ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Friday, 17 October, 2008

ಸೀಳುನಾಯಿ-- ಭಾಗ ೦೧

"...ಸೀಳುನಾಯಿಗಳು ಒಂದು ಜಾತಿಯ ಬೇಟೆ ನಾಯಿಗಳು. ಹಿಂದೆ ಕಾಡುಗಳಲ್ಲಿ ಗುಂಪಿನಲ್ಲಿ ವಾಸಿಸುತ್ತಾ ತೋಳಗಳ ಹಾಗೆ ಬದುಕಿದವು. ಉತ್ತಮ ಶಕ್ತಿ, ಬುದ್ಧಿವಂತಿಕೆ ಮತ್ತು ಒಳ್ಳೆಯ ಸ್ವಂತಿಕೆಯನ್ನೂ ಹೊಂದಿರುವ ನಾಯಿಗಳು. ತಮ್ಮ ದೇಹದ ದೌರ್ಬಲ್ಯವನ್ನೂ ಕಡೆಗಣಿಸಿ ಗುಂಪಿಗಾಗಿ ಸೆಣಸಾಡುವಂಥ ಛಾತಿಯುಳ್ಳವು. ನಾಯಿಗಳಲ್ಲಿ ನನಗೆ ಇಷ್ಟದ ಜಾತಿ...."
ಇಪ್ಪತ್ತೈದರ ಮಗನ ವಿವರಣೆ ಸಾಗಿತ್ತು. ಐವತ್ತೈದರ ನಾನು ಎಲ್ಲೋ ಕಳೆದುಹೋಗಿದ್ದೆ. "ತನ್ನ ಹೊಟ್ಟೆಪಾಡಿಗಷ್ಟೇ ಹಿಂಸಾಚಾರ ಮಾಡುವ ಪ್ರಾಣಿಗಳಿಗಿಂತ ಮನುಷ್ಯ ಕೆಟ್ಟವನು" ಅನ್ನುವುದು ಅವನ ವಾದ. ಇದರ ಪೂರ್ವಾಪರ ವಿಮರ್ಶೆಯಲ್ಲಿ ನಾನಿದ್ದೆ, ಸೋಲುತ್ತಿದ್ದೆ. ಆದರೆ, ಮಗನೆದುರು ಸೋಲೊಪ್ಪಿಕೊಳ್ಳದ ಭಂಡ ಗಂಡುತನ ನನ್ನದು. ‘ಎಷ್ಟಾದರೂ ಅವನ ಅಪ್ಪ ನಾನು. ನನಗೂ ಮೀಸೆಯಿದೆ!’ ನನ್ನೊಳಗಿನ ಅಹಂ ಒತ್ತುಕೊಡುತ್ತಿತ್ತು. ನಮ್ಮಿಬ್ಬರ ವಾಗ್ವಾದ ತಡೆಯಲಾರದೆ ವಾಣಿ ಹೊರಗೆ ಹೋಗಿದ್ದಳು. ಅವಳಿಗೆ ಚೆನ್ನಾಗಿ ಗೊತ್ತು, ಸೋಲೊಪ್ಪಿಕೊಳ್ಳದ ಗಂಡು ನಾನು; ಸೋಲೇ ಇಲ್ಲದ ಗಂಡು ಇವನು.

ಮೂರು ವರ್ಷದ ಪೋರನಾಗಿದ್ದಾಗಲೇ ನನಗೆ ಅರಿವಿಲ್ಲದ, ಉತ್ತರ ನನ್ನಲ್ಲಿಲ್ಲದ ಪ್ರಶ್ನೆಗಳನ್ನು ಕೇಳುತ್ತಿದ್ದ, ಈ ಕಿಶೋರ. ಗೊತ್ತಿಲ್ಲವೆನ್ನದೆ ಗದರುತ್ತಿದ್ದ ನನ್ನನ್ನು ಮುಚ್ಚಿದ ಬಾಗಿಲ ಹಿಂದೆ ಸುಮ್ಮನಿರಿಸುತ್ತಿದ್ದಳು ಅವಳು. ಮುಂದಿನ ವರ್ಷಗಳಲ್ಲಿ ಅವನ ಪ್ರಶ್ನೆಗಳು ನನ್ನನ್ನು ಕಾಣುತ್ತಲೇ ಇರಲಿಲ್ಲ. ವಾಚನಾಲಯದ ಪುಸ್ತಕಗಳೆಲ್ಲ ಅವನ ಗ್ರಾಸವಾಗಿದ್ದವು. ಕಿಶೋರನ ಕ್ರಿಯಾಶೀಲತೆಗೆ ಶರಣಾದವಳು ವಾಣಿ; ಅವನ ಸಾಮರ್ಥ್ಯಕ್ಕೆ ಸಾಧ್ಯವಾದಷ್ಟೂ ಅವಕಾಶ ಒದಗಿಸುತ್ತಿದ್ದಳು. ಪರಿಣಾಮ... ಅತ್ಯಂತ ಸ್ವಂತಿಕೆಯುಳ್ಳ ಮಗ. ಒಂದೇ ಕೂರಿನಲ್ಲಿ ಏನನ್ನೂ ಮಾಡದ ನಾನು, ಕೂತಲ್ಲಿಂದ ಏಳದೆ ಹಿಡಿದ ಕೆಲಸ ಮುಗಿಸುವ ಅವನು; ಇದೆಂಥಾ ಅಪ್ಪ-ಮಗನ ಜೋಡಿ! ನಮ್ಮಿಬ್ಬರ ಗುಣಗಳ ಯಾವ ಹೋಲಿಕೆಯೂ ಇಲ್ಲದ ಅವನನ್ನು ಕುರಿತು ವಾಣಿಯನ್ನು ನಾನು ಗೇಲಿ ಮಾಡಿದ್ದಿದೆ, ‘ಆಸ್ಪತ್ರೆಯಲ್ಲಿ ಮಗು ಅದಲು-ಬದಲಾಗಿದ್ದಿರಬೇಕು, ನಿನಗೆ ಅರಿವಾಗಿಲ್ಲ’ ಎಂದು. ಅದಕ್ಕೂ ಅವಳ ಉತ್ತರವಿಲ್ಲ. ಸಣ್ಣ ನಗುವಿನಿಂದಲೇ ಎಲ್ಲವನ್ನೂ ನಿಭಾಯಿಸುವ ಇವಳನ್ನು ಬ್ರಹ್ಮ ನನಗೇ ಯಾಕೆ ಗಂಟು ಹಾಕಿದನೊ?

"...ಅಪ್ಪಾ! ಎಲ್ಹೋದ್ರಿ?..." ಕಿಶೋರ ಭುಜ ತಟ್ಟಿದಾಗಲೇ ಎಚ್ಚರ. "ಮತ್ತೆ ಹಳೇ ಕನಸುಗಳಲ್ಲಿ ಸಿಕ್ಕಿಕೊಂಡ್ರಾ?" ಹೌದು ಅನ್ನಲಾಗದೆ, ವಿಷಯಾಂತರ ಮಾಡಿದೆ: "ಇಲ್ಲಪ್ಪ. ಸಣ್ಣ ನಿದ್ದೆ ಹಿಡ್ದಿತ್ತು. ಬೆಳಗ್ಗೆ ದೋಸೆ ತಿಂದದ್ದು ನೋಡು. ಒಳ್ಳೆ ಜಡ ಏರಿದೆ." "ಹಾಗಾದ್ರೆ ನೀವು ಮಲಗಿ. ನನಗೂ ಬೇರೇನೋ ಕೆಲಸ ಉಂಟು." ಸೋಫಾದಿಂದ ಎದ್ದ ಕಿಶೋರ. ನನ್ನ ಯೋಚನೆ ಮತ್ತೆ ಎಲ್ಲೋ ಕಳೆದುಹೋಯಿತು.

