ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday, 15 April, 2010

ವೇಷ

ದೇವಸ್ಥಾನದೆದುರಿನ ಖಾಲಿ ಗದ್ದೆಯಲ್ಲಿ
ಯಕ್ಷಗಾನ ಬಯಲಾಟದ ಬಣ್ಣ
ದೊಡ್ಡ ವೇದಿಕೆ, ರಂಗಿನ ದೀಪ
ಊರಿನವರಿಗೆ ಏನೋ ಖುಷಿಯಣ್ಣ
ಸಂಜೆಯ ಪೂಜೆಗೆ ವಿಶೇಷ ದಕ್ಷತೆ
ಊರ ಹಿರಿಯಗೆ ಮೊದಲ ಪ್ರಸಾದ
ನಮ್ಮಜ್ಜನಿಗೇ ಇಲ್ಲಿ ಆದ್ಯತೆ
ಅವನಿಲ್ಲದೆ ಊರಲಿ ನಡೆಯದಾರ ಪಾದ.

ಉತ್ಸವದ ದಿನ ಬೆಳಗು ಎದ್ದುಬಂದ
ಎಂದಿನಂತಲ್ಲ; ಗೊಣಗಿಗೂ ಉತ್ಸಾಹ
ಮನೆಮಕ್ಕಳಿಗಾಯ್ತು ಅಪ್ಪಣೆಯ ವರದಾನ
ಹೆಂಗಳೆಯರ ಕೆಲಸ ಇನ್ನೂ ದುಸ್ಸಹ

ಅದಾಗಬೇಕು, ಇದಾಗಬೇಕು, ಹಾಗಿರಬೇಕು, ಹೀಗಿರಬೇಕು
ಏನಿಲ್ಲ ಏನುಂಟು ಅವನ ಪಟ್ಟಿಯಲ್ಲಿ
ಅಜ್ಜಿಯಿಲ್ಲದ ನೆನಪು ಅವನ ಕಾಡಲೇ ಇಲ್ಲ
ನಮಗಿತ್ತು ಹೊದಿಕೆ ಅವಳ ನಗುವಿನಲ್ಲಿ
ಕಳೆದ ಇರುಳುಗಳಿಗೆ ಬೆನ್ನಿತ್ತು ನಡೆದವನು
ಇಂದಿಗೆ ಮುಖತೋರಿ ನಿಂತಿದ್ದಾನೆ
ನಿನ್ನೆಗಳ ಹಂಗಿನಲಿ ಗೀರುಗಳ ಹೊತ್ತವನು
ಮತ್ತೊಮ್ಮೆ ಹೆಗಲೊರಸಿಕೊಂಡಿದ್ದಾನೆ

ಮನೆಯೊಳಗೆ ಅಧಿಕಾರ, ಮೂರಾಬಟ್ಟೆ ಸರಕಾರ
ಊರಬೀದಿಗೆ ಮಾತ್ರ ರಾಜತಂತ್ರ
ಅವರಿವರ ಹೊಗಳಿಕೆಗೆ ಕಿವಿಯಾಗುವವನಿಗೆ
ಮನೆಯ ಮಕ್ಕಳ ಪ್ರೀತಿ ಬರೀ ಕುತಂತ್ರ
ಎಲ್ಲವನು ತನ್ನದೇ ಕೈಯಲಿರಿಸುವ ಛಲ
ಬೇಡವಗೆ ತನ್ನವರ ಆಸೆಗಳ ನೆರಳು
ಅವನ ಛಾಯೆಯ ಕೆಳಗೆ ಬೆಳೆಯದಾಗಿದೆ ಹುಲ್ಲು
ಊರೊಳಗೆ ಅವನಿಗೇ ಹೆಸರು, ಮಖಮಲ್ಲು

