ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Wednesday, 15 April, 2015

ಮಳೆಬಯಲು


ಮುಂಗಾರು ಸಿಂಚನಕೆ ಮುಳ್ಳಾದ ಮೈ ಪುಳಕ
ಹಿಗ್ಗೇರಿ ಚೈತನ್ಯಹೊಳೆಯಾದ ನಡುಕ
ಮಗ್ಗುಲಾಗದ ಮೌನ ಬಿಟ್ಟಿರದ ಬಿಗಿ ಧ್ಯಾನ
ನುಗ್ಗಾದ ಒಡಲೊಳಗೆ ಚೇತನದ ಸ್ಫುರಣ

ರಮ್ಯಗಾನದ ಒರತೆ ಕಂಠದಾಳದ ಸರಸಿ
ಕಾಮಿಗೊಲಿದಂತೆ ರತಿ ಮತಿ ಚರಣದಾಸಿ
ಹೂಮನಸು ಒಮ್ಮನಸು ಒಂದುಗೂಡಿದ ಕನಸು
ಕೆಮ್ಮಣ್ಣು ಹಸುರಾಯ್ತು ತೆರೆದಂತೆ ಸೊಗಸು

ಸುತ್ತೆಲ್ಲ ನಗೆಗಡಲು ಬಾನಗಲ ಭಾವಗಳು
ಬಿತ್ತುಬಿತ್ತೆಂದೆನಲು ನತ್ತಿನಲಿ ಮುಗುಳು
ಕತ್ತೆತ್ತಿ ಎಳೆಗಾಳಿ ಅಂಗಳದಿ ಆಡಿರಲು
ಕತ್ತಲಾರುವ ಮುನ್ನ ಬೆಳ್ಳಿ ಒಡಲು

ಎಳೆಜೀವ ನಸುನಗಲು ಹೊಸ ಬೆಡಗು ಆಗಸಕೆ
ಮಳೆಬಿಲ್ಲ ಉಯ್ಯಾಲೆ ಮಿಂಚು ತೋರಣಕೆ
ಆಳದಾಳದ ಸರಸಿ ತುಂಬಿ ಮೊರೆಯುವ ಗುನುಗು
ಬಾಳಿದುವೆ ಬಯಲೆನುವ ನಿತ್ಯ ಬೆರಗು
(ಜೂನ್/ಸೆಪ್ಟೆಂಬರ್-೨೦೧೪)

Saturday, 14 March, 2015

ಪ್ರಶ್ನೆ ಮತ್ತು ಪರ್ಯಾಯ

ಮಿಡಿಯಬೇಕಿದ್ದ ಭಾಗ ಮಿಡಿಯದಂತೆ
ತುಡಿತವಿರದ ಅಂಗ ಒದೆಯುವಂತೆ
ಅವರುಗಳೆಲ್ಲ ಹೀಗೆ ಇರುವುದೇಕೆ?
ಸೃಷ್ಟಿಯ ಉತ್ತುಂಗ ಎನಿಸಿಕೊಳ್ಳುವ
ಜೀವಜಾಲದೊಳಗೆಲ್ಲ ನೀಚತನ ಬೀರುವ
ಈ ಜೀವಿಗಳು ತಿರುಗುತ್ತಿರುವುದೇಕೆ?
ಹೊಟ್ಟೆಕಿವುಚುವಂಥಲ್ಲೆಲ್ಲ ಸಂಭ್ರಮಿಸುವ
ಹೆರರ ಕಣ್ಣೀರನ್ನೇ ತೃಪ್ತಿಯಿಂದ ಕುಡಿವ
ಮೃಗಗಳನ್ನು ಇಲ್ಲಿ ಇರಗೊಳಿಸಿದ್ದೇಕೆ?
ಕಣ್ಣೆರಡು ಮೂಗು ಬಾಯಿಗಳ ಮುಖ
ಮಾನವಾಕಾರದೊಳಗೆ ಇರಬೇಕಾದ
ಮಾನವೀಯತೆಯನ್ನು ತೆಗೆದಿಟ್ಟಿದ್ದೇಕೆ?

ಇವರೆಲ್ಲ ಹೇಸರಗತ್ತೆಗಳಾಗಬೇಕಿತ್ತು
ಕಣ್ಣೆರಡು ಮೂಗು ಬಾಯಿಗಳ ಅದೇ ಮುಖ
ಕೈಗಳನ್ನೂ ನೆಲಕ್ಕೂರುವ ಭಾಗ್ಯವಿರಲಿ
ಶೌರ್ಯಕ್ಕೆ ದಕ್ಕುವ ದರ್ಪ ದೇಹವಿದ್ದೂ
ದೇಹಸುಖ ದಕ್ಕಿಸಲಾಗದ ನರಸತ್ತವರಾಗಿ
ಇದ್ದುಕೊಳ್ಳಲಿ ಪಾಪ, ಯಾರ್ಯಾರದ್ದೋ ತೂಕ
ಬೆನ್ನಿಗೇರಿಸಿಕೊಂಡು ಅಟ್ಟಾಡಿಸಿಕೊಂಡು
ದೇಹಕ್ಕಡರಿದ ಚರ್ಬಿ ಇಳಿಸಿಕೊಳ್ಳಲಿ


(೦೬-ನವೆಂಬರ್-೨೦೧೪)