ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday, 27 October, 2011

ಪರಾಧೀನ-೦೪

ಮುಂದಿನ ನಿಗದಿತ ಭೇಟಿಯ ಸಮಯಕ್ಕೆ ಸರಿಯಾಗಿ ನಗುತ್ತಲೇ ಬಂದವರ ಮುಖದಲ್ಲಿ ಲವಲವಿಕೆಯಿತ್ತು, "ಆತಂಕ ಕಡಿಮೆಯಾದಂತಿದೆ" ಎಂದರು. ಈ ನಿರಾತಂಕವೇ ಚಿಕಿತ್ಸಕರಿಗೆ ಉತ್ತೇಜಕ. ರಿಲ್ಯಾಕ್ಸೇಷನ್ ಸುಲಭದಲ್ಲೇ ಸಾಧ್ಯವಾಗಿ ಟ್ರಾನ್ಸ್ ಸ್ಥಿತಿಗೆ ಕೆಲವೇ ನಿಮಿಷಗಳಲ್ಲಿ ಜಾರಿಕೊಂಡರು.

"...ತೆಂಕು (ದಕ್ಷಿಣ) ದಿಕ್ಕಿಗೆ ತಲೆ ಹಾಕಿ ಮಲಗಿಸಿದ ಮನುಷ್ಯ ದೇಹ, ಸಮುದ್ರ ತೀರದಲ್ಲಿ. ತಲೆ-ಮುಖ ಚಚ್ಚಿ ಹಾಕಿದೆ, ಗುರುತಾಗುತ್ತಿಲ್ಲ. ಸುತ್ತಲಿರುವ ಜನ ದೇಹವನ್ನು ತಿರುಗಿಸಲಿಕ್ಕೆ ನೋಡ್ತಿದ್ದಾರೆ, ಕಡಲಲ್ಲಿ ತೇಲಿ ಬಂದ ಶವ ಅಂತ ಮಾತಾಡ್ತಿದ್ದಾರೆ. ಸುಮಾರು ಇಪ್ಪತ್ತೆಂಟು ವರ್ಷದ ಯುವಕನ ಬಾಡಿ. ಏನೋ ಸೆಳೆತ, ಈ ದೇಹದ ಬಗ್ಗೆ. ಏನೋ ಶಕ್ತಿ ಎಳೀತಾ ಇದೆ ನನ್ನನ್ನು ಆ ಕಡೆಗೆ. ಮತ್ತೊಮ್ಮೆ ಬೆಳಕಿನ ಸುರಂಗ, ಅಲ್ಲಿಂದ ನನ್ನನ್ನು ರಿಲೀಸ್ ಮಾಡಲಾಗಿದೆ. ಮುದುಕಿಯೊಬ್ಬರು, ಕೃಷಿಕ ಹೆಂಗಸಿನ ವೇಷಭೂಷಣ... ಕೈಯಲ್ಲಿ ಕತ್ತಿ (ಕುಡುಗೋಲು) ಹಿಡಿದು ನಿಷ್ಠುರ ಕಣ್ಣುಗಳಿಂದ ನನ್ನನ್ನು ನೋಡ್ತಿದ್ದಾರೆ... ಆ ದೇಹದ ಕಡೆಗಿನ ಸೆಳೆತವನ್ನು ಅವರೇ ಕತ್ತರಿಸಿದ್ದಾರೆ. ಈಗ ತಿಳಿಯಿತು, ಅದು ನನ್ನ ದೇಹ. ಪುನಃ ಬೆಳಕಿನ ಸುರಂಗ. ಆಕಡೆಯಿಂದ ಬಾಗಿಲು ಹಾಕಿದೆ. ಅದನ್ನು ತೆರೆದು ಸುರಂಗದೊಳಗೆ ಕರೆದುಕೊಂಡು ಹೋದ್ರು, ಅಜ್ಜಿ. ಬಲಬದಿಗೆ ತಿರುಗಿ ಹಿಂದೆ ನನ್ನ ಕಡೆ ನೋಡಿದ್ರು. ನೋಟ ಭಯ ಹುಟ್ಟಿಸುತ್ತೆ. ಹಿಂಬಾಲಿಸುವಂತೆ ಸನ್ನೆ ಮಾಡಿದ್ರು, ಹಿಂಬಾಲಿಸಿದೆ.

ಸುರಂಗ ಮುಗಿದು ಹಸಿರು ತುಂಬಿದ ಮರಗಳ ಕಾಡು. ಪರಿಚಯ ಇಲ್ಲ. ಅರೆಗತ್ತಲೆ. ತುಂಬಾ ದೊಡ್ಡ ದೊಡ್ಡ ಮರಗಳು. ಒಂದು ಮರದ ಒಂದು ಕೊಂಬೆಗೆ ಯಾವುದೋ ದೇಹ ತೂಗಾಡಿಸಿದ್ದಾರೆ. ಆತ್ಮಹತ್ಯೆ ಅಲ್ಲ. ಕೊಲೆ ಮಾಡಿ ತೂಗಾಡಿಸಿದ್ದು. ದೇಹದ ಮುಖ ಕೆಳಮುಖವಾಗಿದೆ. ಹೆಣ್ಣು. ಸೀರೆಯಲ್ಲೇ ಕಟ್ಟಿದ್ದಾರೆ, ಸುಮಾರು ಇಪ್ಪತ್ತೆರಡು-ಇಪ್ಪತ್ಮೂರರ ಹುಡುಗಿ. ಕುತ್ತಿಗೆಯ ಹಿಂದಿನ ನರಗಳು, ಹಿಂದಲೆಯ ಕೆಳಗೆಲ್ಲ ಎದ್ದು ಕಾಣ್ತವೆ. ಅಜ್ಜಿಯ ಹಿಂದೆಯೇ ಹೋಗುವ ಪ್ರಯತ್ನ ಮಾಡಿದಾಗ ಆ ದೇಹ ವಿಕಾರ ಮುಖ ಮಾಡಿ ನನ್ನ ಕಡೆ ನೋಡಿ ಮಾತಾಡ್ತಾ ಉಂಟು... ನೀನೇ ಕೊಲೆ ಮಾಡಿದ್ದು, ಕುತ್ತಿಗೆ ಜಜ್ಜಿ ಕೊಂದಿದ್ದೀ, ಅದಕ್ಕೇ ನಿಂಗೆ ಅಲ್ಲೇ ನರಗಳ ದೌರ್ಬಲ್ಯ ಅಂತ ಹೇಳ್ತಾ ಉಂಟು. ಅಜ್ಜಿ ಬೇರೆ ಮರದ ಬುಡದಲ್ಲಿ ನಿಂತಿದ್ದಾರೆ. ನನ್ನ ದೇಹದ ಚೈತನ್ಯ ಆ ಶವಕ್ಕೆ ಸೇರ್ತಾ ಉಂಟು ನನ್ನಲ್ಲಿ ನಿಃಶಕ್ತಿ. ಮರದಿಂದ ಕಳಚಿಕೊಂಡು ಕೆಳಗೆ ಬಂತು. ಆ ವಿಕಾರ ಮುಖದ ಶವದ ತಲೆಗೆ ಈಗ ಹೆಣ್ಣು ಶಕ್ತಿದೈವದ ಥರ ಗರಿಯ ಕಿರೀಟ. ನನ್ನ ಕಡೆ ವೇಗವಾಗಿ ಬರ್ತಾ ಉಂಟು, ನನಗೆ ಹೊಡೀಲಿಕ್ಕೆ ಬರ್ತಾ ಉಂಟು. ಅಜ್ಜಿಯ ಕಡೆಯಿಂದ ಒಂದು ಮಿಂಚು, ಒಂದು ಬೆಳಕಿನ ಪುಂಜ, ಗದೆಯ ರೂಪಕ್ಕೆ ಬಂತು. ನನ್ನ ಮತ್ತು ಆ ದೇಹದ ನಡುವೆ ಬಂತು. ಆ ದೇಹದ ಎದೆಯ ಭಾಗಕ್ಕೇ ಒತ್ತಿಹಿಡೀತು, ತಳ್ಳಿಕೊಂಡೇ ಹಿಂದೆ ಹಿಂದೆ ಓಡಿಸಿ ಅಲ್ಲಿ ಪಶ್ಚಿಮಕ್ಕೆ ಹರೀತಾ ಇರುವ ನದಿ ನೀರಿಗೆ ದೂಡಿತು. ನೀರಿನೊಳಗೆ ಒತ್ತಿ ಹಿಡೀತು. ಹೆಣ್ಣುದೈವಶಕ್ತಿಯ ಕಿರೀಟ ಕರಗಿತು, ಅದರ ಶಕ್ತಿ ನಿಃಶಕ್ತಿಯಾಯ್ತು. ಅಜ್ಜಿಯ ಹಿಂದೆ ನಾನು ನಿಂತು ನೋಡ್ತಿದ್ದೇನೆ. ನೀರಿನಲ್ಲಿ ತೇಲುತ್ತಿರುವ ದೇಹದ ಮೇಲೆಯೇ ಬೆಳಕಿನ ಗದೆಯೂ ಗಾಳಿಯಲ್ಲಿ ತೇಲುತ್ತಾ ಮುಂದೆ ಸಾಗುತ್ತಾ ಹೋಯ್ತು. ಅಜ್ಜಿ ಮತ್ತು ನಾನು ಹಿಂಬಾಲಿಸಿದೆವು. ದೇಹ ಪೂರ್ತಿ ನೀರಲ್ಲಿ ಕರಗಿ ಹೋದಮೇಲೆ ಬೆಳಕು ಬಂದು ಅಜ್ಜಿಯನ್ನು ಸೇರಿತು. ನನ್ನ ಮೈಯಲ್ಲಿ ಕಂಪನ (ಹೊರ ಮೈಯಲ್ಲೂ ಹದವಾದ ನಡುಕ).

ನನ್ನ ಹಿಂದೆ ಉರಿ, ನಾ ನಿಂತಿದ್ದಲ್ಲಿ ಬೆಂಕಿ. ಅಜ್ಜಿ ನೋಡ್ತಾರೆ, ಹಸಿ ಮರಕ್ಕೆ ಬೆಂಕಿ. ಅಜ್ಜಿ ಅಲ್ಲಿ ಹೋದಾಗ ಬೆಂಕಿ ಶಾಂತವಾಯ್ತು. ಮರ ಸುಡ್ಲಿಲ್ಲ. ಅಜ್ಜಿ ಮುಂದೆ, ನಾನು ಅವರ ಹಿಂದೆ, ಪಶ್ಚಿಮಾಭಿಮುಖವಾಗಿ ಹೋಗ್ತಿದ್ದೇವೆ. ಈಗ ಅಜ್ಜಿ ಐಸ್ ಮೇಲೆ ನಡೀತಿದ್ದಾರೆ, ನಾನು ತೇಲಾಡ್ತಾ ಹೋಗ್ತಿದ್ದೇನೆ. ವಾಯುವ್ಯದ ಕಡೆಗೆ, ಸಿಮೆಂಟ್ ಸುರಂಗದ ಥರ. ಅಜ್ಜಿಯ ಕೈಯಲ್ಲಿ ಕತ್ತಿ ಇನ್ನೂ ಉಂಟು. ಸನ್ನೆ ಮಾಡಿ ಕರೆದು ಗುಡ್ಡದ ಬದಿಗೆ ಕರೆದುಕೊಂಡು ಹೋದ್ರು, ಸುರಂಗ ದಾಟಿ, ನೈ‌ಋತ್ಯದ ಕಡೆ ಸಾಗಿದ್ದೇವೆ. ಕಣಿವೆ ಒಂದು ಬದಿಯಲ್ಲಿ. ಆಳದಲ್ಲಿ ನೀರು, ಕೆಂಪು ಮಿಶ್ರಿತ ಮಣ್ಣು. ಕುರುಚಲು ಗುಡ್ಡಗಾಡು, ಕಡಿಮೆ ಮರಗಳು. ಈಗ ಸರಿಯಾದ ರಸ್ತೆಗೆ ಬಂದಿದ್ದೇವೆ. ಅಜ್ಜಿ ಬಲಗೈ ಎತ್ತಿ ಕತ್ತಿಯಿಂದ ದಾರಿ ತೋರಿಸ್ತಾ ಇದ್ದಾರೆ, ಪಶ್ಚಿಮಕ್ಕೆ. ಅವರು ನೈ‌ಋತ್ಯಕ್ಕೇ ಹೋದ್ರು. ನಾನು ಗುಡ್ಡದ ಮೇಲಿಂದ ತೇಲಿಕೊಂಡು ಬರ್ತಾ ಇದ್ದೇನೆ. ಆಚೆಕಡೆ ಅಜ್ಜಿ ಮಣ್ಣಿನ ಸುರಂಗದೊಳಗೆ ಸೇರಿಕೊಂಡರು, ಹಳದಿ ಬೆಳಕು ಸುರಂಗದಲ್ಲಿ. ನಾನು ಗುಡ್ಡದ ಮೇಲೆ ನಿಂತು ನೋಡ್ತಾ ಇದ್ದೇನೆ. ಅದರ ಕಿರಣಗಳು ಬಂದು ನನ್ನ ಹಣೆ ಸೋಕಿ, ದಾಟಿ ಹೋದವು. ನಾನು ಕೈಮುಗಿದು ನಿಂತಿದ್ದೇನೆ. ಮತ್ತೆ ಬೆಳಕು ಕಾಣದಾಯ್ತು. ಕಿರಣ ನಿಂತಿತು. ಸುರಂಗ ಕತ್ತಲಾಯ್ತು. ನಾನು ಪಶ್ಚಿಮಕ್ಕೆ ಸಾಗಿ ಸಂಜೆಯ ಅರೆಗತ್ತಲೆ ಹೊತ್ತಲ್ಲಿ ಸಮುದ್ರ ದಡಕ್ಕೆ ಬಂದೆ. ನನ್ನ ದೇಹ ಇದ್ದ ತೋಟದ ಪರಿಸರಕ್ಕೆ ಬಂದು, ದೇಹ ಸೇರಿಕೊಂಡೆ."

ಇದೆಂಥ ಕಥನ! ಯಾವುದೋ ಜನ್ಮದಲ್ಲಿ ಯಾವುದೋ ಪರಿಸರದಲ್ಲಿ ಯಾವುದೋ ಕಾರಣಕ್ಕಾಗಿ ಇಪ್ಪತ್ತೆರಡು-ಇಪ್ಪತ್ಮೂರರ ತರುಣಿಯನ್ನು ಹತ್ಯೆಗೈದು, ನಂತರ ತಾನೂ ಆತ್ಮಹತ್ಯೆಗೈದ ಇಪ್ಪತ್ತೆಂಟರ ತರುಣನೇ ತಾನು, ಆಕೆಯ ಆತ್ಮ ತನ್ನನ್ನು ಕಾಡುತ್ತಿತ್ತು, ತನ್ನ ಮನೆತನದ ಹಿರಿಯಳಂತೆ ಭಾಸವಾಗುತ್ತಿದ್ದ ಅಜ್ಜಿಯಿಂದ ರಕ್ಷಿಸಲ್ಪಟ್ಟೆ ಅನ್ನುವ ಒಂದು ಸಿನಿಮೀಯ ಘಟನಾವಳಿಗಳನ್ನು "ಕಂಡು-ಅನುಭವಿಸಿ" ಎದ್ದು ಬಂದ ಜಗನ್ ಅದ್ಯಾವುದೋ ಭ್ರಾಮಕ ಲೋಕದಲ್ಲಿದ್ದಂತೆಯೇ ಕಾಣುತ್ತಿದ್ದರು. ಈ ಎಲ್ಲ ಕಥನದ ವಿಶ್ಲೇಷಣೆ ಮಾತಿಗೆ ಮೀರಿದ ಅನುಭವ. ಇದರ ಸತ್ಯಾಸತ್ಯತೆಯ ಪರೀಕ್ಷೆ ಮಾಡುವ ಅವಕಾಶವೂ ಇರಲಿಲ್ಲ, ಕಾಲ-ದೇಶಗಳ ಗುರುತಿರಲಿಲ್ಲ. ಆ ಅಜ್ಜಿಯೂ ಜಗನ್‌ರ ಸ್ವಂತ ಅಜ್ಜಿಯಂದಿರಲ್ಲ. ಇಲ್ಲಿ ಜಗನ್ ತೊಂದರೆಯಿಂದ ಮುಕ್ತರಾದರೇ ಅನ್ನುವುದು ಮಾತ್ರವೇ ಮುಖ್ಯಪ್ರಶ್ನೆಯಾಗಿ ಉಳಿದಿತ್ತು. ಅವರ ಆತಂಕ ಉದ್ವೇಗಗಳಿಗೆಲ್ಲ ಒಂದು ಹೆಣ್ಣುದೈವಶಕ್ತಿಯ ಪ್ರಯೋಗವೇ ಕಾರಣವಾಗಿತ್ತೆಂದು ಜ್ಯೋತಿಷಿಗಳು ಹೇಳಿದ್ದ ಮಾತು ಜಗನ್ ಮನದಾಳದಲ್ಲಿ ಈ ಘಟನಾವಳಿಗಳನ್ನು ಪ್ರೇರೇಪಿಸಿತೆ? ಅಥವಾ ನಿಜವಾಗಿಯೂ ಈ ಹಿನ್ನೆಲೆಯನ್ನೇ ಜ್ಯೋತಿಷಿಗಳು ಕಂಡಿದ್ದರೆ? ಗೊತ್ತಿಲ್ಲ.

ಮುಂದಿನ ವಾರ ಮತ್ತೊಮ್ಮೆ ಬಂದ ಜಗನ್ ಮಾತ್ರ ತುಂಬಾ ಗೆಲುವಾಗಿದ್ದರು. "ಇಂದು ಥೆರಪಿ ಸೆಷನ್ ಬೇಡ. ಸುಮ್ನೆ ಮಾತಾಡಿ ಹೋಗ್ಲಿಕ್ಕೆ ಬಂದೆ. ಮೊನ್ನೆ ನಾನೊಬ್ಬನೇ ಗಿಜಿಗುಟ್ಟುವ ಊರ-ಪೇಟೆಯ ರಸ್ತೆಗಳಲ್ಲಿ ಆತಂಕವಿಲ್ಲದೆ ತಿರುಗಾಡಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಕೋಣೆಯಲ್ಲಿ ನಾನೊಬ್ಬನೇ ಮಲಗುತ್ತಿದ್ದೇನೆ. ಊಟ-ನಿದ್ದೆ ಎಲ್ಲ ಸರಿಯಾಗಿದೆ. ನಾಳೆ ಸಂಜೆ ಅಣ್ಣ-ಅತ್ತಿಗೆ, ಹೆಂಡತಿ ಎಲ್ಲರ ಒಟ್ಟಿಗೆ ಮೂವೀಗೆ ಹೋಗುವ ಯೋಚನೆ ಉಂಟು. ನಾಡಿದ್ದು ವಾಪಾಸ್ ಮುಂಬಯಿಗೆ." ಎಂದರು ಉತ್ಸಾಹದಲ್ಲಿ. ಅವರ ಆ ಉತ್ಸಾಹ ಹೀಗೇ ಅವರೊಂದಿಗಿರಲೆಂದು ಹಾರೈಸಿ ಬೀಳ್ಕೊಟ್ಟೆ.
(ಮುಗಿಯಿತು)

Tuesday, 18 October, 2011

ಎರಡು ಹನಿ-ಮಿನಿ

ಬಿಂಬ


ಅಗಾಧ ಕತ್ತಲಿನೊಳಗೆ ಒಬ್ಬಳೇ ಕೂತಿದ್ದೇನೆ.
ಬೆಂಕಿಕಡ್ಡಿ ಗೀರಿದ ಹೊಗೆ ವಾಸನೆ.
‘ಯಾರು?’ ಉತ್ತರವಿಲ್ಲ.
ಪಿಶಾಚಿಗಳು ಬಂದು ಹೋದವು.
ಅನಂತ ಮೌನದೊಳಗೆ ಒಬ್ಬಳೇ ಕೂತಿದ್ದೇನೆ.
ನನ್ನೆಲ್ಲ ನೋವಿನ ಮೊತ್ತ ನನ್ನೊಳಗೆ ಹುತ್ತವಾಗುತ್ತಿದೆ.
ನನ್ನನ್ನೇ ಕಳೆದುಕೊಂಡಿದ್ದೇನೆ, ಹುಡುಕಲಾರದಲ್ಲಿ.

******
(೨೩-ಸೆಪ್ಟೆಂಬರ್-೨೦೧೧)
****** ******

ನಾಳೆ


ಅದೊಂದು ಹುಣ್ಣಿಮೆ ಹಬ್ಬದ ದಿನ. ಹೆತ್ತವರೊಡನೆ ಕಿತ್ತಾಡಿ ಮನೆಯಿಂದ ಹೊರಬಂದಿದ್ದೆ. ಮತ್ತದೆಷ್ಟು ಹುಣ್ಣಿಮೆಗಳೂ ಅಮಾವಾಸ್ಯೆಗಳೂ ಕಾಲನುರುಳಿನೊಳಗೆ ಕಳೆದೇಹೋದವು. ಭೀಮನೂ ಸಿಕ್ಕಿಲ್ಲ, ಸೋಮನೂ ದಕ್ಕಿಲ್ಲ. ಕಾಮನೊಡನೆ ಕಾದಾಟವೇ ಬದುಕಾದವಳಿಗೆ ದಿಕ್ಕಾದರೂ ಇದೆಯೆ? ನಾಳೆ ಯಾಕಾಗುತ್ತೊ?
******
(೧೨-ಅಕ್ಟೋಬರ್-೨೦೧೧)
****** ******

Sunday, 19 June, 2011

ಎಲ್ಲರೂ ಬನ್ನಿ... ನಮ್ಮ ಖುಷಿಯಲ್ಲಿ ಪಾಲುದಾರರಾಗಿ...

ಆತ್ಮೀಯ ಓದುಗರಿಗೆ ನಮಸ್ಕಾರ.
ಇದೇ ತಿಂಗಳ ಕೊನೆಯ ಭಾನುವಾರ, ಜೂನ್ ಇಪ್ಪತ್ತಾರರ ಸಂಜೆ, ಮೂರೂವರೆಯಿಂದ ಆರೂವರೆಯ ತನಕ

ನಿಮ್ಮೆಲ್ಲರ ಸಹವಾಸ ನಮಗೆ ಬೇಕು. ನಿಮ್ಮೆಲ್ಲರ ಸಾಹಚರ್ಯ ನಮಗೆ ಬೇಕು. ನಿಮ್ಮೆಲ್ಲರ ಸಹಕಾರ ನಮಗೆ ಬೇಕು.

ಪ್ರೋತ್ಸಾಹ, ನಗು, ಖುಷಿ, ಮತ್ತೊಂದಿಷ್ಟು (ಸಾಹಿತ್ಯಿಕ ಮತ್ತು ಜಠರದ) ಹಸಿವು ಹೊತ್ತುಕೊಂಡೇ ಬನ್ನಿ.

ಎಲ್ಲಿಗೇಂದಿರಾ?

ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣಕ್ಕೆ.

ಯಾಕೇಂತೀರಾ?

ಇಬ್ಬರು ಸಾಹಿತ್ಯ ದಿಗ್ಗಜರು ಅಂದು ನಮ್ಮನ್ನು ಪುಟ್ಟ ಯಾತ್ರೆ ಮಾಡಿಸಲಿದ್ದಾರೆ, ಸಾಹಿತ್ಯ ಯಾತ್ರೆ.

ಡಾ. ಸಾ.ಶಿ. ಮರುಳಯ್ಯ ಅವರು "ಹಳೇ ಮತ್ತು ಹೊಸ ಕಾವ್ಯದ ಸಂಬಂಧ" ವಿಷಯದ ಮೇಲೂ
ಡಾ. ಎಚ್.ಎಸ್.ವೆಂಕಟೇಶಮೂರ್ತಿ ಅವರು ಈ ವಿಷಯಕ್ಕೆ ಪೂರಕವಾಗಿಯೂ

ಉಪನ್ಯಾಸ ಮಾಡಲಿದ್ದಾರೆ.

ಜೊತೆಗೆ, ಮಾಮೂಲು...
ಚಹಾ, ಕಾಫಿ, ತಿಂಡಿ. ಸ್ನೇಹ ಸಮ್ಮಿಲನ.

ಮೇಲೊಂದಿಷ್ಟು ಕವನವಾಚನಗಳ ಒಗ್ಗರಣೆ. ನಡುವೆ ಸಣ್ಣ ಹೂರಣ: ಎರಡು ಪುಸ್ತಕಗಳ ಅನಾವರಣ.

ಬರುತ್ತೀರಲ್ಲ! ನೀವಿಲ್ಲದೆ ಇವೆಲ್ಲ ಖುಷಿ ಕೊಡೋಲ್ಲ, ಗೊತ್ತು ತಾನೆ!

ನಿಮ್ಮನ್ನು ಎದುರುಗೊಳ್ಳಲು ತಯಾರಾಗುತ್ತಿರುವ,
ಸುಪ್ತದೀಪ್ತಿ-ಜ್ಯೋತಿ.

Friday, 17 June, 2011

ಪರಾಧೀನ-೦೩

ಮೊದಲೆರಡು ಸೆಶನ್‌ಗಳಲ್ಲಿ ಅಂಥ ಪರಿಣಾಮವೇನೂ ಕಾಣಲಿಲ್ಲ. ನಿರಾಳವಾಗುವುದಕ್ಕೇ ಜಗನ್‌ಗೆ ಸಮಯ ತಗಲುತ್ತಿತ್ತು. ಎರಡು ವಾರಗಳ ಭೇಟಿಯ ಕೊನೆಯಲ್ಲಿಯೂ ದಿನವೂ ರಿಲ್ಯಾಕ್ಸೇಷನ್ ಅಭ್ಯಾಸ ಮಾಡಿರೆಂದು ಹೇಳಿ ಕಳಿಸುತ್ತಿದ್ದೆ. ಬೆಳಗಿನ ಹೊತ್ತು ಪ್ರಾಣಾಯಾಮ ಮಾಡುತ್ತಿದ್ದವರು ಬಿಟ್ಟಿದ್ದಾರೆಂದು ತಿಳಿಸಿದ್ದರು ಮೊದಲದಿನ. ಅದನ್ನೂ ಮುಂದುವರಿಸಲು ಸೂಚನೆ ನೀಡುತ್ತಿದ್ದೆ. ಮೂರನೇ ಬಾರಿ ಬಂದಾಗ ತುಸು ಗೆಲುವಾಗಿದ್ದಂತೆ ಕಂಡರು. ಒಬ್ಬರೇ ಬಂದಿದ್ದರು, ನಗುತ್ತಾ, ‘ಅಷ್ಟು ಧೈರ್ಯ ಬಂದಿದೆ’ ಅಂದರು. ಆ ನಗುವೇ ಖುಷಿಕೊಟ್ಟಿತು. ಸಮ್ಮೋಹನಕ್ಕಾಗಿ ರಿಲ್ಯಾಕ್ಸೇಷನ್ ಮಾಡಿಸುತ್ತಿದ್ದಾಗ ಸುಲಭವಾಗಿ ಸ್ಮೃತಿವಲಯದ ಆಳಕ್ಕೆ ಜಾರಿಕೊಂಡರು. ಬೆಳಕಿನ ಸುರಂಗದೊಳಗಿಂದ ಹಾದು ಬರುವ ಪ್ರಕ್ರಿಯೆಯಲ್ಲೇ ನನ್ನ ಸೂಚನೆಯನ್ನು ಅನುಸರಿಸಿ ಯಾವುದೋ ಕಾಲ-ದೇಶದ ಪರಿಧಿಯೊಳಗಿಳಿದರು.

(ಜಗನ್ ಮಾತುಗಳನ್ನು ಸಂಕ್ಷಿಪ್ತಗೊಳಿಸಲಾಗಿದೆ)

"ಕೆಂಪು ಹೆಂಚಿನ ಮಾಡು, A ಟೈಪ್ ಮಾಡು, ಸಾಲಾಗಿ. ದೇವಸ್ಥಾನ ಅಥವಾ ಮನೆ.. ಮನೆಯೇ, ಹತ್ತಿರ ಹತ್ತಿರ ಸುಮಾರು ಮನೆಗಳು. ಮೇಲೆ ಬಂಗಾರ ಬಣ್ಣದ ಕಲಶಗಳು. ಗೋಡೆಗಳಿಗೆ ಕೇಸರಿ, ನೀಲಿ ಬಣ್ಣ. ಹಸುರು ಗುಡ್ಡದ ಬದಿಯಲ್ಲಿ ಮೂರು ಮಾಡುಗಳು, ಶೃಂಗದ ಹಾಗೆ, ಮೇಲೆ ಚೂಪು ಕೆಳಗೆ ಅಗಲ. ಛಳಿ ಉಂಟು (ಹದವಾಗಿ ನಡುಕ ಜಗನ್ ಮೈಯಲ್ಲಿ. ಹೊದಿಕೆ ಹೊದೆಸಿದೆ). ಹಸುರು ಹುಲ್ಲಿನ ಮೇಲೆ ಹನಿಹನಿ ನೀರುದನಗಳು ಹುಲ್ಲು ಮೇಯ್ತಾ ಇದ್ದಾವೆ, ಕಪ್ಪು-ಬಿಳಿ ಬಣ್ಣದ ದನಗಳು. ಸುಮಾರು ನಾಲ್ಕೂವರೆಯ ಹೊತ್ತು, ಸೂರ್ಯಾಸ್ತದ ಓರೆ ಕೇಸರಿ ಕಿರಣಗಳು ಹುಲ್ಲಿನ ಮೇಲೆ ಬೀಳ್ತದೆ. ನೇಪಾಳ ಅಥವಾ ಟಿಬೆಟ್ ಥರ ಕಾಣ್ತದೆ. ಮೈಮೇಲೆ ಅರ್ಧಕ್ಕೆ ಗುಲಾಬಿ ಬಣ್ಣದ ಬಟ್ಟೆ ಧರಿಸಿದ ಬೋಳುತಲೆಯ ಸನ್ಯಾಸಿ, ಎದೆಯ ಅರ್ಧಕ್ಕೆ ಶಾಲು ಹೊದ್ದಿದ್ದಾರೆ. ಅವರಿಗೆ ನಾನು ಕಾಣ್ತಾ ಇಲ್ಲ. ನಾನು ಈಶಾನ್ಯದಲ್ಲಿದ್ದೇನೆ, ಅವರು ಪೂರ್ವದಲ್ಲಿ. ನಾನು ಹಿಂದೆ ಸರೀತಿದ್ದೇನೆ, ಅವರು ಧಾಪುಗಾಲು ಹಾಕಿ ಬಂದು ನಾನಿರುವ ಕಡೆಗೆ ನೋಡಿ, ಸುತ್ತು ಹಾಕಿ ಮತ್ತೆ ಗುಡಿಯ ಕಡೆಗೆ ಹೋಗಿ ಅಲ್ಲಿ ಜಗಲಿಯಲ್ಲಿ ಕೂತರು. ಎಡಗೈಯಲ್ಲಿ ಗಲ್ಲ ಇಟ್ಟು ನೋಡ್ತಿದ್ದಾರೆ.

ನನ್ನ ಟ್ರಾನ್ಸ್‌ಪರೆಂಟ್ ಬಿಳಿ ಬಣ್ಣ ಕ್ರೀಮ್ ಆಯ್ತು... ಛಳಿ, ನಡುಕ... (ನಿಜವಾಗಿಯೂ ಮತ್ತಷ್ಟು ನಡುಗುತ್ತಿದ್ದರು. ಮತ್ತೊಂದು ಹೊದಿಕೆ ಹೊದೆಸಿದೆ). ಈಗ ನನ್ನ ಬಣ್ಣ ಮಾರ್ಬಲ್ ಥರ ಒಪೇಕ್ ವೈಟ್. ಛಳಿ ಜಾಸ್ತಿ ಆಗ್ತಿದೆ. ಆದ್ರೆ ನಂಗೆ ಇಲ್ಲಿಂದ ಆಚೀಚೆ ಹಂದಾಡ್ಲಿಕ್ಕೇ (ಕದಲೋದಿಕ್ಕೆ) ಆಗುದಿಲ್ಲ. ಆ ಸನ್ಯಾಸಿ ಈಗ ನಗಾಡ್ತಿದ್ದಾರೆ. ಯಾಕೆ ಹೀಗೆ? ನಾನು ಏನ್ ಮಾಡ್ಬೆಕು? ಕೇಳಿದೆ (ನನ್ನ ಸೂಚನೆಯ ಮೇರೆಗೆ). ಈಗ ಅಲ್ಲಿಂದ ಎದ್ದು ಮುಂದೆ ಬರ್ತಾರೆ. ನನ್ನ ಕಡೆಗೆ. ನಿಂತರು. ಅವರು ಕಾಣುದಿಲ್ಲ, ಆದ್ರೆ ಅದೇ ಜಾಗದಲ್ಲಿ ಉಂಗುರಕ್ಕೆ ಕಲ್ಲುಗಳನ್ನು ಸೆಟ್ ಮಾಡಿದ ಹಾಗೆ ಬೇರೆ ಬೇರೆ ಬಣ್ಣಗಳ ವಜ್ರಗಳ ಹಾಗೆ ಹೊಳೆಯುವ ಕಲ್ಲುಗಳು, ದೊಡ್ಡ ದೊಡ್ಡ ಕಲ್ಲುಗಳು. ಅವುಗಳಿಂದ ಪ್ರಕಾಶ, ಗೆರೆ-ಗೆರೆಯಾಗಿ ಕಿರಣಗಳ ಲೈನ್ಸ್ ನನ್ನ ಮೇಲೆ. ಛಳಿ ಹೋಗ್ತಾ ಉಂಟು. ಬೆಳಕಿಗೆ ಎದೆ ಕೊಟ್ಟು ನಿಂತಿದ್ದೇನೆ. ಸೂರ್ಯಾಸ್ತ ಆಗಿ ಮತ್ತೆ ಉದಯ ಆಯ್ತು. ಬೆಳಗಿನ ಸುಮಾರು ಒಂಭತ್ತು ಗಂಟೆ. ದೇವಸ್ಥಾನದ ಮುಂದುಗಡೆ ಕಲ್ಲಿನ ಮೇಲೆ ೧೯೪೨, ಸೆಪ್ಟೆಂಬರ್, ೧೫, ಕಾಣ್ತಾ ಉಂಟು. ಸರಿಯಾಗಿ ಬೆಳಕಿನ ಕಿರಣಗಳು. ಈಗ ಛಳಿ ಇಲ್ಲ (ನಿಧಾನವಾಗಿ ಒಂದು ಹೊದಿಕೆ ತೆಗೆದೆ). ನನ್ನ ಬಣ್ಣ ಬಿಳಿ, ಸ್ನೋ ಥರ ಬಿಳಿ. ಹಂದಾಡ್ಲಿಕ್ಕೆ ಕಷ್ಟ, ಬೆಳಕಿನ ಕಿರಣಗಳ ಲೈನಿನಲ್ಲಿ ಮಾತ್ರ ಸಾಗಬಹುದು, ಬೇರೆ ಕಡೆ ಇಲ್ಲ.

ಬಿಡುಗಡೆ ಕೇಳಿ ದೇವಸ್ಥಾನದ ಮುಂದೆ ನಿಂತಿದ್ದೇನೆ. ತುಂಬ ದುಬಾರಿ ಬಟ್ಟೆಯ ಚಾಮರ, ತೊಟ್ಟಿಲ ಬಟ್ಟೆ. ಕೇಸರಿ ಮತ್ತು ಗುಲಾಬಿ ಬಟ್ಟೆ ಧರಿಸಿದ ಸನ್ಯಾಸಿಗಳು ಓಡಾಡ್ತಿದ್ದಾರೆ. ಮತ್ತೆ ಅದೇ ಸನ್ಯಾಸಿಯೂ ಬಂದರು. ನಾನು ಬೆಳಕಿನ ರೂಪದಲ್ಲಿ ಸಣ್ಣಸಣ್ಣದಾಗಿ ಅವರ ಕಾಲ ಬುಡದಲ್ಲಿ ನಕ್ಷತ್ರದ ಥರ. ಅವರ ಕೈಯಲ್ಲಿ ತಂಬಿಗೆ, ಕೈಯಲ್ಲಿ ನೀರು ತಗೊಂಡು, ಆಕಾಶ ನೋಡಿ ಏನೋ ಹೇಳಿ ನನ್ನ ಮೇಲೆ- ಅವರ ಪಾದದ ಬುಡದಲ್ಲಿರುವ ಬೆಳಕಿನ ನಕ್ಷತ್ರದ ಮೇಲೆ- ನೀರು ಅಪ್ಪಳಿಸಿದರು (ಒಮ್ಮೆಲೇ ಬೆಚ್ಚಿಬಿದ್ದ ದೇಹ ಪ್ರತಿಕ್ರಿಯೆ). ಈಗ ಲ್ಲೊಂದು ಬಿಳಿ ಹೂ, ತಾವರೆ ಥರ. ಅರಳ್ತಾ ಉಂಟು. ಹೂವು ಪ್ರಣಾಮಮಾಡ್ತಾ ಉಂಟು. ಹರಸ್ತಿದ್ದಾರೆ. ಹೂ ಸರೆಂಡರ್ ಆದ ಹಾಗೆ, ಪಾದದಲ್ಲಿ. ಬಾಗಿ ಮುಟ್ಟಿದರು, ನನ್ನ ಬೆನ್ನನ್ನು ಮುಟ್ಟಿದರು. ಬಿಳಿ ರೂಪಕ್ಕೆ ಬಂದೆ. ಕಣ್ಣಲ್ಲಿ ನೀರು, ಮೈಯಲ್ಲಿ ಕಂಪನ (ನಿಜವಾಗಿಯೂ ಕಣ್ಣ ಕೊನೆಗಳಲ್ಲಿ ನೀರು ಹನಿಯುತ್ತಿತ್ತು, ಮೈ ನಡುಗುತ್ತಿತ್ತು).

ಭುಜ ಹಿಡಿದು ನಿಲ್ಲಿಸಿದ್ದಾರೆ, ನಗುತ್ತಿದ್ದಾರೆ. ಎಪ್ಪತ್ತು ವರ್ಷ ಇರಬಹುದು. ತುಂಬಾ ಒಳ್ಳೆಯ ಸನ್ಯಾಸಿ. ಸಮಾಧಾನ ಹೇಳ್ತಿದ್ದಾರೆ. ತಲೆ ಮೇಲೆ ಕೈಯಿಟ್ಟು, ‘ನೀನು ಹೋಗು, ಒಳ್ಳೇದಾಗ್ತದೆ’ ಅಂತ ಹೇಳ್ತಿದ್ದಾರೆ. ನಾನು ಉತ್ತರಿಸದೆ ಗದ್ಗದನಾಗಿ ನೋಡ್ತಿದ್ದೇನೆ (ಎರಡು ಕ್ಷಣ ಮೌನ. ನಂತರ ಗಾಂಟಲು ಸರಿಮಾಡಿಕೊಂಡು...), ಪಶ್ಚಿಮಾಭಿಮುಖವಾಗಿ ಹೊರಟಿದ್ದೇನೆ. ಬೆಟ್ಟಗಳ ಇಳಿಜಾರಿನಲ್ಲಿ ಭತ್ತ ಗದ್ದೆಗಳ ನಡುವೆ ಹಸುರು ತುಂಬಿದ ಪ್ರದೇಶ... ಎಲ್ಲ ದಾಟಿ ರಸ್ತೆ. ನನ್ನ ಬಿಳೀ ಶರೀರ ಆಕಾಶದಲ್ಲಿ, ನೀರು, ಬಯಲು, ಗುಡ್ಡ-ಬೆಟ್ಟ, ಸುಣ್ಣದ ಕಲ್ಲಿನಂಥ ಬಿಳಿ ಜಾಗ, ಎಲ್ಲ ದಾಟಿ ತುಂಬಾ ವೇಗವಾಗಿ ಬರ್ತಾ ಉಂಟು. ತುಂಬಾ ವೇಗ... ಊಹಿಸ್ಲಿಕ್ಕೂ ಆಗದ ವೇಗ. ಕೆಳಗೆ ಎಲ್ಲ ಕಾಣ್ತಾ ಉಂಟು... ಬೀಚ್ ಬದಿಯಲ್ಲಿ ಮಲಗಿದ್ದ ನನ್ನ ದೇಹ... ಅಲ್ಲೇ ಉಂಟು... ಈ ಬಿಳೀ ದೇಹ ಒಣಗಿದ ಹಾಗೆ ಮರಗಟ್ಟಿ ಮಲಗಿದ್ದ ನನ್ನ ನಿಜ ದೇಹವನ್ನು ಸೇರಿತು..."

