ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Saturday 20 December, 2008

'ಡೆಲ್ ಚಿಕ್ಕಣ್ಣ'ನ ಅನಾರೋಗ್ಯ....

ಇದೇನಂಥ ಹೊಸ ವಿಷಯ ಅಲ್ಲದಿರಬಹುದು. ಎಲ್ಲ ಮಾಮೂಲು ಇದ್ದ ದಿನಗಳೇ ಹಾಗೆ. ಅಮೆರಿಕದಿಂದ ರಜೆಗೆಂದು ಜುಲೈ ಕೊನೆಯ ವಾರದಲ್ಲಿ ಉಡುಪಿ ಜಿಲ್ಲೆಯ ನಮ್ಮೂರಿಗೆ ಹೋದಾಗ ಧೋ ಧೋ ಮಳೆ. ಹೇಳಿ ಕೇಳಿ ಮುಂಗಾರು; ಮಳೆಯಲ್ಲದೆ ಮತ್ತೇನಿದ್ದೀತು? ಊರಿನ ಮಳೆಯೆಂದರೆ ನನಗೇನೂ ಬೇಸರವೇ ಇಲ್ಲ.

--ಬಿಡುವಿಲ್ಲದೆ ಸುರಿಯುವ ಮಳೆಗೆ ಮನೆಯ ಪಕ್ಕದ ಚರಂಡಿ ತುಂಬಿ ಅಂಗಳಕ್ಕೆ ನೀರು ನುಗ್ಗಿದರೇನು? (ಮಳೆ ನಿಂತಾಗ ಅದೂ ಕಡಿಮೆಯಾಗ್ತದೆ!)
--ಮುಂದಿನ ರಸ್ತೆಯಲ್ಲಿ ಹೋಗುವ ಯಾರದೋ ಕಾರು ಈ ಸಣ್ಣ "ಬೊಳ್ಳ"ಕ್ಕೆ (ನೆರೆಗೆ) ಸಿಕ್ಕಿ ಧಡಕ್ಕಂತ ನಿಂತರೇನು? (ಒಂದೆರಡು ಸರ್ತಿ ಸ್ಟಾರ್ಟ್ ಮಾಡಿದಾಗ ಮತ್ತೆ ಹೊರಟೇ ಹೊರಡುತ್ತದೆ! ನಮಗೇನು ತೊಂದರೆ ಇಲ್ಲ!)
--ಈಗ ಕರೆಂಟು ಉಂಟೂಂತ, ಅಡುಗೆಗೆ ಮಿಕ್ಸಿಯಲ್ಲಿ ಮಸಾಲೆ ಅರೆಯಲು ತಯಾರಾದಾಗಲೇ ಪ್ಲಗ್ ಮೌನವಾದರೇನು? (ಮಸಾಲೆ ಇಲ್ಲದೆಯೇ 'ಬೋಳು ಕೊದ್ದೆಲ್' ಮಾಡಬಹುದು!)
--ಪಕ್ಕದ ಕೋಣೆಯಿಂದ ಮಗ ಕರೆದದ್ದೂ ಕೇಳದಷ್ಟು ಮಳೆರಾಯನೇ ಬೊಬ್ಬೆ ಇಡುತ್ತಿದ್ದರೇನು? (ಮಗನಿಗೆ ಬೇರೆ ಕೆಲಸ ಇಲ್ಲ, ಸುಮ್ನೆ ನನ್ನ ತಲೆ ತಿಂತಾನೆ!)
