ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Thursday, 12 March 2009
ರಂಗಿನಾಟ
ರಂಗ ನಿನ್ನ ಹೋಳಿಯ ರಂಗು
ಭಂಗಿ ನಶೆಯನಿತ್ತಿದೆ
ಅಂಗನೆಯನು ಕಾಡಲು ಬೇಡ
ಗುಂಗು ಬಿಡದೆ ಸುತ್ತಿದೆ
ಬಣ್ಣ ಬಣ್ಣ ಚೆಲ್ಲುತ ನಲಿದೆ
ಕಣ್ಣ ತುಂಬಿಕೊಂಡೆನು
ಚೆನ್ನ ನಿನ್ನ ಸರಸಗಳಲ್ಲಿ
ಕೆನ್ನೆ ಕೆಂಪು ಕಂಡೆನು
ನಿನ್ನ ಮೋಹ ಮೋಡಿಯ ಸೆಳೆಗೆ
ನನ್ನೇ ಮರೆತು ಬಂದೆನು
ಮುನ್ನ ಕೇಳು ಮೋಹನ ಚೆಲುವ
ಕನ್ನೆಯೆದೆಯ ಮಾತನು
ಮನೆಯ ಬಾಗಿಲಲ್ಲಿಯೆ ಅಮ್ಮ
ಕೊನೆಯ ಕಿರಣ ಕಾಂಬಳು
ಮೊನೆಯ ಮೇಲೆ ನಿಂತಂತವಳು
ಇನಿಯ, ಹಾದಿ ಕಾಯ್ವಳು
ಸೆರಗ ಬಿಡೋ, ತುಂಟರ ಒಡೆಯ
ಬೆರಗುಗೊಂಡೆ ಆಟಕೆ
ಮರೆಯದೆಯೇ ನಾಳೆಯು ಬರುವೆ
ದೊರೆಯೆ, ಸಾಕು ಛೇಡಿಕೆ
(೧೧-ಮಾರ್ಚ್-೨೦೦೯/ ಹೋಳಿ ಹುಣ್ಣಿಮೆ)
Labels:
ತುಂಟ-ತುಡುಗ-ತರಲೆ-ಮನ,
ರಮ್ಯಗಾನ...,
ಹೀಗೇ ಸಾಗಲಿ,
ಹೊಚ್ಚ ಹೊಸದು
Subscribe to:
Post Comments (Atom)
12 comments:
ಅಂತೂ ಕೃಷ್ಣನ್ ಹತ್ರಾನೂ ಹೋಳಿ ಆಡಿಸ್ಬಿಟ್ರಾ? ;) ಚನಾಗ್ ಬರ್ದಿದೀರಾ ಜ್ಯೋತೀಜಿ.. ಇಷ್ಟ ಆಯ್ತು.
ಅಲ್ಲಾ ಸುಶ್, ಕೃಷ್ಣ ಆಡದ ಆಟ ಯಾವುದಿದೆ ಹೇಳು?
"ಬೇಡ ಕೃಷ್ಣ ರಂಗಿನಾಟ ಸೀರೆ ನೆನೆವುದು... ಮಧ್ಯರಾತ್ರಿ ಚಂದ್ರ ಛಳಿಯ ತುಂಬುತಿರುವುದು..." ಅನ್ನುವ ಹಳೇ ಚಿತ್ರಗೀತೆ ತುಂಬಾ ಜನಪ್ರಿಯವಾಗಿತ್ತಲ್ಲ; ಗೊತ್ತಿದ್ಯಾ?
ನಾನು ಹೊಸದಾಗಿ ಮಾಡಿದ್ದೇನಿಲ್ಲ. ಅವನಾಟವನ್ನು ನೆನಪಿಸಿಕೊಂಡದ್ದು ಮಾತ್ರ!
ನಿಂಗಿಷ್ಟ ಆಗಿದ್ದಕ್ಕೆ ಸಂತೋಷ.
ಕೃಷ್ಣನಾಟ, ಕೃಷ್ಣನೊಡನೆ ನಿಮ್ಮ ಆಟ ಎಲ್ಲಾ ಚೆನ್ನಾಗಿವೆ.
ಹರಿವಲಹರಿಯಲ್ಲೂ ರಂಗಿನಾಟದ ಹೋಳಿ! ಹೋಳಿ, ಹೋಳಿಗೆ.... ಹೆಸರಲ್ಲೇ ಸಂಭ್ರಮವನ್ನು ತುಂಬಿಕೊಂಡಂತಿವೆ.
`ರಂಗ ನಿನ್ನ ಹೋಳಿಯ ರಂಗು
ಭಂಗಿ ನಶೆಯನಿತ್ತಿದೆ' ... ಈ ಸಾಲು "ನಮ್ಮ ಬಲ್ಲಿದ ರಂಗನ ವಲ್ಲಿ ಮೇಲೆ ಚೆಲ್ಲಿದರೋಕುಳಿಯ" ಜನಪದ ಹಾಡನ್ನು ನೆನಪಿಸಿತು.
ಸುನಾಥ ಕಾಕಾ,
ಕೃಷ್ಣನನ್ನು ಬಿಟ್ಟರೆ ಯಾರ ಆಟಕ್ಕೆ ಎಲ್ಲಿಯ ನೆಲೆ, ಬೆಲೆ? ಅಲ್ಲವೆ! ನಿಮಗೂ ಮೆಚ್ಚಾಗಿದ್ದು ನನಗೆ ಖುಷಿ.