ಇವನಿಗೆ ತಿಳಿಯದ ವಿಷಯವೇ ಇಲ್ಲ. ಯಾವುದರ ಬಗ್ಗೆ ಮಾತು ಎತ್ತಿದರೂ ಅವೆಲ್ಲದರ ಬಗ್ಗೆ ಕರಾರುವಕ್ಕಾಗಿ ಹೇಳಬಲ್ಲವ. ಅವನ ಸ್ವಂತಿಕೆಯೂ ಅಷ್ಟೇ ಕಟ್ಟುನಿಟ್ಟಿನದು. ತನ್ನ ಹದಿನೆಂಟನೇ ಹುಟ್ಟುಹಬ್ಬದ ದಿನ ಮನೆಯೊಳಗೆ ಬಿರುಗಾಳಿಯಂಥ ಸುದ್ದಿ ಬಿತ್ತಿದವ. ಅದಕ್ಕಿದ್ದ ಪ್ರತಿರೋಧಗಳ ನಡುವೆಯೂ ಒಂದು ವಾರದ ಬಳಿಕ ಏಳು ದಿನಗಳ ಹಸುಗೂಸನ್ನು ದತ್ತು ಸ್ವೀಕರಿಸಿ ಮನೆಗೆ ತಂದವ. ಅದಕ್ಕೆ ಅಪ್ಪ-ಅಮ್ಮ ಎರಡೂ ಆಗಿ ಸಾಕುವ ಛಾತಿ ತೋರಿದವ. ವಾಣಿಯ ತಾಯ್ತನ ಅವನಲ್ಲಿನ ಹೆಂಗರುಳನ್ನು ಸದ್ಯಕ್ಕೆ ಮರೆಯಲ್ಲಿರಿಸಿದೆ. ಆ ಪೋರಿಗಾಗಿ ಎರಡು ವರ್ಷ ತಾನು ಕಮ್ಯೂನಿಟಿ ಕಾಲೇಜಿನಲ್ಲಿ ಕಲಿಯುವ ನಿರ್ಧಾರ ಮಾಡಿ ಡ್ಯೂಕ್ ಯೂನಿವರ್ಸಿಟಿಯ ವಿದ್ಯಾರ್ಥಿ ವೇತನದ ಸೀಟನ್ನೂ ಬಿಟ್ಟುಕೊಟ್ಟ ಹಠವಾದಿ. ಮುಂದೆ ಕಾಲೇಜಿಗೆ ಸೇರಿದಾಗಲೂ ತನ್ನ ಮಗಳನ್ನು ಬಿಟ್ಟಿರಲಾರದೆ, ತನ್ನೊಂದಿಗೆ ಕರೆದೊಯ್ಯಲು ನಮ್ಮನ್ನು ಒಪ್ಪಿಸಲಾರದೆ ಪ್ರತೀ ವಾರಾಂತ್ಯಕ್ಕೆ ಮನೆಗೆ ಬರುತ್ತಿದ್ದ. ಗೆಳೆಯರ ನಡುವಿನ ಮೋಜಿನ ಜೀವನವನ್ನೂ ತನ್ನ ವೈಯಕ್ತಿಕ ಆಯ್ಕೆಯ ಗಂಭೀರ ಜವಾಬ್ದಾರಿಯನ್ನೂ ಅನಾಯಾಸದಿಂದ ನಿಭಾಯಿಸಿಕೊಂಡವ. ಅತ್ಯುನ್ನತ ಅಂಕಗಳಿಂದ ಕಾಲೇಜು ಮುಗಿಸಿ, ನಮ್ಮೂರಲ್ಲೇ ಉನ್ನತ ಶಿಕ್ಷಣವನ್ನೂ ಪೂರೈಸಿ, ಒಳ್ಳೆಯ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾನೆ. ಮಗ ಮನೆಯಲ್ಲೇ ಇದ್ದಾನೆಂಬ ಸಡಗರ ನಮ್ಮಿಬ್ಬರಿಗೆ. ಅವನ ಜೊತೆ ಕುಣಿಯುವ ಖುಷಿ ‘ನಿಧಿ’ಗೆ.

ವಾಣಿ ಒಳಗೆ ಬಂದಿದ್ದಾಳೆ. ನಿಧಿ ಓಡಿ ಹೋಗಿ ‘ಅಮ್ಮ’ನಿಗೆ ಅಂಟಿಕೊಂಡಳು. ಅವಳಿಗೆ ನಾವಿಬ್ಬರೂ ‘ಅಮ್ಮ-ಅಪ್ಪ’. ಕಿಶೋರ ಆಕೆಯ ‘ಡ್ಯಾಡ್’. ಮೂವರು ಹಿರಿಯರ ಪ್ರೀತಿಯಲ್ಲಿ ಬೆಚ್ಚಗೆ ಬೆಳೆಯುತ್ತಿದೆ ಬಿಳಿಯ ಚಿಗರೆ ಮರಿ. ವಯಸ್ಸಿಗೆ ಮೀರಿದ ಬೆಳವಣಿಗೆ, ಇಲ್ಲಿನವರಂತೆ. ಅವಳ ಜೈವಿಕ ಅಮ್ಮ-ಅಪ್ಪ ಯಾರೆಂದೇ ನಮಗೆ ತಿಳಿದಿಲ್ಲ. ಕಿಶೋರನಿಗೆ ಅರಿವಿರಬಹುದು, ಹೇಳುತ್ತಿಲ್ಲ. ಆದರೆ, ಆಕೆ ಶಾಲೆಗೆ ಸೇರುವ ಸಮಯದಲ್ಲಿ ಆಕೆಗೆ ತಿಳಿಸಿದ್ದಾನೆ, ಆಕೆ ನಮ್ಮ ನೈಜ ಮಗುವಲ್ಲ, ದತ್ತುಪುತ್ರಿ ಎಂದು. ಜೊತೆಗೇ ಆಕೆ ನಮ್ಮೆಲ್ಲರ ಕಣ್ಮಣಿ ಎಂದೂ ಅವಳಿಗೆ ಮನವರಿಕೆ ಮಾಡಿದ್ದಾನೆ. ‘ಇದೆಲ್ಲ ಬೇಕಾ?’ ಅನ್ನುವ ನನ್ನ, ವಾಣಿಯ ಪ್ರಶ್ನೆಗಳಿಗೆ ಈಗಲ್ಲದಿದ್ದರೂ ಮುಂದೆ ಬೇಕಾದೀತು ಅನ್ನುವುದು ಅವನ ವಾದ. ಕಿರಿಕಿರಿಯಾದರೂ ಸುಮ್ಮನಿದ್ದೇವೆ. ಈ ಮುದ್ದಿನ ನಿಧಿಯನ್ನು ಈಗ ಯಾರಾದರೂ ಬಂದು "ಇವಳು ನಮ್ಮ ಮಗಳು, ನಮಗೆ ಕೊಡಿ" ಅಂದರೆ ಕೊಡಲು ನಾವಿಬ್ಬರೂ ತಯಾರಿಲ್ಲ. ಅದೇ ಭಯ ಒಮ್ಮೊಮ್ಮೆ ವಾಣಿಗೆ ಕನಸಾಗಿ ಕಾಡುವುದಿದೆ. ಹೇಗಾದರೂ ಕಿಶೋರನಿಗೆ ಇದನ್ನು ತಿಳಿಸಬೇಕು. ಮುಂದಿನ ಶುಕ್ರವಾರ ನಿಧಿ ಮತ್ತು ಅವನ ಜನ್ಮದಿನ. ಅದರ ನಂತರ ತಿಳಿಸಿದರಾಯಿತು.
************ ************

