Saturday, March 24, 2007
೦೧. ಹೆಣ್ಣು-ಗಂಡು
"ಹೆಣ್ಣಿನಲ್ಲಿ ಏನಿದೆ?" ಅಂದುಕೊಂಡ ಗುಂಡ
ಸತಿಯತ್ತ ನೋಡದೆ ಮುಸುಕೆಳೆದುಕೊಂಡ
ಗ್ರೀಷ್ಮದ ಹುಣ್ಣಿಮೆಯ ಛಳಿಗೆ ಮುದುರುವಂತಾದಾಗ
ಪಕ್ಕದಲ್ಲಿದ್ದವಳ ಸೆಳೆದ, ಬಯಕೆ ಕಾಡಿದಾಗ.
(೧೯೮೬)
೦೨. ನಗು
"ನೀ ನಕ್ಕರೆ ಸವಿ ಸಕ್ಕರೆ" ಅಂದವನು
ಎಂದು, ಹೇಗೆ, ನಿನ್ನ ನಗುವ ಸವಿದನು?
ಬಾಯೊಳಿಟ್ಟರೆ ನಗಲಾರದ ಎಲೆ ಅಧರ,
ನೀ ನಗದಿರೆ ಸಿಹಿಯಾಗುವುದೇ ಮಧುರ?
(೧೯೮೬)
೦೩. ಚೈತ್ರ ಸಖ
ಒಂಟಿತನ ಜಂಟಿಯಾಗುವ ತನಕ ತವಕ,
ಜಂಟಿಯಾದ ಬಳಿಕ ಮೋಹ ಕೊಳದಲಿ ಜಳಕ,
ತಂಟೆ-ತಕರಾರುಗಳಿಗೆ ಮೈಯೆಲ್ಲಾ ಪುಳಕ,
ತುಂಟ, ನೀ ಹೇಳೆಯಾ ಇದಾರ ಕೈಚಳಕ?
(೧೯೮೭)
೦೪. ಕಳೆದುದು ಸಿಕ್ಕಿದೆ
"ಕಳೆದುದು ಸಿಕ್ಕಿದೆ" ಎಂದಿತ್ತು ಪ್ರಕಟಣೆ
"ವಾರೀಸುದಾರರು ಸಂಪರ್ಕಿಸಿ ಬೇಗನೆ"
ಆತನಲ್ಲಿಗೆ ಕೂಡಲೇ ಧಾವಿಸಿದರು ಕೆಲವರು,
ಕೇಳಿದ- "ನನಗೆ ಸಿಕ್ಕಿದ ಹೃದಯದೊಡತಿ ಯಾರು?"
(೧೯೮೫)
೦೫. ಪ್ರಶ್ನೆ
"ವಾನರನಿಂದ ನರನ ವಿಕಾಸವಾಯ್ತು"
ಗುರುಗಳ ಪಾಠ ಮುಂದುವರೆದಿತ್ತು,
ತುಂಟ ಶಿಷ್ಯನೊಬ್ಬನ ಕುತೂಹಲದ ಸ್ವರ-
"ನೀವು ಆ ನಡುವಿನ ಜನಾಂಗದವರ...?"
(೧೯೮೫)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 1:22 PM
Labels: 'ಭಾವಲಹರಿ'ಯಿಂದ-, ನಗುವಿನೆಳೆಗಳು, ಭಾವಬಿಂದುಗಳು-
7 ಪತ್ರೋತ್ತರ:
Jagali Bhagavata said...
೧, ೩, ಮತ್ತು ೪ನೆ ಹನಿಗಳು ಚೆನ್ನಾಗಿವೆ. ೨ನೆಯದು ಮಂಡೆ ಒಳಗೆ ಹೋಗಲಿಲ್ಲ:-((
ಡುಂಡಿರಾಜರ ಒಂದು ಹನಿ ಕೇಳಿದೀರಾ?
'ಪ್ರಿಯೆ,ನೀನಿಲ್ಲದೆ ನಾನು
ನಿಜವಾಗಿಯೂ ತಬ್ಬಲಿ,
ಕೊರೆವ ಚಳಿಯಲ್ಲಿ
ಯಾರನ್ನು ತಬ್ಬಲಿ?
