ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Wednesday, 1 July, 2009

ಅಂತೂ.... ಬಂತು!!

೧೯೯೨ರ ಸೆಪ್ಟೆಂಬರಿನಲ್ಲಿ, ಸೇರಿಕೊಂಡಿದ್ದ ಬಿ.ಎಡ್ ಅರ್ಧದಲ್ಲಿ ಬಿಟ್ಟು, ಬೆಂಗಳೂರನ್ನೂ ಬಿಟ್ಟು ಮೊದಲ ಬಾರಿಗೆ ಈ ಹೊರನಾಡಿಗೆ ಕಾಲಿರಿಸಿದ್ದು. ಕನಸಿನ ಕಿನ್ನರ ಲೋಕದಲ್ಲಿ ಹೆಜ್ಜೆಯಿಟ್ಟ ನಮಗೆ ಕಾರು ಇರಲಿಲ್ಲ. ಹೇಗೋ ಅವರಿವರ ಸಹಾಯದಿಂದ ಅಪಾರ್ಟ್‍ಮೆಂಟಿನಲ್ಲಿ ಬಿಡಾರ ಹೂಡಿದ್ದಾಯ್ತು. ಹಾಲು-ಹಣ್ಣು-ತರಕಾರಿಗಳಿಗೆ ನಡಿಗೆಯ ದೂರದಲ್ಲೇ `ಲಕ್ಕಿ' (ಆಲ್ಬರ್ಟ್‍ಸನ್ಸ್) ಇತ್ತು. ದಿನಸಿ ಸಾಂಬಾರ ಪದಾರ್ಥಗಳಿಗೆ `ದಿ ಗ್ರೇಟ್' ಭಾರತ್ ಬಝಾರ್, ಅದೂ ನಡಿಗೆಯಳತೆಯಲ್ಲಿ. ಅಲ್ಲಿ ಇಲ್ಲಿ ಹುಡುಕಿ, ಸ್ನೇಹಿತರ ಸಹನೆಯ ಪರೀಕ್ಷೆ ಮಾಡಿ, ಒಂದು ಕಾರು ಕೊಂಡಿದ್ದಾಯ್ತು. ಎರಡು ವರ್ಷ ತುಂಬಿದ ಮಗನನ್ನು ಕಷ್ಟಪಟ್ಟು ಕಾರ್-ಸೀಟಿನಲ್ಲಿ ಹಾಕಿ ಬೆಲ್ಟು ಬಿಗಿದಿದ್ದಾಯ್ತು.

ಅಲ್ಲಿಂದ ಮುಂದೆ ಮೂರು ಕಾರು ಬದಲಾಯಿಸಿ, ಮೂರು ಅಪಾರ್ಟ್‍ಮೆಂಟ್ ಅಳೆದುನೋಡಿ, ಮೂರು ಕಂಪೆನಿ ಲೆಕ್ಕ ಹಾಕಿದರೂ ಈ ನೆಲೆಯಿರದ ನೆಲದಲ್ಲಿ ಯಾವುದೇ ಬೇರು ಇಳಿಸುವ ಮನಸ್ಸಾಗಲಿಲ್ಲ. `ಇನ್ನೂ ಒಂದು ನಾಲ್ಕು ವರ್ಷ ಇದ್ದು ಹಿಂತಿರುಗೋಣ', ಅಂದುಕೊಂಡಿದ್ದ ನಮಗೆ ಅಷ್ಟು ಸಮಯ ಇರಲು ಹಸಿರು-ನಿಶಾನೆ (ಗ್ರೀನ್‍ಕಾರ್ಡ್) ಸಿಗಲಿಲ್ಲ. ಕಾನೂನಿನ ಪ್ರಕಾರ ದೇಶಭ್ರಷ್ಟರಾಗಿ, ಸಾಮಾನೆಲ್ಲ ಪೆಟ್ಟಿಗೆಗಳಿಗೆ ತುಂಬಿಸಿ ಗಾಡಿ ಕಟ್ಟಿದೆವು, ಒಂದು ವರ್ಷದ ಅಜ್ಞಾತವಾಸಕ್ಕೆ. ಅದೂ ಮುಗಿದು ಹೊಸ ಕೆಲಸದ ಆಜ್ಞಾಪತ್ರ ಕೈಸೇರಿದಾಗ ಅನಿವಾರ್ಯವಾಗಿ ಹಸುವಿನ ಹಿಂದೆ ಕರುವಿನಂತೆ ೨೦೦೦-ದ ಜೂನ್‍ನಲ್ಲಿ ಸ್ಯಾನ್‍ಡಿಯಾಗೋಗೆ ಬಂದಿದ್ದಾಯ್ತು. ಕಾರಣಾಂತರಗಳಿಂದ ಕೆಲಸದ ಬದಲಾವಣೆ. ತವರಿಗೆ ಬರುವಂತೆ ಕೊಲ್ಲಿ ಪ್ರದೇಶಕ್ಕೆ ಬಂದೆವು, ೨೦೦೦-ದ ಡಿಸೆಂಬರಿನಲ್ಲಿ.