ನನ್ನ ಸೂಚನೆಗಳನ್ನು ಅನುಸರಿಸಿ ಮುಂದಿನ ಎರಡು ಕ್ಷಣದಲ್ಲಿ ವಾಸ್ತವಕ್ಕೆ ಎಚ್ಚತ್ತುಕೊಂಡರು ಜಗನ್. ಬಹುಶಃ ಟಿಬೆಟ್ ಅಥವಾ ನೇಪಾಳ ಪ್ರದೇಶದಲ್ಲಿ, ಸಾಮಾನ್ಯನಾಗಿ ಹುಟ್ಟಿದ್ದರೇನೋ, ೧೯೪೨ರ ಸಮಯದಲ್ಲಿ ಪ್ರಾಯಃ ಸಾವನ್ನಪ್ಪಿದ್ದಿರಬೇಕು. ಅವರು ನಂಬಿದ್ದ ಬೌದ್ಧ ಸನ್ಯಾಸಿಯಿಂದ ಮತ್ತೆ ಆಶೀರ್ವಾದ ಪಡೆದು ಬಂದರೆಂದೇ ನಾವಿಬ್ಬರೂ ನಂಬಿದ್ದೇವೆ. ಆ ಆಶೀರ್ವಾದದಿಂದ ಅವರ ಆತ್ಮಸ್ಥೈರ್ಯ ಹೆಚ್ಚಬಹುದು ಎಂದು ನನ್ನ ನಿಲುವು. ಎಚ್ಚತ್ತ ಮೇಲೆ ತಾನು ಕಂಡ ದೃಶ್ಯಗಳು ಎಷ್ಟು ಸ್ಪಷ್ಟವಾಗಿದ್ದವು, ನಿಚ್ಚಳವಾಗಿದ್ದವು. ಛಳಿ, ಬೆಳಕು ಎಲ್ಲವೂ ಅನುಭವಕ್ಕೆ ಬರುತ್ತಿದ್ದವು ಎಂದರು. ಛಳಿಯಾಗುತ್ತಿದ್ದಾಗ ನಾನು ಹೊದಿಕೆ ಹೊದೆಸಿದ ಅರಿವಿದ್ದರೂ ಅದವರ ಮನೋಯಾನಕ್ಕೆ ಅಡ್ಡಿಯಾಗಿರಲಿಲ್ಲ. ಮಾನಸಿಕವಾಗಿಯೂ ಅನುಭವಿಸುತ್ತಿದ್ದ ಆ ಛಳಿ ಅವರ ಈ ಶರೀರದಲ್ಲಿ ಅದು ಹೇಗೆ ಪರಿಣಾಮ ಬೀರುತ್ತಿತ್ತು ಎನ್ನುವುದೇ ಅವರಿಗೆ ಅಚ್ಚರಿಯ ಸಂಗತಿಯಾಗಿತ್ತು. ಮನೋದೈಹಿಕ ಸಂಬಂಧವೇ ಅಂಥಾದ್ದು. ಸೂಕ್ಷ್ಮ ಶರೀರವಾದ ಸುಪ್ತಮನಸ್ಸು/ ಆತ್ಮ ಅನುಭವಿಸುವಂತದ್ದು ಸ್ಥೂಲಶರೀರವಾದ ದೇಹದ ಮೇಲೆ ನೇರ ಪರಿಣಾಮ ಉಂಟುಮಾಡಿಯೇ ತೀರುತ್ತದೆ. ಈ ಸಂಬಂಧದಿಂದಲೇ ಮನೋದೈಹಿಕ ಖಾಯಿಲೆಗಳೂ ತೊಂದರೆಗಳೂ ಕಾಣಿಸಿಕೊಳ್ಳುವುದೂ ಸಮ್ಮೋಹನದಿಂದ ನಿವಾರಣೆಯಾಗುವುದೂ ಸಾಧ್ಯ. ಇಷ್ಟೆಲ್ಲ ವಿವರಣೆಗಳ ಬಳಿಕ ಮುಂದಿನ ವಾರ ಬರುವುದಾಗಿ ಹೇಳಿ ಹೊರಟರು ಜಗನ್.

Thursday, 26 May, 2011

ಪರಾಧೀನ-೦೨

ಯಾವತ್ತಿನ ರೊಟೀನ್ ಮತ್ತೆ ಮುಂದುವರಿಯಿತು. ಬೆಳಗ್ಗೆ ಒಂದು ಸುತ್ತು ಜಾಗಿಂಗ್. ಮನೆಗೆ ಬಂದು ಸ್ನಾನ, ಪ್ರಾರ್ಥನೆ. ತಿಂಡಿ ಮುಗಿಸಿ ಏಳು ಗಂಟೆಯ ಮೊದಲೇ ಹೊಟೇಲಲ್ಲಿ ಹಾಜರ್. ಎಲ್ಲವೂ ಸುಗಮ. ಒಂದಾರು ತಿಂಗಳು ಹೀಗೇ ಕಳೆಯಿತು. ಮಡದಿ ನಾಲ್ಕೂವರೆ ತಿಂಗಳ ಬಸುರಿ. ಖುಷಿ ತನ್ನ ನೆಲೆಯನ್ನು ಇವರಲ್ಲಿಗೇ ಬದಲಾಯಿಸಿಕೊಂಡಿತ್ತು. ಸೊಸೆಯನ್ನು ಮುದ್ದಾಗಿ ನೋಡಿಕೊಳ್ಳಲು ಅಮ್ಮನೇ ಬಂದಿದ್ದರು ಮುಂಬಯಿಗೆ. ಜೊತೆಗೇ ಮಗನಿಗೂ ಉಪಚಾರ ಸಾಂಗವಾಗಿ ಸಾಗುತ್ತಿತ್ತು. ಗಂಡ-ಹೆಂಡತಿ ಇಬ್ಬರೂ ಒಂದಿಷ್ಟು ಉರುಟಾಗುತ್ತಿದ್ದರು. ಜಾಗಿಂಗ್ ಜಾಸ್ತಿ ಮಾಡಬೇಕು, ತೂಕ ಹೆಚ್ಚಾಗುತ್ತಿದೆ ಅಂತ ಅಣ್ಣನ ಜೊತೆ ಮಾತಾಡಿ ರಾತ್ರಿ ಮಲಗುವ ಮುನ್ನ ವಾರ್ತೆಗಳಿಗಾಗಿ ಟಿ.ವಿ. ಹಾಕಿದರು ಜಗನ್. ಅದ್ಯಾರೋ ಕೊಲೆಯಾದ ಸುದ್ದಿ ಬಿತ್ತರವಾಗುತ್ತಿತ್ತು, ಎಲ್ಲ ವಿವರಗಳೊಂದಿಗೆ. ಅದ್ಯಾಕೋ ನೋಡಲಾಗದೆ ಟೆಲೆವಿಷನ್ ಆಫ಼್ ಮಾಡಿ ಮಲಗುವ ಕೋಣೆಗೆ ನಡೆದರು.

ಕೋಣೆಯ ಬಾಗಿಲಲ್ಲಿ ನಿಂತಂತೆಯೇ ಕೋಣೆಯಲ್ಲಿ ಯಾರೋ ಇದ್ದಾರೆನ್ನುವ ಯೋಚನೆ ತಲೆಗೆ ಹೊಕ್ಕಿತು. ಇದ್ದಕ್ಕಿದ್ದಂತೆ ಭಯ ಆವರಿಸಿಕೊಳ್ಳತೊಡಗಿತು. ಆತಂಕ ನೆತ್ತಿ ಮೇಲೆ ಕತ್ತಿ ತೂಗಿತು. ಹೆಜ್ಜೆ ಎತ್ತಿಡಲೂ ಆಗದಂಥ ಗಾಬರಿ ಮುತ್ತಿಕೊಂಡಿತು. ಬಾಗಿಲಲ್ಲೇ ಕುಸಿದುಬಿದ್ದರು. ಎದೆ ಒಂದೇ ಸವನೆ ಬಡಿದುಕೊಳ್ಳತೊಡಗಿತು. ಹಾರ್ಟ್ ಅಟ್ಯಾಕ್ ಆಗುತ್ತಿದೆ ಎಂದೆಣಿಸಿ ವೈದ್ಯರಿಗೆ ಕರೆ ಮಾಡಿದರು ಮಡದಿ. ತುರ್ತು ವಾಹನ ಬಂದು ಅವರನ್ನು ಆಸ್ಪತ್ರೆಗೆ ಕರೆದೊಯ್ದಿತು. ಎಲ್ಲ ತಪಾಸಣೆಗಳು ನೆರವೇರಿದವು. "ನಿಮ್ಮ ಹೃದಯ ಗಟ್ಟಿಯಾಗಿದೆ. ಅದಕ್ಕೇನೂ ಆಗ್ಲಿಲ್ಲ. ನಿಮ್ಮ ಮನಸ್ಸಿಗೇ ಏನೋ ಆಗಿದೆ. ಸುಮ್ಮನೇ ಗಾಬರಿಯಾಗಿದ್ದೀರಿ" ಎಂದ ವೈದ್ಯರು ಸಣ್ಣ ಪ್ರಮಾಣದ ಆತಂಕ ನಿವಾರಣಾ ಔಷಧಿ ಬರೆದುಕೊಟ್ಟರು. ಅದರ ಜೊತೆಗೆ ಮನೆಗೆ ಬಂದ ಜಗನ್‌ಗೆ ಸಣ್ಣ ಹುಳ ತಲೆಕೊರೆಯಲು ಶುರು ಮಾಡಿತು- ತನಗ್ಯಾಕೆ ಇಂಥ ಆತಂಕ/ ಗಾಬರಿ? ಏನಾಗ್ತಿದೆ?

ಇದೇ ಗುಂಗಿನ ಗುಂಗಿಹುಳ ತಲೆಯೊಳಗೆ ಕೊರೆಕೊರೆದು ನೂರಾರು ಹೊಸ ಟ್ರ್ಯಾಕ್ ಮಾಡಿದ್ದರ ಪರಿಣಾಮ- ಸಲೀಸಾಗಿ ಸಾಗುತ್ತಿದ್ದ ಜೀವನದಿ ಯದ್ವಾತದ್ವಾ ಹರಿಯತೊಡಗಿತು. ಮತ್ತೆ ಜ್ಯೋತಿಷಿಗಳ ಮನೆ-ಕಛೇರಿಗಳಿಗೆ ಭೇಟಿಕೊಟ್ಟರು ಮನೆಯ ಹಿರಿಯರು. ಅವರು ತಿಳಿಸಿದ ಶಾಂತಿಹೋಮಗಳನ್ನು, ಹೇಳಿದಂತೆಯೇ ಹೇಳಿದಲ್ಲಿಯೇ ಮಾಡಿಸಿದರು. ಸದಾ ಮುಂಬಯಿ ಹೊಟೇಲಿಗೇ ರಜೆ ಹಾಕಿ ಬರುವಂತಿರಲಿಲ್ಲ. ಪದೇ ಪದೇ ಊರಿಗೆ ಬರುವಾಗ ಹೊಟೇಲ್ ನೋಡಿಕೊಳ್ಳಲು ಅನಾನುಕೂಲವಾಗುತ್ತಿತ್ತು. ಆಗೆಲ್ಲ ಸಣ್ಣಣ್ಣ ಊರಿಂದ ಮುಂಬಯಿಗೆ, ಜಗನ್ ಮುಂಬಯಿಯಿಂದ ಊರಿಗೆ. ದೊಡ್ಡಣ್ಣನ ಮೇಲುಸ್ತುವಾರಿಯಲ್ಲಿ ಎಲ್ಲ ಪೂಜೆ-ಪುನಸ್ಕಾರಗಳನ್ನು ನಡೆಸಲಾಗುತ್ತಿತ್ತು. ಅವೆಲ್ಲ ನಡೆಯುವಾಗಲೂ ಏನೋ ಒಂಥರಾ ಗಲಿಬಿಲಿ, ಗೊಂದಲದ ಮನಃಸ್ಥಿತಿಯಲ್ಲಿರುತ್ತಿದ್ದರು ಜಗನ್. ಹೀಗೇ ಊರು-ಮುಂಬಯಿ ಊರು-ಮುಂಬಯಿ ತಿರುಗಾಟಗಳ ನಡುವೆ ಹುಟ್ಟಿದ ಮಗಳಿಗೆ ಎರಡು ವರ್ಷವೂ ದಾಟಿತು. ಜಗನ್ ಜೀವನದಲ್ಲಿ ಅಂಥ ವ್ಯತ್ಯಾಸ ಗೋಚರಿಸಲಿಲ್ಲ. ಕೆಲವೊಮ್ಮೆ ಮನೆಯಿಂದ ಹೊರಗೆ ಹೋಗಲೂ ಭಯವಾಗುವಷ್ಟು ಹಿಂಜರಿಕೆ ಅಳುಕಿನ ಗೋಜಲಿನಲ್ಲಿ ಸಿಲುಕಿರುತ್ತಿದ್ದರು. ಅಂಥದೊಂದು ದುಮ್ಮಾನದ ಸಂಜೆ ಅವರ ಹಳೇ ಗೆಳೆಯ, ಹಿಪ್ನೋಥೆರಪಿಯ ಬಗ್ಗೆ ತಿಳಿಸಿ ಅಲ್ಲಿಂದಲೇ ನನಗೆ ಕರೆ ಮಾಡಿದ್ದರು. ಅಲ್ಲಿಂದ ಹೊಸದೇ ಲೋಕವೊಂದು ತೆರೆದುಕೊಂಡಿತು.

ಸಮ್ಮೋಹನ ಚಿಕಿತ್ಸೆಯ ಒಂದು ಆಯಾಮ ಸುಪ್ತಮನಸ್ಸಿನ ಗಾಯಗಳನ್ನು ಗುಣಪಡಿಸಿ ಒಳಮನಸ್ಸನ್ನು ದೃಢಪಡಿಸುವುದು. ಅದರದೇ ವಿಸ್ತೃತ ರೂಪ ಹಿಂಚಲನೆ ಸಾಧಿಸಿ ಹಳೆಯ ನೆನಪುಗಳನ್ನು ನೋವುಗಳ ಕೊಂಡಿ ಕಳಚಿ ಬರಿಯ ನೆನಪಾಗಿಸಿ ನೋವಿನಿಂದ ಬಿಡುಗಡೆಗೊಳಿಸುವುದು. ಈ ಹಳೆಯ ನೆನಪು ಅನ್ನುವುದು ಇದೇ ಜನ್ಮದ ಅತ್ಯಂತ ಹಿಂದಿನ ನೆನಪಾಗಿರಬಹುದು. ಹಲವು ಸಾಧ್ಯತೆಗಳಲ್ಲಿ ಕಳೆದ ಯಾವುದೋ ಜನ್ಮದ ಗಾಯದ/ನೋವಿನ ನೆನಪೂ ಆಗಿರಬಹುದು. ಗುಣವಾಗುವ ಪ್ರಕ್ರಿಯೆ ಮುಖ್ಯವೇ ಹೊರತು ನೆನಪಿನ ಸ್ಪಷ್ಟೀಕರಣವಲ್ಲ, ಆದ್ದರಿಂದ ತಪಾಸಣೆ ಅಗತ್ಯವಾಗಿರುವುದಿಲ್ಲ. ಇದೊಂದು ಪ್ರಮುಖ ಚೌಕಟ್ಟನ್ನು ಇಟ್ಟುಕೊಂಡು ಜಗನ್ ಅವರನ್ನು ಸಮ್ಮೋಹನ ಚಿಕಿತ್ಸೆಗೆ ಒಳಪಡಿಸಲು ಪರಸ್ಪರ ಒಪ್ಪಂದ ಮಾಡಿಕೊಂಡೆವು.

Monday, 23 May, 2011

ಪರಾಧೀನ-೦೧

ನವೆಂಬರ್ ತಿಂಗಳ ಮೊದಲ ವಾರ. ಸಮ್ಮೋಹನ ಚಿಕಿತ್ಸೆಗಾಗಿ ಬರುತ್ತಿದ್ದ ಕ್ಲಯಂಟ್ ಒಬ್ಬರ ಕರೆ ಬಂತು. ತಮ್ಮ ಸ್ನೇಹಿತರೊಬ್ಬರನ್ನು ಕರೆತರುತ್ತೇನೆ, ಭೇಟಿಗೆ ಸಮಯಾವಕಾಶ ಬೇಕೆಂದರು. ಅಂಥ ಬ್ಯುಸಿ ಏನೂ ಇರಲಿಲ್ಲ, ಸಮಯ ತಿಳಿಸಿದೆ. ನಿಗದಿಯಾದ ಸಮಯಕ್ಕೆ ಸರಿಯಾಗಿಯೇ ಇಬ್ಬರೂ ಬಂದರು. ಹೊಸಬರನ್ನು ಸಮಾಲೋಚನೆಯ ಕೊಠಡಿಗೆ ಬರಹೇಳಿದೆ. ಜೊತೆಗಾರ ವಾರಪತ್ರಿಕೆಯೊಂದನ್ನು ಎತ್ತಿಕೊಂಡು ಕೂತರು.

ಜಗನ್, ಸುಮಾರು ನಲ್ವತ್ತರ ವಯಸ್ಸಿನ ಹೊಟೇಲಿಯರ್. ಮುಂಬೈಯಲ್ಲಿ ವಾಸ. ಮೂರು ಜನ ಅಣ್ಣ-ತಮ್ಮಂದಿರಲ್ಲಿ ಕೊನೆಯವ. ಪದವೀಧರ. ಡ್ಯಾಷಿಂಗ್ ಡೇರ್ ಡೆವಿಲ್ ವ್ಯಕ್ತಿತ್ವ ತನ್ನದು ಎಂದರು. ಕಾಲೇಜಿನಲ್ಲಿ ಸ್ನೇಹಿತರೊಡನೆ ಪಂದ್ಯಕಟ್ಟಿ ಸಮುದ್ರದಲ್ಲಿ ಈಜುತ್ತಿದ್ದರಂತೆ. "ಈಗೆಲ್ಲವೂ ಬಂದಾಗಿದೆ" ಎಂದು ಮುಸಿಮುಸಿ ನಗುತ್ತಾರೆ. ಮದುವೆಯಾಗಿ ಐದು ವರ್ಷವಾಗಿದೆ. ತೃಪ್ತಿಯ ಸುಂದರ ಸಂಸಾರ. ಹೊರಗಿನಿಂದ ನೋಡುವವರಿಗೆ ಯಾವ ಕೊರತೆಯೂ ಇಲ್ಲದ ಜೀವನ.

ಸುಮಾರು ಮೂರು ವರ್ಷದ ಕೆಳಗೆ, ಜಗನ್ ಮಾಮೂಲಿನಂತೆ ಎರಡು ವಾರಗಳ ರಜೆಮಾಡಿ ಊರಿಗೆ ಬಂದಿದ್ದಾಗ ಬೆಳಗಿನ ಹೊತ್ತು ಬೀಚ್ ಬದಿಯಲ್ಲಿ ಜಾಗಿಂಗ್ ಹೋಗಿದ್ದವರು ಏನೋ ಕೆಂಪು-ಕೆಂಪು ಹರಡಿಕೊಂಡಿದ್ದ ಗೋಜಲನ್ನು ದಾಟಿ ಹೋಗಿದ್ದರು. ಅದೇ ಕ್ಷಣ ಯಾಕೋ ಎದೆ ಒಮ್ಮೆ ಸಣ್ಣಗೆ ನಡುಗಿತ್ತು. ತಿರುಗಿ ನೋಡಿ, ಕುಂಕುಮ-ಹೂಗಳ ರಾಶಿ ಅದೆಂದು ಗೊತ್ತಾಗಿ ಸಣ್ಣಗೆ ನಕ್ಕು, ಜಾಗಿಂಗ್ ಮುಗಿಸಿ ಮನೆಗೆ ಹಿಂದಿರುಗಿದ್ದರು. ಸ್ನಾನ ಮಾಡುತ್ತಿದ್ದಾಗ ಮತ್ತೊಮ್ಮೆ ಎದೆ ನಡುಕ. ಏನೋ ಅಳುಕು. ಅದ್ಯಾವ ಭಾವನೆಯೆಂದು ಅರಿವೇ ಇಲ್ಲದಿದ್ದ ಬಿಂದಾಸ್ ವ್ಯಕ್ತಿಗೆ ಇದೇನಾಗಿದೆ ಇವತ್ತು ಅಂದುಕೊಂಡೇ ನಿತ್ಯದ ಸ್ನಾನ, ಪ್ರಾರ್ಥನೆ, ಉಪಾಹಾರಗಳನ್ನು ಪೂರೈಸಿದರು. ಅಣ್ಣಂದಿರ ಹೊಟೆಲಿಗೆ ಭೇಟಿಕೊಡುತ್ತೇನೆಂದು ಇಬ್ಬರು ಅತ್ತಿಗೆಯರಿಗೂ ಹೇಳಿ ಮನೆಯಿಂದ ಹೊರಬಿದ್ದವರು ದಾರಿಯಲ್ಲಿ ಗೆಳೆಯನೊಬ್ಬನಿಗೆ ಕರೆ ಮಾಡಿ ಅವನನ್ನೂ ಕೂಡಿಕೊಂಡು ಹೊಟೇಲಿಗೆ ಹೋಗಿ, ಗೆಳೆಯನೊಂದಿಗೆ ತಿರುಗಾಡಿ, ರಾತ್ರೆಗೆ ಅಣ್ಣಂದಿರು ಮನೆ ಸೇರುವ ಹೊತ್ತಿಗೆ ತಾನೂ ಮನೆಗೆ ಬಂದಿಳಿದರು. ಬೆಳಗಿನ ಎದೆ ನಡುಕ ಪತ್ತೆಯಿಲ್ಲದೆ ಮರೆತೇಹೋಗಿತ್ತು.

ಮರುದಿನವೂ ಮತ್ತದೇ ಜಾಡಿನಲ್ಲಿ ಜಾಗಿಂಗ್. ಯಾವುದೇ ಏರುಪೇರಿಲ್ಲದೆ ಒಂದು ಸುತ್ತು ಹಾಕಿ ಬಂದವರೇ ಸ್ನಾನದ ಮನೆಯಲ್ಲಿ ಇದ್ದಕ್ಕಿದ್ದ ಹಾಗೆ ಗಾಬರಿಗೊಂಡರು. ಕಾರಣವೇ ಇಲ್ಲ. ಮನೆಯೆಲ್ಲ ಮಾಮೂಲಾಗೇ ಇದೆ. ಎಲ್ಲೂ ಏನೂ ಏರುಪೇರಾಗಿಲ್ಲ. ಜಗನ್ ಮಾತ್ರ ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಹೋಗಲೂ ಗಾಬರಿಯಾಗುತ್ತಿದ್ದರು, ಭಯಪಡುತ್ತಿದ್ದರು. ಅದೇ ರಾತ್ರೆ ನಿದ್ರೆಯೂ ಬರಲಿಲ್ಲ. ಮರುದಿನದಿಂದ ಜಾಗಿಂಗ್ ಇಲ್ಲ. ಗೆಳೆಯರ ಸಹವಾಸ ಬೇಕಾಗಲಿಲ್ಲ. ನಿದ್ರೆ, ಹಸಿವಿನ ಪರಿವೆಯಿಲ್ಲ. ಮನಸ್ಸಿನ ನೆಮ್ಮದಿ ಕಳೆದುಕೊಂಡರು. ತೌರಿಂದ ಮಡದಿಯನ್ನು ಕರೆಸಲಾಯಿತು. ಮೊತ್ತಮೊದಲಾಗಿ ಎಲ್ಲರ ತಲೆಗೆ ಹೊಳೆದದ್ದು "ಸೋಂಕು ಆಗಿರಬೇಕು" ಎನ್ನುವ ವಿಚಾರ. ಅದಕ್ಕೆ ಸರಿಯಾಗಿ ದೇವಸ್ಥಾನಗಳಿಗೆ ಹರಕೆ ಹೇಳಿಕೊಂಡಾಯ್ತು. ಪ್ರತಿಷ್ಠಿತ ಜೋಯಿಸರಲ್ಲಿ ವಿಚಾರಿಸಲು ಹೋಗುವ ಬಗ್ಗೆ ಸಂಸಾರದಲ್ಲಿ ತೀರ್ಮಾನವಾಯ್ತು.

ಜೋಯಿಸರು, ಯಥಾಪ್ರಕಾರ ಅವರ ಶಂಖವನ್ನೇ ಊದಿದರು. ಅದವರ ವೃತ್ತಿ ಧರ್ಮ. ಅವರು ತಿಳಿಸಿದಂಥ ಎಲ್ಲ ಪರಿಹಾರ ಕಾರ್ಯಗಳನ್ನು ಮಾಡಿದ್ದಾಯ್ತು. ಹರಕೆ ಹೇಳಿಕೊಂಡಿದ್ದ ಎಲ್ಲ ದೇವಸ್ಥಾನಗಳಿಗೂ ಹೋಗಿ ಬಂದಾಯ್ತು. ಇಷ್ಟಾಗುವಾಗ ರಜೆ ಮುಗಿದೇ ಹೋಯ್ತು. ದಂಪತಿಗಳು ಮುಂಬೈಗೆ ಹೊರಟುನಿಂತರು, ಬಟ್ಟೆಬರೆಗಳ ಜೊತೆಗೆ ಒಂದು ದೊಡ್ಡ ಪ್ರಸಾದಗಳ ಕಟ್ಟಿನೊಂದಿಗೆ. ಎಲ್ಲ ಸರಿಯಾಯ್ತು ಎನ್ನುವ ನೆಮ್ಮದಿಯೊಂದಿಗೆ ತನ್ನ ಗೂಡು ಸೇರಿತು ಜೋಡಿ.

Friday, 20 May, 2011

ಸಂಜ್ಞಾ - ೦೪

ಛಿದ್ರ ಚಿತ್ರಗಳ ನೆನಪು ತುಣುಕುಗಳ ನಡುವೆಯೇ ಎದೆಯ ಮೇಲೆ ಕೈಯಿಟ್ಟುಕೊಂಡು ನೋವು ಅನುಭವಿಸಿದ. ನೋವಿನ ಮೂಲವನ್ನು ಹುಡುಕು ಎಂದೆ. ಮತ್ತೊಂದು ಜನ್ಮದ ಹಂದರಕ್ಕೆ ಹಾರಿದ....

"ಕಾಡು... ಅದರ ನಡುವೆ ಒಂದು ದೊಡ್ಡ ವಿಶಾಲವಾದ ಮನೆ. ನನ್ನದೇ ಮನೆ. ಮನೆಯಲ್ಲಿ ನಾನೇ ಹಿರಿ ಮಗ. ಇನ್ನುಳಿದ ತಮ್ಮಂದಿರು ಮೂವರು ಎಲ್ಲರಿಗೂ ಮದುವೆಯಾಗಿದೆ. ನನಗಾಗ್ಲಿಲ್ಲ. ತಮ್ಮಂದಿರಿಗೆ ಅಪ್ಪನಾಗಿದ್ದೆ. ದೊಡ್ಡ ಆಸ್ತಿ. ಗದ್ದೆ, ತೋಟ, ಕಾಡು... ಅರ್ಧ ಊರು ನಮ್ಮದೇ. ಒಳಗಿನ ಕೋಣೆಯ ಖಜಾನೆಯ ತುಂಬಾ ಚಿನ್ನ, ಅಮ್ಮ-ಅಜ್ಜಿಯರದ್ದು. ತಮ್ಮಂದಿರಿಗೆ, ಅವರ ಹೆಂಡತಿಯರಿಗೆ ಅದರ ಮೇಲೆ ಕಣ್ಣು. ಈಗಲೇ ಪಾಲು ಮಾಡ್ಲಿಕ್ಕೆ ನಾನು ತಯಾರಿಲ್ಲ. ಅಪ್ಪ ಇದ್ದಿದ್ರೆ ಮಾಡ್ತಿರಲಿಲ್ಲ ಅಂತ ನನ್ನ ಅಭಿಪ್ರಾಯ. ಅಪ್ಪನನ್ನು ಅವರ ದಾಯಾದಿಗಳು ಆಸ್ತಿ ವ್ಯಾಜ್ಯದಲ್ಲಿ ಕೊಂದಿದ್ರು... ನನಗೀಗ ಐವತ್ತಾರು ವರ್ಷ. ಮಳೆಗಾಲದ ಒಂದು ರಾತ್ರೆ... ಕತ್ತಲೆ. ನನ್ನ ಕೋಣೆಯ ದೀಪ ಆರಿದೆ. ಎಣ್ಣೆ ತರಲಿಕ್ಕೆ ಆಳಿಗೆ ಹೇಳಿ ಕಳಿಸಿ ಒಬ್ಬನೇ ಕತ್ತಲೆಯಲ್ಲಿ ಕೂತಿದ್ದೇನೆ. ಯಾರೋ ಒಳಗೆ ಬಂದಹಾಗಾಯ್ತು. ಯಾರದು? ಉತ್ತರ ಇಲ್ಲ. ಮತ್ಯಾರೋ ಆಚೆ ಓಡಿದ ಹಾಗಾಯ್ತು... ಆಳುಗಳಿರಬಹುದು... ಅಥವಾ ನನ್ನ ನಾಯಿ...

ನನ್ನ ಹಿಂದೆಯೇ ಹೆಜ್ಜೆ ಶಬ್ದ. ನನ್ನ ಸೊಂಟದ ಕಿರುಗತ್ತಿ ಹಿರಿಯುವ ಹೊತ್ತಿಗೇ ನನ್ನ ಹಿಂದಿನಿಂದ ಹೃದಯಕ್ಕೇ ಚೂರಿ ಹಾಕಿದ್ದಾನೆ... ಎರಡನೇ ತಮ್ಮ. ಅವನ ಬದಿಯಲ್ಲೇ ಅವನ ಹೆಂಡತಿ- ಅವಳು ಈಗಿನ ಸುಜೇತಾ. ಅವಳೇ ನನ್ನ ಕೊಲೆಗೆ ಕಾರಣ. ಅದಕ್ಕೇ ಅವಳನ್ನು ಎದುರಿಸಲಿಕ್ಕೆ ಆಗದಷ್ಟು ಹಿಂಜರಿಕೆ ನನಗೆ. ಅವಳು ಕೊಲೆಪಾತಕಿ. ಆಗ ಚೂರಿ ಹಾಕಿಸಿ ಕೊಂದಳು; ಈಗ ಬೆಂಕಿ ಹಚ್ಚಿಸಿ ಕೊಲ್ತಿದ್ದಾಳೆ. ಕೊಲೆಪಾತಕಿ..."

ಕಿರುಚುತ್ತಿದ್ದವನನ್ನು ಸಮಾಧಾನಪಡಿಸಿ, ಸೂಕ್ತ ಸಲಹೆಗಳನ್ನು ನೀಡಿ ಎದೆ ನೋವಿನ ನಿವಾರಣೆಗೆ ಮಾರ್ಗದರ್ಶನ ಮಾಡಿ ಅಲ್ಲಿಂದ ವಾಸ್ತವಕ್ಕೆ ಕರೆತಂದೆ. ತುಂಬಾ ಬಳಲಿ ದಣಿದು ಎದ್ದು ಬಂದ. ಆದರೂ "ಇನ್ನು ಸುಜೇತಾಳನ್ನು ಎದುರಿಸಬಲ್ಲೆ" ಅಂದ. ನಮಗಷ್ಟೇ ಬೇಕಾಗಿತ್ತು. ಶುಭ ಹಾರೈಸಿ ಬೀಳ್ಕೊಟ್ಟೆ.

ಅದಾಗಿ ನಾಲ್ಕು ತಿಂಗಳು ಸಂದಿದೆ. ಒಂದೆರಡು ಬಾರಿ ಫೋನ್ ಮಾಡಲೇ ಅನ್ನಿಸಿದರೂ ಮಾಡಿಲ್ಲ. ತೊಂದರೆಯಿದ್ದಿದ್ದರೆ ಅವನೇ ಫೋನ್ ಮಾಡಿರುತ್ತಿದ್ದ. ಇನ್ನೊಂದು ಸೆಷನ್ ಬೇಕೆನ್ನುತ್ತಿದ್ದ. ನೋ ನ್ಯೂಸ್ ಈಸ್ ಗುಡ್ ನ್ಯೂಸ್ ಅಂತ ಸುಮ್ಮನಿದ್ದೇನೆ.

(ಹೆಸರು, ಸ್ಥಳ, ಉದ್ಯೋಗ, ವಯಸ್ಸು, ವಿದ್ಯೆ, ಸಂಬಂಧಗಳು- ಎಲ್ಲವನ್ನೂ ಕಾಲ್ಪನಿಕ ನೆಲೆಯಲ್ಲಿಟ್ಟ ವಾಸ್ತವದ ಕಥೆಯಿದು.)

Wednesday, 18 May, 2011

ಸಂಜ್ಞಾ - ೦೩

ಅದೇ ಬೆಂಕಿ ಸುಂದರನನ್ನು ಎಲ್ಲದರಿಂದಲೂ ವಿಮುಖವಾಗಿಸತೊಡಗಿತು. ಓದಿನಲ್ಲೂ ಗಮನವಿಲ್ಲ. ಸ್ನೇಹಿತರ ಜೊತೆಗೂ ಒಡನಾಟ ಬೇಕಿಲ್ಲ. ಮೈಯೊಳಗಿನ ಬೆಂಕಿಯನ್ನು ಆರಿಸುವುದು ಹೇಗೆಂದೇ ಅವನ ಯೋಚನೆ. ಮನೆಯಲ್ಲೇ ಇದ್ದರೆ ಅವಳತ್ತಲೇ ಗಮನ ಹರಿಯುವುದೆಂಬ ಕಾರಣಕ್ಕೆ ಕೆಲವು ದಿನ ಊರಿನ ಅಜ್ಜನ ಮನೆಗೂ ಹೊರಟ. ಅಲ್ಲಿ ತೋಟದ ಕೆರೆಯಲ್ಲಿ ಒಂದು ಇಡೀ ಬೆಳಗಿನ ಹೊತ್ತು ಕುತ್ತಿಗೆ ವರೆಗಿನ ನೀರಿನಲ್ಲಿ ಕೂತಿದ್ದು ಏನೋ ಒಂದಿಷ್ಟು ಸಮಾಧಾನ ಅನುಭವಿಸಿದ. ಹೀಗೇ ಕೆಲವು ದಿನ ಮಾಡಿದರೆ ಈ ಬೆಂಕಿ ನೀರಿನೊಳಗೆ ತಣ್ಣಗಾಗಬಹುದೆಂಬ ಭರವಸೆಯಿಂದ ಮರುದಿನವೂ ಪುನರಾವರ್ತಿಸಿದ.

ಕೆಳಗಿನ ಮೆಟ್ಟಲಲ್ಲಿ ಕೂತು ಕುತ್ತಿಗೆ ಮಟ್ಟದ ನೀರಿನ ಆಹ್ಲಾದವನ್ನು ಅನುಭವಿಸುತ್ತಿದ್ದವನ ಇಂದ್ರಿಯಗಳು ಒಮ್ಮೆಲೇ ಧಿಗ್ಗನೆದ್ದ ರೀತಿಗೆ ಬೆಚ್ಚಿ ಕಣ್ತೆರೆದಾಗ ಕಂಡದ್ದು ಎದುರಿನ ದಂಡೆಯಲ್ಲಿ ನೀರಿಗೆ ಧುಮುಕಲು ತಯಾರಾಗಿ ನಿಂತವಳು. ಇವನ ನೋಟ ತನ್ನತ್ತ ಬಿದ್ದದ್ದೇ ನೆಪವೆಂಬ ರೀತಿಯಲ್ಲಿ ಕೆರೆಗೆ ಹಾರಿ ನಾಲ್ಕೈದು ಉದ್ದುದ್ದ ಬೀಸುಹೊಡೆತಗಳಲ್ಲಿ ಈ ಬದಿಗೆ ತಲುಪಿ, ನೀರೊಳಗೆ ಮುಳುಗು ಹಾಕಿ ಸುಂದರನ ಪಾದದಿಂದ ಮುತ್ತಿಡುತ್ತಾ ಸೊಂಟದತ್ತ ಏರಿದವಳನ್ನು ಮತ್ತೆ ನೀರಿಗೇ ನೂಕುವ ಯೋಚನೆ ಬಂದರೂ ಬುದ್ಧಿ ಬರಲಿಲ್ಲ. ಕೆರೆದಂಡೆ ಮತ್ತೊಂದು ಬೆಂಕಿಯಂಗಳವಾಯ್ತು.

ಇದರ ನಂತರ ಇಂತಹ ಇನ್ನೂ ಒಂದೆರಡು ಮುಖಾಮುಖಿ. ಸುಂದರನ ಪರಿಸ್ಥಿತಿ ಗಂಭೀರವಾಯ್ತು. ಊಟ ತಿಂಡಿಯ ಪರಿವೆಯಿಲ್ಲ. ಓದಿನ ಕಡೆ ಮೊದಲೇ ಗಮನವಿಲ್ಲ. ಚಾರ್ಟರ್ಡ್ ಅಕೌಂಟೆಂಟ್ ಆಫೀಸಿಗೆ ಹೋದರೂ ಅಲ್ಲಿ ಯಾವ ಹೆಣ್ಣಿನ ಮುಖ ನೋಡಿದರೂ ಅವರಲ್ಲೆಲ್ಲ ಸುಜೇತಾಳೇ ಕಾಣತೊಡಗಿದಳು. ಯಾವ ಹೆಣ್ಣಿನ ದನಿ ಕೇಳಿದರೂ ಅವನೊಳಗೆ ಉದ್ವೇಗದ ಉರಿ ಹತ್ತಿಕೊಳ್ಳುತ್ತಿತ್ತು. ಮೊದಲ ಸಂಯೋಗದ ನಂತರ ಆರು ತಿಂಗಳು ಕಳೆದಿತ್ತು. ಯಾರೊಂದಿಗೂ ಮುಖ ನೋಡಿ ಮಾತನಾಡಲಾರದ ದುಃಸ್ಥಿತಿಗೆ ತಲುಪಿದ್ದ. ಆಗಲೇ ಹಿಪ್ನೋಥೆರಪಿಯ ಬಗ್ಗೆ ಅವನ ಸ್ನೇಹಿತನಿಂದ ತಿಳಿದುಬಂತು. ಅತ್ಯಂತ ಸಂಕೋಚದಿಂದ ಮುಜುಗರ ಪಡುತ್ತಾ ನನ್ನನ್ನು ಭೇಟಿಯಾಗಲು ಕೇಳಿಕೊಂಡ. ಕಾರಣವೇನೆಂದು ಕೇಳಿದಾಗ, "ತುಂಬಾ ಟೆನ್ಶನ್ ಆಗ್ತದೆ. ಓದ್ಲಿಕ್ಕೆ ಆಗುದಿಲ್ಲ. ಯಾವುದ್ರಲ್ಲೂ ಗಮನ ಇಲ್ಲ" ಅಂದ. ಅಪಾಯಿಂಟ್‍ಮೆಂಟ್ ಕೊಟ್ಟೆ, ಸಮಯಕ್ಕೆ ಸರಿಯಾಗಿ ಬರಲು ಸೂಚಿಸಿದೆ.

