ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday, 7 March, 2011

ಸುಮ್ಮನೆ ನೋಡಿದಾಗ...೧೭

ಅಷ್ಟರಲ್ಲಾಗಲೇ ಅಮ್ಮನ ಮೂಡ್ ಸರಿಯಾಗಿತ್ತು (ಆಗದಿರಲು ಹೇಗೆ ಸಾಧ್ಯ? ಸುಮುಖ್ ಅಂಕಲ್, ನಳಿನಿ ಆಂಟಿ ಇದ್ದರಲ್ಲ; ಇಬ್ಬರು ಜಾದೂಗಾರರು!). ಅವರಿಬ್ಬರ ವಕಾಲತ್ತಿನಂತೆ ಅಂದು ರಾತ್ರಿಯ ಊಟ ನಮ್ಮೂರಿನ ಒಂದೇ ಒಂದು ಭವ್ಯ ಹೋಟೆಲ್- ‘ಶ್ಯಾಮಿಲಿ’ಯಲ್ಲಿ. ಎರಡು ಜೋಡಿ ಹೃದಯಗಳ ಜೊತೆಗೆ ಎರಡು ಒಂಟಿ ಹೃದಯಗಳು, ಅವುಗಳಲ್ಲೊಂದು ನೋವಿನಲ್ಲಿ ಮತ್ತೊಂದು ನಲಿವಿನಲ್ಲಿ ಅದ್ದಿದ್ದವು. ಊಟ ಮುಗಿಸಿ ಹೋಟೆಲಿಂದ ಹೊರಗೆ ಬರುತ್ತಿದ್ದ ಹಾಗೆಯೇ ನನಗೆ ಒಳಗೊಳಗೇ ದಿಗಿಲಾಗತೊಡಗಿತು. ಮನೆಗೆ ಹೋದ ಮೇಲೆ ನಾವಿಬ್ಬರೇ. ಈ ಅಮ್ಮನನ್ನು ಹೇಗೆ ಸುಧಾರಿಸಿಕೊಂಡೇನು? ಪೇಟೆಯಿಂದ ಒಂದು ಕಿಲೋಮೀಟರ್ ದೂರ ನಳಿನಿ ಅಂಟಿ ಮನೆ. ಅಲ್ಲಿಂದ ಅರ್ಧ ಕಿಲೋಮೀಟರ್ ನಮ್ಮನೆ. ‘ನಡೆದೇ ಹೋಗುವಾ, ತಿಂದದ್ದು ಕರಗ್ತದೆ’ ಅಂದರು ಸುಮುಖ್ ಅಂಕಲ್. ಒಂಬತ್ತು ಗಂಟೆಯ ನಿರ್ಜನ ರಸ್ತೆಯಲ್ಲಿ ಆರೂ ಜನ ಅಡ್ಡ ಸಾಲಿನಲ್ಲಿ ಸಾಗಿದೆವು.

ಮೊದಲಿಗೆ ಹರ್ಷಣ್ಣನ ಮನೆಗೆ ತಿರುಗುವ ರಸ್ತೆ. ಅಲ್ಲಿ ಕೆಲವು ನಿಮಿಷ ನಿಂತು ಮಾತು ಮುಗಿಸಿದರು ಅಂಕಲ್ ಮತ್ತು ಹರ್ಷಣ್ಣ. ನಾವು ಮಹಿಳೆಯರು ಮುಂದೆ ಸಾಗುತ್ತಿದ್ದರೆ ಗೆಳತಿಯರ ಎರಡು ಜೋಡಿ ಬೇರೆಬೇರೆಯಾಗಿತ್ತು. ನೇಹಾ ಮತ್ತು ನಾನು ಹಿಂದಿನಿಂದ ನಿಧಾನವಾಗಿ ಹೆಜ್ಜೆ ಅಳೆಯುತ್ತಿದ್ದಾಗ ಅಂಕಲ್ ನೇಹಾಳ ಬೆನ್ನಿಗೊಂದು ಹದವಾಗಿ ಗುದ್ದಿ, ‘ಒಳ್ಳೇ ಹುಡುಗ’ ಅಂದರು. ‘ಥ್ಯಾಂಕ್ಸ್ ಪಪ್ಪಾ’ ಉಲಿಯಿತು ಹಾಡುಹಕ್ಕಿ.

