ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Saturday, 15 May 2010

ಅಜ್ಞಾತನಿಗೆ...

ಅತಿಥಿಯೇ ನೀನು?
ಕರೆಯದೇ ಬಂದವ; ಅಭ್ಯಾಗತ!
ಬಯಸಿ ಬಯಸಿ ಕೂಗಿ ಕರೆದು
ಕರೆಯೋಲೆ ನೀಡಿದರೂ...
ಬಾರದೇ ಇರಬಲ್ಲ ಕಟುಹೃದಯಿ ನೆಂಟ;
ಅಗೋ ಬಂದೆಯಲ್ಲ,
ಯಾರೂ ನೋಡದ ಹೊತ್ತು,
ಯಾರಿಗೂ ನೀನು ಬೇಡದ ಹೊತ್ತು.
ಮತ್ತೆ, ಹೊತ್ತು-ಗೊತ್ತಿಲ್ಲದೆ
ಹೊತ್ತುಕೊಂಡು ಹೋಗಬೇಕಾದ ಕರ್ಮ
ನಮ್ಮ ತಲೆಗೆ ಕಟ್ಟಿಟ್ಟು-
ಮೌನವಾಗಿ ಬಿಡುತ್ತೀ!

ನಿನ್ನ ಮೌನದಲ್ಲೂ ಭೀಕರ ಗದ್ದಲ;
ಯಾರೂ ಕಾಣದಂತೆ
ಎಲ್ಲರೆದುರಿಗೇ ಕೀಳುತ್ತಿರುತ್ತಿ-
ಅರಿಯದ ಕರುಳನ್ನು,
ತಿಳಿಯದ ಕುರುಳನ್ನು,
ಮರೆಯದ ಮನವನ್ನು,
ತೊರೆಯಲಾರದ ಮನೆಯನ್ನು!
ಮುರಿಯುವ, ತುಳಿಯುವ, ಅಳಿ-
-ಸುವ ಕೆಲಸದ ನಿನಗೆ
ಸಮಾಧಾನ ನೆಮ್ಮದಿ ಕೊಡಿಸುವ
ಬಯಕೆ ಬರುವುದೇಕೆ ವಿರಳ?
ಆಹ್ವಾನಗಳಿಗೆ ಬಿಡುವಿಲ್ಲದ ಕ್ರೂರಿ ನೀನು!

ಒಂಟರಬಡುಕ ಸುಂಟರಗಾಳಿ
ನಿನಗೆ ಯಾರೂ ಜತೆಗಾರರಿಲ್ಲ,
ನೀನು ಯಾರಿಗೂ ಜೊತೆಗಾರ-
ನಲ್ಲ; ಧುತ್ತೆಂದು ಬಂದು-
ಥಟ್ಟನೆ ತಬ್ಬಿ
ಅಲ್ಲೇ ಇಲ್ಲವಾಗುವ ನಿನಗೆ
ಭಾವನೆಗಳ ಪರಿಚಯವಿಲ್ಲ,
ಕಾಮನೆಗಳು ಬೇಕಾಗಿಲ್ಲ,
ಸಂಬಂಧ, ವಾವೆ-ವರಸೆಗಳ
ಅರಿವು ಸುಳಿವು ಇಲ್ಲವೇ ಇಲ್ಲ.

ಎಂದಾದರೂ ಇನ್ನೊಬ್ಬರ ಜವಾಬ್ದಾರಿಯ-
ಹೊರೆ ಹೊತ್ತು ನೋಡಿದ್ದೀಯ?
ಯಾವಾಗ ಯಾರ ಮೇಲಾದರೂ ಅದನ್ನು
ಹೇರಿಸುತ್ತೀಯಲ್ಲ; ಭಾರ ಎತ್ತಿದ್ದೀಯ?
ಎತ್ತದ ಕತ್ತಿನ ರಣಭಾರದಿ ಅತ್ತಿದ್ದೀಯ?
ಬಾಳಿ, ಬದುಕಿನ ಬವಣೆ ಅರಿತಿದ್ದೀಯ?
ನ್ಯಾಯಾನ್ಯಾಯಗಳ ಫಲ ಉಂಡಿದ್ದೀಯ?
ಇಲ್ಲೇ ನಮ್ಮ ಸುತ್ತ ಮುತ್ತಲೇ
ಸುಳಿದಾಡುತ್ತಿರುತ್ೀ, ಆದರದರ
ಅರಿವು ಕೂಡ ನಮಗಾಗದಂತೆ;
ಎಲ್ಲೋ ಇದ್ದಕ್ಕಿದ್ದಂತೆ ಪ್ರತ್ಯಕ್ಷನಾಗುತ್ತೀ,
ನಿನ್ನನ್ನು ಮರೆತುಬಿಡದಂತೆ!

ಯಾರಯ್ಯ, ಯಾರು ನೀನು?
ಎಲ್ಲೆಲ್ಲೋ ಬಲೆಬೀಸಿ ಬೇಟೆ-
ಯಾಡುವ ಕರಾಳ ಭಯಾನಕ-
ಕಿರಾತಕನೆ? ಕಂಡವರಿಲ್ಲ ನಿನ್ನ.
ಆದರೂ ಕೇಳಯ್ಯ ಒಂದು ಮಾತು-
ನೀನೇ ಭೀಷಣ ಪಾಷಾಣ ಹೃದಯಿ
ಅಂದುಕೊಳ್ಳಬೇಡ; ನೋಡಲ್ಲೇ-
ನಿನ್ನ ದಪ್ಪ ಮೂಗಿನಡಿಯ ಕಪ್ಪು
ದಟ್ಟ ಮೀಸೆಯೆಡೆಯಲ್ಲೇ(?)
ಅಡಗಿರುವರು ನರಕುಲಾಂತಕ ನರರು!