ಯಕ್ಷಗಾನದ ಬಯಲ ರಂಗಮಂಟಪದಲ್ಲಿ
ಅವನನ್ನು ಕೂರಿಸಿ ಆಡಿದರು ನೂರು
ಇನ್ನೇನು ಶತಕವನೆ ಕಾಣುವ ತಾತನನು
ಶಾಲು-ಹಾರಗಳಲ್ಲಿ ಮೆರೆಸಿದರು ಅವರು

ಬಯಲಾಟ ಮುಗಿದಾಗ ಬರಿದಾದ ಗದ್ದೆಯಲಿ
ನಡೆದಿದ್ದೆ ಸುಮ್ಮನೇ ನೋಟ ಹರಿಸುತ್ತಾ
ಖಾಲಿ ಗದ್ದೆಯಲಿದ್ದ ಖಾಲಿ ಬಿರುಕುಗಳಲ್ಲಿ
ತಿಂದು ಬಿಸುಟೆದ್ದವರ ಖಾಲಿ ಮೊತ್ತ
ಮನೆಗೆ ಬರಲಾಗದೆ ದೇವಳದ ಎದುರಿನಲಿ
ಗರುಡಗಂಬದ ಕಡೆಗೆ ಕಣ್ಣು ನೆಟ್ಟೆ
ಏರಿ ತೊನೆಯುತ್ತಿದ್ದ ಗರುಡಪಟ ಗಾಳಿಯಲಿ
ಅತಂತ್ರ ನೆನಪಿಸಿದ, ಮನೆಗೆ ಹೊರಟೆ.

ದೇವ ವಾಹನನಾದ ಗರುಡನೇ ತೂಗಿರಲು
ನನ್ನದೇನಿದೆ ಅಂಥ ಘನ ಜೀವನ?
ಅಜ್ಜನ ಆಳ್ವಿಕೆಯ ಕೆಲವಾರು ದಿನಗಳನು
ಕಳೆದ ಮೇಲೆನಗೆ ನಿಜ ವಿಮೋಚನ

ಬದುಕಿದ್ದ ದಿನಗಳಲಿ ಅಜ್ಜ ಬಾಳಿದ್ದನ್ನು
ಇಂದು ನೆನೆದರೆ ಸಾಕು, ಪಾಠ ನನಗೆ
ಹೇಗೆ-ಹೇಗಿರಬೇಕು ಎನುವ ಮೌಲ್ಯಕ್ಕಿಂತ
ಮಾಡಬಾರದ್ದನ್ನು ಅರಿತೆ ಒಳಗೆ
(೧೦-ಎಪ್ರಿಲ್-೨೦೦೮)

5 comments:

sunaath said...

ಜ್ಯೋತಿ,
ಇದು ಸರಿಯಾದ ಪಾಠ, ಯಾರಿಗೇ ಆಗಲಿ!

ಸಾಗರದಾಚೆಯ ಇಂಚರ said...

ಪಾಠ ಚೆನ್ನಾಗಿದೆ
ಅದ್ಭುತ ಅರ್ಥಗರ್ಭಿತ ಸಾಲುಗಳು

ಸುಪ್ತದೀಪ್ತಿ suptadeepti said...

ಸುನಾಥ್ ಕಾಕಾ, ಗುರುಮೂರ್ತಿ ಸರ್, ಧನ್ಯವಾದಗಳು. "ನಿಂದಕರಿರಬೇಕು..." ಎಂದು ದಾಸರು ಹೇಳಿದಂತೆಯೇ "ಇಂಥವರಿರಬೇಕು..." ಎಂದು ನಾನನ್ನುತ್ತೇನೆ- ‘ಹೇಗಿರಬಾರದು’ ಅನ್ನುವ ಪಾಠಕ್ಕಾಗಿ. ಅಲ್ವಾ?

ಸೀತಾರಾಮ. ಕೆ. said...

ಚೆ೦ದದ ಕವನ

ಸುಪ್ತದೀಪ್ತಿ suptadeepti said...

ಧನ್ಯವಾದಗಳು, ಸೀತಾರಾಮ್ ಸರ್.