ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday, 30 October, 2008

ಶುಭ ಹಾರೈಕೆಗಳು, ನಿಮಗೆಲ್ಲ...ಓದುಗರೆಲ್ಲರಿಗೂ ದೀಪಾವಳಿಯ ಶುಭಾಶಯಗಳು.

ಬೆಳಕಿನಾವಳಿಯು ಎಲ್ಲರ ಬಾಳಲ್ಲಿ ಒಳಿತಿನ ಹಾದಿಯನ್ನೇ ಬೆಳಗುತಿರಲಿ.

Friday, 17 October, 2008

ಸೀಳುನಾಯಿ-- ಭಾಗ ೦೧

"...ಸೀಳುನಾಯಿಗಳು ಒಂದು ಜಾತಿಯ ಬೇಟೆ ನಾಯಿಗಳು. ಹಿಂದೆ ಕಾಡುಗಳಲ್ಲಿ ಗುಂಪಿನಲ್ಲಿ ವಾಸಿಸುತ್ತಾ ತೋಳಗಳ ಹಾಗೆ ಬದುಕಿದವು. ಉತ್ತಮ ಶಕ್ತಿ, ಬುದ್ಧಿವಂತಿಕೆ ಮತ್ತು ಒಳ್ಳೆಯ ಸ್ವಂತಿಕೆಯನ್ನೂ ಹೊಂದಿರುವ ನಾಯಿಗಳು. ತಮ್ಮ ದೇಹದ ದೌರ್ಬಲ್ಯವನ್ನೂ ಕಡೆಗಣಿಸಿ ಗುಂಪಿಗಾಗಿ ಸೆಣಸಾಡುವಂಥ ಛಾತಿಯುಳ್ಳವು. ನಾಯಿಗಳಲ್ಲಿ ನನಗೆ ಇಷ್ಟದ ಜಾತಿ...."
ಇಪ್ಪತ್ತೈದರ ಮಗನ ವಿವರಣೆ ಸಾಗಿತ್ತು. ಐವತ್ತೈದರ ನಾನು ಎಲ್ಲೋ ಕಳೆದುಹೋಗಿದ್ದೆ. "ತನ್ನ ಹೊಟ್ಟೆಪಾಡಿಗಷ್ಟೇ ಹಿಂಸಾಚಾರ ಮಾಡುವ ಪ್ರಾಣಿಗಳಿಗಿಂತ ಮನುಷ್ಯ ಕೆಟ್ಟವನು" ಅನ್ನುವುದು ಅವನ ವಾದ. ಇದರ ಪೂರ್ವಾಪರ ವಿಮರ್ಶೆಯಲ್ಲಿ ನಾನಿದ್ದೆ, ಸೋಲುತ್ತಿದ್ದೆ. ಆದರೆ, ಮಗನೆದುರು ಸೋಲೊಪ್ಪಿಕೊಳ್ಳದ ಭಂಡ ಗಂಡುತನ ನನ್ನದು. ‘ಎಷ್ಟಾದರೂ ಅವನ ಅಪ್ಪ ನಾನು. ನನಗೂ ಮೀಸೆಯಿದೆ!’ ನನ್ನೊಳಗಿನ ಅಹಂ ಒತ್ತುಕೊಡುತ್ತಿತ್ತು. ನಮ್ಮಿಬ್ಬರ ವಾಗ್ವಾದ ತಡೆಯಲಾರದೆ ವಾಣಿ ಹೊರಗೆ ಹೋಗಿದ್ದಳು. ಅವಳಿಗೆ ಚೆನ್ನಾಗಿ ಗೊತ್ತು, ಸೋಲೊಪ್ಪಿಕೊಳ್ಳದ ಗಂಡು ನಾನು; ಸೋಲೇ ಇಲ್ಲದ ಗಂಡು ಇವನು.

ಮೂರು ವರ್ಷದ ಪೋರನಾಗಿದ್ದಾಗಲೇ ನನಗೆ ಅರಿವಿಲ್ಲದ, ಉತ್ತರ ನನ್ನಲ್ಲಿಲ್ಲದ ಪ್ರಶ್ನೆಗಳನ್ನು ಕೇಳುತ್ತಿದ್ದ, ಈ ಕಿಶೋರ. ಗೊತ್ತಿಲ್ಲವೆನ್ನದೆ ಗದರುತ್ತಿದ್ದ ನನ್ನನ್ನು ಮುಚ್ಚಿದ ಬಾಗಿಲ ಹಿಂದೆ ಸುಮ್ಮನಿರಿಸುತ್ತಿದ್ದಳು ಅವಳು. ಮುಂದಿನ ವರ್ಷಗಳಲ್ಲಿ ಅವನ ಪ್ರಶ್ನೆಗಳು ನನ್ನನ್ನು ಕಾಣುತ್ತಲೇ ಇರಲಿಲ್ಲ. ವಾಚನಾಲಯದ ಪುಸ್ತಕಗಳೆಲ್ಲ ಅವನ ಗ್ರಾಸವಾಗಿದ್ದವು. ಕಿಶೋರನ ಕ್ರಿಯಾಶೀಲತೆಗೆ ಶರಣಾದವಳು ವಾಣಿ; ಅವನ ಸಾಮರ್ಥ್ಯಕ್ಕೆ ಸಾಧ್ಯವಾದಷ್ಟೂ ಅವಕಾಶ ಒದಗಿಸುತ್ತಿದ್ದಳು. ಪರಿಣಾಮ... ಅತ್ಯಂತ ಸ್ವಂತಿಕೆಯುಳ್ಳ ಮಗ. ಒಂದೇ ಕೂರಿನಲ್ಲಿ ಏನನ್ನೂ ಮಾಡದ ನಾನು, ಕೂತಲ್ಲಿಂದ ಏಳದೆ ಹಿಡಿದ ಕೆಲಸ ಮುಗಿಸುವ ಅವನು; ಇದೆಂಥಾ ಅಪ್ಪ-ಮಗನ ಜೋಡಿ! ನಮ್ಮಿಬ್ಬರ ಗುಣಗಳ ಯಾವ ಹೋಲಿಕೆಯೂ ಇಲ್ಲದ ಅವನನ್ನು ಕುರಿತು ವಾಣಿಯನ್ನು ನಾನು ಗೇಲಿ ಮಾಡಿದ್ದಿದೆ, ‘ಆಸ್ಪತ್ರೆಯಲ್ಲಿ ಮಗು ಅದಲು-ಬದಲಾಗಿದ್ದಿರಬೇಕು, ನಿನಗೆ ಅರಿವಾಗಿಲ್ಲ’ ಎಂದು. ಅದಕ್ಕೂ ಅವಳ ಉತ್ತರವಿಲ್ಲ. ಸಣ್ಣ ನಗುವಿನಿಂದಲೇ ಎಲ್ಲವನ್ನೂ ನಿಭಾಯಿಸುವ ಇವಳನ್ನು ಬ್ರಹ್ಮ ನನಗೇ ಯಾಕೆ ಗಂಟು ಹಾಕಿದನೊ?

"...ಅಪ್ಪಾ! ಎಲ್ಹೋದ್ರಿ?..." ಕಿಶೋರ ಭುಜ ತಟ್ಟಿದಾಗಲೇ ಎಚ್ಚರ. "ಮತ್ತೆ ಹಳೇ ಕನಸುಗಳಲ್ಲಿ ಸಿಕ್ಕಿಕೊಂಡ್ರಾ?" ಹೌದು ಅನ್ನಲಾಗದೆ, ವಿಷಯಾಂತರ ಮಾಡಿದೆ: "ಇಲ್ಲಪ್ಪ. ಸಣ್ಣ ನಿದ್ದೆ ಹಿಡ್ದಿತ್ತು. ಬೆಳಗ್ಗೆ ದೋಸೆ ತಿಂದದ್ದು ನೋಡು. ಒಳ್ಳೆ ಜಡ ಏರಿದೆ." "ಹಾಗಾದ್ರೆ ನೀವು ಮಲಗಿ. ನನಗೂ ಬೇರೇನೋ ಕೆಲಸ ಉಂಟು." ಸೋಫಾದಿಂದ ಎದ್ದ ಕಿಶೋರ. ನನ್ನ ಯೋಚನೆ ಮತ್ತೆ ಎಲ್ಲೋ ಕಳೆದುಹೋಯಿತು.

ಇವನಿಗೆ ತಿಳಿಯದ ವಿಷಯವೇ ಇಲ್ಲ. ಯಾವುದರ ಬಗ್ಗೆ ಮಾತು ಎತ್ತಿದರೂ ಅವೆಲ್ಲದರ ಬಗ್ಗೆ ಕರಾರುವಕ್ಕಾಗಿ ಹೇಳಬಲ್ಲವ. ಅವನ ಸ್ವಂತಿಕೆಯೂ ಅಷ್ಟೇ ಕಟ್ಟುನಿಟ್ಟಿನದು. ತನ್ನ ಹದಿನೆಂಟನೇ ಹುಟ್ಟುಹಬ್ಬದ ದಿನ ಮನೆಯೊಳಗೆ ಬಿರುಗಾಳಿಯಂಥ ಸುದ್ದಿ ಬಿತ್ತಿದವ. ಅದಕ್ಕಿದ್ದ ಪ್ರತಿರೋಧಗಳ ನಡುವೆಯೂ ಒಂದು ವಾರದ ಬಳಿಕ ಏಳು ದಿನಗಳ ಹಸುಗೂಸನ್ನು ದತ್ತು ಸ್ವೀಕರಿಸಿ ಮನೆಗೆ ತಂದವ. ಅದಕ್ಕೆ ಅಪ್ಪ-ಅಮ್ಮ ಎರಡೂ ಆಗಿ ಸಾಕುವ ಛಾತಿ ತೋರಿದವ. ವಾಣಿಯ ತಾಯ್ತನ ಅವನಲ್ಲಿನ ಹೆಂಗರುಳನ್ನು ಸದ್ಯಕ್ಕೆ ಮರೆಯಲ್ಲಿರಿಸಿದೆ. ಆ ಪೋರಿಗಾಗಿ ಎರಡು ವರ್ಷ ತಾನು ಕಮ್ಯೂನಿಟಿ ಕಾಲೇಜಿನಲ್ಲಿ ಕಲಿಯುವ ನಿರ್ಧಾರ ಮಾಡಿ ಡ್ಯೂಕ್ ಯೂನಿವರ್ಸಿಟಿಯ ವಿದ್ಯಾರ್ಥಿ ವೇತನದ ಸೀಟನ್ನೂ ಬಿಟ್ಟುಕೊಟ್ಟ ಹಠವಾದಿ. ಮುಂದೆ ಕಾಲೇಜಿಗೆ ಸೇರಿದಾಗಲೂ ತನ್ನ ಮಗಳನ್ನು ಬಿಟ್ಟಿರಲಾರದೆ, ತನ್ನೊಂದಿಗೆ ಕರೆದೊಯ್ಯಲು ನಮ್ಮನ್ನು ಒಪ್ಪಿಸಲಾರದೆ ಪ್ರತೀ ವಾರಾಂತ್ಯಕ್ಕೆ ಮನೆಗೆ ಬರುತ್ತಿದ್ದ. ಗೆಳೆಯರ ನಡುವಿನ ಮೋಜಿನ ಜೀವನವನ್ನೂ ತನ್ನ ವೈಯಕ್ತಿಕ ಆಯ್ಕೆಯ ಗಂಭೀರ ಜವಾಬ್ದಾರಿಯನ್ನೂ ಅನಾಯಾಸದಿಂದ ನಿಭಾಯಿಸಿಕೊಂಡವ. ಅತ್ಯುನ್ನತ ಅಂಕಗಳಿಂದ ಕಾಲೇಜು ಮುಗಿಸಿ, ನಮ್ಮೂರಲ್ಲೇ ಉನ್ನತ ಶಿಕ್ಷಣವನ್ನೂ ಪೂರೈಸಿ, ಒಳ್ಳೆಯ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾನೆ. ಮಗ ಮನೆಯಲ್ಲೇ ಇದ್ದಾನೆಂಬ ಸಡಗರ ನಮ್ಮಿಬ್ಬರಿಗೆ. ಅವನ ಜೊತೆ ಕುಣಿಯುವ ಖುಷಿ ‘ನಿಧಿ’ಗೆ.

ವಾಣಿ ಒಳಗೆ ಬಂದಿದ್ದಾಳೆ. ನಿಧಿ ಓಡಿ ಹೋಗಿ ‘ಅಮ್ಮ’ನಿಗೆ ಅಂಟಿಕೊಂಡಳು. ಅವಳಿಗೆ ನಾವಿಬ್ಬರೂ ‘ಅಮ್ಮ-ಅಪ್ಪ’. ಕಿಶೋರ ಆಕೆಯ ‘ಡ್ಯಾಡ್’. ಮೂವರು ಹಿರಿಯರ ಪ್ರೀತಿಯಲ್ಲಿ ಬೆಚ್ಚಗೆ ಬೆಳೆಯುತ್ತಿದೆ ಬಿಳಿಯ ಚಿಗರೆ ಮರಿ. ವಯಸ್ಸಿಗೆ ಮೀರಿದ ಬೆಳವಣಿಗೆ, ಇಲ್ಲಿನವರಂತೆ. ಅವಳ ಜೈವಿಕ ಅಮ್ಮ-ಅಪ್ಪ ಯಾರೆಂದೇ ನಮಗೆ ತಿಳಿದಿಲ್ಲ. ಕಿಶೋರನಿಗೆ ಅರಿವಿರಬಹುದು, ಹೇಳುತ್ತಿಲ್ಲ. ಆದರೆ, ಆಕೆ ಶಾಲೆಗೆ ಸೇರುವ ಸಮಯದಲ್ಲಿ ಆಕೆಗೆ ತಿಳಿಸಿದ್ದಾನೆ, ಆಕೆ ನಮ್ಮ ನೈಜ ಮಗುವಲ್ಲ, ದತ್ತುಪುತ್ರಿ ಎಂದು. ಜೊತೆಗೇ ಆಕೆ ನಮ್ಮೆಲ್ಲರ ಕಣ್ಮಣಿ ಎಂದೂ ಅವಳಿಗೆ ಮನವರಿಕೆ ಮಾಡಿದ್ದಾನೆ. ‘ಇದೆಲ್ಲ ಬೇಕಾ?’ ಅನ್ನುವ ನನ್ನ, ವಾಣಿಯ ಪ್ರಶ್ನೆಗಳಿಗೆ ಈಗಲ್ಲದಿದ್ದರೂ ಮುಂದೆ ಬೇಕಾದೀತು ಅನ್ನುವುದು ಅವನ ವಾದ. ಕಿರಿಕಿರಿಯಾದರೂ ಸುಮ್ಮನಿದ್ದೇವೆ. ಈ ಮುದ್ದಿನ ನಿಧಿಯನ್ನು ಈಗ ಯಾರಾದರೂ ಬಂದು "ಇವಳು ನಮ್ಮ ಮಗಳು, ನಮಗೆ ಕೊಡಿ" ಅಂದರೆ ಕೊಡಲು ನಾವಿಬ್ಬರೂ ತಯಾರಿಲ್ಲ. ಅದೇ ಭಯ ಒಮ್ಮೊಮ್ಮೆ ವಾಣಿಗೆ ಕನಸಾಗಿ ಕಾಡುವುದಿದೆ. ಹೇಗಾದರೂ ಕಿಶೋರನಿಗೆ ಇದನ್ನು ತಿಳಿಸಬೇಕು. ಮುಂದಿನ ಶುಕ್ರವಾರ ನಿಧಿ ಮತ್ತು ಅವನ ಜನ್ಮದಿನ. ಅದರ ನಂತರ ತಿಳಿಸಿದರಾಯಿತು.
************ ************

