ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Friday, 1 October, 2010

ಅನಾಮಿಕ

ಅಂದು ಪ್ರಾಕ್ಟಿಕಲ್ ಮುಗಿಸಿ ಕಾಲೇಜಿಂದ ಮನೆಗೆ ಹೊರಟಾಗ ತಡವಾಗಿತ್ತು. ನಮ್ಮ ಮನೆಯ ಕಡೆ ಬರುವ ಇತರ ಹುಡುಗಿಯರು ಆಗಲೇ ಹೋಗಿಯಾಗಿತ್ತು. ಸುಮಾರು ಒಂದು ಮೈಲಿ ದೂರ. ದೊಡ್ಡ ಮಾತೇನಲ್ಲ. ಅಂತೆಯೇ ನಡೆದೇ ಹೊರಟೆ. ಯಾರೊಂದಿಗೂ ಮಾತಿಗೆ ಸಿಲುಕಬಾರದೆಂದು ಕೆನ್ನೆಗೆ ತಗಡು ಕಟ್ಟಿಸಿಕೊಂಡ ಕುದುರೆಯಂತೆ ಮೂಗಿನ ನೇರಕ್ಕೇ ನೋಡುತ್ತಾ ಸರಸರ ಹೆಜ್ಜೆ ಹಾಕುತ್ತಿದ್ದೆ, ಮುಖ್ಯರಸ್ತೆ ಬಿಟ್ಟು ತಿರುಗುತ್ತಲೇ ಬಳಿಯಲ್ಲಿ ಇನ್ನೊಂದು ಹೆಜ್ಜೆ ಸದ್ದು. ಎದೆ ಒಮ್ಮೆ ಕಂಪಿಸಿತು. ಅಷ್ಟರಲ್ಲೇ "ಹಲೋ ಮಿಸ್" ಎಂದ ಮಧುರ ದನಿಗೆ ಕಂಪಿಸುತ್ತಿದ್ದ ಎದೆ ಧಸಕ್ಕೆಂದಿತು. "ಹಾ! ದೇವರೇ! ಹನುಮಂತಪ್ಪಾ, ಕಾಪಾಡಪ್ಪಾ!" ಎಂದು ನಾನು ಕಾಣದ ಮಾರುತಿಯನ್ನು ಮೊರೆಹೋದೆ.