--ಸೋಲಾರ್ ಹೀಟರ್ ಇದ್ದೂ ಒಳಗೆ ಗ್ಯಾಸ್ ಒಲೆಯಲ್ಲೇ ಸ್ನಾನದ ನೀರು ಬಿಸಿ ಮಾಡಬೇಕಾದರೇನು? (ವರ್ಷದಲ್ಲಿ ಕೆಲವೇ ಕೆಲವು ದಿನ ತಾನೇ! ಹೊರಗೆ ನುಸಿ ಹೊಡೆತ ತಿಂತಾ ನೀರೊಲೆಗೆ ಬೆಂಕಿ ಹಾಕುದಕ್ಕಿಂತ ಇದೇ ವಾಸಿ!)
--ಬೇರೆ ಬೇರೆ ಶ್ರುತಿಯ ರಾಗ ಹಾಡುವ ಊರಿನ ನುಸಿಗಳೆಲ್ಲ ನಮ್ಮ ಮನೆಯಲ್ಲೇ ಬಿಡಾರ ಹುಡುಕಿದರೇನು? (ಒಡೋಮಸ್ ಉಂಟಲ್ಲ, ಹಚ್ಚಿಕೊಂಡೇ ಇದ್ದರಾಯ್ತು!)
--ನೆಲವೇ ನಡುಗುವ ಹಾಗೆ, ಕಿವಿ ಕೆಪ್ಪಾಗುವ ಹಾಗೆ, ಎದೆ ಒಡೆಯುವ ಹಾಗೆ, ಎಲ್ಲೋ ಹತ್ತಿರದಲ್ಲೇ ಸಿಡಿಲು ಹೊಡೆದರೇನು? (ಎರಡು ಸೆಕೆಂಡ್ ಕಿವಿ-ಕಣ್ಣು ಮುಚ್ಚಿ, 'ದೇವರೇ, ಯಾರಿಗೂ ಏನೂ ಆಗದೇ ಇರ್ಲಿ' ಅಂತ ಧ್ಯಾನಿಸಿದರೆ ಮುಗೀತು!)
--ಮನೆಯೊಳಗೆಲ್ಲ ಕೆಸರು ಕೆಸರು ಕಿಚಿಪಿಚಿಯಾದರೇನು? (ಆಗಾಗ ಒರಸ್ತಾ ಇದ್ರೆ ಸರಿ, ಬೇರೆ ವ್ಯಾಯಾಮ ಬೇಕಂತಿಲ್ಲ!)
--ಬಟ್ಟೆ ಸರಿಯಾಗಿ ಒಣಗದೆ ಹಳಸಲು ವಾಸನೆ ಬಂದರೇನು? (ರಾತ್ರಿ ಫ್ಯಾನ್ ಅಡಿಗೆ ಹರಡಿದರೆ ಸುಮಾರಾಗಿ ಒಣಗ್ತವಲ್ಲ!)
--ಮರದ ವಸ್ತುಗಳ ಮೇಲೆಲ್ಲ 'ಬುಗುಟೆ' (ಬಿಳೀ ಬೂಸ್ಟ್) ಬಂದರೇನು? (ವಾರಕ್ಕೊಮ್ಮೆ ಅವುಗಳನ್ನೂ ಒರಸಿದ್ರೆ ಧೂಳಿನ ಅಲರ್ಜಿ ಆಗುದಿಲ್ಲ!)

