ಅಂದು ನೀ ಬಂದಾಗ ಮಂದಿರದ ಹೊಸಿಲಲ್ಲಿ
ಮಂದಿ ನಿನ್ನನು ತಡೆದು ನಿಂದದ್ದು ನೆನಪಿದೆಯ?
'ಕಂದ'ನೆಂದೆನ್ನಮ್ಮ ಬಳಿಬಂದು ಕುಳಿತಾಗ
ನೀನು ಮೊಗ ತಿರುವಿದ್ದು ನಕ್ಕಿದ್ದು ನೆನಪಿದೆಯ?
ಚಂದ್ರ ಹಾಸಿದ ರಾತ್ರಿ ಮತ್ತಿನಲಿ ಈ ಧಾತ್ರಿ
ನನ್ನೊಳಗ ಕವಿಯೆದ್ದು ಹಾಡಿದ್ದು ನೆನಪಿದೆಯ?
ಹಿಂಜಿದರಳೆಯ ಕಾಳರಾತ್ರೆಯೊಳಗದ್ದಿಟ್ಟ
ಮಾಟ ಮುಂಗುರಳಲ್ಲಿ ಹೊಸೆದುಸಿರ ನೆನಪಿದೆಯ?
ಅರುಣ ಕಿರಣವ ಕದ್ದ ಹೊಂಗೆನ್ನೆ ಹಸೆಯಲ್ಲಿ
ನಿನ್ನ ದಾಸ್ಯಕೆ ಬಿದ್ದ ಕನಸುಗಳ ನೆನಪಿದೆಯ?
ಹನಿಹನಿದು ಸುಧೆಯಾಗಿ ಹರಿವ ಹೊಳೆ ಪ್ರೀತಿಯಲಿ
ಬಂಡೆ-ಸುಳಿಗಳ ಸೆಳೆತ ಕಾಡಿದ್ದು ನೆನಪಿದೆಯ?
ಪಲ್ಲವಿಸಿದೆಲ್ಲ ನಗು ಅಲೆಯಲೆಯ ಸೆಲೆಯಾಗಿ
ಮನದೊಳಗೆ ಮರುಕಳಿಸಿ ಸೇರಿದ್ದು ನೆನಪಿದೆಯ?
ಸವೆದ ಹಾದಿಯ ನಡುವೆ ಕಲ್ಲುಗಳು, ಮುಳ್ಳುಗಳು,
ಕೈಹಿಡಿದು ಜತೆಯಾಗಿ ನಡೆದದ್ದು ನೆನಪಿದೆಯ?
ಒಲುಮೆಯಂಗಳದಲ್ಲಿ ವಾತ್ಸಲ್ಯ ಮಮತೆಗಳ
ಬಳ್ಳಿ-ಗಿಡ-ಮರಗಳನು ಬೆಳೆಸಿದ್ದು ನೆನಪಿದೆಯ?
ಕಾಲನಾಲಗೆಯಲ್ಲಿ ರಸಗ್ರಂಥಿ ನಾವಾಗಿ
ಜೀವದ್ರವದೆಲ್ಲ ಸವಿ ಹೀರಿದ್ದು ನೆನಪಿದೆಯ?
ಬಟ್ಟೆ ಬದಲಿಸುವಂತೆ ಬಂಧನವ ಕಿತ್ತೊಗೆದು,
ಭಾವಗಳ ಬಿಟ್ಟೆದ್ದೆ; ಬದುಕಿದನು ನೆನೆಸಿದೆಯ?
ಇಂದು ನೀ ನಿಂದಿರುವೆ ಮಂದಿರದ ಹೊಸಿಲಲ್ಲಿ
'ಹೋಗಿ ಬರುವೆನು' ಎಂದೆ; ಚೇತನವ ಬಯಸಿದೆಯ?
(೦೩-ಡಿಸೆಂಬರ್-೨೦೦೨)
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Wednesday, 25 February 2009
Subscribe to:
Post Comments (Atom)
8 comments:
Very good Poem.
ಚಂದ ಹಾಡು.
’ಹತ್ತ ವರುಷದ ಹಿಂದೆ ಮತ್ತೂರ ತೇ..’ ನೆನಪಾದ್ದು ಮೊದಲ ಸಾಲು ಓದಿದಾಕ್ಷಣವೇ.
ಡಾ. ಬಿ.ಆರ್.ಎಸ್., ಧನ್ಯವಾದಗಳು.
