ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday, 11 April, 2011

ಸುಮ್ಮನೆ ನೋಡಿದಾಗ...೨೧

ಸಹೃದಯರಿಗೆಲ್ಲ ಸೌರ ಯುಗಾದಿಯ (ವಿಷುವಿನ) ಸಂದರ್ಭದಲ್ಲಿ ಶುಭ ಹಾರೈಕೆಗಳು.
ಜೀವನ ಸುಂದರವಾಗಿರಲಿ, ಸುಖಮಯವಾಗಿರಲಿ, ಸಮೃದ್ಧಿಯಿಂದಿರಲಿ.


ಸರೋಜಾ ಆಂಟಿ ಅದೆಷ್ಟು ಹೊತ್ತಿಗೆ ತಮ್ಮ ಮನೆಗೆ ಹೊರಟಿದ್ದರೋ ಅದ್ಯಾವಾಗ ಸುಮುಖ್ ಅಂಕಲ್ ನಮ್ಮ ಹಿಂದೆ ಬಂದು ನಿಂತರೋ ಅರಿವಿರಲಿಲ್ಲ ನಮಗೆ. ನಳಿನಿ ಆಂಟಿಯ ವಕಾಲತ್ತಿನ ಮೇಲೆ ಅಂದು ರಾತ್ರಿ ನಾನು ಅಲ್ಲಿಯೇ ಉಳಿದೆ. ಮರುದಿನ ಬೆಳಿಗ್ಗೆಯೇ ಅಮ್ಮನೂ ಇಲ್ಲಿಗೇ ಬರುವ ಮಾತಾಯ್ತು ಹಿರಿಯ ಗೆಳತಿಯರಲ್ಲಿ. ನಳಿನಿ ಆಂಟಿಗೆ ಇಂದು ನಿದ್ದೆಯೇ ಬಾರದೇನೋ ಅನ್ನಿಸಿತು ನನಗೆ, ಅವರ ಸಂಭ್ರಮ ನೋಡಿ.

