ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Wednesday 25 February, 2009

ಜಂಟಿ ಪಯಣ

ಅಂದು ನೀ ಬಂದಾಗ ಮಂದಿರದ ಹೊಸಿಲಲ್ಲಿ
ಮಂದಿ ನಿನ್ನನು ತಡೆದು ನಿಂದದ್ದು ನೆನಪಿದೆಯ?

'ಕಂದ'ನೆಂದೆನ್ನಮ್ಮ ಬಳಿಬಂದು ಕುಳಿತಾಗ
ನೀನು ಮೊಗ ತಿರುವಿದ್ದು ನಕ್ಕಿದ್ದು ನೆನಪಿದೆಯ?

ಚಂದ್ರ ಹಾಸಿದ ರಾತ್ರಿ ಮತ್ತಿನಲಿ ಈ ಧಾತ್ರಿ
ನನ್ನೊಳಗ ಕವಿಯೆದ್ದು ಹಾಡಿದ್ದು ನೆನಪಿದೆಯ?

ಹಿಂಜಿದರಳೆಯ ಕಾಳರಾತ್ರೆಯೊಳಗದ್ದಿಟ್ಟ
ಮಾಟ ಮುಂಗುರಳಲ್ಲಿ ಹೊಸೆದುಸಿರ ನೆನಪಿದೆಯ?

ಅರುಣ ಕಿರಣವ ಕದ್ದ ಹೊಂಗೆನ್ನೆ ಹಸೆಯಲ್ಲಿ
ನಿನ್ನ ದಾಸ್ಯಕೆ ಬಿದ್ದ ಕನಸುಗಳ ನೆನಪಿದೆಯ?

ಹನಿಹನಿದು ಸುಧೆಯಾಗಿ ಹರಿವ ಹೊಳೆ ಪ್ರೀತಿಯಲಿ
ಬಂಡೆ-ಸುಳಿಗಳ ಸೆಳೆತ ಕಾಡಿದ್ದು ನೆನಪಿದೆಯ?

ಪಲ್ಲವಿಸಿದೆಲ್ಲ ನಗು ಅಲೆಯಲೆಯ ಸೆಲೆಯಾಗಿ
ಮನದೊಳಗೆ ಮರುಕಳಿಸಿ ಸೇರಿದ್ದು ನೆನಪಿದೆಯ?

ಸವೆದ ಹಾದಿಯ ನಡುವೆ ಕಲ್ಲುಗಳು, ಮುಳ್ಳುಗಳು,
ಕೈಹಿಡಿದು ಜತೆಯಾಗಿ ನಡೆದದ್ದು ನೆನಪಿದೆಯ?

ಒಲುಮೆಯಂಗಳದಲ್ಲಿ ವಾತ್ಸಲ್ಯ ಮಮತೆಗಳ
ಬಳ್ಳಿ-ಗಿಡ-ಮರಗಳನು ಬೆಳೆಸಿದ್ದು ನೆನಪಿದೆಯ?

ಕಾಲನಾಲಗೆಯಲ್ಲಿ ರಸಗ್ರಂಥಿ ನಾವಾಗಿ
ಜೀವದ್ರವದೆಲ್ಲ ಸವಿ ಹೀರಿದ್ದು ನೆನಪಿದೆಯ?



ಬಟ್ಟೆ ಬದಲಿಸುವಂತೆ ಬಂಧನವ ಕಿತ್ತೊಗೆದು,
ಭಾವಗಳ ಬಿಟ್ಟೆದ್ದೆ; ಬದುಕಿದನು ನೆನೆಸಿದೆಯ?

ಇಂದು ನೀ ನಿಂದಿರುವೆ ಮಂದಿರದ ಹೊಸಿಲಲ್ಲಿ
'ಹೋಗಿ ಬರುವೆನು' ಎಂದೆ; ಚೇತನವ ಬಯಸಿದೆಯ?
(೦೩-ಡಿಸೆಂಬರ್-೨೦೦೨)

Friday 20 February, 2009

ಮಳೆಯಲ್ಲಿ ನೆನೆಯುತ್ತಾ...

