ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Sunday, 18 May, 2008

ಬಿಸಿ.... ಬಿಸಿ....

Friday, March 30, 2007

ರವಿವಾರ ಮುಂಜಾನೆ ಯಾರೂ ಮನೆಯೊಳಗಿಲ್ಲ,
ಹೊರಗೆಲ್ಲೋ ಹೋಗಿಹರು ಅತ್ತೆ ಮಾವದಿರು
ಆಗಷ್ಟೇ ಮುಖ ತೊಳೆದ ಸೂರ್ಯವಂಶಿ ನಲ್ಲ,
ದಿನ ಪತ್ರಿಕೆಯ ಹಿಡಿದ; ಮೌನ ಮನೆಯೆಲ್ಲ.


ವಾರಾಂತ್ಯದ ಅಭ್ಯಂಜನ ಮುಗಿಸಿ ಹೊರಬಂದೆ,
ಧ್ಯಾನಸ್ಥನಂತಿದ್ದ ಪತಿಯ ಬಳಿ ನಿಂದೆ,
"ಸವಿಯಾದ ಬಿಸಿಯಾದುದೇನನ್ನೋ ಕೊಡುವೆ"-
ಎಂದು ಪತ್ರಿಕೆಯ ತೆಗೆದಿರಿಸಿ ಸನಿಹ ಕುಳಿತೆ.


"ಸವಿಯಿರಲಿ, ಬಿಸಿ ಮಾತ್ರ ಅತಿಯಾಗದಿರಲೆಂ"ದ,
"ತುಟಿಗಳಿಗೆ ಬಿಸಿಯಾಗಿ, ಬಾಯೊಳಗೆ ಸವಿ"ಯೆಂದೆ,
"ಕೈಗಳಿಗೆ? ನಾಲಗೆ, ಕೊರಳಿಗೆ ಏನೂ ಆಗದೆ?"
"ಬೆರಳುಗಳಲ್ಲಿ ಮೆಲ್ಲನೆ ಹಿಡಿದೆತ್ತಿ ಬಾಯೊಳಿಡೆಂ"ದೆ.


ಹಿತವಾಗಿ ಮೃದುವಾಗಿ ಹಬೆಯಾಡುವ ಬಿಸಿಯ,
ವಿಶಿಷ್ಟ ಸುವಾಸನೆಯ, ಆಸೆ ತರಿಸುವ ಸವಿಯ,
ಒಮ್ಮೆ ಮುಗಿದರಿನ್ನೊಮ್ಮೆ ಪಡೆವ ರುಚಿಯ,
ತಟ್ಟೆಯೊಳಿರಿಸಿ ತಂದಿಟ್ಟೆ, ಉಪಾಹಾರಕ್ಕೆ ಇಡ್ಲಿಯ.
(೧೪-ಸೆಪ್ಟೆಂಬರ್-೧೯೯೭)

ಅಕ್ಷರ: ಸುಪ್ತದೀಪ್ತಿ suptadeepti ಕಾಲ: 10:35 PM
Labels: , ,

15 ಪತ್ರೋತ್ತರ:

Mahesh Chevar said...
kasaragodudu chevar panpi jage yenna ooru. Muliyar kend gothundu. Bukka eer daaada manthondullar. Sadyog bangalorudu newspapered sub editor. Kari varsho yenna journalism course mugind. from Mangalore university. eerena bagge vivaravaad bared theripale...
March 31, 2007 3:08 AM

Shiv said...
ಸುಪ್ತದೀಪ್ತಿಯವರೇ,
ಛೇ ಛೇ... ನಾವು ಎನೋ ತಿನಿಸ್ತಿದಿರಾ ಅನ್ನುವಾಗಲೇ ಹೀಗೆ ನೀವು ಇಡ್ಲಿ ತಿನ್ನಿಸಿ ರಸಭಂಗ ಮಾಡಿದ್ದು ಸರಿಯೇ ;)
ಇಡ್ಲಿ ತಿನ್ನಿಸುವ ಎಪಿಸೋಡೇ ಇಷ್ಟು ರಸಮಯವಾಗಿದ್ದರೆ.. ಬೇರೆ ಎಪಿಸೋಡ್‍ಗಳು ಹೇಗಿರಬಹುದು :)
March 31, 2007 9:02 AM

suptadeepti said...
@ mahesh chevar: ಮಹೇಶ್, ಈರೆಗ್ ಸ್ವಾಗತ. ನಮನ ಸ್ವಂತ ವಿಷಯ ಬರೆಯೆರೆ ಈ ಜಾಗೆ ಸರಿಯತ್ತ್. ಈರೆನ ಮೈಲ್ ಅಡ್ರೆಸ್ ಕೊರ್ಲೆ.


@ Shivu: ರಸ ಭಂಗ ಅಂದುಕೊಂಡರೆ ಅದು ಒಂದು ದೃಷ್ಟಿಕೋನ ಆಯ್ತು. ಶೃಂಗಾರಮಯ ಸನ್ನಿವೇಶ ಬದಿಗೆ ಸರಿದು ಹಾಸ್ಯ ರಸ ಹೊಮ್ಮುವುದು ಈ ಕವನದ ಉದ್ದೇಶ. ಅದು ನೆರವೇರಿದೆ ಅಂತ ಅಂದುಕೊಂಡಿದ್ದೇನೆ. ಎಪಿಸೋಡ್ ಮಾಡೋದಿಕ್ಕೆ ನಮ್ಮ ಜೀವನ ಕಿರುತೆರೆ ಧಾರಾವಾಹಿಗಳಲ್ಲವಲ್ಲ!!
March 31, 2007 1:48 PM

ಶ್ರೀವತ್ಸ ಜೋಶಿ said...
ಕೆಲವು ಬಿಸಿ ಬಿಸಿ ಟಿಪ್ಪಣಿಗಳು:
೧. ಈ ಕವನವನ್ನು ಅವತ್ತು (೧೯೯೭) ಬರೆಯುವಾಗ ನಿಮಗೆ ನೆಗಡಿ (ದೆಗಡಿ?) ಆಗಿತ್ತಾ ಅಥವಾ ಈಗ ಹತ್ತು ವರ್ಷಗಳ ನಂತರ (೨೦೦೭) ಬ್ಲಾಗಾರೋಹಣ ಮಾಡುವಾಗ ದೆಗಡಿಯಾಗಿದೆಯಾ? ಅತ್ತೆ ಮಾವದಿರು ಎಂದು ಬರೆದಿದ್ದೀರಲ್ಲಾ? ಅದು ಅತ್ತೆ ಮಾವಂದಿರು (ದೆಗಡಿ ಪ್ರಭಾವದಿಂದ) ಎಂದಾಗಬೇಕಿತ್ತೇ?
೨. ಒಂದನೇ ಚರಣದ ’ನಲ್ಲ’ ಮತ್ತು ಎರಡನೆ ಚರಣದ ’ಪತಿ’ ಒಂದೇ ವ್ಯಕ್ತಿ ಎಂದು ನನ್ನ ಆರೋಗ್ಯಕರ ಗ್ರಹಿಕೆ.
೩. ಮೇಲಿನ ಗ್ರಹಿಕೆಗೆ ಉತ್ತರ ಹೌದು ಎಂದಾದರೆ, ’ನಲ್ಲ’ ಮತ್ತು ’ಪತಿ’ ಯಾಕೋ ಸಿನೊನಿಮ್ಸ್ ಆಗಿ ಸರಿಹೋಗೋದಿಲ್ಲ.
೪. ನಲ್ಲ ಅಥವಾ ಪತಿಯು ’ಮುಖ ತೊಳೆವ’ ಪ್ರಕ್ರಿಯೆಯು ’ಹಲ್ಲುಜ್ಜುವುದನ್ನೂ ಒಳಗೊಂಡಿತ್ತು’ ಎಂದು ನಾವು ಓದುಗರು ಗ್ರಹಿಸಿಕೊಳ್ಳಬೇಕೇ?
೫. ’ಇಡ್ಲಿ(ಯನ್ನು) ಎಲ್ಲಿ ಇಡ್ಲಿ?’ ಎಂದು ಕೇಳಿದಿರಾ?
೬. ಆಗಷ್ಟೇ ವಾರಾಂತ್ಯದ ಅಭ್ಯಂಜನವಾಗಿದ್ದರಿಂದ ಇಡ್ಲಿ ಕೊಟ್ಟಾಕೆಯ ಮೈ ಸಹ ’ಹಿತವಾಗಿ ಮೃದುವಾಗಿ ಹಬೆಯಾಡುವ ಬಿಸಿಯ’ ಹೊಂದಿತ್ತು ಎನ್ನೋಣವೇ?
April 1, 2007 4:45 AM

suptadeepti said...
@ ಶ್ರೀವತ್ಸ:
ನಿಮ್ಮ ಬಿಡಿ-ಬಿಡಿಯಾದ ಆರು ರನ್ನುಗಳಿಗೆ ಒಂದೇ ಸಿಕ್ಸರ್-ಫಿಕ್ಸರ್ ಹೊಡೆಯಲೇ?
ಅದಾದರೆ: "ಕವನ ಓದುಗರ ಅನುಭವ-ವಿಸ್ತಾರದ ಮೇಲೆ ಬೇರೆ ಬೇರೆ ಅರ್ಥಗಳನ್ನು ಕೊಡುತ್ತದೆ; ಅದೇ ಕವನದ ಜೀವಾಳ, ಹೆಗ್ಗಳಿಗೆ."


ಇನ್ನು ಬಿಡಿ-ಬಿಡಿಯಾಗಿಯೇ ಬಡಿಸುವುದಾದರೆ:

೧) ನೆಗಡಿಯಾಗುತ್ತಲೇ ಇರುತ್ತದೆ, ಸೈನಸ್ ತೊಂದರೆ ಬರುತ್ತಲೇ ಇರುತ್ತದೆ. ಅದರಿಂದಾಗಿ ಪ್ರತೀಬಾರಿ ಒಂದೊಂದು ಸೊನ್ನೆ ನುಂಗುವುದಾದರೆ ಕೆಲವರು "ಉರುಟುರುಟು" ಆಗ್ತಿರೋದಕ್ಕೆ ಕಾರಣ ಅದೇ ಇರಬೇಕು.

೨) "ನಲ್ಲ" ಮತ್ತು "ಪತಿ" ಈ ಕವನದಲ್ಲಿ ಸಮಾನಾರ್ಥಕಗಳಾಗಿ ಬಂದಿವೆ. ನಿಮ್ಮ ಆರೋಗ್ಯವೂ ಚೆನ್ನಾಗಿದೆ.

೩) ಆರೋಗ್ಯ ಯಾಕೆ ಅಷ್ಟು ಬೇಗ ಕೆಟ್ಟಿತು? ನಲ್ಲ ಪದದ ಅರ್ಥ ಪ್ರೀತಿ-ಪಾತ್ರ ಗಂಡು ಅಂತ, ಅಷ್ಟೇ. ಆತ ಪತಿಯೂ ಆಗಿರಬಾರದು ಅಂತೇನಿಲ್ಲವಲ್ಲ!!