ಮತ್ತೆ ಯಥಾಪ್ರಕಾರ `ಹಸಿರು-ಚೀಟಿ'ಗೆ ಅರ್ಜಿ ಹೋಯ್ತು, ಹೇಗೂ ಕಂಪನಿಯ ತಲೆನೋವು, ನಮಗೇನು! ಅಷ್ಟರಲ್ಲೇ ಶುರುವಾಯ್ತು ನೋಡಿ, ಎತ್ತರಕ್ಕೇರಿದ್ದ ರೋಲರ್ ಕೋಸ್ಟರಿನ ಪೂರ್ಣ ಪ್ರಮಾಣದ ಪ್ರಯಾಣ. ಎಷ್ಟೊಂದು ಅಮಾಯಕರನ್ನು ತನ್ನೊಂದಿಗೆ ಎಳೆದಾಡುತ್ತಾ ಇಳಿಯತೊಡಗಿತು. ಅಲ್ಲ, ಬಿತ್ತು.. ಬಿತ್ತು... ಬಿತ್ತು....! ಅರ್ಥಜಗತ್ತಿನ ನೆತ್ತಿಗೇರಿದೆವೆಂದು ಬೀಗುತ್ತಿದ್ದವರೆಲ್ಲ ನೆಲಕಚ್ಚಿದರು. ಕನ್ನಡಿಯೊಳಗೆ ಗಂಟಿದೆಯೆಂದು ಅರಮನೆ ಕೊಂಡವರೆಲ್ಲ ಕೈ ಕೊಯಿದುಕೊಂಡರು. ಕಂಪೆನಿಗಳು ನಿಮಗಾಗಿ ಮುಡುಪಿಟ್ಟ, ನಿಮ್ಮದಾಗಬಹುದಾಗಿದ್ದ ಪಾಲುಗಾರಿಕೆ-ಬಂಡವಾಳಕ್ಕೆ (ಶೇರಿಗೆ) ಕಾಗದದ ಬೆಲೆಯೂ ಇಲ್ಲದೇ ಹೋಯ್ತು. ನಿನ್ನೆ ಇದ್ದ ಕೆಲಸ ಇಂದಿಲ್ಲ. ಇಂದು ಬೆಳಗ್ಗೆ ತನ್ನದಾಗಿದ್ದ ಮನೆ-ಕಾರು ಸಂಜೆಗೆ ಪರರ ಸ್ವತ್ತು. ಬೇಕಾಬಿಟ್ಟಿ ತಿಂದುಂಡುಕೊಂಡಿದ್ದ ಸುಖಜೀವಿ ಪರದಾಡಿತು. ಎಷ್ಟೊಂದು ಜನ ಕೊಂಡಿದ್ದ ಕಾರನ್ನು ಮಾರಲೂ ಆಗದೆ, ಮನೆಯ ಬಾಡಿಗೆಯನ್ನೂ ಕೊಡಲಾಗದೆ, ಹೇಳದೆ-ಕೇಳದೆ, ತಮ್ಮ ಕಾರುಗಳನ್ನು ವಿಮಾನ ನಿಲ್ದಾಣದ ತಂಗುದಾಣಗಳಲ್ಲಿ ನಿಲ್ಲಿಸಿ ಸ್ವದೇಶಕ್ಕೆ ಪರಾರಿಯಾದರು.

ಆಗಲೇ ಬಂತು ಇನ್ನೊಂದು ಆಘಾತ. `ಅವನ' ಸೇಡು-ಹೊಟ್ಟೆಕಿಚ್ಚಿನ ಜ್ವಾಲೆಗೆ ಹೊತ್ತಿಕೊಂಡು ಉರಿಯಿತು ಜಗತ್ತಿನ ವಿತ್ತಕೇಂದ್ರ. "ಅಯ್ಯೊ ಬಿತ್ತು.... ಕುಸಿದು ಬಿತ್ತು.... ವಿತ್ತಚೇತನ! ಏನು-ಎತ್ತ ಅರಿಯಲಾರೆ, ಧೂಮ್ರಲೋಚನ!!" ಎಂದು ಉದ್ಗರಿಸಿತು ಕವಿಮನ. ತಡವರಿಸಿಕೊಂಡು, ಗೋಡೆಗೆ ಆನಿಸಿಕೊಂಡು, ಕುರ್ಚಿಯಿಂದ ಎದ್ದು ನಿಲ್ಲುವಷ್ಟರಲ್ಲಿ ಅವಳಿಗಳು ಅವಶೇಷಗಳಾಗಿದ್ದವು. ಸಾವಿರಾರು ಜೀವಿಗಳ ಸಮಾಧಿಗಳೂ ಆದವು. ಫಕ್ಕನೆ ಚೇತರಿಸಿಕೊಳ್ಳಲಾಗದ ಆಘಾತ, ತುಂಬಲಾರದ ನಷ್ಟ. ಅತ್ಯಂತ ಬಲಿಷ್ಠವೆಂದುಕೊಳ್ಳುವ ರಾಷ್ಟ್ರವೊಂದಕ್ಕೆ, ತನ್ಮೂಲಕ ಪ್ರಪಂಚಕ್ಕೇ ಸಡ್ಡು ಹೊಡೆಯುವಂಥ ಛಾತಿಯ `ಅವ'ನನ್ನು ಹಿಡಿಯಲಾಗದೆ ಎಲ್ಲರೂ ಸುಮ್ಮನಾದರು; ಬೆಂಕಿ ನಂದಿಹೋಗಿ ಹೊಗೆಯಾಡಿತು, ಕೊನೆಗೆ ತಣ್ಣಗಾಯಿತು.

ಇವೆಲ್ಲದರ ನಡುವೆ, ಎರಡು ವರ್ಷಗಳಲ್ಲಿ ಎರಡು ಬಾರಿ ಭಾರತಕ್ಕೆ ಹೋಗಿ-ಬಂದು, `ಮುಂದಿನ ವರ್ಷ ಊರಿಗೇ ಹೋಗಿ ಇದ್ದು ಬಿಡೋಣ' ಅಂದುಕೊಂಡಾಗ, ೨೦೦೨ರ ಜುಲೈ ತಿಂಗಳಲ್ಲಿ, ಬಂತು! ಬಂದೇ ಬಂತು!! ಹಸಿರು ಚೀಟಿಯ ಅನುಮೋದನಾಪತ್ರ ಕೈಗೆ ಬಂತು. ಬಲಗಿವಿಗೆ ಆಭರಣವೇನೂ ಹಾಕದೆ, ಕೂದಲನ್ನೆಲ್ಲ ಹಿಂದಕ್ಕೆ ಎಳೆದು ಕಟ್ಟಿ, ಎರಡೂ ಕಣ್ಣು ಕಾಣಿಸುವಂತೆ ತೆಗೆಸಿಕೊಂಡ ಅರ್ಧಮುಖದ ಭಾವಚಿತ್ರದ ಜೊತೆಗೆ ಬೇಕಾದ ಇತರ ಕಾಗದ ಪತ್ರಗಳನ್ನೂ ಜೋಡಿಸಿಟ್ಟುಕೊಂಡೆವು. ಸ್ಯಾನ್‍ಹೋಸೆಯ ಐ.ಎನ್.ಎಸ್. ಕಛೇರಿಯಲ್ಲಿ ಜನಜಾತ್ರೆ ಸೇರುವ ಕಥೆಗಳನ್ನು ಕೇಳಿದ್ದೆವಾದ್ದರಿಂದ ಆದಷ್ಟು ಬೇಗನೇ ಅಲ್ಲಿಗೆ ಹೋಗಲು ಬೇಕಾದ ತಯಾರಿ ಎಲ್ಲ ಮಾಡಿಕೊಂಡೆವು.

