ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday 13 December, 2010

ಸುಮ್ಮನೆ ನೋಡಿದಾಗ...೦೭

ಇಷ್ಟಾಗುವಾಗ ಗಂಟೆ ಮೂರೂವರೆಯ ಆಸುಪಾಸು. ಆಂಟಿ ಸುಮ್ಮನೇ ಕಣ್ಣುಮುಚ್ಚಿ ಧ್ಯಾನಿಸುತ್ತಿದ್ದರು. ಬೇಗ ಹೇಳಬಾರದಾ ಕಥೆಯನ್ನು? ಅವರು ಹೇಳುದನ್ನು ಕೇಳಿ, ನನ್ನ ಕೋಪವನ್ನು (ಅವರು ಹೇಳಿದ ಹಾಗೆ ಕೋಪ ಬಂದ್ರೆ!) ಸರಿಯಾದ ದಾರಿಯಲ್ಲಿ ಹರಿಬಿಟ್ಟು ಸಮಾಧಾನವಾಗಿ ಮನೆಗೆ ಹೋಗಬೇಕಲ್ಲ! ಅದಕ್ಕೆ ಸಮಯ ಬೇಕಲ್ಲ! ನನ್ನ ಚಿಂತೆಯಲ್ಲಿ ನಾನಿದ್ದೆ. ನೇಹಾಳ ಕಂಗಳಲ್ಲಿ ಗೊಂದಲ, ಕುತೂಹಲ ಎರಡರ ಬೆರಕೆ.
***

ಆಂಟಿ ಶುರು ಮಾಡಿದರು -
ಮೂವತ್ತು ವರ್ಷ ಹಿಂದಿನ ಮಾತು ಅಂತ ಹೇಳಿದ್ನಲ್ಲ. ಅದೂ ನಿಖರ ಅಲ್ಲ. ಅದಕ್ಕೂ ಹಿಂದೆಯೇ ನನ್ನ ಮತ್ತು ಹರಿಣಿಯ ಸ್ನೇಹ ಆಗಿತ್ತು. ನಿಮ್ಮಿಬ್ಬರ ಹಾಗೆಯೇ ನಾವಿಬ್ರೂ ಒಟ್ಟಿಗೇ ಶಾಲೆಗೆ, ಕಾಲೇಜಿಗೆ ಹೋದವರು. ಆಚೀಚೆ ಮನೆಗಳಲ್ಲಿದ್ದು ಅವಳಿಗಳ ಹಾಗೆ ಬೆಳೆದವರು. ಆದ್ರೂ ನಮ್ಮಿಬ್ಬರ ಸ್ವಭಾವ ಮಾತ್ರ ತದ್ವಿರುದ್ಧ. ಅವಳನ್ನು ನಾನ್ಯಾವಾಗಲೂ ‘ಸಿಂಹಿಣಿ’ ‘ವ್ಯಾಘ್ರಿಣಿ’ ಅಂತೆಲ್ಲ ಛೇಡಿಸ್ತಿದ್ದೆ. ಅಷ್ಟೂ ಕೋಪ ಅವಳಿಗೆ. ನಮ್ಮ ಸ್ನೇಹಿತೆಯರೆಲ್ಲ ‘ನಳಿನಿ ತಂಪು - ಹರಿಣಿ ಕೆಂಪು’ ಅಂತ ಮಾತಾಡಿಕೊಳ್ತಿದ್ರು. ನಮ್ಮ ಮುಂದೆಯೂ ಹೇಳಿ ಹರಿಣಿಯಿಂದ ಬೈಸಿಕೊಂಡು ಪೆಟ್ಟು ತಿಂದು ಬೇಜಾರು ಮಾಡಿಕೊಂಡವರೂ ಕಡಿಮೆಯಿಲ್ಲ. ಆದ್ರೂ ನಮ್ಮ ಸ್ನೇಹ ಮಾತ್ರ ಅದು ಹೇಗೋ ಮುಂದುವರೀತು. ಎಲ್ಲರಿಗೂ ಆಶ್ಚರ್ಯ, ನನಗೂ. ಅವಳಿಗೆ ಮಾತ್ರ ನನ್ನ ಶಾಂತ ಸ್ವಭಾವದಿಂದ ತುಂಬಾ ಅನುಕೂಲ ಆಗ್ತಿತ್ತು. ಅವಳ ತಾಂಡವವನ್ನು ಕಂಟ್ರೋಲ್ ಮಾಡ್ಲಿಕ್ಕೆ ನನ್ನಿಂದ ಮಾತ್ರ ಸಾದ್ಯ ಅಂತ ಶಾಲೆಯಲ್ಲೆಲ್ಲ ಮಾತಿತ್ತು.