ಯಾರೆಂದು ನೋಡುವ ಹುಚ್ಚು ಚಪಲ. ತಲೆ ತಿರುಗಿಸಿ ದೃಷ್ಟಿಸಿದೆ. ಗುರುತರಿಯದ ಗಂಭೀರ ಸುಂದರ ಗಂಡು ಮುಖ. ನಯನ ಆ ಮೊಗದಿಂದ ನೋಟ ಜಾರಿಸಿ ಕೆಳಗಿಳಿಯುತ್ತಾ ಹೋಯಿತು. ಚಂದದ ಕಡುಕಂದು ಸೂಟಿನಲ್ಲಿ ಅಂದದ ಗೋಧಿಯ ಮೈಬಣ್ಣ- ನೀಲಿ ಹಾಕಿದ ಬಿಳಿಬಟ್ಟೆಯಂತೆ. ಪಾದಗಳನ್ನು ಮುಚ್ಚಿ ಮಿರಮಿರನೆ ಮಿಂಚುವ ಬೂಟುಗಳು. ಆಗಲೇ ಆತ, "ಗುರುತಾಗಲಿಲ್ವಾ? ನಾನು ನಿಮ್ಮನ್ನು ನಿಮ್ಮಕ್ಕನ ಮದುವೆಯ ದಿನ ನೋಡಿದ್ದೆ. ನಿಮ್ಮ ಭಾವ ನವನೀತ್ ನಮ್ಮನ್ನು ಪರಿಚಯ ಮಾಡಿಸಿದ್ರು...." ನಾನು ಯೋಚಿಸಿದೆ. ಅಕ್ಕನ ಮದುವೆ ವರ್ಷದ ಹಿಂದೆ. ನನಗಂತೂ ಈತನನ್ನು ನೋಡಿದ ನೆನಪಿಲ್ಲ. ಹೆಸರು ಮೊದಲೇ ಗೊತ್ತಿಲ್ಲ. ಹೇಗೆ ಪ್ರತಿಕ್ರಿಯಿಸಬೇಕೆನ್ನುವ ಗೊಂದಲದಲ್ಲಿರುವಾಗಲೇ ಸುಂದರ ಮುಖದ ಮೃದು ಮಾತಿನ ನಯವಂಚಕರ ನೆನಪಾಯ್ತು. ಒಳಗೊಳಗೇ ನಡುಗಿಹೋದೆ. ಆತನಿಗೆ ಉತ್ತರಿಸದೇ, ಆ ಕಡೆಗೂ ನೋಡದೇ ಹೆಜ್ಜೆ ಚುರುಕುಗೊಳಿಸಿದೆ. ಇನ್ನೂ ಹತ್ತು ನಿಮಿಷದ ನಿರ್ಜನ ಹಾದಿ. ಏನು ಮಾಡಲೂ ಆತನಿಗೆ ಸಾಧ್ಯವಿದೆ, ಸಮಯವಿದೆ. ಈ ಯೋಚನೆಯಿಂದ ತತ್ತರಿಸಿದೆ. ಆತನೂ ನನ್ನ ಸಮನಾಗಿ ಹೆಜ್ಜೆ ಹಾಕುತ್ತಿದ್ದ. ಧೀರ ಗಂಭೀರ ನಡಿಗೆ, ನಯದ ಮಾತು, ಏನೋ ಎಂತೋ ಎಂದುಕೊಂಡೆ.

"ಇನ್ನೂ ನನ್ನ ನೆನಪಾಗಲಿಲ್ವಾ ಸವಿತಾ?" ಎಂದ. "ಅಯ್ಯೋ ದೇವ್ರೇ... ನನ್ನ ಹೆಸರೂ ಗೊತ್ತುಂಟಾ ಇವನಿಗೆ!" ಇನ್ನಷ್ಟು ಬೆಚ್ಚಿದೆ. ಆದರೂ ಕೆಟ್ಟ ಮೊಂಡು ಧೈರ್ಯ. "ಓಯ್ ಮಿಸ್ಟರ್, ನಾನು ಸವಿತಾ ಅಲ್ಲ. ನಿಮ್ಮ ಆ ಹುಡುಗಿ ನಾನಲ್ಲ. ಬೇರೆ ಯಾರೋ ಇನ್ನೆಲ್ಲೋ ಇರ್ಬೇಕು. ಸುಮ್ಮನೆ ನನ್ಹಿಂದೆ ಬರ್ಬೇಡಿ. ನಿಮ್ಮ ಪಾಡಿಗೆ ಹೋಗಿ" ಎಂದೇ ಉಸಿರಿಗೆ ಹೇಳಿ ಓಡು ನಡಿಗೆ ಹಾಕಿದೆ. ನೆನಪಿಸಿಕೊಳ್ಳುವ ಪ್ರಯತ್ನ ಕೈಬಿಟ್ಟೆ.