ಸೋಮವಾರ ಬೆಳಗ್ಗೆ ಏಳೂವರೆಗೆ ಕಛೇರಿ ತೆರೆಯುವಾಗ ಅಲ್ಲಿರಬೇಕೆಂದು, ಭಾನುವಾರ ರಾತ್ರಿ ಎರಡು ಘಂಟೆಗೇ ಎದ್ದು, ಸ್ನಾನಾದಿಗಳನ್ನು ಮುಗಿಸಿ, ಫ್ಲಾಸ್ಕ್ ತುಂಬ ಕಾಫಿ ತುಂಬಿಸಿಕೊಂಡು... ಬ್ರೆಡ್, ಬೆಣ್ಣೆ, ಜ್ಯಾಂ, ಹಣ್ಣು, ನೀರು- ಚೀಲಕ್ಕೆ ಸೇರಿಸಿಕೊಂಡು... ಛಳಿಯಿಂದ ರಕ್ಷಣೆಗೆ ಗಾದಿಗಳನ್ನು ಹೊತ್ತುಕೊಂಡು... ಮಕ್ಕಳಿಬ್ಬರಿಗೂ ಬದಲಾಯಿಸಲು ಬಟ್ಟೆ ಜೋಡಿಸಿಕೊಂಡು... ಅವರಿಬ್ಬರನ್ನೂ ನಿದ್ದೆಯಲ್ಲೇ ಪಾರ್ಕಿಂಗ್ ಲಾಟಿಗೆ ನಡೆಸಿಕೊಂಡು ಬಂದು... ನಮ್ಮ ಖಾಸಗಿ ರಥದಲ್ಲಿ ಸೋಮವಾರದ ಚುಮು-ಚುಮು ರಾತ್ರೆ ಮೂರೂಕಾಲಕ್ಕೆ ಸ್ಯಾನ್‍ಹೋಸೆಯ ಐ.ಎನ್.ಎಸ್. ಮುಂದೆ ನಿಂತೆವು, ದಂಗಾಗಿ.

ಆಗಲೇ ಅಲ್ಲಿ ಸುಮಾರು ಇಪ್ಪತ್ತು-ಇಪ್ಪತ್ತೈದು ಜನ `ಮನೆ'ಮಾಡಿದ್ದರು. ಸ್ಲೀಪಿಂಗ್ ಬ್ಯಾಗಿನೊಳಗೆ ಸುತ್ತಿಕೊಂಡು ಗೊರಕೆ ಹೊಡೆಯುತ್ತಿದ್ದವರು ಕೆಲವರು. ಚಾಪೆ ಹಾಸಿ ಗಾದಿ ಹರಡಿ `ಹಸಿರು'ಗನಸಿನ ಲೋಕದಲ್ಲಿದ್ದವರು ಕೆಲವರು. ಮನೆಯಿಂದ ಕುರ್ಚಿ ತಂದು ದಪ್ಪ ಜ್ಯಾಕೆಟ್ ಹಾಕ್ಕೊಂಡು ಕುಳಿತಲ್ಲೇ ತಲೆಯ ಭಾರ ಅಂದಾಜು ಹಾಕುತ್ತಿದ್ದವರು ಇನ್ನು ಕೆಲವರು. ಮೈಗೆ ಮೈ ಅಂಟುವಂತೆ ನಿಂತು ಛಳಿರಾಯನನ್ನು ಸೋಲಿಸಲು ಪ್ರಯತ್ನ ಪಡುತ್ತಿದ್ದವರು ಒಂದೆರಡು ಜೋಡಿ. ಸಿಗರೇಟು, ಬೀರ್‌ಗಳ ಘಾಟು ಒಂದು ತೆರನಾದರೆ ಪಕ್ಕದಲ್ಲೇ ಇದ್ದ `ಪೋರ್ಟಬಲ್ ಟಾಯ್ಲೆಟ್'ನ ಘಮ ಒಂದು ಥರ. ಹಲವಾರು ತರಂಗ-ವಾದ್ಯಗಳ ಶೃತಿಯಿಲ್ಲದ, ತಾಳ ತಪ್ಪಿದ ಬಡಿತಗಳಂತೆ ವಿವಿಧ ಲಯದ ಗೊರಕೆಗಳು. ಆಹ್! ಆ ವಾತಾವರಣ! ಎಲ್ಲೂ ಸಿಗಲಾರದೇನೋ? ಚೆನ್ನೈನ ಅಮೆರಿಕನ್ ಎಂಬೆಸ್ಸಿ ಮುಂದೆಯೂ! ಸರಿ. ಇಂಥ `ಪವಿತ್ರ' ವಾತಾವರಣದಲ್ಲಿ ನನ್ನವರು ಒಂದು ತೆಳು ಜಾಕೆಟ್ ಹಾಕ್ಕೊಂಡು, ಕಿವಿ ಮುಚ್ಚುವಂತೆ ಶಾಲು ಹೊದ್ದುಕೊಂಡು, ಕಾಂಕ್ರೀಟಿನ ನೆಲಕ್ಕೆ ಕುಂಡೆ ಊರಿ, ಕಾಂಪೌಂಡಿನ ಸಿಮೆಂಟ್ ಗೋಡೆಗೆ ಬೆನ್ನು ಕೊಟ್ಟು ನಾವು ನಾಲ್ವರಿಗಾಗಿ ಒಂದು ಸ್ಥಾನ ಭದ್ರಮಾಡಿದರು.

