ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Sunday, 5 December, 2010

ಸುಮ್ಮನೆ ನೋಡಿದಾಗ...೦೬

ಊಟ ಮುಗಿಸಿ ಕೂತ ಗೆಳತಿಯರ ನಡುವೆ ಅಗಾಧ ಮೌನ. ನನ್ನ ಕೆನ್ನೆಯ ರಂಗಿನಿಂದಲೇ ಇಂದು ಜಾಜಿಮೊಗ್ಗುಗಳು ಇನ್ನಷ್ಟು ಕೆಂಪಾಗಿದ್ದವು. ನೇಹಾ ನನ್ನತ್ತ ಆಗಾಗ ನೋಟ ಹರಿಸಿ ಮತ್ತೆ ಬಳ್ಳಿಯ ನಡುವೆ ಕಾಣುವ ಆಕಾಶ ದಿಟ್ಟಿಸುತ್ತಿದ್ದಳು. ಎಷ್ಟನೆಯ ಬಾರಿಗೋ ಅವಳು ಆಕಾಶ ನೋಡಿದಾಗ ನನಗೆ ನಗುವೇ ಬಂತು, ‘ಏನುಂಟಾ ಅಲ್ಲಿ? ಯಾಕೆ ನೋಡ್ತಿದ್ದೀ?’

‘ಮಳೆ ಬರ್ತದಾ ಅಂತ ಲೆಕ್ಕ ಹಾಕ್ತಿದ್ದೇನೆ’
‘ಯಾಕೆ?’
‘ನಿನ್ನೆದೆಯಲ್ಲಿ ಮೋಡ ಕಟ್ಟಿಕೊಳ್ತಾ ಉಂಟಲ್ಲ. ಅಲ್ಲಿಂದ ಅಥವಾ ಇಲ್ಲಿಂದ ಸುರಿದೀತು. ಎಲ್ಲಿಂದ ಮೊದಲು ಬಂದೀತೂಂತ ನೋಡ್ತಿದ್ದೆ. ಸರಿಯಾಗಿ ಒಂದು ಜಡಿಮಳೆ ಹೊಡೆದ್ರೆ ಒಮ್ಮೆ ತಂಪಾದೀತಲ್ಲ ಅಂತ ಕಾಯ್ತಿದ್ದೇನೆ. ನೀ ಸುರಿಸ್ತೀಯಾ? ಆಕಾಶರಾಯನನ್ನು ಕೇಳ್ಬೇಕಾ?’
‘ಈಗಲೇ ನಿಂಗೆ ತಾಂಪಾಗುವ ಯೋಚನೆಯಾ? ಈಗಿನ್ನೂ ಜನವರಿ’
‘ಜನವರಿಯಲ್ಲೇ ಇಷ್ಟು ಉರೀಲಿಕ್ಕೆ ಶುರುವಾದ್ರೆ ಮೇ ತಿಂಗಳ ಗತಿಯೇನು ಅಂತ!’
‘ಈಗೆಲ್ಲಿಯಾ ಉರಿ? ಎಂತ ಮಾತಾಡ್ತಿ ನೀನು?’
‘ನೀನಂತೂ ಏನೂ ಮಾತಾಡ್ತಾ ಇಲ್ಲ. ನಾನಾದ್ರೂ ಏನಾದ್ರೂ ಹೇಳ್ತೇನೆ; ಕೇಳು ಬೇಕಾದ್ರೆ. ಇಲ್ಲಾಂದ್ರೆ ನಿನ್ನೊಳಗೆ ಮುಳುಗು, ನಂಗೇನು?’
‘ಮುಳುಗಿದ್ದಲ್ಲ ಮಾರಾಯ್ತಿ...’
‘ಮತ್ತೆಂತ? ಕಳೆದುಹೋಗಿದ್ಯಾ?’
‘ಹ್ಮ್!’
‘ನನ್ನ ಗೆಳತಿಯನ್ನು ಈ ರೀತಿ ಹಾರಿಸಿಕೊಂಡು ಹೋದವರು ಯಾರೋ? ಹರ್ಷಣ್ಣ ಅಂತೂ ಅಲ್ಲ. ಮತ್ತೆ?...’
‘ಮತ್ತೆ ಎಂತದೂ ಇಲ್ಲ! ಯಾರೂ ಇಲ್ಲ. ನಾನು ಅದೇ ಕಥೆಯ ಗುಂಗಿನಲ್ಲೇ ಇದ್ದೇನೆ, ಅಷ್ಟೇ...’
‘ಹ್ಮ್, ಅದು ಗೊತ್ತಾಗ್ತದೆ. ಕಥೆಯ ಗುಂಗು ತಲೆಯಿಂದ ಹೃದಯಕ್ಕೆ ಇಳಿದಿದೆ ಅಂತ...’
‘ಎಲ್ಲಿಗೂ ಇಳೀಲಿಲ್ಲಪ್ಪ. ಸುಮ್ನೇ ಏನೇನೋ ಹೇಳ್ಬೇಡ...’
‘ನೀನು ಏನೇನೋ ಕತೆ ನನ್ನ ಹತ್ರ ಹೆಣೀಬೇಡ. ನಿನ್ನನ್ನು ಇವತ್ತಲ್ಲ ನೋಡುದು ನಾನು. ಒಂದನೇ ಕ್ಲಾಸಿಂದಲೂ ಒಟ್ಟಿಗೇ ಓದಿದವ್ರು ನಾವಿಬ್ರೇ ಅನ್ನುದನ್ನು ಮರ್ತಿದ್ಯಾ ಹೇಗೆ?’
‘ಅಮ್ಮಾ, ಮಹಾತಾಯಿ! ನಾನ್ಯಾವುದನ್ನೂ ಮರೀಲಿಲ್ಲಮ್ಮ...’
ಅಷ್ಟರಲ್ಲೇ ನಳಿನಿ ಅಂಟಿ ನಮ್ಮ ಕಡೆಗೇ ಬಂದ್ರು. ನಮ್ಮ ಮಾತಿನ ಮಂಟಪದಲ್ಲಿ ಮುಗುಳುಗಳು ಅರಳಿದವು.