ಇಂಥಾ ಇನ್ನೂ ಹಲವಾರು ಪ್ರಶ್ನೆಗಳೂ ಅಚ್ಚರಿಗಳೂ ಇದ್ದರೂ ಮಳೆಗಾಲ ನನಗೆ ಇಷ್ಟವೇ. ಆದ್ರೆ, ಈ ಸರ್ತಿ ಮಾತ್ರ ಮಳೆಗಾಲ ನನಗೆ ದೊಡ್ಡ ಚಿಂತಾಜನಕ ಪರಿಸ್ಥಿತಿ ಕೊಟ್ಟಿತು.

ಇಲ್ಲಿಂದ ಹೋದಾಗ ನನಗೋಸ್ಕರ ಒಂದು ಹಳೇ ಡೆಲ್ ಲ್ಯಾಪ್-ಟಾಪ್ ಹೊಂದಿಸಿಕೊಂಡು, ನನ್ನ ಬರಹಗಳನ್ನೆಲ್ಲ ಅದಕ್ಕೆ ತುಂಬಿಸಿಕೊಟ್ಟಿದ್ದರು ನನ್ನವರು. ಊರಿಗೆ ಹೋಗಿ ಒಂದೆರಡು ವಾರದ ನಂತರ, ಮನೆಯಲ್ಲಿ ಡಿ.ಎಸ್.ಎಲ್. ಕನೆಕ್ಷನ್ ಬಂದ ಮೇಲೆ ಅದನ್ನು ತೆರೆದು ನನ್ನ ಬ್ಲಾಗ್ ಕಡೆಗೆ ಕಣ್ಣು ಹಾಯಿಸಿ ಒಂದೆರಡು ಕವನಗಳನ್ನೂ ಅಲ್ಲಿಗೆ ಹರಿಸಿದ್ದೆ. ನಂತರ ಒಂದು ವಾರ ಮನೆಯಲ್ಲಿರಲಿಲ್ಲ. ಆಮೇಲೆ ಬಂದಾಗ ಮತ್ತೊಮ್ಮೆ ನನ್ನ ಈ-ಮೈಲುಗಳನ್ನೆಲ್ಲ ಒಮ್ಮೆ ನೋಡಿ ಬ್ಲಾಗಿನಲ್ಲಿ ಬಂದಿದ್ದ(!?) ಪ್ರತಿಕ್ರಿಯೆಗಳಿಗೆ ಉತ್ತರಿಸಿದ್ದೆ.

ಮರುದಿನ ಬೆಳಗ್ಗೆ ಯಾಕೋ ಈ ನನ್ನ 'ಡೆಲ್ ಚಿಕ್ಕಣ್ಣ' ಏಳಲು ತಕರಾರು ಮಾಡಿದ. ಏನೋ ಥಂಡಿ ಆಗಿರಬೇಕು, ಶೀತ ಆಗ್ತದೋ ಏನೋ ಅಂದುಕೊಂಡೆ. ನನ್ನ ಪ್ರಾರ್ಥನೆಗೋ, ತನಗೇ ಬೋರಾಗಿದ್ದಕ್ಕೋ, ಅಂತೂ ಆ ದಿನ ಮಳೆರಾಯ ರಜೆ ತಗೊಂಡ. ಮಧ್ಯಾಹ್ನ ಮತ್ತೆ ಈ ಪುಟಾಣಿ ಜಾದೂಗಾರನನ್ನು ಎಬ್ಬಿಸಿದರೂ ಏಳಲಿಲ್ಲ. ರಾತ್ರೆಗೂ ನಿದ್ದೆ ಬಿಡಲಿಲ್ಲ. ಗಾಬರಿಯಾಯ್ತು. ನನ್ನ ಕೈಗೆಟಕುವ ಕಂಪ್ಯೂಟರ್ ವೈದ್ಯರನ್ನು ಕರೆದೆ: 'ರೀ... ಇವನು ಏಳ್ತಾನೇ ಇಲ್ಲ; ಏನಾಗಿದೆ ನೋಡಿ ಸ್ವಲ್ಪ... ಇಲ್ಲಿ ಬನ್ನಿ ಮೊದ್ಲು... ನಿಮ್ಮ ಕೆಲ್ಸ ಮತ್ತೆ ಮಾಡಿ... ಇವನನ್ನು ಒಮ್ಮೆ ನೋಡಿ... ರೀ... ರ್ರೀ...'