ನಮ್ಮ ರಥದೊಳಗೆ ಮಕ್ಕಳಿಬ್ಬರೂ ಹಿಂದಿನ ಪೈಲೆಟ್ ಸೀಟ್‍ಗಳನ್ನು ಹಿಂದಕ್ಕೆ ವಾಲಿಸಿಕೊಂಡು ಗಾದಿ ಹೊದ್ದುಕೊಂಡು ಮಲಗಿದರು. ನನಗೋ ನಿದ್ದೆ ಬಾರದು. "ಜೊತೆಯಲಿ ಅವನಿಲ್ಲ.... ಅವನ ನಗುವಿನ ದನಿಯಿಲ್ಲ...." ಅಂತ ಹಾಡಿಕೊಳ್ಳುವ ಪ್ರಸಂಗವಲ್ಲದಿದ್ದರೂ, ನಮಗಾಗಿ ಛಳಿಯಲ್ಲಿ ವಿವಿಧ ವಾದ್ಯತರಂಗಗಳ ನಡುವೆ ಕುಕ್ಕರಬಡಿದು ಕೂತಿದ್ದ ಅವರ ಬಗ್ಗೆ ಅಯ್ಯೋ ಅನ್ನಿಸುತ್ತಿತ್ತು. ಹಾಗೂ ಹೀಗೂ ಹೊತ್ತು ಕಳೆದು, ಸಮಯ ಆರೂಕಾಲಾದಾಗ ರಥದಿಂದ ಇಳಿದು ಅವರಿದ್ದಲ್ಲಿಗೆ ನಡೆದೆ. "ಮುಖ ತೊಳಿಲಿಕ್ಕೆ ಪ್ಲಾಸ್ಟಿಕ್ ಡಬ್ಬದಲ್ಲಿ ನೀರುಂಟು. ಕಾಫಿ ಕುಡಿದು, ಬ್ರೆಡ್ ತಿಂದು ಬನ್ನಿ, ಮತ್ತೆ ನಾನು ಮಕ್ಕಳನ್ನು ಎಬ್ಬಿಸಿ ತಿಂಡಿ ತಿನ್ನಿಸಿ ತಯಾರು ಮಾಡುತ್ತೇನೆ" ಅಂದು, ಅವರನ್ನೆಬ್ಬಿಸಿ, ಆ ಸ್ಥಾನದಲ್ಲಿ ನನ್ನ ಪೃಷ್ಠ ಪ್ರತಿಷ್ಠಾಪಿಸಿಕೊಂಡೆ.

ಅಷ್ಟರಲ್ಲೇ ಒಂದು `ಚಲಿಸುವ ಹೋಟೇಲ್' ಅಲ್ಲಿಗೆ ಬಂದು ನಿಂತಿತ್ತು. ಮಲಗಿದ್ದ ಕೆಲವರೆಲ್ಲ ಎದ್ದು ಬಂದು ಅವರವರ ಪ್ರೀತ್ಯರ್ಥಗಳನ್ನು ಪಡೆದರೆ, ಮತ್ತೆ ಕೆಲವರ ಮನೆಯಿಂದ ಅರ್ಧಾಂಗಿ, ಅಮ್ಮ, ಅಪ್ಪ, ತಮ್ಮ, ತಂಗಿ, ಅಣ್ಣ, ಅಕ್ಕ, ಸ್ನೇಹಿತ, ಗೆಳತಿ,.... ಹೀಗೇ ಯಾರ್‍ಯಾರೋ ಕಾಫಿ-ತಿಂಡಿ ಹೊತ್ತು ತಂದರು. `ಬಿಗ್-ಮ್ಯಾಕ್' ಚೀಲಗಳೂ ಕಂಡು ಬಂದವು. ಸುಮಾರು ಆರೂವರೆಯ ಹೊತ್ತಿಗೆ ಇಬ್ಬರು ಪೊಲೀಸ್ ಆಫೀಸರ್ಸ್ ಬಂದು ಜೋರಾಗಿ, "ಆಲ್ ರೈಸ್... ಆಲ್ ರೈಸ್...." ಎಂದರಚಿ, ಅಮೆರಿಕ ಸಂಯುಕ್ತ ಸಂಸ್ಥಾನದ ಬಾವುಟವನ್ನು ಏರಿಸಿ ಹಾರಿಸಿ ಸೆಲ್ಯೂಟ್ ಹೊಡೆದು ಒಳನಡೆದರು. ಮಲಗಿದ್ದವರೆಲ್ಲ ಎದ್ದರಾದ್ದರಿಂದ ಸರದಿಯ ಸಾಲು ನೇರವಾಯಿತು. ಹೊಸ ಜನರು ಬಂದು ಸೇರಿ, ಹನುಮಂತನ ಬಾಲ ಬೆಳೆಯಿತು. `ಚಲಿಸುವ ಹೋಟೇಲ್' ಮತ್ತೊಮ್ಮೆ ಆಹಾರ ತುಂಬಿಕೊಂಡು ಬಂದು, ಗಲ್ಲಾಪೆಟ್ಟಿಗೆ ತುಂಬಿಕೊಂಡು ಹೊರಟುಹೋಯಿತು.