(ಈ ಕವನಕ್ಕೆ ಸ್ಫೂರ್ತಿಯಾದ ಬ್ಲಾಗೆಳತಿಗೆ ಮೊದಲ ಧನ್ಯವಾದಗಳು)

ನಿನ್ನೆ ಕಟ್ಟಿದ ಮೋಡ ಇಂದು ಹನಿಹನಿದಾಗ
ತಂಪು ಅಂಗಳದೊಳಗೆ ಮನ ಹಚ್ಚಗೆ
ಇಂದಿನ ನೆನಪುಗಳು ನಾಳೆಯನು ತೆರೆವಾಗ
ಬಣ್ಣ ಬಾನಿನ ಅಂಚು, ದಿನ ಬೆಚ್ಚಗೆ

ಹೊಳೆದು ಕರಗಿದ ಹಗಲು ಮತ್ತೆ ಮರಳುವ ಹೊತ್ತು
ಸೆರಗಿನಂಚಲಿ ಗಂಟು ನಿನ್ನ ನೆನಪು
ಬರುವೆಯೋ ಬಾರೆಯೋ, ಕಾತರದ ಕೈಲಿತ್ತು
ಒಂದೊಂದು ಹನಿಯಿಳಿದ ಕೆಂಪು ಕದಪು

ಮಾಡಿನಂಚಿನ ಕೊನೆಗೆ ಸೆರೆಯಾದ ಸೋನೆಯಲಿ
ಹರಿಹರಿದು ಸುರಿವಂಥ ಒಲವ ಧಾರೆ
ಅದರ ನಲಿವಿನ ತಾಳ ನನ್ನೆದೆಯ ಮಿಡಿತದಲಿ
ಇಳಿದುಹೋಗಿದೆ ಕಾಲ ಕಡಲ ಸೇರೆ

ಮತ್ತೆ ಕಟ್ಟಿದೆ ಮೋಡ, ಹೊಳಪು ಸುರಿಯುವ ಕೆನ್ನೆ
ಸೆರಗಿನಂಚಿನ ಗಂಟು ನನ್ನದಲ್ಲ
ಬಯಲು ಆಲಯ ಮೀರಿ ಎದುರು ನಿಂತವನನ್ನೆ
ಕಣ್ಣತುಂಬಿಕೊ ಎನಲು ಶರಧಿಯೆಲ್ಲ
(೧೨-ಫೆಬ್ರವರಿ-೨೦೦೯)

Sunday 15 February, 2009

ಜೋಡಿ ಗೀತೆಗಳಲ್ಲಿನ್ನೊಂದು- ಉಕ್ಕಿದ ಒಲವಿಗೆ...


ಅಕ್ಕರೆ ಹರಿದಾಗ ಉಕ್ಕಿದ ಒಲವೀಗೆ
ಸಕ್ಕರೆ ಹಾಲು ಸುರಿದ್ಹಾಂಗೆ- ನನರಾಣಿ-
ಕಕ್ಕುಲತೆಯಿಂದ ನನ ಬಳಸೆ

ಬಾರೆಲೆ ಸಿಂಗಾರಿ ಸಿಟ್ಟು ಸೆಡವನು ಬಿಟ್ಟು
ಕೂರಿಲ್ಲಿ ನೀನೆನ್ನ ಬಗಲಲ್ಲಿ- ನನರಾಣಿ-
ತೋರೆಲೆ ಪ್ರೀತಿ ಮೊಗದಲ್ಲಿ

ಒಮ್ಮೊಮ್ಮೆ ಬಡವಾಗಿ ಚಿಂತೇಲಿ ಕರಗೋಳೆ
ಬಿಮ್ಮನೆ ಮುನಿಸ ಬೀರೋಳೆ- ನನರಾಣಿ-
ಹೂಮನಸಲೊಮ್ಮೆ ನಗಬಾರೆ

ಮುಂಗಾರು ಮಳೆಯಾಗೆ ತೊಪ್ಪನೆ ತೋಯ್ದೋಳೆ
ಹಿಂಗಾssಡಿ ಹಂಗಾssಡಿ ಬಳುಕೋಳೆ- ನನರಾಣಿ-
ಜಂಗಮಳ್ಹಾಂಗೆ ತಿರುಗೋಳೆ

ತಬ್ಬುವೆನೆಂದರೆ ಮಿಸುಕಾಡಿ ಕೊಸರಾಡಿ
ಅಬ್ಬಿಗೆ ಹಾರಿ ಜಾರೋಳೆ- ನನರಾಣಿ-
ಮಬ್ಬಿನ ಸೆರಗ ಬೀಸೋಳೆ

ಕಿಲಕಿಲ ನಗುತಲಿ ಮನಸನ್ನ ಸೆಳೆಯೋಳೆ
ಗಲಗಲ ಗೆಜ್ಜೆ ದನಿಯೋಳೆ- ನನರಾಣಿ-
ಬಲವಂದು ಬಳಿಯೆ ನಿಲಬಾರೆ

ಥಟ್ಟಂತ ನಲಿನಲಿದು ಹರುಷವ ಹರಿಸೋಳೆ
ಪಟ್ಟಂತ ತಿರುತಿರುಗಿ ಮರೆಯಾಗಿ- ನನರಾಣಿ
ಕಟ್ಟ್ಯಾssಗ ಮೈದುಂಬಿ ಮೆರೆಯೋಳೆ