ನಿಧಿ ಈಗ ಆರನೇ ತರಗತಿ. ಈ ನಾಲ್ಕು ವರ್ಷಗಳಲ್ಲಿ ಕಿಶೋರನ ಮಾತು ನಿಧಾನವಾಗಿ ಮೂಲೆ ಸೇರಿದೆ. ಯಾಕೆ ಅನ್ನುವುದು ನಮಗೆ ಒಡೆಯಲಾಗದ ಒಗಟು. ನಿಧಿಯ ಎಂಟನೇ ಜನ್ಮದಿನ ಮತ್ತು ತನ್ನ ಇಪ್ಪತ್ತಾರನೇ ಜನ್ಮದಿನ ನಮ್ಮೊಂದಿಗೆ ಮನೆಯಲ್ಲಿ ಆಚರಿಸಿದ ಹುಡುಗ, ತನ್ನ ಜೊತೆಗಾರರೊಂದಿಗೆ ಸಾಗರ ತೀರಕ್ಕೆ ಹೋಗಿ ಬಂದಿದ್ದ. ಅದೇ ರಾತ್ರೆ ವಾಣಿ ‘ಆತನ ವರ್ತನೆಯಲ್ಲಿ ಬದಲಾವಣೆಯಾಗಿದೆ’ ಎಂದಾಗ ನಾನು ಯಾವುದೇ ಒತ್ತಾಸೆಯಿತ್ತಿರಲಿಲ್ಲ. ‘ಏನಿಲ್ಲ, ಎಲ್ಲ ನಿನ್ನ ಭ್ರಮೆ’ ಅಂದಿದ್ದೆ. ಎಂದಿನಂತಿಲ್ಲದೆ, ಮೌನವಾಗಿದ್ದ ಮಗನ ನಡತೆ ಅವಳ ಕರುಳು ಕಾಣದಿದ್ದೀತೆ? ನಿಧಿಯಂತೂ ವಾಣಿಗೇ ಹೆಚ್ಚು ಹೆಚ್ಚು ಅಂಟುತ್ತಿದ್ದಾಳೆ. ಬೆಳೆಯುತ್ತಿರುವ ಹೆಣ್ಣು ಆಕೆ, ಸಹಜವೇನೊ! ಆದರೂ, ಇವನಿಗೇನಾಗಿದೆ? ಮೊದಲಿನಂತೆ ಎಲ್ಲದಕ್ಕೂ ವಾದಿಸುತ್ತಿಲ್ಲ. ಮೊನ್ನೆ-ಮೊನ್ನೆ ಅನ್ನುವ ಹಾಗೆ ಎಲ್ಲರನ್ನು ಕಾಡಿಸಿ, ರೇಗಿಸಿ, ಆಡಿಸುತ್ತಿದ್ದವ ನಾಲ್ಕು ವರ್ಷಗಳಲ್ಲಿ ತೀರಾ ಮೌನಿಯಾಗಿದ್ದು ಸಹಜ ಬದಲಾವಣೆಯೆ? ಏನು ಕೇಳಿದರೂ ಉತ್ತರವಿಲ್ಲ. ಹೇಗೆ ಕೇಳಿದರೂ ಉತ್ತರವಿಲ್ಲ. ಒತ್ತಾಯಿಸಿದರೆ ನಮ್ಮ ನಡುವಿನಿಂದ ಎದ್ದೇ ಹೋಗುತ್ತಾನೆ. ನಿಧಿಯೊಡನೆಯೂ ಯಾವುದೇ ಆಟಗಳಿಲ್ಲ. ಅವಳ ಪಾಠಗಳಲ್ಲಿ ಗಮನವಿಲ್ಲ. ಶಾಲೆಯ ಮೀಟಿಂಗುಗಳಿಗೂ ನಮ್ಮನ್ನೇ ಅಟ್ಟುತ್ತಿದ್ದಾನೆ. ಈ ಎಲ್ಲ ಗಮನಾರ್ಹ ಬದಲಾವಣೆಗಳು ಇತ್ತೀಚೆಗೆ ಅನ್ನುವಂತೆ ನಡೆದಿವೆ. ಯಾಕೆ?
************ ************

ಕಿಶೋರನ ಡೈರಿ ನನ್ನ ಕೈಯ್ಯಲ್ಲಿದೆ. ಓದಲೋ ಬೇಡವೋ ಸಂದಿಗ್ಧ. ವಾಣಿಗೆ ಹೇಳಿದರೆ ನೊಂದುಕೊಂಡಾಳು. ಒಂದು ವಾರದಿಂದ ನಾವ್ಯಾರೂ ಬದುಕಿಯೇ ಇಲ್ಲವೆಂಬಂತೆ ಇದ್ದೇವೆ. ಹಿಂದಿನ ಗುರುವಾರ ಕೆಲಸಕ್ಕೆ ಹೋದ ಹುಡುಗ ಮನೆಗೇ ಬಂದಿಲ್ಲ. ಪೋಲಿಸ್ ಕಂಪ್ಲೇಂಟ್ ಕೊಟ್ಟಾಗಿದೆ. ಅವನ ಸ್ನೇಹಿತರನ್ನು ಸಂಪರ್ಕಿಸಿಯಾಗಿದೆ. ಸಹೋದ್ಯೋಗಿಗಳ ಹೇಳಿಕೆಯಂತೆ, ಅದಕ್ಕೂ ಹಿಂದಿನ ವಾರದಿಂದ ಅವನು ಸರಿಯಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲ. ಗುರುವಾರದಂದು ಆಫೀಸಿಗೇ ಹೋಗಿರಲಿಲ್ಲ. ಈ ಡೈರಿ ನಮ್ಮ ಹಾಸಿಗೆಯಡಿಯಲ್ಲಿ ಇಂದು ಸಿಕ್ಕಿದೆ. ಪೋಲಿಸ್ ಅಧಿಕಾರಿಗಳು ಇಂಥಾದ್ದೇನಾದರೂ ಇದೆಯೇ ಎಂದು ಅವನ ಕೋಣೆಯನ್ನು, ಕಾರನ್ನು, ಎಲ್ಲ ಜಾಲಾಡಿದ್ದರು. ಏನೂ ಸಿಕ್ಕಿರಲಿಲ್ಲ. ಇದೀಗ ಸಿಕ್ಕಿದೆ, ನಮ್ಮ ಕೋಣೆಯಲ್ಲಿ. ನಾನಂತೂ ಈ ವಾರ ಕೆಲಸಕ್ಕೆ ಹೋಗದೆ ಮನೆಯಲ್ಲೇ ಕೂತಿದ್ದೇನೆ. ತಲೆ ಕೆಟ್ಟಿದೆ. ವಾಣಿ ನಿಧಿಯನ್ನು ಶಾಲೆಯಿಂದ ಕರೆತರಲು ಹೋಗಿದ್ದಾಳೆ, ಬರಲು ಇನ್ನೊಂದು ಗಂಟೆ ಬೇಕು. ಅಷ್ಟರಲ್ಲಿ ಈ ಡೈರಿ ಓದಿಯೇ ಬಿಡುತ್ತೇನೆ, ಏನಾದರೂ ಸುಳಿವು ಸಿಕ್ಕೀತು...
************ ************

"ಅಮ್ಮ, ಅಪ್ಪ, ಯಾವಾಗಲೂ ನಿಮ್ಮ ಜೊತೆ ಮಾತಾಡುತ್ತಿದ್ದರೂ ಕೆಲವೊಂದು ವಿಷಯಗಳನ್ನು ನಿಮಗೆ ತಿಳಿಸಲು ಸಾಧ್ಯವೇ ಆಗುತ್ತಿಲ್ಲ. ಇವತ್ತು ನನ್ನ ಹದಿನೆಂಟನೇ ಜನ್ಮದಿನ. ಒಂದು ಮಗುವನ್ನು ದತ್ತು ತೆಗೆದುಕೊಂಡು ಸಾಕುವುದಾಗಿ ನಿಮಗೆ ಹೇಳಿದ್ದೇನೋ ಆಗಿದೆ. ನಿಮ್ಮ ವಿರೋಧ, ಸಿಟ್ಟು, ಅಸಮಾಧಾನ, ಆಶ್ಚರ್ಯ, ಎಲ್ಲವೂ ನನಗೆ ಅರ್ಥವಾಗುತ್ತದೆ. ಆದರೆ, ಯಾಕೆ ಈ ನಿರ್ಧಾರ ಅನ್ನುವುದನ್ನು ಮಾತ್ರ ಮಾತಲ್ಲಿ ನಿಮಗೆ ತಿಳಿಸಿ ಹೇಳಲಾರೆ. ಅದಕ್ಕಾಗಿ ಈ ಡೈರಿ."

"ನಾನು ದತ್ತು ಸ್ವೀಕರಿಸುವ ಮಗು ನನ್ನ ಸ್ನೇಹಿತನದ್ದು. ಅವನು ಮತ್ತವನ ಸ್ನೇಹಿತೆ ವಯಸ್ಸಿನ ಆಮಿಷಕ್ಕೆ ಒಳಗಾಗಿ ಮಗುವಿನ ಹುಟ್ಟಿಗೆ ಕಾರಣರಾಗುತ್ತಿದ್ದಾರೆ. ಕಟ್ಟಾ ಕ್ಯಾಥೋಲಿಕ್ ಕ್ರಿಶ್ಚಿಯನ್ನರಾದ ಅವಳ ಹೆತ್ತವರು ಹೊಂದಾಣಿಕೆ ಮಾಡಿ ಮದುವೆಗೆ ಏರ್ಪಾಡು ಮಾಡೋಣ ಎಂದರೆ ಇವನ ಹೆತ್ತವರಿಗೆ ಒಪ್ಪಿಗೆಯೇ ಇಲ್ಲ. ಜೊತೆಗೆ, ಇವರಿಬ್ಬರಿಗೂ ಇಷ್ಟವಿಲ್ಲ. ತಮ್ಮ ನಡುವೆ ಪ್ರೀತಿಯಿಲ್ಲ, ಆದ್ದರಿಂದ ಮದುವೆ ಸಾಧ್ಯವಿಲ್ಲ ಅನ್ನುವುದು ಇವರ ವಾದ. ಒಂದು ಮಗುವಿಗಾಗಿ ತಮ್ಮಿಬ್ಬರ ಜೀವನ ತಪ್ಪು ದಾರಿಯಲ್ಲಿ ಶುರುವಾಗಬಾರದು ಅನ್ನುವ ಸಮರ್ಥನೆ. ಇಬ್ಬರೂ ಮಾತಾಡಿಕೊಂಡು ಮಗುವನ್ನು ಯಾರಿಗಾದರೂ ದತ್ತು ಕೊಡುವುದೆಂದು ನಿರ್ಧರಿಸಿದ್ದಾರೆ. ಇದರಲ್ಲಿ ನನ್ನದೇನು ಪಾತ್ರ? ‘ನನಗೆ ಮಕ್ಕಳೆಂದರೆ ಅತೀವ ಮಮತೆ. ಈ ಗೆಳೆಯನ ಮಗು ಅನಾಥವಾಗುವುದನ್ನು ಸಹಿಸಲಾರೆ’ ಅಂತೆಲ್ಲ ಹೇಳಿದರೆ ಅದು ಅರ್ಧ ಸತ್ಯ. ಪೂರ್ಣ ಸತ್ಯವನ್ನು ಹೊರಹಾಕಿ ಅರಗಿಸಿಕೊಳ್ಳುವ ಶಕ್ತಿ ನಿಮ್ಮಿಬ್ಬರಿಗೂ, ನನಗೂ ಸದ್ಯಕ್ಕೆ ಇಲ್ಲ. ಅದನ್ನು ಬರೆಯುವ ಮನಶ್ಶಕ್ತಿ ನನಗೂ ಈಗ ಇಲ್ಲ. ಆ ಘಳಿಗೆ ಬಂದಾಗ ಇಲ್ಲೇ ಬರೆಯುವೆ."
***

"ಅಪ್ಪ, ಅಮ್ಮ, ಇಂದು ನನ್ನ ಇಪ್ಪತ್ತನೆಯ ಜನ್ಮ ದಿನ. ಎಲ್ಲವೂ ಎಷ್ಟು ಚೆನ್ನಾಗಿ ಸಾಗುತ್ತಿದೆ. ನಿಧಿ ನಮ್ಮ ಪಾಲಿನ ನಿಧಿಯೇ. ನಿಮಗೆ ಮೊಮ್ಮಗಳಂಥ ಮಗಳು. ನನಗೂ ಆಡಲು ತಂಗಿಯಂಥ ಮಗಳು. ಇದೆಂಥ ವಿಚಿತ್ರ? ನನ್ನ ಕಮ್ಯೂನಿಟಿ ಕಾಲೇಜ್ ಮುಗಿದಿದೆ. ಮುಂದಿನ ವಾರ ನಾನು ಯೂನಿವರ್ಸಿಟಿಗೆ ಹೋಗಲೇಬೇಕು. ಆದರೂ ನನ್ನೆದೆಯೊಳಗೆ ಬೆಚ್ಚನೆ ಬಚ್ಚಿಟ್ಟಿರುವ ಒಂದು ಸತ್ಯವನ್ನು ನಿಮ್ಮ ಮುಂದೆ ಎಳೆದುಹಾಕಲು ನನ್ನಿಂದಾಗುತ್ತಿಲ್ಲ. ನಿಮ್ಮಿಬ್ಬರ ಮುಖದಲ್ಲಿ ನಲಿಯುವ ಸುಖವನ್ನು ಗೀರುಗಾಯದಿಂದ ವಿಕೃತಗೊಳಿಸಲು ಸಾಧ್ಯವಿಲ್ಲ. ಬರೆಯೋಣವೆಂದೇ ಶುರುಮಾಡಿದೆ, ಆಗದು. ಇಂದಿಗೆ ಕ್ಷಮಿಸಿ."
***

"ಅಪ್ಪ, ಅಮ್ಮ, ನಿನ್ನೆ ಸಂಜೆ ನನ್ನ ಗೆಳೆಯರೊಂದಿಗೆ ಸಾಗರ ತೀರಕ್ಕೆ ಹೋಗಿದ್ದಾಗ ಏನೋ ಮಾತು ಮಾತಿನ ನಡುವೆ ನಮ್ಮೊಳಗೆ ವಾಗ್ವಾದವಾಗಿ ಒಬ್ಬ ಗೆಳೆಯ ಏನೇನೋ ಅಂದುಬಿಟ್ಟ. ನಿಧಿ ನನ್ನದೇ ಮಗಳೆಂದು ಹೈ-ಸ್ಕೂಲಿನಲ್ಲಿ ಎಲ್ಲರೂ ಆಗ ಆಡಿಕೊಂಡಿದ್ದಾಗಿ ತಿಳಿಸಿದ. ಅವಳ ನಿಜವಾದ ಅಪ್ಪ, ಅಮ್ಮ ಮತ್ತು ನಾನು ಒಳ್ಳೆಯ ಸ್ನೇಹಿತರಾಗಿದ್ದೆವು, ನಿಜ. ಆದರೆ ಅದಕ್ಕೂ ಮೀರಿದ ಬಾಂಧವ್ಯವಿರಲಿಲ್ಲ. ಅದನ್ನು ಈ ಗೆಳೆಯನಿಗೆ ಹೇಗೆ ವಿವರಿಸಿದರೂ ಆತ ಒಪ್ಪಲಿಲ್ಲ. "ನಿನಗೇನೂ ಸಂಬಂಧ ಇಲ್ಲವಾದರೆ ಆ ಮಗುವನ್ನು ನೀನೇ ಯಾಕೆ ದತ್ತು ತಗೊಂಡೆ? ನೀನಿನ್ನೂ ಕಲಿಯುತ್ತಿದ್ದ ಹುಡುಗ. ಅವರಿಬ್ಬರಿಗೇ ಇಲ್ಲದ ಜವಾಬ್ದಾರಿ ನಿನಗ್ಯಾಕೆ ಬೇಕಿತ್ತು?" ಅವನ ಈ ವಾದಕ್ಕೆ ನನ್ನಲ್ಲಿ ಉತ್ತರವಿದೆ, ಆದರೆ ಕೊಡುವ ಹಾಗಿಲ್ಲ. ನನ್ನೊಳಗೆ ಯಾವುದೋ ಹುತ್ತ ಬೆಳೆಯುತ್ತಿರುವಂತೆ ಅನಿಸುತ್ತಿದೆ. ಒಳಗಿನಿಂದಲೇ ನನ್ನನ್ನು ಕೊರೆಯುತ್ತಿದೆ. ಇದರಿಂದ ಮುಕ್ತನಾಗುವ ದಾರಿ ಸದ್ಯಕ್ಕೆ ಕಾಣುತ್ತಿಲ್ಲ."
***