೪) ನಿಮ್ಮ ಗ್ರಹಿಕೆ ನಿಮಗೆ ಬಿಟ್ಟದ್ದು, ನಿಮ್ಮ ಅಭ್ಯಾಸದ ಮೇಲೆ ಹೊಂದಿಕೊಂಡದ್ದು. ಅದಕ್ಕೆ ಈ ಕವನ ಹೊಣೆಯಲ್ಲ.

೫) "ಇಡ್ಲಿ"ಯನ್ನು ತಟ್ಟೆಯಲ್ಲಿಟ್ಟೆ ಅಂದ ಮೇಲೆ, "ಎಲ್ಲಿ ಇಡ್ಲಿ?" ಅಂತ ಕೇಳುವ ಪ್ರಶ್ನೆಯೇ ಇಲ್ಲವಲ್ಲ!

೬) ಇದೀಗ ನಿಮ್ಮ ಸ್ವಾನುಭವದ, ಕಲ್ಪನೆಯ- ನೆನಪುಗಳು, ಚಿತ್ರಗಳು ಸೇರಿಕೊಂಡಿವೆ. ಇಡ್ಲಿ ಕೊಟ್ಟಾಕೆಯ ಮೈ-ಬಿಸಿ ಹೇಗಿತ್ತೆಂದು ನನಗೇನು ಗೊತ್ತು?

ಬಾಲಂಗೋಚಿ: ಆಕೆಗೆ "ದೆಗದಿ"ಯಾಗಿದ್ದಾದದೆ, ವನ್'ದಿತ್ತು ಜ್ವರ ಬನ್'ದಿತ್ತೇನೋ?
April 1, 2007 11:17 AM


ಸುಶ್ರುತ ದೊಡ್ಡೇರಿ said...
ನೀವು ಹಿಂಗೆಲ್ಲಾ ನಮ್ಮುನ್ನ ಕನ್‍ಫ್ಯೂಸ್ ಮಾಡ್ಬಾರ್ದು... ನಾವೇನೋ ಅಂದ್ಕೊಂಡು ಓದ್ತಾ ಇದ್ವಿ... ಕೊನಿಗೆ ನೋಡಿದ್ರೆ ಬರೀ ಇಡ್ಲಿ... ಛೇ ! :)
April 2, 2007 1:01 AM


ಸಿಂಧು Sindhu said...
ಅಡ್ ಬಿದ್ದೆ ನಿಮ್ಮ ಕಲ್ಪನೆಗೆ.. ಆಹ್ಲಾದವನ್ನ ತುಂಟತನದೊಂದಿಗೆ ಸೇರಿಸಿ ಸವಿದರೆ ಸಿಗುವ ರುಚಿಯಿದೆಯಲ್ಲಾ ನೀವು ಮಾಡಿದ ತಿಂಡಿಗೆ, ಬಡಿಸಿದ ರೀತಿಗೆ.. ಚಂದ ಕವಿತೆ. ನಿಮ್ಮ ಒಂದರೊಳಗಿನ್ನೊಂದನ್ನ ನೇಯುವ ಪ್ರತಿಭೆಗೆ ಮನಸೋತಿದ್ದೇನೆ. - ಒಮ್ಮೆ ಮುಗಿದರಿನ್ನೊಮ್ಮೆ ಪಡೆವ ರುಚಿಯ - ಇರುಳ ಕಳೆದು ಇರುಳ ನಡುವೆ ಬೆಳೆವ ಚಂದಿರ - ಇತ್ಯಾದಿ..
April 2, 2007 1:24 AM


Alpazna said...
ಆಹಾ!!ತುಂಬಾನೆ ಆನಂದವಾಯ್ತು, ಇದನ್ನು ಓದಿ.. :)
April 2, 2007 6:24 AM


suptadeepti said...
ಎಲ್ಲರ ಮೆಚ್ಚುಗೆಗೆ ಧನ್ಯವಾದಗಳು.

@ ಸುಶ್ರುತ: ಕನ್'ಫ್ಯೂಸ್? ಇಷ್ಟಕ್ಕೇ ಕನ್'ಫ್ಯೂಸ್ ಆದ್ರೆ ಮುಂದಕ್ಕೇನು? ಬೇರೇನನ್ನೋ ಕಲ್ಪಿಸಿ ಇಡ್ಲಿ ಸಪ್ಪೆ ಆಗ್ಹೋಯ್ತಾ? ಛೆ, ಛೆ!! ಪಾಪ ಇಡ್ಲಿ.

@ ಸಿಂಧು: ಅಯ್ಯೋ ಮಾರಾಯ್ತಿ, ಅಡ್ಡ ಬಿದ್ರೆ ಮುಂದೆ ದಾರಿ ಕಾಣಲ್ಲ. ನೇರ ನಡೆ, ಜೊತೆಯಾಗಿ. ನಿನಗಿಷ್ಟವಾಗಿದ್ದಕ್ಕೆ ಸಂತೋಷ.

@ alpazna: Thanks.
April 2, 2007 10:02 AM


Enigma said...
:-) i would prefer Idli any day tahn something else :-P. Nimma comments oddie bahala maja vagi uttara baritheera :-)
April 4, 2007 11:58 AM


suptadeepti said...
@enigma: ಓಹೋ, prefer ಇಡ್ಲಿ...! ಹಾಗಾದ್ರೆ ನೀವು ಕನಸುಗಾರ ಅಲ್ಲ ಅಂತ ತಿಳಿಯಲೆ? ನಿಮ್ಮ ಟಿಪ್ಪಣಿಗೆ, ಮೆಚ್ಚುಗೆಗೆ ವಂದನೆಗಳು.
April 4, 2007 1:16 PM


ಅಸತ್ಯ ಅನ್ವೇಷಿ said...
ಇಡ್ಲಿ ತಟ್ಟೆಯಲ್ಲೇ ಇಡಲಿ

ಯಾರು ಬೇಕಾದರೂ ಕೊಡಲಿ

ಆದರೆ ಅದನು ತುಂಡರಿಸಲು

ಬೇಕೆಂದರೆ ಹೇಗೆ "ಕೊಡಲಿ"?
April 4, 2007 8:08 PM


suptadeepti said...
@ಅನ್ವೇಷಿ: "ಆದರೆ ಅದನು ತುಂಡರಿಸಲು ಬೇಕೆಂದರೆ ಹೇಗೆ "ಕೊಡಲಿ"?" :- ನಿಮ್ಮ ಮನೆಯ ಇಡ್ಲಿ ಬಗ್ಗೆ ಹೇಳುತ್ತಿದ್ದೀರ? ನಾವು ನಿಮ್ಮಲ್ಲಿಗೆ ಬರುವಾಗ ಬರೀ ಉಪ್ಪಿಟ್ಟು ಮಾಡಿದರೂ ಸಾಕು, ಇಡ್ಲಿಯೇ ಬೇಕೆಂದಿಲ್ಲ.
April 4, 2007 8:56 PM


Ranjitha said...
deepthi thumba chennagede.... :)

nanu idli thenuvaga nemma nenapu kandetha eruthe... :)
January 19, 2008 6:18 AM


suptadeepti said...
ಧನ್ಯವಾದ ರಂಜಿತಾ. ನನ್ನನ್ನು ನೆನಪಿಸಿಕೊಳ್ಳುತ್ತಾ ಇಡ್ಲಿ ತಿಂದರೆ ಅದು ಸಪ್ಪೆಯಾಗಿ ತೋರದೆ? ಯಾವುದೇ ತಿಂಡಿಯನ್ನು ಅದರ ಪೂರ್ತಿ ಸ್ವಾದದ ಜೊತೆ ಸವಿಯಿರಿ, ಯಾವುದೋ/ಯಾರದೋ ನೆನಪನ್ನು ನೆಂಜಿಕೊಳ್ಳೋದು ಬೇಡ, ಅಲ್ವಾ?
January 19, 2008 10:27 AM

ಚಿಂತನೆಯ ಹಕ್ಕಿ

Tuesday, March 27, 2007

ಕಂಡು ಕಾಣದ ಹಕ್ಕಿ, ಗುಂಡಿಗೆಯ ಒಳಹೊಕ್ಕಿ,
ಅಂಡಲೆವ ಮನದೊಳಗೆ ದುಂಡು ಮನೆ ಮಾಡಿತು.


ಆಟವಾಡಿದ ವಯಸು, ಪಾಠ ಓದಿದ ಕನಸು,
ಊಟ ತಿನಿಸಿದ ಮನಸು, ಎಲ್ಲಿ ಹೋದವೆಂಬ ಚಿಂತನೆ!


ಬಿದ್ದು ತರಚಿದ ಮಂಡಿ, ಕದ್ದು ಸವಿದಿಹ ತಿಂಡಿ,
ಸದ್ದು ಮಾಡಿದ ಬಂಡಿ, ಈಗ ಯಾರವೆಂಬ ಚಿಂತನೆ!


ಅಪ್ಪ ಬೆಳೆಸಿದ ಆಲ, ಕಪ್ಪ ಗಳಿಸಿದ ಹೊಲ,
ತೆಪ್ಪ ಇಳಿಸಿದ ಜಲ, ಯಾಕೆ ಅಳಿದವೆಂಬ ಚಿಂತನೆ!
(ನವೆಂಬರ್, ೧೯೯೬)

ವಿ.ಸೂ.: ಈ ಹಕ್ಕಿಗೆ ನೀವೂ ರೆಕ್ಕೆ-ಪುಕ್ಕ ಚುಚ್ಚಿ, ಬಿಚ್ಚು ಗಗನಕೆ ಹಾರಲು ಹಚ್ಚಿ....
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 9:35 PM
Labels:

14 ಪತ್ರೋತ್ತರ:

Alpazna said...
ನನ್ನ (ಚಿಂತನೆಯ)ಹಕ್ಕಿ,
ನಾನು ಚುಚ್ಚಿದ ರೆಕ್ಕೆ-ಪುಕ್ಕವನ್ನೆಲ್ಲಾ
ಕಿತ್ತು ಕಿತ್ತು ನನ್ನ ತಲೆಗೇ ಹಚ್ಚಿ,
ಮೂಲೆಯಲ್ಲಿ ಕುಳಿತು ಮುಗುಳು ನಗೆನಗುತಿಹುದು..
March 28, 2007 2:32 AM

ಅಸತ್ಯ ಅನ್ವೇಷಿ said...
"ಗುಂಡು" ಕಾಣದ ಹಕ್ಕಿ
ತುಂಡಿಗೇ ಮೊರೆ ಹೊಕ್ಕಿ
ಬೀಳುತ್ತೇಳುತ ಮರಳಿ ಬೀಳುತಾ
ಪಕ್ಕದ ಮನೆ ಬಾಗಿಲು ಬಡಿಯಿತು!


ಬಿದ್ದು ತರಚಿದ ಮಂಡಿಗೆ
ತಾ ಬಿದ್ದದ್ದಂತೂ ಗುಂಡಿಗೆ
ಅಮಲಿಳಿದಾಗ ತಲೆಯಲ್ಲಿ
ಲಟ್ಟಣಿಗೆಯ ಕುರುಹಿತ್ತು!!!
March 28, 2007 8:20 AM

suptadeepti said...
@ alpazna:
ನಿಮ್ಮ ಹಕ್ಕಿಗೆ ರೆಕ್ಕೆ-ಪುಕ್ಕ ಜೋರಾಗಿ ಚುಚ್ಚಿದಿರೋ ಏನೋ, ನೋವಾಗಿರಬೇಕು, ಪಾಪ. ಆದರೂ ಮುಗುಳು ನಗುತ್ತಿದೆಯಲ್ಲ, ಸ್ವಲ್ಪ ಮುದ್ದು -ಅಲ್ಲ, -ಮದ್ದು ಮಾಡಿ.