ಮಧ್ಯರಾತ್ರಿಯ ಎರಡು ಗಂಟೆಗೆ ನೇಹಾ ನನ್ನನು ಕುಲುಕಿ ಎಚ್ಚರಿಸಿದಳು, ಮುಖ ತುಂಬಾ ತುಂಟ ನಗು ಹೊತ್ತು.
‘ಏನಾಯ್ತು? ಯಾಕೆ ಎಬ್ಸಿದ್ದು ನನ್ನನ್ನು?’
‘ಯಾರು ವಸಂತ್? ಯಾಕವನು ಇಲ್ಲಿಗೆ ಬರ್ಬೇಕು? ಹೇಳು ಈಗ್ಲೇ’
‘ಯಾರು? ಯಾವ ವಸಂತ್? ಎಂತ ಮಾತಾಡ್ತಿದ್ದೀ ನೀನು? ಕನಸು ಬಿತ್ತಾ ನಿಂಗೆ?’
‘ಕನಸು ಬಿದ್ದದ್ದು ನಂಗಲ್ಲ ಮಾರಾಣಿ, ನಿಂಗೆ. ‘ವಸಂತ್, ಬನ್ನೀ...’ ಅಂತ ಕನವರಿಸಿದವಳು ನೀನು. ನಂಗೀಗ ಹೇಳುದಿಲ್ಲ ಅಂತಾದ್ರೆ ಬೆಳಗಾದ್ಮೇಲೆ ಪಪ್ಪನತ್ರ ಕೇಳಿಸ್ತೇನೆ, ಅಷ್ಟೇ...’
‘....’ ಹೇಗೆ ಎಲ್ಲಿಂದ ಇವಳಿಗೆ ಹೇಳುವುದೆನ್ನುವ ತರ್ಕದಲ್ಲಿ ಮುಳುಗಿದೆ.
‘ಏನು ಲೆಕ್ಕಾಚಾರ ಹಾಕ್ತಾ ಇದ್ದೀ? ನೀನು ಹೇಳದಿದ್ರೆ ಬಿಡುದಿಲ್ಲ ನಾನು. ಹೇಗೆ ನಿನ್ನ ಬಾಯಿ ಬಿಡಿಸ್ಬೇಕು ಅಂತ ನಂಗೊತ್ತುಂಟು. ಬೇಡ ಬಿಡು. ಬೆಳಿಗ್ಗೆ ನೋಡ್ಕೊಳ್ತೇನೆ...’
‘....’ ಹೇಳದಿದ್ರೆ ಬಿಡುವವಳಲ್ಲ. ಹಾಗಂತ ಅಂಕಲ್ ವರೆಗೆ ವಿಷಯ ಹೋದರೆ... ಒಳ್ಳೆಯದೆ? ಕೆಟ್ಟದ್ದೆ? ನಿಜವಾಗಲೂ ಲೆಕ್ಕಾಚಾರದಲ್ಲಿ ಬಿದ್ದೆ. ಬಾಯಿ ಬಿಡಲಿಲ್ಲ.
ಮುಖ ದಪ್ಪ ಮಾಡಿಕೊಂಡು ನನಗೆ ಬೆನ್ನುಹಾಕಿ ಮುಸಕೆಳೆದ ನೇಹಾಳ ಹುಸಿಕೋಪಕ್ಕೆ ನಗುವೇ ಬಂತು. ಕಿಸಕ್ಕನೆ ಹೊರಜಾರಿತು, ತಡೆಯಲಿಲ್ಲ. ಅವಳ ಕೋಪವೂ ಇಳಿಯಲಿಲ್ಲ. ನನ್ನ ಬೆನ್ನಿಗೊಂದು ಗುದ್ದಿದಳು. ನಡುಮನೆಯಲ್ಲಿ ಆಗಲೇ ದೀಪ ಉರಿಯಿತು. ನಳಿನಿ ಆಂಟಿಯ ಹೆಜ್ಜೆ ನಮ್ಮ ಕೋಣೆಯ ಬಾಗಿಲತ್ತ ಬಂತು. ಬಾಯ್ತೆರೆದವಳ ಸ್ವರ ಹೊರಗೆ ಬಾರದ ಹಾಗೆ ಕೈ ಅಡ್ಡ ಹಿಡಿದೆ. ಕೋಣೆಯೊಳಗಿನ ಮೌನ ಆಂಟಿಯನ್ನು ಹಿಂದಕ್ಕೆ ಕಳಿಸಿತು. ಒಂದ್ಹತ್ತು ನಿಮಿಷಗಳಲ್ಲಿ ಮೌನದ ಪದರ ಗಾಢವಾಗಿ ಮತ್ತೊಂದು ಕಿಸಕಿಸದೊಡನೆ ಒಡೆದುಕೊಂಡಿತು. ಇನ್ನೊಮ್ಮೆ ನೇಹಾಳ ಮುಖ ದಪ್ಪವಾಯ್ತು, ಹುಸಿಗೋಪದಲ್ಲಿ,
‘ಹೇಳ್ತೀಯಾ ಇಲ್ವಾ?’
‘ಹೇಳ್ತೇನೆ ಮಾರಾಯ್ತಿ. ನಿಂಗಲ್ದೆ ಇನ್ಯಾರಿಗೆ ಹೇಳುದು ನಾನು? ಎಲ್ಲ ಕೇಳಿದ ಮೇಲೆ ಬೈಬಾರ್ದು ನೀನು, ಅಷ್ಟೇ. ಅದೊಂದು ಪ್ರಾಮಿಸ್ ಮಾಡು.’
‘ಆಣೆ-ಪ್ರಾಮಿಸ್ ಎಲ್ಲ ನಮ್ಮ ನಡುವೆ ಬೇಡ ಅಂತ ಹೇಳಿದವಳೇ ನೀನು. ಈಗ ಪ್ರಾಮಿಸ್ ಮಾಡ್ಬೇಕಾ? ಅಂದ್ರೆ ಏನೋ ಗಾಢ-ಗೂಢ ಕಥೆಯೇ ಉಂಟು. ಹೇಳು, ಪ್ಲೀಸ್...’ ಗೋಗರೆಯುವ ನಾಟಕ ಮಾಡಿದಳು ಜೀವದ ಗೆಳತಿ.