"ಅಮ್ಮ, ಅಪ್ಪ, ನಿನ್ನೆ ತಾನೇ ನಿಧಿಯನ್ನು ಆರನೇ ತರಗತಿಗೆ, ಮಾಧ್ಯಮಿಕ ಶಾಲೆಯಲ್ಲಿ ಬಿಟ್ಟು ಬಂದೆವಲ್ಲ. ಇನ್ನು ಮೂರು ವರ್ಷಗಳಲ್ಲಿ ಅವಳು ಅವಳ ಹೆತ್ತವರು ಮತ್ತು ನಾನು ಓದಿದ ಹೈ-ಸ್ಕೂಲಿಗೆ ಹೋಗುತ್ತಾಳೆ. ತಾನು ಈ ಮನೆಯ ಮಗಳಲ್ಲವೆಂದು ಅವಳಿಗೆ ತಿಳಿದಿದೆಯಾದರೂ ಅವಳು ತನ್ನ ಹೆತ್ತವರನ್ನು ಹುಡುಕಲು ಇನ್ನೂ ಶುರುಮಾಡಿಲ್ಲ. ಹೈ-ಸ್ಕೂಲ್ ಸೇರಿದಾಗ ಅದೆಲ್ಲ ಬದಲಾಗಬಹುದು. ಅಲ್ಲಿ ಅವರ ಫೋಟೋಗಳಿವೆ. ಅವರಿಬ್ಬರೂ ಶಾಲೆಯ ಮುಂದಾಳುಗಳು. ನನ್ನಂತೆಯೇ ಬುದ್ಧಿವಂತರಾಗಿದ್ದವರು. ಅವರಿಬ್ಬರ ಹೋಲಿಕೆ ನಿಧಿಯಲ್ಲಿ ದಿನವೂ ನಾನು ಕಾಣುತ್ತೇನೆ. ಇಬ್ಬರೊಂದಿಗೂ ನನ್ನ ಸಂಪರ್ಕ ಈಗ ಇಲ್ಲವಾದರೂ ಅವರಿಬ್ಬರಲ್ಲಿ ನಮ್ಮ ವಿಳಾಸ ಇರಬಹುದು. ಯಾವ ಘಳಿಗೆಯಾದರೂ ಅವರು ಇಲ್ಲಿಗೆ ಬರಬಹುದು ಅನ್ನುವ ಯೋಚನೆ ನನ್ನನ್ನು ಕಾಡಿದ್ದು ಇದೆ. ಅದಕ್ಕಾಗಿ ಇಂದು ನಾನು ನಮ್ಮ ಶಾಲೆಯ ಮೂಲಕ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದೆ. ಅವರಿಬ್ಬರೂ ನಮ್ಮ ಪಕ್ಕದ ಊರು, ಫೋಲ್ಸಮ್‍ನಲ್ಲಿ ಬಂದು ನೆಲೆಸಿದ್ದೂ, ಅಲ್ಲಿಯ ಹೈ-ಸ್ಕೂಲಲ್ಲಿ ಶಿಕ್ಷಕರಾಗಿ ಸೇರಿರುವುದೂ, ಇದೇ ವರ್ಷ ಮದುವೆಯಾಗಿರುವುದೂ ತಿಳಿದುಬಂತು. ಮುಂದಿನ ಚಿತ್ರ ನೀವೇ ಊಹಿಸಬಲ್ಲಿರಿ. ಅವರೇನಾದರೂ ಮನಸ್ಸು ಬದಲಾಯಿಸಿ ನಿಧಿಯನ್ನು ತಮಗಾಗಿ ಕೇಳಿಕೊಂಡು ಬಂದರೆ ನಮ್ಮ ಮೂವರ ಸ್ಥಿತಿ ಏನಾದೀತು?"

"ಇವೆಲ್ಲ ಯೋಚನೆಗಳ ನಡುವೆ ನಾನೇ ಅವರನ್ನು ಮಾರುವೇಷದಿಂದ ಹಿಂಬಾಲಿಸಿ, ಅವರ ಬಗ್ಗೆ ತಿಳಿಯುವ ಕೆಲಸಕ್ಕೆ ಯೋಜನೆ ಹಾಕುತ್ತಿದ್ದೇನೆ. ಪತ್ತೇದಾರಿಕೆ ನನ್ನ ವಿಶೇಷತೆಯಲ್ಲ. ನಿಧಿಯನ್ನು ಉಳಿಸಿಕೊಳ್ಳುವತ್ತ ಒಂದು ಯತ್ನ. ಅವಳು ನನ್ನ ಜೀವನದ ಅವಿಭಾಜ್ಯ ಅಂಗವಾಗಿದ್ದಾಳೆ. ನಿಮ್ಮಿಬ್ಬರಿಗೆ ನನ್ನ ಕಡೆಗಿನ ಪ್ರೀತಿಯನ್ನೂ ಅಂಟನ್ನೂ ನಾನೀಗ ಅರ್ಥ ಮಾಡಿಕೊಳ್ಳಬಲ್ಲೆ. ಇದೇ ರೀತಿಯ ಪ್ರೀತಿ, ನಂಟು ಅವಳತ್ತಲೂ ನಿಮಗಿದೆ ಅನ್ನುವುದನ್ನೂ ಅರಿತಿದ್ದೇನೆ. ಅವರೇನಾದರೂ ನಿಧಿಯನ್ನು ಅವರಿಗೇ ಕೊಡಬೇಕೆಂದು ಕೇಳಬಹುದೆಂಬ ಸುಳಿವು ಸಿಕ್ಕರೆ ನಾವು ನಾಲ್ವರೂ ಭಾರತಕ್ಕೆ, ನಿಮ್ಮ ಹಳ್ಳಿ ಕೋಣಂದೂರಿಗೆ ಹೋಗಿಬಿಡುವಾ. ನನಗೆ ನಿಧಿ ಬೇಕು. ನಿಮಗೆ ನಾವಿಬ್ಬರೂ ಬೇಕು. ಅದಕ್ಕಿಂತ ಹೆಚ್ಚಿನದ್ದೇನಿಲ್ಲ. ಹೇಗಿದ್ದರೂ ಇದೇ ಡಿಸೆಂಬರಿಗೆ, ಅಪ್ಪ, ನೀವು ನಿವೃತ್ತರಾಗುತ್ತೀರಿ. ಇನ್ನುಳಿದ ಮೂರು ತಿಂಗಳ ರಜೆ ಪಡೆಯಿರಿ. ಎಲ್ಲರೂ ಹೋಗುವಾ."
***

"ಅಮ್ಮ, ಅಪ್ಪ, ನಾಳೆ ಜೆನ್ನಿ ಮತ್ತು ಆರ್ಯನನ್ನು ಭೇಟಿಯಾಗುವುದಿದೆ. ನನ್ನ ಹುಚ್ಚುತನ ಅಂದುಕೊಳ್ಳಿ. ನನ್ನ ಬುದ್ಧಿವಂತಿಕೆಗೆ, ಸ್ವಂತಿಕೆಗೆ ಮಸಿ ಹಿಡಿದಿದೆ. ಇವರಿಬ್ಬರನ್ನು ಭೇಟಿಯಾಗುತ್ತಿರುವುದೂ ಯಾವುದೋ ಹೆಸರಿನಿಂದ. ನಾನು ನಾನಾಗಿಲ್ಲ. ಆರ್ಯನನ್ನು ದೂರದಿಂದ ಕಂಡಾಗಲೂ ‘ಈತ ನಿಧಿಯ ಅಪ್ಪ’ ಅನ್ನಬಹುದಾಗಿದೆ. ಜೆನ್ನಿಯ ಎತ್ತರ, ಬಿಳುಪು, ಆರ್ಯನ ಕಣ್ಣು, ಮೂಗು ಪಡೆದು ಬಂದಿದ್ದಾಳೆ ನಮ್ಮ ನಿಧಿ. ಇವರಿಬ್ಬರ ಹಿಂದೆ ಗೂಢಚಾರಿಕೆ ಮಾಡಿ ಅವರ ಜೊತೆಗೂ ಏನೋ ಬಾಂಧವ್ಯ ಸೆಳೆಯುತ್ತಿದೆ. ಎಷ್ಟೆಂದರೂ ನಾಲ್ಕು ವರ್ಷ ಜೊತೆಗೇ ಕಲಿತವರು ನಾವು, ಆರ್ಯನ ಜೊತೆ ಇನ್ನೂ ಮೂರು ವರುಷ ಹೆಚ್ಚು. ಧಿಡೀರನೆ ಅವರ ಮುಂದೆ ನಿಂತುಬಿಡಲೇ ಅನ್ನಿಸಿದೆ. ಆಗುತ್ತಿಲ್ಲ. ನಾಳೆ ಭೇಟಿಯಾದಾಗ ಎಲ್ಲವನ್ನೂ ಹೇಳಿಬಿಡಬೇಕು. ಜೊತೆಗೇ ಯಾವುದೇ ಕಾರಣಕ್ಕೂ ನಿಧಿಯನ್ನು ಕೇಳಬೇಡಿ ಅನ್ನಬೇಕು. ಅವರಿಗೂ ನನ್ನೊಳಗೆ ಕಾಡುತ್ತಿರುವ ಗುಟ್ಟಿನ ಪರಿಚಯವಿಲ್ಲ ಅಂದುಕೊಂಡಿದ್ದೇನೆ. ಯಾವುದೇ ಉಪಾಯ ಸಾಗದಿದ್ದಲ್ಲಿ... ಏನು ಮಾಡಲಿ? ಪ್ರೌಢನಾಗಿ ಬಹುಶಃ ಮೊದಲ ಬಾರಿಗೆ ದೇವರ ನೆನಪಾಗುತ್ತಿದೆ. ದೇವರೇ, ಅಪ್ಪಾ, ಅಮ್ಮಾ... ನನ್ನನ್ನು ಹರಸಿ."
************ ************

ಇದು ಕಳೆದ ಬುಧವಾರ ರಾತ್ರೆ ಬರೆದದ್ದು. ಅದೇ ಮರುದಿನ ಆತ ಕಣ್ಮರೆಯಾದದ್ದು. ನನ್ನ ತಲೆ ಓಡಲಿಲ್ಲ. ಮೂಢನಾಗಿದ್ದೆ. ಆತನನ್ನು ಕಾಡುತ್ತಿದ್ದ ಭಯದ ಪರಿಚಯವಾಗಿತ್ತು. ವಾಣಿಗೆ ಪದೇ ಪದೇ ಬೀಳುತ್ತಿದ್ದ ಕನಸು ಅವನ ಭಯದಲ್ಲಿ ಗೂಡು ಕಟ್ಟಿತ್ತು. ಆದರೆ, ಅವನು ಕಾದಿರಿಸಿದ್ದ ಗುಟ್ಟು ಹೊರಬಿದ್ದಿರಲಿಲ್ಲ. ಆ ಗೋಪ್ಯಕ್ಕೂ ಈ ಕಣ್ಮರೆಗೂ ಸಂಬಂಧ ಇರಬಹುದೆ? ತೋಚಲಿಲ್ಲ.

ವಾಣಿ ಮತ್ತು ನಿಧಿ ಬಾಗಿಲತ್ತ ಬರುತ್ತಿರುವ ಸದ್ದು ಕೇಳಿಸಿ ನಮ್ಮ ಕೋಣೆಯೊಳಗೆ ಓಡಿದೆ, ಡೈರಿಯನ್ನು ಮೊದಲಿದ್ದ ಜಾಗದಲ್ಲೇ ಅಡಗಿಸಿದೆ. ಕಿಶೋರ ಪತ್ತೇದಾರಿಕೆ ಮಾಡಹೋಗಿ ಪತ್ತೇದಾರರಿಗೇ ಕೆಲಸ ಕೊಟ್ಟಿದ್ದ. ಇದರಲ್ಲಿ ನಾನು ಮಾಡಬಹುದಾದ್ದು ಏನು? ಸುಮ್ಮನೆ ಕಣ್-ಕಣ್ ಬಿಡುತ್ತಿದ್ದಾಗ ಅಮ್ಮ-ಮಗಳು ಕೋಣೆಯೊಳಗೇ ಬಂದರು. ಏನೋ ಹೇಳುವ ತಯಾರಿಯಲ್ಲಿದ್ದಾರೆಂದು ಅವರ ಮುಖಗಳು ತಿಳಿಸುತ್ತಿದ್ದವು. ವಾಣಿ ಮೊದಲು ಮಾತಾಡಿದಳು, "ನ್ಯೂಸ್ ಕೇಳಿದ್ರಾ?" ಇಲ್ಲವೆಂದು ತಲೆಯಾಡಿಸಿದೆ. ನಿಧಿ ಬಿಕ್ಕಲು ಮೊದಲಿಟ್ಟಳು, "ಕಾರಿನಲ್ಲಿ ರೇಡಿಯೋ ನ್ಯೂಸ್ ಕೇಳಿದೆವು..." ಅಂದಳು. ಯೋಚನೆ ಬೇಡವಾದ ದಿಕ್ಕಿಗೇ ಓಡಿತು. ಕೂಡಲೇ ಹೋಗಿ ಟಿ.ವಿ. ಹಾಕಿದೆ.

ಸ್ಥಳೀಯ ವಾರ್ತೆಗಳಲ್ಲಿ ನಮ್ಮೂರಿನ ಹೊರವಲಯದಲ್ಲಿ ಸುಮಾರು ಮೂವತ್ತರ ಹರೆಯದ ತರುಣನ ದೇಹವೊಂದು ಸಿಕ್ಕಿರುವ ಬಗ್ಗೆ ವಿವರಿಸುತ್ತಿದ್ದರು. ನನಗೇ ಕಣ್ಣು ಕತ್ತಲಿಟ್ಟಿತು. ವಾಣಿ, ನಿಧಿ ನನ್ನ ಮುಖ ನೋಡುತ್ತಿದ್ದರು. ಅವರಿಗಾಗಿ ಇಲ್ಲದ ಧೈರ್ಯ ತಂದುಕೊಂಡೆ. "ಪೊಲೀಸರಿಗೆ ಫೋನ್ ಮಾಡಿ ನೋಡೋಣ. ಕಿಶೋರ ಅಲ್ಲಿ ಹೋಗಿರಲಾರ. ಊರಿಗಿಂತ ಅಷ್ಟು ದೂರ, ಅಂಥಾ ನಿರ್ಜನ ಪ್ರದೇಶದಲ್ಲಿ ಅವನಿಗೆಂಥ ಕೆಲಸ? ಇದು ಅವನಲ್ಲ. ಇಬ್ಬರೂ ಅಳಬೇಡಿ, ಸುಮ್ಮನಿರಿ..." ಏನೇನೋ ಒದರುತ್ತಿದ್ದೆ. ನಮ್ಮ ಪ್ರದೇಶದ ಪೋಲಿಸ್ ಠಾಣೆಗೆ ಕರೆ ಮಾಡಿದೆ. ಅಲ್ಲಿರುವ ಯಾರಿಗೂ ನಿಖರವಾಗಿ ವಿಷಯ ತಿಳಿದಿರಲಿಲ್ಲ, ಅಥವಾ ತನಿಖೆಯ ಅಗತ್ಯದಿಂದಾಗಿ ವಿವರಗಳನ್ನು ಹೇಳುತ್ತಿರಲಿಲ್ಲ. ನಾನೇ ಅಲ್ಲಿಗೆ ಹೊರಟೆ. ವಾಣಿ ಮತ್ತು ನಿಧಿಯನ್ನು ತಡೆಯುವುದು ಕಷ್ಟವಾಗಿತ್ತು. ನಿಧಿ ಇನ್ನೂ ಬಾಲೆ, ಅಲ್ಲಿಗೆಲ್ಲ ಬರಲಾಗದು. ವಾಣಿಯನ್ನು ಒಪ್ಪಿಸಿ ಒಬ್ಬನೇ ಠಾಣೆಗೆ ಹೊರಟೆ.