ಅಷ್ಟೋತ್ತರ ಕೇಳುವ ಮೊದಲೇ ಬಂದರೆ ಅವರ ಘನತೆಗೆ ಕುಂದು ಅಂತ ಗೊತ್ತಿದ್ದವರು, ಯಥಾವತ್ ಅವರ ಪಾಲಿನ ನಾಮಾರ್ಚನೆ ಮಾಡ್ತಾ ಬಂದ್ರು. ಮಲಗಿದ್ದ ಚಿಕ್ಕಣ್ಣನನ್ನು ತಮ್ಮ ಕಾಲ ಮೇಲೇ ಏರಿಸಿಕೊಂಡು ಅಲ್ಲಿ ಇಲ್ಲಿ ತಡವಿ, ತಟ್ಟಿ, ಕಿವಿ ಹಿಡಿದು, ಕಾಲು ಎಳೆದು, ತಲೆ ಎತ್ತಿ... ಊಹುಂ ಏನೇನು ಮಾಡಿದರೂ ಚಿಕ್ಕಣ್ಣ ಏಳಲೇ ಇಲ್ಲ.
'ಇವನು ಕೋಮಾಗೆ ಹೋಗಿರೋ ಹಾಗಿದೆ ಮಾರಾಯ್ತಿ. ಮುಂದಿನ ವಾರ ದೊಡ್ಡೂರಿನ ದೊಡ್ಡಾಸ್ಪತ್ರೆಗೆ ಕರ್ಕೊಂಡು ಹೋಗುವಾ...' ಅಂದ್ರು. ನನಗೇನೋ ಗಾಬರಿಯಾಯ್ತು; ಕೋಮಾ ಅಂತಾರೆ, ದೊಡ್ಡಾಸ್ಪತ್ರೆ ಅಂತಾರೆ, ಮುಂದಿನ ವಾರ ಅಂತಾರೆ...
'ಅಲ್ಲಿ ಹೋದ್ರೆ ಸರಿಯಾಗ್ತದಾ...?' ನನ್ನ ಸ್ವರಕ್ಕೆ ಜೀವ ಇರಲಿಲ್ಲ. ನನ್ನ ಬ್ಲಾಗಿನ ಜೀವ ಚಿಕ್ಕಣ್ಣನ ಒಳಗೇ ಇತ್ತಲ್ಲ.
'ಏನೋ, ನೋಡ್ಬೇಕು.' ವೇದಾಂತಿಯ ಮೂಡ್ ನನ್ನ ಹಿಡಿತಕ್ಕೆ ಬರುವಂಥದ್ದಲ್ಲ.

ಸರಿ, ಆ ಮುಂದಿನ ವಾರದ 'ಆ ದಿನ' ಬಂತು. ಒಂದಷ್ಟು ದಿನಗಳಿಗೆ ಆಗುವಷ್ಟು ಬಟ್ಟೆಬರೆ ಜೋಡಿಸಿಕೊಂಡು, ಈ ಚಿಕ್ಕಣ್ಣನನ್ನೂ ಚೆನ್ನಾಗಿ ಹೊದೆಸಿ ಹೆಗಲಿಗೆ ಏರಿಸಿಕೊಂಡೆ. ಆ ದೊಡ್ಡೂರಿಗೆ ಸಾಗಿತು ವೋಲ್ವೋ ಬಸ್.

