ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Tuesday 20 May, 2008

ಯಮುನೆ ತಟದಿ....

Friday, December 21, 2007

ಬಿದಿರುಗೊಳವೆ ಊದಿ ಅವನು ನಮ್ಮನೆಲ್ಲ ಕರೆಯುತಿಹನು
ಬನ್ನಿ ಎಲ್ಲ, ಯಮುನೆ ತಟದಿ ಅವನ ಜೊತೆಗೆ ಆಡುವಾ

ತಿಂಗಳಮುಖ ತುಂಬಿ ತುಳುಕಿ ನದಿಯ ಹರಿವು ನಗೆಗೆ ಕುಲುಕಿ
ಗಾಳಿಯಲ್ಲಿ ಚಿತ್ತ ಗಿರಕಿ ಹೊಡೆಯೆ ಕೂಡಿ ಹಾಡುವಾ

ಮರಳಿನಲ್ಲಿ ಗೂಡು ಕಟ್ಟಿ ಅವನನಲ್ಲಿ ನಿಲಿಸಿ ಸುತ್ತಿ
ಮರುಳುಮಾಡಿ ಮರುಳರಾಗಿ ಮುರಳಿಯನ್ನು ಕಾಡುವಾ

ಅವನೆ ನಮ್ಮ ಪರಿಧಿ ಎನಲು ಬಂದಿತೊಂದು ಕರೆವ ಕೊರಳು
ಹೊನ್ನ ಬಣ್ಣ ಸೋರುತಿರಲು ಹಟ್ಟಿಯತ್ತ ಸಾಗುವಾ

ಮತ್ತೆ ಗೋವು ಗೊಲ್ಲ ಎಂದು ನಮ್ಮ ನಮ್ಮ ಪಾಡು ಸಂದು
ಮರಳಿ ಮುರಳಿ ಕರೆಗೆ ಬಂದು ಯಮುನೆ ತಟವ ಸೇರುವಾ
(೨೬-ಸೆಪ್ಟೆಂಬರ್-೨೦೦೭)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 2:00 PM
Labels: ,

7 ಪತ್ರೋತ್ತರ:
Parisarapremi said...
ಅದ್ಭುತ ಚಿತ್ರಣ!!
December 22, 2007 1:21 AM

Anonymous said...
ಮರಳಿ ಮುರಳಿ ಕರೆಗೆ ಕಾಯುತ್ತಾ....
December 22, 2007 12:09 PM

suptadeepti said...
ಪರಿಸರ ಪ್ರೇಮಿಗೂ ಅನಾಮಿಕರಿಗೂ ಧನ್ಯವಾದಗಳು. ಹೀಗೇ ಬರುತ್ತಿರಿ; ಏನೇನು ಸಿಗುತ್ತೋ, ಅದು ನಿಮ್ಮ ಅದೃಷ್ಟ.
December 22, 2007 11:57 PM

December Stud said...
ಗೋಪಿಕೆಯರಿಗೆ ಬರೆಯೋದಕ್ಕೆ ಎಷ್ಟೋಂದು ಸಾಮಗ್ರಿ ಸಿಗತ್ತೆ :)
ಕವಿತೆ ಸುಲಲಿತವಾಗಿದೆ.....ಅವರೆಲ್ಲ ಗುನುಗುತ್ತಿರುವಂತೆಯೇ ಇದೆ.
December 26, 2007 5:55 PM

suptadeepti said...
D.S. ಧನ್ಯವಾದಗಳು.
ಗೋಪಿಕೆಯರಿಗೆ ಮುರಳಿಯ ಕರೆ ಮರೆಯೋದಿಕ್ಕೆ ಸಾಧ್ಯವಾ?
December 27, 2007 12:47 PM

ಹಂಸಾನಂದಿ Hamsanandi said...
ಬಹಳ ಚೆನ್ನಾಗಿದೆ! ಹರಿವಲಹರಿಗೂ, ಯಮುನೆಗೂ ಒಳ್ಳೇ ಜೋಡಿ ಅನ್ನಿಸುತ್ತೆ
-ಹಂಸಾನಂದಿ
December 27, 2007 3:18 PM

suptadeepti said...
ಧನ್ಯವಾದಗಳು ಹಂಸಾನಂದಿ.
December 27, 2007 6:26 PM

ಸಂವಾದಿ

Wednesday, December 19, 2007

ಅತ್ತ ನೋಡಿ ಇತ್ತ ನೋಡಿ
ಕಳ್ಳ ನೋಟ ಮಾಡಿ ಮೋಡಿ
ಲಗ್ಗೆಯಿಟ್ಟು ಮನವ ಕೊಟ್ಟು
ಪೋರನಾಗು ಬಾ!

ಫಕ್ಕನೊಂದು ಮುತ್ತ ಹೆಕ್ಕಿ
ಕತ್ತ ಸುತ್ತ ಹಾರವಿಕ್ಕಿ
ನಗಿಸಿ ನಲಿದು ರಮಿಸಿ ಒಲಿದು
ಮಾರನಾಗು ಬಾ!

ದಶಕಗಳೇ ಕಳೆಯಲಿನ್ನು
ನನಗೆ ನೀನು ನಿನಗೆ ನಾನು
ಜಗದ ಪರಿಯ ಈಸಿ ಗೆಲುವ
ಇನಿಯನಾಗು ಬಾ!

ಸಂದುದೆಲ್ಲ ನಮದೆ ಅಲ್ಲ
ಹೊಂದಿದಲ್ಲಿ ಎಳ್ಳು-ಬೆಲ್ಲ
ಸಾಹಚರ್ಯ ಸವಿಯಲಹುದು
ಗೆಳೆಯನಾಗು ಬಾ!

ಅರಳಿದರಳು ಮಾಗುವಂತೆ
ಫಲದ ಮರವು ಬಾಗುವಂತೆ
ಮರಳಿ ಅರಳಿ ಬೆರೆತು ನಡೆವ
ಪಥಿಕನಾಗು ಬಾ!
(೧೨-ಜುಲೈ-೨೦೦೭)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 2:32 PM
Labels: ,

16 ಪತ್ರೋತ್ತರ:
ಶಾಂತಲಾ ಭಂಡಿ said...
ಸುಪ್ತದೀಪ್ತಿಯವರೆ.....
ಕವಿತೆ ತುಂಬಾ ಚೆನ್ನಾಗಿದೆ.
ಇಲ್ಲಿ ನೀವು ಯಾರನ್ನು "ಬಾ" ಎಂದು ಕರೆದದ್ದು? :)
December 19, 2007 4:13 PM

suptadeepti said...
ಕರೆದವರೆಲ್ಲ ಕರೆದ ಕೂಡಲೇ ಬಂದಿದ್ದಾರೆ....
December 19, 2007 4:26 PM

December Stud said...
LOL @ your response to Shantala...
ಆಹಾ....! ಸಕ್ಕತ್ತಾಗಿದೆ....ಮತ್ತೆ ಪದ್ಯ ಬರ್ಯಕ್ಕೆ ಇನ್ನೊಂದು motivationnuuuu.....
December 19, 2007 4:51 PM

suptadeepti said...
ಧನ್ಯವಾದಗಳು DS. ಬರಲೀ ಮತ್ತೆ ಹೊಸಾ ಕವಿತೆ....
December 19, 2007 4:59 PM

Sritri said...
"ಅರಳಿದರಳು ಮಾಗುವಂತೆ,
ಫಲದ ಮರವು ಬಾಗುವಂತೆ
ಮರಳಿ ಅರಳಿ ಬೆರೆತು ನಡೆವ-"
ಪಥಿಕ ಜೊತೆಗಿರುವ ಬಾಳ ಪಯಣ ನಿಜಕ್ಕೂ ಸುಂದರ!
December 19, 2007 7:43 PM

ಸುಶ್ರುತ ದೊಡ್ಡೇರಿ said...
ಇದು ನನ್ನ ಇವತ್ತಿನ ಸ್ಟೇಟಸ್ ಮೇಸೇಜು!
December 19, 2007 8:33 PM

suptadeepti said...
ಶ್ರೀತ್ರಿ, ಸುಶ್... ಧನ್ಯವಾದಗಳು.
December 19, 2007 8:36 PM

Anonymous said...
ಅದ್ಭುತ!
ಹೇಳಲು ಸಾದ್ಯವಾದದ್ದು ಇಷ್ಟೆ..
December 19, 2007 8:43 PM

ಜಗಲಿ ಭಾಗವತ said...
boMbaaTaagide.
December 19, 2007 8:46 PM

suptadeepti said...
ಅನಾಮಿಕರಿಗೂ ಭಾಗವತರಿಗೂ ಧನ್ಯವಾದಗಳು.
December 19, 2007 8:50 PM

ಶೀಲಾ said...
ದೀಪ್ತಿ, ಎಷ್ಟು ಚೆನ್ನಾಗಿ ಕರೆದ್ರಿ. ಬಂದನೇ ಗೋಪಾಲ? ಖಂಡಿತ ಬಂದಿರಬೇಕು....
ನಾನೂ ಕರೆದಿದ್ದೇನೆನ್ನಿ......ನಿಮ್ಮಷ್ಟು ಚೆನ್ನಾಗಿ ನಾ ಅವನ ಓಲೈಸಲಾರೆ. ಹೇಳುತ್ತಿರಿ ತಾನೆ?
December 19, 2007 10:52 PM

suptadeepti said...
ನಮಸ್ಕಾರ ಶೀಲಾ, ಈ ಪೋರನನ್ನು ಓಲೈಸಿ ಎಲ್ಲರೂ ಸೋತವರೇ! ಆದರೂ ಅವನನ್ನು ಕರೆಯುವ ಚಟ ಮಾತ್ರ ಬಿಡಲಾರೆವು, ಅಲ್ವಾ?
December 19, 2007 11:30 PM

ವಿಕ್ರಮ ಹತ್ವಾರ said...
ನೀವು ಓದಿದಾಗ ಇಷ್ಟವಾಗಿತ್ತು. ನಾನು ಓದಿಕೊಂಡಾಗ ಏನೇನೋ ಆಯಿತು :)
December 20, 2007 7:58 AM

suptadeepti said...
ವಿಕ್ಕಿ- "ನಾನು ಓದಿಕೊಂಡಾಗ ಏನೇನೋ ಆಯಿತು"--"ಕನ್ನಡ ಸರಿಯಾಗಿ ಓದೋದನ್ನ ಕಲಿ" ಅಂತ ಹೇಳಲಾರೆ...ಧನ್ಯವಾದ ಬಿಟ್ಟು ಮತ್ತೇನು ಹೇಳಲೂ ತೋಚುತ್ತಿಲ್ಲ.
December 20, 2007 9:50 AM

ಮನಸ್ವಿನಿ said...
ಸೂಪರ್ :)
December 20, 2007 10:43 PM

suptadeepti said...
ಧನ್ಯವಾದಗಳು ಮನಸ್ವಿನಿ.
December 20, 2007 10:46 PM

ಅಳಿವು - ಉಳಿವು

Tuesday, December 11, 2007

(ಒಂದೂವರೆ ವರ್ಷಗಳ ಹಿಂದೆ ಬರೆದದ್ದು, ಇಂದು ಮತ್ತೆ ಪ್ರಸ್ತುತ ಅನಿಸಿದ್ದರಿಂದ.... ನಿಮ್ಮ ಓದಿಗೆ...)
ಅಳಿವು-ಉಳಿವಿನ ಮಧ್ಯೆ ತೊಳಲಾಡಿಹುದು ಜೀವ-
ಜಗದಂಗಳದ ವ್ಯಗ್ರ ವ್ಯಾಧಿಯಲ್ಲಿ;
ತಿಳಿವಿಗರಿಯದ ಗೂಢ ದಾನವನ ಹಿಡಿಯೊಳಗೆ-
ಮೊಗಬಾಡಿ ಮುದುಡಿಹುದು ಭೀತಿಯಲ್ಲಿ.
**** **** **** ****

ಒಂದು ಪಯಣದ ಆದಿ, ಮುಗಿಯಿತಲ್ಲೊಂದಯನ,
ತುಂಬಿ ತುಳುಕಿರೆ ಮನಸು, ಮಸುಕು ನಯನ;
ಮಬ್ಬಾಗಿರಲು ಬಿಂಬ, ಪ್ರತಿಬಿಂಬ ಪ್ರತಿಫಲನ,
ತಬ್ಬಲಿಯು ನಿನನರಸಿ ಹೊರಟ ಗಮನ.

ಗಾಳಿ ಗೋಪುರದಲ್ಲಿ ನಿನನರ್ಚಿಸಿದೆನೇನು?
ಬಾಳುವೆಯ ಒಡವೆಯನೆ ಏಕೆ ಕಿತ್ತೆ?
`ತಾಳುವಿಕೆಗಿಂತನ್ಯ ತಪವಿಲ್ಲ'ವೆಂದಿರಲು-
ಬಾಳೆಯೆಳೆ ಸುಳಿಯೊಂದನೇಕೆ ಸುಟ್ಟೆ?

ಸರ್ವಾಂತರ್ಯಾಮಿಯೆನೆ, ಸರ್ವಜ್ಞ, ಶ್ರೇಷ್ಠನೆನೆ,
ಅರಿವಿಗರಿಯದ ಕಾರ್ಯವೆಸಗಬಹುದೆ?
ಸರ್ವಲೋಕದ ಶಕ್ತಿ ನೀನೆಂದು ಒಪ್ಪಿರಲು-
ಆಸೆ-ಭರವಸೆಗಳನೆ ಹಿಸುಕಬಹುದೆ?
(೦೮-ಮಾರ್ಚ್-೨೦೦೬)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 11:48 PM
Labels: ,

11 ಪತ್ರೋತ್ತರ:
ಶಾಂತಲಾ ಭಂಡಿ said...
ಕಣ್ಣಹನಿಯೊಂದು ಕಹಿನೆನಪುಗಳ ಅಳಿಸಿಹಾಕಬಾರದೇ ಎನಿಸಿತು. ಕಣ್ಣಹನಿಯೊಂದರೊಳಗೆ ಮಾತುಗಳ ಮುಚ್ಚಿಟ್ಟು ಮೌನಿಯಾಗಬೇಕಿನೆಸಿತು.
December 12, 2007 11:37 AM

December Stud said...
ಅಂದು ಓದಿದಾಗ ಅನುಭವವೇ ಇಂದು ಮತ್ತೆ.....ಈಗೇಕೆ ಪ್ರಸ್ತುತ?
December 12, 2007 3:57 PM

suptadeepti said...
ಮೌನ ತಬ್ಬಿದ ಕ್ಷಣಗಳಲ್ಲಿ ಮಾತುಗಳು ಬರಬೇಕಿಲ್ಲ, ಮೌನವೇ ಎಲ್ಲವನ್ನೂ ತಿಳಿಸುತ್ತದೆ... ಧನ್ಯವಾದ.