ಮೊದಲ ಭೇಟಿಯಲ್ಲಿ ಒಂದೊಂದಾಗಿ ವಿವರಗಳನ್ನು ಕೇಳುತ್ತಾ ಹೋದಂತೆ ಕಂಗಾಲಾದ ಕಳೆಗುಂದಿದ ಕಣ್ಣುಗಳ ಹಿಂದಿನ ಅತಂತ್ರ ಸ್ಥಿತಿ ಗೋಚರವಾಯ್ತು. ಒಳಉರಿಯನ್ನು ತೃಪ್ತಿಪಡಿಸಲೂ ಆಗದೆ, ಆರಿಸಲೂ ಆಗದೆ ಒದ್ದಾಡುತ್ತಿದ್ದ. ಸಮ್ಮೋಹನಕ್ಕೆ ಒಳಪಟ್ಟಾಗಲೂ ಉದ್ವೇಗ, ಆತಂಕ. ನಿರಾಳವಾಗುವ ಪರಿಯೇ ಆತನಿಗೆ ಅಸಾಧ್ಯ. ಉಸಿರಾಟದಲ್ಲಿ ತಲ್ಲೀನತೆಯಿಲ್ಲ, ಏಕಾಗ್ರತೆಯಿಲ್ಲ. ಎಲ್ಲವೂ ಏರುಪೇರು. ಏಕತಾನದ ಉಸಿರಾಟವನ್ನು ಅಭ್ಯಸಿಸಲು ತಿಳಿಸಿ ಕಳುಹಿಸಿಕೊಟ್ಟೆ.

ಎರಡನೇ ಮತ್ತು ಮೂರನೇ ಭೇಟಿಗಳಲ್ಲಿ ಆತನಿಗೆ ಪುನಃಪುನಹ ಉಸಿರಾಟದ ಏಕತಾನತೆಯನ್ನೂ ಏಕಾಗ್ರತೆಯನ್ನೂ ಅಭ್ಯಾಸ ಮಾಡಿಸಿ, ನಿರಾಳವಾಗುವುದನ್ನೇ ಹೇಳಿಕೊಡಬೇಕಾಯಿತು. ಆತನ ಮನಸ್ಸು ಸದಾ ಗೊಂದಲಭರಿತ. ತನ್ನ ಹೊರತಾಗಿ ಬೇರೆ ಯಾರಿಗೂ ಗೊತ್ತಿಲ್ಲದ ವಿಷಯ ವಿವರಗಳನ್ನೆಲ್ಲ ಹಂಚಿಕೊಳ್ಳುವಾಗಿನ ಆತಂಕ. ಚಿಕಿತ್ಸಕಿಯಾಗಿ ನನ್ನನ್ನು ಒಪ್ಪಿಕೊಳ್ಳುವಲ್ಲಿ ಸಣ್ಣ ಸಂದೇಹ. ಇವೆಲ್ಲ ಅಡೆತಡೆಗಳನ್ನು ದಾಟಿ ಮುಂದಿನ ಭೇಟಿಗೆ ಬಂದಾಗ ನಿರಾಳವಾಗಿ ಸಮ್ಮೋಹನಕ್ಕೆ ಒಳಗಾಗಿ ಯಾವುದೋ ಜನ್ಮದ ತುಣುಕನ್ನು ಎಳೆದೆಳೆದು ತಂದ.

Monday, 16 May, 2011

ಸಂಜ್ಞಾ - ೦೨

ರಾತ್ರೆ ಹತ್ತೂವರೆ ಕಳೆದಿತ್ತು. ಸುಂದರ್ ಅಮ್ಮನೇ ಬಂದಿರಬೇಕೆಂದು ಓದುತ್ತಿದ್ದ ಕಾದಂಬರಿಯನ್ನು ಬದಿಗಿರಿಸಿ ಬಾಗಿಲು ತೆರೆದ.

"ಒಳಗೆ ಬರಬಹುದಾ?" ಕೇಳಿದವಳು ಸುಜೇತಾ.
ಸುಮ್ಮನೇ ಬದಿಗೆ ಸರಿದು ನಿಂತವನನ್ನು ದಾಟಿ ಹೋಗಿ ಕುರ್ಚಿಯಲ್ಲಿ ಕೂತಳು. ಉಪಾಯವಿಲ್ಲದೆ ಮಂಚದ ಮೇಲೆ ಕೂತ ಸುಂದರ್. "ಏನತ್ತಿಗೆ ಈ ಹೊತ್ತಿಗೆ ಬಂದ್ರಿ?"
"ಬರಬಾರ್ದಾ?... ಏನ್ ಓದ್ತಿದ್ದೆ?..."
"ಸಿಡ್ನಿ ಷೆಲ್ಡನ್ ನಾವೆಲ್"
"ಹ್ಮ್. ಅವ್ನ ನಾವೆಲ್ಲಲ್ಲಿ ರೊಮ್ಯಾನ್ಸ್ ಎಷ್ಟು ಚಂದ, ಅಲ್ವಾ?"
"..."
"ಯಾಕೆ ಮಾರಾಯ ನಾಚಿಕೆ? ನಾನೇನು ಹೊರಗಿನವಳಾ? ಹೇಳು, ಚಂದ ಇರ್ತದಲ್ವಾ?"
"ಹ್ಮ್..."

ಅಷ್ಟರಲ್ಲೇ ಕೆಳಗಿನಿಂದ ಅಮ್ಮ ಸುಂದರನನ್ನು ಕರೆದರೆಂದು ಸಿಕ್ಕಿದ ಅವಕಾಶ ಉಪಯೋಗಿಸಿ ಎದ್ದು ಹೋದ. ಮತ್ತೆ ಬಂದಾಗ ಸುಜೇತಾ ಅಲ್ಲಿರಲಿಲ್ಲ. ಓದುತ್ತಿದ್ದ ಕಾದಂಬರಿಯೂ ಇರಲಿಲ್ಲ.

ಮತ್ತೊಂದೆರಡು ದಿನಗಳ ನಂತರ ಇಂಥದೇ ಇನ್ನೊಂದು ಮುಖಾಮುಖಿ. ಅಂದು ಸುಮ್ಮನೇ ಏನೋ ಕಾರಣ ಹುಡುಕಿ ಕೆಳಗೆ ಬಂದಿದ್ದ ಸುಂದರ್. ಹಿಂದಿರುಗಿದಾಗ ಕೋಣೆ ಖಾಲಿ. ಈ ಹೊಸ ಅತ್ತಿಗೆಯ ಈ ವರಸೆ ಆತನಿಗೆ ಒಗಟಾಗಿತ್ತು. ಯಾರಲ್ಲೂ ಹೇಳುವಂತಿರಲಿಲ್ಲ. ಹೀಗೇ ಒಂದೆರಡು ತಿಂಗಳೇ ಕಳೆಯಿತು. ಊಟದ ಮೇಜಿನ ಮುಂದೆಯೂ ಸುಜೇತಾ ಸಿಕ್ಕರೆ ಅವಳ ನೋಟ ತಪ್ಪಿಸುವಂತಾಗುತ್ತಿತ್ತು. ಅದ್ಯಾವುದೋ ಅರಿಯದ ಸೆಳೆತ ಅವಳ ಕಣ್ಣಲ್ಲಿ. ಆತ್ಮೀಯ ಗೆಳೆಯನಲ್ಲಿ ಹೇಳಿಕೊಂಡ. ಅವನೋ, ಸಾರಾಸಗಟಾಗಿ ತೀರ್ಪು ಕೊಟ್ಟ- ಅವಳು ನಿನ್ನನ್ನು ಮೋಹಿಸುತ್ತಿದ್ದಾಳೆ. ಬೇಕಾದರೆ ಉಪಯೋಗಿಸ್ಕೋ. ಇಲ್ಲವಾದ್ರೆ ದೂರಾಗು.

ಏನೇನೋ ಸಬೂಬು ಹೇಳಿ, ಸಿ.ಎ. ಸೇರಲೆಂದು ಬೆಂಗಳೂರಿಗೆ ಹೊರಟವನನ್ನು ಅಪ್ಪ ತಡೆದು ತನ್ನೂರಲ್ಲೇ ಪ್ರತಿಷ್ಠಿತ ಚಾರ್ಟರ್ಡ್ ಅಕೌಂಟೆಂಟ್ ಬಳಿ ಆರ್ಟಿಕಲ್‍ಷಿಪ್ಪಿಗೆ ಸೇರಿಸಿದಾಗ ಪೆಚ್ಚಾದವನು ಸುಂದರ್ ಮಾತ್ರ. ಸುಜೇತಾ ಎನ್ನುವ ಮೋಹಿನಿಯಿಂದ ದೂರ ಹೋಗುವ ಪ್ರಯತ್ನ ವಿಫಲವಾಯ್ತು. ಇನ್ನು ಗೆಳೆಯ ಹೇಳಿದಂತೆ ಅದರ ಪ್ರಯೋಜನ ಪಡೆಯಲೆ? ಮನಸ್ಸು ಒಪ್ಪಲೇ ಇಲ್ಲ. ನಿದ್ದೆ ದೂರಾಗಹತ್ತಿತು. ಇಷ್ಟೆಲ್ಲ ಆಗುವಷ್ಟರಲ್ಲಿ ಭಾಸ್ಕರ್ ಸುಜೇತಾ ಈ ಮನೆ ಸೇರಿ ಆರೇಳು ತಿಂಗಳು ಕಳಯಿತು. ಮನೆಯವರೆಲ್ಲ ಚೆನ್ನಾಗಿಯೇ ಹೊಂದಿಕೊಂಡಿದ್ದರು. ಶಂಕರ್ ವ್ಯವಹಾರ ವಿಸ್ತಾರಗೊಳ್ಳುತ್ತಿತ್ತು. ಹೆಸರೂ ಹರಡುತ್ತಿತ್ತು. ಒಂಟಿಯಾಗಿ ಒಳಗೊಳಗೇ ಕೊರಗುತ್ತಿದ್ದವ ಸುಂದರ್ ಮಾತ್ರ.

ಅದೊಂದು ದಿನ ಮಧ್ಯರಾತ್ರೆ, ಮನೆಯೆಲ್ಲ ಮೌನದಲ್ಲಿ ಅದ್ದಿದ್ದ ಒಂದೂವರೆ-ಒಂದೂ ಮುಕ್ಕಾಲರ ಹೊತ್ತು. ಅಕೌಂಟಿಂಗ್ ಪುಸ್ತಕದಲ್ಲಿ ಮುಳುಗಿದ್ದ ಸುಂದರ್ ಬೆನ್ನಮೇಲೆ ಮೃದುವಾಗಿ ಬೆಚ್ಚಗಿನದೇನೋ ಸೋಕಿದಾಗ ಬೆನ್ನಹುರಿಯಲ್ಲೇ ಝುಮ್ಮೆಂದು ನೇರವಾದ. ತಕ್ಷಣವೇ ಆತನ ಕಣ್ಣಮೇಲೆ ಬೆರಳುಗಳು ಆವರಿಸಿಕೊಂಡವು.
"ಸುಜೇತಾ..." ಮನಸ್ಸು ಇಂದ್ರಿಯಗಳೆಲ್ಲ ಕೂಗಿಕೊಂಡವು, ನಾಲಿಗೆಯ ಹೊರತಾಗಿ.
ಮುಂದೆ ನಡೆದುದಕ್ಕೆ ಆತನಲ್ಲಿ ಯಾವುದೇ ಕಾರಣವಿಲ್ಲ, ತರ್ಕವಿಲ್ಲ, ಜಿಗುಪ್ಸೆಯಿಲ್ಲ, ಬೇಸರವೂ ಇಲ್ಲ.
ಇನ್ನಷ್ಟು ಬೇಕೆಂಬ ಆಸೆಯ ಬೆಂಕಿ ಮಾತ್ರ.

Monday, 9 May, 2011

ಸಂಜ್ಞಾ - ೦೧

"ಮೇಡಮ್, ನಿಮ್ಮತ್ರ ಅರ್ಜೆಂಟ್ ಮಾತಾಡ್ಬೇಕು. ಪುರುಸೊತ್ತು ಉಂಟಾ? ಕಾಲ್ ಮಾಡ್ಲಾ?"
ಅವನ ಮೆಸೇಜ್ ಬಂದಾಗ ಮಧ್ಯಾಹ್ನದ ಊಟ, ನಂತರದ ಕೆಲಸಗಳನ್ನು ಮುಗಿಸಿ ಮಲಗಲೋ ಓದಲೋ ಅನ್ನುವ ಗೊಂದಲದಲ್ಲಿದ್ದೆ. ಎರಡನ್ನೂ ಬದಿಗಿಟ್ಟು "ಕಾಲ್ ಮಾಡು" ಉತ್ತರ ಕಳಿಸಿದೆ.

ಅವನು ನನ್ನ ಕ್ಲಯಂಟ್. ಇದಕ್ಕೆ ಮೊದಲು ಎರಡು ಬಾರಿ ಸಮ್ಮೋಹನ ಚಿಕಿತ್ಸೆಗಾಗಿ ಬಂದಿದ್ದ. ಎರಡೂ ಸಲವೂ ಹದವಾದ ಟ್ರಾನ್ಸ್ ಸ್ಟೇಜ್ ತಲುಪಿದ್ದ. ರಿಲ್ಯಾಕ್ಸ್ ಆಗುವುದಕ್ಕೇ ಹಿಂಜರಿಕೆ ಆತನಿಗೆ. ಏನೋ ಬಿಗು, ಎಂಥದೋ ಆತಂಕ. ಮೂರನೇ ವಾರಕ್ಕೆ ಭೇಟಿ ನಿಗದಿಪಡಿಸಿಯೇ ಹೋಗಿದ್ದ. ಇನ್ನೆರಡು ದಿನಕ್ಕೆ ನಮ್ಮ ನಿಗದಿತ ಭೇಟಿ. ಇಂದೇನು ಅರ್ಜೆಂಟ್? ನನ್ನ ಯೋಚನಾ ಸರಣಿ ಅವನ ಕರೆಯಿಂದ ಕತ್ತರಿಸಲ್ಪಟ್ಟಿತು.

"ಹಲೋ, ನಮಸ್ತೆ ಸುಂದರ್. ಹೇಳಿ. ಹೇಗಿದ್ದೀರಿ?"
"ನಾನು... ನಾನು... ತುಂಬಾ ಟೆನ್ಶನ್ ಆಗ್ತದೆ ಮೇಡಮ್. ನಿದ್ದೆಯೇ ಬರುದಿಲ್ಲ. ರಾತ್ರೆ ಎರಡು ಮೂರು ಗಂಟೆಗೆಲ್ಲ ಕಾರ್ ತಗೊಂಡು ಡ್ರೈವ್ ಹೋಗ್ತೇನೆ, ಟೆನ್ಶನ್ ತಡಿಲಿಕ್ಕೆ. ಆದ್ರೂ ಸರಿಯಾಗುದಿಲ್ಲ. ನಿದ್ದೆಯೇ ಬರುದಿಲ್ಲ. ಟೆನ್ಶನ್... ನಾನು ಸರಿಯಾಗ್ತೆನಾ ಮೇಡಮ್?"
"ಸುಂದರ್, ನೀವು ಖಂಡಿತಾ ಸರಿಯಾಗ್ತೀರಿ. ನಾನು ಹೇಳಿದ ಹಾಗೆ ಕೇಳ್ಬೇಕು, ಅಷ್ಟೇ. ಕೇಳ್ತೀರಾ?"
"ಹ್ಮ್..."
"ನಾನು ಹೇಳಿದ ಹಾಗೆ ಪ್ರತಿದಿನ ರಿಲ್ಯಾಕ್ಸೇಷನ್ ಅಭ್ಯಾಸ ಮಾಡ್ತಿದ್ದೀರಾ? ಬೆಳಗ್ಗೆ ಮೆಡಿಟೇಶನ್ ಮಾಡ್ತಿದ್ದೀರ? ಯೋಗಾಬ್ಯಾಸ ಪುನಃ ಶುರು ಮಾಡಿದ್ದೀರಾ?"
"ಇಲ್ಲ ಮೇಡಮ್, ಯಾವುದೂ ಆಗುದಿಲ್ಲ. ಸುಮ್ಮನೇ ಕೂತ್ಕೊಳ್ಳಿಕ್ಕೇ ಆಗುದಿಲ್ಲ. ಟೆನ್ಶನ್..."
"ನಿಮ್ಮ ಇಷ್ಟದ ಮ್ಯೂಸಿಕ್... ಅದನ್ನು ಕೇಳ್ತಿದ್ದೀರ?"
"ಹೌದು, ಅದು ಯಾವಾಗ್ಲೂ ಕೇಳ್ತೇನೆ."
"ಗುಡ್. ಅದನ್ನೇ ಕೇಳಿಕೊಂಡು ಹಾಗೇ ಕಣ್ಣುಮುಚ್ಚಿ ರಿಲ್ಯಾಕ್ಸ್ ಆಗಿ. ಇನ್ನೆರಡು ದಿನ ಅದನ್ನು ಮಾಡ್ತೀರಾ?"
"ಹ್ಮ್, ಮಾಡ್ತೇನೆ ಮೇಡಮ್..."
"ಸರಿ ಹಾಗಾದ್ರೆ. ಎರಡು ದಿನದ ಮೇಲೆ ನೋಡುವಾ. ನಿಮ್ಮ ಸಮಯಕ್ಕೆ ಸರಿಯಾಗಿ ಬನ್ನಿ, ಆಯ್ತಾ?"
"ಬರ್ತೇನೆ ಮೇಡಮ್. ನಾನು ಸರಿಯಾಗ್ತೇನಾ?"
"ಹೌದು, ಸುಂದರ್. ಖಂಡಿತಾ ಸರಿಯಾಗ್ತೀರಿ. ಗುರುವಾರ ನೋಡುವಾ. ಬೈ ಬೈ. ಟೇಕ್ ಕೇರ್."
"ಹ್ಮ್..."
***

ಸುಂದರ್ ಹೆಸರು ಅನ್ವರ್ಥ. ಸ್ಫುರದ್ರೂಪಿ ತರುಣ. ಇಪ್ಪತ್ತಾರರ ಹರೆಯ. ಎತ್ತರದ ದೃಢಕಾಯ. ಗುಂಗುರುಂಗುರು ತಲೆಗೂದಲು. ಅಗಲ ಮುಖದಲ್ಲಿ ಕಳೆಗುಂದಿದ ಕಂಗಾಲಾದ ಅಗಲಗಲ ಕಣ್ಣುಗಳು. ಬೇಕಾದಷ್ಟು ಆಸ್ತಿ ಮಾಡಿಟ್ಟಿರುವ ಸಿವಿಲ್ ಕಾಂಟ್ರ್ಯಾಕ್ಟರ್ ಅಪ್ಪನ ಏಕಮಾತ್ರಪುತ್ರ. ಬಿ.ಕಾಂ. ಪದವೀಧರ. ಸಿ.ಎ. ಮಾಡುವ ಕನಸು ಹೊತ್ತಾಗಲೇ ಕಣ್ಣಿಗೆ ಬಿದ್ದವಳು ದೊಡ್ಡಪ್ಪನ ಮಗನ ಹೆಂಡತಿ- ಸುಜೇತಾ. ಚಿಕ್ಕಪ್ಪನ ಜೊತೆಗೇ ಕಟ್ಟಡ ಕಾಮಗಾರಿ ಕೆಲಸಗಳ ಉಸ್ತುವಾರಿ ನೋಡಿಕೊಂಡು ತನ್ನ ನೆಲೆ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದ ಭಾಸ್ಕರ್ ಇವರ ಮನೆಗೇ ಬಂದು ನೆಲೆಸಿದ ಪತ್ನೀಸಹಿತ.

ಸುಂದರನ ಅಪ್ಪ ಶಂಕರ್ ನಗರದಲ್ಲೆಲ್ಲ ಸುಪ್ರಸಿದ್ಧರು. ಕೈತುಂಬಾ ಕೆಲಸವಿದ್ದು ಎಲ್ಲವನ್ನೂ ಸರಿದೂಗಿಸಿಕೊಳ್ಳಲು ಹೆಣಗುತ್ತಿದ್ದ ಹೊತ್ತಿನಲ್ಲೇ ಭಾಸ್ಕರ್ ಜೊತೆಗೂಡಿದಾಗ ರೆಕ್ಕೆ ಬಂದಂತಾಗಿತ್ತು. ಅಣ್ಣನ ಮಗನನ್ನೂ ಮನೆಯಲ್ಲೇ ಇರಿಸಿಕೊಂಡು ಕೆಲಸ ಕಾರ್ಯಗಳ ರಾಜ್ಯಭಾರವನ್ನು ಅವನಿಗೂ ಕಲಿಸುತ್ತಾ ತಾವು ಬೆಳೆಯುವ ಲೆಕ್ಕ ಹಾಕಿದರು. ಮನೆಯಾಕೆಗೂ ಮಗಳಂತಹ ಸೊಸೆ ಸುಜೇತಾಳಲ್ಲಿ ಮಮತೆಯೇ. ಎಲ್ಲವೂ ಚಂದವಾಗಿಯೇ ಇತ್ತು- ಅದೊಂದು ದಿನ ರಾತ್ರೆ ಆ ಕೋಣೆಯ ಬಾಗಿಲು ಟಕಟಕಿಸುವ ತನಕ.

Monday, 2 May, 2011

ಸುಮ್ಮನೆ ನೋಡಿದಾಗ...೨೪

‘ನೀವು ನನ್ನನ್ನು ಇಷ್ಟ ಪಟ್ಟಿದ್ದೀರಿ ಅಂತ ನೇಹಾ ಹೇಳಿದ್ದಾಳೆ ಅಂತಂದ ಹರ್ಷ. ನಿಜವಾ?’
‘...’
‘ನಿಮ್ಮನ್ನು ನೋಡಿದ ಮೊದಲ ಸಲವೇ ನಾನು ಮೆಚ್ಚಿಕೊಂಡಿದ್ದೆ ನಿಮ್ಮನ್ನು. ನನ್ನ ಕಸಿನ್ ಶರತ್ ನಿಮ್ಮ ಕ್ಲಾಸ್‍ಮೇಟ್ ಅಲ್ವಾ? ಶರತ್ ಹೇಳ್ತಿದ್ದ ನೀವು ಎಂ.ಎಸ್ಸಿ. ಮಾಡುವ ಯೋಚನೆಯಲ್ಲಿದ್ದೀರಿ ಅಂತ. ಹೌದಾ?’
‘ಹ್ಮ್! ಜುಲೈ ಹದ್ನೆಂಟು ಕ್ಯಾಂಪಸ್ಸಿಗೆ ಹೋಗ್ತಿದ್ದೇನೆ.’ ಅಂತೂ ಒಂದು ಅರ್ಥಪೂರ್ಣ ವಾಕ್ಯ ಮಾತಾಡಿದೆ!
‘ಯಾವ ವಿಷಯದಲ್ಲಿ ಎಂ.ಎಸ್ಸಿ?’
‘ಪ್ರಾಣಿಶಾಸ್ತ್ರ ವಿಭಾಗದಲ್ಲಿ. ಕೆಮಿಸ್ಟ್ರಿ ನಂಗಿಷ್ಟ ಇಲ್ಲ...’ ಬೇಕಂತಲೇ ಎರಡನೆಯ ಮಾತು ಸೇರಿಸಿದ್ದೆ.
‘ನಿಮ್ ಇಷ್ಟ ನಿಮ್ಮದೇ. ಅದ್ರಲ್ಲೇನು ತೊಂದರೆ?’
‘...’

ಸಣ್ಣದೊಂದು ಮಿಂಚು ಸುಳಿದು ಗುಡುಗು ಮೊಳಗಿ ಮಳೆಹನಿ ಇಳಿಯತೊಡಗಿದ್ದೇ ನೆಪವಾಗಿ ಆಕಾಶ ನೋಡಿದೆ.
‘ಮನೆಒಳಗೆ ಹೋಗುವ, ಬನ್ನಿ...’ ತಾನೇ ಮುಂದಾಗಿ ಹೊರಟವನ ಹಿಂದೆ ಎದ್ದು ನಿಂತಾಗ ಅಂಗಳದಲ್ಲಿ ನಿಂತಿದ್ದ ನೀರಿನಲ್ಲಿ ಮತ್ತೊಂದು ಸುಳಿಮಿಂಚು ಪ್ರತಿಫಲಿಸಿತು. ಗುಡುಗಿನ ಸ್ವರದೊಡನೆಯೇ ಗುಡುಗುಡು ಓಡಿ ನೇಹಾಳ ಕೋಣೆಯನ್ನು ಸೇರಿಕೊಂಡು ಬಾಗಿಲು ಮುಂದೆ ಮಾಡಿ ಅವಳೆರಡೂ ಕೆನ್ನೆಗಳನ್ನು ಹಿಂಡುತ್ತಾ ಕೇಳಿದೆ, ‘ಯಾಕೆ ಇದೆಲ್ಲಾ ಕಿತಾಪತಿ ಮಾಡಿದ್ದು? ಯಾಕೆ ಹರ್ಷಣ್ಣನಿಗೆ ಹೇಳಿದ್ದು? ಮತ್ತಿನ್ಯಾರಿಗೆಲ್ಲ ಗೊತ್ತುಂಟು ಈ ವಿಷ್ಯ? ಯಾಕೆ?’
‘ಹೇಳದೇ ಇದ್ದಿದ್ರೆ ನಿನ್ನ ಪ್ರೀತಿ ನಿನ್ನ ಹೃದಯದಲ್ಲೇ ಹುದುಗಿ ಒಣಗಿ ಹೋಗ್ತಿತ್ತೇನೋ... ಅದಕ್ಕೇ ಹರ್ಷನಿಗೆ ಹೇಳಿದ್ದು. ಅವ್ರಿಗಂತೂ ಖಷಿಯೋ ಖುಷಿ. ‘ತುಂಬಾ ಒಳ್ಳೇ ಹುಡುಗ ವಸಂತ್. ಅವ್ನನ್ನು ಮೆಚ್ಚಿದ್ದಾಳಾ ಶಿಶಿರಾ? ನನ್ ತಂಗಿ ಆಯ್ಕೆ ಪರ್ಫ಼ೆಕ್ಟ್, ನನ್ನ ಆಯ್ಕೆ ಹಾಗೇ...’ ಅಂತೆಲ್ಲಾ ಹಾರಾಡಿದ್ದೇ ಹಾರಾಡಿದ್ದು. ನಿನ್ನೆ ಸಂಜೆ ಅವ್ರು ಬಂದಾಗ ಹೇಳಿದೆ. ಇವತ್ತು ಈ ಕತೆ. ಇದೆಲ್ಲ ನಂಗೇನೂ ಗೊತ್ತಿರ್ಲಿಲ್ಲ ಮಾರಾಯ್ತಿ. ಎಲ್ಲ ಅವ್ರದ್ದೇ ಕಿತಾಪತಿ. ಅವ್ರನ್ನೆಲ್ಲ ಇಲ್ಲಿಗೆ ನಮ್ಮನೆಗೆ ಅಂತ ಕರ್ಕೊಂಬಂದು, ಮೆಲ್ಲ ಪಪ್ಪನತ್ರ ಹೇಳಿ, ನನ್ನ ಮೂಲಕ ನಿಂಗೆ ಫ಼ೋನ್ ಮಾಡ್ಸಿದ್ದಾರೆ. ಆಮೇಲಿದ್ದು ನಿಂಗೇ ಗೊತ್ತುಂಟಲ್ಲಾ. ನನ್ನನ್ನು ಆಟ ಆಡ್ಸಿದ್ರು ಪಪ್ಪ, ಹರ್ಷ ಸೇರಿ. ಪ್ಲೀಸ್ ಮಾರಾಯ್ತಿ, ನಂಬು ನನ್ನನ್ನು...’ ನನ್ನ ಪ್ರಶ್ನಾರ್ಥಕ ನೋಟಕ್ಕೆ ಉತ್ತರ ಕೊಡುತ್ತಾ ನಿಂತವಳ ಕೆನ್ನೆಗಳೂ ಕೆಂಪಾಗಿದ್ದವು.

ನಮ್ಮಿಬ್ಬರ ಮೌನಹರಟೆಯ ನಡುವೆ ನಡುಮನೆಯಿಂದ ಅಂಕಲ್ ಅಮ್ಮನಿಗೆ ಫೋನ್ ಮಾಡುತ್ತಿದ್ದದ್ದು ಕೇಳುತ್ತಿತ್ತು. ಮಧ್ಯಾಹ್ನದೂಟಕ್ಕೆ ಇಲ್ಲೇ ಬರುವಂತೆ ಹೇಳುತ್ತಿದ್ದರು ಅಂಕಲ್. ‘ಏನೋ ವಿಶೇಷ ಉಂಟು. ಬನ್ನಿ, ಗೊತ್ತಾಗ್ತದೆ’ ಅನ್ನುತ್ತಿದ್ದರು. ಅಲ್ಲಿಂದೇನು ಉತ್ತರ ಬಂತೋ ಗೊತ್ತಿಲ್ಲ.

ಕೋಣೆಯ ಬಾಗಿಲ ಮೇಲೆ ಎಂದಿನ ಹಾಗೆ ಬೆರಳುಗಳ ನರ್ತನ ಶುರುವಾದಾಗ ಬಾಗಿಲು ತೆರೆದೆವು. ಒಳಗೆ ಬಂದ ಅಂಕಲ್ ನಮ್ಮಿಬ್ಬರನ್ನೂ ತಬ್ಬಿಕೊಂಡು ಸುಮ್ಮನೇ ನಿಂತರು. ಅವರ ಎರಡೂ ಭುಜಗಳಲ್ಲಿ ಒಂದೊಂದು ಹೂಗಳು; ಆಗಷ್ಟೇ ಸುರಿದ ಮಳೆಯಲ್ಲಿ ಮಿಂದಂತೆ ಪುಳಕಿತ ಹೂಗಳು. ಮತ್ತೊಂದು ಮಿಂಚು ಬೆಳಗಿತೆಂದು ತಲೆಯೆತ್ತಿದಾಗ ಕಂಡದ್ದು ಕ್ಯಾಮೆರಾ ಹಿಂದೆ ನಗುತ್ತಿದ್ದ ಹರ್ಷಣ್ಣ. ಅವನ ಹಿಂದೆ ಕಾತರದ ಕಣ್ಣುಗಳ ವಸಂತ್. ಅವನಿಗಿನ್ನೂ ನನ್ನ ಉತ್ತರ ಕೊಟ್ಟಿರಲಿಲ್ಲ. ಕೊಡಬೇಕೇ? ಯಾಕೆ? ನಾಲಿಗೆ ಚಾಚಿ ಹರ್ಷಣ್ಣನನ್ನು ಅಣಕಿಸಿ ಅಂಕಲ್ ತೋಳಿಗೆ ಕೆನ್ನೆಯೊತ್ತಿದೆ. ಅಡುಗೆಮನೆಯಿಂದ ನಳಿನಿ ಆಂಟಿ ತುಪ್ಪದಲ್ಲಿ ದ್ರಾಕ್ಷಿ ಗೇರುಬೀಜ ಹುರಿಯುತ್ತಿದ್ದ ಘಮ ಮನೆಯೆಲ್ಲ ತುಂಬಿಕೊಂಡಿತು, ಮನವನ್ನೂ.

***

{ಸಹೃದಯ ಓದುಗರೇ, ನಿಮ್ಮೆಲ್ಲರ ಆಶೀರ್ವಾದ ಕೋರುತ್ತಾ, ನೇಹಾ-ಹರ್ಷ, ಶಿಶಿರಾ-ವಸಂತ್ ನಿಮ್ಮನ್ನು ಬೀಳ್ಕೊಡುತ್ತಾರೆ. ಹರಸಿರಿ.}

Tuesday, 26 April, 2011

ಸುಮ್ಮನೆ ನೋಡಿದಾಗ...೨೩

ಗೇಟಿನ ಬಳಿ ನಾನು ನಿಂತದ್ದನ್ನು ನೋಡಿದ ನೇಹಾ ಓಡಿ ಬಂದು ನನ್ನನ್ನು ಅಲ್ಲಿಗೇ ಎಳೆದೊಯ್ದಳು. ಸುಮುಖ್ ಅಂಕಲ್ ಹರ್ಷಣ್ಣನ ಜೊತೆ ಮಾತಾಡುತ್ತಿದ್ದರು. ನಳಿನಿ ಅಂಟಿ ಹೊಸದೊಂದು ಮಹಿಳೆಯ ಜೊತೆ ಮಾತಾಡುತ್ತಿದ್ದರು. ಜಾಜಿಪೊದೆಯ ನಡುವಿನ ಗುಬ್ಬಚ್ಚಿ ಗೂಡನ್ನು ದಿಟ್ಟಿಸುತ್ತಾ ನಿಂತಿದ್ದವರ ಬೆನ್ನು ಮಾತ್ರ ಕಾಣುತ್ತಿತ್ತು. ನನ್ನೊಳಗೆ ಯಾಕೋ ಯಾವುದೋ ಅರಿಯದ ಉದ್ವೇಗ ತುಂಬಿಕೊಳ್ಳತೊಡಗಿತು.

ನಮ್ಮಿಬ್ಬರನ್ನು ಕಂಡವನೇ ಹರ್ಷಣ್ಣ ಹತ್ತಿರ ಬಂದು ಜೋರಾಗಿಯೇ ತಲೆಯ ಮೇಲೆ ಮೊಟಕಿದ. ‘ಆಆಆಆಯ್’ ಸ್ವರ ಕರೆಯದೆಯೇ ಹೊರಬಂತು. ಗುಬ್ಬಚ್ಚಿ ಗೂಡನ್ನು ನೋಡುತ್ತಿದ್ದ ವ್ಯಕ್ತಿ ಇತ್ತ ತಿರುಗಿತು. ನನ್ನ ಸ್ವರ ಮತ್ತೆ ಗಂಟಲಲ್ಲೇ ಹುದುಗಿತು. ಹೃದಯದ ತಾಳ ಏರುಪೇರಾಯಿತು. ಮುಖ ಕೆಂಪಾಯಿತೇ? ಆಕಾಶವೇ ಕೆಳಗಿಳಿಯಿತೆ? ನೆಲ ನೆಲೆ ತಪ್ಪಿತೆ? ಕಣ್ಣು ಕತ್ತಲಿಟ್ಟು ಬೀಳುವ ಮೊದಲೇ ನೇಹಾಳನ್ನು ಆದರಿಸಿಕೊಂಡೆ. ಇನ್ನೊಂದು ಬದಿಯಿಂದ ಹರ್ಷಣ್ಣನ ಆಸರೆ. ನಳಿನಿ ಆಂಟಿಯ ಜೊತೆ ಮಾತಾಡುತ್ತಿದ್ದ ಮಹಿಳೆಯೂ ಇತ್ತ ತಿರುಗಿದರು. ಎಂಥ ಸುಂದರಿ, ಈ ವಯಸ್ಸಲ್ಲೂ. ಅವನ ಅಮ್ಮನೇ ಇರಬೇಕು, ಅದೇ ಕಣ್ಣು-ಮೂಗು. ಲಕ್ಷಣಕ್ಕೇ ಲಕ್ಷಣವ್ಯಾಖ್ಯೆ ಇವರು.

ನಾನು ಸುಧಾರಿಸಿಕೊಂಡದ್ದನ್ನು ನೋಡಿದ ಹರ್ಷಣ್ಣ ಮತ್ತೊಮ್ಮೆ ತಲೆಗೆ ಮೊಟಕಿದ, ಈ ಸಲ ಹದವಾಗಿಯೇ. ಕಣ್ಣು ನೆಲ ನೋಡಿತಷ್ಟೇ. ಅದ್ಯಾವ ಘಳಿಗೆಯಲ್ಲೋ ಒಳಗೆ ಹೋಗಿದ್ದ ನಳಿನಿ ಆಂಟಿ ಟೀ ಲೋಟ ಹಿಡಿದು ಬಂದರು. ಆಗಲೇ ಧಾರಾಳವಾಗಿ ಕಪ್ಪಿಟ್ಟಿದ್ದ ಆಗಸ ಈಗಲೋ ಮತ್ಯಾವಾಗಲೋ ಸುರಿಯುವಂತೆ ತುಂಬು ಮೋಡಗಳಿಂದ ಉಯ್ಯಾಲೆಯಾಡುತ್ತಿತ್ತು. ಹಿತವಾದ ಗಾಳಿ ಬೀಸುತ್ತಿತ್ತು. ಟೀ ಮುದ ಕೊಟ್ಟಿತು. ಗುಬ್ಬಚ್ಚಿಗಳು ಕಿಚಪಿಚವೆಂದಾಗ ಅಕಸ್ಮಾತ್ ತಲೆಯೆತ್ತಿದೆ. ಅವನ ನೋಟ ಅದ್ಯಾಕೆ ನನ್ನತ್ತಲೇ ಇತ್ತು? ಗುಬ್ಬಚ್ಚಿ ಕಾಣಲೇ ಇಲ್ಲ, ನೆಲ ಕಂಡಿತು. ಮತ್ತೆರಡು ಯುಗಗಳ ನಂತರ ತಲೆಯೆತ್ತಿದಾಗ ನಮ್ಮಿಬ್ಬರ ಹೊರತು ಜಾಜಿ ಮಂಟಪ ಬರಿದಾಗಿತ್ತು. ಅವನ್ಯಾಕೆ ಇಲ್ಲಿ ಬಂದ? ಯಾರು ಕರೆದರು? ಯಾಕೆ? ಉತ್ತರಗಳು ನನ್ನೊಳಗಿರಲಿಲ್ಲ. ಅವನಲ್ಲಿರಬಹುದೆ? ಗೊತ್ತಿಲ್ಲ. ಹೇಗೆ ಕೇಳಲಿ? ಛೇ! ಕಾಲೇಜಿನ ಬೋಲ್ಡ್ ಶಿಶಿರ ನಾನೇನಾ? ಇದ್ಯಾಕೆ ಹೀಗೆ ಕೋಲ್ಡ್ ಆಗಿಬಿಟ್ಟೆ?