"...ಸವಿತಾ, ನೀವೇನೂ ಹೆದರ್ಬೇಡಿ. ನಾನು ನಿಮ್ಗೇನೂ ಮಾಡುದಿಲ್ಲ. ನಿಮ್ಮ ಮನೇವರೆಗೆ ಬರುವ ಅವಕಾಶ ಕೊಡಿ. ಈ ನಿರ್ಜನ ದಾರಿಯಲ್ಲಿ ನಿಮಗೆ ಬೆಂಗಾವಲಾಗಿಯಾದರೂ ಬರುತ್ತೇನೆ" ಎಂದಂದ ನಾಟಕೀಯ ಶೈಲಿಯ ಮಾತಿನಲ್ಲಿ ನಗೆಯ ಲೇಪನ ಧಾರಾಳವಾಗಿತ್ತು. ನನಗೆ ರೇಗಿಹೋಯ್ತು. "ಈ ದಾರಿ ನನಗೇನೂ ಹೊಸದಲ್ಲ. ನೀವು ಬರುವ ಅಗತ್ಯವಿಲ್ಲ. ಹೋಗಿ, ಹೊರಟು ಹೋಗಿ." ಬಿರುಸಾಗಿ ನುಡಿದೆ; ಅಷ್ಟೇ ಬಿರುಸಾಗಿ ನಡೆದೆ. ಆತನ ಬೂಟಿನ ಸದ್ದು ನನ್ನ ಚಪ್ಪಲಿಯ ಸದ್ದನ್ನು ಏಕತಾನದಿಂದ ಅನುಸರಿಸುತ್ತಿತ್ತು. ಆ ಏಕತಾನ ಕಿವಿಗೆ ಹಿತವೆನ್ನಿಸಿದರೂ ಭಯದ ನೆರಳಲ್ಲಿ ಮನಸ್ಸಿಗೆ ಯಾವುದೂ ಬೇಡವಾಗಿತ್ತು. "ಯಾರಾದರೂ ಪರಿಚಯದವರು ಸಿಗಬಾರದೇ, ದೇವರೇ... ಪ್ಲೀಸ್..." ಅಂದುಕೊಳ್ಳುತ್ತಿರುವಾಗಲೇ ಹಿಂದಿನಿಂದ ಮೋಟಾರ್ ಬೈಕಿನ ಸದ್ದು ಕೇಳಿಸಿತು. ತಿರುಗಿ ನೋಡಿದಾಗ ಅಣ್ಣನೆಂದು ತಿಳಿದು ಕಣ್ಣಲ್ಲಿ ನೀರುಕ್ಕಿತು. "ಈ ಖದೀಮನಿಗೆ ಈಗ ಬುದ್ಧಿ ಕಲಿಸಬೇಕು" ಎಂದೂ ಮನ ಮುದಗೊಂಡಿತು.

ಅಣ್ಣ ಹತ್ತಿರ ಬಂದವನೇ ಬೈಕ್ ನಿಲ್ಲಿಸಿ, ಆತನ ಕಡೆ ನೋಡಿ, "ಏನೋ ಮಹರಾಯ, ಯಾವಾಗ ಬಂದಿ ನಮ್ಮೂರಿಗೆ? ಪರಿಚಯ ಆಗಿ ವರ್ಷದ ಮೇಲಾಯ್ತು, ಈಗ ನೆನಪಾಯ್ತನಾ?" ಎಂದು ಕೇಳಿದಾಗ ನಾನು ತಲೆತಿರುಗಿ ಬೀಳುವುದೊಂದೇ ಬಾಕಿ. ಅಣ್ಣ ಆತನ ಉತ್ತರಕ್ಕೂ ಕಾಯದೇ ನನ್ನೆಡೆಗೆ ತಿರುಗಿ, "ಸವಿತಾ, ಇವ ನಿನಗೆಲ್ಲಿ ಸಿಕ್ಕಿದ? ಆಟೋರಿಕ್ಷಾದಲ್ಲಿ ಬರುದು ಬಿಟ್ಟು ನಡ್ಕೊಂಡು ಬಂದದ್ದು ಯಾಕೆ?" ಎಂದಾಗ ಇನ್ನಷ್ಟು ತಬ್ಬಿಬ್ಬಾದೆ. "ಆಟೋ ಮಾಡಿ ಕರ್ಕೊಂಡು ಹೋಗುವಷ್ಟು ಹತ್ತಿರದವನೇ ಆತ?" ಎನ್ನುವ ಯೋಚನೆಗೊಳಗಾದೆ.

