ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Tuesday 1 February, 2011

ಸುಮ್ಮನೆ ನೋಡಿದಾಗ...೧೩

ನನ್ನ ಕಣ್ಣುಗಳಲ್ಲಿ ಗಾಬರಿ ಗುರುತಿಸಿ ಸುಮುಖ್ ಅಂಕಲ್ ಹತ್ರ ಬಂದರು.
‘ಯೋಚಿಸ್ಬೇಡ. ಇವತ್ತು ಇಲ್ಲೇ ಊಟ ಮಾಡು. ನಂತ್ರ ನಿನ್ನನ್ನು ನಾನೇ ನಿಮ್ಮನೆಗೆ ಬಿಡ್ತೇನೆ, ಆಯ್ತಾ?’
‘ಬೇಡ ಅಂಕಲ್, ಅಮ್ಮ ಆಗ್ಲೇ ಕಾಯ್ತಿರ್ಬಹುದು. ನಾನು ಈಗ್ಲೇ ಹೋಗ್ತೇನೆ’
‘ಏ, ಇಲ್ಲೇ ಇರು ಇವತ್ತು...' ನೇಹಾ ಕುತ್ತಿಗೆ ಅಡ್ಡ ಹಾಕಿ ನಗುತ್ತಿದ್ದಳು.
ನಳಿನಿ ಆಂಟಿಯ ಕಣ್ಣುಗಳಲ್ಲಿ ಆಗಲೇ ಖುಷಿಯಿತ್ತು. ನನ್ನಮ್ಮನ ಕೋಪದಿಂದ ನನ್ನನ್ನು ಉಳಿಸಿಕೊಳ್ಳುವ ಸಲುವಾಗಿ ಮೂರು ಜೀವಗಳಿಗೆ ನಿರಾಸೆ ಮಾಡುವ ಇಚ್ಛೆಯಾಗಲಿಲ್ಲ, ಒಪ್ಪಿಕೊಂಡೆ. ಎಲ್ಲರೂ ಮನೆಯೊಳಗೆ ಹೋದ ಕೂಡಲೇ ಸುಮುಖ್ ಅಂಕಲ್ ಅಮ್ಮನಿಗೆ ಫೋನ್ ಮಾಡಿ ವಿಷಯ ತಿಳಿಸಿ, ‘ನೀವೂ ಇಲ್ಲೇ ಊಟಕ್ಕೆ ಬನ್ನಿ’ ಎಂದರು. ನನ್ನ ನಿರೀಕ್ಷೆಯಂತೆಯೇ ನಿರಾಕರಣೆ ಬಂದಾಗ ಪೆಚ್ಚಾದವಳು ನೇಹಾ.


