ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday 21 March, 2011

ಸುಮ್ಮನೆ ನೋಡಿದಾಗ...೧೮

ಸರೋಜ ಆಂಟಿ, ಹರ್ಷಣ್ಣ, ನಳಿನಿ ಆಂಟಿ, ಸುಮುಖ್ ಅಂಕಲ್, ಅಮ್ಮ- ಎಲ್ಲರೂ ನಡುಮನೆಯ ಸೋಫಾದಲ್ಲೇ ಕೂತರು. ರೂಮೊಳಗೆ ಹೋಗುತ್ತಿದ್ದ ನಮ್ಮನ್ನು ಸರೋಜ ಆಂಟಿ ಕರೆದರು, ‘ಇಲ್ಲೇ ಬನ್ನಿ ಹುಡುಗ್ಯರೇ. ನೀವೂ ಇಲ್ಲಿರಿ’.

ಮತ್ತೆ ಅವರೇ ಅಮ್ಮನನ್ನು ನೋಡ್ತಾ, ‘ವಿನ್ಯಾಸ್ ತೀರಿಹೋಗಿದ್ದಾನೆ. ಇವತ್ತಿಗೆ ಮೂರನೇ ದಿನ, ನಿಂಗೆ ಗೊತ್ತಿರಬೇಕಲ್ಲ ಹರಿಣಿ?’
‘ಹೌದಕ್ಕ, ನಂಗೆ ಗೊತ್ತಾಗಿದೆ; ನಿನ್ನೆ ಸಂಜೆ ಗೊತ್ತಾಗಿದೆ.’
‘ಸುಮುಖ ರಾಯರೇ, ನಳಿನಿ, ನಿಮಗೆ ಈ ಸುದ್ದಿ ಗೊತ್ತುಂಟಾ? ಮಕ್ಕಳಿಗೆ ಹೇಳಿದ್ದೀರಾ?’
ಆ ಕ್ಷಣ ನನಗನಿಸಿತು, ಈ ಸುದ್ದಿಯಲ್ಲಿ ಇವರಿಗೇಕೆ ಅಷ್ಟು ಆಸಕ್ತಿ?
ಗೆಳತಿಯರು ಮುಖ ಮುಖ ನೋಡಿಕೊಳ್ತಿದ್ದಾಗ ಸುಮುಖ್ ಅಂಕಲ್ ನಮ್ಮ ಪರವಾಗಿ ಮಾತೆತ್ತಿದರು, ‘ಸರೋಜಕ್ಕ, ನಮಗೆಲ್ಲರಿಗೂ ಈ ವಿಷಯ ಗೊತ್ತುಂಟು. ನಮಗೆ ಇವತ್ತೇ ಗೊತ್ತಾದದ್ದು. ಮಕ್ಕಳಿಗೆ ವಿನ್ಯಾಸ್ ಯಾರೂಂತ ನಿನ್ನೆಯಷ್ಟೇ ಗೊತ್ತಾಗಿದೆ, ಇವತ್ತು ಅವನು ಸತ್ತ ಸುದ್ದಿ ಗೊತ್ತಾಗಿದೆ. ಇದ್ರಲ್ಲಿ ಅವರನ್ನು ಎಳೆದುತರುವ ಅಗತ್ಯ ನಂಗೆ ಕಾಣುದಿಲ್ಲ. ಈಗ ಯಾವ ವಿಷಯ ಮಾತಾಡ್ಲಿಕ್ಕೆ ಬಂದಿದ್ದೀರಿ? ವಿನ್ಯಾಸನ ವಿಷಯ ಆಗಿದ್ರೆ, ಅದ್ರಲ್ಲಿ ನಮಗ್ಯಾರಿಗೂ ಯಾವುದೇ ಆಸಕ್ತಿ ಇಲ್ಲಕ್ಕ, ಕ್ಷಮಿಸಿ.’