ನಮ್ಮ ಮನೆಗೆ ಎರಡು ಬಾರಿ ಬಂದಿದ್ದ ಪೋಲಿಸ್ ಅಧಿಕಾರಿಯೇ ಮೊದಲು ಕಣ್ಣಿಗೆ ಬಿದ್ದ. ನನ್ನ ಕರೆಯ ಬಗ್ಗೆ ಅವನಿಗೆ ತಿಳಿದಿಲ್ಲವಾದರೂ ನಾನು ಬಂದ ಉದ್ದೇಶವನ್ನು ಅರ್ಥೈಸಿಕೊಂಡ. ತನ್ನ ಕಾರಿನಲ್ಲೇ ಶವಾಗಾರಕ್ಕೆ ಕರೆದೊಯ್ದ. ತಣ್ಣಗೆ, ಬಿಮ್ಮಗೆ ಕೊರೆಯುತ್ತಿದ್ದ ಶವಾಗಾರದ ಕಾರಿಡಾರಿನಲ್ಲಿ ನಮ್ಮಿಬ್ಬರ ಬೂಟುಗಳ ಸದ್ದು ನನ್ನ ಎದೆಬಡಿತವನ್ನು ಪ್ರತಿಧ್ವನಿಸಿದಂತೆ ಕೇಳಿತು. ಒಂದು ಬಾಗಿಲು ದಾಟಿ ಒಳ ಹೊಕ್ಕಾಗ, ಛಳಿ ಇಮ್ಮಡಿಸಿತು. ಸಾಲು-ಸಾಲು ಎತ್ತರದ ಸ್ಟೀಲ್ ಕವಾಟುಗಳಲ್ಲಿ ಸಣ್ಣ-ಸಣ್ಣ ಖಾನೆಗಳು. ಎಲ್ಲದರ ಹಿಡಿಕೆಗಳಲ್ಲಿ ಕ್ರಮ ಸಂಖ್ಯೆಗಳು. ನಮ್ಮಿಬ್ಬರ ಹೊರತಾಗಿ ಬೇರೆ ಯಾವ ಉಸಿರೂ ಇಲ್ಲದ ಶೈತ್ಯಾಗಾರ. ನನ್ನ ಉಸಿರೇ ಎದೆಯಿಂದ ಹೊರಗೆ ಹಾರಿ ಈ ಖಾನೆಗಳ ದೇಹಗಳಲ್ಲಿ ಸೇರಲು ಯತ್ನಿಸುತ್ತಿದೆ ಅನಿಸಿತು. ಅಷ್ಟರಲ್ಲಿ ಆ ಅಧಿಕಾರಿ ಒಂದು ಖಾನೆಯ ಹಿಡಿಕೆ ಹಿಡಿದು ಎಳೆದ. ಬಿಳಿ ಬಟ್ಟೆ ಮುಚ್ಚಿದ್ದ ದೇಹ ನನ್ನ ಕಣ್ಣೆದುರು ಬರಲಾರಂಭಿಸಿತು. ಎದೆಯ ಮಟ್ಟಕ್ಕೆ ಎಳೆದು, ಮುಖದ ಮೇಲಿನ ವಸ್ತ್ರ ಸರಿಸಲು ಕೈಯಿಟ್ಟ. ನೋಡಲಾಗದೆ ಕಣ್ಣು ಮುಚ್ಚಿಕೊಂಡೆ. ನನ್ನೊಳಗಿನ ನಂಬಿಕೆ, ದೇವರು, ಪ್ರಜ್ಞೆ, ಬುದ್ಧಿ, ವಿವೇಕ... ಎಲ್ಲವೂ ಆ ನಿರ್ವಾತದೊಳಗೆ ಲೀನವಾದಂತೆ ಅನಿಸಿತು. "ಮಿಸ್ಟರ್ ಕೇಶಾವ್, ಈಸ್ ದಿಸ್ ಯುವರ್ ಸನ್?" ಕಣ್ಣು ತೆರೆಯಲೊಲ್ಲದು. ಉಸಿರು ಆಡಲೊಲ್ಲದು. ಹೇಗೆ ನೋಡಲಿ ಈ ಶವವನ್ನು? ನಾನೇ ಶವದಂತಾಗಿದ್ದೆ. ಯಾಕೆ ನನ್ನ ಹೆತ್ತವರು ಕೇಶವನೆಂಬ ನಾಮಕರಣ ಮಾಡಿದರೋ...!

ಕ್ಷಣಗಳಲ್ಲಿ ವಿವೇಕ ಮರಳಿತು. ನಾನೀಗ ಈ ಮುಖ ನೋಡದೆ ಹಿಂದಿರುಗಿದರೆ ವಾಣಿ, ನಿಧಿಯವರ ಮುಖವನ್ನೂ ನೋಡಲಾರೆ ಅನ್ನುವ ಪ್ರಜ್ಞೆ ಮೂಡಿತು. ನಿಧಾನವಾಗಿ ಕಣ್ತೆರೆದು ಎದುರಿನ ಪೇಲವ ನಿರ್ಜೀವದತ್ತ ದೃಷ್ಟಿ ನೆಟ್ಟೆ. ಚೀರಬೇಕೆನಿಸಿತು. ಹೊರಗೆ ಓಡಬೇಕೆನಿಸಿತು. ಮನೆಯವರೆಗೂ ಓಡಿ ಓಡಿ ವಾಣಿಯನ್ನೂ ನಿಧಿಯನ್ನೂ ತಬ್ಬಿಕೊಂಡು ಮನಸಾರೆ ಅತ್ತು ಹಗುರಾಗಬೇಕೆನಿಸಿತು. ಹಾಗೇನೂ ಮಾಡದೆ, ಬಂದ ಬಾಗಿಲತ್ತ ಹೊರಳಿದೆ. ಗದ್ಗದ ಗಂಟಲನ್ನು ಗುರು-ಗುರು ಮಾಡಿ, ಮೆಲ್ಲಗೆ, "ನೋ ಸರ್. ಹೀ ಈಸ್ ನಾಟ್ ಮೈ ಸನ್. ಥಾಂಕ್ಯೂ ಫಾರ್ ಯುವರ್ ಹೆಲ್ಪ್" ಅಂದೆ.

ಮನೆಗೆ ಬಂದು ಪೆಚ್ಚು ನಗು ತೂರಿಸಿ ಅದು ಕಿಶೋರನಲ್ಲವೆಂದು ಸಾರಿದೆ. ನನ್ನೊಳಗೆ ದೈತ್ಯನೊಬ್ಬ ಹೊಕ್ಕಿದ್ದ. ಅದೇ ರಾತ್ರೆ ವಾಣಿಗೆ ತಿಳಿಯದಂತೆ ಕಿಶೋರನ ಡೈರಿಯನ್ನು ಚಿಂದಿ ಚಿಂದಿ ಮಾಡಿದೆ, ಒಂದು ಪುಟದ ಹೊರತಾಗಿ. ನಾವೆಲ್ಲರೂ ನಮ್ಮ ಹಳ್ಳಿ ಕೋಣಂದೂರಿಗೆ ಮರಳುವ ಅವನಾಸೆಯನ್ನು ತೋಡಿಕೊಂಡಿದ್ದ ಪುಟವನ್ನು ನನ್ನ ಪರ್ಸಿನ ಒಳಗೆ ಜೋಪಾನವಾಗಿ ಮಡಚಿಟ್ಟುಕೊಂಡೆ. ವಾಣಿ ಮತ್ತು ನಿಧಿ ಇಬ್ಬರಿಗೂ ಅದರ ಬಗ್ಗೆ ಮನವರಿಕೆ ಮಾಡಿಸಿ ಹಳ್ಳಿಗೇ ಹಿಂದಿರುಗಿದರೆ ಹೇಗೆ ಅನ್ನುವ ಯೋಚನೆ ಕಾಡಲಾರಂಭಿಸಿತು. ಆದರೆ, ನಿಧಿಯನ್ನು ಅಲ್ಲಿಗೆ ಒಗ್ಗಿಸುವುದು ಕಷ್ಟ ಎಂಬ ಅರಿವೂ ಇದೆ. ಮುಂದೇನು ಅನ್ನುವ ಪ್ರಶ್ನಾರ್ಥಕದೊಡನೆ ಕಾದಾಡುತ್ತಾ ದಿನಗಳು ಕಳೆಯುತ್ತಿವೆ.
************ ************
(ಮುಂದಿನ ಭಾಗ.....)

ಸೀಳುನಾಯಿ-- ಭಾಗ ೦೨

(....ಹಿಂದಿನ ಭಾಗ....)
ಡಿಸೆಂಬರ್ ಛಳಿಯೊಡನೆ ನನ್ನ ವೃತ್ತಿ ಜೀವನದ ಕೊನೆಯ ದಿನವೂ ಸೇರಿಹೋಗಿದೆ. ಸುತ್ತ ಹಬ್ಬಿದ ಮೋಡಮಬ್ಬಿನ ಛಳಿಯಲ್ಲಿ ನನ್ನದೇ ಮನಸ್ಸಿನ ಚಿತ್ರ ಮೂಡುತ್ತಿದೆ. ಹೊಸ ವರುಷದ ಮೊದಲ ದಿನ. ನಿರುತ್ಸಾಹವನ್ನು ಮೂರೂವರೆ ತಿಂಗಳಿಂದ ಹಾಸಿಹೊದೆಸಿ ಮಲಗಿಸಿದ್ದ ನಮ್ಮ ಮನೆಗೆ ಬೆಳಗಿನ ಏಳು ಘಂಟೆಗೆ ಒಂದು ಟೆಲಿಫೋನ್ ಕರೆ ಬಂದಿದೆ. ಅತ್ತಲಿಂದ ಹೆಣ್ಣು ದನಿ: "ಹಲ್ಲೋ ಮಿಸ್ಟರ್ ಕೇಶಾವ್, ಅಯಾಮ್ ಜೆನ್ನಿ. ಯುವರ್ ಸನ್ ಕಿಶೋರ್‍ಸ್ ಓಲ್ಡ್ ಫ್ರೆಂಡ್. ಹೀ ಈಸ್ ವಿಥ್ ಅಸ್. ಕ್ಯಾನ್ ಯೂ ಪ್ಲೀಸ್ ಕಂ ಟು ಅವರ್ ಹೌಸ್?" ಅವಳು ಕೊಟ್ಟ ವಿಳಾಸ ಬರೆದುಕೊಳ್ಳಲು ತಡಬಡಾಯಿಸುತ್ತಿದ್ದ ನನ್ನ ಕೈಗೆ ನಿಧಿ ಕಾಗದ ಪೆನ್ಸಿಲ್ ಕೊಡುತ್ತಾಳೆ. ನಾನು ಯಾವುದೋ ಲೋಕದಲ್ಲಿ ಕಳೆದುಹೋಗಿದ್ದೇನೆ.

ಒಂದೂವರೆ ಗಂಟೆಯ ಬಳಿಕ, ಕಾರು ನಮ್ಮ ನಾಲ್ವರನ್ನೂ ಹೊತ್ತು ಫೋಲ್ಸಮ್‍ನಿಂದ ರೋಸ್‍ವಿಲ್‍ನ ನಮ್ಮ ಮನೆಯ ದಾರಿಯಲ್ಲಿದೆ. ಏನೇನೋ ಮಾತುಗಳ ನಂತರ, ವಾಣಿ ಮತ್ತು ಕಿಶೋರ್, ಇದೇ ಜೂನ್‍ನಲ್ಲಿ ನಾವೆಲ್ಲರೂ ಕೋಣಂದೂರಿಗೆ ಹೋಗುವ ಯೋಜನೆಯಲ್ಲಿದ್ದರೆ ನಿಧಿ ಕೇಕೆ ಹಾಕುತ್ತಿದ್ದಾಳೆ. ಅವಳ ಡ್ಯಾಡ್ ಜೊತೆ ಅವಳು ಪ್ರಪಂಚದ ಯಾವ ಮೂಲೆಯಲ್ಲೂ ಇರಬಲ್ಲಳು ಅನ್ನುವುದು ನನಗೆ ಮನವರಿಕೆಯಾಗುತ್ತಿದ್ದಂತೆ ಕಳೆದ ಮೂರೂವರೆ ಕರಾಳ ತಿಂಗಳುಗಳು ನಮ್ಮ ಜೀವನದ ಕ್ಯಾಲೆಂಡರಿನಿಂದ ಮೆಲ್ಲಗೆ ಮರೆಯಾಗುತ್ತವೆ.
************ ************