ಹಿಂದಿಲ್ಲ ಮುಂದಿಲ್ಲ ಒಬ್ಬಂಟಿ ನಾನಿಂದು
ಬಂದಿಲ್ಲಿ ಜೋಡಿ ನೀನಾಗೆ- ನನರಾಣಿ-
ನಿಂದೆನ್ನ ಬಾಳ ಉಸಿರಾಗೆ

ಹಗಲೇನs ಇರುಳೇನs ಪ್ರೇಮಕ್ಕೆ ಹಂಗೇನs
ಸೊಗಲಾಡಿ ಸರಿದು ಬಾರಿಲ್ಲೆ- ನನರಾಣಿ-
ಜಗದಾಗೆ ನಿನ್ಹಾಂಗೆ ಯಾರಿಲ್ಲೆ

ಜೀವಕ್ಕೆ ಜೀವಾಗಿ ಹಸಿರಿಗೆ ಹಸೆಯಾಗಿ
ಶಿವನೆತ್ತಿಯಿಂದ ಹರಿದೋಳೆ- ನನ'ಗಂಗಿ'-
'ಪರ್ವತ'ನ ಪ್ರೀತಿ ಒಪ್ಪಿಸಿಕೋ

(೧೩-ಸೆಪ್ಟೆಂಬರ್-೨೦೦೧)

Friday 13 February, 2009

ಜೋಡಿ ಗೀತೆಗಳಲ್ಲೊಂದು- ಅಕ್ಕರೆ ಹರಿದಾಗ...



ಸಂಜೀಗಿ ಮಲ್ಲೀಗಿ ಅರಳ್ಯಾವ ಬೆಳ್ಳಾಗೆ
ಈಗೆಲ್ಲಿಗ್ಹೊಂಟ್ಯೋ ನನರಾಯ- ನೋಡಲ್ಲಿ-
ಮಿಣುಕಾಡೊ ಕಣ್ಣು ನಗತಾವ

ಹೀಂಗ್ಹೀಂಗೆ ಬಂದಿದ್ದೆ, ಹಾಂಗ್ಹಾಂಗೇ ಹೊಂಟೆದ್ದೆ
ಬ್ಯಾಸರಿಕೆ ಯಾಕೋ ನನರಾಯ- ಒಂದಾರೆ-
ತೋಳ್ದಿಂಬಿಗೊರಗಿ ನೋಡೆಂದೆ

ದಿನವೆಲ್ಲ ಓಡ್ಯಾಡಿ ದಣಿವಾಗಿ ಬಂದೀಯೆ
ಒಂದೀಟು ಅಡ್ಡಾಗು ನನರಾಯ- ನಿಂಗಿಂಥ-
ಆತುರದ ಕಾರ್ಯ ಬ್ಯಾಡೇಳು

ಕಾಲಿಗೆ ನೀರ್ಕೊಡುವೆ, ಕೈಯೊಳಗೆ ಕೈಯಿಡುವೆ
ಅಕ್ಕರೆ ಮಳೆಗರೆವೆ ನನರಾಯ- ಕಣ್ಣಲ್ಲಿ-
ಕಣ್ಣಿರಿಸಿ ನಗಬಾರೊ ಪ್ರೀತೀಲೆ

ಆಸರಿಗೆ ಎಳನೀರ ಆರಿಸಿ ಅತ್ತಿಡುವೆ
ಇನಿಮಾವು ಉಣಲಿಡುವೆ ನನರಾಯ- ನೀನಿಂದು-
ತಾಂಬೂಲ ರಾಗದ ಸವಿನೋಡೊ

ಗೋಧೂಳಿ ಕೆಂಬಣ್ಣ ಕೆನ್ನೀರ ಮಾಡಿಟ್ಟು
ದಿಟ್ಟಿಯ ತೆಗೆಯುವೆ ನನರಾಯ- ಬಾ ಇಲ್ಲಿ-
ಅತ್ತಿತ್ತ ನೋಡೋ ಹಂಗ್ಯಾಕೋ

ಹಚ್ಚಾನೆ ಹಾಸಿರುವೆ ಹಚ್ಚಾಡ ನಿಂಗಾಗಿ
ಅಚ್ಚು-ಮೆಚ್ಚಿನಲೇ ನನರಾಯ- ನೀನೀಗ-
ಮೆಚ್ಚುಗೆ ಬೀರಿ ಒರಗೊಮ್ಮೆ