ಸರೋಜ ಅಂಟಿಯ ಮುಖ ಸಪ್ಪಗಾಯ್ತು. ಒಂದೇ ಕ್ಷಣ. ಚೇತರಿಸಿಕೊಂಡರು.
‘ನೀವು ಕ್ಷಮಿಸಿ ರಾಯರೇ. ಅವನು ನನ್ನ ಸೋದರ ದಾಯಾದಿಯಿರಬಹುದು. ಆದರೆ ಹೋಗಿಬರುವ ನಂಟಸ್ತಿಕೆ ಅವನೇನೂ ಉಳಿಸಿಕೊಂಡಿರಲಿಲ್ಲ. ಅವನ ವಿಷಯ ಎತ್ತಿ ನಿಮಗೆಲ್ಲ ನೋವು ಕೊಡುವ ಉದ್ದೇಶ ಇಲ್ಲ, ಬಿಡಿ. ಅವನ ಸುದ್ದಿಯೇ ಬೇಡ. ಏನ್ ಹೇಳ್ತಿ ಹರಿಣಿ?’
‘ನಿನ್ನೆ ಇವತ್ತು ನನ್ನ ತಲೆ ಮನಸ್ಸು ಗೋಜಲಾಗಿದ್ದದ್ದು ನಿಜ. ಅವನ ಸಾವನ್ನು ಮಕ್ಕಳಿಗೆ ಹೇಳ್ಬೇಕೋ ಬೇಡ್ವೋ, ಹೇಗೆ ಹೇಳುದು, ಅಂತೆಲ್ಲ ಯೋಚಿಸಿ ತಲೆಕೆಟ್ಟಿತ್ತು ಹೊರತು ಅವನ ಸಾವಿಗಾಗಿ ಅಲ್ಲ. ಯಾವತ್ತು ಅವನು ನನಗೆ ಆಸರೆಯಾಗಿ ನಿಲ್ಲದೆ ಸಂಬಂಧ ಕಡಿದುಕೊಂಡನೋ ಅಲ್ಲಿಗೇ ಅವನ ಋಣ ಹಂಗು ಎರಡೂ ತೀರಿತು ಅಂದುಕೊಂಡಿದ್ದೇನೆ. ಇಷ್ಟಕ್ಕೂ ನಮಗೂ ಅವನಿಗೂ ಯಾವ ಸಂಬಂಧ? ಅವನೇನೂ ನನ್ನನ್ನು ಮದುವೆ ಆಗಿರ್ಲಿಲ್ಲ. ಬಾಂಧವ್ಯ ಇಲ್ಲದಲ್ಲಿ ಯಾವ ಬಂಧನ ಹೇಳಿ ಸರೋಜಕ್ಕ?’ ಯಾವುದೇ ಭಾವನೆಗಳಿಲ್ಲದೆ ತಣ್ಣಗೆ ಅಮ್ಮ ಹೇಳಿದ ಮಾತುಗಳು ನನ್ನ ಬೆನ್ನಹುರಿಯಲ್ಲಿ ಛಳಿ ಹುಟ್ಟಿಸಿದವು. ಅಮ್ಮನಲ್ಲಿ ಇಷ್ಟೂ ನಿರ್ಭಾವುಕತೆ ಸಾಧ್ಯವಾ?

‘ಅಮ್ಮ, ವಿನ್ಯಾಸ್ ಮಾಮನ ಸುದ್ದಿ ಸಾಕು. ಅವನ ಮುಖವನ್ನೇ ನೋಡಿರದವರೇ ಇಲ್ಲಿ ಎಲ್ಲರೂ, ನಿನ್ನನ್ನು ಚಿಕ್ಕತ್ತೆಯನ್ನು ಬಿಟ್ರೆ. ನೀನವನನ್ನು ಕೊನೆಯ ಸಾರಿ ನೋಡಿದ್ದು ನಿನ್ನ ಮದುವೆಯಲ್ಲಿ. ಅಷ್ಟು ಹಿಂದಿನ ಸುದ್ದಿಗಳಿಗೆಲ್ಲ ಈಗ ಮನ್ನಣೆ ಬೇಕಾಗಿಲ್ಲ. ಇಷ್ಟನ್ನೇ ಮಾತಾಡ್ಲಿಕ್ಕೆ ಇಲ್ಲಿ ಬರ್ಬೇಕು ಅಂತ ನೀನು ಹೇಳಿದ್ದಾದ್ರೆ ಮನೆಗೆ ಹೋಗುವಾ. ಸಾಕು ಮಾತು.’ ಹರ್ಷಣ್ಣ ಗಡುಸಾಗಿಯೇ ಹೇಳಿದ.

