ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday, 28 March, 2011

ಸುಮ್ಮನೆ ನೋಡಿದಾಗ...೧೯

ಬೆಳಿಗ್ಗೆ ನೇಹಾ ಮತ್ತು ನಾನು ಏಳುವ ಹೊತ್ತಿಗೆ ಅಮ್ಮ ಹೊರಡುವ ತಯಾರಿಯಲ್ಲಿದ್ದರು. ಸುಮುಖ್ ಅಂಕಲ್ ಏನೋ ಗಂಭೀರ ಯೋಚನೆಯಲ್ಲಿದ್ದರು. ನಳಿನಿ ಅಂಟಿ ಅಡುಗೆಮನೆಯಲ್ಲಿ ಅಮ್ಮನನ್ನು ತಿಂಡಿ ಮುಗಿಸಿಯೇ ಹೋಗೆನ್ನುವ ಹುನ್ನಾರದಲ್ಲಿ ಕಟ್ಟುತ್ತಿದ್ದರು. ಹಾಲಿನವಳು ಹೊರಬಾಗಿಲಲ್ಲಿ ಕರೆದಾಗ ಆಂಟಿ ಓಡಿದರು; ನಮ್ಮನೆಗೂ ಅವಳೇ ಹಾಲು ತರುವವಳಾದ್ದರಿಂದ ನಮ್ಮ ಪಾಲಿನ ಹಾಲನ್ನೂ ಇಲ್ಲೇ ತೆಗೆದುಕೊಂಡರು ಆಂಟಿ. ಅಲ್ಲಿಗೆ ಒಂದು ನೆಪ ನಿವಾರಣೆಯಾಯ್ತು. ತಿಂಡಿಯ ತಯಾರಿಯಲ್ಲಿದ್ದ ನಳಿನಿ ಅಂಟಿಗೆ ಸಹಾಯಕ್ಕೆಂದು ಅಮ್ಮ ಇದ್ದ ಕಾರಣ ನೇಹಾ ಮತ್ತು ನಾನು ಮತ್ತೊಮ್ಮೆ ಕೋಣೆ ಸೇರುವುದರಲ್ಲಿದ್ದೆವು. ಆಗಲೇ ಸುಮುಖ್ ಅಂಕಲ್ ನಮ್ಮನ್ನು ಕರೆದರು, ‘ಇಬ್ಬರೂ ಇಲ್ಲಿ ಬನ್ನಿ.’

ನಿನ್ನೆ ರಾತ್ರೆಗಿಂತಲೂ ಸುಮುಖ್ ಅಂಕಲ್ ಗಂಭೀರವಾಗಿದ್ದರು. ಏನೋ ಒಳಕಾರಣ ಇಲ್ಲದೆ ಇಷ್ಟು ಗಂಭೀರವಾಗಿ ಇರುವುದು ಅವರ ಸ್ವಭಾವವಲ್ಲ. ಯಾವುದೋ ಹುಳ ಅವರ ತಲೆ ಕೊರೆಯುತ್ತಿರಬೇಕು. ಅದನ್ನು ನಮ್ಮ ಮುಂದೆ ಬಿಚ್ಚಿಡಬಹುದಾ? ಇಲ್ಲವಾ? ಯಾವುದೇ ಊಹೆಗೂ ಹೋಗದೆ ಅಂಕಲ್ ಮುಂದಿನ ಸೋಫಾದಲ್ಲಿ ಕೂತೆವು.

ನಮ್ಮಿಬ್ಬರಿಗೂ ಕಾಫಿ ಲೋಟ ಕೊಡುತ್ತಾ ನಳಿನಿ ಆಂಟಿ ಮೆಲ್ಲಗೆ ಕಣ್ಣು ಮಿಟುಕಿಸಿ, ‘ಬಿ ರೆಡಿ’ ಅಂದರು. ನೋಟಗಳ ವಿನಿಮಯವಾಗಿ ಭುಜಗಳು ಗಾಳಿಯಲ್ಲಿ ಮೇಲೆಕೆಳಗೆ ಏರಿಳಿದು ನಿಂತವು.

