ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Tuesday, 14 February, 2012

ರಾತ್ರಿಹಕ್ಕಿ ಮತ್ತು ಚಾರಣ

[ಜನವರಿ ಹದಿನಾಲ್ಕರ ಸಂಜೆ ನಡೆದ ವಿಶಿಷ್ಟ ಕಾರ್ಯಕ್ರಮ- "ಕಾವ್ಯ- ವಾಚನ- ಗಾಯನ- ಚಿಂತನ- ನರ್ತನ"! ಶ್ರೀಯುತ ಉದ್ಯಾವರ ಮಾಧವ ಆಚಾರ್ಯರು ಯೋಚಿಸಿ ಆಯೋಜಿಸಿದ್ದ ಈ ಅಕ್ಷರ-ನಾದ-ನೃತ್ಯ ಸಂಗಮದಲ್ಲಿ ಆರು ಕವಿಗಳು, ಆರು ಸಹೃದಯ ಚಿಂತಕರು, ಆರು ಗಾಯಕರು ಹಾಗೂ ಎಂಟು ನರ್ತಕರು (ನಟುವಾಂಗ-ಹಿಮ್ಮೇಳ ಸಹಿತ) ಭಾಗವಹಿಸಿದ್ದರು. ಅಂದು ನಾ ಓದಿ, ಶ್ರೀ ನೀಲಾವರ ಸುರೇಂದ್ರ ಅಡಿಗರು ವಿಶ್ಲೇಷಿಸಿದ ನನ್ನೆರಡು ಕವನಗಳು ಇದೀಗ ನಿಮ್ಮೆಲ್ಲರ ಅವಗಾಹನೆಗೆ.]
************

ರಾತ್ರಿಹಕ್ಕಿ

ಕುದಿಯುತಿರುವ ಕಡಲಿನೊಳಗೆ
ಉರಿದು ದಣಿದ ಸೂರ್ಯ ಮುಳುಗೆ
ಬೆಳಗಿನಿಂದ ಬೆಳಗಿ ಬೆಳಗಿ
ಬಾಗಿ ನಿಂತ ಬಾನ ಕೆಳಗೆ
ರಾತ್ರಿ ಹಕ್ಕಿ ಹಾರಿತು
ಅದರ ನೆರಳು ಜಾರಿತು

ಕಪ್ಪು ಹಾಸು ಹಾಸಿ ಬಂದು
ಗುಮ್ಮನನ್ನು ಕರೆವೆನೆಂದು
ಬಳಲಿದವರ ಒಳಗೆ ತಂದು
ಬಾಗಿಲಂಚಿನಿಂದ ಸಂದು
ರಾತ್ರಿ ಹಕ್ಕಿ ಹಾರಿತು
ಅದರ ನೆರಳು ಜಾರಿತು

ಕಮ್ಮೆನ್ನುವ ಬಿಳಿಯ ಮುಗುಳು
ಕುಸುಮ ರಾಣಿ ಬೆಳಕ ಮಗಳು
ಕಣ್ಣು ಹೊಡೆವ ಚುಕ್ಕಿ ಹರಳು
ಮುಸುಕಿನೊಳಗೆ ಸೋಲುತಿರಲು
ರಾತ್ರಿ ಹಕ್ಕಿ ಹಾರಿತು
ಅದರ ನೆರಳು ಜಾರಿತು
(೦೮-ಮೇ-೨೦೧೧)
************