ಊಟ ಮುಗಿಸಿ ಒಂಬತ್ತು ಗಂಟೆಯ ಸುಮಾರಿಗೆ ಸುಮುಖ್ ಅಂಕಲ್ ನನ್ನನ್ನು ಮನೆಗೆ ಕರೆದುಕೊಂಡು ಹೊರಟಾಗ ನೇಹಾಳೂ ಜೊತೆಯಾದಳು. ನಡೆಯುತ್ತಾ ಸಾಗಿದೆವು. ಕೆಲಕ್ಷಣಗಳ ಮೌನದ ಬಳಿಕ,
‘ಅಂಕಲ್, ನಮ್ಮಮ್ಮ ಯಾವಾಗ ಇಷ್ಟು ಸಿಡುಕಿಯಾದದ್ದು? ಯಾಕೆ? ನಿಮಗೆ ಗೊತ್ತುಂಟಾ?’ ತಡೆಯಲಾರದೆ ಕೇಳಿದೆ.
‘ಹ್ಮ್, ಇದನ್ನು ನಿಮ್ಮಮ್ಮನ ಹತ್ರವೇ ಕೇಳುದು ಒಳ್ಳೇದು ಮಗಳೇ. ನಾನು ಹೇಳಿದ್ರೆ ತಪ್ಪಾದೀತು’
‘ಅಮ್ಮ ಇದಕ್ಕೆ ಉತ್ತರ ಕೊಡುದು ಸಂಶಯ. ಅಲ್ಲದೆ, ಕೇಳಿದ್ರೆ ನಾನಂತೂ ಸರಿಯಾಗಿ ಬೈಸಿಕೊಳ್ಬೇಕು, ಅಷ್ಟೇ’
‘ಒಂದಲ್ಲ ಒಂದಿನ ನಿನಗೆ ಸತ್ಯ ಗೊತ್ತಾಗಿಯೇ ಆಗ್ತದೆ. ಇವತ್ತು ಅರ್ಧ ಕಥೆ ಗೊತ್ತಾಯ್ತಲ್ಲ, ಹಾಗೇ...’
‘ಇವತ್ತು ನಮಗೆ ಅರ್ಧ ಕಥೆ ಗೊತ್ತಾಯ್ತು ಅಂತ ನಿಮಗೆ ಹೇಗೆ ಗೊತ್ತಾಯ್ತು?’
‘ಅದು ನಳಿನಿ ಮತ್ತು ನನ್ನ ನಡುವಿನ ಗುಟ್ಟು. ನಿಮಗೀಗಲೇ ಬೇಡ.’
‘ಪಪ್ಪಾ, ಮುಂದೆ ನಾನೂ ನಿಮ್ಮಿಬ್ಬರ ಹಾಗೇ ಚಂದ ಹೊಂದಾಣಿಕೆಯಿಂದ ಸಂಸಾರ ಮಾಡ್ಬೇಕಾದ್ರೆ ಇಂಥ ಗುಟ್ಟನ್ನೆಲ್ಲ ನಂಗೂ ಹೇಳಿಕೊಡ್ಬೇಕು ನೀವು’ ನೇಹಾಳ ಮಾತಿಗೆ ಅಂಕಲ್ ಅಬ್ಬರದ ನಗು ಹಾರಿಸಿದರು.
ಅಷ್ಟರಲ್ಲಾಗಲೇ ನಮ್ಮ ಗೇಟಿನ ಹತ್ತಿರ ಬಂದಿದ್ದೆವಾದ್ದರಿಂದ ಆ ನಗು ಕೇಳಿಯೇ ಅಮ್ಮ ಬಾಗಿಲು ತೆರೆದರು. ನನ್ನನ್ನು ಮೆಟ್ಟಿಲವರೆಗೆ ತಲುಪಿಸಿ ಹಿಂದೆ ಹೊರಟವರನ್ನು ಅಮ್ಮ ಒಳಗೆ ಕರೆಯಲೇ ಇಲ್ಲ. ಪೆಚ್ಚಾಗುವ ಸರದಿ ನನ್ನದು.

ಒಳಗುದಿಯಿಂದ ಪುಸ್ತಕಗಳನ್ನು ಮೇಜಿನ ಮೇಲಿಟ್ಟು ಬಚ್ಚಲಿಗೆ ಹೋಗಿ ಕೈಕಾಲು ತೊಳೆದುಕೊಂಡು ಬಂದೆ. ಅಮ್ಮನಂತೂ ಮಲಗಲು ಸಿದ್ಧವಾಗಿದ್ದರು. ನನಗೂ ಬೇರೇನೂ ಕೆಲಸಗಳಿರಲಿಲ್ಲ. ತಲೆ ಮಾತ್ರ ಧಿಮ್ಮೆನ್ನುತ್ತಿತ್ತು. ಒಂದು ದಿನಕ್ಕೆ ಗ್ರಹಿಸಲು ಸಾಧ್ಯವಿದ್ದದ್ದಕ್ಕಿಂತ ಹೆಚ್ಚಿನ ಮಾಹಿತಿ ಮನಸ್ಸು ಮೆದುಳನ್ನು ತುಂಬಿಕೊಂಡಿತ್ತು. ಅವನ್ನೆಲ್ಲ ಹೇಗೆ ಸಂಭಾಳಿಸಬೇಕೆಂದು ತಿಳಿಯದೆ ನನ್ನ ಮಂಚದ ಮೇಲೆ ಬೋರಲಾದೆ.

