ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday 23 May, 2011

ಪರಾಧೀನ-೦೧

ನವೆಂಬರ್ ತಿಂಗಳ ಮೊದಲ ವಾರ. ಸಮ್ಮೋಹನ ಚಿಕಿತ್ಸೆಗಾಗಿ ಬರುತ್ತಿದ್ದ ಕ್ಲಯಂಟ್ ಒಬ್ಬರ ಕರೆ ಬಂತು. ತಮ್ಮ ಸ್ನೇಹಿತರೊಬ್ಬರನ್ನು ಕರೆತರುತ್ತೇನೆ, ಭೇಟಿಗೆ ಸಮಯಾವಕಾಶ ಬೇಕೆಂದರು. ಅಂಥ ಬ್ಯುಸಿ ಏನೂ ಇರಲಿಲ್ಲ, ಸಮಯ ತಿಳಿಸಿದೆ. ನಿಗದಿಯಾದ ಸಮಯಕ್ಕೆ ಸರಿಯಾಗಿಯೇ ಇಬ್ಬರೂ ಬಂದರು. ಹೊಸಬರನ್ನು ಸಮಾಲೋಚನೆಯ ಕೊಠಡಿಗೆ ಬರಹೇಳಿದೆ. ಜೊತೆಗಾರ ವಾರಪತ್ರಿಕೆಯೊಂದನ್ನು ಎತ್ತಿಕೊಂಡು ಕೂತರು.

ಜಗನ್, ಸುಮಾರು ನಲ್ವತ್ತರ ವಯಸ್ಸಿನ ಹೊಟೇಲಿಯರ್. ಮುಂಬೈಯಲ್ಲಿ ವಾಸ. ಮೂರು ಜನ ಅಣ್ಣ-ತಮ್ಮಂದಿರಲ್ಲಿ ಕೊನೆಯವ. ಪದವೀಧರ. ಡ್ಯಾಷಿಂಗ್ ಡೇರ್ ಡೆವಿಲ್ ವ್ಯಕ್ತಿತ್ವ ತನ್ನದು ಎಂದರು. ಕಾಲೇಜಿನಲ್ಲಿ ಸ್ನೇಹಿತರೊಡನೆ ಪಂದ್ಯಕಟ್ಟಿ ಸಮುದ್ರದಲ್ಲಿ ಈಜುತ್ತಿದ್ದರಂತೆ. "ಈಗೆಲ್ಲವೂ ಬಂದಾಗಿದೆ" ಎಂದು ಮುಸಿಮುಸಿ ನಗುತ್ತಾರೆ. ಮದುವೆಯಾಗಿ ಐದು ವರ್ಷವಾಗಿದೆ. ತೃಪ್ತಿಯ ಸುಂದರ ಸಂಸಾರ. ಹೊರಗಿನಿಂದ ನೋಡುವವರಿಗೆ ಯಾವ ಕೊರತೆಯೂ ಇಲ್ಲದ ಜೀವನ.

ಸುಮಾರು ಮೂರು ವರ್ಷದ ಕೆಳಗೆ, ಜಗನ್ ಮಾಮೂಲಿನಂತೆ ಎರಡು ವಾರಗಳ ರಜೆಮಾಡಿ ಊರಿಗೆ ಬಂದಿದ್ದಾಗ ಬೆಳಗಿನ ಹೊತ್ತು ಬೀಚ್ ಬದಿಯಲ್ಲಿ ಜಾಗಿಂಗ್ ಹೋಗಿದ್ದವರು ಏನೋ ಕೆಂಪು-ಕೆಂಪು ಹರಡಿಕೊಂಡಿದ್ದ ಗೋಜಲನ್ನು ದಾಟಿ ಹೋಗಿದ್ದರು. ಅದೇ ಕ್ಷಣ ಯಾಕೋ ಎದೆ ಒಮ್ಮೆ ಸಣ್ಣಗೆ ನಡುಗಿತ್ತು. ತಿರುಗಿ ನೋಡಿ, ಕುಂಕುಮ-ಹೂಗಳ ರಾಶಿ ಅದೆಂದು ಗೊತ್ತಾಗಿ ಸಣ್ಣಗೆ ನಕ್ಕು, ಜಾಗಿಂಗ್ ಮುಗಿಸಿ ಮನೆಗೆ ಹಿಂದಿರುಗಿದ್ದರು. ಸ್ನಾನ ಮಾಡುತ್ತಿದ್ದಾಗ ಮತ್ತೊಮ್ಮೆ ಎದೆ ನಡುಕ. ಏನೋ ಅಳುಕು. ಅದ್ಯಾವ ಭಾವನೆಯೆಂದು ಅರಿವೇ ಇಲ್ಲದಿದ್ದ ಬಿಂದಾಸ್ ವ್ಯಕ್ತಿಗೆ ಇದೇನಾಗಿದೆ ಇವತ್ತು ಅಂದುಕೊಂಡೇ ನಿತ್ಯದ ಸ್ನಾನ, ಪ್ರಾರ್ಥನೆ, ಉಪಾಹಾರಗಳನ್ನು ಪೂರೈಸಿದರು. ಅಣ್ಣಂದಿರ ಹೊಟೆಲಿಗೆ ಭೇಟಿಕೊಡುತ್ತೇನೆಂದು ಇಬ್ಬರು ಅತ್ತಿಗೆಯರಿಗೂ ಹೇಳಿ ಮನೆಯಿಂದ ಹೊರಬಿದ್ದವರು ದಾರಿಯಲ್ಲಿ ಗೆಳೆಯನೊಬ್ಬನಿಗೆ ಕರೆ ಮಾಡಿ ಅವನನ್ನೂ ಕೂಡಿಕೊಂಡು ಹೊಟೇಲಿಗೆ ಹೋಗಿ, ಗೆಳೆಯನೊಂದಿಗೆ ತಿರುಗಾಡಿ, ರಾತ್ರೆಗೆ ಅಣ್ಣಂದಿರು ಮನೆ ಸೇರುವ ಹೊತ್ತಿಗೆ ತಾನೂ ಮನೆಗೆ ಬಂದಿಳಿದರು. ಬೆಳಗಿನ ಎದೆ ನಡುಕ ಪತ್ತೆಯಿಲ್ಲದೆ ಮರೆತೇಹೋಗಿತ್ತು.