ಕಾಫಿ ಮುಗಿಸಿ ಬಂದ ನನ್ನವರನ್ನು ಕಟ್ಟಡದ ಗೋಡೆ ಬದಿಯ ಹೊಸ ಸ್ಥಾನಕ್ಕೆ ನಿಲ್ಲಿಸಿ, ಮಕ್ಕಳನ್ನು ಎಬ್ಬಿಸಿ, ಮುಖ ತೊಳೆದ ಶಾಸ್ತ್ರ ಮುಗಿಸಿ, ಬ್ರೆಡ್ ಸ್ಯಾಂಡ್‍ವಿಚ್ ಮಾಡಿಕೊಟ್ಟೆ. ನಾನು ಕಾಫಿಯನ್ನಷ್ಟೇ ಕುಡಿದೆ. ತಿಂಡಿ ಮುಗಿಸಿ ಮಕ್ಕಳು ಬಟ್ಟೆ ಬದಲಾಯಿಸಿದಾಗ ಸುಮಾರು ಏಳು ಘಂಟೆ. ಎಲ್ಲರೂ ಸಾಲಿನಲ್ಲಿ ಸೇರಿಕೊಂಡೆವು. ಹನುಮಂತನ ಬಾಲ ಸಾಕಷ್ಟು ಬೆಳೆದಿತ್ತು. ಕಛೇರಿಯ ಬಾಗಿಲಿಂದ ಒಂದು ದಿಕ್ಕಿನಲ್ಲಿ ಈ ಉದ್ದದ ಬಾಲವಿದ್ದರೆ, ಇದಕ್ಕೆ ವಿರುದ್ಧ ದಿಕ್ಕಿನಲ್ಲಿ ಇನ್ನೊಂದು ಪುಟ್ಟ ಬಾಲ; "ಅಪಾಯಿಂಟ್‍ಮೆಂಟ್ಸ್ ಲೈನ್" ಬೋರ್ಡ್‍ಗೆ ಮುಖಮಾಡಿ. ಅದರ ಫೈನ್-ಪ್ರಿಂಟ್ "ಐ.ಎನ್.ಎಸ್. ಇಶ್ಯೂಡ್ ಲೆಟರ್ಸ್ ಓನ್ಲೀ" ಎಂದಿತ್ತು. ಹಿಂದಿನ ಸಂಜೆ ಸ್ಥಳ ನೋಡಿಕೊಂಡು ಬರಲು ಬಂದಿದ್ದಾಗ ಅದನ್ನು ನೋಡಿದ್ದರೂ ತಲೆ-ಬುಡ ಗೊತ್ತಾಗಿರಲಿಲ್ಲ. "ಯಾವ ಲೆಟರ್? ಏನು ಅಪಾಯಿಂಟ್‍ಮೆಂಟ್? ಯಾರು ಕೊಡಬೇಕು? ಹೇಗೆ ಪಡೀಬೇಕು? ಬಿಡು.. ಈಗ ಅದಕ್ಕೆಲ್ಲ ಸಮಯವಿಲ್ಲ...." ಅಂದುಕೊಂಡು ಸಾರ್ವಜನಿಕ ಸಾಲಿನಲ್ಲೇ ನಿಲ್ಲುವ ತೀರ್ಮಾನ ಮಾಡಿದ್ದಾಗಿತ್ತು.

ಕಟ್ಟಡದೊಳಗೆ ಜನಸಂಚಾರ ಆರಂಭವಾದುದು ಕಿಟಿಕಿಯಲ್ಲಿ ಕಂಡುಬರತೊಡಗಿತು. ಆ ಪುಟ್ಟ ಸಾಲಿನವರಿಗೆ ಆದ್ಯತೆ. ಅವರನ್ನು ಏಳು ಘಂಟೆಗೇ ಒಳಬಿಟ್ಟಿದ್ದರು. ಈ ಸಾಲಿನವರಿಗೆ ಏಳೂವರೆಗೆ. ಈಗ ನನ್ನ ದೃಷ್ಟಿ ಒಬ್ಬ ಆಫೀಸರನ ಮೇಲೆ ಬಿತ್ತು. ಹನುಮಂತನ ಬಾಲದ ಕೊನೆಯಲ್ಲಿದ್ದ ಅವನು ಎಲ್ಲರ ಕಾಗದ ಪತ್ರಗಳನ್ನು ನೋಡುತ್ತಾ ಬರುತ್ತಿದ್ದ. ಕೆಲವರನ್ನು, ಅದೂ ಸಾಲಿನ ಆ ಕೊನೆಯಲ್ಲಿದ್ದವರನ್ನು, ಈಗಷ್ಟೇ ಬಂದವರನ್ನು, ನೇರವಾಗಿ ಒಳಗೆ ಕಳಿಸುತ್ತಿದ್ದ. ನನ್ನೊಳಗೆ ಸಿಡುಕು, ತಳಮಳ. ನಾವೆಲ್ಲ ನಿದ್ದೆ ಬಿಟ್ಟು ಛಳಿಯಲ್ಲಿ ಜಾಗರಣೆ ಮಾಡಿದ್ರೂ ಇನ್ನೂ `ಹೊರಗೆ', ಅವರೆಲ್ಲ ಆರಾಮಾಗಿ ಈಗ ಬಂದ್ರೂ ನೇರ 'ಒಳಗೆ'! ಅನ್ಯಾಯ, ತೀರಾ ಅನ್ಯಾಯ; ನನ್ನವರ ಕೆನ್ನೆಯ ಬಳಿ ಪಿಸುಗುಟ್ಟುತ್ತಿದ್ದೆ. ಹಾಗೆ ಹೋಗುತ್ತಿದ್ದವರು ಬಹುತೇಕ ಭಾರತೀಯರು ಮತ್ತು ಚೀನೀಯರು. ಕೊನೆಗೂ ದ್ವಾರದಿಂದ ಒಂದಿಪ್ಪತ್ತು ಅಡಿ ಹಿಂದಿದ್ದೇವೆ ಅನ್ನುವಾಗ ಆಫೀಸರ್ ನಮ್ಮ ಬಳಿ ಬಂದ, ಕಡತಗಳನ್ನೊಮ್ಮೆ ನೋಡಿ, "ಯು ಕೇನ್ ಜೊಯಿನ್ ದಾಟ್ ಲೈನ್, ಗೋ ಅಹೆಡ್ ಸರ್" ಅಂದ. ನನಗೆ ಖುಷಿಗಿಂತ ಹೆಚ್ಚಾಗಿ ರೇಗಿತ್ತು. ಸಾಲಿನ ಈ ತುದಿಯಿಂದಲೇ ಪರಿವೀಕ್ಷಣೆ ನಡೆಸಿದ್ದರೆ ಅವನಪ್ಪನ ಗಂಟೇನು ಹೋಗುತ್ತಿತ್ತು? ಅರ್ಧ ಘಂಟೆ ಮೊದಲೇ ಹೋಗಿರಬಹುದಿತ್ತಲ್ಲ!

