ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Sunday, 27 July, 2008

ಆರೋಗ್ಯ ಪೂಜೆ

(ದಾಸರ ಕ್ಷಮೆ ಕೋರಿ, `ಅತ್ಯಾಧುನಿಕ'ರ ಗಮನಕ್ಕೆ... ಅಣಕವಾಡು)

ಊಟಕ್ಕೆ ಬನ್ನಿರಿ ನೀವು; -ನಿಮ್ಮ
ಲ್ಯಾಪ್-ಟಾಪು, ಸೆಲ್-ಫೋನುಗಳನಾಚೆಗಿಟ್ಟು --ಊಟಕ್ಕೆ
ಪಿ.ಡಿ.ಎ., ಬ್ಲ್ಯಾಕ್-ಬೆರ್ರಿ ಜೊತೆಗೆ, -ತಮ್ಮ
ಬೀಪರ್ರು, ಬ್ಲೂಟೂಥುಗಳ ಮೇಜಲಿಟ್ಟು --ಊಟಕ್ಕೆ

ಒಂದೇ ಮನೆಯೊಳಗಿದ್ದೂ, -ಮಂದಿ
ಒಬ್ಬೊಬ್ಬರೊಂದೊಂದು ದಿಕ್ಕನ್ನು ಹೊದ್ದು
ಅರೆನಿದ್ರೆ ಹೊತ್ತಲ್ಲಿ ಎದ್ದು, -ಬಂದು
ಮಬ್ಬಲ್ಲಿ ತಿಂದರೆ ಆರೋಗ್ಯಕೆ ಗುದ್ದು --ಊಟಕ್ಕೆ

ಟೀವಿಯ ಮುಂದಿರಬೇಡಿ, -ಒಮ್ಮೆ
ಅಡುಗೆ ಮನೆಯಲ್ಲೊಂದು ಮಣೆ ಹಾಕಿ ಕೂಡಿ
ನಗು ನಗುತಾ ಊಟವ ಮಾಡಿ, -ನಿಮ್ಮ
ಒಡನಾಡಿಗಳ ಜೊತೆಗೆ ಹರಟೆ ಮಾತಾಡಿ --ಊಟಕ್ಕೆ

ಸಿಹಿ-ಖಾರ, ಹುಳಿ-ಉಪ್ಪು ಇರಲಿ, -ಹಾಗೇ
ಶುಚಿಯ ಕಡೆಗೂ ನಿಮ್ಮ ಒಮ್ಮನವು ಹೊರಳಿ
ಮಾಡಿರುವ ಅಡುಗೆಯನು ಹೊಗಳಿ, -ತೇಗಿ
ರುಚಿ ಹಣ್ಣ ಸವಿಯುತ್ತ ಅಂಗಳಕೆ ತೆರಳಿ --ಊಟಕ್ಕೆ

ಆಧುನಿಕ ಸೌಕರ್ಯ ಬೇಕು, -ನಮಗೆ
ಬಾಳುವೆಯ ನಡೆಸಲು ಕೆಲಸವಿರಬೇಕು
ಆಧಾರವೀ ದೇಹ ಎದಕು, -ಅದನೆ
ಕಡೆಗಣಿಸಿ ಬದುಕಿದರೆ ನೋವುಣ್ಣಬೇಕು --ಊಟಕ್ಕೆ

ಹೊತ್ತು ಹೊತ್ತಿಗೆ ಊಟ-ತಿಂಡಿ, -ಹೆಚ್ಚು
ಹಣ್ಣು ತರಕಾರಿಗಳ ಮಿಶ್ರಣದ ಮೋಡಿ
ಬಲುಕಾಲ ಆರೋಗ್ಯ ನೋಡಿ, -ಮೆಚ್ಚು
ತನು-ದೇವರ ಸೇವೆ ಈ ರೀತಿ ಮಾಡಿ --ಊಟಕ್ಕೆ
(೦೨-ಜೂನ್-೨೦೦೮ ರಾತ್ರೆ ೧೦:೩೦)

Sunday, 20 July, 2008

ಹೊಸ ಬಾಳು

(ಮನೋ ಮೂರ್ತಿಯವರ ಸಂಗೀತ ನಿರ್ದೇಶನದ "ಭಾವ ಮಾಲಿಕಾ" ಧ್ವನಿಸುರುಳಿಗಾಗಿ ಪದ ಜೋಡಣೆ.
ಹಾಡಿದವರು: ಕೆ.ಎಸ್. ಸುರೇಖಾ.)

ನಂದನದಂತಿದೆ ಈ ಮನೆ ಸ್ವರ್ಗ ಸುಳ್ಳಲ್ಲ
ಸುಂದರವು ನಿನ್ನಿಂದ ನೋಟ ಎಲ್ಲ
ಬಾನಿಗೆ ಚಂದ್ರನ ಚಂದ್ರಿಕೆ ಬಾಳಿಗೆ ಪ್ರೇಮದ ಮುದ್ರಿಕೆ
ನಲ್ಲ... ಇಂದು ನಿನ್ನಿಂದ ನಾ ಕಂಡೆ ಬಾಳಿಗೆ ಅರ್ಥ.