‘ಯಾಕೆ ಶಿಶಿರಾ ಏನೂ ಮಾತಾಡುದಿಲ್ಲ? ಹೆದ್ರಿಕೆ, ಗಾಬರಿ ಆಗುವಂಥಾದ್ದು ಏನೂ ಇಲ್ಲವಲ್ಲ ಇಲ್ಲಿ...’ ಈ ಸ್ವರ ನನಗೇನೂ ಹೊಸದಲ್ಲ, ಕಾಲೇಜಲ್ಲಿ ಕೇಳಿದ್ದೇ. ಆದರೆ ಇದನ್ನು ಜೇನಲ್ಲಿಟ್ಟು ತೆಗೆದವರು ಯಾರು? ಹೇಗೆ?
‘ನಾನಿಲ್ಲಿಗೆ ಹೇಗೆ, ಯಾಕೆ ಬಂದೆ ಅಂತ ಯೋಚನೆ ನಿಮಗೆ, ಅಲ್ವಾ?’ ತಟ್ಟನೆ ಅವನ ಮುಖ ನೋಡಿದೆ. ಇವನಿಗೇನು ಅಂಜನವಿದ್ಯೆ ಗೊತ್ತುಂಟಾ?
‘ಹರ್ಷ ನನ್ನ ಕ್ಲಾಸ್‍ಮೇಟ್. ಅವನೇ ನಮ್ಮನ್ನು ಕರ್ದದ್ದು ಇವತ್ತು. ಹೀಗೇ ಮಾತಾಡುವಾಗ ಅಮ್ಮನೂ ನಳಿನಿಯವರೂ ಹೇಗೋ ನೆಂಟರು ಅಂತಲೂ ಗೊತ್ತಾಯ್ತು. ಹಾಗೆ ಇಲ್ಲಿಯೇ ಮಾತಾಡ್ತಾ ನಿಂತೆವು. ನಿಮ್ಮನ್ನು ಇಲ್ಲಿಗೆ ಬರ್ಲಿಕ್ಕೆ ಹೇಳಿದ್ದೂ ಹರ್ಷನೇ. ಸಮಾಧಾನ ಆಯ್ತಾ? ಹೆದ್ರಿಕೆ ಹೋಯ್ತಾ? ಇನ್ನಾದ್ರೂ ಮಾತಾಡ್ಬಹುದಾ? ಒಬ್ಬನೇ ಮಾತಾಡ್ತಿದ್ದೇನೆ, ನನ್ನಷ್ಟಕ್ಕೇ... ತಲೆ ಕೆಟ್ಟಿದೆ ಅಂದ್ಕೊಳ್ತಾರೆ ನೋಡಿದವರು! ಮಾತಾಡಿ...’
‘ಏನು ಮಾತಾಡ್ಲಿ?’

Monday, 18 April, 2011

ಸುಮ್ಮನೆ ನೋಡಿದಾಗ...೨೨

ಹಗಲು ಹೇಗೆ ಓಡಿತೋ ಸಂಜೆ ಹೇಗಾಯ್ತೋ ಗೊತ್ತಾಗಲೇ ಇಲ್ಲ.

ಶ್ರಿಯಾಲಂಕಾರ್- ನಮ್ಮೂರಿನ ದೊಡ್ಡ ಬಟ್ಟೆಯಂಗಡಿ. ಎಷ್ಟೋ ಕಾಲದಿಂದಲೂ ಇದ್ದ ಈ ಅಂಗಡಿಯಲ್ಲೇ ಸರೋಜಾ ಆಂಟಿ, ನಳಿನಿ ಆಂಟಿ, ಸುಮುಖ್ ಅಂಕಲ್ ಯಾವಾಗಲೂ ವ್ಯವಹಾರ ಮಾಡುತ್ತಿದ್ದ ಕಾರಣ ನಮಗೆಲ್ಲ ಭಾರೀ ಸ್ವಾಗತವೇ ಸಿಕ್ಕಿತು. ಹರ್ಷಣ್ಣ ಮತ್ತು ಸುಮುಖ್ ಅಂಕಲ್ ಜೊತೆಯಲ್ಲಿ ನಾವೈದು ಹೆಂಗಸರು. ಅಂಗಡಿ ತುಂಬಾ ನಮ್ಮದೇ ಗೌಜಿ-ಗಲಾಟೆ. ಎಲ್ಲರಿಗೂ ಪರಿಚಯವಿರುವ ಉತ್ಸಾಹ ಸಲುಗೆ ಮಾತುಕತೆಯಲ್ಲಿ ಎದ್ದು ಕಾಣುತ್ತಿತ್ತು. ಅಂಗಡಿ ಮಾಲೀಕ ಸ್ವತಃ ನಮ್ಮ ಮುಂದೆ ನಿಂತಿದ್ದರು, ಸೀರೆಗಳನ್ನು ಬಿಡಿಸಿ ತೋರಿಸಿ ವೈವಿಧ್ಯ ವೈಶಿಷ್ಠ್ಯಗಳನ್ನು ವಿವರಿಸಲು.

ನೇಹಾ ತನಗಾಗಿ ಮೂರು-ನಾಲ್ಕು ಸೀರೆಗಳನ್ನು ಆರಿಸಿಕೊಳ್ಳಬೇಕಾಗಿತ್ತು. ಅವಳಿಗೆ ಮೆಚ್ಚಾದದ್ದು ಅಂಕಲ್ ಮತ್ತು ಹರ್ಷಣ್ಣನನ್ನು ಪೆಚ್ಚಾಗಿಸುತ್ತಿತ್ತು. ಅವರ ಇಷ್ಟ ಇವಳಿಗೆ ಕಷ್ಟವಾಗುತ್ತಿತ್ತು. ಇದೇ ಜಟಾಪಟಿ ನಡೀತಿರುವಾಗ ಅಮ್ಮ ಮತ್ತು ನಳಿನಿ ಆಂಟಿ ತಮ್ಮ ತಮ್ಮ ಕಣ್ಣು ಒಪ್ಪಿದ ಸೀರೆಗಳನ್ನು ಹೆಕ್ಕಿಕೊಂಡು ಸರೋಜ ಆಂಟಿಯ ಸಹಾಯಕ್ಕೆ ನಿಂತಿದ್ದರು. ನಾವಿಬ್ಬರೂ ಸೀರೆಗಳ ಅಟ್ಟಿಗಳ ನಡುವೆ ತಲೆಕೆರೆಯುತ್ತಾ ಪಿಳಿಪಿಳಿ ಮಾಡುತ್ತಾ ಕೂತಿದ್ದಾಗ ಅಂಕಲ್ ಮತ್ತು ಹರ್ಷಣ್ಣ ಒಟ್ಟಾಗಿ ನಾಲ್ಕು ಸೀರೆಗಳನ್ನು ತಂದು ನಮ್ಮ ಮುಂದೆ ಇಟ್ಟರು.

‘ನೇಹಾ, ಇದು ನಿಶ್ಚಿತಾರ್ಥಕ್ಕೆ, ಇದು ಧಾರೆಗೆ, ಇದು ಔತಣಕ್ಕೆ, ಇದು ಶಿಶಿರನಿಗೆ...’ ಅಂಕಲ್ ಕೊನೆಯ ಮಾತೆಂಬಂತೆ ಹೇಳಿದಾಗ ಅವರ ಆಯ್ಕೆಗಳನ್ನು ಮರುಮಾತಿಲ್ಲದೆ ನೇವರಿಸಿದೆವು.
‘ಇಷ್ಟು ಹೊತ್ತು ಈ ಸೀರೆಗಳು ಎಲ್ಲಿ ಅಡಗಿದ್ದವು? ಇವುಗಳನ್ನು ನಮಗೆ ಯಾಕೆ ತೋರಿಸ್ಲಿಲ್ಲ ನೀವು?’ ನೇಹಾ ಅಂಗಡಿ ಹುಡುಗರನ್ನೇ ತರಾಟೆಗೆಳೆದಳು. ಅವರೆಲ್ಲ ಸುಮ್ಮನೇ ಮುಖಮುಖ ನೋಡುವಾಗ, ‘ಇಷ್ಟ ಆಗದಿದ್ರೆ ಬದಲಾಯಿಸುವಾ. ಒತ್ತಾಯ ಏನಿಲ್ಲ’ ಎಂದ ಹರ್ಷಣ್ಣ. ನೇಹಾ ಸುಮ್ಮನೇ ತಲೆಯಾಡಿಸಿ ಸೀರೆಗಳನ್ನು ಮಡಿಲಲ್ಲಿರಿಸಿಕೊಂಡಾಗ, ‘ಬಿಲ್ ಮಾಡಿ ಪ್ಯಾಕ್ ಮಾಡಿ ಕೊಡ್ತೇವಮ್ಮಾ, ಇಲ್ಲಿ ಕೊಡಿ’ ಅಂತ ಕೈ ನೀಡಿದರು ಅಂಗಡಿ ಯಜಮಾನರು. ಕೆನ್ನೆಗಳು ಇನ್ನಷ್ಟು ಕೆಂಪಾದವು.

ಜೂನ್ ಮೂವತ್ತರಂದು ಮದುವೆಯೆಂದು ನಿಶ್ಚಯವಾಯ್ತು. ಔಪಚಾರಿಕವಾಗಿ ನಿಶ್ಚಿತಾರ್ಥವೂ ನಡೆಯಿತು. ಇವೆಲ್ಲದರ ನಡುವೆ ಅಮ್ಮನ ವಿರೋಧವನ್ನೂ ಲೆಕ್ಕಿಸದೆ ಎಮ್.ಎಸ್ಸಿ.ಗೆ ಅರ್ಜಿ ಹಾಕಿದೆ. ಜುಲೈ ಹದಿನೆಂಟರಂದು ವಿ.ವಿ. ಕ್ಯಾಂಪಸ್ಸಿನಲ್ಲಿ ಹಾಜರಾಗಬೇಕೆನ್ನುವ ಆಜ್ಞಾಪತ್ರವೂ ಬಂತು. ಅಮ್ಮನ ರಾಗ ಏರುತ್ತಿತ್ತು. ನೇಹಾಳ ಮದುವೆ ನೆಪದಲ್ಲಿ ಹೆಚ್ಚಾಗಿ ಅಲ್ಲೇ ಇರುವ ಅವಕಾಶ ಹುಡುಕುತ್ತಿದ್ದೆ ನಾನು. ನಮ್ಮ ಮಾತಿನ ನಡುವೆ ಆಗೊಮ್ಮೆ ಈಗೊಮ್ಮೆ ವಸಂತ್ ನುಸುಳುತ್ತಿದ್ದ. ಬಲವಂತವಾಗಿ ನೇಹಾಳ ಬಾಯಿ ಮುಚ್ಚಿಸುವುದಾಗಿತ್ತು. ಸುಮುಖ್ ಅಂಕಲ್ ಅಥವಾ ನಳಿನಿ ಆಂಟಿಯಿಂದ ಈ ಬಗ್ಗೆ ಯಾವುದೇ ಪ್ರಶ್ನೆಗಳು ನೋಟಗಳು ನನ್ನನ್ನು ಎದುರುಗೊಂಡಿಲ್ಲವಾದ್ದರಿಂದ ವಸಂತ್ ವಿಷಯ ಅವರ ಕಿವಿ ಮುಟ್ಟಲಿಲ್ಲವೆನ್ನುವ ಸಮಾಧಾನ ನನಗಿತ್ತು.

ಜೂನ್ ಹನ್ನೆರಡರ ಬೆಳಗ್ಗೆ ನೇಹಾ ಫೋನ್ ಮಾಡಿ ಆದಷ್ಟು ಬೇಗ ಬಾರೆಂದು ಕರೆದಾಗ ಅವಳ ಸ್ವರದಲ್ಲಿ ಯಾವುದೇ ಆತಂಕವಿಲ್ಲದಿದ್ದರೂ ನನ್ನ ಎದೆಬಡಿತ ಮಾತ್ರ ತಾಳ ತಪ್ಪಿ ಏರುಪೇರಾಯ್ತು. ಅವಸರವಸರವಾಗಿ ಹೇಗ್ಹೇಗೋ ತಯಾರಾಗಿ ಅವರ ಮನೆಯ ಮುಂದೆ ಬಂದಾಗ ಜಾಜಿ ಮಂಟಪದಲ್ಲೇ ಐದಾರು ಜನ ನಿಂತಿದ್ದರು. ಗೇಟಿನಿಂದ ಹೆಜ್ಜೆ ಮುಂದೆ ಎತ್ತಿಡುವುದೇ ಕಷ್ಟವೆನಿಸಿ ಅಲ್ಲೇ ನಿಂತೆ, ಜಾಜಿ ಮಂಟಪ ದಿಟ್ಟಿಸುತ್ತಾ.

Monday, 11 April, 2011

ಸುಮ್ಮನೆ ನೋಡಿದಾಗ...೨೧

ಸಹೃದಯರಿಗೆಲ್ಲ ಸೌರ ಯುಗಾದಿಯ (ವಿಷುವಿನ) ಸಂದರ್ಭದಲ್ಲಿ ಶುಭ ಹಾರೈಕೆಗಳು.
ಜೀವನ ಸುಂದರವಾಗಿರಲಿ, ಸುಖಮಯವಾಗಿರಲಿ, ಸಮೃದ್ಧಿಯಿಂದಿರಲಿ.


ಸರೋಜಾ ಆಂಟಿ ಅದೆಷ್ಟು ಹೊತ್ತಿಗೆ ತಮ್ಮ ಮನೆಗೆ ಹೊರಟಿದ್ದರೋ ಅದ್ಯಾವಾಗ ಸುಮುಖ್ ಅಂಕಲ್ ನಮ್ಮ ಹಿಂದೆ ಬಂದು ನಿಂತರೋ ಅರಿವಿರಲಿಲ್ಲ ನಮಗೆ. ನಳಿನಿ ಆಂಟಿಯ ವಕಾಲತ್ತಿನ ಮೇಲೆ ಅಂದು ರಾತ್ರಿ ನಾನು ಅಲ್ಲಿಯೇ ಉಳಿದೆ. ಮರುದಿನ ಬೆಳಿಗ್ಗೆಯೇ ಅಮ್ಮನೂ ಇಲ್ಲಿಗೇ ಬರುವ ಮಾತಾಯ್ತು ಹಿರಿಯ ಗೆಳತಿಯರಲ್ಲಿ. ನಳಿನಿ ಆಂಟಿಗೆ ಇಂದು ನಿದ್ದೆಯೇ ಬಾರದೇನೋ ಅನ್ನಿಸಿತು ನನಗೆ, ಅವರ ಸಂಭ್ರಮ ನೋಡಿ.

ಮಧ್ಯರಾತ್ರಿಯ ಎರಡು ಗಂಟೆಗೆ ನೇಹಾ ನನ್ನನು ಕುಲುಕಿ ಎಚ್ಚರಿಸಿದಳು, ಮುಖ ತುಂಬಾ ತುಂಟ ನಗು ಹೊತ್ತು.
‘ಏನಾಯ್ತು? ಯಾಕೆ ಎಬ್ಸಿದ್ದು ನನ್ನನ್ನು?’
‘ಯಾರು ವಸಂತ್? ಯಾಕವನು ಇಲ್ಲಿಗೆ ಬರ್ಬೇಕು? ಹೇಳು ಈಗ್ಲೇ’
‘ಯಾರು? ಯಾವ ವಸಂತ್? ಎಂತ ಮಾತಾಡ್ತಿದ್ದೀ ನೀನು? ಕನಸು ಬಿತ್ತಾ ನಿಂಗೆ?’
‘ಕನಸು ಬಿದ್ದದ್ದು ನಂಗಲ್ಲ ಮಾರಾಣಿ, ನಿಂಗೆ. ‘ವಸಂತ್, ಬನ್ನೀ...’ ಅಂತ ಕನವರಿಸಿದವಳು ನೀನು. ನಂಗೀಗ ಹೇಳುದಿಲ್ಲ ಅಂತಾದ್ರೆ ಬೆಳಗಾದ್ಮೇಲೆ ಪಪ್ಪನತ್ರ ಕೇಳಿಸ್ತೇನೆ, ಅಷ್ಟೇ...’
‘....’ ಹೇಗೆ ಎಲ್ಲಿಂದ ಇವಳಿಗೆ ಹೇಳುವುದೆನ್ನುವ ತರ್ಕದಲ್ಲಿ ಮುಳುಗಿದೆ.
‘ಏನು ಲೆಕ್ಕಾಚಾರ ಹಾಕ್ತಾ ಇದ್ದೀ? ನೀನು ಹೇಳದಿದ್ರೆ ಬಿಡುದಿಲ್ಲ ನಾನು. ಹೇಗೆ ನಿನ್ನ ಬಾಯಿ ಬಿಡಿಸ್ಬೇಕು ಅಂತ ನಂಗೊತ್ತುಂಟು. ಬೇಡ ಬಿಡು. ಬೆಳಿಗ್ಗೆ ನೋಡ್ಕೊಳ್ತೇನೆ...’
‘....’ ಹೇಳದಿದ್ರೆ ಬಿಡುವವಳಲ್ಲ. ಹಾಗಂತ ಅಂಕಲ್ ವರೆಗೆ ವಿಷಯ ಹೋದರೆ... ಒಳ್ಳೆಯದೆ? ಕೆಟ್ಟದ್ದೆ? ನಿಜವಾಗಲೂ ಲೆಕ್ಕಾಚಾರದಲ್ಲಿ ಬಿದ್ದೆ. ಬಾಯಿ ಬಿಡಲಿಲ್ಲ.
ಮುಖ ದಪ್ಪ ಮಾಡಿಕೊಂಡು ನನಗೆ ಬೆನ್ನುಹಾಕಿ ಮುಸಕೆಳೆದ ನೇಹಾಳ ಹುಸಿಕೋಪಕ್ಕೆ ನಗುವೇ ಬಂತು. ಕಿಸಕ್ಕನೆ ಹೊರಜಾರಿತು, ತಡೆಯಲಿಲ್ಲ. ಅವಳ ಕೋಪವೂ ಇಳಿಯಲಿಲ್ಲ. ನನ್ನ ಬೆನ್ನಿಗೊಂದು ಗುದ್ದಿದಳು. ನಡುಮನೆಯಲ್ಲಿ ಆಗಲೇ ದೀಪ ಉರಿಯಿತು. ನಳಿನಿ ಆಂಟಿಯ ಹೆಜ್ಜೆ ನಮ್ಮ ಕೋಣೆಯ ಬಾಗಿಲತ್ತ ಬಂತು. ಬಾಯ್ತೆರೆದವಳ ಸ್ವರ ಹೊರಗೆ ಬಾರದ ಹಾಗೆ ಕೈ ಅಡ್ಡ ಹಿಡಿದೆ. ಕೋಣೆಯೊಳಗಿನ ಮೌನ ಆಂಟಿಯನ್ನು ಹಿಂದಕ್ಕೆ ಕಳಿಸಿತು. ಒಂದ್ಹತ್ತು ನಿಮಿಷಗಳಲ್ಲಿ ಮೌನದ ಪದರ ಗಾಢವಾಗಿ ಮತ್ತೊಂದು ಕಿಸಕಿಸದೊಡನೆ ಒಡೆದುಕೊಂಡಿತು. ಇನ್ನೊಮ್ಮೆ ನೇಹಾಳ ಮುಖ ದಪ್ಪವಾಯ್ತು, ಹುಸಿಗೋಪದಲ್ಲಿ,
‘ಹೇಳ್ತೀಯಾ ಇಲ್ವಾ?’
‘ಹೇಳ್ತೇನೆ ಮಾರಾಯ್ತಿ. ನಿಂಗಲ್ದೆ ಇನ್ಯಾರಿಗೆ ಹೇಳುದು ನಾನು? ಎಲ್ಲ ಕೇಳಿದ ಮೇಲೆ ಬೈಬಾರ್ದು ನೀನು, ಅಷ್ಟೇ. ಅದೊಂದು ಪ್ರಾಮಿಸ್ ಮಾಡು.’
‘ಆಣೆ-ಪ್ರಾಮಿಸ್ ಎಲ್ಲ ನಮ್ಮ ನಡುವೆ ಬೇಡ ಅಂತ ಹೇಳಿದವಳೇ ನೀನು. ಈಗ ಪ್ರಾಮಿಸ್ ಮಾಡ್ಬೇಕಾ? ಅಂದ್ರೆ ಏನೋ ಗಾಢ-ಗೂಢ ಕಥೆಯೇ ಉಂಟು. ಹೇಳು, ಪ್ಲೀಸ್...’ ಗೋಗರೆಯುವ ನಾಟಕ ಮಾಡಿದಳು ಜೀವದ ಗೆಳತಿ.

ಮೊದಲ ಕಥೆ ಬರೆದ ಹಿನ್ನೆಲೆಯಿಂದ ಹಿಡಿದು ಸದ್ದಿಲ್ಲದೆ ವಸಂತ್ ನನ್ನೊಳಗೆ ಮನೆ ಮಾಡಿ ಕಾಡುತ್ತಿರುವ ಎಲ್ಲವನ್ನೂ ಕನವರಿಕೆಯಂತೆಯೇ ಉಸುರುತ್ತಾ ಮುಗಿಸಿದಾಗ ಬೆಳಗಿನ ಜಾವ ಐದರ ನಸುಕು. ಹೊರಗೆ ಬೇಕೋಬೇಡವೋ ಇಣುಕುತ್ತಿದ್ದ ಮಂದ ಬೆಳಕಿನಲ್ಲಿ ಕೆಲವಾರು ಹಕ್ಕಿಗಳ ಉಲಿ ವಾತಾವರಣವನ್ನು ಮತ್ತಷ್ಟು ಆಪ್ತವಾಗಿಸುತ್ತಿತ್ತು. ಹಾಸಿಗೆಯ ಮೇಲೆ ಸುಖಾಸನದಲ್ಲಿ ಕೂತು ಮಡಿಲಲ್ಲಿ ದಿಂಬು ಏರಿಸಿ, ಅದರಲ್ಲೆರಡೂ ಮೊಣಕೈಯೂರಿ, ಎರಡೂ ಅಂಗೈಗಳ ಆಧಾರದಲ್ಲಿ ಗಲ್ಲವನ್ನಿಟ್ಟು ತುಟಿ ಚೂಪು ಮಾಡಿ, ಹ್ಙೂಗುಟ್ಟುತ್ತಾ ಕೇಳಿಸಿಕೊಳ್ಳುತ್ತಿದ್ದವಳು, ನಾನು ನಿಟ್ಟುಸಿರು ಬಿಟ್ಟು ಹಗುರಾದಾಗ ಮತ್ತೊಮ್ಮೆ ನನ್ನ ಬೆನ್ನಿಗೆ ಗುದ್ದಿದಳು.
‘...ಯಾಕೆ?’
‘ಇಷ್ಟು ದಿನ ಇದನ್ನೆಲ್ಲ ನನ್ನಿಂದ ಮುಚ್ಚಿಟ್ಟದ್ದಕ್ಕೆ...’
‘ಇನ್ನೂ ಏನೂ ಆಗಿಲ್ಲದ ಈ ವಿಷಯವನ್ನು ನಿಂಗೆ ಹೇಳುವಂಥ ವಿಶೇಷ ನಂಗೆ ಕಂಡಿರಲಿಲ್ಲ. ಅದ್ಕೇ ಹೇಳಿರಲಿಲ್ಲ. ಇದೊಂಥರಾ ಇನ್ಫ಼ಾಚುವೇಷನ್ ಅಂತ ನಿಂಗನಿಸುದಿಲ್ವಾ? ಇದ್ರಲ್ಲೇನೂ ಹುರುಳಿಲ್ಲ ಅಂತ ಅನ್ನಿಸುದಿಲ್ವಾ? ವನ್ ವೇ ಟ್ರಾಫಿಕ್ ಅಲ್ವಾ ಇದು?’

‘ಇದನ್ನು ಟೂ ವೇ ಟ್ರಾಫಿಕ್ ಮಾಡ್ಲಿಕ್ಕೆ ಏನಾದ್ರೂ ಪ್ರಯತ್ನ ಮಾಡ್ಬೇಕಲ್ವ, ಮಾಡಿದ್ದೀಯ? ಆಚೆ ಕಡೆಯ ಟ್ರಾಫಿಕ್ಕಿಗೆ ಗ್ರೀನ್ ಸಿಗ್ನಲ್ ತೋರಿಸ್ಬೇಕಲ್ವ? ತೋರ್ಸಿದ್ದೀಯ? ಅದೇನೂ ಮಾಡದೆ, ಸುಮ್ನೆ ಕನವರಿಸ್ಕೊಂಡು ‘ವಸಂತ್ ಬನ್ನೀ...’ ಅಂತಂದ್ರೆ ಎಲ್ಲಿಂದ ಬರ್ತಾರೆ?. ನಂಗೀಗ ಎಲ್ಲ ಅರ್ಥ ಆಗ್ತಾ ಉಂಟು,ಶಿಶಿರಾ. ಶರತನ್ನು ನೋಡಿದ್ರೆ ಯಾಕೆ ತಪ್ಪಿಸ್ತಿದ್ದಿ, ವಸಂತ್ ಕಾಲೇಜಲ್ಲಿ ಕಂಡಾಗ ಬೇರೆ ಕಾರಿಡಾರಿಗೆ ನನ್ನನ್ನು ಯಾಕೆ ಎಳ್ದಿದ್ದಿ, ನಿಂಗೆ ಇಷ್ಟು ವರ್ಷಗಳಲ್ಲಿ ಇಲ್ಲದ ಒಂಥರಾ ಗೊಂದಲ, ಗಾಬರಿ ಪರೀಕ್ಷೆಯ ಸಮಯದಲ್ಲಿ ಈ ವರ್ಷ ಯಾಕಿತ್ತು... ಎಲ್ಲ ಅರ್ಥ ಆಗ್ತಾ ಉಂಟು. ನಾಳೆನೇ ನಾನು ಶರತ್ ಹತ್ರ ವಸಂತ್ ನಂಬರ್ ತಗೊಂಡು ಮಾತಾಡ್ತೇನೆ. ಅಂತೂ ಒಳ್ಳೇ ಸೆಲೆಕ್ಷನ್ ಬಿಡು. ಆದ್ರೆ, ಅವ್ರ ಸಬ್ಜೆಕ್ಟ್ ಮಾತ್ರ ನಿನ್ನಿಷ್ಟದ್ದು ಅಲ್ವಲ್ಲ... ಪ್ಚ್...ಪ್ಚ್... ಸ್ಸಾರೀ ಮಾರಾಯ್ತಿ...’ ನಾಟಕೀಯವಾಗಿ ತಲೆಯಾಡಿಸಿದವಳ ಮೇಲೆ ಕೋಪಗೊಳ್ಳುವುದೋ ಪ್ರೀತಿ ಹರಿಸುವುದೋ ತಿಳಿಯದೆ ಸುಮ್ಮನೇ ಕೂತಿದ್ದೆ.

ನಳಿನಿ ಆಂಟಿ ಎದ್ದು ಬಂದ ಶಬ್ದವಾದಾಗ ಒಂದು ಗಂಟೆಯಾದರೂ ಮಲಗೋಣವೆಂದು ಮತ್ತೊಮ್ಮೆ ಮುಸುಕೆಳೆದೆವು. ಮುಂಜಾವು ತನ್ನ ಪಾಡಿಗೆ ತಾನು ಬೆಳಕಾಗುತ್ತಿತ್ತು. ಸಂಜೆ ಸೀರೆಯಂಗಡಿಯಲ್ಲಿ ಯಾವುದೆಲ್ಲ ಬಣ್ಣಗಳನ್ನು ಯಾರ್ಯಾರಿಗ ಆರಿಸಬಹುದೆನ್ನುವ ಕಲ್ಪನೆಯೊಳಗೆ ಸೇರಿಹೋದವಳನ್ನು ನಿದ್ರೆಯೆಂಬ ಮಾಯೆ ಆವರಿಸಿಕೊಂಡಳು. ಎಚ್ಚರಾದಾಗ ಏಳೂವರೆಯ ಮೇಲಾಗಿತ್ತು. ಮುಖದ ಮೇಲೆ ಸುಂದರ ಮಂದಹಾಸ ಹರಿಬಿಟ್ಟ ನೇಹಾ ಇನ್ನೂ ಮಲಗೇ ಇದ್ದಳು. ನಡುಮನೆಗೆ ಬಂದಾಗ ಅಲ್ಲಾಗಲೇ ಹರ್ಷಣ್ಣ ನಗುತ್ತಿದ್ದ.
‘ಗುಡ್ ಮಾರ್ನಿಂಗ್ ಗೊಂಬೇ’ ಅಂದ.
‘ನಿನ್ನ ನಿಜವಾದ ಗೊಂಬೆ ಇನ್ನೂ ಮಲ್ಕೊಂಡೇ ಉಂಟು ಮಾರಾಯ. ಎಬ್ಬಿಸ್ಬೇಕಾ?’
‘ಬೇಡ, ನಿಮಗಿಬ್ಬರಿಗೂ ನಿಮ್ಮ ಜನ್ಮದಿನದ ಶುಭಾಶಯಗಳನ್ನು ಖುದ್ದಾಗಿ ಹೇಳುವಾಂತ ಬಾಂಬೆಯಿಂದ ಬಂದೆ. ಇಬ್ಬರೂ ಇಲ್ಲೇ ಸಿಕ್ಕಿದ್ದು ಫ಼ಸ್ಟ್ ಕ್ಲಾಸ್ ಆಯ್ತು. ಹ್ಯಾಪ್ಪಿ ಬರ್ತ್ ಡೇ ಮೈ ಡಿಯರ್.’
‘....’ ನನಗೆ ನೆನಪಿರುವ ಇಷ್ಟು ವರ್ಷಗಳಲ್ಲಿ ಇದೇ ಮೊದಲ ಸಲ ನಮ್ಮ ಜನ್ಮದಿನ ನಮ್ಮ ನೆನಪಿಂದ ಮರೆಯಾಗಿತ್ತು. ಪ್ರೇಮದ ಪರಿ ಹೀಗೇ ಏನು? ಸುಮ್ಮನೆ ಪೆಚ್ಚುಪೆಚ್ಚಾಗಿ ನಕ್ಕು ಬಚ್ಚಲುಮನೆಗೆ ಸಾಗಿ ಮುಖ ತೊಳೆದು ಬಂದೆ. ನಳಿನಿ ಆಂಟಿ ಹರ್ಷಣ್ಣ, ಸುಮುಖ್ ಅಂಕಲ್, ಮತ್ತು ನನಗೆ ಕಾಫಿ ತಂದಿತ್ತರು. ರಾಜಕುಮಾರಿಯ ಮುಖದರ್ಶನವಾಗಿರಲಿಲ್ಲ ಇನ್ನೂ.

Monday, 4 April, 2011

ಸುಮ್ಮನೆ ನೋಡಿದಾಗ...೨೦

“ಸಹೃದಯರಿಗೆಲ್ಲ ಚಾಂದ್ರ ಯುಗಾದಿಯ ಸಂದರ್ಭದಲ್ಲಿ ಶುಭ ಹಾರೈಕೆಗಳು. ಜೀವನ ಸುಂದರವಾಗಿರಲಿ”

‘ಅಮ್ಮ, ನೀವು ಸಸ್ಪೆನ್ಸ್ ಶುರು ಮಾಡುದೇನೂ ಬೇಡ. ಶಿಶಿರಾ ನನ್ನ ತಂಗಿಯ ಹಾಗೆ. ಚಿಕ್ಕತ್ತೆ ಅಂತ ಅವಳಮ್ಮನನ್ನು ಕರೀತಿದ್ರೂ ಶಿಶಿರಾನ್ನು ಆ ದೃಷ್ಟಿಯಿಂದ ನೋಡಿದ್ದೇ ಇಲ್ಲ ನಾನು. ಆದ್ದರಿಂದ ಯಾವುದೇ ಗೊಂದಲ ಬೇಡ. ಇನ್ನು, ನೇಹಾ ಇದಕ್ಕೆ ಸಂಪೂರ್ಣ ಒಪ್ಪಿಗೆ ಕೊಡ್ತಾಳಾ ಕೇಳ್ಬೇಕು. ಬೇರೆಯವರಿಗೋಸ್ಕರ ಅವಳು ಒಪ್ಪುದೇನೂ ಬೇಡ. ಏನ್ ಹೇಳ್ತೀರಿ ಅಂಕಲ್?’ ಹರ್ಷಣ್ಣ ಖಡಾಖಂಡಿತವಾಗಿ ಹೇಳಿದಾಗ ಅಡುಗೆಮನೆಯಲ್ಲೇ ಕೆಂಪಾದ ನೇಹಾಳ ಕೆನ್ನೆಯನ್ನು ಸವರಿದೆ. ಸುಮ್ಮನೇ ನನ್ನ ಕೈ ಗಟ್ಟಿಯಾಗಿ ಹಿಡಿದು ನಿಂತವಳ ಹಿಂದೆ ಸುಮುಖ್ ಅಂಕಲ್ ನೆರಳಾದರು. ಅವರ ಕಣ್ಣುಗಳ ಪ್ರಶ್ನೆಗೆ ನೇಹಾ, ‘ಯೆಸ್ ಪಪ್ಪಾ’ ಎಂದಷ್ಟೇ ಉಸುರಿದಳು. ನಡುಮನೆಯಲ್ಲಿ ನಗೆ ಹೊನಲಾಯಿತು. ಎರಡು ಹೃದಯಗಳ ಹಾಡುಗಳು ಲಯಗತಿಯ ತಾದಾತ್ಮ್ಯ ಪಡೆದವು.

ಫೆಬ್ರವರಿ, ಮಾರ್ಚ್ ಹೇಗೋ ಕಳೆದವು. ಏಪ್ರಿಲಿನ ದಿನಗಳಲ್ಲಿ ಪರೀಕ್ಷೆಯ ನೆಪದಲ್ಲಿ ಎಲ್ಲವನ್ನೂ ಮರೆತಂತೆ ನಾವಿದ್ದರೂ ನಮ್ಮೊಳಗೆ ಇನ್ನೊಂದೊಂದು ಮೆಲ್ಲುಸಿರು ಸುಳಿಯುತ್ತಿದ್ದುದು ನಮನಮಗೇ ಗೊತ್ತು. ನೇಹಾಳಿಗಿನ್ನೂ ನನ್ನ ಹೃದಯದೊಳಗಿನ ಕಳ್ಳನ ಪತ್ತೆಯಾಗಿರಲಿಲ್ಲ. ಲ್ಯಾಬ್ ಪರೀಕ್ಷೆಗಳು ಹತ್ತಿರಾದಾಗ ಒಂದು ರಾತ್ರಿ ಇದ್ದಕ್ಕಿದ್ದಂತೆ ನಮ್ಮ ಕೆಮಿಸ್ಟ್ರಿ ಲ್ಯಾಬಿಗೆ ವಸಂತ್ ಹೊರ ಪರೀಕ್ಷಕರಾಗಿ ಬಂದರೆಂದು ಕನಸು ಬಿದ್ದು ಗಾಬರಿಯಿಂದ ಎದ್ದು ಕುಳಿತಿದ್ದೆ. ಲ್ಯಾಬ್ ಪರೀಕ್ಷೆಗಳಿಗೆ ಇನ್ನೊಂದು ವಾರವಿದೆ ಅನ್ನುವಾಗ ನನ್ನ ದಿಗಿಲು ನೇಹಾಳ ಕಣ್ಣುಗಳಿಗೆ ಬಿತ್ತು. ಎಂದೂ ಪರೀಕ್ಷೆಯ ಬಗ್ಗೆ ತಲೆಕೆಡಿಸಿಕೊಂಡಿರದ ನನ್ನ ಆತಂಕ ಅವಳಿಗೆ ಅಚ್ಚರಿ ಮೂಡಿಸಿತು. ನನ್ನೊಳಗನ್ನು ಈಗಲೇ ಬಿಚ್ಚಿಡಲು ನಾನೇನೂ ತಯಾರಿರಲಿಲ್ಲ. ಎಮ್.ಎಸ್ಸಿ. ಮಾಡಬೇಕಿತ್ತು. ಕೆಲಸಕ್ಕೆ ಸೇರಬೇಕಿತ್ತು. ನನ್ನ ನೆಲೆ ನಾನು ಕಂಡುಕೊಳ್ಳಬೇಕಿತ್ತು. ಅದಕ್ಕೆ ಮೊದಲೇ ಇನ್ನೊಂದು ದೋಣಿಯೊಳಗೆ ಹೆಜ್ಜೆಯಿಟ್ಟು ಅಮ್ಮನ ದೃಷ್ಟಿಯಲ್ಲಿ ಕೀಳಾಗಲು ಸಾಧ್ಯವಿರಲಿಲ್ಲ.

ಮನೆಯಲ್ಲಿ ಅಮ್ಮನ ಅವ್ಯಾಹತ ಕಿರಿಕಿರಿ ನಿರಂಕುಶವಾಗಿ ಸಾಗುತ್ತಿತ್ತು. ಕೇಳಿಯೂ ಕೇಳಿಸಿಕೊಳ್ಳದ ದಪ್ಪ ಚರ್ಮ ಕಷ್ಟಪಟ್ಟು ಬೆಳೆಸಿಕೊಂಡಿದ್ದೆ. ಆದರೂ ಒಂದೊಂದು ಬೆಳಗು ಯಾಕಾದರೂ ಏಳಬೇಕೋ ಅನಿಸುವಂತಿರುತ್ತಿತ್ತು. ಈಗ ಅಮ್ಮನ ರಾಗ ನನ್ನ ಮದುವೆಯ ಸುತ್ತಲೇ ಗಾಣಹಾಕುತ್ತಿತ್ತು. ಹರ್ಷನಂಥ ಅತ್ಯುತ್ತಮ ಹುಡುಗನನ್ನು ನಾನೇ ನೇಹಾಳಿಗೆ ಬಿಟ್ಟುಕೊಟ್ಟೆ ಅನ್ನುವ ರೀತಿಯಲ್ಲಿ ಮಾತಾಡುತ್ತಿದ್ದರು. ನೇಹಾಳೂ ತನ್ನ ಮಗಳೇ ಅನ್ನುವುದನ್ನು ಈ ತಾಯಿ ಅದು ಹೇಗೆ ಮರೆತಳು? ನನಗರ್ಥವಾಗಲಿಲ್ಲ.

ಲ್ಯಾಬ್ ಪರೀಕ್ಷೆಗಳಲ್ಲಿ ನಾವಿಬ್ಬರೂ ಚೆನ್ನಾಗೇ ಮಾಡಿದೆವು. ವಸಂತ್ ನಮ್ಮ ಕಾಲೇಜಿಗೆ ಬಂದಿದ್ದರಾದರೂ ನಮ್ಮ ಗುಂಪಿಗೆ ಪರೀಕ್ಷಕರಾಗಲಿಲ್ಲ, ಅವರ ಕಸಿನ್ ಶರತ್ ನಮ್ಮ ಗುಂಪಿನಲ್ಲಿದ್ದ ಅನ್ನುವ ಕಾರಣಕ್ಕೆ ಅವರನ್ನು ನಮ್ಮ ಗುಂಪಿನಿಂದ ದೂರವಿಟ್ಟಿದ್ದರು. ನನಗದು ವರವೇ ಆಯ್ತು.

ಎಲ್ಲ ಪರೀಕ್ಷೆಗಳೂ ಮುಗಿದು ಮೇ ತಿಂಗಳ ಮಧ್ಯಭಾಗದಲ್ಲಿ ಆಕಾಶ ಕಪ್ಪಿಡದೇ ಗುಡುಗಿದ ಒಂದು ಸಂಜೆ, ಸರೋಜಾ ಆಂಟಿ ನಮ್ಮನೆಗೆ ಬಂದರು. ಅವರಿಲ್ಲಿಗೆ ಬರುತ್ತಿದ್ದುದೆ ಅಪರೂಪ.
ನೇರವಾಗಿ ನನ್ನ ಕಡೆಗೇ ನೋಡುತ್ತಾ, ‘ನಾಳೆ ಸಂಜೆ ಸೀರೆ ತೆಗೊಳ್ಳಿಕ್ಕೆ ಹೋಗ್ಬೇಕು. ಶಿಶಿರಾ, ನೀನೂ ಬರ್ಬೇಕು ನಮ್ಮೊಟ್ಟಿಗೆ. ನೇಹಾ ಬರ್ತಾಳೆ. ಹಾಗೇ ಹರಿಣಿ, ನಳಿನಿ ಕೂಡಾ. ನಾವು ಐದು ಜನ ಹೋಗಿ ಬರುವಾ. ಶ್ರಿಯಾಲಂಕಾರ್ ದೊಡ್ಡ ಅಂಗಡಿಯಲ್ವ. ಅಲ್ಲಿಗೇ ಹೋಗುವಾ. ಸಂಜೆ ನಾಲ್ಕು ಗಂಟೆಗೆ ನಳಿನಿ ಮನೆ ಹತ್ರ ಸೇರುವಾ. ಹ್ಙಾ ಹ್ಙೂ ಏನೂ ಹೇಳ್ಳಿಕ್ಕಿಲ್ಲ. ಸುಮ್ಮನೇ ಬರ್ಬೇಕು, ಅಷ್ಟೇ’ ಅಂದರು.
ನಾನು ಅಮ್ಮನ ಮುಖ ನೋಡಿದೆ. ‘ಬರ್ತೇವೆ ಅತ್ತಿಗೆ’ ಅಂದರು ಅಮ್ಮ, ಇವರು ಹೊರಟು ನಿಂತರು. ಅವರ ಜೊತೆಗೇ ನಾನೂ ಹೊರಟೆ, ನೇಹಾ ಮನೆತನಕ ಹೋಗುವ ನೆಪದಲ್ಲಿ.