@ ಅನ್ವೇಷಿ:
ಗುಂಡಿನ ಅನುಭವ ಜೋರಾಗಿರುವ ಹಾಗಿದೆ!? ತರಚಿದ ಮಂಡಿಗೂ ಬುರುಗೆದ್ದ ಮಂಡೆಗೂ ಸರಿಯಾದ ರಿಪೇರಿ ಮಾಡಿ(ಸಿ)ಕೊಳ್ಳಿ. March 28, 2007 10:40 AM

Enigma said...
hinge odadutha nimma blog ge bande baraha galu isthavadu bariyutha iri
March 28, 2007 10:42 AM

poornima said...
ಚೆನ್ನಾಗಿದೆ.

"ದುಂಡು ಮನೆ ಮಾಡಿತು" - ದುಂಡು ಮನೆ ಅಂದರೆ ಏನು ?
March 28, 2007 11:40 AM

ಮನಸ್ವಿನಿ said...
ಆಟವಾಡಿದ ವಯಸು, ಪಾಠ ಓದಿದ ಕನಸು,
ಊಟ ತಿನಿಸಿದ ಮನಸು, ಎಲ್ಲಿ ಹೋದವೆಂಬ ಚಿಂತನೆ!

ಸುಂದರ ಸಾಲುಗಳು.
March 28, 2007 7:42 PM

suptadeepti said...
@ enigma:
ನೀವು ಬಂದಿದ್ದು ಸಂತೋಷ, ಆಗಾಗ ಬರುತ್ತಿರಿ.


@ ಪೂರ್ಣಿಮ: ಮೆಚ್ಚುಗೆಗೆ ಧನ್ಯವಾದಗಳು.
"ದುಂಡು ಮನೆ ಮಾಡಿತು" ಮೊದಲನೆಯದಾಗಿ, ಹಕ್ಕಿ ಮನೆಗಳು ಸುಮಾರಾಗಿ ದುಂಡಗೆ ಇರುತ್ತವೆ;
ಎರಡನೆಯದಾಗಿ, ಚಿಂತನೆಯ ಹಕ್ಕಿಯ ಕಟ್ಟಿಕೊಂಡ ಮನೆ ಮುಗಿಯದ ವೃತ್ತಾಕಾರ. ಚಿಂತೆ ಒಮ್ಮೆ ಹೊಕ್ಕರೆ ಹೊರದಾರಿಯಿಲ್ಲ, ಚಕ್ರವ್ಯೂಹದಂತೆ.


@ ಮನಸ್ವಿನಿ: ಮೆಚ್ಚುಗೆಗೆ ಧನ್ಯವಾದಗಳು.
March 29, 2007 12:39 AM

mouna said...
nimma chintaneya hakki nanage namma childhood annu nenapu maaDikoDutadde. aaga, manDi mele gaaya, baNNa baNNada hakki noDuvevembuva aase..
March 29, 2007 5:46 AM

suptadeepti said...
@ mouna: ಸ್ವಾಗತ ಮತ್ತು ಧನ್ಯವಾದಗಳು. ಭೇಟಿ ನೀಡುತ್ತಿರಿ.
March 29, 2007 9:20 AM

Shiv said...
ಸುಪ್ತದೀಪ್ತಿ,
ಆಟವಾಡಿದ ವಯಸು, ಪಾಠ ಓದಿದ ಕನಸು,
ಊಟ ತಿನಿಸಿದ ಮನಸು, ಎಲ್ಲಿ ಹೋದವೆಂಬ ಚಿಂತನೆ


ತುಂಬಾ ಇಷ್ಟವಾದ ಸಾಲುಗಳು

ಗುರುಗಳ ಮೆಚ್ಚುಗೆಯ ಮಾತು, ಗೆಳಯರ ತರಲೆ ಕೆಲಸಗಳು,
ಶಾಲೆಯ ಗಂಟೆಯ ಸದ್ದು, ಈಗ ಹೇಗಿರಬಹುದೆಂಬ ಚಿಂತನೆ
March 29, 2007 9:40 PM

srinivas said...
ಪ್ರತಿ ಚರಣದಲಿ ಬರುವ ಚಿಂತನೆಗಳಿಗೆ ಒಂದೇ ಕಾರಣ - ಬದಲಾವಣೆಯೇ ಜಗದ ನಿಯಮ :)
March 30, 2007 3:18 AM

suptadeepti said...
ಶಿವು, ಶ್ರೀನಿವಾಸ, ಇಬ್ಬರಿಗೂ ವಂದನೆಗಳು.
March 30, 2007 9:42 AM

Mahesh Chevar said...
yes from mangalore, i mean from Kasaragod. Tulu gothundu... bukka eereg gothunda?
March 30, 2007 12:53 PM

ಒಂದೈದು ಹನಿಗಳು

Saturday, March 24, 2007

೦೧. ಹೆಣ್ಣು-ಗಂಡು

"ಹೆಣ್ಣಿನಲ್ಲಿ ಏನಿದೆ?" ಅಂದುಕೊಂಡ ಗುಂಡ
ಸತಿಯತ್ತ ನೋಡದೆ ಮುಸುಕೆಳೆದುಕೊಂಡ
ಗ್ರೀಷ್ಮದ ಹುಣ್ಣಿಮೆಯ ಛಳಿಗೆ ಮುದುರುವಂತಾದಾಗ
ಪಕ್ಕದಲ್ಲಿದ್ದವಳ ಸೆಳೆದ, ಬಯಕೆ ಕಾಡಿದಾಗ.
(೧೯೮೬)


೦೨. ನಗು

"ನೀ ನಕ್ಕರೆ ಸವಿ ಸಕ್ಕರೆ" ಅಂದವನು
ಎಂದು, ಹೇಗೆ, ನಿನ್ನ ನಗುವ ಸವಿದನು?
ಬಾಯೊಳಿಟ್ಟರೆ ನಗಲಾರದ ಎಲೆ ಅಧರ,
ನೀ ನಗದಿರೆ ಸಿಹಿಯಾಗುವುದೇ ಮಧುರ?
(೧೯೮೬)


೦೩. ಚೈತ್ರ ಸಖ


ಒಂಟಿತನ ಜಂಟಿಯಾಗುವ ತನಕ ತವಕ,
ಜಂಟಿಯಾದ ಬಳಿಕ ಮೋಹ ಕೊಳದಲಿ ಜಳಕ,
ತಂಟೆ-ತಕರಾರುಗಳಿಗೆ ಮೈಯೆಲ್ಲಾ ಪುಳಕ,
ತುಂಟ, ನೀ ಹೇಳೆಯಾ ಇದಾರ ಕೈಚಳಕ?
(೧೯೮೭)


೦೪. ಕಳೆದುದು ಸಿಕ್ಕಿದೆ


"ಕಳೆದುದು ಸಿಕ್ಕಿದೆ" ಎಂದಿತ್ತು ಪ್ರಕಟಣೆ
"ವಾರೀಸುದಾರರು ಸಂಪರ್ಕಿಸಿ ಬೇಗನೆ"
ಆತನಲ್ಲಿಗೆ ಕೂಡಲೇ ಧಾವಿಸಿದರು ಕೆಲವರು,
ಕೇಳಿದ- "ನನಗೆ ಸಿಕ್ಕಿದ ಹೃದಯದೊಡತಿ ಯಾರು?"
(೧೯೮೫)


೦೫. ಪ್ರಶ್ನೆ


"ವಾನರನಿಂದ ನರನ ವಿಕಾಸವಾಯ್ತು"
ಗುರುಗಳ ಪಾಠ ಮುಂದುವರೆದಿತ್ತು,
ತುಂಟ ಶಿಷ್ಯನೊಬ್ಬನ ಕುತೂಹಲದ ಸ್ವರ-
"ನೀವು ಆ ನಡುವಿನ ಜನಾಂಗದವರ...?"
(೧೯೮೫)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 1:22 PM
Labels: , ,

7 ಪತ್ರೋತ್ತರ:

Jagali Bhagavata said...
೧, ೩, ಮತ್ತು ೪ನೆ ಹನಿಗಳು ಚೆನ್ನಾಗಿವೆ. ೨ನೆಯದು ಮಂಡೆ ಒಳಗೆ ಹೋಗಲಿಲ್ಲ:-((
ಡುಂಡಿರಾಜರ ಒಂದು ಹನಿ ಕೇಳಿದೀರಾ?
'ಪ್ರಿಯೆ,ನೀನಿಲ್ಲದೆ ನಾನು
ನಿಜವಾಗಿಯೂ ತಬ್ಬಲಿ,
ಕೊರೆವ ಚಳಿಯಲ್ಲಿ
ಯಾರನ್ನು ತಬ್ಬಲಿ?
March 24, 2007 7:21 PM

suptadeepti said...
ಭಾಗವತರೇ,
ಡುಂಡಿರಾಜರ ಈ ಹನಿ ನನ್ನ ಕಿವಿಗೆ ಬಿದ್ದಿರಲಿಲ್ಲ. ಹಾಡಿದ್ದಕ್ಕೆ ಧನ್ಯವಾದಗಳು.
March 25, 2007 1:04 PM

ಜಯಂತ್ said...
ತುಂಬಾ ಚೆನ್ನಾಗಿವೆ..
March 25, 2007 2:33 PM

Shiv said...
ಸುಪ್ತದೀಪ್ತಿಯವರೇ,
ಈ ೫ ಹನಿಗಳು ನಿಮ್ಮ ಯೋಚನೆಗಳು ೧೯೮೫ರಿಂದ ೮೭ ರವರೆಗೆ ಬದಲಾದ ಬಗೆಗೆ ಹೇಳುತ್ತಿರುವುದೇ !??
೮೫ರಲ್ಲಿ ವಾನರ ವಿಕಾಸ, ವಾರೀಸುದಾರರ ಬಗ್ಗೆ ಹನಿಸುತ್ತಿದ್ದ ನೀವು ೮೬ರಷ್ಟರಲ್ಲಿ ಬಯಕೆ-ಚಳಿಗಳ ಬಗ್ಗೆ ಹನಿಸಿ ೮೭ ಅನ್ನುವಷ್ಟರಲ್ಲಿ ಮೋಹ ಕೊಳದಲ್ಲಿ ಜಳಕ ಮಾಡಿ ಪುಳಕಿತರಾಗಿ ಕೈಚಳಕದ ಬಗ್ಗೆ ಹನಿಸಿದ್ದೀರಾ
March 25, 2007 4:37 PM

ಸುಶ್ರುತ ದೊಡ್ಡೇರಿ said...
ಇವುಗಳಲ್ಲಿ ಕೆಲವನ್ನು ಓದಿದಂತಿದೆ. ಎಲ್ಲಾದರೂ ಪಬ್ಲಿಷ್ ಆಗಿದ್ದವಾ ಇವು?
March 26, 2007 2:25 AM

suptadeepti said...
ಜಯಂತ್,
ನನ್ನ ಅಕ್ಷರ ಲೋಕಕ್ಕೆ ಸ್ವಾಗತ, ಮೆಚ್ಚುಗೆಗೆ ಧನ್ಯವಾದ.