ಚಾರಣ

ಕಟ್ಟೆ ತುಂಬಿ ಹರಿದುಹೋದ ನೀರಿಗೇಕೆ ಹೆಸರು
ಒಡಲ ತುಂಬ ನಲಿಯಬಹುದು ಹಸುರಿನ ಹೊಸ ಉಸಿರು

ಗಾಳಿಗೊಡ್ಡಿಕೊಂಡ ಬದುಕು ಯಾರ ಮನದ ಇಂಗಿತ
ಸೂರಿನೊಳಗೆ ನೆರೆಯು ಮೊರೆಯೆ ಯಾರಿತ್ತರು ಅಂಕಿತ

ಕಾನಸುಧೆಯ ನೆಳಲಿನಲ್ಲಿ ಚಂಚಲಿಸುವ ಚೇತನ
ಮಂಜು ಹನಿಸಿ ಮಾಗಿ ಬಿಗಿದು ಚಿತ್ತಾಯಿತು ಚಿನ್ಮನ

ಆಟವುಂಟು ಲೆಕ್ಕವಲ್ಲ ಬಾಳು ಬಾಳಿದವರದು
ಗೋಡೆಯೊಳಗೆ ಗುಟ್ಟು ಗುನುಗು ಬಿಸುಪು ಮಾತ್ರ ನಮ್ಮದು

ಮಾತು ಮಾತಿಗೊಂದು ಸುತ್ತು ಚುಕ್ಕಿ ಬೆಳಕು ವರ್ತುಲ
ಏರಿ ಇಳಿದು ಹಾದಿ ಮಣಿದು ಚರ ಚೈತ್ರದ ಸಂಕುಲ
(೨೨-ಡಿಸೆಂಬರ್-೨೦೧೧)
************

ನೀಲಾವರ ಸುರೇಂದ್ರ ಅಡಿಗ:-

ಮೊತ್ತ ಮೊದಲು ಉದ್ಯಾವರ ಮಾಧವ ಆಚಾರ್ಯರಿಗೆ ನಾನು ಶರಣು. ಸಂಕ್ರಾಂತಿಯ ಶುಭದಿನ ಒಂದು ಅತ್ಯುತ್ತಮವಾದ ಕವಿತಾಗುಚ್ಛವೊಂದನ್ನು ಓದಿ ಸಹೃದಯ ಪ್ರತಿಕ್ರಿಯೆ ನೀಡುವ ಅವಕಾಶ ಕಲ್ಪಿಸಿದ್ದಕ್ಕಾಗಿ ಇನ್ನೊಮ್ಮೆ ಅವರಿಗೆ ಶರಣು.

‘ಸುಪ್ತದೀಪ್ತಿ’ ಕಾವ್ಯನಾಮದ ಶ್ರೀಮತಿ ಜ್ಯೋತಿ ಮಹಾದೇವರವರ ಈ ಎರಡು ಕವಿತೆಗಳು ಒಂದೊಂದು ಸಲ ಓದಿದಾಗ ಒಂದೊಂದು ರೀತಿಯ ಒಳ ಅರ್ಥ ಕೊಡುತ್ತವೆ. ಈ ಕವಿತೆಗಳ ಮೇಲುನೋಟದ ಅರ್ಥಕ್ಕಿಂತ ಒಳನೋಟದ ಅರ್ಥ ತುಂಬಾ ವಿಶಾಲವಾಗಿದೆ.

‘ರಾತ್ರಿ ಹಕ್ಕಿ’ಯಲ್ಲಿ ಮೂರು ಚರಣಗಳಿವೆ. ಮೊದಲ ಚರಣ ಸಂಧ್ಯಾಕಾಲ, ಎರಡನೇ ಚರಣ ರಾತ್ರಿಯ ಹೊತ್ತು, ಮೂರನೆಯ ಚರಣ ಬೆಳಗಿನ ಸಂದರ್ಭವನ್ನು ಚಿತ್ರಿಸುತ್ತವೆ.

ಧ್ವನಿ ಕಾವ್ಯದ ಆತ್ಮ ಎಂಬ ಮಾತಿಗೆ ಈ ಕವಿತೆ ಶ್ರೇಷ್ಠ ಉದಾಹರಣೆಯಾಗಿದೆ.

‘ಬೆಳಗಿನಿಂದ ಬೆಳಗಿ ಬೆಳಗಿ ಬಾಗಿ ನಿಂತ ಬಾನ ಕೆಳಗೆ’ ಉರಿದು ದಣಿದ ಸೂರ್ಯ ಕುದಿಯುತ್ತಿರುವ ಕಡಲಿನೊಳಗೆ ಮುಳುಗುತ್ತಾನೆ. ಆಗ ರಾತ್ರಿಹಕ್ಕಿ ಹಾರಿತು, ಅದರ ನೆರಳು ಕೂಡ ಜಾರಿ ಹೋಗುತ್ತದೆ, ಕಣ್ಮರೆಯಾಗುತ್ತದೆ.

