ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday, 15 April, 2010

ವೇಷ

ದೇವಸ್ಥಾನದೆದುರಿನ ಖಾಲಿ ಗದ್ದೆಯಲ್ಲಿ
ಯಕ್ಷಗಾನ ಬಯಲಾಟದ ಬಣ್ಣ
ದೊಡ್ಡ ವೇದಿಕೆ, ರಂಗಿನ ದೀಪ
ಊರಿನವರಿಗೆ ಏನೋ ಖುಷಿಯಣ್ಣ
ಸಂಜೆಯ ಪೂಜೆಗೆ ವಿಶೇಷ ದಕ್ಷತೆ
ಊರ ಹಿರಿಯಗೆ ಮೊದಲ ಪ್ರಸಾದ
ನಮ್ಮಜ್ಜನಿಗೇ ಇಲ್ಲಿ ಆದ್ಯತೆ
ಅವನಿಲ್ಲದೆ ಊರಲಿ ನಡೆಯದಾರ ಪಾದ.

ಉತ್ಸವದ ದಿನ ಬೆಳಗು ಎದ್ದುಬಂದ
ಎಂದಿನಂತಲ್ಲ; ಗೊಣಗಿಗೂ ಉತ್ಸಾಹ
ಮನೆಮಕ್ಕಳಿಗಾಯ್ತು ಅಪ್ಪಣೆಯ ವರದಾನ
ಹೆಂಗಳೆಯರ ಕೆಲಸ ಇನ್ನೂ ದುಸ್ಸಹ

ಅದಾಗಬೇಕು, ಇದಾಗಬೇಕು, ಹಾಗಿರಬೇಕು, ಹೀಗಿರಬೇಕು
ಏನಿಲ್ಲ ಏನುಂಟು ಅವನ ಪಟ್ಟಿಯಲ್ಲಿ
ಅಜ್ಜಿಯಿಲ್ಲದ ನೆನಪು ಅವನ ಕಾಡಲೇ ಇಲ್ಲ
ನಮಗಿತ್ತು ಹೊದಿಕೆ ಅವಳ ನಗುವಿನಲ್ಲಿ
ಕಳೆದ ಇರುಳುಗಳಿಗೆ ಬೆನ್ನಿತ್ತು ನಡೆದವನು
ಇಂದಿಗೆ ಮುಖತೋರಿ ನಿಂತಿದ್ದಾನೆ
ನಿನ್ನೆಗಳ ಹಂಗಿನಲಿ ಗೀರುಗಳ ಹೊತ್ತವನು
ಮತ್ತೊಮ್ಮೆ ಹೆಗಲೊರಸಿಕೊಂಡಿದ್ದಾನೆ

ಮನೆಯೊಳಗೆ ಅಧಿಕಾರ, ಮೂರಾಬಟ್ಟೆ ಸರಕಾರ
ಊರಬೀದಿಗೆ ಮಾತ್ರ ರಾಜತಂತ್ರ
ಅವರಿವರ ಹೊಗಳಿಕೆಗೆ ಕಿವಿಯಾಗುವವನಿಗೆ
ಮನೆಯ ಮಕ್ಕಳ ಪ್ರೀತಿ ಬರೀ ಕುತಂತ್ರ
ಎಲ್ಲವನು ತನ್ನದೇ ಕೈಯಲಿರಿಸುವ ಛಲ
ಬೇಡವಗೆ ತನ್ನವರ ಆಸೆಗಳ ನೆರಳು
ಅವನ ಛಾಯೆಯ ಕೆಳಗೆ ಬೆಳೆಯದಾಗಿದೆ ಹುಲ್ಲು
ಊರೊಳಗೆ ಅವನಿಗೇ ಹೆಸರು, ಮಖಮಲ್ಲು

ಯಕ್ಷಗಾನದ ಬಯಲ ರಂಗಮಂಟಪದಲ್ಲಿ
ಅವನನ್ನು ಕೂರಿಸಿ ಆಡಿದರು ನೂರು
ಇನ್ನೇನು ಶತಕವನೆ ಕಾಣುವ ತಾತನನು
ಶಾಲು-ಹಾರಗಳಲ್ಲಿ ಮೆರೆಸಿದರು ಅವರು

ಬಯಲಾಟ ಮುಗಿದಾಗ ಬರಿದಾದ ಗದ್ದೆಯಲಿ
ನಡೆದಿದ್ದೆ ಸುಮ್ಮನೇ ನೋಟ ಹರಿಸುತ್ತಾ
ಖಾಲಿ ಗದ್ದೆಯಲಿದ್ದ ಖಾಲಿ ಬಿರುಕುಗಳಲ್ಲಿ
ತಿಂದು ಬಿಸುಟೆದ್ದವರ ಖಾಲಿ ಮೊತ್ತ
ಮನೆಗೆ ಬರಲಾಗದೆ ದೇವಳದ ಎದುರಿನಲಿ
ಗರುಡಗಂಬದ ಕಡೆಗೆ ಕಣ್ಣು ನೆಟ್ಟೆ
ಏರಿ ತೊನೆಯುತ್ತಿದ್ದ ಗರುಡಪಟ ಗಾಳಿಯಲಿ
ಅತಂತ್ರ ನೆನಪಿಸಿದ, ಮನೆಗೆ ಹೊರಟೆ.

ದೇವ ವಾಹನನಾದ ಗರುಡನೇ ತೂಗಿರಲು
ನನ್ನದೇನಿದೆ ಅಂಥ ಘನ ಜೀವನ?
ಅಜ್ಜನ ಆಳ್ವಿಕೆಯ ಕೆಲವಾರು ದಿನಗಳನು
ಕಳೆದ ಮೇಲೆನಗೆ ನಿಜ ವಿಮೋಚನ

ಬದುಕಿದ್ದ ದಿನಗಳಲಿ ಅಜ್ಜ ಬಾಳಿದ್ದನ್ನು
ಇಂದು ನೆನೆದರೆ ಸಾಕು, ಪಾಠ ನನಗೆ
ಹೇಗೆ-ಹೇಗಿರಬೇಕು ಎನುವ ಮೌಲ್ಯಕ್ಕಿಂತ
ಮಾಡಬಾರದ್ದನ್ನು ಅರಿತೆ ಒಳಗೆ
(೧೦-ಎಪ್ರಿಲ್-೨೦೦೮)

Friday, 9 April, 2010

ಹರಳೆಣ್ಣೆ

ಒಂದೆರಡು ಚಮಚ ಗಂಟಲಿಗಿಳಿಸಿದರೆ-
ಉದ್ದ ಕೊಳವೆಯ ಉದ್ದಕ್ಕೂ
ಗೊಂದಲ ಕೋಲಾಹಲ;
ತಳಮಳ, ತಲ್ಲಣ.
ಕಿವುಚಿ, ಕುಲುಕಿ, ಮಸಕಿ,
ಸೋಸಿ, ಜಾಡಿಸಿ, ತೊಳಸಿ,
ಕೆಲಸ ಮುಗಿಸಿದಾಗ-
ನಿರುಂಬಳ ಹಗುರ ಭಾವ.

ಒಂದೆರಡು ಚಮಚ ನೆತ್ತಿಸವರಿದರೆ-
ಮಿಳಮಿಳ, ಪಿಚಪಿಚ,
ಜಿಡ್ಡು, ಜಿಗುಟು, ಅಂಟು.
ನೆನೆಸಿ, ಕಾಯಿಸಿ, ತೋಯಿಸಿ,
ಬಿಸಿಬಿಸಿ ಎರೆದು ಉಜ್ಜಿ,
ಕೆಲಸ ಮುಗಿಸಿದಾಗ-
ನಿರುಂಬಳ ಹಗುರ ಭಾವ.

