ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday, 27 October, 2011

ಪರಾಧೀನ-೦೪

ಮುಂದಿನ ನಿಗದಿತ ಭೇಟಿಯ ಸಮಯಕ್ಕೆ ಸರಿಯಾಗಿ ನಗುತ್ತಲೇ ಬಂದವರ ಮುಖದಲ್ಲಿ ಲವಲವಿಕೆಯಿತ್ತು, "ಆತಂಕ ಕಡಿಮೆಯಾದಂತಿದೆ" ಎಂದರು. ಈ ನಿರಾತಂಕವೇ ಚಿಕಿತ್ಸಕರಿಗೆ ಉತ್ತೇಜಕ. ರಿಲ್ಯಾಕ್ಸೇಷನ್ ಸುಲಭದಲ್ಲೇ ಸಾಧ್ಯವಾಗಿ ಟ್ರಾನ್ಸ್ ಸ್ಥಿತಿಗೆ ಕೆಲವೇ ನಿಮಿಷಗಳಲ್ಲಿ ಜಾರಿಕೊಂಡರು.

"...ತೆಂಕು (ದಕ್ಷಿಣ) ದಿಕ್ಕಿಗೆ ತಲೆ ಹಾಕಿ ಮಲಗಿಸಿದ ಮನುಷ್ಯ ದೇಹ, ಸಮುದ್ರ ತೀರದಲ್ಲಿ. ತಲೆ-ಮುಖ ಚಚ್ಚಿ ಹಾಕಿದೆ, ಗುರುತಾಗುತ್ತಿಲ್ಲ. ಸುತ್ತಲಿರುವ ಜನ ದೇಹವನ್ನು ತಿರುಗಿಸಲಿಕ್ಕೆ ನೋಡ್ತಿದ್ದಾರೆ, ಕಡಲಲ್ಲಿ ತೇಲಿ ಬಂದ ಶವ ಅಂತ ಮಾತಾಡ್ತಿದ್ದಾರೆ. ಸುಮಾರು ಇಪ್ಪತ್ತೆಂಟು ವರ್ಷದ ಯುವಕನ ಬಾಡಿ. ಏನೋ ಸೆಳೆತ, ಈ ದೇಹದ ಬಗ್ಗೆ. ಏನೋ ಶಕ್ತಿ ಎಳೀತಾ ಇದೆ ನನ್ನನ್ನು ಆ ಕಡೆಗೆ. ಮತ್ತೊಮ್ಮೆ ಬೆಳಕಿನ ಸುರಂಗ, ಅಲ್ಲಿಂದ ನನ್ನನ್ನು ರಿಲೀಸ್ ಮಾಡಲಾಗಿದೆ. ಮುದುಕಿಯೊಬ್ಬರು, ಕೃಷಿಕ ಹೆಂಗಸಿನ ವೇಷಭೂಷಣ... ಕೈಯಲ್ಲಿ ಕತ್ತಿ (ಕುಡುಗೋಲು) ಹಿಡಿದು ನಿಷ್ಠುರ ಕಣ್ಣುಗಳಿಂದ ನನ್ನನ್ನು ನೋಡ್ತಿದ್ದಾರೆ... ಆ ದೇಹದ ಕಡೆಗಿನ ಸೆಳೆತವನ್ನು ಅವರೇ ಕತ್ತರಿಸಿದ್ದಾರೆ. ಈಗ ತಿಳಿಯಿತು, ಅದು ನನ್ನ ದೇಹ. ಪುನಃ ಬೆಳಕಿನ ಸುರಂಗ. ಆಕಡೆಯಿಂದ ಬಾಗಿಲು ಹಾಕಿದೆ. ಅದನ್ನು ತೆರೆದು ಸುರಂಗದೊಳಗೆ ಕರೆದುಕೊಂಡು ಹೋದ್ರು, ಅಜ್ಜಿ. ಬಲಬದಿಗೆ ತಿರುಗಿ ಹಿಂದೆ ನನ್ನ ಕಡೆ ನೋಡಿದ್ರು. ನೋಟ ಭಯ ಹುಟ್ಟಿಸುತ್ತೆ. ಹಿಂಬಾಲಿಸುವಂತೆ ಸನ್ನೆ ಮಾಡಿದ್ರು, ಹಿಂಬಾಲಿಸಿದೆ.

