ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Tuesday, 30 March, 2010

ಅದೃಶ್ಯ

ಕಾರ್ಗಡಲ ಅಲೆ ಹೆಪ್ಪುಗಟ್ಟಿ
ಕರಗಲಾರದೆ ಕೊರಗಿದಾಗ
ತುಳುಕಲಾರದ ಕೊಳದಲ್ಲಿ
ಸಿಡಿಲು-ಗುಡುಗು

ಕಾಣದ ಮಿಂಚಿನ ಸೆಳೆಗೊಡ್ಡಿ
ಅಂಚು ಕೊಂಚ ಹಸಿಯಾದಾಗ
ಕಟ್ಟೆಕೊನೆಯ ಏರಿಯಲ್ಲಿ
ಒಸರು-ಕೆಸರು

ಸಿಡಿಲ ಮರಿ ಹುಟ್ಟಿ ಬಂತೆಂದು
ಕಲ್ಲಣಬೆ ಆರಿಸುವಾಗ
ಬುಟ್ಟಿಯೊಳು ಮಿಡಿಹೆಡೆಯಲ್ಲಿ
ಉಸಿರು-ಹೆಸರು

ಬೆಳ್ನೊರೆಯ ಸೋಗಿನಲಿ ತೆರೆದು
ಎದೆಯ ಹೆಬ್ಬಂಡೆ ಹರಿದಾಗ
ಕಿಬ್ಬದಿಯ ಜೋಳಿಗೆಯಲ್ಲಿ
ಹಸಿವು-ಅಳಲು
(೨೨-ಮಾರ್ಚ್-೨೦೦೯)
(ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟವು ಆಯೋಜಿಸಿದ್ದ "ಯುಗಾದಿ ಕವನ ಸ್ಪರ್ಧೆ"ಯಲ್ಲಿ ದ್ವಿತೀಯ ಬಹುಮಾನಕ್ಕೆ ಪಾತ್ರವಾದ ಕವನ. ಇದರ ಅರ್ಥ, ಸಂದೇಶ ಏನಿರಬಹುದೆಂದು ನಿರ್ಣಾಯಕರು ಸುಮಾರು ಮುಕ್ಕಾಲು ಗಂಟೆ ಕಾಲ ಚರ್ಚಿಸಿದರಂತೆ. ನಿಮಗೇನನ್ನಿಸುತ್ತದೆ? ತಿಳಿಸುವಿರಲ್ಲ.)

Wednesday, 24 March, 2010

ಅವಳಳಲು

ರಾಮನವಮಿಯ ಹಿಂದೆ ನನ್ನ ರಾಮನ ಮುಂದೆ
ಸೆರಗೊಡ್ಡಿ ಬೇಡಿದ್ದೆ ಮಾಣು ಎಂದು
ಆಗದೆಂದನು ರಾಮ, ಸತ್ಯನಿಷ್ಠನು ಸೋಮ
ಪ್ರಜೆಗಳಾಣತಿಯೊಂದೆ ಧಾರ್ಯವೆಂದು

"ರಘುವಂಶ ಕುಲಜಾತ, ಜನಕನಿಗೆ ಜಾಮಾತ
ಆಗಿಹುದು ಧರ್ಮಪಥ ನನ್ನ ಪಾತ್ರ
ಎಳೆಯ ಬಾಲೆಯರಿರಲಿ ಮುದಿಯ ಮಾನಸರಿರಲಿ
ನನ್ನ ಛತ್ರದ ನೆರಳು ಏಕಮಾತ್ರ"

ಹೀಗೆಂದನೇ ರಾಮ, ನನ್ನ ಉಸಿರಿನ ಧಾಮ
ಅವನ ನೆರಳಲ್ಲಿ ನಾ ಸುಖಿಯೆಂದೆನೆ
ಮೂವರತ್ತೆಯರೊಡನೆ ಅರಮನೆಯ ಅಂಗಳದಿ
ಊರ್ಮಿಳೆಯ ನಗುವಿನಲಿ ನಗುವಾದೆನೆ

ಧರ್ಮರಾಜ್ಯದ ಕಾರ್ಯ ಜಗವೆಲ್ಲ ಮೊಳಗಿರಲು
ರಾಮನಂಕಿತ ನಿತ್ಯ ಬೆಳಗುತಿರಲು
ಬಂತದೋ ಬರಸಿಡಿಲು ಮುಂಗಾರ ಕರಿ ಮುಗಿಲು
ರಾಮನಂಘ್ರಿಯ ಅಶ್ರು ತೋಯಿಸುವೊಲು

ಎಳೆಯ ಬಾಲೆಯು ಅಲ್ಲ, ಮುದಿಯು ನಾ ಮೊದಲಲ್ಲ
ಕ್ಷುದ್ರ ಕಣ್ಣಿನ ಪಿಸುರು ಪೀತ ನೋಟ
ಬಳಸಿ ಮಾತೇ ಇಲ್ಲ, ಬಳಲದಿರು ಎನಲಿಲ್ಲ
ಕಳುಹಿದನೆ ವನಕೆನ್ನ, ಮೃಗಕೆ ಊಟ

ರಾಮನವಮಿಯ ನೆಪದಿ ಋಷಿಪುಂಗವನ ಮುಂದೆ
ಸೆರಗೊಡ್ಡಿ ಬೇಡಿದೆನು ಮಾಣಿರೆಂದು
ಇನ್ನು ಇಂತಹ ಗಾಥೆ ಬರೆಯಬೇಡಿರಿ ತಂದೆ
ತಾಳೆಗರಿ ಕಂಟಗಳ ತೊರೆಯಿರೆಂದು