ಒಂದೆರಡು ಚಮಚ ಲೇಪಿಸಿಕೊಂಡರೆ-
ಕಳವಳ, ಕಿರಿಕಿರಿ.
ಸವರಿ, ನೀವಿ, ಮರ್ದಿಸಿ,
ಬೆಚ್ಚಗೆ ಸುರಿದು ತಿಕ್ಕಿ,
ಕೆಲಸ ಮುಗಿಸಿದಾಗ-
ನಿರುಂಬಳ ಹಗುರ ಭಾವ.
(೦೮-ಎಪ್ರಿಲ್-೨೦೦೯)

Saturday, 3 April, 2010

ಸತ್ತ ಮೀನಿನ ಸುತ್ತ..... (ಅಭಿನವ ಮತ್ಸ್ಯಗಂಧಾವೃತ ಕಥನ)

ಅಂದು- `ಎಪ್ರಿಲ್ ಒಂದು', ಎರಡು ಸಾವಿರದ ನಾಲ್ಕು. ಜಾಗತಿಕವಾಗಿ ಮೂರ್ಖರ ದಿನ. ಯಾರ್ಯಾರೋ ಇನ್ಯಾರನ್ನೋ ಮೂರ್ಖರನ್ನಾಗಿಸುವ ಸುದ್ದಿ ಹೊಸದೇನಲ್ಲ. ಹಾಗೆಂದು ಇತರರನ್ನು ಛೇಡಿಸಿ, ಪೀಡಿಸಿ, ಫ಼ೂಲ್ ಮಾಡಿ ಪಡೆವ ಥ್ರಿಲ್ ಹಳೆಯದಾಗುವುದೂ ಇಲ್ಲ. ಇಂಥ ಸುದಿನವಾದ ಅಂದು ನನ್ನ ಪ್ರತೀ ಉಸಿರಾಟವೂ ಸತ್ತ ಮೀನಿನ ಸುತ್ತಲೇ ಸುತ್ತಿದ್ದು ಕಾಕತಾಳೀಯವೋ ಗೊತ್ತಿಲ್ಲ. ಅಂದು ಬೆಳಗ್ಗೆ ಏಳರಿಂದ ನಾನೇ ಮತ್ಸ್ಯಗಂಧಿಯಾಗಬೇಕಾದ ಕಥನ ಕೋಲಾಹಲ ಕೇಳುವಿರಾ? ಆದರೆ, ಅದಕ್ಕೆ ಮುನ್ನ ಒಂದು ಉಪಸೂಚನೆ: ಈ ಸಂದರ್ಭದಲ್ಲಿ ಯಾವುದೇ ಮನುಷ್ಯ ಮಾತ್ರರನ್ನು ದೂಷಿಸದೇ ನಾಯಿಯೋ, ಬೆಕ್ಕೋ, ಹದ್ದೋ, ಕಾಗೆಯೋ- ಈ `ವಾಸನಾವತಾರ'ಕ್ಕೆ ಕಾರಣೀಭೂತರೆಂದು ಹೇಳಿಕೊಂಡು ನನ್ನ "ಮತ್ಸ್ಯ ಪುರಾಣ" ಆರಂಭಿಸುತ್ತೇನೆ.

ಕನಸಿನರಮನೆಯಲ್ಲದಿದ್ದರೂ ಮಣಿಪಾಲದಲ್ಲಿರುವ ನಮ್ಮ ಮನೆಯಲ್ಲಿ, ಅಂದು ಬೆಳಗ್ಗೆ ಏಳುತ್ತಿದ್ದಂತೆಯೇ ತಲೆ ಓಡಿತು- "ಹಾ! ಇವತ್ತಿನಿಂದ ಎರಡು ತಿಂಗಳು ಮಕ್ಕಳನ್ನು ಶಾಲೆಗೆ ಹೊರಡಿಸಬೇಕಾದ ಗಡಿಬಿಡಿಯಿಲ್ಲ. ಬೇಸಗೆ ರಜೆಯ ಕೆಲದಿನ ನಮ್ಮೊಡನೆ ಕಳೆಯಲು ಬಂದಿರುವ ಸೊಸೆಯರಿಬ್ಬರನ್ನೂ (ನನ್ನ ನಾದಿನಿಯ ಮಕ್ಕಳು) ನನ್ನ ಮಕ್ಕಳನ್ನೂ ಎಲ್ಲಾದರೂ- ಬಹುಶಃ ಮಲ್ಪೆ ಸಮುದ್ರ ತೀರಕ್ಕೆ- ಕರೆದೊಯ್ಯಬೇಕು. ನಾಲ್ಕಾರು ದಿನಗಳ ಮೇಲೆ ಈ ನಾಲ್ವರನ್ನೂ ಊರಿಗೆ ಕರೆದೊಯ್ದು ಬಿಟ್ಟು ಬರಬೇಕು. ಮತ್ತೆ, ಹದಿಮೂರನೇ ತಾರೀಖು ನನ್ನವರು ಅಮೆರಿಕಾದಿಂದ ಬಂದ ಮೇಲೆ, ಅತ್ತೆಯವರನ್ನೊಮ್ಮೆ ಒಳ್ಳೆಯ ಡಾಕ್ಟರರ ಹತ್ತಿರ ಕರೆದುಕೊಂಡು ಹೋಗಬೇಕು, ಅವರ ಕಾಲುನೋವು ಹೆಚ್ಚಾಗುತ್ತಿದೆ...." ಲೆಕ್ಕಾಚಾರ ಹಾಕಿದೆ; ಅಷ್ಟೇ! ಸಿಹಿತಿಂಡಿ ಅತಿಯಾಗಿ ಮೆದ್ದ ಆಸೆಬುರುಕ ಮಗುವಿಗೆ ಅಜೀರ್ಣವಾಗುವ ಹಾಗೆ ನನ್ನ ನಸೀಬು ತಿರುಗಿದ್ದು ನನಗೆ ಅರಿವಾಗಲು ತುಸು ಹೊತ್ತು ಹಿಡಿಯಿತು. ಕೋಣೆಯಿಂದ ಹೊರಬಂದು ಮುಖ ತೊಳೆದು ಕಾಫಿಗೆ ಶಾಂತಕ್ಕನ ಮುಂದೆ ನಿಂತಾಗ ಅವರ ಮುಖ ಶಾಂತವಾಗಿರಲಿಲ್ಲ. "ಏನಾಯ್ತು ಶಾಂತಕ್ಕ?" ಎಂದೆ. "ನೀವು ಕಾಫಿ ಕುಡೀರಿ, ಮತ್ತೆ ಹೇಳ್ತೇನೆ" ಅಂದರು. ನನಗೆ ಗಾಬರಿ ಹತ್ತಿತು. "ಯಾಕೆ? ಏನಾಯ್ತು? ಹೇಳಿ..." ಒತ್ತಾಯಿಸಿದೆ. ಅವರೂ ಪಟ್ಟು ಬಿಡಲಿಲ್ಲ, "ನೀವು ಮೊದ್ಲು ಕಾಫಿ ಕುಡೀರಿ, ಮತ್ತೆ ಹೇಳ್ತೇನೆ..." ಸರಿ, ಹಿರಿಯರಾದ ಅವರ ಮಾತಿಗೆ ಬೆಲೆ ಕೊಟ್ಟೆ, ಕಾಫಿ ಹೊಟ್ಟೆಗೆ ಇಳಿಬಿಟ್ಟೆ.