ದಾರಿಯಲ್ಲಿ ಸರೋಜ ಆಂಟಿ ಅಚಾನಕ್ ಕೇಳಿದರು, ‘ಈಗೀಗ ಅಮ್ಮನ ಮೂಡ್ ಹೇಗುಂಟಾ?’
‘ಯಾವಾಗಿನ ಹಾಗೇ. ವ್ಯತ್ಯಾಸ ಏನಿಲ್ಲ. ಯಾಕೆ ಆಂಟಿ?’
‘ಹ್ಮ್, ಕೇಳಿದೆ, ಸುಮ್ನೆ...’
‘....’
‘ಅವಳು ಯಾಕೆ ಯಾವಾಗ ಅಷ್ಟು ಸಿಡುಕಿಯಾಗಿದ್ದು ಗೊತ್ತುಂಟಾ ನಿಂಗೆ?’
‘ಇಲ್ಲ’ ನನ್ನ ಕೊರೆಯುತ್ತಿದ್ದ ಪ್ರಶ್ನೆಗೆ ಇವತ್ತು ಉತ್ತರ ಸಿಕ್ಕೀತಾ?
‘ತಿಳ್ಕೊಳ್ಬೇಕಾ ನಿಂಗೆ?’
‘ಹೌದು’
‘ವಿನ್ಯಾಸ್ ಅದ್ಕೆ ಕಾರಣ ಅಂದ್ರೆ ನಂಬ್ತೀಯಾ?’
‘ಹ್ಮ್...’ ನನ್ನ ಊಹೆ ಸರಿಯಾಗಿಯೇ ಇತ್ತು. ನಳಿನಿ ಆಂಟಿ ಅಮ್ಮನ ಕಥೆ ಹೇಳಿದ ಮೇಲೆ ಅದನ್ನೇ ಊಹಿಸಿದ್ದೆ.
‘ನಮ್ಮ ಅಕಳಂಕ ಮನೆಯ ಔಟ್ ಹೌಸಿನಲ್ಲಿ ಬಾಡಿಗೆಗೆ ಅಂತ ಅಮ್ಮ ನಿನ್ನನ್ನು ಎತ್ತಿಕೊಂಡು ಲಚ್ಚಮ್ಮನ ಒಟ್ಟಿಗೆ ಬಂದಾಗ ನಿನ್ನಮ್ಮನ ಕಥೆ ಹಿನ್ನೆಲೆ ಗೊತ್ತಿರ್ಲಿಲ್ಲ. ಆದ್ರೆ ನನ್ನಮ್ಮ ಆಗಾಗ ವಿನ್ಯಾಸ್ ಯಾರೋ ಹುಡುಗಿಗೆ ಮೋಸ ಮಾಡಿದ ಅಂತ ಹೇಳ್ತಿದ್ದಳು. ಅದು ಹೇಗೋ ನೀವು ನಮ್ಮಲ್ಲಿ ಬಾಡಿಗೆಗೆ ಇದ್ದ ವಿಷಯ ಅವನಿಗೆ ಗೊತ್ತಾಗಿ ಪದೇ ಪದೇ ಕಾಗದ ಬರೀಲಿಕ್ಕೆ ಶುರುಮಾಡಿದ. ಮನೆಗೆ ಬರ್ಲಿಕ್ಕೆ ಅವ್ನಿಗೆ ಧೈರ್ಯ ಇರ್ಲಿಲ್ಲ. ನನ್ನ ಗಂಡನಿಗೆ ಹೆದರ್ತಿದ್ದ. ಒಮ್ಮೆ ಅವಳು ಕೆಲ್ಸ ಮಾಡ್ತಿದ್ದ ಶಾಲೆಗೂ ಹೋಗಿ ಅಲ್ಲಿ ಗಲಾಟೆ ಮಾಡಿದ್ನಂತೆ, ಮಕ್ಕಳನ್ನು ಕೊಡು ಅಂತ. ಈ ನಿನ್ನಮ್ಮ ಗಟ್ಟಿಗಳು. ಕೊಡುದಿಲ್ಲ ಅಂದಿದ್ದಾಳೆ. ಅಷ್ಟಕ್ಕೇ ಅವ್ನು ಊರೆಲ್ಲ ಕಥೆ ಹಬ್ಬಿಸಿದ್ದಾನೆ, ನಿನ್ನಮ್ಮ ಸೂಳೆ. ಯಾರಿಗೋ ಹುಟ್ಟಿದ ಮಕ್ಕಳನ್ನು ತನ್ನ ತಲೆಗೆ ಕಟ್ಲಿಕ್ಕೆ ನೋಡಿದ್ದಾಳೆ ಅಂತೆಲ್ಲ ಸಾರಿದ. ಆಗಲೇ ಲಚ್ಚಮ್ಮನೂ ಯಾವುದೋ ತಿಳಿಯದ ಕಾಯಿಲೆ ಬಂದು ತೀರಿಕೊಂಡ್ರು. ಊರಲ್ಲಿ ನಿನ್ನಜ್ಜಿಯೂ ತೀರಿದರು. ಎಲ್ಲ ಒಂದರ ಮೇಲೆ ಒಂದು ಪೆಟ್ಟು ಬಿದ್ದಾಗ ಹರಿಣಿ ಕಂಗಾಲಾದ್ಲು. ಆಗ ನಿಂಗೆ ಒಂದೂವರೆ ವರ್ಷ. ಆಗಲೇ ಅವ್ಳು ಒಂಥರಾ ಬಿಸಿ ಮಾತಾಡ್ಲಿಕ್ಕೆ ಶುರು ಮಾಡಿದ್ದು. ಅಷ್ಟಕ್ಕೇ ಅವ್ಳನ್ನು ಶಾಲೆಯ ಕೆಲಸದಿಂದಲೂ ತೆಗೆದುಹಾಕಿದ್ರು. ಮತ್ತಷ್ಟು ತಲೆಕೆಟ್ಟಿತು.

ಆಗೆಲ್ಲ ನಿನ್ನನ್ನು ನಾನೇ ನೋಡಿಕೊಂಡಿದ್ದೆ. ಅಮ್ಮನನ್ನು ನಳಿನಿ ಮತ್ತು ಸುಮುಖ್ ಜೋಪಾನ ಮಾಡಿದ್ರು. ಅವಳಿಗೇನಾದ್ರೂ ಆದ್ರೆ ನಿನ್ನನ್ನು ನಾನೇ ಸಾಕಬೇಕೂಂತಲೂ ಇದ್ದೆ ಮಾರಾಯ್ತಿ. ಅಷ್ಟರಲ್ಲೇ, ನಿಂಗೆ ನಾಲ್ಕು ವರ್ಷ ಆಗುವ ಹೊತ್ತಿಗೆ ಹರಿಣಿ ಉಷಾರಾದ್ಲು. ಬೇರೆ ಊರಿಗೆ ಹೊರಟೇಹೋದ್ಲು. ಎಲ್ಲಿ ಏನು ಅಂತ ನಂಗೆ ಗೊತ್ತಾಗ್ಲೇ ಇಲ್ಲ. ಮತ್ತೆ ನೀವು ಇಲ್ಲಿಗೆ ಬಂದದ್ದು ನೀನು ಬಿ.ಎಸ್ಸಿ. ಸೇರಿದಾಗ. ನಡುವೆ ಕೆಲವಾರು ವರ್ಷ ನಳಿನಿ ನೇಹಾಳನ್ನು ಕಟ್ಟಿಕೊಂಡು ನಿಮ್ಮೊಟ್ಟಿಗೇ ಇದ್ಲಲ್ಲ. ಅದು ನಿಮ್ಮಿಬ್ರ ಅದೃಷ್ಟ. ನೀನು ಮತ್ತು ನೇಹಾ ಇಷ್ಟು ಗಾಢ ಸ್ನೇಹಿತೆಯರಾಗ್ಲಿಕ್ಕೆ ನಳಿನಿಯೇ ಕಾರಣ. ನಳಿನಿ ಸುಮುಖ್ ದಂಪತಿ ದೇವತೆಗಳ ಹಾಗೆ, ಏನಂತೀ?’

‘ಹ್ಮ್’ಗುಟ್ಟುತ್ತಾ ನಳಿನಿ ಆಂಟಿಯ ಗೇಟಿನ ಮುಂದೆ ನಿಂತೆ. ಜಾಜಿ ಚಪ್ಪರದಡಿಯಲ್ಲಿ ಹೊಂಗನಸು ಹೆಣೆಯುತ್ತಲೋ ಹೆಕ್ಕುತ್ತಲೋ ಸುಳಿದಾಡುತ್ತಿದ್ದ ನೇಹಾ ಗೇಟಿಗೆ ಓಡಿ ಬಂದವಳು ಸರೋಜಾಂಟಿಯನ್ನು ಕಂಡು ಗೇಟಿನಾಚೆಯೇ ನಿಂತಳು. ಸರೋಜಾಂಟಿ ಗೇಟ್ ದೂಡಿ ಒಳಹೋದರು, ನಳಿನಿ ಆಂಟಿಗೆ ನಾಳೆ ಸಂಜೆಯ ಕಾರ್ಯಕ್ರಮದ ವಿವರ ಒಪ್ಪಿಸಲು. ನೇಹಾಳಿಗೆ ನನ್ನ ಕಥನ ಕತ್ತಲಾಗುವವರೆಗೂ ಸಾಗಿತು ಜಾಜಿ ಚಪ್ಪರದೊಳಗೆ.

Monday, 28 March, 2011

ಸುಮ್ಮನೆ ನೋಡಿದಾಗ...೧೯

ಬೆಳಿಗ್ಗೆ ನೇಹಾ ಮತ್ತು ನಾನು ಏಳುವ ಹೊತ್ತಿಗೆ ಅಮ್ಮ ಹೊರಡುವ ತಯಾರಿಯಲ್ಲಿದ್ದರು. ಸುಮುಖ್ ಅಂಕಲ್ ಏನೋ ಗಂಭೀರ ಯೋಚನೆಯಲ್ಲಿದ್ದರು. ನಳಿನಿ ಅಂಟಿ ಅಡುಗೆಮನೆಯಲ್ಲಿ ಅಮ್ಮನನ್ನು ತಿಂಡಿ ಮುಗಿಸಿಯೇ ಹೋಗೆನ್ನುವ ಹುನ್ನಾರದಲ್ಲಿ ಕಟ್ಟುತ್ತಿದ್ದರು. ಹಾಲಿನವಳು ಹೊರಬಾಗಿಲಲ್ಲಿ ಕರೆದಾಗ ಆಂಟಿ ಓಡಿದರು; ನಮ್ಮನೆಗೂ ಅವಳೇ ಹಾಲು ತರುವವಳಾದ್ದರಿಂದ ನಮ್ಮ ಪಾಲಿನ ಹಾಲನ್ನೂ ಇಲ್ಲೇ ತೆಗೆದುಕೊಂಡರು ಆಂಟಿ. ಅಲ್ಲಿಗೆ ಒಂದು ನೆಪ ನಿವಾರಣೆಯಾಯ್ತು. ತಿಂಡಿಯ ತಯಾರಿಯಲ್ಲಿದ್ದ ನಳಿನಿ ಅಂಟಿಗೆ ಸಹಾಯಕ್ಕೆಂದು ಅಮ್ಮ ಇದ್ದ ಕಾರಣ ನೇಹಾ ಮತ್ತು ನಾನು ಮತ್ತೊಮ್ಮೆ ಕೋಣೆ ಸೇರುವುದರಲ್ಲಿದ್ದೆವು. ಆಗಲೇ ಸುಮುಖ್ ಅಂಕಲ್ ನಮ್ಮನ್ನು ಕರೆದರು, ‘ಇಬ್ಬರೂ ಇಲ್ಲಿ ಬನ್ನಿ.’

ನಿನ್ನೆ ರಾತ್ರೆಗಿಂತಲೂ ಸುಮುಖ್ ಅಂಕಲ್ ಗಂಭೀರವಾಗಿದ್ದರು. ಏನೋ ಒಳಕಾರಣ ಇಲ್ಲದೆ ಇಷ್ಟು ಗಂಭೀರವಾಗಿ ಇರುವುದು ಅವರ ಸ್ವಭಾವವಲ್ಲ. ಯಾವುದೋ ಹುಳ ಅವರ ತಲೆ ಕೊರೆಯುತ್ತಿರಬೇಕು. ಅದನ್ನು ನಮ್ಮ ಮುಂದೆ ಬಿಚ್ಚಿಡಬಹುದಾ? ಇಲ್ಲವಾ? ಯಾವುದೇ ಊಹೆಗೂ ಹೋಗದೆ ಅಂಕಲ್ ಮುಂದಿನ ಸೋಫಾದಲ್ಲಿ ಕೂತೆವು.

ನಮ್ಮಿಬ್ಬರಿಗೂ ಕಾಫಿ ಲೋಟ ಕೊಡುತ್ತಾ ನಳಿನಿ ಆಂಟಿ ಮೆಲ್ಲಗೆ ಕಣ್ಣು ಮಿಟುಕಿಸಿ, ‘ಬಿ ರೆಡಿ’ ಅಂದರು. ನೋಟಗಳ ವಿನಿಮಯವಾಗಿ ಭುಜಗಳು ಗಾಳಿಯಲ್ಲಿ ಮೇಲೆಕೆಳಗೆ ಏರಿಳಿದು ನಿಂತವು.

‘ನಿಮ್ಮ ಕಾಲೇಜ್ ಇನ್ನೇನು ಮುಗ್ದಾಯ್ತು ಅಂತಲೇ ಹೇಳ್ಬಹುದು. ಮುಂದೇನ್ ಮಾಡ್ತೀರಿ?’
‘ನಾನು ಎಮ್.ಎಸ್ಸಿ. ಮಾಡ್ತೇನೆ ಅಂಕಲ್. ಸಾಧ್ಯ ಆದ್ರೆ ರೀಸರ್ಚ್. ಇಲ್ಲದಿದ್ರೆ ಯಾವುದಾದ್ರೂ ಒಳ್ಳೇ ಕಾಲೇಜಲ್ಲಿ ಟೀಚಿಂಗ್...’ ಯಾವುದೇ ತಡವಿಲ್ಲದೆ ಹೇಳಿದೆ.
‘ನಾನೇನೂ ಯೋಚನೆ ಮಾಡ್ಲೇ ಇಲ್ಲ ಪಪ್ಪಾ. ನೀವಿದ್ದೀರಲ್ಲ, ನನ್ನ ದಾರಿ ತೋರಿಸಿಕೊಡ್ಲಿಕ್ಕೆ...’ ನೇಹಾ ಮುದ್ದುಗರೆದಳು.
‘ನೀನು ಎಮ್.ಎಸ್ಸಿ. ಮಾಡ್ಲಿಕ್ಕೆ ಅಪ್ಪಣೆ ಕೊಟ್ಟವರು ಯಾರು? ಯಾರನ್ನು ಕೇಳಿ ಅದನ್ನು ಡಿಸೈಡ್ ಮಾಡಿದ್ದೀ?’ ಅಮ್ಮನ ಸ್ವರ ಅಡುಗೆಮನೆಯಿಂದಲೇ ಗುಡುಗಿತು.
‘ನೀವು ಸುಮ್ನಿರಿ ಹರಿಣಿ. ಮಕ್ಕಳ ಅಭಿಪ್ರಾಯ ಏನೂಂತ ನೋಡ್ಬೇಕು ಮೊದ್ಲು. ನಂತ್ರ ನಮ್ಮ ಯೋಚನೆಗಳನ್ನು ಅವ್ರ ತಲೆಗೆ ತುಂಬಿಸುವಾ. ಅಲ್ಲಿ ಜಾಗ ಉಂಟಾ ಇಲ್ವಾ ನೋಡ್ಬೇಕಲ್ವಾ? ನೀವು ತಲೆಕೆಡಿಸ್ಕೊಳ್ಬೇಡಿ. ನಾನು ನೋಡಿಕೊಳ್ತೇನೆ, ಆಯ್ತಾ?’ ಅಂಕಲ್ ಅಮ್ಮನಿಗೆ ಭರವಸೆಯಿತ್ತರು. ನಮ್ಮನ್ನು ನೋಡ್ತಾ, ‘ಶಿಶಿರಾ, ನೀನು ಎಮ್.ಎಸ್ಸಿ. ಮಾಡುದಾದ್ರೆ ಮಾಡು. ನನ್ನ ಸಪೋರ್ಟ್ ನಿಂಗೇನೇ. ನೇಹಾ, ನೀನು ನನ್ನ ಮಾತು ಕೇಳುವವಳಾದ್ರೆ ಇದೇ ವರ್ಷ ನಿಂಗೆ ಮದುವೆ ಮಾಡುದಾ ಅಥವಾ ಯಾವುದಾದ್ರೂ ಕೆಲಸಕ್ಕೆ ಹೋಗ್ತೀಯಾ?’
‘ಕೆಲ್ಸ ಎಲ್ಲ ಬೇಡ ಪಪ್ಪಾ. ಒಂದು ವರ್ಷ ಮನೆಯಲ್ಲೇ ಇರ್ತೇನೆ, ಆಯ್ತಾ?’
‘ಕೆಲ್ಸ ಬೇಡ ಅಂತಾದ್ರೆ ಮದುವೆ. ಒಳ್ಳೇ ಹುಡುಗ ಇದ್ದಾನೆ. ಏನ್ ಹೇಳ್ತೀ?’
‘ನಂಗೊತ್ತಿಲ್ಲ ಪಪ್ಪಾ. ಅಮ್ಮ ಮತ್ತು ನೀವು ಹೇಳಿದ ಹಾಗೆ...’
‘ಆಲ್ ರೈಟ್. ಹಾಗಾದ್ರೆ ನನ್ನದೇ ಡಿಸಿಷನ್. ಗುಡ್. ನೀವೇನ್ ಹೇಳ್ತೀರಿ ಹರಿಣಿ?’ ಸಂಭಾಷಣೆಯ ಮಧ್ಯೆ ಯಾವಾಗಲೋ ನಡುಮನೆಗೆ ಬಂದು ನಿಂತ ಅಮ್ಮನ ಕಡೆ ನೋಟ.
‘ನೇಹಾ ನಿಮ್ಮದೇ ಮಗಳು. ನನ್ನ ಅಭಿಪ್ರಾಯ ಏನೂ ಇಲ್ಲ ಇಲ್ಲಿ. ಹುಡುಗ ಯಾರೂಂತ ಕೇಳ್ತೇನೆ, ಅಷ್ಟೇ...’
‘ಹುಡುಗ ಬರುವಾಗ ನಿಮ್ಗೆಲ್ಲಾ ಗೊತ್ತಾಗ್ತದೆ. ಅಷ್ಟೊತ್ತು ಸಸ್ಪೆನ್ಸ್.’

ಇಬ್ಬರೂ ಸೋಫಾದಿಂದ ಏಳುವಾಗಲೇ ಅಮ್ಮ ಬಾಗಿಲ ಹತ್ತಿರ ಹೋಗಿ ನಿಂತರು. ‘ಹೋಗುವಾ ಮನೆಗೆ, ಹೊರಡು’
‘ಸಾಕು ಮಾರಾಯ್ತಿ ದೊಡ್ಡಸ್ತಿಕೆ. ತಿಂಡಿ ತಿಂದೇ ಹೋಗಿ...’ ನಳಿನಿ ಆಂಟಿಯ ಒತ್ತಾಸೆ ಕೊನೆಗೂ ಪರಿಣಾಮ ಬೀರಿತು. ಆಂಟಿಯ ಇಷ್ಟದ ‘ಪುಂಡಿಗಟ್ಟಿ’ಯನ್ನು ತಿಂದು ಮೊಸರು ಹಾಲು ಹೊತ್ತ ಡಬ್ಬಗಳನ್ನು ಕಟ್ಟಿಕೊಂಡು ಹೊರಟೆವು.
‘ಊಟಕ್ಕೇ ಇಲ್ಲಿಗೆ ಬನ್ನಿ...’ ನಳಿನಿ ಅಂಟಿಯ ಮತ್ತೊಂದು ಬಾಣ, ಗುರಿ ತಪ್ಪಿತು. ಮೂರೂವರೆಗೆ ಇಲ್ಲಿಗೆ ಬಂದು ಸೇರುವ ಆಶ್ವಾಸನೆಯ ಜೊತೆಗೆ ಮನೆಯ ಗೇಟ್ ದಾಟಿದೆವು.

ಸಂಜೆ ಮೂರೂವರೆಗೆ ಸರಿಯಾಗಿಯೇ ನಳಿನಿ ಆಂಟಿಯ ಮನೆ ಸೇರಿದ್ದಾಯ್ತು. ವಾಂಗೀಭಾತ್, ಕ್ಯಾರೆಟ್ ಹಲ್ವ ಕಾಯುತ್ತಿದ್ದವು. ಗೆಣಸಿನ ಪೋಡಿ (ಭಜಿ!!) ತಯಾರಾಗುತ್ತಿತ್ತು ಬಾಗಿಲ ಕರೆಗಂಟೆ ಸದ್ದಾದಾಗ. ಸುಮುಖ್ ಅಂಕಲ್ ಬಾಗಿಲು ತೆರೆದು ಸರೋಜಾಂಟಿ ಮತ್ತು ಹರ್ಷಣ್ಣನನ್ನು ಒಳಗೆ ಕರೆದರು. ಸರೋಜಾಂಟಿಯ ಕೈಯಲ್ಲಿ ಹೂ ಹಣ್ಣುಗಳ ಪುಟ್ಟ ಬುಟ್ಟಿ. ನೇಹಾಳ ಮುಖ ಕೆಂಪೇರಿತು.

ಸಾಮಾನ್ಯ ಮಾತುಗಳಾದ ಮೇಲೆ, ಕಾಫಿ-ತಿಂಡಿ. ಅದೂ ಲೋಕಾಭಿರಾಮದಲ್ಲೇ ಮುಗಿದಾಗ ನನ್ನೊಳಗೆ ಏನೋ ತಳಮಳ. ಅನಾವಶ್ಯಕ ಕಿರಿಕಿರಿ ಭಾವನೆ. ತಟ್ಟೆ ಲೋಟಗಳನ್ನೆತ್ತಿಕೊಂಡು ನಳಿನಿ ಅಂಟಿ ಹೊರಟಾಗ ನೇಹಾ ಮತ್ತು ನಾನು ಎತ್ತಿಕೊಂಡೆವು. ಇಬ್ಬರೂ ಅಡುಗೆಮನೆಗೆ ಹೋಗಿದ್ದೇವಷ್ಟೇ, ಸರೋಜ ಆಂಟಿಯ ಗಂಟಲು ಕೆಮ್ಮಿ ಸ್ವರ ಸರಿಮಾಡಿಕೊಂಡಿತು. ನಮ್ಮಿಬ್ಬರಲ್ಲೂ ನಡುಕ, ವಿನಾಕಾರಣ.

ಯಾವುದೇ ಪೀಠಿಕೆಯಿಲ್ಲದೆ ಸರೋಜಾಂಟಿ ನೇರವಾಗಿ ಪ್ರಸ್ತಾಪವಿಟ್ಟರು, ‘ಈ ಇಬ್ಬರಲ್ಲಿ ಒಬ್ಬಳು ನನ್ನ ಸೊಸೆ. ಯಾರಾಗಬಹುದೂಂತ ನೀವೇ ನಿರ್ಧರಿಸಿ ಹೇಳಿ...’
ನಡುಮನೆಯಲ್ಲಿ ಯಾವ ಮುಖದಲ್ಲಿ ಯಾವ ಭಾವವಿತ್ತೋ ಗೊತ್ತಿಲ್ಲ. ನಮ್ಮಿಬ್ಬರ ಮುಖ ಎಲ್ಲಾ ಬಣ್ಣಗಳನ್ನೂ ಕಳೆದುಕೊಂಡವು.
ಅಮ್ಮ ನನ್ನ ಹೆಸರೇ ಹೇಳಿದರೆ? ದೇವರೇ....

Monday, 21 March, 2011

ಸುಮ್ಮನೆ ನೋಡಿದಾಗ...೧೮

ಸರೋಜ ಆಂಟಿ, ಹರ್ಷಣ್ಣ, ನಳಿನಿ ಆಂಟಿ, ಸುಮುಖ್ ಅಂಕಲ್, ಅಮ್ಮ- ಎಲ್ಲರೂ ನಡುಮನೆಯ ಸೋಫಾದಲ್ಲೇ ಕೂತರು. ರೂಮೊಳಗೆ ಹೋಗುತ್ತಿದ್ದ ನಮ್ಮನ್ನು ಸರೋಜ ಆಂಟಿ ಕರೆದರು, ‘ಇಲ್ಲೇ ಬನ್ನಿ ಹುಡುಗ್ಯರೇ. ನೀವೂ ಇಲ್ಲಿರಿ’.

ಮತ್ತೆ ಅವರೇ ಅಮ್ಮನನ್ನು ನೋಡ್ತಾ, ‘ವಿನ್ಯಾಸ್ ತೀರಿಹೋಗಿದ್ದಾನೆ. ಇವತ್ತಿಗೆ ಮೂರನೇ ದಿನ, ನಿಂಗೆ ಗೊತ್ತಿರಬೇಕಲ್ಲ ಹರಿಣಿ?’
‘ಹೌದಕ್ಕ, ನಂಗೆ ಗೊತ್ತಾಗಿದೆ; ನಿನ್ನೆ ಸಂಜೆ ಗೊತ್ತಾಗಿದೆ.’
‘ಸುಮುಖ ರಾಯರೇ, ನಳಿನಿ, ನಿಮಗೆ ಈ ಸುದ್ದಿ ಗೊತ್ತುಂಟಾ? ಮಕ್ಕಳಿಗೆ ಹೇಳಿದ್ದೀರಾ?’
ಆ ಕ್ಷಣ ನನಗನಿಸಿತು, ಈ ಸುದ್ದಿಯಲ್ಲಿ ಇವರಿಗೇಕೆ ಅಷ್ಟು ಆಸಕ್ತಿ?
ಗೆಳತಿಯರು ಮುಖ ಮುಖ ನೋಡಿಕೊಳ್ತಿದ್ದಾಗ ಸುಮುಖ್ ಅಂಕಲ್ ನಮ್ಮ ಪರವಾಗಿ ಮಾತೆತ್ತಿದರು, ‘ಸರೋಜಕ್ಕ, ನಮಗೆಲ್ಲರಿಗೂ ಈ ವಿಷಯ ಗೊತ್ತುಂಟು. ನಮಗೆ ಇವತ್ತೇ ಗೊತ್ತಾದದ್ದು. ಮಕ್ಕಳಿಗೆ ವಿನ್ಯಾಸ್ ಯಾರೂಂತ ನಿನ್ನೆಯಷ್ಟೇ ಗೊತ್ತಾಗಿದೆ, ಇವತ್ತು ಅವನು ಸತ್ತ ಸುದ್ದಿ ಗೊತ್ತಾಗಿದೆ. ಇದ್ರಲ್ಲಿ ಅವರನ್ನು ಎಳೆದುತರುವ ಅಗತ್ಯ ನಂಗೆ ಕಾಣುದಿಲ್ಲ. ಈಗ ಯಾವ ವಿಷಯ ಮಾತಾಡ್ಲಿಕ್ಕೆ ಬಂದಿದ್ದೀರಿ? ವಿನ್ಯಾಸನ ವಿಷಯ ಆಗಿದ್ರೆ, ಅದ್ರಲ್ಲಿ ನಮಗ್ಯಾರಿಗೂ ಯಾವುದೇ ಆಸಕ್ತಿ ಇಲ್ಲಕ್ಕ, ಕ್ಷಮಿಸಿ.’

ಸರೋಜ ಅಂಟಿಯ ಮುಖ ಸಪ್ಪಗಾಯ್ತು. ಒಂದೇ ಕ್ಷಣ. ಚೇತರಿಸಿಕೊಂಡರು.
‘ನೀವು ಕ್ಷಮಿಸಿ ರಾಯರೇ. ಅವನು ನನ್ನ ಸೋದರ ದಾಯಾದಿಯಿರಬಹುದು. ಆದರೆ ಹೋಗಿಬರುವ ನಂಟಸ್ತಿಕೆ ಅವನೇನೂ ಉಳಿಸಿಕೊಂಡಿರಲಿಲ್ಲ. ಅವನ ವಿಷಯ ಎತ್ತಿ ನಿಮಗೆಲ್ಲ ನೋವು ಕೊಡುವ ಉದ್ದೇಶ ಇಲ್ಲ, ಬಿಡಿ. ಅವನ ಸುದ್ದಿಯೇ ಬೇಡ. ಏನ್ ಹೇಳ್ತಿ ಹರಿಣಿ?’
‘ನಿನ್ನೆ ಇವತ್ತು ನನ್ನ ತಲೆ ಮನಸ್ಸು ಗೋಜಲಾಗಿದ್ದದ್ದು ನಿಜ. ಅವನ ಸಾವನ್ನು ಮಕ್ಕಳಿಗೆ ಹೇಳ್ಬೇಕೋ ಬೇಡ್ವೋ, ಹೇಗೆ ಹೇಳುದು, ಅಂತೆಲ್ಲ ಯೋಚಿಸಿ ತಲೆಕೆಟ್ಟಿತ್ತು ಹೊರತು ಅವನ ಸಾವಿಗಾಗಿ ಅಲ್ಲ. ಯಾವತ್ತು ಅವನು ನನಗೆ ಆಸರೆಯಾಗಿ ನಿಲ್ಲದೆ ಸಂಬಂಧ ಕಡಿದುಕೊಂಡನೋ ಅಲ್ಲಿಗೇ ಅವನ ಋಣ ಹಂಗು ಎರಡೂ ತೀರಿತು ಅಂದುಕೊಂಡಿದ್ದೇನೆ. ಇಷ್ಟಕ್ಕೂ ನಮಗೂ ಅವನಿಗೂ ಯಾವ ಸಂಬಂಧ? ಅವನೇನೂ ನನ್ನನ್ನು ಮದುವೆ ಆಗಿರ್ಲಿಲ್ಲ. ಬಾಂಧವ್ಯ ಇಲ್ಲದಲ್ಲಿ ಯಾವ ಬಂಧನ ಹೇಳಿ ಸರೋಜಕ್ಕ?’ ಯಾವುದೇ ಭಾವನೆಗಳಿಲ್ಲದೆ ತಣ್ಣಗೆ ಅಮ್ಮ ಹೇಳಿದ ಮಾತುಗಳು ನನ್ನ ಬೆನ್ನಹುರಿಯಲ್ಲಿ ಛಳಿ ಹುಟ್ಟಿಸಿದವು. ಅಮ್ಮನಲ್ಲಿ ಇಷ್ಟೂ ನಿರ್ಭಾವುಕತೆ ಸಾಧ್ಯವಾ?

‘ಅಮ್ಮ, ವಿನ್ಯಾಸ್ ಮಾಮನ ಸುದ್ದಿ ಸಾಕು. ಅವನ ಮುಖವನ್ನೇ ನೋಡಿರದವರೇ ಇಲ್ಲಿ ಎಲ್ಲರೂ, ನಿನ್ನನ್ನು ಚಿಕ್ಕತ್ತೆಯನ್ನು ಬಿಟ್ರೆ. ನೀನವನನ್ನು ಕೊನೆಯ ಸಾರಿ ನೋಡಿದ್ದು ನಿನ್ನ ಮದುವೆಯಲ್ಲಿ. ಅಷ್ಟು ಹಿಂದಿನ ಸುದ್ದಿಗಳಿಗೆಲ್ಲ ಈಗ ಮನ್ನಣೆ ಬೇಕಾಗಿಲ್ಲ. ಇಷ್ಟನ್ನೇ ಮಾತಾಡ್ಲಿಕ್ಕೆ ಇಲ್ಲಿ ಬರ್ಬೇಕು ಅಂತ ನೀನು ಹೇಳಿದ್ದಾದ್ರೆ ಮನೆಗೆ ಹೋಗುವಾ. ಸಾಕು ಮಾತು.’ ಹರ್ಷಣ್ಣ ಗಡುಸಾಗಿಯೇ ಹೇಳಿದ.

‘ಇದಷ್ಟೇ ಅಲ್ಲ ಮಾರಾಯ. ನಂಗೆ ಬೇರೆ ಕೆಲ್ಸ ಉಂಟು. ಆದ್ರೆ ಅದಕ್ಕೆ ಈಗ ಸಂದರ್ಭ ಅಲ್ಲ. ನಾಳೆ ಆದಿತ್ಯವಾರ. ನೀವೆಲ್ಲ ಪುರುಸೊತ್ತು ಮಾಡಿಕೊಂಡು ಒಂದೆರಡು ಗಂಟೆ ಹೊತ್ತು ನಮಗಾಗಿ ಕೊಡಬಹುದಾ? ನಿಮ್ಮೆಲ್ಲರ ಹತ್ರ ಮಾತಾಡ್ಲಿಕ್ಕುಂಟು ನಂಗೆ. ಅದನ್ನು ಕೇಳ್ಲಿಕ್ಕೇ ಈ ರಾತ್ರೆಯೇ ಬಂದೆ. ಏನು ರಾಯರೇ? ಪುರುಸೊತ್ತು ಉಂಟಾ ಹೇಗೆ?’

‘ಧಾರಾಳ ಬನ್ನಿ ಸರೋಜಕ್ಕ. ಎಷ್ಟೊತ್ತಿಗೆ ಬರ್ತೀರಿ? ವಿಷ್ಯ ಏನೂಂತ ಕೇಳ್ಬಹುದಾ?’
‘ಸಂಜೆ ನಾಲ್ಕು ಗಂಟೆಗೆ ಬರ್ತೇವೆ. ವಿಷ್ಯ ನಾಳೆಯೇ ಹೇಳ್ತೇನೆ. ಗಡಿಬಿಡಿ ಏನಿಲ್ಲ. ಎಲ್ಲ ನೆಮ್ಮದಿಯಿಂದ ನಿದ್ದೆ ಮಾಡಿ. ನಾವೀಗ ಹೊರಡ್ತೇವೆ. ಗುಡ್ ನೈಟ್ ಎಲ್ರಿಗೂ...’
‘ಎಷ್ಟೋ ಸಮಯದ ನಂತ್ರ ನಮ್ಮನೆಗೆ ಬಂದಿದ್ದೀರಿ. ಹಾಗೇ ಹೋಗುವ ಹಾಗಿಲ್ಲ ಸರೋಜಕ್ಕ. ಒಂದ್ಲೋಟ ಹಾಲಾದ್ರೂ ಕುಡೀರಿ. ತರ್ತೇನೆ, ಈಗ ಬಂದೆ...’ ನಳಿನಿ ಆಂಟಿ ಅಡುಗೆಮನೆಗೆ ಓಡಿದರು. ಹಿಂದೆಯೇ ನೇಹಾ, ಅವಳ ಹಿಂದೆ ನಾನು. ಎರಡೇ ನಿಮಿಷಗಳಲ್ಲಿ ಎರಡು ಲೋಟ ನಸುಬೆಚ್ಚಗಿನ ಬಾದಾಮಿ ಹಾಲು ನಡುಮನೆಯಲ್ಲಿ ಅತಿಥಿಗಳ ಕೈಯಲ್ಲಿತ್ತು. ಮತ್ತೆರಡು ನಿಮಿಷಗಳಲ್ಲಿ ಉಳಿದವರ ಕೈಗಳಲ್ಲೂ ಒಂದೊಂದು ಲೋಟ. ಸುಮ್ಮನೇ ಕಾಡುಹರಟೆಯ ಹತ್ತುನಿಮಿಷಗಳನ್ನು ಹಾಲಿನ ನೆಪದಲ್ಲಿ ಕಳೆದು ಸರೋಜಾಂಟಿ ಹರ್ಷಣ್ಣ ಹೊರಟರು, ಮರುದಿನ ಸಂಜೆ ಮತ್ತೆ ಬರುವ ಒಸಗೆಯ ಜೊತೆಗೆ.

‘ನೀವಿಲ್ಲಿಗೆ ಬರುದಲ್ವಾ ಸರೋಜಕ್ಕ. ನಾನು ಇರಬೇಕಾಗಿಲ್ವಲ್ಲ’ ಮೆಲ್ಲ ಅಮ್ಮ ಹೇಳಿದ್ದು ಸರೋಜಕ್ಕನ ಗಮನ ಸೆಳೆಯದೇ ಇರಲಿಲ್ಲ.
‘ನೀನೂ ನಿನ್ನ ಮಗಳೂ ಇರ್ಲೇ ಬೇಕು ಮಾರಾಯ್ತಿ. ತಪ್ಪಿಸ್ಬೇಡಿ. ಈಗ ಹೊರಡ್ತೇವೆ.’ ಅನ್ನುತ್ತಾ ಮೆಟ್ಟಲಿಳಿದು ಅಂಗಳ ದಾಟಿ ಗೇಟ್ ದಾಟಿದರು ಹರ್ಷಣ್ಣನ ಕಣ್ಣುಗಳು ಬಾಗಿಲಲ್ಲಿ ಕೀಲಿಸಿದ್ದವೇನೋ. ಅರ್ಧ ಹಿನ್ನಡೆ ಹಾಕುತ್ತಿದ್ದವ ತನ್ನಮ್ಮನಿಗೆ ಢಿಕ್ಕಿ ಹೊಡೆದ. ‘ನೋಡಿ ನಡಿ ಮಾರಾಯ’ ಅಂತ ಬೆನ್ನಿಗೊಂದು ಗುದ್ದಿದರು ಆಂಟಿ. ನಗುತ್ತಾ ಅಮ್ಮನ ಹೆಗಲು ಬಳಸಿ ರಸ್ತೆಗಿಳಿದವನನ್ನೇ ಒಂದು ನೋಟ ಹಿಂಬಾಲಿಸಿದ್ದು ಯಾರ ದೃಷ್ಟಿಯಿಂದಲೂ ಮರೆಯಾಗಲಿಲ್ಲ. ನಗುತ್ತಾ ನಗಿಸುತ್ತಾ ನಾವೆಲ್ಲ ಮನೆಯೊಳಗೆ ಸೇರಿಕೊಂಡಾಗ ಆದಿತ್ಯವಾರ ಒಳಗೆ ಹೆಜ್ಜೆಯಿಡಲು ಹೊಸ್ತಿಲಲ್ಲೇ ಕೂತಿತ್ತು. ಅದನ್ನಲ್ಲೇ ಬಾಗಿಲು ಕಾಯಲು ಬಿಟ್ಟು ನಾವೆಲ್ಲ ಮೂರು ಕೋಣೆಗಳೊಳಗೆ ಸೇರಿಕೊಂಡೆವು. ಇನ್ನು ಹದಿನಾರು-ಹದಿನೇಳು ಗಂಟೆಗಳಲ್ಲಿ ಏನಾಗಬಹುದೆನ್ನುವ ಊಹೆಯಿದ್ದರೂ ನಿರೀಕ್ಷೆ ಅದನ್ನೂ ಮೀರಿ ಬೆಳೀತಿತ್ತು.