ಸುರಂಗ ಮುಗಿದು ಹಸಿರು ತುಂಬಿದ ಮರಗಳ ಕಾಡು. ಪರಿಚಯ ಇಲ್ಲ. ಅರೆಗತ್ತಲೆ. ತುಂಬಾ ದೊಡ್ಡ ದೊಡ್ಡ ಮರಗಳು. ಒಂದು ಮರದ ಒಂದು ಕೊಂಬೆಗೆ ಯಾವುದೋ ದೇಹ ತೂಗಾಡಿಸಿದ್ದಾರೆ. ಆತ್ಮಹತ್ಯೆ ಅಲ್ಲ. ಕೊಲೆ ಮಾಡಿ ತೂಗಾಡಿಸಿದ್ದು. ದೇಹದ ಮುಖ ಕೆಳಮುಖವಾಗಿದೆ. ಹೆಣ್ಣು. ಸೀರೆಯಲ್ಲೇ ಕಟ್ಟಿದ್ದಾರೆ, ಸುಮಾರು ಇಪ್ಪತ್ತೆರಡು-ಇಪ್ಪತ್ಮೂರರ ಹುಡುಗಿ. ಕುತ್ತಿಗೆಯ ಹಿಂದಿನ ನರಗಳು, ಹಿಂದಲೆಯ ಕೆಳಗೆಲ್ಲ ಎದ್ದು ಕಾಣ್ತವೆ. ಅಜ್ಜಿಯ ಹಿಂದೆಯೇ ಹೋಗುವ ಪ್ರಯತ್ನ ಮಾಡಿದಾಗ ಆ ದೇಹ ವಿಕಾರ ಮುಖ ಮಾಡಿ ನನ್ನ ಕಡೆ ನೋಡಿ ಮಾತಾಡ್ತಾ ಉಂಟು... ನೀನೇ ಕೊಲೆ ಮಾಡಿದ್ದು, ಕುತ್ತಿಗೆ ಜಜ್ಜಿ ಕೊಂದಿದ್ದೀ, ಅದಕ್ಕೇ ನಿಂಗೆ ಅಲ್ಲೇ ನರಗಳ ದೌರ್ಬಲ್ಯ ಅಂತ ಹೇಳ್ತಾ ಉಂಟು. ಅಜ್ಜಿ ಬೇರೆ ಮರದ ಬುಡದಲ್ಲಿ ನಿಂತಿದ್ದಾರೆ. ನನ್ನ ದೇಹದ ಚೈತನ್ಯ ಆ ಶವಕ್ಕೆ ಸೇರ್ತಾ ಉಂಟು ನನ್ನಲ್ಲಿ ನಿಃಶಕ್ತಿ. ಮರದಿಂದ ಕಳಚಿಕೊಂಡು ಕೆಳಗೆ ಬಂತು. ಆ ವಿಕಾರ ಮುಖದ ಶವದ ತಲೆಗೆ ಈಗ ಹೆಣ್ಣು ಶಕ್ತಿದೈವದ ಥರ ಗರಿಯ ಕಿರೀಟ. ನನ್ನ ಕಡೆ ವೇಗವಾಗಿ ಬರ್ತಾ ಉಂಟು, ನನಗೆ ಹೊಡೀಲಿಕ್ಕೆ ಬರ್ತಾ ಉಂಟು. ಅಜ್ಜಿಯ ಕಡೆಯಿಂದ ಒಂದು ಮಿಂಚು, ಒಂದು ಬೆಳಕಿನ ಪುಂಜ, ಗದೆಯ ರೂಪಕ್ಕೆ ಬಂತು. ನನ್ನ ಮತ್ತು ಆ ದೇಹದ ನಡುವೆ ಬಂತು. ಆ ದೇಹದ ಎದೆಯ ಭಾಗಕ್ಕೇ ಒತ್ತಿಹಿಡೀತು, ತಳ್ಳಿಕೊಂಡೇ ಹಿಂದೆ ಹಿಂದೆ ಓಡಿಸಿ ಅಲ್ಲಿ ಪಶ್ಚಿಮಕ್ಕೆ ಹರೀತಾ ಇರುವ ನದಿ ನೀರಿಗೆ ದೂಡಿತು. ನೀರಿನೊಳಗೆ ಒತ್ತಿ ಹಿಡೀತು. ಹೆಣ್ಣುದೈವಶಕ್ತಿಯ ಕಿರೀಟ ಕರಗಿತು, ಅದರ ಶಕ್ತಿ ನಿಃಶಕ್ತಿಯಾಯ್ತು. ಅಜ್ಜಿಯ ಹಿಂದೆ ನಾನು ನಿಂತು ನೋಡ್ತಿದ್ದೇನೆ. ನೀರಿನಲ್ಲಿ ತೇಲುತ್ತಿರುವ ದೇಹದ ಮೇಲೆಯೇ ಬೆಳಕಿನ ಗದೆಯೂ ಗಾಳಿಯಲ್ಲಿ ತೇಲುತ್ತಾ ಮುಂದೆ ಸಾಗುತ್ತಾ ಹೋಯ್ತು. ಅಜ್ಜಿ ಮತ್ತು ನಾನು ಹಿಂಬಾಲಿಸಿದೆವು. ದೇಹ ಪೂರ್ತಿ ನೀರಲ್ಲಿ ಕರಗಿ ಹೋದಮೇಲೆ ಬೆಳಕು ಬಂದು ಅಜ್ಜಿಯನ್ನು ಸೇರಿತು. ನನ್ನ ಮೈಯಲ್ಲಿ ಕಂಪನ (ಹೊರ ಮೈಯಲ್ಲೂ ಹದವಾದ ನಡುಕ).