‘ಇದಷ್ಟೇ ಅಲ್ಲ ಮಾರಾಯ. ನಂಗೆ ಬೇರೆ ಕೆಲ್ಸ ಉಂಟು. ಆದ್ರೆ ಅದಕ್ಕೆ ಈಗ ಸಂದರ್ಭ ಅಲ್ಲ. ನಾಳೆ ಆದಿತ್ಯವಾರ. ನೀವೆಲ್ಲ ಪುರುಸೊತ್ತು ಮಾಡಿಕೊಂಡು ಒಂದೆರಡು ಗಂಟೆ ಹೊತ್ತು ನಮಗಾಗಿ ಕೊಡಬಹುದಾ? ನಿಮ್ಮೆಲ್ಲರ ಹತ್ರ ಮಾತಾಡ್ಲಿಕ್ಕುಂಟು ನಂಗೆ. ಅದನ್ನು ಕೇಳ್ಲಿಕ್ಕೇ ಈ ರಾತ್ರೆಯೇ ಬಂದೆ. ಏನು ರಾಯರೇ? ಪುರುಸೊತ್ತು ಉಂಟಾ ಹೇಗೆ?’

‘ಧಾರಾಳ ಬನ್ನಿ ಸರೋಜಕ್ಕ. ಎಷ್ಟೊತ್ತಿಗೆ ಬರ್ತೀರಿ? ವಿಷ್ಯ ಏನೂಂತ ಕೇಳ್ಬಹುದಾ?’
‘ಸಂಜೆ ನಾಲ್ಕು ಗಂಟೆಗೆ ಬರ್ತೇವೆ. ವಿಷ್ಯ ನಾಳೆಯೇ ಹೇಳ್ತೇನೆ. ಗಡಿಬಿಡಿ ಏನಿಲ್ಲ. ಎಲ್ಲ ನೆಮ್ಮದಿಯಿಂದ ನಿದ್ದೆ ಮಾಡಿ. ನಾವೀಗ ಹೊರಡ್ತೇವೆ. ಗುಡ್ ನೈಟ್ ಎಲ್ರಿಗೂ...’
‘ಎಷ್ಟೋ ಸಮಯದ ನಂತ್ರ ನಮ್ಮನೆಗೆ ಬಂದಿದ್ದೀರಿ. ಹಾಗೇ ಹೋಗುವ ಹಾಗಿಲ್ಲ ಸರೋಜಕ್ಕ. ಒಂದ್ಲೋಟ ಹಾಲಾದ್ರೂ ಕುಡೀರಿ. ತರ್ತೇನೆ, ಈಗ ಬಂದೆ...’ ನಳಿನಿ ಆಂಟಿ ಅಡುಗೆಮನೆಗೆ ಓಡಿದರು. ಹಿಂದೆಯೇ ನೇಹಾ, ಅವಳ ಹಿಂದೆ ನಾನು. ಎರಡೇ ನಿಮಿಷಗಳಲ್ಲಿ ಎರಡು ಲೋಟ ನಸುಬೆಚ್ಚಗಿನ ಬಾದಾಮಿ ಹಾಲು ನಡುಮನೆಯಲ್ಲಿ ಅತಿಥಿಗಳ ಕೈಯಲ್ಲಿತ್ತು. ಮತ್ತೆರಡು ನಿಮಿಷಗಳಲ್ಲಿ ಉಳಿದವರ ಕೈಗಳಲ್ಲೂ ಒಂದೊಂದು ಲೋಟ. ಸುಮ್ಮನೇ ಕಾಡುಹರಟೆಯ ಹತ್ತುನಿಮಿಷಗಳನ್ನು ಹಾಲಿನ ನೆಪದಲ್ಲಿ ಕಳೆದು ಸರೋಜಾಂಟಿ ಹರ್ಷಣ್ಣ ಹೊರಟರು, ಮರುದಿನ ಸಂಜೆ ಮತ್ತೆ ಬರುವ ಒಸಗೆಯ ಜೊತೆಗೆ.

