ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday, 2 May, 2011

ಸುಮ್ಮನೆ ನೋಡಿದಾಗ...೨೪

‘ನೀವು ನನ್ನನ್ನು ಇಷ್ಟ ಪಟ್ಟಿದ್ದೀರಿ ಅಂತ ನೇಹಾ ಹೇಳಿದ್ದಾಳೆ ಅಂತಂದ ಹರ್ಷ. ನಿಜವಾ?’
‘...’
‘ನಿಮ್ಮನ್ನು ನೋಡಿದ ಮೊದಲ ಸಲವೇ ನಾನು ಮೆಚ್ಚಿಕೊಂಡಿದ್ದೆ ನಿಮ್ಮನ್ನು. ನನ್ನ ಕಸಿನ್ ಶರತ್ ನಿಮ್ಮ ಕ್ಲಾಸ್‍ಮೇಟ್ ಅಲ್ವಾ? ಶರತ್ ಹೇಳ್ತಿದ್ದ ನೀವು ಎಂ.ಎಸ್ಸಿ. ಮಾಡುವ ಯೋಚನೆಯಲ್ಲಿದ್ದೀರಿ ಅಂತ. ಹೌದಾ?’
‘ಹ್ಮ್! ಜುಲೈ ಹದ್ನೆಂಟು ಕ್ಯಾಂಪಸ್ಸಿಗೆ ಹೋಗ್ತಿದ್ದೇನೆ.’ ಅಂತೂ ಒಂದು ಅರ್ಥಪೂರ್ಣ ವಾಕ್ಯ ಮಾತಾಡಿದೆ!
‘ಯಾವ ವಿಷಯದಲ್ಲಿ ಎಂ.ಎಸ್ಸಿ?’
‘ಪ್ರಾಣಿಶಾಸ್ತ್ರ ವಿಭಾಗದಲ್ಲಿ. ಕೆಮಿಸ್ಟ್ರಿ ನಂಗಿಷ್ಟ ಇಲ್ಲ...’ ಬೇಕಂತಲೇ ಎರಡನೆಯ ಮಾತು ಸೇರಿಸಿದ್ದೆ.
‘ನಿಮ್ ಇಷ್ಟ ನಿಮ್ಮದೇ. ಅದ್ರಲ್ಲೇನು ತೊಂದರೆ?’
‘...’

ಸಣ್ಣದೊಂದು ಮಿಂಚು ಸುಳಿದು ಗುಡುಗು ಮೊಳಗಿ ಮಳೆಹನಿ ಇಳಿಯತೊಡಗಿದ್ದೇ ನೆಪವಾಗಿ ಆಕಾಶ ನೋಡಿದೆ.
‘ಮನೆಒಳಗೆ ಹೋಗುವ, ಬನ್ನಿ...’ ತಾನೇ ಮುಂದಾಗಿ ಹೊರಟವನ ಹಿಂದೆ ಎದ್ದು ನಿಂತಾಗ ಅಂಗಳದಲ್ಲಿ ನಿಂತಿದ್ದ ನೀರಿನಲ್ಲಿ ಮತ್ತೊಂದು ಸುಳಿಮಿಂಚು ಪ್ರತಿಫಲಿಸಿತು. ಗುಡುಗಿನ ಸ್ವರದೊಡನೆಯೇ ಗುಡುಗುಡು ಓಡಿ ನೇಹಾಳ ಕೋಣೆಯನ್ನು ಸೇರಿಕೊಂಡು ಬಾಗಿಲು ಮುಂದೆ ಮಾಡಿ ಅವಳೆರಡೂ ಕೆನ್ನೆಗಳನ್ನು ಹಿಂಡುತ್ತಾ ಕೇಳಿದೆ, ‘ಯಾಕೆ ಇದೆಲ್ಲಾ ಕಿತಾಪತಿ ಮಾಡಿದ್ದು? ಯಾಕೆ ಹರ್ಷಣ್ಣನಿಗೆ ಹೇಳಿದ್ದು? ಮತ್ತಿನ್ಯಾರಿಗೆಲ್ಲ ಗೊತ್ತುಂಟು ಈ ವಿಷ್ಯ? ಯಾಕೆ?’
‘ಹೇಳದೇ ಇದ್ದಿದ್ರೆ ನಿನ್ನ ಪ್ರೀತಿ ನಿನ್ನ ಹೃದಯದಲ್ಲೇ ಹುದುಗಿ ಒಣಗಿ ಹೋಗ್ತಿತ್ತೇನೋ... ಅದಕ್ಕೇ ಹರ್ಷನಿಗೆ ಹೇಳಿದ್ದು. ಅವ್ರಿಗಂತೂ ಖಷಿಯೋ ಖುಷಿ. ‘ತುಂಬಾ ಒಳ್ಳೇ ಹುಡುಗ ವಸಂತ್. ಅವ್ನನ್ನು ಮೆಚ್ಚಿದ್ದಾಳಾ ಶಿಶಿರಾ? ನನ್ ತಂಗಿ ಆಯ್ಕೆ ಪರ್ಫ಼ೆಕ್ಟ್, ನನ್ನ ಆಯ್ಕೆ ಹಾಗೇ...’ ಅಂತೆಲ್ಲಾ ಹಾರಾಡಿದ್ದೇ ಹಾರಾಡಿದ್ದು. ನಿನ್ನೆ ಸಂಜೆ ಅವ್ರು ಬಂದಾಗ ಹೇಳಿದೆ. ಇವತ್ತು ಈ ಕತೆ. ಇದೆಲ್ಲ ನಂಗೇನೂ ಗೊತ್ತಿರ್ಲಿಲ್ಲ ಮಾರಾಯ್ತಿ. ಎಲ್ಲ ಅವ್ರದ್ದೇ ಕಿತಾಪತಿ. ಅವ್ರನ್ನೆಲ್ಲ ಇಲ್ಲಿಗೆ ನಮ್ಮನೆಗೆ ಅಂತ ಕರ್ಕೊಂಬಂದು, ಮೆಲ್ಲ ಪಪ್ಪನತ್ರ ಹೇಳಿ, ನನ್ನ ಮೂಲಕ ನಿಂಗೆ ಫ಼ೋನ್ ಮಾಡ್ಸಿದ್ದಾರೆ. ಆಮೇಲಿದ್ದು ನಿಂಗೇ ಗೊತ್ತುಂಟಲ್ಲಾ. ನನ್ನನ್ನು ಆಟ ಆಡ್ಸಿದ್ರು ಪಪ್ಪ, ಹರ್ಷ ಸೇರಿ. ಪ್ಲೀಸ್ ಮಾರಾಯ್ತಿ, ನಂಬು ನನ್ನನ್ನು...’ ನನ್ನ ಪ್ರಶ್ನಾರ್ಥಕ ನೋಟಕ್ಕೆ ಉತ್ತರ ಕೊಡುತ್ತಾ ನಿಂತವಳ ಕೆನ್ನೆಗಳೂ ಕೆಂಪಾಗಿದ್ದವು.