(ಮಾಣ್, ಮಾಣು= ತಡೆ, ನಿಲ್ಲು, ನಿಲ್ಲಿಸು)
(ಕಂಟ= ತಾಳೆಗರಿಗಳ ಮೇಲೆ ಬರೆಯಲು ಬಳಸುವ ಉಕ್ಕಿನ ಲೇಖನಿ)
(`ರಾಮನವಮಿ'ಯನ್ನು ಶ್ರೀರಾಮ ಪಟ್ಟಾಭಿಷೇಕದ ದಿನವೆಂಬ ನೆಲೆಯಲ್ಲಿ ಪರಿಗಣಿಸಲಾಗಿದೆ, ಜನ್ಮದಿನೋತ್ಸವ ಎಂದಲ್ಲ)
(೦೫-ಎಪ್ರಿಲ್-೨೦೦೯)

Tuesday, 16 March, 2010

ಲಭ್ಯ

ಹೇಳಬೇಕೆಂದುಕೊಂಡದ್ದು ಒಂದು
ಬಿಸಿಯುಸಿರಿನ ಒತ್ತಡಕ್ಕೆ ಪಕ್ಕಾಗಿ
ಮುತ್ತು ಮುತ್ತಾಗಿ ಚಿಮ್ಮಿ ಉದುರಿ
ತೋಟದೆಡೆಯಲ್ಲಿ ಬಿತ್ತಿದ್ದು ಮೊಳಕೆಯೊಡೆದು
ಅಕ್ಷರಕ್ಷರ ಪದಪದ ಸಾಲುಗಳೆಲ್ಲ
ಒಂದಕ್ಕೊಂದು ಬೆಸೆದು ಗೋಜಲು ಗೋಜಲು
ಬಿಸಿಲಿಗೆ ಹಚ್ಚನೆ ಹರಡಿ ಬೆಳೆದು
ಹಿತ್ತಿಲ ತುಂಬೆಲ್ಲ ಕಣ್ಣಿಗೆ ತಂಪು
ಕಾಲ್ತೊಡಕುವ ಕುಂಬಳ ಬಳ್ಳಿ
ದಟ್ಟ ಬಣ್ಣ ನಳನಳಿಸುವ ದೊರಗು
ಎಲೆಗಳ ನಡುವೆ ಹೂವಾಗಿದ್ದೂ ಕಾಣದೆ
ಕಿರುಕಾಯಾಗಿ ಎಳಸು ಮಾಗಿ
ಪಕ್ವವಾದಾಗ ಹಸುರಿನ ಮರೆಯಲ್ಲಿ
ಬೂದುಬಿಳುಪೋ ಚೆಂದಗೆಂಪೋ, ಅಂತೂ
ಬಳ್ಳಿಗೆ ನಿಸ್ವಾರ್ಥ ಸಫಲ ಧರ್ಮ
ಮಾಲಿಗೆ ಅಧಿಕಾರವಿಲ್ಲದ ಕರ್ಮ

(೨೪-ಜೂನ್-೨೦೦೯)

(09-08-09ರಂದು ಕನ್ನಡ ಪ್ರಭ ಸಾಪ್ತಾಹಿಕದಲ್ಲಿ ಪ್ರಕಟಿತ. ಸಂಪಾದಕರಿಗೆ ವಂದನೆಗಳೊಂದಿಗೆ ಧನ್ಯವಾದಗಳು. ಡಾ. ವಸಂತಕುಮಾರ್ ಪೆರ್ಲ ಅವರು ಸಂಪಾದಿಸುತ್ತಿರುವ "ಕಾವ್ಯ ೨೦೦೯"ರಲ್ಲಿಯೂ ಸೇರ್ಪಡೆಯಾಗುತ್ತಿದೆ; ಅವರಿಗೂ ಸಸ್ನೇಹ ನಮನಗಳು.)

Monday, 8 March, 2010

ಸ್ವರಾಭಾರ

ಎಂಟು ಕಣ್ಣಿನ ಬಿದಿರುಗೋಲಿಗೆ
ಎಂಟು ದಿಕ್ಕಿನ ಉಸಿರ ಶಕ್ತಿ
ಒಂದೆ ಉಸಿರಿಗೆ ಭಿನ್ನ ಹೆಸರನು
ಒಂದೆ ಹೊರಳಲಿ ಕೊಡುವ ಶಕ್ತಿ

ಪೂರ್ಣ ತುಂಬಿದ ಮಣ್ಣ ಕುಡಿಕೆಗೆ
ಚಿಣ್ಣಕೋಲದು ಕುಣಿದು ಶಕ್ತಿ
ಅರ್ಧಮರ್ಧದ ವಿವಿಧ ಸೊಗಸಲಿ
ಪೂರ್ಣ ರೂಪದ ಅಲೆಯ ಶಕ್ತಿ

ನಾಕು ತಂತಿಯ ನಾಲ್ಕು ನೆಲೆಯಲಿ
ನಾಕ ತೋರುವ ಲೋಕ ಶಕ್ತಿ
ಹರಿದು ಹಾಯುತ ಮೀಟಿ ಆಯುತ
ಹರಿಸಿ ಸುರಿಸುವ ಮೋದ ಶಕ್ತಿ

ಏಳು ಸ್ವರಗಳು ಏಳು ನೆಲೆಗಳು
ಏಳು ಎಳೆಗಳ ಕೇಳು ಶಕ್ತಿ
ಮೂರು ಸ್ತರದಲಿ ಮೈಯ ಮರೆಯಲು
ಮೇಲು ಇಲ್ಲದ ಮೇಳ ಶಕ್ತಿ

(೧೭-ಎಪ್ರಿಲ್-೨೦೦೯)