ಮದುವೆಯ ಬಂಧನ ಪವಿತ್ರ,
ಈ ಜೀವದ ದೇವ ನೀನು
ನಿನ್ನೀ ಪ್ರೇಮದ ಹಂದರ...
ಇದು, ನಿನ್ನನು ಪೂಜಿಪ ಮಂದಿರ
ನಿನ್ನ ನನ್ನ ನಂಟು, ಆ ಬ್ರಹ್ಮನು ಹಾಕಿದ ಗಂಟಿದು...
ಭಾವ ಹೊನಲಾಗಿದೆ, ಒಲವು ಒಸರಾಗುತಿದೆ,
ನನ್ನ ಕವಿತೆ ನಿನ್ನಿಂದಲೇನೇ, ನನ್ನಾಣೆ...
ನಲ್ಲ... ನಿನ್ನಿಂದ ನಾ ಕಂಡೆ ಬಾಳಿಗೆ ಅರ್ಥ.

ಕೇಳಿದೋ ಕೋಗಿಲೆ ಹಾಡನು
ಅದು ಹೇಳಿದೆ ಪ್ರೇಮಿಯ ಮಾತನು
ಚೈತ್ರ ಬಂದ ವೇಳೆ...
ಆ ಚಿಗುರೆಲೆ ಹೊರಳಿದವಾಗಲೇ
ಮೊಗ್ಗು ಹೂವಾಗಿದೆ, ಹೂವು ಹಣ್ಣಾಗುತಿದೆ
ಹಿಗ್ಗಿನಿಂದ ಮುದ್ದಾದ ಕಾವ್ಯ ನಾ ತಂದೆ...
ನಲ್ಲ... ನಿನ್ನಿಂದ ನಾ ಕಂಡೆ ಬಾಳಿಗೆ ಅರ್ಥ.
(ಜುಲೈ-೧೯೯೫)

Sunday, 13 July, 2008

ಹೆಣ್ಣು

ಧಾನ್ಯಲಕ್ಷ್ಮಿ ಭೂಮಿತಾಯಿ ಧೈರ್ಯಲಕ್ಷ್ಮಿ ಮೋಹ ಮಾಯೆ
ಜ್ಞಾನದಾತೆ ಪೂಜ್ಯಮಾತೆ ಪಾಪನಾಶಿ ಸುರಭಿಯೆ
ಎನುತ ಹೊಗಳಿ ಹಾಡೊ ಮನುಜ ಹೇಳು ಎಲ್ಲಿದೆ
ಈ ಹಿರಿಮೆ ಹೆಣ್ಣಿಗೆ?

ಬಾಳ ಬೆಳಕು ಮನೆಯ ಥಳಕು ಪ್ರೇಮ ಗಂಗೆ ಎನ್ನುವೆ
ಬಾಳ ಏಣಿಯಲ್ಲಿ ಮೇಲೆ ಏರಗೊಡದೆ ತುಳಿಯುವೆ
ತೊಳೆಯಲೊಲ್ಲೆ "ಅಳುವ ಅಬಲೆ" ಎನುವ ಮಾತನು
ಅಳೆಯಬಲ್ಲೆಯಾ ಜನನಿ ತೋಳನು!

ಚೆಲುವ ಮೂರ್ತಿ ಕಾವ್ಯ ಸ್ಫೂರ್ತಿ ಕರುಣೆ ಕಡಲು ಎನ್ನುವೆ
ಒಲುಮೆ ಬೇಡಿ ತೊಡಿಸಿ ಅವಳ ಸೆರೆಯ ಒಳಗೆ ಇರಿಸುವೆ
ನಲಿವ ಹೂವು ನಲುಗಿ ಬಳಲಿ ಬಾಡಿ ಬಾಗಿತು
ನೆಲವ ಸೇರಿತು, ಅಮರವಾಯಿತು!
(ಜೂನ್-೧೯೯೫)

Tuesday, 8 July, 2008

ಬಣ್ಣ-ಭಾವ

ಎಲೆ ಹಸಿರು ಗಿಳಿ ಹಸಿರು
ಗಾಳಿ ನಮ್ಮ ಉಸಿರು,
ರಕ್ತ ಕೆಂಪು ನೆರಳು ತಂಪು
ಹೂವುಗಳಿಂದ ಕಂಪು.

ದೊಡ್ಡ ಕಿತ್ತಳೆ ಸಣ್ಣ ನೇರಳೆ
ಯಾವುದು ಬೇಕು ಮಕ್ಕಳೆ?
ಬಾನು ನೀಲ ಭೂಮಿ ಗೋಲ
ಹಿತ ವಸಂತ ಕಾಲ.

ಮೋಡ ಬೂದು ಕಾಂಡ ಕಂದು
ಮಳೆಯ ಹನಿಯು ಬಿಂದು
ಹತ್ತಿ ಬಿಳಿ ಕಾಡಿಗೆ ಕಪ್ಪು
ಬಣ್ಣದಲಿಲ್ಲ ತಪ್ಪು.