ಈಗ ಶಾಂತಕ್ಕನ ಮುಖದ ಬಣ್ಣ ಬದಲಾಯಿತು, ಅಸಹ್ಯ ಕಂಡಂತೆ ಇದ್ದರು. ಮತ್ತೊಮ್ಮೆ ಕೇಳಿದೆ, "ಏನಾಯ್ತು, ಈಗ್ಲಾದರೂ ಹೇಳಿ..." "ಹೊರಗೆ ಬನ್ನಿ, ನೋಡಿ..." ಅನ್ನುತ್ತಾ ಮುಂಬಾಗಿಲಿಗೆ ಕರೆದೊಯ್ದರು. ವೆರಾಂಡದ ಮೆಟ್ಟಿಲುಗಳ ಮೇಲೆ ಮೂರ್‍ನಾಲ್ಕು ಕಡೆ ಹೊಲಸು ಬಿದ್ದಿತ್ತು. ಕೆಟ್ಟನಾತ! ಏನೆಂದು ನೋಡುತ್ತಿರುವಾಗಲೇ ಶಾಂತಕ್ಕನ ವಿವರಣೆ ಬಂತು, "ಇವತ್ತು ಏಕಾದಶಿ. ನನ್ನ ಸ್ನಾನ ಮುಗಿಸಿ, ಹೊಸ್ತಿಲು ಬರೆದು ತುಳಸಿಗೆ ನೀರು ಹಾಕಲಿಕ್ಕೆ ಬರುವಾಗ ನೋಡಿದೆ. ವಾಂತಿ ಬರುವ ಹಾಗಾಯ್ತು. ಹಿಂದಿನ ಬಾಗಿಲಿಂದ ಬಂದು ತುಳಸಿಗೆ ನೀರು ಹಾಕಿದೆ. ನನ್ನ ಸ್ನಾನ ಆಗಿಲ್ಲದಿದ್ದರೆ ನಾನೇ ತೆಗೆಯುತ್ತಿದ್ದೆನೋ ಏನೋ..." ದನಿ ಅಡಗುತ್ತಿತ್ತು. ಅವರನ್ನು ಮನೆಯೊಳಗೆ ಕರೆತರುತ್ತಾ ಹೇಳಿದೆ, "ಅದನ್ನು ನಾನು ತೆಗೀತೇನೆ, ಅದೇನೂ ಪರವಾಗಿಲ್ಲ. ನೀವು ಕಾಫಿ ಕುಡ್ದಿದ್ದೀರಾ? ಏಕಾದಶಿ ಅಂತ ಇವತ್ತು ಇಡೀ ದಿನ ಬೇರೇನೂ ತಿನ್ನುದಿಲ್ಲ ನೀವು..." "ಸೇರುದಿಲ್ಲ ಈಗ" ಅಂದರು. ನಾನೇ ಒತ್ತಾಯಿಸಿ ಕಾಫಿ ಮಾಡಿ ಕೊಟ್ಟೆ, ಕುಡಿದರು. ಬೆಳಗ್ಗಿನ ತಿಂಡಿಗೆ ತಯಾರು ಮಾಡ್ತೇನೆ ಅಂದರು. ಸರಿಯೆಂದು ನಾನು ಮತ್ತೆ ಹೊರಗೆ ಬಂದೆ, ಒಂದಿಷ್ಟು ಸಲಕರಣೆಗಳೊಂದಿಗೆ.

ಎಂಟ್ಹತ್ತು ಬಕೆಟ್ ನೀರು, ಅರ್ಧ ಬಾಟಲ್ ಡೆಟ್ಟಾಲ್, ಮತ್ತೊಂದಿಷ್ಟು ಹವಾ-ಸುಗಂಧಕಾರಕ (ಅಮೆರಿಕಾದಿಂದ ಒಯ್ದಿದ್ದ ಏರ್-ಫ್ರೆಶ್‍ನರ್)... ಎಲ್ಲವನ್ನೂ ಬಳಸಿ ಅಲ್ಲಿದ್ದ `ಪ್ರಾಣಿ-ಮುಖ-ವಿಸರ್ಜಿತ'ವನ್ನು ತೊಳೆಯುವಷ್ಟರಲ್ಲಿ ನನಗೂ ಅದೇ ವಾಸನೆ ಹತ್ತಿಕೊಂಡಂತಿತ್ತು. ಎಲ್ಲಿಯೋ ಮೀನಿನ ಊಟ ತಿಂದ ಬೀಡಾಡಿ ನಾಯಿಗೆ (ಅಥವಾ ಬೆಕ್ಕಿಗೂ ಇರಬಹುದು) ನಮ್ಮ ಅಮೃತಶಿಲೆಯ ಮೆಟ್ಟಲ ಮೇಲೆ ಯಾಕೆ ಕಣ್ಣು ಬಿತ್ತೋ ತಿಳಿಯಲಿಲ್ಲ. ಎಪ್ರಿಲ್ ಒಂದರ ಮಹಿಮೆ, ಅಂದುಕೊಂಡು ಸ್ನಾನಕ್ಕೆ ಹೋದೆ. ಅಲ್ಲಿಯೂ ನೀರಿಗೆ ಮೀನಿನ ವಾಸನೆಯಿದೆಯೇನೋ ಅನಿಸುತ್ತಿತ್ತು. ನಾನು ಹೊರಗೆ ಬರುವಷ್ಟರಲ್ಲಿ ಇನ್ನೊಂದು ಬಚ್ಚಲುಮನೆಯಿಂದ ಮಗ ಸ್ನಾನ ಮುಗಿಸಿ ಬಂದ. "ಅಮ್ಮ, ನೀರು ಒಂಥರಾ ಉಂಟು. ಏನೋ ವಾಸನೆ...." ಮುಖ ಕಿವುಚುತ್ತಾ ದೇವರ ಮನೆಗೆ ನಡೆದ. ಅದಾಗಲೇ ಎದ್ದು ಮುಖ ತೊಳೆದ ನಾದಿನಿಯ ಮಕ್ಕಳು ಮತ್ತು ನನ್ನ ಮಗಳ ಕಡೆ ನೋಡಿದೆ. ಹೆಣ್ಣು ಮಕ್ಕಳು ಕಣ್ಣು ತಪ್ಪಿಸಿದರು; ಗೋಡೆ, ಟೀವಿ ನೋಡಿದರು. ಅಷ್ಟಕ್ಕೇ ಬಿಟ್ಟೆ.

