ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday, 26 May, 2011

ಪರಾಧೀನ-೦೨

ಯಾವತ್ತಿನ ರೊಟೀನ್ ಮತ್ತೆ ಮುಂದುವರಿಯಿತು. ಬೆಳಗ್ಗೆ ಒಂದು ಸುತ್ತು ಜಾಗಿಂಗ್. ಮನೆಗೆ ಬಂದು ಸ್ನಾನ, ಪ್ರಾರ್ಥನೆ. ತಿಂಡಿ ಮುಗಿಸಿ ಏಳು ಗಂಟೆಯ ಮೊದಲೇ ಹೊಟೇಲಲ್ಲಿ ಹಾಜರ್. ಎಲ್ಲವೂ ಸುಗಮ. ಒಂದಾರು ತಿಂಗಳು ಹೀಗೇ ಕಳೆಯಿತು. ಮಡದಿ ನಾಲ್ಕೂವರೆ ತಿಂಗಳ ಬಸುರಿ. ಖುಷಿ ತನ್ನ ನೆಲೆಯನ್ನು ಇವರಲ್ಲಿಗೇ ಬದಲಾಯಿಸಿಕೊಂಡಿತ್ತು. ಸೊಸೆಯನ್ನು ಮುದ್ದಾಗಿ ನೋಡಿಕೊಳ್ಳಲು ಅಮ್ಮನೇ ಬಂದಿದ್ದರು ಮುಂಬಯಿಗೆ. ಜೊತೆಗೇ ಮಗನಿಗೂ ಉಪಚಾರ ಸಾಂಗವಾಗಿ ಸಾಗುತ್ತಿತ್ತು. ಗಂಡ-ಹೆಂಡತಿ ಇಬ್ಬರೂ ಒಂದಿಷ್ಟು ಉರುಟಾಗುತ್ತಿದ್ದರು. ಜಾಗಿಂಗ್ ಜಾಸ್ತಿ ಮಾಡಬೇಕು, ತೂಕ ಹೆಚ್ಚಾಗುತ್ತಿದೆ ಅಂತ ಅಣ್ಣನ ಜೊತೆ ಮಾತಾಡಿ ರಾತ್ರಿ ಮಲಗುವ ಮುನ್ನ ವಾರ್ತೆಗಳಿಗಾಗಿ ಟಿ.ವಿ. ಹಾಕಿದರು ಜಗನ್. ಅದ್ಯಾರೋ ಕೊಲೆಯಾದ ಸುದ್ದಿ ಬಿತ್ತರವಾಗುತ್ತಿತ್ತು, ಎಲ್ಲ ವಿವರಗಳೊಂದಿಗೆ. ಅದ್ಯಾಕೋ ನೋಡಲಾಗದೆ ಟೆಲೆವಿಷನ್ ಆಫ಼್ ಮಾಡಿ ಮಲಗುವ ಕೋಣೆಗೆ ನಡೆದರು.