ಮೊದಲ ಕಥೆ ಬರೆದ ಹಿನ್ನೆಲೆಯಿಂದ ಹಿಡಿದು ಸದ್ದಿಲ್ಲದೆ ವಸಂತ್ ನನ್ನೊಳಗೆ ಮನೆ ಮಾಡಿ ಕಾಡುತ್ತಿರುವ ಎಲ್ಲವನ್ನೂ ಕನವರಿಕೆಯಂತೆಯೇ ಉಸುರುತ್ತಾ ಮುಗಿಸಿದಾಗ ಬೆಳಗಿನ ಜಾವ ಐದರ ನಸುಕು. ಹೊರಗೆ ಬೇಕೋಬೇಡವೋ ಇಣುಕುತ್ತಿದ್ದ ಮಂದ ಬೆಳಕಿನಲ್ಲಿ ಕೆಲವಾರು ಹಕ್ಕಿಗಳ ಉಲಿ ವಾತಾವರಣವನ್ನು ಮತ್ತಷ್ಟು ಆಪ್ತವಾಗಿಸುತ್ತಿತ್ತು. ಹಾಸಿಗೆಯ ಮೇಲೆ ಸುಖಾಸನದಲ್ಲಿ ಕೂತು ಮಡಿಲಲ್ಲಿ ದಿಂಬು ಏರಿಸಿ, ಅದರಲ್ಲೆರಡೂ ಮೊಣಕೈಯೂರಿ, ಎರಡೂ ಅಂಗೈಗಳ ಆಧಾರದಲ್ಲಿ ಗಲ್ಲವನ್ನಿಟ್ಟು ತುಟಿ ಚೂಪು ಮಾಡಿ, ಹ್ಙೂಗುಟ್ಟುತ್ತಾ ಕೇಳಿಸಿಕೊಳ್ಳುತ್ತಿದ್ದವಳು, ನಾನು ನಿಟ್ಟುಸಿರು ಬಿಟ್ಟು ಹಗುರಾದಾಗ ಮತ್ತೊಮ್ಮೆ ನನ್ನ ಬೆನ್ನಿಗೆ ಗುದ್ದಿದಳು.
‘...ಯಾಕೆ?’
‘ಇಷ್ಟು ದಿನ ಇದನ್ನೆಲ್ಲ ನನ್ನಿಂದ ಮುಚ್ಚಿಟ್ಟದ್ದಕ್ಕೆ...’
‘ಇನ್ನೂ ಏನೂ ಆಗಿಲ್ಲದ ಈ ವಿಷಯವನ್ನು ನಿಂಗೆ ಹೇಳುವಂಥ ವಿಶೇಷ ನಂಗೆ ಕಂಡಿರಲಿಲ್ಲ. ಅದ್ಕೇ ಹೇಳಿರಲಿಲ್ಲ. ಇದೊಂಥರಾ ಇನ್ಫ಼ಾಚುವೇಷನ್ ಅಂತ ನಿಂಗನಿಸುದಿಲ್ವಾ? ಇದ್ರಲ್ಲೇನೂ ಹುರುಳಿಲ್ಲ ಅಂತ ಅನ್ನಿಸುದಿಲ್ವಾ? ವನ್ ವೇ ಟ್ರಾಫಿಕ್ ಅಲ್ವಾ ಇದು?’