ಸುಮಾರು ಒಂಭತ್ತು ಘಂಟೆಯ ಹೊತ್ತಿಗೆ ಹೆಣ್ಣು ಮಕ್ಕಳೂ ಸ್ನಾನ ಮುಗಿಸಿದರು. ಮಗಳು ನನ್ನನ್ನು ಕೋಣೆಗೆ ಕರೆದೊಯ್ದು ಗುಟ್ಟಿನಲ್ಲಿ "ಅಮ್ಮ, ನೀರು ವಾಸನೆ ಬರ್ತದೆ, ಮೀನಿನ ವಾಸನೆ.... ವಾಂತಿ ಬರುವ ಹಾಗಾಯ್ತು ಸ್ನಾನ ಮಾಡುವಾಗ...." ಅಂದಳು. ದೊಡ್ಡ ಹೆಣ್ಣುಮಕ್ಕಳಿಬ್ಬರೂ ಮೆತ್ತಗೆ ಇದನ್ನು ಒಪ್ಪಿಕೊಂಡರು. ನೀರಿಗೆ ಏನೋ ಆಗಿದೆ, ಖಚಿತವಾಯ್ತು. ನಳ್ಳಿಯ ತುದಿಗಿದ್ದ ತಿರುಪು ಬಿಚ್ಚಿ ಅದರ ಜಾಲರಿ ಪರೀಕ್ಷಿಸಿದೆ. ಅಡುಗೆ ಮನೆಯ ನಳ್ಳಿ ಸ್ವಚ್ಛವಾಗಿತ್ತು. ಮುಖ್ಯ ಬಚ್ಚಲುಮನೆಯ ನಳ್ಳಿ ಮತ್ತು ಕೈ-ತೊಟ್ಟಿಯ ನಳ್ಳಿ, ಎರಡರಲ್ಲೂ ಒಂದಿಷ್ಟು ಬಿಳಿ-ಬಿಳಿ ಕಸ ಸಿಕ್ಕಿತು. ಜೀವಶಾಸ್ತ್ರ ಪದವೀಧರೆಯ ಕಣ್ಣಿಗೆ ಮೀನಿನ ಮೂಳೆಯ ಚೂರುಗಳು ಕಂಡವು. ಮಕ್ಕಳ ಕೋಣೆಯ ಬಚ್ಚಲುಮನೆಯ ನಳ್ಳಿಯಲ್ಲೂ ಕೆಲವು ಚೂರುಗಳು ಸಿಕ್ಕಿದವು. ನೀರಿನಲ್ಲಿ ಮೀನಿನ ಮೂಳೆಯಿದೆ... ಖಾತ್ರಿಯಾಯ್ತು. ಎಲ್ಲಿಂದ? ಗೊತ್ತಾಗಲಿಲ್ಲ. ತಾರಸಿ (ಟೆರೇಸ್) ಹತ್ತಿ ನೀರಿನ ಸಿಂಟೆಕ್ಸ್ ಟ್ಯಾಂಕ್ ಇಟ್ಟಿದ್ದ ಹತ್ತಡಿ ಎತ್ತರದ ಅಟ್ಟಳಿಗೆ ಹತ್ತಿ ನಾಲ್ಕಡಿ ಎತ್ತರದ ಟ್ಯಾಂಕಿನ ಮುಚ್ಚಳ ತೆರೆದು ಹಾಗೂ ಹೀಗೂ ಕೈ-ಕಾಲು ನಡುಗಿಸಿಕೊಳ್ಳುತ್ತಾ ಒಳಗೆ ಬಗ್ಗಿ ನೋಡಿದೆ, ಸ್ವಚ್ಛವಾಗಿತ್ತು. ಅಂದರೆ, ಇಲ್ಲಿ ಏನೂ ಇಲ್ಲ. ಹಾಗಾದ್ರೆ, ಮತ್ತೆಲ್ಲಿಂದ ಮೀನುಮೂಳೆ ಬಂತು? ಸೋಲಾರ್-ವಾಟರ್-ಹೀಟರ್ ಕಡೆ ಗಮನ ಹೋಯ್ತು. ಸಾಧ್ಯವಿಲ್ಲ ಅಂತಲೂ ಅಂದುಕೊಂಡೆ. ಸೋಲಾರ್ ಹೀಟರಿನ ಟ್ಯಾಂಕ್ ಎರಡೆರಡು ಪದರ ಇನ್ಸುಲೇಶನ್ ಪಡೆದಿದೆ. ಅದಕ್ಕೆ ನೀರು ಒಳಹೋಗುವ ಮತ್ತು ಅಲ್ಲಿಂದ ಹೊರಬರುವ ಕೊಳವೆಗಳು ಎಲ್ಲೂ ತೆರೆದುಕೊಂಡಿಲ್ಲ. ಹಾಗಾದ್ರೆ ಇದೇನು ವಿಚಿತ್ರ? ಗೋಜಲು ಹರಿಯಲಿಲ್ಲ. ಮತ್ತೆ ಮನೆಯೊಳಗೆ ಹೋಗಿ ಎಲ್ಲ ನಳ್ಳಿಗಳಲ್ಲೂ ತಣ್ಣೀರು ಮಾತ್ರ ಹರಿಸಿದೆ. ಒಂದು ಹತ್ತು ನಿಮಿಷಗಳ ಹರಿವಿನ ನಂತರ ನಳ್ಳಿಗಳ ಜಾಲರಿ ನೋಡಿದಾಗ, ಎಲ್ಲವೂ ಕ್ಲೀನ್. ಮತ್ತೊಮ್ಮೆ ಎಲ್ಲದರಲ್ಲೂ ಬಿಸಿನೀರು ಮಾತ್ರ ಹರಿಯಬಿಟ್ಟೆ. ಜಾಲರಿಗಳಲ್ಲಿ ಕಳ್ಳ ಸಿಕ್ಕಿಬಿದ್ದ. ಅಂದರೆ ಬಿಸಿನೀರಿನಲ್ಲಿ ಮೀನಿನ ಕಸ. ಹೇಗೆ? ಗೊತ್ತಾಗಲಿಲ್ಲ. ಆದರೆ, ಇಷ್ಟರಲ್ಲಿ ಮನೆಯೆಲ್ಲ ವಾಸನಾಭರಿತವಾಗಿದ್ದು ಗೊತ್ತಾಗದಿರಲಿಲ್ಲ. ಯಾರೂ ಈಗ ಮನೆಗೆ ಬಾರದಿರಲಪ್ಪ, ದೇವರೇ ಅಂತ ಬೇಡಿಕೊಂಡೆ.

ನಮ್ಮ ಪ್ಲಂಬರ್ ಶಂಕರನಿಗೆ ಫೋನ್ ಮಾಡಿದೆ, ಅವನಿರಲಿಲ್ಲ. ಸರಿ; ನನ್ನ ಪತ್ತೇದಾರಿಕೆಯನ್ನೇ ಮುಂದುವರಿಸಿದೆ, ತಾರಸಿಯಲ್ಲಿ. ಸೋಲಾರ್ ಹೀಟರಿಗೆ ಎಷ್ಟನೆಯದೋ ಪ್ರದಕ್ಷಿಣೆ ಬರುತ್ತಿರುವಾಗ ಮತ್ಸ್ಯದೇವ ದರ್ಶನ ಕೊಟ್ಟ. ಹೀಟರಿನಿಂದ ಬಿಸಿನೀರು ಕೆಳಗೆ ಮನೆಗೆ ಬರುವ ಕೊಳವೆಯ ಇನ್ನೊಂದು ತುದಿಯನ್ನು `ಏರ್-ವೆಂಟ್' ಎಂದು ಹದಿನೈದಡಿ ಎತ್ತರಕ್ಕೆ ಏರಿಸಿ, ಟಿ-ಕೊಳವೆ ಜೋಡಿಸಿ, ಗಾಳಿಯಾಡಲು ಬಿಟ್ಟಿದ್ದರು. ಆ `ಟಿ'ಯ ಒಂದು ತುದಿಯಲ್ಲಿ ಏನೋ ಇಣುಕುತ್ತಿರುವುದು ಕಂಡಿತು. ಅಷ್ಟರಲ್ಲಿ ಸುಮಾರು ಹತ್ತೂವರೆ ಗಂಟೆ. ಬಿಸಿಲು ಕಣ್ಣಿಗೆ ರಾಚುತ್ತಿತ್ತು. ಆದರೂ ಕಂಡದ್ದನ್ನು ಪರಾಂಬರಿಸದೆ ಬಿಡಬಾರದು. ಕೊಳವೆಯನ್ನು ಅಲುಗಾಡಿಸಿಯಾಯ್ತು, ಪ್ರಯೋಜನವಾಗಲಿಲ್ಲ. ಇನ್ನೊಂದು ಪ್ಲಾಸ್ಟಿಕ್ ಕೊಳವೆ ತಂದು ಅದರಿಂದ ಕುಟ್ಟಿ ಬೀಳಿಸುವ ಪ್ರಯತ್ನವೂ ಆಯ್ತು, ಉಪಯೋಗವಾಗಲಿಲ್ಲ. ಬಿಸಿಲಿಗೆ ಕೆಂಪಾದ, ವಿಫಲ ಯತ್ನಕ್ಕೆ ಕಪ್ಪಾದ ದುಮು-ದುಮು ಮುಖದಿಂದ ಕೆಳಗಿಳಿದು ಬಂದೆ. ತಣ್ಣೀರಲ್ಲಿ ಮುಖ ತೊಳೆದು, ಕೋಣೆಗೆ ಹೋಗಿ ನೈಟಿ ತೆಗೆದಿರಿಸಿ, ಚೂಡಿದಾರ್ ಹಾಕಿಕೊಂಡೆ. ಶಾಲನ್ನು ಸೊಂಟಕ್ಕೆ ಸುತ್ತಿ ಬಿಗಿದೆ. ಹತ್ತಡಿ ಎತ್ತರದ ಅಲ್ಯೂಮಿನಿಯಮ್ ಏಣಿಯನ್ನು ಹೊತ್ತು ಮೇಲೆ ತಂದೆ. ಇಷ್ಟಾಗುವಾಗ ಮಕ್ಕಳೆಲ್ಲ ನನ್ನನ್ನು ಬೆರಗಾಗಿ ನೋಡುತ್ತಿದ್ದರೆ, ಶಾಂತಕ್ಕ ಸರ್ಕಸ್ ಪ್ರಾಣಿಯನ್ನು ನೋಡುವಂತೆ ನೋಡಿದರು. "ಇದೆಂಥಾ ಹೆಣ್ಣಪ್ಪಾ?" ಅನ್ನುವ ಭಾವ ಅವರ ಕಣ್ಣಲ್ಲಿತ್ತು. ನನ್ನ ಹಿಂದೆ ತಾರಸಿಗೆ ಬರುತ್ತಿದ್ದ ಅವರನ್ನು ಬೇಡವೆಂದು ತಿರುಗಿ ಕಳುಹಿದೆ.