ಎರಡೇ ನಿಮಿಷ, ನೇಹಾ ಮನೆಯ ಗೇಟಿನೆದುರು ನಿಂತಿದ್ದೆವು. ನಾನು ನೇಹಾಳಿಗೆ ಕಣ್ಣು ಹೊಡೆದು ‘ಸ್ವೀಟ್ ಡ್ರೀಮ್ಸ್’ ಅನ್ನುವಾಗಲೇ ಸುಮುಖ್ ಅಂಕಲ್, ‘ಇವತ್ತು ಇಲ್ಲೇ ಇರಿ. ಕೆಲವೊಂದು ವಿಷಯಗಳನ್ನು ಮಾತಾಡಲೇ ಬೇಕು. ನಾಳೆ ಹೇಗೂ ಆದಿತ್ಯವಾರ. ಯಾರಿಗೂ ಯಾವ ಗಡಿಬಿಡಿಯೂ ಇಲ್ಲ. ಬನ್ನಿ ಒಳಗೆ’ ಎನ್ನುತ್ತಾ ಗೇಟ್ ತೆರೆದು ನಿಂತರು. ಅಮ್ಮನ ಕೈಹಿಡಿದು ನಳಿನಿ ಅಂಟಿ ಮತ್ತು ನನ್ನ ಕೈಹಿಡಿದು ನೇಹಾ ಎಳೆಯುತ್ತಿದ್ದರೆ ಅಮ್ಮ ಚಡಪಡಿಸುತ್ತಿರುವುದು ನನ್ನ ಗಮನಕ್ಕೆ ಬಂತು. ನಳಿನಿ ಅಂಟಿಯೂ ಇದನ್ನೇ ಕಂಡರೇನೋ, ‘ಬಾ ಮಾರಾಯ್ತಿ. ನಿನ್ನ ಮನೆ ಎಲ್ಲಿಗೂ ಹೋಗುದಿಲ್ಲ. ಆಗ ಹೊರಡುವ ಮೊದಲು ಸರಿಯಾಗಿ ಬೀಗ ಹಾಕಿದ್ದೀ, ನಾ ನೋಡಿದ್ದೇನೆ. ನಿನಗೂ ನಿನ್ನ ಮಗಳಿಗೂ ನಾಳೆ ಬೆಳಗ್ಗೆ ಹಲ್ಲುಜ್ಜಲಿಕ್ಕೆ ಮಾವಿನೆಲೆ, ಗೇರೆಲೆ ಬೇಕಾದಷ್ಟು ಇದ್ದಾವೆ. ಬ್ರಶ್ಷೇ ಬೇಕಾದ್ರೆ ನನ್ನತ್ರ ಹೊಸತ್ತು ಇದ್ದೀತು. ಸುಮ್ನೇ ಬಾ...’ ಅಂಕಲ್ ತೆರೆದಿಟ್ಟ ಬಾಗಿಲೂ ದಾಟಿ ಎಳೆದುಕೊಂಡೇ ಮನೆಯೊಳಗೆ ಹೋದರು. ನಾನಾಗಲೇ ನೇಹಾಳ ಕೋಣೆ ಸೇರಿಕೊಂಡೆ. ಇಬ್ಬರೂ ಬಾಗಿಲು ಓರೆ ಮಾಡಿ ಖುಷಿಯ ಕಿಲಿಕಿಲಿ ಎಬ್ಬಿಸಿದೆವು. ನಾನಿಲ್ಲಿ ರಾತ್ರಿ ಕಳೆಯದೆ ವರ್ಷವೇ ಕಳೆದಿರಬೇಕು. ಇವತ್ತು ಇಬ್ಬರಿಗೂ ನಿದ್ದೆಯೇ ಬರ್ಲಿಕ್ಕಿಲ್ಲ. ಓಹ್, ವಸಂತ್ ವಿಚಾರ ಇವಳಿಗೆ ಈಗಲೇ ಹೇಳುದೋ ಬೇಡವೋ? ಹೇಳುದಾದರೂ ಹೇಗೆ? ಎಲ್ಲಿಂದ ಶುರುಮಾಡುದು? ನನ್ನೊಳಗೆ ಗೊಂದಲ ಗೂಡುಕಟ್ಟತೊಡಗಿತು.