ನಮ್ಮಿಬ್ಬರ ಮೌನಹರಟೆಯ ನಡುವೆ ನಡುಮನೆಯಿಂದ ಅಂಕಲ್ ಅಮ್ಮನಿಗೆ ಫೋನ್ ಮಾಡುತ್ತಿದ್ದದ್ದು ಕೇಳುತ್ತಿತ್ತು. ಮಧ್ಯಾಹ್ನದೂಟಕ್ಕೆ ಇಲ್ಲೇ ಬರುವಂತೆ ಹೇಳುತ್ತಿದ್ದರು ಅಂಕಲ್. ‘ಏನೋ ವಿಶೇಷ ಉಂಟು. ಬನ್ನಿ, ಗೊತ್ತಾಗ್ತದೆ’ ಅನ್ನುತ್ತಿದ್ದರು. ಅಲ್ಲಿಂದೇನು ಉತ್ತರ ಬಂತೋ ಗೊತ್ತಿಲ್ಲ.

ಕೋಣೆಯ ಬಾಗಿಲ ಮೇಲೆ ಎಂದಿನ ಹಾಗೆ ಬೆರಳುಗಳ ನರ್ತನ ಶುರುವಾದಾಗ ಬಾಗಿಲು ತೆರೆದೆವು. ಒಳಗೆ ಬಂದ ಅಂಕಲ್ ನಮ್ಮಿಬ್ಬರನ್ನೂ ತಬ್ಬಿಕೊಂಡು ಸುಮ್ಮನೇ ನಿಂತರು. ಅವರ ಎರಡೂ ಭುಜಗಳಲ್ಲಿ ಒಂದೊಂದು ಹೂಗಳು; ಆಗಷ್ಟೇ ಸುರಿದ ಮಳೆಯಲ್ಲಿ ಮಿಂದಂತೆ ಪುಳಕಿತ ಹೂಗಳು. ಮತ್ತೊಂದು ಮಿಂಚು ಬೆಳಗಿತೆಂದು ತಲೆಯೆತ್ತಿದಾಗ ಕಂಡದ್ದು ಕ್ಯಾಮೆರಾ ಹಿಂದೆ ನಗುತ್ತಿದ್ದ ಹರ್ಷಣ್ಣ. ಅವನ ಹಿಂದೆ ಕಾತರದ ಕಣ್ಣುಗಳ ವಸಂತ್. ಅವನಿಗಿನ್ನೂ ನನ್ನ ಉತ್ತರ ಕೊಟ್ಟಿರಲಿಲ್ಲ. ಕೊಡಬೇಕೇ? ಯಾಕೆ? ನಾಲಿಗೆ ಚಾಚಿ ಹರ್ಷಣ್ಣನನ್ನು ಅಣಕಿಸಿ ಅಂಕಲ್ ತೋಳಿಗೆ ಕೆನ್ನೆಯೊತ್ತಿದೆ. ಅಡುಗೆಮನೆಯಿಂದ ನಳಿನಿ ಆಂಟಿ ತುಪ್ಪದಲ್ಲಿ ದ್ರಾಕ್ಷಿ ಗೇರುಬೀಜ ಹುರಿಯುತ್ತಿದ್ದ ಘಮ ಮನೆಯೆಲ್ಲ ತುಂಬಿಕೊಂಡಿತು, ಮನವನ್ನೂ.