ಈಗೇಕೆ ಪ್ರಸ್ತುತ? ಉತ್ತರ ಇಲ್ಲಿ, ಈಗ ಹೇಳಲಾರೆ!! ಧನ್ಯವಾದ, ನಿನಗೂ.
December 12, 2007 8:37 PM

Nempu.Guru said...
"ಕಹಿ-ಸಿಹಿ ನೆನಪು"ಗಳು ಬಾಳಬಂಡಿಗೆ ವೇಗವನ್ನು, ನಿರಂತರ ಚಲನೆಯನ್ನು ಕೊಡುವ "ಟಾನಿಕ್"ನಂತೆ...
December 12, 2007 9:29 PM

suptadeepti said...
ಧನ್ಯವಾದ ಗುರು. ಇದು ಬರಿಯ ನೆನಪಲ್ಲ... ಒಂದು ನೆಪದಲ್ಲಿ ಮತ್ತೆ ಮರುಕಳಿಸಿದ್ದು...
December 12, 2007 9:42 PM

sritri said...
"ಸರ್ವಲೋಕದ ಶಕ್ತಿ ನೀನೆಂದು ಒಪ್ಪಿರಲು-ಆಸೆ-ಭರವಸೆಗಳನೆ ಹಿಸುಕಬಹುದೆ?"- ಉತ್ತರವೂ ಸರ್ವಶಕ್ತಿಗೇ ಗೊತ್ತಿರಬೇಕು!
December 13, 2007 8:13 AM

suptadeepti said...
"- ಉತ್ತರವೂ ಸರ್ವಶಕ್ತಿಗೇ ಗೊತ್ತಿರಬೇಕು!"-- ನಿಜ.
ಆದರೆ ನಮಗೆ, ಈ ಅಲ್ಪಮತಿಗಳಿಗೆ ಗೊತ್ತಾಗುವುದಿಲ್ಲವಲ್ಲ. ಅದಕ್ಕೇ ನಮ್ಮ ಕೊರಗುಗಳು ಮುಗಿಯುವುದೇ ಇಲ್ಲ.
December 13, 2007 11:16 AM

ಹಂಸಾನಂದಿ Hamsanandi said...
ಒಮ್ಮೆ ಉಣ್ಣುವ ಕಹಿ ಅನುಭವಗಳೇ ಸಾಕು ಜೀವನ ಪೂರ್ತಿ ಭಾರವಾಗಿರಲು. ಮತ್ತವು ಮರುಕಳಿಸದಿರಲಿ.
-ಹಂಸಾನಂದಿ
December 14, 2007 4:36 PM

suptadeepti said...
"ಒಮ್ಮೆ ಉಣ್ಣುವ ಕಹಿ ಅನುಭವಗಳೇ ಸಾಕು ಜೀವನ ಪೂರ್ತಿ ಭಾರವಾಗಿರಲು. ಮತ್ತವು ಮರುಕಳಿಸದಿರಲಿ."
--ನಿಮ್ಮ ಮಾತು ಸತ್ಯ, ಆದರೂ ಕೆಲವು ಕ್ಷಣಗಳಲ್ಲಿ ಯಾವುದೋ ನೆಪ ಹೊತ್ತು ನೋವಿನ ನೆನಪು ಮರುಕಳಿಸುವುದು ಸಳ್ಳಲ್ಲ ತಾನೆ?
December 14, 2007 5:00 PM

yaatrika said...
ಸರ್ವಲೋಕದ ಶಕ್ತಿ ನೀನೆಂದು ಒಪ್ಪಿರಲು ಆಸೆ-ಭರವಸೆಗಳನೆ ಹಿಸುಕಬಹುದೆ?
ಸರ್ವಜ್ಞನು ತಿಳಿಯದ್ದೇನು? ಆತ ಆಸೆ ಭರವಸೆಗಳನ್ನು ಹಿಸುಕಿದರೂ, ಕೊನೆಗೆ ಕತ್ತನ್ನೇ ಹಿಚುಕಿದರೂ ಅವನ ಉದ್ದೇಶ ನಮ್ಮ ಏಳಿಗೆಯೇ. ಕರೆದೊಯ್ದ ಜೀವದ ಜವಾಬ್ದಾರಿ ಅವನೇ ಹೊತ್ತಿರಲು ಇರುವವರು ದುಃಖಿಸಿ ಮಾಡುವುದೇನಿದೆ?
ನೋವ ನುಂಗಿ ನಗುವ ಕಲಿವ.
December 17, 2007 7:50 AM

suptadeepti said...
"ಕರೆದೊಯ್ದ ಜೀವದ ಜವಾಬ್ದಾರಿ ಅವನೇ ಹೊತ್ತಿರಲು ಇರುವವರು ದುಃಖಿಸಿ ಮಾಡುವುದೇನಿದೆ?"
--ಮಾಡುವುದೇನಿಲ್ಲ, ಒಪ್ಪಿದೆ. ದುಃಖವನ್ನು ನುಂಗಿ ಬಾಳುವ ಹಾದಿಗೆ ಮೊದಲ ಹೆಜ್ಜೆ ಎತ್ತುವುದು ಕಷ್ಟದ ಕೆಲಸ. ಅಂಥ ಕ್ಲಿಷ್ಟ ಸಂದರ್ಭದಲ್ಲಿ ಬಂದ ಕರೆ ಈ ಕವನ; ಅಷ್ಟೇ.
December 17, 2007 10:22 AM

ಭೂಮಿಶಾಲೆ

Sunday, November 18, 2007

ಭೂಮಿಯೊಂದು ಪುಟ್ಟ ಶಾಲೆ ಮನುಜ ಕುಲದ ಪಾಠಕೆ
ಬರುವೆವಿಲ್ಲಿ ಬಾಳ್ವೆ ನಡೆಸಿ ಕುಣಿದು, ನಲಿದು, ಆಟಕೆ
ಎಲ್ಲ ಶಾಲೆಯಂತೆ ಅಲ್ಲ, ಇದುವೆ ಬೇರೆ ಲೋಕವು
ದಣಿದ ಜೀವಕಿಲ್ಲಿ ನೆರಳು, ಇಲ್ಲ ಬೇರೆ ನಾಕವು

ಕಲಿಕೆಗಂತು ಇಂಥ ಶಾಲೆ ಸಿಗದು ಜೀವಜಾತಗೆ
ತನಗೆ ತಾನೇ ಗುರುವು ಆಗಿ ಕಲಿಯಬಲ್ಲ ಸ್ನಾತಗೆ
ಏನು ಬೇಕು, ಏನು ಬೇಡ, ಎಲ್ಲ ಇರುವ ಶಾಲೆಯು
ಕಲಿಕೆಯಲ್ಲಿ ಗಳಿಕೆಯನ್ನು ಹೊಂದಿಸಿರುವ ಮಾಲೆಯು

ಪಂಚಭೂತ ತತ್ವಕಂಟಿ ಶಾಲೆಗಿಳಿದ ಜೀವವು
ಅನುಭವದಲಿ ಪಾಠ ಪಡೆದು ದಿವ್ಯ ಚೇತ-ಭಾವವು
ಅರಿತರಹುದು ಇಹದ-ಪರದ ಪೂರ್ಣತೆಯ ಲೆಕ್ಕವ
`ಪೂರ್ಣಮಿದಂ' ಲೋಕದೊಳಗೆ `ನಾನು' ಎಷ್ಟು ಚಿಕ್ಕವ
(೨೫-ಅಕ್ಟೋಬರ್-೨೦೦೭)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 9:45 PM
Labels: , ,

14 ಪತ್ರೋತ್ತರ:
ಸಿಂಧು Sindhu said...
ಜ್ಯೋತಿ..
"ಪೂರ್ಣಮಿದಂ ಲೋಕದೊಳಗೆ 'ನಾನು' ಎಷ್ಟು ಚಿಕ್ಕವ"
ಎಂಥ ಅರ್ಥಪೂರ್ಣ ಸಾಲು..!
ಥ್ಯಾಂಕ್ಸ್
ಸಿಂಧು
November 18, 2007 10:03 PM

suptadeepti said...
ಧನ್ಯವಾದಗಳು ಸಿಂಧು.
November 18, 2007 10:04 PM

ವಿದ್ಯಾರ್ಥಿ said...
ಈ ಶಾಲೆಯಲ್ಲಿ
೧. ಹೋಮ್‌ವರ್ಕ್ ಕೊಡೋದಿಲ್ವಾ?
೨. ಇನ್‍ಸ್ಪೆಕ್ಟರು ಬರೋದು ಅಂತ ಇಲ್ವಾ?
೩. ಮಧ್ಯಾಹ್ನ ಬಿಸಿಊಟ ವ್ಯವಸ್ಥೆ (ಹಾಲು? ಮೊಟ್ಟೆ?), ಹುಡುಗರಿಗೆ/ಹುಡುಗಿಯರಿಗೆ ಬೈಸಿಕಲ್ ವಿತರಣೆ (ಮತ್ತು ಹಿಂತೆಗೆದುಕೊಳ್ಳುವಿಕೆ) ಇದೆಯಾ?
೪. ಆಟದ ಮೈದಾನ ವಿಸ್ತಾರ ಸಾಲದು ಅಂತ ಮಕ್ಕಳ (ಮತ್ತು ಹೆತ್ತವರ) ದೂರು ಕೇಳಿಬರುತ್ತಿದೆಯಂತೆ ನಿಜವಾ?
November 19, 2007 8:04 PM

suptadeepti said...
ವಿದ್ಯಾರ್ಥಿ, ಕವನದ ಮೊದಲೆರಡು ಚರಣಗಳಲ್ಲಿ ನಿಮ್ಮ ಪ್ರಶ್ನೆಗಳಿಗೆ ಉತ್ತರಗಳಿವೆ, ಮತ್ತೊಮ್ಮೆ ಓದಿ.
November 19, 2007 10:01 PM

ಜಗಲಿ ಭಾಗವತ said...
ಈ ಕವನ ಲಾಯ್ಕಿತ್ತ್.
November 20, 2007 6:43 PM

Shiv said...
ಸುಪ್ತದೀಪ್ತಿಯವರೇ,
ಸೊಗಸಾದ ಕವನ.. ಕೊನೆಯ ಸಾಲು ತುಂಬಾ ಮನೋಜ್ಞವಾಗಿದೆ
November 20, 2007 8:41 PM

suptadeepti said...
ಭಾಗ್ವತ್ರೆ, ಧನ್ಯವಾದಗಳು.
ನಿಮ್ಮ ಜಗಲಿಗೆ ಬಪ್ಪ ಇನ್ಸ್'ಪೆಕ್ಟರನ್ನು ಇಲ್ಲಿ ಯಾರೋ ಕೇಳಿಕೊಂಡು ಬಂದಿದ್ರ್ ಕಾಣಿ!
November 20, 2007 8:42 PM

suptadeepti said...
ಧನ್ಯವಾದಗಳು ಶಿವ್.
November 20, 2007 8:43 PM

ಜಗಲಿ ಭಾಗವತ said...
ಅವರನ್ನ ಕಟ್ಕಂಡ್ ಕೋಳಿಪಡೆ ಮರ್ರೆ. ಆಪ್ದಾ ಹೋಪ್ದಾ?
ಹಸಿರು ಹಿನ್ನೆಲೆ ಚೆನ್ನಾಗಿ ಕಾಣಿಸ್ತಿಲ್ಲ :-(
November 22, 2007 6:25 PM

suptadeepti said...
ಏನೋ ಸ್ವಲ್ಪ experiment ಮಾಡಕ್ ಹೋದೆ, ಹಿಂಗಾತ್ ನೋಡಿ. ಕೆಲ ದಿನ ಇರ್ಲಿ, ಆಮೇಲ್ ಬದ್ಲಾಯ್ಸಿದ್ರಾಯ್ತ್.
Inspector'ಗೆ ಕೋಳಿಪಡೆ ಅಂದ್ರೆ ಹೆಂಗ್ ಮಾರಾಯ್ರೆ... ಅವರಿಲ್ದೆ ಶಾಲೆ ನಡ್ಯೂದಿಲ್ಲೆ ಅಲ್ದಾ?
November 23, 2007 12:09 AM

ಹುಣ್ಣಿಮೆಯ ಹಂಬಲ said...
ಬಹಳ ಚೆನ್ನಾಗಿದೆ ಜ್ಯೋತಿಯವರೇ .
November 27, 2007 10:39 AM

suptadeepti said...
ಹೊಸಬರಿಗೆ ಹುಣ್ಣಿಮೆಯ ಹೊನಲಿನಂಥ ಸ್ವಾಗತ. ಪ್ರತಿಕ್ರಿಯೆಗೆ ಧನ್ಯವಾದಗಳು. ಬರುತ್ತಿರಿ.
November 27, 2007 4:45 PM

ಜಲಧಾರೆ

Sunday, October 14, 2007

ಹೊನಲು ಹೊನಲಾಗಿ ಹರಿವ ಜಲಧಾರೆ
ಹಾಲು ಹೊಳೆಯ ರೀತಿ
ಎರಡು ದೇಶಗಳ ಒಂದು ಜಲಪಾತ
ಎರಡು ಮನದ ಪ್ರೀತಿ

ರಾಧೆ ಮಾಧವನ ವಿರಹ ತಾಪದಲಿ
ಕ್ಷೀರಧಾರೆ ಚೆಲ್ಲಿ
ವಸುಧೆ ತುಂಬಿದ್ದ ವರ್ಣಮೇಳವು
ಕರಗಿ ಬಂದಿತಿಲ್ಲಿ
ಪ್ರಕೃತಿ ಪುರುಷರ ಮಿಲನ ತಾಣವಿದು
ಕೈಲಿ ಕೈಯನಿರಿಸಿ
ಸನಿಹ ಸರಿದವರ ಹರಸಿ ನಗುವರು
ಮೌನ ಶಬ್ದ ಬೆರೆಸಿ

ಸವತಿ ಮಾತ್ಸರ್ಯದಿಂದ ಸಿಡುಕಾಗಿ
ಗಂಗೆ ಬಂದಳೇನು?
ಸಖಿಯ ಅಗಲಿರಲು ಮನಸು ಬಾರದೆ
ಯಮುನೆಯೂ ಇಹಳೇನು?
ಮಕ್ಕಳಿಬ್ಬರಿಂದಗಲಿ ಹಿಮವಂತ
ಕಣ್ಣತುಂಬಿ ನಿಂತು
ತಲೆಯ ಕೊಡವಿರಲು ನೀರು ಹಾರಿರಲು
ಬಿಳಿಯ ಹಾಳೆಯಾಯ್ತು

ಸುರಿವ ಸ್ಫಟಿಕಮಣಿ ಪರದೆ ಹಿಂದುಗಡೆ
ನಿಂದು ನೋಡ ಬಾರೇ
ಪ್ರತೀ ಬಿಂದುವಲೂ ನಮ್ಮ ಪ್ರತಿಬಿಂಬ
ನಾವೇ ಚಂದ್ರ ತಾರೆ
ನೋವು ನಲಿವುಗಳ ಬದುಕು ಸಾವುಗಳ
ಜಗವು ಆಚೆ ಕಡೆಗೆ
ಬೆಳ್ಳಿ ಮಾಲೆಗಳು ಬಣ್ಣ ಬಿಲ್ಲುಗಳು
ನಮಗೆ ಈಚೆ ಕಡೆಗೆ

ಜೋಗದಿಂದ ನಯಾಗರಾವರೆಗೆ
ಬೆಳೆದ ನಮ್ಮ ಪಯಣ
ಒಲವು ಬತ್ತದೇ ತುಂಬಿ ಮೊರೆಯಲಿ
ಹರಡಿ ಹೊನ್ನ ಕಿರಣ
(ಅಕ್ಟೋಬರ್, ೧೯೯೬)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 8:15 AM
Labels: ,

2 ಪತ್ರೋತ್ತರ:
KALIGHAT2003 said...
sUpta deeptiyavare...
nimma blog tuMbaa cennAgide... thanks for giving the link. look forward to read your creations..
best wishes
Hari Sarvothama Doss
December 29, 2007 11:45 PM
suptadeepti said...
ನಮಸ್ಕಾರ ಹರಿ. ಇಲ್ಲಿ ಬಂದದ್ದಕ್ಕೆ ಧನ್ಯವಾದಗಳು. ಪ್ರತಿಕ್ರಿಯಿಸಿದ್ದಕ್ಕೆ ವಂದನೆಗಳು. ಇನ್ನೂ ಬನ್ನಿ, ಬರುತ್ತಾ ಇರಿ.
December 30, 2007 12:32 AM

ಹೃಶಿ (ಋಷಿ)ಕೇಶದಲ್ಲಿ ಗಂಗೆ

Sunday, October 7, 2007

ಹರಿದಳು, ನೊರೆ ಮೊರೆದು, ಝರಿ ಇಳಿದು,
ಹಾರಿ ಬಿದ್ದು ಬಂದವಳು;
ಪ್ರಶಾಂತ ಸಮಸ್ಥರದಲ್ಲಿ ಸ್ಥಾಯಿಯಂತೆ,
ಧಾವಂತವಿಲ್ಲದವಳು.