ಸಿಕ್ಕಾಪಟ್ಟೆ ಪ್ಯಾಂ... ಪೂಂ... ಕೀಂ... ಕ್ರೇಂ... ಮೇಳಗಳಿಗೆ ಸಿಹಿನಿದ್ದೆಯಿಂದ ಕುಕ್ಕಿದಂತಾಗಿ ಕಣ್ಣು ಉಜ್ಜಿಕೊಂಡು ನೋಡಿದಾಗ, ಬೆಳಗಾತ ಬೆಂಗಳೂರಿನ ಸರಹದ್ದಿನಲ್ಲಿ ಬೇರೆ ವಾಹನಗಳ ನಡುವೆ ದಾರಿ ಮಾಡಿಕೊಂಡು ನುಸುಳುತ್ತಿತ್ತು ವೋಲ್ವೋ. "ನಿಮ್ಮ ನಿಲುದಾಣದ ಕಡೆ ಹೋಗೋದಿಲ್ಲ, ತಡವಾಗಿದೆ; ಈ ದಟ್ಟಣೆಯಲ್ಲಿ ಊರೊಳಗೆ ಬಸ್ ಹೋಗೋ ಹಾಗಿಲ್ಲ, ಇಲ್ಲೇ ಇಳೀರಿ..." ಅಂದ ನಿರ್ವಾಹಕ. ನಮಗಂತೂ ಬೇರೆ ನಿರ್ವಾಹವಿರಲಿಲ್ಲವಲ್ಲ; ಇಳಿದೆವು. ಅಲ್ಲಿಂದ ಆಟೋ ಹಿಡಿದು ನಾವು ಉಳಿದುಕೊಳ್ಳಬೇಕಾಗಿದ್ದ ಮನೆ ತಲುಪಿದ್ದಾಯ್ತು. ಅಂತೂ ಇಂತೂ ಬೆಳಗಿನ ವಿಧಿವಿಧಾನಗಳನ್ನು ಮುಗಿಸಿದೆವು. ದೊಡ್ಡೂರಿನ ವಾತಾವರಣ ನನ್ನ ಗಂಟಲನ್ನು, ಮೂಗನ್ನು ಹೊಕ್ಕಿತ್ತು. ನನ್ನ ಸ್ವರ ನನ್ನದಲ್ಲ ಅನ್ನುವಂತಾಗಿತ್ತು. ಒಮ್ಮೆ ಮನೆಯ ಬಾಗಿಲಿಂದಾಚೆ ಹೋಗಿ ಬಂದರೆ ಮೈ ಮೇಲೆ ಒಂದು ರೀತಿಯ ತೆಳುಗಪ್ಪಿನ ರಕ್ಷಣಾ ಪದರ ನಿರ್ಮಾಣವಾಗುತ್ತಿತ್ತು. ಬೆಳಗಿನ ಸಣ್ಣ ಛಳಿ, ನಡುಹಗಲ ಬಿಸಿಲ ಉರಿ, ನಸು ಸಂಜೆಯ ದಟ್ಟ ಹೊಗೆ, ಮುಸ್ಸಂಜೆಯ ಕಲುಷಿತ ಮೋಡ, ಮತ್ತು ರಾತ್ರೆಯ ಇಬ್ಬನಿ ಹೊದಿಕೆಗಳ ನಡುವೆಯೇ ದೊಡ್ಡೂರಿನ ದೊಡ್ಡಾಸ್ಪತ್ರೆಗೆ ಅರ್ಜಿ ಹಾಕುವ ಕೆಲಸಕ್ಕೆ ಶುರುವಿಟ್ಟರು ನನ್ನವರು.

ಮಾರನೇ ಬೆಳಗ್ಗೆ ಲೈನ್-ಕ್ಲೀಯರ್ರಾಗಿ, 'ಡೆಲ್' ಸರ್ವಿಸ್ ಸೆಂಟರಿಗೆ ಫೋನಾಯಿಸಿದಾಗ, "ನಿಮ್ಮ ಕೋರಿಕೆ ಮಾನ್ಯವಾಗಿದೆ. ಮೊದಲಾಗಿ ಒಂದು 'ಕೊಟೇಷನ್' ನಿಮಗೆ ಈ-ಮೈಲಿನಲ್ಲಿ ಬರುತ್ತೆ. ಚೆಕ್ ಅಥವಾ ಡಿ.ಡಿ. ಮೂಲಕ ಅದನ್ನು ಪಾವತಿಸಿ. ಆ ಮೊತ್ತ ನಮ್ಮನ್ನು ತಲುಪಿದ ಮೇಲೆ ಒಂದೆರಡು ದಿನಗಳಲ್ಲಿ ನಮ್ಮ ನಿಷ್ಣಾತರು ನಿಮ್ಮ ಮನೆಗೆ ಬರುವಂತೆ ಆದೇಶಿಸಲಾಗುತ್ತದೆ. ಅವರು ಚಿಕ್ಕಣ್ಣನನ್ನು ಚೆಕ್-ಅಪ್ ಮಾಡುತ್ತಾರೆ. ಆಮೇಲಿನ ವಿಚಾರ ಆಮೇಲೆಯೇ ಹೇಳಬಹುದು." ಎಂಬ ಉತ್ತರ ಬಂತು.