ಸುಶ್, ನಿನಗೂ ಧನ್ಯವಾದಗಳು. ಅಷ್ಟು ದೊಡ್ಡ ಕವಿತೆಯ ನೆನಪಿಸಿ ಇದು ಧನ್ಯವಾಯಿತು ಅಂದುಕೊಳ್ಳುತ್ತೇನೆ.
ಜ್ಯೋತಿ,
ಏನು ಹೇಳಲಿ? ಮತ್ತೆ ಮತ್ತೆ ಹಾಡಿಕೊಂಡು ಸುಖಪಡುವ ಹಾಡಿದು.
-ಕಾಕಾ
ಅಕ್ಕಾ,
ಕವನ ತುಂಬಾ ಆಳವಾಗಿದೆ. ಓದಿದಷ್ಟೂ ಹೊಸ ಅರ್ಥವನ್ನು ಸ್ಫುರಿಸುತ್ತದೆ. ನನ್ನ ಕಲ್ಪನೆಗೂ ನಿಲುಕದಂತೆ ಮುಂದೋಡುವಂತಿದೆ ನಿಮ್ಮ ಪ್ರಬುದ್ಧ ಕವನ..
ಕಾಕಾ,
ನಿಮ್ಮ ಪ್ರೀತಿಗೆ ವಂದನೆಗಳು. ನಿಮಗೆ ಹಾಡುವ ಖಯಾಲಿಯೂ ಇದೆಯೆಂದಾಯಿತು, ಸಂತೋಷ. ಮುಂದಿನ ಸಾರಿ ಭೇಟಿಯಾದಾಗ ಕೇಳುವ ಸುಖ ನನಗೂ ಸಿಗಬಹುದೆ?
ತೇಜೂ,
ಕವನ ಅವರವರ ಭಾವಕ್ಕೆ ಸ್ಪಂದಿಸುತ್ತದೆ ಅನ್ನುವುದು ಇದಕ್ಕೇ ಅಲ್ಲವೆ? ನಿನ್ನ ಕಲ್ಪನೆ, ಸಂವೇದನೆ ಅಗಾಧವಾಗಿವೆ ಆದ್ದರಿಂದ ನಿನಗೆ ಹಾಗನಿಸುತ್ತಿದೆ. ನಿನ್ನ ತಿಳುವಳಿಕೆಯ ಅರಿವು ನನಗಿದೆ. ಧನ್ಯವಾದ ಕಣೇ.
ಸುಪ್ತದೀಪ್ತಿ,
ಇಷ್ಟೆಲ್ಲಾ ಸುಂದರವಾಗಿದ್ದ ಜೀವನದಿಂದ, ಬಂಧನ ಕಿತ್ತೊಗೆದಿದ್ದು ಯಾಕೋ..
ಬಟ್ಟೆ ಬದಲಿಸುವಂತೆ ಬಂಧನವ ಕಿತ್ತೊಗೆದು,
ಭಾವಗಳ ಬಿಟ್ಟೆದ್ದೆ; ಬದುಕಿದನು ನೆನೆಸಿದೆಯ?
ಈ ಪ್ಯಾರಕ್ಕೂ ಅದರ ಹಿಂದಿನ ಪ್ಯಾರದ ಮಧ್ಯೆ ಬೇರೆ ಪ್ಯಾರಗಳಿಗಿಂತ ಜಾಸ್ತಿ ಅಂತರವಿದೆಯಲ್ವಾ..
ಅದು ಬಹುಷಃ ಉದ್ದೇಶಿತವಿರಬಹುದು?
ಶಿವ್,
ಬಂಧನ ಕಿತ್ತೊಗೆಯುವುದಕ್ಕೆ ನಮ್ಮ ಬೌದ್ಧಿಕ ಮಿತಿಯಲ್ಲಿ ಯಾವುದೇ ಕಾಲ-ಕಾರಣಗಳ ವಿವರಣೆಗಳಿರುವುದಿಲ್ಲವಲ್ಲ! ಜೀವನ ಸುಂದರವೆಂದಿರುವಾಗಲೇ ಅದರ ಇನ್ನೊಂದು ಮಗ್ಗುಲೂ ತೆರೆದುಕೊಳ್ಳುವುದು ಪ್ರಕೃತಿಯ ರೀತಿ.
ಹೌದು; ಕೊನೆಯ ಎರಡು ಪ್ಯಾರಾಗಳನ್ನು ಉದ್ದೇಶಪೂರ್ವಕ ಬೇರ್ಪಡಿಸಿದ್ದೇನೆ.
ಪ್ರತಿಕ್ರಿಯೆಗೆ ಧನ್ಯವಾದಗಳು.
Post a Comment