ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday 30 March, 2009

ಆ-ಕೃತಿ

ನಿನ್ನೆಯ ನಿನ್ನ ಬೆವರು
ಇಂದು ಹಸಿರಾದದ್ದು
ಒಬ್ಬರಿಗೇ ಗೊತ್ತು
ಹಸಿರು ಮತ್ತೆರಡು ಚಿಗುರಿ
ಮೊಗ್ಗು ಹೂವಾಗಿ ಕಾಯಾಗಿ
ಫಲಮಾಗಿ ಹಣ್ಣಾಗಿ
ಉಂಡವರ ಉಸಿರು ಹರಸಿದ್ದು
ನಿನ್ನನ್ನೇ, ನನ್ನನ್ನೇ, ಹಣ್ಣನ್ನೇ?

(೧೮-ಮಾರ್ಚ್-೨೦೦೯)

Thursday 26 March, 2009

ಯುಗಾದಿ

ಓದುಗರೆಲ್ಲರಿಗೂ ಚಾಂದ್ರ ಯುಗಾದಿಯ ಶುಭ ಹಾರೈಕೆಗಳು.
ಹೊಸ ವರುಷ ಹೊಸತನದ ಹುರುಪಿನೊಡನೆ ಹೊಸ ಚೇತನವನ್ನೂ ತರಲಿ.


ಮತ್ತೊಮ್ಮೆ ಹೊಸ ವರುಷ ಮದನ ಸಖ ಜೊತೆಯಾಗಿ

ಮತ್ತೆ ಹೊಸ ಹೊಸ ಹರುಷ ಬುವಿಯೊಲುಮೆಗೊಲವಾಗಿ

ಚೈತ್ರ ನಡೆ ಚಿತ್ತಾರ ಕಂಡ ಕಂಡೆಡೆಯೆಲ್ಲ

ವಸಂತ ನುಡಿ ಬಿತ್ತರ ಕೇಳಿದಿಂಚರವೆಲ್ಲ

ಮುಗುಳು ಅರಳುಗಳೊಳಗೆ ಮುಗ್ಧ ಮಗುವಿನ ಕೇಕೆ

ಮುಗಿಯದಾರಂಭಕ್ಕೆ ಮುನ್ನುಡಿಯ ಹರಕೆ

ಅರುಣ-ನಿಶೆಯರ ಸರಸ ವರ್ಣ ಮೇಳದ ರಾಗ

ಕಿರಣ-ಕತ್ತಲಿನಾಟ ಜೀವಲೋಕದ ಭಾಗ

ನಗುವು ಅಳುವಿನ ನಂಟ ಬೆಳಕು ಭೀತಿಯ ಬಂಟ

ನಗುವಿನಳುವಿನ ಬಾಳು ತುಂಬು ಸಂಭ್ರಮದೂಟ

ಹರಕೆ ಹಾರೈಕೆಗಳು ನಿಮ್ಮ-ನಮ್ಮೆಲ್ಲರಿಗೆ

ಹಸುರು ಹಸನಾಗಿರಲಿ ಈ ಧರಣಿಯೊಳಗೆ

(೨೬- ಮಾರ್ಚ್-೨೦೦೧)

Saturday 21 March, 2009

ಕತ್ತಿನ ಕುತ್ತು

ಕತ್ತು ಉಳುಕಿದ ಹೊತ್ತು
ಕೊಂಕಿಸಿ ನೋಡಿತ್ತು
ಸುಂದರ ಗೊಂಬೆ
`ಆಹ್, ರಂಭೆ'
ಮನ ತೊದಲಿತ್ತು.
ಮನೆ ಮರೆತಿತ್ತು.

ಬಂದವನ ಹಿಂದೆ
ತೂಗಿ ನಿಂತಳು
ಹಾಗೇ ಸಾಗಿ ಮುಂದೆ
ಹೆಜ್ಜೆ ಇಟ್ಟಳು
ಏಳು, ಏಳೇ ಏಳು
ಮುಂದೆಲ್ಲಾ ಮರುಳು

ಕತ್ತ ನೋವು ಸರಿದಿತ್ತು
ಮೆತ್ತೆಯಲ್ಲಿ ಒರಗಿತ್ತು.
(೩೧-ಜನವರಿ-೨೦೦೮)