`ಜೋಯಿನ್ ದಟ್ ಲೈನ್' ಅಂತ, ಆ ಕಿರು ಬಾಲದ ತುದಿಗೆ ಹೋಗಿ ಸೇರಿಕೊಂಡೆವು. ಇನ್ನೇನು ನಾವು ಒಳ ಹೋಗಬೇಕು, ಅಷ್ಟರಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು (ಅದೇ, ಬೆಳ-ಬೆಳಗ್ಗೆ ಬಾವುಟ ಹಾರಿಸಿದ್ದರಲ್ಲ, ಅವರೇ!) ಒಬ್ಬ ಆಫ್ರಿಕನ್ ತರುಣನನ್ನು ತಳ್ಳುತ್ತಾ ಹೊರಗೆ ಕರೆತಂದರು. ಆತನೋ, ಒಳಹೋಗಲು ಎಳೆದಾಡುತ್ತಿದ್ದ. "ಆ ಅಧಿಕಾರಿ ನಿನ್ನನ್ನೊಮ್ಮೆ ಹೊರ ಹೋಗಲು ಹೇಳಿದ ಮೇಲೆ ನೀನಿಲ್ಲಿರಕೂಡದು. ನಡೆಯಾಚೆ, ಹೊರಗೆ ನಡೆ...." ಪರಿಸ್ಥಿತಿ ಗಂಭೀರವಾದಂತಿತ್ತು. "ನಾನ್ಯಾಕೆ ಹೊರ ಹೋಗಬೇಕು? ನನಗೆ ತಿಳಿದುಕೊಳ್ಳಲೇ ಬೇಕು, ಆಮೇಲೆ ಹೋಗುತ್ತೇನೆ...." ಆತ ಒರಲುತ್ತಿದ್ದ. ಇವರಿಬ್ಬರೂ ಕಷ್ಟಪಟ್ಟು ಅವನನ್ನು ಪಾರ್ಕಿಂಗ್ ಲಾಟಿನ ಮೂಲೆಗೆ ಎಳೆದೊಯ್ದ ಮೇಲೆಯೇ ನಮ್ಮನ್ನು ಒಳಬಿಟ್ಟರು. ಎದೆಯೊಳಗೆ ಏನೋ ಕಂಪನ ಶುರುವಾಗಿತ್ತು, ಆ ಎಳೆದಾಟ ನೋಡಿ. ಬಾಗಿಲೊಳಗೆ ಬರುತ್ತಿದ್ದಂತೆ, "ಮೆಟಲ್ ಡಿಟೆಕ್ಟರ್" ಮೂಲಕ ಬರುವಾಗ ನನ್ನ ಕೈಬಳೆಗಳಿಗೆ ಅದು ಚೀರಿಟ್ಟಿತು, ವಿಶೇಷ ತಪಾಸಣೆ. ಒಳಗೆ ಕುಳಿತಿದ್ದವರ ದೃಷ್ಟಿ ನನ್ನ ಮೇಲೆ. ನನಗೆ ಮುಜುಗರ. ಮತ್ತೆ ನಮ್ಮ ಮಗ ಬರುವಾಗ ಆತನ ಬೆಳ್ಳಿಯ ಉಡಿದಾರ ಅದರ ಒಳಗಣ್ಣಿಗೆ ಬೆಂಕಿಯಾಯ್ತು. ಅವನಿಗೂ ವಿಶೇಷ `ಉಪಚಾರ'. ಕೊನೆಗೂ ನಾವು ನಾಲ್ವರೂ ನಿಟ್ಟುಸಿರಿಟ್ಟು ಕಛೇರಿಯ ಒಳಗಂತೂ ಸೇರಾಯ್ತು.

ಟೋಕನ್‍ಗಳನ್ನು ಪಡೆದು ಆಸನಗಳಲ್ಲಿ ಆಸೀನರಾದೆವು. ನಮ್ಮ ಮುಂದಿನ ಸಾಲಿನ ಆಸನಗಳಲ್ಲಿ ಕನ್ನಡದ ಒಂದು ಪುಟ್ಟ ಸಂಸಾರ. ಹುಡುಗ ಚುರುಕಾಗಿದ್ದ. ತಮ್ಮ ಸರದಿ ಯಾವಾಗ ಬರುತ್ತೇಂತ ಅಪ್ಪ ಅಮ್ಮನ ಬಳಿ ಕೇಳುತ್ತಿದ್ದ. ಇಷ್ಟೆಲ್ಲ ನಡೆದಾಗ ಸಮಯ ಎಂಟೂವರೆ ಘಂಟೆ ಮೀರಿತ್ತು. ಆ ತುಂಟನ ಅಮ್ಮನನ್ನು ಮಾತಿಗೆಳೆದೆ. ಅವರು ಏಳು ಘಂಟೆಗಷ್ಟೇ ಕಛೇರಿಯ ಬಾಗಿಲಿಗೆ ಬಂದಿದ್ದರೆಂದೂ ಈ ಕಡೆಯ ಪುಟ್ಟ ಸಾಲಿನ ಮೂಲಕ ಒಳಬಂದು ನಮಗಿಂತ ಇಪ್ಪತ್ತು ಟೋಕನ್-ಸಂಖ್ಯೆ ಮುಂದಿದ್ದಾರೆಂದೂ ತಿಳಿಯಿತು. ಐ.ಎನ್.ಎಸ್.ನಿಂದ "ಗ್ರೀನ್ ಕಾರ್ಡ್ ಅಪ್ರೂವಲ್ ಲೆಟರ್" ಬಂದಿದ್ದರೆ ನೇರವಾಗಿ ಅಪಾಯಿಂಟ್‍ಮೆಂಟ್ ಸಾಲಿಗೇ ಬರಬಹುದೆಂದೂ ತಿಳಿಸಿದರು.