‘ನಿಮ್ಮ ಕಾಲೇಜ್ ಇನ್ನೇನು ಮುಗ್ದಾಯ್ತು ಅಂತಲೇ ಹೇಳ್ಬಹುದು. ಮುಂದೇನ್ ಮಾಡ್ತೀರಿ?’
‘ನಾನು ಎಮ್.ಎಸ್ಸಿ. ಮಾಡ್ತೇನೆ ಅಂಕಲ್. ಸಾಧ್ಯ ಆದ್ರೆ ರೀಸರ್ಚ್. ಇಲ್ಲದಿದ್ರೆ ಯಾವುದಾದ್ರೂ ಒಳ್ಳೇ ಕಾಲೇಜಲ್ಲಿ ಟೀಚಿಂಗ್...’ ಯಾವುದೇ ತಡವಿಲ್ಲದೆ ಹೇಳಿದೆ.
‘ನಾನೇನೂ ಯೋಚನೆ ಮಾಡ್ಲೇ ಇಲ್ಲ ಪಪ್ಪಾ. ನೀವಿದ್ದೀರಲ್ಲ, ನನ್ನ ದಾರಿ ತೋರಿಸಿಕೊಡ್ಲಿಕ್ಕೆ...’ ನೇಹಾ ಮುದ್ದುಗರೆದಳು.
‘ನೀನು ಎಮ್.ಎಸ್ಸಿ. ಮಾಡ್ಲಿಕ್ಕೆ ಅಪ್ಪಣೆ ಕೊಟ್ಟವರು ಯಾರು? ಯಾರನ್ನು ಕೇಳಿ ಅದನ್ನು ಡಿಸೈಡ್ ಮಾಡಿದ್ದೀ?’ ಅಮ್ಮನ ಸ್ವರ ಅಡುಗೆಮನೆಯಿಂದಲೇ ಗುಡುಗಿತು.
‘ನೀವು ಸುಮ್ನಿರಿ ಹರಿಣಿ. ಮಕ್ಕಳ ಅಭಿಪ್ರಾಯ ಏನೂಂತ ನೋಡ್ಬೇಕು ಮೊದ್ಲು. ನಂತ್ರ ನಮ್ಮ ಯೋಚನೆಗಳನ್ನು ಅವ್ರ ತಲೆಗೆ ತುಂಬಿಸುವಾ. ಅಲ್ಲಿ ಜಾಗ ಉಂಟಾ ಇಲ್ವಾ ನೋಡ್ಬೇಕಲ್ವಾ? ನೀವು ತಲೆಕೆಡಿಸ್ಕೊಳ್ಬೇಡಿ. ನಾನು ನೋಡಿಕೊಳ್ತೇನೆ, ಆಯ್ತಾ?’ ಅಂಕಲ್ ಅಮ್ಮನಿಗೆ ಭರವಸೆಯಿತ್ತರು. ನಮ್ಮನ್ನು ನೋಡ್ತಾ, ‘ಶಿಶಿರಾ, ನೀನು ಎಮ್.ಎಸ್ಸಿ. ಮಾಡುದಾದ್ರೆ ಮಾಡು. ನನ್ನ ಸಪೋರ್ಟ್ ನಿಂಗೇನೇ. ನೇಹಾ, ನೀನು ನನ್ನ ಮಾತು ಕೇಳುವವಳಾದ್ರೆ ಇದೇ ವರ್ಷ ನಿಂಗೆ ಮದುವೆ ಮಾಡುದಾ ಅಥವಾ ಯಾವುದಾದ್ರೂ ಕೆಲಸಕ್ಕೆ ಹೋಗ್ತೀಯಾ?’
‘ಕೆಲ್ಸ ಎಲ್ಲ ಬೇಡ ಪಪ್ಪಾ. ಒಂದು ವರ್ಷ ಮನೆಯಲ್ಲೇ ಇರ್ತೇನೆ, ಆಯ್ತಾ?’
‘ಕೆಲ್ಸ ಬೇಡ ಅಂತಾದ್ರೆ ಮದುವೆ. ಒಳ್ಳೇ ಹುಡುಗ ಇದ್ದಾನೆ. ಏನ್ ಹೇಳ್ತೀ?’
‘ನಂಗೊತ್ತಿಲ್ಲ ಪಪ್ಪಾ. ಅಮ್ಮ ಮತ್ತು ನೀವು ಹೇಳಿದ ಹಾಗೆ...’
‘ಆಲ್ ರೈಟ್. ಹಾಗಾದ್ರೆ ನನ್ನದೇ ಡಿಸಿಷನ್. ಗುಡ್. ನೀವೇನ್ ಹೇಳ್ತೀರಿ ಹರಿಣಿ?’ ಸಂಭಾಷಣೆಯ ಮಧ್ಯೆ ಯಾವಾಗಲೋ ನಡುಮನೆಗೆ ಬಂದು ನಿಂತ ಅಮ್ಮನ ಕಡೆ ನೋಟ.
‘ನೇಹಾ ನಿಮ್ಮದೇ ಮಗಳು. ನನ್ನ ಅಭಿಪ್ರಾಯ ಏನೂ ಇಲ್ಲ ಇಲ್ಲಿ. ಹುಡುಗ ಯಾರೂಂತ ಕೇಳ್ತೇನೆ, ಅಷ್ಟೇ...’
‘ಹುಡುಗ ಬರುವಾಗ ನಿಮ್ಗೆಲ್ಲಾ ಗೊತ್ತಾಗ್ತದೆ. ಅಷ್ಟೊತ್ತು ಸಸ್ಪೆನ್ಸ್.’