ನಿಧಿ ಈಗ ಆರನೇ ತರಗತಿ. ಈ ನಾಲ್ಕು ವರ್ಷಗಳಲ್ಲಿ ಕಿಶೋರನ ಮಾತು ನಿಧಾನವಾಗಿ ಮೂಲೆ ಸೇರಿದೆ. ಯಾಕೆ ಅನ್ನುವುದು ನಮಗೆ ಒಡೆಯಲಾಗದ ಒಗಟು. ನಿಧಿಯ ಎಂಟನೇ ಜನ್ಮದಿನ ಮತ್ತು ತನ್ನ ಇಪ್ಪತ್ತಾರನೇ ಜನ್ಮದಿನ ನಮ್ಮೊಂದಿಗೆ ಮನೆಯಲ್ಲಿ ಆಚರಿಸಿದ ಹುಡುಗ, ತನ್ನ ಜೊತೆಗಾರರೊಂದಿಗೆ ಸಾಗರ ತೀರಕ್ಕೆ ಹೋಗಿ ಬಂದಿದ್ದ. ಅದೇ ರಾತ್ರೆ ವಾಣಿ ‘ಆತನ ವರ್ತನೆಯಲ್ಲಿ ಬದಲಾವಣೆಯಾಗಿದೆ’ ಎಂದಾಗ ನಾನು ಯಾವುದೇ ಒತ್ತಾಸೆಯಿತ್ತಿರಲಿಲ್ಲ. ‘ಏನಿಲ್ಲ, ಎಲ್ಲ ನಿನ್ನ ಭ್ರಮೆ’ ಅಂದಿದ್ದೆ. ಎಂದಿನಂತಿಲ್ಲದೆ, ಮೌನವಾಗಿದ್ದ ಮಗನ ನಡತೆ ಅವಳ ಕರುಳು ಕಾಣದಿದ್ದೀತೆ? ನಿಧಿಯಂತೂ ವಾಣಿಗೇ ಹೆಚ್ಚು ಹೆಚ್ಚು ಅಂಟುತ್ತಿದ್ದಾಳೆ. ಬೆಳೆಯುತ್ತಿರುವ ಹೆಣ್ಣು ಆಕೆ, ಸಹಜವೇನೊ! ಆದರೂ, ಇವನಿಗೇನಾಗಿದೆ? ಮೊದಲಿನಂತೆ ಎಲ್ಲದಕ್ಕೂ ವಾದಿಸುತ್ತಿಲ್ಲ. ಮೊನ್ನೆ-ಮೊನ್ನೆ ಅನ್ನುವ ಹಾಗೆ ಎಲ್ಲರನ್ನು ಕಾಡಿಸಿ, ರೇಗಿಸಿ, ಆಡಿಸುತ್ತಿದ್ದವ ನಾಲ್ಕು ವರ್ಷಗಳಲ್ಲಿ ತೀರಾ ಮೌನಿಯಾಗಿದ್ದು ಸಹಜ ಬದಲಾವಣೆಯೆ? ಏನು ಕೇಳಿದರೂ ಉತ್ತರವಿಲ್ಲ. ಹೇಗೆ ಕೇಳಿದರೂ ಉತ್ತರವಿಲ್ಲ. ಒತ್ತಾಯಿಸಿದರೆ ನಮ್ಮ ನಡುವಿನಿಂದ ಎದ್ದೇ ಹೋಗುತ್ತಾನೆ. ನಿಧಿಯೊಡನೆಯೂ ಯಾವುದೇ ಆಟಗಳಿಲ್ಲ. ಅವಳ ಪಾಠಗಳಲ್ಲಿ ಗಮನವಿಲ್ಲ. ಶಾಲೆಯ ಮೀಟಿಂಗುಗಳಿಗೂ ನಮ್ಮನ್ನೇ ಅಟ್ಟುತ್ತಿದ್ದಾನೆ. ಈ ಎಲ್ಲ ಗಮನಾರ್ಹ ಬದಲಾವಣೆಗಳು ಇತ್ತೀಚೆಗೆ ಅನ್ನುವಂತೆ ನಡೆದಿವೆ. ಯಾಕೆ?
************ ************

ಕಿಶೋರನ ಡೈರಿ ನನ್ನ ಕೈಯ್ಯಲ್ಲಿದೆ. ಓದಲೋ ಬೇಡವೋ ಸಂದಿಗ್ಧ. ವಾಣಿಗೆ ಹೇಳಿದರೆ ನೊಂದುಕೊಂಡಾಳು. ಒಂದು ವಾರದಿಂದ ನಾವ್ಯಾರೂ ಬದುಕಿಯೇ ಇಲ್ಲವೆಂಬಂತೆ ಇದ್ದೇವೆ. ಹಿಂದಿನ ಗುರುವಾರ ಕೆಲಸಕ್ಕೆ ಹೋದ ಹುಡುಗ ಮನೆಗೇ ಬಂದಿಲ್ಲ. ಪೋಲಿಸ್ ಕಂಪ್ಲೇಂಟ್ ಕೊಟ್ಟಾಗಿದೆ. ಅವನ ಸ್ನೇಹಿತರನ್ನು ಸಂಪರ್ಕಿಸಿಯಾಗಿದೆ. ಸಹೋದ್ಯೋಗಿಗಳ ಹೇಳಿಕೆಯಂತೆ, ಅದಕ್ಕೂ ಹಿಂದಿನ ವಾರದಿಂದ ಅವನು ಸರಿಯಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲ. ಗುರುವಾರದಂದು ಆಫೀಸಿಗೇ ಹೋಗಿರಲಿಲ್ಲ. ಈ ಡೈರಿ ನಮ್ಮ ಹಾಸಿಗೆಯಡಿಯಲ್ಲಿ ಇಂದು ಸಿಕ್ಕಿದೆ. ಪೋಲಿಸ್ ಅಧಿಕಾರಿಗಳು ಇಂಥಾದ್ದೇನಾದರೂ ಇದೆಯೇ ಎಂದು ಅವನ ಕೋಣೆಯನ್ನು, ಕಾರನ್ನು, ಎಲ್ಲ ಜಾಲಾಡಿದ್ದರು. ಏನೂ ಸಿಕ್ಕಿರಲಿಲ್ಲ. ಇದೀಗ ಸಿಕ್ಕಿದೆ, ನಮ್ಮ ಕೋಣೆಯಲ್ಲಿ. ನಾನಂತೂ ಈ ವಾರ ಕೆಲಸಕ್ಕೆ ಹೋಗದೆ ಮನೆಯಲ್ಲೇ ಕೂತಿದ್ದೇನೆ. ತಲೆ ಕೆಟ್ಟಿದೆ. ವಾಣಿ ನಿಧಿಯನ್ನು ಶಾಲೆಯಿಂದ ಕರೆತರಲು ಹೋಗಿದ್ದಾಳೆ, ಬರಲು ಇನ್ನೊಂದು ಗಂಟೆ ಬೇಕು. ಅಷ್ಟರಲ್ಲಿ ಈ ಡೈರಿ ಓದಿಯೇ ಬಿಡುತ್ತೇನೆ, ಏನಾದರೂ ಸುಳಿವು ಸಿಕ್ಕೀತು...
************ ************

