ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday, 5 March, 2009

ಅಡಕತ್ತರಿ

ಹೌದು! ಇದೊಂದು ಅಡಕತ್ತರಿ-
ಇಕ್ಕಳದಂತೆ ಅಡಕೆಯನ್ನು ಇಬ್ಬದಿಯಿಂದ
ನುರಿಯುತ್ತದೆ ಬಲವಾಗಿ ಪುಡಿಯಾಗುವವರೆಗೂ...
ನಡುವಿರುವ ಅಡಕೆಗೋ ಇಬ್ಬಂದಿ-
ಅಲ್ಲಿರಲಾಗದೆ ಹೊರಬರಲೂ ಆಗದೆ
ನುಸುಳಾಡುತ್ತದೆ, ಬಲಹೀನವಾಗಿ ಪುಡಿಯಾಗುವವರೆಗೂ...

ತನ್ನತನದ ಛಾಪು ಉಳಿಸಿಕೊಂಡು
ಹೊಸದೊಂದು ಅಡಕೆ ಮರವಾಗುವ
ಕನಸುಗಳನ್ನು ಕಣ್ತುಂಬಿ ಬೆಳೆದ ನೆನಪುಗಳೊಂದಿಗೆ
ಹೊಸತನದ ಒತ್ತಡಗಳಿಗೆ ಸಿಲುಕಿ
ಹೊಸ ರೂಪ, ಬಣ್ಣ, ಭಾವಗಳಲ್ಲಿ
ಒಂದಾಗಿ ಬೆರೆತು ಲೀನವಾಗುವ ನನಸುಗಳೊಂದಿಗೆ

ಬೆಳೆದ ಆ ನೆಲ, ಬಲಿತ ಮೇಲೆ
ನೆಲೆಸಿದ ಈ ನೆಲೆಗಳ ನಡುವೆ
ಸಿಲುಕಿದ ಅಡಕೆಯಾಗುತ್ತಿದೆ ಈ ಮನಸ್ಸೂ ಪ್ರತಿದಿನ
ಮಕ್ಕಳೂ ತಮ್ಮಂತಾಗಬೇಕೆಂಬ
ಹಂಬಲ ತುಂಬಿದ ಕನಸುಗಣ್ಣುಗಳು
ಛಲ ಕಳೆದುಕೊಳ್ಳುತ್ತಾ ಕಾಂತಿಹೀನವಾಗುತ್ತವೆ ದಿನಾ ದಿನಾ

ಎಲ್ಲವನ್ನೂ ತನ್ನಲ್ಲಿ ಕರಗಿಸಿಕೊಳ್ಳುವ
'ಮೆಲ್ಟಿಂಗ್ ಪಾಟ್ ಕಲ್ಚರ್'ನಲ್ಲಿ
ವೇಗವಾಗಿ ಕರಗಿ ಒಂದಾಗುತ್ತಿವೆ ಎಳಸು ಕುಡಿಗಳು
ಗುರು-ಹಿರಿಯರಿಗೆ ಗೌರವ
ದೇವ-ದೇವತೆಗೆ ಭಕ್ತಿ ಭಾವ
ಯಾವುದನ್ನೂ ಅರಿಯದಾಗಿವೆ ಎಳೆ ಮನಗಳು

ಆ ಮನಗಳನ್ನೆಲ್ಲಿಗೆಳೆದಾಡಲಿ?
ಒಂದೊಂದು ಚೈತ್ರಕ್ಕೂ ಒಂದಾಳು ಬೇರು
ಬಲಿತ ಸಸಿ ಕಸಿಕಟ್ಟಲಾದೀತೆ ಬೇರೆ ನೆಲದೊಳಗೆ?
ಬೇರು ಬಲಿಯುವ ಮುನ್ನ ಇನ್ನೂ-
ಸಮಯವಿದೆ ಎಂದುಕೊಂಡು
ಏಕಾಗ್ರಚಿತ್ತವಿತ್ತು ಆ ಲಕ್ಷ್ಮೀಕಟಾಕ್ಷದೆಡೆಗೆ

ರೆಕ್ಕೆ ಬೆಳೆದ ಮರಿಗಳೀಗ
ಗೂಡು ಬಿಟ್ಟು ಹಾರಿದಾಗ
ಖಾಲಿಗೂಡಿಗೆ ಸಂಜೆ ಮರಳುವೆದೆಯೂ ಖಾಲಿ
ಆ ಲಕ್ಷ್ಮಿಯು ಇದ್ದರೇನಂತೀಗ
ಈ ಹಳೆಯ ಬೇರುಗಳಲ್ಲಿಲ್ಲ ಶಕ್ತಿ
ಹಿಂದುರುಗಲಾಗದ ದಾರಿಯಲ್ಲಿ ನಡಿಗೆ ಹೊಡೆದಿದೆ ಜೋಲಿ

