ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Sunday, 15 February 2009

ಜೋಡಿ ಗೀತೆಗಳಲ್ಲಿನ್ನೊಂದು- ಉಕ್ಕಿದ ಒಲವಿಗೆ...


ಅಕ್ಕರೆ ಹರಿದಾಗ ಉಕ್ಕಿದ ಒಲವೀಗೆ
ಸಕ್ಕರೆ ಹಾಲು ಸುರಿದ್ಹಾಂಗೆ- ನನರಾಣಿ-
ಕಕ್ಕುಲತೆಯಿಂದ ನನ ಬಳಸೆ

ಬಾರೆಲೆ ಸಿಂಗಾರಿ ಸಿಟ್ಟು ಸೆಡವನು ಬಿಟ್ಟು
ಕೂರಿಲ್ಲಿ ನೀನೆನ್ನ ಬಗಲಲ್ಲಿ- ನನರಾಣಿ-
ತೋರೆಲೆ ಪ್ರೀತಿ ಮೊಗದಲ್ಲಿ

ಒಮ್ಮೊಮ್ಮೆ ಬಡವಾಗಿ ಚಿಂತೇಲಿ ಕರಗೋಳೆ
ಬಿಮ್ಮನೆ ಮುನಿಸ ಬೀರೋಳೆ- ನನರಾಣಿ-
ಹೂಮನಸಲೊಮ್ಮೆ ನಗಬಾರೆ

ಮುಂಗಾರು ಮಳೆಯಾಗೆ ತೊಪ್ಪನೆ ತೋಯ್ದೋಳೆ
ಹಿಂಗಾssಡಿ ಹಂಗಾssಡಿ ಬಳುಕೋಳೆ- ನನರಾಣಿ-
ಜಂಗಮಳ್ಹಾಂಗೆ ತಿರುಗೋಳೆ

ತಬ್ಬುವೆನೆಂದರೆ ಮಿಸುಕಾಡಿ ಕೊಸರಾಡಿ
ಅಬ್ಬಿಗೆ ಹಾರಿ ಜಾರೋಳೆ- ನನರಾಣಿ-
ಮಬ್ಬಿನ ಸೆರಗ ಬೀಸೋಳೆ

ಕಿಲಕಿಲ ನಗುತಲಿ ಮನಸನ್ನ ಸೆಳೆಯೋಳೆ
ಗಲಗಲ ಗೆಜ್ಜೆ ದನಿಯೋಳೆ- ನನರಾಣಿ-
ಬಲವಂದು ಬಳಿಯೆ ನಿಲಬಾರೆ

ಥಟ್ಟಂತ ನಲಿನಲಿದು ಹರುಷವ ಹರಿಸೋಳೆ
ಪಟ್ಟಂತ ತಿರುತಿರುಗಿ ಮರೆಯಾಗಿ- ನನರಾಣಿ
ಕಟ್ಟ್ಯಾssಗ ಮೈದುಂಬಿ ಮೆರೆಯೋಳೆ

ಹಿಂದಿಲ್ಲ ಮುಂದಿಲ್ಲ ಒಬ್ಬಂಟಿ ನಾನಿಂದು
ಬಂದಿಲ್ಲಿ ಜೋಡಿ ನೀನಾಗೆ- ನನರಾಣಿ-
ನಿಂದೆನ್ನ ಬಾಳ ಉಸಿರಾಗೆ

ಹಗಲೇನs ಇರುಳೇನs ಪ್ರೇಮಕ್ಕೆ ಹಂಗೇನs
ಸೊಗಲಾಡಿ ಸರಿದು ಬಾರಿಲ್ಲೆ- ನನರಾಣಿ-
ಜಗದಾಗೆ ನಿನ್ಹಾಂಗೆ ಯಾರಿಲ್ಲೆ

ಜೀವಕ್ಕೆ ಜೀವಾಗಿ ಹಸಿರಿಗೆ ಹಸೆಯಾಗಿ
ಶಿವನೆತ್ತಿಯಿಂದ ಹರಿದೋಳೆ- ನನ'ಗಂಗಿ'-
'ಪರ್ವತ'ನ ಪ್ರೀತಿ ಒಪ್ಪಿಸಿಕೋ

(೧೩-ಸೆಪ್ಟೆಂಬರ್-೨೦೦೧)

6 comments:

sunaath said...

ಗಂಗಾಲಹರಿ ಅದ್ಭುತವಾಗಿದೆ!

ಸುಪ್ತದೀಪ್ತಿ suptadeepti said...

ಧನ್ಯವಾದಗಳು, ಕಾಕಾ.

Shiv said...

ಸುಪ್ತದೀಪ್ತಿ,

ಅದ್ಭುತವಾಗಿದೆ ಹಾಡು !
ಬಹುಷಃ ಗಂಗಿ,ಪರ್ವತ ಮತ್ತು ಅಬ್ಬಿ ಇಲ್ಲದಿದ್ದರೆ ಇದು ಒಂದು ನಲ್ಲ-ನಲ್ಲೆಯರ ಹಾಡಾಗುತ್ತಿತ್ತೆನೋ.

ಸುಪ್ತದೀಪ್ತಿ suptadeepti said...

ಧನ್ಯವಾದ ಶಿವ್. ಮರುಸ್ವಾಗತ ನಿಮಗೆ.

ಗಂಗಿ, ಪರ್ವತ- ನಲ್ಲ-ನಲ್ಲೆಯರೇ; ಎರಡು ಕಾಲು, ಎರಡು ಕೈ, ದೇಹ, ಮುಖದಲ್ಲಿ ಜೋಡು ಕಣ್ಣು-ಕಿವಿ ಜೊತೆಗೆ ಮೂಗು ಬಾಯಿ ಇರುವ ರೂಪಿನವರಲ್ಲ, ಅಷ್ಟೇ. ಅವರ ಒಲುಮೆಯ ಹಾಡಿಗೆ ಒಲಿದೇ ಈ ಜೀವಲೋಕ ನಲಿಯುತ್ತಿದೆ.
ಒಪ್ಪುತ್ತೀರ?

Shiv said...

ಸುಪ್ತದೀಪ್ತಿ,

ಸಂಪೂರ್ಣವಾಗಿ ಒಪ್ಪುತ್ತೇನೆ.
ಅಂದಾಗೆ ಈ ಹಾಡುಗಳನ್ನು ತಾವು ೨೦೦೧ ಬರೆದಿದ್ದು. ಅದಕ್ಕೆ ಸಂಗೀತ ಹಾಕಿಸಿ ಬಿಡುಗಡೆ ಮಾಡಿದ್ದು ಯಾವಾಗ?

ಸುಪ್ತದೀಪ್ತಿ suptadeepti said...

"ಹೇಳು ಮನಸೇ" ಧ್ವನಿಮುದ್ರಿಕೆಯು ೨೦೦೩-ರ ಡಿಸೆಂಬರಿನಲ್ಲಿ, ನನ್ನ ಎರಡನೇ ಕವನ ಸಂಕಲನ "ಭಾವಗಾನ"ದ ಜೊತೆಗೆ, ಉಡುಪಿಯಲ್ಲಿ ಬಿಡುಗಡೆಯಾಯ್ತು.