"ಅಮ್ಮ, ಅಪ್ಪ, ಯಾವಾಗಲೂ ನಿಮ್ಮ ಜೊತೆ ಮಾತಾಡುತ್ತಿದ್ದರೂ ಕೆಲವೊಂದು ವಿಷಯಗಳನ್ನು ನಿಮಗೆ ತಿಳಿಸಲು ಸಾಧ್ಯವೇ ಆಗುತ್ತಿಲ್ಲ. ಇವತ್ತು ನನ್ನ ಹದಿನೆಂಟನೇ ಜನ್ಮದಿನ. ಒಂದು ಮಗುವನ್ನು ದತ್ತು ತೆಗೆದುಕೊಂಡು ಸಾಕುವುದಾಗಿ ನಿಮಗೆ ಹೇಳಿದ್ದೇನೋ ಆಗಿದೆ. ನಿಮ್ಮ ವಿರೋಧ, ಸಿಟ್ಟು, ಅಸಮಾಧಾನ, ಆಶ್ಚರ್ಯ, ಎಲ್ಲವೂ ನನಗೆ ಅರ್ಥವಾಗುತ್ತದೆ. ಆದರೆ, ಯಾಕೆ ಈ ನಿರ್ಧಾರ ಅನ್ನುವುದನ್ನು ಮಾತ್ರ ಮಾತಲ್ಲಿ ನಿಮಗೆ ತಿಳಿಸಿ ಹೇಳಲಾರೆ. ಅದಕ್ಕಾಗಿ ಈ ಡೈರಿ."

"ನಾನು ದತ್ತು ಸ್ವೀಕರಿಸುವ ಮಗು ನನ್ನ ಸ್ನೇಹಿತನದ್ದು. ಅವನು ಮತ್ತವನ ಸ್ನೇಹಿತೆ ವಯಸ್ಸಿನ ಆಮಿಷಕ್ಕೆ ಒಳಗಾಗಿ ಮಗುವಿನ ಹುಟ್ಟಿಗೆ ಕಾರಣರಾಗುತ್ತಿದ್ದಾರೆ. ಕಟ್ಟಾ ಕ್ಯಾಥೋಲಿಕ್ ಕ್ರಿಶ್ಚಿಯನ್ನರಾದ ಅವಳ ಹೆತ್ತವರು ಹೊಂದಾಣಿಕೆ ಮಾಡಿ ಮದುವೆಗೆ ಏರ್ಪಾಡು ಮಾಡೋಣ ಎಂದರೆ ಇವನ ಹೆತ್ತವರಿಗೆ ಒಪ್ಪಿಗೆಯೇ ಇಲ್ಲ. ಜೊತೆಗೆ, ಇವರಿಬ್ಬರಿಗೂ ಇಷ್ಟವಿಲ್ಲ. ತಮ್ಮ ನಡುವೆ ಪ್ರೀತಿಯಿಲ್ಲ, ಆದ್ದರಿಂದ ಮದುವೆ ಸಾಧ್ಯವಿಲ್ಲ ಅನ್ನುವುದು ಇವರ ವಾದ. ಒಂದು ಮಗುವಿಗಾಗಿ ತಮ್ಮಿಬ್ಬರ ಜೀವನ ತಪ್ಪು ದಾರಿಯಲ್ಲಿ ಶುರುವಾಗಬಾರದು ಅನ್ನುವ ಸಮರ್ಥನೆ. ಇಬ್ಬರೂ ಮಾತಾಡಿಕೊಂಡು ಮಗುವನ್ನು ಯಾರಿಗಾದರೂ ದತ್ತು ಕೊಡುವುದೆಂದು ನಿರ್ಧರಿಸಿದ್ದಾರೆ. ಇದರಲ್ಲಿ ನನ್ನದೇನು ಪಾತ್ರ? ‘ನನಗೆ ಮಕ್ಕಳೆಂದರೆ ಅತೀವ ಮಮತೆ. ಈ ಗೆಳೆಯನ ಮಗು ಅನಾಥವಾಗುವುದನ್ನು ಸಹಿಸಲಾರೆ’ ಅಂತೆಲ್ಲ ಹೇಳಿದರೆ ಅದು ಅರ್ಧ ಸತ್ಯ. ಪೂರ್ಣ ಸತ್ಯವನ್ನು ಹೊರಹಾಕಿ ಅರಗಿಸಿಕೊಳ್ಳುವ ಶಕ್ತಿ ನಿಮ್ಮಿಬ್ಬರಿಗೂ, ನನಗೂ ಸದ್ಯಕ್ಕೆ ಇಲ್ಲ. ಅದನ್ನು ಬರೆಯುವ ಮನಶ್ಶಕ್ತಿ ನನಗೂ ಈಗ ಇಲ್ಲ. ಆ ಘಳಿಗೆ ಬಂದಾಗ ಇಲ್ಲೇ ಬರೆಯುವೆ."
***

"ಅಪ್ಪ, ಅಮ್ಮ, ಇಂದು ನನ್ನ ಇಪ್ಪತ್ತನೆಯ ಜನ್ಮ ದಿನ. ಎಲ್ಲವೂ ಎಷ್ಟು ಚೆನ್ನಾಗಿ ಸಾಗುತ್ತಿದೆ. ನಿಧಿ ನಮ್ಮ ಪಾಲಿನ ನಿಧಿಯೇ. ನಿಮಗೆ ಮೊಮ್ಮಗಳಂಥ ಮಗಳು. ನನಗೂ ಆಡಲು ತಂಗಿಯಂಥ ಮಗಳು. ಇದೆಂಥ ವಿಚಿತ್ರ? ನನ್ನ ಕಮ್ಯೂನಿಟಿ ಕಾಲೇಜ್ ಮುಗಿದಿದೆ. ಮುಂದಿನ ವಾರ ನಾನು ಯೂನಿವರ್ಸಿಟಿಗೆ ಹೋಗಲೇಬೇಕು. ಆದರೂ ನನ್ನೆದೆಯೊಳಗೆ ಬೆಚ್ಚನೆ ಬಚ್ಚಿಟ್ಟಿರುವ ಒಂದು ಸತ್ಯವನ್ನು ನಿಮ್ಮ ಮುಂದೆ ಎಳೆದುಹಾಕಲು ನನ್ನಿಂದಾಗುತ್ತಿಲ್ಲ. ನಿಮ್ಮಿಬ್ಬರ ಮುಖದಲ್ಲಿ ನಲಿಯುವ ಸುಖವನ್ನು ಗೀರುಗಾಯದಿಂದ ವಿಕೃತಗೊಳಿಸಲು ಸಾಧ್ಯವಿಲ್ಲ. ಬರೆಯೋಣವೆಂದೇ ಶುರುಮಾಡಿದೆ, ಆಗದು. ಇಂದಿಗೆ ಕ್ಷಮಿಸಿ."
***