ತಾರಸಿಯಲ್ಲಿ, ಏಣಿಯನ್ನು ಬೇರೆಲ್ಲೂ ಆಧರಿಸಿ ನಿಲ್ಲಿಸುವಂತಿರಲಿಲ್ಲ, ಸೋಲಾರ್ ಹೀಟರಿಗೇ ಆನಿಸಿಟ್ಟೆ. ಎರಡು ಮೆಟ್ಟಿಲು ಹತ್ತುವಷ್ಟರಲ್ಲಿ ಸೋಲಾರ್ ಟ್ಯಾಂಕ್ ಒಂದಿಂಚು ಅತ್ತ ಜರುಗಿತು. ಇನ್ನು ಅದನ್ನು ನಂಬುವಂತಿರಲಿಲ್ಲ. ಮತ್ತೆ ಕೆಳಗೆ ಹೋಗಿ ನಾಲ್ಕು ಮಕ್ಕಳನ್ನೂ ಬರಹೇಳಿದೆ. ಅಂಜುತ್ತಾ ಬಂತು ಮಕ್ಕಳ `ಮರಿ'ಸೈನ್ಯ. ಏಣಿಯನ್ನು ನಾನು ಆಧರಿಸಿ ಹಿಡಿದು, ಮಗನನ್ನು ಏಣಿ ಹತ್ತಿ ಅದನ್ನು ಪೇಪರಿನಲ್ಲಿ ಹಿಡಿದು ತೆಗೆಯಲು ಹೇಳಿದೆ. ನಡುಗುತ್ತಿರುವ ಏಣಿಯನ್ನು ಇನ್ನೂ ನಡುಗುತ್ತಾ ಹತ್ತಿ, ಮೂರನೇ ಮೆಟ್ಟಿಲಿಗೇ ಸಾಕಾಗಿ ಕೆಳಗಿಳಿದ. ಎಷ್ಟಾದರೂ ಅತಿಥಿಗಳಾಗಿ ಬಂದ ಮಕ್ಕಳೆಂದು ಉಳಿದಿಬ್ಬರಿಗೂ ಇಂಥಾ ಕೆಲಸ ಹೇಳಲು ನನಗೇ ಸಂಕೋಚ. ಆದರೂ ಅವರಲ್ಲಿ ಕಿರಿಯಳು ಹತ್ತುತ್ತೇನೆಂದಳು. ಅಷ್ಟಕ್ಕೆ ನನ್ನ ಮಗಳಿಗೆ ಉತ್ಸಾಹ ಉಕ್ಕಿತು. ತಾನೇ ಹತ್ತಿದಳು. ಏಳನೇ ಮೆಟ್ಟಿಲು ಹತ್ತಿದಾಗ ತನಗೆ ಸಿಗದೆಂದು ಅರಿವಾಗಿ ಕೆಳಗಿಳಿದಳು. ಅಷ್ಟರಲ್ಲಿ ಫೋನ್ ಕರೆ ಬಂತೆಂದು ಶಾಂತಕ್ಕ ಕರೆದರು. ಮಕ್ಕಳನ್ನು ಒತ್ತಾಯದಿಂದ ಮನೆಯೊಳಗೆ ಕರೆದುಕೊಂಡು ಬಂದದ್ದಾಯ್ತು. ಗಂಟೆ ಹನ್ನೊಂದೂಕಾಲು.

ಫೋನಿಗೆ ಉತ್ತರಿಸಿ, ಒಂದೊಂದು ಟೀ ಕುಡಿದೆವು. ಶಾಂತಕ್ಕನ ಹೊರತಾಗಿ ಎಲ್ಲರೂ ಮತ್ತೊಮ್ಮೆ ತಾರಸಿಗೆ ಹೋದೆವು. ಇಬ್ಬಿಬ್ಬರು ಮಕ್ಕಳು ಒಂದೊಂದು ಕಡೆ ನಿಂತು ಏಣಿ ಹಿಡಿಯುವಂತೆ ಅಪ್ಪಣೆಯಾಯ್ತು. ಆಗಷ್ಟೇ ಸಿಕ್ಕಿದ ಉದ್ದದ ಸರಿಗೆಯೊಂದನ್ನು ಹಿಡಿದು ನಾಲ್ಕು ಮೆಟ್ಟಿಲು ಹತ್ತಿದೆ. ಮಕ್ಕಳ ತಲೆಯ ಮಟ್ಟದಲ್ಲಿ ನನ್ನ ಕಾಲ್ಗಳು. ಮಕ್ಕಳು ಕೋರಸ್‍ನಲ್ಲಿ `ಹೋ....' ಅಂದರು. ಗಾಬರಿಯಾಯ್ತು. "ಇಳೀಬೇಕಾ?" ಅಂದೆ. "ಕಾಲು ವಾಸನೆ ಬರ್ತದಾ?" ಪ್ರಶ್ನೆ ಬಾಯಿಂದ ಹೊರಗೆ ಬರಲಿಲ್ಲ. "ಇಲ್ಲ, ಪರವಾಗಿಲ್ಲ; ಆಚೆ-ಈಚೆ ಅಲ್ಲಾಡಬೇಡಿ. ಏಣಿ ಗಟ್ಟಿಯಾಗಿ ಹಿಡಿದಿದ್ದೇವೆ.... ಆದ್ರೆ ಇನ್ನು ಹತ್ತಬೇಡಿ...." ಅಂದರು, ಸರಿ.ಅಲ್ಲಿಂದಲೇ ಕೈ ಎತ್ತರಿಸಿ ಸರಿಗೆಯನ್ನು ಚಾಚಿದಾಗ ಒಂದಿಷ್ಟು ತಗಲಿದ ಹಾಗಾಯ್ತು. "ಇನ್ನೊಂದೇ ಮೆಟ್ಟಲು ಹತ್ತಿದ್ರೆ, ಆಚೆಯಿಂದ ಕುಟ್ಟಿ ಬಿಡಬಹುದು, ಈಚೆ ಬದಿಗೆ ಅದು ಬಿದ್ದರೂ ಬೀಳಬಹುದು, ಹತ್ತಲಾ....?" ಕೇಳಿದೆ. "ಸ್ವಲ್ಪ ಇಳೀರಿ...." ಅಂದಿತು ಕೋರಸ್. ಇಳಿದೆ. ಹತ್ತು ನಿಮಿಷ ಸುಧಾರಿಸಿಕೊಂಡಿತು ಸೈನ್ಯ. "ಜೂಸ್ ಬೇಕು...." "ನೀರು ಬೇಕು...." "ಬಾತ್‍ರೂಮಿಗೆ ಹೋಗಬೇಕು...." ಕೋರಿಕೆಗಳು ಬಂದವು. ಸರಿ, ಎಲ್ಲರೂ ಮತ್ತೆ ಕೆಳಗೆ ಬಂದೆವು.