ಶಿವು,
'೮೫, '೮೬, '೮೭ರಲ್ಲಿ ಬರೆದ ಹಲವು "ಭಾವಬಿಂದು"ಗಳಲ್ಲಿ ಕೇವಲ ಐದು ಹನಿಗಳನ್ನು ಇಲ್ಲಿ ಆರಿಸಿ ಕೊಟ್ಟಿದ್ದು, ಯಾವುದೇ ಉದ್ದೇಶಿತ, ನಿರ್ದಿಷ್ಟ ಪ್ರಗತಿ-ಪಥ ಇಲ್ಲಿಲ್ಲ. '೮೭ರ ಹನಿ ಇಪ್ಪತ್ತರ ವಯಸ್ಸಿಗೆ ಅನುಗುಣವಾಗಿಯೇ ಇದೆ ಅನ್ನುವುದನ್ನು ಅಲ್ಲಗಳೆಯಲಾರೆ.


ಸುಶ್ರುತ,
ಇಲ್ಲ, ಇವು ಬೇರೆಲ್ಲೂ ಪ್ರಕಟವಾಗಿಲ್ಲ. ನನ್ನ ಪ್ರಕಟಿತ (೧೯೯೭, ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ) ಕವನ ಸಂಕಲನ "ಭಾವಲಹರಿ"ಯಲ್ಲಿವೆ, ಅಷ್ಟೇ.
March 26, 2007 10:43 AM

ಅಸತ್ಯ ಅನ್ವೇಷಿ said...
5ನೇ ಕವನಕ್ಕೂ ನಮ್ಮ ಬ್ಯುರೋಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇವೆ....
March 26, 2007 8:07 PM

ಬಾ ವಸಂತ

Wednesday, March 21, 2007

ಸರಿಯಾಗಿ ಇಪ್ಪತ್ತು ವರ್ಷಗಳ ಹಿಂದೆ ನಾ ಕರೆದ ವಸಂತ.... ಈಗಲೂ ಮಾರನ ಮಧುವನದ ಓರಣಿಗ ಇವನೇ ಏನು?

ಓ ವಸಂತ, ನಿನ್ನಾಗಮನದ ಆಸೆಯ-
ಕೊನರುಗಳೇ ತುಂಬಿದ ಹೆಮ್ಮರದಡಿಯ-
ನೆಳಲಲ ಕುಳಿತರೂ ಮುದುಡುತಿಹುದು,
ಸೊರಗುತಿಹುದು ಎನ್ನೊಲವ ಬಳ್ಳಿಯಿದು.

ಮಾನವ ತುಳಿತಕೆ ಸಿಲುಕಿ ನಲುಗಿ,
ಒರಗಿ, ಹಸಿರು ವನಗಳು ಕರಗಿ,
ಬುವಿಯೇ ಬೆಂಗಾಡಾಗುತಿರಲು-
ಕಲ್ಪನಾತರುವೇ ನಮಗೆ ನೆಳಲು.

ಕೋಗಿಲೆಯ ದನಿಯಿಲ್ಲ, ಗಿಣಿ ಉಲಿಯುತಿಲ್ಲ,
ಕಾಕರಾಜನ ಕೂಗ ಕೇಳಿ ನೊಂದಿಹೆನಲ್ಲ,
ಕಣ್ಗೆ ಪಸಿರಿಲ್ಲ, ಬಾಯ್ಗೆ ಪಸೆಯಿನಿತಿಲ್ಲ,
ಒಣಗಿ ಕರಕುತ್ತಿಹವು ಎದೆಯ ಭಾವಗಳೆಲ್ಲ.

ದಶದಿಕ್ಕುಗಳಿಂದ ಸೆಳೆಯುತಿರೆ ದುಗುಡಗಳು,
ಬರುವವೇ ನನ್ನ ಬಳಿ ನಿನ್ನ ಕನಸುಗಳು?
ಇರುಳ ಮಬ್ಬಿನಲಿ ಓರ್ವಳೇ ಬಿಕ್ಕಿರಲು,
ಓಡಿ ಬಾ ವಸಂತ, ಸಂತೈಸಲೆನ್ನ ನಿನ್ನೊಕ್ಕೊರಲು
(ಮಾರ್ಚ್, ೧೯೮೭.)

ಅಕ್ಷರ: ಸುಪ್ತದೀಪ್ತಿ suptadeepti ಕಾಲ: 6:39 PM
Labels:

12 ಪತ್ರೋತ್ತರ:

ಮನಸ್ವಿನಿ said...
’ಇರುಳ ಮಬ್ಬಿನಲಿ ಓರ್ವಳೇ ಬಿಕ್ಕಿರಲು,
ಓಡಿ ಬಾ ವಸಂತ, ಸಂತೈಸಲೆನ್ನ ನಿನ್ನೊಕ್ಕೊರಲು’

ವಾಹ್...ಸುಂದರವಾಗಿದೆ
March 21, 2007 8:10 PM

Shrilatha Puthi said...
"ಮಾರನ ಮಧುವನದ ಓರಣಿಗ"
ಕವನಕ್ಕಿಂತಲೂ ಹೆಚ್ಚು (ಅರ್ಥವಾಗದಿದ್ದರೂ) ಆಕರ್ಷಿಸಿದ್ದು ಈ ಪದಪ್ರಯೋಗ. ಊರಲ್ಲಿ ನೋಡುತ್ತಿದ್ದ/ಕೇಳುತ್ತಿದ್ದ ಯಕ್ಷಗಾನ, ತಾಳಮದ್ದಲೆಗಳ ನೆನಪಾಯಿತು.
March 22, 2007 4:15 AM

sritri said...
ಕಲ್ಪನಾ ತರುವೇ ನಮಗೆ ನೆಳಲು...

ಈ ನೆರಳಿಗಂತೂ ಕೊರತೆ ಇಲ್ಲ. ಆದರೆ ಕಾಕರಾಜನ ರಾಗಕ್ಕೆ ನೋವೇಕೇ? ಗಾಯಕರಲ್ಲೇ ಗಡಸು ಕಂಠದ ಗಾಯಕರ ತರ ಕಾಕರಾಜ!
March 22, 2007 6:39 AM

poornima said...
jYoti,
kavana bahaLa chennAgide. nimma kavanagu nanage bahaLa iShTa.
aMda haage kannaDadalli comment bareyuvudu hEge ?
March 22, 2007 9:37 AM

suptadeepti said...
ಮೆಚ್ಚುಗೆ ಸೂಚಿಸಿದ ಮಹಿಳಾಮಣಿಗಳಿಗೆ ಧನ್ಯವಾದಗಳು.

"ಮಾರನ ಮಧುವನದ ಓರಣಿಗ"= ಮನ್ಮಥನ gardner = ವಸಂತ.

ಕಾಕರಾಜನ ಹಾಡು ಇತರ ಸಮಯಕ್ಕಿಂತ ಸುಡು-ಸುಡು ಬೇಸಗೆಯಲ್ಲಿ ಬಹಳ ಅಸಹನೀಯ ಆಗಿ ಕೇಳತ್ತೆ, ಎಲ್ಲ ಕಡೆ, ಎಲ್ಲವೂ ತುಂಬಾ ಒಣಗಿ, ಸೊರಗಿ, ನಲುಗುತ್ತಿರುವಾಗ ಈ ಕಾ-ಕಾ ಸ್ವಲ್ಪ ಕರ್ಕಶವೇ ಅಂತ ನನ್ನ ಅನುಭವ. ಮಂಗಳೂರು ಕಡೆಯ ಬಿರುಬೇಸಗೆಯಲ್ಲಿನ ಭಾವನೆಯಿದು, ಅಷ್ಟೇ.
March 22, 2007 9:41 AM

suptadeepti said...
ಪೂರ್ಣಿಮ, ಬರಹದಲ್ಲೇ IME ಅಂತ ಇದೆ. ಅದನ್ನ ಬೇರೆಯೇ download ಮಾಡಿಕೊಳ್ಳಬೇಕು. ಅದನ್ನು ಬಳಸಿ ಕನ್ನಡದಲ್ಲೇ ನೇರವಾಗಿ ಬರೆಯಬಹುದು. ಅದು ಬರಹ ಯೂನಿಕೋಡ್ ಅಕ್ಷರರೂಪ.
March 22, 2007 9:44 AM

poornima said...
ಧನ್ಯವಾದ ಜ್ಯೋತಿಯವರೇ !!
March 22, 2007 11:58 AM

Shiv said...
ಸುಪ್ತದೀಪ್ತಿಯವರೇ,

ಇಪ್ಪತ್ತು ವರ್ಷದ ಹಿಂದೆ ನೀವು ಕರೆದಾಗ ಬಂದ ವಸಂತನೋ ಅಥವಾ ವಸಂತನೇ ನಿಮ್ಮನ್ನು ಹುಡುಕಿಕೊಂಡು ಬಂದನೋ ?ಯಾವುದಾದರೂ ಇರಲಿ..

ಒಣಗಿ ಕರಗುತ್ತಿಹವು ಎದೆಯ ಭಾವಗಳೆಲ್ಲ..
ವಸಂತಾಗಮನದ ನಂತರ ಲಹರಿ ಹರಿಯೋಕೆ ಶುರುವಾಯ್ತು ಅನಿಸುತ್ತೆ
ಅಂದಾಗೆ ನಿಮಗೆ ಮೇಲ್ ಮಾಡಬೇಕೆಂದುಕೊಂಡೆ ನಿಮ್ಮ ಇ-ಮೇಲ್ ನನ್ನ ಹತ್ತಿರ ಇಲ್ಲ.
ದಯವಿಟ್ಟು ನಿಮ್ಮ ಮೇಲ್ ಕೊಡಿ.
March 22, 2007 10:14 PM

Shrilatha Puthi said...
>>ಗಾಯಕರಲ್ಲೇ ಗಡಸು ಕಂಠದ ಗಾಯಕರ ತರ ಕಾಕರಾಜ!

ಹಿಮೇಶ್ ರೇಷಿಮಿಯಾನ ಹಾಗೆ!!!
March 22, 2007 11:52 PM

Jagali Bhagavata said...
ಕಲ್ಪನಾತರುವೇ ನಮಗೆ ನೆಳಲು....
ಸಾಲು ತುಂಬ ಚೆನ್ನಾಗಿದೆ. ಮತ್ತೆ, ಈ ವಸಂತ ಬಂದನೇ ನಿಮ್ಮ ಕರೆಗೆ ಓಗೊಟ್ಟು? ಓಡಿ ಬಂದನೇ ಇಲ್ಲ ನಿಧಾನವಾಗಿ ಬಂದನೇ? ಒಂಟಿಯಾಗಿ ಬಿಕ್ಕುತ್ತಿದ್ದ ನಿಮ್ಮನ್ನು ಸಂತೈಸಿದನೇ? ಕವನದ ಮುಂದಿನ ಭಾಗವನ್ನು ಕಾತರದಿಂದ ನಿರೀಕ್ಷಿಸುತ್ತಿದ್ದೇನೆ:-))
March 24, 2007 7:14 PM

suptadeepti said...
ಭಾಗವತರೇ, ನನ್ನ ಕರೆಗೆ ಅಲ್ಲದಿದ್ದರೂ ವಸಂತ ಬಂದ, ಹೋದ...! ಪ್ರತೀ ವರ್ಷ ಅವನದ್ದು ಇದೇ ಕಥೆ. ಈ ವರ್ಷವೂ ಬರುತ್ತಾ.... ಇದ್ದಾನೆ, ಮತ್ತೊಮ್ಮೆ ಮರೆಯಾಗುವುದಕ್ಕೆ! ಕವನದ ಮುಂದಿನ ಭಾಗಕ್ಕೆ ಅವನು ಇದ್ದರೆ ತಾನೇ? ಏನು ಮಾಡೋದು?
March 25, 2007 1:09 PM

ತರಳ ಚಂದಿರ

Monday, March 19, 2007

(ಪಾಡ್ಯದ ಚಂದಿರನನ್ನು ಎಲ್ಲಾದರೂ ಕಂಡಿದ್ದೀರ? ಅವನ ವಿವರಣೆ ಇಲ್ಲಿದೆ, ಓದಿ. ಸಿಕ್ಕಿದರೆ ತಂದೊಪ್ಪಿಸುವಿರಾ?)