ನನ್ನ ಈ ಪ್ರಶ್ನೆಗಳಿಗೂ ಮೀರಿದ, ನನ್ನೊಳಗೆ ಆಳದಲ್ಲಿ ಕಾಡುತ್ತಿದ್ದ ಪ್ರಶ್ನೆಗಳಿಗೆ ಅಂದು ಅಲ್ಲಿ ಉತ್ತರ ಸಿಗುವುದಿದೆಯೆಂದು ಯಾವ ಹಲ್ಲಿಗೂ ಶಕುನ ಗೊತ್ತಿದ್ದಿರಲಾರದು. ನಾವೆಲ್ಲ ಸುಮ್ಮನೇ ಕಾಡುಹರಟೆಯಲ್ಲಿ ಒಂದರ್ಧ ಗಂಟೆ ಕಳೆದಿರಬಹುದು, ಬಾಗಿಲು ಟಕಟಕಿಸಿತು. ಅಂಕಲ್ ಬಾಗಿಲು ತೆರೆದಾಗ ಒಳಬಂದವರು ನಮ್ಮಲ್ಲಿ ಅಚ್ಚರಿಯನ್ನೇ ಮೂಡಿಸಿದರು. ನೇಹಾಳ ಕೆನ್ನೆಗಳು ರಂಗೇರಿದವು. ನಾನು ಮಿಶ್ರ ಭಾವದಲ್ಲಿದ್ದರೆ ಅಂಕಲ್, ಆಂಟಿ, ಅಮ್ಮ ಅಚ್ಚರಿಯ ಪರಿಧಿಯೊಳಗೆ ಕಳೆದುಹೋಗಿದ್ದರು.

‘ನೀವಿಲ್ಲೇ ಇರ್ತೀರಿ, ನಿಮ್ಮನೆಗೆ ಹೋಗಿರುದಿಲ್ಲ ಅಂತ ಅಮ್ಮ ಹೇಳಿದ್ದು ಸರಿಯೇ, ಚಿಕ್ಕತ್ತೇ. ನಿಮ್ಮೆಲ್ಲರ ಹತ್ರ ಒಟ್ಟಿಗೇ ಮಾತಾಡ್ಲಿಕ್ಕೆ ಒಳ್ಳೇದೇ ಆಯ್ತು. ಅದ್ಕೇ ನಾವಿಬ್ರೂ ಇಲ್ಲಿಗೇ ಮೊದ್ಲು ಬಂದದ್ದು. ಅಲ್ವಾ ಅಮ್ಮ.’- ಹರ್ಷಣ್ಣನ ದನಿಯಲ್ಲಿ ಸಂತಸದ ಜೊತೆಗೇ ಅಚ್ಚರಿಯೂ ಅವನಮ್ಮನ ಮೇಲೆ ಮೆಚ್ಚುಗೆಯೂ ಸೇರಿದ್ದವು. ಆದರೆ, ಇವರಿಗೇನಿರಬಹುದು ನಮ್ಮೆಲ್ಲರ ಹತ್ರ ಈ ರಾತ್ರಿಯಲ್ಲು ಮಾತಾಡುವಂಥ ವಿಷಯ? ಅಮ್ಮನ ಮುಖ ಯಾಕೆ ಪೆಚ್ಚಾಯ್ತು? ಹರ್ಷಣ್ಣನ ಅಮ್ಮ, ಸರೋಜ ಅಂಟಿಯ ಕಣ್ಣು ತಪ್ಪಿಸುತ್ತಿದ್ದಾರೆ ಅಮ್ಮ, ಯಾಕೆ? ನನ್ನ ಕುತೂಹಲದ ನೈದಿಲೆ ರಾತ್ರೆಯ ಕತ್ತಲಲ್ಲಿ ಮೆಲ್ಲನೆ ಕಣ್ತೆರೆಯಿತು. ಹೊಸದೇನೋ ತಿಳಿಯುತ್ತದೆನ್ನುವ ಉತ್ಸಾಹ ನನ್ನ ನಿದ್ದೆಯನ್ನೂ ಗೊಂದಲವನ್ನೂ ಒಟ್ಟಿಗೇ ಓಡಿಸಿತು.

No comments: