ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday, 4 April, 2011

ಸುಮ್ಮನೆ ನೋಡಿದಾಗ...೨೦

“ಸಹೃದಯರಿಗೆಲ್ಲ ಚಾಂದ್ರ ಯುಗಾದಿಯ ಸಂದರ್ಭದಲ್ಲಿ ಶುಭ ಹಾರೈಕೆಗಳು. ಜೀವನ ಸುಂದರವಾಗಿರಲಿ”

‘ಅಮ್ಮ, ನೀವು ಸಸ್ಪೆನ್ಸ್ ಶುರು ಮಾಡುದೇನೂ ಬೇಡ. ಶಿಶಿರಾ ನನ್ನ ತಂಗಿಯ ಹಾಗೆ. ಚಿಕ್ಕತ್ತೆ ಅಂತ ಅವಳಮ್ಮನನ್ನು ಕರೀತಿದ್ರೂ ಶಿಶಿರಾನ್ನು ಆ ದೃಷ್ಟಿಯಿಂದ ನೋಡಿದ್ದೇ ಇಲ್ಲ ನಾನು. ಆದ್ದರಿಂದ ಯಾವುದೇ ಗೊಂದಲ ಬೇಡ. ಇನ್ನು, ನೇಹಾ ಇದಕ್ಕೆ ಸಂಪೂರ್ಣ ಒಪ್ಪಿಗೆ ಕೊಡ್ತಾಳಾ ಕೇಳ್ಬೇಕು. ಬೇರೆಯವರಿಗೋಸ್ಕರ ಅವಳು ಒಪ್ಪುದೇನೂ ಬೇಡ. ಏನ್ ಹೇಳ್ತೀರಿ ಅಂಕಲ್?’ ಹರ್ಷಣ್ಣ ಖಡಾಖಂಡಿತವಾಗಿ ಹೇಳಿದಾಗ ಅಡುಗೆಮನೆಯಲ್ಲೇ ಕೆಂಪಾದ ನೇಹಾಳ ಕೆನ್ನೆಯನ್ನು ಸವರಿದೆ. ಸುಮ್ಮನೇ ನನ್ನ ಕೈ ಗಟ್ಟಿಯಾಗಿ ಹಿಡಿದು ನಿಂತವಳ ಹಿಂದೆ ಸುಮುಖ್ ಅಂಕಲ್ ನೆರಳಾದರು. ಅವರ ಕಣ್ಣುಗಳ ಪ್ರಶ್ನೆಗೆ ನೇಹಾ, ‘ಯೆಸ್ ಪಪ್ಪಾ’ ಎಂದಷ್ಟೇ ಉಸುರಿದಳು. ನಡುಮನೆಯಲ್ಲಿ ನಗೆ ಹೊನಲಾಯಿತು. ಎರಡು ಹೃದಯಗಳ ಹಾಡುಗಳು ಲಯಗತಿಯ ತಾದಾತ್ಮ್ಯ ಪಡೆದವು.

ಫೆಬ್ರವರಿ, ಮಾರ್ಚ್ ಹೇಗೋ ಕಳೆದವು. ಏಪ್ರಿಲಿನ ದಿನಗಳಲ್ಲಿ ಪರೀಕ್ಷೆಯ ನೆಪದಲ್ಲಿ ಎಲ್ಲವನ್ನೂ ಮರೆತಂತೆ ನಾವಿದ್ದರೂ ನಮ್ಮೊಳಗೆ ಇನ್ನೊಂದೊಂದು ಮೆಲ್ಲುಸಿರು ಸುಳಿಯುತ್ತಿದ್ದುದು ನಮನಮಗೇ ಗೊತ್ತು. ನೇಹಾಳಿಗಿನ್ನೂ ನನ್ನ ಹೃದಯದೊಳಗಿನ ಕಳ್ಳನ ಪತ್ತೆಯಾಗಿರಲಿಲ್ಲ. ಲ್ಯಾಬ್ ಪರೀಕ್ಷೆಗಳು ಹತ್ತಿರಾದಾಗ ಒಂದು ರಾತ್ರಿ ಇದ್ದಕ್ಕಿದ್ದಂತೆ ನಮ್ಮ ಕೆಮಿಸ್ಟ್ರಿ ಲ್ಯಾಬಿಗೆ ವಸಂತ್ ಹೊರ ಪರೀಕ್ಷಕರಾಗಿ ಬಂದರೆಂದು ಕನಸು ಬಿದ್ದು ಗಾಬರಿಯಿಂದ ಎದ್ದು ಕುಳಿತಿದ್ದೆ. ಲ್ಯಾಬ್ ಪರೀಕ್ಷೆಗಳಿಗೆ ಇನ್ನೊಂದು ವಾರವಿದೆ ಅನ್ನುವಾಗ ನನ್ನ ದಿಗಿಲು ನೇಹಾಳ ಕಣ್ಣುಗಳಿಗೆ ಬಿತ್ತು. ಎಂದೂ ಪರೀಕ್ಷೆಯ ಬಗ್ಗೆ ತಲೆಕೆಡಿಸಿಕೊಂಡಿರದ ನನ್ನ ಆತಂಕ ಅವಳಿಗೆ ಅಚ್ಚರಿ ಮೂಡಿಸಿತು. ನನ್ನೊಳಗನ್ನು ಈಗಲೇ ಬಿಚ್ಚಿಡಲು ನಾನೇನೂ ತಯಾರಿರಲಿಲ್ಲ. ಎಮ್.ಎಸ್ಸಿ. ಮಾಡಬೇಕಿತ್ತು. ಕೆಲಸಕ್ಕೆ ಸೇರಬೇಕಿತ್ತು. ನನ್ನ ನೆಲೆ ನಾನು ಕಂಡುಕೊಳ್ಳಬೇಕಿತ್ತು. ಅದಕ್ಕೆ ಮೊದಲೇ ಇನ್ನೊಂದು ದೋಣಿಯೊಳಗೆ ಹೆಜ್ಜೆಯಿಟ್ಟು ಅಮ್ಮನ ದೃಷ್ಟಿಯಲ್ಲಿ ಕೀಳಾಗಲು ಸಾಧ್ಯವಿರಲಿಲ್ಲ.

ಮನೆಯಲ್ಲಿ ಅಮ್ಮನ ಅವ್ಯಾಹತ ಕಿರಿಕಿರಿ ನಿರಂಕುಶವಾಗಿ ಸಾಗುತ್ತಿತ್ತು. ಕೇಳಿಯೂ ಕೇಳಿಸಿಕೊಳ್ಳದ ದಪ್ಪ ಚರ್ಮ ಕಷ್ಟಪಟ್ಟು ಬೆಳೆಸಿಕೊಂಡಿದ್ದೆ. ಆದರೂ ಒಂದೊಂದು ಬೆಳಗು ಯಾಕಾದರೂ ಏಳಬೇಕೋ ಅನಿಸುವಂತಿರುತ್ತಿತ್ತು. ಈಗ ಅಮ್ಮನ ರಾಗ ನನ್ನ ಮದುವೆಯ ಸುತ್ತಲೇ ಗಾಣಹಾಕುತ್ತಿತ್ತು. ಹರ್ಷನಂಥ ಅತ್ಯುತ್ತಮ ಹುಡುಗನನ್ನು ನಾನೇ ನೇಹಾಳಿಗೆ ಬಿಟ್ಟುಕೊಟ್ಟೆ ಅನ್ನುವ ರೀತಿಯಲ್ಲಿ ಮಾತಾಡುತ್ತಿದ್ದರು. ನೇಹಾಳೂ ತನ್ನ ಮಗಳೇ ಅನ್ನುವುದನ್ನು ಈ ತಾಯಿ ಅದು ಹೇಗೆ ಮರೆತಳು? ನನಗರ್ಥವಾಗಲಿಲ್ಲ.

ಲ್ಯಾಬ್ ಪರೀಕ್ಷೆಗಳಲ್ಲಿ ನಾವಿಬ್ಬರೂ ಚೆನ್ನಾಗೇ ಮಾಡಿದೆವು. ವಸಂತ್ ನಮ್ಮ ಕಾಲೇಜಿಗೆ ಬಂದಿದ್ದರಾದರೂ ನಮ್ಮ ಗುಂಪಿಗೆ ಪರೀಕ್ಷಕರಾಗಲಿಲ್ಲ, ಅವರ ಕಸಿನ್ ಶರತ್ ನಮ್ಮ ಗುಂಪಿನಲ್ಲಿದ್ದ ಅನ್ನುವ ಕಾರಣಕ್ಕೆ ಅವರನ್ನು ನಮ್ಮ ಗುಂಪಿನಿಂದ ದೂರವಿಟ್ಟಿದ್ದರು. ನನಗದು ವರವೇ ಆಯ್ತು.

ಎಲ್ಲ ಪರೀಕ್ಷೆಗಳೂ ಮುಗಿದು ಮೇ ತಿಂಗಳ ಮಧ್ಯಭಾಗದಲ್ಲಿ ಆಕಾಶ ಕಪ್ಪಿಡದೇ ಗುಡುಗಿದ ಒಂದು ಸಂಜೆ, ಸರೋಜಾ ಆಂಟಿ ನಮ್ಮನೆಗೆ ಬಂದರು. ಅವರಿಲ್ಲಿಗೆ ಬರುತ್ತಿದ್ದುದೆ ಅಪರೂಪ.
ನೇರವಾಗಿ ನನ್ನ ಕಡೆಗೇ ನೋಡುತ್ತಾ, ‘ನಾಳೆ ಸಂಜೆ ಸೀರೆ ತೆಗೊಳ್ಳಿಕ್ಕೆ ಹೋಗ್ಬೇಕು. ಶಿಶಿರಾ, ನೀನೂ ಬರ್ಬೇಕು ನಮ್ಮೊಟ್ಟಿಗೆ. ನೇಹಾ ಬರ್ತಾಳೆ. ಹಾಗೇ ಹರಿಣಿ, ನಳಿನಿ ಕೂಡಾ. ನಾವು ಐದು ಜನ ಹೋಗಿ ಬರುವಾ. ಶ್ರಿಯಾಲಂಕಾರ್ ದೊಡ್ಡ ಅಂಗಡಿಯಲ್ವ. ಅಲ್ಲಿಗೇ ಹೋಗುವಾ. ಸಂಜೆ ನಾಲ್ಕು ಗಂಟೆಗೆ ನಳಿನಿ ಮನೆ ಹತ್ರ ಸೇರುವಾ. ಹ್ಙಾ ಹ್ಙೂ ಏನೂ ಹೇಳ್ಳಿಕ್ಕಿಲ್ಲ. ಸುಮ್ಮನೇ ಬರ್ಬೇಕು, ಅಷ್ಟೇ’ ಅಂದರು.
ನಾನು ಅಮ್ಮನ ಮುಖ ನೋಡಿದೆ. ‘ಬರ್ತೇವೆ ಅತ್ತಿಗೆ’ ಅಂದರು ಅಮ್ಮ, ಇವರು ಹೊರಟು ನಿಂತರು. ಅವರ ಜೊತೆಗೇ ನಾನೂ ಹೊರಟೆ, ನೇಹಾ ಮನೆತನಕ ಹೋಗುವ ನೆಪದಲ್ಲಿ.

ದಾರಿಯಲ್ಲಿ ಸರೋಜ ಆಂಟಿ ಅಚಾನಕ್ ಕೇಳಿದರು, ‘ಈಗೀಗ ಅಮ್ಮನ ಮೂಡ್ ಹೇಗುಂಟಾ?’
‘ಯಾವಾಗಿನ ಹಾಗೇ. ವ್ಯತ್ಯಾಸ ಏನಿಲ್ಲ. ಯಾಕೆ ಆಂಟಿ?’
‘ಹ್ಮ್, ಕೇಳಿದೆ, ಸುಮ್ನೆ...’
‘....’
‘ಅವಳು ಯಾಕೆ ಯಾವಾಗ ಅಷ್ಟು ಸಿಡುಕಿಯಾಗಿದ್ದು ಗೊತ್ತುಂಟಾ ನಿಂಗೆ?’
‘ಇಲ್ಲ’ ನನ್ನ ಕೊರೆಯುತ್ತಿದ್ದ ಪ್ರಶ್ನೆಗೆ ಇವತ್ತು ಉತ್ತರ ಸಿಕ್ಕೀತಾ?
‘ತಿಳ್ಕೊಳ್ಬೇಕಾ ನಿಂಗೆ?’
‘ಹೌದು’
‘ವಿನ್ಯಾಸ್ ಅದ್ಕೆ ಕಾರಣ ಅಂದ್ರೆ ನಂಬ್ತೀಯಾ?’
‘ಹ್ಮ್...’ ನನ್ನ ಊಹೆ ಸರಿಯಾಗಿಯೇ ಇತ್ತು. ನಳಿನಿ ಆಂಟಿ ಅಮ್ಮನ ಕಥೆ ಹೇಳಿದ ಮೇಲೆ ಅದನ್ನೇ ಊಹಿಸಿದ್ದೆ.
‘ನಮ್ಮ ಅಕಳಂಕ ಮನೆಯ ಔಟ್ ಹೌಸಿನಲ್ಲಿ ಬಾಡಿಗೆಗೆ ಅಂತ ಅಮ್ಮ ನಿನ್ನನ್ನು ಎತ್ತಿಕೊಂಡು ಲಚ್ಚಮ್ಮನ ಒಟ್ಟಿಗೆ ಬಂದಾಗ ನಿನ್ನಮ್ಮನ ಕಥೆ ಹಿನ್ನೆಲೆ ಗೊತ್ತಿರ್ಲಿಲ್ಲ. ಆದ್ರೆ ನನ್ನಮ್ಮ ಆಗಾಗ ವಿನ್ಯಾಸ್ ಯಾರೋ ಹುಡುಗಿಗೆ ಮೋಸ ಮಾಡಿದ ಅಂತ ಹೇಳ್ತಿದ್ದಳು. ಅದು ಹೇಗೋ ನೀವು ನಮ್ಮಲ್ಲಿ ಬಾಡಿಗೆಗೆ ಇದ್ದ ವಿಷಯ ಅವನಿಗೆ ಗೊತ್ತಾಗಿ ಪದೇ ಪದೇ ಕಾಗದ ಬರೀಲಿಕ್ಕೆ ಶುರುಮಾಡಿದ. ಮನೆಗೆ ಬರ್ಲಿಕ್ಕೆ ಅವ್ನಿಗೆ ಧೈರ್ಯ ಇರ್ಲಿಲ್ಲ. ನನ್ನ ಗಂಡನಿಗೆ ಹೆದರ್ತಿದ್ದ. ಒಮ್ಮೆ ಅವಳು ಕೆಲ್ಸ ಮಾಡ್ತಿದ್ದ ಶಾಲೆಗೂ ಹೋಗಿ ಅಲ್ಲಿ ಗಲಾಟೆ ಮಾಡಿದ್ನಂತೆ, ಮಕ್ಕಳನ್ನು ಕೊಡು ಅಂತ. ಈ ನಿನ್ನಮ್ಮ ಗಟ್ಟಿಗಳು. ಕೊಡುದಿಲ್ಲ ಅಂದಿದ್ದಾಳೆ. ಅಷ್ಟಕ್ಕೇ ಅವ್ನು ಊರೆಲ್ಲ ಕಥೆ ಹಬ್ಬಿಸಿದ್ದಾನೆ, ನಿನ್ನಮ್ಮ ಸೂಳೆ. ಯಾರಿಗೋ ಹುಟ್ಟಿದ ಮಕ್ಕಳನ್ನು ತನ್ನ ತಲೆಗೆ ಕಟ್ಲಿಕ್ಕೆ ನೋಡಿದ್ದಾಳೆ ಅಂತೆಲ್ಲ ಸಾರಿದ. ಆಗಲೇ ಲಚ್ಚಮ್ಮನೂ ಯಾವುದೋ ತಿಳಿಯದ ಕಾಯಿಲೆ ಬಂದು ತೀರಿಕೊಂಡ್ರು. ಊರಲ್ಲಿ ನಿನ್ನಜ್ಜಿಯೂ ತೀರಿದರು. ಎಲ್ಲ ಒಂದರ ಮೇಲೆ ಒಂದು ಪೆಟ್ಟು ಬಿದ್ದಾಗ ಹರಿಣಿ ಕಂಗಾಲಾದ್ಲು. ಆಗ ನಿಂಗೆ ಒಂದೂವರೆ ವರ್ಷ. ಆಗಲೇ ಅವ್ಳು ಒಂಥರಾ ಬಿಸಿ ಮಾತಾಡ್ಲಿಕ್ಕೆ ಶುರು ಮಾಡಿದ್ದು. ಅಷ್ಟಕ್ಕೇ ಅವ್ಳನ್ನು ಶಾಲೆಯ ಕೆಲಸದಿಂದಲೂ ತೆಗೆದುಹಾಕಿದ್ರು. ಮತ್ತಷ್ಟು ತಲೆಕೆಟ್ಟಿತು.