ಕೋಣೆಯ ಬಾಗಿಲಲ್ಲಿ ನಿಂತಂತೆಯೇ ಕೋಣೆಯಲ್ಲಿ ಯಾರೋ ಇದ್ದಾರೆನ್ನುವ ಯೋಚನೆ ತಲೆಗೆ ಹೊಕ್ಕಿತು. ಇದ್ದಕ್ಕಿದ್ದಂತೆ ಭಯ ಆವರಿಸಿಕೊಳ್ಳತೊಡಗಿತು. ಆತಂಕ ನೆತ್ತಿ ಮೇಲೆ ಕತ್ತಿ ತೂಗಿತು. ಹೆಜ್ಜೆ ಎತ್ತಿಡಲೂ ಆಗದಂಥ ಗಾಬರಿ ಮುತ್ತಿಕೊಂಡಿತು. ಬಾಗಿಲಲ್ಲೇ ಕುಸಿದುಬಿದ್ದರು. ಎದೆ ಒಂದೇ ಸವನೆ ಬಡಿದುಕೊಳ್ಳತೊಡಗಿತು. ಹಾರ್ಟ್ ಅಟ್ಯಾಕ್ ಆಗುತ್ತಿದೆ ಎಂದೆಣಿಸಿ ವೈದ್ಯರಿಗೆ ಕರೆ ಮಾಡಿದರು ಮಡದಿ. ತುರ್ತು ವಾಹನ ಬಂದು ಅವರನ್ನು ಆಸ್ಪತ್ರೆಗೆ ಕರೆದೊಯ್ದಿತು. ಎಲ್ಲ ತಪಾಸಣೆಗಳು ನೆರವೇರಿದವು. "ನಿಮ್ಮ ಹೃದಯ ಗಟ್ಟಿಯಾಗಿದೆ. ಅದಕ್ಕೇನೂ ಆಗ್ಲಿಲ್ಲ. ನಿಮ್ಮ ಮನಸ್ಸಿಗೇ ಏನೋ ಆಗಿದೆ. ಸುಮ್ಮನೇ ಗಾಬರಿಯಾಗಿದ್ದೀರಿ" ಎಂದ ವೈದ್ಯರು ಸಣ್ಣ ಪ್ರಮಾಣದ ಆತಂಕ ನಿವಾರಣಾ ಔಷಧಿ ಬರೆದುಕೊಟ್ಟರು. ಅದರ ಜೊತೆಗೆ ಮನೆಗೆ ಬಂದ ಜಗನ್‌ಗೆ ಸಣ್ಣ ಹುಳ ತಲೆಕೊರೆಯಲು ಶುರು ಮಾಡಿತು- ತನಗ್ಯಾಕೆ ಇಂಥ ಆತಂಕ/ ಗಾಬರಿ? ಏನಾಗ್ತಿದೆ?

ಇದೇ ಗುಂಗಿನ ಗುಂಗಿಹುಳ ತಲೆಯೊಳಗೆ ಕೊರೆಕೊರೆದು ನೂರಾರು ಹೊಸ ಟ್ರ್ಯಾಕ್ ಮಾಡಿದ್ದರ ಪರಿಣಾಮ- ಸಲೀಸಾಗಿ ಸಾಗುತ್ತಿದ್ದ ಜೀವನದಿ ಯದ್ವಾತದ್ವಾ ಹರಿಯತೊಡಗಿತು. ಮತ್ತೆ ಜ್ಯೋತಿಷಿಗಳ ಮನೆ-ಕಛೇರಿಗಳಿಗೆ ಭೇಟಿಕೊಟ್ಟರು ಮನೆಯ ಹಿರಿಯರು. ಅವರು ತಿಳಿಸಿದ ಶಾಂತಿಹೋಮಗಳನ್ನು, ಹೇಳಿದಂತೆಯೇ ಹೇಳಿದಲ್ಲಿಯೇ ಮಾಡಿಸಿದರು. ಸದಾ ಮುಂಬಯಿ ಹೊಟೇಲಿಗೇ ರಜೆ ಹಾಕಿ ಬರುವಂತಿರಲಿಲ್ಲ. ಪದೇ ಪದೇ ಊರಿಗೆ ಬರುವಾಗ ಹೊಟೇಲ್ ನೋಡಿಕೊಳ್ಳಲು ಅನಾನುಕೂಲವಾಗುತ್ತಿತ್ತು. ಆಗೆಲ್ಲ ಸಣ್ಣಣ್ಣ ಊರಿಂದ ಮುಂಬಯಿಗೆ, ಜಗನ್ ಮುಂಬಯಿಯಿಂದ ಊರಿಗೆ. ದೊಡ್ಡಣ್ಣನ ಮೇಲುಸ್ತುವಾರಿಯಲ್ಲಿ ಎಲ್ಲ ಪೂಜೆ-ಪುನಸ್ಕಾರಗಳನ್ನು ನಡೆಸಲಾಗುತ್ತಿತ್ತು. ಅವೆಲ್ಲ ನಡೆಯುವಾಗಲೂ ಏನೋ ಒಂಥರಾ ಗಲಿಬಿಲಿ, ಗೊಂದಲದ ಮನಃಸ್ಥಿತಿಯಲ್ಲಿರುತ್ತಿದ್ದರು ಜಗನ್. ಹೀಗೇ ಊರು-ಮುಂಬಯಿ ಊರು-ಮುಂಬಯಿ ತಿರುಗಾಟಗಳ ನಡುವೆ ಹುಟ್ಟಿದ ಮಗಳಿಗೆ ಎರಡು ವರ್ಷವೂ ದಾಟಿತು. ಜಗನ್ ಜೀವನದಲ್ಲಿ ಅಂಥ ವ್ಯತ್ಯಾಸ ಗೋಚರಿಸಲಿಲ್ಲ. ಕೆಲವೊಮ್ಮೆ ಮನೆಯಿಂದ ಹೊರಗೆ ಹೋಗಲೂ ಭಯವಾಗುವಷ್ಟು ಹಿಂಜರಿಕೆ ಅಳುಕಿನ ಗೋಜಲಿನಲ್ಲಿ ಸಿಲುಕಿರುತ್ತಿದ್ದರು. ಅಂಥದೊಂದು ದುಮ್ಮಾನದ ಸಂಜೆ ಅವರ ಹಳೇ ಗೆಳೆಯ, ಹಿಪ್ನೋಥೆರಪಿಯ ಬಗ್ಗೆ ತಿಳಿಸಿ ಅಲ್ಲಿಂದಲೇ ನನಗೆ ಕರೆ ಮಾಡಿದ್ದರು. ಅಲ್ಲಿಂದ ಹೊಸದೇ ಲೋಕವೊಂದು ತೆರೆದುಕೊಂಡಿತು.