Sunday 15 March, 2009

ಸಮಾಗಮ

ನತ್ತಿನಾಚೆ ಕೆನ್ನೆಲಿತ್ತು
ಹೊಳೆಹೊಳೆಯುವ ಮುತ್ತು
ಕೊಳ ತುಳುಕಿದ ತಿಳಿ ಕಲಕಿದ
ಅಯೋಮಯದ ಹೊತ್ತು

ನಳನಳಿಸುವ ಎಲೆ-ಕಲರವ
ಹನಿ-ಕಂಪನವಡಗಿ
ದಳವರಳಿದ ಕೆಂದಾವರೆ
ತಲೆ ಬಾಗಿಸಿ ಮಲಗಿ

ಮತ್ತೆಚ್ಚರ, ಮುತ್ತೆದ್ದಿತು
ನತ್ತಂಚಿನ ಹೊರಳು
ಬಿಕ್ಕಾಯಿತು, ಸಿಕ್ಕಾಯಿತು
ಸುಕ್ಕಾಯಿತು ಇರುಳು

ದಿನಗೆದರಿದ ಹಸಿಗೂದಲ
ಸಿಂಚನವತಿ ರಮ್ಯ
ಅಮೃತಫಲ ಕಲಶ ಸುಜಲ
ಪಾನ ಮತ್ತ ಸ್ವಾಮ್ಯ

(೧೫-ಜುಲೈ-೨೦೦೪)

Thursday 12 March, 2009

ರಂಗಿನಾಟ




ರಂಗ ನಿನ್ನ ಹೋಳಿಯ ರಂಗು
ಭಂಗಿ ನಶೆಯನಿತ್ತಿದೆ
ಅಂಗನೆಯನು ಕಾಡಲು ಬೇಡ
ಗುಂಗು ಬಿಡದೆ ಸುತ್ತಿದೆ


ಬಣ್ಣ ಬಣ್ಣ ಚೆಲ್ಲುತ ನಲಿದೆ
ಕಣ್ಣ ತುಂಬಿಕೊಂಡೆನು
ಚೆನ್ನ ನಿನ್ನ ಸರಸಗಳಲ್ಲಿ
ಕೆನ್ನೆ ಕೆಂಪು ಕಂಡೆನು


ನಿನ್ನ ಮೋಹ ಮೋಡಿಯ ಸೆಳೆಗೆ
ನನ್ನೇ ಮರೆತು ಬಂದೆನು
ಮುನ್ನ ಕೇಳು ಮೋಹನ ಚೆಲುವ
ಕನ್ನೆಯೆದೆಯ ಮಾತನು

ಮನೆಯ ಬಾಗಿಲಲ್ಲಿಯೆ ಅಮ್ಮ
ಕೊನೆಯ ಕಿರಣ ಕಾಂಬಳು
ಮೊನೆಯ ಮೇಲೆ ನಿಂತಂತವಳು
ಇನಿಯ, ಹಾದಿ ಕಾಯ್ವಳು

ಸೆರಗ ಬಿಡೋ, ತುಂಟರ ಒಡೆಯ
ಬೆರಗುಗೊಂಡೆ ಆಟಕೆ
ಮರೆಯದೆಯೇ ನಾಳೆಯು ಬರುವೆ
ದೊರೆಯೆ, ಸಾಕು ಛೇಡಿಕೆ
(೧೧-ಮಾರ್ಚ್-೨೦೦೯/ ಹೋಳಿ ಹುಣ್ಣಿಮೆ)

Thursday 5 March, 2009

ಅಡಕತ್ತರಿ

ಹೌದು! ಇದೊಂದು ಅಡಕತ್ತರಿ-
ಇಕ್ಕಳದಂತೆ ಅಡಕೆಯನ್ನು ಇಬ್ಬದಿಯಿಂದ
ನುರಿಯುತ್ತದೆ ಬಲವಾಗಿ ಪುಡಿಯಾಗುವವರೆಗೂ...
ನಡುವಿರುವ ಅಡಕೆಗೋ ಇಬ್ಬಂದಿ-
ಅಲ್ಲಿರಲಾಗದೆ ಹೊರಬರಲೂ ಆಗದೆ
ನುಸುಳಾಡುತ್ತದೆ, ಬಲಹೀನವಾಗಿ ಪುಡಿಯಾಗುವವರೆಗೂ...