ಕಳೆದ ಏರು-ಪೇರುಗಳ ನೆನಪಿಲ್ಲದೆ,
ಇಹದ ಚಿಂತೆಯಿಲ್ಲದವಳು;
ಮುಂದಿನ ಹೊಲಸು-ನೋವುಗಳ ಅರಿವಿಲ್ಲದೆ,
ಪರದ ಗೊಂದಲವಿಲ್ಲದವಳು.

ಪಟಿಕ-ಶುದ್ಧ ಉದ್ಬುದ್ಧಳಾಗಿ ಬಂದು-
ಪವಿತ್ರ ನೀರೆಯಾದವಳು;
ಪಾಪ-ಪುಣ್ಯಗಳಾಚೆಯೆಲ್ಲವ ತೊಳೆದು-
ಪಾವಿತ್ರ್ಯದ ಪ್ರತೀಕವಾದವಳು.

ರಾಮ-ಲಕ್ಷ್ಮಣರ ಹೆಸರ ಹಿಡಿದ-
ತೂಗುಯ್ಯಾಲೆ ತೂಗುವವಳು,
ಗುಹನ ಪುಟ್ಟ ತೆಪ್ಪ ತೇಲಿಸಿ, ದಾಟಿಸಿ,
ನಿರೀಕ್ಷೆಗಳ ಮೀರಿದವಳು.

ಹಚ್ಚಿ ಬಿಟ್ಟ ಪುಟ್ಟ ಪುಟ್ಟ ಹಣತೆಗಳಲಿ-
ಭರವಸೆಗಳ ಬೆಳಗುವವಳು;
ಹಾದಿಯುದ್ದ ಹರಿದುಹೋದ ಸೆರಗಂಚಲಿ-
ವಿಶ್ವಾಸದ ಸೆಲೆ ಹರಿಸುವವಳು.
(೨೬-ಜೂನ್-೨೦೦೬)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 10:52 PM
Labels:

2 ಪತ್ರೋತ್ತರ:
ಅರ್ಚನಾ said...
hariva lahari bahaLa chennagi pravahiside..good work..keep it up!!cheers,archana
October 8, 2007 3:29 AM
suptadeepti said...
ಧನ್ಯವಾದಗಳು, ಅರ್ಚನಾ. ನೀವೆಲ್ಲ ಹೀಗೆ ಬಂದು, ಓದಿ, ಆನಂದಿಸುತ್ತಿದ್ದರೆ ಯಾವ ಲಹರಿಗೆ ಖುಷಿಯಾಗದು?
October 8, 2007 1:57 PM

ಮೊದಲ ವಾರ್ಷಿಕೋತ್ಸವ

Monday, September 24, 2007

ಇಂದು ಹರಡಿದೆ ಹಾಲು ಹುಣ್ಣಿಮೆ ಬಾನ ತುಂಬ
ಸಂದ ವರುಷದ ಒಲವು ಹರಡಲಿ ಬಾಳ ತುಂಬ
ಮಂದ ಬೆಳಕನು ಬೀರುತಿಹುದು ಮೇಣ ದೀಪ
ನಂದದಿರಲೀ ಗೆಳತಿ ಕಣ್ಣಲಿ ಹೊಳೆವ ದೀಪ

ಹೊಸದೆ ಕನಸಿನ ಬಂಡಿ ಏರಿದೆವಂದು ನಾವು
ಉಸಿರ ಬೆರೆಸುತ ಹೆಸರ ಉಸುರುತ ಹಂಚಿ ನಲಿವು
ಹಸುರ ಮಡಿಲಿಂದಿಲ್ಲಿ ಹಾರುತ ಬಂತು ಜೋಡಿ
ಕುಸಿದ ಸ್ಥೈರ್ಯಕೆ ಕಸುವು ನೀಡಿತು ನಿನ್ನ ಮೋಡಿ

ಅರಳಿ ಬೆಳೆದೆವು ಸರಳ ಬಾಳಿದು ಹೂವೇ ಅಲ್ಲ
ಕೆರಳಿ ಮುನಿಯಲು ಮರಳಿ ಮನ್ನಿಸೆ ಬೇವು ಬೆಲ್ಲ
ಮರಳ ಮನೆಯಲಿ ಆಟವಾಡುತ ಕಳೆದ ಬಾಲ್ಯ
ಹೊರಳಿ ಉರುಳುವ ತೆರೆಯ ತೆರದಲಿ ಕಾಲ ಕಾವ್ಯ

ನೀನು ನಾನೆಂದೆನುವ ಶಬ್ದಕೆ ಅರ್ಥ ಸೇರಿ
ನಿನ್ನ ನನ್ನೊಳಗೊಂದೇ ಹೊಸತನ ಒಂದೇ ದಾರಿ
ನಿನ್ನೆ ನಾಳೆಗಳಾಚೆ ಯೋಚನೆ ಇಂದಿಗಿಲ್ಲ
ನೀನು ನಾನೂ ಕೂಡಿ ಹಾಡುವ ಬಾಳಲೆಲ್ಲ
(ಅಕ್ಟೋಬರ್ ೧೯೯೬)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 1:40 PM
Labels: ,

2 ಪತ್ರೋತ್ತರ:
ಸುಶ್ರುತ ದೊಡ್ಡೇರಿ said...
ಚಂದ ಹಾಡು. ಬಹಳ ದಿನ ಆದ್ಮೇಲೆ ಒಂದೊಳ್ಳೆ ಪೋಸ್ಟ್ ಕೊಟ್ಟಿದೀರ ನೀವು.. ಥ್ಯಾಂಕ್ಸ್ ಫಾರ್ ದಟ್..
September 24, 2007 10:58 PM

suptadeepti said...
ಧನ್ಯವಾದಗಳು, ಸುಶ್....!
September 25, 2007 1:01 PM

ಹೊಸತನ

Tuesday, September 18, 2007

ಏನೋ ತುಡಿತ, ಏನೋ ಮಿಡಿತ, ನನ್ನ ಒಳಗಿನಲಿ
ನೀನು ಬಂದೆ, ಹರುಷ ತಂದೆ, ನಿನ್ನ ಬೆಡಗಿನಲಿ.
ಕನಸು ಕಳೆದು, ಸೊಗಸು ಸವಿದು, ಮುಗುಳು ಅರಳಾಯ್ತು
ಮನೆಯ ತುಂಬ ಪೂರ್ಣ ಬಿಂಬ, ನಗುವು ಹಾಡಾಯ್ತು.

ಶಶಿಯ ಒಲವು ರವಿಯ ಗೆಲವು ಪಡೆದು ವನದೇವಿ
ಹಸಿರ ಧರಿಸಿ ಹೂವ ಮುಡಿದ ಸೊಬಗಿ ಶ್ರೀದೇವಿ
ಹೂವು ಅರಳಿ ಕಾಲವುರುಳಿ, ಕಾಯಿ ಹಣ್ಣಾಯ್ತು
ಯಾವ ಕಾವ್ಯ ಹೇಳದಂಥ ಚೆಲುವು ಬಂದಾಯ್ತು

ಮಂಡಿಯೂರಿ ಹೆಜ್ಜೆಯಿರಿಸಿ ಕುಣಿಸಿ ನೀನೆನ್ನ
ಭಂಡತನದ ಆಟವಾಡಿ ಹೆದರಿಸಿದೆ ನನ್ನ
ಜೊತೆಗೆ ದಣಿದು ಹಠಕೆ ಮಣಿದು ಮಮತೆ ಮರವಾಯ್ತು
ಅತ್ತು ಕರೆದು ಅಮ್ಮಾ ಎನಲು ಬಾಳು ವರವಾಯ್ತು.
(ಮಾರ್ಚ್, ೧೯೯೬)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 7:50 PM
Labels:

4 ಪತ್ರೋತ್ತರ:
ಅನಂತ said...
ತುಂಬಾ ಚೆನ್ನಾಗಿದೆ.. ;)
September 18, 2007 11:06 PM

suptadeepti said...
namaskaara, svaagata, dhanyavaada. baruttaa iri.
September 19, 2007 7:27 PM

parijata said...
bahaLa chennAgide padya...
September 19, 2007 10:38 PM

suptadeepti said...
dhanyavaadagaLu.
September 20, 2007 5:23 AM

ಮೊದಲ ಮಿಲನ

Wednesday, September 12, 2007

(ಮನೋ ಮೂರ್ತಿಯವರ ಸಂಗೀತ ಸಂಯೋಜನೆಯಲ್ಲಿ ರಾಂಪ್ರಸಾದ್ ಮತ್ತು ಕೆ.ಎಸ್. ಸುರೇಖಾ ಹಾಡಿರುವ "ಭಾವಮಾಲಿಕಾ" ದ್ವನಿಸುರುಳಿಗಾಗಿ ಬರೆದ ಯುಗಳ ಗೀತೆ)

ಚಂದ್ರ ಚಕೋರಿಯ ಸರಸದ ಹಾಡು ಕೇಳಿದೆ
ಸುಳಿಯುವ ಗಾಳಿಗೆ ಕೋಕಿಲ ಕಂಠದ ಇಂಪಿದೆ
ಬಿರಿಯುವ ಜಾಜಿ ಮಲ್ಲಿಗೆ ಹೂಗಳ ಕಂಪಿದೆ
ನಾನು-ನೀನು ಇನಿತು ಸನಿಹದಲಿ
ಏನೋ ಬೇಕು ಎನುವ ತವಕದಲಿ
ಸಮಯ ಮೆತ್ತಗೆ ಜಾರಿದೆ
ಬೆಳ್ಳಿ ಮೂಡಿ ಕೆಣಕುತಿದೆ.

ಗಂಡು: ನಾ ಕಾದೆ ಎನಿತೋ ಕಾಲ
ಇಂದು ಬಂದಿದೆ ಮಿಲನದ ಘಳಿಗೆ
ನೀ ನಾಚುವೆ ಏಕೆ ಹೀಗೆ
ಬಾ ಬಾರೆ ನನ್ನಯ ಬಳಿಗೆ
ತನು ಬಯಸಿದೆ ಆಲಿಂಗನ
ಈ ನಮ್ಮ ಮೊದಲ ದಿನ
ಆತುರ.... ಕಾತರ... ಮನಕೆ.... ....೧

ಹೆಣ್ಣು: ಈ ನಿಶೆಯ ನಶೆ...
ಈ ಉಷೆಯ ಛಳಿ...
ನಿನ್ನೀ ಕಾತರ ತವಕ...
ನಾಚಿರುವೆನು ನಾ...
ಜೊತೆಗಾತಿ ಬಾಳಿಗೆ ನಾನು
ನಿನಗೇಕೇ ಅವಸರ ಹೀಗೇ
ನಾ ತೆರೆದಿಹೆ ಹೃದಯದ ದ್ವಾರ
ನೀ ಪ್ರೇಮ ಪ್ರಣತಿಯನಿರಿಸು
ಬಳಿ ಸಾರುತ ನೀ ತಬ್ಬಿರಲು
ಸುಳಿಮಿಂಚು ಸರಿದಂತೆ
ಹಿತವು.... ಬಿಸುಪು.... ಮುದವು....೨
(ಮೇ / ಜೂನ್ ೧೯೯೫)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 1:18 AM
Labels: ,

3 ಪತ್ರೋತ್ತರ:
December Stud said...
ಶೃಂಗಾರ ಅಂದ್ರೆ ಇದು :)
September 13, 2007 4:14 PM

ಶ್ರೀನಿವಾಸ ಕುಲಕರ್ಣಿ ತುರ್ವಿಹಾಳ್ said...
ಚೆನ್ನಾಗಿದೆ.
ನನ್ನ ಬ್ಲಾಗ್ ಡಿಯರ್ ಫ್ರೆಂಡ್,
http://kavimanasu.blogspot.com/
September 18, 2007 6:08 AM

suptadeepti said...
pratikriyegaLige dhanyavaadagaLu.

nimma barahagaLannu OduttEne.
September 18, 2007 7:44 PM

ವಯಸ್ಸು

Saturday, September 1, 2007

ಕನ್ನಡಿ ನೋಡ್ಕೊಳ್ತಿದ್ದೆ, ಜ್ಞಾನೋದಯವಾಯ್ತು
ಎಲ್ಲೋ ಒಳಗಿನ ಸಣ್ಣ ದನಿ ಎಚ್ಚತ್ತುಕೊಳ್ತು
"ವಯಸ್ಸು ನಲ್ವತ್ತೈದು ದಾಟಿದ ಮೇಲೆ-
ಇನ್ನೂ ಏನೇ ಇದು ಬಿನ್ನಾಣ ಮೇಕಪ್ಪು?"
ಹೊರದನಿ ಚೀರಿತು- "ಬೇಕಾಗಿದೆ ಇನ್ಮೇಲೆ
ಹಸಿಯಾಗಿರಲು ಹುಸಿ ಬಣ್ಣ, ಕೂದಲಿಗೆ ಕಪ್ಪು!"

ಕಣ್ಣ ಕೆಳಗಿನ ಕಂದು ಮರೆಸಲು ಕಾಡಿಗೆ,
ಕೆನ್ನೆ ಮೇಲಿನ ಸುಕ್ಕು ಮಾಸುವಂತೆ ರೂಜ್
ಒಣಗಿರುವ ತುಟಿಗಳಲಿ ಒಂದಿಷ್ಟು ಬಾಡಿಗೆ
ಬಣ್ಣ ಬಳಿದ ಹೂನಗೆ, ನಾಚುವಂತೆ ರೋಸ್
ನಲುಗಿರುವ ರೆಪ್ಪೆಗೂದಲ ನಿಮಿರಿಸಿ ನಿಲ್ಲಿಸಬೇಕು
ಸೊರಗಿರುವ ಹುಬ್ಬನ್ನು ಪೂಸಿ ಬಾಗಿಸಬೇಕು

ಏನೇನೋ ಸವಲತ್ತುಗಳು, ಯಾರನ್ನು ಇಂಪ್ರೆಸ್ ಮಾಡೋಕೆ?
ಬೇಕಾದಷ್ಟು ಕಸರತ್ತುಗಳು, ಸತ್ಯವನ್ನು ಮರೆಮಾಚೋಕೆ
ದುಬಾರಿ ಹೊಸ ಲಿಪ್'ಸ್ಟಿಕ್, ಕೆನ್ನೆ ಮೇಲೆ ಕಿಸ್ ಬೀಳೋಲ್ಲ
ಶಾಪಿಂಗ್ ಹೋಗಿ ಬಂದ "ಅವಳ" ಗುರುತೇ ಸಿಗೋಲ್ಲ
ನಕಲಿ ಉಗುರುಗಳು ಸಿಗುತ್ತವೆ, ಕಣ್ಣರೆಪ್ಪೆಗಳೂ ಕೂಡಾ
ಖರ್ಚಿನ ದಾರಿಯ ಈ ಸೌಂದರ್ಯ ಯಾವ ಗಂಡನಿಗೂ ಬೇಡಾ

ತೆಳ್ಳಗೆ ಬೆಳ್ಳಗೆ ಕಾಣಲು ಲೈಪೋಸಕ್ಷನ್, ಬ್ಲೀಚಿಂಗ್
'ಯಂಗ್-ಲುಕ್'ಗಾಗಿ ದೊಡ್ಡ ಹ್ಯಾಂಗಿಂಗ್ ಇಯರ್'ರಿಂಗ್
ಉದ್ದ ಜಡೆಯ ತೊಂದರೆಯಿಲ್ಲ, ನೀಟಾದ ಹೇರ್-ಕಟ್
ಪುಟು ಪುಟು ಓಡಾಡಲು ಸುಲಭ, ಪ್ಯಾಂಟ್ ಮೇಲೆ ಟೀ ಶರ್ಟ್
"ಮಕ್ಕಳೆಲ್ಲಿ?" ಎಂದೇನಾದ್ರೂ ಕೇಳಿದ್ರೆ ನೀವು
"ಕಾಲೇಜ್, ಅಲ್ಲಲ್ಲ- ಸ್ಕೂಲಿಗೆ ಹೋಗಿವೆ ಅವು"