ಆದರೆ, ಅವರ ಮುಖ ಗಂಭೀರವಾಗಿತ್ತು. ಬಂದವರೇ, ‘ನೇಹಾ, ನಮ್ಮೆಲ್ರಿಗೂ ಕಾಫಿ ಮಾಡಿ ತಾ, ಹೋಗು.’ ಎಂದು ನೇಹಾಳನ್ನು ಕಳಿಸಿ ಅವಳ ಸ್ಥಾನದಲ್ಲಿ ನನ್ನ ಬದಿಗೆ ತಾನು ಕೂತರು.
‘ಶಿಶಿರಾ, ನಿನಗೊಂದು ಮುಖ್ಯ ವಿಚಾರ ತಿಳಿಸಬೇಕಿತ್ತು. ತಪ್ಪು ತಿಳೀಬೇಡ ನನ್ನನ್ನು. ಈಗ, ನೀನು ಬರೆದ ಕಥೆ ನೇಹಾನ ಪುಸ್ತಕಗಳ ಒಟ್ಟಿಗೆ ಇದ್ದದ್ದು ನನ್ನ ಕಣ್ಣಿಗೆ ಬಿತ್ತು. ಓದಿದೆ. ತುಂಬಾ ಚೆಂದ ಬರ್ದಿದ್ದೀ. ವಯಸ್ಸಿಗೆ ಸಹಜವಾದ ಭಾವನೆ, ಬರವಣಿಗೆಯ ಹಿಡಿತ, ಎರಡೂ ಚೆನ್ನಾಗುಂಟು. ಆದರೆ, ಇದನ್ನು ನಿನ್ನಮ್ಮ ನೋಡದ ಹಾಗೆ ಜಾಗ್ರತೆ ಮಾಡಮ್ಮ. ನಿನಗಾಗಿ ಈ ಮಾತನ್ನು ಹೇಳ್ತಿದ್ದೇನೆ.’
‘ಥ್ಯಾಂಕ್ಸ್ ಅಂಟಿ, ಕಥೆಯನ್ನು ಮೆಚ್ಚಿಕೊಂಡದ್ದಕ್ಕೆ. ಆದ್ರೆ ಅದು ನನ್ನ ಕಥೆ ಅಂತ ಹೇಗೆ ಗೊತ್ತಾಯ್ತು? ನೇಹಾದ್ದು ಅಂತ ಅನ್ನಿಸ್ಲಿಲ್ವಾ?’
‘ನೇಹಾ ಕಥೆ ಎಲ್ಲಿ ಬರೀತಾಳೆ? ಅದೆಲ್ಲ ಏನಿದ್ರೂ ನಿಂದೇ. ನಿನ್ನನ್ನು ನಾನು ಇವತ್ತು ನೋಡುದಾ?’ (ಇದೇ ಮಾತನ್ನು ಅವಳೂ ಹೇಳಿದ್ದಲ್ವಾ? ಏನಾಗಿದೆ? ಅಂದುಕೊಂಡೆ.)
ಆಂಟಿಯ ಮುಖ ನೋಡಿ ಗಂಭೀರವಾಗಿ ಕೇಳಿದೆ, ‘ಯಾಕೆ ಆಂಟಿ ಅಮ್ಮನಿಗೆ ಗೊತ್ತಾಗಬಾರ್ದು?’
ದೊಡ್ಡದಾಗಿ ಉಸಿರು ಬಿಟ್ಟು ಒಮ್ಮೆ ಆಕಾಶ ನೋಡಿ, ಮತ್ತೆ ಮೆಲ್ಲಗೆ ಆಂಟಿ ಹೇಳಿದ್ರು, ‘ಅದೊಂದು ದೊಡ್ಡ ಕಥೆ. ನಮ್ಮ ಬಾಲ್ಯದ್ದು. ಇನ್ನೊಮ್ಮೆ ಯಾವತ್ತಾದ್ರೂ ಹೇಳ್ತೇನೆ, ಬಿಡು...’