March 24, 2007 7:21 PM
suptadeepti said...
ಭಾಗವತರೇ,
ಡುಂಡಿರಾಜರ ಈ ಹನಿ ನನ್ನ ಕಿವಿಗೆ ಬಿದ್ದಿರಲಿಲ್ಲ. ಹಾಡಿದ್ದಕ್ಕೆ ಧನ್ಯವಾದಗಳು.
March 25, 2007 1:04 PM
ಜಯಂತ್ said...
ತುಂಬಾ ಚೆನ್ನಾಗಿವೆ..
March 25, 2007 2:33 PM
Shiv said...
ಸುಪ್ತದೀಪ್ತಿಯವರೇ,
ಈ ೫ ಹನಿಗಳು ನಿಮ್ಮ ಯೋಚನೆಗಳು ೧೯೮೫ರಿಂದ ೮೭ ರವರೆಗೆ ಬದಲಾದ ಬಗೆಗೆ ಹೇಳುತ್ತಿರುವುದೇ !??
೮೫ರಲ್ಲಿ ವಾನರ ವಿಕಾಸ, ವಾರೀಸುದಾರರ ಬಗ್ಗೆ ಹನಿಸುತ್ತಿದ್ದ ನೀವು ೮೬ರಷ್ಟರಲ್ಲಿ ಬಯಕೆ-ಚಳಿಗಳ ಬಗ್ಗೆ ಹನಿಸಿ ೮೭ ಅನ್ನುವಷ್ಟರಲ್ಲಿ ಮೋಹ ಕೊಳದಲ್ಲಿ ಜಳಕ ಮಾಡಿ ಪುಳಕಿತರಾಗಿ ಕೈಚಳಕದ ಬಗ್ಗೆ ಹನಿಸಿದ್ದೀರಾ
March 25, 2007 4:37 PM
ಸುಶ್ರುತ ದೊಡ್ಡೇರಿ said...
ಇವುಗಳಲ್ಲಿ ಕೆಲವನ್ನು ಓದಿದಂತಿದೆ. ಎಲ್ಲಾದರೂ ಪಬ್ಲಿಷ್ ಆಗಿದ್ದವಾ ಇವು?
March 26, 2007 2:25 AM
suptadeepti said...
ಜಯಂತ್,
ನನ್ನ ಅಕ್ಷರ ಲೋಕಕ್ಕೆ ಸ್ವಾಗತ, ಮೆಚ್ಚುಗೆಗೆ ಧನ್ಯವಾದ.
ಶಿವು,
'೮೫, '೮೬, '೮೭ರಲ್ಲಿ ಬರೆದ ಹಲವು "ಭಾವಬಿಂದು"ಗಳಲ್ಲಿ ಕೇವಲ ಐದು ಹನಿಗಳನ್ನು ಇಲ್ಲಿ ಆರಿಸಿ ಕೊಟ್ಟಿದ್ದು, ಯಾವುದೇ ಉದ್ದೇಶಿತ, ನಿರ್ದಿಷ್ಟ ಪ್ರಗತಿ-ಪಥ ಇಲ್ಲಿಲ್ಲ. '೮೭ರ ಹನಿ ಇಪ್ಪತ್ತರ ವಯಸ್ಸಿಗೆ ಅನುಗುಣವಾಗಿಯೇ ಇದೆ ಅನ್ನುವುದನ್ನು ಅಲ್ಲಗಳೆಯಲಾರೆ.
ಸುಶ್ರುತ,
ಇಲ್ಲ, ಇವು ಬೇರೆಲ್ಲೂ ಪ್ರಕಟವಾಗಿಲ್ಲ. ನನ್ನ ಪ್ರಕಟಿತ (೧೯೯೭, ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ) ಕವನ ಸಂಕಲನ "ಭಾವಲಹರಿ"ಯಲ್ಲಿವೆ, ಅಷ್ಟೇ.
March 26, 2007 10:43 AM
ಅಸತ್ಯ ಅನ್ವೇಷಿ said...
5ನೇ ಕವನಕ್ಕೂ ನಮ್ಮ ಬ್ಯುರೋಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇವೆ....
March 26, 2007 8:07 PM
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Subscribe to:
Post Comments (Atom)
No comments:
Post a Comment