ಇಬ್ಬರೂ ಸೋಫಾದಿಂದ ಏಳುವಾಗಲೇ ಅಮ್ಮ ಬಾಗಿಲ ಹತ್ತಿರ ಹೋಗಿ ನಿಂತರು. ‘ಹೋಗುವಾ ಮನೆಗೆ, ಹೊರಡು’
‘ಸಾಕು ಮಾರಾಯ್ತಿ ದೊಡ್ಡಸ್ತಿಕೆ. ತಿಂಡಿ ತಿಂದೇ ಹೋಗಿ...’ ನಳಿನಿ ಆಂಟಿಯ ಒತ್ತಾಸೆ ಕೊನೆಗೂ ಪರಿಣಾಮ ಬೀರಿತು. ಆಂಟಿಯ ಇಷ್ಟದ ‘ಪುಂಡಿಗಟ್ಟಿ’ಯನ್ನು ತಿಂದು ಮೊಸರು ಹಾಲು ಹೊತ್ತ ಡಬ್ಬಗಳನ್ನು ಕಟ್ಟಿಕೊಂಡು ಹೊರಟೆವು.
‘ಊಟಕ್ಕೇ ಇಲ್ಲಿಗೆ ಬನ್ನಿ...’ ನಳಿನಿ ಅಂಟಿಯ ಮತ್ತೊಂದು ಬಾಣ, ಗುರಿ ತಪ್ಪಿತು. ಮೂರೂವರೆಗೆ ಇಲ್ಲಿಗೆ ಬಂದು ಸೇರುವ ಆಶ್ವಾಸನೆಯ ಜೊತೆಗೆ ಮನೆಯ ಗೇಟ್ ದಾಟಿದೆವು.