‘ಇಲ್ಲ ಅಂಟಿ, ಇವತ್ತೇ ಹೇಳಿ, ಪ್ಲೀಸ್. ಇವತ್ತು ನಂಗೇನೂ ಕಾಲೇಜ್ ಕೆಲ್ಸ ಇಲ್ಲ. ಅಮ್ಮ ಸಂಜೇವರೆಗೆ ಮನೇಗೆ ಬರುದಿಲ್ಲ ಅಂತ ಬೆಳಗ್ಗೇನೇ ಹೇಳಿ ಹೋಗಿದ್ದಾರೆ. ಮಹಿಳಾ ಸಮಾಜದ ಪಿಕ್‌ನಿಕ್ ಅಂತೆ. ಅಂದ್ರೆ ಇನ್ನು ಬರುದು ಆರು ಆರೂವರೆಯ ಮೇಲೆಯೇ. ನಂಗೆ ಪುರ್ಸೊತ್ತು ಉಂಟು. ಹೇಳಿ ಇವತ್ತೇ..’
ಆಗಲೇ ನೇಹಾ ಮೂರು ಲೋಟ ಕಾಫಿ ತಗೆದುಕೊಂಡು ಬಂದಳು. ಅವಳು ಇರಬೇಕೋ ಬೇಡವೋ ಅನ್ನುವ ಹಾಗೆ ಅವಳನ್ನೇ ಎರಡು ಕ್ಷಣ ದಿಟ್ಟಿಸಿದ ಆಂಟಿ ಪುನಃ ನಮ್ಮಿಬ್ಬರನ್ನೂ ನೋಡಿ ನೇಹಾಳನ್ನು ಅವರ ಇನ್ನೊಂದು ಬದಿಗೆ ಕುಳಿತುಕೊಳ್ಳಲು ಹೇಳಿದರು. ಕಾಫಿ ಹೀರುತ್ತಾ ಯೋಚನೆಯೊಳಗೆ ಮುಳುಗಿಹೋದರು. ಲೋಟದಿಂದೇಳುತ್ತಿದ್ದ ಹೊಗೆ ಮರೆಯಾದಾಗ ಅವರ ಒಳಗಿಂದಲೇ ಹೊಗೆ ಬರುತ್ತಿರುವ ರೀತಿಯಲ್ಲಿ ನಿಟ್ಟುಸಿರು ಹೊರಬಿತ್ತು.
‘ಶಿಶಿರಾ. ಈ ಕಥೆ ನಿಮಗಿಬ್ಬರಿಗೂ ನೋವು ಕೊಡಬಹುದು. ಮೂವತ್ತು ವರ್ಷ ಹಳೇ ಕಥೆ ಇದು. ಆದರೂ ಇದನ್ನು ತಿಳಿಯುವ ಅರ್ಹತೆ ನಿಮಗಿಬ್ಬರಿಗೂ ಉಂಟೂಂತ ನಾನಿದನ್ನು ಹೇಳ್ತೇನೆ. ನಿಮ್ಮನ್ನು ನೀವು ಸಂಭಾಳಿಸಿಕೊಳ್ಳುವ ಶಕ್ತಿ ನಿಮಗುಂಟು. ನಿಮ್ಮೊಟ್ಟಿಗೆ ನಾನಿದ್ದೇನೆ. ಕಥೆ ಕೇಳಿ ನಿನ್ನ ಅಮ್ಮನ ಮೇಲೆ, ನನ್ನ ಮೇಲೆ ಕೋಪಿಸಿಕೊಳ್ಳುವ ಹಕ್ಕೂ ನಿಮಗುಂಟು. ಕೋಪ ಬಂದ್ರೆ ಅದನ್ನು ಅದುಮಿಟ್ಟುಕೊಳ್ಳದೆ, ಹೇಗೆ ಹೊರಗೆ ಹಾಕ್ತೀರಿ ಅನ್ನುದು ಮಾತ್ರ ಬುದ್ಧಿವಂತಿಕೆಯ ವಿಷಯ, ನೆನಪಿರ್ಲಿ. ಆಯ್ತಾ...?’

ಆಂಟಿಯನ್ನು ದಾಟಿ ನಮ್ಮಿಬ್ಬರ ಗೊಂದಲಮಯ ಕಣ್ಣುಗಳು ಸಂಧಿಸಿದವು.