ಎರಡು ದಿನ ಕಾದರೂ ಯಾವುದೇ ಈ-ಮೈಲ್ ನನ್ನವರ ಪತ್ರಪೆಟ್ಟಿಗೆಗೆ ಬೀಳಲಿಲ್ಲ. ಕ.ಬು. ಕೂಡಾ ಅದನ್ನು ಕಂಡಿರಲಿಲ್ಲ. ಮತ್ತೊಮ್ಮೆ ಫೋನಾಯಿಸಿ, ಗುರಾಯಿಸಿ, ನೊಂದ ಪೋಷಕರ ಪೋಸು ಕೊಟ್ಟು, ಒಂದಿಷ್ಟು ಒದರಿದ ಮೇಲೆ ಒಂದೆರಡು ಗಂಟೆಯಲ್ಲಿ ಬರುವುದೆಂದಿದ್ದ ವಿ-ಪತ್ರ, ಕೊನೆಗೂ ಬಂತು; ಮರುಮುಂಜಾನೆಯೇ. ಅದರ ಸೂಚನೆಗಳ ಮೇರೆಗೆ, ಪೂರ್ವಪರಿವೀಕ್ಷಣಾ ಮೊತ್ತವಾದ 'ಒಂದು ಸಾವಿರದ ಮುನ್ನೂರ ಅರವತ್ನಾಲ್ಕು ರುಪಾಯಿ'ಗಳ ಚೆಕ್ ಕಳಿಸಲು ವಿಳಾಸ ಬರೆದುಕೊಂಡಾಯ್ತು. ಇಷ್ಟಾಗುವಾಗ, ದೊಡ್ಡೂರಲ್ಲಿ ನಮ್ಮ ವಾಸ ಮುಗಿಯುತ್ತಾ ಬಂದಿತ್ತು, ಮುಂದಿನ ಪ್ರಯಾಣ ನಿಗದಿಯಾಗಿತ್ತು, ಮರುದಿನವೇ ಚುಮುಚುಮು ಮುಂಜಾನೆಗೆ. ಆದ್ದರಿಂದ ನಾವು ಉಳಿದುಕೊಂಡಿದ್ದ ಮನೆಯ ಯುವಕನ ಸಹಾಯ ಪಡೆಯಲು ನಿರ್ಧರಿಸಿದೆವು.

ಆ ಸಂಜೆ, ನಮ್ಮ ಚಿಕ್ಕಣ್ಣನನ್ನು ಯುವಕನ ಕೋಣೆಗೆ ಎತ್ತಿಕೊಂಡು ಹೋದ ನನ್ನವರು ಎಲ್ಲ ವಿವರಗಳನ್ನು ತಿಳಿಸಿದರು. ಚೆಕ್ ಬರೆದು ಡೆಲ್ ಸರ್ವಿಸ್ ಸೆಂಟರಿನ ವಿಳಾಸ ಬರೆದು ತಯಾರು ಮಾಡಿಡುವುದಾಗಿಯೂ, ಮರುದಿನ ಅದನ್ನು ಟಪ್ಪಾಲಿಗೆ ಹಾಕುವುದಾಗಿಯೂ ಹೇಳಿದರು. ಆಮೇಲೆ ಡೆಲ್ ನಿಷ್ಣಾತ ಬರುವಾಗ ಚಿಕ್ಕಣ್ಣನನ್ನು ಅವನ ಕೈಗೊಪ್ಪಿಸಿ ಅವನು ನಡೆಸುವ ಪರೀಕ್ಷೆಗಳನ್ನು ಗಮನಿಸಬೇಕೆಂದೂ ಕೇಳಿಕೊಂಡರು. ಯಾವಯಾವ ರೀತಿಯಲ್ಲಿ ತಟ್ಟಿ ತಡವಿ ಎಬ್ಬಿಸಿದರೂ ಚಿಕ್ಕಣ್ಣ ಏಳಲಿಲ್ಲ ಎಂಬುದನ್ನು ಇವರು ಅವನಿಗೆ ಪ್ರಮಾಣ ಸಹಿತ ತೋರಿಸುತ್ತಿರುವಾಗ, ನೋಡಲಾಗದೆ ನಾನು ಕೆಳಗಿಳಿದು ಚಾವಡಿಗೆ ಹೋದೆ. ಕೆಲವೇ ನಿಮಿಷಗಳಲ್ಲಿ, ಮಹಡಿಯ ಆ ಕೋಣೆಯಿಂದ ಕೆಳಗಿನ ಚಾವಡಿಗೊಂದು ಕರೆ.... "ಏ.... ಇಲ್ಲಿ ಬಾ... ಇಲ್ನೋಡು, ಬೇಗ ಬಾ...."