ನನ್ನ ಹಿಂದೆ ಉರಿ, ನಾ ನಿಂತಿದ್ದಲ್ಲಿ ಬೆಂಕಿ. ಅಜ್ಜಿ ನೋಡ್ತಾರೆ, ಹಸಿ ಮರಕ್ಕೆ ಬೆಂಕಿ. ಅಜ್ಜಿ ಅಲ್ಲಿ ಹೋದಾಗ ಬೆಂಕಿ ಶಾಂತವಾಯ್ತು. ಮರ ಸುಡ್ಲಿಲ್ಲ. ಅಜ್ಜಿ ಮುಂದೆ, ನಾನು ಅವರ ಹಿಂದೆ, ಪಶ್ಚಿಮಾಭಿಮುಖವಾಗಿ ಹೋಗ್ತಿದ್ದೇವೆ. ಈಗ ಅಜ್ಜಿ ಐಸ್ ಮೇಲೆ ನಡೀತಿದ್ದಾರೆ, ನಾನು ತೇಲಾಡ್ತಾ ಹೋಗ್ತಿದ್ದೇನೆ. ವಾಯುವ್ಯದ ಕಡೆಗೆ, ಸಿಮೆಂಟ್ ಸುರಂಗದ ಥರ. ಅಜ್ಜಿಯ ಕೈಯಲ್ಲಿ ಕತ್ತಿ ಇನ್ನೂ ಉಂಟು. ಸನ್ನೆ ಮಾಡಿ ಕರೆದು ಗುಡ್ಡದ ಬದಿಗೆ ಕರೆದುಕೊಂಡು ಹೋದ್ರು, ಸುರಂಗ ದಾಟಿ, ನೈ‌ಋತ್ಯದ ಕಡೆ ಸಾಗಿದ್ದೇವೆ. ಕಣಿವೆ ಒಂದು ಬದಿಯಲ್ಲಿ. ಆಳದಲ್ಲಿ ನೀರು, ಕೆಂಪು ಮಿಶ್ರಿತ ಮಣ್ಣು. ಕುರುಚಲು ಗುಡ್ಡಗಾಡು, ಕಡಿಮೆ ಮರಗಳು. ಈಗ ಸರಿಯಾದ ರಸ್ತೆಗೆ ಬಂದಿದ್ದೇವೆ. ಅಜ್ಜಿ ಬಲಗೈ ಎತ್ತಿ ಕತ್ತಿಯಿಂದ ದಾರಿ ತೋರಿಸ್ತಾ ಇದ್ದಾರೆ, ಪಶ್ಚಿಮಕ್ಕೆ. ಅವರು ನೈ‌ಋತ್ಯಕ್ಕೇ ಹೋದ್ರು. ನಾನು ಗುಡ್ಡದ ಮೇಲಿಂದ ತೇಲಿಕೊಂಡು ಬರ್ತಾ ಇದ್ದೇನೆ. ಆಚೆಕಡೆ ಅಜ್ಜಿ ಮಣ್ಣಿನ ಸುರಂಗದೊಳಗೆ ಸೇರಿಕೊಂಡರು, ಹಳದಿ ಬೆಳಕು ಸುರಂಗದಲ್ಲಿ. ನಾನು ಗುಡ್ಡದ ಮೇಲೆ ನಿಂತು ನೋಡ್ತಾ ಇದ್ದೇನೆ. ಅದರ ಕಿರಣಗಳು ಬಂದು ನನ್ನ ಹಣೆ ಸೋಕಿ, ದಾಟಿ ಹೋದವು. ನಾನು ಕೈಮುಗಿದು ನಿಂತಿದ್ದೇನೆ. ಮತ್ತೆ ಬೆಳಕು ಕಾಣದಾಯ್ತು. ಕಿರಣ ನಿಂತಿತು. ಸುರಂಗ ಕತ್ತಲಾಯ್ತು. ನಾನು ಪಶ್ಚಿಮಕ್ಕೆ ಸಾಗಿ ಸಂಜೆಯ ಅರೆಗತ್ತಲೆ ಹೊತ್ತಲ್ಲಿ ಸಮುದ್ರ ದಡಕ್ಕೆ ಬಂದೆ. ನನ್ನ ದೇಹ ಇದ್ದ ತೋಟದ ಪರಿಸರಕ್ಕೆ ಬಂದು, ದೇಹ ಸೇರಿಕೊಂಡೆ."