ತನ್ನತನದ ಛಾಪು ಉಳಿಸಿಕೊಂಡು
ಹೊಸದೊಂದು ಅಡಕೆ ಮರವಾಗುವ
ಕನಸುಗಳನ್ನು ಕಣ್ತುಂಬಿ ಬೆಳೆದ ನೆನಪುಗಳೊಂದಿಗೆ
ಹೊಸತನದ ಒತ್ತಡಗಳಿಗೆ ಸಿಲುಕಿ
ಹೊಸ ರೂಪ, ಬಣ್ಣ, ಭಾವಗಳಲ್ಲಿ
ಒಂದಾಗಿ ಬೆರೆತು ಲೀನವಾಗುವ ನನಸುಗಳೊಂದಿಗೆ

ಬೆಳೆದ ಆ ನೆಲ, ಬಲಿತ ಮೇಲೆ
ನೆಲೆಸಿದ ಈ ನೆಲೆಗಳ ನಡುವೆ
ಸಿಲುಕಿದ ಅಡಕೆಯಾಗುತ್ತಿದೆ ಈ ಮನಸ್ಸೂ ಪ್ರತಿದಿನ
ಮಕ್ಕಳೂ ತಮ್ಮಂತಾಗಬೇಕೆಂಬ
ಹಂಬಲ ತುಂಬಿದ ಕನಸುಗಣ್ಣುಗಳು
ಛಲ ಕಳೆದುಕೊಳ್ಳುತ್ತಾ ಕಾಂತಿಹೀನವಾಗುತ್ತವೆ ದಿನಾ ದಿನಾ

ಎಲ್ಲವನ್ನೂ ತನ್ನಲ್ಲಿ ಕರಗಿಸಿಕೊಳ್ಳುವ
'ಮೆಲ್ಟಿಂಗ್ ಪಾಟ್ ಕಲ್ಚರ್'ನಲ್ಲಿ
ವೇಗವಾಗಿ ಕರಗಿ ಒಂದಾಗುತ್ತಿವೆ ಎಳಸು ಕುಡಿಗಳು
ಗುರು-ಹಿರಿಯರಿಗೆ ಗೌರವ
ದೇವ-ದೇವತೆಗೆ ಭಕ್ತಿ ಭಾವ
ಯಾವುದನ್ನೂ ಅರಿಯದಾಗಿವೆ ಎಳೆ ಮನಗಳು

ಆ ಮನಗಳನ್ನೆಲ್ಲಿಗೆಳೆದಾಡಲಿ?
ಒಂದೊಂದು ಚೈತ್ರಕ್ಕೂ ಒಂದಾಳು ಬೇರು
ಬಲಿತ ಸಸಿ ಕಸಿಕಟ್ಟಲಾದೀತೆ ಬೇರೆ ನೆಲದೊಳಗೆ?
ಬೇರು ಬಲಿಯುವ ಮುನ್ನ ಇನ್ನೂ-
ಸಮಯವಿದೆ ಎಂದುಕೊಂಡು
ಏಕಾಗ್ರಚಿತ್ತವಿತ್ತು ಆ ಲಕ್ಷ್ಮೀಕಟಾಕ್ಷದೆಡೆಗೆ

ರೆಕ್ಕೆ ಬೆಳೆದ ಮರಿಗಳೀಗ
ಗೂಡು ಬಿಟ್ಟು ಹಾರಿದಾಗ
ಖಾಲಿಗೂಡಿಗೆ ಸಂಜೆ ಮರಳುವೆದೆಯೂ ಖಾಲಿ
ಆ ಲಕ್ಷ್ಮಿಯು ಇದ್ದರೇನಂತೀಗ
ಈ ಹಳೆಯ ಬೇರುಗಳಲ್ಲಿಲ್ಲ ಶಕ್ತಿ
ಹಿಂದುರುಗಲಾಗದ ದಾರಿಯಲ್ಲಿ ನಡಿಗೆ ಹೊಡೆದಿದೆ ಜೋಲಿ

ಮರಳಿ ಮಣ್ಣಿಗೆ ಮರಳುವಾಸೆ
ಕೆರಳಿ ಮರಳುತ್ತಿದೆ ತೆರೆಗಳಂತೆ
ತೋಟವೇ ಇಲ್ಲದ ನೆಲದಲ್ಲಿ ನೆಲೆಯೆಂಬುದೆಲ್ಲಿ?
ಬೆಳೆದ ಮಣ್ಣಿನ ಸೆಳೆತವೊಂದು-
ಕರುಳ ಬಳ್ಳಿಯ ನಂಟು ಒಂದು-
ಒತ್ತಡಗಳೆಡೆಯ ಮನಸು ಅಡಕೆಯಿಲ್ಲಿ!

(೦೫-ಮಾರ್ಚ್-೨೦೦೦)