ಇನ್ನೊಮ್ಮೆ ಪ್ಲಂಬರ್ ಶಂಕರನಿಗೆ ಫ಼ೋನ್ ಮಾಡಿದೆ. ಅವನಿರಲಿಲ್ಲ, ಆದರೆ ಅವನ ಸೆಲ್-ಫೋನಿನ ಸಂಖ್ಯೆ ಸಿಕ್ಕಿತು. ಕರೆ ಮಾಡಿದೆ. ಎಲ್ಲೋ ಒಂದು ಕಡೆ, ಇಪ್ಪತ್ತು ಮೈಲಿಯಾಚೆ ಕೆಲಸದಲ್ಲಿದ್ದ. ಸಂಜೆ ಸುಮಾರು ಆರರ ಹೊತ್ತಿಗೆ ಬರುತ್ತೇನೆಂದ. ಸರಿಯೆಂದೆ, ಬೇರೇನೂ ದಾರಿಯಿಲ್ಲದೆ. ಮತ್ತೆ ನಮ್ಮ ಮರಿಸೈನ್ಯ ತಾರಸಿಗೆ ದಂಡಯಾತ್ರೆ ಹೊರಟಿತು. ಊಟಕ್ಕೆ ಮೊದಲು ಈ ಕೆಲಸ ಮುಗಿಸಬೇಕು ಅಂತ ಸೈನ್ಯಕ್ಕೆ ಆಜ್ಞೆ ಮಾಡಿದೆ. ಮುಖ-ಮುಖ ನೋಡಿಕೊಂಡವು ಮರಿಗಳು. ಇಬ್ಬಿಬ್ಬರು ಒಂದೊಂದು ಬದಿಗೆ ನಿಂತು ಏಣಿಯನ್ನು ಹಿಡಿದರು, ಐದನೇ ಮೆಟ್ಟಲಿಗೆ ನಾನೇರಿದೆ. ಸರಿಗೆಯ ತುದಿಯನ್ನು ಅಂಕೆ-ಏಳರ ಹಾಗೆ ಬಗ್ಗಿಸಿದ್ದೆ. ಹದವಾಗಿ `ಟಿ' ಸಂಧಿಯ ಆಚೆ ಕಡೆಯಿಂದ ಕುಟ್ಟಿದೆ, ತುಣುಕು ಈ ಕಡೆಗೇ ಬೀಳಬಹುದೆಂದು. ಸಫಲವಾಗಲಿಲ್ಲ; ಏನೂ ಆಗಲಿಲ್ಲ. ಇಲ್ಲಿ ಕಾಣುವ ತುಣುಕಿಗೆ ಸರಿಗೆಯ ತುದಿ ತಗಲುತ್ತಿದೆಯೋ ಇಲ್ಲವೋ ತಿಳಿಯಲಿಲ್ಲ. ಇಲ್ಲಿಂದಲೇ ದೂಡಿಬಿಡೋಣವೆಂದು ಇನ್ನೇನು ಕೊಳವೆಯ ತುದಿಯಲ್ಲಿ ಕಾಣುವ ತುಣುಕಿಗೆ ಕುಟ್ಟಬೇಕು.... ಒಂದು ಮರಿಗೆ ಸೀನು ಬಂತು... ಏಣಿ ಓಲಾಡಿತು. ಬೀಳುವ ಮೊದಲು ಹೇಗೋ ಕೆಳಗೆ ಹಾರಿದೆ. ಎಲ್ಲ ಸ್ಥಿರವಾದ ಮೇಲೆ ಮತ್ತೊಮ್ಮೆ ಹತ್ತಿದೆ. ಈ ಬಾರಿ, ಅಂದಾಜು ಮಾಡದೆ, ಸರಿಗೆಯ ತುದಿಯಿಂದ ಜೋರಾಗಿ ಕುಟ್ಟಿಬಿಟ್ಟೆ. ತುಣುಕು ಸರಿಯಾಗಿ ಒಳಗೆ ಸೇರಿಹೋಯಿತು. ಆ ಕಡೆಯಿಂದ ಹೊರಗೆ ಬರಲೇ ಇಲ್ಲ. ಕೆಲಸ ಇನ್ನಷ್ಟು ಕೆಟ್ಟಿತು.

ಎಲ್ಲರೂ ಪೆಚ್ಚುಮುಖ ಮಾಡಿಕೊಂಡು ಕೆಳಗೆ ಬಂದೆವು. ಎಲ್ಲ ನಳ್ಳಿಗಳಲ್ಲಿ ಮತ್ತೊಮ್ಮೆ ಬಿಸಿನೀರು ಹರಿಸಿದೆ. ಅಡುಗೆ ಮನೆಯಲ್ಲಿ ತಣ್ಣೀರು ಮಾತ್ರ ಬರುವ ಹಾಗೆ, ಬಿಸಿನೀರಿನ ನಳ್ಳಿಯನ್ನು ಹೊರಗಿನಿಂದಲೇ ತಿರುಪು ಮುಚ್ಚಿ ಇರಿಸಿದೆ. ಹಾಗೇ ಎಲ್ಲ ಕೈ-ತೊಟ್ಟಿಗಳಿಗೂ ಬಿಸಿನೀರು ನಿಲ್ಲಿಸಿದೆ. ಎರಡು ಬಚ್ಚಲುಮನೆಗಳಲ್ಲಿ ಮಾತ್ರ ಬಿಸಿನೀರು ಬರುತ್ತಿತ್ತು. ಸೋಲಾರ್ ತೊಟ್ಟಿಯ ನೀರನ್ನು ಪೂರ್ತಿ ಹೊರಗೆ ಹರಿಸುವ ಯೋಚನೆಗೆ ಬಲವಂತವಾಗಿ ಕಡಿವಾಣ ಹಾಕಬೇಕಾಯಿತು. ಬೇಸಗೆಯ ದಿನಗಳಲ್ಲಿ ಇನ್ನೂರು ಲೀಟರ್ ನೀರನ್ನು ಹಾಗೇ ಹರಿಸಿ ವ್ಯಯ ಮಾಡಲು ನನಗಾವ ಹಕ್ಕಿದೆ? ಮನಸ್ಸಿಗೆ ಕಡಿವಾಣ ಹಾಕಿ ಮೂಲೆಗೆ ನೂಕಲಾಯಿತು. ಮನೆ, ಮೈ ಮಾತ್ರವಲ್ಲ ಮನದೊಳಗೂ ಮತ್ಸ್ಯಗಂಧ ಆವೃತವಾಯಿತು. ಸಂಜೆ ಮಲ್ಪೆಗೆ ಹೋಗುವ ಸಾಧ್ಯತೆಗೂ ಕಲ್ಲು ಬಿದ್ದಿತ್ತು. ಊಟ ಮಾಡಿ ಮಕ್ಕಳು ತಮ್ಮಷ್ಟಕ್ಕೆ ಏನೇನೋ ಆಡಲು ತೊಡಗಿಕೊಂಡರು. ನನ್ನ ತಲೆಯಲ್ಲಿ ಕೊರೆತ- ಇದನ್ನು ಹೇಗೆ ಪರಿಹರಿಸುವುದು? ಸಂಜೆ ಶಂಕರ್ ಬಂದಾಗ ಸಮಸ್ಯೆ ಪರಿಹಾರವಾಗದಿದ್ದಲ್ಲಿ, ಮರುದಿನದಿಂದ ಮನೆಮಂದಿಯೆಲ್ಲರ ಸ್ನಾನಕ್ಕೆ ಬಚ್ಚಲೊಲೆಗೆ ಬೆಂಕಿ ಹಾಕುವ ತೀರ್ಮಾನಕ್ಕೆ ಬಂದೆ. ಹಂಡೆಗೆ ನೀರು ತುಂಬಿಸಿಟ್ಟೆ. ಹಾಗೂ ಹೀಗೂ ಸಂಜೆ ಐದಾಗುತ್ತಿದ್ದಂತೆ, ಶಂಕರನಿಗೆ ಮತ್ತೆ ಫೋನ್ ಮಾಡಿ ನೆನಪಿಸಿದೆ.