ನಾಳೆ ಸಂಜೆ ಯಾವಾಗಾದೀತು?

Monday, 7 March, 2011

ಸುಮ್ಮನೆ ನೋಡಿದಾಗ...೧೭

ಅಷ್ಟರಲ್ಲಾಗಲೇ ಅಮ್ಮನ ಮೂಡ್ ಸರಿಯಾಗಿತ್ತು (ಆಗದಿರಲು ಹೇಗೆ ಸಾಧ್ಯ? ಸುಮುಖ್ ಅಂಕಲ್, ನಳಿನಿ ಆಂಟಿ ಇದ್ದರಲ್ಲ; ಇಬ್ಬರು ಜಾದೂಗಾರರು!). ಅವರಿಬ್ಬರ ವಕಾಲತ್ತಿನಂತೆ ಅಂದು ರಾತ್ರಿಯ ಊಟ ನಮ್ಮೂರಿನ ಒಂದೇ ಒಂದು ಭವ್ಯ ಹೋಟೆಲ್- ‘ಶ್ಯಾಮಿಲಿ’ಯಲ್ಲಿ. ಎರಡು ಜೋಡಿ ಹೃದಯಗಳ ಜೊತೆಗೆ ಎರಡು ಒಂಟಿ ಹೃದಯಗಳು, ಅವುಗಳಲ್ಲೊಂದು ನೋವಿನಲ್ಲಿ ಮತ್ತೊಂದು ನಲಿವಿನಲ್ಲಿ ಅದ್ದಿದ್ದವು. ಊಟ ಮುಗಿಸಿ ಹೋಟೆಲಿಂದ ಹೊರಗೆ ಬರುತ್ತಿದ್ದ ಹಾಗೆಯೇ ನನಗೆ ಒಳಗೊಳಗೇ ದಿಗಿಲಾಗತೊಡಗಿತು. ಮನೆಗೆ ಹೋದ ಮೇಲೆ ನಾವಿಬ್ಬರೇ. ಈ ಅಮ್ಮನನ್ನು ಹೇಗೆ ಸುಧಾರಿಸಿಕೊಂಡೇನು? ಪೇಟೆಯಿಂದ ಒಂದು ಕಿಲೋಮೀಟರ್ ದೂರ ನಳಿನಿ ಅಂಟಿ ಮನೆ. ಅಲ್ಲಿಂದ ಅರ್ಧ ಕಿಲೋಮೀಟರ್ ನಮ್ಮನೆ. ‘ನಡೆದೇ ಹೋಗುವಾ, ತಿಂದದ್ದು ಕರಗ್ತದೆ’ ಅಂದರು ಸುಮುಖ್ ಅಂಕಲ್. ಒಂಬತ್ತು ಗಂಟೆಯ ನಿರ್ಜನ ರಸ್ತೆಯಲ್ಲಿ ಆರೂ ಜನ ಅಡ್ಡ ಸಾಲಿನಲ್ಲಿ ಸಾಗಿದೆವು.

ಮೊದಲಿಗೆ ಹರ್ಷಣ್ಣನ ಮನೆಗೆ ತಿರುಗುವ ರಸ್ತೆ. ಅಲ್ಲಿ ಕೆಲವು ನಿಮಿಷ ನಿಂತು ಮಾತು ಮುಗಿಸಿದರು ಅಂಕಲ್ ಮತ್ತು ಹರ್ಷಣ್ಣ. ನಾವು ಮಹಿಳೆಯರು ಮುಂದೆ ಸಾಗುತ್ತಿದ್ದರೆ ಗೆಳತಿಯರ ಎರಡು ಜೋಡಿ ಬೇರೆಬೇರೆಯಾಗಿತ್ತು. ನೇಹಾ ಮತ್ತು ನಾನು ಹಿಂದಿನಿಂದ ನಿಧಾನವಾಗಿ ಹೆಜ್ಜೆ ಅಳೆಯುತ್ತಿದ್ದಾಗ ಅಂಕಲ್ ನೇಹಾಳ ಬೆನ್ನಿಗೊಂದು ಹದವಾಗಿ ಗುದ್ದಿ, ‘ಒಳ್ಳೇ ಹುಡುಗ’ ಅಂದರು. ‘ಥ್ಯಾಂಕ್ಸ್ ಪಪ್ಪಾ’ ಉಲಿಯಿತು ಹಾಡುಹಕ್ಕಿ.

ಎರಡೇ ನಿಮಿಷ, ನೇಹಾ ಮನೆಯ ಗೇಟಿನೆದುರು ನಿಂತಿದ್ದೆವು. ನಾನು ನೇಹಾಳಿಗೆ ಕಣ್ಣು ಹೊಡೆದು ‘ಸ್ವೀಟ್ ಡ್ರೀಮ್ಸ್’ ಅನ್ನುವಾಗಲೇ ಸುಮುಖ್ ಅಂಕಲ್, ‘ಇವತ್ತು ಇಲ್ಲೇ ಇರಿ. ಕೆಲವೊಂದು ವಿಷಯಗಳನ್ನು ಮಾತಾಡಲೇ ಬೇಕು. ನಾಳೆ ಹೇಗೂ ಆದಿತ್ಯವಾರ. ಯಾರಿಗೂ ಯಾವ ಗಡಿಬಿಡಿಯೂ ಇಲ್ಲ. ಬನ್ನಿ ಒಳಗೆ’ ಎನ್ನುತ್ತಾ ಗೇಟ್ ತೆರೆದು ನಿಂತರು. ಅಮ್ಮನ ಕೈಹಿಡಿದು ನಳಿನಿ ಅಂಟಿ ಮತ್ತು ನನ್ನ ಕೈಹಿಡಿದು ನೇಹಾ ಎಳೆಯುತ್ತಿದ್ದರೆ ಅಮ್ಮ ಚಡಪಡಿಸುತ್ತಿರುವುದು ನನ್ನ ಗಮನಕ್ಕೆ ಬಂತು. ನಳಿನಿ ಅಂಟಿಯೂ ಇದನ್ನೇ ಕಂಡರೇನೋ, ‘ಬಾ ಮಾರಾಯ್ತಿ. ನಿನ್ನ ಮನೆ ಎಲ್ಲಿಗೂ ಹೋಗುದಿಲ್ಲ. ಆಗ ಹೊರಡುವ ಮೊದಲು ಸರಿಯಾಗಿ ಬೀಗ ಹಾಕಿದ್ದೀ, ನಾ ನೋಡಿದ್ದೇನೆ. ನಿನಗೂ ನಿನ್ನ ಮಗಳಿಗೂ ನಾಳೆ ಬೆಳಗ್ಗೆ ಹಲ್ಲುಜ್ಜಲಿಕ್ಕೆ ಮಾವಿನೆಲೆ, ಗೇರೆಲೆ ಬೇಕಾದಷ್ಟು ಇದ್ದಾವೆ. ಬ್ರಶ್ಷೇ ಬೇಕಾದ್ರೆ ನನ್ನತ್ರ ಹೊಸತ್ತು ಇದ್ದೀತು. ಸುಮ್ನೇ ಬಾ...’ ಅಂಕಲ್ ತೆರೆದಿಟ್ಟ ಬಾಗಿಲೂ ದಾಟಿ ಎಳೆದುಕೊಂಡೇ ಮನೆಯೊಳಗೆ ಹೋದರು. ನಾನಾಗಲೇ ನೇಹಾಳ ಕೋಣೆ ಸೇರಿಕೊಂಡೆ. ಇಬ್ಬರೂ ಬಾಗಿಲು ಓರೆ ಮಾಡಿ ಖುಷಿಯ ಕಿಲಿಕಿಲಿ ಎಬ್ಬಿಸಿದೆವು. ನಾನಿಲ್ಲಿ ರಾತ್ರಿ ಕಳೆಯದೆ ವರ್ಷವೇ ಕಳೆದಿರಬೇಕು. ಇವತ್ತು ಇಬ್ಬರಿಗೂ ನಿದ್ದೆಯೇ ಬರ್ಲಿಕ್ಕಿಲ್ಲ. ಓಹ್, ವಸಂತ್ ವಿಚಾರ ಇವಳಿಗೆ ಈಗಲೇ ಹೇಳುದೋ ಬೇಡವೋ? ಹೇಳುದಾದರೂ ಹೇಗೆ? ಎಲ್ಲಿಂದ ಶುರುಮಾಡುದು? ನನ್ನೊಳಗೆ ಗೊಂದಲ ಗೂಡುಕಟ್ಟತೊಡಗಿತು.

ನನ್ನ ಈ ಪ್ರಶ್ನೆಗಳಿಗೂ ಮೀರಿದ, ನನ್ನೊಳಗೆ ಆಳದಲ್ಲಿ ಕಾಡುತ್ತಿದ್ದ ಪ್ರಶ್ನೆಗಳಿಗೆ ಅಂದು ಅಲ್ಲಿ ಉತ್ತರ ಸಿಗುವುದಿದೆಯೆಂದು ಯಾವ ಹಲ್ಲಿಗೂ ಶಕುನ ಗೊತ್ತಿದ್ದಿರಲಾರದು. ನಾವೆಲ್ಲ ಸುಮ್ಮನೇ ಕಾಡುಹರಟೆಯಲ್ಲಿ ಒಂದರ್ಧ ಗಂಟೆ ಕಳೆದಿರಬಹುದು, ಬಾಗಿಲು ಟಕಟಕಿಸಿತು. ಅಂಕಲ್ ಬಾಗಿಲು ತೆರೆದಾಗ ಒಳಬಂದವರು ನಮ್ಮಲ್ಲಿ ಅಚ್ಚರಿಯನ್ನೇ ಮೂಡಿಸಿದರು. ನೇಹಾಳ ಕೆನ್ನೆಗಳು ರಂಗೇರಿದವು. ನಾನು ಮಿಶ್ರ ಭಾವದಲ್ಲಿದ್ದರೆ ಅಂಕಲ್, ಆಂಟಿ, ಅಮ್ಮ ಅಚ್ಚರಿಯ ಪರಿಧಿಯೊಳಗೆ ಕಳೆದುಹೋಗಿದ್ದರು.

‘ನೀವಿಲ್ಲೇ ಇರ್ತೀರಿ, ನಿಮ್ಮನೆಗೆ ಹೋಗಿರುದಿಲ್ಲ ಅಂತ ಅಮ್ಮ ಹೇಳಿದ್ದು ಸರಿಯೇ, ಚಿಕ್ಕತ್ತೇ. ನಿಮ್ಮೆಲ್ಲರ ಹತ್ರ ಒಟ್ಟಿಗೇ ಮಾತಾಡ್ಲಿಕ್ಕೆ ಒಳ್ಳೇದೇ ಆಯ್ತು. ಅದ್ಕೇ ನಾವಿಬ್ರೂ ಇಲ್ಲಿಗೇ ಮೊದ್ಲು ಬಂದದ್ದು. ಅಲ್ವಾ ಅಮ್ಮ.’- ಹರ್ಷಣ್ಣನ ದನಿಯಲ್ಲಿ ಸಂತಸದ ಜೊತೆಗೇ ಅಚ್ಚರಿಯೂ ಅವನಮ್ಮನ ಮೇಲೆ ಮೆಚ್ಚುಗೆಯೂ ಸೇರಿದ್ದವು. ಆದರೆ, ಇವರಿಗೇನಿರಬಹುದು ನಮ್ಮೆಲ್ಲರ ಹತ್ರ ಈ ರಾತ್ರಿಯಲ್ಲು ಮಾತಾಡುವಂಥ ವಿಷಯ? ಅಮ್ಮನ ಮುಖ ಯಾಕೆ ಪೆಚ್ಚಾಯ್ತು? ಹರ್ಷಣ್ಣನ ಅಮ್ಮ, ಸರೋಜ ಅಂಟಿಯ ಕಣ್ಣು ತಪ್ಪಿಸುತ್ತಿದ್ದಾರೆ ಅಮ್ಮ, ಯಾಕೆ? ನನ್ನ ಕುತೂಹಲದ ನೈದಿಲೆ ರಾತ್ರೆಯ ಕತ್ತಲಲ್ಲಿ ಮೆಲ್ಲನೆ ಕಣ್ತೆರೆಯಿತು. ಹೊಸದೇನೋ ತಿಳಿಯುತ್ತದೆನ್ನುವ ಉತ್ಸಾಹ ನನ್ನ ನಿದ್ದೆಯನ್ನೂ ಗೊಂದಲವನ್ನೂ ಒಟ್ಟಿಗೇ ಓಡಿಸಿತು.

Monday, 21 February, 2011

ಸುಮ್ಮನೆ ನೋಡಿದಾಗ...೧೬

ಬಾಗಿಲಲ್ಲಿ ನೆರಳು ಹಾದ ಹಾಗೆ ಅನ್ನಿಸಿ ಎದ್ದು ಬಂದರೆ ಒಮ್ಮೆಲೇ ಅಳಬೇಕೆನ್ನಿಸಿತು. ಹರ್ಷಣ್ಣ ನಿಂತಿದ್ದ.

ನನ್ನ ಮುಖ ಕಣ್ಣುಗಳ ಗಾಬರಿ ಅವನನ್ನು ತಟ್ಟಿತೆ? ನೇರವಾಗಿ ಒಳಗೆ ಬಂದವನು ಸುಮ್ಮನೇ ನನ್ನ ತಲೆ ನೇವರಿಸಿದ. ‘ಶ್ಶ್...!’
ಇವನಿಗೆ ಹೇಗೆ ಗೊತ್ತು ನನ್ನ ತಳಮಳ, ದುಗುಡ? ಅವನ ಸಾಂತ್ವನ ಮಾತ್ರ ನನಗಾಗಿಯೇ ಅವತರಿಸಿದ್ದು.

‘ಚಿಕ್ಕತ್ತೇ...’ ಅಮ್ಮನ ಕೋಣೆಯ ಬಾಗಿಲು ತಟ್ಟುತ್ತಾ ಕರೆದ ದನಿಯಲ್ಲಿ ಮೃದುತ್ವದ ಜೊತೆಗೇ ಘನತೆಯೂ ಇದ್ದದ್ದು ಹೇಗೆ?
ಒಂದೇ ಕ್ಷಣ. ದೇವರಿಗೆ ಧನ್ಯವಾದ ಅರ್ಪಿಸುತ್ತಿದ್ದೆ. ‘ನೀನ್ಯಾವಾಗ ಬಂದದ್ದು ಮಾರಾಯ?’ ಅಮ್ಮ ನಗುತ್ತಿದ್ದರು, ಕೆಂಪುಕಣ್ಣುಗಳನ್ನು ಮರೆಸುತ್ತಾ. ನೆಮ್ಮದಿಯ ಹನಿಗಳನ್ನು ಅಂಗಳಕ್ಕೇ ಉದುರಿಸಲು ಹೊರಗೋಡಿದೆ. ಓಣಿ ತುದಿಯಲ್ಲಿ ನೇಹಾ! ಅವಳ ಹಿಂದೆಯೇ ಸುಮುಖ್ ಅಂಕಲ್ ಮತ್ತು ನಳಿನಿ ಆಂಟಿ. ಎಲ್ಲ ದೇವತೆಗಳೂ ಇವತ್ತು ನನ್ನ ಮೇಲೆ ಪ್ರಸನ್ನರಾದದ್ದು ಹೇಗೆ? ಎಂದೂ ಇಲ್ಲದ ಖುಷಿ ಮನೆಯಲ್ಲಿ ತುಂಬಿಕೊಂಡಿತು.

‘ಅಕಳಂಕ’ ಮನೆಯಲ್ಲಿ ನಾವು ಬಾಡಿಗೆಗೆ ಇದ್ದಾಗ... ಇಪ್ಪತ್ತು ವರ್ಷಗಳ ಹಿಂದಿನ ನಂಟಿನ ಈ ಹರ್ಷಣ್ಣ... ನಮ್ಮ ಮೂಲಕವೇ ಅವನ ಪರಿಚಯವಾಗಿದ್ದ ನಳಿನಿ ಆಂಟಿ, ಸುಮುಖ್ ಅಂಕಲ್ ಈಗ ಅವನನ್ನಿಲ್ಲಿ ನೋಡಿ ಅಚ್ಚರಿಯಿಂದ ಖುಷಿಪಟ್ಟರು. ಸೂಕ್ಷ್ಮ ಮನದ ನಳಿನಿ ಆಂಟಿ ಮೊದಲೇ ಯೋಚನೆ ಮಾಡಿ ಹಾಲು ತಗೊಂಡೇ ಬಂದಿದ್ದರಿಂದ ನೇಹಾ ಮತ್ತು ನಾನು ಅಂಗಡಿಗೆ ಓಡುವುದು ತಪ್ಪಿತಾದರೂ ನೇಹಾಳಿಗೆ ನನ್ನ ಮೊದಲ ಕಥೆಯ ಹಿನ್ನೆಲೆ ಹೇಳುವ ಅವಕಾಶ ಇಲ್ಲವಾದ್ದಕ್ಕೆ ಒಂದಿಷ್ಟು ಖೇದ ನನ್ನೊಳಗೆ. ಇದನ್ನೇ ಗ್ರಹಿಸಿದಳೋ ಅನ್ನುವಂತೆ ನೇಹಾ, ‘ಶಿಶಿರಾ, ನಿನ್ ಹತ್ರ ಏನೋ ಕೇಳ್ಬೇಕು, ಬಾ ರೂಮಿಗೆ...’ ಅಂತ ನನ್ನ ರೂಮಿಗೆ ಎಳೆದು ಬಾಗಿಲು ಹಾಕಿಕೊಂಡಳು.

ಕಥೆಯ ಹಿನ್ನೆಲೆ ಮತ್ತು ಅವಳನ್ನು ಕರೆದ ಹಿನ್ನೆಲೆಯನ್ನೂ ತಿಳಿಸಿದೆ.
‘ಏನಾಗ್ತಾ ಉಂಟು ಒಳಗೆ?’ ಹರ್ಷಣ್ಣ ಬಾಗಿಲು ಕೆರೆದ.
‘ಬಂದೆವು...’ ಉತ್ತರಿಸಿದೆ, ಸ್ವರ ನಡುಗದ ಹಾಗೆ ಜಾಗ್ರತೆವಹಿಸುತ್ತಾ.
‘ಹೀಗೇ ಏನಾದ್ರೂ ಆಗಿರ್ಬಹುದು, ಅದ್ಕೇ ನೀನು ನನ್ನನ್ನು ಕರ್ದದ್ದು ಅಂತ ಅಮ್ಮ ಹೇಳಿದ್ದಕ್ಕೆ ನಾವು ಮೂವರೂ ಬಂದದ್ದು’ ಅಂದಳು ನೇಹಾ. ನಳಿನಿ ಆಂಟಿಗೆ ಮತ್ತೊಮ್ಮೆ ಮನದಲ್ಲೇ ವಂದಿಸಿದೆ.

ಮತ್ತೊಮ್ಮೆ ಬಾಗಿಲ ಮೇಲೆ ಬೆರಳುಗಳ ನಾಟ್ಯ, ಮೊದಲಿನದಕ್ಕಿಂತ ಭಿನ್ನವಾಗಿ. ‘ಅಂಕಲ್...’ ‘ಪಪ್ಪಾ...’ ಇಬ್ಬರೂ ಒಟ್ಟಿಗೇ ರಾಗ ಎಳೆದೆವು. ಗಲಗಲನಗು ಅತ್ತಲಿಂದ ಉತ್ತರಿಸಿತು. ಬಾಗಿಲೂ ಮೌನ ಮುರಿಯಿತು. ನಡುಮನೆಯಲ್ಲಿ ಸೋಫಾದಲ್ಲಿ ಹರ್ಷಣ್ಣ ನಮ್ಮತ್ತಲೇ ನೋಡತ್ತಿದ್ದ. ಅಚಾನಕ್ ನೇಹಾಳ ಕಡೆ ನೋಡಿದೆ, ಅವಳ ನೋಟ ನೆಲವನ್ನು ಕೆಣಕುತ್ತಿತ್ತು. ಸೊಂಟಕ್ಕೆ ತಿವಿದೆ. ಅಡುಗೆಮನೆಗೆ ಬೀಸುಹೆಜ್ಜೆ ಹಾಕಿದಳು. ಹಿಂಬಾಲಿಸಿದ್ದು ನಾನೊಬ್ಬಳೇ ಅಲ್ಲವೆನ್ನುವುದು ನಮ್ಮಿಬ್ಬರಿಗೂ ಗೊತ್ತು.

ಒಳಗೆ ಹೋಗುತ್ತಾ ಸುಮುಖ್ ಅಂಕಲ್ ಕಿವಿಯಲ್ಲಿ ಉಸುರಿದೆ, ‘ನೇಹಾ ಈಸ್ ಕ್ಲೀನ್ ಬೌಲ್ಡ್. ಅಂಕಲ್...’ ‘ಐ ನೋ ಡಿಯರ್...’ ಅಂದರು ತಲೆಯಾಡಿಸುತ್ತಾ. ಎಂದೂ ಇಲ್ಲದ ಸಲಿಗೆಯಲ್ಲಿ ಹರ್ಷಣ್ಣನತ್ತ ನೋಡಿ ಕಣ್ಣು ಮಿಟುಕಿಸಿ ಹುಬ್ಬು ಹಾರಿಸಿದೆ. ಆ ನಗುವನ್ನು ನೇಹಾ ಬಾಗಿಲ ಸಂದಿಯಿಂದ ನೋಡಿದಳೇ? ಅಥವಾ ಅವಳಲ್ಲಿದ್ದಾಳೆಂದೇ ಹರ್ಷಣ್ಣ ಅಂಥಾ ನಗು ನಕ್ಕನೆ? ಯಾರಿಗ್ಗೊತ್ತು?

ಘಳಿಗೆಗಳ ಮೊದಲು ನನ್ನನ್ನು ಆವರಿಸಿಕೊಂಡಿದ್ದ ಗಾಬರಿ, ಭಯ, ಖಿನ್ನತೆಗಳು ಎಲ್ಲಿ ಹಾರಿಹೋದವೆಂದು ಅರಿಯುವ ಕುತೂಹಲವೇ ಇಲ್ಲವಾಯಿತು. ಒರಟು ಬರಡು ಭೂಮಿಯಂತಿದ್ದ ಈ ಮನೆಯೊಳಗೆ ಈಗಷ್ಟೇ ಅರಳುತ್ತಿರುವ ಇನ್ನೊಂದು ಮಾಧುರ್ಯದ ಕಂಪು ನನ್ನೊಳಗಿನ ವಸಂತನನ್ನೂ ಹೊಡೆದೆಬ್ಬಿಸಿತು. ನನ್ನ ಕೆನ್ನೆಗಳನ್ನು ಎಲ್ಲ ಕಣ್ಣುಗಳಿಂದ ಮುಚ್ಚಿಡಲಿ ಹೇಗೆ? ಕಳ್ಳರಂತೆ ನೋಟ ತಪ್ಪಿಸುತ್ತಿದ್ದಾಗ ನೇಹಾ ಮತ್ತು ಹರ್ಷಣ್ಣ ಏಕಕಾಲದಲ್ಲಿ ನನ್ನನ್ನು ಕರೆದದ್ದು ಯಾಕೆ? ಮೂರು ಹಿರಿಯರು ಅಡುಗೆಮನೆಯ ಟೇಬಲ್ ಸುತ್ತ ನಿಂತಿದ್ದರು. ಕಾಫಿ ಕಪ್ ಹಿಡಿದು ನಾವು ಮೂವರು ಟೆರೇಸ್ ಹತ್ತಿದೆವು.

ಆ ಸಂಜೆ ನನ್ನ ಇಪ್ಪತ್ತು ವರ್ಷಗಳ ಜೀವನದ ನೆನಪಿರುವ ದಿನಗಳಲ್ಲೇ ಅತ್ಯಂತ ಸುಂದರ ಸಂಜೆ. ತೆಂಗಿನ ಗರಿಗಳ ನಡುವೆ ಕೆಂಪು-ಕಿತ್ತಳೆ ಚೆಂಡು ಜಾರುತ್ತಾ ಜಾರುತ್ತಾ ಇನ್ನಷ್ಟು ಕೆಂಪಾಗುವುದನ್ನು ಮೂರುಜೋಡಿ ಕಣ್ಣುಗಳ ಒಂದೇ ನೋಟ ಹೀರಿಕೊಳ್ಳುತ್ತಿತ್ತು. ಹರ್ಷಣ್ಣ ಮತ್ತು ನೇಹಾಳ ನಡುವೆ ನಿಂತಿದ್ದ ನಾನು ಯಾವುದೋ ಕ್ಷಣದಲ್ಲಿ ನೇಹಾಳ ಇನ್ನೊಂದು ಬದಿಗೆ ಸರಿದುಕೊಂಡಿದ್ದೆ. ನಾನು ತೆರವು ಮಾಡಿದ್ದ ಜಾಗವನ್ನು ಅದ್ಯಾವುದೋ ಕಂಪು ಅಡರಿಕೊಂಡಿತು. ಕತ್ತಲಮರುವ ಮೊದಲೇ ಅಂಗಳದ ದೀಪ ಹೊತ್ತಿತು. ಕೆಳಗಿಳಿದು ಬಂದೆವು, ಗಂಧರ್ವರಂತೆ ತೇಲುತ್ತಾ.

Tuesday, 15 February, 2011

ಸುಮ್ಮನೆ ನೋಡಿದಾಗ...೧೫

ಕಾಲೇಜಲ್ಲಿ ಅದ್ಯಾಕೋ ಶರತ್ ಮತ್ತೆ ಮತ್ತೆ ನನ್ನ ಕಡೆ ನೋಡ್ತಿದ್ದಾನೆ ಅನ್ನುವ ಗುಮಾನಿ ನನ್ನದು. ನಿನ್ನೆ ಪುಸ್ತಕದ ಬದಲು ಅವನ ಕೈಗೆ ಕೊಡೆ ಕೊಟ್ಟದ್ದಕ್ಕಾ? ಗೊತ್ತಿಲ್ಲ. ಅಂತೂ ಶನಿವಾರದ ಲ್ಯಾಬ್ ಮುಗಿಸಿ ಒಂದು ಗಂಟೆಗೆ ಹೊರಗೆ ಬಂದಾಗ ಶರತ್ ಬಾಗಿಲಲ್ಲೇ ಎದುರಾದ.
‘ಏನು?’ ಕೇಳಿದವಳು ನೇಹಾ.
‘ಏನಿಲ್ಲ, ನಂಗೆ ಶಿಶಿರನ ನೋಟ್ಸ್ ಮತ್ತೊಮ್ಮೆ ಬೇಕು. ನಿನ್ನೆ ಪೂರ್ತಿ ಬರ್ಕೊಳ್ಳಿಲ್ಲ. ನಾಳೆ ಆದಿತ್ಯವಾರ. ಮನೆಯಲ್ಲಿ ಕೂತು ಎಲ್ಲ ಬರ್ದು ಸೋಮವಾರ ಹಿಂದೆ ತರ್ತೇನೆ. ಪ್ಲೀಸ್, ಕೊಡ್ತೀರ ಶಿಶಿರಾ?’
‘ಯಾಕೆ? ನನ್ನ ನೋಟ್ಸ್ ಆಗುದಿಲ್ವಾ?’ ನೇಹಾ ಕುಟುಕಿದಳು.
‘ನಿನ್ನೆ ನೀವು ಸಿಗ್ಲಿಲ್ಲ. ಇವ್ರ ನೋಟ್ಸ್ ತಗೊಂಡಿದ್ದೆ. ಅರ್ಧ ಬರ್ದಿದ್ದೇನೆ. ಅದ್ಕೇ ಇವತ್ತು ಕೂಡಾ ಇವ್ರದ್ದೇ ಬೇಕು.’
‘ಏ, ಸುಮ್ನಿರು ಮಾರಾಯ್ತಿ... ತಗೊಳ್ಳಿ ಶರತ್. ಸೋಮವಾರ ಮಾತ್ರ ಖಂಡಿತಾ ತನ್ನಿ.’
ವ್ಯಾಜ್ಯ ಕೊನೆಗೊಂಡಿತು. ಇಬ್ಬರೂ ಮನೆ ದಾರಿ ಹಿಡಿದೆವು.
‘ನಿನ್ನಮ್ಮ ನಮ್ಮನೆಯಲ್ಲೇ ಇರ್ಬಹುದಾ?’
‘ಇರ್ಬಹುದು. ನಳಿನಿ ಆಂಟಿ ಅವ್ರನ್ನು ಇವತ್ತು ಸುಲಭಕ್ಕೆ ಬಿಡುದಿಲ್ಲ, ನೋಡು.’
‘ನನ್ನಮ್ಮ ನಂಗಿಂತ ಹೆಚ್ಚು ನಿಂಗೇ ಗೊತ್ತು, ಅಲ್ವಾ?’
‘ಹೌದು, ನನ್ನ ಜೀವನದ ಅರ್ಧ ಸಮಯ ನಿನ್ನಮ್ಮನ ನೆರಳಲ್ಲಿ ಕಳ್ದಿದ್ದೇನೆ, ಅಲ್ವಾ?’

ಹರಟೆಗಳಲ್ಲಿ ದಾರಿ ಚಿಕ್ಕದಾಗಿಬಿಟ್ಟಿತು. ಮನೆಗೆ ಬಂದಾಗ ಗೆಳತಿಯರ ಸಣ್ಣ ನಗು ತೇಲಿ ಬಂತು. ಅಮ್ಮ ಸಮಾಧಾನವಾಗಿದ್ದಾರೆ ಅನ್ನುವ ಯೋಚನೆಯೇ ಖುಷಿ ಕೊಟ್ಟಿತು. ಅವರಿಬ್ಬರ ನಗುವಿನ ಹಿಂದೆಯೇ ಸುಮುಖ್ ಅಂಕಲ್ ಅಬ್ಬರದ ನಗು ಹಾರಿಸುತ್ತಾ ಇದ್ದದ್ದು ಕೇಳಿ ನಾವಿಬ್ಬರೂ ಮುಖ-ಮುಖ ನೋಡಿಕೊಂಡೆವು.
‘ಪಪ್ಪಾ...’ ನೇಹಾ ಚಿಗರೆಯ ಹಾಗೆ ಒಳಗೋಡಿದಳು. ಎಷ್ಟೋ ದಿನಗಳಿಂದ ಕಾಣದವರನ್ನು ಅಚಾನಕ್ ಕಂಡ ಹಾಗೆ ಪಪ್ಪನ ಕುತ್ತಿಗೆಗೆ ಜೋತುಬಿದ್ದಳು. ಅದ್ಯಾಕೋ ವಿನ್ಯಾಸ್ ಸತ್ತ ಹಿನ್ನೆಲೆಯಲ್ಲಿ ಈ ಪ್ರೀತಿ ಮತ್ತಷ್ಟು ಆಪ್ತವಾಗಿ ಕಂಡಿತು. ಅಂಕಲ್ ನನ್ನ ಕಡೆಗೂ ಕೈ ಚಾಚಿ, ‘ಬಾ ಮಗಳೇ...’ ಅಂದರು. ಸೋಫಾದಲ್ಲಿ ಅವರ ಬದಿಗೇ ಸರಿದು ಕೂತೆ. ಇಬ್ಬದಿಗಳಲ್ಲಿ ಇಬ್ಬರು ಮಕ್ಕಳು. ಅಮ್ಮನ ಕಣ್ಣುಗಳು ಮಂಜಾದವೆ? ನನ್ನ ಕಣ್ಣುಗಳಾ?

ಊಟ ಅಲ್ಲೇ ಮುಗಿಸಿ ಬಿಸಿಲಲ್ಲೇ ನಮ್ಮ ಮನೆಗೆ ಹೊರಟಾಗ ಅಮ್ಮ ನೆಲದಲ್ಲಿ ಕಲ್ಲು ಲೆಕ್ಕ ಮಾಡ್ತಾ ನಡೀತಿದ್ರಾ ಹೇಗೆ? ಮಾತುಗಳನ್ನೆಲ್ಲ ಅಲ್ಲೇ ಬಿಟ್ಟು ಬಂದಿದ್ರಾ? ನಮ್ಮ ಗೇಟಿನ ಕಿರ್ರ್ ಶಬ್ದ ಅವರಿಗೆ ಕಿರಿಕಿರಿ ಮಾಡಿರಬೇಕು...
‘ಶಿಶಿರಾ, ನಳಿನಿ ನಿಮ್ಗೆ ಎಲ್ಲ ಹೇಳಿದ್ದಾಳಂತಲ್ಲ. ಅದನ್ನು ಬೆಳಿಗ್ಗೆ ನಂಗೆ ಯಾಕೆ ತಿಳಿಸ್ಲಿಲ್ಲ?’ ಎಂದೂ ಇಲ್ಲದ ಶಾಂತಿ ಅಮ್ಮನ ಮಾತಲ್ಲಿ.
‘ನಿಮ್ಗೆ ಹೇಗೆ ಹೇಳ್ಬೇಕೂಂತ ಗೊತ್ತಾಗ್ಲಿಲ್ಲ, ಸಾರಿ ಅಮ್ಮ.’
‘ಮತ್ತೆ, ನಿನ್ನೆ ಸುಮುಖ್ ಇದ್ರಾ ನಿಮ್ಗೆ ಇವೆಲ್ಲ ಗೊತ್ತಾಗುವಾಗ? ಅವ್ರು ಏನ್ ಹೇಳಿದ್ರು?’
‘ಇಲ್ಲಮ್ಮ, ಅಂಕಲ್ ಇರ್ಲಿಲ್ಲ. ಆದ್ರೆ ಅಂಕಲ್‌ಗೆ ಗೊತ್ತುಂಟು. ಅದ್ಯಾವ ಘಳಿಗೆಯಲ್ಲೋ ಆಂಟಿ ಅವರಿಗೆ ತಿಳಿಸಿರ್ಬೇಕು...’
‘ಹೌದು, ಅವ್ರಿಬ್ರ ಹೊಂದಾಣಿಕೆ ಅಪರೂಪದ್ದು. ಹ್ಮ್! ನಂಗಂತೂ ಅಂಥ ಸಂಸಾರದ ಋಣ ಇಲ್ಲ. ತಿಳಿಯದೇ ತಪ್ಪು ಮಾಡಿದೆ ಅಂತ ಹೇಳುವ ಹಾಗಿಲ್ಲ. ಕಣ್ಣು ತೆರೆದಿದ್ದುಕೊಂಡೇ ಬಾವಿಗೆ ಬಿದ್ದೆ. ನೀನು ಅಂಥ ತಪ್ಪು ಎಲ್ಲಿ ಮಾಡಿಬಿಡ್ತೀಯೋ ಅಂತ ಯಾವಾಗ್ಲೂ ಹೆದ್ರಿಕೆ ನಂಗೆ...’
‘ಖಂಡಿತಾ ಅಂಥದ್ದು ನನ್ನಿಂದ ಆಗುದಿಲ್ಲಮ್ಮ. ನಾನು ನನ್ನ ಕಾಲ ಮೇಲೆ ನಿಲ್ತೇನೆ. ಕೆಲ್ಸಕ್ಕೆ ಸೇರ್ತೇನೆ. ಕರೆಸ್ಪಾಂಡೆನ್ಸ್ ಆದ್ರೂ ಸರಿ, ಎಂ.ಎಸ್ಸಿ. ಮಾಡ್ತೇನೆ... ಒಳ್ಳೇ ಕಾಲೇಜಲ್ಲಿ ಲೆಕ್ಚರರ್ ಆಗ್ತೇನೆ. ಮಕ್ಕಳನ್ನು ಪ್ರೋತ್ಸಾಹಿಸಿ ಒಳ್ಳೇ ವ್ಯಕ್ತಿಗಳನ್ನಾಗಿ ಮಾಡ್ತೇನೆ... ಯಾವುದೋ ಗೊತ್ತಿಲ್ದ ಗಂಡಿನ ಕುತ್ತಿಗೆಗೆ ಮಾಲೆ ಹಾಕಿ ನನ್ನ ಜೀವನವನ್ನು ಆ ಮಾಲೆಯ ಪರಿಧಿಯೊಳಗೆ ಒಣಗಿಸ್ಲಿಕ್ಕೆ ನಾನು ತಯಾರಿಲ್ಲ. ನೋಡ್ತಾ ಇರಿ. ನಾನು ನಿಜವಾದ ಅರ್ಥದಲ್ಲಿ ಒಬ್ಬ ಒಳ್ಳೇ ಟೀಚರ್ ಆಗ್ತೇನೆ...’

ಬಾಗಿಲು ತೆರೆದು ನಡುಮನೆಯ ಸೋಫಾದಲ್ಲಿ ಕೂತ ನನ್ನ ಆವೇಶದ ಮಾತುಗಳು ಅಮ್ಮನ ಸಿಡುಕಿಯನ್ನು ಎಚ್ಚರಿಸಿದ್ದು ಯಾಕೋ ಗೊತ್ತಾಗಲೇ ಇಲ್ಲ.
‘ಒಳ್ಳೇ ಟೀಚರ್ ಮತ್ತೆ ಆಗು. ಮೊದ್ಲು ಒಳ್ಳೇ ಮಗಳಾಗು...’
ನನ್ನ ಆವೇಶ ಎಲ್ಲ ಆವಿಯಾಗಿಬಿಟ್ಟಿತು. ಎಲ್ಲಿ ಏನು ತಪ್ಪಾಯ್ತು? ಯಾಕೆ ಹೀಗೆ ಮಾತಾಡಿದ್ರು? ಸುಮ್ಮನೆ ಸೋಫಾದಿಂದ ಎದ್ದು ಬಚ್ಚಲಿಗೆ ಹೋದೆ, ಮುಖ ಕೈಕಾಲು ತೊಳೆಯುವ ನೆಪದಲ್ಲಿ. ತಲೆಯಲ್ಲಿ ಗುಂಗಿಹುಳ ಹರಿದಾಡ್ತಿತ್ತು. ಅಮ್ಮ ಅವರ ಕೋಣೆಗೆ ಹೋಗಿ, ‘ಕಿರಿಕಿರಿ ಮಾಡ್ಬೇಡ, ನಾನು ಮಲಗ್ತೇನೆ’ ಅಂತ ಜೋರಾಗಿ ಹೇಳಿ ಧಡಾರಂತ ಬಾಗಿಲು ಹಾಕಿಕೊಂಡರು.