‘ಇದನ್ನು ಟೂ ವೇ ಟ್ರಾಫಿಕ್ ಮಾಡ್ಲಿಕ್ಕೆ ಏನಾದ್ರೂ ಪ್ರಯತ್ನ ಮಾಡ್ಬೇಕಲ್ವ, ಮಾಡಿದ್ದೀಯ? ಆಚೆ ಕಡೆಯ ಟ್ರಾಫಿಕ್ಕಿಗೆ ಗ್ರೀನ್ ಸಿಗ್ನಲ್ ತೋರಿಸ್ಬೇಕಲ್ವ? ತೋರ್ಸಿದ್ದೀಯ? ಅದೇನೂ ಮಾಡದೆ, ಸುಮ್ನೆ ಕನವರಿಸ್ಕೊಂಡು ‘ವಸಂತ್ ಬನ್ನೀ...’ ಅಂತಂದ್ರೆ ಎಲ್ಲಿಂದ ಬರ್ತಾರೆ?. ನಂಗೀಗ ಎಲ್ಲ ಅರ್ಥ ಆಗ್ತಾ ಉಂಟು,ಶಿಶಿರಾ. ಶರತನ್ನು ನೋಡಿದ್ರೆ ಯಾಕೆ ತಪ್ಪಿಸ್ತಿದ್ದಿ, ವಸಂತ್ ಕಾಲೇಜಲ್ಲಿ ಕಂಡಾಗ ಬೇರೆ ಕಾರಿಡಾರಿಗೆ ನನ್ನನ್ನು ಯಾಕೆ ಎಳ್ದಿದ್ದಿ, ನಿಂಗೆ ಇಷ್ಟು ವರ್ಷಗಳಲ್ಲಿ ಇಲ್ಲದ ಒಂಥರಾ ಗೊಂದಲ, ಗಾಬರಿ ಪರೀಕ್ಷೆಯ ಸಮಯದಲ್ಲಿ ಈ ವರ್ಷ ಯಾಕಿತ್ತು... ಎಲ್ಲ ಅರ್ಥ ಆಗ್ತಾ ಉಂಟು. ನಾಳೆನೇ ನಾನು ಶರತ್ ಹತ್ರ ವಸಂತ್ ನಂಬರ್ ತಗೊಂಡು ಮಾತಾಡ್ತೇನೆ. ಅಂತೂ ಒಳ್ಳೇ ಸೆಲೆಕ್ಷನ್ ಬಿಡು. ಆದ್ರೆ, ಅವ್ರ ಸಬ್ಜೆಕ್ಟ್ ಮಾತ್ರ ನಿನ್ನಿಷ್ಟದ್ದು ಅಲ್ವಲ್ಲ... ಪ್ಚ್...ಪ್ಚ್... ಸ್ಸಾರೀ ಮಾರಾಯ್ತಿ...’ ನಾಟಕೀಯವಾಗಿ ತಲೆಯಾಡಿಸಿದವಳ ಮೇಲೆ ಕೋಪಗೊಳ್ಳುವುದೋ ಪ್ರೀತಿ ಹರಿಸುವುದೋ ತಿಳಿಯದೆ ಸುಮ್ಮನೇ ಕೂತಿದ್ದೆ.