ಕಾಲೇಜಿನ ಎರಡನೇ ವರ್ಷದಲ್ಲಿರುವಾಗ ಅವಳಪ್ಪ ಆಸ್ತಿ ವ್ಯಾಜ್ಯದಲ್ಲಿ ಕೊಲೆಯಾದರು. ಅವಳಮ್ಮ ತೌರಿಗೆ ಹೊರಟು ನಿಂತ್ರು. ಕಾಡಿಬೇಡಿ ಹರಿಣಿ ಉಪವಾಸ ಕೂತು ಅಮ್ಮನನ್ನು ಒಪ್ಪಿಸಿ ಅದೊಂದು ವರ್ಷ ನಮ್ಮ ಮನೆಯಿಂದಲೇ ಕಾಲೇಜಿಗೆ ಹೋದಳು. ಕೊನೆಯ ವರ್ಷವನ್ನು ಬೇರೊಂದು ಕಾಲೇಜಿಗೆ ಟ್ರಾನ್ಸ್ಫ಼ರ್ ಮಾಡಿಸಿಕೊಂಡರು ಅವಳಜ್ಜಿ ಮನೆಯವರು. ನಮ್ಮಿಬ್ಬರ ನಡುವೆ ಪತ್ರ ವ್ಯವಹಾರ ಮಾತ್ರ ಉಳೀತು, ಅದೂ ಸ್ವಲ್ಪ ಸಮಯ ಮಾತ್ರ. ಅವಳ ಸೋದರ ಮಾವ ಹದ್ದಿನ ಕಣ್ಣಿನ ಗೂರ್ಖಾ ಅಂತ ನಾವಿಬ್ರೂ ತಮಾಷೆ ಮಾಡಿಕೊಂಡಿದ್ದೆವು ಕಾಗದದಲ್ಲಿ. ಅವಳ ಕೋಪಾಟೋಪ ಎಲ್ಲಿಂದ ಬಂತೂಂತ ಗೊತ್ತಾಯ್ತು ಅಂದಿದ್ದೆ ನಾನು. ಕಾಲಕ್ರಮೇಣ ಮಾವನ ಅಂಕೆಯೊಳಗೆ ಕಾಗದ ಬರೆಯುವುದೂ ನಿಂತಿತು. ಒಂದೂವರೆ ವರ್ಷ ಕಾಲ ಅವಳ ಸುದ್ದಿಯೇ ಇರಲಿಲ್ಲ.

ನನ್ನ ಮದುವೆಯ ಸುದ್ದಿ ಕೇಳಿ ಹಿಂದಿನ ದಿನವೇ ಬಂದವಳು ನನ್ನ ಒಟ್ಟಿಗೇ ಇದ್ದಳು. ಮದುವಣಗಿತ್ತಿಯ ಜೊತೆಗಾತಿಯಾಗಿ ನನ್ನತ್ತೆ ಮನೆಗೂ ಬಂದಳು. ನನ್ನ ಸುಮುಖ್ ಕೂಡಾ ಇವಳನ್ನು ಸ್ನೇಹಿತೆಯಾಗಿ ಆದರಿಸಿ ಮೆಚ್ಚಿಕೊಂಡರು. ಎರಡು ದಿನ ಅಲ್ಲಿದ್ದು ನಂತರ, ‘ಬೆಂಗಳೂರಲ್ಲಿ ಕೆಲ್ಸ ಸಿಕ್ಕಿದೆ, ಚಿನ್ಮಯ್ ಕನ್ಸಲ್ಟೆನ್ಸಿಯಲ್ಲಿ ಮ್ಯಾನೇಜರ್ ನಮ್ಮಾವನ ಪರಿಚಯ. ಪಿ.ಎ. ಆಗಿ ತಗೊಂಡಿದಾರೆ. ಅವ್ರ ಹಂಗು ಬೇಡಾಂತ ಅನ್ನಿಸಿದ್ರೂ ಒಮ್ಮೆ ಅಜ್ಜಿ ಮನೆಯಿಂದ ಹೊರಗೆ ಬರ್ಬೇಕು ಅಂತ ಒಪ್ಪಿಕೊಂಡೆ. ಇನ್ನು ಕಾಗದ ಬರೀತಿರ್ತೇನೆ, ಆಯ್ತಾ?’ ಅಂದಳು. ಮರುದಿನವೇ ಬೆಂಗಳೂರಿಗೆ ಹೋಗಿದ್ದಳು.