ಎರಡೇ ಕ್ಷಣ. ಯಾಕೋ ನಂಗೆ ದಿಗಿಲಾಯಿತು. ಅಮ್ಮ ಏನಾದ್ರೂ ಮಾಡಿಕೊಂಡರೆ? ಇವತ್ತಿನವರೆಗೂ ನನಗಂಥಾ ಯೋಚನೆಯೇ ಬಂದಿರಲಿಲ್ಲ. ಇವತ್ತು ಅದನ್ನು ಬದಿಗೆ ಸರಿಸಲಾಗಲೇ ಇಲ್ಲ. ಗಾಬರಿಯಿಂದ, ಜಾಗ್ರತೆಯಿಂದ ಅಮ್ಮನ ಕೋಣೆಯ ಬಾಗಿಲು ತಟ್ಟಿದೆ...
‘ಅಮ್ಮ, ನನ್ನ ಬಾಟನಿ ಟೆಕ್ಸ್ಟ್ ಅಲ್ಲೇ ಉಂಟು. ಬಾಗಿಲು ತೆಗೀರಿ. ನಂಗೀಗ ಬೇಕದು...’
ಎಷ್ಟು ತಟ್ಟಿದರೂ ಅಲ್ಲಿಂದ ಉತ್ತರ ಇಲ್ಲ. ನನ್ನೊಳಗು ಟೊಳ್ಳಾಗತೊಡಗಿತು. ಫೋನ್ ಮಾಡಿ ನೇಹಾಳನ್ನು ಬರಹೇಳಿದೆ, ‘ಸುಮ್ನೆ... ಹೀಗೇ... ಬಾ... ಆದ್ರೆ ಕೂಡ್ಲೇ ಬಾ...’ ಹತ್ತು ನಿಮಿಷದಲ್ಲಿ ಬರುತ್ತೇನೆಂದಳು. ಇನ್ನೂ ಹತ್ತು ನಿಮಿಷ? ಆಗಲೇ ಅಮ್ಮ ಬಾಗಿಲು ಹಾಕ್ಕೊಂಡು ಐದು ನಿಮಿಷವಾಗಿತ್ತು. ಇನ್ನು ಹತ್ತು ನಿಮಿಷ? ಅಷ್ಟೊತ್ತಿಗೆ ಏನಾದ್ರೂ ಆಗ್ಬಹುದು! ಏನ್ ಮಾಡ್ಲಿ?
ಮತ್ತೊಮ್ಮೆ ಬಾಗಿಲು ತಟ್ಟಿ ಮೌನವನ್ನು ಎದುರ್ಗೊಂಡೆ. ಏನೂ ತೋಚದೆ ಸೋಫಾದಲ್ಲಿ ಕೂತೆ... ಕೂತೇ ಇದ್ದೆ...

Monday, 7 February, 2011

ಸುಮ್ಮನೆ ನೋಡಿದಾಗ...೧೪

‘ಶಿಶಿರಾ, ಮೊನ್ನೆ ನಿನ್ನಪ್ಪ ಸತ್ತೋದ...’
‘ಹ್ಞಾ!?’ ಏನೊಂದೂ ಅರ್ಥವಾಗದೆ ಉದ್ಗರಿಸಿದೆ.
ಕೆಂಪು ಕಣ್ಣುಗಳಲ್ಲಿ ಈಗ ಪಸೆಯಿರಲಿಲ್ಲ, ಉರಿಯಿತ್ತು.
‘ಹೌದು. ನಿನ್ನ ಹುಟ್ಟಿಗೆ, ನನ್ನ ಈ ಸ್ಥಿತಿಗೆ ಕಾರಣನಾದ ಆ ದೊಡ್ಡ ಮನುಷ್ಯ ನಿನ್ನೆ ಪ್ರೋಸ್ಟೇಟ್ ಕ್ಯಾನ್ಸರಿಗೆ ಬಲಿಯಾದ.’
ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯಲಿಲ್ಲ. ಅಮ್ಮನ ಹಿಂದಿನ ಕಥೆ ಗೊತ್ತಿದೆಯೆನ್ನಲೆ? ನನ್ನಪ್ಪ ವಿನ್ಯಾಸ್, ನೇಹಾಳಿಗೂ ಅಪ್ಪ ಅನ್ನುವ ಸತ್ಯ ನಮಗೆ ನಿನ್ನೆಯೇ ತಿಳಿಯಿತೆಂದು ಹೇಳಲೆ? ಅದಕ್ಕಿದು ಸರಿಯಾದ ಸಂದರ್ಭವೆ? ಅವನ (ಅವರ ಅನ್ನಲು ಮನವೊಪ್ಪದು) ಅನಾರೋಗ್ಯವೇ ಅಮ್ಮನ ಸಿಡುಕು ಸ್ವಭಾವಕ್ಕೆ ಕಾರಣವಾಗಿತ್ತೆ? ನೂರು ಪ್ರಶ್ನೆಗಳು ನನ್ನೊಳಗೆ. ನನ್ನ ಮೌನ ಅಮ್ಮನಿಗೆ ಬೇರೇನೋ ಅರ್ಥ ಕೊಟ್ಟಿರಬೇಕು.
‘ನಿಂಗೆ ಈ ಬಗ್ಗೆ ಏನೂ ಹೇಳಿರಲಿಲ್ಲ ಇಲ್ಲಿವರೆಗೆ. ನಾನು ಇಷ್ಟು ವರ್ಷ ಅವ್ನಿದ್ದೂ ವಿಧವೆ ಥರ ಜೀವನ ಮಾಡಿದೆ. ನಿನ್ನೆ, ಬಿಡುಗಡೆ ಆಯ್ತು ಅಂತಲೂ ಅನ್ನಿಸಿತ್ತು, ಎಲ್ಲವೂ ಮುಗೀತು ಅಂತಲೂ ಅನ್ನಿಸಿತ್ತು. ಇವತ್ತು ನಾನು ಕೆಲಸಕ್ಕೆ ಹೋಗುದಿಲ್ಲ. ನೀನು ಕಾಲೇಜಿಗೆ ಹೋಗಿ ಬಾ. ಸಂಜೆ ಎಲ್ಲ ಹೇಳ್ತೇನೆ...’
‘ಅಮ್ಮ, ನೀವ್ಯಾಕೆ ಇವತ್ತು ನಳಿನಿ ಆಂಟಿ ಮನೆಗೆ ಹೋಗ್ಬಾರ್ದು? ನೀವಲ್ಲಿ ಹೋಗದೆ ತುಂಬಾ ದಿನ ಆಯ್ತಲ್ಲ. ನಿಮ್ಮನ್ನು ಅಲ್ಲಿ ಬಿಟ್ಟು ನಾನ್ ಕಾಲೇಜಿಗೆ ಹೋಗ್ತೇನೆ. ನಂಗೂ ಇವತ್ತು ಇಷ್ಟದ ಲ್ಯಾಬ್ ಉಂಟು. ತಪ್ಪಿಸ್ಲಿಕ್ಕೆ ಖುಷಿ ಇಲ್ಲ...’ ನಳಿನಿ ಆಂಟಿ ನಿನ್ನೆ ಅವ್ರ ಮನೆಯಲ್ಲಿ ನಡೆದದ್ದನ್ನು ಅಮ್ಮನಿಗೂ ಹೇಳಿಯಾರು ಅನ್ನುವ ಯೋಚನೆಯಿಂದ ಈ ಮಾತು ಹೇಳಿದೆ.
‘...’
‘ಅಮ್ಮ, ಪ್ಲೀಸ್. ನಿಮ್ಮನ್ನು ಒಬ್ರನ್ನೇ ಬಿಟ್ಟು ಹೋಗ್ಲಿಕ್ಕೆ ನಂಗಾಗುದಿಲ್ಲ. ರೆಡಿಯಾಗಿ.’
ಅವರ ಉತ್ತರಕ್ಕೂ ಕಾಯದೆ ನಾನು ಬಚ್ಚಲಿಗೆ ಹೋದೆ. ಅದೇನನ್ನಿಸಿತ್ತೋ, ನಾನು ಹೊರಡುವ ಹೊತ್ತಿಗೆ ಅಮ್ಮನೂ ತಯಾರಾಗಿದ್ದರು. ಸಾಮಾನ್ಯವಾಗಿ ನಾನು ಹೋಗುವ ದಾರಿ ಬಿಟ್ಟು ಅಮ್ಮನ ಒಟ್ಟಿಗೆ ನಳಿನಿ ಆಂಟಿ ಮನೆಗೆ ಹೋದೆ.

ನೇಹಾ ಗೇಟಿನ ಹತ್ರವೇ ಸಿಕ್ಕಿದಳು. ಬಾಗಿಲಲ್ಲೇ ಇದ್ದ ನಳಿನಿ ಆಂಟಿಯ ಮುಖದಲ್ಲಿ ಖುಷಿಯೂ ಗೊಂದಲವೂ ಕಂಡಿತು. ಅವರ ಮುಖಭಾವದಿಂದ, ನಿನ್ನೆಯ ಇಲ್ಲಿಯ ವಿಷಯ ಅಮ್ಮನಿಗೆ ಗೊತ್ತಾಗಿಯೇ ಅವರೀಗ ಇಲ್ಲಿ ಬಂದಿದ್ದಾರೆನ್ನುವ ಸಂಶಯ ನಳಿನಿ ಆಂಟಿಗಿತ್ತೆಂದು ನನಗೆ ಭಾಸವಾಯ್ತು. ಆಂಟಿಯ ಕಣ್ಣನ್ನೇ ದಿಟ್ಟಿಸಿ ಇಲ್ಲವೆಂಬಂತೆ ತಲೆಯಾಡಿಸಿದೆ. ಸಮಾಧಾನದ ಉಸಿರು ಬಿಟ್ಟು, ‘ಬಾ ಹರಿಣಿ. ಎಷ್ಟು ದಿನ ಆಯ್ತು ಇಲ್ಲಿಗೆ ನೀನು ಬಾರದೆ! ಇವತ್ತು ಕೆಲಸಕ್ಕೆ ರಜೆಯಾ? ಈಗಾದ್ರೂ ಬಂದ್ಯಲ್ಲ. ಬಾ ಒಳಗೆ...’ ಅಂದರು.

ಅವರಿಬ್ಬರೂ ಒಳಗೆ ಹೋದ ಮೇಲೆ ನಾವಿಬ್ಬರೂ ಗೇಟಿಂದ ಹೊರಗೆ ಹೆಜ್ಜೆ ಹಾಕಿದೆವು.
‘ನೇಹಾ, ನಮ್ಮಪ್ಪ -ನಮ್ಮಿಬ್ರ ಅಪ್ಪ, ವಿನ್ಯಾಸ್- ನಿನ್ನೆ ಸತ್ತ ಅಂತ ಅಮ್ಮ ಈಗ ಬೆಳಿಗ್ಗೆ ಹೇಳಿದ್ರು. ತುಂಬಾ ಡಲ್ ಆಗಿದ್ದಾರೆ. ಅದ್ಕೇ ಇಲ್ಲಿಗೆ ಕರ್ಕೊಂಬಂದೆ...’
ಅವಳ ಹೆಜ್ಜೆಗಳು ಗಕ್ಕನೆ ನಿಂತವು. ‘ನಡಿ. ಮನೆಗೇ ಹೋಗುವಾ...’
‘ಅದ್ರ ಅಗತ್ಯ ಇಲ್ಲ. ನಮ್ಮನ್ನು ಒಮ್ಮೆಯಾದ್ರೂ ನೋಡ್ಲಿಕ್ಕೂ ಬಾರದ ಮನುಷ್ಯ, ನಮ್ಮನ್ನು ತನ್ನ ಮಕ್ಕಳೂಂತ ಒಪ್ಪಿಕೊಳ್ಳದ ಮನುಷ್ಯ ಈಗ ಸತ್ತಿದ್ದಾನೆ ಅಂದ್ರೆ ನಮಗ್ಯಾಕೆ ಅದು ನಾಟಬೇಕು? ಅವನ ಜೀನ್ಸ್ ನಮ್ಮಲ್ಲಿದೆ, ಸರಿ. ಅಷ್ಟಕ್ಕೇ ಅವ ನಮ್ಮ ಅಪ್ಪ ಆಗುದಿಲ್ಲ. ಅವನ ಜೀವನದಲ್ಲಿ ನಮಗೆ ಯಾವ ಸ್ಥಾನ ಕೊಟ್ಟಿದ್ದಾನೆ ಅಂತ ನಮ್ಮ ಜೀವನದಲ್ಲಿ ಅವನಿಗೆ ಯಾವುದೇ ಸ್ಥಾನ ಕೊಡ್ಬೇಕು? ಅದೆಲ್ಲ ಬೇಡ... ನಿನಗಂತೂ ಪ್ರೀತಿ ಸುರಿಸುವ ಅಪ್ಪ ಇದ್ದಾರೆ, ಆದ್ರೂ ನಿನಗ್ಯಾಕೆ ಈ ಸೆಳೆತ? ಸರಿಯಲ್ಲ ನೇಹಾ. ಈ ಸೆಂಟಿಮೆಂಟಿನಿಂದ ನಿನ್ನ ಅಪ್ಪ-ಅಮ್ಮನಿಗೆ ಅನ್ಯಾಯ ಮಾಡ್ತೀ ನೀನು. ಅಷ್ಟೇ. ಕಣ್ಣು ತೆರಿ. ಸರಿಯಾಗಿ ಬದುಕನ್ನು ನೋಡು...’

‘ಸೆಂಟಿಮೆಂಟ್ ಅಂತ ನನಗೆ ಪಾಠ ಹೇಳುವವಳು ನೀನ್ಯಾವಾಗ ಇಷ್ಟು ಗಟ್ಟಿ ಆದದ್ದು? ಮೊನ್ನೆಯಷ್ಟೇ ರೊಮ್ಯಾಂಟಿಕ್ ಕಥೆ ಬರ್ದು ಅದ್ರೊಳಗೆ ಮುಳುಗಿದವಳು ಅದೆಷ್ಟು ಹೊತ್ತಿಗೆ ಇಷ್ಟ ಕಟುವಾದದ್ದು?’
‘ರೊಮ್ಯಾಂಟಿಕ್ ಕಥೆಗೂ ರೂಂಮೇಟ್ ಜೀವನಕ್ಕೂ ವ್ಯತ್ಯಾಸ ಗೊತ್ತಾದಾಗ...’
‘ಹ್ಮ್! ಅಂತೂ ನಮ್ಮ ಜೀವನದಲ್ಲಿ ಈ ವ್ಯಕ್ತಿಗೆ, ಈ ಸಾವಿಗೆ ಯಾವುದೇ ಅರ್ಥ ಇಲ್ಲ ಅಂತ ನೀನು ಹೇಳಿದ್ದೀ, ಅಲ್ವಾ?’
‘ಹೌದು. ನಿಜ. ಇಲ್ಲವೇ ಇಲ್ಲ. ಅದರ ಅಗತ್ಯವೇ ಇಲ್ಲ. ನಮ್ಮ ಈ ದೃಢ ನಿರ್ಧಾರ ನಮ್ಮ ಹಿರಿಯರಿಗೂ ಒಳ್ಳೇದೇ.’
‘ಸರಿ ಹಾಗಾದ್ರೆ. ಈಗ ಕಾಲೇಜಿಗೇ ಹೋಗುವ.’
‘ಹೋಗುವ... ಬಾ...’

Tuesday, 1 February, 2011

ಸುಮ್ಮನೆ ನೋಡಿದಾಗ...೧೩

ನನ್ನ ಕಣ್ಣುಗಳಲ್ಲಿ ಗಾಬರಿ ಗುರುತಿಸಿ ಸುಮುಖ್ ಅಂಕಲ್ ಹತ್ರ ಬಂದರು.
‘ಯೋಚಿಸ್ಬೇಡ. ಇವತ್ತು ಇಲ್ಲೇ ಊಟ ಮಾಡು. ನಂತ್ರ ನಿನ್ನನ್ನು ನಾನೇ ನಿಮ್ಮನೆಗೆ ಬಿಡ್ತೇನೆ, ಆಯ್ತಾ?’
‘ಬೇಡ ಅಂಕಲ್, ಅಮ್ಮ ಆಗ್ಲೇ ಕಾಯ್ತಿರ್ಬಹುದು. ನಾನು ಈಗ್ಲೇ ಹೋಗ್ತೇನೆ’
‘ಏ, ಇಲ್ಲೇ ಇರು ಇವತ್ತು...' ನೇಹಾ ಕುತ್ತಿಗೆ ಅಡ್ಡ ಹಾಕಿ ನಗುತ್ತಿದ್ದಳು.
ನಳಿನಿ ಆಂಟಿಯ ಕಣ್ಣುಗಳಲ್ಲಿ ಆಗಲೇ ಖುಷಿಯಿತ್ತು. ನನ್ನಮ್ಮನ ಕೋಪದಿಂದ ನನ್ನನ್ನು ಉಳಿಸಿಕೊಳ್ಳುವ ಸಲುವಾಗಿ ಮೂರು ಜೀವಗಳಿಗೆ ನಿರಾಸೆ ಮಾಡುವ ಇಚ್ಛೆಯಾಗಲಿಲ್ಲ, ಒಪ್ಪಿಕೊಂಡೆ. ಎಲ್ಲರೂ ಮನೆಯೊಳಗೆ ಹೋದ ಕೂಡಲೇ ಸುಮುಖ್ ಅಂಕಲ್ ಅಮ್ಮನಿಗೆ ಫೋನ್ ಮಾಡಿ ವಿಷಯ ತಿಳಿಸಿ, ‘ನೀವೂ ಇಲ್ಲೇ ಊಟಕ್ಕೆ ಬನ್ನಿ’ ಎಂದರು. ನನ್ನ ನಿರೀಕ್ಷೆಯಂತೆಯೇ ನಿರಾಕರಣೆ ಬಂದಾಗ ಪೆಚ್ಚಾದವಳು ನೇಹಾ.


ಊಟ ಮುಗಿಸಿ ಒಂಬತ್ತು ಗಂಟೆಯ ಸುಮಾರಿಗೆ ಸುಮುಖ್ ಅಂಕಲ್ ನನ್ನನ್ನು ಮನೆಗೆ ಕರೆದುಕೊಂಡು ಹೊರಟಾಗ ನೇಹಾಳೂ ಜೊತೆಯಾದಳು. ನಡೆಯುತ್ತಾ ಸಾಗಿದೆವು. ಕೆಲಕ್ಷಣಗಳ ಮೌನದ ಬಳಿಕ,
‘ಅಂಕಲ್, ನಮ್ಮಮ್ಮ ಯಾವಾಗ ಇಷ್ಟು ಸಿಡುಕಿಯಾದದ್ದು? ಯಾಕೆ? ನಿಮಗೆ ಗೊತ್ತುಂಟಾ?’ ತಡೆಯಲಾರದೆ ಕೇಳಿದೆ.
‘ಹ್ಮ್, ಇದನ್ನು ನಿಮ್ಮಮ್ಮನ ಹತ್ರವೇ ಕೇಳುದು ಒಳ್ಳೇದು ಮಗಳೇ. ನಾನು ಹೇಳಿದ್ರೆ ತಪ್ಪಾದೀತು’
‘ಅಮ್ಮ ಇದಕ್ಕೆ ಉತ್ತರ ಕೊಡುದು ಸಂಶಯ. ಅಲ್ಲದೆ, ಕೇಳಿದ್ರೆ ನಾನಂತೂ ಸರಿಯಾಗಿ ಬೈಸಿಕೊಳ್ಬೇಕು, ಅಷ್ಟೇ’
‘ಒಂದಲ್ಲ ಒಂದಿನ ನಿನಗೆ ಸತ್ಯ ಗೊತ್ತಾಗಿಯೇ ಆಗ್ತದೆ. ಇವತ್ತು ಅರ್ಧ ಕಥೆ ಗೊತ್ತಾಯ್ತಲ್ಲ, ಹಾಗೇ...’
‘ಇವತ್ತು ನಮಗೆ ಅರ್ಧ ಕಥೆ ಗೊತ್ತಾಯ್ತು ಅಂತ ನಿಮಗೆ ಹೇಗೆ ಗೊತ್ತಾಯ್ತು?’
‘ಅದು ನಳಿನಿ ಮತ್ತು ನನ್ನ ನಡುವಿನ ಗುಟ್ಟು. ನಿಮಗೀಗಲೇ ಬೇಡ.’
‘ಪಪ್ಪಾ, ಮುಂದೆ ನಾನೂ ನಿಮ್ಮಿಬ್ಬರ ಹಾಗೇ ಚಂದ ಹೊಂದಾಣಿಕೆಯಿಂದ ಸಂಸಾರ ಮಾಡ್ಬೇಕಾದ್ರೆ ಇಂಥ ಗುಟ್ಟನ್ನೆಲ್ಲ ನಂಗೂ ಹೇಳಿಕೊಡ್ಬೇಕು ನೀವು’ ನೇಹಾಳ ಮಾತಿಗೆ ಅಂಕಲ್ ಅಬ್ಬರದ ನಗು ಹಾರಿಸಿದರು.
ಅಷ್ಟರಲ್ಲಾಗಲೇ ನಮ್ಮ ಗೇಟಿನ ಹತ್ತಿರ ಬಂದಿದ್ದೆವಾದ್ದರಿಂದ ಆ ನಗು ಕೇಳಿಯೇ ಅಮ್ಮ ಬಾಗಿಲು ತೆರೆದರು. ನನ್ನನ್ನು ಮೆಟ್ಟಿಲವರೆಗೆ ತಲುಪಿಸಿ ಹಿಂದೆ ಹೊರಟವರನ್ನು ಅಮ್ಮ ಒಳಗೆ ಕರೆಯಲೇ ಇಲ್ಲ. ಪೆಚ್ಚಾಗುವ ಸರದಿ ನನ್ನದು.

ಒಳಗುದಿಯಿಂದ ಪುಸ್ತಕಗಳನ್ನು ಮೇಜಿನ ಮೇಲಿಟ್ಟು ಬಚ್ಚಲಿಗೆ ಹೋಗಿ ಕೈಕಾಲು ತೊಳೆದುಕೊಂಡು ಬಂದೆ. ಅಮ್ಮನಂತೂ ಮಲಗಲು ಸಿದ್ಧವಾಗಿದ್ದರು. ನನಗೂ ಬೇರೇನೂ ಕೆಲಸಗಳಿರಲಿಲ್ಲ. ತಲೆ ಮಾತ್ರ ಧಿಮ್ಮೆನ್ನುತ್ತಿತ್ತು. ಒಂದು ದಿನಕ್ಕೆ ಗ್ರಹಿಸಲು ಸಾಧ್ಯವಿದ್ದದ್ದಕ್ಕಿಂತ ಹೆಚ್ಚಿನ ಮಾಹಿತಿ ಮನಸ್ಸು ಮೆದುಳನ್ನು ತುಂಬಿಕೊಂಡಿತ್ತು. ಅವನ್ನೆಲ್ಲ ಹೇಗೆ ಸಂಭಾಳಿಸಬೇಕೆಂದು ತಿಳಿಯದೆ ನನ್ನ ಮಂಚದ ಮೇಲೆ ಬೋರಲಾದೆ.

ಬೆಳಿಗ್ಗೆ ಎದ್ದಾಗ ಸೂರ್ಯ ನನ್ನ ಕೆನ್ನೆ ಮುತ್ತಿಕ್ಕುತ್ತಿದ್ದ. ನಿನ್ನೆ ಸಂಜೆಯೆಲ್ಲ ಮನದೊಳಗೆ ಅವಿತಿದ್ದವ ಮತ್ತೆ ಧುತ್ತನೆ ಎದುರು ನಿಂತ. ಜನವರಿ ಮುಂಜಾನೆಯ ಚಳಿಯಲ್ಲಿ ವಸಂತನ ಹೂನಗೆ ಕೋಣೆಯನ್ನೇ ಬೆಚ್ಚಗಾಗಿಸಿತು. ಇವನನ್ನು ಹೇಗೆ ನಿಭಾಯಿಸುವುದೆನ್ನುವ ಹೊಸ ಸಮಸ್ಯೆ ಎದುರಾಯಿತು. ಹೀಗೆ, ಇದ್ದಕ್ಕಿದ್ದ ಹಾಗೆ, ಎಲ್ಲೆಂದರಲ್ಲಿ ಇವ ಎದುರಾದರೆ ನನ್ನ ಕೆಲಸಗಳೆಲ್ಲ ಏರುಪೇರಾದಂತೆಯೇ. ಅಮ್ಮನ ಚಿರತೆ ಕಣ್ಣುಗಳಿಗೆ ಈ ಕಳ್ಳನ ಪತ್ತೆಯಾಗದ ರೀತಿ ಜೋಪಾನ ಮಾಡುದು ಹೇಗೆ?... ಅಲ್ಲ! ನನಗ್ಯಾಕೆ ಅವನ ಉಸಾಬರಿ? ಅವನನ್ನು ಬಚಾಯಿಸಿಕೊಳ್ಳುವ ಯೋಚನೆ-ಯೋಜನೆ ಯಾಕೀಗ? ಅಸಲಿಗೆ, ನನ್ನೊಳಗೆ ಅವನು ಸೇರಿಕೊಂಡದ್ದು ಯಾವಾಗ? ಅಯ್ಯೋ! ಬೆಳಬೆಳಗ್ಗೆಯೇ ಇದೇನಿದು ಗೋಜಲು? ಹೇಗೆ ಇದನ್ನೆಲ್ಲ ಬಿಡಿಸಿಕೊಳ್ಳಲಿ? ಹರ್ಷಣ್ಣ? ನೇಹಾ? ನಳಿನಿ ಆಂಟಿ? ಇಲ್ಲ, ಯಾರೂ ಬೇಡ. ಇದನ್ನು ನಾನೇ ನಾನಾಗಿಯೇ ಪರಿಹರಿಸಿಕೊಳ್ಳಬೇಕು. ನಿರ್ಧಾರದ ಜೊತೆ ಕಿಟಕಿಯ ಪರದೆ ಸರಿಸಿದೆ. ಬೆಚ್ಚನೆಯ ಕಿರಣಗಳಿಗೆ ಮುಖವೊಡ್ದಿದೆ.

ಗಂಟೆ ಏಳಾದರೂ ಅಮ್ಮನ ಸದ್ದಿರಲಿಲ್ಲ. ಎದ್ದಿಲ್ಲವೇನೋ ಅಂದುಕೊಂಡು ಕೋಣೆಗೆ ಹೋಗಿ ನೋಡಿದರೆ ಅಮ್ಮ ಅಲ್ಲಿರಲೇ ಇಲ್ಲ. ಅಡುಗೆಮನೆ, ಬಚ್ಚಲು, ಹಿತ್ತಿಲು ಎಲ್ಲ ನೋಡಿ ಟೆರೇಸಿಗೆ ಹತ್ತಿದೆ. ಸೂರ್ಯನನ್ನೇ ದಿಟ್ಟಿಸುತ್ತಿದ್ದರು. ನನ್ನ ಹೆಜ್ಜೆ ಸದ್ದಿಗೆ ಬೆಚ್ಚಿಬಿದ್ದವರು ಹಾಗೇ ತಿರುಗಿ ಧಡಧಡ ಕೆಳಗೆ ಇಳಿದುಹೋದರು. ಗಲಿಬಿಲಿ, ಕಿರಿಕಿರಿಯೊಳಗೆ ನಾನೂ ಕೆಳಗಿಳಿದೆ.

ಮುಖತೊಳೆದು ಬಂದ ಅಮ್ಮನ ಕಣ್ಣುಗಳು ಅವರು ರಾತ್ರೆಯೆಲ್ಲ ಮಲಗಿರಲಿಲ್ಲ ಎನ್ನುವ ಸಂಶಯ ಕೊಟ್ಟವು.
‘ಅಮ್ಮಾ, ಉಶಾರಿಲ್ವಾ?’ ಆದಷ್ಟೂ ಮೃದುವಾಗಿ ಕೇಳಿದೆ. ಉತ್ತರ ಬರಲಿಲ್ಲ.
‘ತಿಂಡಿ ಏನ್ ಮಾಡ್ಲಿ ಹೇಳಿ, ನಾನೇ ಮಾಡ್ತೇನೆ...’ ಪ್ರತಿಕ್ರಿಯೆ ಇಲ್ಲ.
‘ದೋಸೆ ಬಂದ ಉಂಟಲ್ಲ, ದೋಸೆ ಹಾಕ್ತೇನೆ, ಬನ್ನಿ ಈಚೆ. ಟೇಬಲ್ ಹತ್ರ ಕೂತ್ಕೊಳ್ಳಿ...’ ವ್ಯತ್ಯಾಸವೇ ಇಲ್ಲ.

ಹತ್ತಿರ ಹೋಗಿ ಅವರನ್ನು ಟೇಬಲ್ ಹತ್ತಿರಕ್ಕೆ ದೂಡುನಡಿಗೆಯಲ್ಲಿ ಕರೆತಂದೆ. ಅದೇನೋ ಶೂನ್ಯಭಾವ ಅವರೊಳಗಿಂದ ಆವಿಯಾಗುತ್ತಿತ್ತು. ಅದರ ಝಳ ನನ್ನೊಳಗನ್ನೂ ಸೋಕಿತು.

ದೋಸೆ ಹಾಕಿ, ಉಪ್ಪಿನಕಾಯ್ ಜೊತೆ ಪ್ಲೇಟಲ್ಲಿಟ್ಟು ಟೇಬಲ್ಲಿನಲ್ಲಿಟ್ಟೆ. ಕುದಿಕಾಫಿ ಲೋಟ ಬದಿಯಲ್ಲಿಟ್ಟೆ. ನನಗೂ ದೋಸೆ ಕಾಫಿ ಮಾಡಿಕೊಂಡು ಟೇಬಲ್ ಬದಿಗೆ ಬಂದಾಗ ಅಮ್ಮನ ಕಣ್ಣುಗಳಲ್ಲಿ ಹನಿಗಳು ಉದುರುತ್ತಿದ್ದವು. ಹೊಟ್ಟೆ ತಾಳ ಹಾಕುತ್ತಿದ್ದರೂ ದೋಸೆ ಗಂಟಲಲ್ಲಿ ಇಳಿಯಲಿಲ್ಲ. ಕಾಫಿ ಮಾತ್ರ ಕುಡಿದು ಅಮ್ಮನ ಮುಖ ನೋಡಲಾಗದೆ ಗೋಡೆ, ಕಿಟಕಿ ನೋಡುತ್ತಾ ಅಲ್ಲೇ ಕೂತೇ ಇದ್ದೆ. ಎಷ್ಟು ಹೊತ್ತೋ, ಯಾರಿಗ್ಗೊತ್ತು?

Monday, 24 January, 2011

ಸುಮ್ಮನೆ ನೋಡಿದಾಗ...೧೨

‘ನಳಿನಿ, ನಿನ್ನ ಮತ್ತು ಹರಿಣಿಯ ಸ್ನೇಹ ನನ್ಗೆ ಗೊತ್ತಿರುವ ವಿಷಯವೇ. ಈಗ, ಈ ಮಕ್ಕಳನ್ನು ಹೇಳಿ ನೀವಿಬ್ರೂ ಇನ್ನಷ್ಟು ಹತ್ರ ಆಗಿದ್ದೀರಿ. ನಿಮ್ಮನ್ನು ದೂರ ಮಾಡುವ ಉದ್ದೇಶ ನನ್ನದಲ್ಲ. ಹಾಗಂತ, ಹರಿಣಿಯೂ ಇಲ್ಲೇ ಇದ್ರೆ ಮುಂದೆ ಅಮ್ಮ ಬರುವಾಗ ಖಂಡಿತಾ ತೊಂದ್ರೆ ಆಗ್ತದೆ. ಅದೆಲ್ಲ ಯೋಚನೆ ಮಾಡಿಯೇ ನಮ್ಮ ಹಿಂದಿನ ರಸ್ತೆಯಲ್ಲೇ ಒಂದು ಬಾಡಿಗೆ ಮನೆ ನೋಡಿದ್ದೇನೆ. ಹರಿಣಿ ಮತ್ತು ಲಚ್ಚಮ್ಮ ಅಲ್ಲಿಗೆ ಹೋಗಿರ್ತಾರೆ. ಇನ್ನೂ ಒಂದೆರಡು ತಿಂಗಳಾದ ಮೇಲೆ ಹರಿಣಿಗೆ ಇಲ್ಲಿಯ ಶಾಲೆಯಲ್ಲಿ ಟೀಚರ್ ಆಗಿ ಸೇರುವ ಸಾಧ್ಯತೆ ಉಂಟು. ಮಾತಾಡಿದ್ದೇನೆ. ಅವಳ ಜೀವನಕ್ಕೂ ಒಂದು ದಾರಿ ಆಗ್ತದೆ. ಮೊದಲೇ ಹೇಳಿದ್ರೆ ನೀನು ಕೇಳುವ ಸಾವಿರ ಪ್ರಶ್ನೆಗಳಿಗೆ ಉತ್ರ ಹೇಳಿ ನನ್ನ ತಲೆ ಹುಳ ಹಿಡೀತದೆ, ಅದ್ಕೇ ಹೇಳ್ಲಿಲ್ಲ. ಇನ್ನು... ದೇವರು ಎಲ್ಲವನ್ನೂ ಯೋಚನೆ ಮಾಡಿಯೇ ಮಾಡ್ತಾನೆ. ಹರಿಣಿಗೆ ಅವಳಿಗಳು ಹುಟ್ಟಿದ್ದು ಒಳ್ಳೇದಕ್ಕೇ. ಒಂದು ನಮ್ಗೆ, ಒಂದು ಅವಳಿಗೇನೇ. ಇದನ್ನು ಕೂಡಾ ಮೊನ್ನೆಯೇ ಲಚ್ಚಮ್ಮ, ಹರಿಣಿ ನಿರ್ಧರಿಸಿ ನಂಗೆ ಹೇಳಿದ್ರು. ಇವತ್ತು ಮಕ್ಕಳಿಗೆ ಮೂರು ತುಂಬ್ತದೆ. ಯಾವುದೇ ಪುರೋಹಿತರ ಹಂಗೂ ಇಲ್ಲದೆ ನಾವೇ ನಾಮಕರಣ ಮಾಡುವಾ. ಮಧ್ಯಾಹ್ನ ಹಬ್ಬದೂಟ ಮುಗಿಸಿ ಹರಿಣಿ ಮತ್ತು ಲಚ್ಚಮ್ಮ ಒಂದು ಮಗುವಿನ ಒಟ್ಟಿಗೆ ಆ ಮನೆಗೆ ಹೋಗ್ತಾರೆ. ಸಂಜೆ ಮತ್ತೆ ನಾವೆಲ್ಲ ಒಟ್ಟಿಗೆ ದೇವಸ್ಥಾನಕ್ಕೆ ಹೋಗಿ ಬರುವಾ. ನಾಳೆ ಹೇಗೂ ಎರಡನೇ ಶನಿವಾರ, ನಂಗೆ ಆಫೀಸಿಲ್ಲ. ನಾಡಿದ್ದು ಆದಿತ್ಯವಾರ. ಸೋಮವಾರದ ಹೊತ್ತಿಗೆ ಎಲ್ಲ ಸೆಟ್ ಆಗಿರ್ತದೆ. ಲಚ್ಚಮ್ಮ ನಿಮ್ಮಿಬ್ಬರಿಗೂ ಸಹಾಯ ಮಾಡಿಕೊಂಡು ಇಲ್ಲೇ ಇರ್ತಾರೆ. ಇದಿಷ್ಟು ಪ್ಲಾನ್. ಏನ್ ಹೇಳ್ತೀ?’

ಹರಿಣಿ, ನಾನು ಮುಖ ಮುಖ ನೋಡಿಕೊಳ್ತಿರುವಾಗಲೇ ಲಚ್ಚಮ್ಮನ ಖಡಕ್ ಚಾ ಲೋಟೆಗಳು ಬಂದವು. ತೊಟ್ಟಿಲು ಹೊತ್ತು ತಂದ ಆಳು ಕೆಂಚ, ಜಗಲಿ ಬದಿಯಲ್ಲಿದ್ದವ ಅಲ್ಲಿಂದಲೇ ಬಗ್ಗಿ, ‘ಮಧ್ಯಾಹ್ನ ಊಟ ಮಾಡಿ ಬರ್ತೇನೆ ಅಯ್ಯ. ಆ ಮನೆಗೆ ಸಾಮಾನು ಸಾಗಿಸ್ಲಿಕ್ಕೆ. ಅಮ್ಮ, ನಂಗೊಂದು ಲೋಟ ಪಾಯ್ಸ ಇಡಿ, ಪೂರಾ ಖಾಲಿ ಮಾಡ್ಬೇಡಿ’ ಅಂದ. ‘ನೀನು ಬಂದ್ರೆ ಪಾಯ್ಸ ಗ್ಯಾರಂಟಿ. ಬಾ ಮೊದ್ಲು’ ಅಂದ್ರು ಸುಮುಖ್. ಚಾ ಕುಡಿದು ಅವ ಹೊರಟ. ನಡುಮನೆಯಲ್ಲಿ ಮಾತುಗಳು ಚಹಾ ಲೋಟಗಳೊಳಗೆ ಮುಳುಗಿದ್ದವು.

‘ಹರಿಣಿಯ ಮಗಳು ಶಿಶಿರಾ. ನಳಿನಿಯ ಮಗಳು ನೇಹಾ.’ ಸುಮುಖ್ ದನಿಯಲ್ಲಿ ತಮಾಷೆಯಿರಲಿಲ್ಲ. ನಾವು ಮೂವರೂ ಅವರ ಮುಖ ನೋಡಿದೆವು.
‘ಒಪ್ಪಿಗೆಯಿಲ್ವಾ?’
‘....’ ಮೂರು ತಲೆಗಳು ಸುಮ್ಮನೇ ಮೇಲಿಂದ ಕೆಳಗೆ ಆಡಿದವು.
‘ಮತ್ಯಾಕೆ ಹಾಗೆ ನೋಡ್ತೀರಿ?’
‘....’
‘ಏನಾದ್ರೂ ಮಾತಾಡಿ... ಯಾರಾದ್ರೂ...’
‘....’
‘ಲಚ್ಚಮ್ಮ, ಚಾ ಮಾಡುವಾಗ ಏನಾದ್ರೂ ಮದ್ದು ಹಾಕಿದ್ರಾ ಹೇಗೆ?’
‘....’
‘ಅಯ್ಯೋ ದೇವ್ರೇ... ಮಾತಾಡಿ ಮಾರಾಯ್ತಿಯರೇ... ಇಲ್ಲಿ ಏನೂ ಅವಾಂತರ ಆಗ್ಲಿಲ್ಲ...’
‘....’
‘....’
ಒಂದು ಜೊತೆ ಕಿಸಕ್ ಸದ್ದು ಸೋಫಾವನ್ನೊಮ್ಮೆ ಕಂಪಿಸಿತು. ಅದೇ ಪ್ರತಿಧ್ವನಿಸಿ ನಡುಮನೆ ತುಂಬ ಗಲಗಲವಾಯ್ತು. ನಕ್ಕೂನಕ್ಕೂ ನನ್ನ ಹರಿಣಿಯ ಕಣ್ಣುಗಳಲ್ಲಿ ನೀರಿಳಿಯಲು ಶುರುವಾದಾಗ ಲಚ್ಚಮ್ಮ ಟವೆಲ್ ತಂದುಕೊಟ್ಟರು. ಸುಮುಖ್ ನೇಹಾಳನ್ನು ಎತ್ತಿಕೊಂಡು ಅಲ್ಲಿಂದ ಜಾರಿಕೊಂಡರು. ಅವರ ಹಿಂದೆಯೇ ಲಚ್ಚಮ್ಮ ಶಿಶಿರಳನ್ನು ಮಾತಾಡಿಸುತ್ತಾ ನಡೆದರು. ಮುಂದೆ ಎಲ್ಲವೂ ಸುಮುಖ್ ಯೋಜಿಸಿದ ಹಾಗೇ ನಡೆದುಹೋಯ್ತು. ಮಕ್ಕಳ ಮನೆಯಿಂದ ಹಿಂದೆ ಬಂದ ಅತ್ತೆ ಕೂಡಾ ಖುಷಿಯಾಗಿಯೇ ನೇಹಾಳನ್ನು ಮುದ್ದು ಮಾಡಲು ಶುರುಮಾಡಿದಾಗ ಈ ಮನೆ ನಂದನವೇ ಆಯ್ತು. ಆಮೇಲಾಮೇಲೆ ಲಚ್ಚಮ್ಮ ಇಲ್ಲಿಗೆ ಬರುದನ್ನು ಕಡಿಮೆ ಮಾಡಿದ್ರು. ನಂಗೆ ಸಹಾಯಕ್ಕೆ ಅತ್ತೆ ಇದ್ರಲ್ಲ, ನಂಗೂ ತೊಂದ್ರೆ ಆಗ್ಲಿಲ್ಲ. ನಿಜವಾಗಲೂ ನೆಮ್ಮದಿ ಅನ್ನುದನ್ನು ನಮ್ಮನೆಗೆ ತಂದವಳು ಈ ನೇಹಾ. ಇವಳು ನಿನ್ನ ತಂಗಿ, ಶಿಶಿರಾ. ಆದ್ರೂ ನೀವು ಒಬ್ರ ಹಾಗೆ ಇನ್ನೊಬ್ರಿಲ್ಲ. ಮೊದಲಿಂದಲೂ ನೀವಿಬ್ರೂ ಬೇರೆ ಬೇರೆ ಸ್ವಭಾವದವ್ರೇ. ನಮ್ಮೆಲ್ಲರ ಜೀವನಕ್ಕೆ ಬೆಳಕಾಗಿ ಬಂದವರು ನೀವಿಬ್ರು ಮಕ್ಳೇ. ಎಂದಿಗೂ ಸುಖವಾಗಿರಿ....
*****
ನಳಿನಿ ಆಂಟಿ ಮಾತು ಮುಗಿಸಿದಾಗ ನಮ್ಮಿಬ್ಬರ ಕಣ್ಣುಗಳು ಗೊಂದಲಮಯವಾಗಿಯೇ ಇದ್ದವು. ನನ್ನೊಳಗೆ ನೂರಾರು ಪ್ರಶ್ನೆಗಳು. ಇಷ್ಟು ಹತ್ರ ಇದ್ದ ನಾವುಗಳು ಈ ಊರು ಬಿಟ್ಟು ಹೋದದ್ದು ಯಾಕೆ? ಯಾವಾಗ? ಮತ್ತೊಮ್ಮೆ ಇದೇ ಊರಿಗೆ ಬಂದದ್ದು ಯಾಕೆ? ಲಚ್ಚಮ್ಮ ಈಗೆಲ್ಲಿದ್ದಾರೆ? ಅಮ್ಮ ಯಾಕೆ ಸದಾ ಸಿಡುಕ್ತಾರೆ? ಅದ್ರ ಹಿನ್ನೆಲೆ ಏನು? ಸಿನೆಮಾಗಳಲ್ಲಿ ಆಗುವ ಹಾಗೆ ಧಡಕ್ಕನೆ ಎದ್ದು ಒಬ್ಬರನ್ನೊಬ್ಬರು ತಬ್ಬಿಕೊಳ್ಳಬೇಕು ಅಂತ ನೇಹಾಳಿಗಾಗಲೀ ನನಗಾಗಲೀ ಅನ್ನಿಸಲೇ ಇಲ್ಲ. ಸುಮ್ಮನೇ ಒಬ್ಬರನ್ನೊಬ್ಬರು ನೋಡುತ್ತಾ ಕೂತಿದ್ದೆವು.