"ಅಪ್ಪ, ಅಮ್ಮ, ನಿನ್ನೆ ಸಂಜೆ ನನ್ನ ಗೆಳೆಯರೊಂದಿಗೆ ಸಾಗರ ತೀರಕ್ಕೆ ಹೋಗಿದ್ದಾಗ ಏನೋ ಮಾತು ಮಾತಿನ ನಡುವೆ ನಮ್ಮೊಳಗೆ ವಾಗ್ವಾದವಾಗಿ ಒಬ್ಬ ಗೆಳೆಯ ಏನೇನೋ ಅಂದುಬಿಟ್ಟ. ನಿಧಿ ನನ್ನದೇ ಮಗಳೆಂದು ಹೈ-ಸ್ಕೂಲಿನಲ್ಲಿ ಎಲ್ಲರೂ ಆಗ ಆಡಿಕೊಂಡಿದ್ದಾಗಿ ತಿಳಿಸಿದ. ಅವಳ ನಿಜವಾದ ಅಪ್ಪ, ಅಮ್ಮ ಮತ್ತು ನಾನು ಒಳ್ಳೆಯ ಸ್ನೇಹಿತರಾಗಿದ್ದೆವು, ನಿಜ. ಆದರೆ ಅದಕ್ಕೂ ಮೀರಿದ ಬಾಂಧವ್ಯವಿರಲಿಲ್ಲ. ಅದನ್ನು ಈ ಗೆಳೆಯನಿಗೆ ಹೇಗೆ ವಿವರಿಸಿದರೂ ಆತ ಒಪ್ಪಲಿಲ್ಲ. "ನಿನಗೇನೂ ಸಂಬಂಧ ಇಲ್ಲವಾದರೆ ಆ ಮಗುವನ್ನು ನೀನೇ ಯಾಕೆ ದತ್ತು ತಗೊಂಡೆ? ನೀನಿನ್ನೂ ಕಲಿಯುತ್ತಿದ್ದ ಹುಡುಗ. ಅವರಿಬ್ಬರಿಗೇ ಇಲ್ಲದ ಜವಾಬ್ದಾರಿ ನಿನಗ್ಯಾಕೆ ಬೇಕಿತ್ತು?" ಅವನ ಈ ವಾದಕ್ಕೆ ನನ್ನಲ್ಲಿ ಉತ್ತರವಿದೆ, ಆದರೆ ಕೊಡುವ ಹಾಗಿಲ್ಲ. ನನ್ನೊಳಗೆ ಯಾವುದೋ ಹುತ್ತ ಬೆಳೆಯುತ್ತಿರುವಂತೆ ಅನಿಸುತ್ತಿದೆ. ಒಳಗಿನಿಂದಲೇ ನನ್ನನ್ನು ಕೊರೆಯುತ್ತಿದೆ. ಇದರಿಂದ ಮುಕ್ತನಾಗುವ ದಾರಿ ಸದ್ಯಕ್ಕೆ ಕಾಣುತ್ತಿಲ್ಲ."
***

"ಅಮ್ಮ, ಅಪ್ಪ, ನಿನ್ನೆ ತಾನೇ ನಿಧಿಯನ್ನು ಆರನೇ ತರಗತಿಗೆ, ಮಾಧ್ಯಮಿಕ ಶಾಲೆಯಲ್ಲಿ ಬಿಟ್ಟು ಬಂದೆವಲ್ಲ. ಇನ್ನು ಮೂರು ವರ್ಷಗಳಲ್ಲಿ ಅವಳು ಅವಳ ಹೆತ್ತವರು ಮತ್ತು ನಾನು ಓದಿದ ಹೈ-ಸ್ಕೂಲಿಗೆ ಹೋಗುತ್ತಾಳೆ. ತಾನು ಈ ಮನೆಯ ಮಗಳಲ್ಲವೆಂದು ಅವಳಿಗೆ ತಿಳಿದಿದೆಯಾದರೂ ಅವಳು ತನ್ನ ಹೆತ್ತವರನ್ನು ಹುಡುಕಲು ಇನ್ನೂ ಶುರುಮಾಡಿಲ್ಲ. ಹೈ-ಸ್ಕೂಲ್ ಸೇರಿದಾಗ ಅದೆಲ್ಲ ಬದಲಾಗಬಹುದು. ಅಲ್ಲಿ ಅವರ ಫೋಟೋಗಳಿವೆ. ಅವರಿಬ್ಬರೂ ಶಾಲೆಯ ಮುಂದಾಳುಗಳು. ನನ್ನಂತೆಯೇ ಬುದ್ಧಿವಂತರಾಗಿದ್ದವರು. ಅವರಿಬ್ಬರ ಹೋಲಿಕೆ ನಿಧಿಯಲ್ಲಿ ದಿನವೂ ನಾನು ಕಾಣುತ್ತೇನೆ. ಇಬ್ಬರೊಂದಿಗೂ ನನ್ನ ಸಂಪರ್ಕ ಈಗ ಇಲ್ಲವಾದರೂ ಅವರಿಬ್ಬರಲ್ಲಿ ನಮ್ಮ ವಿಳಾಸ ಇರಬಹುದು. ಯಾವ ಘಳಿಗೆಯಾದರೂ ಅವರು ಇಲ್ಲಿಗೆ ಬರಬಹುದು ಅನ್ನುವ ಯೋಚನೆ ನನ್ನನ್ನು ಕಾಡಿದ್ದು ಇದೆ. ಅದಕ್ಕಾಗಿ ಇಂದು ನಾನು ನಮ್ಮ ಶಾಲೆಯ ಮೂಲಕ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದೆ. ಅವರಿಬ್ಬರೂ ನಮ್ಮ ಪಕ್ಕದ ಊರು, ಫೋಲ್ಸಮ್‍ನಲ್ಲಿ ಬಂದು ನೆಲೆಸಿದ್ದೂ, ಅಲ್ಲಿಯ ಹೈ-ಸ್ಕೂಲಲ್ಲಿ ಶಿಕ್ಷಕರಾಗಿ ಸೇರಿರುವುದೂ, ಇದೇ ವರ್ಷ ಮದುವೆಯಾಗಿರುವುದೂ ತಿಳಿದುಬಂತು. ಮುಂದಿನ ಚಿತ್ರ ನೀವೇ ಊಹಿಸಬಲ್ಲಿರಿ. ಅವರೇನಾದರೂ ಮನಸ್ಸು ಬದಲಾಯಿಸಿ ನಿಧಿಯನ್ನು ತಮಗಾಗಿ ಕೇಳಿಕೊಂಡು ಬಂದರೆ ನಮ್ಮ ಮೂವರ ಸ್ಥಿತಿ ಏನಾದೀತು?"

"ಇವೆಲ್ಲ ಯೋಚನೆಗಳ ನಡುವೆ ನಾನೇ ಅವರನ್ನು ಮಾರುವೇಷದಿಂದ ಹಿಂಬಾಲಿಸಿ, ಅವರ ಬಗ್ಗೆ ತಿಳಿಯುವ ಕೆಲಸಕ್ಕೆ ಯೋಜನೆ ಹಾಕುತ್ತಿದ್ದೇನೆ. ಪತ್ತೇದಾರಿಕೆ ನನ್ನ ವಿಶೇಷತೆಯಲ್ಲ. ನಿಧಿಯನ್ನು ಉಳಿಸಿಕೊಳ್ಳುವತ್ತ ಒಂದು ಯತ್ನ. ಅವಳು ನನ್ನ ಜೀವನದ ಅವಿಭಾಜ್ಯ ಅಂಗವಾಗಿದ್ದಾಳೆ. ನಿಮ್ಮಿಬ್ಬರಿಗೆ ನನ್ನ ಕಡೆಗಿನ ಪ್ರೀತಿಯನ್ನೂ ಅಂಟನ್ನೂ ನಾನೀಗ ಅರ್ಥ ಮಾಡಿಕೊಳ್ಳಬಲ್ಲೆ. ಇದೇ ರೀತಿಯ ಪ್ರೀತಿ, ನಂಟು ಅವಳತ್ತಲೂ ನಿಮಗಿದೆ ಅನ್ನುವುದನ್ನೂ ಅರಿತಿದ್ದೇನೆ. ಅವರೇನಾದರೂ ನಿಧಿಯನ್ನು ಅವರಿಗೇ ಕೊಡಬೇಕೆಂದು ಕೇಳಬಹುದೆಂಬ ಸುಳಿವು ಸಿಕ್ಕರೆ ನಾವು ನಾಲ್ವರೂ ಭಾರತಕ್ಕೆ, ನಿಮ್ಮ ಹಳ್ಳಿ ಕೋಣಂದೂರಿಗೆ ಹೋಗಿಬಿಡುವಾ. ನನಗೆ ನಿಧಿ ಬೇಕು. ನಿಮಗೆ ನಾವಿಬ್ಬರೂ ಬೇಕು. ಅದಕ್ಕಿಂತ ಹೆಚ್ಚಿನದ್ದೇನಿಲ್ಲ. ಹೇಗಿದ್ದರೂ ಇದೇ ಡಿಸೆಂಬರಿಗೆ, ಅಪ್ಪ, ನೀವು ನಿವೃತ್ತರಾಗುತ್ತೀರಿ. ಇನ್ನುಳಿದ ಮೂರು ತಿಂಗಳ ರಜೆ ಪಡೆಯಿರಿ. ಎಲ್ಲರೂ ಹೋಗುವಾ."
***