ಕಿಶೋರ ಮನೆಗೆ ಬಂದದ್ದು ನಮ್ಮ ಪಾಲಿಗೆ ಪವಾಡದಂತೆ ಅನಿಸಿದೆ. ವಾಣಿ ಅವನನ್ನು ಏನೇನು ಕೇಳಿದಳೋ, ಗೊತ್ತಿಲ್ಲ. ನನ್ನ ಪ್ರಶ್ನೆಗಳು ಗಂಟಲಲ್ಲೇ ಒಣಗುತ್ತಿದ್ದವು. ಹೊಸ ವರ್ಷದ ಹುಮ್ಮಸ್ಸು ಕಳೆದು ಸಂಕ್ರಾಂತಿಯ ಸಡಗರ ತುಂಬಿತು. ವಾಣಿ ಹುಗ್ಗಿಯ ತಯಾರಿ ನಡೆಸಿದಳು. ದ್ರಾಕ್ಷಿ, ಗೋಡಂಬಿಗಳ ಖಜಾನೆ ಬರಿದಾಗಿದ್ದು ಗಮನಿಸಿ ಅಂಗಡಿಗೆ ಹೊರಟಳು. ನಿಧಿ ಅವಳ ಬಾಲ. ಮನೆಯಲ್ಲಿ ಅಪ್ಪ-ಮಗ ಇಬ್ಬರೇ. ಕೇಳಿಯೇ ಬಿಡಬೇಕೆಂದು ಪದೇ ಪದೇ ಅವನ ಮುಖ ನೋಡಿದೆ. ನಾಲಗೆ ಮಾತ್ರ ತಳ ಹಿಡಿದಿತ್ತು. ಹಲವಾರು ಕ್ಷಣಗಳ ಬಳಿಕ ಗಂಟಲು ಸರಿ ಮಾಡಿದ ಕಿಶೋರ. ದೃಷ್ಟಿಗಳು ಢಿಕ್ಕಿಯಾದವು, ಹೊರಳಿ ಎದುರಿನ ಗೋಡೆಗಳಲ್ಲಿ ಬೆಳಕು ಕಂಡವು. ಮತ್ತೆ ಒಂದಿಷ್ಟು ಮೌನ; ಅದೆಷ್ಟು ಭಾರ!
"ಅಪ್ಪ, ನನ್ನ ಡೈರಿ ಎಲ್ಲುಂಟು?" ಧ್ವನಿ ಅವನದ್ದಲ್ಲವೇ ಅಲ್ಲ. ನನ್ನ ಒಡಕು ಸ್ವರದ ಗುರು-ಗುರು ಅವನ ಕಿವಿ ಮುಟ್ಟಲಿಲ್ಲ. ಎರಡು ಯುಗ... ಮತ್ತೆ ಅದೇ ಪ್ರಶ್ನೆ. ಈಗ ನನ್ನ ಬಾಯಿ ತೆರೆಯಿತು. "ಚಿಂದಿ ಆಗಿದೆ."
"ಯಾ... ಯಾರು? ಯಾವಾಗ...?"
"ನಾ... ನಾನೇ! ನೀನು... ನೀನು ಬಾರದೆ ಹೋದ ವಾರದ ಮೇಲೆ... ವಾಣಿಗೆ ಗೊತ್ತಿಲ್ಲ.... ನಿಧಿಗೂ...."
"ಯಾಕೆ?"
"ಅದರಲ್ಲಿ ನೀನು ಜೆನ್ನಿ ಮತ್ತು ಆರ್ಯನನ್ನು ಪತ್ತೆ ಮಾಡಿದ್ದು, ಅವರ ಬಗ್ಗೆ ಬರ್ದದ್ದು ಇತ್ತಲ್ಲ, ಅದಕ್ಕೆ. ಪೊಲೀಸರ ಕೈಗೆ ಸಿಕ್ಕಿದ್ರೆ ನಮಗೂ ನಿಧಿಗೂ ಕಷ್ಟ ಅಂತ... ಹಾಗೆ ಮಾಡಿದೆ.... ಆದ್ರೆ.... ನೀನದನ್ನು ನಮ್ಮ ಹಾಸಿಗೆಯಡಿ ಯಾಕಿಟ್ಟದ್ದು?"
"ಆರ್ಯನ ಮನೆಗೆ ಹೊರಡುವ ಮೊದಲು, ಅದನ್ನು ನಿಮ್ಮ ಹಾಸಿಗೆಯಡಿಯಲ್ಲಿಟ್ಟೆ. ನನಗೇನಾದ್ರೂ ಆದ್ರೆ, ಪೋಲೀಸರ ಕೈಗೆ ಸಿಗುವ ಬದಲು ನಿಮ್ಮ ಕೈಗೇ ಸಿಗಲಿ ಅಂತ..."
"ನಿನಗೇನಾಗಿತ್ತು? ನೀನು... ನೀನು ಅಷ್ಟು ದಿನ ಎಲ್ಲಿದ್ದಿ? ಏನ್ ಮಾಡ್ತಿದ್ದಿ?" ಒಳಗಿನ ಗುಮ್ಮ ಹೊರಬಿದ್ದಿತ್ತು.
"ಅಲ್ಲೇ... ಆರ್ಯನ ಮನೆಯಲ್ಲೇ."
"ಅಲ್ಲೇ ಇದ್ಯಾ? ಯಾಕೆ? ಮತ್ಯಾಕೆ ಫೋನ್ ಕೂಡಾ ಮಾಡ್ಲಿಲ್ಲ? ನಮ್ಮನ್ನು ಏನೂಂತ ತಿಳ್ಕೊಂಡಿದ್ದೀ? ಅಥವಾ ನಮ್ಮ ನೆನಪೂ ಬರ್ಲಿಲ್ವಾ? ಎಂಥಾ ಹುಡುಗನೋ ನೀನು? ನಾವಿಲ್ಲಿ ಎಷ್ಟು ನೊಂದುಕೊಂಡೆವು, ಗೊತ್ತುಂಟಾ? ಏನ್... ಏನ್ ಯೋಚನೆ ಮಾಡಿದ್ದಿ ನೀನು?..."
"ಅಪ್ಪಾ... ಹೋಲ್ಡ್ ಆನ್! ಸ್ವಲ್ಪ ನಿಧಾನ! ನಾನು ಅಲ್ಲಿದ್ದದ್ದು ನಿಜ, ಯಾವ ಸ್ಥಿತಿಯಲ್ಲಿದ್ದೆ ಅಂತ ಕೇಳ್ತೀರ?"
"ಯಾಕೆ? ಏನಾಗಿತ್ತು ನಿನಗೆ?"
"ನನಗೆ ಏನೂ ಆಗಿರಲಿಲ್ಲ. ಆದ್ರೆ, ಮನೆಗೆ ಬರುವ ಸ್ಥಿತಿಯಲ್ಲಿ ಇರಲಿಲ್ಲ, ಅಷ್ಟೇ"
"ಯಾಕೆ? ನಿನಗೇನಾದ್ರೂ ಹೊಡೆದಿದ್ರಾ? ಹೆದರಿಸಿದ್ರಾ? ಒಮ್ಮೆ ಫೋನ್ ಮಾಡಿದ್ದಿದ್ರೆ ಪೊಲೀಸ್ ಕರ್ಕೊಂಡೇ ಬರ್ತಿದ್ನಲ್ಲ"
"ಅಪ್ಪಾ, ಪ್ಲೀಸ್! ಸ್ವಲ್ಪ ರಿಲ್ಯಾಕ್ಸ್ ಮಾಡಿ. ನೋಡಿ, ಒಂದೆರಡು ದೊಡ್ಡ ಉಸಿರು ತಗೊಳ್ಳಿ, ನಿಧಾನಕ್ಕೆ...."
"ಏನು ಉಸಿರು ತಗೊಳ್ಳೋದು? ಆ ಮೂರೂವರೆ ತಿಂಗಳಲ್ಲಿ ನಮ್ಮೆಲ್ಲರ ಉಸಿರೂ ಗಂಟಲಲ್ಲೇ ಸಿಕ್ಕಿಕೊಂಡಿತ್ತು, ಗೊತ್ತುಂಟಾ ನಿನಗೆ? ಉಸಿರು ತಗೊಳ್ಬೇಕಂತೆ, ಉಸಿರು!"
"ಅಪ್ಪಾ, ಎಲ್ಲವನ್ನೂ ಹೇಳ್ತೇನೆ. ನಿಮಗೇ ಹೇಳ್ತೇನೆ. ಆದ್ರೆ, ನೀವು ಹೀಗೆ ತಡೀತಾ ಇದ್ರೆ ಹೇಳಲಿಕ್ಕಾಗುದಿಲ್ಲ...."
"ಓ, ನಾನು ತಡೀತಾ ಇದ್ದೇನಾ? ನೀನೊಬ್ಬ ದೊಡ್ಡ ಮನುಷ್ಯ, ನೀನ್ ಮಾತಾಡ್ತ ಇದ್ರೆ ನಾವ್ಯಾರೂ ನಡುವೆ ಮಾತಾಡುವ ಹಾಗಿಲ್ವ?"
"ಮೈ ಗಾಡ್! ಅಪ್ಪ, ಒಂದೈದು ನಿಮಿಷ ಬಿಟ್ಟು ನಿಮ್ಮ ಹತ್ರ ಮಾತಾಡ್ತೇನೆ. ಬರ್ತೇನೆ"
ತನ್ನ ರೂಮಿಗೆ ಹೋದವನ ಬೆನ್ನ ದಿಕ್ಕನ್ನೇ ನೋಡುತ್ತಾ ಕೂತೆ. ಕಳೆದ ಎರಡು ನಿಮಿಷಗಳ ಸಂಭಾಷಣೆ ತಲೆಯೊಳಗೆ ಸುಳಿಯಿತು. ನಾನು ಸಿಟ್ಟಿನ ಕೈಗೆ ಬುದ್ಧಿ ಕೊಟ್ಟದ್ದು ಬೆಳಕಿನಷ್ಟು ನಿಚ್ಚಳವಾಗಿ ಕಂಡಿತು. ಮಗನನ್ನು ಕರೆದು ಕ್ಷಮೆ ಕೋರುವ ಮನಸ್ಸಾದರೂ ಏಳಲಿಲ್ಲ. ಹೇಗೂ ಇನ್ನೈದು ನಿಮಿಷಗಳಲ್ಲಿ ಬಂದೇ ಬರುವವ ಅವನು. ನಾನೇ ಸ್ವಲ್ಪ ನಿರಾಳವಾದರೆ ಸರಿ. ಸೋಫಾದ ಬೆನ್ನಿಗೊರಗಿ ಕಣ್ಣು ಮುಚ್ಚಿದೆ. ಒಪ್ಪಿಕೊಂಡಂತೆ ಬಂದ ಕಿಶೋರ. ನಾನು ಶಾಂತವಾಗಿದ್ದೂ ಉದ್ವಿಗ್ನಗೊಂಡಿದ್ದೆ. ಏನನ್ನು ಕೇಳಲಿದ್ದೇನೋ ಅನ್ನುವ ಆತಂಕ.
"ಅಪ್ಪಾ, ನಿರಾಳವಾಗಿದ್ದೀರ ಈಗ? ನನ್ನ ಕಥೆ ಹೇಳಬಹುದಾ?"
"ಹೇಳಪ್ಪ...." ಅಂದೆ ನಾನು ಶಾಂತವಾಗಿಯೇ. ಅವನಿಗೂ ಅಷ್ಟೇ ಬೇಕಿತ್ತು, ಸಾಕಿತ್ತು. ಶುರುಮಾಡಿದ....
************ ************

ಆ ದಿನ, ಗುರುವಾರ, ಆರ್ಯ, ಜೆನ್ನಿ ಮನೆಗೆ ನಾನು ಹೋದಾಗ ಅವರಿನ್ನೂ ಶಾಲೆಗೆ ಹೊರಟಿರಲಿಲ್ಲ, ಹೊರಡುವ ತಯಾರಿಯಲ್ಲಿದ್ದ ಹಾಗೆಯೂ ಕಾಣಲಿಲ್ಲ. ನನ್ನನ್ನು ನೋಡಿದ ಕೂಡಲೇ, ಆರ್ಯ ತಬ್ಬಿಕೊಂಡು ಕುಣಿದಾಡಿದ, ಅತ್ತುಬಿಟ್ಟ. ಜೆನ್ನಿಗೂ ಖುಷಿಯಾಗಿತ್ತು. ನಾವು ರೋಸ್‍ವಿಲ್‍ನಲ್ಲೇ ಇರಬಹುದು ಅನ್ನುವ ಕಲ್ಪನೆಯೂ ಅವರಿಗೆ ಬಂದಿರಲಿಲ್ಲವಂತೆ. ನಮ್ಮೆಲ್ಲರ ಬಗ್ಗೆ ವಿಚಾರಿಸಿಕೊಂಡರು. ನನ್ನ ಪರ್ಸಿನಲ್ಲಿರುವ ನಿಧಿಯ ಫೋಟೋ ನೋಡಿ ಖುಷಿಪಟ್ಟರು. ಅವರ ಜೊತೆ ನಾನೂ ಮತ್ತೆ ತಿಂಡಿ ತಿನ್ನಲು ಒತ್ತಾಯಿಸಿ ತಿನ್ನಿಸಿದರು. ಅವರ ಪ್ರೀತಿಗೆ ನಾನು ಅಚ್ಚರಿ ಪಟ್ಟುಕೊಂಡೆ. ಅವರನ್ನು ಸಂಶಯಿಸಿ ಅವರ ಹಿಂದೆ ಪತ್ತೇದಾರಿಕೆ ನಡೆಸಿದ್ದನ್ನ ಹೇಳಿಕೊಂಡೆ. ಇಬ್ಬರೂ ಹೊಟ್ಟೆತುಂಬಾ ನಕ್ಕರು. ನನ್ನನ್ನೂ ನಗಿಸಿದರು. ಕಾಲೇಜು ಮುಗಿಸುವ ಹೊತ್ತಿಗೆ ಇಬ್ಬರಿಗೂ ತಂತಮ್ಮ ಆಸೆ-ಆಕಾಂಕ್ಷೆಗಳು, ಹವ್ಯಾಸಗಳು ಒಂದೇ ರೀತಿ ಇರುವುದು ಮನವರಿಕೆಯಾಗಿತ್ತಂತೆ. ಹಾಗಾಗಿ ಮದುವೆಯಾಗುವ ನಿರ್ಧಾರ ಮಾಡಿದರಂತೆ. ಇವನ್ನೆಲ್ಲ ಆಸಕ್ತಿಯಿಂದ ತಿಳಿಸಿದರು. ಬೇರೇನೋ ಕೆಲಸದ ಪ್ರಯುಕ್ತ ಆವತ್ತು ಶಾಲೆಗೆ ರಜೆ ಹಾಕಿದ್ದನ್ನೂ ತಿಳಿಸುವಷ್ಟರಲ್ಲಿ ಅವರಿಬ್ಬರ ಮುಖವೂ ಸಪ್ಪೆಗಟ್ಟಿದ್ದು ನನ್ನ ಗಮನಕ್ಕೆ ಬಂತು.

"ಬೇಡ, ಬಿಡು." ಅನ್ನುತ್ತಾ ಆರ್ಯ ಮೇಜಿನ ಬದಿಯಿಂದ ಎದ್ದಾಗ ಜೆನ್ನಿಯ ಕಣ್ಣುಗಳು ತುಂಬಿದ್ದವು. ನನ್ನ ಎದೆ ಹೊಡೆದುಕೊಳ್ಳುತ್ತಿತ್ತು. ಅವರು ನಿಧಿ ಬಗ್ಗೆ ಪ್ರಸ್ತಾಪಿಸುತ್ತಾರೆಂದೇ ಭಾವಿಸಿಕೊಂಡಿದ್ದೆ. "ಪ್ಲೀಸ್, ಆರ್ಯ, ಜೆನ್ನಿ, ಪ್ಲೀಸ್... ನಿಧಿಯನ್ನು ಮಾತ್ರ ಕೇಳಬೇಡಿ. ಬೇರೇನಾದರೂ ಕೇಳಿ, ಕೊಡ್ತೇನೆ; ಅವಳನ್ನು ಮಾತ್ರ ಕೇಳಬೇಡಿ..." ಅಂದೇಬಿಟ್ಟೆ. ಮುಖ-ಮುಖ ನೋಡಿಕೊಂಡ ಇಬ್ಬರೂ ನಕ್ಕರು."ಅದಲ್ಲ ನಮ್ಮ ಸಮಸ್ಯೆ. ನಿಧಿ ನಿನ್ನ ಮಗಳೇ. ಅವಳನ್ನೇನೂ ಕೇಳುವ ಯೋಚನೆಯಿಲ್ಲ. ನಮ್ಮ ಚಿಂತೆಯೇ ಬೇರೆಯಿದೆ" ಅಂದಳು ಜೆನ್ನಿ. ನನಗೆ ಹೊರೆಯಿಳಿದ ಸಮಾಧಾನದ ಜೊತೆ ಗೆಳೆಯರಿಗೆ ಸಹಾಯ ಮಾಡುವ ಹುರುಪು ಹುಟ್ಟಿತು. ಕಿಟಕಿಯ ಬದಿ ನಿಂತಿದ್ದ ಆರ್ಯನ ಹತ್ತಿರ ಹೋಗಿ ನಿಂತೆ. "ನನ್ನಿಂದ ಏನಾದರೂ ಮಾಡಲು ಸಾಧ್ಯವಿದ್ದರೆ ತಿಳಿಸು, ಮಾಡುತ್ತೇನೆ" ಅಂದೆ. ಆತ ಸುಮ್ಮನೇ ತಲೆಯಾಡಿಸಿದ. ನಮ್ಮ ಕಡೆ ನೋಡುತ್ತಿದ್ದ ಜೆನ್ನಿಯ ಕಣ್ಣುಗಳು ಅರಳಿದವು. ಬೆಳಕು ಮಿನುಗಿದ್ದು ನಮ್ಮಿಬ್ಬರಿಗೂ ಗೋಚರಿಸಿತು."ಏನು ಮಹಾ ಪ್ಲಾನ್ ನಡೀತಿದೆ ನಿನ್ನ ತಲೆಯೊಳಗೆ?" ಆರ್ಯ ಛೇಡಿಸುವ ದನಿಯಲ್ಲಿ ಕೇಳಿದ. ಅಷ್ಟೇ ಸಾಕಾಗಿತ್ತು ಅವಳಿಗೆ. ತಮ್ಮ ಕೋಣೆಯಿಂದ ಫೋಟೋ ಒಂದನ್ನು ತಂದು ಆರ್ಯನ ಮುಂದೆ ಹಿಡಿದಳು. "ಏನಿದರಲ್ಲಿ ವಿಶೇಷ?" ಅವನ ಪ್ರಶ್ನೆಗೆ ಅವಳ ದೃಷ್ಟಿ ನನ್ನ ಕಡೆಗೆ ಹರಿಯಿತು. ಈಗ ಅವನ ಕಣ್ಣುಗಳೂ ಮಿಂಚುತ್ತಿದ್ದವು. ನನಗೇನೋ ವಿಚಿತ್ರ ಅನಿಸತೊಡಗಿತು. ಹತ್ತಿರ ಹೋಗಿ ನೋಡಿದೆ. ನನ್ನದೇ ಫೋಟೋ!? "ಇದೆಲ್ಲಿಂದ ಬಂತು ನಿನ್ನ ಹತ್ರ?" ಕೇಳದಿರಲಾಗಲಿಲ್ಲ. ನಿಧಾನವಾಗಿ ಕುರ್ಚಿಗಳಲ್ಲಿ ಕೂತರು. ನಾನೂ ಒಂದು ಕುರ್ಚಿ ಆರಿಸಿಕೊಂಡೆ. ಒಂದೆರಡು ಕ್ಷಣಗಳ ಮೌನದ ಬಳಿಕ ಆರ್ಯ ಮತ್ತು ಜೆನ್ನಿ ಜೊತೆ ಜೊತೆಯಾಗಿ ಹೇಳಲು ಶುರುಮಾಡಿದರು...
************ ************