***

{ಸಹೃದಯ ಓದುಗರೇ, ನಿಮ್ಮೆಲ್ಲರ ಆಶೀರ್ವಾದ ಕೋರುತ್ತಾ, ನೇಹಾ-ಹರ್ಷ, ಶಿಶಿರಾ-ವಸಂತ್ ನಿಮ್ಮನ್ನು ಬೀಳ್ಕೊಡುತ್ತಾರೆ. ಹರಸಿರಿ.}

2 comments:

sunaath said...

ಮನಸ್ಸಿನ ರಾಗವನ್ನು ಪ್ರಕೃತಿ ಪ್ರತಿಫಲಿಸುತ್ತದೆ. ಆ ಪ್ರಕೃತಿವರ್ಣನೆಯನ್ನು ಓದುವದೇ ಒಂದು ಸಂತೋಷ. ಅನಂತಮೂರ್ತಿಯವರ ‘ಸಂಸ್ಕಾರ’ ಕಾದಂಬರಿಯಲ್ಲಿ ಇಂತಹದೊಂದು ಸನ್ನಿವೇಶವಿದೆ. ಪ್ರಾಣೇಶಾಚಾರ್ಯ ಹಾಗು ಚಂದ್ರಿಯ ಮಿಲನದ ಸನ್ನಿವೇಶದಲ್ಲಿ ಬರುವ ಪ್ರಕೃತಿವರ್ಣನೆ, ಕನ್ನಡ ಸಾಹಿತ್ಯದಲ್ಲಿಯೇ ಅಪ್ರತಿಮವಾದದ್ದು. ಇದನ್ನು ಚಿತ್ರೀಕರಿಸುವಾಗ, ‘ಸಂಸ್ಕಾರ’ ನಿರ್ದೇಶಕರು ಬೇರೊಂದು ತಂತ್ರವನ್ನು ಅನುಸರಿಸಿದ್ದಾರೆ. ಮಿಲನದ ಸಮಯದಲ್ಲಿ ದೂರದಿಂದ ಬಯಲಾಟದ ಅರ್ಭಟವನ್ನು ಕೇಳಿಸಿದ್ದಾರೆ. ನಿಮ್ಮ ಕತೆ ಹಾಗು ಕಾದಂಬರಿಗಳಲ್ಲಿ ಸುಂದರ ಪ್ರಕೃತಿವರ್ಣನೆ ಸಮಂಜಸವಾಗಿ ನಿರೂಪಿತವಗಿರುತ್ತದೆ. Apart from romance, ಈ ಸಾಹಿತ್ಯಕ ಶೈಲಿಯೇ ಓದುಗರನ್ನು ಮರಳುಗೊಳಿಸುವಂತಹದು. ನಿಮ್ಮ ಕತೆಗೆ ‘ಅಜ್ಜಿ ಕತೆ’ ಎಂದು ಕರೆದವರು ಈ ಶೈಲಿಯನ್ನು ಸವಿದಿಲ್ಲ. ನನಗಂತೂ ಈ ಶೈಲಿಯೇ ಮಧುರರುಚಿಯನ್ನು ಕೊಡುತ್ತಿದೆ.

ಸುಪ್ತದೀಪ್ತಿ suptadeepti said...

ಕಾಕಾ, ನಿಮ್ಮ ಪ್ರತಿಕ್ರಿಯೆಗೆ ಮತ್ತೊಮ್ಮೆ ವಿವರಣೆ ಕೊಟ್ಟದ್ದು ನನಗೆ ಸಮಾಧಾನ ತಂದಿದೆ. ಕಥಾನಕ ಓದುಗರ ರುಚಿಗೆ ಅವಲಂಬಿಸಿದ್ದು, ನಿಜ. ಆದರೆ ಎಲ್ಲರ ರುಚಿಯೂ ಒಂದೇ ಥರ ಇರದಲ್ಲ. ನನ್ನೊಬ್ಬ ಗೆಳೆಯ ಹೇಳ್ತಾನೆ: "ಕಥೆ ಓದುಗರಿಗೆ, ಕವಿತೆ ಕವಿಗೆ". ಬಹಳಷ್ಟು ಸಲ ಅದು ಸತ್ಯ ಅಂತನ್ನಿಸಿದೆ.ಅಂತೂ ಸುಮ್ಮನೇ ಸುರುಮಾಡಿದ ಒಂದು ನಿರೂಪಣೆ ಒಂದು ಹಂತ ತಲುಪಿದೆ. ಇಷ್ಟಪಟ್ಟ ಎಲ್ಲರಿಗೂ ಪ್ರತಿಕ್ರಿಯಿಸಿದ ಎಲ್ಲರಿಗೂ ಮತ್ತೆ ವಂದನೆಗಳು.