ನಳಿನಿ ಆಂಟಿ ಎದ್ದು ಬಂದ ಶಬ್ದವಾದಾಗ ಒಂದು ಗಂಟೆಯಾದರೂ ಮಲಗೋಣವೆಂದು ಮತ್ತೊಮ್ಮೆ ಮುಸುಕೆಳೆದೆವು. ಮುಂಜಾವು ತನ್ನ ಪಾಡಿಗೆ ತಾನು ಬೆಳಕಾಗುತ್ತಿತ್ತು. ಸಂಜೆ ಸೀರೆಯಂಗಡಿಯಲ್ಲಿ ಯಾವುದೆಲ್ಲ ಬಣ್ಣಗಳನ್ನು ಯಾರ್ಯಾರಿಗ ಆರಿಸಬಹುದೆನ್ನುವ ಕಲ್ಪನೆಯೊಳಗೆ ಸೇರಿಹೋದವಳನ್ನು ನಿದ್ರೆಯೆಂಬ ಮಾಯೆ ಆವರಿಸಿಕೊಂಡಳು. ಎಚ್ಚರಾದಾಗ ಏಳೂವರೆಯ ಮೇಲಾಗಿತ್ತು. ಮುಖದ ಮೇಲೆ ಸುಂದರ ಮಂದಹಾಸ ಹರಿಬಿಟ್ಟ ನೇಹಾ ಇನ್ನೂ ಮಲಗೇ ಇದ್ದಳು. ನಡುಮನೆಗೆ ಬಂದಾಗ ಅಲ್ಲಾಗಲೇ ಹರ್ಷಣ್ಣ ನಗುತ್ತಿದ್ದ.
‘ಗುಡ್ ಮಾರ್ನಿಂಗ್ ಗೊಂಬೇ’ ಅಂದ.
‘ನಿನ್ನ ನಿಜವಾದ ಗೊಂಬೆ ಇನ್ನೂ ಮಲ್ಕೊಂಡೇ ಉಂಟು ಮಾರಾಯ. ಎಬ್ಬಿಸ್ಬೇಕಾ?’
‘ಬೇಡ, ನಿಮಗಿಬ್ಬರಿಗೂ ನಿಮ್ಮ ಜನ್ಮದಿನದ ಶುಭಾಶಯಗಳನ್ನು ಖುದ್ದಾಗಿ ಹೇಳುವಾಂತ ಬಾಂಬೆಯಿಂದ ಬಂದೆ. ಇಬ್ಬರೂ ಇಲ್ಲೇ ಸಿಕ್ಕಿದ್ದು ಫ಼ಸ್ಟ್ ಕ್ಲಾಸ್ ಆಯ್ತು. ಹ್ಯಾಪ್ಪಿ ಬರ್ತ್ ಡೇ ಮೈ ಡಿಯರ್.’
‘....’ ನನಗೆ ನೆನಪಿರುವ ಇಷ್ಟು ವರ್ಷಗಳಲ್ಲಿ ಇದೇ ಮೊದಲ ಸಲ ನಮ್ಮ ಜನ್ಮದಿನ ನಮ್ಮ ನೆನಪಿಂದ ಮರೆಯಾಗಿತ್ತು. ಪ್ರೇಮದ ಪರಿ ಹೀಗೇ ಏನು? ಸುಮ್ಮನೆ ಪೆಚ್ಚುಪೆಚ್ಚಾಗಿ ನಕ್ಕು ಬಚ್ಚಲುಮನೆಗೆ ಸಾಗಿ ಮುಖ ತೊಳೆದು ಬಂದೆ. ನಳಿನಿ ಆಂಟಿ ಹರ್ಷಣ್ಣ, ಸುಮುಖ್ ಅಂಕಲ್, ಮತ್ತು ನನಗೆ ಕಾಫಿ ತಂದಿತ್ತರು. ರಾಜಕುಮಾರಿಯ ಮುಖದರ್ಶನವಾಗಿರಲಿಲ್ಲ ಇನ್ನೂ.

2 comments:

sunaath said...

ಜ್ಯೋತಿ,
ನೇಹಾ, ಶಿಶಿರ, ವಸಂತ, ಹರ್ಷ, ಸುಮುಖ, ನಳಿನಿ, ಸರೋಜಾ ಹಾಗು ನಿಮಗೆ ಹೊಸ ವರ್ಷದ ಶುಭಾಶಯಗಳು.

ಸುಪ್ತದೀಪ್ತಿ suptadeepti said...

ಕಾಕಾ, ನಿಮ್ಮ ಸಹೃದಯ ಹಾರೈಕೆಗಳಿಗೆ ಧನ್ಯವಾದಗಳು ಮತ್ತು ಮರುಆಶಯಗಳು.