ಶಂಕರ್ ಅವನ ಸಹಚರ ಗೋಪು ಜೊತೆ ಆರೂಮುಕ್ಕಾಲಿಗೆ ಬಂದ. ಗೋಪು ಆರಡಿ ಎತ್ತರದ ತುಂಬಾ ಸಣಕಲ ವ್ಯಕ್ತಿ. ಅವನು ಬೆಳಗ್ಗೇನೇ ಬರಬಾರದಿತ್ತೇ ಅನ್ನಿಸಿ ಅವನ ಮೇಲೇ ಕೋಪ ಬಂತು. ಆದದ್ದನ್ನೆಲ್ಲ ವಿವರಿಸಿ, ನನ್ನ ಕೋಪವನ್ನೂ ತೋರಿಸಿಕೊಂಡೆ. "ಬೆಳಗ್ಗೆನೇ ನೀವಿಬ್ಬರು ಬಂದಿದ್ದರೆ ನಾವು ಕಸರತ್ತು ಮಾಡಿ ಆ ತುಣುಕನ್ನು ಕೊಳವೆಯೊಳಗೆ ಬೀಳಿಸುತ್ತಿರಲಿಲ್ಲ" ಅಂದೆ. "ನಾವು ಬರುತ್ತೇವೇಂತ ಹೇಳಿದ ಮೇಲೂ ನೀವೇ ಏನೋ ಮಾಡಬೇಕೂಂತ ನಿಮಗಿದ್ದರೆ ನಾವೇನು ಮಾಡ್ಲಿಕ್ಕೆ ಆಗ್ತದೆ? ನಮಗೆ ಬೇರೆ ಕೆಲಸ ಇಲ್ವ?" ಗೋಪು ದಬಾಯಿಸಿದ. ಶಂಕರ ಮೆತ್ತನೆಯ ಹುಡುಗ, ಸುಮ್ಮನೆ ನಕ್ಕ. ಇಬ್ಬರೂ ಮಸುಕು ಬೆಳಕಿನಲ್ಲಿ ತಾರಸಿಗೆ ಹೊರಟಾಗ, ಅವರಿಗೆ ಟೀ ಮಾಡಲು ಶಾಂತಕ್ಕನಿಗೆ ಹೇಳಿ, ನಾನೂ ಹೋದೆ. ಸೋಲಾರ್‍ ಹೀಟರಿನ `ಟಿ' ಸಂಧಿಯಲ್ಲಿ ತುಣುಕು ಇಣುಕುತ್ತಿದ್ದ ರೀತಿಯನ್ನೂ, ನಮ್ಮ ಸಾಹಸವನ್ನೂ ಮತ್ತೆ ವಿವರಿಸಿದೆ. ಏಣಿ ಪುನಃ ಮೇಲೆ ಬಂತು. ಶಂಕರ ಮತ್ತು ನಾನು ಹಿಡಿದೆವು. ಗೋಪು ಮೇಲೆ ಹತ್ತಿ ಕೊಳವೆಯೊಳಗೆ ಬೆರಳು ತೂರಿಸಿ ಒಂದು ಚೂರು ಮೀನನ್ನು ಹೊರಗೆಳೆದ. ಇನ್ನೊಂದು ಚೂರು ತುಂಡಾಗಿ ಕೊಳವೆಯೊಳಗೇ ಬಿತ್ತು ಅಂದ. ಬೆಳಗ್ಗೇನೇ ಇವನು ಬಂದಿದ್ದರೆ ಪೂರ್ತಿ ತೆಗೆಯಲು ಸಿಗುತ್ತಿತ್ತು- ಅಂದುಕೊಂಡೆ. ನನ್ನ ನಾನೇ ಶಪಿಸಿಕೊಂಡೆ (ಬೇರೆ ಯಾರೂ ಸಿಗಲಿಲ್ಲ).

ಮೀನಿನ ಚೂರು ಅಲ್ಲಿಗೆ ಹೋಗಿ ಸೇರಿದ್ದು ಹೇಗೆ ಅನ್ನುವ ಸಿದ್ಧಾಂತವನ್ನು ಚರ್ಚಿಸುತ್ತಾ ಮೂವರೂ ಕೆಳಗೆ ಬಂದೆವು. ಚಹಾದಲ್ಲಿ ನನ್ನ ಪಾಲೂ ಇತ್ತು. ಹೀರುತ್ತ, ಚರ್ಚೆ ಮುಂದುವರಿದಾಗ, ಶಂಕರ "ಮೇಡಮ್, ಅದು ಮೀನು ಅಂತ ನಿಮಗೆ ಗೊತ್ತಾದದ್ದು ಹೇಗೆ?" ಕೇಳಿದ. "ಮೂಗು ಸರಿಯಾಗಿದೆಯಪ್ಪಾ..." ಅಂದೆ. ಮತ್ತೊಮ್ಮೆ ಎಲ್ಲ ಬಿಸಿನೀರಿನ ನಳ್ಳಿಗಳ ಜಾಲರಿಗಳಲ್ಲಿ ಬಿಳಿ ಕಸಗಳಿದ್ದದ್ದನ್ನು ತಿಳಿಸಿದೆ. ಗೋಪು ಬಚ್ಚಲುಮನೆ ನಳ್ಳಿಯ ಜಾಲರಿ ತೆಗೆಯಲು ಹೋದ. ಶಂಕರನೆಂದ, "ಮೇಡಮ್, ನೀವು ಬ್ರಾಹ್ಮಣರು. ಮೀನು ತಿನ್ನುದಿಲ್ಲ. ಆದ್ರೆ, ಇವತ್ತು ಎಲ್ಲರೂ ಮೀನಿನ ಸಾರಿನಲ್ಲೇ ಸ್ನಾನ ಮಾಡಿದ್ರಲ್ಲ...." ಅಂತ ನಕ್ಕ. "ಅದು ಸಾರಲ್ಲ, ಅದರಲ್ಲಿ ಮಸಾಲೆ ಇರಲಿಲ್ಲ" ಅಂದೆ ನಾನು (`ಕೆಳಗೆ ಬಿದ್ದರೂ ಮೀಸೆಗೆ ಮಣ್ಣಾಗಲಿಲ್ಲ' ಅಂತ ಸಾಧಿಸುವ ಅಪ್ಪನ ಮಗಳು, ತಮ್ಮಂದಿರ ಅಕ್ಕ, ಗಂಡನ ಹೆಂಡತಿ, ಮಗನ ಅಮ್ಮ... ಈ ಎಲ್ಲವೂ ನಾನೇ). "ಕುದಿಯುವ ಮಸಾಲೆ ನೀರಿಗೆ ಮೀನು ಹಾಕಿದ್ರೆ ಮೀನಿನಸಾರು ತಯಾರು, ನನಗ್ಗೊತ್ತು. ಆದ್ರೆ, ಇವತ್ತು ಸೋಲಾರ್ ಟ್ಯಾಂಕಿಯ ಬಿಸಿನೀರಿಗೆ ಮಸಾಲೆ ಯಾರೂ ಹಾಕಿರಲಿಲ್ಲ. ಅಥವಾ.... ಎಪ್ರಿಲ್ ಫೂಲ್ ಮಾಡ್ಲಿಕ್ಕೆ ಅಂತ... ನೀವೇನಾದ್ರೂ.... ನಿನ್ನೆ ರಾತ್ರೆ ಆ ಕೆಲಸ ಮಾಡಿದ್ದೀರ...?" ಶಂಕರನನ್ನೇ ಛೇಡಿಸುತ್ತಾ ಕೇಳಿದೆ. ನನ್ನ ಧ್ವನಿ ತುಂಟವಾಗಿತ್ತು. ಅವನು ನನ್ನನ್ನು ಛೇಡಿಸಿದ್ದಕ್ಕೆ ಪ್ರತಿಯೇಟಿದು. "ಇಲ್ಲ, ಮೇಡಮ್. ಹಾಗೆಲ್ಲ ಮಾಡುದಿಲ್ಲ ನಾವು" ಅಂದ. ಅಷ್ಟರಲ್ಲಿ ಗೋಪು, ಮತ್ತೊಂದಿಷ್ಟು ಬಿಳಿ ಕಸ ಅಂಗೈಯಲ್ಲಿ ಹಾಕಿಕೊಂಡು ಬಂದ. ಮೀನಿನ ಮೂಳೆಗಳೇ ಎಂದು ಪರಿಣತರಿಬ್ಬರೂ ಪ್ರಮಾಣೀಕರಿಸಿದರು. ಇನ್ನೂ ಒಂದೆರಡು ದಿನಗಳಲ್ಲಿ ಎಲ್ಲ ಚೂರುಗಳೂ ಹೊರಬರಬಹುದು. ನಳ್ಳಿಯೇನಾದರೂ ಕಟ್ಟಿಕೊಂಡರೆ, ನೀರೇ ಬರದಿದ್ದರೆ, ಮತ್ತೆ ಕರೆಯಲು ಹೇಳಿ ಇಬ್ಬರೂ ಹೊರಟರು. ಗೇಟು ದಾಟುತ್ತಾ ಶಂಕರ ಗೋಪುನೊಡನೆ, "ಇಂಥಾ ಹೆಂಗಸನ್ನು ಎಲ್ಲೂ ನಾನು ನೋಡಿಲ್ಲ... ಎಲ್ಲರ ಹಾಗಲ್ಲ ಇವರು, ಅಸಾಧ್ಯ ಜನ" ಅಂದದ್ದು ಕೇಳಿ ಮೆಟ್ಟಲಿಂದ ನಾನು "ಥಾಂಕ್ಸ್" ಅಂತ ಕೂಗಿಕೊಂಡೆ. "ಓಯ್, ನೀವು ಒಳಗೆ ಹೋಗ್ಲಿಲ್ವಾ?" ಅಂದ. ಗೋಪು ಕಡೆ ತಿರುಗಿ, "ಹೀಗೇ..." ಅನ್ನುತ್ತಾ ಏನೋ ಹೇಳಿಕೊಂಡು ಅವನನ್ನೂ ಕೂರಿಸಿಕೊಂಡ ಸ್ಕೂಟರ್ ಚಲಾಯಿಸಿಕೊಂಡು ಹೋಗಿಬಿಟ್ಟ.