ಸುಳ್ಳು ಹೇಳಿದ್ರೆ ಹೇಳ್ಬೇಕು, ನೋಡಿ ಸ್ವಾಮಿ ಹೀಗೆ
ಸತ್ಯಕ್ಕೂ ಸಂಶಯ ಬಂದು ನಾಚಿ ಓಡೋ ಹಾಗೆ
"ಸತ್ಯವಂತರಿಗಿದು ಕಾಲವಲ್ಲ..." ದಾಸವಾಣಿ ಹೀಗಿದೆ
"...ನ ಬ್ರೂಯಾತ್ ಸತ್ಯಮಪ್ರಿಯಮ್" ಸುಭಾಷಿತವೇ ಇದೆ
ಹೇಳುವವರಿಗಾಗಲೀ ಕೇಳುವವರಿಗಾಗಲೀ ಕಷ್ಟವೇ ಇಲ್ಲ
ಹರೆಯ ಹಾರಿ ವಯಸ್ಸು ಜಾರೋದು ಗೊತ್ತಾಗೋದೇ ಇಲ್ಲ.
(ಜೂನ್-೧೯೯೮)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 8:12 PM
Labels: ,

4 ಪತ್ರೋತ್ತರ:
ಸುಶ್ರುತ ದೊಡ್ಡೇರಿ said...
:-)
September 2, 2007 8:37 PM

ಮನಸ್ವಿನಿ said...
:))
September 4, 2007 8:10 PM

ವಿಕ್ರಮ ಹತ್ವಾರ said...
ಪುಸ್ತಕದಲ್ಲಿ ಓದಿದ್ದ ಕವಿತೆ ಇನ್ನೂ ಜ್ಞಾಪಕವಿದೆ, ಈ ಸಾಲುಗಳಿಂದ:
'ಕಣ್ಣ ಕೆಳಗಿನ ಕಂದು ಮರೆಸಲು ಕಾಡಿಗೆ,
.................
ಸೊರಗಿರುವ ಹುಬ್ಬನ್ನು ಪೂಸಿ ಬಾಗಿಸಬೇಕು'

ಇವು ಟಿಪಿಕಲ್ ಸುಪ್ತದೀಪ್ತಿ ಲೈನ್ಸ್. ಕವಿತೆಯ ಜೊತೆಗಿದ್ದೂ ಪ್ರತ್ಯೇಕ. ಬೇಗ ಬನ್ನಿ, ಮಾತಾಡುವ.
September 5, 2007 8:50 AM

suptadeepti said...
ಪ್ರತಿಕ್ರಿಯೆಗಳಿಗೆ ಧನ್ಯವಾದಗಳು. ಎಲ್ಲರ ಸ್ನೇಹಕ್ಕೆ ವಂದನೆಗಳು.
September 12, 2007 1:12 AM

ಮಹಾಸತಿ

Friday, August 24, 2007

ಅರಳಿ ನಿಂತಿರುವ ಸೊಬಗಿ, ನಗುತಿಹ ರಮಣಿಗೆ
ಅರುಣನುದಯಕೆ ಮುನ್ನ ಜಳಕ ಮಾಡಿಸಿದ ವರುಣ
ಅಭ್ಯಂಗ ಮುಗಿಸಿ ಹೆರಳ ಕೆದರಿದ ಧರಣಿಗೆ
ಅರುಣರಾಗದ ರಂಗಿನ ಮಳೆಬಿಲ್ಲನು ತೊಡಿಸಿದ

ಹೊನ್ನವರ್ಣದ ಮೇಲುದವ ಹರಡಿ ಹೊದೆಸಿ
ಹರುಷ ಪ್ರಭಾವಳಿಯ ನೀಡಿದ ಭಾಸ್ಕರ
ಹಸುರು ಕೆಂಪುಗಳ, ಮುತ್ತು ರತ್ನಗಳ ಪೋಣಿಸಿ
ಹೊಂದಾವರೆಗಳಲಿರಿಸಿ ಮಡದಿಯ ಸಿಂಗರಿಸಿದ

ಭಾನುತೇಜದ ತೀಕ್ಷ್ಣವೇರಿ ಭುವಿಯು ಬಳಲಿ-
ಬಾಡಲು, ಮುದವ ನೀಡುತ ಮಂದ ಮಾರುತ
ಬಾಳೆಲೆಗಳ ತಂಪು ಸೇರಿಸಿ, ಪ್ರೇಮದಲಿ
ಬಳಸಿ ತಣಿಸಿದ ನೀರೆ ತಾಪವ, ಸುಗಂಧ ಪೂಸಿ

ಕವಿದ ಕತ್ತಲೆ ಕಳೆಯೆ ಕಿರಣಗಳ ತೂರುತ್ತ
ಕಳ್ಳ ಹೆಜ್ಜೆಯ ಇನಿಯ ಶಶಿ ಮೆಲ್ಲ ಹೊರಬಂದ
ಕಪಟವರಿಯದ ಮುದ್ದು ಮಗುವಂತೆ ನಿದ್ರಿಸುತ
ಕನಸು ಕಾಣುವ ಪ್ರಿಯೆಗೆ ಬೆಳದಿಂಗಳ ಹಾಸಿದ

ಮಂದಾನಿಲ, ಜೊನ್ನಗಂಗೆ ನಲ್ಲೆಯ ನಡುಗಿಸೆ
ಮರಳಿನಂತೆ ಬಿಸಿಯೇರಿದ ಅಗ್ನಿರಾಜ ಕೆರಳಿ
ಮಣಿಗಳಂತೆ ಕಿಡಿಹಾರಿಸಿ ಚಳಿಯ ಕರಗಿಸಿರಲು
ಮತ್ತೆ ಮುತ್ತು ಹನಿಗಳಿಳಿಸಿ ವರುಣ ಬಂದ ಸೇವೆಗೆ.
(೦೯-ಅಕ್ಟೋಬರ್-೧೯೯೭)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 11:23 PM
Labels:

1 ಪತ್ರೋತ್ತರ:
parijata said...
Very, very nice poem. Reminds me of 'mauna tabbitu nelava...'
August 27, 2007 1:13 AM

ಚಂದಮಾಮ

Thursday, August 16, 2007

ಚಂದಮಾಮ ಬಂದ, ಆಗಸದಿ ಕಂದ
"ಆಡುವೆಯಾ ನೀನು ನನ್ನ ಜೊತೆಗೆ" ಅಂದ
ಚಂದಮಾಮ ಬಂದ, ನಿನ್ನ ನೋಡಿ ಕಂದ.

ನಾನೂ ಬರುವೆನು ಜೋಡಿ, ಅಂದಳು ಒಬ್ಬ ಚುಕ್ಕಿ
ನನ್ನನು ಮರೆಯಬೇಡಿ, ಅಂದಳು ಇನ್ನೊಬ್ಬಾಕಿ
ಕಣ್ಣೇ ಮುಚ್ಚೇ ಆಡಲು ಓಡಿದರೆಲ್ಲ
ಮೋಡಗಳೆಡೆಯಲ್ಲಿಹರು, ನಮಗೆ ಸಿಗಲೇ ಇಲ್ಲ --೧

ಚಿಣ್ಣಿದಾಂಡು ಆಟಕೆ ಗುಂಪುಗೂಡಿದರೆಲ್ಲ
ಚಿಣ್ಣಿಯ ಚಿಮ್ಮಿ ಹೊಡೆಯೆ ಹಾರಿಹೋಯಿತಲ್ಲ
ಲಗೋರಿಯ ಆಡಲು ಚೆಂಡು ಬೇಕೆಂದರು
ದುಂಡನೆಯ ಚಂದಿರ ಚೆಂಡಾಗಲೊಲ್ಲ --೨

ಮರಕೋತಿಯಾಟಕ್ಕೆ ಮರ ಬೇಕಲ್ಲ
ಕುಂಟೆಬಿಲ್ಲೆ ನೆಗೆಯಲು ಚುಕ್ಕಿಗಳಿಗೆ ಬರಲ್ಲ
ಕಂದ ನೀನೆ ಈ ಮನೆಯ ರವಿ ಶಶಿ ತಾರೆ
ಬಾನಿನ ಚುಕ್ಕಿ-ಚಂದ್ರ ನಿನಗೆ ಸಮನಲ್ಲ --೩
(ವರುಷದ ಕೂಸಿಗೆ ಮಾರ್ಚ್ ೧೯೯೫ರಲ್ಲಿ ಬರೆದದ್ದು)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 9:25 PM
Labels:

0 ಪತ್ರೋತ್ತರ:

ಸ್ವತಂತ್ರ ಭಾರತೀಯನಿಗೊಂದು ಕರೆ....

Wednesday, August 8, 2007

ಸ್ವತಂತ್ರ ಭಾರತದ ಸಂತ್ರಸ್ತ ಜೀವ
ನಿನ್ನೊಳುಡುಗಿಲ್ಲವೇಕೋ ದಾಸ್ಯ ಭಾವ
ಇಂಥ ದೀನತೆ ನಿನಗೇಕೆ ಬಂತು?
ನಿನ್ನ ಹಕ್ಕು ತಿಳಿಯಲಿಲ್ಲ, ನೀನೆಂದೂ ನಿಂತು!

ಸತ್ಯ-ಅಹಿಂಸೆಗಳನ್ನು ಸಾರಿದಾ ಮಹಾತ್ಮ
ಇಂದಿನ ದಿನಗಳಿಗೆ ಅವೆಲ್ಲ ಹುತಾತ್ಮ
ಅವುಗಳಿಗೂ ಕಟ್ಟೋಣವೇ ಒಂದೊಂದು ಗೋರಿ?
ಆಗಲಾರವೇನೋ ಅವು ಹೊಸದೊಂದು ಬಾಬರಿ.

ಸ್ವಾತಂತ್ರ್ಯ ಸ್ವಾತಂತ್ರ್ಯ ಎಂದು ಕೂಗಾಡಿ
ನಮಗಾಗಿ ಮಡಿದರು ಹಿರಿಯರು ಪರದಾಡಿ
ಹುಡುಕುತ್ತಲಿಹೆ ನೀನು ಸ್ವಾತಂತ್ರ್ಯ ಎಲ್ಲಿದೆ?
ನಿನ್ನೊಳಗೇ ಇರುವುದದು, ನಿನಗಿರಲು ಕೆಚ್ಚೆದೆ.

"ನಡೆ ಮುಂದೆ, ನಡೆ ಮುಂದೆ, ನುಗ್ಗಿ ನಡೆ ಮುಂದೆ"
ಎಂದೆಲ್ಲ ನುಡಿದರೂ ನಾವೆಂದೂ ಹಿಂದೆ
ಬಡತನ ಅಳಿಸುವರೆ? ಬಡವನ ಅಳಿಸುವರೆ?
ನವಭಾರತ ಕಟ್ಟಬೇಕು, ಎದ್ದು ಬನ್ನಿ ಧೀರರೆ.

ಎದುರಿಸು, ವಿರೋಧಿಸು, ಅಕ್ರಮ ಅನ್ಯಾಯಗಳ
ಗುರುತಿಸು, ದಮನಿಸು ಅಸತ್ಯ ಹಿಂಸೆಗಳ
ಅಳುಕು ಅಂಜಿಕೆ ನಿನಗೇಕೆ, ಓ ಭಾರತೀಯ?
ಸತ್ಯ ಶಾಂತಿ ಸಮನ್ವಯದಿ ಬಹುದು ನೈಜ ಸ್ವಾತಂತ್ರ್ಯ.
(ಜುಲೈ ೧೯೯೨)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 11:40 PM
Labels: ,

9 ಪತ್ರೋತ್ತರ:
vee ಮನಸ್ಸಿನ ಮಾತು said...
ಅಬ್ಬ!! ಸ್ವಾತಂತ್ರ ದಿನ ಹತ್ತಿರ ಬರುತ್ತೆ ಎಂದು ನೆನಪಿಸುವವರು ನೀವೋಬ್ಬರಾದರೂ ಇದ್ದೀರಲ್ಲ... ನಾವೆಲ್ಲ ಹೀಗೆನೇ ಸ್ನೇಹಿತರ ದಿನ, ತಾಯಿಯಂದಿರ ದಿನ... ಇತ್ಯಾದಿಗಳನ್ನು ನೆನಪಿಸುತ್ತಾ ಒಂದು ತಿಂಗಳ ಮುಂಚೆನೇ ಸಂದೇಶ ರವಾನಿಸುತ್ತಿರುತ್ತೇವೆ. ಆದರೆ ಸ್ವತಂತ್ರ ದಿನವನ್ನು ಮಾತ್ರ ಮರೆಯುತ್ತೇವೆ. ಅಲ್ಲಲ್ಲ ಮರೆತಂತೆ ವರ್ತಿಸುತ್ತೇವೆ.
August 9, 2007 5:53 AM

sritri said...
"ಎದುರಿಸು, ವಿರೋಧಿಸು, ಅಕ್ರಮ ಅನ್ಯಾಯಗಳ
ಗುರುತಿಸು, ದಮನಿಸು ಅಸತ್ಯ ಹಿಂಸೆಗಳ"
- ಈ ಶಕ್ತಿ ಯಾರಲ್ಲೂ ಇಲ್ಲವಾಗಿದೆಯಲ್ಲಾ!
ಜ್ಯೋತಿ, ನಿನಗೂ ಮತ್ತು ಎಲ್ಲರಿಗೂ ಸ್ವಾತಂತ್ರ ದಿನದ ಶುಭಾಶಯಗಳು.
August 9, 2007 9:44 AM

suptadeepti said...
ನಮಸ್ಕಾರ "ವೀ"... ಸ್ವಾಗತ. ಎಲ್ಲಿಂದ ಬಂದವರು ನೀವು? ಎಲ್ಲಿಯವರು?

ಗುರುತಿಸುವ ಶಕ್ತಿ ಎಲ್ಲರಲ್ಲೂ ಇದೆ, ಎದುರಿಸುವ ಶಕ್ತಿಯೂ ಇದೆ... ಆದರೆ ಆ ಶಕ್ತಿ ಇದೆಯೆಂದು ಅರಿತವರು ಕಡಿಮೆ, ಅಷ್ಟೇ.
ಮತ್ತೊಮ್ಮೆ ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.
August 11, 2007 10:27 AM

Shiv said...
ಸುಪ್ತದೀಪ್ತಿಯವರೇ,
ಹೇಗಿದೀರಾ?ಸುಮಾರು ೧೫ ವರ್ಷ ಹಿಂದೆ ಬರೆದ ಕವನ ಇದು.. ಅದರೂ ಪರಿಸ್ಥಿತಿ ಇನ್ನೂ ಬದಲಾಗಿಲ್ಲ..
August 12, 2007 4:07 PM

suptadeepti said...
maru svaagata Siv... neevu hEgiddeera? hEgide hosa jeevana? paristhiti badalaagide... dikku tappide, aShTE!!
August 12, 2007 11:06 PM

December Stud said...
July 1992 and you already had "Babri" in the poem...neat!!!
August 13, 2007 4:32 PM

mala rao said...
happy swatantra dinaacarane jyothi.. padya chennaagide
August 13, 2007 8:24 PM

suptadeepti said...
namaskaara DS mattu Mala, dhanyavaadagaLu. nimagoo shubhaashayagaLu.
August 16, 2007 8:46 AM

Jagali Bhagavata said...
Karkalada suttamutta eega 'kraaMtikaarigaLa' haavaLiyaMte. houda??:-))
August 19, 2007 2:56 PM

ಆಟದ ವಯಸು

Wednesday, August 1, 2007

ಏನು ಚಂದ ಈ ವಯಸು, ಆಟಗಳಲ್ಲೇ ಮನಸು
ಜೊತೆ ಗೆಳೆಯ ಗೆಳತಿಯರು, ನಮ್ಮ ಹಿಡಿಯೋರ್ ಯಾರು?