ಅದೋ ನೋಡು ಪಡುವಣದಲಿ ನೋಟ ಸುಂದರ
ಮೂಡಿ ಬಂದ ರೋಹಿಣಿ ಸಖ ರೇಖಾ ಚಂದಿರ


ಚುಕ್ಕೆಯಿರದ ಚಾವಡಿಯಲಿ ಬರೆದ ಚಿತ್ತರ
ಇರುಳು ಕಳೆದು ಇರುಳ ನಡುವೆ ಬೆಳೆವ ಕಿನ್ನರ


ವ್ಯಾಸದರ್ಧಕೊಂದು ತ್ರಿಜ್ಯ ಕಡೆದ ಕೋನಕೆ
ಪರಿಧಿಯಾಗಿ ಕೂಡಿಕೊಂಡ ಸರಳ ಚಂದ್ರಿಕೆ


ಕರಿಮರಗಳ ಅಡವಿಯೊಡೆಯ ಒಂಟಿ ಸಲಗಗೆ
ಇಂದು ಕೋರೆಯೊಂದೆ ಇಹುದು, ಒಂದು ಬಾನಿಗೆ


ಸಣ್ಣ ಚಿಣ್ಣ ಅಪ್ಸರೆಯರು ತೂಗೊ ತೊಟ್ಟಿಲು
ಮೋಡದೊಡನೆ ಜೀಕುತಿಹುದು ಗಾಳಿಯಾಡಲು


ಕಪ್ಪು ಹಾಸಿನಂಚಿನಲ್ಲಿ ಮುದ್ರೆಯುಂಗುರ
ಮರುತಸುತನ ಒಸಗೆಯೊಡನೆ ನವಯುಗಾಂಕುರ


ದೇವನ ಹೆಬ್ಬೆಟ್ಟಿನುಗುರ ಚಿಗುರು ಹೊಳೆದಿದೆ
ಪಾದವಿರುವ ಹೊಳಹು ತೋರಿ ಬೆಳಕ ಬೀರಿದೆ
(೨೦-ಜನವರಿ-೨೦೦೭)

ಅಕ್ಷರ: ಸುಪ್ತದೀಪ್ತಿ suptadeepti ಕಾಲ: 11:55 PM
Labels:

10 ಪತ್ರೋತ್ತರ:
ಸಿಂಧು Sindhu said...
ದೇವನ ಹೆಬ್ಬೆಟ್ಟಿನುಗುರ ಚಿಗುರು ಹೊಳೆದಿದೆ

ಪಾದವಿರುವ ಹೊಳಹು ತೋರಿ ಬೆಳಕ ಬೀರಿದೆ

...marumaatilla.. ee kalpanege.. Devara rujuvannu nenapisiva saalugaLu.. chandada alochanegaLa tarangavannebbisiddakke dhanyavaadagaLu.
March 20, 2007 1:29 AM

Phantom said...
ಮ್ಯಡಮ್, ೩ ಸರ್ತಿ ಓದ್ ದೆ ಸರೀಯಾಗೆ ಅರ್ಥ ಅಮಡ್ಕೊಳ್ಳೊಕ್ಕೆ. ಸಕ್ಕತ್ತಗಿದೆ :ಹ

ಕರಿಮರಗಳ ಅಡವಿಯೊಡೆಯ ಒಂಟಿ ಸಲಗಗೆ
ಇಂದು ಕೋರೆಯೊಂದೆ ಇಹುದು, ಒಂದು ಬಾನಿಗೆ


ಉತ್ಪ್ರೇಕ್ಷೆ ಅಧುತವಾಗಿ ಮೂಡಿಬಂದಿದೆ :)

ಆದರೆ ಇದು ಅರ್ಥ ಆಗ್ಲಿಲ್ಲ

ಪರಿಧಿ = ?
March 20, 2007 2:19 AM

ಸಿಂಧು Sindhu said...
paridhi = suttaLate (perimeter)
March 20, 2007 3:37 AM

ಅಸತ್ಯ ಅನ್ವೇಷಿ said...
ಓಹ್... ಬಂದಿದ್ದು ತೀರಾ ತಡವಾಯಿತು. ನೀವು ಸುಪ್ತವಾಗಿಯೇ ಬ್ಲಾಗಿನ ಜ್ಯೋತಿಯನ್ನು ದೀಪ್ತಿಸುತ್ತಿದ್ದೀರಿ. :)
ಪದಗಳನ್ನು ಪೋಣಿಸಿದ್ದು ತುಂಬಾ ಇಷ್ಟವಾಯಿತು.
March 20, 2007 6:58 AM

miyarshankar said...
WISHING YOU ALL THE BEST ON THE OCCASSION OF UGADISHANKAR
March 20, 2007 8:23 AM

suptadeepti said...
ಸಿಂಧು, ಭೂತಯ್ಯ, ಅನ್ವೇಷಿ, ಶಂಕರಣ್ಣ, ಎಲ್ಲರಿಗೂ ವಂದನೆಗಳು, ಧನ್ಯವಾದಗಳು.
ಭೂತಯ್ಯ, "ಮ್ಯಡಮ್...ಗೀಡಮ್.." ಎಲ್ಲ ಬೇಡ. no formalities, PLS.
March 20, 2007 10:45 AM

ಸುಶ್ರುತ ದೊಡ್ಡೇರಿ said...
ಪ್ರತಿ ಸಾಲಿನಲ್ಲಿನ ಪ್ರಥಮ ಚಂದಿರನ ಪರಿಕಲ್ಪನೆಯೂ ಅದ್ಭುತ. ಎಕ್ಸಲೆಂಟ್!
March 21, 2007 1:43 AM

suptadeepti said...
ಮೆಚ್ಚುಗೆಗೆ ಧನ್ಯವಾದಗಳು ಸುಶ್ರುತ.
March 21, 2007 9:57 AM

Shiv said...
ಸುಪ್ತದೀಪ್ತಿಯವರೇ,
ನಿಮ್ಮ ಕವನದಲ್ಲಿ ಗಣಿತ, ಚಿತ್ರಕಲೆ, ಆಸ್ತಿಕತೆ ಎಲ್ಲಾ ಇದೆ..


ವ್ಯಾಸ-ತ್ರಿಜ್ಯ-ಕೋನ-ಪರಿಧಿ..
ನೀವು ವಿಜ್ಞಾನದ ವಿದ್ಯಾರ್ಥಿಯೇ :)>


ಸಣ್ಣ ಚಿಣ್ಣ ಅಪ್ಸರೆಯರು ತೂಗೊ ತೊಟ್ಟಿಲು
ಮೋಡದೊಡನೆ ಜೀಕುತಿಹುದು ಗಾಳಿಯಾಡಲು


ಅದ್ಬುತ ಕಲ್ಪನೆ !!
March 22, 2007 10:18 PM

ಶ್ರೀನಿಧಿ...... said...
ನಮಸ್ತೇ,
ಎಲ್ಲರೂ ಹುಣ್ಣಿಮೆಯ ಚಂದಿರನನ್ನ ವರ್ಣಿಸಿದ್ದರೆ ತಾವು ಅಮವಾಸ್ಯೆ ಮರುದಿನದ ಚಂದ್ರನನ್ನ ಬಣ್ಣಿಸಿದ್ದೀರಾ! ಕಲ್ಪನೆಗಳು ಸೊಗಸಾಗಿವೆ. ಒಂಟಿ ಸಲಗದ ದಾಡೆ, ತೊಟ್ಟಿಲು, ದೇವನ ಹೆಬ್ಬೆಟ್ಟಿನುಗುರು! ಆಹಾ, ಕ್ಲಾಸಿಕ್ಕು!
March 25, 2007 9:49 PM

ಹೊಸವರುಷದ ಹೊಸಿಲಲ್ಲಿ ಹೊಸ ಹೂವಿನ ಸ್ವಾಗತ


Saturday, March 17, 2007

ಗ್ರಹಣ ಕಳೆದ ರವಿಯು ಶುಭ್ರ ತೇಜದಿಂದ ಮೆರೆಯುವಂತೆ,

ಮುಗುಳು ಬಿರಿದು ದುಂಬಿ ಒಲಿದು ನಗುವ ಹೊಸ ಹೂವಿನಂತೆ,

ನಿಮ್ಮ ಮನದ ಮಸುಕು ಕಳೆದು ಕಾಂತಿ ತುಂಬಿ ಅರಳುವಂತೆ

ಹೊಸತನದಲಿ ಹೊಸ ದಿನದಲಿ ಹೊಸ ವರುಷವು ನಿಮಗಿರಲಿ.ಯುಗಾದಿಯ ಶುಭಾಶಯಗಳು.


ಅಕ್ಷರ: ಸುಪ್ತದೀಪ್ತಿ suptadeepti ಕಾಲ: 4:18 PM
Labels:

6 ಪತ್ರೋತ್ತರ:
Shiv said...
ಸುಪ್ತದೀಪ್ತಿಯವರೇ,

ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಯುಗಾದಿಯ ಶುಭಾಶಯಗಳು.

ಭಾವನೆಗಳ ಲಹರಿ.. ಸಂತಸದ ಲಹರಿ.. ಸುಖದ ಲಹರಿ.. ಹೀಗೆ ಹರಿಯುತಿರಲಿ
March 17, 2007 6:57 PM


ಮನಸ್ವಿನಿ said...
ನಿಮಗೂ ಯುಗಾದಿಯ ಶುಭಾಶಯಗಳು.Jagali Bhagavata said...
ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಯುಗಾದಿಯ ಶುಭಾಶಯಗಳು.
March 18, 2007 6:23 PM


Phantom said...
ಗ್ರಹಣ ನಿಜಕ್ಕು ಕಳೀತು. ನಿಮಗು ಸಹ ಯುಗಾದಿಯ ಶುಭಾಶಯಗಳು
March 19, 2007 5:37 AM


parijata said...
ಸುಪ್ತದೀಪ್ತಿಯವರೇ,

ಬಹಳ ಮುದ್ದಾದ ಪದ್ಯವನ್ನು ಬರೆದು ನನ್ನ ದಿನವೆಲ್ಲ ಚೆನ್ನಾಗಿ ಆಗುವಂತೆ ಮಾಡಿದ್ದೀರಿ. ಧನ್ಯವಾದಗಳು. ನಿಮಗೂ ಹೊಸವರ್ಷದ ಶುಭಾಶಯಗಳು.