ಸಮ್ಮೋಹನ ಚಿಕಿತ್ಸೆಯ ಒಂದು ಆಯಾಮ ಸುಪ್ತಮನಸ್ಸಿನ ಗಾಯಗಳನ್ನು ಗುಣಪಡಿಸಿ ಒಳಮನಸ್ಸನ್ನು ದೃಢಪಡಿಸುವುದು. ಅದರದೇ ವಿಸ್ತೃತ ರೂಪ ಹಿಂಚಲನೆ ಸಾಧಿಸಿ ಹಳೆಯ ನೆನಪುಗಳನ್ನು ನೋವುಗಳ ಕೊಂಡಿ ಕಳಚಿ ಬರಿಯ ನೆನಪಾಗಿಸಿ ನೋವಿನಿಂದ ಬಿಡುಗಡೆಗೊಳಿಸುವುದು. ಈ ಹಳೆಯ ನೆನಪು ಅನ್ನುವುದು ಇದೇ ಜನ್ಮದ ಅತ್ಯಂತ ಹಿಂದಿನ ನೆನಪಾಗಿರಬಹುದು. ಹಲವು ಸಾಧ್ಯತೆಗಳಲ್ಲಿ ಕಳೆದ ಯಾವುದೋ ಜನ್ಮದ ಗಾಯದ/ನೋವಿನ ನೆನಪೂ ಆಗಿರಬಹುದು. ಗುಣವಾಗುವ ಪ್ರಕ್ರಿಯೆ ಮುಖ್ಯವೇ ಹೊರತು ನೆನಪಿನ ಸ್ಪಷ್ಟೀಕರಣವಲ್ಲ, ಆದ್ದರಿಂದ ತಪಾಸಣೆ ಅಗತ್ಯವಾಗಿರುವುದಿಲ್ಲ. ಇದೊಂದು ಪ್ರಮುಖ ಚೌಕಟ್ಟನ್ನು ಇಟ್ಟುಕೊಂಡು ಜಗನ್ ಅವರನ್ನು ಸಮ್ಮೋಹನ ಚಿಕಿತ್ಸೆಗೆ ಒಳಪಡಿಸಲು ಪರಸ್ಪರ ಒಪ್ಪಂದ ಮಾಡಿಕೊಂಡೆವು.