ನನ್ನ ತಾಳ್ಮೆಗೆ ಮತ್ತೊಂದು ಏಟು ಬಿತ್ತು. ನಾವು ಕಛೇರಿಯ ಬಾಗಿಲಿಗೆ ಹೋಗಿದ್ದ ಮೂರೂಕಾಲರ ಅಪರಾತ್ರೆಯಲ್ಲಿ ಆ ಸಾಲಿನಲ್ಲಿ ಒಂದು ನರಹುಳವೂ ಇರಲಿಲ್ಲ. ಈ ವಿಷಯ ಗೊತ್ತಿದ್ದು ಆಗಲೇ `ಅಲ್ಲಿ' ನಿಂತಿರುತ್ತಿದ್ದರೆ ಇಷ್ಟು ಹೊತ್ತಿಗೆ ಮನೆಗೇ ಹೋಗಬಹುದಿತ್ತು. ಅದೂ ಬೇಡ, ಆ ಆಫೀಸರ್, ಉದ್ದ ಸಾಲಿನ ಈ ತುದಿಯಿಂದಲೇ ನೋಡಿಕೊಂಡು ಹೋಗಿದ್ದರೂ ನಮ್ಮ ಸರದಿ ಬೇಗನೇ ಬರುತ್ತಿತ್ತು. ಆದಷ್ಟು ಬೇಗ ಈ ಕೆಲಸ ಮುಗಿಸಿಕೊಂಡು ಮನೆಗೆ ಹೋಗಿ, ಊಟ ಮಾಡಿ, ಒಂದು ನಿದ್ದೆ ಮಾಡಬಹುದಿತ್ತು. ಇಲ್ಲಿ ಏನೂ ಇಲ್ಲ. ತಿಂಡಿ-ತೀರ್ಥ ಇರಲಿ, ನೀರನ್ನೂ ಒಳಗೆ ಬಿಡೋದಿಲ್ಲ, ಇಲ್ಲಿರುವ ಆ ನಳ್ಳಿಯಿಂದಲೇ ಕುಡೀಬೇಕು...... ನನ್ನೊಳಗೆ ಪಿರಿಪಿರಿ.

ಕಾಯುವಾಗ ಕಣ್ಣು ಸುತ್ತಲೂ ನಿರುಕಿಸುತ್ತಿತ್ತು. ಏನೇನೋ ಕಥೆಗಳು ಕಾಣುತ್ತಿದ್ದವು. ಒಂದು ಭಾರತೀಯ ಸಂಸಾರ- ಗಂಡ, ಹೆಂಡತಿ, ಮಗು; ತಮ್ಮ ಸರದಿಯಲ್ಲಿ ಇಬ್ಬರು ಅಧಿಕಾರಿಗಳ ಬಳಿ ನಿಂತಿದ್ದಾರೆ. ಅಡ್ವಾನ್ಸ್ ಪರೋಲ್, ಇ.ಎ.ಡಿ.ಕಾರ್ಡ್, ಪಾಸ್‍ಪೋರ್ಟ್ ಹಾಗೂ ಇತರ ಅಗತ್ಯ ಕಾಗದ ಪತ್ರಗಳನ್ನು ಆ ಅಧಿಕಾರಿ ಕೇಳುತ್ತಿದ್ದರೆ ಈತನ ಬಳಿ ಇ.ಎ.ಡಿ.ಕಾರ್ಡ್ ಇರಲಿಲ್ಲ. ಎಲ್ಲ ಹಿಂತಿರುಗಿಸದೆ ಆಕೆ ಮುಂದುವರೆಸುವಂತಿರಲಿಲ್ಲ. ಮತ್ತೆ ಮನೆಗೆ ಹೋಗಿ ಇಂದೇ ತಂದಿತ್ತರೆ? ಅದಾಗದು, ಹೊಸದಾಗಿ ಸಾಲಿನಲ್ಲಿ ನಿಂತು, ಕಾದು.... ಬರಬೇಕು. ಇನ್ನೊಂದು ದಿನಕ್ಕೇ ಸರಿ, ಇಂದೇ ಆಗದ ಕೆಲಸ. ಪಾಪ, ಅವರಿಬ್ಬರ ಮಂಕು ಮುಖ ನೋಡಿ ಮಗುವೂ ಪಿಟ್ಟೆನ್ನದೆ ನಿಂತಿತ್ತು. ಮಡದಿ ಮತ್ತು ಪಾಪು ಇನ್ನೊಂದು ಅಧಿಕಾರಿಯ ಬಳಿ ತಮ್ಮ ಕಾಗದ ಪತ್ರಗಳನ್ನು ಒಪ್ಪಿಸಿ ಬಂದು ನಿಂತಿದ್ದರು. ಈತನ ಪರಿಸ್ಥಿತಿ ಮೂಢನಂತಾಗಿತ್ತು. "ಛೇ, ಅದೊಂದು ಕಾರ್ಡ್ ತಾರದೆ ಇಂದು ಇಡೀ ದಿನದ ಶ್ರಮ ಹಾಳಾಯ್ತು!!" ಶಪಿಸಿಕೊಳ್ಳುತ್ತಿರಬೇಕು ಆತ. ನಮ್ಮೊಂದಿಗೇ ಸಾಲಿನಲ್ಲಿ ಅವರನ್ನೂ ಕಂಡ ನೆನಪು ನನಗೆ, ಮೂರೂಮುಕ್ಕಾಲರ ಸುಮಾರಿಗೆ ಬಂದಿದ್ದರೆಂದು ಕಾಣುತ್ತದೆ. `ಅಯ್ಯೋ' ಅಂದುಕೊಂಡೆ.