ಆಂಟಿಯೇ ನಮ್ಮನ್ನೆಬ್ಬಿಸಿದರು. ಆಗಲೇ ಸುಮುಖ್ ಅಂಕಲ್ ಗೇಟಿನೊಳಗೆ ಬಂದವರು ನಮ್ಮನ್ನು ಜಾಜಿ ಮಂಟಪದಲ್ಲಿ ನೋಡಿ ಅಲ್ಲಿಗೇ ಬಂದ್ರು. ‘ನಮ್ಮ ಜಿಂಕೆಮರಿಗಳು ಹೇಗಿದಾವೆ?’ ಎನ್ನತ್ತಾ ನಮ್ಮಿಬ್ಬರ ಕಡೆ ಮಿಂಚು ನೋಟ ಹರಿಸಿದರು. ಅವರು ಯಾವಾಗಲೂ ಹೇಳುತ್ತಿದ್ದ ಆ ‘ಜಿಂಕೆಮರಿಗಳು’ ಪದಕ್ಕೆ ಇವತ್ತು ವಿಶೇಷ ಅರ್ಥ ಕಂಡಿತು ನಮಗಿಬ್ಬರಿಗೂ. ಅವರ ಕಣ್ಣ ಮಿಂಚು ನಮ್ಮೊಳಗೆ ಹರಿಯಿತು. ಅಚಾನಕ್ ವಾಚಿನತ್ತ ನೋಡಿ ಗಾಬರಿಯಿಂದ ಮೆಟ್ಟಿಬಿದ್ದೆ.

Monday, 10 January, 2011

ಸುಮ್ಮನೆ ನೋಡಿದಾಗ...೧೧

ಮರುದಿನ ಯಾವತ್ತಿನ ಹಾಗೆ ಆಫೀಸಿಗೆ ಹೊರಟವರನ್ನು ತಡೆದು ಕೇಳಿದೆ, ‘ನಿನ್ನೆ ಹರಿಣಿ ಹತ್ರ ಏನು ಮಾತಾಡಿದ್ರಿ? ಏನು ಹೇಳಿದ್ಲು?’
ಮತ್ತದೇ ಮಿಂಚಿನ ತುಂಟನಗೆ ಹೊಮ್ಮಿಸಿದರು. ರೇಗಿತು.
‘ಹಾಗೆ ನೆಗಾಡಿದ್ರೆ ನನ್ಗೆ ಉತ್ರ ಸಿಗುದಿಲ್ಲ. ಏನ್ ಕೇಳಿದ್ರಿ? ಏನೂಂತ ಹೇಳಿದ್ಲು?’
‘ನಿನ್ಗೆ ಬೇಕಾದ ಉತ್ರ ಅವ್ಳ ಹತ್ರ ನೀನೇ ಕೇಳಿಕೋ. ನನ್ಗೆ ಬೇಕಾದ್ದು ಕೇಳಿದ್ದೇನೆ, ಕೊಟ್ಟಿದ್ದಾಳೆ. ಈಗ ನಾನ್ ಹೊರಟೆ. ಟಾಟಾ...’
ಕೋಪಶಿಖರದ ತುದಿಯಲ್ಲಿದ್ದವಳನ್ನು ಮತ್ತೆ ಮನೆಯೊಳಗೆ ತಂದವಳು ಹರಿಣಿಯೇ.
ಮುದ್ದುಮುದ್ದಾಗಿದ್ದ ಮಗಳನ್ನು ನನ್ನ ಕೈಯಲ್ಲಿಟ್ಟಳು. ‘ಇವಳನ್ನು ನೋಡಿಕೋ’.
ಇವಳು ಸ್ನಾನಕ್ಕೋ ಮತ್ತೆಂತದಕ್ಕೋ ಹೋಗುವವಳಿದ್ದಾಳೆ. ಲಚ್ಚಮ್ಮ ಇನ್ನೊಂದು ಮುದ್ದಿನ ಮುದ್ದೆಯನ್ನು ಮುತ್ತಿಕ್ಕುತ್ತಿರಬೇಕು. ಇವಳ ಇಬ್ಬರು ಮಕ್ಕಳನ್ನೂ ನಾವೆಲ್ಲ ಸದಾ ನೋಡಿಕೊಳ್ಳಬೇಕು. ಇವಳಿಗೆ ಯಾವ ಕರ್ತವ್ಯ, ಜವಾಬ್ದಾರಿ ಇಲ್ವಾ?- ನನ್ನ ತಲೆಯಲ್ಲಿ ಕುರುಕುರುಕೀಟ ಗುರುಗುಟ್ಟಿತು. ಮಗುವನ್ನು ನಾನು ಕೈಗೆತ್ತಿಕೊಂಡ ಕ್ಷಣವೇ ಹರಿಣಿ ರೂಮಿಗೆ ಹೋಗಿಬಿಟ್ಟಳು.

ಲಚ್ಚಮ್ಮ ಅಡುಗೆಕೋಣೆಯಿಂದ ಬಂದರು, ‘ನಳಿನಿ, ಮಧ್ಯಾಹ್ನಕ್ಕೆ ಅಡುಗೆ ಏನ್ ಮಾಡ್ಲಿ? ತರಕಾರಿ ಏನುಂಟು ಒಳಗೆ?’
ಅವರ ಸ್ವರ ಕೇಳಿದ್ದೇ ಕೈಯಲ್ಲಿದ್ದ ಗೊಂಬೆ ಉಲಿಯೆತ್ತಿತು. ಅವರ ಮಡಿಲಿಗೇ ಮಗುವನ್ನು ಕೊಟ್ಟು ನಾನು ಹರಿಣಿಯ ಕೋಣೆಗೆ ನುಗ್ಗಿದೆ. ತನ್ನ ಬಟ್ಟೆಗಳನ್ನೆಲ್ಲ ಜೋಡಿಸಿಕೊಂಡು ಚೀಲ ತುಂಬಿಸುತ್ತಿದ್ದಳು. ನಿಧಾನವಾಗಿ ನನ್ನೊಳಗಿನ ಮಂಜು ಕರಗಿ ಚಿತ್ರ ಸ್ಪಷ್ಟವಾಯ್ತು. ಬಟ್ಟೆ ಮಡಚಿ ಚೀಲದೊಳಗೆ ಇಡುತ್ತಿದ್ದವಳನ್ನು ಹಾಗೇ ತಬ್ಬಿಕೊಂಡು ಅತ್ತುಬಿಟ್ಟೆ.
‘ಎಲ್ಲೂ ಹೋಗ್ಬೇಡ ಹರಿಣಿ. ಇಲ್ಲೇ ಇದ್ದುಬಿಡು. ನಾವು ಮೂವರೂ ಸೇರಿ ಈ ಇಬ್ಬರನ್ನು ಬೆಳೆಸುವಾ. ನಮ್ಮ ಸ್ನೇಹ ಉರುಳಾಗುದಿಲ್ಲ ನಿನ್ಗೆ, ನೆರಳಾಗ್ತದೆ. ಇಲ್ಲಿಯೇ ಇರು...’
ನಾನು ಮಾತಾಡ್ತ ಇದ್ದ ಹಾಗೆಯೇ ಲಚ್ಚಮ್ಮ ಒಳಗೆ ಬಂದ್ರು.
‘ನಳಿನಿ, ಹರಿಣಿ ಬೇರೆಲ್ಲಿಗೂ ಹೋಗುದಿಲ್ಲ ಮಾರಾಯ್ತಿ. ಇಲ್ಲೇ ಹಿಂದಿನ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ಇರ್ತಾಳೆ. ಇವತ್ತೇ ನಾವಲ್ಲಿಗೆ ಹೋಗುದು ಅಂತ ನಿರ್ಧಾರ ಆಗಿದೆ, ನಿನ್ನೆ ರಾತ್ರೆ...’
‘ಅಂದ್ರೆ... ಇದೆಲ್ಲ ನನ್ಗೆ ಯಾಕೆ ಹೇಳ್ಲಿಲ್ಲ? ಸುಮುಖ್ ಕೂಡಾ ನನ್ನಿಂದ ಗುಟ್ಟು ಮಾಡಿದ್ದು ಯಾಕಂತೆ? ಇದ್ರೊಳಗೆ ಬೇರೇನು ಕಥೆ ಸೇರಿದೆ? ಯಾಕೆ ನಂಗೆ ಹೇಳ್ಲಿಲ್ಲ?’
‘ನಿಂಗೆ ಹೇಳ್ಬಾರ್ದು ಅಂತ ಅವ್ರೇ ನಮ್ಗೆ ತಾಕೀತು ಮಾಡಿ ಹೋಗಿದ್ದಾರೆ. ನಂಗೆ ಮನೆ ನೋಡಿ ಮಾತಾಡಿ ಬಂದದ್ದೇ ಅವ್ರು, ಮೊನ್ನೆಯೇ. ನಿಂಗೆ ಯಾಕೆ ಹೇಳ್ಲಿಲ್ವೋ ಗೊತ್ತಿಲ್ಲ, ಹೇಳ್ಬೇಡಿ ಅಂತಂದ್ರು. ಅದ್ಕೇ ನಾವು ಹೇಳ್ಲಿಲ್ಲ...’
‘ನಿಂಗೆ ಸರ್‌ಪ್ರೈಸ್ ಮಾಡ್ಬೇಕು ಅಂತ ಏನನ್ನೂ ಹೇಳ್ಲಿಲ್ಲ ಮಾರಾಯ್ತಿ...’ ತಲೆಯಲ್ಲೊಂದು ತೊಟ್ಟಿಲು ಹೊತ್ತು ನಿಂತ ಸುಮುಖ್ ನನ್ನೊಳಗೆ ನಗುವನ್ನೂ ಕೋಪವನ್ನೂ ಒಟ್ಟಿಗೇ ಉಕ್ಕಿಸಿದರು. ಅವರ ಹಿಂದೆಯೇ ಇನ್ನೊಂದು ತೊಟ್ಟಿಲು ಹೊತ್ತ ಒಬ್ಬ ಆಳು.

‘ನೀವು ಆಫೀಸಿಗೆ ಹೊರಟದ್ದಲ್ವಾ? ಇದೆಲ್ಲ ಕಿತಾಪತಿ ಯಾಕೆ ಅಂತ? ನಂಗೆ ಹೇಳಿದ್ರೆ ಏನಾಗ್ತಿತ್ತು?’
‘ನಿಂಗೆ ಮೊನ್ನೆಯೇ ಹೇಳಿದ್ರೆ ನೀನು ಮೊನ್ನೆಯಿಂದಲೇ ಅಳ್ತಾ ಇರ್ತಿದ್ದಿ. ಎರಡು ದಿನದ ಕಣ್ಣೀರು ಉಳಿತಾಯ ಆಯ್ತು ಈಗ, ಅಷ್ಟೇ.’ ಮತ್ತೊಂದು ಮಿಂಚುನಗು. ಅದೀಗ ನನ್ನ ಕಣ್ಣಬಿಂದುಗಳಲ್ಲಿ ಪ್ರತಿಫಲಿಸಿತು. ಕೆನ್ನೆಗಳಲ್ಲಿ ಇಳಿಯಿತು. ಹರಿಣಿ ತಬ್ಬಿಕೊಂಡಳು.
‘ಎರಡು ದಿನಗಳಿಂದ ಕಟ್ಟಿಕೊಂಡ ನನ್ನ ದುಃಖದಕಟ್ಟೆ ಇವತ್ತೀಗ ಹರೀತದೆ, ನಳಿನಿ...’
‘ಬಕೆಟ್ ತನ್ನಿ ಲಚ್ಚಮ್ಮ...’
‘ಅಯ್ಯಾ, ಬಕೆಟ್ ಮತ್ತೆ ತರ್ಲಿ, ಈ ತೊಟ್ಟಿಲು ಎಲ್ಲಿಡ್ಲಿ ಹೇಳಿ ಮೊದ್ಲು...’
ಎಲ್ಲರ ನಗುವಿನ ನಡುವೆ ಮಕ್ಕಳೂ ಮೆಲ್ಲ ರಾಗ ಎತ್ತಿದರು. ನಾನು ವಾಸ್ತವಕ್ಕೆ ಬಂದೆ. ಮುಖ ಒರಸಿಕೊಂಡೆ.
‘ಏನಿದೆಲ್ಲ ಒಳಸಂಚು? ಈಗ್ಲಾದ್ರೂ ಹೇಳ್ತೀರಾ? ಸುಮುಖ್, ನೀವೇ ಹೇಳ್ಬೇಕು, ದೊಡ್ಡ ಕಿಲಾಡಿ ಆಗಿದ್ದೀರಿ ನೀವು. ನೀವೇ ತಪ್ಪೊಪ್ಪಿಗೆ ಹೇಳಿಕೆ ಕೊಟ್ರೆ ಕ್ಷಮೆ ಸಿಗ್ಬಹುದು.’
‘ಒಂದೊಳ್ಳೆ ಕಡಕ್ ಚಾ ಸಿಕ್ಕಿದ್ರೆ ತಪ್ಪೊಪ್ಪಿಗೆ ಹೇಳಿಕೆ ಕೊಡುವ ಬಗ್ಗೆ ಯೋಚನೆ ಮಾಡಬಹುದೇನೋ...’
‘ನೀವೆಲ್ಲ ಮಾತಾಡ್ತಾ ಕೂತ್ಕೊಳ್ಳಿ. ಕಡಕ್ ಚಾ ನಾನ್ ಮಾಡಿ ತರ್ತೇನೆ.’ ಲಚ್ಚಮ್ಮ ಒಳಗೆ ಹೋದ್ರು. ನಾವು ಇಬ್ಬರು ಮಕ್ಕಳನ್ನೂ ಎತ್ತಿಕೊಂಡು ನಡುಮನೆಯ ಸೋಫಾಗಳಲ್ಲಿ ಕೂತೆವು. ಎರಡು ಜೋಡಿ ಕಣ್ಣುಗಳು ಸುಮುಖ್ ಮುಖದಲ್ಲಿ ನೆಲೆಯಾದವು.

Monday, 3 January, 2011

ಸುಮ್ಮನೆ ನೋಡಿದಾಗ...೧೦

************
ನಲ್ಮೆಯ ಓದುಗರಿಗೆಲ್ಲ ಹೊಸ ವರ್ಷದ ಶುಭಾಶಯಗಳು.
ಹೊಸವರುಷವು ಹೊಸದೆ ಸಂಚಿ ತಂದಿದೆ

ಹೊಸಹೊಸತು ಕನಸು ಕಣ್ಣ ಅಂಚಿನಲ್ಲಿದೆ

ಎಲ್ಲ ಕನಸುಗಳು ಹುರುಪು ತರಲಿ

ಎಲ್ಲ ದಿನಗಳಲೂ ಹರುಷವಿರಲಿ.

************
**ನೀಳ್ಗತೆಯ ಮುಂದಿನ ಭಾಗ**

ನಮ್ಮಿಬ್ಬರ ಸ್ನೇಹ ಗೆಳೆತನವನ್ನೂ ಮೀರಿ ಅಕ್ಕತಂಗಿಯರ ಮಟ್ಟಕ್ಕೆ ಮುಟ್ಟಿತ್ತು ಹರಿಣಿಗೆ ಎಂಟು ತಿಂಗಳಾಗುವಷ್ಟರಲ್ಲಿ. ನಮ್ಮ ಹರಟೆ ಮಾತಿನ ನಡುವೆ ಬಾರದ ವಿಷಯಗಳೇ ಇರಲಿಲ್ಲ. ನೆರೆಕರೆಯಲ್ಲಿ ಈಕೆ ನನ್ನ ತಂಗಿಯೇ. ಇದರಿಂದ ಸಲ್ಲದ ನೂರೆಂಟು ಪ್ರಶ್ನೆಗಳಿಗೆ ಆರಂಭದಲ್ಲೇ ಪೂರ್ಣವಿರಾಮ ಬಿದ್ದಿತ್ತು. ಯಾವಾಗಲಾದರೂ ಸುಮುಖ್ ಟೂರ್ ಹೋದಾಗ ನಾವಿಬ್ಬರೂ ಸಿನೆಮಾ ನೋಡಿ ಹೋಟೇಲಲ್ಲಿ ಊಟ ಮಾಡಿ ಬರುತ್ತಿದ್ದೆವು, ಸುಮುಖ್ ಇದನ್ನು ಛೇಡಿಸಿ ನಮ್ಮನ್ನು ರೇಗಿಸುತ್ತಿದ್ದರು. ಮಾತು ಮಾತಿನ ನಡುವೆ ನಮಗೆ ಮಕ್ಕಳಾಗುವ ಸಾಧ್ಯತೆಯೇ ಇಲ್ಲವೆನ್ನುವ ಕಹಿಸತ್ಯವನ್ನು ಹರಿಣಿಗೆ ಹೇಳಿದ್ದೆ. ಅವಳಿಂದ ಕಣ್ಣೀರು ಪ್ರತಿಕ್ರಿಯೆಯಾಗಿತ್ತು.
‘ಈಗಲೇ ಮಗು ಬೇಕಿಲ್ಲದ, ಅರ್ಹತೆಯಿಲ್ಲದ ನನಗೆ ಈ ಪರಿಸ್ಥಿತಿ ಬಂದಿದೆ. ಬೇಕು ಬೇಕು ಅಂತ ಹಂಬಲಿಸುವ ನಿಮಗೆ ನನ್ನನ್ನು ನೋಡಿಕೊಳ್ಳುವ ಈ ಗತಿ. ಇದ್ಯಾವ ನ್ಯಾಯ ನಳಿನಿ? ಎಲ್ಲಿದ್ದಾನೆ ಆ ನಿನ್ನ ದೇವರು? ನನ್ನೆದುರು ಬಂದ್ರೆ ಕೆನ್ನೆಗೆ ಹೊಡೆದು ಕೇಳ್ತೇನೆ...’

ಇಂಥ ಸನ್ನಿವೇಶಗಳಲ್ಲಿ ಅವಳನ್ನು ಸುಮ್ಮನಿರಿಸುವುದೇ ಕಷ್ಟವಾಗುತ್ತಿತ್ತು. ಆ ದಿನಗಳಲ್ಲೇ ಮನೆಯ ಸುತ್ತಲಿನ ಹಲವಾರು ಗಿಡಗಳನ್ನು ನಾವಿಬ್ಬರೂ ಸೇರಿ ನೆಟ್ಟದ್ದು. ಈ ಜಾಜಿ ಮಂಟಪವೂ ಆಗಿಂದೇ. ನಾವು ನೆಟ್ಟ ಜಾಜಿ ಹಬ್ಬಲಿ ಅಂತ ಸುಮುಖ್ ತಾನೇ ಈ ಮಂಟಪ ಕಟ್ಟಿದ್ರು. ನಮ್ಮ ಮೂವರ ಸ್ನೇಹದ ಪ್ರೀತಿಯ ಹಂದರ ಇದು. ಅದ್ಕೇ ನಮಗೆಲ್ಲ ಮೆಚ್ಚಿನ ಸ್ಥಳವೂ ಇದೇ...

ದಿನ-ವಾರ-ತಿಂಗಳು ದಾಟಿದ್ದವು. ಹರಿಣಿ ಗೆಲುವಾಗಿರುತ್ತಿದ್ದಳು. ಅವಳನ್ನು ನೋಡುತ್ತಿದ್ದ ಡಾಕ್ಟರು ನಮ್ಮ ಹಿಂದಿನ ರಸ್ತೆಯಲ್ಲೇ ಇದ್ದರು. ಅದೂ ವರಪ್ರದವೇ ಆಗಿದ್ದು ಸುಮುಖ್ ಊರಲ್ಲಿ ಇಲ್ಲದ ದಿನವೇ ಹರಿಣಿಗೆ ಹೆರಿಗೆ ನೋವು ಬಂದಾಗ, ಹದಿನೈದು ದಿನ ಮೊದಲೇ. ಗಾಬರಿಯಿಂದ ಸುಮುಖ್ ಇಳಿದುಕೊಂಡಿದ್ದ ಹೋಟೇಲಿಗೇ ಫೋನ್ ಮಾಡಿದ್ದೆ, ನಡುರಾತ್ರೆ ಒಂದೂಕಾಲರ ಸಮಯ. ಅವರೇ ನೆನಪಿಸಿದರು, ಡಾಕ್ಟರ್ ಹಿಂದಿನ ರಸ್ತೆಯಲ್ಲೇ ಇರುವುದನ್ನು. ಆಮೇಲಷ್ಟೇ ಡಾಕ್ಟರ್ ಮನೆಗೆ ಫೋನ್ ಮಾಡಿದೆ. ಇಷ್ಟು ದಿನ ಎಲ್ಲವೂ ಸರಿಯಾಗಿ ನಡೆದಿತ್ತು. ಈಗ ನನ್ನ ಕೈಕಾಲೇ ಆಡುತ್ತಿರಲಿಲ್ಲ. ಗಾಬರಿಯಿಂದ ಉಸಿರು ಗಂಟಲಲ್ಲೇ ಏರಿಳಿಯುತ್ತಿತ್ತು, ಶ್ವಾಸಕೋಶದೊಳಗೆ ಹೋಗುತ್ತಿರಲಿಲ್ಲ. ಹರಿಣಿಯೇ ನನ್ನ ಕೈಗಳನ್ನು ಹಿಡಿದು, ‘ದೀರ್ಘವಾಗಿ ಉಸಿರಾಡು, ನೀಳವಾಗಿ ಉಸಿರು ತಗೋ, ನಿಧಾನವಾಗಿ ಹೊರಗೆ ಬಿಡು... ಹಾಗೇ... ರಿಲ್ಯಾಕ್ಸ್...’ ಅಂತೆಲ್ಲ ಹೇಳುತ್ತಿದ್ದಾಗಲೇ ಬಂದ ಡಾಕ್ಟರ್ ಈ ದೃಶ್ಯ ನೋಡಿ ನಕ್ಕುಬಿಟ್ಟರು. ಆಗಷ್ಟೇ ನನ್ನ ಪರಿಸ್ಥಿತಿ ಸುಧಾರಿಸಿಕೊಂಡಿತು.

ಡಾಕ್ಟರ್ ನಮ್ಮಿಬ್ಬರನ್ನೂ ಹೊರಡಿಸಿಕೊಂಡು ತಮ್ಮ ನರ್ಸಿಂಗ್ ಹೋಮಿಗೆ ತಮ್ಮ ಕಾರಲ್ಲೇ ಕರೆದುಕೊಂಡು ಹೋದರು. ಪದೇ ಪದೇ ಪ್ರತೀ ಕಾಲು ಗಂಟೆಗೊಮ್ಮೆ ‘ಅಮ್ಮಾ....’ ಅಂತ ಹೊಟ್ಟೆ ಹಿಡಿಯುತ್ತಿದ್ದ ಹರಿಣಿಯನ್ನು ಸಮಾಧಾನಿಸುತ್ತಾ, ಅವಳು ನನಗೆ ಮಾಡಿದ್ದ ಪಾಠವನ್ನು ಅವಳಿಗೇ ಕಲಿಸಿದರು. ಕಾಂಟ್ರ್ಯಾಕ್ಷನ್ ಬಂದಾಗ ದೀರ್ಘವಾಗಿ ಉಸಿರಾಡಿ ಬಾಯಿಯ ಮೂಲಕ ನಿಧಾನವಾಗಿ ಉಸಿರು ಬಿಡುತ್ತಾ ಪೂರ್ತಿಯಾಗಿ ರಿಲ್ಯಾಕ್ಸ್ ಆಗುವ ರೀತಿಯನ್ನು ಹೇಳಿಕೊಟ್ಟರು. ಆಮೇಲಾಮೇಲೆ ನೋವು ಪ್ರತೀ ಐದು ನಿಮಿಷಕ್ಕೊಂದು ಬರುವಾಗ ಉಸಿರಾಟವನ್ನೂ ಅದಕ್ಕೆ ಸರಿಯಾಗಿ ಹೊಂದಿಸಲು ಹೇಳಿದರು. ನೋವಿನ ಒಂದೂವರೆ ನಿಮಿಷಗಳ ಕಾಲವೂ ನೀಳವಾಗಿ ಒಳ ಉಸಿರನ್ನೂ ಪುಟ್ಟಪುಟ್ಟ ನಿಶ್ವಾಸನ್ನೂ ಮಾಡಲು ತಿಳಿಸಿದರು. ಮುಂದೆ ಎರಡು ನಿಮಿಷಕ್ಕೊಮ್ಮೆ ತೊಂಭತ್ತು ಸೆಕೆಂಡ್ ಉದ್ದದ ಕಾಂಟ್ರ್ಯಾಕ್ಷನ್ಸ್ ಬಂದಾಗಲಂತೂ ನನ್ನ ದೇಹವೇ ನಡುಗುತ್ತಿತ್ತು.

ಅಂತೂ ಇಂತೂ ಮಧ್ಯಾಹ್ನದ ಹನ್ನೊಂದು ಗಂಟೆಯ ಹೊತ್ತಿಗೆ ಲೇಬರ್ ರೂಮಿಗೆ ಕರೆದೊಯ್ದರು. ಮತ್ತೆ ಹತ್ತೇ ನಿಮಿಷಗಳಲ್ಲಿ ಹಸುಗೂಸಿನ ಹೊಸ ಅಳು ನನ್ನನ್ನು ಯಾವುದೋ ಲೋಕಕ್ಕೆ ಕರೆದೊಯ್ದಿತ್ತು. ಮಗುವನ್ನು ನೋಡುವ ಆತುರದಲ್ಲಿ ಇದ್ದವಳಿಗೆ ಬೆನ್ನ ಹಿಂದೆ ಬಂದು ನಿಂತ ಸುಮುಖ್ ಗಮನಕ್ಕೇ ಬಂದಿರಲಿಲ್ಲ. ಮಗುವನ್ನು ಈಗ ತರುತ್ತಾರೆ, ಇನ್ನೊಂದು ಕ್ಷಣಕ್ಕೆ ತರುತ್ತಾರೆ... ಕಾಯುತ್ತಿದ್ದವರಿಗೆ ಮತ್ತೊಂದು ಹಸುಗೂಸಿನ ಹೊಸ ಅಳು ಕೇಳಿತ್ತು. ನಾನು ಕಂಡ ಹಾಗೆ ಅಂದು ಹರಿಣಿಯೊಬ್ಬಳೇ ಹೆರಿಗೆಗಿದ್ದವಳು. ಅಂದ್ರೆ... ಹರಿಣಿಗೆ ಅವಳಿಗಳೇ...

ನರ್ಸ್ ಒಬ್ಬಳು ಹೊರಗೆ ತಲೆ ಹಾಕಿ, ‘ಟ್ವಿನ್ಸ್ ಹುಡುಗಿಯರು. ಕಂಗ್ರಾಟ್ಸ್’ ಅಂತಂದು ಮತ್ತೆ ತಲೆ ಒಳಗೆ ಎಳೆದುಕೊಂಡಳು. ನಾವು ಪರಸ್ಪರ ಮುಖ ನೋಡಿಕೊಂಡೆವು. ಅವಳಿಜವಳಿ ಹುಡುಗಿಯರು. ಅಪ್ಪಾ, ದೇವರೇ... ಇದೇನು ಆಟವಾ ನಿನ್ನದು? ಒಂದಾದ್ರೂ ಸ್ಯಾಂಕ್ಷನ್ ಮಾಡು ಅಂತ ಬೇಡ್ತಾ ಇದ್ದ ನಮಗೆ ಸೊನ್ನೆ. ಒಂದನ್ನೇ ಏನ್ ಮಾಡ್ಲಿ ಅಂತ ಯೋಚಿಸುವವರಿಗೆ ಡಬಲ್... ಬೋನಸ್. ಎಲ್ಲಿಂದೆಲ್ಲಿಗೆ ಲೆಕ್ಕಾಚಾರ. ದೇವ್ರೇ ನಿಂಗೆ ತಲೆ ಸರಿಯಿಲ್ಲ. ನಿಂಗೆ ಲೆಕ್ಕ ಬರುದೇ ಇಲ್ಲ. ಯೂಸ್ ಲೆಸ್ ಫೆಲೋ ನೀನು...

ನನ್ನ ಮನಸ್ಸಿನೊಳಗೆ ಸಾವಿರಾರು ಅಕ್ಷರ-ಪದ-ವಾಕ್ಯಗಳು ಕಲಸಿಕೊಂಡಿದ್ದವು. ‘ಬ್ಲೀಡಿಂಗ್ ಜಾಸ್ತಿ ಉಂಟು. ಬಿ.ನೆಗೆಟಿವ್ ಬ್ಲಡ್ ತನ್ನಿ’ ಅಂತ ಹೇಳಿದಳು ಇನ್ನೊಂದು ನರ್ಸ್. ನನ್ನದು ಬಿ. ನಾನೇ ಕೊಡ್ತೇನೆ ಅಂತ ಹೊರಟವರು ಹತ್ತು ನಿಮಿಷದಲ್ಲಿ ಚಪ್ಪೆ ಮುಖ ಮಾಡಿ ಹಿಂದೆ ಬಂದರು, ತಾನು ಬಿ.ಪೊಸಿಟಿವ್ ಅಂದರು. ನನ್ನದೂ ಬಿ ಗ್ರೂಪ್ ಅಂತ ನೆನಪಾಯ್ತು. ಹೋದೆ. ಟೆಸ್ಟ್ ಮಾಡಿದಾಗ ನನ್ನದು ಬಿ.ನೆಗೆಟಿವ್. ಹರಿಣಿಯ ಪಕ್ಕದ ಟೇಬಲ್ ಮೇಲೆ ನಾನೂ ಮಲಗಿದೆ. ನನ್ನ ಕೈಯಿಂದ ಅವಳ ಕೈಯೊಳಗೆ ನೇರವಾಗಿ ರಕ್ತ ಹೋಗುವಂತೆ ಹೊಂದಿಸಿದರು. ಅವಳನ್ನೇ ನೋಡುತ್ತಾ ಮಲಗಿದೆ. ಅಕ್ಕ-ತಂಗಿಯರೆಂದು ಹೇಳಿಕೊಂಡದ್ದು ಸಾರ್ಥಕವೆನಿಸಿತ್ತು.

ಎಲ್ಲವೂ ಸುಸೂತ್ರವಾಗಿ ಹರಿಣಿ ಮತ್ತು ಮಕ್ಕಳು ಮನೆಗೆ ಬಂದಾಗ ನಿಜವಾದ ತೊಂದರೆ ಶುರುವಾಯ್ತು. ಎಲ್ಲ ಕೆಲಸಗಳನ್ನೂ ನಿಭಾಯಿಸಿಕೊಂಡು ಬಾಣಂತಿ ಮಕ್ಕಳ ಆರೈಕೆ ನನ್ನಿಂದಾಗದ ಕೆಲಸವೆಂದು ಸಂಜೆಯೊಳಗೇ ಗೊತ್ತಾಯ್ತು. ಆಗ ಸಹಾಯಕ್ಕೆ ಬಂದವರು ಲಚ್ಚಮ್ಮ. ಬಾಲವಿಧವೆ. ನಮ್ಮ ದೂರದ ನೆಂಟರು. ಎಲ್ಲರಿಗೂ ಅವರು ಲಚ್ಚಮ್ಮನೇ. ಭಾರೀ ಜಾಣೆ. ಗಡಸು ವ್ಯಕ್ತಿತ್ವದೊಳಗೆ ಅತ್ಯಂತ ಹೃದಯವಂತ ಮನಸ್ಸು. ಅವರು ಚಕಚಕ ಓಡಾಡುತ್ತಾ ಕೆಲಸ ಮಾಡುತ್ತಿದ್ದರೆ ನಾವೆಲ್ಲ ಆಮೆಗಳ ಹಾಗೆ ಅನ್ನಿಸುತ್ತಿತ್ತು. ಹಗಲೆಲ್ಲ ನನ್ನ ಕೆಲಸಗಳಲ್ಲೂ ಕೈಸಹಾಯ ಮಾಡುತ್ತಾ, ಬಾಣಂತಿ ಮಕ್ಕಳನ್ನು ಸ್ನಾನ ಮಾಡಿಸಿ, ಮಕ್ಕಳ ನೀರು-ಹೊಲಸಿನ ಬಟ್ಟೆ ಒಗೆದುಹಾಕಿ, ಮಧ್ಯಾಹ್ನ ಒಂದಷ್ಟು ಹೂಬತ್ತಿ-ದೀಪದಬತ್ತಿ ಹೊಸೆದು, ಸಂಜೆ ಮಕ್ಕಳಿಗೆ ಬಜೆ ಕೊಟ್ಟು, ರಾತ್ರೆಗೆ ಬಟ್ಟೆಗಳನ್ನೆಲ್ಲ ಹೊಂದಿಸಿಕೊಂಡು ಊಟ ಮುಗಿಸಿ ಬಾಣಂತಿ ಕೋಣೆ ಸೇರಿದರೆ ಅಲ್ಲಿಂದ ಮಕ್ಕಳ ಸ್ವರವೂ ಕೇಳದ ಹಾಗೆ ರಾತ್ರೆಯನ್ನೂ ನಿಭಾಯಿಸುತ್ತಿದ್ದರು. ಒಮ್ಮೊಮ್ಮೆ ಅವರಿಗೆ ವಿಶ್ರಾಂತಿ ಇರಲೀಂತ ನಾನು ರಾತ್ರೆ ಹರಿಣಿ ಜೊತೆ ಮಲಗಿದರೆ ಅವರಿಗೆ ನಡುಮನೆಯಲ್ಲಿ ನಿದ್ದೆಯೇ ಬಾರದು. ನಡುರಾತ್ರೆಯೇ ನನ್ನನ್ನೆಬ್ಬಿಸಿ, ‘ನಳಿನಿ. ನೀ ನಿನ್ನ ಕೋಣೆಗೇ ಹೋಗು. ನನಗಿಲ್ಲೇ ಸರಿ.’ ಅಂತ ನನ್ನನ್ನಟ್ಟುತ್ತಿದ್ದರು. ಅವರ ಚೈತನ್ಯದ ಗುಟ್ಟು ಏನಿರಬಹದೆಂದು ಸುಮುಖ್, ಹರಿಣಿ ಮತ್ತು ನಾನು ಅಚ್ಚರಿಗೊಂಡದ್ದು ಎಷ್ಟುಸಲವೋ!

ಹರಿಣಿಯ ಅವಳಿಗಳಿಗೆ ಮೂರು ತಿಂಗಳಾಗುವಾಗ, ಇಲ್ಲಿಂದ ಹೊರಟುಹೋಗುವ ಮಾತೆತ್ತಿದಳು ನಿರ್ಲಿಪ್ತವಾಗಿ. ಆಗಲೇ ನನಗೆಚ್ಚರವಾಗಿದ್ದು, ಹೋಗುತ್ತಾಳಾದರೂ ಎಲ್ಲಿಗೆ? ಹೇಗೆ? ಮುಂದಿನ ಜೀವನದ ಕತೆಯೇನು? ಯಾರಿದ್ದಾರೆ ಅವಳಿಗೆ ಆಸರೆಯಾಗಿ? ಸುಮುಖ್ ಹೇಳುತ್ತಲೇ ಇದ್ದರೂ ಮಕ್ಕಳನ್ನು ನಮಗಾಗಿ ಇಲ್ಲಿಯೇ ಬಿಟ್ಟು ಹೋಗೆನ್ನುವ ಮಾತು ನನ್ನಿಂದ ಇದುವರೆಗೆ ಬಂದಿರಲಿಲ್ಲ. ಅವಳನ್ನು ಕಳಿಸುವ ಯೋಚನೆಯೇ ನನಗಿರಲಿಲ್ಲ. ಈಗ ಏಕಾಏಕಿ ಹೊರಡುವೆ ಅಂದವಳನ್ನು ಏನೂಂತ ಕೇಳುವುದು? ಹೇಗೆ ನಿಲ್ಲಿಸಿಕೊಳ್ಳುವುದು? ಏನೂ ತೋಚದೆ ಸುಮುಖ್ ಮುಖ ನೋಡಿದೆ, ಏನಾದರೂ ಮಾಡಿರೆನ್ನುವ ಹಾಗೆ. ಸಣ್ಣಗೆ ಸಿಳ್ಳೆ ಹಾಕಿ ನಕ್ಕಾಗ ಕಸಿವಿಸಿಯಾಗಿತ್ತು. ನಗುತ್ತಾ ಹರಿಣಿಯ ಕೋಣೆಗೆ ಹೋದವರ ಮೇಲೆ ಕೋಪ ಬಂದು ಅಡುಗೆಮನೆಗೆ ಹೋಗಿಬಿಟ್ಟೆ.