ಇದೆಂಥ ಕಥನ! ಯಾವುದೋ ಜನ್ಮದಲ್ಲಿ ಯಾವುದೋ ಪರಿಸರದಲ್ಲಿ ಯಾವುದೋ ಕಾರಣಕ್ಕಾಗಿ ಇಪ್ಪತ್ತೆರಡು-ಇಪ್ಪತ್ಮೂರರ ತರುಣಿಯನ್ನು ಹತ್ಯೆಗೈದು, ನಂತರ ತಾನೂ ಆತ್ಮಹತ್ಯೆಗೈದ ಇಪ್ಪತ್ತೆಂಟರ ತರುಣನೇ ತಾನು, ಆಕೆಯ ಆತ್ಮ ತನ್ನನ್ನು ಕಾಡುತ್ತಿತ್ತು, ತನ್ನ ಮನೆತನದ ಹಿರಿಯಳಂತೆ ಭಾಸವಾಗುತ್ತಿದ್ದ ಅಜ್ಜಿಯಿಂದ ರಕ್ಷಿಸಲ್ಪಟ್ಟೆ ಅನ್ನುವ ಒಂದು ಸಿನಿಮೀಯ ಘಟನಾವಳಿಗಳನ್ನು "ಕಂಡು-ಅನುಭವಿಸಿ" ಎದ್ದು ಬಂದ ಜಗನ್ ಅದ್ಯಾವುದೋ ಭ್ರಾಮಕ ಲೋಕದಲ್ಲಿದ್ದಂತೆಯೇ ಕಾಣುತ್ತಿದ್ದರು. ಈ ಎಲ್ಲ ಕಥನದ ವಿಶ್ಲೇಷಣೆ ಮಾತಿಗೆ ಮೀರಿದ ಅನುಭವ. ಇದರ ಸತ್ಯಾಸತ್ಯತೆಯ ಪರೀಕ್ಷೆ ಮಾಡುವ ಅವಕಾಶವೂ ಇರಲಿಲ್ಲ, ಕಾಲ-ದೇಶಗಳ ಗುರುತಿರಲಿಲ್ಲ. ಆ ಅಜ್ಜಿಯೂ ಜಗನ್‌ರ ಸ್ವಂತ ಅಜ್ಜಿಯಂದಿರಲ್ಲ. ಇಲ್ಲಿ ಜಗನ್ ತೊಂದರೆಯಿಂದ ಮುಕ್ತರಾದರೇ ಅನ್ನುವುದು ಮಾತ್ರವೇ ಮುಖ್ಯಪ್ರಶ್ನೆಯಾಗಿ ಉಳಿದಿತ್ತು. ಅವರ ಆತಂಕ ಉದ್ವೇಗಗಳಿಗೆಲ್ಲ ಒಂದು ಹೆಣ್ಣುದೈವಶಕ್ತಿಯ ಪ್ರಯೋಗವೇ ಕಾರಣವಾಗಿತ್ತೆಂದು ಜ್ಯೋತಿಷಿಗಳು ಹೇಳಿದ್ದ ಮಾತು ಜಗನ್ ಮನದಾಳದಲ್ಲಿ ಈ ಘಟನಾವಳಿಗಳನ್ನು ಪ್ರೇರೇಪಿಸಿತೆ? ಅಥವಾ ನಿಜವಾಗಿಯೂ ಈ ಹಿನ್ನೆಲೆಯನ್ನೇ ಜ್ಯೋತಿಷಿಗಳು ಕಂಡಿದ್ದರೆ? ಗೊತ್ತಿಲ್ಲ.