ಕಣ್ಣೆ ಮುಚ್ಚೇ ಆಡಿ ನಮ್ಮನ್ನು ಹುಡುಕು ನೀನು
ಚಿಣ್ಣಿದಾಂಡು ಹೊಡೆದು ನಿಮ್ಮನು ಗೆಲ್ಲುವೆ ನಾನು
ಮರದಲಿ ಕೋತಿಗಳಾಗಿ, ಜೋಕಾಲಿಯಲ್ಲಿ ತೂಗಿ
ಆಡೋಣ..... ಬಲು ಮಜವಾಗಿ.....!

ಬುಗರಿ ಎಸೆಯಲು ಬರದೆ ದೂರ ನಿಂತಿಹೆಯೇನು?
ಜಿಗಿಯುವ ಹಗ್ಗವ ಹಿಡಿದು ಹೆಚ್ಚು ಜಿಗಿದೆ ನೀನು
ಗೊಂಬೆಗಳೊಡನೆ ಮದುವೆ ಆಟ, ಹಣ್ಣುಗಳ ರಸದೂಟ
ಆನಂದ..... ಜೂ...ಟಾ...ಟ.....!

ರಜೆಯು ಕಳೆಯಲು ಶಾಲೆ, ಮತ್ತೆ ಓದು ಬರಹ
ನಿಜಕೂ ಕಲಿಯುವ ಆಟ ಬೇರೊಂದೇ ತರಹ
ಬುದ್ಧಿ ಬೆಳಯಲು ಪಾಠ, ದೇಹಕೆ ಬೇಕು ಆಟ
ಆರಂಭ..... ಹೊಸ ಹೊಸ ನೋಟ.....!
(೧೯೯೫ರಲ್ಲಿ ಶ್ರೀ ಮನೋ ಮೂರ್ತಿಯವರ ಸಂಗೀತಕ್ಕೆ ಹೊಂದಿಸಿ ಬರೆದದ್ದು)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 9:47 AM
Labels: ,

ಪತ್ರೋತ್ತರ:
ಸುಶ್ರುತ ದೊಡ್ಡೇರಿ said...
ಇದು ಯಾವ ಚಿತ್ರದಲ್ಲಿ ಹಾಡಾಗಿದೆ ತಿಳಿಸುವಿರಾ?
August 1, 2007 10:34 PM

sritri said...
ಸುಶೃತ , ಇದು ಅಮೆರಿಕಾ! ಅಮೆರಿಕಾ!! ಚಿತ್ರಕ್ಕೆಂದು ಬರೆದ ಗೀತೆ. ಬಹುಶಃ ಆಯ್ಕೆಯಾಗಿಲ್ಲ. ಬಾನಲ್ಲಿ ಓಡೋ ಮೇಘ - ಇದರ ಬದಲು ಬಂದ ಹಾಗಿದೆ. ಇದು ನನ್ನ ಊಹೆ ಮಾತ್ರ :)
August 4, 2007 4:29 PM

suptadeepti said...
abhipraaya bareda ibbarigU dhanyqavaadagaLu. ee kavana ellU haaDaagilla. amerikaa! amerikaa!! chitrakkaagi baredddU alla. adakkU modalE baredaddu, cassette maaDuva yOchaneyalli. allU idu sErpaDe Agilla, aShTe.
August 6, 2007 1:37 AM
sritri said...
ಜ್ಯೋತಿ. ಊಹಾಪೋಹಕ್ಕೆ ತೆರೆ ಎಳೆದಿದ್ದಕ್ಕೆ ಧನ್ಯವಾದ. :)
ಆದರೆ ಈ ಹಾಡು "ಬಾನಲ್ಲಿ ಓಡೋ ಮೇಘ" ಟ್ಯೂನಿಗೆ ಹೊಂದುವಂತಿದೆ ಅನಿಸಿದ್ದು ನಿಜ.
August 6, 2007 5:24 PM

abhishek hegde said...
How I wish I spent most of my aatada vayassu playing.. hmm.. It was a nostalgic read!
----------------------------------
For the use of a hassle free kannada anywhere you want directly from the internet.. use http://quillpad.in
It's best for the true Kannadiga!
August 7, 2007 3:15 AM

ಮಾತು-ಮೌನ

Sunday, July 22, 2007

ಮೌನ ಮಾನಿನಿಯ ಮುಡಿಯಲ್ಲಿತ್ತು
ಬಂಗಾರದ ಮಾತು
ಮಾತೆ ಮಮತೆಗೆ, ನಲ್ಲೆ ಪ್ರೀತಿಗೆ
ಮೈ ಮರೆತ ಹೊತ್ತು

ಲಹರಿ ಲಹರಿಗಳ ಭಾವ ಹರಿವುಗಳ
ಸೀರೆ ನೆರಿಗೆ ಮಾಡಿ
ಲೀಲಾಜಾಲದಲಿ ಮಿಂಚು ನೋಟದಲಿ
ಸಾರ ನುಡಿಯನಾಡಿ

ಸರಿದು ಸುಳಿಯುವಳು ಒಳಗೆ ಇಳಿಯುವಳು
ಸುಳಿವು ತಿಳಿಯದಂತೆ
ಸಣ್ಣ ನಗೆಯಲಿ ಬಣ್ಣ ಬಿಡಿಸುವಳು
ಸಮಯ ಸರಿಯದಂತೆ

ಮೌನ ಮಾನಿನಿಗೆ ಮಾತೆ ಆಭರಣ
ನಿರಾಭರಣೆ ಆಕೆ
ಅವಳ ಮಡಿಲಿನಲಿ ಶಾಂತಿ ಮಲಗಿಹುದು
ಶ್ಶ್! ಸದ್ದು!! ಜೋಕೆ!!!
(೧೯-ಸೆಪ್ಟೆಂಬರ್-೨೦೦೨)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 11:55 PM
Labels:

3 ಪತ್ರೋತ್ತರ:
gilly said...
very nice wish you good luck may i know your name please...?
July 25, 2007 4:12 AM

Mahantesh said...
ಮೌನ ಮಾನಿನಿಗೆ ಮಾತೆ ಆಭರಣನಿರಾಭರಣೆ ಆಕೆಅವಳ ಮಡಿಲಿನಲಿ ಶಾಂತಿ ಮಲಗಿಹುದುಶ್ಶ್! ಸದ್ದು!! ಜೋಕೆ!!!tuMba hiDisida sAlugaLu.....adre 1st line 3 rd line contradactory alva?
July 26, 2007 1:08 AM

suptadeepti said...
@gilly: ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ ಧನ್ಯವಾದಗಳು, ಈ ಪುಟ್ಟ ಅಕ್ಷರ ಲೋಕಕ್ಕೆ ಸ್ವಾಗತ. ಬರುತ್ತಿರಿ, ಬರೆಯುತ್ತಿರಿ.
@ಮಹಾಂತೇಶ್: ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ. ಇಲ್ಲಿ ದ್ವಂದ್ವ ಇಲ್ಲ ಅಂತ ನನ್ನ ಭಾವನೆ.
July 28, 2007 3:14 AM

ಗೆಳೆಯನಿಗೆ....

Monday, July 9, 2007

ನನ್ನ ಹೃದಯ ಪೀಠದಲಿ ನಿನ್ನ ಪ್ರತಿಮೆ ನಿಲ್ಲಲಿ,
ನನ್ನ ಜಿಹ್ವೆಯಲಿ ನಿನ್ನ ಮಧುರ ನಾಮ ನಲಿಯಲಿ,
ನನ್ನ ಮನದಿ ಸದಾ ನಿನ್ನ ಮುದ್ದು ಮೊಗವು ತೇಲಲಿ,
ದಿನದಿನವೂ ಅನುಕ್ಷಣವೂ ನಿನ್ನ ನೆನಹು ಚಿಮ್ಮಲಿ.

ಆಕಾಶದ ನೀಲಿವರ್ಣ ನಿನ್ನ ದೇಹ ವರ್ಣವೆ?
ಆ ಸೂರ್ಯ ಚಂದ್ರರೇನು ನಿನ್ನ ಅಕ್ಷಿಪಟಗಳು?
ಬಾನತಾರೆ ಸೇರಿ ನೇಯ್ದುದೇನು ನಿನ್ನ ಉಡುಗೆಯು?
ತಂಗಾಳಿಯು ಮಧುರವಾಗಿ ಉಸುರುತಿಹುದೆ ಒಸಗೆಯು?

ವಸಂತನಾಗಮನ ತಂದಿಹುದು ಸಂತಸ,
ಜೀವಭಾವದಲೆಗಳಿಂದ ತುಂಬಿಹುದು ಮಾನಸ,
ಆ ಭಾವನೆಗಳ ಕಂಪು ಎಷ್ಟು ಮಧುರ ಬಲ್ಲೆಯಾ?
ಹಂಚಿಕೊಳಲು ಬಾರೆಯಾ, ಓ ಮುದ್ದು ಗೆಳೆಯಾ?
(ಎಪ್ರಿಲ್-೧೯೮೫)
[ನನ್ನ ಮೊದಲ ಪ್ರೇಮ ಕವನ, ಕಲ್ಪಿತ ಗೆಳೆಯನಿಗೆ ಅರ್ಪಿತ]
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 8:14 PM
Labels: ,

21 ಪತ್ರೋತ್ತರ:
Jagali Bhagavata said...
ಸುಪ್ತದೀಪ್ತಿ,
೨೦೦೭ರಲ್ಲಿ ಈ ರೀತಿ ಮೊದಲ ಪ್ರೇಮ ಕವಿತೆ ಬರೆದ/ಬರೆಯುತ್ತಿರುವ ಕವಯತ್ರಿಯರು ಗೊತ್ತಾ ನಿಮಗೆ? ಗೊತ್ತಿದ್ರೆ ತಿಳಿಸಿ:-))
July 9, 2007 8:41 PM

suptadeepti said...
೨೦೦೭'ರಲ್ಲಿ ಹೀಗೆ ಬರೆಯುವವರಿಗೆ "ಗೂಬೆ" ಅಂತಾರೆ ಕಣಪ್ಪಾ!!
July 9, 2007 8:42 PM

ಸುಶ್ರುತ ದೊಡ್ಡೇರಿ said...
ನಾನು ಹುಟ್ಟೋಕಿಂತ ಒಂದು ತಿಂಗ್ಳು ಮುಂಚೆ ಬರ್ದಿದೀರ ನೋಡಿ ನೀವು ಈ ಕವಿತೆ!
July 9, 2007 11:58 PM

suptadeepti said...
ಏಯ್ ಸುಶ್, ನಾನು ಈ ಕವಿತೆ ಬರ್ದಿದ್ದಕ್ಕೆ ನೀನು ಹುಟ್ಟಿದ್ದು ಅಂತ ಹೇಳ್ಲಿಲ್ವಲ್ಲ! ಸದ್ಯ, ಬದುಕಿದೆ...!
July 10, 2007 12:02 AM

December Stud said...
ಚೆನ್ನಾಗಿದೆ... ಆದರೆ ಮೊದಲನೆಯ ಪ್ರೇಮಗೀತೆ ಅಂತ ಹೇಳಬಹುದು. ನಂತರದ ಕವಿತೆಗಳಲ್ಲಿ ಕಾಣುವ ನಿಮ್ಮ ಛಾಪು ಇದರಲಿಲ್ಲ. ಕಲ್ಪನೆ = ಪ್ರೇರಣೆ?
July 10, 2007 12:26 AM

sritri said...
ಆಕಾಶದ ನೀಲಿವರ್ಣ ನಿನ್ನ ದೇಹ ವರ್ಣವೆ?
- ಶ್ರೀ ಕೃಷ್ಣನನ್ನೇ ಕಾಲ್ಪನಿಕ ಗೆಳೆಯನನ್ನಾಗಿಸಿ ಬರೆದ ಪ್ರೇಮ ಕವನ ಚೆನ್ನಾಗಿದೆ.
..................................
ಇನ್ನೇನೋ ಹೇಳಬೇಕೆನಿಸುತ್ತಿದೆ. ಆದರೆ ಇಲ್ಲಲ್ಲ!
July 10, 2007 7:43 AM
ಶ್ರೀವತ್ಸ ಜೋಶಿ said...
How about some ತರಲೆ as usual? :-)
ಅ) ಒಟ್ಟು 12 ಸಾಲುಗಳ ಕವನದಲ್ಲಿ 4 ಆಜ್ಞಾರ್ಥಕ, 6 ಪ್ರಶ್ನಾರ್ಥಕ. 2 ಮಾತ್ರ affirmative! ಹಾಗಿರಬಾರದೆಂದೇನೂ ಅಲ್ಲ, just some stastistics ಅಷ್ಟೇ.
ಆ) ಹೃದಯದಲಿ ಪ್ರತಿಮೆ ನಿಂತ ಮೇಲೆ, ಮನದಿ ಮುದ್ದು ಮೊಗ ಮಾತ್ರ ತೇಲಬೇಕೇ? ಅಂದರೆ ಆಗ ಹೃದಯದಲಿ ನಿಂತ ಪ್ರತಿಮೆ ’ಮೊಗ ರಹಿತ’ ವಾಗಿರುತ್ತದೆ!?
ಇ) "ಮೊದಲ ಪ್ರೇಮ ಕವನ" ಎನ್ನುವಲ್ಲಿ ’ಮೊದಲ’ ಎಂಬ ವಿಶೇಷಣವು ’ಪ್ರೇಮಕವನ’ಕ್ಕೋ, ’ಪ್ರೇಮ’ಕ್ಕೋ, ’ಕವನ’ಕ್ಕೋ ಎಂದು ಸ್ವಲ್ಪ ಗೊಂದಲ (ambiguity)!
July 10, 2007 1:43 PM

Anonymous said...
ಜಗಲಿಗೊಂದು ಗೂಬೆನಾದ್ರು ಬರಲಿ, ಅಲ್ದೇ ಭಾಗವತ್ರೆ?
July 10, 2007 3:04 PM

Anonymous said...
ಕ್ರಿಷ್ಣಂಗೆ ನೀವು ನಿಮ್ಮಮೊದಲ ಪ್ರೇಮ ಕವನ ಅರ್ಪಿಸಿದ್ದಕ್ಕೆ "ಶಿವನಿಗೆ"ಬೇಜಾರಾಯ್ತಂತೆ
-ಮಾಲಾ
July 10, 2007 4:24 PM

suptadeepti said...
ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು.

@ DS: ಧನ್ಯವಾದಗಳು. ಕಲ್ಪನೆ=ಪ್ರೇರಣೆ ಅಲ್ಲ!!

@ ಶ್ರೀತ್ರಿ: ಕೃಷ್ಣ ಅಂತ ಚೆನ್ನಾಗಿಯೇ ಊಹಿಸಿದ್ದೀಯ. ಹದಿ-ಹೃದಯಕ್ಕೆ ಲಗ್ಗೆಯಿಡುವ ಆ ದೇವನನ್ನೇ ಮೊದಲು ಕರೆದದ್ದು ನಾನು.

@ ಶ್ರೀವತ್ಸ ಜೋಶಿ: ತರಲೆ ಪ್ರಶ್ನೆಗಳು, ವಿವರಣೆಗಳು... ಪರವಾಗಿಲ್ಲ, ಶೂಟಿಸುತ್ತಿರಿ. ಉತ್ತರ ಕೊಡಲೇಬೇಕಾದ ಒತ್ತಡ ಇರಲ್ಲ ಅಂದುಕೊಳ್ಳುತ್ತೇನೆ.