‘ನೀವಿಲ್ಲಿಗೆ ಬರುದಲ್ವಾ ಸರೋಜಕ್ಕ. ನಾನು ಇರಬೇಕಾಗಿಲ್ವಲ್ಲ’ ಮೆಲ್ಲ ಅಮ್ಮ ಹೇಳಿದ್ದು ಸರೋಜಕ್ಕನ ಗಮನ ಸೆಳೆಯದೇ ಇರಲಿಲ್ಲ.
‘ನೀನೂ ನಿನ್ನ ಮಗಳೂ ಇರ್ಲೇ ಬೇಕು ಮಾರಾಯ್ತಿ. ತಪ್ಪಿಸ್ಬೇಡಿ. ಈಗ ಹೊರಡ್ತೇವೆ.’ ಅನ್ನುತ್ತಾ ಮೆಟ್ಟಲಿಳಿದು ಅಂಗಳ ದಾಟಿ ಗೇಟ್ ದಾಟಿದರು ಹರ್ಷಣ್ಣನ ಕಣ್ಣುಗಳು ಬಾಗಿಲಲ್ಲಿ ಕೀಲಿಸಿದ್ದವೇನೋ. ಅರ್ಧ ಹಿನ್ನಡೆ ಹಾಕುತ್ತಿದ್ದವ ತನ್ನಮ್ಮನಿಗೆ ಢಿಕ್ಕಿ ಹೊಡೆದ. ‘ನೋಡಿ ನಡಿ ಮಾರಾಯ’ ಅಂತ ಬೆನ್ನಿಗೊಂದು ಗುದ್ದಿದರು ಆಂಟಿ. ನಗುತ್ತಾ ಅಮ್ಮನ ಹೆಗಲು ಬಳಸಿ ರಸ್ತೆಗಿಳಿದವನನ್ನೇ ಒಂದು ನೋಟ ಹಿಂಬಾಲಿಸಿದ್ದು ಯಾರ ದೃಷ್ಟಿಯಿಂದಲೂ ಮರೆಯಾಗಲಿಲ್ಲ. ನಗುತ್ತಾ ನಗಿಸುತ್ತಾ ನಾವೆಲ್ಲ ಮನೆಯೊಳಗೆ ಸೇರಿಕೊಂಡಾಗ ಆದಿತ್ಯವಾರ ಒಳಗೆ ಹೆಜ್ಜೆಯಿಡಲು ಹೊಸ್ತಿಲಲ್ಲೇ ಕೂತಿತ್ತು. ಅದನ್ನಲ್ಲೇ ಬಾಗಿಲು ಕಾಯಲು ಬಿಟ್ಟು ನಾವೆಲ್ಲ ಮೂರು ಕೋಣೆಗಳೊಳಗೆ ಸೇರಿಕೊಂಡೆವು. ಇನ್ನು ಹದಿನಾರು-ಹದಿನೇಳು ಗಂಟೆಗಳಲ್ಲಿ ಏನಾಗಬಹುದೆನ್ನುವ ಊಹೆಯಿದ್ದರೂ ನಿರೀಕ್ಷೆ ಅದನ್ನೂ ಮೀರಿ ಬೆಳೀತಿತ್ತು.

ನಾಳೆ ಸಂಜೆ ಯಾವಾಗಾದೀತು?