ಮನೆಯಾಕೆಯೊಂದಿಗೆ ಆಗ ತಾನೇ ಯಾವುದೋ ಸ್ವಾರಸ್ಯಕರವಾದ ಸುದ್ದಿ ಸವಿಯುತ್ತಿದ್ದ ನನಗೆ ಕೋಲಲ್ಲಿ ಕುಟ್ಟಿದಂತಾದರೂ ಬೇಕೋ ಬೇಡವೋ ಎಂಬಂತೆ ಮಹಡಿ ಹತ್ತಿದೆ. ಕರೆ ಕೊಟ್ಟ ಮೇಲೆ ಮಾಮೂಲಿ ಮೌನಾವತಾರ ತಾಳಿದ್ದ ಇವರನ್ನು ನೋಡಿ, ಯುವಕನನ್ನು ಪ್ರಶ್ನಿಸಿದೆ, "ಏನಾಯ್ತು?". ಅವನೋ, ಎಲ್ಲರಂತಲ್ಲದ ಅಸಾಮಾನ್ಯ ಹುಡುಗ. ಎಂದಿನ ಗಂಭೀರ ಮುದ್ರೆಯಲ್ಲೇ, "ಮಾಮ ನಿಮ್ಮನ್ನು ಕರೆದರು" ಅಂದ. "ಅದು ಕೇಳಿಯೇ ನಾನು ಬಂದದ್ದು. ಏನಾಯ್ತು ಅಂತ ಕರೆದದ್ದು? ಯಾಕೆ?" ಅಂದೆ. ಇಬ್ಬರದ್ದೂ ಮೌನ. ಧ್ಯಾನ ಮಾತ್ರ ಚಿಕ್ಕಣ್ಣನತ್ತ ಇದ್ದದ್ದು ಈಗ ನನ್ನ ಗಮನಕ್ಕೂ ಬಂತು. ನೋಡಿದ್ರೆ...

ಇಷ್ಟೂ ದಿನಗಳು ನಡುವೆ ಘಟಿಸಿಯೇ ಇಲ್ಲವೆಂಬಂತೆ,
ಸಂದ ಘಟನೆಗಳೆಲ್ಲ ನಡೆದೇ ಇಲ್ಲವೆಂಬಂತೆ,
ನಮ್ಮ ಕಾಳಜಿಗೆಲ್ಲ ಅರ್ಥವೇ ಇಲ್ಲವೆಂಬಂತೆ,
ತಾನು ನಿದ್ರೆ ಮಾಡಿಯೇ ಇಲ್ಲವೆಂಬಂತೆ,

...ಆ ಅಂದಿನಂತೆಯೇ ಎದ್ದು ನಗುನಗುತ್ತಾ ಮುಖವರಳಿಸಿ ಎಲ್ಲ ಆಟ ಚಮತ್ಕಾರಗಳನ್ನು ಸಲೀಸಾಗಿ ಲೀಲಾಜಾಲವಾಗಿ ಪ್ರದರ್ಶಿಸುತ್ತಿದ್ದಾನೆ ನಮ್ಮ ಡೆಲ್ ಚಿಕ್ಕಣ್ಣ. ಇದೇನಾಯ್ತು ಇವನಿಗೆ? ಇದ್ದಕ್ಕಿದ್ದಂತೆಯೇ ಅವನು ಸರಿಹೋಗಿದ್ದು ಹೇಗೆ? ಅವನ ದೀರ್ಘ ನಿದ್ರೆ ಕರಗಿದ್ದು ಹೇಗೆ? ಅವನನ್ನು ಇವರು ಎಚ್ಚರಗೊಳಿಸಿದ್ದು ಹೇಗೆ? ಇದು ಮೊದಲೇ ಯಾಕಾಗಲಿಲ್ಲ? ಈಗ ಯಾಕೆ ಆಯ್ತು? ಹೇಗೆ? ಹೇಗೆ? ಯಾಕೆ? ಹೇಗೆ? ಅವರಿಬ್ಬರ ಬಳಿಯೂ ಉತ್ತರ ಇರಲಿಲ್ಲ. ತಲೆ ಕೆರೆದುಕೊಳ್ಳುತ್ತಾ ಹೊರಗೆ ಬಂದಾಗ...