"ಇದು ನಿನ್ನ ಫೋಟೋ ಅಲ್ಲ, ಆರ್ಯಂದು. ನಾವು ಕಾಲೇಜಿನ ಕೊನೆ ವರ್ಷದಲ್ಲಿದ್ದಾಗ ತೆಗೆದದ್ದು. ನಿನಗೀಗ ಇರುವ ಹಾಗೇ ದಟ್ಟನೆ ಮೀಸೆ, ಫ್ರೆಂಚ್ ಗಡ್ಡ ಆಗ ಅವನಿಗಿತ್ತು. ನೀನೀಗ ಅವನ ಹಾಗೇ ಇದ್ದೀ..."
"ಸುಮ್ನೆ ಸುತ್ತಿ ಬಳಸಿ ಮಾತಾಡುದು ನನಗಿಷ್ಟ ಇಲ್ಲ, ನೇರವಾಗಿ ವಿಷಯ ಹೇಳ್ತೇನೆ, ಕೇಳು... ಆಗ, ಫೀನಿಕ್ಸ್ ಕಾಲೇಜ್ ಕ್ಯಾಂಪಸ್ಸಲ್ಲಿ ಒಬ್ಳು ಗಂಡುಬೀರಿ, ಷೆರೀನ್, ನನ್ನ ಮೇಲೆ ಕಣ್ಣಿಟ್ಟಿದ್ದಳು. ಹೇಗಾದ್ರೂ ನನ್ನನ್ನು ವಶಪಡಿಸಿಕೊಳ್ಳಬೇಕು ಅಂತ ಅವಳ ಪ್ರಯತ್ನ. ಅದಕ್ಕೆ ನಾನು ಒಳಗಾಗಿರಲಿಲ್ಲ. ಜೆನ್ನಿ ಬಗ್ಗೆ ಏನೆಲ್ಲ ಅಪಪ್ರಚಾರ ಮಾಡಿದ್ಲು. ಅದನ್ನೂ ನಾವಿಬ್ಬರೂ ಲೆಕ್ಕಿಸಿರಲಿಲ್ಲ. ಕೊನೆಗೊಂದು ದಿನ, ಕಾಲೇಜು ಮುಗಿದ ವಾರದಲ್ಲಿ, ತಾನು ಗರ್ಭಿಣಿ, ನಾನು ಆ ಮಗುವಿನ ಅಪ್ಪ ಅಂತಲೂ ಗೋಳಾಡುತ್ತಾ ನಮ್ಮ ಅಪಾರ್ಟ್‍ಮೆಂಟಿಗೆ ಬಂದಳು. ನಾವಿಬ್ಬರೂ ಹರಟೆ ಹೊಡೀತಾ ಮನೆ ಖಾಲಿ ಮಾಡ್ತಾ ಇದ್ದೆವು. ಜೆನ್ನಿ ಅವಳ ಮಾತನ್ನು ಏನೇನೂ ನಂಬಿರಲಿಲ್ಲ. ಆದ್ರೂ ನನಗೆ ಗಾಬರಿಯಾಗಿತ್ತು. ಹೇಗೇ ಹೇಳಿದರೂ ಒಪ್ಪುವ ಸ್ಥಿತಿಯಲ್ಲಿ ಅವಳಿರಲಿಲ್ಲ. ನಮಗೂ ತಡೆಯಲಾಗದೆ, ಹೋಗು ಕೋರ್ಟಿಗೆ ಅಂದೆವು. ಆಗ ಸುಮ್ಮನಿದ್ದವಳು, ಈಗ ವಾರದ ಹಿಂದೆ, ಅವಳ ಊರು ಡೇಟನ್‍ನಿಂದ ಕೋರ್ಟ್ ನೋಟೀಸ್ ಕಳಿಸಿದ್ದಾಳೆ. ಅವಳನ್ನು ನಂಬಿಸಿ ಮೋಸ ಮಾಡಿದ್ದೇನೆ, ಮಗುವಿನ ಜವಾಬ್ದಾರಿ ನಾನು ಹೊರಬೇಕು ಅಂತೆಲ್ಲ ಹೇಳಿದ್ದಾಳೆ. ಡಿ.ಎನ್.ಎ. ಪರೀಕ್ಷೆಗೆ ನನ್ನದೇನೂ ತಕರಾರಿಲ್ಲ; ಆದ್ರೆ ಅವಳು, ‘ಮಗುವಿಗೆ ಸೂಜಿ ಚುಚ್ಚೋದಕ್ಕೂ ಬಿಡೋದಿಲ್ಲ, ಅದಕ್ಕೆ ತಾನು ತಯಾರಿಲ್ಲ’ ಅಂತೆಲ್ಲ ಹಾರಾಡ್ತಾಳೆ. ಕಳೆದ ವಾರ ಎರಡು ಬಾರಿ ಅವಳ ಲಾಯರ್ ಹತ್ರ ಮಾತಾಡಿದ್ದಾಗಿದೆ. ಪಟ್ಟು ಹಿಡಿದು ನನ್ನನು ಅವಳ ಕಡೆ ಎಳಿಯೋದಕ್ಕೇ ಮಾಡಿರೋ ತಂತ್ರ ಇದು ಅಂತ ನಮಗನಿಸಿದೆ. ಹೊರಬರುವ ದಾರಿ ಮಾತ್ರ ನಮಗೆ ಕಾಣುತ್ತಿಲ್ಲ. ಇವತ್ತು ನಮಗೊಬ್ಬ ಲಾಯರನ್ನು ಹುಡುಕಿ, ಅವರ ಹತ್ರ ಹೋಗಬೇಕು ಅಂತ ರಜೆ ಹಾಕಿದ್ದೇವೆ..."