ಮರಳಿ ಮಣ್ಣಿಗೆ ಮರಳುವಾಸೆ
ಕೆರಳಿ ಮರಳುತ್ತಿದೆ ತೆರೆಗಳಂತೆ
ತೋಟವೇ ಇಲ್ಲದ ನೆಲದಲ್ಲಿ ನೆಲೆಯೆಂಬುದೆಲ್ಲಿ?
ಬೆಳೆದ ಮಣ್ಣಿನ ಸೆಳೆತವೊಂದು-
ಕರುಳ ಬಳ್ಳಿಯ ನಂಟು ಒಂದು-
ಒತ್ತಡಗಳೆಡೆಯ ಮನಸು ಅಡಕೆಯಿಲ್ಲಿ!

(೦೫-ಮಾರ್ಚ್-೨೦೦೦)

5 comments:

sunaath said...

Caught between two cultures?
ಕಾಲಾಯ ತಸ್ಮೈ ನಮಃ!

Anonymous said...

ಜ್ಯೋತಿ ಅಕ್ಕ,"ಅಡಕತ್ತರಿ"ನೋಡಿದೊಡನೆ ನೆನಪಾಗಿದ್ದು ಅಡಕತ್ತರಿಯಲ್ಲಿ ಸಿಕ್ಕ ಅಡಕೆಯಂತೆ ,ಸಾಲು.
ಕಟು ಸತ್ಯದ ಸಾಲುಗಳು. ಅಡಕೆಗೂ ಮನಸ್ಸಿಗೂ,,,, ತುಂಬಾ ಚೆನ್ನಾಗಿದೆ.ಅರಗಿಸಿಕೊಳ್ಳಲು ಸಮಯ ಬೇಕು ನನಗೆ.
PSP

ಸುಪ್ತದೀಪ್ತಿ suptadeepti said...

ಹೌದು ಕಾಕಾ, ಈ ರೀತಿಯ ಅಡಕತ್ತರಿಯಲ್ಲಿ ನುಲಿಯುತ್ತಿರುವ ಹಲವಾರು ಮನಸ್ಸುಗಳನ್ನು ಕಂಡಿದ್ದೇನೆ. ಅವರೆಲ್ಲರ ತುಡಿತದ ಅಭಿವ್ಯಕ್ತಿಯೇ ಇದು. ನಿಜ, ಕಾಲಾಯ ತಸ್ಮೈ ನಮಃ!

ಪಿ.ಎಸ್.ಪಿ., ಅಡಕತ್ತರಿಯ ತನ್ನ ಕೆಲಸವನ್ನು ಮಾಡುತ್ತಲೇ ಇರುತ್ತದೆ. ಸಿಲುಕುವ ಅಡಕೆಗೆ ಮಾತ್ರ ನುಲಿತ. ಸತ್ಯ ಎಂದಿಗೂ ಕಟು, ಅಲ್ವಾ?

sritri said...

‘ರೆಕ್ಕೆ ಬೆಳೆದ ಮರಿಗಳೀಗ
ಗೂಡು ಬಿಟ್ಟು ಹಾರಿದಾಗ
ಖಾಲಿಗೂಡಿಗೆ ಸಂಜೆ ಮರಳುವೆದೆಯೂ ಖಾಲಿ’

- ಅಡಕತ್ತರಿಯಲ್ಲಿ ಸಿಕ್ಕವರೆಲ್ಲರ ನೋವಿಗೆ ದನಿ ನೀಡಿದೆ ನಿನ್ನ ಕವನ. :(

ಸುಪ್ತದೀಪ್ತಿ suptadeepti said...

ಒಂಭತ್ತು ವರ್ಷಗಳ ಹಿಂದೆ ಬರೆದ ಕವನ; ಇನ್ನೂ ಅದೇ ಭಾವ, ಅದೇ ಹಾಡು, ಅದೇ ರಾಗ!! ನನ್ನ-ನಿನ್ನಂಥ ಹಲವಾರು ಅಡಕೆಗಳನ್ನಿಲ್ಲಿ ಕಾಣಬಹುದಾಗಿದೆ.