ಮತ್ತೂ ನಾಲ್ಕು ದಿನಗಳವರೆಗೆ ಬಿಸಿನೀರಿನ ನಳ್ಳಿಯಿಂದ ದಿನಕ್ಕೆರಡು ಬಾರಿ ಹತ್ಹತ್ತು ನಿಮಿಷ ಬಿಸಿನೀರು ಹರಿಸಿ ಜಾಲರಿ ಬಿಡಿಸಿ ಮೀನುಮೂಳೆಗಳನ್ನು ತೆಗೆಯುವ ಜಾಡಮಾಲಿ ಕೆಲಸ ಮಾಡಿದೆ. ಐದನೆಯ ದಿನ ನೀರಿನ ವಾಸನೆಯೂ ಬಹಳಷ್ಟು ಕಡಿಮೆಯಾಗಿತ್ತು. ಮಕ್ಕಳನ್ನೆಲ್ಲ ಊರಲ್ಲಿ, ಅವರೆಲ್ಲರ ಅಜ್ಜಿ ಮನೆಯಲ್ಲಿ ಬಿಟ್ಟು ಬಂದಿದ್ದೆ. ಶಾಂತಕ್ಕನ ಮುಖ ಮತ್ತೆ ಶಾಂತವಾಗತೊಡಗಿತ್ತು (ಈ ಐದು ದಿನಗಳಲ್ಲಿ ಏನೋ ಅಸಮಾಧಾನ ಕಾಣಿಸುತ್ತಿತ್ತು, ಅದು ಸಹಜ ಅಂದುಕೊಳ್ಳುತ್ತೇನೆ). ಕೊನೆಗೂ ಒಂದು ವಾರದ ಮೇಲೆ, ಎಲ್ಲ ಬಿಸಿನೀರಿನ ನಳ್ಳಿಗಳೂ ಮತ್ತೆ ತೆರೆದುಕೊಂಡವು. ಅಡುಗೆಮನೆಗೆ ಮೀನಿನ ನೀರು ಪ್ರವೇಶಿಸಿರಲಿಲ್ಲ ಅಂತ ಶಾಂತಕ್ಕ ನಂಬಿದ್ದರು. ನಾನಂತೂ ಮತ್ತೂ ಒಂದೆರಡು ದಿನ ಹೊರಗೆ ಹೋಗುವ ಮೊದಲು ಮತ್ತೆ ಮತ್ತೆ ಮೈ ವಾಸನೆ ಇದೆಯೇ ಎಂದು ನೋಡಿಕೊಳ್ಳುತ್ತಿದ್ದೆ. ಧಾರಾಳವಾಗಿ, ಮೈತುಂಬ ಶ್ರೀಗಂಧದ ಪೌಡರನ್ನು ಸುರಿದುಕೊಳ್ಳುತ್ತಿದ್ದೆ. ಹಲ್ಲುಜ್ಜಲು, ಮುಖ ತೊಳೆಯಲು ಬಿಸಿನೀರು ಬಳಸುತ್ತಿರಲಿಲ್ಲ (ಕೊರೆಯುವ ಛಳಿ ಹೇಗೂ ಇರಲಿಲ್ಲ).

ಇದೆಲ್ಲ ಘಟಿಸಿ ನಾನಿದನ್ನು ಬರೆಯುವ ಹೊತ್ತಿಗೆ, ಮೂವತ್ತಮೂರು ತಿಂಗಳುಗಳೇ ಕಳೆದರೂ ಒಮ್ಮೊಮ್ಮೆ ಆ ಮೀನಿನ ವಾಸನೆ ಮೂಗಿಗೆ ಅಡರುತ್ತದೆ. ನೆನಪು ಹಿಂದೆ ಹೋಗುತ್ತದೆ. ಏಣಿಯಲ್ಲಿ ನಿಂತಾಗಿನ ಕಾಲ್ನಡುಕ ಎದೆ ನಡುಗಿಸುತ್ತದೆ. ಪ್ರಶ್ನೆ ಹೆಡೆಯಾಡುತ್ತದೆ: "ಕೊಳವೆಯ ಆ ತುದಿಯೊಳಗೆ ಸತ್ತ ಮೀನು ಸೇರಿಕೊಂಡದ್ದು ಹೇಗೆ?" ಈ ಯಕ್ಷ ಪ್ರಶ್ನೆಗೆ (ಬೇತಾಳ ಪ್ರಶ್ನೆಯೆಂದರೂ ಸರಿ, ಸತ್ತ ಮೀನಿನ ಬಗ್ಗೆಯಲ್ಲವೆ...!) ಉತ್ತರ ತಿಳಿದವರು ಹೇಳದೇ ಇದ್ದರೆ ನೀವು ವಾಸನಾವತಾರದ ಪ್ರಕೋಪಕ್ಕೆ ಗುರಿಯಾಗುವಿರೆಂದು ತಿಳಿಯಪಡಿಸುತ್ತೇನೆ. ಇಲ್ಲಿಗೆ "ಅಭಿನವ ಮತ್ಸ್ಯಗಂಧಾವೃತ ಕಥನ" ಪರಿಸಮಾಪ್ತವಾದುದು.
(೧೦-ಜನವರಿ-೨೦೦೭)
(ಕೆ.ಕೆ.ಎನ್.ಸಿ.ಯ ವಾರ್ಷಿಕ ಸಂಚಿಕೆ ಸ್ವರ್ಣಸೇತು ೨೦೦೭ರಲ್ಲಿ ಪ್ರಕಟಿತ)