ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Tuesday, 15 February, 2011

ಸುಮ್ಮನೆ ನೋಡಿದಾಗ...೧೫

ಕಾಲೇಜಲ್ಲಿ ಅದ್ಯಾಕೋ ಶರತ್ ಮತ್ತೆ ಮತ್ತೆ ನನ್ನ ಕಡೆ ನೋಡ್ತಿದ್ದಾನೆ ಅನ್ನುವ ಗುಮಾನಿ ನನ್ನದು. ನಿನ್ನೆ ಪುಸ್ತಕದ ಬದಲು ಅವನ ಕೈಗೆ ಕೊಡೆ ಕೊಟ್ಟದ್ದಕ್ಕಾ? ಗೊತ್ತಿಲ್ಲ. ಅಂತೂ ಶನಿವಾರದ ಲ್ಯಾಬ್ ಮುಗಿಸಿ ಒಂದು ಗಂಟೆಗೆ ಹೊರಗೆ ಬಂದಾಗ ಶರತ್ ಬಾಗಿಲಲ್ಲೇ ಎದುರಾದ.
‘ಏನು?’ ಕೇಳಿದವಳು ನೇಹಾ.
‘ಏನಿಲ್ಲ, ನಂಗೆ ಶಿಶಿರನ ನೋಟ್ಸ್ ಮತ್ತೊಮ್ಮೆ ಬೇಕು. ನಿನ್ನೆ ಪೂರ್ತಿ ಬರ್ಕೊಳ್ಳಿಲ್ಲ. ನಾಳೆ ಆದಿತ್ಯವಾರ. ಮನೆಯಲ್ಲಿ ಕೂತು ಎಲ್ಲ ಬರ್ದು ಸೋಮವಾರ ಹಿಂದೆ ತರ್ತೇನೆ. ಪ್ಲೀಸ್, ಕೊಡ್ತೀರ ಶಿಶಿರಾ?’
‘ಯಾಕೆ? ನನ್ನ ನೋಟ್ಸ್ ಆಗುದಿಲ್ವಾ?’ ನೇಹಾ ಕುಟುಕಿದಳು.
‘ನಿನ್ನೆ ನೀವು ಸಿಗ್ಲಿಲ್ಲ. ಇವ್ರ ನೋಟ್ಸ್ ತಗೊಂಡಿದ್ದೆ. ಅರ್ಧ ಬರ್ದಿದ್ದೇನೆ. ಅದ್ಕೇ ಇವತ್ತು ಕೂಡಾ ಇವ್ರದ್ದೇ ಬೇಕು.’
‘ಏ, ಸುಮ್ನಿರು ಮಾರಾಯ್ತಿ... ತಗೊಳ್ಳಿ ಶರತ್. ಸೋಮವಾರ ಮಾತ್ರ ಖಂಡಿತಾ ತನ್ನಿ.’
ವ್ಯಾಜ್ಯ ಕೊನೆಗೊಂಡಿತು. ಇಬ್ಬರೂ ಮನೆ ದಾರಿ ಹಿಡಿದೆವು.
‘ನಿನ್ನಮ್ಮ ನಮ್ಮನೆಯಲ್ಲೇ ಇರ್ಬಹುದಾ?’
‘ಇರ್ಬಹುದು. ನಳಿನಿ ಆಂಟಿ ಅವ್ರನ್ನು ಇವತ್ತು ಸುಲಭಕ್ಕೆ ಬಿಡುದಿಲ್ಲ, ನೋಡು.’
‘ನನ್ನಮ್ಮ ನಂಗಿಂತ ಹೆಚ್ಚು ನಿಂಗೇ ಗೊತ್ತು, ಅಲ್ವಾ?’
‘ಹೌದು, ನನ್ನ ಜೀವನದ ಅರ್ಧ ಸಮಯ ನಿನ್ನಮ್ಮನ ನೆರಳಲ್ಲಿ ಕಳ್ದಿದ್ದೇನೆ, ಅಲ್ವಾ?’