ಏಕಚಕ್ರಾಧಿಪತಿ ನೀನೆಂದು-
ಕೊಂಡೆಯ? ನಿನಗದು ಸಲ್ಲ!
ಯಾರಿಗೆ ಹೊಂಚು ಹಾಕುತ್ತಿರುವೆಯೀಗ?
ಬೇಗ ಯಾರಾದರೂ ಬೇಕೆಂದಿದ್ದರೆ-
ಕದಲು ಇಲ್ಲಿಂದ, ಆ ಕಡೆಗೆ
ಅಲ್ಲಿ ಕಾದಿದೆ ನಿನ್ನ ‘ಕಾಯ’ದ ಕದನ,
ಅದೇ ಅನಿವಾರ್ಯವೀಗ, ಹೋಗಲ್ಲಿ.
ಅವಿರತ ನಿನ್ನ ಭಯದಲ್ಲಿ,
ನಿನ್ನ ತೊಲಗಿಸಲರಿಯದೆ
ಬಾಗಿ ಕಾದು ಕದ್ದು
ಅವಿತಿರುವುದನರಿತೂ ನೀ
ಮತ್ತೆ ಇತ್ತ ಮುತ್ತಿಕ್ಕ ಬಂದರೆ
ನಾನೆನ್ನಬಹುದು-
‘ತೊಲಗಾಚೆ’! ಅಷ್ಟೇ!
(೦೨-ಡಿಸೆಂಬರ್-೧೯೯೯)

5 comments:

Dr.D.T.Krishna Murthy. said...

ಅರ್ಥಗರ್ಭಿತ ಭಾವಪೂರ್ಣ ಕವನ.ಇಂತಹ ಕವನಗಳು ಇನ್ನೂ
ಹೆಚ್ಚಿನ ಸಂಖ್ಯೆಯಲ್ಲಿ ನಿಮ್ಮ ಬ್ಲಾಗಿನಲ್ಲಿ ಕಾಣಿಸಿಕೊಳ್ಳಲಿ ಎಂಬ
ಹಾರೈಕೆ.

ಸೀತಾರಾಮ. ಕೆ. / SITARAM.K said...

ಅಜ್ಞಾತನಿಗೆ ಸರಿಯಾಗಿ ಹೇಳಿದ್ದಿರಿ... ಅದರೆ ತೊಲಗಾಚೆ ಎ೦ದರೆ ಅವನು ಹೋದಾನೆಯೇ? ಅವನು ನಮ್ಮ ಬದುಕಿನ ಅನಿವಾರ್ಯ ನಮ್ಮನ್ನು ಕರೆದೊಯ್ಯುವ ಅ೦ತಿಮ ಅತಿಥಿ. ಚೆ೦ದದ ಕವನ.

sunaath said...

ಧಬಧಬೆಯ ಕೆಳಗೆ ನಿಂತುಕೊಂಡ ಅನುಭವವಾಯ್ತು!

Badarinath Palavalli said...

ಮೇಡಂ,

ಪದ್ಯ ಚೆನ್ನಾಗಿದೆ. ಎಷ್ಟೋ ಬಾರಿ ಒಳಗಿನ ತುಮಲಗಳು ಹೇಳಿಕೊಳ್ಳಲೂ, ನುಂಗಲೂ ಆಗದಂಥ ಹಪಹಪಿ ಬಂದೊದಗುತ್ತದೆ.

ಅಲ್ಲಿ ಕಾದಿದೆ ನಿನ್ನ ‘ಕಾಯ’ದ ಕದನ,
ಅದೇ ಅನಿವಾರ್ಯವೀಗ, ಹೋಗಲ್ಲಿ.

ಇಂಥ ಸಾಲುಗಳೇ ಕವನದ ಸತ್ವವನ್ನು ಹಿಡಿದಿಟ್ಟುಕೊಂಡಿವೆ ಅನಿಸಿತು.

- ಬದರಿನಾಥ ಪಲವಳ್ಳಿ

ಸುಪ್ತದೀಪ್ತಿ suptadeepti said...

ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.
ಹತ್ತು ವರ್ಷಗಳ ಹಿಂದೆ ಬರೆದ ಈ ಕವನ ಮತ್ತೆ ಮತ್ತೆ ಒಂದಲ್ಲ ಒಂದು ವಿಧದಲ್ಲಿ ಪ್ರಸ್ತುತವಾಗುತ್ತಲೇ ಇದೆ ನಮ್ಮೆಲ್ಲರ ಜೀವನದಲ್ಲಿ. ಆದ್ದರಿಂದ ಉದ್ದವಾದರೂ ಅದನ್ನಿಲ್ಲಿ ಪ್ರಕಟಿಸುವ ಮನಸ್ಸು ಮಾಡಿದೆ. ಇಷ್ಟೆಲ್ಲ ಪ್ರಶ್ನೆಗಳಿದ್ದರೂ ಉತ್ತರಿಸುವವ ಮಾತ್ರ ಸಿಕ್ಕಿಲ್ಲ. ಅವನು ಸಿಕ್ಕಿದಲ್ಲಿ ನಾವಿಲ್ಲ! ಬದುಕಿನ ಸರಳ ನೇರ ಸತ್ಯ.
ಮತ್ತೊಮ್ಮೆ ಎಲ್ಲರಿಗೂ ವಂದನೆಗಳು.