ಆಗೆಲ್ಲ ನಿನ್ನನ್ನು ನಾನೇ ನೋಡಿಕೊಂಡಿದ್ದೆ. ಅಮ್ಮನನ್ನು ನಳಿನಿ ಮತ್ತು ಸುಮುಖ್ ಜೋಪಾನ ಮಾಡಿದ್ರು. ಅವಳಿಗೇನಾದ್ರೂ ಆದ್ರೆ ನಿನ್ನನ್ನು ನಾನೇ ಸಾಕಬೇಕೂಂತಲೂ ಇದ್ದೆ ಮಾರಾಯ್ತಿ. ಅಷ್ಟರಲ್ಲೇ, ನಿಂಗೆ ನಾಲ್ಕು ವರ್ಷ ಆಗುವ ಹೊತ್ತಿಗೆ ಹರಿಣಿ ಉಷಾರಾದ್ಲು. ಬೇರೆ ಊರಿಗೆ ಹೊರಟೇಹೋದ್ಲು. ಎಲ್ಲಿ ಏನು ಅಂತ ನಂಗೆ ಗೊತ್ತಾಗ್ಲೇ ಇಲ್ಲ. ಮತ್ತೆ ನೀವು ಇಲ್ಲಿಗೆ ಬಂದದ್ದು ನೀನು ಬಿ.ಎಸ್ಸಿ. ಸೇರಿದಾಗ. ನಡುವೆ ಕೆಲವಾರು ವರ್ಷ ನಳಿನಿ ನೇಹಾಳನ್ನು ಕಟ್ಟಿಕೊಂಡು ನಿಮ್ಮೊಟ್ಟಿಗೇ ಇದ್ಲಲ್ಲ. ಅದು ನಿಮ್ಮಿಬ್ರ ಅದೃಷ್ಟ. ನೀನು ಮತ್ತು ನೇಹಾ ಇಷ್ಟು ಗಾಢ ಸ್ನೇಹಿತೆಯರಾಗ್ಲಿಕ್ಕೆ ನಳಿನಿಯೇ ಕಾರಣ. ನಳಿನಿ ಸುಮುಖ್ ದಂಪತಿ ದೇವತೆಗಳ ಹಾಗೆ, ಏನಂತೀ?’

‘ಹ್ಮ್’ಗುಟ್ಟುತ್ತಾ ನಳಿನಿ ಆಂಟಿಯ ಗೇಟಿನ ಮುಂದೆ ನಿಂತೆ. ಜಾಜಿ ಚಪ್ಪರದಡಿಯಲ್ಲಿ ಹೊಂಗನಸು ಹೆಣೆಯುತ್ತಲೋ ಹೆಕ್ಕುತ್ತಲೋ ಸುಳಿದಾಡುತ್ತಿದ್ದ ನೇಹಾ ಗೇಟಿಗೆ ಓಡಿ ಬಂದವಳು ಸರೋಜಾಂಟಿಯನ್ನು ಕಂಡು ಗೇಟಿನಾಚೆಯೇ ನಿಂತಳು. ಸರೋಜಾಂಟಿ ಗೇಟ್ ದೂಡಿ ಒಳಹೋದರು, ನಳಿನಿ ಆಂಟಿಗೆ ನಾಳೆ ಸಂಜೆಯ ಕಾರ್ಯಕ್ರಮದ ವಿವರ ಒಪ್ಪಿಸಲು. ನೇಹಾಳಿಗೆ ನನ್ನ ಕಥನ ಕತ್ತಲಾಗುವವರೆಗೂ ಸಾಗಿತು ಜಾಜಿ ಚಪ್ಪರದೊಳಗೆ.