-ಪಾರಿಜಾತ.
March 19, 2007 11:51 PM


suptadeepti said...
ಶುಭಾಶಯಗಳಿಗೆ ಪ್ರತಿ-ಸ್ಪಂದಿಸಿದ ಎಲ್ಲರಿಗೂ ವಂದನೆಗಳು.
March 19, 2007 11:54 PM

ಕಾತರ

Friday, March 16, 2007

ಮಾಂದಳಿರ ತಂಪಿನಡಿ ಮಲ್ಲಿಗೆಯ ಕಂಪಿರಲು
ಕೋಗಿಲೆಯ ಇಂಪನಾಲಿಸುತ ಕುಳಿತಾಗ,
ನನ್ನೊಳಗೆ ಎಲ್ಲೋ ಕಾರಂಜಿ ಚಿಲುಮೆಯೊಲು-
ನಿನ್ನ ಕಾಣುವ ತವಕ ಒಸರಾಯಿತು.


ಧವಳ ಕಾಂತಿಯ ಹರಡಿ ಸ್ನಿಗ್ಧ ಶಾಂತಿಯ ಸುರಿವ
ಮುಗ್ಧ ಮೌನದ ತುಂಬು ಚಂದಿರನ ನೋಡುತಿರೆ,
ಮಳೆಹನಿಯ ಸ್ಪರ್ಶಕ್ಕೆ ಬುವಿ ತಾನು ಮಿಡಿವಂತೆ-
ನಿನ್ನ ಕಾಣುವ ತವಕ ಹಸಿರಾಯಿತು.


ವದನದಲಿ ನಗುವಿನೆಳೆ ಮನದಲ್ಲಿ ವಿರಹದಲೆ
ನನ್ನೆದೆಯ ತುಂಬೆಲ್ಲ ಶೂನ್ಯತೆಯಿದೇನು?
ಮಧುರ ಸಾನ್ನಿಧ್ಯಕ್ಕೆ ಕ್ಷಣಗಣನೆ ಮಾಡುತಿರೆ-
ನಿನ್ನ ಕಾಣುವ ತವಕ ಉಸಿರಾಯಿತು.
(ಮಾರ್ಚ್, ೧೯೯೪)


ಅಕ್ಷರ: ಸುಪ್ತದೀಪ್ತಿ suptadeepti ಕಾಲ: 10:59 AM
Labels: ,

9 ಪತ್ರೋತ್ತರ:
mala rao said...
"ನಿನ್ನ ಕಾಣುವ ತವಕ ಒಸರಾಯಿತು....

ನಿನ್ನ ಕಾಣುವ ತವಕ ಹಸಿರಾಯಿತು....

ನಿನ್ನ ಕಾಣುವ ತವಕ ಉಸಿರಾಯಿತು...."

ಕವನ ಓದಿ ನಿಮ್ಮ ದೇವರ ಅದೃಷ್ಟ ನೆನೆದು ನನಗೆ ಹೊಟ್ಟೆಕಿಚ್ಚಾಯಿತು!
ಅಂದ ಹಾಗೆ ನೀವು ಇಷ್ಟೆಲ್ಲಾ ರೊಮ್ಯಾಂಟಿಕ್ಕಾಗಿ ಕವನ ಹೆಣೆದು ಲಹರಿಯಿಂದ ಹಾಡುತ್ತಾ ಇರುವ ಸಂಜೆ ನಿಮ್ಮ ದೇವರು ಮನೆಗೆ ಬಂದು `ನನ್ನ ಕಾಫಿ ಬೇಗ ಬೇಗ ಬರಲಿ...' ಅಂದಾಗ ನಿಮಗೇನನ್ನಿಸುತ್ತೇ ಅಂತ ಕೇಳಬಹುದೇ?
March 16, 2007 4:41 PM

suptadeepti said...
ಈ ಕವನ ಬರೆದ ದಿನ ಅವರೇನಾದರೂ ಬಂದಿದ್ದರೆ, "ದೂರದಿಂದ ಬಂದಂಥ ಸುಂದರಾಂಗ ಜಾಣ..." ಅಂತಲೂ ಗುನುಗಬಹುದಾಗಿತ್ತು. ಕೂಡಲೇ ಬರಲಾರದಷ್ಟು ದೂರದ ಊರಲ್ಲಿದ್ದಾಗಲೇ ಕಾಣುವ ತವಕ ಬಲವಾಗುವುದು ತಾನೇ...! ಹೊಟ್ಟೆಕಿಚ್ಚು ಪಡುವಂಥಾದ್ದೇನೂ ಇಲ್ಲ, ಇದು ಕವನಕ್ಕೆ ಮಾತ್ರ, ಜೀವನಕ್ಕಲ್ಲ! (ಅಯ್ಯೋ ಪಾಪ ಅನ್ನು, ಪರವಾಗಿಲ್ಲ)
March 16, 2007 5:09 PM

Jagali Bhagavata said...
This post has been removed by the author.
March 16, 2007 8:17 PM

Shiv said...
ಸುಪ್ತದೀಪ್ತಿಯವರೇ,
ಮಧುರ ಸಾನ್ನಿಧ್ಯಕ್ಕೆ ಕ್ಷಣಗಣನೆ ಮಾಡುತಿರೆ-ನಿನ್ನ ಕಾಣುವ ತವಕ ಉಸಿರಾಯಿತು
ನೀವು ೧೯೯೪ರಲ್ಲಿ ಅನುಭವಿಸಿದ ಆ ಮಧುರ ಯಾತನೆಯನ್ನು ನಾನು ಸಹ ಈಗ ಅನುಭವಿಸುತ್ತರಿವುದರಿಂದ ಈ ಸಾಲುಗಳು ನನಗೋಸ್ಕರವೇ ಬರೆದ ಹಾಗೆ ಇದೆ..
March 17, 2007 6:55 PM

ಮನಸ್ವಿನಿ said...
ಆಹಾಹ...ಸುಂದರ ಕವನ
March 17, 2007 9:59 PM

suptadeepti said...
ಶಿವು, ಮಧುರ ಯಾತನೆ, ಯಾವ ಕಾಲಕ್ಕೂ ಪ್ರಸ್ತುತ, ಆಯಾಯ ಹೃದಯಕ್ಕೆ ಹತ್ತಿರ. ನನ್ನ ದಫ್ತರದಲ್ಲಿ ಅದಕ್ಕೊಂದು ತಾರೀಖು ಇದೆ, ನಿಮಗೆ ಅದು ವರ್ತಮಾನ, ಅಷ್ಟೇ ವ್ಯತ್ಯಾಸ. ಅಭಿಪ್ರಾಯಕ್ಕೆ ಧನ್ಯವಾದಗಳು.


ಮನಸ್ವಿನಿ, ಧನ್ಯವಾದಗಳು, ನಿನಗೂ.
March 17, 2007 11:12 PM

Phantom said...
ಮಳೆಹನಿಯ ಸ್ಪರ್ಶಕ್ಕೆ ಬುವಿ ತಾನು ಮಿಡಿವಂತೆ-ನಿನ್ನ ಕಾಣುವ ತವಕ ಹಸಿರಾಯಿತು.
ಉಪಮಾನ, ಉಪಮೇಯ ಎರಡು ಸುಂದರ :ಹ
ವದನದಲಿ ನಗುವಿನೆಳೆ ಮನದಲ್ಲಿ ವಿರಹದಲೆ

ಅದ್ಭುತ! ೯೪ ಇಸ್ವಿ ಲೇ ಬರ್ದಿದ್ ಕವನ, ಮ್ಯಡಮ್ ನೀವು ಎಷ್ಟ್ ವರುಷದಿಂದ ಬರಿತ ಇದ್ದಿರಿ ಕವನಗಳನ್ನ :ಓ
ಇಂತಿ
ಭೂತ
March 19, 2007 5:34 AM

Shrilatha Puthi said...
ಆಹಾ... ಎಷ್ಟು ಚಂದದ ಸಾಲುಗಳು!! ನನಗೆ ಮೊದಲಿನಿಂದಲೂ ಗದ್ಯದ ಕಡೆಗೆ ಪದ್ಯಕ್ಕಿಂತ ಜಾಸ್ತಿ ಒಲವು. ಕೆ ಎಸ್ ನ ಅವರ ಪದ್ಯಗಳನ್ನು ಓದಿದ್ದರೂ, ನಾನು ಹೆಚ್ಚು ಇಷ್ಟ ಪಡುತ್ತಿದ್ದದ್ದು ಗದ್ಯವನ್ನೇ. ಆದರೆ ನೀವು, ವೇಣಿ, ಮತ್ತೆ ಮಾಲಾ ಸೇರಿಕೊಂಡು ಪದ್ಯಗಳ ಹುಚ್ಚು ಹಿಡಿಸಿಬಿಟ್ಟಿದ್ದೀರಿ..
March 20, 2007 12:28 AM

Suptadeepti said...
ಭೂತಯ್ಯ, ವಂದನೆಗಳು. ಮೆಚ್ಚುಗೆಯಾಗಿದ್ದು ಸಂತೋಷ.

ಶ್ರೀಲತಾ, ಪದ್ಯ ಮತ್ತು ಗದ್ಯ ಎರಡೂ ಕನ್ನಡ ಸರಸ್ವತಿಯ ಎರಡು ಕೈಗಳು. ಯಾವ ಕೈ ಇಷ್ಟ ಅಂದರೆ ಏನು ಉತ್ತರ ಕೊಡಲಿ? ಹಾಗೇ ಇದು. ಆದರೆ ನನ್ನ ಬರವಣಿಗೆಯ ಮಟ್ಟಿಗೆ ನನಗೆ ಪದ್ಯ ಇಷ್ಟ, ನಾನು ಕವನಗಳನ್ನೇ ಹೆಚ್ಚಾಗಿ ಬರೆಯುವುದು. ಮತ್ತೆ, ಮೆಚ್ಚುಗೆಗೆ ವಂದನೆಗಳು.
March 20, 2007 10:39 AM

ನಿತ್ಯ ನೂತನ

Wednesday, March 14, 2007

ಮುಂಬೆಳಕ ನಸುನಗೆಯಲ್ಲಿ ಸತಿಗೆ ಮುತ್ತಿಟ್ಟು,
ದಿನದ ಕಾಯಕ ಮುಗಿಸೆ ಹೊರಟು ನಿಂತ ರವಿ;
ನಿತ್ಯ ನೂತನ ಪ್ರಥಮ ಚುಂಬನಕೆ ರಂಗೇರಿ,
ಪತಿಯ ಬೀಳ್ಕೊಡುವಳು ಉಷೆ, ಹೀರುತಲಿ ಸವಿ।


ತಮ್ಮೊಲವ ಅರಮನೆಯ ಮುಂಬಾಗಿಲನು ತೆರೆದು,
ಹೊರಟ ತೇಜರಾಜನ ಗಾಂಭೀರ್ಯ ನೋಡಿ,
ಮತ್ತೆ ಮೋಹಿತಳಾಗಿ, ವರ್ಣ ರಂಜಿತಳಾಗಿ,
ಮೆಲ್ಲ ಸರಿವಳು ಒಳಗೆ ನೆನಪುಗಳ ಕೂಡಿ।