...ಆ ಮುಸ್ಸಂಜೆಯಲ್ಲಿ, ಕಟ್ಟಿಕೊಂಡ ಗಂಟಲಲ್ಲಿ, ದೊಡ್ಡೂರಿನ ದಟ್ಟ ಗಾಳಿಯಲ್ಲಿ ಬಂತು ನೋಡಿ ಒಂದು ಸೀನು....
ಅದರ ಜೊತೆಗೇ ಡೆಲ್ ಚಿಕ್ಕಣ್ಣನ ನಿಗೂಢ ಕೋಮಾ ನಿವಾರಣೆಯಾದುದಕ್ಕೆ ಕಾರಣವೂ ಹೊಳೆದೇಬಿಟ್ಟಿತು.
ಅದೇನಪ್ಪಾ ಅಂದ್ರೆ- 'ನಮ್ಮೂರಿನಲ್ಲಿನ ಮಳೆಯ ಕುಳಿರ್ಗಾಳಿಗೆ ಮೈ ಒಡ್ಡಿಕೊಂಡು ಹಿತವಾಗಿ ಬೆಚ್ಚಗೆ ಮಲಗಿ ಸುದೀರ್ಘ ಹಿತನಿದ್ರೆಗೆ ಜಾರಿದ್ದ ಚಿಕ್ಕಣ್ಣನ ಬಣ್ಣಬಣ್ಣದ ಸುಂದರ ನೀಳ ಕನಸುಗಳೆಲ್ಲ, ದೊಡ್ಡೂರಿನ ದಮ್ಮು ಕಟ್ಟಿಸುವ ಮಾರುತನಿಂದಾಗಿ ಬಣ್ಣ ಕರಗಿ, ಚೂರುಚೂರಾಗಿ, ಭಗ್ನವಾಗಿ, ಅವನ ಮುಸುಕು ಸರಿಯುವುದನ್ನೇ ಕಾದಿದ್ದ. ಈಗ ಇವರು ಮುಸುಕು ಸರಿಸಿದ್ದೇ ತಡ, ಎದ್ದು ಮೈಕೊಡವಿ, ತನ್ನ ಸಾರ್ವಕಾಲಿಕ ಹರ್ಷಚಿತ್ತಸ್ಥಿತಿಯನ್ನು ಮತ್ತೆ ಹೊಂದಿದ್ದಾನೆ'- ಎಂಬುದು.

ಇದೀಗ ನನ್ನ ಥಿಯರಿ ಮಾತ್ರ. ಇದನ್ನು ಇನ್ಯಾರಾದರೂ ಪರಾಮರ್ಶಿಸಿ, ಸಾಧಿಸಿ, ವಿವೇಚಿಸಿ, ಪರೀಕ್ಷಿಸಿ, ಒರೆಹಚ್ಚಿ ನೋಡುವುದಾದರೆ ನನ್ನ ಅಭ್ಯಂತರವೇನೂ ಇಲ್ಲ. ಆದರೆ, ನಮ್ಮ ಡೆಲ್ ಚಿಕ್ಕಣ್ಣನನ್ನು ಮಾತ್ರ ನಿಮ್ಮ ಯಾವುದೇ ಪ್ರಯೋಗಕ್ಕೆ ಒಳಪಡಿಸಲು ಕೊಡಲಾರೆವೆಂದು ನಿಶ್ಚಯವಾಗಿ ತಿಳಿಸಲು ಬಯಸುತ್ತೇನೆ.