ಅರುಣನ ಹೊಂಬಣ್ಣ ರಂಗನ್ನೆ ಹೊದೆಸುವೆ
ತಂಗಾಳಿ ತೊಟ್ಟಿಲಲಿ ನನರಾಯ- ನಿನ್ನನ್ನು-
ಜೋಗುಳ ಹಾಡಿ ಮಲಗಿಸುವೆ

ಮೊಗ್ಗೀಗೆ ಜೀವಾದೆ ಕಣ್ಣೀನ ಹೂವಾದೆ
ಹಸಿರಿಗೆ ನೀ ಉಸಿರು ನನರಾಯ- ಬೆಳಕಾಗಿ-
ಬೇಕಾದೆ ನೀನು ಜಗಕೆಲ್ಲ

ಆ ಶಿವನ ಹಣೆಗಣ್ಣು, ಆ ಹರಿಯ ತಿರುಚಕ್ರ
ನೀನಲ್ಲವೇನೋ ನನರಾಯ- 'ದಿನಪತಿ'ಯೆ
'ಭೂಸತಿ'ಯ ಪ್ರೀತಿ ಒಪ್ಪಿಸಿಕೋ

(೦೬-ಸೆಪ್ಟೆಂಬರ್-೨೦೦೧)

Sunday 8 February, 2009

ಯಾತ್ರೆ


ನೆಲವ ಕೊರೆದು, ಮರವ ಕಡಿದು,
ಸೋಗೆ, ಬಿದಿರು ಒಟ್ಟಣೆ,
ಪರಮಯಾತ್ರೆಗಟ್ಟಣೆ.

ಮಂತ್ರ-ತಂತ್ರ, ಎಣ್ಣೆ-ನೀರು,
ಹೂವು, ಹಳದಿ, ಕುಂಕುಮ,
ದರ್ಭೆ, ಎಳ್ಳು ತತ್ಸಮ.

ಬರಿಯಕ್ಷತೆ, ಬುರುಡೆದೀಪ,
ಬಿರಿದ ಎದೆಯ ಕಂಗಳು,
ತಡವರಿಸುವ ಕೈಗಳು.

ಕಾಲವ್ಯಾಲ ದಿಗ್ವಿಜಯದಿ-
ತರ್ಕ, ಜ್ಞಾನ ನಗಣಿತ,
ಬಾಳಬಿಂಬ ಪರಿಮಿತ.

ಅಚ್ಚಳಿಯದು, ಮುಚ್ಚುಳಿಯದು,
ಬಂಧು ನಿನ್ನ ಬಂಧನ,
ಪಂಚ ಭೂತ ಚೇತನ.

(೧೩-ಜುಲೈ-೨೦೦೬)

Tuesday 3 February, 2009

ಮಾಯೆ

ಜಗದಚ್ಚರಿಯ ಪರಿಗೆ ಬೆರಗಾಗುವಂದದಿಯೆ
ಅಗಲಿಕೆಗೆ ಮರುಗುವಂತೆ,
ಹಗೆ ಮೋಹ ಭವದಾಹದಂಟುನಂಟನ್ನಿತ್ತೆ
ಹೊಗುವಂತೆ ಹಾತೆ ಉರಿಯ;
ಧಗೆಯೊಳಗೆ ಮನವಿಹುದು, ಸುತ್ತ ಮುತ್ತಿದೆ ಹೊಗೆಯು,
ಮುಗಿಸಲಾರೆನು ಪಯಣವ;
ಅಗಣಿತದ ಗಣಿತದಲಿ ನನ್ನ ಲೆಕ್ಕವದೇನು
ನಗುವಿನಿಂದಳೆಯೊ ಬದುಕ.

ಅರಿವಿನಳವಿಗೆ ಸಿಗದ ಮರೆಯ ಶಕ್ತಿಯೆ, ಕೊಂಚ
ಅರಿವಳಿಕೆಯನ್ನು ಸರಿಸು;
ಬರಿದುಗಣ್ಣಿಗೆ ಬರುವ ಮಣ್ಣ ಬಣ್ಣಗಳನ್ನು
ಕುರುಡು ಬುದ್ಧಿಯಿಂದಳಿಸು;
ಹರಿಸು ನೀ ಸ್ನೇಹಜಲ, ಪ್ರೇಮಗಂಗಾಸಲಿಲ
ಹರಸು, ಹರಿ ಮಾಯೆಯನ್ನು.
(೧೫-ಜನವರಿ-೨೦೦೭)