"ಅಮ್ಮ, ಅಪ್ಪ, ನಾಳೆ ಜೆನ್ನಿ ಮತ್ತು ಆರ್ಯನನ್ನು ಭೇಟಿಯಾಗುವುದಿದೆ. ನನ್ನ ಹುಚ್ಚುತನ ಅಂದುಕೊಳ್ಳಿ. ನನ್ನ ಬುದ್ಧಿವಂತಿಕೆಗೆ, ಸ್ವಂತಿಕೆಗೆ ಮಸಿ ಹಿಡಿದಿದೆ. ಇವರಿಬ್ಬರನ್ನು ಭೇಟಿಯಾಗುತ್ತಿರುವುದೂ ಯಾವುದೋ ಹೆಸರಿನಿಂದ. ನಾನು ನಾನಾಗಿಲ್ಲ. ಆರ್ಯನನ್ನು ದೂರದಿಂದ ಕಂಡಾಗಲೂ ‘ಈತ ನಿಧಿಯ ಅಪ್ಪ’ ಅನ್ನಬಹುದಾಗಿದೆ. ಜೆನ್ನಿಯ ಎತ್ತರ, ಬಿಳುಪು, ಆರ್ಯನ ಕಣ್ಣು, ಮೂಗು ಪಡೆದು ಬಂದಿದ್ದಾಳೆ ನಮ್ಮ ನಿಧಿ. ಇವರಿಬ್ಬರ ಹಿಂದೆ ಗೂಢಚಾರಿಕೆ ಮಾಡಿ ಅವರ ಜೊತೆಗೂ ಏನೋ ಬಾಂಧವ್ಯ ಸೆಳೆಯುತ್ತಿದೆ. ಎಷ್ಟೆಂದರೂ ನಾಲ್ಕು ವರ್ಷ ಜೊತೆಗೇ ಕಲಿತವರು ನಾವು, ಆರ್ಯನ ಜೊತೆ ಇನ್ನೂ ಮೂರು ವರುಷ ಹೆಚ್ಚು. ಧಿಡೀರನೆ ಅವರ ಮುಂದೆ ನಿಂತುಬಿಡಲೇ ಅನ್ನಿಸಿದೆ. ಆಗುತ್ತಿಲ್ಲ. ನಾಳೆ ಭೇಟಿಯಾದಾಗ ಎಲ್ಲವನ್ನೂ ಹೇಳಿಬಿಡಬೇಕು. ಜೊತೆಗೇ ಯಾವುದೇ ಕಾರಣಕ್ಕೂ ನಿಧಿಯನ್ನು ಕೇಳಬೇಡಿ ಅನ್ನಬೇಕು. ಅವರಿಗೂ ನನ್ನೊಳಗೆ ಕಾಡುತ್ತಿರುವ ಗುಟ್ಟಿನ ಪರಿಚಯವಿಲ್ಲ ಅಂದುಕೊಂಡಿದ್ದೇನೆ. ಯಾವುದೇ ಉಪಾಯ ಸಾಗದಿದ್ದಲ್ಲಿ... ಏನು ಮಾಡಲಿ? ಪ್ರೌಢನಾಗಿ ಬಹುಶಃ ಮೊದಲ ಬಾರಿಗೆ ದೇವರ ನೆನಪಾಗುತ್ತಿದೆ. ದೇವರೇ, ಅಪ್ಪಾ, ಅಮ್ಮಾ... ನನ್ನನ್ನು ಹರಸಿ."
************ ************

ಇದು ಕಳೆದ ಬುಧವಾರ ರಾತ್ರೆ ಬರೆದದ್ದು. ಅದೇ ಮರುದಿನ ಆತ ಕಣ್ಮರೆಯಾದದ್ದು. ನನ್ನ ತಲೆ ಓಡಲಿಲ್ಲ. ಮೂಢನಾಗಿದ್ದೆ. ಆತನನ್ನು ಕಾಡುತ್ತಿದ್ದ ಭಯದ ಪರಿಚಯವಾಗಿತ್ತು. ವಾಣಿಗೆ ಪದೇ ಪದೇ ಬೀಳುತ್ತಿದ್ದ ಕನಸು ಅವನ ಭಯದಲ್ಲಿ ಗೂಡು ಕಟ್ಟಿತ್ತು. ಆದರೆ, ಅವನು ಕಾದಿರಿಸಿದ್ದ ಗುಟ್ಟು ಹೊರಬಿದ್ದಿರಲಿಲ್ಲ. ಆ ಗೋಪ್ಯಕ್ಕೂ ಈ ಕಣ್ಮರೆಗೂ ಸಂಬಂಧ ಇರಬಹುದೆ? ತೋಚಲಿಲ್ಲ.

ವಾಣಿ ಮತ್ತು ನಿಧಿ ಬಾಗಿಲತ್ತ ಬರುತ್ತಿರುವ ಸದ್ದು ಕೇಳಿಸಿ ನಮ್ಮ ಕೋಣೆಯೊಳಗೆ ಓಡಿದೆ, ಡೈರಿಯನ್ನು ಮೊದಲಿದ್ದ ಜಾಗದಲ್ಲೇ ಅಡಗಿಸಿದೆ. ಕಿಶೋರ ಪತ್ತೇದಾರಿಕೆ ಮಾಡಹೋಗಿ ಪತ್ತೇದಾರರಿಗೇ ಕೆಲಸ ಕೊಟ್ಟಿದ್ದ. ಇದರಲ್ಲಿ ನಾನು ಮಾಡಬಹುದಾದ್ದು ಏನು? ಸುಮ್ಮನೆ ಕಣ್-ಕಣ್ ಬಿಡುತ್ತಿದ್ದಾಗ ಅಮ್ಮ-ಮಗಳು ಕೋಣೆಯೊಳಗೇ ಬಂದರು. ಏನೋ ಹೇಳುವ ತಯಾರಿಯಲ್ಲಿದ್ದಾರೆಂದು ಅವರ ಮುಖಗಳು ತಿಳಿಸುತ್ತಿದ್ದವು. ವಾಣಿ ಮೊದಲು ಮಾತಾಡಿದಳು, "ನ್ಯೂಸ್ ಕೇಳಿದ್ರಾ?" ಇಲ್ಲವೆಂದು ತಲೆಯಾಡಿಸಿದೆ. ನಿಧಿ ಬಿಕ್ಕಲು ಮೊದಲಿಟ್ಟಳು, "ಕಾರಿನಲ್ಲಿ ರೇಡಿಯೋ ನ್ಯೂಸ್ ಕೇಳಿದೆವು..." ಅಂದಳು. ಯೋಚನೆ ಬೇಡವಾದ ದಿಕ್ಕಿಗೇ ಓಡಿತು. ಕೂಡಲೇ ಹೋಗಿ ಟಿ.ವಿ. ಹಾಕಿದೆ.

