ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Friday 20 May, 2011

ಸಂಜ್ಞಾ - ೦೪

ಛಿದ್ರ ಚಿತ್ರಗಳ ನೆನಪು ತುಣುಕುಗಳ ನಡುವೆಯೇ ಎದೆಯ ಮೇಲೆ ಕೈಯಿಟ್ಟುಕೊಂಡು ನೋವು ಅನುಭವಿಸಿದ. ನೋವಿನ ಮೂಲವನ್ನು ಹುಡುಕು ಎಂದೆ. ಮತ್ತೊಂದು ಜನ್ಮದ ಹಂದರಕ್ಕೆ ಹಾರಿದ....

"ಕಾಡು... ಅದರ ನಡುವೆ ಒಂದು ದೊಡ್ಡ ವಿಶಾಲವಾದ ಮನೆ. ನನ್ನದೇ ಮನೆ. ಮನೆಯಲ್ಲಿ ನಾನೇ ಹಿರಿ ಮಗ. ಇನ್ನುಳಿದ ತಮ್ಮಂದಿರು ಮೂವರು ಎಲ್ಲರಿಗೂ ಮದುವೆಯಾಗಿದೆ. ನನಗಾಗ್ಲಿಲ್ಲ. ತಮ್ಮಂದಿರಿಗೆ ಅಪ್ಪನಾಗಿದ್ದೆ. ದೊಡ್ಡ ಆಸ್ತಿ. ಗದ್ದೆ, ತೋಟ, ಕಾಡು... ಅರ್ಧ ಊರು ನಮ್ಮದೇ. ಒಳಗಿನ ಕೋಣೆಯ ಖಜಾನೆಯ ತುಂಬಾ ಚಿನ್ನ, ಅಮ್ಮ-ಅಜ್ಜಿಯರದ್ದು. ತಮ್ಮಂದಿರಿಗೆ, ಅವರ ಹೆಂಡತಿಯರಿಗೆ ಅದರ ಮೇಲೆ ಕಣ್ಣು. ಈಗಲೇ ಪಾಲು ಮಾಡ್ಲಿಕ್ಕೆ ನಾನು ತಯಾರಿಲ್ಲ. ಅಪ್ಪ ಇದ್ದಿದ್ರೆ ಮಾಡ್ತಿರಲಿಲ್ಲ ಅಂತ ನನ್ನ ಅಭಿಪ್ರಾಯ. ಅಪ್ಪನನ್ನು ಅವರ ದಾಯಾದಿಗಳು ಆಸ್ತಿ ವ್ಯಾಜ್ಯದಲ್ಲಿ ಕೊಂದಿದ್ರು... ನನಗೀಗ ಐವತ್ತಾರು ವರ್ಷ. ಮಳೆಗಾಲದ ಒಂದು ರಾತ್ರೆ... ಕತ್ತಲೆ. ನನ್ನ ಕೋಣೆಯ ದೀಪ ಆರಿದೆ. ಎಣ್ಣೆ ತರಲಿಕ್ಕೆ ಆಳಿಗೆ ಹೇಳಿ ಕಳಿಸಿ ಒಬ್ಬನೇ ಕತ್ತಲೆಯಲ್ಲಿ ಕೂತಿದ್ದೇನೆ. ಯಾರೋ ಒಳಗೆ ಬಂದಹಾಗಾಯ್ತು. ಯಾರದು? ಉತ್ತರ ಇಲ್ಲ. ಮತ್ಯಾರೋ ಆಚೆ ಓಡಿದ ಹಾಗಾಯ್ತು... ಆಳುಗಳಿರಬಹುದು... ಅಥವಾ ನನ್ನ ನಾಯಿ...

ನನ್ನ ಹಿಂದೆಯೇ ಹೆಜ್ಜೆ ಶಬ್ದ. ನನ್ನ ಸೊಂಟದ ಕಿರುಗತ್ತಿ ಹಿರಿಯುವ ಹೊತ್ತಿಗೇ ನನ್ನ ಹಿಂದಿನಿಂದ ಹೃದಯಕ್ಕೇ ಚೂರಿ ಹಾಕಿದ್ದಾನೆ... ಎರಡನೇ ತಮ್ಮ. ಅವನ ಬದಿಯಲ್ಲೇ ಅವನ ಹೆಂಡತಿ- ಅವಳು ಈಗಿನ ಸುಜೇತಾ. ಅವಳೇ ನನ್ನ ಕೊಲೆಗೆ ಕಾರಣ. ಅದಕ್ಕೇ ಅವಳನ್ನು ಎದುರಿಸಲಿಕ್ಕೆ ಆಗದಷ್ಟು ಹಿಂಜರಿಕೆ ನನಗೆ. ಅವಳು ಕೊಲೆಪಾತಕಿ. ಆಗ ಚೂರಿ ಹಾಕಿಸಿ ಕೊಂದಳು; ಈಗ ಬೆಂಕಿ ಹಚ್ಚಿಸಿ ಕೊಲ್ತಿದ್ದಾಳೆ. ಕೊಲೆಪಾತಕಿ..."