ಮುಂದಿನ ವಾರ ಮತ್ತೊಮ್ಮೆ ಬಂದ ಜಗನ್ ಮಾತ್ರ ತುಂಬಾ ಗೆಲುವಾಗಿದ್ದರು. "ಇಂದು ಥೆರಪಿ ಸೆಷನ್ ಬೇಡ. ಸುಮ್ನೆ ಮಾತಾಡಿ ಹೋಗ್ಲಿಕ್ಕೆ ಬಂದೆ. ಮೊನ್ನೆ ನಾನೊಬ್ಬನೇ ಗಿಜಿಗುಟ್ಟುವ ಊರ-ಪೇಟೆಯ ರಸ್ತೆಗಳಲ್ಲಿ ಆತಂಕವಿಲ್ಲದೆ ತಿರುಗಾಡಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಕೋಣೆಯಲ್ಲಿ ನಾನೊಬ್ಬನೇ ಮಲಗುತ್ತಿದ್ದೇನೆ. ಊಟ-ನಿದ್ದೆ ಎಲ್ಲ ಸರಿಯಾಗಿದೆ. ನಾಳೆ ಸಂಜೆ ಅಣ್ಣ-ಅತ್ತಿಗೆ, ಹೆಂಡತಿ ಎಲ್ಲರ ಒಟ್ಟಿಗೆ ಮೂವೀಗೆ ಹೋಗುವ ಯೋಚನೆ ಉಂಟು. ನಾಡಿದ್ದು ವಾಪಾಸ್ ಮುಂಬಯಿಗೆ." ಎಂದರು ಉತ್ಸಾಹದಲ್ಲಿ. ಅವರ ಆ ಉತ್ಸಾಹ ಹೀಗೇ ಅವರೊಂದಿಗಿರಲೆಂದು ಹಾರೈಸಿ ಬೀಳ್ಕೊಟ್ಟೆ.
(ಮುಗಿಯಿತು)

Tuesday, 18 October, 2011

ಎರಡು ಹನಿ-ಮಿನಿ

ಬಿಂಬ


ಅಗಾಧ ಕತ್ತಲಿನೊಳಗೆ ಒಬ್ಬಳೇ ಕೂತಿದ್ದೇನೆ.
ಬೆಂಕಿಕಡ್ಡಿ ಗೀರಿದ ಹೊಗೆ ವಾಸನೆ.
‘ಯಾರು?’ ಉತ್ತರವಿಲ್ಲ.
ಪಿಶಾಚಿಗಳು ಬಂದು ಹೋದವು.
ಅನಂತ ಮೌನದೊಳಗೆ ಒಬ್ಬಳೇ ಕೂತಿದ್ದೇನೆ.
ನನ್ನೆಲ್ಲ ನೋವಿನ ಮೊತ್ತ ನನ್ನೊಳಗೆ ಹುತ್ತವಾಗುತ್ತಿದೆ.
ನನ್ನನ್ನೇ ಕಳೆದುಕೊಂಡಿದ್ದೇನೆ, ಹುಡುಕಲಾರದಲ್ಲಿ.

******
(೨೩-ಸೆಪ್ಟೆಂಬರ್-೨೦೧೧)
****** ******

ನಾಳೆ


ಅದೊಂದು ಹುಣ್ಣಿಮೆ ಹಬ್ಬದ ದಿನ. ಹೆತ್ತವರೊಡನೆ ಕಿತ್ತಾಡಿ ಮನೆಯಿಂದ ಹೊರಬಂದಿದ್ದೆ. ಮತ್ತದೆಷ್ಟು ಹುಣ್ಣಿಮೆಗಳೂ ಅಮಾವಾಸ್ಯೆಗಳೂ ಕಾಲನುರುಳಿನೊಳಗೆ ಕಳೆದೇಹೋದವು. ಭೀಮನೂ ಸಿಕ್ಕಿಲ್ಲ, ಸೋಮನೂ ದಕ್ಕಿಲ್ಲ. ಕಾಮನೊಡನೆ ಕಾದಾಟವೇ ಬದುಕಾದವಳಿಗೆ ದಿಕ್ಕಾದರೂ ಇದೆಯೆ? ನಾಳೆ ಯಾಕಾಗುತ್ತೊ?
******
(೧೨-ಅಕ್ಟೋಬರ್-೨೦೧೧)
****** ******