ಸ್ಥಳೀಯ ವಾರ್ತೆಗಳಲ್ಲಿ ನಮ್ಮೂರಿನ ಹೊರವಲಯದಲ್ಲಿ ಸುಮಾರು ಮೂವತ್ತರ ಹರೆಯದ ತರುಣನ ದೇಹವೊಂದು ಸಿಕ್ಕಿರುವ ಬಗ್ಗೆ ವಿವರಿಸುತ್ತಿದ್ದರು. ನನಗೇ ಕಣ್ಣು ಕತ್ತಲಿಟ್ಟಿತು. ವಾಣಿ, ನಿಧಿ ನನ್ನ ಮುಖ ನೋಡುತ್ತಿದ್ದರು. ಅವರಿಗಾಗಿ ಇಲ್ಲದ ಧೈರ್ಯ ತಂದುಕೊಂಡೆ. "ಪೊಲೀಸರಿಗೆ ಫೋನ್ ಮಾಡಿ ನೋಡೋಣ. ಕಿಶೋರ ಅಲ್ಲಿ ಹೋಗಿರಲಾರ. ಊರಿಗಿಂತ ಅಷ್ಟು ದೂರ, ಅಂಥಾ ನಿರ್ಜನ ಪ್ರದೇಶದಲ್ಲಿ ಅವನಿಗೆಂಥ ಕೆಲಸ? ಇದು ಅವನಲ್ಲ. ಇಬ್ಬರೂ ಅಳಬೇಡಿ, ಸುಮ್ಮನಿರಿ..." ಏನೇನೋ ಒದರುತ್ತಿದ್ದೆ. ನಮ್ಮ ಪ್ರದೇಶದ ಪೋಲಿಸ್ ಠಾಣೆಗೆ ಕರೆ ಮಾಡಿದೆ. ಅಲ್ಲಿರುವ ಯಾರಿಗೂ ನಿಖರವಾಗಿ ವಿಷಯ ತಿಳಿದಿರಲಿಲ್ಲ, ಅಥವಾ ತನಿಖೆಯ ಅಗತ್ಯದಿಂದಾಗಿ ವಿವರಗಳನ್ನು ಹೇಳುತ್ತಿರಲಿಲ್ಲ. ನಾನೇ ಅಲ್ಲಿಗೆ ಹೊರಟೆ. ವಾಣಿ ಮತ್ತು ನಿಧಿಯನ್ನು ತಡೆಯುವುದು ಕಷ್ಟವಾಗಿತ್ತು. ನಿಧಿ ಇನ್ನೂ ಬಾಲೆ, ಅಲ್ಲಿಗೆಲ್ಲ ಬರಲಾಗದು. ವಾಣಿಯನ್ನು ಒಪ್ಪಿಸಿ ಒಬ್ಬನೇ ಠಾಣೆಗೆ ಹೊರಟೆ.

ನಮ್ಮ ಮನೆಗೆ ಎರಡು ಬಾರಿ ಬಂದಿದ್ದ ಪೋಲಿಸ್ ಅಧಿಕಾರಿಯೇ ಮೊದಲು ಕಣ್ಣಿಗೆ ಬಿದ್ದ. ನನ್ನ ಕರೆಯ ಬಗ್ಗೆ ಅವನಿಗೆ ತಿಳಿದಿಲ್ಲವಾದರೂ ನಾನು ಬಂದ ಉದ್ದೇಶವನ್ನು ಅರ್ಥೈಸಿಕೊಂಡ. ತನ್ನ ಕಾರಿನಲ್ಲೇ ಶವಾಗಾರಕ್ಕೆ ಕರೆದೊಯ್ದ. ತಣ್ಣಗೆ, ಬಿಮ್ಮಗೆ ಕೊರೆಯುತ್ತಿದ್ದ ಶವಾಗಾರದ ಕಾರಿಡಾರಿನಲ್ಲಿ ನಮ್ಮಿಬ್ಬರ ಬೂಟುಗಳ ಸದ್ದು ನನ್ನ ಎದೆಬಡಿತವನ್ನು ಪ್ರತಿಧ್ವನಿಸಿದಂತೆ ಕೇಳಿತು. ಒಂದು ಬಾಗಿಲು ದಾಟಿ ಒಳ ಹೊಕ್ಕಾಗ, ಛಳಿ ಇಮ್ಮಡಿಸಿತು. ಸಾಲು-ಸಾಲು ಎತ್ತರದ ಸ್ಟೀಲ್ ಕವಾಟುಗಳಲ್ಲಿ ಸಣ್ಣ-ಸಣ್ಣ ಖಾನೆಗಳು. ಎಲ್ಲದರ ಹಿಡಿಕೆಗಳಲ್ಲಿ ಕ್ರಮ ಸಂಖ್ಯೆಗಳು. ನಮ್ಮಿಬ್ಬರ ಹೊರತಾಗಿ ಬೇರೆ ಯಾವ ಉಸಿರೂ ಇಲ್ಲದ ಶೈತ್ಯಾಗಾರ. ನನ್ನ ಉಸಿರೇ ಎದೆಯಿಂದ ಹೊರಗೆ ಹಾರಿ ಈ ಖಾನೆಗಳ ದೇಹಗಳಲ್ಲಿ ಸೇರಲು ಯತ್ನಿಸುತ್ತಿದೆ ಅನಿಸಿತು. ಅಷ್ಟರಲ್ಲಿ ಆ ಅಧಿಕಾರಿ ಒಂದು ಖಾನೆಯ ಹಿಡಿಕೆ ಹಿಡಿದು ಎಳೆದ. ಬಿಳಿ ಬಟ್ಟೆ ಮುಚ್ಚಿದ್ದ ದೇಹ ನನ್ನ ಕಣ್ಣೆದುರು ಬರಲಾರಂಭಿಸಿತು. ಎದೆಯ ಮಟ್ಟಕ್ಕೆ ಎಳೆದು, ಮುಖದ ಮೇಲಿನ ವಸ್ತ್ರ ಸರಿಸಲು ಕೈಯಿಟ್ಟ. ನೋಡಲಾಗದೆ ಕಣ್ಣು ಮುಚ್ಚಿಕೊಂಡೆ. ನನ್ನೊಳಗಿನ ನಂಬಿಕೆ, ದೇವರು, ಪ್ರಜ್ಞೆ, ಬುದ್ಧಿ, ವಿವೇಕ... ಎಲ್ಲವೂ ಆ ನಿರ್ವಾತದೊಳಗೆ ಲೀನವಾದಂತೆ ಅನಿಸಿತು. "ಮಿಸ್ಟರ್ ಕೇಶಾವ್, ಈಸ್ ದಿಸ್ ಯುವರ್ ಸನ್?" ಕಣ್ಣು ತೆರೆಯಲೊಲ್ಲದು. ಉಸಿರು ಆಡಲೊಲ್ಲದು. ಹೇಗೆ ನೋಡಲಿ ಈ ಶವವನ್ನು? ನಾನೇ ಶವದಂತಾಗಿದ್ದೆ. ಯಾಕೆ ನನ್ನ ಹೆತ್ತವರು ಕೇಶವನೆಂಬ ನಾಮಕರಣ ಮಾಡಿದರೋ...!