ನಾನು ಈ ಊರಲ್ಲೇ ನೆಲೆಸಿದೆ. ಬೆಂಗಳೂರಿಂದ ವಾರಕ್ಕೊಮ್ಮೆ ಬರುವ ಅವಳ ಕಾಗದಗಳಲ್ಲಿ ಅಲ್ಲಿನ ವೈಶಿಷ್ಟ್ಯಗಳೇ ತುಂಬಿರುತ್ತಿದ್ದವು. ಅವಳ ವೈಯಕ್ತಿಕ ವಿಷಯ ಅಷ್ಟೇನೂ ಬರೀತಿರಲಿಲ್ಲ. ನಾನಾಗಿ ಕೇಳಿದ್ರೆ, ‘ಹೇಳಿಕೊಳ್ಳುವಂಥಾದ್ದೇನೂ ಇಲ್ಲ. ಎಲ್ಲ ಮಾಮೂಲು. ಬೆಳಗ್ಗಿಂದ ಸಂಜೆ ತನ್ಕ ಬಾಸ್ ಹೇಳಿದ ಕೆಲ್ಸ ಮಾಡಿಕೊಂಡಿರುದು. ಸಂಜೆ ರೂಮಿಗೆ ಬಂದು ರೇಡಿಯೋ ಕೇಳುದು. ಅಡುಗೆ, ಪಾತ್ರೆ, ಬಟ್ಟೆ, ಎಲ್ಲ ಕೆಲ್ಸಗಳನ್ನು ಮಾಡ್ಕೊಳ್ಳುದು. ಅದೇ ಜೀವನ. ಅದನ್ನೇನು ಬರಿಯುದು’ ಅಂತಿದ್ಳು.

ಸುಮಾರು ಐದು ವರ್ಷದ ನಂತ್ರ ಒಂದು ಬೆಳಿಗ್ಗೆ ನಮ್ಮನೆ ಬಾಗಿಲಲ್ಲಿ ಕೆಂಪುಕಣ್ಣಿನಲ್ಲಿ ನೀರು ಹರಿಸುತ್ತಾ ಪ್ರತ್ಯಕ್ಷ ಆದ್ಳು. ಬೆಂಗಳೂರಿಂದ ಸೀದಾ ಇಲ್ಲಿಗೇ ಬಂದಿದ್ಳು. ಒಳಗೆ ಕರೆದು ಸಮಾಧಾನ ಮಾಡುವ ಹೊತ್ತಿಗೆ ನಂಗೆ ಸಾಕೋಸಾಕಾಗಿತ್ತು. ಆದ್ರೂ ಅಳು ಯಾಕೆ ಅನ್ನುದನ್ನು ಮಾತ್ರ ಬಾಯಿ ಬಿಡಲೇ ಇಲ್ಲ, ಸಂಜೇತನ್ಕ. ಆವತ್ತು ಸುಮುಖ್ ಅವ್ರ ತಂಗಿಯ ಮನೆಗೆ ಹೋಗಿದ್ರು. ರಾತ್ರೆಯೆಲ್ಲ ಅವಳ ಕಥೆ ಕೇಳಿ ಬೆಳಗಾದಾಗ ನಮ್ಮಿಬ್ಬರ ಕಂಗಳೂ ಕೆಂಪು ಕೆಂಪು. ಮಧ್ಯಾಹ್ನ ಸುಮುಖ್ ಬರುವ ಹೊತ್ತಿಗೆ ನಾನೊಂದು ನಿರ್ಧಾರಕ್ಕೆ ಬಂದಿದ್ದೆ. ಅದನ್ನು ಅವರಿಗೆ ಹೇಳಲಿಕ್ಕೆ ಸಮಯ ಕಾಯುತ್ತಿದ್ದೆ. ಮನೆಯಲ್ಲಿ ಬಿರುಗಾಳಿ ಏಳಬಹುದೆನ್ನುವ ಊಹೆಯಿಂದ ಏನೇನೋ ಕಾಲ್ಪನಿಕ ತಡೆಗೋಡೆಗಳನ್ನು ಸಿದ್ಧಮಾಡಿಕೊಂಡೆ. ಶಾಂತವಾಗಿರುತ್ತಿದ್ದ ನಳಿನಿ ಅಂದು ಅಶಾಂತಿಯ ನೆಲೆಯಾಗಿದ್ದೆ.