@ ಅನಾನಿಮಸ್: ಭಾಗವತರಿಗೆ ಗೂಬೆ ಸಾಕು ಅಂತಲಾ ನಿಮ್ಮ ಅಭಿಪ್ರಾಯ?

@ ಮಾಲಾ: ಶಿವನನ್ನು ಪೂಜಿಸಲು ಶುರುಮಾಡುವ ತುಂಬಾ ಮೊದಲೇ ಕೃಷ್ಣನನ್ನು ಮೆಚ್ಚಿ, ಆರಾಧಿಸುತ್ತಿದ್ದರಿಂದ ಶಿವನಿಗೆ ಬೇಜಾರಾಗೋ ಪ್ರಸಂಗವೇ ಇಲ್ಲ.
July 10, 2007 6:20 PM

yaatrika said...
ಸುಪ್ತದೀಪ್ತಿ. ಕವನ ಕೃಷ್ಣನಿಗೆ ಅರ್ಪಿಸಿದ್ದು ಅಂತ ನನಗೆ ಗೊತ್ತಿರಲಿಲ್ಲ. ಆದರೆ ಓದಿದಾಗ, ಪುನಃ ಓದಿದಾಗ ಆ ಮುದ್ದುಬಂಗಾರನೇ ನನ್ನ ಕಲ್ಪನೆಗೆ ಬರುತ್ತಿದ್ದ. ನೀವೂ ಅವನನ್ನೇ ಕುರಿತು ಬರೆದದ್ದು ತಿಳಿದು ಆನಂದವಾಯಿತು. ತತ್ವದೊಡನೆ ಭಾವದ ಸಂಗಮ. ದಾಸರು ಭಾವಗೀತೆ ಬರೆತಂತಿದೆ. ಉತ್ಕೃಷ್ಟಮಟ್ಟದ ’ಚೊಚ್ಚಲ ಕವನ’ ಸರಿಯಾದ ಜಾಗವನ್ನೇ ತಲುಪಿತು. :)
July 10, 2007 9:33 PM

suptadeepti said...
@ಯಾತ್ರಿಕ: ಪ್ರತಿಕ್ರಿಯೆಗೆ ಧನ್ಯವಾದಗಳು. ಆ ಮುದ್ದು ಬಂಗಾರ ಯಾರಿಗೆ ಬಂಧುವಲ್ಲ, ಹೇಳಿ? ಬಂಧನ ಬಿಡಿಸಬೇಕಾದ ಅವನೇ ಬಂಧಿಸುವ ಪರಿ ಅವನದು.
July 10, 2007 9:42 PM

minugutaare said...
very good letter. keep it up.
July 11, 2007 2:05 PM

suptadeepti said...
ನನ್ನ ಪುಟ್ಟ ಅಕ್ಷರಲೋಕಕ್ಕೆ ಸ್ವಾಗತ, ಮಿನುಗುತಾರೆ. ಹೀಗೇ ಬರುತ್ತಿರಿ, ಪ್ರತಿಕ್ರಿಯೆ ಬರೆಯುತ್ತಿರಿ.
July 11, 2007 3:11 PM

Anonymous said...
ಭಾಗವತರ ಮೇಲೆ ಯಾಕೆ ಗೂಬೆ ಕೂರಿಸ್ತಾ ಇದೀರಿ? ತುಂಬ ಒಳ್ಳೆ ಜನ ಅವ್ರು.
July 11, 2007 7:54 PM

Anonymous said...
ಗೂಬೆಯನ್ನ ಹುಡುಕ್ಲಿಕ್ಕೆ ನಿಮ್ಮನ್ನ ಭಾರತಕ್ಕೆ ಅಟ್ಟುತ್ತಾ ಇದಾರಂತೆ. ನಿಜವೇ?
July 11, 2007 7:56 PM

suptadeepti said...
ಅನಾಮಿಕರಿಬ್ಬರಿಗೂ ನಮಸ್ಕಾರ. ಭಾರತಕ್ಕೆ ಗೂಬೆ ಹುಡುಕಲು ನನ್ನನ್ಯಾರೂ ಅಟ್ಟುತ್ತಿಲ್ಲ ಅಂತ ಸ್ಪಷ್ಟೀಕರಿಸುತ್ತೇನೆ. ಹಾಗೂ ಭಾಗವತರ ಜಗಲಿಗೆ ಗೂಬೆಯಾದರೂ ಸಾಕು ಅಂತ ಇನ್ನೊಬ್ಬ ಅನಾಮಿಕರ ಹೇಳಿಕೆಗೆ ನನ್ನ ಪ್ರಶ್ನೆಯಿದೆಯೇ ಹೊರತು ಸಮ್ಮತಿ ಅಲ್ಲ. ಇವೆಲ್ಲ ಗೊಂದಲಗಳು ಯಾಕೆ? ಭಾಗವತರು ಖಂಡಿತಾ ಒಳ್ಳೆ ಜನವೇ, ಅವರಿಗೆ ಗೂಬೆಯೂ ಬೇಡ. ಗೂಬೆ ಪಟ್ಟವೂ ಬೇಡ. ಗೊಂಬೆಯನ್ನು ಹುಡುಕೋಣವೇ?
July 11, 2007 11:38 PM

Anonymous said...
ಭಾಗವತರು ಆಮೇಲೆ- 'ಗಜಮುಖನೆ ವಂದಿಸುವೆ..' ಅನ್ನೋದು ಬಿಟ್ಟು 'ಗೊಂಬೆ ಗೊಂಬೆ ಗೊಂಬೆ, ನಿನ್ನ ಮುದ್ದಾಡಬೇಕು ನನ್ನ ಗೊಂಬೆ...' ಅಂತ ಪ್ರಸಂಗ ಶುರು ಮಾಡ್ತಾರೆ ;-)
July 12, 2007 8:34 AM

suptadeepti said...
ಯಾಕೆ ಅನಾನಿಮಸರೇ, ಹೊಸ ಪ್ರಸಂಗ ಬೇಡ್ವಾ? ಆಗಲಿ ಬಿಡಿ. ಕಂಡು, ಕೇಳಿ, ಆನಂದಿಸೋಣ; ಆಗದಾ? ಅದೆಲ್ಲ ಇರಲಿ, ನೀವಿನ್ನೂ ತೆರೆಮರೆಯಿಂದ ಹೊರಗೆ ಬಂದಿಲ್ಲ; ಅಷ್ಟೂ ಭಯವಾ, ಹೇಗೆ?
July 12, 2007 12:40 PM

Anonymous said...
ಇಂದು ಭಾರತಕ್ಕೆ ಹೊರಡುತ್ತಿರುವ ಸುಪ್ತದೀಪಿಯವರಿಗೆ ಆತ್ಮೀಯ ಸ್ವಾಗತ!!
July 13, 2007 9:20 AM

ಮನಸ್ವಿನಿ said...
ಸುಪ್ತದೀಪ್ತಿ
ಗೊಂಬೆ ಸಿಕ್ಕ ಮೇಲೆ ಇಲ್ಲೆ ಪ್ರಕಟಿಸಿ... ಭಾಗವತ್ರು ಬಾಯಿ ಮುಚ್ಚುತ್ತಾರೋ, ಇನ್ನೇನಾದ್ರು ರಾಗ ಎಳಿತಾರೋ ನೋಡೋಣ :)
July 14, 2007 10:54 AM

ತುಳು ಕಬಿತೆಲು (ತುಳು ಕವಿತೆಗಳು)

Monday, July 2, 2007

೦೧. ಪರಸೊತ್ತು

ಕಬಿತೆ ಎನ ಮಗಲ್-
ಪುಟ್ಟಿನ ಪೊರ್ತೇ ಪರಸೊತ್ತು;
ಸಂಪಾದಕೆರೆ ಕೈಕ್ ಕೊರ್ನಗ
ತಿಕ್ಕುನ ಮಾನಾದಿಗೆ- ಏರೆಗ್ ಗೊತ್ತು!

(ಪರರ ಸ್ವತ್ತು-- ಕವಿತೆ ನನ್ನ ಮಗಳು, ಹುಟ್ಟಿದ ಹೊತ್ತೇ ಪರರ ಸ್ವತ್ತು. ಸಂಪಾದಕರ ಕೈಗೆ ಕೊಡುವಾಗ, ಸಿಗುವ ಮರ್ಯಾದೆ ಯಾರಿಗ್ಗೊತ್ತು?)
(೨೬-ಜನವರಿ-೨೦೦೪)

೦೨. ಇಲ್ಲದಾಲ್

ಕನ್ನಡಿ ಇನಿ ಮಸ್ಕ್‍ದ್‍ಂಡ್,
ಮೋನೆ ಒಚ್ಚುನಾಲ್ ಇಜ್ಜೊಲು;
ಕೈ-ಕೆಕ್ಕಿಲ್ ಕುಸ್ಕ್‍ದ್‍ಂಡ್,
ಮೋಕೆ ತಿಕ್ಕುನಾಲ್ ಇಜ್ಜೊಲು.

(ಮನೆಯಾಕೆ-- ಕನ್ನಡಿ ಇಂದು ಮಸುಕಿದೆ, ಮುಖ ಒರಸುವವಳು ಮನೆಯೊಳಿಲ್ಲ; ಕೈ-ಕತ್ತು ಉಳುಕಿದೆ, ಪ್ರೀತಿ ಉಜ್ಜುವವಳು ಮನೆಯೊಳಿಲ್ಲ.)
(೨೭-ಜನವರಿ-೨೦೦೪)

೦೩. ಮೂಂಕ್‍ದ ಬಂಗಾರ್

ಮೂಂಕ್'ಗ್ ಬಂಗಾರ್ ದೀವೆರೆ ಪೋದು
ಮೂಂಕೇ ಬಂಗಾರಾಂಡ್;
ಪೊರ್ಲ್'ಗ್ ಸಿಂಗಾರ ಮಲ್ಪೆರೆ ಪೋದು
ಪೊರ್ಲೇ ಪೊಂಗಾರಾಂಡ್.

(ಮೂಗಿಗೆ ಬಂಗಾರ-- ಮೂಗಿಗೆ ನತ್ತು ಇಡಲು ಹೋಗಿ, ಮೂಗೇ "ಬಂಗಾರ"ವಾಯ್ತು; ಅಂದಕ್ಕೆ ಅಲಂಕಾರ ಮಾಡಲು ಹೋಗಿ, ಅಂದವೇ ಕುಲಗೆಟ್ಟು ಹೋಯ್ತು .)
(ನೈಜ ಘಟನೆ)
(ಮೇ-೨೦೦೦)

೦೪. ಕಾಲ ಕಾರ್ನಿಕ

ಇನಿತ ಕಾಲದ ಪೊಣ್ಣು, ಶಕುಂತಲೆ,
ಬುಡ್ದ್ ಪೋತೊಲ್ ಮೋಕೆನ್, ಮೇನಕೆ;
ದುಷ್ಯಂತೆ ಕೊರ್ನಗ ಒಲ್ಮೆದ ಉಂಗಿಲ-
ಬದಲಿ ಪಂಡೊಲು- "ಈಯೆ ಆಶ್ರಮೊಗ್ ಬಲ"!

(ಕಾಲ ಮಹಿಮೆ-- ಇಂದಿನ ಕಾಲದ ಹೆಣ್ಣು- ಶಕುಂತಲೆ, ಮೇನಕೆಯ ಪ್ರೀತಿಯೆಲ್ಲ ಅವಳಲ್ಲೇ; ದುಷ್ಯಂತ ಕೊಡುವಾಗ ಒಲುಮೆಯ ಉಂಗುರ, ಬದಲಿಗೆಂದಳು- ‘ನೀನೇ ಆಶ್ರಮಕೆ ಬಾರಾ’.)
(೧೪-ಡಿಸೆಂಬರ್-೨೦೦೪)

೦೫. ಉಡಲ್

ಮೋಕೆದ ಬಾಲೆಗ್ ಬಾಲೆ ಪುಟ್‍ದ್-
ಕುಲತ್ತ ದೈವೊಗ್ ಭಕ್ತಿದ ಪನಿವಾರ;
ಕೆಬಿ ಕಂತಾನಗ ಚಾವಡಿದುಲಾಯಿ-
ಮುಜ್ಜೋಡಿ ಒಸರ್, ಒಂಜಿ ಪೊಸ ಬಂಗಾರ.

(ಒಡಲು-- ಮಮತೆಯ 'ಮಗು'ವಿಗೇ ಮಗು ಹುಟ್ಟಿ, ಕುಲದೇವರಿಗೆ ಭಕ್ತಿಯ ಸೇವೆಯ ಹಾರ; ಕಿವಿ-ಚುಚ್ಚುವಾಗ ಚಾವಡಿಯೊಳಗೆ, ಮುಜ್ಜೋಡಿ ಕಣ್ಣೀರು, ಒಂದು ಹೊಸ ಬಂಗಾರ.)
(ನೈಜ ಘಟನೆ)
(೧೪-ಡಿಸೆಂಬರ್-೨೦೦೪)

೦೬. ಸೆಂಟ್‍ದ ಕಮ್ಮೆನ

ಅಕುಲ್ ಪೋಯೆರ್, ಮೊಕುಲ್ ಪೋಯೆರ್,
ನಿರೆಕರೆಟ್ ಪೊಗಿದಂ‍ಡ್ ಫಾರೆನ್‍ದ ಗಾಳಿ;
ಅಂಚಿಂಚಿದಕುಲ್ನ ಸುಖ-ದುಃಖೊಗ್ ಟೈಮಿಜ್ಜಿ-
ಅತ್ತರ್‍ದ ಕುಪ್ಪಿಡ್ ಸಂಬಂದೊಲು ದಿವಾಳಿ.

(ಸೆಂಟಿನ ಪರಿಮಳ-- ಅವರು ಹೋದರು, ಇವರು ಹೋದರು, ನೆರೆಕರೆಯಲ್ಲಿ ಹೊಕ್ಕಿದೆ ಫಾರಿನ್ ಗಾಳಿ; ಅಕ್ಕ-ಪಕ್ಕದವರ ಸುಖ-ದುಃಖಕ್ಕೆ ಟೈಮಿಲ್ಲ, ಅತ್ತರ್ ಬಾಟಲಿಯಲ್ಲಿ ಸಂಬಂಧಗಳು ದಿವಾಳಿ.)
(೧೪-ಡಿಸೆಂಬರ್-೨೦೦೪)

೦೭. ಮಾನಾದಿಗೆ

ಅಪ್ಪೆ ನೆರಿಯೊಲೂಂದ್ ಜಾಲ್‍ಗ್ ಪೋಯೊಲ್ ಪೋಕರಿ,
ಕೈಟ್ ತುಂಡ್ ಬೆಲ್ಲ ಬೊಕ್ಕೊ ತಾರಾಯಿ;
ತೆನಸ್‍ನ್ ಬಯಕ್‍ದ್ ಕೂಕುರು ಬೌರಿಯೆ-
ಮೋಲು ಗೊರೆತೊಲು- "ಈಲ ಎಂಕ್ ನೆರ್ಪನ, ನಾ...ಯಿ...!"