ಆ ಸುಂದರಾಂಗನ ನಗು ಎಚ್ಚರಿಸಿತು. "ಏಯ್ ರವೀಂದ್ರ..." ಎಂದು ಆತ ಅಣ್ಣನೊಡನೆ ಮಾತಿಗಿಳಿದಾಗ ಕಿವಿಗೊಟ್ಟೆ. "...ಇವ್ರು ನಿನ್ನ ತಂಗಿ ಸವಿತಾ ಹೌದಾ ಅಲ್ವಾಂತ ಇನ್ನೊಮ್ಮೆ ನೋಡಿ ಮತ್ತೆ ಮಾತಾಡು. ಇಲ್ಲಾಂದ್ರೆ... ‘ನನ್ಹಿಂದೆ ಬರ್ಬೇಡಿ, ಹೋಗಿ’ ಅಂತ ಬೈಸ್ಕೊಳ್ತೀ ನೋಡು. ನಾನು ಮಾತಾಡ್ಸಿದಾಗ, ‘ನಾನು ಸವಿತಾ ಅಲ್ಲ. ನಿಮ್ಮ ಹುಡುಗಿ ಬೇರೆ ಯಾರೋ ಇರ್ಬೇಕು’ ಅಂದು ಬಿಟ್ರು. ಸರಿಯಾಗಿ ನೋಡಿ ಮಾತಾಡಪ್ಪ..." ಮಾತುಗಳು ಕಿವಿಯೊಳಗೆ ಬೀಳುತ್ತಿದ್ದ ಹಾಗೇ ಗಂಟಲಲ್ಲಿ ಕಹಿ ಇಳಿದಿಳಿದು ಸಿಕ್ಕಿಕೊಂಡ ಅನುಭವ. ಪರಿಸ್ಥಿತಿ ಏರುಪೇರಾಗಿದೆಯೆಂದು ನನ್ನ ಕಣ್ಣಂಚಿನ ನೀರಿನಿಂದ ಕಂಡುಕೊಂಡ ಅಣ್ಣ, "ಏಯ್ ರಾಜಕುಮಾರ, ಇಲ್ಲಿ ಮಾತಾಡುದು ಬೇಡ. ನಡಿ ಮನೆಗೆ ಹತ್ತು ಗಾಡಿ" ಅಂದರೆ ಆತ, "ನಾನು ಬರುದಿಲ್ಲಪ್ಪ. ಇವ್ರನ್ನೇ ಕರ್ಕೊಂಡು ಹೋಗು. ಇಲ್ಲದಿದ್ರೆ ಎಲ್ಲಾದ್ರೂ ತಲೆತಿರುಗಿ ಬಿದ್ದುಬಿಟ್ಟಾರು" ಎನ್ನಬೇಕೆ? ಕೊನೆಗೂ ಅವರಿಬ್ಬರೂ ಬೈಕ್ ಏರಿ ಹೊರಟರು. ನಾನು ಹೆಜ್ಜೆಯ ಮೇಲೆ ಹೆಜ್ಜೆ ಹಾಕಿ ದಾರಿ ಸವೆಸತೊಡಗಿದೆ.

ಹಾದಿಯುದ್ದಕ್ಕೂ ತಲೆತುಂಬ ಗೋಜಲು ಯೋಚನೆಗಳು- ಯಾರವರು?, ಅವರ ಹೆಸರೇ ತಿಳಿಯಲಿಲ್ಲವಲ್ಲ! ಆತನ ಮೃದು ಮಾತು ನಡತೆಗೆ ನನ್ನ ಒರಟು ವರ್ತನೆ ನೆನೆದು ಕೆಡುಕೆನಿಸಿತು. ‘ಹಾಲಲ್ಲಿ ಹುಳಿ ಹಿಂಡಿದಂತೆ ನಡೆದುಕೊಂಡೆ’ ಎನ್ನಿಸಿತು. ಎಷ್ಟು ನೆನಪಿಸಿಕೊಂಡರೂ ಕವಿತಕ್ಕನ ಮದುವೆಯ ಸಮಯ ಈತನನ್ನು ನೋಡಿದ ನೆನಪಿಲ್ಲ. ನವನೀತ ಭಾವನ ಸಂಬಂಧಿಕರ ಪೈಕಿಯೂ ಇಂತಹ ಸುಂದರಾಂಗ ಇಲ್ಲ ಎಂದು ಒಪ್ಪಿಕೊಂಡ ಮನಸ್ಸು ಮನೆ ತಲುಪುವ ಹೊತ್ತಿಗೆ ಮಳೆಗಾಲದ ಆಗಸದಂತಾಗಿತ್ತು. ಅದರ ಪ್ರತಿಬಿಂಬ ಕಣ್ಣು.