ಗಂಡಿಗೆ ನೀಲಿ ಹೆಣ್ಣಿಗೆ ಗುಲಾಲಿ
ಹಳದಿ ಯಾರ ಖಯಾಲಿ?
ವರ್ಣರಂಜಿತ ಚಿತ್ರ ಸುಂದರ
ಭಾವಗಳು ಮೃದು ಮಧುರ.
(ಎಪ್ರಿಲ್-೧೯೯೩)

(ಮೊದಲಬಾರಿಗೆ ಹೊರದೇಶದಲ್ಲಿ ಸಮಾನಾಸಕ್ತರ ಗುಂಪೊಂದನ್ನು ಮಾಡಿಕೊಂಡು, ಸರಿಸುಮಾರು ಒಂದೇ ವಯಸ್ಸಿನ [ಎರಡು ವರ್ಷದ ಆಸುಪಾಸಿನಲ್ಲಿದ್ದ] ಆರು ಮಕ್ಕಳನ್ನು ಆಡಿಸುತ್ತಾ, ಪಾರ್ಕುಗಳಲ್ಲಿ ಓಡಾಡುತ್ತಾ, ಆಗತಾನೇ ಹೊರಬಂದ ವಸಂತದಲ್ಲಿ ಸುಖಿಸುತ್ತಾ, ಗೆಳತಿಯರೊಡನೆ ಹರಟುತ್ತಿದ್ದ ಸಮಯದಲ್ಲಿ ಗುಂಪಿನಲ್ಲಿದ್ದ ನಾಲ್ಕು ಕನ್ನಡದ ಮಕ್ಕಳಿಗಾಗಿ ಹುಟ್ಟಿಕೊಂಡದ್ದು.)

Thursday, 3 July, 2008

"ಹಾಯ್... ...ಬಾಯ್"ಗಳ ನಡುವೆ...

"ಹಾಯ್ ಗೆಳತಿ, ಹೇಗಿದ್ದೀಯಾ? ಅಡುಗೆ ಏನಿವತ್ತು?"
ಹೀಗೇ ಶುರುವಾಗುವ ಮಾತು ಎತ್ತೆತ್ತಲೋ ಸಾಗುತ್ತಿತ್ತು
"ಅಮ್ಮಾ... ನಂಗೆ ನೀರು... ಕ್ಯಾಂಡಿ..." ನನ್ನ ಮರಿಯ ಗಲಿಬಿಲಿ
"ಅಮ್ಮಾ... ಬಾ... ಅಣ್ಣಾ... ಅಪ್ಪಾ..." ನಿನ್ನ ಸನಿಹ ಚಿಲಿಪಿಲಿ

ಕಂಡರಿಯದ ನಾಡಿನಲ್ಲಿ ಕನ್ನಡ ಮಾತಿನ ಗೆಳತಿ
ಕಹಿ-ಸಿಹಿ ಹಂಚಿಕೊಳಲು ಹುಮ್ಮನಸ್ಸಿನ ಕನ್ನಡತಿ
ಸಮಾನ ಲಕ್ಷ್ಯಗಳು, ರೇಖೆಗಳು, ನಿಲುವುಗಳು
ಸರಾಗವಾಗಿ ಮಾತು ಹರಿಯಲು ಬೇಕಷ್ಟು ವಿಷಯಗಳು

ಎಂದು, ಹೇಗೆ ಈ ಸಖ್ಯ, ಈ ನಂಟು ಬೆಳೆಯಿತು?
ಎಲ್ಲಿಂದ, ಎಲ್ಲಿ ಬಂದು, ಯಾವ ಕಡೆಗೆ ಎಳೆಯಿತು?
ಅರಿಯಲಾರೆ, ವಿಸ್ಮಯವೇ ನನ್ನ ಮನದ ತುಂಬ
ಅಗಲಿಕೆಯ ಸಹಿಸಲಾರೆ, ಇರಲಿ ಸ್ನೇಹ ಬಿಂಬ

ತವರನಗಲಿ ಹೊರಟಾಗಲೂ ಬಾರದ ಕಣ್ಣೀರು
ತಡೆದರೂ ಹಣಕುತ್ತಿದೆ, ಬದುಕು ನಿಲ್ಲದ ನೀರು
ಹರಿಯಬೇಕು, ಹಾಡಬೇಕು, ಹರಡಬೇಕು ಹೊನಲು
ಹತ್ತಿರವನು ದೂರದಿಂದ ಅಳೆಯುವಾಗ ಅಳಲು

ಸ್ವರ್ಗವಿದು, ನರಕವಿದು, ಪರಿಪೂರ್ಣವೆಂಬುದಿಲ್ಲ
ಸ್ವಂತಿಕೆಗೆ ನೆಲವು ಇದು, ಸ್ವಂತವು ಇದಲ್ಲ
ಮರಳಿ ಮನೆಗೆ ಮರಳುವ ಹಂಬಲವು ಬಹಳ
ಮತ್ತೆ ನೋಡುವೆ ನಿನ್ನೆಂಬ ಸಂಭವ ವಿರಳ.
(೦೧-ಅಕ್ಟೋಬರ್-೧೯೯೭)