ಬೆಳಿಗ್ಗೆ ಎದ್ದಾಗ ಸೂರ್ಯ ನನ್ನ ಕೆನ್ನೆ ಮುತ್ತಿಕ್ಕುತ್ತಿದ್ದ. ನಿನ್ನೆ ಸಂಜೆಯೆಲ್ಲ ಮನದೊಳಗೆ ಅವಿತಿದ್ದವ ಮತ್ತೆ ಧುತ್ತನೆ ಎದುರು ನಿಂತ. ಜನವರಿ ಮುಂಜಾನೆಯ ಚಳಿಯಲ್ಲಿ ವಸಂತನ ಹೂನಗೆ ಕೋಣೆಯನ್ನೇ ಬೆಚ್ಚಗಾಗಿಸಿತು. ಇವನನ್ನು ಹೇಗೆ ನಿಭಾಯಿಸುವುದೆನ್ನುವ ಹೊಸ ಸಮಸ್ಯೆ ಎದುರಾಯಿತು. ಹೀಗೆ, ಇದ್ದಕ್ಕಿದ್ದ ಹಾಗೆ, ಎಲ್ಲೆಂದರಲ್ಲಿ ಇವ ಎದುರಾದರೆ ನನ್ನ ಕೆಲಸಗಳೆಲ್ಲ ಏರುಪೇರಾದಂತೆಯೇ. ಅಮ್ಮನ ಚಿರತೆ ಕಣ್ಣುಗಳಿಗೆ ಈ ಕಳ್ಳನ ಪತ್ತೆಯಾಗದ ರೀತಿ ಜೋಪಾನ ಮಾಡುದು ಹೇಗೆ?... ಅಲ್ಲ! ನನಗ್ಯಾಕೆ ಅವನ ಉಸಾಬರಿ? ಅವನನ್ನು ಬಚಾಯಿಸಿಕೊಳ್ಳುವ ಯೋಚನೆ-ಯೋಜನೆ ಯಾಕೀಗ? ಅಸಲಿಗೆ, ನನ್ನೊಳಗೆ ಅವನು ಸೇರಿಕೊಂಡದ್ದು ಯಾವಾಗ? ಅಯ್ಯೋ! ಬೆಳಬೆಳಗ್ಗೆಯೇ ಇದೇನಿದು ಗೋಜಲು? ಹೇಗೆ ಇದನ್ನೆಲ್ಲ ಬಿಡಿಸಿಕೊಳ್ಳಲಿ? ಹರ್ಷಣ್ಣ? ನೇಹಾ? ನಳಿನಿ ಆಂಟಿ? ಇಲ್ಲ, ಯಾರೂ ಬೇಡ. ಇದನ್ನು ನಾನೇ ನಾನಾಗಿಯೇ ಪರಿಹರಿಸಿಕೊಳ್ಳಬೇಕು. ನಿರ್ಧಾರದ ಜೊತೆ ಕಿಟಕಿಯ ಪರದೆ ಸರಿಸಿದೆ. ಬೆಚ್ಚನೆಯ ಕಿರಣಗಳಿಗೆ ಮುಖವೊಡ್ದಿದೆ.

ಗಂಟೆ ಏಳಾದರೂ ಅಮ್ಮನ ಸದ್ದಿರಲಿಲ್ಲ. ಎದ್ದಿಲ್ಲವೇನೋ ಅಂದುಕೊಂಡು ಕೋಣೆಗೆ ಹೋಗಿ ನೋಡಿದರೆ ಅಮ್ಮ ಅಲ್ಲಿರಲೇ ಇಲ್ಲ. ಅಡುಗೆಮನೆ, ಬಚ್ಚಲು, ಹಿತ್ತಿಲು ಎಲ್ಲ ನೋಡಿ ಟೆರೇಸಿಗೆ ಹತ್ತಿದೆ. ಸೂರ್ಯನನ್ನೇ ದಿಟ್ಟಿಸುತ್ತಿದ್ದರು. ನನ್ನ ಹೆಜ್ಜೆ ಸದ್ದಿಗೆ ಬೆಚ್ಚಿಬಿದ್ದವರು ಹಾಗೇ ತಿರುಗಿ ಧಡಧಡ ಕೆಳಗೆ ಇಳಿದುಹೋದರು. ಗಲಿಬಿಲಿ, ಕಿರಿಕಿರಿಯೊಳಗೆ ನಾನೂ ಕೆಳಗಿಳಿದೆ.

