ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday 20 December, 2010

ಸುಮ್ಮನೆ ನೋಡಿದಾಗ...೦೮

ಮಧ್ಯಾಹ್ನದ ಊಟ ಮುಗಿಸಿ ಹರಿಣಿ ನಿದ್ದೆಗೆ ಜಾರಿದಳು. ತಂಗಿ ಶಂಕರಿಯ ಮನೆಯಲ್ಲಿ ಅಮ್ಮನನ್ನು ಬಿಟ್ಟು ಬಂದಿದ್ದ ಸುಮುಖ್ ಹರಿಣಿಯನ್ನು ಇಲ್ಲಿ ನೋಡಿ ಹುಬ್ಬೇರಿಸಿದ್ದರು, ಅಷ್ಟೇ. ಕುರ್ಚಿಯಲ್ಲೇ ನಡುಹಗಲಿನ ಸಿಹಿನಿದ್ದೆಗೆ ಜಾರಬೇಕೂಂತ ಅಂದಾಜು ಮಾಡ್ತಾ ಪೇಪರ್ ಹಿಡಿದವರನ್ನು ರೂಮಿಗೆ ಕರೆದೆ. ಮತ್ತೊಮ್ಮೆ ಹುಬ್ಬು ಹಾರಿಸುತ್ತಾ ಕಳ್ಳ ನಗುವಿನ ಒಟ್ಟಿಗೆ ಸಣ್ಣಗೆ ಸಿಳ್ಳೆ ಹಾಕುತ್ತಾ ಒಳಗೆ ಬಂದವರ ಬೆನ್ನಿಗೊಂದು ಗುದ್ದಿ ಹೇಳಿದೆ, ‘ಸರಸಕ್ಕೆ ಕರ್ದದ್ದೇ ಅಲ್ಲ ನಾನು. ವಿಷಯ ಗಂಭೀರವಾಗಿದೆ. ಸ್ವಲ್ಪ ಗಮನ ಇಟ್ಟು ಕೇಳಿ, ಆಯ್ತಾ?’

ನನ್ನ ಸೀರಿಯಸ್ ಸ್ವರ ಅವರ ರೋಮಿಯೋನನ್ನು ಓಡಿಸಿತ್ತು. ಮಕ್ಕಳೇ, ನಿಮ್ಮ ಮುಂದೆ ಇದೆಲ್ಲ ಹೇಳ್ಲಿಕ್ಕೆ ನಂಗೇನೂ ತೊಂದ್ರೆ ಇಲ್ಲ. ಯಾಕಂದ್ರೆ, ನಾಳೆ ನಾಳೆ ಅನ್ನುವಾಗ ನೀವೂ ಇದೇ ದಾರಿಯಲ್ಲಿ ಬರುವವರು. ಆದ್ರಿಂದ ನಂಗೇನೂ ನಾಚಿಕೆ ಇಲ್ಲ, ಇದನ್ನೆಲ್ಲ ಬಿಚ್ಚಿಡ್ಲಿಕ್ಕೆ. ಕೇಳಿ. ನನ್ನ ಸೀರಿಯಸ್ ಸ್ವರ ಕೇಳಿ, ಅವರೂ ಗಂಭೀರವಾದರು. ಹರಿಣಿ ಹಿಂದಿನ ರಾತ್ರೆಯೆಲ್ಲ ನಿರೂಪಿಸಿದ ಅವಳ ಐದು ವರ್ಷದ ಜೀವನವನ್ನು ಸುಮುಖ್ ಮುಂದೆ ಬಿಚ್ಚಿಟ್ಟೆ.