ಗೇಟು ತೆರೆಯುತ್ತಿದ್ದ ಹಾಗೆಯೇ ಕವಿತಕ್ಕ ಓಡಿ ಬಂದಳು. "ಸವಿತಾ..." ಎಂದು ತಬ್ಬಿಕೊಂಡಳು. "ಏನು ರಂಪಾಟ ಮಾಡಿದ್ದೀ ಮಾರಾಯ್ತೀ. ನಿನ್ನ ಭಾವನ ಗೆಳೆಯ ಅವ್ರು. ನಮ್ಮ ಮದುವೆಯಲ್ಲಿ ನಿನ್ನನ್ನು ನೋಡಿ ಮೆಚ್ಚಿ ಈಗ ಪಪ್ಪ-ಅಮ್ಮನ ಹತ್ರ ಮಾತಾಡ್ಲಿಕ್ಕೆ ಅಂತ ನಮ್ಮ ಒಟ್ಟಿಗೇ ಬಂದವರು ಪೇಟೆಯಲ್ಲಿ ಏನೋ ಕೆಲ್ಸ ಉಂಟೂಂತ ನಿಂತಿದ್ದರು. ಬರ್ತಾ ನಿನಗೆ ಸಿಕ್ಕಿದ್ರಂತಲ್ಲಾ. ಏನೇನೋ ಮಾತಾಡಿದ್ಯಂತೆ? ಅವರೂ ರವಿಯೂ ಹೊಟ್ಟೆ ಹಿಡ್ದು ನಗಾಡ್ತಿದ್ದಾರೆ." ಎಂದಾಗ ಕಣ್ಣ ಕಾರ್ಮೋಡದಲ್ಲಿ ಮಿಂಚು ಸುಳಿದು ಮಳೆ ಸುರಿಯಿತು. ಅಕ್ಕ ಭಾವ ಬಂದ ಖುಷಿಯೂ ಹಿತವೆನಿಸಲಿಲ್ಲ. ಇಷ್ಟೆಲ್ಲ ತಿರುಳುಗಳಿದ್ದುದು ನನಗೆ ತಿಳಿದಿರಲಿಲ್ಲ.