ಹರಟೆಗಳಲ್ಲಿ ದಾರಿ ಚಿಕ್ಕದಾಗಿಬಿಟ್ಟಿತು. ಮನೆಗೆ ಬಂದಾಗ ಗೆಳತಿಯರ ಸಣ್ಣ ನಗು ತೇಲಿ ಬಂತು. ಅಮ್ಮ ಸಮಾಧಾನವಾಗಿದ್ದಾರೆ ಅನ್ನುವ ಯೋಚನೆಯೇ ಖುಷಿ ಕೊಟ್ಟಿತು. ಅವರಿಬ್ಬರ ನಗುವಿನ ಹಿಂದೆಯೇ ಸುಮುಖ್ ಅಂಕಲ್ ಅಬ್ಬರದ ನಗು ಹಾರಿಸುತ್ತಾ ಇದ್ದದ್ದು ಕೇಳಿ ನಾವಿಬ್ಬರೂ ಮುಖ-ಮುಖ ನೋಡಿಕೊಂಡೆವು.
‘ಪಪ್ಪಾ...’ ನೇಹಾ ಚಿಗರೆಯ ಹಾಗೆ ಒಳಗೋಡಿದಳು. ಎಷ್ಟೋ ದಿನಗಳಿಂದ ಕಾಣದವರನ್ನು ಅಚಾನಕ್ ಕಂಡ ಹಾಗೆ ಪಪ್ಪನ ಕುತ್ತಿಗೆಗೆ ಜೋತುಬಿದ್ದಳು. ಅದ್ಯಾಕೋ ವಿನ್ಯಾಸ್ ಸತ್ತ ಹಿನ್ನೆಲೆಯಲ್ಲಿ ಈ ಪ್ರೀತಿ ಮತ್ತಷ್ಟು ಆಪ್ತವಾಗಿ ಕಂಡಿತು. ಅಂಕಲ್ ನನ್ನ ಕಡೆಗೂ ಕೈ ಚಾಚಿ, ‘ಬಾ ಮಗಳೇ...’ ಅಂದರು. ಸೋಫಾದಲ್ಲಿ ಅವರ ಬದಿಗೇ ಸರಿದು ಕೂತೆ. ಇಬ್ಬದಿಗಳಲ್ಲಿ ಇಬ್ಬರು ಮಕ್ಕಳು. ಅಮ್ಮನ ಕಣ್ಣುಗಳು ಮಂಜಾದವೆ? ನನ್ನ ಕಣ್ಣುಗಳಾ?