ಹಗಲ ಹುಟ್ಟಿನ ಹೊತ್ತು ಉಷೆಯಾಗಿ ನಕ್ಕವಳು,
ಮನೆಯ ಬಾಗಿಲ ಸರಿಸಿ ಒಳಸೇರಿದವಳು,
ಹೊತ್ತೇರಿ ಇಳಿಯುತಿರೆ ಹಿತ್ತಿಲಲಿ ನಿಲ್ಲುವಳು,
ರವಿಯ ಸ್ವಾಗತಕೆ ನಿಶಾರಾಣಿಯಾಗಿ।ಮುಂಜಾನೆ ಉಷೆಯಾಗಿ, ಮುಸ್ಸಂಜೆ ನಿಶೆಯಾಗಿ,
ಬೀಳ್ಕೊಡುಗೆ-ಸ್ವಾಗತದ ಅರ್ಥಗಳ ಹರಡಿ,
ರವಿಯೊಲವ ಹೊಂಗಿರಣ ರಂಗೋಲೆ ಬಿಡಿಸುವರು,
ಅನುದಿನದ ನವ್ಯತೆಯ ರೂವಾರಿ ಜೋಡಿ।
(೧೯೯೬)


ಅಕ್ಷರ: ಸುಪ್ತದೀಪ್ತಿ suptadeepti ಕಾಲ: 10:57 PM
Labels: ,

9 ಪತ್ರೋತ್ತರ:
Shiv said...
ಮುಂಜಾನೆ ಉಷೆಯಾಗಿ ಸಂಜೆಗೆ ನಿಶೆಯಾಗಿಸಿದ ಕಲ್ವನೆ ಚೆನ್ನಾಗಿದೆ.
ಮತ್ತೆ ಮೋಹಿತಳಾಗಿ, ವರ್ಣರಂಜಿತಳಾಗಿ...ಆಹಾ !


೧೯೯೬ ಅಂತ ಹಾಕಿದ್ದೀರಾ...ಆವಾಗೆ ಬರೆದಿದ್ದ ಇದು ??
March 15, 2007 1:38 AM

ಸುಶ್ರುತ ದೊಡ್ಡೇರಿ said...
1996ರಲ್ಲಿ ಬರೆದದ್ದಾ? ಓಹ್! ಅದ್ಭುತ. ಚಂದದ ಚಿತ್ರಣಗಳ ಸುಂದರ ಕವಿತೆ. ಲಹರಿ ಹರಿಯುತ್ತಿರಲಿ..
March 15, 2007 3:10 AM

suptadeepti said...
ಹೌದು, 1996ರಲ್ಲಿ ಬರೆದದ್ದು. 1980ರಿಂದಲೇ ಕವನ, ಚುಟುಕ ಬರೆಯುವ ಹವ್ಯಾಸಕ್ಕೆ ಬಿದ್ದವಳು. ಇಲ್ಲಿ ಸ್ವಲ್ಪ ಹಳೆಯ ಕವನಗಳಿಗೆ ಬೆಳಕು ಕಾಣಿಸುವ ಪ್ರಯತ್ನ (ಹೊಸ ಕವನಗಳು ದಟ್ಸ್'ಕನ್ನಡದಲ್ಲೋ, ಕನ್ನಡ ಧ್ವನಿಯಲ್ಲೋ, ಕನ್ನಡ ಕೂಟಗಳ ಸಂಚಿಕೆಗಳಲ್ಲೋ ಮುಖ ತೋರಿಸುತ್ತಲೇ ಇವೆ).

ಶಿವು, ಸುಶ್ರುತ, ನಿಮ್ಮ ಮೆಚ್ಚುಗೆಗಾಗಿ ಧನ್ಯವಾದಗಳು.
March 15, 2007 10:30 AM

Phantom said...
ನಿತ್ಯ ಕಾಯಕವನ್ನು ಸುಂದರವಾಗಿ ಚಿತ್ರಿಸಿದ್ದಿರಿ.

ಪತಿಯ ಬೀಳ್ಕೊಡುವಳು ಉಷೆ, ಹೀರುತಲಿ ಸವಿ।
ಬೀಳ್ಕೊಡುವಾಗ ಸವಿ ಎಂತದ್ದು?

ಹೊತ್ತೇರಿ ಇಳಿಯುತಿರೆ ಹಿತ್ತಿಲಲಿ ನಿಲ್ಲುವಳು,
ರವಿಯ ಸ್ವಾಗತಕೆ ನಿಶಾರಾಣಿಯಾಗಿ।
ಸೊಗಸಾದ ಕಲ್ಪನೆ :ಹ

೧೯೯೬ ನೆ ಇಸ್ವಿ ಲೇ ಬರೆದಿರುವ ಕವನ, ನಾನು ಆಗ ಬರೆದದ್ದು ಎಲ್ಲ ಕಳೆದು ಹೋಯ್ತು :(ಮತ್ತೆ ಈಗ ಬರುತಿರುವ ಕವನಗಳ ಕೊಂಡಿಗಳನ್ನು ದಯಪಾಲಿಸ ಬೇಕಾಗಿ ವಿನಂತಿ.
ಇಂತಿ
ಭೂತ ಸ್ರೇಷ್ಟ
March 16, 2007 12:35 AM


Alpazna said...
ಬಹು ಸುಂದರವಾಗಿ ಮೂಡಿಬಂದಿದೆ.
March 16, 2007 2:47 AM

suptadeepti said...
ಭೂತಯ್ಯ, alpazna, ಪ್ರತಿಕ್ರಿಯೆಗಳಿಗೆ ವಂದನೆಗಳು.

"ಪತಿಯ ಬೀಳ್ಕೊಡುವಳು ಉಷೆ, ಹೀರುತಲಿ ಸವಿ।"- ಈ ಸಾಲು ಹಿಂದಿನ ಸಾಲಿನ ಮುಂದುವರಿಕೆ. ಜೊತೆಗೆ ಓದಿ, ಆಗ "ಸವಿ"ಯ ಅರ್ಥ ಆಗುತ್ತದೆ.
http://thatskannada.oneindia.in/nri/kavana_index.html
http://www.sahityanjali.org/?q=taxonomy/term/8
http://kannadadhvani.com/kavana/index.html

ಈ ಎಲ್ಲ ಲಿಂಕ್'ಗಳಲ್ಲಿ "ಸುಪ್ತದೀಪ್ತಿ" ಹೆಸರಲ್ಲಿ ನನ್ನ ಪ್ರಕಟಿತ ಕವನಗಳು ಕಾಣ ಸಿಗುತ್ತವೆ. ದಟ್ಸ್'ಕನ್ನಡ ಮತ್ತು ಕನ್ನಡ ಧ್ವನಿ ತಾಣಗಳಲ್ಲಿ ಕಥಾ ವಿಭಾಗದಲ್ಲಿಯೂ ಕಣ್ಣಾಡಿಸಿ, ನನ್ನ ಕಥೆಗಳಿವೆ.
ಆಸಕ್ತಿ ತೋರಿಸಿದ್ದಕ್ಕೆ ಧನ್ಯವಾದಗಳು.
March 16, 2007 10:38 AM

Jagali Bhagavata said...
ನಿಮ್ಮ ಎಲ್ಲ ಕವನಗಳೂ, ಕವಿತೆಗಳೂ ಚೆನ್ನಾಗಿವೆ. ನೋಡಿ, ಅವತ್ತೇ ನಾನು ನಿಮ್ಮ 'ಸುಪ್ತದೀಪ್ತಿ'ಯನ್ನು ಗುರುತು ಹಿಡಿದಿದ್ದೆ. ಹಾಗಾಗಿ ನಿಮ್ಮ ಎಲ್ಲ ಕವಿತೆ, ಕವನಗಳಲ್ಲಿ 'ಇದು ತುಂಬ ಚೆನ್ನಾಗಿದೆ' ಅಂತ ಬರೆಯಲ್ಲ. ಒಂದೇ ವಾಕ್ಯವನ್ನು ತುಂಬ ಸರ್ತಿ ಹೇಳೊಕೆ ಬೋರ್ ಹೊಡಿಯತ್ತೆ:-)
March 16, 2007 8:26 PM

ಶ್ರೀವತ್ಸ ಜೋಶಿ said...
ನುಡಿ: "ಪತಿಯ ಬೀಳ್ಕೊಡುವಳು ಉಷೆ, ಹೀರುತಲಿ ಸವಿ"

ಕಿಡಿ: ರವಿ ಮತ್ತು ಉಷೆಯರ ಮ್ಯಾರೇಜ್ ರಿಸೆಪ್ಷನ್‍ನಲ್ಲಿ, ಫಾಂಟಾದ ಒಂದೇ ಬಾಟಲಿಯಿಂದ ಎರಡು ಸ್ಟ್ರಾಗಳಲ್ಲಿ ರವಿ ಮತ್ತು ಉಷೆ ಇಬ್ಬರೂ ಫಾಂಟಾ ಹೀರುವ ಸೀನ್ ಇತ್ತಾ? ಆಲ್ಬಮ್‍ನಲ್ಲಿ ಆ ಪಟ ಇದೆಯಾ? ಫಾಂಟಾಬಾಟಲಿಯಲ್ಲಿ ಉಳಿದಿರುವುದನ್ನೇ ಉಷೆ ಹೀರುತ್ತಿರುವುದಾ?

ಏನೇ ಇರಲಿ, ನಿಮ್ಮ ಕವನ Fanta with a stick (ಸ್ಟ್ರಾ) = Fantastic!
March 19, 2007 6:55 PM

suptadeepti said...
ಜೋಶಿಜಿ ಉವಾಚ: "ಫಾಂಟಾದ ಒಂದೇ ಬಾಟಲಿಯಿಂದ ಎರಡು ಸ್ಟ್ರಾಗಳಲ್ಲಿ ರವಿ ಮತ್ತು ಉಷೆ ಇಬ್ಬರೂ ಫಾಂಟಾ ಹೀರುವ ಸೀನ್ ಇತ್ತಾ? ಆಲ್ಬಮ್‍ನಲ್ಲಿ ಆ ಪಟ ಇದೆಯಾ?"

ನನ್ನ ಆಲ್ಬಂನಲ್ಲಿ ರವಿ-ಉಷೆಯರ ಪಟ ಇಲ್ಲ, ಆದರೆ ಮದುವಣಿಗರ ಬಾಳ ಪುಟಗಳಲ್ಲಿ ಅಂಥದ್ದೊಂದು ಪಟ ಇದ್ದೇ ಇರಬಹುದು, ರಿಸೆಪ್ಷನ್ ದಿನ ಅಲ್ಲವಾದರೆ ಮತ್ತೆಂದೋ ಆಗಿರಬಹುದು.

ಅದರ ಹೊರತಾಗಿಯೂ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
March 19, 2007 8:55 PM

Spring Flower of Death Valley

Tuesday, March 13, 2007

There, she bloomed, much awaited, wanted,
Giving a little pride, a little jealousy,
Spreading happiness, and some laughter,
Keeping the smiles, walking those miles.

Then, she gloomed, much against hope,
Hiding her pain, and her miseries.
Cringing with her own noble dreams,
Watching them drown in the dark of nights.