“ಚಿನ್ಮಯ್ ಕನ್ಸಲ್ಟೆನ್ಸಿಯ ಮ್ಯಾನೇಜರ್, ಹರಿಣಿಯ ಮಾವನ ಪರಿಚಯಸ್ಥ ಚಿದಾನಂದ. ಇವಳನ್ನು ಪಿ.ಎ. ಆಗಿ ನೇಮಿಸಿಕೊಂಡಿದ್ದ. ಮೊದಮೊದಲು ಎಲ್ಲವೂ ಸುಸೂತ್ರವಾಗಿಯೇ ಇತ್ತು. ಏಳೆಂಟು ತಿಂಗಳು ಕಳೆಯುವಾಗ ಆಫೀಸಿನ ಎಲ್ಲರ ಸ್ನೇಹ ಗಳಿಸಿಕೊಂಡಿದ್ದಳು. ಅಲ್ಲೇ ಇನ್ನೊಬ್ಬ ಮ್ಯಾನೇಜರ್ ವಿನ್ಯಾಸ್. ಇವಳ ಬಗ್ಗೆ ವಿಶೇಷ ಅಕ್ಕರೆ ತೋರಿಸ್ತಿದ್ದ. ಸುಮಾರು ಒಂದು ವರ್ಷದ ವರೆಗೂ ಇವಳಿಗದು ಗಮನಕ್ಕೇ ಬಂದಿರಲಿಲ್ಲ. ಒಂದು ದಿನ ಚಿದಾನಂದ್ ನೇರವಾಗಿ ಹರಿಣಿಯನ್ನು ಕರೆದು ವಿನ್ಯಾಸ್ ಅವಳನ್ನು ಇಷ್ಟ ಪಟ್ಟಿರುವುದಾಗಿ ತಿಳಿಸಿದ. ಬಾಸ್ ಬಾಯಿಂದ ಇಂಥ ಅನಿರೀಕ್ಷಿತ ಸುದ್ದಿ, ಇವಳ ದೃಢ ಮನಸ್ಸನ್ನು ಕದಡಿತು. ಸಮಯಾವಕಾಶ ಕೇಳಿ ರಜೆ ಹಾಕಿ ಊರಿಗೆ ಹೋದಳು. ಅಮ್ಮ, ಅಜ್ಜಿ, ಮಾವ, ಅತ್ತೆ- ಎಲ್ಲರ ಅಭಿಪ್ರಾಯವೂ ಒಂದೇ. ಒಂದು ವಾರ ಊರಲ್ಲಿದ್ದು, ತಲೆ ಕೆಡಿಸಿಕೊಂಡು ಮತ್ತೆ ಬೆಂಗಳೂರಿಗೆ ಬಂದಾಗ ಅಚ್ಚರಿ ಕಾದಿತ್ತು. ಅವಳು ಊರಿಗೆ ಹೋಗುವ ಮೊದಲೇ ವಿನ್ಯಾಸ್ ತನ್ನ ಮುಖಾಂತರ ಊರಿಗೆ ಪತ್ರ ಬರೆಸಿದ ವಿಷಯ ಚಿದಾನಂದ್ ತಿಳಿಸಿದರು. ಅದಕ್ಕೇ ಅವರೆಲ್ಲರೂ ಒಮ್ಮತದಲ್ಲಿದ್ದರು ಎನ್ನುವುದು ಅವಳಿಗೆ ಹೊಳೆಯಿತು. ಅರೆಮನಸ್ಸಿನಿಂದಲೇ ವಿನ್ಯಾಸ್ ಜೊತೆ ಮದುವೆಗೆ ಒಪ್ಪಿಕೊಂಡಳು.

ಒಪ್ಪಿಗೆ ಕೊಟ್ಟದ್ದೇ ಸಾಕೆನ್ನುವ ಹಾಗೆ ವಿನ್ಯಾಸ್ ಆಕೆಯನ್ನು ಓಲೈಸತೊಡಗಿದ. ಅವನ ಮೃದು ಮಾತು, ನಾಜೂಕು ನಡವಳಿಕೆ, ಪ್ರೀತಿ ಪ್ರವಾಹ, ಔಟಿಂಗ್ ಔತಣ, ರೊಮ್ಯಾಂಟಿಕ್ ರೋಮಾಂಚನ... ಎಲ್ಲದರ ಹೊನಲಲ್ಲಿ ತೇಲಿ ಮುಳುಗಿ ಕಳೆದೇ ಹೋದಳು ಸಿಡಿಗುಂಡು ಹರಿಣಿ. ಅವಳ ಕೋಪಾಟೋಪ ಎಲ್ಲವೂ ಶಾಂತಸಾಗರದಲ್ಲಿ ಲೀನ. ತನ್ನ ಹಿರಿಯರನ್ನು ಒಪ್ಪಿಸಿಯೇ ತಾನು ಮದುವೆಯಾಗುವುದು ಅಂತಲೇ ಮದುವೆಯ ಮಾತನ್ನು ಮುಂದೂಡುತ್ತಾ ಬಂದವನ ಕಣ್ಣಲ್ಲಿ ಕಣ್ಣಿಟ್ಟು ತನ್ನ ನೋಟದ ಗುರಿ ತಪ್ಪಿಸಿಕೊಂಡಳು. ಹೀಗೇ ಎರಡು ವರ್ಷಗಳೇ ಕಳೆದವು. ಇಷ್ಟಾದರೂ ಇವಳ ಅಮ್ಮ, ಅಜ್ಜಿ, ಮಾವನಾಗಲೀ ವಿನ್ಯಾಸನ ಮನೆಯವರಾಗಲೀ ಮದುವೆಯ ಬಗ್ಗೆ ಯಾವುದೇ ಮಾತೆತ್ತಲಿಲ್ಲ. ಪ್ರೇಮದಲ್ಲಿ ಈಜುತ್ತಿದ್ದವಳಿಗೆ ತಾನೆಲ್ಲಿದ್ದೇನೆನ್ನುವ ಅರಿವು ಇರಲಿಲ್ಲ. ಎತ್ತ ಸಾಗುತ್ತಿದ್ದೇನೆನ್ನುವುದು ಗಮನಕ್ಕೇ ಬರಲಿಲ್ಲ. ತನ್ನ ರೂಮ್ ಖಾಲಿಮಾಡಿ ಆತನ ಜೊತೆಯಾಗಿ ಬಾಡಿಗೆ ಮನೆಯನ್ನೂ ಮಾಡಿದ್ದಾಯ್ತು.