ಊಟ ಅಲ್ಲೇ ಮುಗಿಸಿ ಬಿಸಿಲಲ್ಲೇ ನಮ್ಮ ಮನೆಗೆ ಹೊರಟಾಗ ಅಮ್ಮ ನೆಲದಲ್ಲಿ ಕಲ್ಲು ಲೆಕ್ಕ ಮಾಡ್ತಾ ನಡೀತಿದ್ರಾ ಹೇಗೆ? ಮಾತುಗಳನ್ನೆಲ್ಲ ಅಲ್ಲೇ ಬಿಟ್ಟು ಬಂದಿದ್ರಾ? ನಮ್ಮ ಗೇಟಿನ ಕಿರ್ರ್ ಶಬ್ದ ಅವರಿಗೆ ಕಿರಿಕಿರಿ ಮಾಡಿರಬೇಕು...
‘ಶಿಶಿರಾ, ನಳಿನಿ ನಿಮ್ಗೆ ಎಲ್ಲ ಹೇಳಿದ್ದಾಳಂತಲ್ಲ. ಅದನ್ನು ಬೆಳಿಗ್ಗೆ ನಂಗೆ ಯಾಕೆ ತಿಳಿಸ್ಲಿಲ್ಲ?’ ಎಂದೂ ಇಲ್ಲದ ಶಾಂತಿ ಅಮ್ಮನ ಮಾತಲ್ಲಿ.
‘ನಿಮ್ಗೆ ಹೇಗೆ ಹೇಳ್ಬೇಕೂಂತ ಗೊತ್ತಾಗ್ಲಿಲ್ಲ, ಸಾರಿ ಅಮ್ಮ.’
‘ಮತ್ತೆ, ನಿನ್ನೆ ಸುಮುಖ್ ಇದ್ರಾ ನಿಮ್ಗೆ ಇವೆಲ್ಲ ಗೊತ್ತಾಗುವಾಗ? ಅವ್ರು ಏನ್ ಹೇಳಿದ್ರು?’
‘ಇಲ್ಲಮ್ಮ, ಅಂಕಲ್ ಇರ್ಲಿಲ್ಲ. ಆದ್ರೆ ಅಂಕಲ್‌ಗೆ ಗೊತ್ತುಂಟು. ಅದ್ಯಾವ ಘಳಿಗೆಯಲ್ಲೋ ಆಂಟಿ ಅವರಿಗೆ ತಿಳಿಸಿರ್ಬೇಕು...’
‘ಹೌದು, ಅವ್ರಿಬ್ರ ಹೊಂದಾಣಿಕೆ ಅಪರೂಪದ್ದು. ಹ್ಮ್! ನಂಗಂತೂ ಅಂಥ ಸಂಸಾರದ ಋಣ ಇಲ್ಲ. ತಿಳಿಯದೇ ತಪ್ಪು ಮಾಡಿದೆ ಅಂತ ಹೇಳುವ ಹಾಗಿಲ್ಲ. ಕಣ್ಣು ತೆರೆದಿದ್ದುಕೊಂಡೇ ಬಾವಿಗೆ ಬಿದ್ದೆ. ನೀನು ಅಂಥ ತಪ್ಪು ಎಲ್ಲಿ ಮಾಡಿಬಿಡ್ತೀಯೋ ಅಂತ ಯಾವಾಗ್ಲೂ ಹೆದ್ರಿಕೆ ನಂಗೆ...’
‘ಖಂಡಿತಾ ಅಂಥದ್ದು ನನ್ನಿಂದ ಆಗುದಿಲ್ಲಮ್ಮ. ನಾನು ನನ್ನ ಕಾಲ ಮೇಲೆ ನಿಲ್ತೇನೆ. ಕೆಲ್ಸಕ್ಕೆ ಸೇರ್ತೇನೆ. ಕರೆಸ್ಪಾಂಡೆನ್ಸ್ ಆದ್ರೂ ಸರಿ, ಎಂ.ಎಸ್ಸಿ. ಮಾಡ್ತೇನೆ... ಒಳ್ಳೇ ಕಾಲೇಜಲ್ಲಿ ಲೆಕ್ಚರರ್ ಆಗ್ತೇನೆ. ಮಕ್ಕಳನ್ನು ಪ್ರೋತ್ಸಾಹಿಸಿ ಒಳ್ಳೇ ವ್ಯಕ್ತಿಗಳನ್ನಾಗಿ ಮಾಡ್ತೇನೆ... ಯಾವುದೋ ಗೊತ್ತಿಲ್ದ ಗಂಡಿನ ಕುತ್ತಿಗೆಗೆ ಮಾಲೆ ಹಾಕಿ ನನ್ನ ಜೀವನವನ್ನು ಆ ಮಾಲೆಯ ಪರಿಧಿಯೊಳಗೆ ಒಣಗಿಸ್ಲಿಕ್ಕೆ ನಾನು ತಯಾರಿಲ್ಲ. ನೋಡ್ತಾ ಇರಿ. ನಾನು ನಿಜವಾದ ಅರ್ಥದಲ್ಲಿ ಒಬ್ಬ ಒಳ್ಳೇ ಟೀಚರ್ ಆಗ್ತೇನೆ...’

ಬಾಗಿಲು ತೆರೆದು ನಡುಮನೆಯ ಸೋಫಾದಲ್ಲಿ ಕೂತ ನನ್ನ ಆವೇಶದ ಮಾತುಗಳು ಅಮ್ಮನ ಸಿಡುಕಿಯನ್ನು ಎಚ್ಚರಿಸಿದ್ದು ಯಾಕೋ ಗೊತ್ತಾಗಲೇ ಇಲ್ಲ.
‘ಒಳ್ಳೇ ಟೀಚರ್ ಮತ್ತೆ ಆಗು. ಮೊದ್ಲು ಒಳ್ಳೇ ಮಗಳಾಗು...’
ನನ್ನ ಆವೇಶ ಎಲ್ಲ ಆವಿಯಾಗಿಬಿಟ್ಟಿತು. ಎಲ್ಲಿ ಏನು ತಪ್ಪಾಯ್ತು? ಯಾಕೆ ಹೀಗೆ ಮಾತಾಡಿದ್ರು? ಸುಮ್ಮನೆ ಸೋಫಾದಿಂದ ಎದ್ದು ಬಚ್ಚಲಿಗೆ ಹೋದೆ, ಮುಖ ಕೈಕಾಲು ತೊಳೆಯುವ ನೆಪದಲ್ಲಿ. ತಲೆಯಲ್ಲಿ ಗುಂಗಿಹುಳ ಹರಿದಾಡ್ತಿತ್ತು. ಅಮ್ಮ ಅವರ ಕೋಣೆಗೆ ಹೋಗಿ, ‘ಕಿರಿಕಿರಿ ಮಾಡ್ಬೇಡ, ನಾನು ಮಲಗ್ತೇನೆ’ ಅಂತ ಜೋರಾಗಿ ಹೇಳಿ ಧಡಾರಂತ ಬಾಗಿಲು ಹಾಕಿಕೊಂಡರು.