"ಇದೆಲ್ಲ ಆಗಿ ಎಷ್ಟು ಸಮಯ ಆಗಿದೆ? ಗ್ರ್ಯಾಡ್-ಕಾಲೇಜಿನ ನಂತ್ರ ಅಂದ್ರೆ ಸುಮಾರು ಎರಡು ವರ್ಷದ ಹಿಂದೆ?"
"ಹೌದು, ಎರಡು ವರ್ಷ. ಈಗ ಮಗುವಿಗೆ ಒಂದೂವರೆ ವರ್ಷ ಅಂದಿದ್ದಾಳೆ."
"ಈ ಎರಡು ವರ್ಷಗಳಲ್ಲಿ ನೀವಿಬ್ಬರೂ ಅವಳನ್ನು ಸಂಪರ್ಕಿಸಿಲ್ಲ, ಅಥವಾ ಅವಳೂ ನಿಮ್ಮನ್ನ ಸಂಪರ್ಕಿಸಿಲ್ಲ. ಆದರೂ ಅವಳಿಗೆ ನಿಮ್ಮ ಇಲ್ಲಿಯ ವಿಳಾಸ ಹೇಗೆ ಗೊತ್ತು?"
"ಕಾಲೇಜ್ ಅಲ್ಯುಮ್ನಿ ಪಟ್ಟಿ. ಎಲ್ಲವೂ ಆನ್-ಲೈನ್. ಗೋಪ್ಯತೆ ಎಲ್ಲಿ?" ಜೆನ್ನಿಯ ಸ್ವರ ನಡುಗುತ್ತಿತ್ತು.
"ಹ್ಮ್... ಈಗ ನನ್ನಿಂದ ನಿಮಗೆ ಹೇಗೆ ಸಹಾಯ ಬೇಕಾಗಿದೆ? ನಾನು ಏನು ಮಾಡಬಹುದು? ಜೆನ್ನಿ, ಯಾಕೆ ಆ ಫೋಟೋ ತಂದದ್ದು?"
"ನಿನಗೆ ಬೇಕಾದ ವಿವರಗಳನ್ನೆಲ್ಲ ನಾವಿಬ್ಬರೂ ತಿಳಿಸುತ್ತೇವೆ. ನೀನು ಮತ್ತು ಜೆನ್ನಿ, ಅಲ್ಲಿಗೆ ಹೋಗಿ ಈ ಕೇಸ್ ಮುಗಿಸಿಕೊಂಡು ಬರಬೇಕು."
"ನೀನೇ ಯಾಕೆ ಹೋಗಬಾರದು? ಹೇಗೂ ನಿಮ್ಮಿಬ್ಬರಿಗೆ ನಿನ್ನ ಮೇಲೆ ನಂಬಿಕೆಯುಂಟು. ನಿನಗೇನು ಕಷ್ಟ?"
"ಇಷ್ಟೆಲ್ಲ ಹುನ್ನಾರ ಮಾಡಿದವಳು ಹೇಗಾದ್ರೂ ನನ್ನ ಡಿ.ಎನ್.ಎ. ಕೂಡಾ ಸಂಪಾದಿಸಬಹುದು. ಡೇಟನ್ ಅವಳದ್ದೇ ಊರು. ಅವಳ ಸ್ನೇಹಿತರೇ ಎಲ್ಲ ಕಡೆ ಇದ್ದಾರು. ಅವಳ ಅಪ್ಪನೇ ಲಾಯರ್. ಅವರಿಗೆ ಅಲ್ಲಿ ಎಲ್ಲರ ಪರಿಚಯವೂ ಇರಬಹುದು. ಅಲ್ಲಿಯ ಡಾಕ್ಟರ್, ನರ್ಸ್, ಎಲ್ಲರೂ ಅವರಿಗೆ ಗೊತ್ತಿರುವವರೇ ಇರುತ್ತಾರೆ. ಅವರಿಗೆ ಬೇಕಾದ ಹಾಗೆ ಕೆಲಸ ನಡೆಸಿಕೊಳ್ಳಬಹುದು. ಅದಕ್ಕೇ, ನನ್ನ ಬದಲು ನೀನೇ ಹೋದ್ರೆ, ಜೆನ್ನಿ ಜೊತೆ. ಆಗ, ಅವಳಿಗೆ ಸೋಲು ಖಂಡಿತ. ಅವಳಿಗೆ ಬೇಕಾದ ನನ್ನ ಡಿ.ಎನ್.ಎ. ಸಿಗುದಿಲ್ಲ, ಅಲ್ವಾ?"
"ಹಾಗಲ್ಲ, ಆರ್ಯ. ಮೋಸ ಮಾಡಲೇಬೇಕಂದ್ರೆ ಅವಳು ಹೇಗಾದ್ರೂ ಮೋಸ ಮಾಡಬಹುದಲ್ವಾ? ನಾನು ನೀನೇ ಆಗಿ, ನಿನ್ನ ಹೆಸರಲ್ಲಿ ಹೋಗುತ್ತಿರುವಾಗ, ನನ್ನ ಡಿ.ಎನ್.ಎ.ಯನ್ನೇ ಮಗುವಿಗೆ ಹೊಂದುತ್ತದೆ ಅಂತ ಹೇಳಿಸಬಹುದಲ್ವಾ?"
"ಜೆನ್ನಿ, ನಮಗೆ ಎರಡು ನಿಮಿಷ ಏಕಾಂತ ಬೇಕು. ಸ್ವಲ್ಪ ಹೊರಗೆ ಹೋಗ್ತೀಯಾ?" ಆರ್ಯ ಕೇಳಿದ. ಅವಳು ತಮಾಷೆಯಾಗಿ ಹುಬ್ಬು ಹಾರಿಸುತ್ತಾ ಕತ್ತು ಕೊಂಕಿಸುತ್ತಾ ಮೇಲಿನ ಕೋಣೆಗೆ ಹೋದಳು. ಆರ್ಯ ನನ್ನ ಪಕ್ಕದ ಕುರ್ಚಿಯಲ್ಲಿ ಕೂತು, ನನ್ನ ಮಂಡಿಯ ಮೇಲೆ ಕೈಯಿಟ್ಟ.
"ಏನ್ ನಡೀತಾ ಉಂಟು ಆರ್ಯ? ನನ್ನಿಂದ ನಿನಗೆ ಎಂಥಾ ಸಹಾಯ ಬೇಕಾಗಿದೆ, ಬಿಡಿಸಿ ಹೇಳು."
"ಕಿಶ್, ನಿನ್ನ ಸ್ನೇಹಿತ ನಾನು. ಆರನೇ ತರಗತಿಯಿಂದಲೂ ಜೊತೆಗೇ ಓದಿದ್ದೇವೆ. ನಿನ್ನ ಬಗ್ಗೆ ನನಗೆ ತುಂಬಾ ಗೊತ್ತುಂಟು. ಈ ವಿಷಯದಲ್ಲಿ ನೀನು ಮಾಡಬಹುದಾದ ಸಹಾಯ ಬರೀ ಡಿ.ಎನ್.ಎ. ಬದಲಾಯಿಸುವ ಉದ್ದೇಶದ್ದಲ್ಲ. ನಿನ್ನ ಒಳಗಿನ ಗುಟ್ಟು ನನಗ್ಗೊತ್ತುಂಟು. ಅದನ್ನು ಉಪಯೋಗಿಸಿಕೊಳ್ತಿದ್ದೇನೆ ಅಂತಲ್ಲ. ಆದ್ರೆ, ನೀನು ಮಾತ್ರ ನನ್ನನ್ನು ಆ ರಾಕ್ಷಸಿಯ ಕೈಯಿಂದ ಉಳಿಸಬಹುದು. ಮಾಡ್ತೀಯ?"
ಗೆಳೆಯನ ಈ ಮೆಲುದನಿಯ ಅಂಗಲಾಚುವಿಕೆ ನನ್ನೊಳಗೆ ಸಂಕೋಚದ ಜೊತೆಗೇ ಬಾಂಧವ್ಯವನ್ನೂ ಎಬ್ಬಿಸಿತು.
"ನನ್ನ ತೊಂದರೆಯ ಅರಿವಿದ್ದೇ ನಿಧಿಯನ್ನು ನನಗೆ ಕೊಟ್ಟಿಯಾ ನೀನು? ಜೆನ್ನಿಗೆ ಈ ವಿಷಯ ಗೊತ್ತುಂಟಾ?" ನನ್ನ ಪ್ರಶ್ನೆಗೆ ಸುಮ್ಮನೇ ಹೌದೆಂದು ತಲೆಹಾಕಿದ. ಇಬ್ಬರೂ ಕೆಲವಾರು ಕ್ಷಣ ಮೌನವಾಗಿಯೇ ಇದ್ದೆವು. "ನಾನು ಮನೆಗೊಮ್ಮೆ ಫೋನ್ ಮಾಡಬೇಕು" ಅಂದಾಗ ಆರ್ಯ ಮತ್ತೂ ಗಂಭೀರನಾದ.
"ಬೇಡ ಕಿಶ್. ನೀನು ಆಗ ಹೇಳಿದ ವಿವರಗಳ ಪ್ರಕಾರ, ಮನೆಯಲ್ಲಿ ಹೇಳದೆ ಬಂದಿದ್ದೀ ಅಂತ ನನಗೆ ಗೊತ್ತಾಯ್ತು. ಈಗ ಹೇಳಿದ್ರೆ, ನಿನ್ನ ಅಪ್ಪ-ಅಮ್ಮ ಮತ್ತು ನಿಧಿ, ಎಲ್ಲರಿಗೂ ಇದನ್ನು ವಿವರಿಸಿ ಹೊರಡಬೇಕಾಗುತ್ತದೆ. ಇದು ತುಂಬಾ ರಹಸ್ಯವಾಗಿ ನಡೆಯಬೇಕಾದ ವ್ಯವಹಾರ. ಕಾನೂನು ರೀತ್ಯಾ ನಾವು ಮಾಡ್ತಿರುವುದು ಅಪರಾಧ, ಗೊತ್ತುಂಟಲ್ಲ ನಿನಗೆ. ಇದರಲ್ಲಿ ನಾವು ಮೂವರಲ್ಲದೆ ಬೇರೆ ಯಾರೂ ಶಾಮೀಲಾಗುವುದು ನಮಗಿಷ್ಟವಿಲ್ಲ. ಇದಕ್ಕೆ ಒಪ್ಪಿಗೆಯಿದ್ದರೆ ಮಾತ್ರ ಮುಂದುವರಿಯುವ. ಇಲ್ಲದಿದ್ದರೆ ನಾವಿಬ್ಬರೇ ಇದನ್ನ ನಿಭಾಯಿಸ್ತೇವೆ. ನೀನು ನಿನ್ನ ಪಾಡಿಗೆ ನಡೆದುಬಿಡು, ನಿನಗೆ ಇದೊಂದು ನಿಬಂಧನೆ ಹಾಕಬೇಕಾಗಿದೆ. ಕ್ಷಮಿಸು."
ಎರಡು ಕ್ಷಣ ಯೋಚಿಸಿದಾಗ ಅವನ ನಿಬಂಧನೆಯ ಒಳತಿರುಳು ನನ್ನ ಅರಿವಿಗೆ ಬಂತು. "ಹಾಗಾದ್ರೆ, ಈ ಕೇಸ್ ಮುಗಿಯುವತನಕ ನೀನು ಶಾಲೆಗೂ ಹೋಗುವ ಹಾಗಿಲ್ಲ. ಏನು ಮಾಡ್ತೀ?"
"ಗೃಹಬಂಧಿ ಥರಾ ಇರ್ತೇನೆ. ಏನು ಮಹಾ? ಒಂದು ವಾರದಲ್ಲಿ ಮುಗೀಬಹುದು. ಮತ್ತೆ ನಿನ್ನ ದಾರಿ ನಿನಗೆ, ನಮ್ಮ ದಾರಿ ನಮಗೆ. ಸ್ನೇಹ ಮಾತ್ರ ಮೂವರಿಗೂ." ಅಂದ ಅರೆನಗುತ್ತಾ. ಹೌದೆನ್ನಿಸಿತು.
"ಒಂದು ವಾರದಲ್ಲಿ ಮುಗಿಯುವುದಾದ್ರೆ ನಾನು ಸಿದ್ಧ. ಆದ್ರೂ... ಮನೆಗೊಂದು ಫೋನ್ ಮಾಡಿ ನಾನು ಸದ್ಯ ಮನೆಗೆ ಬರ್ಲಿಕ್ಕಾಗುದಿಲ್ಲ ಅಂತಲಾದರೂ ಹೇಳ್ಬೇಕಾಗ್ತದೆ. ಇಲ್ಲಾಂದ್ರೆ, ಅಪ್ಪ, ಅಮ್ಮ, ನಿಧಿ ಗಾಬರಿಯಾಗ್ತಾರೆ..."
"ನೀನು ಬರ್ಲಿಕ್ಕಾಗುದಿಲ್ಲ ಅಂದ್ರೆ- ಯಾಕೆ, ಏನು, ಎತ್ತ- ಪ್ರಶ್ನೆಗಳನ್ನು ಕೇಳ್ತಾರೆ, ಉತ್ತರಿಸದೆ ಇರ್ತೀಯಾ? ಸುಳ್ಳು ಹೇಳ್ತೀಯಾ? ಏನು ಮಾಡ್ತಿ?"
ಆರ್ಯನ ಮೊನಚುಕಣ್ಣುಗಳಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಸ್ನೇಹ ಮತ್ತು ಸಂಸಾರ- ಇವೆರಡರಲ್ಲಿ ಈ ಕ್ಷಣ ಒಂದನ್ನು ತಾತ್ಕಾಲಿಕವಾಗಿ ಆರಿಸಿಕೊಳ್ಳಬೇಕಾಗಿತ್ತು. ಬರುವ ಪ್ರಶ್ನೆಗಳಿಗೆ ಉತ್ತರ ಕೊಡದೇ ಇರುವುದಾಗಲೀ, ಸುಳ್ಳು ಹೇಳುವುದಾಗಲೀ ನನ್ನಿಂದಾಗದ ಕೆಲಸಗಳು. ಈ ಯೋಚನೆಗಳಲ್ಲಿ ಮುಳುಗಿದ್ದಾಗ ಅವನೇ, "ಬೇಡ, ಬಿಡು. ನಿನಗ್ಯಾಕೆ ತೊಂದರೆ? ನಾವೇ ಹೇಗಾದ್ರೂ ಪರಿಹರಿಸಿಕೊಳ್ತೇವೆ" ಅಂದ. ಅದ್ಯಾವಾಗಲೋ ಕೆಳಗೆ ಬಂದು ಆರ್ಯನ ಹಿಂದೆ ನಿಂತಿದ್ದ ಜೆನ್ನಿಯ ಕಣ್ಣುಗಳು ತುಂಬಿ ನಿಂತಿದ್ದವು. ನನಗೆ ನಿಧಿಯ ನೆನಪಾಯ್ತು. ಆ ಪುಟ್ಟ ಕೂಸನ್ನು ನನ್ನ ಮಡಿಲಿಗೆ ಹಾಕಿದ್ದ ಇವರನ್ನು ಈಗ ಅವರ ಪಾಡಿಗೆ ಬಿಟ್ಟುಬಿಡಲು ಸಾಧ್ಯವಾಗಲಿಲ್ಲ. ಒಪ್ಪಿಕೊಂಡೆ. ಅದೇ ಸಂಜೆ ಆರ್ಯ ಮತ್ತು ಜೆನ್ನಿ ವಾರಕ್ಕಾಗುವಷ್ಟು ಸಾಮಾನುಗಳನ್ನು ಹೊತ್ತು ತಂದು ಆರ್ಯನ ಗೃಹಬಂಧನಕ್ಕೆ ತಯಾರಾದರು. ಅವರಿಗೆ ಒಪ್ಪಿಗೆಯಾದ ಒಬ್ಬ ಲಾಯರನ್ನು ಫೋನಿನಲ್ಲೇ ಮಾತಾಡಿಸಿದರು. ಅವರನ್ನೂ ಮೂರನೇ ದಿನ ಡೇಟನ್‍ನಲ್ಲಿ ಭೇಟಿಯಾಗಲು ತಿಳಿಸಿ ವಿಶ್ರಮಿಸಿದೆವು. ನಾನು ಅವರ ಮನೆಗೆ ಬಸ್ಸಿನಲ್ಲಿ ಹೋಗಿದ್ದರಿಂದ ನನ್ನ ಕಾರನ್ನು ಮನೆ ತಲುಪಿಸುವ ಕೆಲಸವಿರಲಿಲ್ಲ.
************ ************

ಮರುದಿನವೇ ಜೆನ್ನಿ ಮತ್ತು ನಾನು ಡೇಟನ್ ಕಡೆ ಹೊರಟೆವು. ನೆವಾಡದ ಕಾರ್ಸನ್ ಸಿಟಿಯಿಂದ ಹೈವೇ ಐವತ್ತರಲ್ಲಿ ಹತ್ತು ಮೈಲಿ ಪೂರ್ವಕ್ಕೆ ಇದ್ದ ಸಣ್ಣ ಊರು. ದಾರಿಯುದ್ದಕ್ಕೂ ಜೆನ್ನಿ ಹಲವಾರು ವಿವರಗಳನ್ನು ನನ್ನ ತಲೆಗೆ ತುಂಬುತ್ತಿದ್ದಳು. ಯಾರಿಗೂ ಸಂಶಯ ಬರಬಾರದೆಂದು ಹೋಟೆಲಿನಲ್ಲಿ ಒಂದೇ ಕೋಣೆಯನ್ನು ಹಿಡಿದಿದ್ದೆವು. ರಾತ್ರೆ ನಾನು ಸ್ಲೀಪಿಂಗ್ ಬ್ಯಾಗಿನೊಳಗೆ ತೂರಿಕೊಂಡೆ. ಮರುದಿನ ಸುಮ್ಮನೆ ಊರಿನ ಬೀದಿಗಳಲ್ಲಿ ಸುತ್ತಾಡಿದೆವು. ಸುತ್ತಮುತ್ತ ಒಂದಿಷ್ಟು ಪರಿಚಯ ಮಾಡಿಕೊಂಡೆವು. ರೆಸ್ಟಾರೆಂಟುಗಳಲ್ಲಿ ತಿನ್ನದೆ ಟೇಕ್-ಔಟ್ ಊಟಗಳನ್ನು ಪಡೆದೆವು. ಅದರ ಮಾರನೇ ದಿನ ನಮ್ಮ ಲಾಯರ್ ಮಿಸ್ಟರ್ ಸ್ಟೀವನ್ಸನ್ ಜೊತೆ ಭೇಟಿಯಾಗಿ, ಅವರೊಂದಿಗೆ ಎಲ್ಲ ವಿವರಗಳನ್ನು ಹಂಚಿಕೊಳ್ಳಲಾಯಿತು. ಈತನ ಜೊತೆ ಮೊದಲು ಭೇಟಿಯಾಗದೇ ಇದ್ದದ್ದು ಅನುಕೂಲವೇ ಆಗಿತ್ತು. ಅವನಿಗೂ ನಾನು ಆರ್ಯ ಅಲ್ಲವೆಂದು ಸಂಶಯ ಬರಲಿಲ್ಲ. ನಾವಿಬ್ಬರೂ ಪ್ರೇಮಿಗಳಂತೆ ಕೈ-ಕೈ ಹಿಡಿದು ಸುತ್ತಾಡುತ್ತಿದ್ದೆವು. ಆದಷ್ಟೂ ಎಲ್ಲರ ದೃಷ್ಟಿಗೆ ನಾನು ಆರ್ಯನಂತೆ ತೋರಿಸಿಕೊಳ್ಳುತ್ತಿದ್ದೆ. ಅವನದ್ದೇ ಡ್ರೈವರ್ಸ್ ಲೈಸೆನ್ಸ್ ಕೂಡಾ ಪಡೆದು ಬಂದಿದ್ದೆ. ಕ್ರೆಡಿಟ್ ಕಾರ್ಡ್ ಕೊಡಬೇಕಾದಲ್ಲಿ ಮಾತ್ರ ಜೆನ್ನಿ ವ್ಯವಹರಿಸುತ್ತಿದ್ದಳು. ಆದರೂ ಅವನ ಸಹಿಯನ್ನೂ ಅಭ್ಯಾಸ ಮಾಡಿಕೊಂಡಿದ್ದೆ, ಜೆನ್ನಿಯಿಂದ ಶಹಬ್ಬಾಸ್-ಗಿರಿ ಪಡೆದಿದ್ದೆ.

ಇದಾಗಿ ಮಾರನೇ ದಿನ ಕೋರ್ಟ್-ಕಟ್ಟೆ ಹತ್ತಿದೆವು. ಅಲ್ಲಿಗೆ ತನ್ನ ಅಪ್ಪ ಮತ್ತು ಮಗುವಿನ ಜೊತೆ ಬಂದಿದ್ದಳು ಷೆರೀನ್. ಕಂಡಕೂಡಲೇ ಗುರುತು ಹತ್ತಿತು. ಅವಳೂ ನಮ್ಮತ್ತ ನೋಡಿ ಕತ್ತು ಕೊಂಕಿಸಿ ನಕ್ಕಳು. ನಮ್ಮ ಕಡೆ ಮಾಟವಾಗಿ ನಡೆದು ಬಂದು, ನನ್ನ ಮುಂದೆ ಬಾಗಿ ನಿಂತು, "ಹಾಯ್ ಹ್ಯಾಂಡ್ಸಮ್, ಮದುವೆ ಆದಮೇಲೆ ಸ್ವಲ್ಪ ದಪ್ಪಗಾಗಿದ್ದೀಯಲ್ವ?" ಅಂದವಳು ಜೆನ್ನಿ ಕಡೆ ತಿರುಗಿ, "ಏಯ್ ಬ್ಯೂಟೀಕ್ವೀನ್, ಅವನಿಗೆ ಸರಿಯಾಗಿ ವ್ಯಾಯಾಮ ಮಾಡಿಸುತ್ತಿಲ್ಲವಾ ನೀನು?" ಅಂತ ಕಣ್ಣು ಹೊಡೆದು, ವಕ್ರವಾಗಿ ತುಟಿತೆರೆದಳು. ಅವಳ ಮಾತಿನ, ನಡಿಗೆಯ ಶೈಲಿಗೆ ನನಗೇ ಕಿರಿಕಿರಿಯಾಗುತ್ತಿತ್ತು. ಅವಳ ಅಪ್ಪನೂ ಹತ್ತಿರ ಬಂದು ನಮ್ಮಿಬ್ಬರ ಮತ್ತು ನಮ್ಮ ಲಾಯರ ಕೈಕುಲುಕಿದ. ಅವನ ನಡತೆಯಲ್ಲಿ ಅದೇನೋ ಒಂದು ರೀತಿಯ ಅಹಂಕಾರ, "ನಾನ್ಯಾರೂಂತ ನಿಮಗೆ ತಿಳಿಯುತ್ತೆ" ಅನ್ನುವಂಥಾ ಪೊಗರು ಕಾಣಿಸಿತು.

