ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday 5 March, 2009

ಅಡಕತ್ತರಿ

ಹೌದು! ಇದೊಂದು ಅಡಕತ್ತರಿ-
ಇಕ್ಕಳದಂತೆ ಅಡಕೆಯನ್ನು ಇಬ್ಬದಿಯಿಂದ
ನುರಿಯುತ್ತದೆ ಬಲವಾಗಿ ಪುಡಿಯಾಗುವವರೆಗೂ...
ನಡುವಿರುವ ಅಡಕೆಗೋ ಇಬ್ಬಂದಿ-
ಅಲ್ಲಿರಲಾಗದೆ ಹೊರಬರಲೂ ಆಗದೆ
ನುಸುಳಾಡುತ್ತದೆ, ಬಲಹೀನವಾಗಿ ಪುಡಿಯಾಗುವವರೆಗೂ...

ತನ್ನತನದ ಛಾಪು ಉಳಿಸಿಕೊಂಡು
ಹೊಸದೊಂದು ಅಡಕೆ ಮರವಾಗುವ
ಕನಸುಗಳನ್ನು ಕಣ್ತುಂಬಿ ಬೆಳೆದ ನೆನಪುಗಳೊಂದಿಗೆ
ಹೊಸತನದ ಒತ್ತಡಗಳಿಗೆ ಸಿಲುಕಿ
ಹೊಸ ರೂಪ, ಬಣ್ಣ, ಭಾವಗಳಲ್ಲಿ
ಒಂದಾಗಿ ಬೆರೆತು ಲೀನವಾಗುವ ನನಸುಗಳೊಂದಿಗೆ

ಬೆಳೆದ ಆ ನೆಲ, ಬಲಿತ ಮೇಲೆ
ನೆಲೆಸಿದ ಈ ನೆಲೆಗಳ ನಡುವೆ
ಸಿಲುಕಿದ ಅಡಕೆಯಾಗುತ್ತಿದೆ ಈ ಮನಸ್ಸೂ ಪ್ರತಿದಿನ
ಮಕ್ಕಳೂ ತಮ್ಮಂತಾಗಬೇಕೆಂಬ
ಹಂಬಲ ತುಂಬಿದ ಕನಸುಗಣ್ಣುಗಳು
ಛಲ ಕಳೆದುಕೊಳ್ಳುತ್ತಾ ಕಾಂತಿಹೀನವಾಗುತ್ತವೆ ದಿನಾ ದಿನಾ

ಎಲ್ಲವನ್ನೂ ತನ್ನಲ್ಲಿ ಕರಗಿಸಿಕೊಳ್ಳುವ
'ಮೆಲ್ಟಿಂಗ್ ಪಾಟ್ ಕಲ್ಚರ್'ನಲ್ಲಿ
ವೇಗವಾಗಿ ಕರಗಿ ಒಂದಾಗುತ್ತಿವೆ ಎಳಸು ಕುಡಿಗಳು
ಗುರು-ಹಿರಿಯರಿಗೆ ಗೌರವ
ದೇವ-ದೇವತೆಗೆ ಭಕ್ತಿ ಭಾವ
ಯಾವುದನ್ನೂ ಅರಿಯದಾಗಿವೆ ಎಳೆ ಮನಗಳು

ಆ ಮನಗಳನ್ನೆಲ್ಲಿಗೆಳೆದಾಡಲಿ?
ಒಂದೊಂದು ಚೈತ್ರಕ್ಕೂ ಒಂದಾಳು ಬೇರು
ಬಲಿತ ಸಸಿ ಕಸಿಕಟ್ಟಲಾದೀತೆ ಬೇರೆ ನೆಲದೊಳಗೆ?
ಬೇರು ಬಲಿಯುವ ಮುನ್ನ ಇನ್ನೂ-
ಸಮಯವಿದೆ ಎಂದುಕೊಂಡು
ಏಕಾಗ್ರಚಿತ್ತವಿತ್ತು ಆ ಲಕ್ಷ್ಮೀಕಟಾಕ್ಷದೆಡೆಗೆ

ರೆಕ್ಕೆ ಬೆಳೆದ ಮರಿಗಳೀಗ
ಗೂಡು ಬಿಟ್ಟು ಹಾರಿದಾಗ
ಖಾಲಿಗೂಡಿಗೆ ಸಂಜೆ ಮರಳುವೆದೆಯೂ ಖಾಲಿ
ಆ ಲಕ್ಷ್ಮಿಯು ಇದ್ದರೇನಂತೀಗ
ಈ ಹಳೆಯ ಬೇರುಗಳಲ್ಲಿಲ್ಲ ಶಕ್ತಿ
ಹಿಂದುರುಗಲಾಗದ ದಾರಿಯಲ್ಲಿ ನಡಿಗೆ ಹೊಡೆದಿದೆ ಜೋಲಿ

ಮರಳಿ ಮಣ್ಣಿಗೆ ಮರಳುವಾಸೆ
ಕೆರಳಿ ಮರಳುತ್ತಿದೆ ತೆರೆಗಳಂತೆ
ತೋಟವೇ ಇಲ್ಲದ ನೆಲದಲ್ಲಿ ನೆಲೆಯೆಂಬುದೆಲ್ಲಿ?
ಬೆಳೆದ ಮಣ್ಣಿನ ಸೆಳೆತವೊಂದು-
ಕರುಳ ಬಳ್ಳಿಯ ನಂಟು ಒಂದು-
ಒತ್ತಡಗಳೆಡೆಯ ಮನಸು ಅಡಕೆಯಿಲ್ಲಿ!

(೦೫-ಮಾರ್ಚ್-೨೦೦೦)