ಎರಡೇ ಕ್ಷಣ. ಯಾಕೋ ನಂಗೆ ದಿಗಿಲಾಯಿತು. ಅಮ್ಮ ಏನಾದ್ರೂ ಮಾಡಿಕೊಂಡರೆ? ಇವತ್ತಿನವರೆಗೂ ನನಗಂಥಾ ಯೋಚನೆಯೇ ಬಂದಿರಲಿಲ್ಲ. ಇವತ್ತು ಅದನ್ನು ಬದಿಗೆ ಸರಿಸಲಾಗಲೇ ಇಲ್ಲ. ಗಾಬರಿಯಿಂದ, ಜಾಗ್ರತೆಯಿಂದ ಅಮ್ಮನ ಕೋಣೆಯ ಬಾಗಿಲು ತಟ್ಟಿದೆ...
‘ಅಮ್ಮ, ನನ್ನ ಬಾಟನಿ ಟೆಕ್ಸ್ಟ್ ಅಲ್ಲೇ ಉಂಟು. ಬಾಗಿಲು ತೆಗೀರಿ. ನಂಗೀಗ ಬೇಕದು...’
ಎಷ್ಟು ತಟ್ಟಿದರೂ ಅಲ್ಲಿಂದ ಉತ್ತರ ಇಲ್ಲ. ನನ್ನೊಳಗು ಟೊಳ್ಳಾಗತೊಡಗಿತು. ಫೋನ್ ಮಾಡಿ ನೇಹಾಳನ್ನು ಬರಹೇಳಿದೆ, ‘ಸುಮ್ನೆ... ಹೀಗೇ... ಬಾ... ಆದ್ರೆ ಕೂಡ್ಲೇ ಬಾ...’ ಹತ್ತು ನಿಮಿಷದಲ್ಲಿ ಬರುತ್ತೇನೆಂದಳು. ಇನ್ನೂ ಹತ್ತು ನಿಮಿಷ? ಆಗಲೇ ಅಮ್ಮ ಬಾಗಿಲು ಹಾಕ್ಕೊಂಡು ಐದು ನಿಮಿಷವಾಗಿತ್ತು. ಇನ್ನು ಹತ್ತು ನಿಮಿಷ? ಅಷ್ಟೊತ್ತಿಗೆ ಏನಾದ್ರೂ ಆಗ್ಬಹುದು! ಏನ್ ಮಾಡ್ಲಿ?
ಮತ್ತೊಮ್ಮೆ ಬಾಗಿಲು ತಟ್ಟಿ ಮೌನವನ್ನು ಎದುರ್ಗೊಂಡೆ. ಏನೂ ತೋಚದೆ ಸೋಫಾದಲ್ಲಿ ಕೂತೆ... ಕೂತೇ ಇದ್ದೆ...

2 comments:

sunaath said...

ಮಾನವೀಯ ಅಂಶವುಳ್ಳ ಕತೆ, ಸರಾಗವಾದ ಶೈಲಿ, ರೋಚಕ ರೋಮಾನ್ಸು, ಪ್ರತಿ ಭಾಗದಲ್ಲೂ ತಿರುವು ಪಡೆದುಕೊಂಡು ಓದುಗನ ಕುತೂಹಲವನ್ನು ಹಿಡಿದಿಟ್ಟುಕೊಳ್ಳುವ
ತಂತ್ರ.....ಜ್ಯೋತಿ, hats off to you!

ಸುಪ್ತದೀಪ್ತಿ suptadeepti said...

ಕಾಕಾ, ನಿಮ್ಮ ಇಂಥ ಪ್ರೋತ್ಸಾಹದ ಮಾತುಗಳಿಂದಲೇ, ನಿಮ್ಮ ನಿರೀಕ್ಷೆಯ ಮಟ್ಟದ ಹತ್ತಿರವಾದರೂ ಬರಬೇಕೆನ್ನುವ ಪ್ರಯತ್ನದಲ್ಲಿದ್ದೇನೆ. ಅಷ್ಟಕ್ಕೇ ಹೀಗೆಂದರೆ ಹೇಗೆ?