ಆ ಅಧಿಕಾರಿಗೆ ಏನನಿಸಿತೋ, ಮತ್ತೆ ಆತನನ್ನು ಕರೆದಳು. "ನಿಮ್ಮ ಇ.ಎ.ಡಿ.ಕಾರ್ಡ್ ಕೆಲಸಕ್ಕೆ ಬಾರದಂತೆ ಕೆಡಿಸಿಬಿಡಿ, ಮುಂದೆಂದೂ ಯಾವುದೇ ಕಾರಣಕ್ಕೂ ಅದನ್ನು ಉಪಯೋಗಿಸಬೇಡಿ, ಕತ್ತರಿಸಿ ಹಾಕಿ. ಹಾಗೆ ಪ್ರಮಾಣಿಸುವಿರಾದರೆ ನಿಮ್ಮ ಕೇಸ್ ಕೆಲಸ ಮುಂದುವರೆಸುತ್ತೇನೆ" ಅಂದಳು. ಈ ಆಸಾಮಿ ಅವರ ಕಾಲಿಗೇ ಬೀಳುತ್ತಿದ್ದರೇನೊ! ಅಷ್ಟೂ ನಮ್ರತೆಯಿಂದ `ಹಾಗೇ ಆಗಲಿ' ಎಂದು ತಲೆಯಲ್ಲಾಡಿಸಿ, ಕುರ್ಚಿಗೆ ಬಂದು ಕುಕ್ಕರಿಸಿದರು. ದೊಡ್ಡ ಹೊರೆಭಾರ ಕಳೆದಂತಾಗಿರಬೇಕು. ಮತ್ತೆ ಕೆಲವಾರು ನಿಮಿಷ ಕಾದು ತಂತಮ್ಮ ಪಾಸ್‍ಪೋರ್ಟ್‍ಗಳನ್ನು ಪಡೆದು ಅವರು ಹೊರ ನಡೆದರು.

ನಮ್ಮ ಟೋಕನ್‍ಗಳ ಸರದಿ ಬಂದಾಗ (ನಾಲ್ವರಿಗೆ ಎರಡು ಟೋಕನ್ಸ್) ಅಪ್ಪ-ಮಗ ಒಂದು ಆಫೀಸರ್ ಬಳಿ, ಮಗಳನ್ನು ಜತೆಗೂಡಿ ನಾನೊಂದು ಆಫೀಸರ್ ಬಳಿ ನಡೆದು, ಪಾಸ್‍ಪೋರ್ಟ್ ಸಹಿತ ಇತರ ಕಡತಗಳನ್ನು ಒದಗಿಸಿ, ಬಲ ತೋರುಬೆರಳ ಅಚ್ಚು ಹಾಕಿ, ಸಹಿ ಮಾಡಿ ಮತ್ತೆ ಆಸನಸ್ಥರಾದೆವು. ಒಂದರ್ಧ ಘಂಟೆಯ ಬಳಿಕ ನಮ್ಮ ಹೆಸರನ್ನು ಕೂಗಿ ಕರೆದಾಗ ನಮ್ಮ ಪಾಸ್‍ಪೋರ್ಟ್ ಹಿಂದೆ ಪಡೆದೆವು. ಈ ಪರದೇಶಕ್ಕೆ ಪರದೇಶಿಗಳಾಗಿ ಕಾಲಿರಿಸಿ ಒಂದು ದಶಕವಾಗುತ್ತಿರುವಾಗ, ಕೊನೆಗೂ "ಗ್ರೀನ್ ಕಾರ್ಡ್" ಬಂತಲ್ಲಪ್ಪ ಎಂದು ಪಾಸ್‍ಪೋರ್ಟ್ ತೆರೆದು ನೋಡಿದರೆ....

ಒಂದು ಪುಟದಲ್ಲಿ ಕೆಂಪು ಶಾಯಿಯ ಸೀಲು. "ಟೆಂಪೊರರಿ ಎವಿಡೆನ್ಸ್ ಆಫ್ ಲಾಫುಲ್ ಅಡ್ಮಿಶನ್ ಫಾರ್ ಪರ್‍ಮನೆಂಟ್ ರೆಸಿಡೆನ್ಸ್. ಎಂಪ್ಲೋಯ್‍ಮೆಂಟ್ ಆಥೊರೈಸ್ಡ್. ವ್ಯಾಲಿಡ್ ಅಂಟಿಲ್.........."!
ಹಸಿರಲ್ಲದ `ಹಸಿರು ಚೀಟಿ'- "`ಗ್ರೀನ್ ಕಾರ್ಡ್' ಇನ್ನು ಆರರಿಂದ ಹನ್ನೆರಡು ತಿಂಗಳಲ್ಲಿ ನಿಮ್ಮ ಕೈ ಸೇರಲಿದೆ. ಅಲ್ಲಿಯವರೆಗೆ ಇದನ್ನೇ ಉಪಯೋಗಿಸಿ" ಅಂದಳು ಆಫೀಸರ್. ಮನೆಗೆ ಬಂದು ತಲುಪಿದಾಗ ಘಂಟೆ ಹನ್ನೆರಡು.
************ ************
(ಆಗಸ್ಟ್-೨೦೦೨)
(ಕೆ.ಕೆ.ಎನ್.ಸಿ.ಯ ಸ್ವರ್ಣಸೇತುವಿನಲ್ಲಿ ಪ್ರಕಟವಾಗಿದೆ)