ಬೆಳಗಿನಿಂದ ಸಂಜೆಯವರೆಗೂ ದುಡಿದು ದುಡಿದು ಸುಸ್ತಾದ ದೇಹ ಆರಾಮವನ್ನು ಬಯಸುತ್ತದೆ. ಇಲ್ಲಿ ದೇಹ ಮತ್ತು ಚೇತನಗಳ ಪರಸ್ಪರ ಸಂಬಂಧವನ್ನು ಕವಯತ್ರಿ ತುಂಬ ಸೊಗಸಾಗಿ ಸೆರೆಹಿಡಿದಿದ್ದಾರೆ. ಇದು ಸಹೃದಯನಿಗೂ ಕೂಡಾ ಅರ್ಥೈಸಿಕೊಳ್ಳಲಿಕ್ಕೆ ಸ್ವಲ್ಪ ಮಟ್ಟಿನ ತ್ರಾಸವೇ ಆಗಿದೆ (ಈ ಕವಿತೆಯನ್ನು ನಾಲ್ಕು ಜನ ಕವಿ ಮಿತ್ರರಿಗೆ ತೋರಿಸಿದಾಗ ಅವರಿಂದ ಬಂದ ಪ್ರತಿಕ್ರಿಯೆಗಳ ಆಧಾರವಾಗಿ ಈ ಮಾತು ಹೇಳಿರುವುದಾಗಿದೆ). ಒಬ್ಬೊಬ್ಬ ಸಹೃದಯನಿಗೆ ಒಂದೊಂದು ರೀತಿಯ ಅರ್ಥ ಕೊಡುವ ಕಾರಣಕ್ಕಾಗಿ ಇದೊಂದು ಶ್ರೇಷ್ಠ ಕವಿತೆ ಎಂದು ಭಾವಿಸಿದ್ದೇನೆ.

ಎರಡನೆಯ ಚರಣದಲ್ಲೂ ಕೊಟ್ಟ ಉದಾಹರಣೆ ಕೂಡ ಅದ್ಭುತ. ಗುಮ್ಮನನ್ನು ಕರೆವೆನೆಂದು ಬಳಲಿದವರ ಒಳಗೆ ತಂದಾಗ ಬಾಗಿಲ ಅಂಚಿನ ಸಂದಿನಿಂದ ‘ರಾತ್ರಿ ಹಕ್ಕಿ ಹಾರಿತು’ ಎಂದು ಕವಯತ್ರಿ ಅಭಿಪ್ರಾಯ ಪಟ್ಟಿದ್ದಾರೆ. ಇಲ್ಲಿ ಬದುಕಿನ ಜಂಜಾಟವನ್ನೆಲ್ಲಾ ಮರೆತು ದೇಹ ವಿಶ್ರಾಂತಿ ಪಡೆಯುತ್ತದೆ ಎಂಬ ಅರ್ಥೈಸುವಿಕೆ ನನ್ನದು. ಇಲ್ಲಿ ಚೇತನ ಹಾರಿ ಹೋಗುವುದಿಲ್ಲ. ಆದರೆ ದುಗುಡ, ದುಮ್ಮಾನಗಳು ಮರೆಯಾಗುತ್ತವೆ.

ಕೊನೆಯ ಚರಣದಲ್ಲಿ ‘ಕುಸುಮ ರಾಣಿ ಬೆಳಕ ಮಗಳು, ಕಣ್ಣು ಹೊಡೆವ ಚುಕ್ಕಿ ಹರಳು’ ನಾನು ಮೆಚ್ಚಿಕೊಂಡ ಸಾಲುಗಳು. ‘ಮುಸುಕಿನೊಳಗೆ ಸೋಲುತಿರಲು, ರಾತ್ರಿ ಹಕ್ಕಿ ಹಾರಿತು’ ಎಂಬ ಸಾಲಿನ ಸಾರ ಕೂಡ ಯೋಚನೆಗೆ ಎಡೆ ಮಾಡಿಕೊಡುತ್ತದೆ.

‘ರಾತ್ರಿ ಹಕ್ಕಿ’ ಕವಿತೆಯಲ್ಲಿ ಬದುಕಿನ ಒಳನೋಟವಿದೆ.ದೇಹ ಮತ್ತು ಚೇತನಗಳ ಪರಸ್ಪರ ಸಂಬಂಧದ ಸೂಕ್ಷ್ಮ ಒಳಹರಿವು ಇರುವುದನ್ನು ಗಮನಿಸಬಹುದು. ಇಲ್ಲಿ ಬದುಕಿನ ಜಂಜಾಟದಲ್ಲಿ ಆಗುವ ಅನುಭವಗಳ ಸೊಗಸಾದ ಚಿತ್ರಣವಿದೆ.