Then, she glowed, adding to the agony,
Lifeless mortal, spirited in the air,
Evaporated, absorbed, disappeared;
Atom by atom, blending into the earth;
Leaving the memories of all colors,
Brightening the sky, and all the minds.
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 6:00 PM
Labels:

2 ಪತ್ರೋತ್ತರ:
Phantom said...
supthadeepthi,

Spreading happiness, and some laughter,
Keeping the smiles, walking those miles,


capturing lines there :)


Evaporated, absorbed, disappeared;
Atom by atom, blending into the earth;


no doubt you portray the agony, but this sounds like science :O

welcome to the blog world :D
rgds
Phantom
March 14, 2007 12:21 PM

suptadeepti said...
ಭೂತಯ್ಯ,

ನಿನ್ನ ಕೃಪೆಗೂ ಸಿಲುಕಿದೆನೇ; ನೋಟ ಹರಿಸಿದ್ದಕ್ಕೆ ಧನ್ಯವಾದಗಳು.
Yes, lines do sound like science, thats what happens when a flower finishes its duty on earth, it just disintegrates, becomes ONE with Mother Nature. That is inevitable science of life.Thanks.
March 14, 2007 11:44 PM

ಹೊಸ ದಾರಿಯಲ್ಲಿ ಎರಡು ಹೆಜ್ಜೆ

Tuesday, March 13, 2007

ಕೆಲವಾರು ಪ್ರೀತಿಯ ಆಗ್ರಹಗಳಿಗೆ ಕೊನೆಗೂ ತಲೆಬಾಗಿದೆ. ಒಂದು ಬ್ಲಾಗ್ ತೆರೆದೆ, ಆದರೆ ಏನು ಬರೆಯಲಿ? ತೋಚಲಿಲ್ಲ. ಅದಕ್ಕೇ ಸುಮ್ಮನೇ ದಿಕ್ಕು-ದೆಸೆಯಿಲ್ಲದೆ ಹರಿಯುತ್ತಿರುವ ಹೊಸ ಲಹರಿ. ನಿಮ್ಮ ಒಂದು ಹೊರಳು ನೋಟಕ್ಕೆ.


ಮುಂದುವರಿಯಲೋ ಬೇಡವೋ ಸಂಶಯ ಇನ್ನೂ ಇದೆ ಎದೆಯಲ್ಲಿ....! ತಂಪು ಭೂಮಿಗೆ ಎದುರಾದೆನೇ.... ಮರುಭೂಮಿಯ ಮುಂದಿರುವೆನೆ? ತಿಳಿದಿಲ್ಲ. ನಡೆದದ್ದೇ ಹಾದಿ ಎನ್ನುವ ಒರಟುತನ ನನ್ನದಲ್ಲ. ಹೇಗೆ ಮುಂದುವರಿಯಲಿ ಅನ್ನುವುದು ಕಾಲ ನಿರ್ಧರಿತ....!!

ಅಕ್ಷರ: ಸುಪ್ತದೀಪ್ತಿ suptadeepti ಕಾಲ: 5:16 PM
Labels:

10 ಪತ್ರೋತ್ತರ:

mala rao said...
ಹೊಸ ದೀಪ್ತಿಗೆ ಸ್ವಾಗತ

ಲಹರಿ ನಿರಂತರವಾಗಿ ಹರಿಯಲಿಎದುರಿಗಿರುವುದು ಮರುಭೂಮಿಯೋ,ತಂಪುದಾರಿಯೋಹರಿಯ ಚಿತ್ತ ....ಸ್ನೇಹವೆಂಬ ಓಯಸಿಸ್ ಅನ್ನೇ ಅದಕು,ಇದಕು ,ಎದಕು ಎಂದು ನಂಬಿರುವಾಗ ನಡೆವ ಹಾದಿಯೆಲ್ಲಾ ಹಸಿರು ಮಖಮಲ್ಲು!ಅಭಿನಂದನೆಗಳು!
March 13, 2007 6:07 PM

ಮನಸ್ವಿನಿ said...
ಸುಪ್ತದೀಪ್ತಿಗೆ ಬ್ಲಾಗ್ ಲೋಕಕ್ಕೆ ಸುಸ್ವಾಗತ..

ಹರಿಯುವುದಷ್ಟೆ ನಮ್ಮ ಕೆಲಸ, ಹೇಗೆ ,ಎಲ್ಲಿಗೆ ಅಂತ ನಿರ್ಧಾರ ಆ ಭಗವಂತನದ್ದು...
ಮೊದಲ ಬ್ಲಾಗಲ್ಲಿ ಕೊರೆದ್ರೆ ಸರಿ ಇರಲ್ಲ...ನಿಲ್ಲಿಸ್ತೀನಿ :)
March 13, 2007 9:00 PM

sritri said...
ಬ್ಲಾಗ್ ಗ್ರಹಕ್ಕೆ ಸ್ವಾಗತ! :)ಹರಿವ ಲಹರಿ ಹೆಸರು ಚೆನ್ನಾಗಿದೆ.

"ಹರಿವ ನೀರು ನೀನು ದಡದ ಹಸಿರು ನಾನು
ಹಾಡು ತುಂಬಿ ಬರಲು ಅದಕೆ ನಾನು ಕೊರಳು!"
March 14, 2007 12:48 PM

Jagali Bhagavata said...
ನಿಮ್ಮ ಬ್ಲಾಗ್-ಗೆ ನಾನೇ ಮೊದ್ಲು ಬರೀಬೇಕಂತಿದ್ದೆ. 'ಸ್ತ್ರೀ''ತ್ರಿ'ಗಳು ಅವಕಾಶ ಕಸಿದುಕೊಂಡರು. ಛೆ, ಛೆ, ಛೆ (ನಾಯಕ ಕೈ ಕೈ ಹೊಸಕಿಕೊಳ್ಳುವನು).

ಲಹರಿ ಓತಪ್ರೋತವಾಗಿ ಹರಿಯಲಿ. ಅದಕ್ಕೆ ಅಣೆಕಟ್ಟು ಕಟ್ಟುವ ಯತ್ನ ಬೇಡ.
March 14, 2007 6:17 PM

suptadeepti said...
ಎಲ್ಲರ ಪ್ರೀತಿಗೆ ಪ್ರತಿ ವಂದನೆಗಳು.

@ ಮಾಲಾ, ಸ್ನೇಹದ ಹೊಸ ದಿಕ್ಕಿಗೆ ಮೊದಲು ಕೈತೋರಿದ ನಿನಗೆ ಮೊದಲ ಚಾಕಲೇಟು.

@ ಮನಸ್ವಿನಿ, ಒತ್ತಡ ಏರಿಸಿದ್ದಕ್ಕೆ ನಿನಗೂ ಒಂದು ಕ್ಯಾಂಡಿ.

@ ಶ್ರೀತ್ರಿ, ನಿನ್ನ ಕೊರಳಲಿ ಸದಾ ನಲಿವ ಹಾಡಿನ ಗುನುಗಿಗೆ ಒಂದು ಸಿಹಿ.

@ ಭಾಗವತರೇ, ಲಹರಿಗೆ ಪರ್ಮಿಟ್ ಕೊಟ್ಟಿದ್ದಕ್ಕೆ ನಿಮಗೆ ತಂಪಾದ ಒಂದು 'ಬೊಂಡ'.

ಎಲ್ಲರಿಗೂ ಸ್ವಾಗತ.

ನಿಮ್ಮೆಲ್ಲರ ತಾಣಗಳಿಗೆ ನನ್ನ ಅಂಗಳದಿಂದ ಕೈಮರಗಳನ್ನು ಸಧ್ಯದಲ್ಲೇ ನಿಲ್ಲಿಸುತ್ತೇನೆ. ನಿಮಗೆ ತಾಳ್ಮೆಯಿದೆ, ನನಗೆ ಗೊತ್ತು.
March 14, 2007 11:38 PM

Shrilatha Puthi said...
"ಲಹರಿ ಹರಿಯಲು" ಶುರುವಾದದ್ದನ್ನು ನೋಡಿ ತುಂಬಾ ಖುಷಿಯಾಯ್ತು. ದಾರಿ ಹೊಸದಿರಬಹುದು, ಜೊತೆಗೆ ನಾವೆಲ್ಲಾ ಇದ್ದೇವೆ; ಪಟ್ಟಾಂಗ ಕೊಚ್ಚಿ, ಕಾಲೆಳೆದು, ತಲೆ ತಿನ್ಲಿಕ್ಕೆ. We are just here to enjoy the journey.
March 14, 2007 11:49 PM

suptadeepti said...
ಧನ್ಯವಾದಗಳು ಶ್ರೀಲತಾ. ಪ್ರೋತ್ಸಾಹಕ್ಕೆ ವಂದನೆಗಳು. ಬರುತ್ತಿರು.
March 14, 2007 11:54 PM

Shiv said...
ಸುಪ್ತದೀಪ್ತಿಯವರೇ,

ಸ್ವಾಗತವು ನಿಮಗೆ.. ಹರಿವ ಲಹರಿಯೆಂಬ ಸುಂದರ ಹೆಸರಿನ ನಿಮ್ಮ ಬ್ಲಾಗ್ ಲಹರಿ ನಿತ್ಯ ನಿರಂತರವಾಗಿ ಹರಿಯಲಿ..
March 15, 2007 1:34 AM

Sree said...
ಬ್ಲಾಗ್ ಹೆಸರು ಇಷ್ಟ ಆಯ್ತು! ಎಲ್ಲಾ ಆಗ್ಲೇ ಸ್ವಾಗತಿಸಿ ಚಾಕಲೇಟ್ ಗಿಟ್ಟಿಸಿಬಿಟ್ಟಿದಾರೆ! ನಾನು ತುಂಬಾ ಲೇಟಾಗಿ ಈ ಕಡೆ ಬಂದೆನಾ?:ಪ್

ಅಂದಹಾಗೆ ಹೊಸ ಕವನ ಚೆನ್ನಾಗಿದೆ(ಚಾಕಲೇಟ್ ಆಸೆಗೆ ಹೇಳಿದ್ದಲ್ಲ;)) ಹೀಗೇ ಬರೀತಿರಿ:) ಹೀಗೇ ಸುಮ್ಮ್ನೆ ಲಿಂಕ್ ಹಾಕಿಕೊಳ್ತಿದೀನಿ
March 15, 2007 1:49 AM

suptadeepti said...
ಶಿವು, ಶ್ರೀ, ಇಬ್ಬರಿಗೂ ಸ್ವಾಗತ, ಧನ್ಯವಾದಗಳು.

'ಹರಿವ ಲಹರಿ'ಯ ಶಕ್ತಿ ನೀವೆಲ್ಲ ಓದುಗರ ಪ್ರೋತ್ಸಾಹ, ಪ್ರೀತಿ. ಅದು ಹೀಗೇ ನಿರಂತರವಾಗಿರಲಿ.


ಶ್ರೀ, ಕವನ ಮೆಚ್ಚಿಗೆಯಾಗಿದ್ದಕ್ಕೆ ಧನ್ಯವಾದಗಳು. ಲಿಂಕ್ ಹಾಕಿಕೊಳ್ಳಿ, ಆಕ್ಷೇಪವಿಲ್ಲ, ಸಂತೋಷವೇ.
March 15, 2007 10:39 AM