ಸಂಜೆ ಮೂರೂವರೆಗೆ ಸರಿಯಾಗಿಯೇ ನಳಿನಿ ಆಂಟಿಯ ಮನೆ ಸೇರಿದ್ದಾಯ್ತು. ವಾಂಗೀಭಾತ್, ಕ್ಯಾರೆಟ್ ಹಲ್ವ ಕಾಯುತ್ತಿದ್ದವು. ಗೆಣಸಿನ ಪೋಡಿ (ಭಜಿ!!) ತಯಾರಾಗುತ್ತಿತ್ತು ಬಾಗಿಲ ಕರೆಗಂಟೆ ಸದ್ದಾದಾಗ. ಸುಮುಖ್ ಅಂಕಲ್ ಬಾಗಿಲು ತೆರೆದು ಸರೋಜಾಂಟಿ ಮತ್ತು ಹರ್ಷಣ್ಣನನ್ನು ಒಳಗೆ ಕರೆದರು. ಸರೋಜಾಂಟಿಯ ಕೈಯಲ್ಲಿ ಹೂ ಹಣ್ಣುಗಳ ಪುಟ್ಟ ಬುಟ್ಟಿ. ನೇಹಾಳ ಮುಖ ಕೆಂಪೇರಿತು.

ಸಾಮಾನ್ಯ ಮಾತುಗಳಾದ ಮೇಲೆ, ಕಾಫಿ-ತಿಂಡಿ. ಅದೂ ಲೋಕಾಭಿರಾಮದಲ್ಲೇ ಮುಗಿದಾಗ ನನ್ನೊಳಗೆ ಏನೋ ತಳಮಳ. ಅನಾವಶ್ಯಕ ಕಿರಿಕಿರಿ ಭಾವನೆ. ತಟ್ಟೆ ಲೋಟಗಳನ್ನೆತ್ತಿಕೊಂಡು ನಳಿನಿ ಅಂಟಿ ಹೊರಟಾಗ ನೇಹಾ ಮತ್ತು ನಾನು ಎತ್ತಿಕೊಂಡೆವು. ಇಬ್ಬರೂ ಅಡುಗೆಮನೆಗೆ ಹೋಗಿದ್ದೇವಷ್ಟೇ, ಸರೋಜ ಆಂಟಿಯ ಗಂಟಲು ಕೆಮ್ಮಿ ಸ್ವರ ಸರಿಮಾಡಿಕೊಂಡಿತು. ನಮ್ಮಿಬ್ಬರಲ್ಲೂ ನಡುಕ, ವಿನಾಕಾರಣ.

ಯಾವುದೇ ಪೀಠಿಕೆಯಿಲ್ಲದೆ ಸರೋಜಾಂಟಿ ನೇರವಾಗಿ ಪ್ರಸ್ತಾಪವಿಟ್ಟರು, ‘ಈ ಇಬ್ಬರಲ್ಲಿ ಒಬ್ಬಳು ನನ್ನ ಸೊಸೆ. ಯಾರಾಗಬಹುದೂಂತ ನೀವೇ ನಿರ್ಧರಿಸಿ ಹೇಳಿ...’
ನಡುಮನೆಯಲ್ಲಿ ಯಾವ ಮುಖದಲ್ಲಿ ಯಾವ ಭಾವವಿತ್ತೋ ಗೊತ್ತಿಲ್ಲ. ನಮ್ಮಿಬ್ಬರ ಮುಖ ಎಲ್ಲಾ ಬಣ್ಣಗಳನ್ನೂ ಕಳೆದುಕೊಂಡವು.
ಅಮ್ಮ ನನ್ನ ಹೆಸರೇ ಹೇಳಿದರೆ? ದೇವರೇ....

2 comments:

sunaath said...

ಜ್ಯೋತಿ,
ಬೇಗನೆ ಹೆಸರು ಹೇಳಮ್ಮಾ! ಇಷ್ಟೆಲ್ಲಾ suspense ಸರಿಯಲ್ಲ!

ಸುಪ್ತದೀಪ್ತಿ suptadeepti said...

ಹಿರಿಯರು ಸ್ವಲ್ಪ ಯೋಚನೆ ಮಾಡೋಕೆ ಟೈಮ್ ತಗೊಳ್ತಿದ್ದಾರೆ ಕಾಕಾ. ಅವ್ರ ಉತ್ರ ನಂಗೆ ಸಿಕ್ಕ ತಕ್ಷಣ ನಿಮಗೆಲ್ಲ ಹೇಳೇ ಹೇಳ್ತೀನಿ.