ವೇಣಿ,
ಈ ಹೋಳಿಯ ಮೊದಲ ಓಕುಳಿ ನಿನಗೇ ಎರಚಿತ್ತಲ್ಲ! ನಿನ್ನ ಹಾಡುಗಳ ಖಜಾನೆಯಲ್ಲಿ ಇಲ್ಲದ್ದೇನಿದೆ ಹೇಳು? ಯಾವುದೋ ಸಾಲು ಇನ್ಯಾವುದನ್ನೋ ನೆನಪಿಸುತ್ತೆ ನಿನಗೆ. ನಿನ್ನ ನೆನಪಿಗೆ ನನ್ನ ಟೊಪ್ಪಿಗೆ.
ಸುಪ್ತದೀಪ್ತಿ ಅವರೆ...
"ಬೇಡ ಕೃಷ್ಣಾ ರಂಗಿನಾಟ ಶರ್ಟು ನೆನೆವುದು"
ಈ ಹಾಡು ನೆನಪಾಯ್ತು.
ಅಂದ ಹಾಗೆ ಯಾರ ಬಗ್ಗೆ ಬರೆದದ್ದು ಇದು? ನಿಜ ಹೇಳಿ....ಹ್ಞಾ...!
ಅಕ್ಕಾ...
ಅಯ್ಯೋ...ರಾಮಾ...
ಕ್ಷಮಿಸಿ. ಅದು "ಬೇಡ ಕೃಷ್ಣ ರಂಗಿನಾಟ ಸೀರೆ ನೆನೆವುದು" ಅಂತಾಗ್ಬೇಕಿತ್ತು, ತಪ್ಪಾಗಿ ‘ಶರ್ಟು ನೆನೆವುದು" ಅಂತಾಗ್ಬಿಟ್ಟಿದೆ.
ಶಾಂತಲಾ,
ಹೌದಲ್ಲ, ಮೊದಲಿನ ಹಾಡು ಮರ್ತೇಬಿಟ್ಟಿದ್ದೆ. ನೆನಪಿಸಿದ್ದಕ್ಕೆ ಥ್ಯಾಂಕ್ಸ್. ಆದ್ರೆ ಅದ್ರ ಮುಂದಿನ ಸಾಲುಗಳು ನೆನಪಿಲ್ಲವಲ್ಲ. ಅವನ್ನೂ ಹೇಳ್ತೀಯ, ಪ್ಲೀಸ್?
ಎರಡನೇ ಹಾಡು ಕೇಳಿ ಕೇಳಿ ಕೇಳಿ ಆಗಿದೆ (ಸಾಕಾಗಿಲ್ಲ).
ಯಾರ ಬಗ್ಗೆ ಬರ್ದಿದ್ದು ಅಂತ ಕವನದ ಮೊದಲ ಸಾಲಲ್ಲೇ ಮೊದಲ ಪದದಲ್ಲೇ ಹೇಳಿದ್ದೇನೆ. ಆದ್ರೆ ನಿಜವಾಗಲೂ ಕೇಳಿಸಿಕೊಳ್ಳಬೇಕಾದವರಿಗೆ ಇನ್ನೂ ಕೇಳಿಯೇ ಇಲ್ಲ! ಅದಕ್ಕೇನು ಮಾಡೋಣ?
ಅಕ್ಕ ತುಂಬಾ ಚೆನ್ನಾಗಿದೆ ಕವನ...ಕಾಡುವಿಕೆ, ಬೇಡುವಿಕೆ, ಮುನಿಸು, ಸರಸ ಎಲ್ಲಾ ಮಿಳಿತವಾದ ಸುಂದರ ಕವನ.
ತೇಜೂ,
ಹೌದೇ, 'ಅವನ' ಜೊತೆ ಎಷ್ಟು ಕಾಡಿ, ಬೇಡಿ, ಮುನಿಸಿಕೊಂಡರೂ ಹಾಡಿಕೊಂಡರೂ ತೃಪ್ತಿಯೇ ಆಗದು ನೋಡು.
"ನಿಂತಂತವಳು" ಆಡುಮಾತಿಗೆ ಹತ್ತಿರದ ಪದವಾಗಿ ಇತರ ಕಾವ್ಯೀಯ(?) ಪದಗಳ ನಡುವೆ ಎದ್ದು ಕಾಣುತ್ತದೆ. ಪದ್ಯದ ಗತಿಗೆ ಭಂಗ ಬರದಂತೆ "ನಿಂತಿಹ ಅವಳು" ಎಂದು ಓದಿಕೊಳ್ಳಬಹುದೇನೋ?
--ಅನಾನಿಮಸ
ಅನಾನಿಮಸರೇ,
ಧನ್ಯವಾದ.
'ನಿಂತಿಹ ಅವಳು' ಮತ್ತು 'ನಿಂತಂತವಳು'- ಪದಗಳು ಮಾತ್ರೆಗಳ ಲೆಕ್ಕಕ್ಕೆ ಸರಿಯಾಗುತ್ತವಾದರೂ ಅರ್ಥದಲ್ಲಿ ಸರಿಯಾಗುವುದಿಲ್ಲ ಅನ್ನಿಸುತ್ತದೆ. 'ನಿಂತಂತೆ' ಮತ್ತು 'ನಿಂತಿಹ' ಎರಡೂ ಒಂದೇ ಅರ್ಥ ಕೊಡಲ್ಲ, ಎರಡನೇದ್ದು ಅಲ್ಲಿಗೆ ಸರಿಯಾಗಿ ಹೊಂದಲ್ಲ ಅಂತ ನನ್ನ ಭಾವನೆ.
Post a Comment