ಆಗಲೇ ಹೊರಬಂದ ಭಾವ ಮಾತ್ರ, "ಏನು ನಡೀತಾ ಉಂಟು ನಿಮ್ಮೊಳಗೆ? ಗೇಟಿನ ಬದಿಯಲ್ಲೇ ಏನು ಹೇಳಿ ಅವ್ಳನ್ನು ಅಳಿಸ್ತಿದ್ದೀ ಕವಿತಾ? ಕಾಲೇಜಿಂದ ಸುಸ್ತಾಗಿ ಬರ್ತಿದ್ದಾಳೆ ಅಂತ ನಿನ್ಗೂ ಯೋಚ್ನೆ ಬೇಡ್ವಾ? ಬಾ ಸವಿತಾ, ಯೋಚಿಸ್ಬೇಡ. ಎಲ್ಲಾ ಸರಿಯಾಗ್ತದೆ. ಒಳಗೆ ಬಾ..." ಎಂದು ವೇದಾಂತಿಯಂತೆ ಹೇಳಿದಾಗ ಅತ್ತಿತ್ತ ನೋಡದೆ ನೇರವಾಗಿ ನನ್ನ ರೂಮಿಗೆ ಹೋಗಿ ಬಾಗಿಲು ಹಾಕಿ ಮಂಚದ ಮೇಲೆ ಬೋರಲು ಬಿದ್ದು ಅಳತೊಡಗಿದೆ. ಬಾಗಿಲು ತೆರೆದ ಸದ್ದಾಯ್ತು. ಅಮ್ಮ ಬಂದಿರಬೇಕು ಅಂದುಕೊಂಡು ಏಳಬೇಕು ಅನ್ನುವಷ್ಟರಲ್ಲೇ ನನ್ನೆರಡೂ ಭುಜಗಳನ್ನು ಹಿಡಿದೆತ್ತಿದ ಆತ ಮೃದುವಾಗಿ, "ಸವಿತಾ, ನನ್ನ ಸವಿತಾ, ಅಳ್ಬೇಡ. ನಾನು, ನಿನ್ನ ಅವಿನಾಶ್ ಹೇಳ್ತಿದ್ದೇನೆ, ಅಳ್ಬೇಡ ಪ್ಲೀಸ್..." ಎಂದಾಗ ತಲೆಯೆತ್ತಿ ಆತನ ಮುಖ ನೋಡಿದೆ. ನಿರ್ಮಲ ವಾತ್ಸಲ್ಯಭರಿತ ಕಣ್ಣುಗಳನ್ನು ಎದುರಿಸಲಾರದೇ ಮುಖ ತಗ್ಗಿಸಿ ಬಿಕ್ಕಳಿಸುತ್ತಾ, "ನನ್ನನ್ನ ಕ್ಷಮಿಸಿ. ಆಗ ನಾನು ಮಾತಾಡಿದ್ದನ್ನೆಲ್ಲಾ ಮರ್ತು ಬಿಡಿ. ಪ್ಲೀಸ್, ಕ್ಷಮಿಸಿ..." ಎಂದೆ. ಹಗುರವಾಗಿ ನನ್ನ ಗಲ್ಲ ಹಿಡಿದೆತ್ತಿದ ಅವರು, "ನನ್ನ ಸವಿತಾ ಅಂತ ಕರೆದ ಮೇಲೂ ಕ್ಷಮೆಯ ಮಾತು ಬೇಕಾ?" ಎಂದು ನಕ್ಕಾಗ ನನ್ನ ನಗುವನ್ನು ಮರೆಸಲು ಕೋಣೆಯಿಂದ ಹೊರಗೆ ಓಡಿದೆ. ಬಾಗಿಲಲ್ಲೇ ನಿಂತಿದ್ದ ಅಣ್ಣನಿಗೂ ಢಿಕ್ಕಿ ಹೊಡೆದು ಅಡುಗೆಮನೆಗೆ ನುಗ್ಗಿದಾಗ ಅವರಿಬ್ಬರ ಗಲಗಲ ನಗು ನನ್ನನ್ನಟ್ಟಿಸಿಕೊಂಡು ಬಂದು ಮುತ್ತಿಕೊಂಡಿತು.

(ನನ್ನ ಮೊತ್ತ ಮೊದಲ ಕಟ್ಟು ಕಥೆ, ಬರೆದದ್ದು ೧೯೮೫ ಅಕ್ಟೋಬರ್/ ನವೆಂಬರಲ್ಲಿ. ಇದಕ್ಕೂ ನನ್ನ ಜೀವನಕ್ಕೂ ಯಾವುದೇ ಸಂಬಂಧವಿಲ್ಲ, ಇದನ್ನು ಬರೆದದ್ದು ನಾನು ಎನ್ನುವುದನ್ನು ಬಿಟ್ಟರೆ! ಆದ್ದರಿಂದ ಯಾವುದೇ ಖಾಸಗಿ ಪ್ರಶ್ನೆಗಳನ್ನು ಗೌರವಿಸಲಾಗುವುದಿಲ್ಲ.)