ಮುಖತೊಳೆದು ಬಂದ ಅಮ್ಮನ ಕಣ್ಣುಗಳು ಅವರು ರಾತ್ರೆಯೆಲ್ಲ ಮಲಗಿರಲಿಲ್ಲ ಎನ್ನುವ ಸಂಶಯ ಕೊಟ್ಟವು.
‘ಅಮ್ಮಾ, ಉಶಾರಿಲ್ವಾ?’ ಆದಷ್ಟೂ ಮೃದುವಾಗಿ ಕೇಳಿದೆ. ಉತ್ತರ ಬರಲಿಲ್ಲ.
‘ತಿಂಡಿ ಏನ್ ಮಾಡ್ಲಿ ಹೇಳಿ, ನಾನೇ ಮಾಡ್ತೇನೆ...’ ಪ್ರತಿಕ್ರಿಯೆ ಇಲ್ಲ.
‘ದೋಸೆ ಬಂದ ಉಂಟಲ್ಲ, ದೋಸೆ ಹಾಕ್ತೇನೆ, ಬನ್ನಿ ಈಚೆ. ಟೇಬಲ್ ಹತ್ರ ಕೂತ್ಕೊಳ್ಳಿ...’ ವ್ಯತ್ಯಾಸವೇ ಇಲ್ಲ.

ಹತ್ತಿರ ಹೋಗಿ ಅವರನ್ನು ಟೇಬಲ್ ಹತ್ತಿರಕ್ಕೆ ದೂಡುನಡಿಗೆಯಲ್ಲಿ ಕರೆತಂದೆ. ಅದೇನೋ ಶೂನ್ಯಭಾವ ಅವರೊಳಗಿಂದ ಆವಿಯಾಗುತ್ತಿತ್ತು. ಅದರ ಝಳ ನನ್ನೊಳಗನ್ನೂ ಸೋಕಿತು.

ದೋಸೆ ಹಾಕಿ, ಉಪ್ಪಿನಕಾಯ್ ಜೊತೆ ಪ್ಲೇಟಲ್ಲಿಟ್ಟು ಟೇಬಲ್ಲಿನಲ್ಲಿಟ್ಟೆ. ಕುದಿಕಾಫಿ ಲೋಟ ಬದಿಯಲ್ಲಿಟ್ಟೆ. ನನಗೂ ದೋಸೆ ಕಾಫಿ ಮಾಡಿಕೊಂಡು ಟೇಬಲ್ ಬದಿಗೆ ಬಂದಾಗ ಅಮ್ಮನ ಕಣ್ಣುಗಳಲ್ಲಿ ಹನಿಗಳು ಉದುರುತ್ತಿದ್ದವು. ಹೊಟ್ಟೆ ತಾಳ ಹಾಕುತ್ತಿದ್ದರೂ ದೋಸೆ ಗಂಟಲಲ್ಲಿ ಇಳಿಯಲಿಲ್ಲ. ಕಾಫಿ ಮಾತ್ರ ಕುಡಿದು ಅಮ್ಮನ ಮುಖ ನೋಡಲಾಗದೆ ಗೋಡೆ, ಕಿಟಕಿ ನೋಡುತ್ತಾ ಅಲ್ಲೇ ಕೂತೇ ಇದ್ದೆ. ಎಷ್ಟು ಹೊತ್ತೋ, ಯಾರಿಗ್ಗೊತ್ತು?