ಮರುದಿನವೂ ಮತ್ತದೇ ಜಾಡಿನಲ್ಲಿ ಜಾಗಿಂಗ್. ಯಾವುದೇ ಏರುಪೇರಿಲ್ಲದೆ ಒಂದು ಸುತ್ತು ಹಾಕಿ ಬಂದವರೇ ಸ್ನಾನದ ಮನೆಯಲ್ಲಿ ಇದ್ದಕ್ಕಿದ್ದ ಹಾಗೆ ಗಾಬರಿಗೊಂಡರು. ಕಾರಣವೇ ಇಲ್ಲ. ಮನೆಯೆಲ್ಲ ಮಾಮೂಲಾಗೇ ಇದೆ. ಎಲ್ಲೂ ಏನೂ ಏರುಪೇರಾಗಿಲ್ಲ. ಜಗನ್ ಮಾತ್ರ ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಹೋಗಲೂ ಗಾಬರಿಯಾಗುತ್ತಿದ್ದರು, ಭಯಪಡುತ್ತಿದ್ದರು. ಅದೇ ರಾತ್ರೆ ನಿದ್ರೆಯೂ ಬರಲಿಲ್ಲ. ಮರುದಿನದಿಂದ ಜಾಗಿಂಗ್ ಇಲ್ಲ. ಗೆಳೆಯರ ಸಹವಾಸ ಬೇಕಾಗಲಿಲ್ಲ. ನಿದ್ರೆ, ಹಸಿವಿನ ಪರಿವೆಯಿಲ್ಲ. ಮನಸ್ಸಿನ ನೆಮ್ಮದಿ ಕಳೆದುಕೊಂಡರು. ತೌರಿಂದ ಮಡದಿಯನ್ನು ಕರೆಸಲಾಯಿತು. ಮೊತ್ತಮೊದಲಾಗಿ ಎಲ್ಲರ ತಲೆಗೆ ಹೊಳೆದದ್ದು "ಸೋಂಕು ಆಗಿರಬೇಕು" ಎನ್ನುವ ವಿಚಾರ. ಅದಕ್ಕೆ ಸರಿಯಾಗಿ ದೇವಸ್ಥಾನಗಳಿಗೆ ಹರಕೆ ಹೇಳಿಕೊಂಡಾಯ್ತು. ಪ್ರತಿಷ್ಠಿತ ಜೋಯಿಸರಲ್ಲಿ ವಿಚಾರಿಸಲು ಹೋಗುವ ಬಗ್ಗೆ ಸಂಸಾರದಲ್ಲಿ ತೀರ್ಮಾನವಾಯ್ತು.

ಜೋಯಿಸರು, ಯಥಾಪ್ರಕಾರ ಅವರ ಶಂಖವನ್ನೇ ಊದಿದರು. ಅದವರ ವೃತ್ತಿ ಧರ್ಮ. ಅವರು ತಿಳಿಸಿದಂಥ ಎಲ್ಲ ಪರಿಹಾರ ಕಾರ್ಯಗಳನ್ನು ಮಾಡಿದ್ದಾಯ್ತು. ಹರಕೆ ಹೇಳಿಕೊಂಡಿದ್ದ ಎಲ್ಲ ದೇವಸ್ಥಾನಗಳಿಗೂ ಹೋಗಿ ಬಂದಾಯ್ತು. ಇಷ್ಟಾಗುವಾಗ ರಜೆ ಮುಗಿದೇ ಹೋಯ್ತು. ದಂಪತಿಗಳು ಮುಂಬೈಗೆ ಹೊರಟುನಿಂತರು, ಬಟ್ಟೆಬರೆಗಳ ಜೊತೆಗೆ ಒಂದು ದೊಡ್ಡ ಪ್ರಸಾದಗಳ ಕಟ್ಟಿನೊಂದಿಗೆ. ಎಲ್ಲ ಸರಿಯಾಯ್ತು ಎನ್ನುವ ನೆಮ್ಮದಿಯೊಂದಿಗೆ ತನ್ನ ಗೂಡು ಸೇರಿತು ಜೋಡಿ.