹೊಸಕಾಟವಲ್ಲ; ಓದುಗರಿಗೆ ಹೊಸ ಕಾಟ! ಅಲ್ಲವೆ?