(ಮರ್ಯಾದೆ-- ಅಮ್ಮ ಬೈದಳೆಂದು ಅಂಗಳಕ್ಕೆ ಹೋದಳು ಪೋಕರಿ, ಕೈಯಲ್ಲಿ ಒಂಚೂರು ಕೊಬ್ಬರಿ-ಬೆಲ್ಲ; ತಿಂಡಿಯ ಆಸೆಗೆ ನಾಯಿಮರಿ ಬೊಗಳಿದ, ಇವಳು ರೇಗಿದಳು- "ನಾ...ಯಿ... ನೀನೂ ನನ್ನ ಬೈತೀಯಲ್ಲ!")
(ನೈಜ ಘಟನೆ)
(೧೪-ಡಿಸೆಂಬರ್-೨೦೦೪)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 5:26 PM
Labels: , , ,

19 ಪತ್ರೋತ್ತರ:
yaatrika said...
ಒಂಜಿ ಇಲ್ಲಗ್ ದಾನ ಮಲ್ತಿನ ಮಗಲ್‌ಲಾ, ಸಾಲಿಗ್ರಾಮ‌ಲಾ ಏಪಲಾ ಪರಸೊತ್ತು ಆಪುಜ್ಜಿಗೆ. ಅಯಿಕೋಸ್ಕರ ಆ ರಡ್ಡ್ ದಾನೊಲೆಡ್ "ತುಭ್ಯಮಿದಂ" ಮಾತ್ರ ಪನ್ಪೆರೇ ವಿನಾ "ನ ಮಮ" ಪನ್ಪುಜ್ಜೆರ್; ಅಂಚ ಈರ್‌ನ ಕಬಿತನ್ ವಾ ಸಂಪಾದಕೆರ್ ಮಾನಾದಿಗೆ ಮಲ್ತಿಜ್ಜೆರ್ಡಲಾ ಮಲ್ಲೆ ಇಜ್ಜಿ. ಮುಲ್ಪ ಪಾಡ್ಲೆ. ಕಂಡಿತ ನಮ ದಮ್ಮಯ ಪಾಡ್ದ್ ಓದುವ.
ಬಜೀ ನಾಲ್ ಗೆರೆಟ್ಟ್ ಮೋಕೆದಾಲ್ ಇಪ್ಪಂದಿನ, ಈತೊಂಜಿ ಮಲ್ಲೊ ಬೇನೆ ಜಿಂಜೋಯಿನೇನ್ ತೂದ್ ಉಡಲೇ ಜಿಂಜ್‌ದ್ ಬೈದ್‌‌ಂಡ್. ಆಹಾ! ಉಂದೆಡ್ದ್ ಮಲ್ಲ ಮಾನಾದಿಗೆ ಬೋಡ?
ಪೊರ್ಲ್ ಪೊಂಗಾರ ಆಪಿನೆಡ್ದ್ ಪಿಂಗಾರ ಆಂಡ ನನಲಾ ಪೊರ್ಲಾಪುಂಡ್ ಪಣ್ದ್ ಎನ್ನ ಒಂಜಿ ಆಲೋಚನೆ. ದಾದ ಪನ್ಪರ್?
ಬಾಲೆದ ಬಾಲೆಗ್ ಕೆಬಿ ಕಂತ್‌ನಾಗ ಮುಜ್ಜೋಡಿ ಒಸರ್ ದಾಯೆಗ್ - ಒಂಜಿ ತನ ಬಾಲೆಗ್, ನನೊಂಜಿ ಅಯಿತ ಬಾಲೆಗ್, ಮೂಜಿನೆತ್ತ ತನ ಅಪ್ಪೆನ್ ಎಣ್ಣ್‌ದ್ ಅತಾ!! ಮಸ್ತ್ ಕುಸಿಯಾಂಡ್ ಉಂದೆನ್ ಓದ್‌ದ್.
ಅತ್ತರ್‌ದ ಕುಪ್ಪಿ ಬರೊಂದ್ ಇತ್ತಿನಿ ಜನಕುಲು ಗಲ್ಪುಗ್ ಪೋವೊಂದಿಪ್ಪನಾಗ. ಇತ್ತೆ ಮಾತ ಲ್ಯಾಪ್‌ಟಾಪು, ಪೆನ್‌ಡ್ರೈವ್, ಡಿಜಿಕ್ಯಾಮ್‌ದ ಕಾಲ. ಅತ್ತಾ! ಇನಿತ್ತ ಸಕುಂತಲೆನ ವಿಸಯ ಪನ್ಪಿನಿ ಬೊಡ್ಚಿತ್ತ್ಂಡ್. ವೋಲಾಂಡ ನಮ ಆಟದ ಪ್ರಸಂಗಕರ್ತೆರೆಗ್ ಗೊತ್ತಾಂಡ ’ಪ್ರೇಮಾಭಿಷೇಕ’ದ ಲೆಕ್ಕನೇ ನನೊಂಜಿ ಗಸಂಟ್ ಪ್ರಸಂಗ ಮಲ್ಪುವೆರ್. :-)
ಪೋದ್ ಪೋದು ಬೆಲ್ಲ-ತಾರಾಯಿಗಾದ್ ಬೌರುನ ಕೂಕ್ರೆನ್ ಉಂದು ಸುರೂಕ್ ತೂಪಿನಿ ಯಾನ್ :-D
ಕಬಿತೊಲೆಗಾದ್ ಮಸ್ತ್ ಸೊಲ್ಮೆಲ್. ಬರೆಯೊಂದಿಪ್ಪ್‌ಲೆ.
July 3, 2007 12:43 AM

Meera said...
tuLu kabitelu tumbaa chennaagive. neevE baredidda alwaa gottaaglilla.
Meera.
July 3, 2007 6:42 AM

sritri said...
ತುಳು ಕವಿತೆಗಳ ಅರ್ಥ ಸಹಿತ ಹಾಕಿದ್ದಕ್ಕೆ ಧನ್ಯವಾದಗಳು. ಇಲ್ಲದಿದ್ದರೆ ಏನೂ ಗೊತ್ತಾಗುತ್ತಿರಲಿಲ್ಲ . ಸಿಲೊನ್ ರೇಡಿಯೋದಲ್ಲಿ ಕೆಲವು ತುಳು ಹಾಡು ಕೇಳಿದ ನೆನಪಿದೆ. ಕೆಮ್ಮಲೆತ ಬ್ರಹ್ಮ , ಎಕ್ಕಸಕ ಎಕ್ಕಸಕ ಎಕ್ಕಸಕ್ಕಲ... ಈ ಹಾಡುಗಳ ಅರ್ಥವೇನು?
July 3, 2007 11:01 AM

Anonymous said...
ಆಚೀಚಿನವರ ಸುಖ-ದುಃಖಕ್ಕೆ ಟೈಮಿಲ್ಲ, ಅತ್ತರಿನ ಕುಪ್ಪಿ (ಬಾಟ್ಲಿ)ಯಲ್ಲಿ ಸಂಬಂಧಗಳು ದಿವಾಳಿ.) ಎಷ್ಟು ಸತ್ಯವಾದ ಮಾತು!ತುಂಬಾ ಹೊತ್ತು ಈ ಸಾಲುಗಳನ್ನೇ ಮೆಲಕುತ್ತಾ ಯೋಚನೆಗೀಡು ಮಾಡಿತು... ಪಡಕೊಂಡಿದ್ದು ಏನು ಕಳಕೊಂಡಿದ್ದು ಏನು...?
-ಮಾಲಾ
July 3, 2007 3:17 PM

suptadeepti said...
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

@ಮೀರ: (ಹನಿ)ಕವಿತೆಗಳು ನನ್ನವೇ, ಸಾಕ್ಷಿ ಮೊದಲೇ ಕೊಡಬೇಕಿತ್ತು. ಈಗ ತಾರೀಖುಗಳನ್ನೂ ಸೇರಿಸಿದ್ದೇನೆ.

@ಮಾಲಾ: ಸಂಬಂಧಗಳು ದಿವಾಳಿಯಾದ/ ಆಗುವ ಸಂದರ್ಭಗಳಿಗೆ ಅತ್ತರಿನ-ಕುಪ್ಪಿಯೇ ಬೇಕೆಂದಿಲ್ಲ, ಇದೊಂದು ಸಂಕೇತ ಮಾತ್ರ. ನಿಜ, ಯಾವುದೋ 'ವಾಸನೆ'ಯ ಬೆನ್ನು ಹತ್ತಿ ಹೋದವರು ಕಳೆದುಕೊಂಡದ್ದೆಷ್ಟು, ಪಡೆದುಕೊಂಡದ್ದೆಷ್ಟು. ನಾವೆಲ್ಲರೂ ಯೋಚಿಸಬೇಕಾದದ್ದೇ.

@ತಿವೇಣಿ: ಯಾವುದೋ ಕಾಲದಲ್ಲಿ ಕೇಳಿದ ತುಳು ಚಿತ್ರಗೀತೆಗಳನ್ನು ನೆನಪಿಟ್ಟುಕೊಂಡಿದ್ದಕ್ಕೆ ಧನ್ಯವಾದ ಹೇಳಲೇ? ಅಚ್ಚರಿಪಡಲೆ? ನಿನ್ನ ಪ್ರಶ್ನೆಗೆ ಉತ್ತರ ದೂರವಾಣಿಯಲ್ಲಿ...!

@ಯಾತ್ರಿಕ: ಅಬ್ಬಾ! ಎನ್ನ ಕಬಿತೆಲೆಡ್ದ್'ಲಾ ಉದ್ದ ಈರೆನ ಉತ್ತರ!! ಮಾನಾದಿಗೆ ತಿಕ್ಕ್'ಂಡ್.
(೧)ಪರಸೊತ್ತು ಮಗಲ್ ಆಪುಜೊಲ್, ಕಬಿತೆ ಖಂಡಿತಾ ಪರಸೊತ್ತೇ! "ದಮ್ಮಯ್ಯ ಪಾಡ್ಡ್ ಓದುವ"-- ಈರೆನ ಮಲ್ಲ ಪಾತೆರೊ, ಸೊಲ್ಮೆಲು.
(೨) ಪೊರ್ಲ್-ಪೊಂಗಾರ ಆಪಿನ ಸಂದರ್ಭ ಸರಿಯಾದ್ ಪನ್ತಿಜಿ... ಮೂಂಕ್ ಕಂತಾದ್ ನಾಲ್ ದಿನೊಕ್ಕ್ "ಸೆರೆ" ಬತ್ತ್'ದ್ ಬೇನೆ ತಡೆವಂದೆ, ಮೂಂಕ್ ಮುಟ್ಟೆರೆ ಆವಂದೆ... ಒದ್ದಾಡೊಂದು ಉಪ್ಪುನಗ ಬರೆತ್ತಿನವು... ಅವು "ಪೊರ್ಲ್ ಪೊಂಗಾರ" ಆಪಿನತ್ತಾ?
(೩)ಮುಜ್ಜೋಡಿ ಒಸರ್-ಅಪ್ಪೆನವು, ಮಗಲೆನವು, ಮಗಲೆ ಬಾಲೆದವು... ಮೂಜಿ ಜೀವೊದ ಮೂಜಿ ನಮುನೆದ (ಕಣ್ಣ-ನೀರ್ದ್) ಒಸರುಲು. ಒಂಜಿ ಖುಷಿಟ್, ಒಂಜಿ ಮೋಕೆಡ್, ಒಂಜಿ ಬೇನೆಡ್!
(೪) ಅತ್ತರ್‍ದ್ ಕುಪ್ಪಿಗ್ ಉತ್ತರ ಮಿತ್ತ್ ಕೊರ್ತೆ...
(೫) ಇಂಚಿಪದ ಆಟದ ಕತೆ ಎಂಕ್ ಗೊತ್ತಿಜ್ಜಿ, ಊರುಡುಪ್ಪುನ ಈರ್ ಏರೆಗ್ಲಾ ಪನಡೆ!
(೬)ಎನ್ನ ಕೂಕ್ರ್ ಬೆಲ್ಲದ ಬೊಗ್ರೆ. "ಬೆಲ್ಲ ಬೋಡಾ" ಪಂಡ ಸೈ, ನಾಲಾಯಿ ನೇಲಾದ್ ನೀರ್ ಜಪ್ಪುಡೊಂದಿತ್ತೆ. ಆಯೆ ತಾರಾಯಿ-ಬೆಲ್ಲೊಗ್ ಬೌರ್ದಿನಿ ವಿಶೇಷ ಅತ್ತ್.
July 3, 2007 8:13 PM

Jagali Bhagavata said...
ತುಂಬ ಚೆನ್ನಾಗಿವೆ ಹಾಡುಗಳು. ಎಕ್ಕಸಕ ಎಕ್ಕಸಕ ಎಕ್ಕಸಕ್ಕಲ....ಇದು ತುಳು-ನಾ? ನಾನು ಕೊಂಕಣಿ ಅನ್ಕೊಂಡಿದ್ದೆ.
July 3, 2007 8:48 PM

suptadeepti said...
@ ಭಾಗವತ: "ಎಕ್ಕಸಕ, ಎಕ್ಕಸಕ..." ಹಾಡು ಕೋಟಿ-ಚೆನ್ನಯೆ ತುಳು ಚಿತ್ರದ ಹಾಡು. ತುಳುನಾಡಿನ ಮಗ್ಗುಲಲ್ಲೇ ಬೆಳೆದೂ ಹೀಗಾ? ಪ್ಚ್.. ಪ್ಚ್... ಕಾಲ ಕಷ್ಟ!
July 3, 2007 9:20 PM

Jagali Bhagavata said...
ನಮ್ಮಲ್ಲಿ ತುಳು ಇಲ್ಲ ಮಾರಾಯ್ರೇ. ಆದ್ರೆ ಕೊಂಕಣಿ ಮಾತಾಡೊವ್ರು ತುಂಬ ಇದಾರೆ. ಅದು ಕೊಂಕಣಿ ಹಾಡಿನ ಸಾಲುಗಳ ಥರನೇ ಇತ್ತು.:-))
July 4, 2007 2:29 PM

Jagali Bhagavata said...
ತುಂಟ ಪದ್ಯಗಳು ಸಾಕು. ಈಗ ಆತ್ಮಚಿಂತನದ ಸಮಯ
July 4, 2007 2:59 PM

suptadeepti said...
@ಭಾಗವತ: "ತುಂಟ ಪದ್ಯಗಳು ಸಾಕು. ಈಗ ಆತ್ಮಚಿಂತನದ ಸಮಯ"-- "ಲಹರಿಯ ಹರಿವಿನ ನಿಯಂತ್ರಣವನ್ನು ನಿಮ್ಮ ಕೈಗೆ ಯಾರು ಕೊಟ್ಟದ್ದು?" ಅಂತ ಕೇಳೋದು 'ಆತ್ಮ ಸಂಯಮ'ದ ವಿಷಯ ಅಲ್ಲವಾದ್ದರಿಂದ ಹಾಗೆ ಕೇಳೋದಿಲ್ಲ. ತಾಳ್ಮೆಯಿರಲಿ ಅನ್ನಬಲ್ಲೆ.
July 4, 2007 4:22 PM

Jagali Bhagavata said...
ಲಹರಿಯ ಹರಿವಿನ ನಿಯಂತ್ರಣವನ್ನು ನಿಮ್ಮ ಕೈಗೆ ಯಾರು ಕೊಟ್ಟದ್ದು?" ಅಂತ ಕೇಳೋದು 'ಆತ್ಮ ಸಂಯಮ'ದ ವಿಷಯ ಅಲ್ಲವಾದ್ದರಿಂದ ಹಾಗೆ ಕೇಳೋದಿಲ್ಲ.....
ಇದು ಲಹರಿಯ ನಿಯಂತ್ರಣದ ವಿಷಯವಲ್ಲ. ಓದುಗರ ಪ್ರೀತಿಯ ಹಕ್ಕೊತ್ತಾಯ:-)) ಓದುಗರ ಪ್ರೀತಿ ಎಲ್ಲರಿಗೂ ಸಿಗೊಲ್ಲ ಮಾರಾಯ್ರೆ:-))
July 4, 2007 7:21 PM