ಕ್ಷಣಗಳಲ್ಲಿ ವಿವೇಕ ಮರಳಿತು. ನಾನೀಗ ಈ ಮುಖ ನೋಡದೆ ಹಿಂದಿರುಗಿದರೆ ವಾಣಿ, ನಿಧಿಯವರ ಮುಖವನ್ನೂ ನೋಡಲಾರೆ ಅನ್ನುವ ಪ್ರಜ್ಞೆ ಮೂಡಿತು. ನಿಧಾನವಾಗಿ ಕಣ್ತೆರೆದು ಎದುರಿನ ಪೇಲವ ನಿರ್ಜೀವದತ್ತ ದೃಷ್ಟಿ ನೆಟ್ಟೆ. ಚೀರಬೇಕೆನಿಸಿತು. ಹೊರಗೆ ಓಡಬೇಕೆನಿಸಿತು. ಮನೆಯವರೆಗೂ ಓಡಿ ಓಡಿ ವಾಣಿಯನ್ನೂ ನಿಧಿಯನ್ನೂ ತಬ್ಬಿಕೊಂಡು ಮನಸಾರೆ ಅತ್ತು ಹಗುರಾಗಬೇಕೆನಿಸಿತು. ಹಾಗೇನೂ ಮಾಡದೆ, ಬಂದ ಬಾಗಿಲತ್ತ ಹೊರಳಿದೆ. ಗದ್ಗದ ಗಂಟಲನ್ನು ಗುರು-ಗುರು ಮಾಡಿ, ಮೆಲ್ಲಗೆ, "ನೋ ಸರ್. ಹೀ ಈಸ್ ನಾಟ್ ಮೈ ಸನ್. ಥಾಂಕ್ಯೂ ಫಾರ್ ಯುವರ್ ಹೆಲ್ಪ್" ಅಂದೆ.

ಮನೆಗೆ ಬಂದು ಪೆಚ್ಚು ನಗು ತೂರಿಸಿ ಅದು ಕಿಶೋರನಲ್ಲವೆಂದು ಸಾರಿದೆ. ನನ್ನೊಳಗೆ ದೈತ್ಯನೊಬ್ಬ ಹೊಕ್ಕಿದ್ದ. ಅದೇ ರಾತ್ರೆ ವಾಣಿಗೆ ತಿಳಿಯದಂತೆ ಕಿಶೋರನ ಡೈರಿಯನ್ನು ಚಿಂದಿ ಚಿಂದಿ ಮಾಡಿದೆ, ಒಂದು ಪುಟದ ಹೊರತಾಗಿ. ನಾವೆಲ್ಲರೂ ನಮ್ಮ ಹಳ್ಳಿ ಕೋಣಂದೂರಿಗೆ ಮರಳುವ ಅವನಾಸೆಯನ್ನು ತೋಡಿಕೊಂಡಿದ್ದ ಪುಟವನ್ನು ನನ್ನ ಪರ್ಸಿನ ಒಳಗೆ ಜೋಪಾನವಾಗಿ ಮಡಚಿಟ್ಟುಕೊಂಡೆ. ವಾಣಿ ಮತ್ತು ನಿಧಿ ಇಬ್ಬರಿಗೂ ಅದರ ಬಗ್ಗೆ ಮನವರಿಕೆ ಮಾಡಿಸಿ ಹಳ್ಳಿಗೇ ಹಿಂದಿರುಗಿದರೆ ಹೇಗೆ ಅನ್ನುವ ಯೋಚನೆ ಕಾಡಲಾರಂಭಿಸಿತು. ಆದರೆ, ನಿಧಿಯನ್ನು ಅಲ್ಲಿಗೆ ಒಗ್ಗಿಸುವುದು ಕಷ್ಟ ಎಂಬ ಅರಿವೂ ಇದೆ. ಮುಂದೇನು ಅನ್ನುವ ಪ್ರಶ್ನಾರ್ಥಕದೊಡನೆ ಕಾದಾಡುತ್ತಾ ದಿನಗಳು ಕಳೆಯುತ್ತಿವೆ.
************ ************
(ಮುಂದಿನ ಭಾಗ.....)

4 comments:

ಶಾಂತಲಾ ಭಂಡಿ said...

ಸುಪ್ತದೀಪ್ತಿ ಅವರೆ...
ಒಂದೇ ಉಸಿರಿಗೆ ಓದಿಸಿಕೊಂಡುಹೋಯಿತು.
ಮುಂದಿನ ಭಾಗಗಳನ್ನು ಕಾಯುತ್ತಿದ್ದೇನೆ.

ಮಧು said...

ooನಿಜ, ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಯಿತು. ತುಂಬಾ ಚೆನ್ನಾಗಿದೆ. ಮುಂದಿನ ಭಾಗ ಯಾವಾಗ?

ಶಾಂತಲಾ ಭಂಡಿ said...

@ಮಧು
ನಾನೂ ನಿನ್ನ ಹಾಂಗೆ ತಿಳ್ಕಂಡಿದ್ದಿ, ಈ ಪೇಜ್ ಓದಿ ಆದ್ಮೇಲೆ ಎಂತಕ್ಕೋ ಇದರ ಹಿಂದಿನ ಪೇಜ್ ಗೆ ಹೋದ್ರೆ ಅಲ್ಲಿ ಭಾಗ-೨ ಇತ್ತು. ಓದ್ಕ್ಯಂಡು ಅಲ್ಲೂ ಕಮೆಂಟ್ ಹಾಕಿಕ್ ಬಂದಿ.
***********************************

ಜ್ಯೋತಿ ಅಕ್ಕಾ...
ಪಾಪ ಮಧು, ಮುಂದಿನ್ ಭಾಗಕ್ಕೆ ಕಾಯ್ತಾ ಇದ್ದ, ಅವನಿಗೆ ಲೇಟ್ ಆಗ್ಬಾರ್ದು ಅಂತ ನಾನ್ ಕಂಡಿದ್ದನ್ನ ಅವನಿಗೂ ಹೇಳ್ಬಿಟ್ಟೆ, ಸಾರಿ ಅಕ್ಕಾ....
ನೀವು ಭಾಗ-೨ ನ್ನ ಆಮೇಲೆ ಹಾಕ್ಬೇಕಿತ್ತು, ಹಿಂದಿನ ಪೇಜ್ ಅಲ್ಲಿದೆ ಅಂತ ಯಾರ್ಗೂ ಗೊತ್ತಾಗ್ತಿಲ್ಲ ಅಕ್ಕಾ...

ಸುಪ್ತದೀಪ್ತಿ suptadeepti said...

ಮಧು, ಶಾಂತಲಾ,

ಹೌದು, ಮುಂದಿನ ಭಾಗ ಹಿಂದಿನ ಪುಟಕ್ಕೆ ಹೋಗಿದೆ...

ಎಲ್ಲವನ್ನೂ ಒಂದೇ ಪುಟದಲ್ಲಿ ಹಾಕಿದ್ರೆ ಪೇಜ್ ಲೋಡ್ ಆಗಲ್ಲ ಅಂತ ಮೊದಲ ಪುಟ-ನಂತ್ರದ ಪುಟ ಅಂತ ಮಾಡ್ದೆ... sorry for creating confusion.

ಈಗ ಸರಿ ಮಾಡ್ತೇನೆ...