ಕಿರುಚುತ್ತಿದ್ದವನನ್ನು ಸಮಾಧಾನಪಡಿಸಿ, ಸೂಕ್ತ ಸಲಹೆಗಳನ್ನು ನೀಡಿ ಎದೆ ನೋವಿನ ನಿವಾರಣೆಗೆ ಮಾರ್ಗದರ್ಶನ ಮಾಡಿ ಅಲ್ಲಿಂದ ವಾಸ್ತವಕ್ಕೆ ಕರೆತಂದೆ. ತುಂಬಾ ಬಳಲಿ ದಣಿದು ಎದ್ದು ಬಂದ. ಆದರೂ "ಇನ್ನು ಸುಜೇತಾಳನ್ನು ಎದುರಿಸಬಲ್ಲೆ" ಅಂದ. ನಮಗಷ್ಟೇ ಬೇಕಾಗಿತ್ತು. ಶುಭ ಹಾರೈಸಿ ಬೀಳ್ಕೊಟ್ಟೆ.

ಅದಾಗಿ ನಾಲ್ಕು ತಿಂಗಳು ಸಂದಿದೆ. ಒಂದೆರಡು ಬಾರಿ ಫೋನ್ ಮಾಡಲೇ ಅನ್ನಿಸಿದರೂ ಮಾಡಿಲ್ಲ. ತೊಂದರೆಯಿದ್ದಿದ್ದರೆ ಅವನೇ ಫೋನ್ ಮಾಡಿರುತ್ತಿದ್ದ. ಇನ್ನೊಂದು ಸೆಷನ್ ಬೇಕೆನ್ನುತ್ತಿದ್ದ. ನೋ ನ್ಯೂಸ್ ಈಸ್ ಗುಡ್ ನ್ಯೂಸ್ ಅಂತ ಸುಮ್ಮನಿದ್ದೇನೆ.

(ಹೆಸರು, ಸ್ಥಳ, ಉದ್ಯೋಗ, ವಯಸ್ಸು, ವಿದ್ಯೆ, ಸಂಬಂಧಗಳು- ಎಲ್ಲವನ್ನೂ ಕಾಲ್ಪನಿಕ ನೆಲೆಯಲ್ಲಿಟ್ಟ ವಾಸ್ತವದ ಕಥೆಯಿದು.)

3 comments:

sunaath said...

ಜ್ಯೋತಿ,
ಈಗ ಸ್ವಲ್ಪ ಸ್ವಲ್ಪ ಹೊಳೆಯುತ್ತಿದೆ. ಹೊಳೆಯುತ್ತಿರುವದು ಸರಿಯೊ, ತಪ್ಪೊ ತಿಳಿಯುತ್ತಿಲ್ಲ.
ಪೂರ್ವಜನ್ಮದ ಸಂಬಂಧಗಳು, ಕರ್ಮವನ್ನು ತೀರಿಸಲೆಂದು, ಈ ಜನ್ಮದಲ್ಲೂ ಮುಂದುವರೆಯುತ್ತವೆ. ಆ ಸಂಬಂಧಗಳು ಈ ಜನ್ಮದ ಮಾನಸಿಕ ತಲ್ಲಣಗಳಿಗೂ ಕಾರಣವಾಗಬಹುದು.
ರಿಗ್ರೆಶನ್ ಮೂಲಕ ಕಾರ್ಯಕಾರಣ ಸಂಬಂಧವನ್ನು ಪುನಃ ಅನುಭವಿಸುವದರಿಂದ ಮಾನಸಿಕ ಉತ್ಸರ್ಜನೆಯಾಗಿ, ಮನಸ್ಸು ಸಮಾಧಾನವನ್ನು ಪಡೆಯುತ್ತದೆ.
ಸರಿಯೆ?
ಅರ್ಥಪೂರ್ಣ ಘಟನೆಗಳು ಇನ್ನಿಷ್ಟು ಬರಲಿ.

ತೇಜಸ್ವಿನಿ ಹೆಗಡೆ said...

akka.. really interesting one... beyond my imagination and words...!

ಸುಪ್ತದೀಪ್ತಿ suptadeepti said...

ಕಾಕಾ, ತೇಜು, ಇಬ್ಬರಿಗೂ ಧನ್ಯವಾದಗಳು.

ಕಾಕಾ, ನಿಮಗೆ ಹೊಳೆದ ವಿಷಯಗಳು ಸರಿಯಾಗಿಯೇ ಇವೆ. ಮಾನಸಿಕ ಉತ್ಸರ್ಜನೆ ಎನ್ನುವುದು ಸರಿಯಾದ ಪದ. ಅದ್ರಿಂದಲೇ ಸಮಾಧಾನ ದೊರಕುವಂಥಾದ್ದು.

ಕೆಲವೊಮ್ಮೆ ಈ ಉತ್ಸರ್ಜನೆ ಅರ್ಥಪೂರ್ಣವಾಗಿಲ್ಲದೆ, ಕೇವಲ ತುಣುಕುಗಳಲ್ಲಿ ಗೋಜಲುಗೋಜಲಾಗಿ ಇರುವುದೂ ಉಂಟು. ಆಗ ಮಾತ್ರ ಮನಸ್ಸು ಇನ್ನಷ್ಟು ಗೊಂದಲಮಯವೇ ಆಗಿ ಹೋಗುತ್ತದೆ. ಅಂಥ ಮನಸ್ಸನ್ನು ಶಾಂತಗೊಳಿಸಲು ಇನ್ನಷ್ಟು ಆಳದ ಸಮ್ಮೋಹನ ಸ್ಥಿತಿಯೂ ಅರ್ಥವತ್ತಾದ ಉತ್ಸರ್ಜನೆಯೂ ಅಗತ್ಯವಾಗುತ್ತವೆ. ಕಾಲವೂ ಕೂಡಿಬರಬೇಕು ಅನ್ನುವುದೂ ಅಷ್ಟೇ ಮುಖ್ಯವಾಗುತ್ತದೆ.