ವಿಚಿತ್ರಾನ್ನಭಟ್ಟ said...
ಲಹರಿಸುವವರಿಗೆ ನಮಸ್ಕಾರ!
ಅವತ್ತು ನೀವು ಈ ಕಬಿತೆಗಳನ್ನು ನನಗೆ ಪ್ರಿವ್ಯೂವಿಸಿದಾಗಲೇ (ನಾನು ಇಲ್ಲಿ ಹೀಗೆ ಬರೆದದ್ದರಿಂದ ಮಿಕ್ಕ ಓದುಗರು ಕೆಂಗಣ್ಣಿಂದ ದುರುಗುಟ್ಟಬಹುದು - ಇವನೇನು ಮಹಾ ಅಂತ ಇವನಿಗೆ ಪ್ರಿವ್ಯೂ ಪ್ರಿವಿಲೆಜ್!??) ಹೇಳಿದ್ದೆನಲ್ಲವೇ - "ಸೆಂಟ್‌ಬಾಟಲ್ ಸಂಬಂಧಗಳು ದಿವಾಳಿ" ಅದ್ಭುತವಾದ ಪ್ರತಿಮೆ, ಅತಿಸೂಕ್ತವಾಗಿ ಕವನದಲ್ಲಿ ಸೆರೆಸಿಕ್ಕಿರುವ ಮಾತುಗಳು ಎಂದು? ನಿಮ್ಮ ಪ್ರಿಯಗೆಳತಿ ಮಾಲಾ ಅವರೂ ಅದೇ ಅಭಿಪ್ರಾಯ ವ್ಯಕ್ತಪಡಿಸಿರುವುದು ನನಗೆ ಖುಶಿಯಾಯಿತು!
ತ್ರಿವೇಣಿಯವರಿಗೆ:‘ಕೆಮ್ಮಲೆತ ಬ್ರಹ್ಮ...’ ಹಾಡಿನ ಅರ್ಥ - ಬ್ರಹ್ಮನಿಗೆ ಕೆಮ್ಮು ಶುರುವಾದಾಗ (ಅದೂ ಅವನ ಎಲ್ಲ ಮುಖಗಳಿಂದಲೂ) ಅದಕ್ಕೆ ಕ್ವಿಕ್ಕಾಗಿ ಯಾವ ಔಷಧಿ (ಟೆಲಿನಾಲ್? ಬೆನಾಡ್ರಿಲ್? ವಿಕ್ಸ್ ಎಕ್ಸ್‌ಪೆಕ್ಟೊರೆಂಟ್? ಶುಂಠಿಕಷಾಯ?) ಕೊಡಬೇಕೆಂದು ತೋಚದೆ ಸರಸ್ವತಿಯು pillar-to-post ಅಲೆದದ್ದೇ ’ಕೆಮ್ಮಲೆತ’!!!
July 7, 2007 3:30 AM

suptadeepti said...
@ಭಾಗವತ: "ಲಹರಿಯ ನಿಯಂತ್ರಣದ ವಿಷಯವಲ್ಲ. ಓದುಗರ ಪ್ರೀತಿಯ ಹಕ್ಕೊತ್ತಾಯ:-)) ಓದುಗರ ಪ್ರೀತಿ ಎಲ್ಲರಿಗೂ ಸಿಗೊಲ್ಲ ಮಾರಾಯ್ರೆ:-))"-- ಅದನ್ನು ಒಪ್ಪಿಕೊಳ್ಳುವಲ್ಲಿ ತಕರಾರಿಲ್ಲ. ಧನ್ಯವಾದಗಳು. ಪ್ರೀತಿಯಿರಲಿ (ತುಂಟತನದೊಂದಿಗೆ... ಅಂತ ಬೇರೆ ಹೇಳಬೇಕಾ!?).
July 8, 2007 10:06 AM

suptadeepti said...
@ ವಿಚಿತ್ರಾನ್ನ ಭಟ್ಟರಿಗೆ ವಂದನೆಗಳು. ನಿಮ್ಮ 'ಕೆಮ್ಮಲೆತ' ಓದಿ ನಗು ಬಂತು. ಅದು ನಿಮ್ಮ ಮನೆಯವರ ಸ್ವಾನುಭವವೋ ಹೇಗೆ?
"ಸೆಂಟ್-ಬಾಟಲ್-ಸಂಬಂಧ" ನಮ್ಮೆಲ್ಲರಿಗೂ ಅನ್ವಯವಾಗುವ, ನಾವೆಲ್ಲರೂ ಒಂದೊಂದು ರೀತಿಯಲ್ಲಿ ಅನುಭವಿಸುತ್ತಿರುವ ದಿವಾಳಿಯಲ್ಲದ "ದಿವಾಳಿ"ತನ. ಅದಕ್ಕೇ ನಮ್ಮ ಮನಸ್ಸಿಗೆ ಹತ್ತಿರವಾಗುವ ವಿಷಯ ಅನಿಸಿತು. ಏನಂತೀರಿ?
July 8, 2007 10:10 AM

Shanmukharaja M said...
ಇಲ್ಲದಾಲ್, ಪರಸೊತ್ತು, ಮಾನಾದಿಗೆ ಭಾರಿ ಎಡ್ಡೆ ಉಂಡಿಯೆ!
July 9, 2007 11:38 PM

suptadeepti said...
ಸೊಲ್ಮೆಲು, ಶಣ್ಮುಖರಾಜೆರೆಗ್. ಎನ್ನ ಅಕ್ಷರಲೋಕೊಗ್ ಸ್ವಾಗತ, ನನಲಾ ಇಂಚೆನೆ ಬರೊಂದಿಪ್ಪುಲೆ.
July 9, 2007 11:56 PM

Sanath said...
ಬ್ಲಾಗ್ ಡ್ ತುಳು ಕಬಿತೆಲು ಓದುದ್ ಮಸ್ತ್ ಖುಶಿ ಆಂಡ್...ಇಂಚನೆ ಬರೆಯೊಂದ್ ಇಪ್ಪುಲೆ.
July 10, 2007 4:00 AM

suptadeepti said...
ಸೊಲ್ಮೆಲು ಸನತ್, ಇಂಚೆನೆ ಬರೊಂದಿಪ್ಪುಲೆ....
July 10, 2007 6:25 PM

ನೇಯುತ್ತೇವೆ ನಾವು....

Wednesday, June 27, 2007

ಕನಸುಗಳ ಹೆಣೆಯುತ್ತೇವೆ, ಇಳಿಗಾಲದಲ್ಲಿ
ಹೊರೆಹೊರುವ ಬಲವೀಯುತ್ತೇವೆ ಬಲೆಗೆ
ಹೆಣೆದೇ ಹೆಣೆಯುತ್ತೇವೆ, ಬುತ್ತಿಗಳ ನೆನಪಲ್ಲಿ
ಇಂದು ತಂದಿದ್ದನ್ನು ನಾಳೆಗೆ ಉಳಿಸಿಕೊಳ್ಳುವವರೆಗೆ.

ನೆಲೆಯಿಲ್ಲದ ನೀರಿನಲ್ಲಿ ನಮ್ಮ ಜೀವ ಸೆಲೆ
ಸೆಳೆತದೊಳಗೆ ಎಳೆಯಬೇಕು ಜೀವ ಬಲೆ
ಅಲೆಯೆದುರಿನ ಬದುಕು, ಅಸಂಖ್ಯ ಜೀವ ನೆಲೆ
ಅಳೆದೂ ಅಳೆಯಲಾಗದ ಅದಮ್ಯ ಜೀವ ಕಲೆ.

"ಹೊಯ್" ಅಂದಾಗ ಸೇರಿಕೊಳ್ಳುವ ಬಲ
ಒಂದಾಗಿ ದುಡಿದಾಗ ಕೂಡಿಕೊಳ್ಳುವ ಬಲ
ಹಲವು ಹಸ್ತಗಳಲ್ಲಿ ಗುರಿಯೊಂದರ ಬಲ
ಸೇರಿ ಬಾಳುವಲ್ಲಿ ನಾಳೆಗಳಿಗೆ ಬೆಂಬಲ.
(೨೭-ಜೂನ್-೨೦೦೭)
{"ಚಿತ್ರ-ಕವನ"ದಲ್ಲಿ ಚಿತ್ರವೊಂದಕ್ಕೆ ಬರೆದ ಕವನ}
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 10:00 PM
Labels:

2 ಪತ್ರೋತ್ತರ:

December Stud said...
"Different"...
I was wondering why.... then I saw that this is in response to a picture....Thanks for the link to chitra kavana"...
July 1, 2007 11:52 PM
suptadeepti said...
You are welcome, DS.
You can participate there too, it will be more interesting...
July 2, 2007 5:22 PM

ಬೇಕಾಗಿತ್ತು....

Monday, June 25, 2007

ಬೇಕಾಗಿತ್ತು ಒಂದಿಷ್ಟೇ ಇಷ್ಟು
ನೀರು, ಗಾಳಿ, ಬೆಳಕು
ಕರಗುವಷ್ಟು ಕೊಟ್ಟೆಯಲ್ಲ
ಉಸಿರಾರುವವರೆಗೂ

ಯಾರಿಗೂ ಇಲ್ಲವೆನ್ನದೆ
ನೆರಳಾದೆ, ಮನೆಯಾದೆ
ಕರುಳು ನೆನೆಯುವಂತೆ
ನಿಂತಿದ್ದೇನೆ, ಖಾಲಿ ಮನ

ದೇವರಾಜ್ಯದಲ್ಲಿ ತಾಳ್ಮೆಯಿದೆ
ಕತ್ತಲಿಲ್ಲ, ಸತ್ಯವಿದೆ
ಆವರಿಸುವ ನಿರ್ಲಿಪ್ತದಲ್ಲೂ
ಇನ್ನಾರದೋ ಬಾಳ್ವೆಯಿರಲಿ

ಬೇಕಾಗಿತ್ತು ಇನ್ನೊಂದೇ ಒಂದು
ದಿನ, ಘಂಟೆ, ನಿಮಿಷ
ನಗುವಿಗೆ ದನಿಯಾಗಲು
ಮಡಿಲ ಮಗುವಾಗಲು
(೧೩-ಜೂನ್-೨೦೦೭)
{"ಚಿತ್ರ-ಕವನ"ದಲ್ಲಿ ಒಂದು ಚಿತ್ರಕ್ಕೆ ಬರೆದ ಕವನ}
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 2:35 PM
Labels:

10 ಪತ್ರೋತ್ತರ:

Anonymous said...
'karuLu neneyuvaMte niMtiddEne...'
aagalE hELida haage, ninneya saMje saarthakavaagittu.
heegE bareetaa iri.
-vikram hathwar
June 25, 2007 5:05 PM

suptadeepti said...
ಧನ್ಯವಾದಗಳು ವಿಕ್ಕಿ. ನೀವೆಲ್ಲ ಹೀಗೇ ನನಗೆ ರೆಕ್ಕೆ ಕಟ್ಟಿ, ಒಂದು ದಿನ ಹಾರಿ ಹೋಗುತ್ತೇನೆ....! :)
June 25, 2007 11:07 PM

ಸುಶ್ರುತ ದೊಡ್ಡೇರಿ said...
ಹೊಸ ಕವಿತೆ ಬರೀರಿ ಅಂದ್ರೆ ಅಲ್ಲಿ ಬರ್ದಿದ್ದನ್ನೆ ಇಲ್ಲಿ ಹಾಕ್ತೀರಾ ಇಲ್ಲಿ ಬರ್ದಿದ್ದನ್ನೇ ಅಲ್ಲಿ ಹಾಕ್ತೀರಲ್ರೀ?? :-[
June 26, 2007 12:47 AM

suptadeepti said...
@ಸುಶ್: ಅಲ್ಲಿ ಬರ್ದಿದ್ದನ್ನ ಓದಿರೋರು ಇಲ್ಲೂ ಓದಿದ್ರೆ ತಪ್ಪೇನಿಲ್ಲ. ಜೊತೆಗೆ, ಅಲ್ಲಿ ಬರದಿರೋರೂ ಇಲ್ಲಿ ಬರ್ತಾರೆ, ಅದೂ ನನಗೆ ಗೊತ್ತು. ಹೊಸಾ ಕವಿತೆ? ಇದಂತೂ ಹೊಸದೇ... ಇನ್ನೂ ಇನ್ನೂ ಕವಿತೆಗಳೇ ಬರೋದು ಬಿಡಿ. ಬೇಜಾರಾಗೋ ತನಕ ಅವನ್ನೇ ಬಡಿಸ್ತೇನೆ...!
June 26, 2007 9:25 AM

sritri said...
ನೀವೆಲ್ಲ ಹೀಗೇ ನನಗೆ ರೆಕ್ಕೆ ಕಟ್ಟಿ, ಒಂದು ದಿನ ಹಾರಿ ಹೋಗುತ್ತೇನೆ....!
- ಹಾರಲು ತಯಾರಾಗುತ್ತಲೇ ಇದ್ದೀಯಲ್ಲಾ! :)
June 26, 2007 9:51 AM

suptadeepti said...
@ ಶ್ರೀತ್ರಿ: "ಹಾರಲು ತಯಾರಾಗುತ್ತಲೇ ಇದ್ದೀಯಲ್ಲಾ! :)"
ನಿಜ, ನಿಂತಲ್ಲೇ ನಿಲ್ಲಲಾಗದ ಬದುಕು ನನ್ನದು. ಬೇರೂರಲು ಎಷ್ಟು ಪ್ರಯತ್ನ ಪಟ್ಟರೂ ಜೀವನ ಎಂಬ ಗಾಳಿ ಬದುಕಿನ ಪಟವನ್ನ ಎತ್ತೆತ್ತಲೋ ಹಾರಿಸುತ್ತಲೇ ಇದೆ. ಸಂದ ಹಾದಿಯ ನೆನಪು ಮರೆತಿಲ್ಲ, ಮರೆಯುವುದೂ ಇಲ್ಲ. ಅದಷ್ಟೇ ನೆಮ್ಮದಿ.
June 26, 2007 10:11 AM

Jagali Bhagavata said...
ಹ್ಞೂ ಸುಶ್ರುತ..ಚೆನ್ನಾಗಿ ತರಾಟೆಗೆ ತಗೊಂಡಿದೀಯಾ. ನಿನಗೆ ನನ್ನ ಸಂಪೂರ್ಣ 'ನೈತಿಕ' ಬೆಂಬಲವಿದೆ.:-)
ಸುಪ್ತದೀಪ್ತಿ....ಹೊಸ ಕವನ ಬರೀರಿ. ಹಳೆದು ಬೇಡ ನಮಗೆ:-))
June 26, 2007 8:57 PM

suptadeepti said...
@ ಭಾಗವತ: "ನನ್ನ ಸಂಪೂರ್ಣ 'ನೈತಿಕ' ಬೆಂಬಲವಿದೆ.:-)"-- ಯಾಕೋ ಇಲ್ಲಿ ಸಂಶಯಾತ್ಮಕವಾಗಿದೆ ವ್ಯವಹಾರ.
ನೈತಿಕತೆ ಇಲ್ಲದವರಿಗೆ ನೈತಿಕ ಬೆಂಬಲವೋ ಅಥವಾ, ನೈತಿಕತೆ ಇಲ್ಲದವರ ನೈತಿಕ ಬೆಂಬಲವೋ?
ಹೊಸದೋ, ಹಳೇದೋ, ನಾನು ತಾರೀಖು ಬರ್ದ್ರೆ ಮಾತ್ರ ನಿಮಗೆ ಗೊತ್ತಾಗೋದು ತಾನೆ?
ಮೊದಲ ಸಾರಿ ಓದೋರಿಗೆ ಯಾವಾಗ ಬರೆದದ್ದಾದರೆ ಏನು?
June 26, 2007 9:11 PM

ಅರ್ಚನಾ said...
wawh...eshtu sogasada kavana :-)
June 29, 2007 8:19 PM

suptadeepti said...
ಧನ್ಯವಾದಗಳು ಅರ್ಚನಾ. ಹೀಗೇ ಬರುತ್ತಿರಿ.
June 29, 2007 8:21 PM