ಸ್ವಲ್ಪ ಹೊತ್ತಿಗೆ ಬಂದ ಜಡ್ಜ್, ಯಾವುದೇ ಹಿನ್ನೆಲೆ, ಪೀಠಿಕೆಯಿಲ್ಲದೆ ಕೇಸ್ ಹಿಯರಿಂಗ್ ಶುರುಮಾಡಿಕೊಂಡರು. ಜ್ಯೂರಿಗಳಿಲ್ಲದ ಕಾರಣ ಕೇಸ್ ಬೇಗ ಮುಗಿಯಬಹುದೆಂಬ ಆಸೆ ನಮ್ಮಿಬ್ಬರಿಗೂ ಹುಟ್ಟಿತು. ಎರಡೂ ಕಡೆಯ ವಾದಗಳನ್ನು ಕೇಳಿದ ನ್ಯಾಯಾಧೀಶರ ಆದೇಶದ ಮೇಲೆ, ಮರುದಿನ ನನ್ನನ್ನು ವೈದ್ಯರ ಹತ್ತಿರ ಪರೀಕ್ಷೆಗಾಗಿ ಕರೆದೊಯ್ಯಲಾಯಿತು. ಅಂಥ ಕಹಿ ಕ್ಷಣಗಳನ್ನು ನಾನು ಇದುವರೆಗೆ ಅನುಭವಿಸಿರಲಿಲ್ಲ ಅನ್ನಬಹುದು. ಆದರೂ ಅದನ್ನು ಸ್ನೇಹಕ್ಕಾಗಿ ಸಹಿಸಿಕೊಂಡೆ. ಮಾರನೇ ದಿನವೇ ಕೋರ್ಟಿನಲ್ಲಿ ಜಡ್ಜ್ ನಮ್ಮ ಪರವಾಗಿ ತೀರ್ಪಿತ್ತರು. "ಆರ್ಯ ಅನ್ನುವ ಹೆಸರಿನ ಈ ವ್ಯಕ್ತಿ ತಂದೆಯಾಗಲು ಸಾಧ್ಯವಿಲ್ಲವಾದ್ದರಿಂದ ಷೆರೀನ್ ಅವನ ಮೇಲೆ ಸುಳ್ಳು ಆಪಾದನೆ ಮಾಡಿದ್ದಾಳೆ. ಆರ್ಯನನ್ನು ಈ ಆಪಾದನೆಯಿಂದ ಮುಕ್ತಗೊಳಿಸಲಾಗಿದೆ." ನಮ್ಮ ಲಾಯರ್, ಅಲ್ಲೇ ಷೆರೀನ್ ಮೇಲೆ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಹಾರಾಡತೊಡಗಿದ. ನಮಗೆ ಅದ್ಯಾವುದೂ ಬೇಕಾಗಿಲ್ಲವೆಂದು ಅವರನ್ನು ಒಪ್ಪಿಸಿ ನಾವಿಬ್ಬರೂ ಹಿಂದಿರುಗಿ ರೋಸ್‍ವಿಲ್ ಕಡೆ ಹೊರಟೆವು.
ಕಾರ್ಸನ್ ಸಿಟಿ ದಾಟಿ, ಟಾಹೋ ಕಡೆ ಇಳಿಯುತ್ತಿದ್ದೆವು, ಅಷ್ಟರಲ್ಲಿ ನಮ್ಮ ಕಾರಿಗೆ ಎದುರುಗಡೆಯಿಂದ ಬಂದ ಟ್ರಕ್ಕೊಂದು ಹೊಡೆಯಿತು. ನಾನೇ ಡ್ರೈವ್ ಮಾಡುತ್ತಿದ್ದೆ. ಹೇಗೋ ನಮ್ಮ ಅದೃಷ್ಟ, ಕಾರಿನ ಹಿಂದಿನ ಸೀಟಿನ ಭಾಗಕ್ಕೆ ಟ್ರಕ್ಕಿನ ಎಡತುದಿ ಹೊಡೆದಿತ್ತು. ನನ್ನ ಎದೆಗೂಡಿನ ಎಲುಬುಗಳೆರಡು ಮುರಿದಿದ್ದವು. ಎಡಭುಜಕ್ಕೆ ಏಟಾಗಿತ್ತು. ಜೆನ್ನಿಗೆ ದೊಡ್ಡ ಶಾಕ್ ಆಗಿತ್ತು. ಅವಳಿಗೂ ಕುತ್ತಿಗೆ ಭುಜ ನೋಯುತ್ತಿದ್ದವು. ತೀರಾ ಪೆಚ್ಚಾಗಿದ್ದಳು. ಎರಡು ದಿನ ನಾನು ಟಾಹೋ ಆಸ್ಪತ್ರೆಯಲ್ಲಿ ಇರಬೇಕಾಗಿತ್ತು. ಇನ್ನೊಂದು ಕೇಸಿನಲ್ಲಿ ನಾನು ‘ಆರ್ಯ’ ಆಗಿ ಸಿಕ್ಕಿಬಿದ್ದಿದ್ದೆ. ಆ ಟ್ರಕ್ಕಿನವನ ಕೇಸು ಮುಗಿಯುವತನಕ ನಾನೆಲ್ಲೂ ಹೋಗುವ ಹಾಗಿರಲಿಲ್ಲ. ಎರಡು ದಿನಗಳ ಮೇಲೆ, ಆರ್ಯನೇ ಬಂದು ನಮ್ಮನ್ನು ಫೋಲ್ಸಮ್‍ಗೆ ಕರೆತಂದ. ಅವರ ಆ ಕಾರು ರಿಪೇರಿಗೂ ಬಾರದಂತೆ ನುಗ್ಗಾಗಿತ್ತು. ಇಲ್ಲಿಗೆ ಬಂದಮೇಲೆ, ಅವರ ಮನೆಯಲ್ಲೇ ಇದ್ದೆ. ಆರು ವಾರಗಳ ವಿಶ್ರಾಂತಿ. ಆಮೇಲಿನ ಎಂಟು ವಾರ, ವಾರಕ್ಕೊಂದು ದಿನದಂತೆ ಫಿಸಿಯೋಥೆರಪಿಗೆ ಹೋಗಬೇಕಾಗಿತ್ತು. ಅದೂ ಆರ್ಯನಾಗಿ.
ಈ ವಿಪರೀತದಿಂದ ಆರ್ಯನೂ ಮನೆಯಲ್ಲೇ ಸಿಕ್ಕಿಬಿದ್ದಿದ್ದ. ಇಬ್ಬರು ಸ್ನೇಹಿತರೂ ಬೇಕಾದಷ್ಟು ಹರಟೆಹೊಡೆದೆವು. ಆಗಲೇ ಆರ್ಯ ನನ್ನ ತೊಂದರೆಯ ಬಗ್ಗೆಯೂ ಕೆದಕತೊಡಗಿದ. ಅದನ್ನು ಪರಿಹರಿಸಿಕೊಳ್ಳುವ ದಾರಿಯೂ ಇದೆಯೆಂದ. ನನಗೇನೂ ಬೇಡವಾಗಿತ್ತು. ಇದ್ದ ಹಾಗೇ ಇದ್ದುಬಿಡುವ ನಿರಾಳತನದಲ್ಲಿ ಸುಖವಿತ್ತು. ಸರಿಮಾಡಲು ಹೋಗಿ ಇನ್ನೇನೋ ಆಗಬಹುದೆಂಬ ಭಯವಿತ್ತು. ಹೆತ್ತವರಾದ ನಿಮಗೂ ಅದನ್ನು ಹೇಳಿಲ್ಲದ ಸಂಕೋಚವಿತ್ತು. ಅದನ್ನೆಲ್ಲ ಅವನ ಸಕಾರಣ ವಾದಗಳಲ್ಲಿ ಬದಿಗೊತ್ತರಿಸಿ, ಒಮ್ಮೆ ಪ್ರಯತ್ನಿಸುವಂತೆ ನನ್ನನ್ನು ಒಪ್ಪಿಸಿದ. ಹಾಗೇನೇ, ಅವನ ಒತ್ತಾಯದ ಮೇರೆಗೆ ಅವನದೇ ವೈದ್ಯರ ಮುಂದಾಳತ್ವದಲ್ಲಿ, ವೈದ್ಯಕೀಯವಾಗಿ ಹೆಚ್ಚಿನ ತೊಡಕಿಲ್ಲದ ಆ ತೊಂದರೆಯನ್ನೂ ಪರಿಹರಿಸಿಕೊಂಡದ್ದಾಯ್ತು. ಅದರ ಮರುಪರೀಕ್ಷೆಯೂ ನಡೆದು ಎಲ್ಲವೂ ಸರಿಹೋಗಿದೆಯೆಂದು ವರದಿಯೂ ಬಂತು. ಇವೆಲ್ಲದರ ನಡುವೆ, ನಾನು ಇಲ್ಲಿ ಮನೆಗೆ ಬರುವ ಹಿಂದಿನ ವಾರವಷ್ಟೇ ಟ್ರಕ್ಕಿನ ಕೇಸ್ ಕೂಡಾ ನಮ್ಮ ಪರವಾಗಿಯೇ ಆದದ್ದು ಇನ್ನೂ ಒಂದು ಖುಷಿಯ ಸಂಗತಿಯಾಯಿತು.

ಅಪ್ಪ, ಆ ವಾರದ ನನ್ನ ಫಿಸಿಯೋಥೆರಪಿ ಹಿಂದಿನ ಸಂಜೆಯಷ್ಟೇ ಮುಗಿಸಿದ್ದೆ. ಮರುದಿನ ಬೆಳಗ್ಗೆ ನಾನು ಏಳುವ ಹೊತ್ತಿಗಾಗಲೇ ಜೆನ್ನಿ ನಿಮಗೆ ಫೋನ್ ಮಾಡಿದ್ದಳು. ನನಗದು ಗೊತ್ತಿರಲಿಲ್ಲ. ನಾನು ತಿಂಡಿ ಮುಗಿಸಿ ನಿಮಗೆ ಫೋನ್ ಮಾಡಲಿಕ್ಕೆ ಹೊರಟಾಗಲೇ ನೀವೆಲ್ಲ ಆ ಮನೆಯೊಳಗೆ ಬಂದಿರಿ. ಇನ್ನು ಮುಂದಿನದ್ದು ನಿಮಗೇ ಗೊತ್ತುಂಟಲ್ಲ. ಆದ್ರೆ, ಈ ವಿಷಯ ನಮ್ಮಿಬ್ಬರಿಂದ ಆಚೆ ಹೋಗಕೂಡದು. ಆರ್ಯ ಮತ್ತು ಜೆನ್ನಿಗೆ ನಾನು ಮಾತು ಕೊಟ್ಟಿದ್ದೆ. ನಿಮ್ಮ ಸಲುವಾಗಿ ಆ ಮಾತಿಗೆ ತಪ್ಪಿದ್ದೇನೆ. ನಮ್ಮ ಮೂವರನ್ನೂ ಕ್ರಿಮಿನಲ್‍ಗಳನ್ನಾಗಿ ಮಾಡಬೇಡಿ, ಅಪ್ಪಾ...
************ ************

ಮಾತು ಮುಗಿಸಿ ಎದುರಿನ ಗೋಡೆ ನೋಡುತ್ತಾ ಕೂತವನ ಕಣ್ಣುಗಳಲ್ಲಿ ನೋವಿನ ಧಾರೆ ಇಳಿಯುತ್ತಿತ್ತು. ಸೋಫಾದ ಬದಿಯ ಟೇಬಲ್ ಮೇಲಿನಿಂದ ಟಿಶ್ಯೂ ತೆಗೆದು ಅವನ ಕೈಗಿತ್ತೆ. ಸ್ನೇಹಕ್ಕಾಗಿ ಈ ಹುಡುಗ ಮಾಡಿದ ತ್ಯಾಗದ ಎದುರು ನನ್ನ ದುಗುಡ ದೊಡ್ಡದಾಗಿ ಕಾಣಲಿಲ್ಲ. ತಂದೆಯಾಗಿ ನನಗೆ ನೋವಾಗಿದ್ದು ನಿಜ. ತಾಯಿಯಾಗಿ ವಾಣಿ ಮತ್ತು ಮಗಳಾಗಿ ನಿಧಿಯರಿಗಿದ್ದ ನೋವು ನನ್ನನ್ನು ಕಾಡಿದ್ದು ನಿಜ. ಈಗ ಅವೆಲ್ಲ ಗೌಣವಾಗತೊಡಗಿದವು. ಮೆಲ್ಲಗೆ, "ನಿನ್ನ ಡೈರಿ ಹರಿದದ್ದಕ್ಕೆ ನನ್ನನ್ನು ಕ್ಷಮಿಸ್ತೀಯಾ ಮಗನೇ?" ಅಂದೆ. ನನ್ನ ಕಡೆ ತಿರುಗಿದವನ ಕಣ್ಣಲ್ಲಿ ವರುಷಗಳ ಹಿಂದಿನ ತುಂಟ ಇಣುಕುತ್ತಿದ್ದ. ನನಗಷ್ಟೇ ಸಾಕಾಗಿತ್ತು. ಪರ್ಸಿನೊಳಗೆ ತೂರಿಸಿಟ್ಟುಕೊಂಡಿದ್ದ ಆ ಒಂದು ಪುಟವನ್ನೂ ತಂದು ಅವನ ಕೈಯಲ್ಲಿಟ್ಟೆ. ಅದನ್ನೂ ಹರಿಯುತ್ತಾ ನನ್ನ ಕಡೆ ನೋಡಿದ, "ಅಪ್ಪಾ, ಒಂದು ವಿಷಯ ಬಾಕಿಯಿದೆ..." ಏನು ಅನ್ನುವಂತೆ ಹುಬ್ಬು ಹಾರಿಸಿದೆ. ಅಷ್ಟರಲ್ಲಿ ವಾಣಿ ಮತ್ತು ನಿಧಿ ಮನೆಯೊಳಗೆ ಬಂದರು. ತುಂಬಾ ಮೆಲ್ಲಗೆ, "ನನಗೊಂದು ಹುಡುಗಿ ನೋಡಿ." ಅಂದವನೇ ಸೋಫಾದಿಂದ ಎದ್ದು ಅವನ ಕೋಣೆಯ ಕಡೆ ಹೋದ. ನಿಧಿ ಹಾರುತ್ತಾ ಅವನ ಹಿಂದೆಯೇ ಹೋದಳು. ಅವರಿಬ್ಬರ ಬೆನ್ನ ಮೇಲೆ ಸಂಕ್ರಾಂತಿಸೂರ್ಯನ ಸಂಜೆಯ ಕಿರಣಗಳು ಆಟವಾಡುತ್ತಿದ್ದವು. ವಾಣಿಯ ಪ್ರಶ್ನಾರ್ಥಕ ನೋಟಕ್ಕೆ ನಸುನಕ್ಕು ಟಿ.ವಿ. ಹಾಕಿದೆ.
************ ************ ************
(ಮಾರ್ಚ್-೨೦೦೮)

Thursday, 2 October, 2008

ಮುಗ್ಧ

ದೀಪಗಳು ನೆರಳುಗಳು ಹಾದಿಯಲ್ಲಿ
ಬಾಳ ಬಣ್ಣದ ಕನಸು ಕಂಗಳಲ್ಲಿ
ನಿನ್ನೆ ನಾಳೆಗಳೆಂಬ ಚಿಂತೆಯಿಲ್ಲ
ಈ ಕ್ಷಣದ ಬೆಳಕಿನಲಿ ಬಾಳಬಲ್ಲ.

ಅರಿವಿರುವುದೆಂದರೆ ಅರಿವು ಅಲ್ಲ
ಕನ್ನಡಿಯ ಬಿಂಬವದು ಅವನದಲ್ಲ
ಅಕ್ಕರೆಯ ತಿಳಿಗೊಳದಿ ನಲಿವನಲ್ಲ
ಕತ್ತಲೆಯ ಪರಿಧಿಯನು ದಾಟಬಲ್ಲ.

ಚಿಣ್ಣನಾಗಿರುವನಕ ಹಗೆಯು ಅಲ್ಲ
ಬೀದಿಬದಿ ಅರಮನೆಯ ಅರಸನಲ್ಲ
ಹಗಲ ಜಗ್ಗಾಟದಲು ನಗಲು ಬಲ್ಲ
ಇರುಳ ಕೊರೆತಗಳನ್ನು ಮರೆಯಬಲ್ಲ
(೨೧-ಮೇ-೨೦೦೭)