ಒಂದೇ ಮನೆಯಿಂದ ಒಂದೇ ಆಫೀಸಿಗೆ ಅವನ ಬೈಕಿನಲ್ಲಿ ಹೋಗಿಬರುವ ಯಾವುದೋ ಘಳಿಗೆಯಲ್ಲಿ ವಿನ್ಯಾಸ್ ತನ್ನವನು ಅನ್ನಿಸಿತ್ತು ಹರಿಣಿಗೆ. ತಾನೂ ಅವನವಳಾಗುವ ಹಂಬಲ ಚಿಮ್ಮಿತು. ಬಯಕೆಯ ಕೋಡಿ ಒಡೆಯಲು ಅಷ್ಟೇ ಸಾಕಾಗಿತ್ತು. ಇಬ್ಬರಿಗೂ ಅದೇ ಬೇಕಾಗಿತ್ತು; ಬೆರೆತರು. ಬಂಧವಿಲ್ಲದ ಬಂಧನದಲ್ಲಿ ಸೆರೆಯಾದರು. ಸಮಯ ಯಾರನ್ನೂ ಕೇಳಲಿಲ್ಲ, ಕಾಯಲಿಲ್ಲ. ಪ್ರಕೃತಿ ತನ್ನ ಕೆಲಸ ಮುರಿಯಲಿಲ್ಲ. ಮುಂಜಾಗರೂಕತೆ ಮಾಡಿಯೂ ಹರಿಣಿಯ ಲೆಕ್ಕ ನೆಲೆ ತಪ್ಪಿತ್ತು. ಅಮ್ಮನಿಗೆ ಫೋನ್ ಮಾಡಿದಳು. ‘ಹಾದಿ ತಪ್ಪಿದ ನೀನು ನನ್ನ ಮಗಳೇ ಅಲ್ಲ. ನೀನಿಲ್ಲಿಗೆ ಬಂದು ನನ್ನ ತೌರಲ್ಲಿ ನನ್ನ ಮರ್ಯಾದೆ ತೆಗೀಬೇಡ’ ಅಂದುಬಿಟ್ಟರು ಆ ಮಹಾತಾಯಿ. ಅಮ್ಮನೇ ಹಾಗಂದಮೇಲೆ ಇನ್ನು ಯಾರನ್ನೂ ನೆಚ್ಚಿಕೊಂಡು ಫಲವಿಲ್ಲ ಅನ್ನಿಸಿ ವಿನ್ಯಾಸ್ ಜೊತೆಗೇ ಮಾತೆತ್ತಿದಳು. ನಿನ್ನ ಹಿರಿಯರು ಒಪ್ಪುವ ಹೊತ್ತಿಗೆ ನಾವಿಬ್ರೂ ಅಜ್ಜ-ಅಜ್ಜಿ ಆಗಿರ್ತೀವೇನೋ. ಈಗ್ಲಾದ್ರೂ ದೇವಸ್ಥಾನದಲ್ಲಿ ಮದುವೆ ಆಗೋಣ ಅಂದಳು. ಸಾಧ್ಯವೇ ಇಲ್ಲ. ಹೀಗೇ ಮುಂದುವರಿಯೋದಕ್ಕೂ ಸಾಧ್ಯವಿಲ್ಲ. ತೆಗೆಸಿಕೋ ಅಂದುಬಿಟ್ಟ. ಚಿದಾನಂದ್ ಕೈಚೆಲ್ಲಿದ. ನಿಮ್ಮ ಸಮಸ್ಯೆಯಲ್ಲಿ ನನ್ನದೇನು ಸಾರಥ್ಯ ಅಂತ ಚಾಟಿಯೆತ್ತಿದ. ವಿನ್ಯಾಸ್ ಜೊತೆಯಾಗಿ ಇನ್ನು ಬದುಕುವುದರಲ್ಲಿ ಅರ್ಥವಿಲ್ಲ ಅಂತನ್ನಿಸಿ ಸೀದಾ ನಮ್ಮನೆಗೇ ಬಂದಿದ್ದಾಳೆ. ಈಗೇನ್ ಮಾಡೋದು ಹೇಳಿ...’’ ದೀರ್ಘ ಮೌನ ನಮ್ಮಿಬ್ಬರ ನಡುವೆ ಹಬ್ಬಿಕೊಂಡಿತು.