ಇನ್ನೊಂದು ಕವಿತೆ ‘ಚಾರಣ’. ಇದು ಕೂಡ ಬದುಕಿನ ಚಾರಣವನ್ನು ತಿಳಿಸುತ್ತದೆ:

‘ಕಟ್ಟೆ ತುಂಬಿ ಹರಿದುಹೋದ/ ನೀರಿಗೇಕೆ ಹೆಸರು?// ಒಡಲ ತುಂಬ ನಲಿಯಬಹುದು/ ಹಸುರಿನ ಹೊಸ ಉಸಿರು’. ಇಲ್ಲಿ ದೇಹದೊಳಗಿರುವ ಚೇತನದ ಪ್ರಾಮುಖ್ಯದ ಅರಿವು ನಮಗಾಗುತ್ತದೆ. ಗಾಳಿಗೆ ಒಡ್ಡಿಕೊಂಡಿರುವ ಬದುಕು; ಅದನ್ನು ನಿಭಾಯಿಸುವ ಚೇತನ. ಇವುಗಳ ಪರಸ್ಪರ ಹೋಲಿಕೆಯ ಅರ್ಥಪೂರ್ಣತೆಯನ್ನು ಯೋಚಿಸುವಂತೆ ಮಾಡಿದೆ.

ಮಾಗಿಯ ಬಿಗಿ ಅಪ್ಪುಗೆಯಲ್ಲಿ ಚಿನ್ಮನ ಚಿತ್ತಾಗುವುದು, ಕಾನಸುಧೆಯ ನೆಳಲಿನಲ್ಲಿ ಚಂಚಲಿಸುವ ಚೇತನ - ಇವೆಲ್ಲ ಬದುಕಿನ ಚಾರಣಕ್ಕೆ ಸಂಬಂಧಿಸಿದ ಹಾಗೆ ಕವಯತ್ರಿ ನೀಡುವ ಅರ್ಥಪೂರ್ಣ ಉದಾಹರಣೆಗಳಾಗಿವೆ. ಗೋಡೆಯೊಳಗಿನ ಗುಟ್ಟು ಗುನುಗುವಾಗ ಅದನ್ನು ಹೊಂದಿಸುವ ಕೆಲಸ ಮಾತ್ರವಾಗುತ್ತಿದೆ. ‘ಆಟವುಂಟು ಲೆಕ್ಕವಲ್ಲ, ಬಾಳು ಬಾಳಿದವರದು’ ಎಂಬ ಹೇಳಿಕೆಯು ವಿಶಿಷ್ಟ ಧ್ವನಿಯನ್ನು ಹೊರಹಾಕಿದೆ.

ಏರಿ ಇಳಿದು ಹಾದಿ ಮಣಿದು, ಮಾತು ಮಾತಿಗೊಂದು ಸುತ್ತು ಹೊಡೆದು, ಚುಕ್ಕಿ ಬೆಳಕಿನ ವರ್ತುಲದಲ್ಲಿ ಚೈತ್ರದ ಸಂಕುಲದಲ್ಲಿ ‘ಚಾರಣ’ ಸಾಗುವ ಬಗೆಯನ್ನು ಇಲ್ಲಿ ಹೇಳಲಾಗಿದೆ. ಪೂರಕವಾಗಿ ಇದು ಕೂಡ ಬದುಕಿನ ಚಾರಣವನ್ನು ಧ್ವನಿಸುತ್ತದೆ.

‘ರಾತ್ರಿ ಹಕ್ಕಿ’ ಹಾಗೂ ‘ಚಾರಣ’ - ಈ ಎರಡೂ ಕವಿತೆಗಳ ಈ ಗುಚ್ಛ- ದೇಹ, ಚೇತನ, ಬದುಕಿನ ಒಳನೋಟಗಳನ್ನು ಅರ್ಥಪೂರ್ಣವಾಗಿ ತಿಳಿಸುವ ಜೊತೆಗೆ ಬದುಕಿನ ಚಾರಣವನ್ನು ನಮಗೆ ಮನದಟ್ಟು ಮಾಡುವಲ್ಲಿ ಯಶಸ್ವಿಯಾಗಿದೆ. ಈ ಕಾರಣಕ್ಕಾಗಿ ಅರ್ಥಪೂರ್ಣವಾದ ಕವಿತೆಗಳನ್ನು ಕಾವ್ಯಸರಸ್ವತಿಗೆ ಅರ್ಪಿಸಿದ ‘ಸುಪ್ತದೀಪ್ತಿ’ ಕಾವ್ಯನಾಮದ ಶ್ರೀಮತಿ ಜ್ಯೋತಿ ಮಹಾದೇವ್ ಶ್ಲಾಘನೆಗೆ ಅರ್ಹರಾಗಿದ್ದಾರೆ.